Monday, March 21, 2011

ವಿಕಿಲೀಕ್ಸ್‌ನಲ್ಲಿಯೂ ಉತ್ತರ ಇಲ್ಲದ ಪ್ರಶ್ನೆಗಳು

ಎಡಪಕ್ಷಗಳಿಗೆ ಸೆಡ್ಡು ಹೊಡೆದು ಸರ್ಕಾರದ ಭವಿಷ್ಯವನ್ನೇ ಡೋಲಾಯಮಾನ ಮಾಡಿದ್ದ ಮನಮೋಹನ್ ಸಿಂಗ್ ವಿಶ್ವಾಸಮತಯಾಚನೆಗಾಗಿ ಎದೆಯುಬ್ಬಿಸಿಕೊಂಡು ಸಂಸತ್‌ಭವನ ಪ್ರವೇಶಿಸಿದ್ದು... ತನ್ನನ್ನು ಪ್ರಶ್ನಿಸಲು ಬಂದ ಪತ್ರಕರ್ತರಿಗೆ ಏನನ್ನೂ ಹೇಳದೆ ನಗುನಗುತ್ತಾ ಕೈಬೆರಳುಗಳನ್ನೆತ್ತಿ ಗೆಲುವಿನ ಸಂಜ್ಞೆ ಮಾಡಿದ್ದು... ವಿಶ್ವಾಸಮತಯಾಚನೆಯಲ್ಲಿ ಗೆದ್ದ ಮರುಕ್ಷಣದಲ್ಲಿಯೇ ಕಾಂಗ್ರೆಸ್ ಸಂಸದರು ‘ಸಿಂಗ್ ಈಸ್ ಕಿಂಗ್’ ಎಂದು ಹರ್ಷೋದ್ಗಾರ ಮಾಡಿದ್ದು... ಎಲ್ಲವೂ ಮೊನ್ನೆಮೊನ್ನೆ ನಡೆದಂತಿದೆ.
ಇಂತಹ ಒಂದು ಕ್ಷಣಕ್ಕಾಗಿಯೇ ಮನಮೋಹನ್ ಸಿಂಗ್ ಕಾಯುತ್ತಿದ್ದರೋ ಏನೋ ಎಂದು ಆಗ ಅನಿಸಿತ್ತು. ಯಾಕೆಂದರೆ ಪ್ರಧಾನಿಯಾಗಲು ಒಪ್ಪಿಕೊಂಡ ದಿನದಿಂದ ಅವಮಾನ, ಹೀಯಾಳಿಕೆಯ ನುಡಿಗಳನ್ನೇ ಅವರು ಕೇಳುತ್ತಾ ಬಂದಿದ್ದು. ಸಾಮಾನ್ಯವಾಗಿ ಬಳಸುವ ಭಾಷೆ ಬಗ್ಗೆ ಎಚ್ಚರದಿಂದ ಇರುವ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರೇ ಮನಮೋಹನ್‌ಸಿಂಗ್ ಅವರನ್ನು ‘ನಿಕ್ಕಮ್ಮ (ಕೈಲಾಗದವ)’ ‘ದುರ್ಬಲ’, ‘ಅದೃಶ್ಯ’ ಪ್ರಧಾನಿ ಎಂದೆಲ್ಲಾ ಹೀಗಳೆದಿದ್ದರು.

ಅದಕ್ಕೆಲ್ಲ ಉತ್ತರ ನೀಡುವಂತಿತ್ತು ಮನಮೋಹನ್ ಸಿಂಗ್ ಅವರ ಆ ದಿನದ ಧೀರ, ಗಂಭೀರ ನಡಿಗೆ ಮತ್ತು ಹುಸಿನಗೆ.
2008ರ ಜುಲೈ 22ರ  ಆ ದಿನವನ್ನು (ವಿಶ್ವಾಸಮತಯಾಚನೆ ದಿನ) ಮನಮೋಹನ್‌ಸಿಂಗ್ ಮತ್ತು ಅವರ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಆ ದಿನವೇ ತಾನೊಬ್ಬ ದುರ್ಬಲ ಪ್ರಧಾನಿ ಅಲ್ಲ ಎಂದು ಮನಮೋಹನ್ ಸಿಂಗ್ ಸಾಬೀತುಪಡಿಸಿದ್ದು ಮತ್ತು ಅದೇ ದಿನ ಅವರ ಬಿಳಿಬಟ್ಟೆಯ ಮೇಲೆ ಮೊದಲ ಕಳಂಕದ ಕಲೆ ಅಂಟಿಕೊಂಡದ್ದು.

ತುಂಬು ವಿಶ್ವಾಸದಿಂದ ಮನಮೋಹನ್ ಸಿಂಗ್ ಲೋಕಸಭೆ ಪ್ರವೇಶಿಸಿದ್ದ ಮರುಗಳಿಗೆಯಲ್ಲಿಯೇ ಬಿಜೆಪಿಯ ಮೂವರು ಸದಸ್ಯರಾದ ಅಶೋಕ್ ಅರ್ಗಲ್, ಫಗನ್‌ಸಿಂಗ್ ಕುಲಸ್ಥೆ ಮತ್ತು ಮಹಾವೀರ ಭಗೋರಾ ಅವರು ಎರಡು ದೊಡ್ಡ ಚೀಲಗಳನ್ನು ಎತ್ತಿಕೊಂಡು ಸಭಾಧ್ಯಕ್ಷರ ಪೀಠದ ಮಂದಿನ ಅಂಗಳದ ಕಡೆ ನುಗ್ಗಿದ್ದರು.
 ಅವರ ಕೈಯೊಳಗೆ ಸಾವಿರ ರೂಪಾಯಿಗಳ ನೋಟಿನ ಕಂತೆಗಳಿದ್ದವು. ಒಂದು ಕ್ಷಣ ಇಡೀ ಸದನ ಸ್ಥಬ್ದವಾಗಿತ್ತು. ‘ಇದು ವಿಶ್ವಾಸಮತದ ಪರವಾಗಿ ಮತಚಲಾಯಿಸಲು ತಮಗೆ  ಮುಂಗಡವಾಗಿ ಕೊಟ್ಟಿದ್ದ ಒಂದು ಕೋಟಿ ರೂಪಾಯಿ. ಇದನ್ನು ಅಮರ್‌ಸಿಂಗ್ ಸೂಚನೆ ಮೇರೆಗೆ ಅವರ ಸಹಾಯಕರು ತಂದುಕೊಟ್ಟಿದ್ದರು’ ಎಂದು ಅಶೋಕ್ ಅರ್ಗಲ್ ಕೂಗಾಡುತ್ತಿದ್ದರು. ಇತ್ತ ಸೆಂಟ್ರಲ್ ಹಾಲ್‌ನ ಸೈಡ್‌ವಿಂಗ್‌ನಲ್ಲಿ ಕರ್ನಾಟಕದ ಮೂವರು ಬಿಜೆಪಿ ಲೋಕಸಭಾ ಸದಸ್ಯರಾದ ಎಚ್.ಟಿ. ಸಾಂಗ್ಲಿಯಾನಾ, ಮಂಜುನಾಥ ಕುನ್ನೂರು ಮತ್ತು ಮನೋರಮಾ ಮಧ್ವರಾಜ್ ಹಾಗೂ ಜೆಡಿ (ಎಸ್) ಸದಸ್ಯ ಶಿವಣ್ಣ ಕಾಂಗ್ರೆಸ್ ಜತೆ ಕೈಜೋಡಿಸಲು ವೇಷ ಬದಲಿಸುತ್ತಿದ್ದರು. ಎದೆಯುಬ್ಬಿಸಿಕೊಂಡು ಬಂದಿದ್ದ ಮನಮೋಹನ್ ಸಿಂಗ್ ಗದ್ದಲದ ನಡುವೆಯೇ ಸೋನಿಯಾಗಾಂಧಿ ಜತೆಗೂಡಿ ತಲೆತಗ್ಗಿಸಿಕೊಂಡು ಸದನದಿಂದ ಹೊರನಡೆದಿದ್ದರು.
 ಇವೆಲ್ಲವೂ ಹಳೆಯ ಕತೆ, ವಿಕಿಲೀಕ್ಸ್ ಕೇಬಲ್‌ಗಳು ಬಹಿರಂಗಪಡಿಸಿದ್ದರಲ್ಲಿ ಕೂಡಾ ಹೊಸದೇನಿಲ್ಲ, ಒಂದಷ್ಟು ಹೊಸ ಪುರಾವೆಗಳು ಸಿಕ್ಕಿವೆ ಅಷ್ಟೇ.ಆದರೆ  ಸರ್ಕಾರವನ್ನೇ ಪತನದ ಅಂಚಿಗೆ ತಂದು ನಿಲ್ಲಿಸುವಂತಹ ಅಪಾಯಕ್ಕೆ ಆಹ್ವಾನ ನೀಡುವಷ್ಟು ಮತ್ತು ಅಧಿಕಾರ ಉಳಿಸಲು ಸಂಸದರ ಖರೀದಿಯಂತಹ ಹೀನಕೃತ್ಯಕ್ಕೆ ಇಳಿಯುವಷ್ಟು ಅಮೆರಿಕದ ಜತೆಗಿನ ನಾಗರಿಕ ಪರಮಾಣು ಒಪ್ಪಂದ ದೇಶಕ್ಕೆ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಗೆ ವಿಕಿಲೀಕ್ಸ್ ಕೇಬಲ್‌ಗಳಲ್ಲಿಯೂ ಈ ವರೆಗೆ ಉತ್ತರ ಸಿಕ್ಕಿಲ್ಲ. 2004ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಪ್ರಸ್ತಾವವೇ ಇರಲಿಲ್ಲ. ಅದರ ನಂತರ ಯುಪಿಎ ಎಂಬ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಾಗ ರಚನೆಯಾದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಲ್ಲಿಯೂ ಇದರ ಉಲ್ಲೇಖ ಇರಲಿಲ್ಲ.
 ಹೀಗಿದ್ದರೂ ಈ ಒಪ್ಪಂದವನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಡುವ ಅವಶ್ಯಕತೆ ಏನಿತ್ತು? ಇದಕ್ಕೆ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ಉತ್ತರ ಇಂಧನ ಕೊರತೆ. ಭಾರತ ಇಂಧನ ಕೊರತೆಯಿಂದ ಬಳಲುತ್ತಿರುವುದು ನಿಜ. ಆದರೆ ನಾಗರಿಕ ಪರಮಾಣು ಒಪ್ಪಂದದಿಂದ ಈ ಕೊರತೆ ನೀಗುವುದೇ?
‘ಇಡೀ ವಿಶ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ 35 ಅಣುಸ್ಥಾವರಗಳಲ್ಲಿ 24 ಏಷ್ಯಾದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ. ಇಂಧನ ಭದ್ರತೆಯ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ವೇಗದ ಓಟ ಭಾರತಕ್ಕೆ ಅನಿವಾರ್ಯ’ ಎಂದು ಒಪ್ಪಂದವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು. ಆದರೆ ಕಾಂಗ್ರೆಸ್ ಹೇಳಿದಂತೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತವೇನು ಹಿಂದೆ ಉಳಿದಿರಲಿಲ್ಲ.
ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಭಾರತದಲ್ಲಿ ಆರು ಅಣುಸ್ಥಾವರಗಳು ನಿರ್ಮಾಣಗೊಳ್ಳುತ್ತಿತ್ತು. ಏಳು ಅಣುಸ್ಥಾವರಗಳನ್ನು ನಿರ್ಮಿಸುತ್ತಿದ್ದ ಚೀನಾ ದೇಶವೊಂದೇ ಭಾರತಕ್ಕಿಂತ ಮುಂದೆ ಇತ್ತು. ‘ಈಗ ಭಾರತ ಪರಮಾಣು ಮೂಲದಿಂದ ಶೇಕಡಾ 3ರಷ್ಟು ಇಂಧನ ಪಡೆಯುತ್ತಿದೆ.
ಆದರೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತ ಚೀನಾ ಮತ್ತು ರಷ್ಯಾ ದೇಶಗಳಿಗೆ ಸಮನಾಗಿ ನಿಂತಿದೆ’ ಎಂದು ಅಂತರರಾಷ್ಟ್ರೀಯ ಪರಮಾಣುಶಕ್ತಿ ಸಂಸ್ಥೆ (ಐಎಇಎ)ಯ ಮುಖವಾಣಿ ಪತ್ರಿಕೆಯಲ್ಲಿ  ಆ ದಿನಗಳಲ್ಲಿ ಪ್ರಕಟಗೊಂಡಿದ್ದ ಲೇಖನ ಹೇಳಿತ್ತು.
 2030ನೇ ವರ್ಷದಲ್ಲಿ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಮೂಲಗಳ ಇಂಧನದ ಸ್ಥಿತಿಗತಿ ಏನಿರುತ್ತದೆ ಎಂಬ ಬಗ್ಗೆ ವರದಿಯನ್ನು ಅಮೆರಿಕದ ಇಂಧನ ಇಲಾಖೆಗೆ ಸೇರಿರುವ ‘ಇಂಧನ ಮಾಹಿತಿ ಸಂಸ್ಥೆ’ (ಇಐಎ) ಪ್ರಕಟಿಸಿತ್ತು. ಅದರ ಪ್ರಕಾರ 2005ರಲ್ಲಿ 1,38,000 ಮೆಗಾವಾಟ್‌ನಷ್ಟಿದ್ದ ಭಾರತದ ಇಂಧನ ಸಾಮರ್ಥ್ಯ 2030ನೇ ವರ್ಷದಲ್ಲಿ 3,98,00 ಮೆಗಾವಾಟ್‌ನಷ್ಟು ಆಗಲಿದೆ.
 ಇದರಲ್ಲಿ ಅಣುಶಕ್ತಿಯ ಪಾಲು 20,000 ಮೆಗಾವಾಟ್ ಮಾತ್ರ. ಅಂದರೆ ಇಷ್ಟೆಲ್ಲಾ ಹೊಸ ಅಣುಸ್ಥಾವರಗಳ ನಿರ್ಮಾಣದ ನಂತರವೂ 2030ರ ವೇಳೆಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇಕಡಾ ಐದರಷ್ಟಾಗಲಿದೆ. ಇದನ್ನು ಇಂಧನ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ಎನ್ನಬಹುದೇ?
 ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಕುರಿತಂತೆಯೇ ಕೇಂದ್ರ ಯೋಜನಾ ಆಯೋಗದ ಇಂಧನ ಸಂಬಂಧಿ ಕಾರ್ಯತಂಡ ವರದಿಯೊಂದನ್ನು ನೀಡಿದೆ. ಪರಮಾಣು ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶಕ್ಕೂ ಅವಕಾಶ ನೀಡುವ ಬಗ್ಗೆಯೂ ಈ ವರದಿಯಲ್ಲಿ ದೀರ್ಘವಾಗಿ ಚರ್ಚಿಸಲಾಗಿದೆ. ಇವೆಲ್ಲದರ ಪರಿಣಾಮ ಹನ್ನೆರಡನೇ ಯೋಜನೆಯ ಅವಧಿಯಲ್ಲಿ (2012-2017) ನಿಚ್ಚಳವಾಗಿ ಕಾಣಲಿದೆ ಎಂಬ ನಿರೀಕ್ಷೆಯನ್ನು ವರದಿ ವ್ಯಕ್ತಪಡಿಸಿದೆ.
ಇದರ ಆಧಾರದಲ್ಲಿ ಮಾಡಲಾದ ಅಂದಾಜಿನಂತೆ 11 ಮತ್ತು 12ನೇ ಯೋಜನಾ ಅವಧಿಯಲ್ಲಿ 15,960 ಮೆಗಾವಾಟ್ ಅಣುಶಕ್ತಿ ಉತ್ಪಾದನೆಯಾಗಬಹುದು. ಇದರ ಪ್ರಕಾರವೂ ದೇಶದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇ 6.7 ಮಾತ್ರ. ಇದನ್ನು ಕೂಡಾ ಇಂಧನ ಭದ್ರತೆಯಲ್ಲಿ ನಿರ್ಣಾಯಕ ಎಂದು ಹೇಳಲಾಗದು.
ನಾವೆಲ್ಲ ತಿಳಿದುಕೊಂಡ ಹಾಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ಆಗಬಹುದಾದ ಏಕೈಕ ಲಾಭ ಎಂದರೆ ದೇಶದ ಇಂಧನ ಸಾಮರ್ಥ್ಯದ ಹೆಚ್ಚಳ. ಉಳಿದಂತೆ ಆಗಲಿರುವುದು ನಷ್ಟವೇ. ಉದಾಹರಣೆಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ದೇಶದ ಪರಮಾಣು ಅಸ್ತ್ರ ಕಾರ್ಯಕ್ರಮದ ಗತಿ ಏನು ಎಂಬ ಮೂರು ವರ್ಷಗಳ ಹಿಂದಿನ ಪ್ರಶ್ನೆ ಈಗಲೂ ಜ್ವಲಂತವಾಗಿದೆ. ಇದು ಒಪ್ಪಂದದ ಅತ್ಯಂತ ವಿವಾದಾತ್ಮಕ ಅಂಶ. ಪರಮಾಣು ಶಕ್ತಿಯ ನಾಗರಿಕ ಬಳಕೆಯ ಚಟುವಟಿಕೆಗಳಿಗಷ್ಟೇ ಒಪ್ಪಂದ ಅನ್ವಯವಾಗುವುದರಿಂದ ನಾಗರಿಕ ಮತ್ತು ಮಿಲಿಟರಿ ಬಳಕೆಯ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸಬೇಕಾಗಿದೆ.
ನಮ್ಮಲ್ಲಿರುವ 22 ಅಣು ಸ್ಥಾವರಗಳಲ್ಲಿ ಹದಿನಾಲ್ಕು ಮಾತ್ರ ನಾಗರಿಕ ಬಳಕೆಯ ಉದ್ದೇಶದ್ದು ಎಂದು ಹೇಳಿ ಅವುಗಳನ್ನು ಅಂತರರಾಷ್ಟ್ರೀಯ ಸುರಕ್ಷತಾ ಚಕ್ರದೊಳಗೆ ಸೇರಿಸಲು ಭಾರತ ಒಪ್ಪಿಕೊಂಡಿದೆ. ಯುರೇನಿಯಂ ಬಳಕೆಯನ್ನು ಕಡಿಮೆ ಮಾಡಲು ಕಂಡುಹಿಡಿಯಲಾದ ‘ಕಡಿಮೆ ತಿಂದು ಹೆಚ್ಚು ಶಕ್ತಿ ಉತ್ಪಾದಿಸುವ’ ಸ್ವದೇಶಿ ತಂತ್ರಜ್ಞಾನ ಅಳವಡಿಕೆಯ ಫಾಸ್ಟ್ ಬ್ರೀಡರ್ ಸ್ಥಾವರಗಳನ್ನು ನಾಗರಿಕ ಬಳಕೆಯ ಗುಂಪಿನಲ್ಲಿ ಸೇರಿಸಬೇಕೆಂದು ಅಮೆರಿಕ ಒತ್ತಡ ಹೇರುತ್ತಲೇ ಇದೆ.
ಈ ಒಪ್ಪಂದದ ನಂತರ ಮಿಲಿಟರಿ ಬಳಕೆಯ ಅಣುಸ್ಥಾವರಗಳು ಮುಂದೆಂದೂ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಅಮೆರಿಕದ ಪರಮಾಣು ಇಂಧನ ಕಾಯಿದೆ ಪ್ರಕಾರ ‘ಅಣುಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕದ ದೇಶಗಳ ಜತೆ ಆ ದೇಶ ಪರಮಾಣು ಸಹಕಾರ ಸಂಬಂಧ ಹೊಂದುವ ಹಾಗಿಲ್ಲ. ಅದರಿಂದ ಭಾರತಕ್ಕೆ ವಿನಾಯಿತಿ ನೀಡಲೆಂದೇ ಹೈಡ್ ಕಾಯಿದೆ ಎನ್ನುವ ಹೆಸರಲ್ಲಿ ಚರ್ಚೆಗೊಳಗಾಗಿದ್ದ ಹೊಸ ಕಾಯಿದೆಯನ್ನು ಅಮೆರಿಕ ರಚಿಸಿದೆ.
ಈ ಕಾಯಿದೆ ಭಾರತಕ್ಕೆ ಕೆಲವು ವಿನಾಯಿತಿ ನೀಡುವ ಜತೆಯಲ್ಲಿ ಕೆಲವು ಷರತ್ತುಗಳನ್ನು ಹೇರಿದೆ. ಅದರ ಪ್ರಕಾರ ಭಾರತ ಸ್ವತಂತ್ರವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಈ ಷರತ್ತು ಉಲ್ಲಂಘಿಸಿದರೆ ಒಪ್ಪಂದ ತನ್ನಿಂದತಾನೇ ರದ್ದಾಗುತ್ತದೆ. ಹೈಡ್ ಕಾಯಿದೆ ರಚನೆಯಾದ ಸಂದರ್ಭದಲ್ಲಿ ಭಾರತದಲ್ಲಿ ವ್ಯಕ್ತವಾದ ವಿರೋಧವನ್ನು ಕಂಡ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ‘ಹೈಡ್ ಕಾಯಿದೆ ಭಾರತಕ್ಕೆ ಅನ್ವಯವಾಗುವುದಿಲ್ಲ, ಅದು ಸಲಹಾ ರೂಪದ್ದು’ ಎಂದು ಮೌಖಿಕವಾಗಿ ಸಮಾಧಾನ ಹೇಳಿದ್ದರು.
ಇದನ್ನೇ ಕಾಂಗ್ರೆಸ್ ಆತ್ಮರಕ್ಷಣೆಗಾಗಿ ಬಳಸುತ್ತಿದೆ. ಆದರೆ ಅಮೆರಿಕ ಬಿಡುಗಡೆಗೊಳಿಸಿರುವ 123 ಒಪ್ಪಂದದ ಪಠ್ಯದಲ್ಲಿನ ಆರ್ಟಿಕಲ್ 2 (ಸಹಕಾರದ ಅವಕಾಶ) ‘... ಎರಡೂ ದೇಶಗಳು ತಮ್ಮಲ್ಲಿನ ಒಪ್ಪಂದ ರಾಷ್ಟ್ರೀಯ ಕಾನೂನುಗಳು ಮತ್ತು ಅವಶ್ಯಕ ಲೈಸೆನ್ಸ್‌ಗಳಿಗೆ ಅನುಗುಣವಾಗಿ ಒಪ್ಪಂದವನ್ನು ಜಾರಿಗೊಳಿಸಬೇಕು...’ ಎಂದು ಹೇಳಿದೆ. ಅಮೆರಿಕದ ರಾಷ್ಟ್ರೀಯ ಕಾನೂನುಗಳ ವ್ಯಾಪ್ತಿಯಲ್ಲಿ ಹೈಡ್ ಕಾಯಿದೆ ಸೇರಿಕೊಳ್ಳುವುದರಿಂದ ಅದು ಪರಮಾಣು ಸಹಕಾರ ಒಪ್ಪಂದಕ್ಕೆ ಅನ್ವಯವಾಗುತ್ತದೆ.
ಅಣ್ವಸ್ತ್ರ ಪರೀಕ್ಷೆಯ ಮೇಲೆ ಹೇರಲಾಗಿರುವ ಈ ನಿರ್ಬಂಧವನ್ನು ಹಲವಾರು ಹಿರಿಯ ವಿಜ್ಞಾನಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ‘ಹೊಸ ಪರಮಾಣು ಅಸ್ತ್ರಗಳ ತಯಾರಿ ಮಾತ್ರವಲ್ಲ, ಹಳೆಯ ಅಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ನವೀಕರಿಸಲು ಕೂಡಾ ಅಣ್ವಸ್ತ್ರ ಪರೀಕ್ಷೆ ಅಗತ್ಯ’ ಎಂದು  ಭಾಭಾ ಅಣು ಸಂಶೋಧನಾ ಕೇಂದ್ರ (ಬಾರ್ಕ್‌)ದ ನಿವೃತ್ತ ನಿರ್ದೇಶಕ ಎ.ಎನ್. ಪ್ರಸಾದ್ ಹೇಳುತ್ತಿದ್ದಾರೆ.
ಈ ಕಾರಣದಿಂದಾಗಿ ಪರಮಾಣು ಸಹಕಾರ ಒಪ್ಪಂದ ಇನ್ನೊಂದು ರೀತಿಯಲ್ಲಿ ತಮ್ಮ ಭದ್ರತೆಯ ವಿಚಾರದಲ್ಲಿ ಮಾಡಿಕೊಂಡಿರುವ ರಾಜಿ ಎನ್ನುವ ಆರೋಪವನ್ನು ಎದುರಿಸಬೇಕಾಗಿಬಂದಿರುವುದು.ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ನಮ್ಮ ಇಂಧನ ಸಾಮರ್ಥ್ಯ ಗಣನೀಯವಾಗಿ ಹೆಚ್ಚದೆ ಇದ್ದರೂ, ಈ ಒಪ್ಪಂದದಿಂದಾಗಿ ಸೇನಾ ಬಳಕೆಯ ಪರಮಾಣು ಕಾರ್ಯಕ್ರಮಗಳಿಗೆ ಹಿನ್ನಡೆಯಾದರೂ ಮತ್ತು ದೇಶದ ಭದ್ರತೆಯ ವಿಚಾರದಲ್ಲಿಯೇ ರಾಜಿ ಮಾಡಿಕೊಳ್ಳಬೇಕಾಗಿ ಬಂದರೂ ಮನಮೋಹನ್ ಸಿಂಗ್ ಅವರು ಯಾಕೆ ಈ ಒಪ್ಪಂದವನ್ನು ಸರ್ಕಾರದ ಜೀವನ್ಮರಣದ ಪ್ರಶ್ನೆ ಮಾಡಿದ್ದರು?
ನಾಗರಿಕ ಬಳಕೆಗಾಗಿ ಅಣುಶಕ್ತಿ ಅಭಿವೃದ್ಧಿಯ ಕಾರ್ಯಕ್ರಮದಂತೆ ಮೇಲ್ನೋಟಕ್ಕೆ ಕಾಣುವ ಪರಮಾಣು ಸಹಕಾರ ಒಪ್ಪಂದದ ಗುಪ್ತವಾಗಿ ಅಮೆರಿಕ ಮತ್ತು ಭಾರತದ ನಡುವಿನ ಸೇನಾ ಒಪ್ಪಂದವೇ? ಈ ಒಪ್ಪಂದ ಭಾರತವನ್ನು ಚೀನಾ ಎದುರು ಎತ್ತಿಕಟ್ಟುವ ಹುನ್ನಾರವೇ ? ತನ್ನಲ್ಲಿರುವ ಎರಡನೇ ದರ್ಜೆ ಅಣುತಂತ್ರಜ್ಞಾನ ಮತ್ತು ಅಣು ರಿಯಾಕ್ಟರ್‌ಗಳಿಗೆ ಭಾರತದಲ್ಲಿ ಮಾರುಕಟ್ಟೆ ಕುದುರಿಸಲಿಕ್ಕೆ ಈ ಒಪ್ಪಂದವನ್ನು ಮಾಡಿಕೊಂಡಿತೇ? ವಿಕಿಲೀಕ್ಸ್ ಕೇಬಲ್‌ಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾಗಿದೆ.
ಇವೆಲ್ಲಕ್ಕಿಂತಲೂ ಮುಖ್ಯವಾದ ಅಣುಸ್ಥಾವರಗಳ ಸುರಕ್ಷತೆಯ ಪ್ರಶ್ನೆ ಜಪಾನ್‌ನಲ್ಲಿ ಭೂಕಂಪ ಮತ್ತು ಸುನಾಮಿಯನ್ನು ಎದುರಿಸಲಾಗದೆ ಅಲ್ಲಿನ ಅಣುಸ್ಥಾವರಗಳು ಕುಸಿದುಬಿದ್ದನಂತರ ಹುಟ್ಟಿಕೊಂಡಿದೆ.

Monday, March 14, 2011

ಈ ಸರ್ಕಾರಗಳನ್ನು ನಂಬಿರುವ ನಾವೆಷ್ಟು ಸುರಕ್ಷಿತ?

ಮತ್ತೊಬ್ಬರ ಕಷ್ಟಕ್ಕಾಗಿ ಮರುಗಲು ಈಗ ಯಾರಿಗೂ ಪುರುಸೊತ್ತಿಲ್ಲ. ವಿಶ್ವದ ಕನ್ನಡಿಗರನ್ನು ನೆನಪಿಸಿಕೊಳ್ಳಲೆಂದೇ ಆಯೋಜಿಸಲಾಗಿದ್ದ ವಿಶ್ವಕನ್ನಡ ಸಮ್ಮೇಳನದ ಆಯೋಜಕರಿಗೂ, ಕೆಲವು ಗಂಟೆಗಳ ಮೊದಲಷ್ಟೆ ಸುನಾಮಿಯಿಂದ ತತ್ತರಿಸಿ ಹೋದ ಜಪಾನ್‌ನ ನೆನಪಾಗಲಿಲ್ಲ. ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನವನ್ನಾದರೂ ಆಚರಿಸುವ ಮಾನವೀಯತೆಯನ್ನು ಯಾರೂ ತೋರಿಸಲಿಲ್ಲ.
ಅಲ್ಲಿ ಸಾವು-ನೋವಿಗೀಡಾದವರಲ್ಲಿ ಕನ್ನಡಿಗರೂ ಇರಬಹುದು ಎಂಬ ಸಣ್ಣ ಅನುಮಾನವೂ ಯಾರಲ್ಲಿಯೂ ಮೂಡಲಿಲ್ಲ. ಬರೀ ಕನ್ನಡ ಸಾಹಿತ್ಯ ಸಮ್ಮೇಳನವಾಗಿದ್ದರೆ ಇದನ್ನು ಮರೆತುಬಿಡಬಹುದಿತ್ತು. ಅದರೆ ಇದು ವಿಶ್ವದ ವ್ಯಾಪ್ತಿಯ ಕನ್ನಡ ಸಮ್ಮೇಳನ. ಸಮ್ಮೇಳನದ ಸಂಭ್ರಮದ ಮೇಲೆ ಸೂತಕದ ಛಾಯೆ ಬೇಡ ಎಂದು ಎಲ್ಲರೂ ಮರೆತುಬಿಟ್ಟರೇನೋ?
ಉದ್ಯಮಿ ಎನ್.ಆರ್.ನಾರಾಯಣಮೂರ್ತಿಯವರು ತಮ್ಮ ಭಾಷಣದಲ್ಲಿ ಹೇಳಿದ್ದ ಬಹಳಷ್ಟು ವಿಚಾರಗಳಿಗೆ ಜಪಾನ್ ದೇಶಕ್ಕಿಂತ ದೊಡ್ಡ ಮಾದರಿ ಯಾವುದಿದೆ? ಜಪಾನಿಯರಷ್ಟು ಕೆಲಸವನ್ನು ಪ್ರೀತಿಸುವ ಇನ್ನೊಂದು ಜನಾಂಗ ವಿಶ್ವದಲ್ಲಿ ಸಿಗಲಾರದು, ಈ ಬಗ್ಗೆ ದಂತಕತೆಗಳೇ ಇವೆ. ಅಣುಬಾಂಬ್ ಸುಟ್ಟುಹಾಕಿದರೂ ಮತ್ತೆ ಬೂದಿಯಿಂದ ಮೇಲೆದ್ದು ಬಂದವರಂತೆ ಹೊಸನಾಡನ್ನು ಕಟ್ಟಿದವರು ಜಪಾನೀಯರು.
ಕಠಿಣಶ್ರಮ, ಜೀವನೋತ್ಸಾಹ ಮತ್ತು ಸ್ವಾಭಿಮಾನದಲ್ಲಿ ಅವರಿಗೆ ಅವರೇ ಸಾಟಿ ಮತ್ತು ಉಳಿದವರಿಗೆ ಸ್ಫೂರ್ತಿ.ವಿಶ್ವವನ್ನು ತನ್ನ ಅಂಗೈಯಷ್ಟೇ ಚೆನ್ನಾಗಿ ಬಲ್ಲ ವಿಶ್ವಸಂಚಾರಿ ಎನ್.ಆರ್.ನಾರಾಯಣಮೂರ್ತಿಯವರಿಗೆ ಜಪಾನ್ ಅಪರಿಚಿತ ನಾಡಲ್ಲ. ಅವರಾದರೂ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೊಂದಿರುವ ಜಪಾನೀಯರ ಬಗ್ಗೆ ಒಂದೆರಡು ಅನುಕಂಪದ ನುಡಿಗಳನ್ನಾಡಬಹುದು, ಧೀರ ಜಪಾನಿಯರನ್ನು ಕೊಂಡಾಡಬಹುದು ಎಂದು ನಿರೀಕ್ಷಿಸಿದವರಿಗೂ ನಿರಾಶೆಯೇ ಕಾದಿತ್ತು.
ಉಕ್ಕಿ ಚೆಲ್ಲಾಪಿಲ್ಲಿಯಾಗಿ ಹರಿದ ಕನ್ನಡಾಭಿಮಾನದ ಹುಚ್ಚುಹೊಳೆಯಲ್ಲಿ ಮಾನವೀಯತೆ ಕೂಡಾ ಕೊಚ್ಚಿಹೋಗಿತ್ತು. ಜಪಾನೀಯರಿಗೆ ಖಂಡಿತ ನಮ್ಮ ಅನುಕಂಪದ ನಿರೀಕ್ಷೆ ಇದ್ದಿರಲಾರದು. 1995ರಲ್ಲಿ ಆರುಸಾವಿರ ಜನ ಬಲಿ ತೆಗೆದುಕೊಂಡ ಭೂಕಂಪದ ನಂತರ ಹೊರದೇಶಗಳು ನೆರವಿನ ಹಸ್ತ ಚಾಚಿದಾಗ ನಯವಾಗಿಯೇ ನಿರಾಕರಿಸಿ ಸ್ವಾಭಿಮಾನ ಮೆರೆದ ನಾಡು ಅದು.
ಪ್ರಕೃತಿ ವಿಕೋಪದ ವಿರುದ್ಧದ ಹೋರಾಟದಲ್ಲಿ ಜಪಾನೀಯರು ವಿಶ್ವಕ್ಕೆಲ್ಲ ಮಾದರಿ. ಈ ಕಾರಣಕ್ಕಾಗಿಯಾದರೂ ಕಷ್ಟದಲ್ಲಿರುವ ಜಪಾನ್ ದೇಶವನ್ನು ನಾವೆಲ್ಲ ನೆನಪಿಸಿಕೊಳ್ಳಬೇಕಾದ ಅಗತ್ಯ ಇದೆ. ಯಾಕೆಂದರೆ ಇದರಿಂದ ನಾವು ಕಲಿಯುವುದೂ ಇದೆ. ರಿಕ್ಟರ್ ಮಾಪನದಲ್ಲಿ 8.9ರಷ್ಟು ತೀವ್ರತೆಯ ಭೂಕಂಪ ಭಾರತದಲ್ಲಿ ಸಂಭವಿಸಿದ್ದರೆ ಏನಾಗಬಹುದಿತ್ತು ಎನ್ನುವುದನ್ನು ಊಹಿಸಲೂ ಭಯವಾಗುತ್ತದೆ.
ಐದು ವರ್ಷಗಳ ಹಿಂದೆ ತಮಿಳುನಾಡಿನ ಕರಾವಳಿಯಲ್ಲಿ ಸಂಭವಿಸಿದ ಹೆಚ್ಚುಕಡಿಮೆ ಇಷ್ಟೇ ತೀವ್ರತೆಯ ಭೂಕಂಪದಿಂದ ಎದ್ದ ಸುನಾಮಿ ದೈತ್ಯಅಲೆಗಳಿಂದಾಗಿ ಆ ರಾಜ್ಯವೊಂದರಲ್ಲೇ ಸುಮಾರು ಎಂಟುಸಾವಿರ ಮಂದಿ ಸಾವಿಗೀಡಾಗಿದ್ದರು.ಇನ್ನೂ ಕಡಿಮೆ ತೀವ್ರತೆಯ (7.6) ಭೂಕಂಪದಿಂದ ಗುಜರಾತ್‌ನಲ್ಲಿ 20,000 ಜನ ಪ್ರಾಣ ಕಳೆದುಕೊಂಡಿದ್ದರು. 1985ರಲ್ಲಿ ಬೀಸಿದ್ದ ಚಂಡಮಾರುತಕ್ಕೆ ಅಮೆರಿಕದಲ್ಲಿ ಐವರು ಬಲಿಯಾಗಿದ್ದರೆ, ಹೆಚ್ಚುಕಡಿಮೆ ಅಷ್ಟೇ ಶಕ್ತಿಶಾಲಿ ಚಂಡಮಾರುತಕ್ಕೆ ಬಾಂಗ್ಲಾದೇಶದಲ್ಲಿ ಐದು ಲಕ್ಷ ಜನ ಸಾವಿಗೀಡಾಗಿದ್ದರು.
1993ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪ ನಡೆದಷ್ಟೇ ತೀವ್ರತೆಯ ಭೂಕಂಪ ಹೆಚ್ಚುಕಡಿಮೆ ಅದೇ ಕಾಲದಲ್ಲಿ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಡೆದಿತ್ತು. ಇಲ್ಲಿ ಸತ್ತವರು 11,000, ಅಲ್ಲಿ ಸತ್ತಿದ್ದು ಒಬ್ಬನೇ ಒಬ್ಬ. ಪ್ರಕೃತಿ ವಿಕೋಪದಿಂದ ಪೆರುವಿನಲ್ಲಿ ಸಾಯುವವರ ಸರಾಸರಿ ಸಂಖ್ಯೆ 2,900, ಜಪಾನ್‌ನಲ್ಲಿ 63. ಪ್ರಕೃತಿ ವಿಕೋಪದ ವಿಚಾರದಲ್ಲಿ ಅಷ್ಟೊಂದು ಸುಧಾರಿತ ಮುಂಜಾಗ್ರತಾ ಕ್ರಮಗಳನ್ನು ಜಪಾನ್ ಕೈಗೊಂಡಿರುವ ಕಾರಣದಿಂದಾಗಿಯೇ ಅಲ್ಲಿ ಸಾವು-ನೋವು ಕಡಿಮೆ.
ತಮಿಳುನಾಡಿನ ಕರಾವಳಿಗೆ ಸುನಾಮಿ ಅಲೆಗಳು ಬಂದು ಬಡಿದಾಗ ನಮ್ಮಲ್ಲೊಂದು ಸುನಾಮಿ ಮುನ್ಸೂಚನಾ ವ್ಯವಸ್ಥೆ ಇದ್ದಿದ್ದರೆ... ಎಂದು ಅನೇಕರು ಕೈಕೈ ಹಿಸುಕಿಕೊಂಡಿದ್ದರು. ಆಗ ನಮ್ಮಲ್ಲಿ ಸುನಾಮಿ ಮುನ್ಸೂಚನಾ ವ್ಯವಸ್ಥೆಯೇ ಇರಲಿಲ್ಲ ಎನ್ನುವುದು ನಿಜ. ಆದರೆ ಇಂತಹ ಪ್ರತ್ಯೇಕ ವ್ಯವಸ್ಥೆ ಇಲ್ಲದಿದ್ದರೂ ಭೂಕಂಪ ಮಾಪನದ ಮೂಲಕ ಸುನಾಮಿಯ ಮುನ್ಸೂಚನೆಯನ್ನು ತಿಳಿದುಕೊಳ್ಳಲು ಸಾಧ್ಯ ಇದೆ.
ಸುನಾಮಿ ಎನ್ನುವುದು ಸಮುದ್ರದೊಳಗಿನ ಭೂಕಂಪದ ಬಾಹ್ಯ ಅವತಾರ ಅಷ್ಟೆ. ಸಮುದ್ರದೊಳಗೆ ಭೂಕಂಪಗಳು ನಡೆಯುತ್ತಲೇ ಇರುತ್ತವೆ. ಒಮ್ಮೊಮ್ಮೆ ಅವು ಸುನಾಮಿಯಂತಹ ರೌದ್ರ ರೂಪ ಪಡೆಯುತ್ತವೆ. ಸುಮಾತ್ರ ದ್ವೀಪದ ಪಶ್ಚಿಮ ಕಡಲಿನಲ್ಲಿ 2004ರ ಡಿಸೆಂಬರ್ 26ರ ಬೆಳಿಗ್ಗೆ 6.29ಕ್ಕೆ ಸಂಭವಿಸಿದ್ದ ಭೂಕಂಪನದ ಮಾಹಿತಿ ಮರುಗಳಿಗೆಯಲ್ಲಿ ಭಾರತೀಯ ಹವಾಮಾನ ಇಲಾಖೆಗೆ ಗೊತ್ತಾಗಿತ್ತು. ಅಷ್ಟರಲ್ಲಿ ಕೊಲ್ಕೊತ್ತಾ ಮತ್ತು ವಿಶಾಖಪಟ್ಟಣಗಳ ಹವಾಮಾನ ಇಲಾಖೆಗಳಿಗೆ ಕಂಪನ ನಂತರದ ಆಘಾತಗಳ ಸಂದೇಶವೂ ರವಾನೆಯಾಗಿದ್ದವು.
ಆದರೆ ಈ ಭೂಕಂಪನದ ಕೇಂದ್ರ ಎಲ್ಲಿ? ನಮ್ಮ ಕರಾವಳಿಯ ಮೇಲೆ ಪರಿಣಾಮ ಏನು ಎಂಬುದನ್ನು ವಿಶ್ಲೇಷಿಸಲು ಹವಾಮಾನ ಇಲಾಖೆಯ ತಜ್ಞರು ಒಂದು ಗಂಟೆ ಕಾಲ ವ್ಯಯಿಸಿದ್ದರು. ಅಷ್ಟೊತ್ತಿಗೆ ಸುನಾಮಿ ಒಂದು ಸಾವಿರ ಕಿ.ಮೀ.ಕ್ರಮಿಸಿತ್ತು. ಏಳೂವರೆ ಗಂಟೆಗೆ ಭಾರತೀಯ ವಾಯುಸೇನೆಗೆ ಸುದ್ದಿ ತಲುಪಿತ್ತು. ಆಗಲೇ ಅಂಡಮಾನ್ ನಿಕೋಬಾರ್ ನೀರಲ್ಲಿ ಮುಳುಗತೊಡಗಿತ್ತು.
ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಕರಾವಳಿಗೆ ಎಚ್ಚರಿಕೆ ನೀಡಲು ಆಗಲೂ ಒಂದೂವರೆ ಗಂಟೆಯ ಸಮಯ ಉಳಿದಿತ್ತು. ಇಂತಹ ಸಂದರ್ಭಗಳಲ್ಲಿ ಪ್ರತಿಕ್ಷಣಕ್ಕೂ ಜೀವದ ಬೆಲೆ ಇರುತ್ತದೆ. ಆದರೆ ಪ್ರಕೃತಿವಿಕೋಪ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಗೃಹಸಚಿವರ ಕಚೇರಿ ಮತ್ತು ಟೆಕ್ನಾಲಜಿ ಭವನದಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಕಚೇರಿಗಳಲ್ಲಿನ ಕೆಂಪುಪಟ್ಟಿ ತಾಲ್ಲೂಕುಮಟ್ಟದ ಸರ್ಕಾರಿ ಕಚೇರಿಗಳಿಗಿಂತ ಭಿನ್ನವಲ್ಲ.
ಅಲ್ಲಿ ಕೂತಿದ್ದ ಸಚಿವರು ಮತ್ತು ಅವರ ಮಾರ್ಗದರ್ಶಕರಾಗಿರುವ ಸರ್ಕಾರಿ ಬಾಬುಗಳು ವ್ಯಯಮಾಡಿದ್ದು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೇಕಾದ ಸಬೂಬುಗಳನ್ನು ಹುಡುಕಲು. ಅವರಿಗೆ ಜಪಾನೀಯರು ಮಾದರಿಯಾಗಿದ್ದರೆ ಅಷ್ಟೊಂದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲವೇನೋ?
ಶಾಂತ ಸಾಗರದಲ್ಲಿ ಸಾಮಾನ್ಯವಾಗಿರುವ ಸುನಾಮಿ ಹಿಂದೂ ಮಹಾಸಾಗರದಲ್ಲಿ ಅಪರೂಪ ಎನ್ನುವ ಅಭಿಪ್ರಾಯ ನಮ್ಮ ತಜ್ಞರಲ್ಲಿ ಈಗಲೂ ಇದೆ. ಅಮೆರಿಕ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಸೇರಿದಂತೆ ಶಾಂತ ಸಾಗರದ ಕರಾವಳಿಯ 26 ದೇಶಗಳು ಕೂಡಿ 1960ರಲ್ಲಿಯೇ ಹವಾಯ್‌ನಲ್ಲಿ ಸುನಾಮಿ ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಿದ್ದವು. ವಿಶ್ವಾದ್ಯಂತ ಸುನಾಮಿ ಮುನ್ಸೂಚನಾ ವ್ಯವಸ್ಥೆ ನಿರ್ಮಾಣಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಆಂಧ್ರಪ್ರದೇಶ ಮೂಲದ ವಿಜ್ಞಾನಿ ಡಾ.ಟಾಡ್ ಮೂರ್ತಿ ಸುನಾಮಿ ಮುನ್ಸೂಚನಾ ಕೇಂದ್ರ ಸ್ಥಾಪಿಸಲು 1967ರಲ್ಲಿಯೇ ಭಾರತಕ್ಕೆ ಸಲಹೆ ನೀಡಿದ್ದರಂತೆ.
ಅದಕ್ಕೆ ವಿಶಾಖಪಟ್ಟಣವೇ ಸೂಕ್ತ ಸ್ಥಳ ಎಂಬುದನ್ನೂ ಸೂಚಿಸಿದ್ದರಂತೆ. ನಮ್ಮ ಸರ್ಕಾರಗಳು ಆಸಕ್ತಿ ತೋರದಿದ್ದರೂ ಭಾರತಕ್ಕೆ ನೆರವಾಗುವಂತಹ ಮುನ್ಸೂಚನಾ ಕೇಂದ್ರಗಳಿಗೆ ಸಂಬಂಧಿಸಿದ ಕಂಪ್ಯೂಟರ್ ಪ್ರೊಗ್ರಾಮ್‌ಗಳನ್ನು ಅವರು ರಚಿಸಿದ್ದರು. ತಮಿಳುನಾಡು ದುರಂತದ ನಂತರ ಕೊನೆಗೂ ಸುನಾಮಿ ಮುನ್ಸೂಚನಾ ಕೇಂದ್ರವೊಂದು ಪ್ರಾರಂಭಗೊಂಡಿದೆ.
ಹೈದರಾಬಾದ್‌ನಲ್ಲಿರುವ ಭಾರತೀಯ ಸುನಾಮಿ ಪೂರ್ವ ಸೂಚನಾ ಕೇಂದ್ರ  ಮಾರ್ಚ್ ಹನ್ನೆರಡರ ಬೆಳಿಗ್ಗೆ 11.24 ಮತ್ತು 12.15ಕ್ಕೆ ಹೊರಡಿಸಿರುವ ಎರಡು ಬುಲೆಟಿನ್‌ಗಳಲ್ಲಿ ಜಪಾನ್‌ನ ಹೊನ್ಷು ಪೂರ್ವ ಕರಾವಳಿಯ ಸಮುದ್ರದಲ್ಲಿ ಸಂಭವಿಸಿದ್ದ ಭೂಕಂಪನವನ್ನು ದಾಖಲಿಸಿದೆ. ಎರಡೂ ಬುಲೆಟಿನ್‌ಗಳನ್ನು ಕೇಂದ್ರ ಬಿಡುಗಡೆಗೊಳಿಸಿದ್ದು ಭೂಕಂಪ ನಡೆದ ನಂತರ. ಮತ್ತೆ ಪೂರ್ವ ಸೂಚನೆ ಎಲ್ಲಿದೆ?
ಸುನಾಮಿ ಮುನ್ಸೂಚನಾ ವ್ಯವಸ್ಥೆಯದು ಈ ಸ್ಥಿತಿಯಾದರೆ  ವಿಪತ್ತು ನಿರ್ವಹಣಾ ವ್ಯವಸ್ಥೆಯದು ಇನ್ನೊಂದು ಕತೆ.ಭಾರತದ 25 ರಾಜ್ಯಗಳು ಒಂದಲ್ಲ ಒಂದು ಬಗೆಯ ಪ್ರಕೃತಿ ವಿಕೋಪದ ಭೀತಿಯನ್ನು ಎದುರಿಸುತ್ತಿವೆ. ದೇಶದ ರಾಜಧಾನಿಯೂ ಸೇರಿದಂತೆ ದೇಶದ ಅರ್ಧಭಾಗವನ್ನು ಭೂಕಂಪ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ.
ಪ್ರವಾಹ, ಬರ, ಚಂಡಮಾರುತ, ಭೂಕಂಪ ಮಾತ್ರವಲ್ಲ, ಕೈಗಾರಿಕಾ ದುರಂತ (ಭೋಪಾಲ್), ಬಾಂಬುಸ್ಫೋಟ (ಮುಂಬೈ), ಕೋಮುಗಲಭೆ  (ಗುಜರಾತ್), ಸಾಂಕ್ರಾಮಿಕ ರೋಗಗಳು (ಸೂರತ್) ಜನ ತಲ್ಲಣಿಸುವಂತೆ ಮಾಡಿವೆ.ಆದರೆ ಇತ್ತೀಚಿನವರೆಗೂ ‘ವಿಪತ್ತು ನಿರ್ವಹಣಾ ಸಂಸ್ಥೆ’ ಕೃಷಿ ಇಲಾಖೆಯ ಭಾಗವಾಗಿತ್ತು. ಪ್ರಕೃತಿ ವಿಕೋಪ ಎಂದರೆ ಬರ ಮತ್ತು ಪ್ರವಾಹ ಎಂದಷ್ಟೆ ತಿಳಿದುಕೊಂಡಿರುವುದು ಇದಕ್ಕೆ ಕಾರಣ.
ಗುಜರಾತ್‌ನಲ್ಲಿನ ಭೂಕಂಪ ಇಪ್ಪತ್ತು ಸಾವಿರ ಜನರನ್ನು ಬಲಿತೆಗೆದುಕೊಂಡ ನಂತರ ಎಚ್ಚೆತ್ತ ಕೇಂದ್ರ ಸರ್ಕಾರ ಅದನ್ನು ತರಾತುರಿಯಲ್ಲಿ ಗೃಹ ಇಲಾಖೆಗೆ ವರ್ಗಾಯಿಸಿತು. ಆ ಕಾಲದಲ್ಲಿ ಭಾರತ-ಪಾಕಿಸ್ತಾನದ ಸಂಬಂಧದಲ್ಲಿ ಕಾಣಿಸಿಕೊಂಡ ಬಿಗುವಿನಿಂದ ಹುಟ್ಟಿದ ಅಣ್ವಸ್ತ್ರ ಬಳಕೆಯ ಭೀತಿ ಕೂಡಾ ಇದಕ್ಕೆ ಕಾರಣ.
ವಿಪತ್ತು ನಿರ್ವಹಣಾ ವ್ಯವಸ್ಥೆ ಅಲ್ಲಿಂದ ಇನ್ನೊಂದು ಹೆಜ್ಜೆ ಮುಂದಿಡಲು ತಮಿಳುನಾಡು ಸುನಾಮಿಗೆ ಬಲಿಯಾಗಬೇಕಾಯಿತು. ಕೊನೆಗೂ 2005ರಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯನ್ನು ಜಾರಿಗೊಳಿಸಿತು. ಇದರಡಿ ರಚನೆಗೊಂಡ ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ಕ್ಕೆ ಪ್ರಧಾನಮಂತ್ರಿಯೇ ಅಧ್ಯಕ್ಷರು. ಗೃಹ, ಹಣಕಾಸು ಮತ್ತು ಕೃಷಿ ಸಚಿವರು ಸದಸ್ಯರು. ಈ ಪ್ರಾಧಿಕಾರಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರು.
 ಇದರ ಜತೆಯಲ್ಲಿ ಕೇಂದ್ರ ಗೃಹಖಾತೆಯಲ್ಲಿ ಪ್ರತ್ಯೇಕವಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಭಾಗ ಇದೆ. ಅದರ ಭಾಗವಾಗಿಯೇ ‘ಬಿಕ್ಕಟ್ಟು ನಿರ್ವಹಣಾ ಸಮಿತಿ’ ಇದೆ. ಇದು ಸಂಪುಟ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಡನೆ ಕಾರ್ಯನಿರ್ವಹಿಸುತ್ತಿದೆ. ಸದ್ಯಕ್ಕೆ ಇದು ಮಾಡುವ ಮುಖ್ಯ ಕೆಲಸ ನಷ್ಟದ ಅಂದಾಜು ಮತ್ತು ಪರಿಹಾರ ವಿತರಣೆ. ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇದು ಇಷ್ಟದ ಕೆಲಸ ಕೂಡಾ ಹೌದು. ಬಿಕ್ಕಟ್ಟು ನಿರ್ವಹಣೆ?
ಅಲ್ಲಿ ಇಲ್ಲಿ ಪ್ರಕೃತಿ ವಿಕೋಪಗಳು ಎದುರಾದಾಗ ಕೇಂದ್ರ ಗೃಹಸಚಿವರು ಎಲ್ಲ ರಾಜ್ಯಗಳಿಗೆ ಪತ್ರ ಬರೆಯುತ್ತಾರೆ. ಶೋಧ ಮತ್ತು ರಕ್ಷಣಾ ವ್ಯವಸ್ಥೆಯ ತಾಲೀಮು, ಅದಕ್ಕೆ ಬೇಕಾದ ಸಲಕರಣೆಗಳ ಖರೀದಿ, ಪರಿಹಾರ ಸಾಮಗ್ರಿಗಳ ದಾಸ್ತಾನು, ಸ್ವಯಂಸೇವಾ ಕಾರ್ಯಕರ್ತರಿಗೆ ತರಬೇತಿ, ಹೊಸ ತಂತ್ರಜ್ಞಾನ ಅಳವಡಿಕೆ ಬಗ್ಗೆ ತಜ್ಞರೊಡನೆ ಸಮಾಲೋಚನೆ ಇತ್ಯಾದಿ ವಿಷಯಗಳ ಬಗ್ಗೆ ಪತ್ರದಲ್ಲಿ ಮಾರ್ಗದರ್ಶನ ಇರುತ್ತದೆ. ಇವುಗಳನ್ನು ರಾಜ್ಯ ಸರ್ಕಾರಗಳು ಪಾಲಿಸುತ್ತಿವೆಯೇ, ಇಲ್ಲವೇ ಎನ್ನುವುದನ್ನು ನೋಡುವ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲ.
ರಾಜ್ಯಸರ್ಕಾರಗಳಿಗೆ ಈ ಮಾರ್ಗದರ್ಶನದ ಬಗ್ಗೆ ಆಸಕ್ತಿಯೂ ಇರುವುದಿಲ್ಲ. ಅವುಗಳು ಕೇಂದ್ರ ಸರ್ಕಾರದ ಕಡೆ ನೋಡುವುದು ದುಡ್ಡಿಗಾಗಿ ಮಾತ್ರ. ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳು ನೆರೆ ನೀರಿನಲ್ಲಿ ಮುಳುಗಿದ್ದಾಗಲೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಜತೆ ಜಗಳಕ್ಕಿಳಿದದ್ದು ದುಡ್ಡಿಗಾಗಿಯೇ.
ದುಡ್ಡೇನೋ ಬಂತು, ಕೆಲಸವಾಯಿತೇ? ಹದಿನಾರು ತಿಂಗಳುಗಳಾದರೂ ನೆರೆಹಾವಳಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆಲ್ಲ 300 ಚದರ ಅಡಿ ವಿಸ್ತೀರ್ಣದ ಮನೆ ಕಟ್ಟಿ ಕೊಡಲಾಗದ ಸರ್ಕಾರ ಸುನಾಮಿ, ಚಂಡಮಾರುತ, ಭೂಕಂಪ ಬಂದರೆ ಜನರನ್ನು ರಕ್ಷಿಸಬಹುದೇ? ಅಂದ ಹಾಗೆ, ಅಲ್ಲೇ ಇದ್ದ ನೆರೆಸಂತ್ರಸ್ತರನ್ನು ಮರೆತಿರುವ ಸರ್ಕಾರ ದೂರದ ಜಪಾನ್‌ನಲ್ಲಿರುವ ನೊಂದ ಜನರನ್ನು ಮರೆತಿದ್ದರಲ್ಲಿ ಆಶ್ಚರ್ಯವೇನಿದೆ!

Monday, March 7, 2011

ಎಡರಂಗದಿಂದ ಕಲಿಯುವುದೂ ಸಾಕಷ್ಟಿದೆ

ಕಳೆದೆರಡು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೆ ಪಶ್ಚಿಮ ಬಂಗಾಳದ ಮತದಾರರು ಆಗಲೇ ನಿರ್ಧಾರ ಮಾಡಿಮುಗಿಸಿದಂತೆಯೇ ಕಾಣುತ್ತಿದೆ. ಆದ್ದರಿಂದ ಮುಂದಿನ ತಿಂಗಳು ಆ ರಾಜ್ಯದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಗೆಲ್ಲುವುದು ಎಷ್ಟು ಕಷ್ಟವೋ, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೋಲುವುದು ಅಷ್ಟೇ ಕಷ್ಟ.
ಆದರೆ ರಾಜಕೀಯ ಪಕ್ಷಗಳು ಒಮ್ಮೊಮ್ಮೆ ಸುಲಭದ ಗೆಲುವನ್ನು ಕೈಬಿಟ್ಟು ಕಷ್ಟದ ಸೋಲಿನ ಹಿಂದೆ ಓಡುವುದುಂಟು. ಭಾವಾವೇಶಕ್ಕೆ ಒಳಗಾಗಿ ಅನೇಕ ಬಾರಿ ರಾಜಕೀಯ ಎಡವಟ್ಟುಗಳನ್ನು ಮಾಡಿಕೊಂಡಿರುವ ಮಮತಾಬ್ಯಾನರ್ಜಿಯವರಿಂದ ಇಂತಹದ್ದೊಂದು ಹರಾಕಿರಿ ನಡೆಯಲು ಸಾಧ್ಯವೇ ಇಲ್ಲ ಎಂದು ಧೈರ್ಯದಿಂದ ಹೇಳುವಂತಿಲ್ಲ. ಅಲ್ಲದೆ ರಾಜಕೀಯ ಪ್ರಜ್ಞಾವಂತಿಕೆಯಲ್ಲಿ ತಮಗೆ ತಾವೇ ಸಾಟಿಯಾಗಿರುವ ಬಂಗಾಳಿಗಳು ಅಚ್ಚರಿ ನೀಡುವ ಸಣ್ಣ ಸಾಧ್ಯತೆಯೂ ಇದೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳು ನಡೆಯದೆ ಹೋದರೆ ಮೂವತ್ತನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲಾವಧಿಯಲ್ಲಿ ಎಡಪಕ್ಷಗಳು ಪಶ್ಚಿಮಬಂಗಾಳದಲ್ಲಿ ಕಟ್ಟಿ ನಿಲ್ಲಿಸಿರುವ ‘ಕೆಂಪುಕೋಟೆ’ ಇನ್ನೆರಡು ತಿಂಗಳಲ್ಲಿ ಕುಸಿದುಬೀಳಲಿದೆ.  ಕಾಳಿಘಾಟ್‌ನ ‘ಗುಡಿಸಲ ರಾಣಿ’ ಮಮತಾ ಬ್ಯಾನರ್ಜಿ ಕೊಲ್ಕೊತ್ತಾದ ರೈಟರ್ಸ್‌ ಕಟ್ಟಡ ಪ್ರವೇಶಿಸಲಿದ್ದಾರೆ.
ವ್ಯಕ್ತಿ ಇರಲಿ, ಸಂಸ್ಥೆ ಇರಲಿ, ಸೋಲು ಬಹಳ ಕ್ರೂರವಾದುದು. ಸೋತವರ ಮೇಲೆ ಯಾರೂ ಹೂವಿನ ಮಳೆ ಸುರಿಸುವುದಿಲ್ಲ, ಕಲ್ಲೆಸೆಯುವವರೇ ಹೆಚ್ಚು. ಆದರೆ ಪಾಠ ಕಲಿಯಬೇಕಾಗಿರುವುದು ಸೋಲಿನಿಂದಲೇ ಹೊರತು ಗೆಲುವಿನಿಂದ ಅಲ್ಲ. ಸುಮಾರು ಮೂರುವರೆ ದಶಕಗಳಷ್ಟು ಕಾಲ ರಾಜ್ಯಭಾರ ಮಾಡಿದ ಪಶ್ಚಿಮಬಂಗಾಳದ ಎಡಪಕ್ಷಗಳು, ರಾಜಕೀಯವನ್ನು ನೋಡುವ, ಮಾಡುವ ಮತ್ತು ಅನುಭವಿಸುವ ವಿಧಾನವನ್ನೇ ಬದಲಾಯಿಸಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯ ಇಲ್ಲ. ರಾಜಕೀಯಕ್ಕೆ ಸಂಬಂಧಿಸಿದ  ಹಲವಾರು ಸಾಮಾನ್ಯ ವ್ಯಾಖ್ಯಾನ ಮತ್ತು ತೀರ್ಮಾನಗಳು ಕೂಡಾ ಸುಳ್ಳೆಂದು ಅಲ್ಲಿನ ಎಡರಂಗ ಮತ್ತೆಮತ್ತೆ ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಬೇರೆ ಯಾವ ರಾಜ್ಯಗಳ ನೆಲದಲ್ಲಿ ನಿಂತು ನೋಡಿದರೂ ಪಶ್ಚಿಮ ಬಂಗಾಳ ಭಾರತದಲ್ಲಿ ಇಲ್ಲವೇ ಇಲ್ಲವೇನೋ, ಅದು ಪ್ರತ್ಯೇಕವಾದ ದೇಶವೇನೋ ಎಂದು ಅನಿಸುವಷ್ಟು ಆ ರಾಜ್ಯದ ರಾಜಕೀಯ ಭಿನ್ನವಾಗಿದೆ.
ಕಳೆದ ಅರ್ವತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಆಡಳಿತ ವಿರೋಧಿ ಅಲೆಗಳಂತಹ ಮೂರು ಸಂಗತಿಗಳು ಪ್ರಮುಖವಾಗಿ ಚರ್ಚೆಗೊಳಪಟ್ಟಿವೆ. ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿದ್ದು ಕೂಡಾ ಈ ಸಂಗತಿಗಳು. ಆದರೆ ಎಡರಂಗ ಅಧಿಕಾರಕ್ಕೆ ಬಂದ ನಂತರ ಆ ರಾಜ್ಯದಲ್ಲಿ ಇಲ್ಲಿಯ ವರೆಗೆ ನಡೆದ ಆರು ವಿಧಾನಸಭಾ ಚುನಾವಣೆಗಳಲ್ಲಿ ಎಂದೂ ಈ ಮೂರು ಸಂಗತಿಗಳು ಮುಖ್ಯಚರ್ಚೆಯ ಭಾಗ ಆಗಿರಲೇ ಇಲ್ಲ. ಈ ಬಾರಿಯೂ ಆಡಳಿತ ವಿರೋಧಿ ಅಲೆಯ ಸಾಧ್ಯತೆಯ ಹೊರತಾಗಿ ಉಳಿದೆರಡು ಸಂಗತಿಗಳು ಚರ್ಚೆಯಲ್ಲಿ ಇಲ್ಲ. ಪ್ರಾಮಾಣಿಕತೆ ಮತ್ತು ಜಾತ್ಯತೀತತೆಯ ವಿಷಯದಲ್ಲಿ ಯಾರೂ ಅನುಮಾನ ಪಡದಂತಹ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಮಮತಾ ಬ್ಯಾನರ್ಜಿಯವರು ಕೂಡಾ ಎಡರಂಗ ಸರ್ಕಾರ ಭ್ರಷ್ಟಗೊಂಡಿದೆ ಇಲ್ಲವೇ ಕೋಮುವಾದದ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡುತ್ತಿಲ್ಲ ಎನ್ನುವುದು ಗಮನಾರ್ಹ.
ಭ್ರಷ್ಟರಾಗದೆ ರಾಜಕೀಯ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯ ಉತ್ತರದಿಂದ ದಕ್ಷಿಣದ ವರೆಗೆ ಎಲ್ಲ ರಾಜ್ಯಗಳಲ್ಲೂ ಹಬ್ಬಿದೆ. ಇದೇ ಅಭಿಪ್ರಾಯ ಪೂರ್ವದಿಂದ ಪಶ್ಚಿಮದ ವರೆಗಿನ ರಾಜ್ಯಗಳಲ್ಲಿಯೂ ಇದೆ ಎಂದು ಹೇಳುವ ಹಾಗೆ ಇಲ್ಲ, ಯಾಕೆಂದರೆ ಪೂರ್ವದಲ್ಲಿ ಪಶ್ಚಿಮಬಂಗಾಳ ಇದೆ. ಆ ರಾಜ್ಯದ ಎಡರಂಗದ ರಾಜಕೀಯ ದೇಶದಲ್ಲಿನ ಈ ಸಾಮಾನ್ಯ ಅಭಿಪ್ರಾಯ ತಪ್ಪೆಂದು ಕಳೆದ ಮೂವತ್ತನಾಲ್ಕು ವರ್ಷಗಳಿಂದ ಸಾಬೀತುಮಾಡಿಕೊಂಡು ಬಂದಿದೆ. ಅಧಿಕಾರಕ್ಕೆ ಬರಬೇಕಾಗಿಲ್ಲ, ಶಾಸಕರಾದ ತಿಂಗಳ ಅವಧಿಯಲ್ಲಿಯೇ ಭ್ರಷ್ಟಾಚಾರದ ಆರೋಪಗಳು ಕೇಳಲಾರಂಭಿಸುವ ಈಗಿನ ದಿನಮಾನದಲ್ಲಿ ಇಷ್ಟೊಂದು ಕಾಲ ಅಧಿಕಾರದಲ್ಲಿದ್ದೂ ತನ್ನ ಶಾಸಕರು, ಸಂಸದರ ಮೇಲೆ ಭ್ರಷ್ಟಾಚಾರದ ಕಳಂಕ ಅಂಟದಂತೆ ನೋಡಿಕೊಂಡಿರುವುದು ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸುಲಭದ ಕೆಲಸ ಅಲ್ಲ.
ಹಾಗಿದ್ದರೆ ಪಶ್ಚಿಮಬಂಗಾಳದಲ್ಲಿ ಭ್ರಷ್ಟಾಚಾರ ಇಲ್ಲವೇ? ವಿಚಿತ್ರವೆಂದರೆ ಸಾಮಾನ್ಯವಾಗಿ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಮೊದಲು ಭ್ರಷ್ಟರಾಗುವುದು ಆ ಪಕ್ಷದ ಜನಪ್ರತಿನಿಧಿಗಳು. ತಹಶೀಲ್ದಾರ್ ಕಚೇರಿಯಿಂದ ವಿಧಾನಸೌಧದ ವರೆಗೆ ಎಲ್ಲೆಲ್ಲೂ ಅವರೇ ಅಧಿಕಾರ ಚಲಾಯಿಸುವುದರಿಂದ ಹೋದಲ್ಲೆಲ್ಲ ಭ್ರಷ್ಟತೆಯ ಅವಕಾಶದ ಕಿಂಡಿಗಳನ್ನು ಅವರು ಕೊರೆಯುತ್ತಾ ಇರುತ್ತಾರೆ. ಇದೇ ಕಳ್ಳ ಕಿಂಡಿಯಲ್ಲಿ ಕೈಹಾಕಿ ಪಕ್ಷದಲ್ಲಿ ಅವರ ಹಿಂಬಾಲಕರಾಗಿರುವವರು ಸಿಕ್ಕಿದಷ್ಟನ್ನು ಬಾಚಿಕೊಳ್ಳುತ್ತಾರೆ. ಪಶ್ಚಿಮಬಂಗಾಳದ ರಾಜಕೀಯ ಇದಕ್ಕಿಂತ ಸಂಪೂರ್ಣ ಭಿನ್ನ. ಅಲ್ಲಿ ಭ್ರಷ್ಟಾಚಾರದ ಆರೋಪಗಳು ಇರುವುದು ಶಾಸಕರು ಇಲ್ಲವೇ ಸಂಸತ್ ಸದಸ್ಯರ  ಮೇಲಲ್ಲ, ಅದು ಪಕ್ಷದ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳ ಮೇಲೆ. ನೇಮಕಾತಿ, ವರ್ಗಾವಣೆ,  ಫಲಾನುಭವಿಗಳ ಆಯ್ಕೆ ಮೊದಲಾದ ಎಲ್ಲ ವಿಷಯಗಳಲ್ಲಿ ನಿರ್ಧಾರ ಈ ಪದಾಧಿಕಾರಿಗಳದ್ದೇ ಆಗಿರುವುದರಿಂದ ಒಂದಷ್ಟು ಭ್ರಷ್ಟತೆಯ ಕೆಸರು ಅವರ ಕೈಗೆ ಅಂಟಿಕೊಳ್ಳುತ್ತದೆ. ಹೀಗಿದ್ದರೂ ಅಲ್ಲಿ ದೊಡ್ಡ ಹಗರಣಗಳು ಕೇಳಿ ಬಂದೇ ಇಲ್ಲ.
ಭ್ರಷ್ಟಾಚಾರವನ್ನು ಹೊರತುಪಡಿಸಿದರೆ ಕೋಮುವಾದ ದೇಶದ ರಾಜಕೀಯದಲ್ಲಿ ಬಹುಚರ್ಚಿತ ವಿಷಯ. ತೊಂಭತ್ತರ ದಶಕದ ನಂತರದ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಬದಲಾವಣೆಗಳಲ್ಲಿ ಕೋಮುವಾದ ನಿರ್ಣಾಯಕ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಸಿಕ್ಕಿದ ಮೊದಲ ದಿನಗಳನ್ನು ಹೊರತುಪಡಿಸಿದರೆ ಪಶ್ಚಿಮಬಂಗಾಳದಲ್ಲಿ ನಡೆದೇ ಇಲ್ಲವೆನ್ನುವಷ್ಟು ಕೋಮುಗಲಭೆಗಳ ಸಂಖ್ಯೆ ಕಡಿಮೆ. ಕಾಶ್ಮೆರ (67%) ಮತ್ತು ಅಸ್ಸಾಂ (31%)  ನಂತರ ಅತ್ಯಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ (25.3%). ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟು ಮುಸ್ಲಿಮರು ಆ ರಾಜ್ಯದಲ್ಲಿದ್ದಾರೆ. ಶೇ 50ಕ್ಕಿಂತ ಹೆಚ್ಚು ಮುಸ್ಲಿಮರಿರುವ ಕನಿಷ್ಠ ಮೂರು ಜಿಲ್ಲೆಗಳು ಅಲ್ಲಿವೆ. ಹೀಗಿದ್ದರೂ ಬಾಬ್ರಿಮಸೀದಿ ಧ್ವಂಸದ ನಂತರದ ದಿನಗಳಲ್ಲಿಯೂ ಪಶ್ಚಿಮಬಂಗಾಳ ಶಾಂತವಾಗಿತ್ತು.
ಇವೆಲ್ಲದರ ಹೊರತಾಗಿಯೂ ದಶಕಗಳ ಕಾಲ ಎಡಪಕ್ಷಗಳ ಕಟ್ಟಾ ಬೆಂಬಲಿಗರಾಗಿದ್ದ ಮುಸ್ಲಿಮರು ಇತ್ತೀಚೆಗೆ ಯಾಕೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ? ಇದಕ್ಕೆ ತಕ್ಷಣದ ಉತ್ತರ ನಂದಿಗ್ರಾಮದ ವಿವಾದದಲ್ಲಿದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿದ್ದ ನಂದಿಗ್ರಾಮದಲ್ಲಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವುದರಿಂದ ಎಡಪಕ್ಷಗಳ ಬಗ್ಗೆ ಅವರ ಆಕ್ರೋಶ ಸಹಜವಾದುದು. ಆದರೆ ಈ ರೀತಿ ಪಕ್ಷನಿಷ್ಠೆಯನ್ನು ಬದಲಾಯಿಸಿಕೊಂಡವರು ಕೂಡಾ ಎಡಪಕ್ಷಗಳನ್ನು ಕೋಮುವಾದಿಗಳೆಂದು ಹೇಳುತ್ತಿಲ್ಲ. ‘ಭದ್ರತೆ ನೀಡಿದ್ದು ನಿಜ, ಆದರೆ ಅವಕಾಶ ನೀಡಲಿಲ್ಲ’ ಎನ್ನುವುದೇ ಎಡಪಕ್ಷಗಳ ಬಗ್ಗೆ ಅಲ್ಲಿರುವ ಮುಸ್ಲಿಮರಲ್ಲಿರುವ ಸಾಮಾನ್ಯ ಅತೃಪ್ತಿ.
ಎಡಪಕ್ಷಗಳು ಮುಸ್ಲಿಮ್ ಬೆಂಬಲ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣ. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಕಾಲುಭಾಗದಷ್ಟಿದ್ದರೂ ಸರ್ಕಾರಿ ನೌಕರಿಯಲ್ಲಿ ಅವರ ಪಾಲು ಕೇವಲ ಶೇಕಡಾ ಎರಡು ಮಾತ್ರ. ಶೈಕ್ಷಣಿಕವಾಗಿಯೂ ಅಲ್ಲಿನ ಮುಸ್ಲಿಮರು  ಹಿಂದುಳಿದಿದ್ದಾರೆ. ಎಡಪಕ್ಷಗಳು ಈಗಲೂ ನೆಲೆ ಉಳಿಸಿಕೊಂಡಿರುವುದು ಮುಸ್ಲಿಮ್ ಬಾಹುಳ್ಯ ಇರುವ ಪಶ್ಚಿಮಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಉಳಿದೆಲ್ಲ ರಾಜ್ಯಗಳಂತೆ ಈ ಎರಡೂ ರಾಜ್ಯಗಳಲ್ಲಿ ಮುಸ್ಲಿಮರು ಹಿಂದೆ ಇದ್ದಾರೆ. ಸಿಪಿಎಂನ ನೀತಿ ನಿರೂಪಣೆಯ ಉನ್ನತಾಧಿಕಾರದ ಸಮಿತಿಯಾದ ಪಾಲಿಟ್‌ಬ್ಯೂರೋದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲ.
ಈ ರೀತಿ ಭ್ರಮನಿರಸನಕ್ಕೊಳಗಾದ ಮುಸ್ಲಿಮರಿಗೆ ಸರಿಯಾದ ಸಮಯಕ್ಕೆ ಮಮತಾ ಬ್ಯಾನರ್ಜಿ ಎಂಬ ನಾಯಕಿ ಕಾಣಿಸಿಕೊಂಡಿದ್ದಾರೆ. ಸುಮಾರು 27 ವರ್ಷಗಳ ರಾಜಕೀಯ ಜೀವನದಲ್ಲಿ ಮಮತಾ ಬ್ಯಾನರ್ಜಿ ಎಂದೂ ಕೋಮುವಾದಿ ಎಂಬ ಆರೋಪಕ್ಕೆ ಒಳಗಾಗಿಲ್ಲ.  ಕಾಂಗ್ರೆಸ್ ಬಿಟ್ಟ ನಂತರ ಒಂದಷ್ಟು ದಿನ ಬಿಜೆಪಿ ಜತೆ ಸೇರಿಕೊಂಡರೂ ರಾಜಕೀಯ ಲಾಭಕ್ಕಾಗಿ ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರಲಿಲ್ಲ, ಮಿತ್ರಪಕ್ಷಕ್ಕೂ ಅದಕ್ಕೆ ಅವಕಾಶ ನೀಡಿರಲಿಲ್ಲ. ತಸ್ಲಿಮಾ ನಸ್ರೀನ್‌ಗೆ ಆಶ್ರಯ ನೀಡಿದ್ದ ಕಾರಣಕ್ಕೆ ಒಂದಷ್ಟು ದಿನ ಕೋಮುಗಲಭೆ ನಡೆದರೂ ಅದನ್ನು ರಾಜಕೀಯವಾಗಿ ದುರ್ಬಳಕೆ ಮಾಡಲು ಅವರು ಹೋಗಲಿಲ್ಲ. ಇವೆಲ್ಲದರ ಜತೆಗೆ ನಂದಿಗ್ರಾಮವನ್ನು ಉಳಿಸಿಕೊಟ್ಟದ್ದೇ ಮಮತಾ  ಎಂಬ ಕೃತಜ್ಞತೆ ಕೇವಲ ಆ ಊರಲ್ಲಿ ಮಾತ್ರ ಅಲ್ಲ, ಇಡೀ ರಾಜ್ಯದ ಮುಸ್ಲಿಮರಲ್ಲಿದೆ.
ಹನ್ನೊಂದು ವರ್ಷಗಳ ಹಿಂದೆ ಜ್ಯೋತಿಬಸು ಅವರು ಅಧಿಕಾರ ತ್ಯಾಗಮಾಡಿದ್ದ ಕಾಲದಲ್ಲಿಯೇ ಆಡಳಿತ ವಿರೋಧಿ ಅಲೆ ಸಣ್ಣಗೆ ಎದ್ದಿತ್ತು. ಎಡರಂಗಕ್ಕೆ ಭದ್ರಬುನಾದಿ ಹಾಕಿಕೊಟ್ಟ ಜ್ಯೋತಿಬಸು ಅವರ ಕ್ರಾಂತಿಕಾರಿ ಕಾರ್ಯಕ್ರಮವಾದ ಉಳುವವನಿಗೆ ಭೂಮಿಯ ಒಡೆತನ ನೀಡುವ ‘ಬರ್ಗಾ ಕಾರ್ಯಚರಣೆ’ಯ ನೆನಪು ಆಗಲೇ ಜನಮನದಲ್ಲಿ ನಿಧಾನವಾಗಿ ಮರೆಗೆ ಸರಿದು ಅಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಂಡಿದ್ದವು. ‘ಬರ್ಗಾ ಕಾರ್ಯಾಚರಣೆ’ಯ ನಂತರ ಗಣನೀಯವಾಗಿ ಹೆಚ್ಚಿದ್ದ ಕೃಷಿ ಇಳುವರಿ ಇತ್ತಿಚಿನ ವರ್ಷಗಳಲ್ಲಿ ಇಳಿಮುಖವಾಗತೊಡಗಿತ್ತು. ಇದರಿಂದಾಗಿ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗತೊಡಗಿದ್ದವು. ಕೈಗಾರಿಕೆಗಳೆಲ್ಲ ರೋಗಗ್ರಸ್ತವಾದ ನಂತರ ಅಲ್ಲಿ ಉದ್ಯೋಗಾವಕಾಶವೇ ಇಲ್ಲದಂತಾಗಿದೆ.
ಈ ವಾಸ್ತವ ಜ್ಯೋತಿಬಸು ಅವರಿಗೆ ಅರಿವಾಗಿಯೇ ಅಧಿಕಾರದ ಕೊನೆಯ ದಿನಗಳಲ್ಲಿ ಅವರು ಸುಧಾರಣೆಯ ಹಾದಿ ಹಿಡಿದದ್ದು. ಆದರೆ ಅದನ್ನೇ ಉತ್ತರಾಧಿಕಾರಿಯಾದ ಬುದ್ದದೇವ ಭಟ್ಟಾಚಾರ್ಯ ಅವರು ಬಿರುಸಿನಿಂದ ಪ್ರಾರಂಭಿಸಿದಾಗ ಜನ ತಿರುಗಿಬೀಳತೊಡಗಿದ್ದರು. ‘ರೈತರು  ಮಿತ್ರರು, ಉದ್ಯಮಿಗಳು ಶತ್ರು’ ಎಂದು ಪಾಠ ಹೇಳುತ್ತಾ ಬಂದ ಪಕ್ಷವೇ ಶತ್ರುಗಳ ಜತೆ ಸೇರಿಕೊಂಡಿದ್ದನ್ನು ಜನ ಸಹಿಸದಾದರು.  ಕಳೆದ 3 ದಶಕಗಳಲ್ಲಿ ಪಶ್ಚಿಮ ಬಂಗಾಳದ ಎಡಪಕ್ಷಗಳಿಗೆ ನಿಷ್ಠರಾಗಿದ್ದ ಮತದಾರರ ಒಂದು ತಲೆಮಾರು ಬದಲಾಗಿರುವುದೂ ಇದಕ್ಕೆ ಕಾರಣ.
 ಈ ಬದಲಾವಣೆ ಪಕ್ಷದ ಪದಾಧಿಕಾರಿಗಳ ಮಟ್ಟದಲ್ಲಿಯೂ ಆಗಿದೆ. ಈಗಿನ ಪದಾಧಿಕಾರಿಗಳಲ್ಲಿ ಹೆಚ್ಚಿನವರು ವಿರೋಧಪಕ್ಷವಾಗಿದ್ದ ದಿನಗಳಲ್ಲಿ ಜತೆಯಲ್ಲಿದ್ದವರಲ್ಲ. ಇವರೆಲ್ಲ ಪಕ್ಷ ಅಧಿಕಾರಕ್ಕೆ ಬಂದ ನಂತರ ಸೇರಿಕೊಂಡವರು. ಹೋರಾಟದ ಅನುಭವವೇ ಇಲ್ಲದ ಇವರಿಗೆ ಅಧಿಕಾರ ಇಲ್ಲದ ಬದುಕಿಗೆ ಹೊಂದಿಕೊಳ್ಳುವುದು ಕಷ್ಟದ ಕೆಲಸ. ಆದ್ದರಿಂದಲೆ ದಶಕಗಳ ಕಾಲ ಮರುಪ್ರಶ್ನಿಸದೆ ಬೆಂಬಲಿಸುತ್ತಾ ಬಂದ ಮತದಾರನ ನಿಷ್ಠೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಈ ಹೊಸತಲೆಮಾರು ಅಭದ್ರತೆಯಿಂದ ನರಳಾಡುತ್ತದೆ.
ಕೈ ಬಿಟ್ಟು ಹೋಗುತ್ತಿರುವ ಬೆಂಬಲದ ನೆಲೆಯನ್ನು ಉಳಿಸಿಕೊಳ್ಳಲು ಈ ಹತಾಶ ನಾಯಕರು ಹಿಡಿದದ್ದು ಪ್ರಜಾಸತ್ತಾತ್ಮಕ ಹಾದಿಯನ್ನಲ್ಲ, ಸರ್ವಾಧಿಕಾರಿ ಬಳಸುವ ಹಿಂಸಾತ್ಮಕ ಹಾದಿ. ಇದರಿಂದಾಗಿ ಆಕ್ರೋಶಗೊಂಡ ಜನ ತಿರುಗಿಬಿದ್ದಿದ್ದಾರೆ. ಈ ತಪ್ಪು ಕಾರ್ಯತಂತ್ರವೇ ಮಮತಾ ಬ್ಯಾನರ್ಜಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿರುವುದು. ಆದರೆ ಸಂಘಟನೆಯ ಜಾಲ, ಕಾರ್ಯಕ್ರಮ, ಎರಡನೇ ಸಾಲಿನ ನಾಯಕತ್ವ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಪಕ್ಷದ ಏಕೈಕ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಪ್ರಯಾಸಪಟ್ಟು ಪಶ್ಚಿಮ ಬಂಗಾಳವನ್ನು ಗೆದ್ದುಕೊಂಡರೂ ಎಷ್ಟು ಕಾಲ ಉಳಿಸಿಕೊಳ್ಳಬಲ್ಲರು ಎನ್ನುವುದೇ ಈಗ ಉಳಿದಿರುವ ಕುತೂಹಲ.

Monday, February 28, 2011

ಗೋಧ್ರಾ ಹತ್ಯಾಕಾಂಡದ ತೀರ್ಪು ಹುಟ್ಟಿಸಿರುವ ಪ್ರಶ್ನೆಗಳು

ಗೋಧ್ರಾ ರೈಲು ಹತ್ಯಾಕಾಂಡದ ಬಗ್ಗೆ ಗುಜರಾತ್‌ನ ವಿಶೇಷ ತ್ವರಿತ ನ್ಯಾಯಾಲಯ ನೀಡಿರುವ ತೀರ್ಪನ್ನು ಹೇಗೆಂದು ಅರ್ಥಮಾಡಿಕೊಳ್ಳುವುದು. ಅಪರಾಧಿಗಳಿಗೆ ಶಿಕ್ಷೆಯಾಯಿತೆಂದೇ? ನಿರಪರಾಧಿಗಳು ಬಿಡುಗಡೆಯಾದರೆಂದೇ? ಕೀವು ತುಂಬಿದ ವ್ರಣದಂತೆ ಕಳೆದ ಒಂಬತ್ತು ವರ್ಷಗಳಿಂದ ಒಳಗಿಂದೊಳಗೆ ಹಿಂದೂ- ಮುಸ್ಲಿಂ ಸಮುದಾಯಗಳೆರಡನ್ನೂ ಹಿಂಸಿಸುತ್ತಿದ್ದ  ಒಂದು ಗಾಯವಾದರೂ ಕೊನೆಗೂ ಗುಣವಾಯಿತೆಂದೇ? ಸಾಮಾನ್ಯವಾಗಿ ನ್ಯಾಯಾಲಯದ ತೀರ್ಪುಗಳು ಪ್ರಕರಣವೊಂದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರದಂತಿರುತ್ತವೆ.
ಆದರೆ ಗುಜರಾತ್ ವಿಶೇಷ ತ್ವರಿತ ನ್ಯಾಯಾಲಯದ ತೀರ್ಪಿನ ನಂತರವೂ ಬಹಳಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ. ಇದಕ್ಕಿಂತಲೂ ಮುಖ್ಯವಾಗಿ ಹಿಂದೆ ಸುಪ್ರೀಂ ಕೋರ್ಟಿನಿಂದಲೂ ಟೀಕೆಗೊಳಗಾಗಿದ್ದ ಮತ್ತು ‘ಪೂರ್ವಗ್ರಹಪೀಡಿತ, ರಾಜಕೀಯ ಪ್ರೇರಿತ ಮತ್ತು ಅಡ್ಡಕಸುಬಿ’ ಎಂಬ ಆರೋಪ ಹೊತ್ತಿರುವ ಗುಜರಾತ್ ಪೊಲೀಸ್ ಇಲಾಖೆಯ ಬಗ್ಗೆ ಇನ್ನಷ್ಟು ಸಂಶಯ ಮೂಡುವಂತಾಗಿದೆ.
ಕರಸೇವಕರನ್ನೊಳಗೊಂಡಂತೆ 59 ಪ್ರಯಾಣಿಕರ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಗಿಂತಲೂ ಉಗ್ರವಾದ ಶಿಕ್ಷೆಯೇನಾದರೂ ಇದ್ದರೆ ಅದು ಕೂಡಾ ಕಡಿಮೆಯೇ. ಆದರೆ ಈಗ ಅಪರಾಧಿಗಳೆನಿಸಿಕೊಂಡವರೆಲ್ಲರೂ ತಪ್ಪಿತಸ್ಥರೇ? ಅಪರಾಧಿಗಳೆಲ್ಲರಿಗೂ ಶಿಕ್ಷೆಯಾಗಿದೆಯೇ? ಬಿಡುಗಡೆಯಾಗಿರುವವರೆಲ್ಲ ನಿರಪರಾಧಿಗಳೇ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು  ಕಾರಣಗಳಿವೆ.
ಮೊದಲನೆಯದಾಗಿ ಗುಜರಾತ್ ಪೊಲೀಸರು ಪ್ರಾರಂಭದಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರಕಾರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದ ಆರೋಪಿಗಳ ಸಂಖ್ಯೆ 135, ಅವರಲ್ಲಿ 22 ಮಂದಿ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ. ಒಂದಿಬ್ಬರು ಸತ್ತಿದ್ದಾರೆ. ಇನ್ನು ಒಂದಷ್ಟು ಮಂದಿಯನ್ನು ಹಿಂದೆಯೇ ಬಿಡುಗಡೆ ಮಾಡಲಾಗಿದೆ.
ಉಳಿದವರಲ್ಲಿ 64 ಮಂದಿ 8-9 ವರ್ಷ ಜೈಲಲ್ಲಿದ್ದು ಈಗ ಖುಲಾಸೆಗೊಂಡಿದ್ದಾರೆ. ಕೊನೆಗೆ ಅಪರಾಧಿ ಸ್ಥಾನದಲ್ಲಿ ಉಳಿದುಕೊಂಡಿದ್ದು ಕೇವಲ 31 ಮಂದಿ. ಈ ಎಲ್ಲ ಆರೋಪಿಗಳ ವಿರುದ್ಧ ಪೊಲೀಸರು ಪ್ರಾರಂಭದಲ್ಲಿ ಪೋಟಾ ಕಾಯಿದೆಯಡಿಯೂ ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ ಮೂರು ವರ್ಷಗಳ ನಂತರ ಅವುಗಳನ್ನು ಪರಿಶೀಲಿಸಿದ ಕೇಂದ್ರ ಪರಿಶೀಲನಾ ಸಮಿತಿ, ಅದರಲ್ಲಿನ ಯಾವ ಆರೋಪವೂ ಪೋಟಾ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ವರದಿ ನೀಡಿದ್ದ ಕಾರಣ ಅವುಗಳನ್ನು ಕೈಬಿಡಲಾಗಿತ್ತು.
ಸದ್ಯಕ್ಕೆ ಖುಲಾಸೆಗೊಂಡ 64 ಮಂದಿ ತಮಗೆ ಸಿಕ್ಕ ಹೊಸ ಸ್ವಾತಂತ್ರ್ಯದ ಸಂಭ್ರಮದಲ್ಲಿರುವುದು ನಿಜ (ಎರಡೂ ಕಡೆಯವರೂ ಮೇಲ್ಮನವಿ ಸಲ್ಲಿಸುವುದು ಖಾತರಿಯಾಗಿರುವ ಕಾರಣ ಈ ಸಂತಸ ಕೂಡಾ  ಶಾಶ್ವತವಾದುದೇನಲ್ಲ). ಆದರೆ ಒಬ್ಬ ವ್ಯಕ್ತಿಯ ಅಪರಾಧ- ನಿರಪರಾಧಗಳನ್ನು ಸಾಬೀತುಪಡಿಸಲು ಒಂಬತ್ತು ವರ್ಷಗಳು ಬೇಕೇ? ಅದೂ ತನ್ನ ಉತ್ತಮ ಆಡಳಿತಕ್ಕಾಗಿ ನಂಬರ್ ಒನ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವವರ ರಾಜ್ಯದಲ್ಲಿ. ಗುಜರಾತ್ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಸಾಕ್ಷಾತ್ ಸುಪ್ರೀಂ ಕೋರ್ಟ್  ಅಪನಂಬಿಕೆ ವ್ಯಕ್ತಪಡಿಸಿದೆ. ನಿವೃತ್ತರಾದ ಹಿರಿಯ ನ್ಯಾಯಮೂರ್ತಿಗಳ ನೇತೃತ್ವದ ಮಾನವ ಹಕ್ಕುಗಳ ಸಂಘಟನೆಗಳು ಕೂಡಾ ಅಲ್ಲಿನ ಪೊಲೀಸರ ವಿರುದ್ದ ‘ಆರೋಪಪಟ್ಟಿ’ ಸಲ್ಲಿಸಿವೆ. ಗೋಧ್ರಾ ಹತ್ಯಾಕಾಂಡದ ಆರೋಪಿಗಳಲ್ಲಿ 45 ಮಂದಿ ಈ ತನಿಖೆಯ ಬಗ್ಗೆ ಲಿಖಿತ ಹೇಳಿಕೆಯಲ್ಲಿ  ಸಂಶಯ ವ್ಯಕ್ತಪಡಿಸಿದ್ದರು. ತನಿಖೆಯೇ ಹೀಗಾದರೆ?
ಎರಡನೆಯದಾಗಿ ಪ್ರಮುಖ ಆರೋಪಿಗಳಾದ ಮೌಲ್ವಿ ಸಯೀದ್ ಉಮರ್ಜಿ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ಲಾ ಕಲೋಟಾ ಅವರನ್ನು ಖುಲಾಸೆಗೊಳಿಸಲಾಗಿದೆ. ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಂಧಿತ 94 ಆರೋಪಿಗಳಲ್ಲಿ ಅಲ್ಲಿನ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಇದ್ದದ್ದು ಇವರಿಬ್ಬರೇ ಎನ್ನುವುದು ಗಮನಾರ್ಹ. ಉಳಿದವರಲ್ಲಿ ಹೆಚ್ಚಿನವರು ಸ್ಥಳೀಯ ಪೊಲೀಸ್‌ಠಾಣೆಯಲ್ಲಿ ಹಳೆಯ ಕ್ರಿಮಿನಲ್ ಚಟುವಟಿಕೆಯ ದಾಖಲೆ ಹೊಂದಿದ್ದವರು.
ಸಾಮಾನ್ಯವಾಗಿ ಇಂತಹವರು ವೈಯುಕ್ತಿಕ ಮಟ್ಟದ ದುಷ್ಕೃತ್ಯಗಳನ್ನು ಏಕಾಂಗಿಗಳಾಗಿ ಎಸಗಬಲ್ಲರು. ಆದರೆ ಗೋಧ್ರಾಹತ್ಯಾಕಾಂಡದಂತಹ ದೊಡ್ಡಮಟ್ಟದ ದುಷ್ಕೃತ್ಯವನ್ನು ನಾಯಕನಿಲ್ಲದೆ ಇಂತಹ ಅಡ್ಡಕಸುಬಿ ದುಷ್ಕರ್ಮಿಗಳು ನಡೆಸಲು ಸಾಧ್ಯವೇ? ಹಾಗಿದ್ದರೆ ಅವರಿಗೊಬ್ಬ ಗ್ಯಾಂಗ್ ಲೀಡರ್ ಇರಬೇಕಲ್ಲ? ಅವನು ಯಾರು? ಎಲ್ಲಿದ್ದಾನೆ? ಕಳೆದ ಒಂಬತ್ತು ವರ್ಷಗಳಿಂದ ಈ ಪ್ರಶ್ನೆಗೆ ಉತ್ತರ ಹುಡುಕಲು ಗುಜರಾತ್ ಪೊಲೀಸರಿಗೆ ಸಾಧ್ಯವಾಗಿಲ್ಲ.
ಗೋಧ್ರಾ ಘಟನೆಯ ಒಂದು ವರ್ಷದ ನಂತರ ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಬಂಧಿಸಿದಾಗ ಗೋಧ್ರಾ ಮಾತ್ರವಲ್ಲ, ಇಡೀ ಗುಜರಾತ್‌ನ ಮುಸ್ಲಿಮರು ಆಘಾತಕ್ಕೀಡಾಗಿದ್ದರು. ವೃತ್ತಿಯಲ್ಲಿ ಮರದ ವ್ಯಾಪಾರಿಯಾಗಿರುವ ಉಮರ್ಜಿ ಗೋಧ್ರಾ ಪ್ರದೇಶದ ದೇವ್‌ಬಂದಿ- ತಬ್ಲೀಗ್ ಜಮಾತ್ ಚಳವಳಿಯ ಪ್ರಮುಖ ನಾಯಕ. ಆರೋಪಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಚಿ ಮುಸ್ಲಿಮರು ಈ ಸಂಘಟನೆಯ ಬೆಂಬಲಿಗರು. ಬಂಧಿತ ಆರೋಪಿಗಳಲ್ಲಿಯೂ ಬಹಳಷ್ಟು ಮಂದಿ ಈ ಸಂಘಟನೆಯ ಜತೆಯಲ್ಲಿ ಸಂಪರ್ಕ ಹೊಂದಿದ್ದವರು. ಈ ಸಂಬಂಧದಿಂದಾಗಿಯೇ ಉಮರ್ಜಿ ದೇಶ- ವಿದೇಶಗಳಿಂದ ಹಣ ಸಂಗ್ರಹಿಸಿ  ಗೋಧ್ರಾ ಘಟನೆಯ ಆರೋಪಿಗಳ ಕುಟುಂಬಕ್ಕೆ ನೀಡುತ್ತಿದ್ದರು. ಗೋಧ್ರಾ ಘಟನೆಯ ನಂತರ ಅಲ್ಲಿ ಶಾಂತಿ ಸ್ಥಾಪನೆಗೆ ಅವರು ಓಡಾಡಿದ್ದರು, ಮುಖ್ಯಮಂತ್ರಿ ನರೇಂದ್ರಮೋದಿ ಗೋಧ್ರಾಕ್ಕೆ ಭೇಟಿ ನೀಡಿದಾಗಲೂ ಜತೆಯಲ್ಲಿದ್ದರು.
ಇಂತಹ ಉಮರ್ಜಿ ಒಂದು ಹೀನಕೃತ್ಯದ ಹಿಂದಿನ ಸಂಚುಕೋರ ಎಂದು ಪೊಲೀಸರು ಹೇಳಿದಾಗ ಗುಜರಾತ್ ಬೆಚ್ಚಿಬಿದ್ದಿತ್ತು. ತನಿಖೆಯ ಕಾಲದಲ್ಲಿ ಪೊಲೀಸರು ಸೋರಿಬಿಡುತ್ತಿದ್ದ ಮಾಹಿತಿ ಆಧರಿಸಿ ಪತ್ರಿಕೆಗಳು ಮಾಡುವ ವರದಿಗಳು ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಭಯೋತ್ಪಾದಕನಂತೆ ಚಿತ್ರಿಸಿತ್ತು. ತಾಲಿಬಾನ್ ನಾಯಕ ಉಮರ್ ಅಬ್ದುಲ್ಲಾ ಜತೆ ಉಮರ್ಜಿ ಸಂಪರ್ಕ ಹೊಂದಿದ್ದರೆಂಬ ವದಂತಿಯೂ ಹರಡಿತ್ತು. ಇವರ ಬಂಧನಕ್ಕೆ ಕಾರಣವಾಗಿದ್ದು ಬಂಧಿತ ಜಬೀರ್ ಬಿನಾಯಮಿನ್ ಬೆಹೆರಾ ತಪ್ಪೊಪ್ಪಿಗೆಯಲ್ಲಿ ನೀಡಿದ್ದ ಮಾಹಿತಿ.
‘ಗೋಧ್ರಾ ಹತ್ಯಾಕಾಂಡದ ಹಿಂದಿನ ದಿನ 2002ರ ಫೆಬ್ರುವರಿ 26ರಂದು ರಾತ್ರಿ 9.30 ಗಂಟೆಗೆ ರೈಲ್ವೆನಿಲ್ದಾಣದ ಪಕ್ಕದಲ್ಲಿಯೇ ಇರುವ ಅಮನ್ ಅತಿಥಿಗೃಹದಲ್ಲಿ ಸಂಚಿನ ರೂವಾರಿಗಳು ಸೇರಿದ್ದರು. ಅಲ್ಲಿಗೆ ತಮ್ಮ ಸಹಚರರನ್ನು ಕಳುಹಿಸಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಯನ್ನೇ ಗುರಿಯಾಗಿಸಿಕೊಂಡು ಬೆಂಕಿ ಹಚ್ಚುವಂತೆ ತಿಳಿಸಿದ್ದರು’ ಎಂದು ಆ ಸಭೆಯಲ್ಲಿದ್ದ ಬೆಹೆರಾ ಪೊಲೀಸರಿಗೆ ತಿಳಿಸಿದ್ದೇ ಉಮರ್ಜಿ ಬಂಧನಕ್ಕೆ ಕಾರಣ. ಈಗ ನ್ಯಾಯಾಲಯ ಮುಖ್ಯ ಆರೋಪಿಯಾಗಿದ್ದ ಉಮರ್ಜಿ ಅವರನ್ನು ಆರೋಪದಿಂದ ಖುಲಾಸೆಗೊಳಿಸಿದೆ. ಆದರೆ ‘ಗೋಧ್ರಾ ಹತ್ಯಾಕಾಂಡ ಅಪಘಾತ ಅಲ್ಲ, ಪೂರ್ವಯೋಜಿತ ಸಂಚು’ ಎಂದು ತೀರ್ಪು ನೀಡಿದೆ. ಮುಖ್ಯ ಸಂಚುಕೋರನೆಂಬ ಆರೋಪ ಹೊತ್ತ ಉಮರ್ಜಿಯ ಖುಲಾಸೆಯಿಂದಾಗಿ ಗೋಧ್ರಾ ಹತ್ಯಾಕಾಂಡ ಸಂಚಿನ ಫಲ ಎನ್ನುವುದಕ್ಕೆ ಇದ್ದ ಪ್ರಬಲ ಸಮರ್ಥನೆಯೊಂದು ದುರ್ಬಲಗೊಂಡಂತಾಗಲಿಲ್ಲವೇ?
ಮೂರನೆಯದಾಗಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ನಡೆದ ಮೂರು ಬಗೆಯ ತನಿಖೆ ಸೃಷ್ಟಿಸಿರುವ ಗೊಂದಲ. ಅಪರಾಧಗಳನ್ನು ಮುಚ್ಚಿಹಾಕಲು ಸ್ವತಂತ್ರ ಭಾರತದ ರಾಜಕಾರಣಿಗಳು ಕಂಡುಕೊಂಡ ಸುಲಭದ ಉಪಾಯ ಎಂದರೆ ಒಂದೇ ಪ್ರಕರಣದ ಬಗ್ಗೆ ಹಲವು ಬಗೆಯ ತನಿಖೆಗಳಿಗೆ ಅವಕಾಶ ಮಾಡಿಕೊಡುವುದು (ಇತ್ತೀಚಿನ ಉದಾಹರಣೆ 2ಜಿ ತರಂಗಾಂತರ ಹಗರಣ). ಈ ತನಿಖಾ ಸಂಸ್ಥೆಗಳು ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವ ವರದಿಗಳನ್ನು ನೀಡಿ ಗೊಂದಲದ ವಾತಾವರಣವನ್ನು ನಿರ್ಮಿಸುತ್ತದೆ. ಅಷ್ಟರಲ್ಲಿ ಅನ್ಯಾಯಕ್ಕೀಡಾದವರಲ್ಲಿ ದಣಿವು ಕಾಣಿಸಿಕೊಳ್ಳುವುದರಿಂದ ಅವರಲ್ಲಿ ಹೋರಾಟದ ಉತ್ಸಾಹ ಉಳಿದಿರುವುದಿಲ್ಲ, ಸಾಮಾನ್ಯ ಜನತೆಯ ನೆನೆಪಿನ ಶಕ್ತಿಯೂ ಕುಂದಿರುತ್ತದೆ. ‘ಆದದ್ದು ಆಗಿಹೋಯಿತು. ಹಳೆಯದನ್ನು ಕೆದಕುವುದು ಬೇಡ, ಮುಂದಿನ ದಾರಿ ನೋಡುವ’ ಎನ್ನುವ ಬುದ್ಧಿಮಾತುಗಳು ಎಲ್ಲೆಡೆ ಕೇಳತೊಡಗುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ಇವುಗಳಲ್ಲೆದರ ನಡುವೆ ಸತ್ಯ ಎಲ್ಲೋ ಮರೆಯಾಗಿ ಬಿಡುತ್ತದೆ.
ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಗೊಂಡ ಸಿಬಿಐ ಮಾಜಿ ನಿರ್ದೇಶಕ ರಾಘವನ್ ನೇತೃತ್ವದ ವಿಶೇಷ ತನಿಖಾದಳಕ್ಕಿಂತ ಮೊದಲು ಎರಡು ಆಯೋಗಗಳು ಗೋಧ್ರಾ ಹತ್ಯಾಕಾಂಡದ ತನಿಖೆ ನಡೆಸಿದ್ದವು. ಮೊದಲನೆಯದು ಗುಜರಾತ್ ಸರ್ಕಾರವೇ ನೇಮಿಸಿದ್ದ ನ್ಯಾಯಮೂರ್ತಿಗಳಾದ ಜಿ.ಟಿ. ನಾನಾವತಿ ನೇತೃತ್ವದ ತನಿಖಾ ಆಯೋಗ. 2008ರಲ್ಲಿ ವರದಿ ನೀಡಿದ ಈ ಆಯೋಗ ‘ಗೋಧ್ರಾ ಹತ್ಯಾಕಾಂಡ ಒಂದು ಪೂರ್ವನಿಯೋಜಿತ ಸಂಚು, ಅದು ಅಪಘಾತ ಅಲ್ಲ’ ಎಂದು ಹೇಳಿತ್ತು. ಗೋಧ್ರಾ ಘಟನೆಯ ನಂತರ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯ ನಿಯಂತ್ರಣದಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದ ಕರ್ತವ್ಯ ಚ್ಯುತಿ ನಡೆದಿದೆ ಎಂಬ ಆರೋಪವನ್ನು ಕೂಡಾ ನಾನಾವತಿ ಆಯೋಗ ತಳ್ಳಿಹಾಕಿತ್ತು.
ಆದರೆ ನಾನಾವತಿ ಆಯೋಗ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿಯೇ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು  ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ನೇತೃತ್ವದ ತನಿಖಾ ಆಯೋಗವನ್ನು ರಚಿಸಿದ್ದರು. 2005ರಲ್ಲಿ ವರದಿ ನೀಡಿದ ಬ್ಯಾನರ್ಜಿ ಅವರು,  ‘ರೈಲಿಗೆ ಹತ್ತಿಕೊಂಡ ಬೆಂಕಿ ಸಂಚಿನ ಫಲ ಅಲ್ಲ, ಅದೊಂದು ಅಪಘಾತ’ ಎಂದು ಹೇಳಿದ್ದರು. ಆದರೆ ಆ ಆಯೋಗವನ್ನು ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಾಲುಪ್ರಸಾದ್ ರಚಿಸಿದ್ದರು ಎನ್ನುವ ಕಾರಣಕ್ಕೆ ನ್ಯಾಯಮೂರ್ತಿ ಬ್ಯಾನರ್ಜಿ ವರದಿಯನ್ನು ಟೀಕಿಸಿದವರೇ ಹೆಚ್ಚು.
ಆದರೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಇಂತಹದ್ದೊಂದು ದೊಡ್ಡ ದುರಂತದ ಬಗ್ಗೆ ಆ ಕಾಲದ ರೈಲ್ವೆ ಸಚಿವ ನಿತೀಶ್‌ಕುಮಾರ್ ಯಾಕೆ ತನಿಖೆಗೆ ಆದೇಶ ನೀಡಿಲ್ಲ ಎನ್ನುವುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಈ ವಿವಾದಗಳಿಂದಾಗಿ ಕೊನೆಗೆ ಗುಜರಾತ್ ಹೈಕೋರ್ಟ್ ಕೂಡಾ ತೀರ್ಪು ನೀಡಿ ‘ಬ್ಯಾನರ್ಜಿ ಆಯೋಗದ ರಚನೆಯೇ ಸಂವಿಧಾನ ವಿರೋಧಿ’ ಎಂದು ಹೇಳಿತ್ತು. ಈ ಕಾರಣದಿಂದಾಗಿ ಬ್ಯಾನರ್ಜಿ ಆಯೋಗದ ತನಿಖಾ ವರದಿಯನ್ನೂ ಯಾರೂ ಚರ್ಚೆಗೆ ಎತ್ತಿಕೊಳ್ಳದಿದ್ದರೂ, ಅದು ಗೋಧ್ರಾ ಹತ್ಯಾಕಾಂಡದ ಕಾರಣಗಳ ಬಗ್ಗೆ ಒಂದಷ್ಟು ಗೊಂದಲಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಗೋಧ್ರಾ ಹತ್ಯಾಕಾಂಡವನ್ನು ಸಂಚು ಎಂದು ಹೇಳಿದ ವಿಶೇಷ ನ್ಯಾಯಾಲಯದ ತೀರ್ಪು ಒಂದು ರೀತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಪಾಲಿನ ಗೆಲುವು. ಆಶ್ಚರ್ಯವೆಂದರೆ ಮೋದಿ ಅವರು ಈ ಗೆಲುವನ್ನು ಕುಣಿದಾಡಿ ಆಚರಿಸಿದ ಹಾಗೆ ಕಾಣಲಿಲ್ಲ. ಈ ತೀರ್ಪು ಬಗ್ಗೆ ಕಾಟಾಚಾರದ ಪ್ರತಿಕ್ರಿಯೆ ನೀಡಿ ಅವರು ಮೌನ ತಾಳಿದ್ದಾರೆ. ಯಾಕೆ? ವಿಶೇಷ ತನಿಖಾದಳ ಗೋಧ್ರಾವನ್ನೂ ಒಳಗೊಂಡಂತೆ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರು ಪ್ರಮುಖ ಪ್ರಕರಣಗಳ ತನಿಖೆ ನಡೆಸಿದೆ. ಇತ್ತೀಚೆಗೆ ಇಂಗ್ಲಿಷ್ ವಾರಪತ್ರಿಕೆಯೊಂದು ಮಾಡಿರುವ ‘ಸ್ಕೂಪ್’ ವರದಿ ಪ್ರಕಾರ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ನರೇಂದ್ರಮೋದಿಯವರು ಅಪರಾಧಿ ಎಂದು  ಎಸ್‌ಐಟಿ ಅಭಿಪ್ರಾಯಪಟ್ಟಿದೆಯಂತೆ.
ದಾಖಲೆಗಳ ನಾಶ, ಕೋಮುದ್ವೇಷ ಪ್ರಚೋದಿಸುವ ಭಾಷಣ, ಗಲಭೆಯ ಸಮಯದಲ್ಲಿ ಪೊಲೀಸ್ ನಿಯಂತ್ರಣಾ ಕೊಠಡಿಯಲ್ಲಿ ಅಕ್ರಮವಾಗಿ ಸೇರಿಕೊಂಡು ಆದೇಶ ನೀಡುತ್ತಿದ್ದ ಸಚಿವರು, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸಂಘ ಪರಿವಾರದ ಸದಸ್ಯರ ನೇಮಕ, ನಿಷ್ಪಕ್ಷಪಾತ ನಿಲುವಿನ ಪೊಲೀಸ್ ಅಧಿಕಾರಿಗಳಿಗೆ ಕಿರುಕುಳ... ಇವು ತನಿಖೆಯಿಂದ ಎಸ್‌ಐಟಿ ಕಂಡುಕೊಂಡ ಮೋದಿಯವರ ‘ಅಪರಾಧ’ಗಳಂತೆ. ಸದ್ಯಕ್ಕೆ ಕಳೆದ ವರ್ಷದ ಮೇ 12 ರಂದು ಎಸ್‌ಐಟಿ ಸಲ್ಲಿಸಿದ್ದ 600 ಪುಟಗಳ ಈ ವರದಿ ಸುಪ್ರೀಂ ಕೋರ್ಟ್‌ನ ಕಪಾಟಿನಲ್ಲಿ ಭದ್ರವಾಗಿದೆ.
ಪತ್ರಿಕೆಯಲ್ಲಿನ ವರದಿ ನಿಜವಾಗಿದ್ದರೆ ಮೋದಿ ಅವರ ಕಷ್ಟದ ದಿನಗಳು ಪ್ರಾರಂಭವಾಗಲಿವೆ. ಗೋಧ್ರಾ ಹತ್ಯಾಕಾಂಡದ ಬಗ್ಗೆ ಎಸ್‌ಐಟಿ ವರದಿ ಆಧರಿತ ತೀರ್ಪನ್ನು ಒಪ್ಪಿಕೊಂಡ ನಂತರ ಅದೇ ವರದಿ ಆಧರಿತ ಬೇರೆ ತೀರ್ಪನ್ನೂ ಒಪ್ಪಿಕೊಳ್ಳಲೇಬೇಕಲ್ಲಾ? ಈ ವರದಿಯಲ್ಲಿರುವದೇನಾದರೂ ನರೇಂದ್ರ ಮೋದಿಯವರಿಗೂ ಗೊತ್ತಾಗಿ ಅವರು ಮೌನವಾಗಿದ್ದಾರೆಯೇ?