Showing posts with label ನರೇಂದ್ರಮೋದಿ. Show all posts
Showing posts with label ನರೇಂದ್ರಮೋದಿ. Show all posts

Monday, December 24, 2012

ಮೋದಿ ಪಾಲಿಗೆ ದೆಹಲಿ ಸಮೀಪ, ಅಷ್ಟೇ ದೂರ Dec 24 2012


ಹತ್ತು ವರ್ಷಗಳ ಕಾಲ ರಾಜ್ಯವನ್ನು ಆಳಿ, ಮೂರು ಚುನಾವಣೆಗಳನ್ನು ಗೆದ್ದು, ದೇಶದಾದ್ಯಂತ ಪಕ್ಷದ ಕಾರ್ಯಕರ್ತರಲ್ಲಿ ಸಂಚಲನವನ್ನು ಉಂಟು ಮಾಡಿರುವ ನರೇಂದ್ರಮೋದಿ, ಗುಜರಾತ್‌ನಲ್ಲಿಯೇ ಉಳಿದು ಮುಂದೊಂದು ದಿನ ಅಲ್ಲಿಂದಲೇ ರಾಜಕೀಯ ನಿವೃತ್ತಿ ಘೋಷಿಸುತ್ತಾರೆ ಎಂದು ತಿಳಿದುಕೊಂಡವರು ಮೂರ್ಖರು. ನರೇಂದ್ರಮೋದಿ ಮೂರ್ಖರಲ್ಲ, ಅವರೊಬ್ಬ ಮಹತ್ವಾಕಾಂಕ್ಷಿ ಅಷ್ಟೇ ಜಾಣ ರಾಜಕಾರಣಿ. ರಾಷ್ಟ್ರರಾಜಕಾರಣದ ಕಡೆಗೆ ಅವರು ಹೊರಟಿರುವ ದಾರಿಯಲ್ಲಿ ಹಲವಾರು ಅಡ್ಡಿಆತಂಕಗಳಿವೆ ನಿಜ, ಆದರೆ ಇವು ಯಾವುದೂ ಮುಂದಿನ ದಿನಗಳ ಅವರ ದೆಹಲಿ ಪ್ರಯಾಣದ ಸಂಕಲ್ಪವನ್ನು ಬದಲಾಯಿಸದು. ಈ `ರಸ್ತೆತಡೆ'ಗಳನ್ನೆಲ್ಲ ಎದುರಿಸಿ ಅವರು ದೆಹಲಿ ತಲುಪಿದರೂ ಮುಂದೊಂದು ದಿನ ಪ್ರಧಾನಿಯಾಗಿಯೇ ಬಿಡುತ್ತಾರೆ ಎನ್ನುವುದಕ್ಕೂ ಖಾತರಿ ಇಲ್ಲ.  ಆದರೆ ಮನೆಬಾಗಿಲಿಗೆ ಬಂದಿರುವ ಈ ಅವಕಾಶವನ್ನು ಸುಲಭದಲ್ಲಿ ಬಿಟ್ಟುಕೊಡುವಷ್ಟು ಉದಾರಿ ನರೇಂದ್ರಮೋದಿ ಅಲ್ಲ. 
  ಮೋದಿ ಇಂತಹದ್ದೊಂದು ಮಹತ್ವಾಕಾಂಕ್ಷೆ ಇಟ್ಟುಕೊಳ್ಳಲು ಅವರದ್ದೇ ಆಗಿರುವ ಕಾರಣಗಳಿವೆ. ಗುಜರಾತ್ ಮುಖ್ಯಮಂತ್ರಿಯಾಗಲು ಹನ್ನೊಂದು ವರ್ಷಗಳ ಹಿಂದೆ ದೆಹಲಿಯಿಂದ ನರೇಂದ್ರಮೋದಿ ಅವರನ್ನು ಕಳುಹಿಸಿದಾಗ ಆ ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಏನಿತ್ತೋ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಈಗಿನ ಸ್ಥಿತಿ ಹೆಚ್ಚುಕಡಿಮೆ ಹಾಗೆಯೇ ಇದೆ. 1998ರ ಲೋಕಸಭಾ ಚುನಾವಣೆಯ ನಂತರದ ದಿನಗಳಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಎದುರಿಸಿದ್ದು ನಿರಂತರ ಸೋಲಿನ ಸರಮಾಲೆಯನ್ನು. ಸಾಬರಮತಿ ವಿಧಾನಸಭಾ ಕ್ಷೇತ್ರ ಮತ್ತು ಸಬರ್‌ಕಾಂಟಾ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ, ಅನಂತರ ನಡೆದ ಪಂಚಾಯತ್ ಚುನಾವಣೆ ಹಾಗೂ ಅಹ್ಮದಾಬಾದ್ ಮತ್ತು ರಾಜಕೋಟ್ ನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಪರಾಭವಗೊಂಡಿತ್ತು. ಆ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶಂಕರ್‌ಸಿಂಗ್ ವಘೇಲಾ. ಮುಖ್ಯಮಂತ್ರಿಯಾಗಿದ್ದ ಕೇಶುಭಾಯಿ ಪಟೇಲ್ ಅವರು ಪಕ್ಷದ ಹಿನ್ನಡೆಯನ್ನು ತಡೆಯಲಿಕ್ಕಾಗದೆ ಕೈಚೆಲ್ಲಿ ಕೂತಿದ್ದರು. ಆ ಕಾಲದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರಮೋದಿ ಅವರನ್ನು ಗುಜರಾತ್‌ಗೆ ಕಳುಹಿಸಿಕೊಡಲಾಯಿತು. ಅದರ ನಂತರ ಮೋದಿ ಮೂರು ಚುನಾವಣೆಗಳನ್ನು ಗೆದ್ದಿದ್ದಾರೆ. ಪ್ರಧಾನಮಂತ್ರಿ ಅಭ್ಯರ್ಥಿಯಾಗಲು ಅರ್ಜಿಯನ್ನೇನಾದರೂ ಬರೆದುಕೊಡಬೇಕಾದ ಪರಿಸ್ಥಿತಿ ಬಂದರೆ ಮೋದಿ ಖಂಡಿತ ಈ ಸಾಧನೆಯನ್ನು ಅದರಲ್ಲಿ ಉಲ್ಲೇಖಿಸಬಹುದು. 

ಲೋಕಸಭಾ ಚುನಾವಣೆಯಲ್ಲಿ ಸತತ ಎರಡು ಸೋಲು, ಸಾಲುಸಾಲು ವಿಧಾನಸಭಾ ಚುನಾವಣೆಗಳಲ್ಲಿ ಪರಾಭವ, ಪಕ್ಷದ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪ, ದೆಹಲಿ ನಾಯಕರ ನಡುವಿನ ಬಿಕ್ಕಟ್ಟು, ದುರ್ಬಲವಾಗಿ ಹೋಗಿರುವ ಹೈಕಮಾಂಡ್, ಕರ್ನಾಟಕದಲ್ಲಿ ಹೋಳಾಗಿರುವ ಪಕ್ಷ, ರಾಜಸ್ತಾನದಲ್ಲಿ ತಣ್ಣಗಾಗದ ಬಂಡಾಯದ ಉರಿ...-ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಸ್ಥಿತಿ ಚಿಂತಾಜನಕವಾಗಿದೆ. ಪಕ್ಷವನ್ನು ಈಗಿನ ಸ್ಥಿತಿಯಿಂದ ಮೇಲೆತ್ತಲು ಸಾಧ್ಯ ಇರುವ ಏಕೈಕ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರಿಗೆ ವಯಸ್ಸಾಗಿದೆ, ಜತೆಗೆ ಸಂಘ ಪರಿವಾರ ಅವರ ನಿವೃತ್ತಿಯನ್ನು ಬಯಸುತ್ತಿದೆ. ಹಾಗೆಂದ ಮಾತ್ರಕ್ಕೆ ನರೇಂದ್ರಮೋದಿ  ಪ್ರಧಾನಿ ಸ್ಥಾನಕ್ಕೆ ಪಕ್ಷದ ಒಮ್ಮತದ ಅಭ್ಯರ್ಥಿ ಅಲ್ಲ. ಅವರು ದೆಹಲಿಗೆ ಜಿಗಿಯಲು ನಿರ್ಧರಿಸಿದರೆ ಅಲ್ಲಿರುವ ನಾಯಕರು ಆರತಿಬೆಳಗಿ ಸ್ವಾಗತಿಸಲಿದ್ದಾರೆ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಮೋದಿಯವರು ಒಂದಲ್ಲ ಕನಿಷ್ಠ ಮೂರು ದಿಕ್ಕುಗಳಿಂದ ವಿರೋಧವನ್ನು ಎದುರಿಸಬೇಕಾಗುತ್ತದೆ.
 ವಿರೋಧಿಸುವ ಮೊದಲನೆಯ ಗುಂಪು-  ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ರಾಜನಾಥ್ ಸಿಂಗ್  ಎಂಬ `ಡೆಲ್ಲಿ-4' ಗ್ಯಾಂಗ್.  ಇವರಲ್ಲಿ ಜೇಟ್ಲಿ ಮತ್ತು ಸುಷ್ಮಾ ಖಂಡಿತ  ಪ್ರಧಾನಿ ಅಭ್ಯರ್ಥಿಯಾಗುವ ಅರ್ಹತೆ ಉಳ್ಳವರು, ಆ ಮಹತ್ವಾಕಾಂಕ್ಷೆ ಕೂಡಾ ಅವರಲ್ಲಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ನಾಯಕ ಇಲ್ಲವೆ ನಾಯಕಿಗೆ ಇರಬೇಕಾದ ರಾಷ್ಟ್ರಮಟ್ಟದ ಪ್ರಭಾವ ಇಬ್ಬರಲ್ಲಿಯೂ ಇಲ್ಲ. ಸುಷ್ಮಾಸ್ವರಾಜ್ ಮಧ್ಯಪ್ರದೇಶದ ಸುರಕ್ಷಿತ ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡು ಗೆದ್ದು ಬಂದವರು. ಜೇಟ್ಲಿಗೆ ರಾಜ್ಯಸಭೆಯನ್ನು ಪ್ರವೇಶಿಸಲು ಕೂಡಾ ನರೇಂದ್ರಮೋದಿ ನೆರವು ಬೇಕು. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜನಾಥ್‌ಸಿಂಗ್‌ಗೆ ತನ್ನ ಜನಪ್ರಿಯತೆಯನ್ನು ಅವರ ರಾಜ್ಯದಲ್ಲಿಯೇ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ವೆಂಕಯ್ಯನಾಯ್ಡು ಅವರನ್ನು ಪಕ್ಷದಲ್ಲಿಯೇ ಯಾರೂ ಗಂಭೀರವಾಗಿ ಸ್ವೀಕರಿಸಿಲ್ಲ. 
 ಇಂತಹ `ಮನಮೋಹನ್‌ಸಿಂಗ್'ಗಳು ಪ್ರಧಾನಿಯಾಗಬೇಕಾದರೆ ಒಬ್ಬ `ಸೋನಿಯಾಗಾಂಧಿ' ಬೇಕಾಗುತ್ತದೆ. ಸದ್ಯದ  ಬಿಜೆಪಿಯಲ್ಲಿ ಅಂತಹ ಯಾವ `ಸೋನಿಯಾಗಾಂಧಿ'ಯೂ ಕಾಣುತ್ತಿಲ್ಲ. ಈ `ಡೆಲ್ಲಿ-4' ತಮ್ಮವರಲ್ಲಿ ಒಬ್ಬರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಒಪ್ಪಿಕೊಂಡರೆ ಮೋದಿ ಅವರನ್ನು ತಡೆಯುವ ಒಂದು ಸಣ್ಣ ಅವಕಾಶ ಇದೆ. ಅಂತಹ ವಿಶಾಲ ಮನಸ್ಸು ಈ ಗ್ಯಾಂಗ್‌ನಲ್ಲಿ ಕಾಣುತ್ತಿಲ್ಲ. ಈ ಬಿಕ್ಕಟ್ಟು ನರೇಂದ್ರ ಮೋದಿಯವರಿಗೆ ನೆರವಾಗಬಹುದಾದ ಅನುಕೂಲತೆ. ಆದರೆ ಪರಸ್ಪರ ಸಹಮತ ಇಲ್ಲದೆ ಇದ್ದರೂ ಹೊರಗಿನವರ ಪ್ರವೇಶವನ್ನು ಸಹಿಸಲಾರದು ಈ `ಡೆಲ್ಲಿ-4'ಗ್ಯಾಂಗ್. ನಿತಿನ್ ಗಡ್ಕರಿ ಅವರನ್ನು ಆರ್‌ಎಸ್‌ಎಸ್ ನಾಗಪುರದಿಂದ ದೆಹಲಿಗೆ `ರಫ್ತು' ಮಾಡಿದಾಗ ಇವರೇ ಒಟ್ಟಾಗಿ ವಿರೋಧಿಸಿದವರು. ಸರ್ವಾಧಿಕಾರಿಯಂತಿರುವ ಮೋದಿ ತಮ್ಮನ್ನು ಮೂಲೆಗುಂಪು ಮಾಡಬಹುದೆಂಬ ಭೀತಿಯಿಂದ ನರಳುತ್ತಿರುವ ಈ ನಾಯಕರು ಅವರನ್ನು ಸ್ವಾಗತಿಸಲು ಹೇಗೆ ಸಾಧ್ಯ?
 ಎರಡನೆಯ ಗುಂಪು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರದ್ದು. ಅಟಲಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ನಂತರ ಆರ್‌ಎಸ್‌ಎಸ್ ಪ್ರಯಾಸಪಟ್ಟು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.  ಆಕ್ರಮಣಕಾರಿ ಮತ್ತು ಸ್ವತಂತ್ರ ವ್ಯಕ್ತಿತ್ವದ ಮೋದಿ ಅವರನ್ನು ತಮ್ಮ ಹಿಡಿತದಲ್ಲಿಡುವುದು ಕಷ್ಟ ಎಂದು ಈ ಹಿರಿತಲೆಗಳಿಗೆ ಗೊತ್ತಿದೆ. (ಬಿ.ಎಸ್.ಯಡಿಯೂರಪ್ಪನವರು ಕಲಿಸಿದ ಪಾಠದ ನಂತರ ಆರ್‌ಎಸ್‌ಎಸ್‌ನ ಈ ಅಭಿಪ್ರಾಯ ಇನ್ನಷ್ಟು ಬಲವಾಗಿರಬಹುದು). ಇದಕ್ಕಾಗಿಯೇ ಅಲ್ಲವೆ ಅವರು  ಭ್ರಷ್ಟಾಚಾರದ ಆರೋಪಗಳ ಬಗ್ಗೆ ತಿಳಿದಿದ್ದರೂ ಮತ್ತು ನರೇಂದ್ರಮೋದಿಯವರೇ ವಿರೋಧಿಸಿದ್ದರೂ ನಿತಿನ್ ಗಡ್ಕರಿ ಎಂಬ ಬೇರುಗಳಿಲ್ಲದ ದುರ್ಬಲ ನಾಯಕನನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದು ಮತ್ತು ಇನ್ನೊಂದು ಅವಧಿಗೂ ಅವರನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿರುವುದು.
  ಮೋದಿ ಬಗ್ಗೆ ಸಂಘ ಪರಿವಾರದ ಆತಂಕಗಳಿಗೆ ಕಾರಣಗಳಿವೆ. ಕಳೆದ ಹತ್ತುವರ್ಷಗಳ ತನ್ನ ಆಳ್ವಿಕೆ ಕಾಲದಲ್ಲಿ ಮೋದಿ ಅವರು ಗುಜರಾತ್‌ನಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿ ಕೂರಿಸಿದ್ದಾರೆ. ದೇಶದಾದ್ಯಂತ ಸುತ್ತಾಡಿ ಬೆಂಕಿ ಉಗುಳುವ ವಿಶ್ವಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಗುಜರಾತ್‌ನವರೇ ಆಗಿದ್ದರೂ ಮೋದಿ ಆಳ್ವಿಕೆ ಕಾಲದಲ್ಲಿ ಅವರು ಅಲ್ಲಿ ಮಾತನಾಡಿದ್ದನ್ನು ಯಾರಾದರೂ ಕೇಳಿದ್ದಾರೆಯೇ?
ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಬೊಬ್ಬಿರಿದು ಅಬ್ಬರಿಸುವ ಹಿಂದೂ ಜಾಗರಣ ವೇದಿಕೆ, ಬಜರಂಗದಳ, ಹಿಂದೂ ಸೇನೆ ಇತ್ಯಾದಿ ಕೇಸರಿ ಪಡೆಗಳನ್ನು ಬಿಟ್ಟುಬಿಡಿ, ವಿಶ್ವಹಿಂದು ಪರಿಷತ್‌ನ ಹೆಸರನ್ನೂ ಅಲ್ಲಿ ಕೇಳುವವರಿಲ್ಲ. ಮೋದಿ ಈ ಸಂಘಟನೆಗಳ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದೇ ಕಡಿಮೆ. ಕಳೆದೆರಡೂ ಚುನಾವಣೆಗಳಲ್ಲಿ ಪರಿವಾರದ ಹೆಚ್ಚಿನ ನಾಯಕರು ಮೋದಿ ವಿರುದ್ಧವೇ ಕೆಲಸಮಾಡಿದ್ದಾರೆ. ಇವರಲ್ಲಿ ಯಾರಿಗೂ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದು ಬೇಡ.
 ಮೂರನೆಯ ಗುಂಪು ಎನ್‌ಡಿಎ ಮಿತ್ರಪಕ್ಷಗಳದ್ದು. ಈ ವಿರೋಧಕ್ಕೆ ಬಹಳ ಬಲವಾದ ತಾತ್ವಿಕ ಕಾರಣ ಇದೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಈಗ ಮೋದಿ ವಿರುದ್ದ ನಿಂತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ 2001ರಲ್ಲಿ ಗುಜರಾತ್ ಕೋಮುಗಲಭೆ ನಡೆದಾಗ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಅವರೇನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.
ಮನಸ್ಸು ಮಾಡಿದ್ದರೆ ಗೋಧ್ರಾದಲ್ಲಿ ರೈಲ್ವೆ ಬೋಗಿಗೆ ಬೆಂಕಿ ತಗಲಿದ್ದು ಹೇಗೆ ಎಂಬುದನ್ನು ಪತ್ತೆಹಚ್ಚಿ ಸತ್ಯವನ್ನು ಬಹಿರಂಗಪಡಿಸಲು ಅವರಿಗೆ ಸಾಧ್ಯವಾಗಿತ್ತು. ಆಗ್ ಜಾರ್ಜ್ ಫರ್ನಾಂಡಿಸ್ ಜತೆಯಲ್ಲಿ ಮೋದಿ ರಕ್ಷಣೆಗೆ ನಿಂತವರಲ್ಲಿ ನಿತೀಶ್ ಕುಮಾರ್ ಕೂಡಾ ಒಬ್ಬರು. ಎನ್‌ಡಿಎ ಬಿಟ್ಟುಹೋದವರು ರಾಮ್‌ವಿಲಾಸ್ ಪಾಸ್ವಾನ್ ಮಾತ್ರ. ವೈಯಕ್ತಿಕವಾಗಿ ನರೇಂದ್ರಮೋದಿ ಬಗ್ಗೆ ವಿರೋಧ ಇಲ್ಲದವರು ಕೂಡಾ ಬಹಿರಂಗವಾಗಿ ಅವರ ಜತೆ ಗುರುತಿಸಿಕೊಳ್ಳಲು ಇಷ್ಟಪಡದೆ ಇರುವುದಕ್ಕೆ ಮುಖ್ಯ ಕಾರಣ ಅವರ ಮುಖಕ್ಕೆ ಅಂಟಿಕೊಂಡಿರುವ 2002ರ ಕೋಮು ಗಲಭೆಯ ಕಳಂಕ. ಮೋದಿ ಜತೆ ಕೈಜೋಡಿಸಿದರೆ ಮುಸ್ಲಿಮ್ ಮತಗಳನ್ನು ಕಳೆದುಕೊಳ್ಳಬಹುದೆಂಬ ಭೀತಿ ಎನ್‌ಡಿಎ ಮಿತ್ರಪಕ್ಷಗಳನ್ನು ಕಾಡುತ್ತಿದೆಯೇ ಹೊರತು ಈ ವಿರೋಧಕ್ಕೆ ಜಾತ್ಯತೀತತೆ ಬಗೆಗಿನ ಅಖಂಡ ಬದ್ಧತೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಕಾರಣಗಳೇನೇ ಇರಬಹುದು ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದನ್ನು ಎನ್‌ಡಿಎ ಮಿತ್ರಪಕ್ಷಗಳು ಸುಲಭದಲ್ಲಿ ಒಪ್ಪಿಕೊಳ್ಳಲಾರವು.
 ಮಿತ್ರಪಕ್ಷಗಳ ಬೆಂಬಲ ಬೇಡವೇ ಬೇಡ ಎಂದಾದರೆ ನರೇಂದ್ರಮೋದಿ ಪ್ರಧಾನಿಯಾಗಲು ಬಹುಮತಕ್ಕೆ ಅಗತ್ಯ ಇರುವ 272 ಸ್ಥಾನಗಳನ್ನು ಬಿಜೆಪಿ ಸ್ವಂತಬಲದಿಂದ  ಗೆಲ್ಲಬೇಕಾಗುತ್ತದೆ. ಆಗ ಮಾತ್ರ ಮಿತ್ರಪಕ್ಷಗಳ ಮುಲಾಜಿಲ್ಲದೆ ಅವರು ಪ್ರಧಾನಿಯಾಗಲು ಸಾಧ್ಯ. ಮೈತ್ರಿ ಅನಿವಾರ್ಯ ಎಂದಾದರೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಸ್ಥಾನದಿಂದ ದೂರ ಇಡಬೇಕಾಗಬಹುದು. ಈಗಿನ ರಾಜಕೀಯ ಸ್ಥಿತಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ನಂತರ ಯಾವುದೇ ಒಂದು ಪಕ್ಷ, ಸರ್ಕಾರ ರಚನೆಗೆ ಅಗತ್ಯ ಇರುವಷ್ಟು ಸ್ಪಷ್ಟ ಬಹುಮತ ಪಡೆಯುವುದು ಕಷ್ಟ. ಯುಪಿಎ, ಎನ್‌ಡಿಎ ಇಲ್ಲವೆ ತೃತೀಯರಂಗ-ಇವುಗಳಲ್ಲಿ ಯಾವುದಾದರೂ ಒಂದು ಮೈತ್ರಿಕೂಟವಷ್ಟೇ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚು. ಈ ಪರಿಸ್ಥಿತಿಯಲ್ಲಿ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಮಿತ್ರಪಕ್ಷಗಳ ಮೂಲಕ ಯಾರು ಗಳಿಸಿಕೊಳ್ಳಬಲ್ಲರೋ ಅವರೇ 2014ರ ಲೋಕಸಭಾ ಚುನಾವಣೆಯ ನಂತರ ಅಧಿಕಾರದ ಚುಕ್ಕಾಣಿ ಹಿಡಿಯುವವರು. ಅಧಿಕಾರದ ಈ ಓಟದಲ್ಲಿ ಮೋದಿ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಎನ್‌ಡಿಎ ಹೊರಟರೆ ಮುಗ್ಗರಿಸಿ ಬೀಳುವ ಅಪಾಯ ಇದೆ.
ಸದ್ಯ ಜತೆಯಲ್ಲಿರುವ ಮಿತ್ರಪಕ್ಷಗಳನ್ನಷ್ಟೇ ನಂಬಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕನಸನ್ನೂ ಕಾಣಲು ಬಿಜೆಪಿಗೆ ಸಾಧ್ಯ ಇಲ್ಲ. ಇದಕ್ಕಾಗಿ ಈಗಿನ ಮಿತ್ರಪಕ್ಷಗಳನ್ನು ಉಳಿಸಿಕೊಳ್ಳುವ ಜತೆಯಲ್ಲಿ ಬಿಟ್ಟುಹೋಗಿರುವ ಹಳೆಯ ಮಿತ್ರರನ್ನು ಒಲಿಸಿಕೊಳ್ಳಬೇಕಾಗುತ್ತದೆ. ಬಿಜು ಜನತಾದಳ, ತೆಲುಗುದೇಶಂ, ತೃಣಮೂಲ ಕಾಂಗ್ರೆಸ್, ನ್ಯಾಷನಲ್ ಕಾನಫರೆನ್ಸ್ ಮೊದಲಾದ ಪಕ್ಷಗಳು ವಾಜಪೇಯಿ ಕಾಲದಲ್ಲಿ ಎನ್‌ಡಿಎ ಜತೆ ಗುರುತಿಸಿಕೊಂಡಿದ್ದವು. ಇವುಗಳು ಸುಲಭದಲ್ಲಿ ಗೋಡೆಹಾರಿ ಬಂದುಬಿಡಬಹುದು.
ಅಧಿಕಾರದ ತಕ್ಕಡಿ ಎನ್‌ಡಿಎ ಕಡೆ ವಾಲುವುದು ಖಾತರಿಯಾದರೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಎನ್‌ಸಿಪಿ ನಾಯಕ ಶರದ್‌ಪವಾರ್ ಕೂಡಾ ಬೆಂಬಲಕ್ಕೆ ನಿಂತರೆ ಅಚ್ಚರಿಯೇನಿಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಬಿಡಿ, ಪ್ರಧಾನಿ ಅಭ್ಯರ್ಥಿಯಾಗುವುದನ್ನೂ ಕೂಡಾ ಈ ಪಕ್ಷಗಳು ಒಪ್ಪಲಾರವು. ಇವೆಲ್ಲವೂ ಗೊತ್ತಿರುವುದಕ್ಕಾಗಿಯೇ ಈ `ರಸ್ತೆತಡೆ'ಗಳನ್ನು ದಾಟಿಬರುವ ಪ್ರಯತ್ನವನ್ನು ಮೋದಿ ಪ್ರಾರಂಭಿಸಿರುವುದು. ಕಳೆದ ಹತ್ತುವರ್ಷಗಳಲ್ಲಿ ಎಷ್ಟೇ ಒತ್ತಡ ಬಂದರೂ `ತಪ್ಪಾಗಿದ್ದರೆ ಕ್ಷಮಿಸಿ' ಎಂಬ ಎರಡು ಶಬ್ದಗಳನ್ನು ಉಚ್ಚರಿಸಲು ಒಪ್ಪದ ನರೇಂದ್ರಮೋದಿ ಚುನಾವಣಾ ಫಲಿತಾಂಶ ಹೊರಬಿದ್ದ ಮರುಗಳಿಗೆಯಲ್ಲಿ ಅದನ್ನು ಹೇಳಿದ್ದಾರೆ. ಈಗಲೂ `ಗುಜರಾತ್ ಗಲಭೆಗಾಗಿ ಕ್ಷಮಿಸಿ' ಎಂದು ಹೇಳದೆ ತಪ್ಪಿಸಿಕೊಂಡಿದ್ದರೂ, ಮುಂದೊಂದು ದಿನ ಅದನ್ನೂ ಹೇಳಿಬಿಡಬಹುದು. ಆದರೆ ಅಷ್ಟಕ್ಕೆ ಎನ್‌ಡಿಎ ಮಿತ್ರಪಕ್ಷಗಳು ಮೋದಿ ಅವರನ್ನು ಒಪ್ಪಿಕೊಳ್ಳಬಹುದೇ?
ಬಹುಶಃ ಈ ಕಾರಣಗಳಿಂದಾಗಿಯೇ ವರ್ಷ 86 ದಾಟಿದರೂ ಲಾಲ್‌ಕೃಷ್ಣ ಅಡ್ವಾಣಿಯವರು ಪ್ರಧಾನಿಯಾಗುವ ಕನಸಿನ ಚುಂಗು ಹಿಡಿದು ಕೂತಿದ್ದಾರೆ. ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದರೂ ಆಗಬಹುದು, ಎನ್‌ಡಿಎ ಅಭ್ಯರ್ಥಿ ಆಗಲಾರರು ಎಂಬ ಸತ್ಯ ಅವರಿಗೆ ಗೊತ್ತಿದೆ. ಅನಿವಾರ್ಯವಾದರೆ ಎನ್‌ಡಿಎ ಅಭ್ಯರ್ಥಿ ತಾನೇ ಎನ್ನುವುದೂ ಅವರಿಗೆ ತಿಳಿದಿದೆ. ಅಡ್ವಾಣಿಯವರನ್ನು ಆರ್‌ಎಸ್‌ಎಸ್ ವಿರೋಧಿಸಿದರೂ ಮೋದಿಯವರನ್ನು ತಡೆಯಲಿಕ್ಕಾಗಿ ಒಪ್ಪಿಕೊಳ್ಳಲೂ ಬಹುದು. ಉಳಿದಂತೆ `ಡೆಲ್ಲಿ-4' ಗ್ಯಾಂಗ್ ಮತ್ತು ಎನ್‌ಡಿಎ ಮಿತ್ರಪಕ್ಷಗಳಿಗೆ ಅಡ್ವಾಣಿ ಬಗ್ಗೆ ತಕರಾರಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಎದುರು ನರೇಂದ್ರಮೋದಿ ಅವರನ್ನು ತಂದು ನಿಲ್ಲಿಸುವ ಅವಸರದಲ್ಲಿದ್ದಾರೆ ಮೋದಿ ಅಭಿಮಾನಿಗಳು. ಆದರೆ ಅದಕ್ಕಿಂತ ಮೊದಲು ಮೋದಿ ಮನೆಯೊಳಗಿನ ವಿರೋಧದ `ರಸ್ತೆತಡೆ'ಗಳನ್ನು ದಾಟಿ ಬರಬೇಕಾಗುತ್ತದೆ. ಬರಬಹುದೇ?

Monday, December 17, 2012

ಗುಜರಾತ್ ಜಾತಿ ಸೂತ್ರ ಬದಲಾಯಿಸಿದ ಮೋದಿ Dec 17 2012


`ಗುಜರಾತ್ ರಾಜ್ಯವನ್ನು ನರೇಂದ್ರಮೋದಿ ತನ್ನ ಮಾಯಾಜಾಲದಲ್ಲಿ ಕೆಡವಿಹಾಕಿದಂತೆ ಕಾಣುತ್ತಿದೆ. ಯಾವ ಚುನಾವಣಾ ಸಮೀಕ್ಷೆಯ ಸೂತ್ರಗಳಿಗೂ ನಿಲುಕದ ಮೋದಿ ಯಶಸ್ಸಿನ ಒಗಟನ್ನು ಒಡೆಯುವುದು ಕಷ್ಟ. ಅವರ ಜನಪ್ರಿಯತೆ ನೂರಕ್ಕೆ ನೂರರಷ್ಟು ಮತಗಳಾಗಿ ಪರಿವರ್ತನೆ ಹೊಂದಿದರೆ ಬಿಜೆಪಿ ಈ ರಾಜ್ಯದಲ್ಲಿ `ಹ್ಯಾಟ್ರಿಕ್' ಜಯ ಗಳಿಸಬಹುದು..' ಎಂದು ಹತ್ತುವರ್ಷಗಳ ಹಿಂದೆ ( ಪ್ರಜಾವಾಣಿ ವರದಿ:11,ಡಿಸೆಂಬರ್ 2002) ಆ ರಾಜ್ಯಕ್ಕೆ ವಿಧಾನಸಭಾ ಚುನಾವಣಾ ಸಮೀಕ್ಷೆಗೆಂದು ಹೋದವನು `ಮೋದಿ ಮೋಡಿ'ಗೆ ಬೆರಗಾಗಿ ಬರೆದಿದ್ದೆ. 

2002ರ ಕೋಮುದಂಗೆಯ ಹಸಿಹಸಿ ನೆನಪಿನ ಜತೆಯಲ್ಲಿಯೇ ನಡೆದ ಚುನಾವಣೆ ಅದು. `ನೀವು ನನಗೆ ಮತನೀಡಬೇಕೆಂದು ಹೇಳುವುದಿಲ್ಲ, ಆದರೆ ಗೋಧ್ರಾ ಹತ್ಯಾಕಾಂಡವನ್ನು ಮಾತ್ರ ಮರೆತುಬಿಡಿ ಎಂದು ಹೇಳಬೇಡಿ.  ಅದನ್ನು ನಾನು ಹೇಗೆ ಮರೆಯಲಿ? ಬೆಂಕಿ ಹತ್ತಿಕೊಂಡ ರೈಲ್ವೆಬೋಗಿಯೊಳಗಿನ ದೈವಭಕ್ತರ ಆರ್ತನಾದ ನನ್ನ ಕಿವಿಗಳಲ್ಲಿ ಈಗಲೂ ಗುಂಯ್‌ಗುಡುತ್ತಿದೆ....' -ಮೋದಿಯವರ ಕಣ್ಣೀರು `ನರ್ಮದಾ ನದಿ'ಯಾಗಿ ಹರಿಯುತ್ತಿದ್ದರೆ, ಅವರ ಗುಜರಾತಿ ಭಾಷೆಯ ಭಾಷಣ ಕೇಳಿದವರು ನಿಂತಲ್ಲೇ ಕಣ್ಣೀರಾಗಿ ಬಿಡುತ್ತಿದ್ದರು. ಇದು ಮೋದಿ ಮೋಡಿ.
 
ಈ ಮೋಡಿಯೇ ನರೇಂದ್ರಮೋದಿ ಅವರನ್ನು ಸತತ ಎರಡು ಬಾರಿ ಗೆಲ್ಲಿಸಿದ್ದೇ? ಹಾಗೆಂದು 2002ರ ಚುನಾವಣೆಯ ಕಾಲದಲ್ಲಿ ಮೂರ್ಖನಂತೆ ನಾನೂ ತಿಳಿದುಕೊಂಡಿದ್ದೆ, ಆದರೆ 2007ರ ವಿಧಾನಸಭಾ ಚುನಾವಣೆಯನ್ನು ತುಸು ಆಳಕ್ಕೆ ಇಳಿದು ನೋಡಿದಾಗ ಮೋದಿಯವರ ಇನ್ನೊಂದು ಮುಖ ಅನಾವರಣಗೊಳ್ಳಹತ್ತಿತ್ತು. ಹೊರನೋಟಕ್ಕೆ  ಕಟ್ಟಾ ಕೋಮುವಾದಿಯಂತೆ ಕಾಣುವ ನರೇಂದ್ರ ಮೋದಿ ಅವರೊಳಗೊಬ್ಬ ಚಾಣಾಕ್ಷ ರಾಜಕಾರಣಿ ಇದ್ದಾನೆ. ಸಂಖ್ಯೆಯ ಆಟವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯೆಯಲ್ಲಿ ಜಾತಿಜನರನ್ನು ಹೊಂದಿರುವ ರಾಜಕೀಯ ನಾಯಕರಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಅಸುರಕ್ಷತೆ ಅವರನ್ನು ಹೆಚ್ಚು ಜಾಗೃತರು ಮತ್ತು ಚಾಣಾಕ್ಷರನ್ನಾಗಿ ಮಾಡುತ್ತದೆ. ಮೋದಿ  ಇದಕ್ಕೆ ಹೊರತಲ್ಲ. ಈ ಚಾಣಾಕ್ಷತನದ ಬಲದಿಂದಲೇ ಅವರು ಜನಸಂಖ್ಯೆಯಲ್ಲಿ ಶೇಕಡಾ ಹದಿನಾರರಷ್ಟಿರುವ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಪಟೇಲರನ್ನು ಎದುರಿಸಿ ಹಿಂದಿನ ಎರಡು ಚುನಾವಣೆಗಳನ್ನು ಗ್ದ್ದೆದದ್ದು.
 
ಕಳೆದ ಹತ್ತುವರ್ಷಗಳಲ್ಲಿ ಗುಜರಾತ್ ರಾಜಕೀಯ ಬದಲಾಗಿದೆ ಎಂದು ಅನಿಸುವುದಿಲ್ಲ. ಕೇಶುಭಾಯಿಪಟೇಲ್ ಬಂಡೆದ್ದು ರಚಿಸಿರುವ ಹೊಸ ಪಕ್ಷದ ಪರಿಣಾಮದಿಂದಾಗಿ ಮೋದಿಗೆ ಹಿನ್ನಡೆ ಆಗಬಹುದು ಎಂದು ಹಲವಾರು ರಾಜಕೀಯ ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ.
ಆದರೆ ಕೇಶುಭಾಯಿ ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಕಟ್ಟಿದ್ದು ಹೊಸದಾಗಿದ್ದರೂ ಅವರ ಬಂಡಾಯ ಹೊಸದಲ್ಲ, ಹತ್ತುವರ್ಷಗಳ ಹಿಂದೆ ನರೇಂದ್ರ ಮೋದಿ ತನ್ನಿಂದ ಮುಖ್ಯಮಂತ್ರಿ ಪಟ್ಟ ಕಸಿದುಕೊಂಡ ದಿನದಿಂದಲೂ ಕೇಶುಭಾಯಿ ಬಂಡುಕೋರರು. ನರೇಂದ್ರ ಮೋದಿ ಹಿಂದುಳಿದ ಗಾಂಚಿ (ಗಾಣಿಗ) ಜಾತಿಗೆ ಸೇರಿದವರು. ಪಟೇಲರು ಎಣ್ಣೆಗಿರಣಿ ಮಾಲೀಕರು. ಕೆಳಜಾತಿಯ ಒಬ್ಬ ವ್ಯಕ್ತಿ ಪಟೇಲರ ನಾಯಕನನ್ನು ಕೆಳಗಿಳಿಸಿ ಮುಖ್ಯಮಂತ್ರಿಯಾಗಿದ್ದನ್ನು ಕೇಶುಭಾಯಿ ಪಟೇಲ್ ಮತ್ತು ಬೆಂಬಲಿಗರು ಇನ್ನೂ ಮರೆತಿಲ್ಲ. ಕಳೆದೆರಡೂ ಚುನಾವಣೆಗಳಲ್ಲಿ ಕೇಶುಭಾಯಿ ಬೆಂಬಲಿಗರು ಕಾಂಗ್ರೆಸ್ ಜತೆ ಗುಪ್ತಹೊಂದಾಣಿಕೆಯೂ ಸೇರಿದಂತೆ ಮೋದಿಯವರನ್ನು ಸೋಲಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ.  ಸಾಮಾನ್ಯವಾಗಿ ಆಡಳಿತ ಪಕ್ಷದ ಆಂತರಿಕ ಬಂಡಾಯ ವಿರೋಧಪಕ್ಷಗಳಿಗೆ ನೆರವಾಗುತ್ತದೆ. ಒಳಗಿನ ಬಂಡುಕೋರರು ಪ್ರತ್ಯೇಕ ಪಕ್ಷ ಕಟ್ಟಿ ಚುನಾವಣೆ ಎದುರಿಸಿದಾಗ ಅವರ ಪಾಲಿನ ಮತಗಳು ಅವರ ಪಕ್ಷಕ್ಕೆ ಹೋಗುವುದರಿಂದ ವಿರೋಧಪಕ್ಷಗಳಿಗೆ ಹೆಚ್ಚು ಲಾಭವಾಗುವುದಿಲ್ಲ. ಹೌದು, ಈ ಬಾರಿ ಬಿಜೆಪಿ ಶಾಸಕರ ಸಂಖ್ಯೆ ಕುಸಿಯಲೂಬಹುದು, ಆದರೆ ಕೇಶುಭಾಯಿ ಬಂಡಾಯ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಾರದು.
 
 ರಾಜಕೋಟ್, ಅಮ್ರೇಲಿ, ಪೋರಬಂದರ್, ಜುನಾಗಡ್,ಸುರೇಂದ್ರನಗರ ಮತ್ತು ಭಾವನಗರ ಜಿಲ್ಲೆಗಳನ್ನೊಳಗೊಂಡ ಸೌರಾಷ್ಟ್ರ ಎನ್ನುವುದು `ಪಟೇಲರ ಕೋಟೆ'. ರಾಜ್ಯದ 182 ಕ್ಷೇತ್ರಗಳ ಪೈಕಿ 60ರಲ್ಲಿ ಪಟೇಲರು ನಿರ್ಣಾಯಕರಾಗುವಷ್ಟು ಸಂಖ್ಯೆಯಲ್ಲಿದ್ದಾರೆ. ಇವರು ಮೂಲತ: ಕೃಷಿಕರಾದರೂ ಈಗ  ಉದ್ಯಮ ಕ್ಷೇತ್ರವನ್ನೂ ಪ್ರವೇಶಿಸಿದ್ದಾರೆ. ಸೌರಾಷ್ಟ್ರದಲ್ಲಿನ ಎಣ್ಣೆ ಗಿರಣಿಗಳು ಮತ್ತು ಸೂರತ್‌ನಲ್ಲಿನ ವಜ್ರದ ವ್ಯಾಪಾರದಲ್ಲಿ ಅವರದ್ದೇ ಪ್ರಾಬಲ್ಯ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಿಗೂ ಅವರು ಕೈಚಾಚಿದ್ದಾರೆ.
ಅನಿವಾಸಿ ಗುಜರಾತಿಗಳಲ್ಲಿ ಪಟೇಲರದ್ದೇ ಮೇಲುಗೈ. ರಾಜ್ಯದ ನೌಕರಶಾಹಿಯಲ್ಲಿಯೂ ಅವರು ಆಯಕಟ್ಟಿನ ಸ್ಥಾನದಲ್ಲಿದ್ದಾರೆ. 
ಇಂತಹ ಪಟೇಲರನ್ನು ಮೋದಿ  ಎದುರಿಸಿದ್ದು ಹೇಗೆ? ಇದಕ್ಕೆ ಕಾರಣ- `ಗುಜರಾತ್‌ನಲ್ಲಿ ಈಗ ಇರುವುದು ದೇಶದಾದ್ಯಂತ ಕಾಣುತ್ತಿರುವ ಬಿಜೆಪಿ ಅಲ್ಲ, ಮೋದಿ ನೇತೃತ್ವದ ಪಕ್ಷದೊಳಗಿರುವುದು 20 ವರ್ಷಗಳ ಹಿಂದಿನ ಕಾಂಗ್ರೆಸ್'. ಈ ಒಳನೋಟವನ್ನು ನನಗೆ ನೀಡಿದ್ದವರು `ಗುಜರಾತ್‌ನ ದೇವರಾಜ ಅರಸು' ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಮಾಧವಸಿನ್ಹ ಸೋಳಂಕಿ. 2007ರ ಚುನಾವಣಾ ಸಮೀಕ್ಷೆಗೆಂದು ಹೋದವ ಗಾಂಧಿನಗರದ ಹಳೆಯ ಬಂಗಲೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದ ಸೋಳಂಕಿ ಅವರನ್ನು ಭೇಟಿಮಾಡಿದ್ದೆ.
ಗುಜರಾತ್ ರಾಜಕೀಯವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ `ಪಟೇಲ್‌ಗಿರಿ'ಯನ್ನು `ಕ್ಷತ್ರಿಯ-ಹರಿಜನ- ಆದಿವಾಸಿ-ಮುಸ್ಲಿಮ್'   ಸಮುದಾಯಗಳನ್ನೊಳಗೊಂಡ `ಖಾಮ್' ಕೂಟಕಟ್ಟಿ  ಮೊದಲ ಬಾರಿ ಮುರಿದವರು  ಸೋಳಂಕಿ. ಈ ಜಾತಿ ಸಮೀಕರಣದ ರಾಜಕೀಯ ಲಾಭವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟವರು ಹಿಂದುಳಿದ ಜಾತಿಗಳ ಹಿರಿಯ ನಾಯಕ ಜೀನಾಭಾಯಿ ದರ್ಜಿ. ಈ ಬಲದಿಂದ ಕಾಂಗ್ರೆಸ್‌ಪಕ್ಷಕ್ಕೆ ಸೇರಿರುವ ಕ್ಷತ್ರಿಯ ಸೋಳಂಕಿ ಮಾತ್ರವಲ್ಲ ಆದಿವಾಸಿ ಸಮುದಾಯಕ್ಕೆ ಸೇರಿರುವ ಅಮರ್‌ಸಿಂಗ್ ಚೌದರಿ ಕೂಡಾ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು.
 
ಆದರೆ ಬದಲಾದ ರಾಜಕೀಯದ ಆಟ ಬಹಳ ದಿನ ನಡೆಯಲಿಲ್ಲ. ಜನಸಂಖ್ಯೆ ಮತ್ತು ಸಂಪನ್ಮೂಲದ ಬಲದಿಂದಾಗಿ ರಾಜಕೀಯವಾಗಿ ಶಕ್ತಿಶಾಲಿಯಾಗಿದ್ದ ಪಟೇಲರು ಬಹಳ ಬೇಗ ತಿರುಗೇಟು ನೀಡಿದ್ದರು. 1990ರ ವಿಧಾನಸಭಾ ಚುನಾವಣೆಯಲ್ಲಿ ಚಿಮಣ್‌ಭಾಯ್ ಪಟೇಲ್ ನಾಯಕತ್ವದಲ್ಲಿ ಪಟೇಲರು ಜನತಾದಳದ ಗಾಡಿ ಹತ್ತಿದರು. ಅದರ ಫಲವಾಗಿಯೇ 1990ರಲ್ಲಿ ಬಿಜೆಪಿ-ಜನತಾ ಮೈತ್ರಿಕೂಟ ಅಧಿಕಾರಕ್ಕೆ ಬಂದದ್ದು. ಆ ಸರ್ಕಾರದಲ್ಲಿ ಚಿಮಣ್‌ಭಾಯ್ ಮುಖ್ಯಮಂತ್ರಿಯಾಗಿದ್ದರೆ, ಕೇಶುಭಾಯಿ ಉಪಮುಖ್ಯಮಂತ್ರಿಯಾಗಿದ್ದರು. ಇಂತಹ ಜನತಾದಳವನ್ನು ಬಿಜೆಪಿಯೇ ಒಡೆದುಹಾಕಿತು. ಕಾಂಗ್ರೆಸ್ ಪಕ್ಷದ ಯಶಸ್ವಿ `ಖಾಮ್' ಸೂತ್ರವನ್ನು ಮುರಿಯುವ ಜತೆಯಲ್ಲಿ ಜನತಾದಳದಲ್ಲಿದ್ದ ಪಟೇಲರನ್ನು ಪಕ್ಷಕ್ಕೆ ಕರೆತರುವ `ಮಹಾ ಜಾತಿ ಧ್ರುವೀಕರಣ'ದ ಯೋಜನೆಯನ್ನು ರೂಪಿಸಿದ್ದ ಬಿಜೆಪಿ, ಅದಕ್ಕಾಗಿ ಕಣಕ್ಕಿಳಿಸಿದ್ದು ಕೇಶುಭಾಯಿ, ನರೇಂದ್ರಮೋದಿ ಮತ್ತು ಶಂಕರ್‌ಸಿಂಗ್ ವಘೇಲಾ ಎಂಬ ತ್ರಿಮೂರ್ತಿಗಳನ್ನು.
 
 ನರೇಂದ್ರಮೋದಿ ಅವರು `ಮುಸ್ಲಿಮ್' ಭೂತವನ್ನು ಬಳಸಿಕೊಂಡು ಆದಿವಾಸಿಗಳನ್ನು `ಹಿಂದೂ'ಗಳಾಗಿ ಪರಿವರ್ತಿಸುವ ಕೆಲಸವನ್ನು ಮಾಡಿದರೆ, ಕ್ಷತ್ರಿಯರಾದ ವಘೇಲಾ `ಖಾಮ್' ಸೂತ್ರದ ಪ್ರಮುಖ ಕೊಂಡಿಯಾಗಿದ್ದ ಕ್ಷತ್ರಿಯರನ್ನು ಕರೆತಂದರು. ಮಾಧವಸಿನ್ಹಾ ಸೋಳಂಕಿಯವರ `ಖಾಮ್' ರಾಜಕೀಯದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ನೆಲೆ ಕಳೆದುಕೊಂಡು ಜನತಾ ಮತ್ತು ಬಿಜೆಪಿಯಲ್ಲಿ ಸೇರಿಕೊಂಡಿದ್ದ ಪಟೇಲರನ್ನು ಬಿಜೆಪಿ ಕಡೆ ಎಳೆದು ತರುವ ಕೆಲಸವನ್ನು ಕೇಶುಭಾಯಿ ಮಾಡಿದರು. ಈ ಜಾತಿ ಮರುಧ್ರುವೀಕರಣದಿಂದಾಗಿ ಬಹುಸಂಖ್ಯೆಯಲ್ಲಿ `ಹಿಂದೂ' ಮತದಾರರು  ಬಿಜೆಪಿ ಕಡೆ ವಲಸೆ ಹೋಗುವಂತಾಯಿತು. ಕಾಂಗ್ರೆಸ್ ಪಕ್ಷದ `ಖಾಮ್'ಕೂಟಕ್ಕೆ ನಿಷ್ಠರಾಗಿ ಉಳಿದವರು ಮುಸ್ಲಿಮರು ಮಾತ್ರ, ಅದು ಅವರಿಗೆ ಅನಿವಾರ್ಯವೂ ಆಗಿತ್ತು. ಇದರಿಂದಾಗಿ 1985ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದ ಗೆಲುವೇ ಕೊನೆಯದ್ದು, ಅದರ ನಂತರದ ಐದು ಚುನಾವಣೆಗಳಲ್ಲಿಯೂ ಅದು ಸೋತಿದೆ.
 
2002ರಲ್ಲಿ ನರೇಂದ್ರಮೋದಿ  ಮುಖ್ಯಮಂತ್ರಿಯಾಗಿ ರಾಜಕೀಯ ಪ್ರವೇಶಿಸಿದ ನಂತರ ಈ ಜಾತಿ ಸಮೀಕರಣ ಮತ್ತೆ ಬದಲಾಗಿಹೋಯಿತು. ಕೇಶುಭಾಯಿ ಪದಚ್ಯುತಿಯಿಂದಾಗಿ ಅತೃಪ್ತರಾಗಿರುವ ಪಟೇಲರನ್ನು ನಂಬಿಕೊಂಡು ಅಧಿಕಾರದಲ್ಲಿ ಉಳಿಯುವುದು ಸಾಧ್ಯವಾಗಲಾರದು ಎಂಬ ವಾಸ್ತವ ಬಹಳ ಬೇಗ ಮೋದಿಯವರಿಗೆ ಅರಿವಾಗಿತ್ತು. ಆಗಲೇ ಅವರು `ಉಗ್ರ ಹಿಂದುತ್ವ'ದ ಪ್ರತಿಪಾದನೆಯ ಮೂಲಕ ಮುಸ್ಲಿಮೇತರರ ಸಮುದಾಯವನ್ನು ಒಗ್ಗೂಡಿಸುವ ಜತೆಗೆ ಪಟೇಲ್ ಸಮುದಾಯವನ್ನು  ಒಡೆಯುವ ಪ್ರಯತ್ನಕ್ಕೆ ಚಾಲನೆ ನೀಡಿದ್ದು. ಲೇವಾ ಮತ್ತು ಕಡುವಾ ಎಂಬ ಪಟೇಲರೊಳಗಿನ ಎರಡು ಪ್ರಮುಖ ಒಳಪಂಗಡಗಳ ರಾಜಕೀಯವನ್ನು ಮೋದಿ ಕಳೆದ ಒಂದು ದಶಕದಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಕೇಶುಭಾಯಿ ಪ್ರತಿನಿಧಿಸುವ ಲೇವಾ ಪಟೇಲರು ರಾಜಕೋಟ್ ಮತ್ತು ಅಮ್ರೇಲಿಗಳಲ್ಲಿ ಬಹುಸಂಖ್ಯೆಯಲ್ಲಿದ್ದರೆ ಸೂರತ್ ಮತ್ತು ಉತ್ತರ ಗುಜರಾತ್‌ಗಳಲ್ಲಿ ಕಡುವಾ ಪಟೇಲರಿದ್ದಾರೆ. ಮೋದಿ ಬಲಗೈಯಂತಿರುವ ವಜುಭಾಯಿವಾಲಾ ಕಡುವಾ ಪಟೇಲ್. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೆಚ್ಚು ಟಿಕೆಟ್ ಪಡೆದದ್ದೇ ಕಡುವಾ ಪಟೇಲರು.
 
ಮೋದಿಯವರ ಇನ್ನೊಂದು ಶಕ್ತಿ ಕೇಂದ್ರ ಆದಿವಾಸಿ ಬಾಹುಳ್ಯದ ಪಂಚಮಹಲ್, ದಾಹೋದ್, ವಡೋದರ ಜಿಲ್ಲೆಗಳನ್ನೊಳಗೊಂಡ ಕೇಂದ್ರ ಗುಜರಾತ್. ಅಲ್ಲಿ ಒಟ್ಟು 48 ವಿಧಾನಸಭಾ ಕ್ಷೇತ್ರಗಳಿವೆ. ಕಳೆದೆರಡೂ ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. 2007ರ ಚುನಾವಣೆಯ ಕಾಲದಲ್ಲಿ ಕಲೋಲ್ ಕಡೆ ಹೊರಟಿದ್ದ ನಾನು ಹೆದ್ದಾರಿ ಪಕ್ಕದ ಚಹದಂಗಡಿಯಲ್ಲಿ ಕೂತಿದ್ದೆ. ನಮ್ಮ ವಾಹನ ನೋಡಿ ಪತ್ರಕರ್ತನಿರಬಹುದೆಂಬ ಸುಳಿವು ಸಿಕ್ಕ ಹಣೆಗೆ ಕೇಸರಿಪಟ್ಟಿ ಕಟ್ಟಿಕೊಂಡಿದ್ದ ಯುವಕನೊಬ್ಬ `ಜೈ ಶ್ರಿರಾಮ್' ಎಂದು ಎದೆಯುಬ್ಬಿಸಿ ಕೂಗಿದ್ದ. ಅಲ್ಲಿಯೇ ಮೂಲೆಯೊಂದರಲ್ಲಿ ಕೂತಿದ್ದ ಅರೆಬೆತ್ತಲೆ ವೃದ್ಧರೊಬ್ಬರು  ಎತ್ತಲೋ ನೋಡುತ್ತಾ ` ಹಮ್ಹಾರಾ ಬಾಬೋ ಪಿತೋರೋ ಚೆ' ಎಂದು ಸಣ್ಣಗೆ ಕೆಮ್ಮುವಂತೆ ಗೊಣಗಿದ. ಜಗಳದ ಕಿಡಿ ಹಾರಿಯೇ ಬಿಟ್ಟಿತ್ತು.
ಅಷ್ಟರಲ್ಲಿ ವೃದ್ಧ ವ್ಯಕ್ತಿ ಅಲ್ಲಿಂದ ಸದ್ದಿಲ್ಲದೆ ಕಣ್ಮರೆಯಾಗಿದ್ದ. ಆ ನಂತರ ತಿಳಿದುಬಂದಂತೆ ಇಬ್ಬರೂ ಆದಿವಾಸಿ ಸಮುದಾಯದವರು. ಇದು ಕೇವಲ ಬೀದಿ ಜಗಳ ಅಲ್ಲ, ಗುಜರಾತ್‌ನ ಜನಸಂಖ್ಯೆಯಲ್ಲಿ ಶೇಕಡಾ ಹದಿನೇಳರಷ್ಟಿರುವ ಆದಿವಾಸಿಗಳ `ಮನೆ' ಜಗಳ ಕೂಡಾ ಹೌದು.
 
ಆದಿವಾಸಿಗಳು ಪಾರಂಪರಿಕವಾಗಿ ಧಾರ್ಮಿಕ ವ್ಯಕ್ತಿಗಳು. ಆದರೆ ಅವರು ಪೂಜಿಸುವುದು ಅವರದ್ದೇ ದೇವತೆಗಳನ್ನು. ಗುಜರಾತ್‌ನ ಆದಿವಾಸಿಗಳು ಬಾಬೋ ಪಿತೋರೇ, ಇತೆರಾನ್, ಮಾಕಾಳಿ ಮೊದಲಾದ ದೇವತೆಗಳನ್ನು ಪೂಜಿಸುತ್ತಾ ಬಂದವರು. ಹಳೆಯ ತಲೆಮಾರಿನ ಆದಿವಾಸಿಗಳು ಈ ದೇವತೆಗಳಿಗೆ ನಿಷ್ಠರಾಗಿಯೇ ಉಳಿದಿದ್ದಾರೆ. ಆದರೆ ತಲೆಗೆ ಕೇಸರಿಪಟ್ಟಿ ಕಟ್ಟಿಕೊಂಡ ಹೊಸತಲೆಮಾರಿನ ಕುಟುಂಬಗಳ ಮನೆಯಲ್ಲಿ ಆಗಲೇ ರಾಮ,ಕೃಷ್ಣ, ಲಕ್ಷ್ಮಿ, ಸರಸ್ವತಿಗಳ ಪ್ರವೇಶವಾಗಿದೆ. ಆಸಾರಾಮ್ ಬಾಪೂ, ಜಯಶ್ರಿ ತಲವಾಲ್ಕರ್, ದಾದಾ ಭಗವಾನ್ ಪ್ರವಚನಗಳಿಗೆ ಪಂಚಮಹಲ್, ದಾಹೋದ್ ಜಿಲ್ಲೆಗಳಲ್ಲಿ ಸಾವಿರಾರು ಆದಿವಾಸಿಗಳು ಸೇರುತ್ತಾರೆ. ಒಂದು ಕಾಲದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಗುತ್ತಿಗೆಯಾಗಿ ಹೋಗಿದ್ದ ಆದಿವಾಸಿ ಪ್ರದೇಶದಲ್ಲಿ ಸಂಘ ಪರಿವಾರಕ್ಕೆ ಸೇರಿರುವ `ವನವಾಸಿ ಕಲ್ಯಾಣ ಪರಿಷತ್'ಗಳ ಶಾಖೆಗಳು ಕಳೆದ 15-20 ವರ್ಷಗಳಲ್ಲಿ ವ್ಯಾಪಕವಾಗಿ ಹರಡಿವೆ. ಅನಿವಾಸಿ ಗುಜರಾತಿಗಳ ದೇಣಿಗೆಯಿಂದಾಗಿ ಈ ಹಿಂದೂ ಎನ್‌ಜಿಒಗಳು ಸಂಪನ್ಮೂಲದ ವಿಷಯದಲ್ಲಿಯೂ ಕ್ರಿಶ್ಚಿಯನ್ ಮಿಷನರಿಗಳನ್ನು ಮೀರಿಸುವಂತಿವೆ. ಚಹದಂಗಡಿಯಲ್ಲಿ ನನ್ನೆದುರಿಗೆ ಬಂದು `ಜೈ ಶ್ರಿರಾಮ್'ಎಂದು ಕೂಗಿದ್ದ ಯುವಕನ ಹೆಸರು ಭಾನು ರಾತ್ವಾ. ಆತ ಒಂದಷ್ಟು ದಿನ ಕ್ರಿಶ್ಚಿಯನ್ ಮಿಷನರಿ ಜತೆ ಇದ್ದವನಂತೆ.
ಆದರೆ ಅಲ್ಲಿ ಆದಿವಾಸಿ ದೇವತೆಗಳ ಹಾಡು ಹಾಡಬಾರದು, ಅವರ ಚಿತ್ರ ಬಿಡಿಸಬಾರದು ಎಂದೆಲ್ಲ ಪ್ರತಿಬಂಧನೆಗಳು ಹೆಚ್ಚತೊಡಗಿದಾಗ ಪ್ರತಿಭಟಿಸಿ ಹೊರಬಂದವ. ಅಲ್ಲಿಂದ ಆತ ಪಾವಗಡದ ವನವಾಸಿ ಕಲ್ಯಾಣ ಪರಿಷತ್ ಸೇರಿಕೊಂಡು ಮೋದಿ ಪ್ರಚಾರಕನಾಗಿದ್ದಾನೆ. 2002ರ ಕೋಮುಗಲಭೆಯಲ್ಲಿ ಅಹಮದಾಬಾದ್ ನಗರವನ್ನು ಹೊರತುಪಡಿಸಿದರೆ ಅತಿಹೆಚ್ಚು ಸಾವು-ನೋವು ಸಂಭವಿಸಿದ್ದು ಪಂಚಮಹಲ್ ಮತ್ತು ದಾಹೋದ್ ಜಿಲ್ಲೆಗಳಲ್ಲಿ.
 
 `ಕೋಮು ಗಲಭೆಗಳಲ್ಲಿ ಸಂಘಪರಿವಾರದ ಕಾಲಾಳುಗಳಾಗಿ ಕೆಲಸ ಮಾಡಿದ್ದವರು ನಿರುದ್ಯೋಗಿ ಆದಿವಾಸಿ ಯುವಕರು. ಅವರಲ್ಲಿ ಈಗಲೂ ಬಹಳಷ್ಟು ಮಂದಿ ಜೈಲಲ್ಲಿದ್ದಾರೆ. ತಮ್ಮ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರಿಗೆ ಅರಿವಾಗಿದೆ' ಎಂದು ಕಳೆದ ಚುನಾವಣೆಯ ಕಾಲದಲ್ಲಿ ವಡೋಧರಾದ ಸಮಾಜವಿಜ್ಞಾನ ಸಂಶೋಧಕ ಗಣೇಶ್ ದೇವಿ ನನಗೆ ಹೇಳಿದ್ದರು. ಆದರೆ `ಪಟೇಲರ ಬಂಡಾಯ, ಸಂಘಪರಿವಾರದ ಅಸಮಾಧಾನ, ಆದಿವಾಸಿ ಯುವಕರ ಜ್ಞಾನೋದಯ'ಗಳ ಹೊರತಾಗಿಯೂ 2007ರ ಚುನಾವಣೆಯಲ್ಲಿ ನರೇಂದ್ರಮೋದಿ ಗೆದ್ದಿದ್ದರು. ಈ ಬಾರಿಯೂ ಗೆಲ್ಲದಿರಲು ಕಾರಣಗಳು ಬಹಳ ಇಲ್ಲ.

Saturday, June 23, 2012

ನರೇಂದ್ರಮೋದಿ ಅವರಿಂದ ಬಿಜೆಪಿ ಅಪಹರಣ June 11, 2012

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಬ್ಬ ಆದರ್ಶ ಸ್ವಯಂಸೇವಕನಿಂದ ಬಯಸುವ ಎಲ್ಲ ಗುಣಗಳು ಸಂಜಯ್ ಜೋಷಿ ಅವರಲ್ಲಿವೆ.  ಆರ್‌ಎಸ್‌ಎಸ್ ಸಿದ್ಧಾಂತವನ್ನು ಮೂರುಹೊತ್ತು ಉಸಿರಾಡುತ್ತಿರುವ ಜೋಷಿ ಒಬ್ಬ ಸರಳ, ಪ್ರಾಮಾಣಿಕ, ಸಮರ್ಥ, ಸಜ್ಜನ ವ್ಯಕ್ತಿ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ, ಪ್ರಚಾರದ ಹಪಾಹಪಿ ಇಲ್ಲದ,  ಗಂಟೆ-ದಿನಗಳನ್ನು ಲೆಕ್ಕಿಸದೆ ಕೆಲಸ ಮಾಡಬಲ್ಲ ಶ್ರಮಜೀವಿ. 

ಆರ್‌ಎಸ್‌ಎಸ್ ಸಿದ್ಧಾಂತವನ್ನು ಒಪ್ಪದವರು ಸೈದ್ಧಾಂತಿಕವಾಗಿ ಅವರೊಡನೆ ನೂರೆಂಟು ತಕರಾರುಗಳನ್ನು ತೆಗೆಯಬಹುದು. ಆದರೆ ಆರ್‌ಎಸ್‌ಎಸ್ ನುಡಿದಂತೆಯೇ ನಡೆಯುವಂತಿದ್ದರೆ ಅದಕ್ಕೆ ಜೋಷಿ ಅವರಲ್ಲಿ ಎಳ್ಳುಕಾಳಿನಷ್ಟು ದೋಷ ಕಾಣಿಸಬಾರದಿತ್ತು.

ಆಗಿರುವುದೇನು?  ಬಿಜೆಪಿ ತೀರಾ ಅವಮಾನಕಾರಿಯಾಗಿ ಜೋಷಿ ಅವರನ್ನು ಹೊರಹಾಕಿದಾಗ ಸ್ವಯಂಸೇವಕರಿಗೆ ಆದರ್ಶದ ಪಾಠ ಹೇಳುತ್ತಿರುವ ಆರ್‌ಎಸ್‌ಎಸ್ ತನ್ನೊಬ್ಬ ಆದರ್ಶಸ್ವರೂಪಿ ಪ್ರಚಾರಕನಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿಯೂ ನೋಡದವರಂತೆ ಕಣ್ಣುಮುಚ್ಚಿಕೊಂಡು ಅವರ ವಿರೋಧಿಗಳ ಜತೆ ಶಾಮೀಲಾಗಿದೆ.

2005ರ ಡಿಸೆಂಬರ್‌ನ ಕೊನೆ ವಾರದಲ್ಲಿ  ಭಾರತೀಯ ಜನತಾ ಪಕ್ಷಕ್ಕೆ ಇಪ್ಪತ್ತೈದು ತುಂಬಿದಾಗ ಐದು ದಿನಗಳ ರಜತ ಜಯಂತಿಯನ್ನು ಮುಂಬೈನಲ್ಲಿ ಆಚರಿಸಲಾಗಿತ್ತು. ಅದನ್ನು ವರದಿಮಾಡಲೆಂದು ಹೋಗಿದ್ದ ನಾನು  ಬೆಳಿಗ್ಗೆ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತಿದ್ದಾಗ ಯುವಕನೊಬ್ಬ ಬಂದು ಮಡಚಿದ್ದ ಬಿಳಿಹಾಳೆಯನ್ನು ಕೈಗಿತ್ತು ಮಾಯವಾಗಿ ಹೋದ. 

ಪಕ್ಷದ ಹೇಳಿಕೆ ಇರಬಹುದೆಂದು ಬಿಡಿಸಿ ನೋಡಿದರೆ ಅದು `ಸಂಜಯ್ ಜೋಷಿ ಅವರು ನನ್ನ ಜತೆ ಲೈಂಗಿಕ ಸಂಬಂಧ ಹೊಂದಿದ್ದರು....` ಎಂದು ಆರೋಪಿಸಿ ಮಹಿಳೆಯೊಬ್ಬರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ್ದ ದೂರಿನ ಪ್ರತಿ. 

ಆಶ್ಚರ್ಯದಿಂದ ಅಕ್ಕಪಕ್ಕ ನೋಡಿದರೆ ಅಂತಹ ಪ್ರತಿಗಳು ಇನ್ನೂ ಕೆಲವರ ಕೈಯಲ್ಲಿದ್ದವು. ಕೆಲವು ಪತ್ರಕರ್ತರಂತೂ ಮೊದಲೇ ಗೊತ್ತಿದ್ದವರಂತೆ `ಸಿಡಿ ಹೈ, ದೇಖ್ ನ ಹೈ ಕ್ಯಾ?` ಎಂದು ಕಣ್ಣುಮಿಟುಕಿಸತೊಡಗಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಸಂಜಯ್ ಜೋಷಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುದ್ದಿ ಹೊರಬಿತ್ತು. ಪಕ್ಷದ ಬೆಳ್ಳಿಹಬ್ಬದ ಸಂಭ್ರಮ ಸಿ.ಡಿ ಹಗರಣದಲ್ಲಿ ಕರಗಿ ಹೋಗಿತ್ತು. 

ಇದು ಯಾರ ಕೈವಾಡ ಎನ್ನುವ ಚರ್ಚೆ ಅಲ್ಲಿ ನಡೆದಿದ್ದಾಗ ಕೇಳಿಬಂದ ಮೊದಲ ಹೆಸರು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರದ್ದು. ನಂತರದ ದಿನಗಳಲ್ಲಿ ಪೊಲೀಸರು ತನಿಖೆ ನಡೆಸಿ ಅದು ನಕಲಿ ಸಿ.ಡಿ. ಎಂದು ತೀರ್ಮಾನಕ್ಕೆ ಬಂದರು. ಆ ಸಿ.ಡಿ.ಯನ್ನು ಗುಜರಾತ್ ಪೊಲೀಸರು ವಿತರಿಸಿದ್ದರು ಎನ್ನುವುದು ಕೂಡಾ ಬಯಲಾಯಿತು. 

ಆದರೆ ಅದರ ಹಿಂದಿರುವ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. (ಗುಜರಾತ್‌ನಲ್ಲಿ ನಡೆದ ನರಮೇಧ ಮತ್ತು ಹರೇನ್ ಪಾಂಡ್ಯ ಹತ್ಯೆಯ ರೂವಾರಿ ಯಾರೆಂಬ ಪ್ರಶ್ನೆಯ ಹಾಗೆ). 

ಅವಮಾನದಿಂದ ಕುಗ್ಗಿಹೋಗಿ ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಸಂಜಯ್ ಜೋಷಿ ತನ್ನ ಮೇಲಿನ ಆರೋಪದಿಂದ ಮುಕ್ತರಾದ ನಂತರ ಮತ್ತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಆಗ ಮತ್ತೆ  ಬುಸುಗುಟ್ಟತೊಡಗಿದ್ದವರು ನರೇಂದ್ರ ಮೋದಿ. 

ಈ ಬಾರಿ ಪಕ್ಷವನ್ನೇ ತನ್ನ ಬೇಕು-ಬೇಡಗಳಿಗೆ ಒಪ್ಪುವ ಹಾಗೆ ಕುಣಿಸುವಷ್ಟು ಬೆಳೆದಿರುವ ಮೋದಿ ನೇರ ಕಾರ್ಯಾಚರಣೆಯಲ್ಲಿ ಜೋಷಿ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಮೋದಿ ಮತ್ತು ಜೋಷಿ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಆರ್‌ಎಸ್‌ಎಸ್ ಪ್ರವೇಶಿಸಿದವರು. 

ಗುಜರಾತ್‌ನಲ್ಲಿ ಇಂದು ಬಿಜೆಪಿ ಭದ್ರವಾಗಿ ಬೇರೂರಿದ್ದರೆ ಅದಕ್ಕೆ ಮೋದಿ ಅವರಂತೆ ಜೋಷಿಯವರೂ ಕಾರಣ. 2001ರಲ್ಲಿ ಕೇಶುಭಾಯಿ ಪಟೇಲ್ ಪದಚ್ಯುತಿಯಾದ ನಂತರ  ಗುಜರಾತ್ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಮೊದಲು ಮಾಡಿದ ಕೆಲಸ ಸಂಜಯ್ ಜೋಷಿ ಅವರನ್ನು ರಾಜ್ಯದಿಂದ ಹೊರಹಾಕಿದ್ದು. ಆಗಲೂ ಮೋದಿ ಒತ್ತಡಕ್ಕೆ ಮಣಿದ ಬಿಜೆಪಿ ಜೋಷಿ ಅವರನ್ನು ಗುಜರಾತ್‌ನಿಂದ ಕರೆಸಿಕೊಂಡು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತ್ತು.

ಬಿಜೆಪಿಯ ಈಗಿನ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಸಂಜಯ್ ಜೋಷಿ ಇಬ್ಬರದ್ದೂ ಒಂದೇ ಊರು. ನಾಗಪುರದಲ್ಲಿ ಇಬ್ಬರೂ ಜತೆಯಲ್ಲಿ ಆರ್‌ಎಸ್‌ಎಸ್ ಶಾಖೆಗೆ ಹೋಗುವ ಮೂಲಕ ಪರಿವಾರ ಸೇರಿದವರು. ಇಬ್ಬರು ಬೆಳೆಯುತ್ತಾ ಹೋದಂತೆ ಹಿಡಿದ ದಾರಿ ಮಾತ್ರ ಎಂದೂ ಪರಸ್ಪರ ಸಂಧಿಸಲು ಸಾಧ್ಯ ಇಲ್ಲದ್ದು.

ಮೊನ್ನೆಮೊನ್ನೆವರೆಗೆ ಜೋಷಿ ಅವರ ಬೆಂಬಲಕ್ಕೆ ನಿಂತಿದ್ದ ಪಕ್ಕಾ ವ್ಯಾಪಾರಿಯಂತೆ ಕಾಣುವ ಗಡ್ಕರಿ  ಇದ್ದಕ್ಕಿದ್ದಂತೆ ಬಾಲ್ಯದ ಗೆಳೆಯನ ಕೈಬಿಟ್ಟು ಮೋದಿ ಜತೆ ಸೇರಿಕೊಂಡಿದ್ದಾರೆ. ಆರ್‌ಎಸ್‌ಎಸ್‌ಭೀಷ್ಮಾಚಾರ್ಯರೆಲ್ಲ  `ಹಿಂದೂ ಹೃದಯ ಸಾಮ್ರಾಟ`ನ ಆದೇಶಕ್ಕೆ ತಲೆಯಾಡಿಸುತ್ತಾಕೂತಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿಣಿ ನಂತರದ ಬೆಳವಣಿಗೆಗಳನ್ನು ನೋಡಿದರೆ ಪಕ್ಷದ ಏಕಮೇವಾದ್ವಿತಿಯ ನಾಯಕನಾಗಿ ನರೇಂದ್ರಮೋದಿ  ಉದಯಿಸಿರುವ ಹಾಗೆ ಕಾಣುತ್ತಿದೆ. `ಮೋದಿ ಅವರೇ ಮುಂದಿನ ಪ್ರಧಾನಿ` ಎಂದು ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗುವ ಮೊದಲೇ ಅವರ ಅಭಿಮಾನಿ ಬಳಗ ಜಯಘೋಷ ಮಾಡುತ್ತಿದೆ. 

ವಿಚಿತ್ರವೆಂದರೆ ಈ ಸಂಭ್ರಮ-ಸಡಗರ ಮೋದಿ ಅವರ ಪಕ್ಷದ ಇಲ್ಲವೇ, ಆರ್‌ಎಸ್‌ಎಸ್, ವಿಎಚ್‌ಪಿ, ಎಬಿವಿಪಿ, ಎಚ್‌ಎಂಎಸ್‌ನ ನಾಯಕರ ಮುಖಗಳಲ್ಲಿ ಕಾಣುತ್ತಿಲ್ಲ. ಮೋದಿ ಅವರ ಬಹುಕಾಲದ ವಿರೋಧಿಗಳಾಗಿರುವ ಕೇಶುಭಾಯಿ ಪಟೇಲ್, ಸುರೇಶ್‌ಮೆಹ್ತಾ, ರಾಣಾ ಮೊದಲಾದವರು ರಾಜ್ಯದಲ್ಲಿ ಮತ್ತೆ ಬಂಡೆದ್ದಿದ್ದಾರೆ. 

ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮೊದಲಾದವರು ಬಹಿರಂಗವಾಗಿ ಮೋದಿ ಅವರ ನಡವಳಿಕೆಯನ್ನು ವಿರೋಧಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರು ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ನಿತಿನ್ ಗಡ್ಕರಿ ಕಾರ್ಯಶೈಲಿಯನ್ನು ಟೀಕಿಸಿದ್ದರೂ ಅವರ ಬಾಣದ ಗುರಿ ನರೇಂದ್ರಮೋದಿಯವರೇ ಆಗಿದ್ದಾರೆ.

ಸಂಘ ಪರಿವಾರ ಎನ್ನುವುದು ಈಗ ಒಡೆದ ಮನೆ. ಬಿಜೆಪಿಯ ಮುಖವಾಣಿ ಪತ್ರಿಕೆಯಾದ `ಕಮಲ ಸಂದೇಶ`ದಲ್ಲಿ ಮೋದಿ ವಿರುದ್ಧ ಲೇಖನ ಪ್ರಕಟವಾಗಿದ್ದರೆ, ಆರ್‌ಎಸ್‌ಎಸ್ ಮುಖವಾಣಿ `ಆರ್ಗನೈಸರ್` ಪತ್ರಿಕೆಯಲ್ಲಿ ಮೋದಿ ಅವರನ್ನು ಅಟಲಬಿಹಾರಿ ವಾಜಪೇಯಿ ಅವರಿಗೆ ಹೋಲಿಸಿ ಹೊಗಳಿ ಬರೆಯಲಾಗಿದೆ.

ನಿಯಂತ್ರಣ ಮೀರಿ ಬೆಳೆಯುತ್ತಿರುವ ಮೋದಿ ಬಗ್ಗೆ ಆರ್‌ಎಸ್‌ಎಸ್ ನಾಯಕರಲ್ಲಿಯೂ ಅಸಮಾಧಾನ ಇದೆ. ಅನುಯಾಯಿಗಳ ಒತ್ತಡದಿಂದಾಗಿ ಅವರೂ ತುಟಿ ಬಿಚ್ಚಲಾರರು. ಬಿಜೆಪಿ ಮೂಲಕ ಅಧಿಕಾರದ ರುಚಿ ಕಂಡಿರುವ ಆರ್‌ಎಸ್‌ಎಸ್ ನಾಯಕರು ಇತ್ತೀಚಿನ ವರ್ಷಗಳಲ್ಲಿ ಬದಲಾಗಿ ಹೋಗಿದ್ದಾರೆ. 

ಆದರೆ ಸಂಘ ಸಾರುತ್ತಿದ್ದ ಹಿಂದುತ್ವದ ಮೂಲಸಿದ್ಧಾಂತಕ್ಕೆ ಈಗಲೂ ಬದ್ಧವಾಗಿರುವ ಅನುಯಾಯಿಗಳ ಒಂದು ವರ್ಗ ಮೋದಿ ಅವರಲ್ಲಿಯೇ ಭವಿಷ್ಯದ ನಾಯಕನನ್ನು ಕಾಣತೊಡಗಿದೆ. 

ಇದರಿಂದಾಗಿ ತಮ್ಮ ಮೇಲೆ ಸವಾರಿ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರ ಬಗ್ಗೆ ಎಷ್ಟೇ ಅಸಮಾಧಾನ ಇದ್ದರೂ ಆರ್‌ಎಸ್‌ಎಸ್ ಅನಿವಾರ್ಯವಾಗಿ ಮೋದಿ ಅವರನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ.

ನರೇಂದ್ರ ಮೋದಿಯವರು ಹೊಸದೇನನ್ನೂ ಮಾಡಲು ಹೊರಟಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿಯೇ ಮಾಡಿದ್ದನ್ನು ಈಗ ರಾಷ್ಟ್ರಮಟ್ಟದಲ್ಲಿ ಮಾಡಲು ಹೊರಟಿದ್ದಾರೆ.

ಮುಖ್ಯಮಂತ್ರಿಯಾದ ನಂತರ ನರೇಂದ್ರ ಮೋದಿ ಗುಜರಾತ್‌ನಲ್ಲಿ ಮೊದಲು ಮಾಡಿದ್ದು ವಿಶ್ವಹಿಂದೂ ಪರಿಷತ್, ಎಚ್‌ಎಂಎಸ್, ಎಬಿವಿಪಿ ಮೊದಲಾದ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿದ್ದು. ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಈಗಲೂ ತನ್ನ ಹುಟ್ಟೂರಿನಲ್ಲಿಯೇ ತುಟಿಬಿಚ್ಚುವಂತಿಲ್ಲ.

ಎಲ್.ಕೆ.ಅಡ್ವಾಣಿ ಅವರು ಈಗ ಗುಡುಗುತ್ತಿದ್ದರೂ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಮೋದಿ ಹಿತರಕ್ಷಕನಾಗಿಯೇ ಕೆಲಸ ಮಾಡಿದ್ದು. `ರಾಜಧರ್ಮ` ಪಾಲಿಸುವಂತೆ ವಾಜಪೇಯಿ ಕರೆಕೊಟ್ಟ ನಂತರ ಇನ್ನೇನು ಮೋದಿ ಪದಚ್ಯುತಿಯಾಗಿಯೇ ಹೋಯಿತು ಎಂದು ಎಲ್ಲರೂ ತಿಳಿದಿದ್ದರು.

ಆಗ ಅವರನ್ನು ರಕ್ಷಿಸಿದ್ದು ಅಡ್ವಾಣಿ. ಮೋದಿ ನೆರವಿಲ್ಲದೆ ಇದ್ದರೆ ಲೋಕಸಭೆಗೆ ಆರಿಸಿಬರುವುದು ಕಷ್ಟ ಎನ್ನುವುದು ಈ ಶರಣಾಗತಿಗೆ ಒಂದು ಕಾರಣವಾದರೆ, ಪ್ರಧಾನಮಂತ್ರಿ ಸ್ಥಾನದ ಓಟಕ್ಕೆ ಇಳಿದಾಗ ಮೋದಿ ಬೆಂಬಲಿಸಬಹುದು ಎಂಬ ದೂರಾಲೋಚನೆ ಇನ್ನೊಂದು ಕಾರಣ ಇರಬಹುದು.

ಗುಜರಾತ್‌ನಲ್ಲಿ ಈಗ ಇರುವುದು ದೇಶದ ಉಳಿದೆಡೆ ಕಾಣುತ್ತಿರುವ ಬಿಜೆಪಿ ಖಂಡಿತ ಅಲ್ಲ, ಅದು ನರೇಂದ್ರ ಮೋದಿ ಬಿಜೆಪಿ. ಆ ರಾಜ್ಯದ ಬಿಜೆಪಿಯನ್ನು ಅವರು ಪ್ರತ್ಯೇಕ ಪ್ರಾದೇಶಿಕ ಪಕ್ಷದಂತೆಯೇ ನಡೆಸಿಕೊಂಡು ಬಂದಿದ್ದಾರೆ. ಪಕ್ಕಾ ಪಾಳೆಯಗಾರನಂತೆ ವಿರೋಧಿಸಿದವರ ತಲೆ ಕಡಿಯುತ್ತಾ, ಶರಣಾದವರನ್ನು ಅಡಿಯಾಳುಗಳನ್ನಾಗಿ ಮಾಡುತ್ತಾ ಬಂದಿದ್ದಾರೆ. 

ಈಗ ಇಡೀ ಪಕ್ಷವನ್ನೇ ಅಪಹರಣ ಮಾಡಲು ಹೊರಟಿದ್ದಾರೆ. ಅಪಹರಣ ಎಂದರೆ ಪ್ರತಿಭಟಿಸಿದವರ ಕೈಕಾಲು ಕಟ್ಟಿಹಾಕಿ, ಬಾಯಿಮುಚ್ಚಿಸಿ ಹೊತ್ತುಕೊಂಡು ಹೋಗುವುದು. ಮೋದಿ ಅದನ್ನೇ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅಪಹರಣ ಎನ್ನುವುದು ಅಪರಾಧ.

ಆದರೆ `ಅಪಹರಣಕಾರನ` ಜತೆ ಶಾಮೀಲಾಗಿರುವ ಆರ್‌ಎಸ್‌ಎಸ್‌ನ ನ್ಯಾಯಶಾಸ್ತ್ರದಲ್ಲಿ ಅಪಹರಣಕ್ಕೆ ಬೇರೆ ಅರ್ಥ ಇದ್ದರೂ ಇರಬಹುದು ಇಲ್ಲವೇ ಅಪಹರಣಕಾರರ ಜತೆಯಲ್ಲಿಯೇ ಬದುಕುತ್ತಾ ಕೊನೆಗೆ ಆತನನ್ನೇ ಪ್ರೀತಿಸುವ `ಸ್ಟಾಕ್‌ಹೋಂ ಸಿಂಡ್ರೋಮ್`ಗೆ ಆರ್‌ಎಸ್‌ಎಸ್ ಒಳಗಾಗಿರಬಹುದು.

ಉಳಿದವರ ಗೊಂದಲ ಏನೇ ಇದ್ದರೂ ನರೇಂದ್ರ ಮೋದಿ ಅವರಿಗೆ ತನ್ನ ಮುಂದಿನ ದಾರಿ ಬಗ್ಗೆ ಸ್ಪಷ್ಟತೆ ಇರುವಂತೆ ಕಾಣುತ್ತಿದೆ. ಅವರ ರಾಜಕೀಯ ಜೀವನದಲ್ಲಿ ಮುಂದಿನ ಎರಡು ವರ್ಷಗಳು ನಿರ್ಣಾಯಕವಾದುದು. 

ಈ ವರ್ಷದ ಕೊನೆಯಲ್ಲಿ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ, ಆ ಚುನಾವಣೆಯ ಫಲಿತಾಂಶ, ನಂತರದ ಒಂದೂವರೆ ವರ್ಷಗಳ ಅವಧಿಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅವರ ಪಾತ್ರವನ್ನು ನಿರ್ಧರಿಸಲಿದೆ. 

ಇದಕ್ಕಾಗಿಯೇ ಅವರು ತಾಲೀಮು ಪ್ರಾರಂಭಿಸಿರುವುದು. ಅಡ್ವಾಣಿಯವರನ್ನೋ, ಸುಷ್ಮಾ ಸ್ವರಾಜ್ ಅವರನ್ನೋ ಪ್ರಧಾನಿಯಾಗಿ ಮಾಡುವುದು ಅವರ ಉದ್ದೇಶ ಖಂಡಿತ ಅಲ್ಲ. ತಾನೇ ಪ್ರಧಾನಿಯಾಗಬೇಕೆಂಬ ಆಕಾಂಕ್ಷೆ ಅವರಲ್ಲಿ ಎಂದೋ ಹುಟ್ಟಿಕೊಂಡು ಬಲವಾಗಿ ಬೇರುಬಿಟ್ಟಿದೆ. 

ಈ ಮಹತ್ವಾಕಾಂಕ್ಷಿ ಮೋದಿಯವರನ್ನು ನೊಡಿದಾಗ ಯಾಕೋ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ವಾಧಿಕಾರಿಯಾಗಿ ಬದಲಾಗಿ ಹೋದ ಇಂದಿರಾಗಾಂಧಿ ನೆನಪಾಗುತ್ತಾರೆ. ಅವರ ವಿರೋಧಿಗಳು ಕೂಡಾ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದಾರೆ. 

ಇಂದಿರಾಗಾಂಧಿಯವರಂತೆಯೇ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಮೋದಿ ಬಯಸಿದ್ದನ್ನು ಪಡೆಯಲು ಏನು ಬೇಕಾದರು ಮಾಡಲು ಹಿಂಜರಿಯಲಾರರು. ಮಹತ್ವಾಕಾಂಕ್ಷಿಗಳ ಹಾದಿ ತಪ್ಪಿಸುವುದು ಸೋಲಿನ ಭೀತಿಯಿಂದ ಹುಟ್ಟುವ ಹತಾಶೆ.

ಹತಾಶೆಗೀಡಾದ ವ್ಯಕ್ತಿ ಪರಿಣಾಮವನ್ನು ಲೆಕ್ಕಿಸದೆ ತನಗೆ ಸರಿಕಂಡ ದಾರಿಯಲ್ಲಿ ನುಗ್ಗುತ್ತಾನೆ. ಹತ್ತುವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯನ್ನು ಕಣ್ಣಾರೆ ನೋಡಿದ ನನಗೆ  ಯಾಕೋ ದೇಶದಲ್ಲಿ ಗುಜರಾತ್ ಕಾಣತೊಡಗಿದೆ. ನನ್ನ ಭೀತಿ 

Monday, September 19, 2011

ಮೋದಿ ಒಂದು ವಾಸ್ತವ, ಅವರನ್ನು ಎದುರಿಸಿ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮರೆಯಲ್ಲಿ ನಿಂತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಡೆ  ಕಲ್ಲು ಹೊಡೆಯುತ್ತಾ ಎಷ್ಟು ದಿನಗಳನ್ನು ಹೀಗೆ ಕಳೆಯಬಹುದು? ಗುಜರಾತ್ ನರಮೇಧ ನಡೆದು ಒಂಬತ್ತು ವರ್ಷಗಳು ಕಳೆದಿವೆ.  ಹತ್ತಾರು ಪ್ರಕರಣಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ.
ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಮೋದಿ ವಿರುದ್ಧ ನೂರಾರು ಆರೋಪಗಳನ್ನು ಮಾಡಿವೆ, ಈ ದೇಶದ ಅನೇಕ ಪ್ರಮುಖ ಸಾಹಿತಿಗಳು, ಕಲಾವಿದರು, ಚಿಂತಕರು ಮತ್ತು ಸಾಮಾಜಿಕ ಸೇವಾ ಕಾರ‌್ಯಕರ್ತರು ಕೂಡಾ ಮೋದಿ ವಿರುದ್ದ ದನಿ ಎತ್ತಿದ್ದಾರೆ.
ಅಷ್ಟೇ ಆಕ್ರಮಣಕಾರಿಯಾಗಿ ನರೇಂದ್ರ ಮೋದಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ, ಎಲ್.ಕೆ.ಅಡ್ವಾಣಿ ಸೇರಿದಂತೆ ಅವರ ಪಕ್ಷದ ಪ್ರಮುಖ ನಾಯಕರು ಕೂಡಾ ಬಹಿರಂಗವಾಗಿ ಮೋದಿ ಬೆಂಬಲಕ್ಕೆ ನಿಂತು ಮಾತನಾಡಿದ್ದಾರೆ.
  ಇವೆಲ್ಲವನ್ನು ಮಾಧ್ಯಮಗಳು ಪುಟಗಟ್ಟಲೆ ಬರೆದಿವೆ, ಚಾನೆಲ್‌ಗಳು ಸಾವಿರಾರು ಗಂಟೆಗಳ ಕಾಲ ಪ್ರಸಾರ ಮಾಡಿವೆ. ಮಾಧ್ಯಮಗಳು ಸ್ವತಂತ್ರವಾಗಿ ತನಿಖೆ ನಡೆಸಿ ವರದಿಗಳನ್ನು ಪ್ರಕಟಿಸಿವೆ.
ಬಹುಶಃ ನರೇಂದ್ರ ಮೋದಿ ಅವರ `ಹಳೆಯ ಪಾಪ~ಗಳ ಬಗ್ಗೆ ಹೊಸದಾಗಿ ಹೇಳುವಂತಹದ್ದು ಈಗ ಏನೂ ಉಳಿದಿಲ್ಲ. ಅವರ ವ್ಯಕ್ತಿತ್ವದ ಒಳಿತು-ಕೆಡುಕುಗಳೆರಡೂ ಈಗ ದೇಶದ ಜನರ ಮುಂದಿವೆ. ಅವರೇ ಈಗ ತೀರ್ಮಾನ ಮಾಡಬೇಕಾಗಿದೆ.
ಯಾರು ಒಪ್ಪಲಿ ಬಿಡಲಿ, ಮೋದಿ ಅವರು ಈಗ ರಾಷ್ಟ್ರ ರಾಜಕಾರಣದ ಕಡೆ ಹೆಜ್ಜೆ ಹಾಕಿದ್ದಾರೆ. ಇಲ್ಲಿಯ ವರೆಗೆ ಯಾವ ಕಾನೂನು ಕೂಡಾ ಅವರು ಅಪರಾಧಿ ಎಂದು ತೀರ್ಪು ನೀಡದಿರುವ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಅರ್ಹರಾಗಿದ್ದಾರೆ.
ಆದ್ದರಿಂದ ಅವರನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಇನ್ನೂ ಅವರನ್ನು ಪತ್ರಿಕೆಗಳ ಪುಟಗಳಲ್ಲಿ ಮತ್ತು ಟಿವಿ ಚಾನೆಲ್‌ಗಳ ಚರ್ಚಾಕೂಟಗಳಲ್ಲಿ  ಹಳಿಯುತ್ತಾ ಕಾಲ ಕಳೆಯುವುದರಲ್ಲಿ ಏನೂ ಅರ್ಥ ಇಲ್ಲ. ವಿರೋಧಿಗಳ ಪಾಲಿಗೆ ಈಗ ಉಳಿದಿರುವ ಏಕೈಕ ದಾರಿ ಎಂದರೆ ಅವರನ್ನು ಮುಖಾಮುಖಿ ಎದುರಿಸುವುದು.
`ಧೈರ್ಯವಿದ್ದರೆ ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಮುಂದಿನ ಲೋಕಸಭಾ ಚುನಾವಣೆ ಎದುರಿಸಿ~ ಎಂದು ಭಾರತೀಯ ಜನತಾ ಪಕ್ಷಕ್ಕೆ ಸವಾಲು ಹಾಕುವಂತಹ ದಿಟ್ಟತನವನ್ನು ಮೋದಿ ವಿರೋಧಿ ನಾಯಕರು ತೋರಬೇಕು.
ಈ ಸವಾಲನ್ನು ಕಾಂಗ್ರೆಸ್ ಪಕ್ಷವೇ ಬಿಜೆಪಿ ಕಡೆ ಎಸೆದರೆ ಆ ಪಕ್ಷಕ್ಕೂ ಒಳ್ಳೆಯದು. ಇದಕ್ಕೆ ಕಾರಣ ಇದೆ. `ಉಳಿದವರು ಏನೇ ಹೇಳಲಿ  `ಜನತಾ ನ್ಯಾಯಾಲಯ~ ತನ್ನನ್ನು ನಿರ್ದೋಷಿ ಎಂದು ಸಾರಿದೆ~ ಎಂದು ಅನೇಕ ಬಾರಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಈ ನಿರಪರಾಧಿತನದ ಸರ್ಟಿಫಿಕೇಟನ್ನು  ಅವರು ಎದೆ ಮೇಲೆ ಹಚ್ಚಿಕೊಳ್ಳಲು ಗುಜರಾತ್ ನರಮೇಧದ ನಂತರ ಆ ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಚುನಾವಣೆಗಳು ಹಾಗೂ ಎರಡು ಲೋಕಸಭಾ ಚುನಾವಣೆಗಳಲ್ಲಿನ ಗೆಲುವು ಕಾರಣ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮೂಲಕವೇ  ಒಂದು ಪಕ್ಷ ಇಲ್ಲವೇ ಒಬ್ಬ ನಾಯಕನ ಭವಿಷ್ಯ ನಿರ್ಧಾರವಾಗುವುದು.
2002ರ ವಿಧಾನಸಭಾ ಚುನಾವಣೆಯ ಸಮೀಕ್ಷೆಗಾಗಿ ಗುಜರಾತ್ ರಾಜ್ಯದಲ್ಲಿ ನಾನು ಪ್ರವಾಸ ಮಾಡಿದ್ದೆ. ಒಂಬತ್ತು ತಿಂಗಳು ಮೊದಲು ಅದೇ ರಾಜ್ಯದಲ್ಲಿ ನಡೆದ ಕೋಮುಗಲಭೆಯ ಪ್ರತ್ಯಕ್ಷ ವರದಿಗೆಂದು ಹೋಗಿದ್ದ  ನಾನು ಕೋಮುವಾದದ ಕರಾಳ ಮುಖಗಳನ್ನು ಕಣ್ಣಾರೆ ನೋಡಿದ್ದ ಕಾರಣ  ಮೋದಿ ಒಂದು ಬಾರಿ ಸೋಲಬೇಕಿತ್ತು ಎಂದು ನನ್ನ ಒಳಮನಸ್ಸು ಹಾರೈಸುತ್ತಿತ್ತು.
ಆದರೆ ಆ ರಾಜ್ಯವನ್ನು ಹತ್ತು ದಿನಗಳ ಕಾಲ ಸುತ್ತಾಡಿದ ನಂತರ ನರೇಂದ್ರ ಮೋದಿ ಗೆಲುವು ಖಚಿತ ಎಂದು ಅರಿವಾಗಿತ್ತು. (ಹಾಗೆಯೇ ವರದಿಯನ್ನೂ ಮಾಡಿದ್ದೆ). 2002ರ ನಂತರ ನಡೆದಿರುವ ಚುನಾವಣೆಗಳಲ್ಲಿ ನರೇಂದ್ರ ಮೋದಿ ಗೆಲ್ಲಲು ಕಾರಣಗಳನ್ನು ನಾವು ಹುಡುಕಿ ತೆಗೆಯಬಹುದು.
ಆದರೆ ಮೋದಿ ಮೊದಲು ಎದುರಿಸಿದ ಚುನಾವಣೆಯ ಕಾಲದಲ್ಲಿ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರೋಪಗಳು ಮಾತ್ರವಲ್ಲ, ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನದಿಂದ ಹಿಡಿದು ಕೇಶುಭಾಯಿ ಪಟೇಲ್ ಬೆಂಬಲಿಗರ ವಿರೋಧದ ವರೆಗೆ ಎಲ್ಲವೂ ಮೋದಿ ವಿರುದ್ಧವೇ ಇದ್ದವು.

ಆದರೆ ಎಲ್ಲರ ಬಾಯಿ ಮುಚ್ಚಿಸುವ ರೀತಿಯಲ್ಲಿ ಮೋದಿ ಗೆಲುವು ಸಾಧಿಸಿದ್ದರು. ದೂರದಲ್ಲಿ ನಿಂತು ನೋಡುವವರಿಗೆ ಜನರ ಆಯ್ಕೆ ತಪ್ಪು ಎಂದು ಅನಿಸಬಹುದು. ಅಂತಿಮವಾಗಿ ಜನಾದೇಶಕ್ಕೆ ಎಲ್ಲರೂ ತಲೆಬಾಗಲೇಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ನಿಯಮ.
`ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿ~ ಎಂದು ಸವಾಲು ಹಾಕುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯೇ ಎನ್ನುವುದು ಈಗಿನ ಮೊದಲ ಪ್ರಶ್ನೆ. ಈ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆನ್ನುವುದು ಹೆಚ್ಚು ಕಡಿಮೆ ತೀರ್ಮಾನವಾಗಿದೆ.
ರಾಹುಲ್‌ಗಾಂಧಿಗೆ ಮನಸ್ಸಿದೆಯೋ, ಇಲ್ಲವೋ ಗೊತ್ತಿಲ್ಲ, ಅದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಯುವ ನಾಯಕನನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಕಾಂಗ್ರೆಸ್‌ಪಕ್ಷಕ್ಕೆ ಅನಿವಾರ‌್ಯವಾಗಿದೆ.
ಮನಮೋಹನ್‌ಸಿಂಗ್ ಈ ಲೋಕಸಭೆಯ ಅವಧಿ ಮುಗಿಯುವ ವರೆಗೆ ಪ್ರಧಾನಿ ಪಟ್ಟದಲ್ಲಿ ಉಳಿದರೆ ಹೆಚ್ಚು. ಮುಂದಿನ ಚುನಾವಣೆಯಲ್ಲಿ ಅವರು ಖಂಡಿತ ಪ್ರಧಾನಿ ಅಭ್ಯರ್ಥಿ ಆಗಲಾರರು.
ಎರಡನೇ ಸಾಲಿನಲ್ಲಿರುವ ಪ್ರಣಬ್ ಮುಖರ್ಜಿ ಅವರಿಗೆ ವಯಸ್ಸೂ ಆಗಿದೆ, ಅವರ ಮೇಲೆ ನೆಹರೂ ಕುಟುಂಬಕ್ಕೆ ವಿಶ್ವಾಸವೂ ಕಡಿಮೆ. ಪಿ.ಚಿದಂಬರಂ ಒಬ್ಬ ವಿಫಲ ನಾಯಕ. ಎ.ಕೆ.ಆಂಟನಿ ಅವರಿಗೆ ಅವರ ಧರ್ಮವೇ ಅಡ್ಡಿಯಾಗಬಹುದು. ಆದ್ದರಿಂದ ರಾಹುಲ್ ಗಾಂಧಿ ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಗತಿ ಇಲ್ಲ.
ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ದೊಡ್ಡ ಅನುಕೂಲತೆಯೆಂದರೆ ರಾಹುಲ್ ಗಾಂಧಿಯ ಯುವ ನಾಯಕತ್ವ ಎಂದು ಅವರ ಪಕ್ಷದವರು ಮಾತ್ರವಲ್ಲ ವಿರೋಧಪಕ್ಷಗಳು ಕೂಡಾ ಹೇಳುತ್ತಿದ್ದವು.
ಬಹುಸಂಖ್ಯೆಯ ಮತದಾರರು ಯುವಜನರೇ ಆಗಿರುವುದು ಇದಕ್ಕೆ ಒಂದು ಕಾರಣವಾದರೆ, ವಿರೋಧಪಕ್ಷಗಳಲ್ಲಿ ಈ ವಯಸ್ಸಿನ ಯುವನಾಯಕರು ಇಲ್ಲದಿರುವುದು ಇನ್ನೊಂದು ಕಾರಣ.
ಆದರೆ ನರೇಂದ್ರ ಮೋದಿಯವರಂತಹ ಒಬ್ಬ ಆಕ್ರಮಣಕಾರಿ ನಾಯಕನನ್ನು ಎದುರಿಸಲು ಈ ಅನುಕೂಲತೆಯಷ್ಟೇ ಸಾಕಾದೀತೇ? ಕಳೆದ ಏಳು ವರ್ಷಗಳಿಂದ ಲೋಕಸಭಾ ಸದಸ್ಯರಾಗಿರುವ ರಾಹುಲ್ ಗಾಂಧಿ ಒದಗಿಬಂದ ಅವಕಾಶವನ್ನು ಬಳಸಿಕೊಂಡು ನಾಯಕನಾಗುವ ಅರ್ಹತೆಯನ್ನು ಸಾಬೀತುಪಡಿಸುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ.
ಒಂದೆರಡು ಬಾರಿ ಲಿಖಿತ ಪ್ರತಿ ಕೈಯಲ್ಲಿಟ್ಟುಕೊಂಡು ಮಾಡಿದ ಭಾಷಣಗಳನ್ನು ಹೊರತುಪಡಿಸಿದರೆ ಸದನದಲ್ಲಿ ನಡೆದ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಸಾಧಿಸಿದ್ದ ಗೆಲುವಿನ ಕಿರೀಟ ಕೂಡಾ ಬಿಹಾರ ಚುನಾವಣೆಯಲ್ಲಿ ಬಿದ್ದುಹೋಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ತನ್ನ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಪಕ್ಷದ ನಾಯಕತ್ವವನ್ನು ತಾತ್ಕಾಲಿಕವಾಗಿ ಮಗನಿಗೆ ಬಿಟ್ಟುಕೊಟ್ಟಿದ್ದರು. ಇದನ್ನು ಬಳಸಿಕೊಳ್ಳುವ ಅವಕಾಶ ಕೂಡಾ ಅಣ್ಣಾಹಜಾರೆ ಚಳವಳಿಯಿಂದಾಗಿ ನಿರ್ಮಾಣವಾಗಿದ್ದ ರಾಜಕೀಯ ಬಿಕ್ಕಟ್ಟಿನ ಮೂಲಕ ಒದಗಿ ಬಂದಿತ್ತು.
ರಾಹುಲ್ ಪ್ರವೇಶಿಸಿ ಆಟವನ್ನೇ ಬದಲಿಸಲಿದ್ದಾರೆ ಎಂದು ಕಾಂಗ್ರೆಸ್ ಭಟ್ಟಂಗಿಗಳು ಹೇಳುತ್ತಲೇ ಇದ್ದರು, ಆದರೆ ಅವರು ಆಟದ ಅಂಗಳವನ್ನು ಪ್ರವೇಶಿಸಲೇ ಇಲ್ಲ. ಲಿಖಿತ ಭಾಷಣವೊಂದನ್ನು ಲೋಕಸಭೆಯಲ್ಲಿ ಓದಿ ಕೈತೊಳೆದುಕೊಂಡು ಬಿಟ್ಟರು. ನರೇಂದ್ರಮೋದಿ ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಬಿಂಬಿಸಿದರೆ ಕಾಂಗ್ರೆಸ್ ಪಾಲಿನ ದೊಡ್ಡ ಸಮಸ್ಯೆ ಮೋದಿ ಅಲ್ಲ, ರಾಹುಲ್ ಗಾಂಧಿ.
ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಎಂದು ಕಾಂಗ್ರೆಸ್ ಪಕ್ಷ ಸವಾಲು ಹಾಕಿದರೆ ಬಿಜೆಪಿ ಅದನ್ನು ಸ್ವೀಕರಿಸಲು ಸಿದ್ಧ ಇದೆಯೇ ಎನ್ನುವುದು ಎರಡನೇ ಪ್ರಶ್ನೆ. ಮೋದಿ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಪಕ್ಷ ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ.
ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರ ವಿರೋಧಿ ಯಾತ್ರೆ ನಡೆಸುವುದಾಗಿ ಸ್ವಇಚ್ಛೆಯ ಹೇಳಿಕೆ ನೀಡಿ ಅವರ ಪಕ್ಷದ ನಾಯಕರನ್ನೇ ಚಕಿತಗೊಳಿಸಿದ್ದರು.
ತಾನು ಪ್ರಧಾನಿ ಪಟ್ಟದ ಅಭ್ಯರ್ಥಿ ಎಂಬ ಸೂಚನೆಯನ್ನು ನೀಡುವುದಕ್ಕಾಗಿಯೇ ಈ ಯಾತ್ರೆಯ ಘೋಷಣೆ ಮಾಡಿದ್ದಾರೆಂಬ ವ್ಯಾಖ್ಯಾನಗಳು ಆ ದಿನದಿಂದಲೇ ಕೇಳಿಬರುತ್ತಿವೆ.
ಇವೆಲ್ಲವೂ ನಡೆಯುತ್ತಿರುವಾಗ ನರೇಂದ್ರ ಮೋದಿ ಅವರು ದಿಢೀರನೆ `ಸದ್ಭಾವನಾ ಉಪವಾಸ~ ಕಾರ‌್ಯಕ್ರಮ ಹಮ್ಮಿಕೊಂಡಿದ್ದಾರೆ. ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಈ ಉಪವಾಸಕ್ಕೆ ಪ್ರೇರಣೆ ಎಂದು ಹೇಳಿಕೊಂಡರೂ ಅದರಲ್ಲಿರುವ ಗುಪ್ತ ಕಾರ‌್ಯಸೂಚಿಯನ್ನು ನಿರ್ಲಕ್ಷಿಸಲಾಗದು.

ಮೂರು ದಿನಗಳ ಹಿಂದೆ ಅಡ್ವಾಣಿ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬಹುದೆಂದು ಹೇಳುತ್ತಿದ್ದ ಮಾಧ್ಯಮಗಳು ಆಗಲೇ ಆ ಸ್ಥಾನದಲ್ಲಿ ನರೇಂದ್ರ ಮೋದಿ ಅವರನ್ನು ಕೂರಿಸಿ ಚರ್ಚೆ ನಡೆಸುತ್ತಿವೆ.
ಇವೆಲ್ಲವೂ ಅನಿರೀಕ್ಷಿತ ಬೆಳವಣಿಗೆಗಳಂತೆ ಮೇಲ್ನೋಟಕ್ಕೆ ಕಂಡರೂ ಇದರ ಆಳದಲ್ಲಿ ಒಂದು ವ್ಯವಸ್ಥಿತವಾದ ಪೂರ್ವಯೋಜಿತ ಕಾರ‌್ಯತಂತ್ರ ಇರುವುದನ್ನು ಅಲ್ಲಗಳೆಯಲಾಗದು. ಇದು ಎಲ್ಲರಿಗಿಂತ ಮೊದಲು ಅಡ್ವಾಣಿಯವರಿಗೆ ಗೊತ್ತಾಗಿದೆ. ಅದಕ್ಕಾಗಿ ಅವರು ಮೋದಿ ಅವರಿಗೆ ಬೆಂಬಲ ಘೋಷಿಸಲು ಹಾರಿ ಹೋಗಿದ್ದಾರೆ.
ಇಷ್ಟು ಮಾತ್ರಕ್ಕೆ ಬಿಜೆಪಿಯಲ್ಲಿ ಮೋದಿ ಒಮ್ಮತದ ನಾಯಕ ಎಂದು ಹೇಳಲಾಗದು, ಯಾಕೆಂದರೆ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅಲ್ಲಿಗೆ ಹೋಗಿಲ್ಲ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಗೈರುಹಾಜರಿ ಕೂಡಾ ಎದ್ದು ಕಾಣುವಂತಿದೆ. ಬಿಜೆಪಿಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ.

ನರೇಂದ್ರಮೋದಿ ಅವರನ್ನು ಒಮ್ಮತದಿಂದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಮಾತ್ರಕ್ಕೆ ಅವರು ಆ ಸ್ಥಾನದಲ್ಲಿ ಹೋಗಿ ಕೂರಲು ಸಾಧ್ಯವಾಗಲಾರದು. ಅದು ಸಾಧ್ಯವಾಗಬೇಕಾದರೆ ಬಹುಮತ ಸಾಬೀತುಪಡಿಸಲು  ಅಗತ್ಯವಾದ 272 ಲೋಕಸಭಾ ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಬೇಕಾಗುತ್ತದೆ.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಕನಿಷ್ಠ ಅಧಿಕಾರದ ಕನಸನ್ನಾದರೂ ಕಾಣಬೇಕಾದರೆ ಮೈತ್ರಿಕೂಟವನ್ನು ಕಟ್ಟಿಕೊಳ್ಳುವುದು ಬಿಜೆಪಿಗೆ ಅನಿವಾರ‌್ಯ. ಈಗ ಇರುವ ಮಿತ್ರಪಕ್ಷಗಳ ಜತೆಯಲ್ಲಿ ಹೊಸಮಿತ್ರರ ಕೈ ಹಿಡಿಯಬೇಕಾಗುತ್ತದೆ.
ಅಂತಹ ಸಂದರ್ಭದಲ್ಲಿ ಬಿಜೆಪಿ ಪಾಲಿನ ದೊಡ್ಡ ಸಮಸ್ಯೆ ನರೇಂದ್ರ ಮೋದಿ ಆಗಬಲ್ಲರು. ಚಂದ್ರಬಾಬು ನಾಯ್ಡು, ರಾಮ್‌ವಿಲಾಸ್ ಪಾಸ್ವಾನ್ ಮೊದಲಾದವರು ಬಿಜೆಪಿ ಸಖ್ಯ ಮುರಿದುಕೊಂಡದ್ದು ಮೋದಿಯವರ ಕಾರಣದಿಂದಲ್ಲವೇ?
ನರೇಂದ್ರ ಮೋದಿ ಅವರು ಎಷ್ಟು ದಿನಗಳ ಉಪವಾಸ ಮಾಡಿದರೂ, ಮುಸ್ಲಿಂ ನಾಯಕರನ್ನು ಕರೆಸಿ ಅಪ್ಪಿಮುದ್ದಾಡಿದರೂ ದೇಶದ ಮುಸ್ಲಿಮರು ಅವರನ್ನು ಒಪ್ಪಿಕೊಳ್ಳುವುದು ಕಷ್ಟ. ಇದರಿಂದಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಯಾವ ಪಕ್ಷ ಕೂಡಾ ಮೋದಿ ನಾಯಕತ್ವದ ಬಿಜೆಪಿ ಜತೆ ಕೈಜೋಡಿಸಲು ಮುಂದೆ ಬರಲಾರದು.
ಬಿಹಾರದ ಮುಖ್ಯಮಂತ್ರಿ ನಿತೀಶ್ ಹಲವಾರು ಬಾರಿ ಈ ಸಂದೇಶ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಶಿವಸೇನೆ ಮತ್ತು ಅಕಾಲಿದಳಗಳಷ್ಟೇ ಎನ್‌ಡಿಎ ಜತೆ ಉಳಿದುಕೊಳ್ಳಬಹುದು.
ಈ ಮಿತ್ರರ ನೆರವಿನಿಂದಲೇ ಬಿಜೆಪಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗದು. ಈ ದೃಷ್ಟಿಯಿಂದ ನರೇಂದ್ರಮೋದಿ ಅವರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇಂತಹವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದು  ಅಪಾಯಕಾರಿ ಜೂಜಾಟ.

ಅದಕ್ಕೆ ಬಿಜೆಪಿ ಸಿದ್ಧ ಇದೆಯೇ? ಕಾಂಗ್ರೆಸ್ ಕೇಳಬೇಕಾಗಿರುವುದು ಈ ಪ್ರಶ್ನೆಯನ್ನು. ಆ ಧೈರ್ಯ ಅದಕ್ಕೂ ಇಲ್ಲ. ಅದಕ್ಕಾಗಿ ಸುಮ್ಮನೆ ಮರೆಯಲ್ಲಿ ನಿಂತು ಬೊಬ್ಬೆ ಹಾಕುತ್ತಿದೆ.

Monday, February 28, 2011

ಗೋಧ್ರಾ ಹತ್ಯಾಕಾಂಡದ ತೀರ್ಪು ಹುಟ್ಟಿಸಿರುವ ಪ್ರಶ್ನೆಗಳು

ಗೋಧ್ರಾ ರೈಲು ಹತ್ಯಾಕಾಂಡದ ಬಗ್ಗೆ ಗುಜರಾತ್‌ನ ವಿಶೇಷ ತ್ವರಿತ ನ್ಯಾಯಾಲಯ ನೀಡಿರುವ ತೀರ್ಪನ್ನು ಹೇಗೆಂದು ಅರ್ಥಮಾಡಿಕೊಳ್ಳುವುದು. ಅಪರಾಧಿಗಳಿಗೆ ಶಿಕ್ಷೆಯಾಯಿತೆಂದೇ? ನಿರಪರಾಧಿಗಳು ಬಿಡುಗಡೆಯಾದರೆಂದೇ? ಕೀವು ತುಂಬಿದ ವ್ರಣದಂತೆ ಕಳೆದ ಒಂಬತ್ತು ವರ್ಷಗಳಿಂದ ಒಳಗಿಂದೊಳಗೆ ಹಿಂದೂ- ಮುಸ್ಲಿಂ ಸಮುದಾಯಗಳೆರಡನ್ನೂ ಹಿಂಸಿಸುತ್ತಿದ್ದ  ಒಂದು ಗಾಯವಾದರೂ ಕೊನೆಗೂ ಗುಣವಾಯಿತೆಂದೇ? ಸಾಮಾನ್ಯವಾಗಿ ನ್ಯಾಯಾಲಯದ ತೀರ್ಪುಗಳು ಪ್ರಕರಣವೊಂದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರದಂತಿರುತ್ತವೆ.
ಆದರೆ ಗುಜರಾತ್ ವಿಶೇಷ ತ್ವರಿತ ನ್ಯಾಯಾಲಯದ ತೀರ್ಪಿನ ನಂತರವೂ ಬಹಳಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ. ಇದಕ್ಕಿಂತಲೂ ಮುಖ್ಯವಾಗಿ ಹಿಂದೆ ಸುಪ್ರೀಂ ಕೋರ್ಟಿನಿಂದಲೂ ಟೀಕೆಗೊಳಗಾಗಿದ್ದ ಮತ್ತು ‘ಪೂರ್ವಗ್ರಹಪೀಡಿತ, ರಾಜಕೀಯ ಪ್ರೇರಿತ ಮತ್ತು ಅಡ್ಡಕಸುಬಿ’ ಎಂಬ ಆರೋಪ ಹೊತ್ತಿರುವ ಗುಜರಾತ್ ಪೊಲೀಸ್ ಇಲಾಖೆಯ ಬಗ್ಗೆ ಇನ್ನಷ್ಟು ಸಂಶಯ ಮೂಡುವಂತಾಗಿದೆ.
ಕರಸೇವಕರನ್ನೊಳಗೊಂಡಂತೆ 59 ಪ್ರಯಾಣಿಕರ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಗಿಂತಲೂ ಉಗ್ರವಾದ ಶಿಕ್ಷೆಯೇನಾದರೂ ಇದ್ದರೆ ಅದು ಕೂಡಾ ಕಡಿಮೆಯೇ. ಆದರೆ ಈಗ ಅಪರಾಧಿಗಳೆನಿಸಿಕೊಂಡವರೆಲ್ಲರೂ ತಪ್ಪಿತಸ್ಥರೇ? ಅಪರಾಧಿಗಳೆಲ್ಲರಿಗೂ ಶಿಕ್ಷೆಯಾಗಿದೆಯೇ? ಬಿಡುಗಡೆಯಾಗಿರುವವರೆಲ್ಲ ನಿರಪರಾಧಿಗಳೇ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು  ಕಾರಣಗಳಿವೆ.
ಮೊದಲನೆಯದಾಗಿ ಗುಜರಾತ್ ಪೊಲೀಸರು ಪ್ರಾರಂಭದಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರಕಾರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದ ಆರೋಪಿಗಳ ಸಂಖ್ಯೆ 135, ಅವರಲ್ಲಿ 22 ಮಂದಿ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ. ಒಂದಿಬ್ಬರು ಸತ್ತಿದ್ದಾರೆ. ಇನ್ನು ಒಂದಷ್ಟು ಮಂದಿಯನ್ನು ಹಿಂದೆಯೇ ಬಿಡುಗಡೆ ಮಾಡಲಾಗಿದೆ.
ಉಳಿದವರಲ್ಲಿ 64 ಮಂದಿ 8-9 ವರ್ಷ ಜೈಲಲ್ಲಿದ್ದು ಈಗ ಖುಲಾಸೆಗೊಂಡಿದ್ದಾರೆ. ಕೊನೆಗೆ ಅಪರಾಧಿ ಸ್ಥಾನದಲ್ಲಿ ಉಳಿದುಕೊಂಡಿದ್ದು ಕೇವಲ 31 ಮಂದಿ. ಈ ಎಲ್ಲ ಆರೋಪಿಗಳ ವಿರುದ್ಧ ಪೊಲೀಸರು ಪ್ರಾರಂಭದಲ್ಲಿ ಪೋಟಾ ಕಾಯಿದೆಯಡಿಯೂ ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ ಮೂರು ವರ್ಷಗಳ ನಂತರ ಅವುಗಳನ್ನು ಪರಿಶೀಲಿಸಿದ ಕೇಂದ್ರ ಪರಿಶೀಲನಾ ಸಮಿತಿ, ಅದರಲ್ಲಿನ ಯಾವ ಆರೋಪವೂ ಪೋಟಾ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ವರದಿ ನೀಡಿದ್ದ ಕಾರಣ ಅವುಗಳನ್ನು ಕೈಬಿಡಲಾಗಿತ್ತು.
ಸದ್ಯಕ್ಕೆ ಖುಲಾಸೆಗೊಂಡ 64 ಮಂದಿ ತಮಗೆ ಸಿಕ್ಕ ಹೊಸ ಸ್ವಾತಂತ್ರ್ಯದ ಸಂಭ್ರಮದಲ್ಲಿರುವುದು ನಿಜ (ಎರಡೂ ಕಡೆಯವರೂ ಮೇಲ್ಮನವಿ ಸಲ್ಲಿಸುವುದು ಖಾತರಿಯಾಗಿರುವ ಕಾರಣ ಈ ಸಂತಸ ಕೂಡಾ  ಶಾಶ್ವತವಾದುದೇನಲ್ಲ). ಆದರೆ ಒಬ್ಬ ವ್ಯಕ್ತಿಯ ಅಪರಾಧ- ನಿರಪರಾಧಗಳನ್ನು ಸಾಬೀತುಪಡಿಸಲು ಒಂಬತ್ತು ವರ್ಷಗಳು ಬೇಕೇ? ಅದೂ ತನ್ನ ಉತ್ತಮ ಆಡಳಿತಕ್ಕಾಗಿ ನಂಬರ್ ಒನ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವವರ ರಾಜ್ಯದಲ್ಲಿ. ಗುಜರಾತ್ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಸಾಕ್ಷಾತ್ ಸುಪ್ರೀಂ ಕೋರ್ಟ್  ಅಪನಂಬಿಕೆ ವ್ಯಕ್ತಪಡಿಸಿದೆ. ನಿವೃತ್ತರಾದ ಹಿರಿಯ ನ್ಯಾಯಮೂರ್ತಿಗಳ ನೇತೃತ್ವದ ಮಾನವ ಹಕ್ಕುಗಳ ಸಂಘಟನೆಗಳು ಕೂಡಾ ಅಲ್ಲಿನ ಪೊಲೀಸರ ವಿರುದ್ದ ‘ಆರೋಪಪಟ್ಟಿ’ ಸಲ್ಲಿಸಿವೆ. ಗೋಧ್ರಾ ಹತ್ಯಾಕಾಂಡದ ಆರೋಪಿಗಳಲ್ಲಿ 45 ಮಂದಿ ಈ ತನಿಖೆಯ ಬಗ್ಗೆ ಲಿಖಿತ ಹೇಳಿಕೆಯಲ್ಲಿ  ಸಂಶಯ ವ್ಯಕ್ತಪಡಿಸಿದ್ದರು. ತನಿಖೆಯೇ ಹೀಗಾದರೆ?
ಎರಡನೆಯದಾಗಿ ಪ್ರಮುಖ ಆರೋಪಿಗಳಾದ ಮೌಲ್ವಿ ಸಯೀದ್ ಉಮರ್ಜಿ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ಲಾ ಕಲೋಟಾ ಅವರನ್ನು ಖುಲಾಸೆಗೊಳಿಸಲಾಗಿದೆ. ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಂಧಿತ 94 ಆರೋಪಿಗಳಲ್ಲಿ ಅಲ್ಲಿನ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಇದ್ದದ್ದು ಇವರಿಬ್ಬರೇ ಎನ್ನುವುದು ಗಮನಾರ್ಹ. ಉಳಿದವರಲ್ಲಿ ಹೆಚ್ಚಿನವರು ಸ್ಥಳೀಯ ಪೊಲೀಸ್‌ಠಾಣೆಯಲ್ಲಿ ಹಳೆಯ ಕ್ರಿಮಿನಲ್ ಚಟುವಟಿಕೆಯ ದಾಖಲೆ ಹೊಂದಿದ್ದವರು.
ಸಾಮಾನ್ಯವಾಗಿ ಇಂತಹವರು ವೈಯುಕ್ತಿಕ ಮಟ್ಟದ ದುಷ್ಕೃತ್ಯಗಳನ್ನು ಏಕಾಂಗಿಗಳಾಗಿ ಎಸಗಬಲ್ಲರು. ಆದರೆ ಗೋಧ್ರಾಹತ್ಯಾಕಾಂಡದಂತಹ ದೊಡ್ಡಮಟ್ಟದ ದುಷ್ಕೃತ್ಯವನ್ನು ನಾಯಕನಿಲ್ಲದೆ ಇಂತಹ ಅಡ್ಡಕಸುಬಿ ದುಷ್ಕರ್ಮಿಗಳು ನಡೆಸಲು ಸಾಧ್ಯವೇ? ಹಾಗಿದ್ದರೆ ಅವರಿಗೊಬ್ಬ ಗ್ಯಾಂಗ್ ಲೀಡರ್ ಇರಬೇಕಲ್ಲ? ಅವನು ಯಾರು? ಎಲ್ಲಿದ್ದಾನೆ? ಕಳೆದ ಒಂಬತ್ತು ವರ್ಷಗಳಿಂದ ಈ ಪ್ರಶ್ನೆಗೆ ಉತ್ತರ ಹುಡುಕಲು ಗುಜರಾತ್ ಪೊಲೀಸರಿಗೆ ಸಾಧ್ಯವಾಗಿಲ್ಲ.
ಗೋಧ್ರಾ ಘಟನೆಯ ಒಂದು ವರ್ಷದ ನಂತರ ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಬಂಧಿಸಿದಾಗ ಗೋಧ್ರಾ ಮಾತ್ರವಲ್ಲ, ಇಡೀ ಗುಜರಾತ್‌ನ ಮುಸ್ಲಿಮರು ಆಘಾತಕ್ಕೀಡಾಗಿದ್ದರು. ವೃತ್ತಿಯಲ್ಲಿ ಮರದ ವ್ಯಾಪಾರಿಯಾಗಿರುವ ಉಮರ್ಜಿ ಗೋಧ್ರಾ ಪ್ರದೇಶದ ದೇವ್‌ಬಂದಿ- ತಬ್ಲೀಗ್ ಜಮಾತ್ ಚಳವಳಿಯ ಪ್ರಮುಖ ನಾಯಕ. ಆರೋಪಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಚಿ ಮುಸ್ಲಿಮರು ಈ ಸಂಘಟನೆಯ ಬೆಂಬಲಿಗರು. ಬಂಧಿತ ಆರೋಪಿಗಳಲ್ಲಿಯೂ ಬಹಳಷ್ಟು ಮಂದಿ ಈ ಸಂಘಟನೆಯ ಜತೆಯಲ್ಲಿ ಸಂಪರ್ಕ ಹೊಂದಿದ್ದವರು. ಈ ಸಂಬಂಧದಿಂದಾಗಿಯೇ ಉಮರ್ಜಿ ದೇಶ- ವಿದೇಶಗಳಿಂದ ಹಣ ಸಂಗ್ರಹಿಸಿ  ಗೋಧ್ರಾ ಘಟನೆಯ ಆರೋಪಿಗಳ ಕುಟುಂಬಕ್ಕೆ ನೀಡುತ್ತಿದ್ದರು. ಗೋಧ್ರಾ ಘಟನೆಯ ನಂತರ ಅಲ್ಲಿ ಶಾಂತಿ ಸ್ಥಾಪನೆಗೆ ಅವರು ಓಡಾಡಿದ್ದರು, ಮುಖ್ಯಮಂತ್ರಿ ನರೇಂದ್ರಮೋದಿ ಗೋಧ್ರಾಕ್ಕೆ ಭೇಟಿ ನೀಡಿದಾಗಲೂ ಜತೆಯಲ್ಲಿದ್ದರು.
ಇಂತಹ ಉಮರ್ಜಿ ಒಂದು ಹೀನಕೃತ್ಯದ ಹಿಂದಿನ ಸಂಚುಕೋರ ಎಂದು ಪೊಲೀಸರು ಹೇಳಿದಾಗ ಗುಜರಾತ್ ಬೆಚ್ಚಿಬಿದ್ದಿತ್ತು. ತನಿಖೆಯ ಕಾಲದಲ್ಲಿ ಪೊಲೀಸರು ಸೋರಿಬಿಡುತ್ತಿದ್ದ ಮಾಹಿತಿ ಆಧರಿಸಿ ಪತ್ರಿಕೆಗಳು ಮಾಡುವ ವರದಿಗಳು ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಭಯೋತ್ಪಾದಕನಂತೆ ಚಿತ್ರಿಸಿತ್ತು. ತಾಲಿಬಾನ್ ನಾಯಕ ಉಮರ್ ಅಬ್ದುಲ್ಲಾ ಜತೆ ಉಮರ್ಜಿ ಸಂಪರ್ಕ ಹೊಂದಿದ್ದರೆಂಬ ವದಂತಿಯೂ ಹರಡಿತ್ತು. ಇವರ ಬಂಧನಕ್ಕೆ ಕಾರಣವಾಗಿದ್ದು ಬಂಧಿತ ಜಬೀರ್ ಬಿನಾಯಮಿನ್ ಬೆಹೆರಾ ತಪ್ಪೊಪ್ಪಿಗೆಯಲ್ಲಿ ನೀಡಿದ್ದ ಮಾಹಿತಿ.
‘ಗೋಧ್ರಾ ಹತ್ಯಾಕಾಂಡದ ಹಿಂದಿನ ದಿನ 2002ರ ಫೆಬ್ರುವರಿ 26ರಂದು ರಾತ್ರಿ 9.30 ಗಂಟೆಗೆ ರೈಲ್ವೆನಿಲ್ದಾಣದ ಪಕ್ಕದಲ್ಲಿಯೇ ಇರುವ ಅಮನ್ ಅತಿಥಿಗೃಹದಲ್ಲಿ ಸಂಚಿನ ರೂವಾರಿಗಳು ಸೇರಿದ್ದರು. ಅಲ್ಲಿಗೆ ತಮ್ಮ ಸಹಚರರನ್ನು ಕಳುಹಿಸಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಯನ್ನೇ ಗುರಿಯಾಗಿಸಿಕೊಂಡು ಬೆಂಕಿ ಹಚ್ಚುವಂತೆ ತಿಳಿಸಿದ್ದರು’ ಎಂದು ಆ ಸಭೆಯಲ್ಲಿದ್ದ ಬೆಹೆರಾ ಪೊಲೀಸರಿಗೆ ತಿಳಿಸಿದ್ದೇ ಉಮರ್ಜಿ ಬಂಧನಕ್ಕೆ ಕಾರಣ. ಈಗ ನ್ಯಾಯಾಲಯ ಮುಖ್ಯ ಆರೋಪಿಯಾಗಿದ್ದ ಉಮರ್ಜಿ ಅವರನ್ನು ಆರೋಪದಿಂದ ಖುಲಾಸೆಗೊಳಿಸಿದೆ. ಆದರೆ ‘ಗೋಧ್ರಾ ಹತ್ಯಾಕಾಂಡ ಅಪಘಾತ ಅಲ್ಲ, ಪೂರ್ವಯೋಜಿತ ಸಂಚು’ ಎಂದು ತೀರ್ಪು ನೀಡಿದೆ. ಮುಖ್ಯ ಸಂಚುಕೋರನೆಂಬ ಆರೋಪ ಹೊತ್ತ ಉಮರ್ಜಿಯ ಖುಲಾಸೆಯಿಂದಾಗಿ ಗೋಧ್ರಾ ಹತ್ಯಾಕಾಂಡ ಸಂಚಿನ ಫಲ ಎನ್ನುವುದಕ್ಕೆ ಇದ್ದ ಪ್ರಬಲ ಸಮರ್ಥನೆಯೊಂದು ದುರ್ಬಲಗೊಂಡಂತಾಗಲಿಲ್ಲವೇ?
ಮೂರನೆಯದಾಗಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ನಡೆದ ಮೂರು ಬಗೆಯ ತನಿಖೆ ಸೃಷ್ಟಿಸಿರುವ ಗೊಂದಲ. ಅಪರಾಧಗಳನ್ನು ಮುಚ್ಚಿಹಾಕಲು ಸ್ವತಂತ್ರ ಭಾರತದ ರಾಜಕಾರಣಿಗಳು ಕಂಡುಕೊಂಡ ಸುಲಭದ ಉಪಾಯ ಎಂದರೆ ಒಂದೇ ಪ್ರಕರಣದ ಬಗ್ಗೆ ಹಲವು ಬಗೆಯ ತನಿಖೆಗಳಿಗೆ ಅವಕಾಶ ಮಾಡಿಕೊಡುವುದು (ಇತ್ತೀಚಿನ ಉದಾಹರಣೆ 2ಜಿ ತರಂಗಾಂತರ ಹಗರಣ). ಈ ತನಿಖಾ ಸಂಸ್ಥೆಗಳು ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವ ವರದಿಗಳನ್ನು ನೀಡಿ ಗೊಂದಲದ ವಾತಾವರಣವನ್ನು ನಿರ್ಮಿಸುತ್ತದೆ. ಅಷ್ಟರಲ್ಲಿ ಅನ್ಯಾಯಕ್ಕೀಡಾದವರಲ್ಲಿ ದಣಿವು ಕಾಣಿಸಿಕೊಳ್ಳುವುದರಿಂದ ಅವರಲ್ಲಿ ಹೋರಾಟದ ಉತ್ಸಾಹ ಉಳಿದಿರುವುದಿಲ್ಲ, ಸಾಮಾನ್ಯ ಜನತೆಯ ನೆನೆಪಿನ ಶಕ್ತಿಯೂ ಕುಂದಿರುತ್ತದೆ. ‘ಆದದ್ದು ಆಗಿಹೋಯಿತು. ಹಳೆಯದನ್ನು ಕೆದಕುವುದು ಬೇಡ, ಮುಂದಿನ ದಾರಿ ನೋಡುವ’ ಎನ್ನುವ ಬುದ್ಧಿಮಾತುಗಳು ಎಲ್ಲೆಡೆ ಕೇಳತೊಡಗುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ಇವುಗಳಲ್ಲೆದರ ನಡುವೆ ಸತ್ಯ ಎಲ್ಲೋ ಮರೆಯಾಗಿ ಬಿಡುತ್ತದೆ.
ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಗೊಂಡ ಸಿಬಿಐ ಮಾಜಿ ನಿರ್ದೇಶಕ ರಾಘವನ್ ನೇತೃತ್ವದ ವಿಶೇಷ ತನಿಖಾದಳಕ್ಕಿಂತ ಮೊದಲು ಎರಡು ಆಯೋಗಗಳು ಗೋಧ್ರಾ ಹತ್ಯಾಕಾಂಡದ ತನಿಖೆ ನಡೆಸಿದ್ದವು. ಮೊದಲನೆಯದು ಗುಜರಾತ್ ಸರ್ಕಾರವೇ ನೇಮಿಸಿದ್ದ ನ್ಯಾಯಮೂರ್ತಿಗಳಾದ ಜಿ.ಟಿ. ನಾನಾವತಿ ನೇತೃತ್ವದ ತನಿಖಾ ಆಯೋಗ. 2008ರಲ್ಲಿ ವರದಿ ನೀಡಿದ ಈ ಆಯೋಗ ‘ಗೋಧ್ರಾ ಹತ್ಯಾಕಾಂಡ ಒಂದು ಪೂರ್ವನಿಯೋಜಿತ ಸಂಚು, ಅದು ಅಪಘಾತ ಅಲ್ಲ’ ಎಂದು ಹೇಳಿತ್ತು. ಗೋಧ್ರಾ ಘಟನೆಯ ನಂತರ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯ ನಿಯಂತ್ರಣದಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದ ಕರ್ತವ್ಯ ಚ್ಯುತಿ ನಡೆದಿದೆ ಎಂಬ ಆರೋಪವನ್ನು ಕೂಡಾ ನಾನಾವತಿ ಆಯೋಗ ತಳ್ಳಿಹಾಕಿತ್ತು.
ಆದರೆ ನಾನಾವತಿ ಆಯೋಗ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿಯೇ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು  ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ನೇತೃತ್ವದ ತನಿಖಾ ಆಯೋಗವನ್ನು ರಚಿಸಿದ್ದರು. 2005ರಲ್ಲಿ ವರದಿ ನೀಡಿದ ಬ್ಯಾನರ್ಜಿ ಅವರು,  ‘ರೈಲಿಗೆ ಹತ್ತಿಕೊಂಡ ಬೆಂಕಿ ಸಂಚಿನ ಫಲ ಅಲ್ಲ, ಅದೊಂದು ಅಪಘಾತ’ ಎಂದು ಹೇಳಿದ್ದರು. ಆದರೆ ಆ ಆಯೋಗವನ್ನು ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಾಲುಪ್ರಸಾದ್ ರಚಿಸಿದ್ದರು ಎನ್ನುವ ಕಾರಣಕ್ಕೆ ನ್ಯಾಯಮೂರ್ತಿ ಬ್ಯಾನರ್ಜಿ ವರದಿಯನ್ನು ಟೀಕಿಸಿದವರೇ ಹೆಚ್ಚು.
ಆದರೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಇಂತಹದ್ದೊಂದು ದೊಡ್ಡ ದುರಂತದ ಬಗ್ಗೆ ಆ ಕಾಲದ ರೈಲ್ವೆ ಸಚಿವ ನಿತೀಶ್‌ಕುಮಾರ್ ಯಾಕೆ ತನಿಖೆಗೆ ಆದೇಶ ನೀಡಿಲ್ಲ ಎನ್ನುವುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಈ ವಿವಾದಗಳಿಂದಾಗಿ ಕೊನೆಗೆ ಗುಜರಾತ್ ಹೈಕೋರ್ಟ್ ಕೂಡಾ ತೀರ್ಪು ನೀಡಿ ‘ಬ್ಯಾನರ್ಜಿ ಆಯೋಗದ ರಚನೆಯೇ ಸಂವಿಧಾನ ವಿರೋಧಿ’ ಎಂದು ಹೇಳಿತ್ತು. ಈ ಕಾರಣದಿಂದಾಗಿ ಬ್ಯಾನರ್ಜಿ ಆಯೋಗದ ತನಿಖಾ ವರದಿಯನ್ನೂ ಯಾರೂ ಚರ್ಚೆಗೆ ಎತ್ತಿಕೊಳ್ಳದಿದ್ದರೂ, ಅದು ಗೋಧ್ರಾ ಹತ್ಯಾಕಾಂಡದ ಕಾರಣಗಳ ಬಗ್ಗೆ ಒಂದಷ್ಟು ಗೊಂದಲಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಗೋಧ್ರಾ ಹತ್ಯಾಕಾಂಡವನ್ನು ಸಂಚು ಎಂದು ಹೇಳಿದ ವಿಶೇಷ ನ್ಯಾಯಾಲಯದ ತೀರ್ಪು ಒಂದು ರೀತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಪಾಲಿನ ಗೆಲುವು. ಆಶ್ಚರ್ಯವೆಂದರೆ ಮೋದಿ ಅವರು ಈ ಗೆಲುವನ್ನು ಕುಣಿದಾಡಿ ಆಚರಿಸಿದ ಹಾಗೆ ಕಾಣಲಿಲ್ಲ. ಈ ತೀರ್ಪು ಬಗ್ಗೆ ಕಾಟಾಚಾರದ ಪ್ರತಿಕ್ರಿಯೆ ನೀಡಿ ಅವರು ಮೌನ ತಾಳಿದ್ದಾರೆ. ಯಾಕೆ? ವಿಶೇಷ ತನಿಖಾದಳ ಗೋಧ್ರಾವನ್ನೂ ಒಳಗೊಂಡಂತೆ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರು ಪ್ರಮುಖ ಪ್ರಕರಣಗಳ ತನಿಖೆ ನಡೆಸಿದೆ. ಇತ್ತೀಚೆಗೆ ಇಂಗ್ಲಿಷ್ ವಾರಪತ್ರಿಕೆಯೊಂದು ಮಾಡಿರುವ ‘ಸ್ಕೂಪ್’ ವರದಿ ಪ್ರಕಾರ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ನರೇಂದ್ರಮೋದಿಯವರು ಅಪರಾಧಿ ಎಂದು  ಎಸ್‌ಐಟಿ ಅಭಿಪ್ರಾಯಪಟ್ಟಿದೆಯಂತೆ.
ದಾಖಲೆಗಳ ನಾಶ, ಕೋಮುದ್ವೇಷ ಪ್ರಚೋದಿಸುವ ಭಾಷಣ, ಗಲಭೆಯ ಸಮಯದಲ್ಲಿ ಪೊಲೀಸ್ ನಿಯಂತ್ರಣಾ ಕೊಠಡಿಯಲ್ಲಿ ಅಕ್ರಮವಾಗಿ ಸೇರಿಕೊಂಡು ಆದೇಶ ನೀಡುತ್ತಿದ್ದ ಸಚಿವರು, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸಂಘ ಪರಿವಾರದ ಸದಸ್ಯರ ನೇಮಕ, ನಿಷ್ಪಕ್ಷಪಾತ ನಿಲುವಿನ ಪೊಲೀಸ್ ಅಧಿಕಾರಿಗಳಿಗೆ ಕಿರುಕುಳ... ಇವು ತನಿಖೆಯಿಂದ ಎಸ್‌ಐಟಿ ಕಂಡುಕೊಂಡ ಮೋದಿಯವರ ‘ಅಪರಾಧ’ಗಳಂತೆ. ಸದ್ಯಕ್ಕೆ ಕಳೆದ ವರ್ಷದ ಮೇ 12 ರಂದು ಎಸ್‌ಐಟಿ ಸಲ್ಲಿಸಿದ್ದ 600 ಪುಟಗಳ ಈ ವರದಿ ಸುಪ್ರೀಂ ಕೋರ್ಟ್‌ನ ಕಪಾಟಿನಲ್ಲಿ ಭದ್ರವಾಗಿದೆ.
ಪತ್ರಿಕೆಯಲ್ಲಿನ ವರದಿ ನಿಜವಾಗಿದ್ದರೆ ಮೋದಿ ಅವರ ಕಷ್ಟದ ದಿನಗಳು ಪ್ರಾರಂಭವಾಗಲಿವೆ. ಗೋಧ್ರಾ ಹತ್ಯಾಕಾಂಡದ ಬಗ್ಗೆ ಎಸ್‌ಐಟಿ ವರದಿ ಆಧರಿತ ತೀರ್ಪನ್ನು ಒಪ್ಪಿಕೊಂಡ ನಂತರ ಅದೇ ವರದಿ ಆಧರಿತ ಬೇರೆ ತೀರ್ಪನ್ನೂ ಒಪ್ಪಿಕೊಳ್ಳಲೇಬೇಕಲ್ಲಾ? ಈ ವರದಿಯಲ್ಲಿರುವದೇನಾದರೂ ನರೇಂದ್ರ ಮೋದಿಯವರಿಗೂ ಗೊತ್ತಾಗಿ ಅವರು ಮೌನವಾಗಿದ್ದಾರೆಯೇ?