Showing posts with label ಸಂಘ ಪರಿವಾರ. Show all posts
Showing posts with label ಸಂಘ ಪರಿವಾರ. Show all posts

Tuesday, April 23, 2013

ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಕರಾವಳಿ ಮಹಿಳೆಯರು

ಮಂಗಳೂರು: `ಯಾನ್ ಕಾಲೇಜ್‌ಗ್ ಪೋನಗನೆ ಮಿಡಿ-ಮಿನಿ ಪಾಡೊಂದಿತ್ತೆ. ವುಂದು ದಾನೆ ಪೊಸತ್ತಾ ಎಂಕಲೆಗ್? ಇತ್ತೆ ಎನ್ನ ಮಗಲ್ ಆ ಡ್ರೆಸ್ ಪಾಡುನಿ ಬೊಡ್ಚಿಂದ್ ಎಂಚ ಪನ್ಪಿನಿ?' (
ನಾನು ಕಾಲೇಜಿಗೆ ಹೋಗುವಾಗಲೇ ಮಿನಿ-ಮಿಡಿ ಧರಿಸುತ್ತಿದ್ದೆ. ಇದೇನು ನಮಗೆ ಹೊಸದಾ? ಈಗ ನನ್ನ ಮಗಳು ಧರಿಸುವಾಗ ಬೇಡ ಎಂದು ಹೇಗೆ ಹೇಳಲಿ) ಎಂದು ಕೇಳುತ್ತಾರೆ ಸುಮಾರು ಐವತ್ತರ ಆಜುಬಾಜಿನಲ್ಲಿರುವ ಸುರತ್ಕಲ್‌ನ ಶಶಿಕಲಾ ಶೆಟ್ಟಿ.
`ಎಂಕುಲ್‌ದಾನೆ ಹಾಳಾದ್ ಪೋತನಾ, ಗೌರವೊಡು ಸಂಸಾರ ಮಲ್ತೊಂದ್ ಇಜ್ಜನಾ' (ನಾವೇನು ಹಾಳಾಗಿ ಹೋಗಿದ್ದೇವೆಯೇ? ಗೌರವದಿಂದ ಸಂಸಾರ ಮಾಡಿಕೊಂಡು ಇಲ್ಲವೇ?) ಎನ್ನುವ ಇನ್ನೆರಡು ಪ್ರಶ್ನೆಗಳನ್ನೂ ಕೇಳಿ ಯಾರದೋ ಮೇಲಿನ ಸಿಟ್ಟನ್ನು ಅವರು ತೀರಿಸಿಕೊಂಡರು.
ಇದು ಇಲ್ಲಿನ ಒಬ್ಬಿಬ್ಬರು ಹೆಣ್ಣುಮಕ್ಕಳ ವೈಯಕ್ತಿಕ ಅಭಿಪ್ರಾಯ ಅಲ್ಲ, ಅತಿರೇಕಕ್ಕೆ ಹೋಗುತ್ತಿರುವ `ನೈತಿಕ ಪೊಲೀಸ್‌ಗಿರಿ'ಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುಸಂಖ್ಯಾತ ಮಹಿಳೆಯರು ರೋಸಿಹೋಗಿದ್ದಾರೆ.
`ವುಂದ್ ಮುಲ್ತ ಕಲ್ಚರ್‌ಗ್ ಇನ್‌ಸಲ್ಟ್‌ಯೇ ಅಣ್ಣಾ' (ಇದು (ನೈತಿಕ ಪೊಲೀಸ್‌ಗಿರಿ) ಇಲ್ಲಿನ ಸಂಸ್ಕೃತಿಗೆ ಅವಮಾನ) ಎಂದವಳು ಮಂಗಳೂರಿನ ಕಾಲೇಜು ವಿದ್ಯಾರ್ಥಿನಿ ರಾಜಶ್ರೀ ಬಂಗೇರ. `ಅಣ್ಣಾ, ಅಕ್ಕಾ ಸಂಬೋಧನೆ, ಇಂಗ್ಲಿಷ್‌ಮಿಶ್ರಿತ ತುಳು' ಕೂಡಾ ಇಲ್ಲಿನ ಸಂಸ್ಕೃತಿಯ ಭಾಗ. ಚುನಾವಣೆಯಲ್ಲಿ ರಾಜಕೀಯವೇ ಚರ್ಚೆಯ ಪ್ರಮುಖ ವಿಷಯವಾದರೂ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಂಸ್ಕೃತಿ ಕೂಡಾ ಚರ್ಚೆಗೊಳಗಾಗುತ್ತಿದೆ.
ಕರಾವಳಿಯ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಕಾಲಿಟ್ಟು ದಶಕಗಳೇ ಕಳೆದಿವೆ. ಇಲ್ಲಿನ ಮೀನುಗಾರ ಮಹಿಳೆಯರು ಊರೂರಿಗೆ ಬುಟ್ಟಿಯಲ್ಲಿ  ಹೊತ್ತುಕೊಂಡು ಹೋಗಿ ಇಲ್ಲವೆ ಸಂತೆಯಲ್ಲಿ ಕೂತು ಮೀನು ಮಾರಿಯೇ ಕುಟುಂಬವನ್ನು ಸಲಹುತ್ತಾ ಬಂದವರು. ಇವರ ಜತೆಗೆ ಬೀಡಿಕಟ್ಟುವ ಮಹಿಳೆಯರು, ತರಕಾರಿ ಬೆಳೆದು ಮಾರುವ ಕ್ರಿಶ್ಚಿಯನ್ ಮಹಿಳೆಯರು...ಹೀಗೆ ಕರಾವಳಿಯ ಉದ್ಯೋಗಸ್ಥ ಮಹಿಳಾವರ್ಗ ವಿಶಾಲವಾದುದು.
ಇವರೆಲ್ಲ ಉದ್ಯೋಗಕ್ಕಾಗಿ ಮನೆಬಿಟ್ಟು ಹೊರಗೆ ಅಡ್ಡಾಡುವವರು. ಬೆಂಗಳೂರು ನಗರವನ್ನು ಹೊರತುಪಡಿಸಿದರೆ ಇಡೀ ರಾಜ್ಯದಲ್ಲಿ ಉದ್ಯೋಗಸ್ಥ ಮಹಿಳೆಯರು ಅತಿಹೆಚ್ಚಿನ ಸಂಖ್ಯೆಯಲ್ಲಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಂದು ಹೇಳಲು ಸಮೀಕ್ಷೆಯ ಅಗತ್ಯ ಇಲ್ಲ. ಹೊರಜಗತ್ತಿನ ಪರಿಚಯ ಇರುವುದರಿಂದ ಆಧುನಿಕತೆಯ ಗಾಳಿಗೆ ಇವರೆಲ್ಲ ಎಂದೋ ಮೈಯೊಡ್ಡಿಯಾಗಿದೆ.
ಜಗತ್ತಿನ ಯಾವುದೋ ಮೂಲೆಯಲ್ಲಿ ಹೊಸ ಫ್ಯಾಷನ್ ಬಂದರೂ ಅದು ಮುಂಬೈ-ದುಬೈ ಮೂಲಕ ರಾಜ್ಯದಲ್ಲಿ ಮೊದಲು ಬರುತ್ತಿದ್ದದ್ದು ಮಂಗಳೂರಿಗೆ. ಬಾರ್ ಎಂಡ್ ರೆಸ್ಟೋರೆಂಟ್‌ಗಳಲ್ಲಿ ಗಂಡ ಬಿಯರ್ ಕುಡಿಯುತ್ತಿರುವಾಗ ಎದುರಿಗೆ ಹೆಂಡತಿ ಕೂತು ಊಟ ಮಾಡುವುದು ಇಲ್ಲಿ ಸಾಮಾನ್ಯ ದೃಶ್ಯ. ಮಂಗಳೂರಿನ ಹೆಣ್ಣುಮಕ್ಕಳು ಸ್ಪಲ್ಪ `ಫಾಸ್ಟ್' ಎನ್ನುವ ಅಭಿಪ್ರಾಯ ಹಿಂದಿನಿಂದಲೂ ಇದೆ. ಆದರೆ ತಮ್ಮ ಭವಿಷ್ಯದ ವಿಷಯದಲ್ಲಿ ತೀರಾ ಲೆಕ್ಕಾಚಾರದ ಈ ಹೆಣ್ಣುಮಕ್ಕಳು ಅತಿರೇಕಕ್ಕೆ ಹೋಗಿ ವೈಯಕ್ತಿಕ ಜೀವನವನ್ನು ಹಾಳುಮಾಡಿಕೊಂಡದ್ದು ಕಡಿಮೆ.
ಇಂತಹ ನಾಡಿನಲ್ಲಿ  ಹಿಂದೂ ಸಂಸ್ಕೃತಿಯ ರಕ್ಷಣೆಯ ಹೆಸರಲ್ಲಿ ನಡೆಸಲಾಗುತ್ತಿರುವ ನೈತಿಕ ಪೊಲೀಸ್‌ಗಿರಿ  ಪ್ರಜ್ಞಾವಂತ ಸಮುದಾಯವನ್ನು ಕೆರಳಿಸಿದೆ. ಹೆಚ್ಚುಕಡಿಮೆ ಪ್ರತಿದಿನ ಒಂದಲ್ಲ ಒಂದು ಸ್ಥಳದಲ್ಲಿ ಪರಸ್ಪರ ಮಾತನಾಡುತ್ತಿರುವ ಇಲ್ಲವೆ ಜತೆಯಲ್ಲಿ ಹೋಗುವ ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ಮೇಲೆ ಹಲ್ಲೆ ನಡೆಯುತ್ತಿರುತ್ತದೆ. ಕಾನೂನು ಪ್ರಕಾರ ಇದನ್ನು ಅಪರಾಧ ಎಂದು ಪರಿಗಣಿಸಲು ಅಸಾಧ್ಯವಾಗಿರುವ ಕಾರಣ ಅಧಿಕೃತವಾಗಿ ದೂರು ದಾಖಲಾಗುವುದು ಕಡಿಮೆ.
ದೈಹಿಕವಾಗಿ ಹಲ್ಲೆ ನಡೆಸುವ ಮತ್ತು ಪೊಲೀಸರ ಮೂಲಕ ಹೆದರಿಸುವ ಕೃತ್ಯಗಳು ನಡೆಯುತ್ತಲೇ ಇವೆ. ಸಂಘ ಪರಿವಾರದ ಕುಮ್ಮಕ್ಕಿನಿಂದಲೇ ಇದು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರ ವಿರುದ್ಧ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗ ಕುಟುಂಬಗಳ ಮಹಿಳೆಯರೇ ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲು ಇದಕ್ಕೆ ಸಾಕ್ಷಿ.
ಸಂಘ ಪರಿವಾರದ ಚುನಾವಣಾ ಕಾರ್ಯತಂತ್ರದ ದೋಣಿ ಪ್ರತಿಕೂಲ ಗಾಳಿಗೆ ಸಿಕ್ಕಿ ಅಡಿಮೇಲಾಗುತ್ತಿರುವುದು ಈ ಬೆಳವಣಿಗೆಗಳಿಂದಾಗಿ. ಕಾಂಗ್ರೆಸ್ ಪಕ್ಷದ ನಾಯಕರು ಗೆದ್ದೇಬಿಟ್ಟೆವು ಎಂದು ಮೈಮರೆಯಲು ಕೂಡಾ ಇದು ಕಾರಣ. ಇದಕ್ಕೆ ಸರಿಯಾಗಿ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರು ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಸಿದ ವಿಧವೆಯರಿಗೆ ಮಂಗಳದ್ರವ್ಯ ನೀಡುವ ಮತ್ತು ದಲಿತ ಮಹಿಳೆಯರ ಪಾದತೊಳೆದ ಕೆಲಸಗಳು ಸಂಘ ಪರಿವಾರ ಮಹಿಳೆಯರ ಮೇಲೆ ನಡೆಸುತ್ತಿರುವ `ಸಾಂಸ್ಕೃತಿಕ ದಾಳಿ'ಗೆ ಪ್ರತಿದಾಳಿ ಎಂಬಂತೆ ಜನಪ್ರಿಯವಾಗಿವೆ.
ಪೂಜಾರಿಯವರೂ ಕಡು ಜಾತ್ಯತೀತರೇನಲ್ಲ, ಮಂಗಳೂರಿನಲ್ಲಿ ಬಿಜೆಪಿಯನ್ನು `ಮೆದು ಹಿಂದುತ್ವ'ದ ಮೂಲಕವೇ ಎದುರಿಸಲು ಹೊರಟವರು ಅವರು. ಸಂಘ ಪರಿವಾರವನ್ನು ಮೀರಿಸುವಂತೆ ಪ್ರತಿವರ್ಷ ದಸರಾ ಉತ್ಸವ ಆಚರಿಸುವ ಮೂಲಕ ಮನೆಯಲ್ಲಿದ್ದ ಧರ್ಮವನ್ನು ಬೀದಿಗೆ ತಂದು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದ್ದಾರೆ ಎಂಬ ಆರೋಪ ಕೂಡಾ ಅವರ ಮೇಲಿದೆ. ಧಾರ್ಮಿಕವಾಗಿ ಪುರುಷರಿಗೆ ಸಮನಾದ ಸ್ಥಾನಮಾನವನ್ನು ಮಹಿಳೆಯರಿಗೆ ನೀಡಿ ಗೌರವಿಸುವುದನ್ನು ಒಂದು ಸೈದ್ಧಾಂತಿಕ ವಿರೋಧದ ಕಾರ್ಯಕ್ರಮ ಎಂದು ಅವರು ರೂಪಿಸದೆ ಇದ್ದರೂ ವರ್ತಮಾನದ ಪರಿಸ್ಥಿತಿಯಿಂದಾಗಿ ಅದು ಆ ರೂಪ ಪಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ಸಂಖ್ಯೆ ಮತ್ತು ಸಂಪನ್ಮೂಲಗಳೆರಡರ ದೃಷ್ಟಿಯಿಂದಲೂ ಬಿಜೆಪಿಗೆ ಪ್ರಮುಖ ಆಧಾರಸ್ತಂಭವಾಗಿದ್ದ ಬಂಟ ಸಮಾಜದ ಮಹಿಳೆಯರೇ, ಹೆಣ್ಣುಮಕ್ಕಳನ್ನು ಗುರಿಯಾಗಿಟ್ಟುಕೊಂಡ ನಡೆದಿರುವ `ನೈತಿಕ ಪೊಲೀಸ್‌ಗಿರಿ'ಯಿಂದ ಹೆಚ್ಚು ಅಸಮಾಧಾನಕ್ಕೀಡಾಗಿರುವುದು ಗಮನಾರ್ಹ. ಭೂಸುಧಾರಣೆ ಜಾರಿಗೆ ಬರುವ ಮೊದಲು ಭೂಮಾಲೀಕರಾಗಿದ್ದ ಬಂಟರು ಹಿಂದೂ ಸಮುದಾಯದಲ್ಲಿ ಉಳಿದವರಿಗಿಂತ ಮೊದಲು ಆಧುನಿಕತೆಗೆ ತೆರೆದುಕೊಂಡವರು.
ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಮೊದಲಾದ ಚಿತ್ರತಾರೆಯರೆಲ್ಲ `ಬೋಲ್ಡ್ ಎಂಡ್ ಬ್ಯೂಟಿಫುಲ್' ಎಂದೇ ಕರೆಯಲಾಗುವ ಬಂಟ ಮಹಿಳಾ ಸಮುದಾಯಕ್ಕೆ ಸೇರಿದವರು. ಉದ್ಯಮಶೀಲತೆಯ ಗುಣವನ್ನು ಹುಟ್ಟಿನಿಂದಲೇ ಪಡೆದಿರುವ ಈ ಸಮುದಾಯ ಹೋಟೆಲ್, ವೈದ್ಯಕೀಯ, ಎಂಜಿನಿಯರಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯಿಂದಾಗಿ ಸಹಜವಾಗಿ ಶ್ರಿಮಂತಿಕೆಯ ಜೀವನಶೈಲಿಗೆ ಒಗ್ಗಿಹೋಗಿರುವವರು. ಇವರ ಮೇಲೆ ಬಲವಂತದಿಂದ ಹೇರಲಾಗುತ್ತಿರುವ ನಿರ್ಬಂಧಿತ ಸಾಮಾಜಿಕ ಜೀವನ ಸಹಜವಾಗಿಯೇ ಕಿರಿಕಿರಿ ಉಂಟುಮಾಡುತ್ತಿದೆ.
ಪಾಶ್ಚಾತ್ಯ ಸಂಸ್ಕೃತಿ ಕೂಡಾ ಇಲ್ಲಿಗೆ ಇತ್ತೀಚಿನ ಆಮದು ಅಲ್ಲ. ಇಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕ್ರೈಸ್ತ ಸಮುದಾಯದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮೊದಲಿನಿಂದಲೂ ಇದೆ. 60 ವರ್ಷದ ಮಹಿಳೆ ಕೂಡಾ ಸ್ಕರ್ಟ್ ಧರಿಸುವುದು, ಮನೆಯಲ್ಲಿ ಕುಟುಂಬದ ಜತೆ ಮಹಿಳೆಯರೂ ಮದ್ಯ ಸೇವಿಸುವುದು ಇಲ್ಲಿನ ಕ್ರಿಶ್ಚಿಯನ್ ಸಮಾಜದಲ್ಲಿ ಸಾಮಾನ್ಯ ನಡವಳಿಕೆ.
ಇದರ ಪ್ರಭಾವ ಇತರ ಸಮುದಾಯದ ಮೇಲೆ ಕೂಡಾ ಆಗಿದೆ. `ಈ ರೀತಿಯ ನಡವಳಿಕೆಗಳಲ್ಲಿ ಸರಿ-ತಪ್ಪುಗಳ ಮಧ್ಯೆ ಸೂಕ್ಷ್ಮ ಗೆರೆ ಇರುತ್ತದೆ. ಮನೆಯ ಮಕ್ಕಳು ಎಚ್ಚರತಪ್ಪಿ ತಪ್ಪಿನ ಕಡೆ ಸರಿದಾಗ ಬುದ್ಧಿಹೇಳುವ, ಶಿಕ್ಷಿಸುವ ಕೆಲಸವನ್ನು ಲೋಕದ ಎಲ್ಲ ಪಾಲಕರಂತೆ ಇಲ್ಲಿನ ತಂದೆತಾಯಿಗಳು ಮಾಡುತ್ತಾ ಬಂದಿದ್ದಾರೆ. ಆದರೆ ನಮ್ಮ ಮನೆಮಕ್ಕಳ ಮೇಲೆ ಯಾರೋ ಅಪರಿಚಿತರು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ದಾಳಿ ನಡೆಸುವುದನ್ನು ಸಹಿಸಲಿಕ್ಕಾಗದು' ಎನ್ನುತ್ತಾರೆ ಮಂಗಳೂರಿನ ಶಿಕ್ಷಕ ರಮಾನಂದ.
ಈ ರೀತಿ ದಂಡಪ್ರಯೋಗದ ಮೂಲಕ `ಬುದ್ಧಿಕಲಿಸಲು' ಹೊರಟವರಲ್ಲಿ ಯಾರೂ ಕಾವಿತೊಟ್ಟ ವಿರಾಗಿಗಳಿಲ್ಲ, ಇವರಲ್ಲಿ ಹೆಚ್ಚಿನವರು ಪೊಲೀಸ್ ದಾಖಲೆಯಲ್ಲಿರುವ ಪುಂಡು ಪೋಕರಿಗಳು ಮತ್ತು ಸಂಘ ಪರಿವಾರದ ಸದಸ್ಯರು ಎನ್ನುವುದು ಇವರನ್ನು ಇನ್ನಷ್ಟು ಕೆರಳಿಸಿದೆ.
ಶೂದ್ರ ಸಂಸ್ಕೃತಿಯ ತುಳುನಾಡಿನಲ್ಲಿ  ವೈದಿಕ ಸಂಸ್ಕೃತಿಯ ವಿರುದ್ಧದ ಪ್ರತಿಭಟನೆ ನಿರಂತರವಾಗಿ ನಡೆಯುತ್ತಾ ಬಂದಿರುವುದನ್ನು ತುಳುನಾಡಿನ ಇತಿಹಾಸದಲ್ಲಿ ಕಾಣಬಹುದು. ಒಂದು ಕಾಲದಲ್ಲಿ `ಸೋಷಿಯಲ್ ಆ್ಯಕ್ಟಿವಿಸ್ಟ್'ಗಳಾಗಿದ್ದ ಭೂತ-ದೈವಗಳ ಕತೆಯೇ ಇದಕ್ಕೆ ಸಾಕ್ಷಿ. ಇಲ್ಲಿನ ಬಹುಸಂಖ್ಯಾತ ಹಿಂದೂ ಸಮುದಾಯ ಆರಾಧಿಸುತ್ತಾ ಬಂದಿರುವ ಈ ಭೂತ-ದೈವಗಳೆಲ್ಲ ತಮ್ಮ ಭಕ್ತರಂತೆಯೇ ಮಾಂಸ-ಮೀನು ತಿನ್ನುವ, ಶೇಂದಿ-ಮದ್ಯ (ಇತ್ತೀಚೆಗೆ ಬೀರು-ವಿಸ್ಕಿ) ಕುಡಿಯುವ ವರ್ಗಕ್ಕೆ ಸೇರಿರುವುದರಿಂದ ಅವುಗಳ ಆರಾಧನೆಯ ಸಮಯದಲ್ಲಿ ಅದನ್ನೇ ಹರಕೆ ಮೂಲಕ ಅರ್ಪಿಸಲಾಗುತ್ತದೆ.
ಈ ಎರಡು ಜಿಲ್ಲೆಗಳಲ್ಲಿ ರಾಮ, ಕೃಷ್ಣ, ಶಿವನಿಗಿಂತ ಜುಮಾದಿ, ಕೋರ‌್ದಬ್ಬು-ತನ್ನಿಮಾನಿಗಾ, ಪಂಜುರ್ಲಿಗಳೇ ಹೆಚ್ಚು ಜನಪ್ರಿಯ. ಪುರುಷಪ್ರಧಾನ ಸಮಾಜದಲ್ಲಿನ ಲಿಂಗ ಅಸಮಾನತೆ ಬಗ್ಗೆ ಸಿಡಿದೆದ್ದ ಸಿರಿ, ತನ್ನಿಮಾನಿಗಾ ಮೊದಲಾದ ವೀರಮಹಿಳೆಯರ ಕತೆಗಳು ಇಲ್ಲಿನ ಜಾನಪದ ಸಾಹಿತ್ಯವಾದ ಪಾಡ್ದನಗಳಲ್ಲಿ ಸಿಗುತ್ತವೆ. ಇವರನ್ನು `ಶುದ್ಧ ಹಿಂದೂ'ಗಳಾಗಿ ಮತಾಂತರ ಮಾಡುವ ಪ್ರಯತ್ನದ ಅಂಗವಾಗಿಯೇ ಇಲ್ಲಿನ ಭೂತಕೋಲ, ನಾಗಮಂಡಲ ನಡೆಯುವ ಸ್ಥಳದಲ್ಲಿ ಭಗವಾಧ್ವಜಗಳು ಹಾರಾಡುತ್ತಿರುತ್ತವೆ. `ಮುಸ್ಲಿಂ ಭೂತ'ವನ್ನು ತೋರಿಸಿ ಅವರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
ಆದರೆ  ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗಿದ್ದ ಇಲ್ಲಿನ ಶೂದ್ರ ಸಮುದಾಯ ಕರಾವಳಿಯ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ ಎಚ್ಚೆತ್ತುಕೊಳ್ಳುತ್ತಿರುವಂತೆ ಕಾಣುತ್ತಿದೆ. ಪರಾಕಾಷ್ಠೆ ತಲುಪಿರುವ `ನೈತಿಕ ಪೊಲೀಸ್‌ಗಿರಿ'ಯ ಜತೆಯಲ್ಲಿಯೇ ಬಿಜೆಪಿ ಶಾಸಕರೊಬ್ಬರ ಮೇಲೆ ಬ್ಲೂಫಿಲ್ಮ್ ವೀಕ್ಷಣೆಯ ಆರೋಪ, ಇನ್ನೊಬ್ಬ ಶಾಸಕರ ಪತ್ನಿಯ ನಿಗೂಢ ಸಾವು ಮತ್ತು ಬೇರೆ ಹೆಣ್ಣಿನ ಜತೆಗಿದ್ದ ವಿಡಿಯೊ, ರೇವ್‌ಪಾರ್ಟಿಯ ಕಿರಿಕಿರಿ ಮೊದಲಾದ ಘಟನೆಗಳಿಂದಾಗಿ ಬಿಜೆಪಿ ವಿಶ್ವಾಸದ್ರೋಹ ಮಾಡಿದೆ ಎಂಬ ಭಾವನೆ ಮುಖ್ಯವಾಗಿ ಕರಾವಳಿಯ ಮಹಿಳೆಯರಲ್ಲಿ ಮೂಡಲು ಕಾರಣವಾಗಿದೆ. ಈ ಅಸಮಾಧಾನ ರಾಜಕೀಯ ನಿರ್ಧಾರವಾಗಿ ಪರಿವರ್ತನೆಗೊಂಡರೆ ಕರಾವಳಿಯ `ಹಿಂದುತ್ವದ ಪ್ರಯೋಗ ಶಾಲೆ'ಯನ್ನು ಮುಚ್ಚಬೇಕಾಗಬಹುದು.