Showing posts with label ಸಚಿನ್ ತೆಂಡೂಲ್ಕರ್. Show all posts
Showing posts with label ಸಚಿನ್ ತೆಂಡೂಲ್ಕರ್. Show all posts

Tuesday, May 1, 2012

ಸಚಿನ್, ರಾಜ್ಯಸಭೆ ನಿಮ್ಮ ಮೈದಾನ ಅಲ್ಲ April 30, 2012

ಕ್ರಿಕೆಟ್ ಜಗತ್ತಿನ `ದೇವರು` ಸಚಿನ್ ತೆಂಡೂಲ್ಕರ್  ಪ್ರಜಾಪ್ರಭುತ್ವದ ಗರ್ಭಗುಡಿಯಾದ ಸಂಸತ್ ಪ್ರವೇಶಿಸಿದ್ದಾರೆ. `ದೇವರು` ಇದ್ದಲ್ಲಿ ಭಕ್ತಿ-ಆರಾಧನೆಗಳಿರುತ್ತವೆ, ಪ್ರಶ್ನೆ-ವಿಮರ್ಶೆಗಳು ಇರುವುದಿಲ್ಲ. 

ರಾಜ್ಯಸಭೆಗೆ ಸಚಿನ್ ನಾಮಕರಣಗೊಂಡದ್ದನ್ನು ಸ್ವಾಗತಿಸುತ್ತಿರುವವರ ಮನಸ್ಸಲ್ಲಿ ಇಂತಹದ್ದೊಂದು ಕುರುಡು ಭಕ್ತಿ ಇದೆ. ಸಚಿನ್ ವಿಶ್ವ ಕಂಡ ಅದ್ಭುತ ಕ್ರಿಕೆಟಿಗ.  ಇಂತಹ ಇನ್ನೊಬ್ಬ ಆಟಗಾರ ಈ ನೆಲದಲ್ಲಿ ಮತ್ತೆ ಹುಟ್ಟಲಾರ ಎಂದು ಜನ ನಂಬುವಷ್ಟು ಎತ್ತರಕ್ಕೆ ಬೆಳೆದವರು ಸಚಿನ್. ಅವರ ಸಾಧನೆಗೆ ಯಾವ ಪ್ರಶಸ್ತಿ-ಗೌರವವೂ ಕಡಿಮೆಯೇ. ಆದರೆ ರಾಜ್ಯಸಭೆಗೆ ನಾಮಕರಣ? ಮೊದಲನೆಯದಾಗಿ ರಾಜ್ಯಸಭೆಯ ಸದಸ್ಯತ್ವ ಪ್ರಶಸ್ತಿಯೂ ಅಲ್ಲ, ಗೌರವವೂ ಅಲ್ಲ.
 
ಹೌದೆಂದು ತಿಳಿದುಕೊಂಡವರು ಮತ್ತೊಮ್ಮೆ ಸಂವಿಧಾನವನ್ನು ಓದಬೇಕು. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ರಾಜ್ಯಸಭೆಗೆ ಮನೆ ಹಿರಿಯನ ಪಾತ್ರ. ಪ್ರಜೆಗಳೇ ನೇರವಾಗಿ ಆರಿಸಿ ಕಳುಹಿಸುವ ಸದಸ್ಯರ ಮೂಲಕ ರೂಪುಗೊಂಡ ಲೋಕಸಭೆಗಿಂತ ರಾಜ್ಯಸಭೆಗೆ ಮೇಲಿನ ಸ್ಥಾನ.
 
ಲೋಕಸಭೆ ಕೆಳಮನೆಯಾದರೆ ರಾಜ್ಯಸಭೆ ಮೇಲ್ಮನೆ. ವಿಧಾನಸಭಾ ಸದಸ್ಯರೇ ಆರಿಸಿ ಕಳುಹಿಸುವ ರಾಜ್ಯಸಭಾ ಸದಸ್ಯರು ಸಂಸತ್‌ನಲ್ಲಿ ರಾಜ್ಯದ ಹಕ್ಕು ಪಾಲಕರಾಗಿ ಕಾರ್ಯನಿರ್ವಹಿಸಬೇಕೆನ್ನುವುದು ಸಂವಿಧಾನದ ಆಶಯ.
 
ಈ ಹಿನ್ನೆಲೆಯಲ್ಲಿಯೇ ಇದನ್ನು `ರಾಜ್ಯಗಳ ಪರಿಷತ್` ಎನ್ನುವುದು. ಎದುರಾಗುವ ಆಪತ್ತುಗಳಿಂದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸುವ ಉದ್ದೇಶ ಕೂಡಾ ರಾಜ್ಯಸಭೆ ರಚನೆಯ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ. 

ರಾಜ್ಯಗಳು ಮತ್ತು ರಾಜ್ಯಸಭೆಯ ಸಂಬಂಧ ಅಷ್ಟೊಂದು ಆಪ್ತವಾದುದು. ಬುದ್ದಿಜೀವಿಗಳು ಮತ್ತು ವಿವಿಧ ಕ್ಷೇತ್ರಗಳ ಅನುಭವಿಗಳಿಗೆ ಸಂಸದೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಮೂಲಕ ರಾಷ್ಟ್ರನಿರ್ಮಾಣದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವುದು ರಾಜ್ಯಸಭೆ ರಚನೆಯ ಇನ್ನೊಂದು ಉದ್ದೇಶ. 

ಪ್ರಧಾನಿ ಮನಮೋಹನ್‌ಸಿಂಗ್ ಅವರೂ ಸೇರಿದಂತೆ ಕೇಂದ್ರ ಸಂಪುಟದಲ್ಲಿ ಮಹತ್ವದ ಸಚಿವ ಖಾತೆಗಳನ್ನು ಹೊಂದಿದ್ದವರ ಪಟ್ಟಿಯನ್ನು ನೋಡಿದರೆ ಈ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ. ರಾಜ್ಯಸಭೆಯ ಒಟ್ಟು ಬಲ 245. ಇದರಲ್ಲಿ 233 ಸ್ಥಾನಗಳನ್ನು ರಾಜ್ಯಗಳ ಪ್ರತಿನಿಧಿಗಳ ರೂಪದಲ್ಲಿ ವಿಧಾನಸಭಾ ಸದಸ್ಯರು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾರೆ. 

ಉಳಿದ ಹನ್ನೆರಡು ಸ್ಥಾನಗಳಿಗೆ  ಸಾಹಿತ್ಯ, ವಿಜ್ಞಾನ,ಕಲೆ ಮತ್ತು ಸಮಾಜಸೇವೆಯ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ, ಚುನಾವಣೆ ನಡೆಯುವುದಿಲ್ಲ. ಹೆಸರಿಗೆ ರಾಷ್ಟ್ರಪತಿಗಳ ನಾಮಕರಣ ಎಂದಿದ್ದರೂ ವಾಸ್ತವದಲ್ಲಿ ಆಡಳಿತಾರೂಢ ಪಕ್ಷ ಸೂಚಿಸಿದ ಹೆಸರುಗಳಿಗೆ ಮೊಹರು ಒತ್ತುವುದಷ್ಟೇ ಅವರ ಕೆಲಸ.

ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನ ರಚನೆಕಾರರ ಆಶಯವನ್ನು ಭಂಗಗೊಳಿಸುವಂತಹ ವಿದ್ಯಮಾನಗಳು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ಮತ್ತು ನಾಮಕರಣಗಳಲ್ಲಿ ನಡೆಯುತ್ತಿವೆ.
 
ಚುನಾವಣೆಯಲ್ಲಿ `ದುಡ್ಡಿನ ದೊಡ್ಡಪ್ಪ`ಗಳಿಗೆ ರಾಜ್ಯಸಭಾ ಸ್ಥಾನಗಳನ್ನು `ಮಾರಾಟ` ಮಾಡಲಾಗುತ್ತಿದೆ ಎಂಬ ಆರೋಪ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳ ಮೇಲೆ ಇವೆ. ಈ ಪಕ್ಷಗಳ ಆಯ್ಕೆಯ ಮೇಲೆ ಕಣ್ಣಾಡಿಸಿದರೆ ಈ ಆರೋಪಕ್ಕೆ ಪುರಾವೆಗಳೂ ಸಿಗುತ್ತವೆ. 

ಇತ್ತೀಚೆಗಷ್ಟೇ ಜಾರ್ಖಂಡ್‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಂಶುಮಾನ್ ಮಿಶ್ರಾ ಎಂಬ ಉದ್ಯಮಿ ಬಿಜೆಪಿ ನಾಯಕರನ್ನು ಒಲಿಸಿಕೊಂಡು ಸ್ಪರ್ಧಿಸಲು ಬಯಸಿದ್ದ. ಎಲ್.ಕೆ.ಅಡ್ವಾಣಿ , ಯಶವಂತ್‌ಸಿನ್ಹಾ ಮೊದಲಾದವರ ವಿರೋಧದಿಂದ ಅದು ಸಾಧ್ಯ ಆಗಲಿಲ್ಲ. 

ಆದರೆ ಬೇರೊಬ್ಬ ಅಭ್ಯರ್ಥಿಯ ಸಂಬಂಧಿಕರಿಂದ ಚುನಾವಣಾ ಅಧಿಕಾರಿಗಳು ಎರಡು ಕಾಲು ಕೋಟಿ ರೂಪಾಯಿ ವಶಪಡಿಸಿಕೊಂಡ ನಂತರ `ಮತ ಖರೀದಿ`ಯ ಪ್ರಯತ್ನ ನಡೆಯುತ್ತಿರುವುದು ಖಾತರಿಯಾಗಿ ಆ ಚುನಾವಣೆಯನ್ನೇ ಆಯೋಗ ರದ್ದುಮಾಡಬೇಕಾಯಿತು.

25-30 ವರ್ಷಗಳ ಹಿಂದೆ ಉದ್ಯಮಿಗಳ ಜತೆ ನೇರವಾಗಿ ಗುರುತಿಸಿಕೊಳ್ಳಲು ರಾಜಕೀಯ ಪಕ್ಷಗಳು ಹಿಂಜರಿಯುತ್ತಿದ್ದವು. 1975ರಲ್ಲಿ ಜನಸಂಘ ವೀರೇನ್ ಶಹಾ ಎಂಬ ಉದ್ಯಮಿಯನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಮಾಡಿದಾಗ ಯಾವ ರೀತಿಯ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎನ್ನುವುದನ್ನು ಹಿರಿಯ ಬಿಜೆಪಿ ನಾಯಕರು ಈಗಲೂ ನೆನೆಸಿಕೊಳ್ಳುತ್ತಾರೆ. 

ನಂತರದ ದಿನಗಳಲ್ಲಿ ಮುಖ್ಯವಾಗಿ ಆರ್ಥಿಕ ಉದಾರೀಕರಣದ ಶಕೆಯ ನಂತರ ಅನೈತಿಕತೆ ಎಂದು ಆರೋಪಿಸುವಷ್ಟರ ಮಟ್ಟಿಗೆ ಉದ್ಯಮಿಗಳು ಮತ್ತು ರಾಜಕಾರಣಿಗಳ ಸಂಬಂಧ ಬೆಳೆಯುತ್ತಾ ಬಂತು. ಆಕಾಂಕ್ಷಿ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಅವರ ಪ್ರವೇಶಕ್ಕೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ರೂಪಿಸುವ ಪಿತೂರಿ ಕೂಡಾ ಪ್ರಾರಂಭವಾಯಿತು.
 
ರಾಜ್ಯಸಭೆಗೆ ಸ್ಪರ್ಧಿಸುವವರು ಅವರನ್ನು ಆರಿಸಿ ಕಳುಹಿಸುವ ರಾಜ್ಯದ ಮತದಾರರಾಗಿರಬೇಕು ಮತ್ತು `ಸಾಮಾನ್ಯ ನಿವಾಸಿಗಳು` ಆಗಿರಬೇಕು ಎಂಬ ಷರತ್ತು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿತ್ತು. ಎನ್‌ಡಿಎ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ಮಾಡಿ `ದೇಶದ ಯಾವುದೇ ಭಾಗದಲ್ಲಿ ಮತದಾರರಾಗಿರುವರು` ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು. 

ಈ ತಿದ್ದುಪಡಿಯನ್ನು ಪ್ರಶ್ನಿಸಿ ಹಿರಿಯ ಪತ್ರಕರ್ತರಾದ ಕುಲದೀಪ್ ನಯ್ಯರ್ ಮತ್ತು ಇಂದರ್‌ಜಿತ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಾಡುತ್ತಿರುವ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿಲ್ಲ. ತಿದ್ದುಪಡಿ ರದ್ದಾದರೆ ಮನಮೋಹನ್‌ಸಿಂಗ್ ಸೇರಿದಂತೆ ಹಲವರು ರಾಜ್ಯಸಭಾ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.

ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿನ ಇಂತಹ ಅಕ್ರಮಗಳು ನಾಮಕರಣಕ್ಕೆ ಸಂಬಂಧಿಸಿದಂತೆ  ಕೇಳಿ ಬರದೆ ಇದ್ದರೂ, ಈ ಅವಕಾಶವನ್ನು ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಎಲ್ಲ ಪಕ್ಷಗಳೂ ಎದುರಿಸುತ್ತಿವೆ. 

ಆಡಳಿತಾರೂಢ ಪಕ್ಷಗಳು ನಾಮಕರಣದ ನೆಪದಲ್ಲಿ ಒಂದೆಡೆ ತಮ್ಮ ಪಕ್ಷದ ಸದಸ್ಯರನ್ನೇ ರಾಜ್ಯಸಭೆಗೆ ನಾಮಕರಣ ಮಾಡುತ್ತಾ ಬಂದಿದ್ದರೆ, ಇನ್ನೊಂದೆಡೆ ಗಣ್ಯರನ್ನು ನಾಮಕರಣಕ್ಕೆ ಆಯ್ಕೆ ಮಾಡುವಾಗಲೂ ಆ ಸ್ಥಾನಕ್ಕೆ ಬೇಕಾದ ಅರ್ಹತೆಗಿಂತಲೂ ಹೆಚ್ಚಾಗಿ ಅದರಿಂದ ಆಗಲಿರುವ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಾ ಬಂದಿರುವುದನ್ನು ಕಾಣಬಹುದು. 

ಇಲ್ಲಿಯವರೆಗೆ ನಾಮಕರಣಗೊಂಡ ಕ್ರಿಕೆಟಿಗ ಸಚಿನ್, ಚಿತ್ರತಾರೆ ರೇಖಾ ಸೇರಿದಂತೆ ರಾಜ್ಯಸಭೆಗೆ ನಾಮಕರಣಗೊಂಡ 121 ಸದಸ್ಯರ ಪಟ್ಟಿ ಮೇಲೆ ಕಣ್ಣಾಡಿಸಿದರೆ ಇದು ಇನ್ನಷ್ಟು ನಿಚ್ಚಳವಾಗಿ ಕಾಣುತ್ತದೆ. 

ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಅವರನ್ನು ಎದುರು ಹಾಕಿಕೊಳ್ಳದೆ ಹೋಗಿದ್ದರೆ ಇಲ್ಲವೇ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿದ್ದರೆ, ಸಚಿನ್ ಅವರ ನಾಮಕರಣಕ್ಕೆ ಕಾಂಗ್ರೆಸ್ ಮುಂದಾಗುತ್ತಿತ್ತೇ ಎನ್ನುವುದು ಪ್ರಶ್ನೆ.

ಈಗಿನ ರಾಜ್ಯಸಭೆಯಲ್ಲಿ ನಾಮಕರಣಗೊಂಡ ಹತ್ತು ಸದಸ್ಯರಿದ್ದಾರೆ. ಇವರಲ್ಲಿ ಕಾಂಗ್ರೆಸ್ ಸದಸ್ಯರಾದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಮತ್ತು ಬಾಲಚಂದ್ರ ಮುಂಗೇಕರ್ ಅವರು `ಗಣ್ಯರ` ಹೆಸರಲ್ಲಿ ನುಸುಳಿದವರು. ಉಳಿದಂತೆ ಜಾವೇದ್ ಅಖ್ತರ್ (ಸಾಹಿತಿ) ಎಚ್.ಕೆ.ದುವಾ (ಪತ್ರಕರ್ತ), ಅಶೋಕ್ ಗಂಗೂಲಿ (ಉದ್ಯಮಿ), ಬಿ.ಜಯಶ್ರಿ (ರಂಗಭೂಮಿ ಕಲಾವಿದೆ), ಅನು ಅಗಾ (ಉದ್ಯಮಿ) ರೇಖಾ (ಚಿತ್ರನಟಿ) ಮತ್ತು ಸಚಿನ್ ತೆಂಡೂಲ್ಕರ್(ಕ್ರಿಕೆಟಿಗ) ಅವರು ಗಣ್ಯರ ಕೋಟಾದಲ್ಲಿ ನಾಮಕರಣಗೊಂಡವರು. 

ಈ ಆರೂ ಮಂದಿ ತಮ್ಮ  ಕ್ಷೇತ್ರದಲ್ಲಿ ಸಾಧನೆ ಮೂಲಕ ಅಗ್ರಗಣ್ಯರೆಂಬ ಗೌರವಕ್ಕೆ ಪಾತ್ರರಾದವರು. ಆದರೆ ರಾಜ್ಯಸಭೆಯ ಇತಿಹಾಸವನ್ನು ನೋಡಿದರೆ ಈ `ಅಗ್ರಗಣ್ಯ`ರೆನಿಸಿಕೊಂಡ ಸದಸ್ಯರ ಸಾಧನೆ ನಿರಾಶಾದಾಯಕ.
 
ನಿಷ್ಕ್ರಿಯರೆನಿಸಿಕೊಂಡ ನಾಮಕರಣ ಸದಸ್ಯರಲ್ಲಿ ಹಿಂದಿ ಚಿತ್ರರಂಗದಿಂದ ಬಂದವರಿಗೆ ಮೊದಲ ಸ್ಥಾನ. 1999ರಿಂದ 2005ರ ವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಖ್ಯಾತ ಹಿಂದಿ ಗಾಯಕಿ ಲತಾ ಮಂಗೇಶ್ಕರ್ ಅವರು ಪ್ರಮಾಣ ವಚನ ಸ್ವೀಕರಿಸಲು ಹೋಗಿದ್ದನ್ನು ಬಿಟ್ಟರೆ ಎಂದೂ ಕಲಾಪದಲ್ಲಿ ಭಾಗವಹಿಸಿಯೇ ಇಲ್ಲ. 

ದಿಲೀಪ್‌ಕುಮಾರ್, ದಾರಾಸಿಂಗ್,ಧರ್ಮೇಂದ್ರ, ಶ್ಯಾಮ್ ಬೆನೆಗಲ್ ಸೇರಿದಂತೆ ರಾಜ್ಯಸಭೆಗೆ ನಾಮಕರಣಗೊಂಡ ಚಿತ್ರನಟರ ಸಂಸದೀಯ ಸಾಧನೆ ಶೂನ್ಯ. ಇವರಿಗೆಲ್ಲ ಹೋಲಿಸಿದರೆ ರಾಜ್ಯಸಭೆಯಲ್ಲಿದ್ದು ಸದ್ದು ಮಾಡಿದವರು ನಟಿ ಶಬನಾ ಅಜ್ಮಿ ಮಾತ್ರ.  `ಚಿರಯುವತಿ` ರೇಖಾ ಯಾವ ಸಾಲಿಗೆ ಸೇರಲಿದ್ದಾರೆ ಎನ್ನುವುದನ್ನು ನೋಡಬೇಕಾಗಿದೆ.

ಕರ್ನಾಟಕದವರಾದ ರಂಗಭೂಮಿ ಕಲಾವಿದೆ ಬಿ.ಜಯಶ್ರಿ ಅವರು ರಾಜ್ಯಸಭೆ ಪ್ರವೇಶಿಸಿ ಎರಡು ವರ್ಷಗಳಾಗಿವೆ. ಇಲ್ಲಿಯವರೆಗೆ ಅವರು ಸದನದಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ವಿಶೇಷ ಪ್ರಸ್ತಾವ ಮಾಡಿಲ್ಲ. ಯಾವ ಮಸೂದೆಯ ಬಗ್ಗೆಯೂ ಮಾತನಾಡಿಲ್ಲ. 

ಆಶ್ಚರ್ಯವೆಂದರೆ ಟಿವಿ ಚಾನೆಲ್‌ಗಳಲ್ಲಿ ನೋಡುತ್ತಿರುವಾಗ ವಾಚಾಳಿಯಂತೆ ಕಾಣಿಸುವ ಜಾವೇದ್ ಅಖ್ತರ್  ಚರ್ಚೆಗಳಲ್ಲಿ ಒಂದಷ್ಟು ಹೊತ್ತು ಭಾಗವಹಿಸಿದ್ದು ಬಿಟ್ಟರೆ, ಪ್ರಶ್ನೆಗಳನ್ನು ಕೇಳಿದ ಇಲ್ಲವೆ ವಿಶೇಷ ಪ್ರಸ್ತಾವವನ್ನು ಮಾಡಿದ ದಾಖಲೆಗಳು ಇಲ್ಲ. ಉದ್ಯಮಿ ಅಶೋಕ್ ಗಂಗೂಲಿಯವರ ಸಾಧನೆಯೂ ಅಷ್ಟಕ್ಕಷ್ಟೆ. ಈ ವರೆಗೆ ರಾಜ್ಯಸಭೆಗೆ ನಾಮಕರಣಗೊಂಡ ಸದಸ್ಯರಲ್ಲಿ ಕ್ರಿಯಾಶೀಲರಾಗಿದ್ದವರೆಂದರೆ ಪತ್ರಕರ್ತರು ಮಾತ್ರ.
 
ನಾಮಕರಣಗೊಂಡ ಹಾಲಿ ಸದಸ್ಯರಲ್ಲಿ ಮಣಿ ಶಂಕರ್ ಅಯ್ಯರ್ ಅವರನ್ನು ಬಿಟ್ಟರೆ ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸುತ್ತಿರುವವರು ಹಿರಿಯ ಪತ್ರಕರ್ತ ಎಚ್.ಕೆ.ದುವಾ. ಆರ್.ಕೆ.ಕರಂಜಿಯಾ ಅವರಿಂದ ಹಿಡಿದು ಇತ್ತೀಚಿನ ಚಂದನ್ ಮಿತ್ರ ವರೆಗೆ ರಾಜ್ಯಸಭೆಗೆ ನಾಮಕರಣಗೊಂಡ ಪತ್ರಕರ್ತರೆಲ್ಲರೂ ಕಸಬುದಾರ ರಾಜಕಾರಣಿಗಳನ್ನು ಮೀರಿಸುವಂತೆ ಕಲಾಪದಲ್ಲಿ ಭಾಗವಹಿಸಿದ್ದಾರೆ.

ಆದರೆ ಸಚಿನ್ ತೆಂಡೂಲ್ಕರ್? ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸುವಷ್ಟು ಸಮಯ ಅವರಲ್ಲಿದೆಯೇ ಎನ್ನುವುದು ಮೊದಲ ಪ್ರಶ್ನೆ. ಮಾರ್ಚ್‌ಗೆ ಕೊನೆಗೊಂಡ ಒಂದು ವರ್ಷದಲ್ಲಿ ಸಚಿನ್ 250 ದಿನ ಕ್ರಿಕೆಟ್ ಆಡಿದ್ದಾರೆ.
 
ಈಗಲೂ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸೂಚನೆಯನ್ನು ಅವರು ನೀಡುತ್ತಿಲ್ಲ. ಹೀಗಿದ್ದಾಗ ರಾಜ್ಯಸಭಾ ಸದಸ್ಯತ್ವವನ್ನು ಅಲಂಕಾರಿಕ ಹುದ್ದೆಯನ್ನಾಗಿ ಸ್ವೀಕರಿಸುವುದಕ್ಕೆ ಏನು ಅರ್ಥ ಇದೆ? ನಿವೃತ್ತಿಯಾಗಲು ಅವರು ನಿರ್ಧರಿಸಿದರೂ ಬಿಡುವಿನ ಸಮಯವನ್ನು ಉಪಯೋಗಿಸಿಕೊಳ್ಳುವುದಕ್ಕೆ ಅವರದ್ದೇ ಆದ ಕ್ಷೇತ್ರ ಇದೆ.
 
ಅವರ ಅನುಭವದ ಅಗತ್ಯ ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕ್ರೀಡಾ ಕ್ಷೇತ್ರಕ್ಕೆ ಇದೆ. ಕ್ರಿಕೆಟ್ ಎನ್ನುವುದು ಒಂದು ಸರಳ ಕ್ರೀಡೆಯಾಗಿ ಉಳಿದಿಲ್ಲ, ಅದು ಉದ್ಯಮದ ಸ್ವರೂಪ ಪಡೆದು ಆಟಗಾರರೆಲ್ಲ ಹಣ ಗಳಿಸುವ ಯಂತ್ರಗಳಾಗಿ ಹೋಗಿದ್ದಾರೆ. 

ಸಚಿನ್ ತೆಂಡೂಲ್ಕರ್ ಎಂಬ ಮಹಾನ್ ತಾರೆ ಉದಿಯಮಾನವಾಗಿರುವ ಕಾಲದಲ್ಲಿಯೇ ಕ್ರಿಕೆಟ್ ಕ್ಷೇತ್ರ ಇಂತಹ ನೈತಿಕ ಅಧೋಗತಿಗೆ ತಲುಪಿರುವುದನ್ನು ಹೇಗೆ ತಳ್ಳಿಹಾಕುವುದು? ಈ ಅವನತಿಯಲ್ಲಿ ಸಚಿನ್ ಪಾಲಿಲ್ಲವೇ? 

ಹಿರಿಯರಿಂದ ಬಳುವಳಿಯಾಗಿ ಪಡೆದ  ಸ್ವಚ್ಚ ಕ್ರಿಕೆಟ್ ಮೈದಾನವನ್ನೇ  ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುತ್ತಿದ್ದೇನೆ ಎಂದು ಎದೆಮುಟ್ಟಿ ಹೇಳುವ ಧೈರ್ಯ ಸಚಿನ್ ಅವರಿಗಿದೆಯೇ? ಇಲ್ಲ ಎಂದಾದರೆ ಕ್ರಿಕೆಟ್ ಕ್ಷೇತ್ರ ಕಳೆದುಕೊಳ್ಳುತ್ತಿರುವ ಗೌರವವನ್ನು ಮರಳಿ ಗಳಿಸಿಕೊಡುವ ಹೊಣೆ ಈ ಮಹಾನ್ ತಾರೆಗೆ ಇಲ್ಲವೇ?

ದೇಶದಲ್ಲಿರುವ ಬಹುತೇಕ ಕ್ರೀಡಾ ಸಂಸ್ಥೆಗಳ ಉನ್ನತ ಪದಾಧಿಕಾರ ಸ್ಥಾನಗಳಲ್ಲಿ ರಾಜಕಾರಣಿಗಳು ವಿರಾಜಮಾನರಾಗಿದ್ದಾರೆ. ಕ್ರೀಡಾ ಕ್ಷೇತ್ರದ ಅವನತಿಗೆ ಇದು ಮುಖ್ಯ ಕಾರಣ. ಸಚಿನ್ ಕ್ರೀಡಾ ಕ್ಷೇತ್ರವನ್ನು ರಾಜಕಾರಣದ ಹಿಡಿತದಿಂದ ಮುಕ್ತಗೊಳಿಸಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೆ ಇರಲಾರದು. ಸಮಾಜದಲ್ಲಿ ತಾನು ಹೊಂದಿರುವ ಗೌರವದ ಸ್ಥಾನ ಮತ್ತು ಗಳಿಸಿರುವ ಜನಪ್ರಿಯತೆಯ ಬಲದಿಂದ ಇದನ್ನು ಮಾಡಿ ತೋರಿಸಲು ಅವರಿಗೆ ಸಾಧ್ಯ ಇದೆ.
 
ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡು ಸೋನಿಯಾಗಾಂಧಿ ಅವರ ನಿವಾಸಕ್ಕೆ ತೆರಳಿ ಕೃತಜ್ಞತೆ ಸೂಚಿಸಿ ಬರುವುದರಿಂದ ಇದನ್ನು ಮಾಡಲಾಗದು. ರಾಜ್ಯಸಭಾ ಸದಸ್ಯರಾಗಿ ಅಪರೂಪಕ್ಕೆ ಕಲಾಪದಲ್ಲಿ ಭಾಗವಹಿಸಿ ಕುಳಿತ ಆಸನವನ್ನು ಬಿಸಿಮಾಡಿ ಬರುವುದರಲ್ಲಿ ಏನೂ ಲಾಭ ಇಲ್ಲ. 

ಸಚಿನ್ ಅವರೊಬ್ಬ ಪ್ರತಿಭಾಶಾಲಿ ಆಟಗಾರನಿರಬಹುದು, ಕ್ರಿಕೆಟ್ ಕ್ಷೇತ್ರದಲ್ಲಿ ಅವರು ಯಶಸ್ಸನ್ನೂ ಗಳಿಸಿರಬಹುದು. ಆದರೆ ರಾಜಕೀಯ ಎನ್ನುವುದು ಬೇರೆಯೇ ಚೆಂಡಿನ ಆಟ. ಗೊತ್ತಿಲ್ಲದ ಆಟವನ್ನು ಆಡಲು ಹೊರಡುವವನು ಕ್ರೀಡಾಪಟು ಅಲ್ಲ.