ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ವಿರೋಧಪಕ್ಷಗಳ ಅಗತ್ಯ ಇಲ್ಲವೇ ಇಲ್ಲ, ಮತದಾರರೂ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷವೇ ಸಾಕು. ಭ್ರಷ್ಟಾಚಾರ, ಭಿನ್ನಮತ ಮತ್ತು ಅನೈತಿಕ ಚಟುವಟಿಕೆಗಳಿಂದಾಗಿ ಅವಸಾನದ ಪ್ರಪಾತದೆಡೆಗೆ ರಭಸದಿಂದ ಸಾಗುತ್ತಿರುವ ಆಡಳಿತಾರೂಢ ಬಿಜೆಪಿ, ಚುನಾವಣೆಯನ್ನು ಎದುರಿಸುವ ಮೊದಲೇ ಸೋಲಿನ ಭೀತಿಯಲ್ಲಿದೆ.
ಕಳೆದ ಏಳುವರ್ಷಗಳಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿರುವ ಕಾಂಗ್ರೆಸ್ ರಾಜಕೀಯವಾಗಿ ಅನುಕೂಲವಾಗಿರುವ ಈ ಪರಿಸ್ಥಿತಿಯಲ್ಲಿ ನಿರಾಯಾಸವಾದ ಗೆಲುವಿನ ಕನಸನ್ನಾದರೂ ಕಾಣಲು ಸಾಧ್ಯವಾಗಬೇಕಾಗಿತ್ತು, ಆದರೆ, ಅದರ ನಾಯಕರನ್ನು ಸೋಲಿನ ದುಃಸ್ವಪ್ನ ಬೆಚ್ಚಿಬೀಳಿಸತೊಡಗಿದೆ.
ಕರ್ನಾಟಕವೇನು ಕಾಂಗ್ರೆಸ್ ತಲೆ ಎತ್ತಲಾಗದಷ್ಟು ನೆಲಕಚ್ಚಿರುವ ಉತ್ತರಪ್ರದೇಶ, ಬಿಹಾರ ರಾಜ್ಯಗಳಂತಲ್ಲ. ಭೇದಿಸಲಾಗದ ರೀತಿಯಲ್ಲಿ ವಿರೋಧಪಕ್ಷಗಳು ಕೋಟೆ ಕಟ್ಟಿಕೊಂಡಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ರಾಜ್ಯಗಳೂ ಅಲ್ಲ. ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡಿದ ರಾಜ್ಯ ಕರ್ನಾಟಕ, ಇಂದಿರಾಗಾಂಧಿಗೆ ರಾಜಕೀಯ ಮರುಹುಟ್ಟುನೀಡಿದ, ಸೋನಿಯಾಗಾಂಧಿಯವರನ್ನು ಗೆಲ್ಲಿಸಿ ಕಳುಹಿಸಿದ ರಾಜ್ಯ ಇದು.
ಸ್ವತಂತ್ರ ಭಾರತದಲ್ಲಿ ನಡೆದ ಹದಿಮೂರು ಚುನಾವಣೆಗಳಲ್ಲಿ ಮೂರನ್ನು ಹೊರತುಪಡಿಸಿದರೆ ಉಳಿದೆಲ್ಲವನ್ನೂ ಕಾಂಗ್ರೆಸ್ ಇಲ್ಲಿ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರ ಸಂಖ್ಯೆಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸೋತಿದ್ದರೂ, ಬಿಜೆಪಿಗಿಂತ ಶೇಕಡಾ 0.74ರಷ್ಟು ಹೆಚ್ಚು ಮತಗಳನ್ನು ಪಡೆದಿತ್ತು.
ಹೀಗಿದ್ದರೂ ಮುಂದಿನ ಚುನಾವಣೆಯ ನಂತರ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುವ ಕಾಂಗ್ರೆಸ್ ನಾಯಕರ ಸಂಖ್ಯೆ ಕಡಿಮೆ. ಇದಕ್ಕೆ ಮುಖ್ಯ ಕಾರಣ ದೆಹಲಿಯಲ್ಲಿ ಕೂತಿರುವ ಹೈಕಮಾಂಡ್ ನಾಯಕರು ಒಂದಾದರ ಮೇಲೊಂದರಂತೆ ಕೈಗೊಳ್ಳುತ್ತಾ ಬಂದ ಆತ್ಮಹತ್ಯಾಕಾರಿ ನಿರ್ಧಾರಗಳು.
ಇವುಗಳಲ್ಲಿ ಇತ್ತೀಚಿನದು ಸಿದ್ದರಾಮಯ್ಯನವರು ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಬೆಳವಣಿಗೆ. ಜನಪ್ರಿಯ ನಾಯಕನೊಬ್ಬ ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸಮಸ್ಯೆಯ ಪರಿಹಾರ ಮತ್ತು ಸಮಸ್ಯೆ ಎರಡೂ ಆಗಲು ಸಾಧ್ಯ. ಅವರು ಏನಾಗುತ್ತಾರೆ ಎನ್ನುವುದು ಪಕ್ಷ ಮತ್ತು ಆ ನಾಯಕನ ನಡವಳಿಕೆಯನ್ನು ಅವಲಂಬಿಸಿರುತ್ತದೆ. ಕಾಂಗ್ರೆಸ್ ಪಕ್ಷಕ್ಕಾಗಲಿ, ಸಿದ್ದರಾಮಯ್ಯನವರಾಗಲಿ ರಾಜಕೀಯ ಶಾಲೆಯ ಈ ಸಾಮಾನ್ಯ ಪಾಠ ಗೊತ್ತಿಲ್ಲ ಎಂದು ಹೇಳಲಾಗದು.
ಸಿದ್ದರಾಮಯ್ಯನವರ ಕಣ್ಣಿಗೆ ಎಲ್ಲವೂ ನುಣ್ಣಗೆ ಕಾಣಲು ಕಾಂಗ್ರೆಸ್ ಪಕ್ಷ ದೂರದ ಬೆಟ್ಟ ಅಲ್ಲ. ಅದರ ಜತೆಯಲ್ಲಿಯೇ ಅವರು ಗುದ್ದಾಡಿಕೊಂಡು ರಾಜಕೀಯ ಮಾಡಿಕೊಂಡು ಬಂದವರು. ಅದೇ ರೀತಿ ಸಿದ್ದರಾಮಯ್ಯ ಕೂಡಾ ಅನ್ಯಗ್ರಹದಿಂದ ಉದುರಿಬಿದ್ದ ನಾಯಕನಲ್ಲ, ಅವರನ್ನು ಕಾಂಗ್ರೆಸ್ ಪಕ್ಷದೊಳಗೆ ಎಳೆದುಕೊಂಡು ಬಂದವರಿಗೂ ಅವರ ಗುಣ-ಸ್ವಭಾವ, ನೀತಿ-ನಿಲುವುಗಳೆಲ್ಲವೂ ಗೊತ್ತಿತ್ತು.
ಪ್ರಾದೇಶಿಕ ಪಕ್ಷದ ನಾಯಕತ್ವಕ್ಕೆ ಹೇಳಿ ಮಾಡಿಸಿದಂತಹ ರಾಜಕೀಯ ವ್ಯಕ್ತಿತ್ವದ ಸಿದ್ದರಾಮಯ್ಯ, ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್ ಪಕ್ಷಕ್ಕೆ ಹೊಂದಿಕೊಳ್ಳುವುದು ಕಷ್ಟ ಎನ್ನುವುದನ್ನು ಅವರ ಶತ್ರುಗಳು ಮಾತ್ರವಲ್ಲ ಮಿತ್ರರೂ ಹೇಳುತ್ತಿದ್ದರು. ಪರಸ್ಪರ ಗುಣಾವಗುಣಗಳ ಅರಿವಿದ್ದು ಮಾಡಿಕೊಂಡ ಸಂಬಂಧ ಈಗ ಮುರಿದುಬೀಳುವ ಸ್ಥಿತಿಯಲ್ಲಿದೆ.
ಸಿದ್ದರಾಮಯ್ಯನವರ ಆಯ್ಕೆಯ ಅಭ್ಯರ್ಥಿಗಳ ಅರ್ಹತೆ-ಅನರ್ಹತೆಗಳು ಪ್ರತ್ಯೇಕ ಚರ್ಚೆಯ ವಿಚಾರ. ಆದರೆ ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಧಾನಪರಿಷತ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶಾಸಕಾಂಗ ಪಕ್ಷದ ನಾಯಕನ ಜತೆ ಸಮಾಲೋಚನೆ ಮಾಡದೆ ಇರುವುದು ಮೂರ್ಖತನವಲ್ಲದೆ ಮತ್ತೇನಲ್ಲ. ಅವಮಾನಿಸಲೇಬೇಕೆಂಬ ದುರುದ್ದೇಶ ಇಲ್ಲದೆ ಹೋದರೆ ಈ ರೀತಿ ಯಾವ ಪಕ್ಷವೂ ಮಾಡಲು ಸಾಧ್ಯ ಇಲ್ಲ.
ಸಿದ್ದರಾಮಯ್ಯನವರು ಸಿಡಿಯಲು ಈಗಿನ ಅಸಮಾಧಾನವೊಂದೇ ಖಂಡಿತ ಕಾರಣ ಅಲ್ಲ. ಪಕ್ಷದ ನಿರ್ಲಕ್ಷ್ಯ ಮತ್ತು ಅವಮಾನ ಸಿದ್ದರಾಮಯ್ಯನವರಿಗೆ ಹೊಸತಲ್ಲ, ಕಾಂಗ್ರೆಸ್ ಸೇರಿದ ನಂತರದ ಕಳೆದ ಆರು ವರ್ಷಗಳ ಅವಧಿಯಲ್ಲಿ ಅವರು ಅದನ್ನು ಎದುರಿಸುತ್ತಲೇ ಬಂದಿದ್ದಾರೆ.
ಸಿದ್ದರಾಮಯ್ಯನವರ ಸಹಜ ಸ್ವಭಾವದ ಪ್ರಕಾರ ಅವರೆಂದೋ ಸ್ಫೋಟಿಸಬೇಕಾಗಿತ್ತು. ಸಂಯಮವನ್ನು ಕಾಪಾಡಿಕೊಂಡು ಹೋಗಬೇಕೆಂಬ ಔದಾರ್ಯದಿಂದಲೋ, ಬೇರೆ ಮಾರ್ಗಗಳಿಲ್ಲದ ಅಸಹಾಯಕತೆಯಿಂದಲೋ ಅವರು ಬಾಯಿಮುಚ್ಚಿಕೊಂಡು ಸಹಿಸುತ್ತಾ ಬಂದಿದ್ದಾರೆ. ಎರಡನೆಯದೇ ನಿಜವಾದ ಕಾರಣ ಇರಬಹುದು.
ಕಾಂಗ್ರೆಸ್ ರಾಜಕಾರಣವನ್ನು ನೋಡುತ್ತಾ ಬಂದವರಿಗೆ ಸಿದ್ದರಾಮಯ್ಯನವರನ್ನು ಆ ಪಕ್ಷ ನಡೆಸಿಕೊಂಡು ಬಂದ ರೀತಿಯಿಂದ ಅಚ್ಚರಿಯಾಗದು. ವಿರೋಧ ಪಕ್ಷವನ್ನು ದುರ್ಬಲಗೊಳಿಸಲು ಅದರೊಳಗಿನ ಅತೃಪ್ತ ನಾಯಕರನ್ನು ಮೊದಲು ಸೆಳೆದುಕೊಳ್ಳುವುದು ನಂತರ ಅವರನ್ನು ಎಲ್ಲೋ ಮೂಲೆಗೆ ತಳ್ಳಿಬಿಡುವುದು ಅದರ ಹಳೆಯ ಕಾರ್ಯತಂತ್ರ. ಒಮ್ಮೆ ಮೂಲ ಪಕ್ಷವನ್ನು ತೊರೆದುಬಂದ ನಂತರ ಮರಳಿಹೋಗುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಅವಮಾನ-ಅನಾದರಣೆಯನ್ನು ಸಹಿಸಿಕೊಂಡು ಇಲ್ಲಿಯೇ ಇರಬೇಕಾಗುತ್ತದೆ.
ಗುಜರಾತ್‌ನಲ್ಲಿ ಬಿಜೆಪಿ ಬಿಟ್ಟುಬಂದ ಶಂಕರ್‌ಸಿಂಗ್ ವಘೇಲಾ, ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಟ್ಟುಬಂದ ಛಗನ್ ಭುಜಬಲ್ ಮೊದಲಾದವರು ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯಲು ಅವಕಾಶ ಸಿಗಲೇ ಇಲ್ಲ. ಸಿದ್ದರಾಮಯ್ಯನವರದ್ದೂ ಇದೇ ಸ್ಥಿತಿ.
ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ ನಡವಳಿಕೆಯೇ ಮೂರ್ಖತನದ್ದು, ಮೊದಲನೆಯದಾಗಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಪಕ್ಷದೊಳಗೆ ಆಗಲೇ ಹಿರಿಯ ನಾಯಕರು ತುಂಬಿ ತುಳುಕಾಡುತ್ತಿದ್ದರು, ಜತೆಗೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಪಕ್ಷಾಂತರಗೊಂಡವರ ಕಾರಣದಿಂದ `ಮೂಲನಿವಾಸಿಗಳು` ಮತ್ತು `ವಲಸೆಕೋರರ` ನಡುವಿನ ಸಂಘರ್ಷ ಪ್ರಾರಂಭವಾಗಿ ಬಿಟ್ಟಿತ್ತು.
ಈ ಸ್ಥಿತಿಯಲ್ಲಿ ಸಿದ್ದರಾಮಯ್ಯನವರಂತಹ ಹಿರಿಯ ನಾಯಕರನ್ನು ಕರೆತಂದರೂ ಉನ್ನತ ಸ್ಥಾನಮಾನ ನೀಡುವುದು ಸುಲಭದ ಕೆಲಸ ಆಗಿರಲಿಲ್ಲ. ಎರಡನೆಯದಾಗಿ ಸೇರಿಸಿಕೊಂಡ ನಂತರ ಆಂತರಿಕ ವಿರೋಧಗಳೇನೇ ಇದ್ದರೂ ಅದನ್ನು ಲೆಕ್ಕಿಸದೆ ಸೂಕ್ತ ಸ್ಥಾನಮಾನ ನೀಡಿ ಅವರನ್ನು ಪಕ್ಷದ ಬಲವರ್ಧನೆಗೆ ಬಳಸಿಕೊಳ್ಳಬೇಕಾಗಿತ್ತು. ಆದರೆ ಕಾಂಗ್ರೆಸ್ ಮಾಡಿದ್ದೇ ಬೇರೆ. ಸಿದ್ದರಾಮಯ್ಯನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕೈಬಿಟ್ಟು ಬಿಟ್ಟಿತು.
ಅಲ್ಲಿಗೆ ಪಕ್ಷದೊಳಗಿನ ಅತೃಪ್ತನಾಯಕರ ಪಟ್ಟಿಗೆ ಇನ್ನೊಬ್ಬರು ಸೇರ್ಪಡೆಯಾದರು ಅಷ್ಟೆ.
ಪಕ್ಷಕ್ಕೆ ಸೇರಿಸಿಕೊಳ್ಳಲು ತಮ್ಮ ಮೇಲಿನ ಪ್ರೀತಿಗಿಂತಲೂ ಹೆಚ್ಚಾಗಿ ದೇವೇಗೌಡರ ಮೇಲಿನ ದ್ವೇಷ ಕಾರಣ ಎನ್ನುವುದು ಸಿದ್ದರಾಮಯ್ಯನವರಿಗೂ ಗೊತ್ತಿತ್ತು. ಪ್ರೀತಿ ಇದ್ದಿದ್ದರೆ ಅದು ತಮ್ಮ ಸಮುದಾಯದ ನಾಯಕನೆಂಬ ಅಭಿಮಾನದಿಂದಾಗಿ ಅವರನ್ನು ಪಕ್ಷಕ್ಕೆ ಕರೆತರಲು ಬಹಿರಂಗವಾಗಿಯೇ ಪ್ರಯತ್ನದಲ್ಲಿ ತೊಡಗಿದ್ದ ಎಚ್. ವಿಶ್ವನಾಥ್ ಮತ್ತು ಎಚ್.ಎಂ.ರೇವಣ್ಣನಂತಹವರಲ್ಲಿತ್ತೋ ಏನೋ?
ಆದರೆ, ಅವರಿಗಿಂತಲೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದವರು ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್. ಎಂ.ಕೃಷ್ಣ ಅವರು. ಅದಕ್ಕೆ ಕಾರಣ ಅವರಿಗೆ ದೇವೇಗೌಡರ ಮೇಲೆ ರಾಜಕೀಯವಾಗಿ ಇದ್ದ ದ್ವೇಷ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅತೃಪ್ತ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ದೇವೇಗೌಡರ ಪಕ್ಷದ ಬಲ ಕುಂದಿಸುವುದು ಅವರ ಲೆಕ್ಕಾಚಾರವಾಗಿತ್ತು.
ಕಾಂಗ್ರೆಸ್ ಪಕ್ಷಕ್ಕೂ ಇದು ಬೇಕಾಗಿತ್ತು. ಈ ಪ್ರೀತಿ-ದ್ವೇಷದ ಆಟದ ಬಗ್ಗೆ ಅರಿವಿದ್ದೂ ಸಿದ್ದರಾಮಯ್ಯ ದಾಳವಾದರು. ಜೆಡಿ(ಎಸ್) ಬಿಟ್ಟು ಹೊರಬಂದ ಸಿದ್ದರಾಮಯ್ಯನವರ ಬಗ್ಗೆ ಕೃಷ್ಣ ಅವರಿಗೂ ಹೆಚ್ಚಿನ ಆಸಕ್ತಿ ಇರಲಿಲ್ಲ. ಸಿದ್ದರಾಮಯ್ಯನವರ ಜತೆ ಕೂಡಿಕೊಂಡರೆ ಮೈತ್ರಿಯನ್ನು ಮುರಿಯುತ್ತೇನೆ ಎಂದು ದೇವೇಗೌಡರು ನೀಡಿದ ಎಚ್ಚರಿಕೆಯನ್ನು ಧಿಕ್ಕರಿಸಿದ ಕಾರಣಕ್ಕೆ ಜೆಡಿ(ಎಸ್) ಜತೆಗಿನ ಮೈತ್ರಿಕೂಟದ ಸರ್ಕಾರವನ್ನೇ ಕಳೆದುಕೊಂಡ ಕಾಂಗ್ರೆಸ್, ಒಂದು ಸರ್ಕಾರದ ಬೆಲೆತೆತ್ತು ಬರಮಾಡಿಕೊಂಡ ಸಿದ್ದರಾಮಯ್ಯವನರನ್ನು ಮಾತ್ರ ಸರಿಯಾಗಿ ಬಳಸಿಕೊಳ್ಳಲಿಲ್ಲ.
ಸಿದ್ದರಾಮಯ್ಯನವರನ್ನು ಬಾಜಾ-ಭಜಂತ್ರಿಯೊಂದಿಗೆ ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ಮೂರು ವರ್ಷಗಳ ಕಾಲ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡದೆ ನಿರ್ಲಕ್ಷಿಸಿತ್ತು. ಖಾಲಿ ಹುದ್ದೆಗಳೇ ಇರಲಿಲ್ಲ, ಯಾರ ಹುದ್ದೆಯನ್ನೂ ಖಾಲಿ ಮಾಡಿಸುವ ಆಸಕ್ತಿಯೂ ಪಕ್ಷದ ಹೈಕಮಾಂಡ್‌ಗೆ ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಎನ್. ಧರ್ಮಸಿಂಗ್ ವಿರಾಜಮಾನರಾಗಿದ್ದರು.
ತಾಂತ್ರಿಕ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರದೆ ಜೆಡಿ (ಎಸ್)ನಲ್ಲಿಯೇ ಉಳಿದಿದ್ದ ಅವರ ಬೆಂಬಲಿಗರು ಕೂಡಾ ಮೂಲೆಗುಂಪಾಗಿ ಹೋಗಿದ್ದರು. ಅಷ್ಟು ಮಾತ್ರವಲ್ಲ ಯಾವ ಪಕ್ಷವನ್ನು ದುರ್ಬಲಗೊಳಿಸಬೇಕೆಂದು ಸಿದ್ದರಾಮಯ್ಯನವರನ್ನು ಅಲ್ಲಿಂದ ಹೊರಗೆಳೆದು ಕರೆತರಲಾಯಿತೋ ಅದೇ ಪಕ್ಷದ ಜತೆ ವಿಧಾನಸಭೆಗೆ ನಡೆಯಲಿದ್ದ ಮಧ್ಯಂತರ ಚುನಾವಣೆಯಲ್ಲಿ ಮೈತ್ರಿಮಾಡಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡತೊಡಗಿದ್ದರು.
ದೆಹಲಿಯಲ್ಲಿ ಆಸ್ಕರ್ ಫರ್ನಾಂಡಿಸ್, ಕೆ.ಎಚ್.ಮುನಿಯಪ್ಪ, ಮಾರ್ಗರೇಟ್ ಆಳ್ವ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮೂಗಿಗೆ ಎಚ್.ಡಿ.ದೇವೇಗೌಡರು ತುಪ್ಪ ಹಚ್ಚಿಬಿಟ್ಟಿದ್ದರು. ಇವರಲ್ಲಿ ಕೆಲವರು ಮುಖ್ಯಮಂತ್ರಿಯಾಗುವ ಕನಸು ಕಾಣತೊಡಗಿದ್ದರು. ಈ ಮೈತ್ರಿ ಪ್ರಯತ್ನದಿಂದ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯನವರಿಗೆ ರಾಜೀನಾಮೆ ಸಲ್ಲಿಸಿ ಪ್ರತಿಭಟಿಸಲು ಹುದ್ದೆಗಳು ಇರಲಿಲ್ಲವಾದ ಕಾರಣ ಮಾರಿಷಸ್-ಗೋವಾಗಳಿಗೆ ಬೆಂಬಲಿಗರೊಡನೆ ಹೋಗಿ ಗುಪ್ತಸಭೆ ನಡೆಸಿದ್ದರು.
ಬಿಜೆಪಿ ಸೇರಬಹುದೆಂಬ ಗಾಳಿಸುದ್ದಿಯೂ ಹರಡಿತ್ತು. ಆದರೆ ಸೋನಿಯಾಗಾಂಧಿ ವಿರೋಧದಿಂದಾಗಿ ಆ ಮೈತ್ರಿ ತಪ್ಪಿಹೋಯಿತು. ಸಿದ್ದರಾಮಯ್ಯನವರ ಕಷ್ಟ ಅಲ್ಲಿಗೆ ಕೊನೆಗೊಳ್ಳಲಿಲ್ಲ. ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ಸಕ್ರಿಯ ರಾಜಕಾರಣಕ್ಕೆ ವಾಪಸು ಬಂದರು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದಿದ್ದರೂ ಕೃಷ್ಣ ಅವರ ಪ್ರವೇಶದಿಂದ ಸಿದ್ದರಾಮಯ್ಯನವರ ಪ್ರತಿಸ್ಪರ್ಧಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಯಿತು.
ಮಲ್ಲಿಕಾರ್ಜುನ ಖರ್ಗೆ ಲೋಕಸಭೆಗೆ ಆಯ್ಕೆಯಾಗಿ ಹೋದ ಕಾರಣದಿಂದಾಗಿ ಖಾಲಿಯಾದ ವಿರೋಧ ಪಕ್ಷದ ನಾಯಕನ ಸ್ಥಾನವೇನೋ ಸಿದ್ದರಾಮಯ್ಯನವರಿಗೆ ಕೊನೆಗೂ ಸಿಕ್ಕಿತು. ಆದರೆ ಪಕ್ಷದ ಆಂತರಿಕ ವ್ಯವಹಾರದಲ್ಲಿ ಅವರು ಹೊರಗಿನವರಾಗಿಯೇ ಉಳಿದಿದ್ದರು. ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ನೂತನ ಅಧ್ಯಕ್ಷರಾದ ನಂತರ ಪಕ್ಷ ಮತ್ತು ಅವರ ನಡುವಿನ ಬಿರುಕು ಬೆಳೆಯುತ್ತಾ ಹೋಯಿತು.
ಈ ನಿರ್ಲಕ್ಷ್ಯದ ಮುಂದುವರಿಕೆಯಂತೆ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರನ್ನು ದೂರ ಇಡಲಾಯಿತು. ಮುಂದಿನ ಒಂದು ವರ್ಷದೊಳಗೆ ವಿಧಾನಸಭೆಗೆ ನಡೆಯಲಿರುವ ಚುನಾವಣೆ ತನ್ನ ರಾಜಕೀಯ ಬದುಕಿನ ನಿರ್ಣಾಯಕ ಘಟ್ಟ ಎಂಬ ಅರಿವಿನ ಕಾರಣದಿಂದಲೋ ಏನೋ ಸಿದ್ದರಾಮಯ್ಯನವರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಸಿದ್ದರಾಮಯ್ಯನವರ ಮುಂದೆಯೂ ಬಹಳ ಆಯ್ಕೆಗಳಿಲ್ಲ. ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದ ಬಿಜೆಪಿಗೆ ಅವರು ಸೇರಲಾರು. ಅಪ್ಪ-ಮಕ್ಕಳ ರಾಜಕಾರಣದ ವಿರುದ್ಧವೇ ಸೆಡ್ಡುಹೊಡೆದು ಹೊರಬಂದ ನಂತರ ಹಳೆಯ ಪಕ್ಷಕ್ಕೂ ಮರಳುವ ಸ್ಥಿತಿಯಲ್ಲಿಯೂ ಅವರಿಲ್ಲ. ಉಳಿದಿರುವ ಏಕೈದ ದಾರಿ ಪ್ರಾದೇಶಿಕ ಪಕ್ಷದ ಸ್ಥಾಪನೆ. ಆರು ವರ್ಷಗಳ ಹಿಂದೆ ಕಾಂಗ್ರೆಸ್ ಸೇರುವ ಮೊದಲು ಈ ಅವಕಾಶ ಅವರ ಮನೆಬಾಗಿಲು ತಟ್ಟಿತ್ತು.
ದೇವೇಗೌಡರಿಗೆ ಸವಾಲು ಹಾಕಿ ಪಕ್ಷ ಬಿಟ್ಟು ಹೊರಬಂದ ಸಿದ್ದರಾಮಯ್ಯವರು `ಅಹಿಂದ` ಸಮಾವೇಶಗಳನ್ನು ಮಾಡುತ್ತಾ ರಾಜ್ಯ ಸುತ್ತುತ್ತಿದ್ದಾಗ ಅವರಿಂದ ಪ್ರಾದೇಶಿಕ ಪಕ್ಷದ ಸ್ಥಾಪನೆಯನ್ನು ನಿರೀಕ್ಷಿಸಿದವರಿದ್ದರು. ಆದರೆ `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವೇ ಇಲ್ಲ` ಎಂದು ಘೋಷಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳುವ ಮೂಲಕ ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಿದ್ದರು.
ಅದರ ನಂತರ `ಅಹಿಂದ` ಸಂಘಟನೆ ಹಲವಾರು ಗುಂಪುಗಳಾಗಿ ಒಡೆದುಹೋಗಿವೆ. ಈ ಪರಿಸ್ಥಿತಿಯಲ್ಲಿ ಒಂದೊಮ್ಮೆ ಮತ್ತೆ `ಅಹಿಂದ` ಸಂಘಟನೆಗಿಳಿದರೂ ಹಿಂದಿನ ಬೆಂಬಲ ಸಿಗುವ ಸಾಧ್ಯತೆ ಕಡಿಮೆ. ಈ ಅಸಹಾಯಕತೆಯೇ ಸಿದ್ದರಾಮಯ್ಯನವರನ್ನು ಬಲಹೀನರನ್ನಾಗಿ ಮಾಡಿದೆ. ಈಗ ಅವರ ಮುಂದೆ ಇರುವ ಏಕೈಕ ಸುರಕ್ಷಿತ ದಾರಿ ಕಾಂಗ್ರೆಸ್ ಜತೆಯಲ್ಲಿಯೇ ಇನ್ನಷ್ಟು ಚೌಕಾಶಿ ಮಾಡಿಕೊಂಡು ಮುಂದುವರಿಯುವುದು. ಅದನ್ನೇ ಅವರು ಮಾಡಬಹುದೇನೋ?