Monday, April 25, 2011

ಕಲ್ಲೆಸೆದು ಕೆಸರು ಸಿಡಿಸಿಕೊಂಡವರು

‘ಕೆಸರಿಗೆ ಕಲ್ಲೆಸೆದು ಮುಖಕ್ಕೆ ಯಾಕೆ ಸಿಡಿಸಿಕೊಳ್ಳುತ್ತೀರಿ?’ ಎಂದು ಭ್ರಷ್ಟರ ವಿರುದ್ಧ ಹೋರಾಟಕ್ಕೆ ಹೊರಟ ಉತ್ಸಾಹಿಗಳಿಗೆ ಹಿರಿಯರು ಬುದ್ದಿ ಹೇಳುವುದುಂಟು. ಅಣ್ಣಾ ಹಜಾರೆ ಅವರಿಗೂ ಹಿರಿಯರು ಈ ಬುದ್ದಿ ಮಾತನ್ನು ಹಲವಾರು ಬಾರಿ ಹೇಳಿರಬಹದು.

ಅದಕ್ಕೆ ಕಿವಿಗೊಡದೆ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧದ ತಮ್ಮ ಆಂದೋಲವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಹೋರಾಟ ಒಂದು ರಾಜ್ಯಕ್ಕಷ್ಟೇ ಸೀಮಿತವಾ ಗಿತ್ತು. ಅಲ್ಲಿಯೂ  ಶರದ್ ಪವಾರ್ ಅವರಂತಹ ಬಲಿಷ್ಠ ರಾಜಕಾರಣಿಯನ್ನು ಎದುರು ಹಾಕಿಕೊಂಡು ಮುಖಕ್ಕೆ ಒಂದಷ್ಟು ಕೆಸರು ಸಿಡಿಸಿಕೊಂಡಿದ್ದರು.ಈಗ ನೂರಾರು ‘ಪವಾರ್’ಗಳನ್ನು ಎದುರು ಹಾಕಿಕೊಂಡಿದ್ದಾರೆ.
‘ಸಾಮ್ರಾಜ್ಯ’ ತಿರುಗಿ ಹೊಡೆದಿದೆ. ಭ್ರಷ್ಟತೆಯ ಕೆಸರಲ್ಲಿ ಮುಳುಗಿ ಹೋಗಿರುವ ರಾಜಕೀಯ ವ್ಯವಸ್ಥೆಯನ್ನು ತೊಳೆಯಲು ಹೊರಟಿರುವ ಅಣ್ಣಾ ಮತ್ತು ಬೆಂಬಲಿಗರ ಮುಖದ ಮೇಲೆಲ್ಲ ಈಗ ಸಿಡಿದ ಕೆಸರಿನ ಕಲೆಗಳು. ಹಿಂದಡಿ ಇಡುವಂತಿಲ್ಲ, ಮುಂದೆ ಹೋಗಲು ದಾರಿಗಳು ಬಹಳ ಇಲ್ಲ.
ಇವೆಲ್ಲ ಅನಿರೀಕ್ಷಿತವೇ? ಬಹುಶಃ ಅಲ್ಲ. ‘....ರಾಜಕೀಯ ಪಕ್ಷಗಳು  ಮೈಯೆಲ್ಲ ಕಣ್ಣಾಗಿ ಅಣ್ಣಾ ಹಜಾರೆ ಮತ್ತು ಬೆಂಬಲಿಗರ ತಪ್ಪು ಹೆಜ್ಜೆಗಾಗಿ ಕಾಯುತ್ತಾ ಕೂತ ಹಾಗೆ ಕಾಣುತ್ತಿದೆ....’ ಎಂದು ಎರಡು ವಾರಗಳ ಹಿಂದೆ ಇದೇ ಅಂಕಣದಲ್ಲಿ ಬರೆದದ್ದನ್ನು ಓದಿ ‘ನಿರಾಶವಾದ ಅತಿಯಾಯಿತು’ ಎಂದವರೂ ಇದ್ದರು.
ಆದರೆ ಈ ದೇಶದ ರಾಜಕೀಯ ವ್ಯವಸ್ಥೆಯನ್ನು ತುಸು ಹತ್ತಿರದಿಂದ ನೋಡಿದ ಯಾರೂ ಅಣ್ಣಾ ಹಜಾರೆ  ಎದುರು ಸರ್ಕಾರ ಸೋಲು ಒಪ್ಪಿಕೊಂಡಿತು ಎಂದು ಸಂಭ್ರಮಿಸುವ ಆತುರ ತೋರಿಸಲಾರರು.

ಜನ ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲು ಒಪ್ಪಿಕೊಂಡದ್ದನ್ನೇ ದೊಡ್ಡ ಗೆಲುವೆಂದು ಭ್ರಮಿಸಿ ಅಣ್ಣಾ ಹಜಾರೆ ಅವರ ಕೆಲ ಮುಗ್ಧ ಬೆಂಬಲಿಗರು ಕುಣಿದಾಡಿದ್ದರು.
ಆದರೆ ಆಗಲೇ ‘ಸಾಮ್ರಾಜ್ಯ’ ತನ್ನ ಹತಾರುಗಳನ್ನು ಸಾಣೆ ಹಿಡಿಯುತ್ತಿತ್ತು ಎಂದು ಅವರಿಗೆ ತಿಳಿದಿರಲಿಲ್ಲ. ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹದ ಬಾಣದಿಂದ ಪ್ರಾಣ ಉಳಿಸಿಕೊಳ್ಳಲು ಸರ್ಕಾರ ತಲೆಯನ್ನು ಒಂದಿಷ್ಟು ಕೆಳಗೆ ತಗ್ಗಿಸಿತ್ತು ಅಷ್ಟೆ.  ಅದು ಪ್ರತಿ ದಾಳಿ ಪೂರ್ವದ ಸಮರ ತಂತ್ರ.
ಭಾರತದ ರಾಜಕಾರಣದಲ್ಲಿ ಕುಟುಂಬ ರಾಜಕೀಯ ಹಳೆಯ ವಿವಾದ. ಇದರಿಂದಾಗಿ ಈ ವಿವಾದದ ಸುತ್ತಲಿನ ಚರ್ಚೆ ಬಹಳ ಬೇಗ ಸಾರ್ವಜನಿಕರ ಗಮನ ಸೆಳೆಯುತ್ತದೆ.ಈಗ ವಿವಾದದ ಕೇಂದ್ರಬಿಂದುವಾಗಿರುವ ಹಿರಿಯ ವಕೀಲ ಶಾಂತಿಭೂಷಣ್ ಕೂಡಾ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಅವರ ಕುಟುಂಬ ರಾಜಕೀಯದ ವಿರುದ್ಧ ದನಿ ಎತ್ತಿದವರು. ಇಷ್ಟೆಲ್ಲ ಗೊತ್ತಿದ್ದೂ ಅಣ್ಣಾ ಹಜಾರೆ ಆಗಲೇ ಒಂದು ತಪ್ಪು ಹೆಜ್ಜೆ ಇಟ್ಟಿದ್ದರು.

ಶಾಂತಿಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಅವರನ್ನು ಲೋಕಪಾಲ ಮಸೂದೆ ರಚನಾ ಸಮಿತಿಗೆ ಸೇರಿಸಿಬಿಟ್ಟಿದ್ದರು. ನೂರು ಕೋಟಿ ನಾಗರಿಕ ಸಮಾಜದ ಪ್ರತಿನಿಧಿಗಳಾಗಿ ನೇಮಕಗೊಂಡ ಐವರು ಸದಸ್ಯರಲ್ಲಿ ಒಂದೇ ಕುಟುಂಬದ ಇಬ್ಬರು. ಕಾರಣಗಳೇನೇ ಇರಬಹುದು, ಸಾರ್ವಜನಿಕವಾಗಿ ಇದನ್ನು ಸಮರ್ಥಿಸಿಕೊಳ್ಳುವುದು ಕಷ್ಟ. ಅಲ್ಲಿಂದ ಪ್ರಾರಂಭವಾಯಿತು ಪ್ರತಿ ದಾಳಿ.

ಇವೆಲ್ಲವೂ ಕೇವಲ ಆಡಳಿತಾರೂಢರ ಹುನ್ನಾರ ಎಂದು ತಿಳಿದುಕೊಳ್ಳಬೇಕಾಗಿಲ್ಲ.ಬಹಿರಂಗವಾಗಿ ಅಣ್ಣಾ ಹಜಾರೆ ಚಳವಳಿಗೆ ಬೆಂಬಲ ಘೋಷಿಸಿರುವ ವಿರೋಧ ಪಕ್ಷಗಳು ಕೂಡಾ ಅಂತರಂಗದಲ್ಲಿ ಅದನ್ನು ಮುರಿಯಲು ಗುಪ್ತ ಬೆಂಬಲ ನೀಡುತ್ತಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಮತ ಪಡೆದು ಅಧಿಕಾರಕ್ಕೆ ಬಂದಿದ್ದ ಎನ್‌ಡಿಎ ಸರ್ಕಾರದ ಮೊದಲ ಆದ್ಯತೆಯೇ ಲೋಕಪಾಲ ಮಸೂದೆಗೆ ಕಾನೂನಿನ ರೂಪ ಕೊಡುವುದು ಆಗಬೇಕಾಗಿತ್ತು.

ಆದರೆ ಹಾಗಾಗಲಿಲ್ಲ. ಆಗಲೂ ಪ್ರಧಾನಿಯನ್ನು ಲೋಕಪಾಲರ ವ್ಯಾಪ್ತಿಯಿಂದ ಹೊರಗಿಡಬೇಕೆಂಬುದು ಬಿಜೆಪಿಯ ಅಧಿಕೃತ ನಿಲುವಾಗಿತ್ತು ಎನ್ನುವುದನ್ನು ಈಗ ಎಲ್ಲರೂ ಮರೆತುಬಿಟ್ಟಿದ್ದಾರೆ.
ಅಣ್ಣಾ ಹಜಾರೆ ವಿರುದ್ಧ ಮೊದಲು ಎರಗಿಬಿದ್ದವರು ಕೂಡಾ ಕಾಂಗ್ರೆಸ್ ಪಕ್ಷದ ಪ್ರಮುಖ ಟೀಕಾಕಾರರಾದ ಯೋಗಗುರು ಬಾಬಾ ರಾಮ್‌ದೇವ್. ಇವರಿಗೆ ಸಲಹೆಗಾರರಾಗಿರುವವರು ಬಿಜೆಪಿಯಿಂದ ಹೊರ ಹೋಗಿದ್ದರೂ ಸಂಘ ಪರಿವಾರದ ಜತೆ ಸಂಬಂಧ ಇಟ್ಟುಕೊಂಡಿರುವ ಗೋವಿಂದಾಚಾರ್ಯ ಮತ್ತು ಹವ್ಯಾಸಿ ಪತ್ರಕರ್ತ ಎಸ್.ಗುರುಮೂರ್ತಿ. ಎರಡು ದಿನಗಳ ಮೊದಲು ಹೋಗಿ ಅಣ್ಣಾ ಹಜಾರೆ ಅವರನ್ನು ಅಪ್ಪಿಕೊಂಡಿದ್ದ ರಾಮ್‌ದೇವ್ ಯಾಕೆ ತಿರುಗಿಬಿದ್ದರು ಎನ್ನುವುದಕ್ಕೂ ಹಿನ್ನೆಲೆ ಇದೆ.
ಮೊದಲನೆಯದಾಗಿ ರಾಜಕೀಯ ಪಕ್ಷ ಕಟ್ಟಲು ಹೊರಟಿದ್ದ ರಾಮ್‌ದೇವ್ ಅವರ ಪ್ರಯತ್ನಕ್ಕೆ ಅಣ್ಣಾ ಹಜಾರೆ ಅವರ ದಿಢೀರ್ ರಂಗಪ್ರವೇಶದಿಂದಾಗಿ ಹಿನ್ನಡೆಯಾಗಿದೆ. ಕಳೆದೆರಡು ವಾರಗಳಲ್ಲಿ ಅವರ ದನಿ ಬದಲಾಗಿರುವುದನ್ನು ಗಮನಿಸಬಹುದು.

‘ಹೊಸ ರಾಜಕೀಯ ಪಕ್ಷ ಕಟ್ಟುವುದಿಲ್ಲ, ಈಗಿರುವ ಪಕ್ಷಗಳಿಂದಲೇ ಒಳ್ಳೆಯ ಕೆಲಸ ಮಾಡಿಸಲು ಜನಬಲದ ಮೂಲಕ ಒತ್ತಡ ಹಾಕುತ್ತೇವೆ’ ಎಂದು ಯೋಗಗುರು ಹೇಳುತ್ತಿದ್ದಾರೆ. ಗೋವಿಂದಾಚಾರ್ಯರ ಶಿಷ್ಯೆ ಉಮಾಭಾರತಿ ಅವರನ್ನು ಅಣ್ಣಾ ಹಜಾರೆ ಬೆಂಬಲಿಗರು ಹತ್ತಿರಕ್ಕೆ ಬಿಟ್ಟು ಕೊಡದಿರುವುದು ಕೂಡಾ ರಾಮ್‌ದೇವ್ ಅಸಮಾಧಾನಕ್ಕೆ ಕಾರಣ ಆಗಿರಬಹುದು.
ಬಾಬಾ ರಾಮ್‌ದೇವ್ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಇಂತಹ ಆಟಗಳಲ್ಲಿ ಪಳಗಿರುವ ಅಮರ್ ಸಿಂಗ್ ಎಂಬ ರಾಜಕೀಯ ದಲ್ಲಾಳಿಯ ಪ್ರವೇಶವಾಗಿದೆ. ಇದು ಕೂಡಾ ರಾಜಕೀಯ ಸಮರದ ಹಳೆಯ ತಂತ್ರ. ಯುದ್ಧಭೂಮಿಯಲ್ಲಿ ಭೀಷ್ಮಾಚಾರ್ಯರ ಎದುರು ಶಿಖಂಡಿಯನ್ನು ತಂದು ನಿಲ್ಲಿಸಿದ ಹಾಗೆ.
ಅಮರ್‌ಸಿಂಗ್ ಅವರಿಗೆ ಶಾಂತಿಭೂಷಣ್ ಬಗ್ಗೆ ಮೊದಲೇ ಹಳೆಯ ದ್ವೇಷ ಇತ್ತು. ಇದಕ್ಕಿಂತಲೂ ಮಿಗಿಲಾಗಿ ಮುಲಾಯಂ ಸಿಂಗ್ ಕೈಬಿಟ್ಟ ನಂತರ ಮೂಲೆಗುಂಪಾಗಿದ್ದ ಅವರಿಗೆ ರಾಜಕೀಯವಾಗಿ ಜೀವದಾನ ಬೇಕಾಗಿತ್ತು. ಉತ್ತರಪ್ರದೇಶದಲ್ಲಿ ಕಾಲೂರಲು ಪ್ರಯತ್ನಿಸುತ್ತಲೇ ಇರುವ ಕಾಂಗ್ರೆಸ್ ಪಕ್ಷಕ್ಕೆ ಮಾಯಾವತಿ ಮತ್ತು ಮುಲಾಯಂ ಸಿಂಗ್ ಅವರನ್ನು ಎದುರು ಹಾಕಿಕೊಂಡಿರುವ ಜತೆಗೆ ಠಾಕೂರ್ ಸಮುದಾಯದ ಮತಗಳನ್ನು ಸೆಳೆಯಬಲ್ಲ ನಾಯಕನೊಬ್ಬ ಬೇಕಿತ್ತು.

ಇವೆಲ್ಲವೂ ಒಟ್ಟಾಗಿ ಅಮರ್‌ಸಿಂಗ್ ಕಾಂಗ್ರೆಸ್ ನಾಯಕರ ಕೈ ದಾಳವಾಗಿ ಬಿಟ್ಟರು.ಅಮರ್‌ಸಿಂಗ್ ಮೊದಲು ‘ಸಿಡಿ’ಯೊಂದನ್ನು ಹೊರಹಾಕಿದರು. ಅದರಲ್ಲಿ ಶಾಂತಿಭೂಷಣ್ ಅವರು ಮಗನ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಒಲಿಸಿಕೊಳ್ಳುವ ಭರವಸೆ ನೀಡಿರುವ ಸಂಭಾಷಣೆ ಇದೆ.
ಅದರ ಬೆನ್ನಲ್ಲೇ ಉತ್ತರಪ್ರದೇಶದ ಮಾಯಾವತಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದಿರುವ ಪ್ರಕರಣ ಬಯಲಾಗಿದೆ. ಈಗ ಆಸ್ತಿ ಖರೀದಿಯಲ್ಲಿ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ವಂಚಿಸಿರುವ ಆರೋಪ ಎದುರಾಗಿದೆ.
ಹಿರಿಯ ವಕೀಲರಾದ ಶಾಂತಿಭೂಷಣ್ ಮತ್ತು ಮಕ್ಕಳು ಕೇವಲ ದುಡ್ಡು ಸಂಪಾದನೆಗಾಗಿಯೇ ವಕೀಲಿ ವೃತ್ತಿ ಮಾಡಿಕೊಂಡವರಲ್ಲ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನೆತ್ತಿಕೊಂಡು ಕಾನೂನು ಹೋರಾಟ ನಡೆಸುತ್ತಾ ಬಂದವರು.
ನ್ಯಾಯಮೂರ್ತಿಗಳ ಭ್ರಷ್ಟಾಚಾರದ ವಿರುದ್ಧವೂ ದನಿ ಎತ್ತಿ ಅಪಾಯವನ್ನು ಮೈಮೇಲೆ ಎಳೆದುಕೊಂಡವರು. ಅವರು ಹೇಳುತ್ತಿರುವಂತೆ ಅಮರ್‌ಸಿಂಗ್ ಸಿಡಿ ನಕಲಿಯೂ ಇರಬಹುದು, ಉತ್ತರಪ್ರದೇಶ ದಲ್ಲಿ ಪಡೆದಿರುವ ಜಮೀನು ಮಾರುಕಟ್ಟೆ ಬೆಲೆಗೆ ಖರೀದಿಸಿರಬಹುದು. ಮುದ್ರಾಂಕ ಶುಲ್ಕ ವಂಚಿಸದೆಯೂ ಇರಬಹುದು.
ಆದರೆ ಯಾವುದೇ ಚುನಾವಣೆ ಇಲ್ಲದೆ ನೂರು ಕೋಟಿ ನಾಗರಿಕರ ಪ್ರತಿನಿಧಿಗಳಾಗಿ ಲೋಕಪಾಲ ರಚನಾ ಸಮಿತಿಯ ಸದಸ್ಯರಾಗಿ ನೇಮಕ ಗೊಂಡವರ ಮೇಲೆ ಈ ರೀತಿಯ ಸಂಶಯದ ನೆರಳೂ ಚಾಚಬಾರದಲ್ಲವೇ? ಯಾಕೆಂದರೆ ಅಣ್ಣಾ ಹಜಾರೆ ಅವರ ಹೋರಾಟ ಕಾನೂನಿ ನದ್ದಲ್ಲ, ಅದು ನೈತಿಕತೆಯದ್ದು.

ಶರದ್‌ಪವಾರ್ ಸೇರಿದಂತೆ ಅಣ್ಣಾ ಹಜಾರೆ ಅವರು ಗುರಿ ಇಟ್ಟಿರುವ ರಾಜಕಾರಣಿಗಳು ಹೊಂದಿರುವ ಕೋಟ್ಯಂತರ ರೂಪಾಯಿ ಮೌಲ್ಯದ  ಆಸ್ತಿ ಅಕ್ರಮವಾಗಿ ಗಳಿಸಿದ್ದೆಂದು ಎಲ್ಲಿ ಸಾಬೀತಾಗಿದೆ? ಲೋಕಪಾಲರ ನೇಮಕ ಕೂಡಾ ಭ್ರಷ್ಟರ ವಿರುದ್ಧದ ನೈತಿಕ ಹೋರಾಟದ ಒಂದು ಭಾಗ ಅಲ್ಲವೇ?
ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್ ನಂತರ ಕೆಸರೆರಚಾಟಕ್ಕೆ ಬಲಿಯಾದವರು ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ. ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಲೋಕಾಯುಕ್ತರಿಗೆ ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಕೆಣಕಿದ್ದೇ ತಡ, ನ್ಯಾ.ಹೆಗ್ಡೆ ಅವರು ಕೆಂಡಾಮಂಡಲವಾಗಿಬಿಟ್ಟರು.
ಇದೇ ಅಭಿಪ್ರಾಯವನ್ನು ಇನ್ನೊಂದು ರೀತಿಯಲ್ಲಿ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಕೆಲವು ವಾರಗಳ ಹಿಂದೆ ಹೇಳಿದ್ದಾಗಲೂ ವಿವಾದ ಸೃಷ್ಟಿಯಾಗಿತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವೈಯಕ್ತಿಕವಾದ ಪ್ರಾಮಾಣಿಕತೆಯನ್ನಾಗಲಿ, ಕ್ಷಮತೆಯನ್ನಾಗಲಿ ಯಾರೂ ಪ್ರಶ್ನಿಸುವ ಹಾಗಿಲ್ಲ.
ಹಾಗಿದ್ದರೂ ಯಾಕೆ ಅವರನ್ನು ಕೆಣಕುವಂತಹ ಚುಚ್ಚುಮಾತುಗಳು ತೂರಿಬರುತ್ತಿವೆ? ಇದಕ್ಕೆ ಸ್ವಲ್ಪಮಟ್ಟಿಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರೂ ಕಾರಣ.ರಾಜ್ಯ ಸರ್ಕಾರದ ಅಸಹಕಾರದಿಂದ ನೊಂದು ಹತ್ತು ತಿಂಗಳ ಹಿಂದೆ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದಾಗ ನ್ಯಾ. ಸಂತೋಷ್‌ಹೆಗ್ಡೆ ದೇಶದ ಗಮನ ಸೆಳೆದಿದ್ದರು. ಅದು ಅವರ ಜನಪ್ರಿಯತೆಯ ಉತ್ತುಂಗ ಸ್ಥಿತಿ.

ಆದರೆ ಕರ್ನಾಟಕದ ಜನತೆ ಮಾತ್ರವಲ್ಲ, ಇಡೀ ದೇಶದ ಪ್ರಜ್ಞಾವಂತರು ರಾಜೀನಾಮೆ ಹಿಂತೆಗೆದುಕೊಳ್ಳಲು ಒತ್ತಾಯಿಸಿದಾಗಲೂ ಜಗ್ಗದ ಅವರು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಮಾತಿಗೆ ಮಣಿದು ರಾಜೀನಾಮೆ ಹಿಂತೆಗೆದುಕೊಂಡರು.
ಮರುಗಳಿಗೆಯಿಂದ ಅವರ ಜನಪ್ರಿಯತೆ ಕುಸಿಯತೊಡಗಿತ್ತು. ಅಲ್ಲಿಯ ವರೆಗೆ ಲೋಕಾಯುಕ್ತರ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದವರೂ ನಂತರದ ದಿನಗಳಲ್ಲಿ ನಾಲಿಗೆ ಸಡಿಲ ಬಿಡತೊಡಗಿದ್ದರು. ತಮ್ಮನ್ನು ಕೆಣಕಲೆಂದೇ ಇಂತಹ ಚುಚ್ಚುಮಾತುಗಳನ್ನು ತೂರಿಬಿಡಲಾಗುತ್ತಿದೆ ಎಂದು ಗೊತ್ತಿದ್ದರೂ ನ್ಯಾ.ಸಂತೋಷ್‌ಹೆಗ್ಡೆ ಅವುಗಳಿಗೆ ಭಾವಾವೇಶದಿಂದ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ.
ದಿಗ್ವಿಜಯ್‌ಸಿಂಗ್ ಟೀಕೆಗೆ ಪ್ರತಿಕ್ರಿಯಿಸಿದ ರೀತಿಯಲ್ಲಿಯೂ ಈ ಭಾವಾವೇಶ ಇತ್ತು.ಒಮ್ಮೊಮ್ಮೆ ಸಾತ್ವಿಕರ ಮೌನ ಕೂಡಾ ಅವರ ಟೀಕಾಕಾರರ ಬಾಯಿಮುಚ್ಚಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದು ಲೋಕಾಯುಕ್ತರಿಗೆ ಯಾಕೋ ಮನವರಿಕೆಯಾದಂತಿಲ್ಲ.
ಇವರನ್ನೆಲ್ಲ ಕಟ್ಟಿಕೊಂಡಿರುವ ಅಣ್ಣಾ ಹಜಾರೆ ಅವರೂ ಆರೋಪ ಮುಕ್ತರಾಗಿಲ್ಲ. ಅಣ್ಣಾ ಹಜಾರೆ ಅಧ್ಯಕ್ಷರಾಗಿರುವ ಹಿಂದ್ ಸ್ವರಾಜ್ ಟ್ರಸ್ಟ್‌ನ ಖಾತೆಯಲ್ಲಿದ್ದ 2.2 ಲಕ್ಷ ರೂಪಾಯಿಗಳನ್ನು ಅವರ ಹುಟ್ಟುಹಬ್ಬ ಆಚರಣೆಗೆ ಬಳಸಲಾಗಿತ್ತಂತೆ. ಈ ಬಗ್ಗೆ 2005ರಲ್ಲಿ ತನಿಖೆ ಮಾಡಿದ ಸಾವಂತ್ ಆಯೋಗ ಈ ಆರೋಪ ನಿಜ ಎಂದು ವರದಿ ನೀಡಿದೆ.
ರಾಜಕಾರಣಿಗಳು, ಉದ್ಯಮಿಗಳು, ಚಿತ್ರತಾರೆಯರು ತಮ್ಮ ಹುಟ್ಟುಹಬ್ಬದ ಆಚರಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವಾಗ ಈ ಎರಡು ಲಕ್ಷ ರೂಪಾಯಿ ಯಾವ ಲೆಕ್ಕದ್ದು ಎಂದು ಪ್ರಶ್ನಿಸಬಹುದು. ಖರ್ಚಾಗಿರುವ ಹಣವನ್ನು ಅಣ್ಣಾ ಹಜಾರೆ ಸ್ವಂತಕ್ಕಾಗಿ ಬಳಸಿಕೊಳ್ಳಲಿಲ್ಲ ಎಂದು ಸಮರ್ಥಿಸಿಕೊಳ್ಳಲೂ ಬಹುದು.
ಆದರೆ ಅಣ್ಣಾ ಹಜಾರೆ ಅವರಲ್ಲಿ ಗಾಂಧೀಜಿಯನ್ನು ಕಾಣಬಯಸುವ ಕೋಟ್ಯಂತರ ಜನರ ಕಣ್ಣಿನಲ್ಲಿ ಇಂತಹ ಸಣ್ಣ ತಪ್ಪುಗಳು ಭ್ರಮನಿರಸನವನ್ನು ಉಂಟುಮಾಡಬಲ್ಲದು. ಯಾಕೆಂದರೆ ಹಣಕಾಸಿನ ವಿಷಯದಲ್ಲಿ ಗಾಂಧೀಜಿ ಇಂತಹ ಸಣ್ಣ ತಪ್ಪುಗಳನ್ನೂ ಮಾಡಿರಲಿಲ್ಲ.

ಸುಮಾರು 30 ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಮತ್ತು ಇದಕ್ಕಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ದೇಣಿಗೆಯನ್ನು ಸಂಗ್ರಹಿಸಿದ್ದ ಗಾಂಧೀಜಿ ವಿರುದ್ಧ ಯಾರೂ ಹಣ ದುರುಪಯೋಗದ ಸಣ್ಣ ಸೊಲ್ಲು ಕೂಡಾ ಎತ್ತಿರಲಿಲ್ಲ.

ಇದನ್ನು ನೋಡಿಯೇ ಆಲ್‌ಬರ್ಟ್ ಐನ್‌ಸ್ಟೀನ್ ‘ರಕ್ತ ಮೂಳೆ ಮಾಂಸಗಳನ್ನು ಹೊಂದಿದ್ದ ಇಂತಹ ವ್ಯಕ್ತಿ ಜಗತ್ತಿನಲ್ಲಿ ಸಂಚರಿಸಿದ್ದನೇ, ಬದುಕಿದ್ದನೇ ಎಂದು ಮುಂಬರುವ ಪೀಳಿಗೆ ಸಂಶಯಪಡಬಹುದು’ ಎಂದು ಉದ್ಗರಿಸಿದ್ದು.

ಭ್ರಷ್ಟಾಚಾರ ನಿರ್ಮೂಲನೆ ಈಗಲೂ ಸಾಧ್ಯ. ಅದಕ್ಕಾಗಿ ಮಹಾತ್ಮ ಗಾಂಧೀಜಿಯವರಂತಹ ನಾಯಕರ ಅಗತ್ಯ ಇದೆ. ಅವರನ್ನು ಎಲ್ಲಿಂದ ತರುವುದು?