`ಇಂಟೆಲಿಜೆನ್ಸ್ ಅಧಿಕಾರಿ ಯಾರ ಟೆಲಿಫೋನ್ ಕದ್ದಾಲಿಸಬೇಕೆಂದು ಮುಖ್ಯಮಂತ್ರಿಗಳಿಂದ ಲಿಖಿತ ಆದೇಶ ಪಡೆಯುವುದಿಲ್ಲ. ಇಂತಹ ಶಾಸಕ ಇಲ್ಲವೇ ಸಾರ್ವಜನಿಕ ವ್ಯಕ್ತಿಯ ಚಟುವಟಿಕೆ ಮೇಲೆ ಕಣ್ಣಿಡಿ ಎಂದರೆ ಸಾಕು, ಆ ಅಧಿಕಾರಿ ಸಂಬಂಧಿಸಿದವರ ಟೆಲಿಫೋನ್ ನಂಬರ್ ತೆಗೆದುಕೊಂಡು ಅದನ್ನು ಟೆಲಿಗ್ರಾಫ್ ಇಲಾಖೆಯ ಜನರಲ್ ಮ್ಯಾನೇಜರ್‌ಗೆ ತಿಳಿಸುತ್ತಾರೆ. ಆಗ ಆ ಜನರಲ್ ಮ್ಯಾನೇಜರ್ ಇಂಟೆಲಿಜೆನ್ಸ್ ಅಧಿಕಾರಿಗೆ ಆ ಟೆಲಿಫೋನ್ ಕದ್ದಾಲಿಸುವ ಉಪಕರಣ ಪೂರೈಸುತ್ತಾರೆ. ನಂತರ ಆ ಕೆಲಸ ಸಲೀಸಾಗಿ ನಡೆಯುತ್ತದೆ. ಯಾವುದೇ ಇಂಟೆಲಿಜೆನ್ಸ್ ಅಧಿಕಾರಿ ಮುಖ್ಯಮಂತ್ರಿಯ ವಿಶ್ವಾಸದ ಮೇಲೆ ಕೆಲಸ ಮಾಡುತ್ತಾನೆ. ಇಲ್ಲದೆ ಹೋದರೆ ಅಂತಹ ಅಧಿಕಾರಿಯನ್ನು ಆ ಜಾಗದಲ್ಲಿಟ್ಟುಕೊಳ್ಳುವುದಿಲ್ಲ. ನಂಬಿಕೆ ಇಲ್ಲದ ಅಧಿಕಾರಿಯನ್ನು ಆ ಜಾಗದಲ್ಲಿಟ್ಟುಕೊಂಡು ಕೆಲಸ ಮಾಡುವುದು ಕಷ್ಟವಾಗುತ್ತದೆ....~
- ಸರ್ಕಾರ ನಡೆಸುವ ದೂರವಾಣಿ ಕದ್ದಾಲಿಕೆಯ ಕಳ್ಳಾಟದ ಒಳಮರ್ಮವನ್ನು ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಹೀಗೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾಗ ಇಡೀ ವಿಧಾನಸಭೆ ಮೈಯೆಲ್ಲಾ ಕಿವಿಯಾಗಿ ಕೇಳುತ್ತಿತ್ತು. ಹಗರಣದ ಕೇಂದ್ರ ವ್ಯಕ್ತಿಯಾಗಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕೆಂಬಣ್ಣದ ಮುಖ ಕಪ್ಪಿಟ್ಟಿತ್ತು.
ಇದಕ್ಕಿಂತ ಮೊದಲು ಮಾತನಾಡಿದ್ದ ಹೆಗಡೆ `ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡುವರೆ ವರ್ಷಗಳ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರದ ಒತ್ತಾಯದ ಮೇರೆಗೆ ಟೆಲಿಫೋನ್ ಕದ್ದಾಲಿಸಬೇಕಾದವರ ಪಟ್ಟಿಯನ್ನು ನವೀಕರಿಸಿದ್ದಕ್ಕೆ ನನ್ನ ಸಮ್ಮತಿ ಅಥವಾ ಒಂದು ಸಣ್ಣ ರುಜು ಇದೆ ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಈಗಲೂ ಸಿದ್ಧ ಎಂದು ಜಾಣತನದಿಂದ ತಮ್ಮ `ನಿರಪರಾಧಿತನ~ವನ್ನು ಸಮರ್ಥಿಸಿಕೊಂಡಿದ್ದರು. ಜಾಣ ಹೆಗಡೆ ಅವರ ಬಾಯಿಯನ್ನು ಪಾಟೀಲರು ಸಾಕ್ಷ್ಯಾಧಾರದೊಡನೆ ಆಡಿದ ಮಾತುಗಳು ಮುಚ್ಚಿಸಿದ್ದವು.
ಇದು ಎಂಬತ್ತರ ದಶಕದ ಕೊನೆಭಾಗದಲ್ಲಿ ಕೋಲಾಹಲ ಎಬ್ಬಿಸಿದ್ದ ದೂರವಾಣಿ ಕದ್ದಾಲಿಕೆ ಹಗರಣದ ಕ್ಲೈಮಾಕ್ಸ್ ದೃಶ್ಯ (ಜೂನ್ 26,1990).ದೂರವಾಣಿ ಕದ್ದಾಲಿಕೆ ಆರೋಪದಿಂದಾಗಿ ರಾಮಕೃಷ್ಣ ಹೆಗಡೆ ಅವರು ಎರಡು ವರ್ಷ ಮೊದಲೇ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು, ನಂತರ ಚುನಾವಣೆಯಲ್ಲಿ ಜನತಾ ಪಕ್ಷವೂ ಸೋತ ಕಾರಣ ಹೆಗಡೆ ವಿರೋಧಪಕ್ಷದಲ್ಲಿದ್ದರು. `ಪ್ರಜಾವಾಣಿ~ ಸೇರಿದ ಪ್ರಾರಂಭದ ದಿನಗಳಲ್ಲಿ ವಿಧಾನಪರಿಷತ್ ಕಲಾಪದ ವರದಿಗೆಂದು ಹೋಗಿದ್ದ ನಾನು ಕುತೂಹಲಕ್ಕೆಂದು ವಿಧಾನಸಭೆಗೆ ನುಗ್ಗಿ ಪತ್ರಕರ್ತರ ಗ್ಯಾಲರಿಯ ಮೂಲೆಯಲ್ಲಿ ಕೂತು ನೋಡಿದ ಈ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ, ಪಾಟೀಲರ ಮಾತುಗಳು ಈಗಷ್ಟೇ ಕೇಳಿದಂತಿದೆ. ಅವರು ಉತ್ತರ ನೀಡಲು ಏಳುವ ಮೊದಲು ವಿಧಾನಸಭೆಯ ಮೊಗಸಾಲೆಯಲ್ಲಿ ಹರಟೆ ಹೊಡೆಯುತ್ತಿದ್ದ ಪತ್ರಕರ್ತರು ಮತ್ತು ರಾಜಕಾರಣಿಗಳಲ್ಲಿ ಹೆಚ್ಚಿನವರು `ಪಾಟೀಲರು ಮತ್ತು ಹೆಗಡೆ ಲವ-ಕುಶರು, ಹಳೆ ದೋಸ್ತಿಯನ್ನು ಪಾಟೀಲರು ಕೈಬಿಡುವುದಿಲ್ಲ ನೋಡಿ, ಏನೋ ತಿಪ್ಪೆಸಾರಿಸಿ ಮುಗಿಸಿ ಬಿಡುತ್ತಾರೆ~ ಎಂದೇ ಹೇಳುತ್ತಿದ್ದರು. ಆ ಎಲ್ಲ ಆರೋಪಗಳಿಗೂ ಪಾಟೀಲರ ಮಾತುಗಳು ಉತ್ತರದಂತಿತ್ತು. `ರಾಮಕೃಷ್ಣ ಹೆಗಡೆ ಮತ್ತು ನನ್ನ ಸ್ನೇಹ 1956ರಿಂದ ಇದೆ. ವೈಯಕ್ತಿಕ ಮಟ್ಟದ ಸ್ನೇಹ ಹಿಂದಿನಿಂದಲೂ ಇದೆ, ಈಗಲೂ ಇದೆ. ಆದರೆ ನನ್ನ ಮತ್ತು ಅವರ ರಾಜಕೀಯ ಸ್ನೇಹ 1979ಕ್ಕೆ ಕೊನೆ ಆಯಿತು~ ಎಂಬ ಪೀಠಿಕೆಯೊಂದಿಗೆ ಪಾಟೀಲರು ಮಾತು ಪ್ರಾರಂಭಿಸಿದ್ದರು.
`...ಯಾರ ಫೋನ್ ಕದ್ದಾಲಿಸಲಾಗುವುದು ಎಂಬ ವಿವರ ಮುಖ್ಯಮಂತ್ರಿ ಹಾಗೂ ಗೂಢಚರ್ಯೆ ಇಲಾಖೆಯ ಮುಖ್ಯಸ್ಥರಿಗೆ ಮಾತ್ರ ಗೊತ್ತಿರುತ್ತದೆ. ಪದ್ಧತಿ ಪ್ರಕಾರ ಮುಖ್ಯಮಂತ್ರಿ ಸಲಹೆ ಮತ್ತು ಒಪ್ಪಿಗೆ ಮೇಲೆ ಕದ್ದಾಲಿಸುವ ಫೋನ್ ನಂಬರ್‌ಗಳ ಪಟ್ಟಿಗೆ ಹೊಸದಾಗಿ ನಂಬರು ಸೇರಿಸಬಹುದು ಅಥವಾ ಪಟ್ಟಿಯಿಂದ ತೆಗೆಸಬಹುದು. 1988ರಲ್ಲಿ ತಾವು ಆ ರೀತಿ ನಿರ್ದಿಷ್ಟ ವ್ಯಕ್ತಿಗಳ ಫೋನ್ ಕದ್ದಾಲಿಸಲು ಸಲಹೆ ಅಥವಾ ಒಪ್ಪಿಗೆ ಕೊಟ್ಟೇ ಇಲ್ಲವೆಂದು ಹೆಗಡೆಯವರು ಹೇಳಿದ್ದಾರೆ. ಸತ್ಯ ಗೊತ್ತಿರುವ ಇನ್ನೊಬ್ಬ ವ್ಯಕ್ತಿ ಆಗಿನ ಗೂಢಚರ್ಯೆ ಅಧಿಕಾರಿ ಎಂ.ಎಸ್.ರಘುರಾಮನ್, ಅವರು ಈಗ ಡಿಜಿಪಿಯಾಗಿದ್ದಾರೆ. ರಘುರಾಮನ್ ಪೊಲೀಸ್ ಇಲಾಖೆಯಲ್ಲಿ ಸಚ್ಚಾರಿತ್ರ್ಯದ ದಾಖಲೆ ಹೊಂದಿರುವವರು. 1988ರಲ್ಲಿ ಫೋನ್ ಕದ್ದಾಲಿಸಲು ಯಾರು ಹೇಳಿದ್ದರು ಎಂದು ಕೇಳಿ ನನ್ನ ಮುಖ್ಯಕಾರ‌್ಯದರ್ಶಿ ಮೂಲಕ ಪತ್ರ ಬರೆಸಿದ್ದೆ. ಅವರು ಕೊಟ್ಟಿರುವ ಉತ್ತರದಲ್ಲಿ `ಎಂದಿನ ಪದ್ಧತಿಯಂತೆ ಮುಖ್ಯಮಂತ್ರಿ ಸಲಹೆ ಮತ್ತು ಒಪ್ಪಿಗೆ ಪಡೆದೇ ಮಾಡಿದ್ದೇನೆ~ ಎಂದು ಲಿಖಿತ ಉತ್ತರ ನೀಡಿದ್ದಾರೆ ಎಂದ ವೀರೇಂದ್ರ ಪಾಟೀಲ್ ಅವರು, ರಘುರಾಮನ್ ಪತ್ರವನ್ನು ಸದನದಲ್ಲಿ ಮಂಡಿಸಿದರು. ಅಲ್ಲಿಗೆ ರಾಮಕೃಷ್ಣ ಹೆಗಡೆ ಅವರ ಬತ್ತಳಿಕೆ ಬರಿದಾಗಿತ್ತು.
ಪಾಟೀಲರು ಮುಂದುವರಿದು ಹೇಳುತ್ತಾರೆ `....ನಮ್ಮಲ್ಲಿ ಬಹಳ ಮಂದಿ ಹೊಸ ಶಾಸಕರು ಬಂದಿದ್ದಾರೆ, ಟೆಲಿಫೋನ್ ಕದ್ದಾಲಿಸುವುದಾದರೆ ನಾವು ಹೇಗೆ ಕೆಲಸಮಾಡಬೇಕು ಎಂದು ಅವರು ಕೇಳುತ್ತಿದ್ದಾರೆ. ಈ ದೃಷ್ಟಿಯಿಂದ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡು ಮೂರು ದಿನಗಳಲ್ಲೇ ಗೂಢಚರ್ಯೆ ವಿಭಾಗದ ಮುಖ್ಯಸ್ಥರನ್ನು ಕರೆಸಿ ಮಾತನಾಡಿದೆ. ಇನ್ನು ಮುಂದೆ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರ ಟೆಲಿಫೋನ್ ಕದ್ದಾಲಿಸಬಾರದೆಂದು ಆದೇಶ ನೀಡಿದೆ. ಒಮ್ಮೆ ಬಾಯಿಮಾತಿನಲ್ಲಿ ಹೇಳಿದ ನಂತರ ಮುಖ್ಯ ಕಾರ‌್ಯದರ್ಶಿ, ಗೃಹ ಇಲಾಖೆ ಕಮಿಷನರ್ ಈ ಬಗ್ಗೆ ಪತ್ರ ಬರೆದಿದ್ದರು. ಗೃಹ ಕಮಿಷನರ್ ಈಗಿನ ಐಜಿಪಿ ಇಂಟೆಲಿಜೆನ್ಸ್ ಶ್ರಿನಿವಾಸಲು ಅವರಿಗೆ ತಿಳಿಸಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ಯಾವುದೇ ರಾಜಕೀಯ ಇಲ್ಲವೇ ಸಾರ್ವಜನಿಕ ವ್ಯಕ್ತಿಯ ಟೆಲಿಫೋನ್‌ಗಳನ್ನು ಕದ್ದು ಕೇಳಲಾಯಿತು ಎಂಬ ದೂರಿಗೆ ಅವಕಾಶ ಇರಬಾರದೆಂದು ಹೀಗೆ ಮಾಡಿದೆ~ ಪಾಟೀಲರು ಅಧಿಕಾರದಲ್ಲಿದ್ದಷ್ಟು ದಿನ ನುಡಿದಂತೆ ನಡೆದಿದ್ದರು. ಆದರೆ ಕದ್ದಾಲಿಕೆ ಪಟ್ಟಿಗೆ ಸಮ್ಮತಿ ಸಹಿ ಸಾಬೀತಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಸವಾಲು ಹಾಕಿದ್ದ ಹೆಗಡೆ ಮಾತ್ರ ನುಡಿದಂತೆ ನಡೆಯಲಿಲ್ಲ.
ಇವೆಲ್ಲವನ್ನೂ ಗಂಭೀರವದನರಾಗಿ ಸಭಾಧ್ಯಕ್ಷರ ಸ್ಥಾನದಲ್ಲಿ ಕೂತು ಕೇಳುತ್ತಿದ್ದವರು ಈಗಿನ ವಿದೇಶಾಂಗ ವ್ಯವಹಾರ ಖಾತೆ ಸಚಿವ ಎಸ್.ಎಂ.ಕೃಷ್ಣ. ಒಮ್ಮೆ ಚರ್ಚೆಯ ಮಧ್ಯೆ ಪ್ರವೇಶಿಸಿದ ಕೃಷ್ಣ ಅವರು `ಹತ್ತು ವರ್ಷದ ಮೇಲೂ ನಮ್ಮ ಮಾತು ನಮಗೆ ತಿರುಗುಬಾಣವಾಗದಂತೆ ಇರಬೇಕು~ ಎಂದಿದ್ದರು. ಅದೇ ವಿಧಾನಸಭೆಯಲ್ಲಿನ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಇನ್ನೊಬ್ಬ ನಾಯಕರು ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. `ನಮ್ಮ ರಾಜಕೀಯ ಚದುರಂಗದ ಆಟಕ್ಕೆ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರವೃತ್ತಿಗೆ ಕೊನೆ ಹೇಳಬೇಕು ಮುಖ್ಯಮಂತ್ರಿಗಳೇ~ ಎಂದು ಒಂದು ಹಂತದಲ್ಲಿ ಅವರು ಕೂಗಿ ಹೇಳಿದ್ದರು. ಯಡಿಯೂರಪ್ಪನವರು ಹಾಗೆ ಹೇಳಲು ಕಾರಣ ಇತ್ತು. ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ವಿರೋಧಪಕ್ಷಗಳ ನಾಯಕರಾಗಿದ್ದ ಬಿ.ಎಸ್.ಯಡಿಯೂಪ್ಪ, ಡಿ.ಎಚ್.ಶಂಕರಮೂರ್ತಿ ಸೇರಿದಂತೆ ನಗರದ ಹೆಸರಾಂತ ವಕೀಲರು ಹಾಗೂ ವರ್ತಕರ ಫೋನ್‌ಗಳನ್ನು ಕದ್ದು ಕೇಳಲಾಗಿತ್ತು. ಆಗ ಗುಪ್ತದಳದ ಡಿಐಜಿ ಆಗಿದ್ದವರು ಡಿ.ಆರ್.ಕಾರ್ತಿಕೇಯನ್. ಈ ವಿಷಯವನ್ನು ಕೂಡಾ ಸದನದಲ್ಲಿ ನೆನೆಪು ಮಾಡಿಕೊಂಡದ್ದು ರಾಮಕೃಷ್ಣ ಹೆಗಡೆ.
`...ಹತ್ತುವರ್ಷದ ಮೇಲೂ ನಮ್ಮ ಮಾತು ನಮಗೆ ತಿರುಗುಬಾಣವಾಗದಂತೆ ಇರಬೇಕು...~ ಎಂದು ಕೃಷ್ಣ ಹೇಳಿದ್ದ ಮಾತುಗಳನ್ನು ಯಡಿಯೂರಪ್ಪನವರು ಕೇಳಿಸಿಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ.
* * * *
ತೀರಾ ಹಳೆಯದಾದ ಫ್ಲಾಷ್‌ಬ್ಯಾಕ್ ಬೇಡ ಎಂದಾದರೆ ಇತ್ತೀಚಿನ ದಿನಗಳಿಗೆ ಬರೋಣ. `ಆಹಾರಕ್ಕಾಗಿ ತೈಲ~ ಎಂಬ ವಿಶ್ವಸಂಸ್ಥೆಯ ಕಾರ‌್ಯಕ್ರಮದ ಅನುಷ್ಠಾನದಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಯುಪಿಎ ಸರ್ಕಾರ ನೇಮಿಸಿದ್ದ ಆರ್.ಎಸ್.ಪಾಠಕ್ ಆಯೋಗದ ವರದಿಯನ್ನು ಒಂದು ಟಿವಿ ಚಾನೆಲ್ ಸರ್ಕಾರಕ್ಕಿಂತ ಮೊದಲೇ ಬಹಿರಂಗಪಡಿಸಿತ್ತು. ಚಾನೆಲ್‌ನಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ ಸಮಯದಲ್ಲಿ ವರದಿ ಸಲ್ಲಿಕೆಗಾಗಿ ಹೋಗಿದ್ದ ಆಯೋಗದ ಅಧ್ಯಕ್ಷರಾದ ಪಾಠಕ್ ಸಾಹೇಬರು ಇನ್ನೂ ಪ್ರಧಾನಿ ಕಚೇರಿಯಲ್ಲಿಯೇ ಇದ್ದರು. `ಆಹಾರಕ್ಕಾಗಿ ತೈಲ~ ಯೋಜನೆಯ ಹಗರಣದಲ್ಲಿ ಆಗಿನ ವಿದೇಶಾಂಗ ವ್ಯವಹಾರ ಖಾತೆ ಸಚಿವ ನಟವರ್‌ಸಿಂಗ್ ಪಾತ್ರ ಇದೆ ಎನ್ನುವುದು ಪಾಠಕ್ ಆಯೋಗದ ತನಿಖೆಯ ಮುಖ್ಯಾಂಶ. ಈ ಹಿನ್ನೆಲೆಯಲ್ಲಿ ಸಚಿವ ನಟವರ್‌ಸಿಂಗ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಲೋಕಸಭೆಯಲ್ಲಿ ಪಟ್ಟು ಹಿಡಿದು ಕಲಾಪ ನಡೆಸಲು ಅವಕಾಶ ನೀಡಿರಲಿಲ್ಲ.
ಕೊನೆಗೆ ನಟವರ್‌ಸಿಂಗ್ ವಿದೇಶಾಂಗ ವ್ಯವಹಾರದ ಖಾತೆಯನ್ನು ಕಳೆದುಕೊಳ್ಳಬೇಕಾಯಿತು. ತನಿಖಾ ವರದಿ ಸೋರಿಕೆಯಿಂದಾಗಿ ಅದರ ಪಾವಿತ್ರ್ಯ ನಾಶವಾಯಿತೆಂದು ಧನಂಜಯಕುಮಾರ್ ಮತ್ತಿತರ ಬಿಜೆಪಿ ನಾಯಕರು ಈಗ ಹೇಳುತ್ತಿದ್ದಾರೆ. ಸೋರಿಕೆಯಿಂದಾಗಿ ಪಾಠಕ್ ತನಿಖಾ ವರದಿಯ ಪಾವಿತ್ರ್ಯ ನಾಶವಾಗಿರಲಿಲ್ಲವೇ?
ತನಿಖಾ ವರದಿಗಳ ಸೋರಿಕೆ ದೇಶದಲ್ಲಿಯಾಗಲಿ, ವಿದೇಶದಲ್ಲಿಯಾಗಲಿ ಹೊಸದೇನಲ್ಲ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆ ಬಗ್ಗೆ ತನಿಖೆ ನಡೆಸಲು ಆಗಿನ ಸರ್ಕಾರ ಎಂ.ಸಿ.ಜೈನ್ ನೇತೃತ್ವದ ಆಯೋಗ ನೇಮಿಸಿತ್ತು. ಆರುವರ್ಷಗಳ ಕಾಲ ತನಿಖೆ ನಡೆಸಿದ್ದ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸುವ ಪೂರ್ವದಲ್ಲಿಯೇ ಮೊದಲು ತಮಿಳು ವಾರಪತ್ರಿಕೆಯೊಂದರಲ್ಲಿ ನಂತರ `ಇಂಡಿಯಾ ಟುಡೇ~ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕಾಲದಲ್ಲಿ ಅಧಿಕಾರದಲ್ಲಿದ್ದ ಸಂಯುಕ್ತರಂಗ ಸರ್ಕಾರವನ್ನು ಉರುಳಿಸಲು ರಾಜೀವ್ ನಿಷ್ಠಾವಂತರೇ ಈ ಕೆಲಸ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ರಾಜೀವ್‌ಗಾಂಧಿ ಹತ್ಯೆಯ ಯೋಜನೆಗೆ ಡಿಎಂಕೆ ಸಹಕಾರ ಇತ್ತು ಎಂದು ಜೈನ್ ಆಯೋಗ ಹೇಳಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜತೆಗೂಡಿ ಬಿಜೆಪಿ ಕೂಡಾ ಸರ್ಕಾರದ ವಿರುದ್ಧ ಕೂಗು ಹಾಕಿತ್ತು. ವರದಿ ಸೋರಿಕೆಯಾದರೆ ಪಾವಿತ್ರ್ಯ ಇಲ್ಲ ಎಂದಾದರೆ ಆಗ ಬಿಜೆಪಿ ಯಾಕೆ ಗದ್ದಲ ಮಾಡಬೇಕಾಗಿತ್ತು? ಕೊನೆಗೆ ಮಿತ್ರಪಕ್ಷವಾದ ಡಿಎಂಕೆ ಪಕ್ಷವನ್ನು ಕೈಬಿಡಲಾಗದೆ ಆಗಿನ ಪ್ರಧಾನಿ ಐ.ಕೆ.ಗುಜ್ರಾಲ್ ಅವರು ರಾಜೀನಾಮೆ ನೀಡಿದ್ದರು. ಇವೆಲ್ಲವೂ ನಡೆಯುತ್ತಿರುವಾಗ ಧನಂಜಯಕುಮಾರ್ ಲೋಕಸಭಾ ಸದಸ್ಯರಾಗಿ ಅಲ್ಲಿಯೇ ಇದ್ದರು.
ಬಾಬ್ರಿ ಮಸೀದಿ ಧ್ವಂಸದ ಘಟನೆ ಬಗ್ಗೆ ಎಂ.ಎಸ್.ಲಿಬರ‌್ಹಾನ್ ಏಕಸದಸ್ಯ ಆಯೋಗ ಸಲ್ಲಿಸಿದ್ದ ವರದಿ ಸರ್ಕಾರದ ಬಳಿ ಇರುವಾಗಲೇ ಪತ್ರಿಕೆಗಳಿಗೆ ಸೋರಿಕೆಯಾಗಿತ್ತು. ಅಟಲಬಿಹಾರಿ ವಾಜಪೇಯಿ,ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ,ಕಲ್ಯಾಣ್‌ಸಿಂಗ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಬಾಬ್ರಿಮಸೀದಿ ಧ್ವಂಸದ ಕಾರ‌್ಯಾಚರಣೆಯಲ್ಲಿ ಭಾಗಿಗಳು ಎಂದು ಆಯೋಗ ವರದಿ ನೀಡಿತ್ತು. ಪಾಠಕ್ ಆಯೋಗದ ವರದಿ ಸೋರಿಕೆಯಾದರೂ ಅದರಲ್ಲಿನ ಅಂಶಗಳನ್ನು ಒಪ್ಪಿಕೊಂಡು ಸಚಿವ ನಟವರ್‌ಸಿಂಗ್ ರಾಜೀನಾಮೆಗೆ ಒತ್ತಾಯಿಸಿದ್ದ ಬಿಜೆಪಿ, ಲಿಬರ‌್ಹಾನ್ ಆಯೋಗದ ವರದಿ ಸೋರಿಕೆಯಾದಾಗ ಮಾತ್ರ ಮೊದಲು ಸೋರಿಕೆ ಬಗ್ಗೆ ತನಿಖೆ ನಡೆಸಲಿ ಎಂದು ಲೋಕಸಭೆಯಲ್ಲಿ ಗದ್ದಲ ನಡೆಸಿತ್ತು.
ಈ ಎರಡು ಫ್ಲ್ಯಾಷ್‌ಬ್ಯಾಕ್‌ಗಳ ಒಟ್ಟು ಸಾರಾಂಶ:
1.ಸಾಮಾನ್ಯವಾಗಿ ರಾಜ್ಯದಲ್ಲಿ ರಾಜ್ಯ ಸರ್ಕಾರದ ಗುಪ್ತಚರ ವಿಭಾಗವೇ ದೂರವಾಣಿ ಕದ್ದಾಲಿಕೆ ನಡೆಸುತ್ತದೆ ಮತ್ತು ಅದಕ್ಕೆ ಮುಖ್ಯಮಂತ್ರಿಗಳೇ ಹೊಣೆಯಾಗಿರುತ್ತಾರೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ.
2.ತನಿಖಾ ಆಯೋಗದ ವರದಿ ಸೋರಿಕೆಯಾದರೂ ಅದು ಪಾವಿತ್ರ್ಯತೆ ಕಳೆದುಕೊಳ್ಳುವುದಿಲ್ಲ.