Showing posts with label ಶಾಂತವೇರಿ ಗೋಪಾಲಗೌಡರ ರಾಜಕೀಯ. Show all posts
Showing posts with label ಶಾಂತವೇರಿ ಗೋಪಾಲಗೌಡರ ರಾಜಕೀಯ. Show all posts

Thursday, April 25, 2013

ಗೋಪಾಲಗೌಡರ ಬದುಕೇ ಚುನಾವಣಾ ನೀತಿ ಸಂಹಿತೆ.

ತೀರ್ಥಹಳ್ಳಿ: -ಶಾಂತವೇರಿ ಗೋಪಾಲಗೌಡರು1952ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಖರ್ಚು ಮಾಡಿದ್ದು ಐದು ಸಾವಿರ ರೂಪಾಯಿ. ಇದರಲ್ಲಿ ಎರಡು ಸಾವಿರ ರೂಪಾಯಿ ಸಾಗರದ ಸಹಕಾರಿ ಸೊಸೈಟಿಯಿಂದ ಸಾಲ ಪಡೆದದ್ದು. ಈ ಸಾಲವನ್ನು
ಗೋಪಾಲಗೌಡರು ತೀರಿಸಿದ್ದು ಗೆದ್ದಮೇಲೆ ಶಾಸಕರಾಗಿ ತಮಗೆ ಬರುತ್ತಿದ್ದ ದಿನಭತ್ಯೆ ಮತ್ತು ಕ್ಷೇತ್ರಭತ್ಯೆಯಲ್ಲಿ ಉಳಿತಾಯ ಮಾಡಿದ ಹಣದಿಂದ. ಮರುಚುನಾವಣೆಯಲ್ಲಿ ಗೋಪಾಲಗೌಡರು ಸೋತಾಗ ಅವರು ಯಥಾಪ್ರಕಾರ `ಬರಿಗೈ ಫಕೀರ'. ನಾಲ್ಕುಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಜನರೆ ವೋಟಿನ ಜತೆ ನೋಟು ಕೊಟ್ಟು ಅವರನ್ನು ಗೆಲ್ಲಿಸಿದ್ದರು.
-ಅದೇ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಬದರಿನಾರಾಯಣ್ ಅಯ್ಯಂಗಾರ್ ವಿರುದ್ದದ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಗೋಪಾಲಗೌಡರ ಮೇಲೆ ಒತ್ತಡ ಹೇರಲಾಗುತ್ತದೆ. ಅಯ್ಯಂಗಾರ್ ಸ್ನೇಹಿತನೊಬ್ಬ ಬಂದು `ಎಲೆಕ್ಷನ್‌ಗೆ ಏನಿಲ್ಲ ಎಂದರೂ 30 ಖರ್ಚಾಗುತ್ತದೆ. ಅವರು ಗೆದ್ದರೆ ಮಂತ್ರಿಯಾಗುವ ಛಾನ್ಸ್ ಜಾಸ್ತಿ. ನೀವು ದೊಡ್ಡ ಮನಸು ಮಾಡಿ ಉಮೇದುವಾರಿಕೆ ಹಿಂದೆಗೆದುಕೊಂಡರೆ ನಾವು ಬದರಿಯವರ ಬಳಿ ಮಾತನಾಡಿ ಅವರನ್ನು ಕರಾರಿಗೆ ಒಪ್ಪಿಸ್ತೇವೆ..'ಎಂದನಂತೆ.
ಇದನ್ನು ಕೇಳಿದ ಗೌಡರು `ಸ್ವಾಮಿ ನನ್ನ ಬೂಟು ಬಾಗಿಲ ಬಳಿ ಇದೆ, ನಾನು ಎದ್ದು ಕೈಗೆ ತೆಗೆದುಕೊಳ್ಳೊದ್ರೊಳಗೆ ನೀವು ಹೊರಗೆ ಹೋಗೋದು ವಾಸಿ' ಎನ್ನುವಷ್ಟರಲ್ಲಿ ಬಂದವರು ಓಡಿಹೋದರಂತೆ.
- ಗೋಪಾಲಗೌಡರ ಕಷ್ಟಗಳನ್ನು ನೋಡಲಾಗದ ಸ್ನೇಹಿತನೊಬ್ಬ ಆಗಿನ ಕಂದಾಯ ಮಂತ್ರಿ ಕಡಿದಾಳ ಮಂಜಪ್ಪನವರ ಬಳಿ ಹೋಗಿ ಗೌಡರಿಗೆ ಒಂದೈದು ಎಕರೆ ಜಮೀನು ಮಂಜೂರು ಮಾಡುವಂತೆ ಕೇಳಿಕೊಂಡನಂತೆ. ಅರ್ಜಿಹಾಕಲು ಹೇಳು ಎಂದರು ಕಡಿದಾಳ್. ಇದನ್ನು ಕೇಳಿದ ಗೌಡರು ` ನನಗೇಕೆ ಜಮೀನು? ಉಳುವವನೆ ಒಡೆಯನಾಗಬೇಕೆಂಬುದು ನನ್ನ ಹೋರಾಟ. ಹೀಗಿರುವಾಗ ಉಳುಮೆ ಮಾಡದೆ ಭೂಮಿಯ ಒಡೆಯನಾಗುವ ನೈತಿಕ ಹಕ್ಕು ನನಗಿಲ್ಲ' ಎಂದು ನೆರವನ್ನು ತಿರಸ್ಕರಿಸಿದರಂತೆ.
-ಚುನಾವಣಾ ಭಾಷಣಗಳಲ್ಲಿ ಅವರೆಂದು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಇಲ್ಲವೆ ಜಾತಿಗಳನ್ನು ಎತ್ತಿಕಟ್ಟುವ ಮಾತುಗಳನ್ನು ಆಡುತ್ತಿರಲಿಲ್ಲ. ಮೂರು ಚುನಾವಣೆಗಳಲ್ಲಿ ಗೆದ್ದರೂ ಅವರು ಯಾವ ಸನ್ಮಾನ ಸಭೆಗಳಲ್ಲಿ ಭಾಗವಹಿಸಿರಲಿಲ್ಲ. ಅವರ ಸಭೆಗಳೆಂದರೆ ಪಕ್ಷದ ಕಾರ್ಯಕರ್ತರು ಮತ್ತು ಮತದಾರರನ್ನು ಭೇಟಿ ಮಾಡುವ ಕಾರ್ಯಕ್ರಮಗಳಾಗಿರುತ್ತಿದ್ದವು.
ಗೋಪಾಲಗೌಡರು ಎದುರಿಸಿದ್ದ ನಾಲ್ಕು ಚುನಾವಣೆಗಳ ಅನುಭವಗಳನ್ನು ಸಂಪೂರ್ಣವಾಗಿ ಪುಸ್ತಕರೂಪದಲ್ಲಿ ದಾಖಲಿಸಿ ಹಂಚಿದರೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮಾತ್ರ ಅಲ್ಲ ರಾಜಕಾರಣಿಯ ನಿತ್ಯ ಜೀವನಕ್ಕೆ ಕೂಡಾ ಮಾದರಿ ನೀತಿ ಸಂಹಿತೆಯಾಗಬಲ್ಲದು. ತೀರ್ಥಹಳ್ಳಿ-ಸಾಗರಗಳಲ್ಲಿರುವ ಹಳೆತಲೆಗಳ ಬಳಿ `ಆ ದಿನಗಳ' ಬಗ್ಗೆ ಇಂತಹ ನೂರಾರು ನೆನಪುಗಳಿವೆ.
ನೋಡನೋಡುತ್ತಿದ್ದಂತೆಯೇ ಬದಲಾವಣೆಗೊಳಗಾಗುತ್ತಾ ಹೋದ ಕಾಲದ ಜತೆ ಹೆಜ್ಜೆ ಹಾಕಲಾಗದೆ ಅವರೆಲ್ಲರೂ ಮನೆ ಸೇರಿಬಿಟ್ಟಿದ್ದಾರೆ. ಗೋಪಾಲಗೌಡರ ನೆನೆಪಿಗೆ ಒಂದು ಸರಿಯಾದ ಸ್ಮಾರಕವನ್ನು ನಿರ್ಮಿಸಲು ಇಲ್ಲಿನ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಅರಗದಲ್ಲಿ ಅವರು ಹುಟ್ಟಿದ ಮನೆಯ ಕುರುಹು ಕೂಡಾ ಇಲ್ಲ. ಅವರ ನೆನೆಪಿಗಾಗಿ ನಿರ್ಮಾಣ ಮಾಡಲು ಹೊರಟ ಗ್ರಂಥಾಲಯ ಅಪೂರ್ಣ ಸ್ಥಿತಿಯಲ್ಲಿದೆ. ದೇಶಕ್ಕೆ ಮಾದರಿಯಂತಿದ್ದ ಇಲ್ಲಿನ ರಾಜಕೀಯ ಸಂಸ್ಕೃತಿ ಈಗ ಹರಿಯುತ್ತಿರುವ ಹಣದ ಹೊಳೆಯಲ್ಲಿ ಕೊಚ್ಚಿಹೋಗುತ್ತಿದೆ.
ಇದು ರಾತ್ರಿ ಹಗಲಾಗುವುದರೊಳಗೆ ಆಗಿರುವ ಬದಲಾವಣೆಯೂ ಅಲ್ಲ. ಗೋಪಾಲಗೌಡರೇ ಎರಡನೇ ಬಾರಿ ಸ್ಪರ್ಧಿಸಿದಾಗ ಸೋತುಹೋಗಿದ್ದರು. ಇದಕ್ಕೆ ಎದುರಾಳಿ ಅಭ್ಯರ್ಥಿ ಮತದಾರರಿಂದ ಧರ್ಮಸ್ಥಳದ ಆಣೆ ಮಾಡಿಸಿದ್ದು ಮತ್ತು ಬಾಡೂಟ ಹಾಕಿಸಿದ್ದು ಕಾರಣ ಎನ್ನುವುದು ಚರ್ಚೆಗೊಳಗಾಗಿತ್ತು.
ಹೀಗಿದ್ದರೂ ಅದರ ನಂತರದ ಎರಡು ಚುನಾವಣೆಗಳನ್ನು ಗೋಪಾಲಗೌಡರು ಗೆದ್ದುಬಿಟ್ಟಿದ್ದರು. ಮೂರು ಅವಧಿಗೆ ಶಾಸಕರಾಗಿದ್ದ ಗೋಪಾಲಗೌಡರು ಖಾಲಿ ಜೇಬನ್ನಿಟ್ಟುಕೊಂಡೇ ಚುನಾವಣೆಗಳಲ್ಲಿ ಶ್ರಿಮಂತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಜನಬೆಂಬಲದ ಮೂಲಕ ಗೆದ್ದುಬಂದವರು. ಅವರ ಕಾಲದ ಚುನಾವಣೆ, ಅದಕ್ಕೆ ಖರ್ಚಾಗುತ್ತಿದ್ದ ಹಣ, ಭಾಷಣ, ಪ್ರಚಾರ ಶೈಲಿಗಳೆಲ್ಲ  ಮಲೆನಾಡಿನಲ್ಲಿ ದಂತಕತೆಗಳಾಗಿ ಹೋಗಿವೆ. ಮೂರೂ ಚುನಾವಣೆಯ ಕಾಲದಲ್ಲಿ ಅವರ ಬಳಿ ಠೇವಣಿ ಸಲ್ಲಿಸಲು ದುಡ್ಡು ಇರಲಿಲ್ಲ. ಕ್ಷೇತ್ರದ ಜನತೆಯೇ ದೇಣಿಗೆ ಸಂಗ್ರಹಿಸಿ ಚುನಾವಣಾ ವೆಚ್ಚವನ್ನು ಸರಿದೂಗಿಸುತ್ತಿದ್ದರು.
ಬದಲಾಗಿರುವ ಕಾಲದಲ್ಲಿ ರಾಜ್ಯದ ಸಮಾಜವಾದಿ ಚಳುವಳಿಯ ಕರ್ಮಭೂಮಿಯಾಗಿದ್ದ ತೀರ್ಥಹಳ್ಳಿ-ಸಾಗರಗಳಲ್ಲಿಯೂ ಖಂಡಿತ ಸುಧಾರಣೆಗಳಾಗಿವೆ. ಭೂ ಸುಧಾರಣೆ ಜಾರಿಗೆ ಬಂದು ಉಳುವವನೇ ಭೂಮಿಯ ಒಡೆಯನಾಗಿದ್ದಾನೆ. ದೀವ ಒಕ್ಕಲಿನವರು ಈಗ ಕಾಲು ಮುಟ್ಟುವ ಪಂಚೆ ಉಡಬಹುದು, ಧಣಿಗಳೇ ಇಲ್ಲದ ಈಗಿನ ಊರಿನಲ್ಲಿ ಸಾಮಾನ್ಯ ಮನುಷ್ಯ ಚಪ್ಪಲಿಹಾಕಿಕೊಂಡೇ ಅಡ್ಡಾಡಬಹುದು.
ಮೇಲ್ಜಾತಿಯ ಕಿರಿಯರನ್ನು ಏಕವಚನದಿಂದ ಕರೆಯಬಹುದು. ಶೂದ್ರರು ಬ್ರಾಹ್ಮಣ-ಲಿಂಗಾಯತ ಕುಟುಂಬಗಳ ಮನೆಯಲ್ಲಿನ ಚಾವಡಿಗಳ ಎರಡನೆ ಮಜಲು ದಾಟಿಹೋಗಬಹುದು. ಅರ್ವತ್ತು ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಊಳಿಗಮಾನ್ಯ ವ್ಯವಸ್ಥೆಯ ವಿಕಾರರೂಪ ಇಲ್ಲಿತ್ತು. ಇದರ ವಿರುದ್ಧವೇ ನಡೆದದ್ದು ಕಾಗೋಡು ಸತ್ಯಾಗ್ರಹ. ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಅವರೇ ಬಂದು ಸತ್ಯಾಗ್ರಹದಲ್ಲಿ ಭಾಗವಹಿಸಿ ದೇಶದ ಗಮನ ಸೆಳೆದಿದ್ದರು. ಈ ಸತ್ಯಾಗ್ರಹದ ಮೂಲಕವೇ ಜಿಲ್ಲೆಯಲ್ಲಿ ಹಲವಾರು ರಾಜಕೀಯ ನಾಯಕರು ಹುಟ್ಟಿಕೊಂಡರು.
ಇವೆಲ್ಲ ಇಂದು ಇತಿಹಾಸದ ಪುಟಗಳ ಓದಿಗಷ್ಟೇ ಸೀಮಿತ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಆಯ್ಕೆಯಾದ ಬೇಳೂರು ಗೋಪಾಲಕೃಷ್ಣ ಅವರು ಮೊದಲ ಬಾರಿ ರಾಜಕೀಯದ ಹೊಸ ಮಾದರಿಯನ್ನು ಜಿಲ್ಲೆಗೆ ಪರಿಚಯಿಸಿದರು. ಈಗ ಈ ಸೋಂಕು ತೀರ್ಥಹಳ್ಳಿಗೂ ತಗಲಿದೆ.  ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಮಂಜುನಾಥ ಗೌಡ ಮತ್ತು ಜೆಡಿ(ಎಸ್) ಅಭ್ಯರ್ಥಿ ಮದನ್ ಅವರ `ಕೊಡುಗೈ ದಾನ' ಇಲ್ಲಿ ಮನೆಮಾತಾಗಿ ಹೋಗಿದೆ.
 ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮತದಾರರಿಗೆ ಮುಂಗಡವಾಗಿ `ನೆರವು' ತಲುಪಿಸಿದ ಅಭ್ಯರ್ಥಿಗಳು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಚಹರೆಯನ್ನೇ ಬದಲಾಯಿಸಿಬಿಟ್ಟಿದ್ದಾರೆ. ಎರಡು ತಿಂಗಳುಗಳ ಹಿಂದೆಯೇ ಇಲ್ಲಿನ ಸ್ವಸಹಾಯ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಹಣ ನೀಡಲಾಗಿದೆ. ಸಾಲ ಕೇಳದವರಿಗೂ ಸಹಕಾರ ಸಂಘಗಳಿಂದ ಪುಕ್ಕಟೆ ಎಂಬಂತೆ ಸಾಲ ನೀಡಲಾಗಿದೆ.
 ಮತದಾರರಿಗೆ ಮೊದಲ ಸುತ್ತಿನ ಸೀರೆ, ಬೆಳ್ಳಿಬಟ್ಟಲುಗಳ ವಿತರಣೆ ಮುಗಿದುಹೋಗಿದೆ. ಫಲಾನುಭವಿಗಳಿಂದ ಧರ್ಮಸ್ಥಳದ ಮೇಲೆ ಆಣೆ ಹಾಕಿಸಿ ಮತಹಾಕುವ ಭರವಸೆ ಪಡೆಯಲಾಗುತ್ತಿದೆ. ಇದನ್ನು ಗಮನಿಸಿದ ಡಿ.ವೀರೇಂದ್ರ ಹೆಗ್ಗಡೆಯವರು ಕ್ಷೇತ್ರಕ್ಕೂ ಚುನಾವಣೆಗೂ ಸಂಬಂಧ ಇಲ್ಲ ಎಂದು ಕರಪತ್ರ ಹೊರಡಿಸಿದ್ದಾರೆ.
ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಅವರು ಸಜ್ಜನ, ಪ್ರಾಮಾಣಿಕ ಎಂಬ ಜನಾಭಿಪ್ರಾಯ ಇದೆ, ಒಳ್ಳೆಯ ಸಂಸದೀಯ ಪಟು ಕೂಡಾ. ಬಿಜೆಪಿ ಅಭ್ಯರ್ಥಿ ಅರಗ ಜ್ಞಾನೇಂದ್ರ ಅವರೂ ಸೋತ ನಂತರವೂ ಜನರ ಜತೆ ಒಡನಾಟ ಇಟ್ಟುಕೊಂಡ ನಾಯಕ. ಇಬ್ಬರೂ ಉಳಿದ ಅಭ್ಯರ್ಥಿಗಳ ಹಣದ ಭರಾಟೆ ನೋಡಿ ದಂಗಾಗಿ ಹೋಗಿದ್ದಾರೆ.
ಬೇರೆಲ್ಲ ಕಡೆ ನಡೆಯದಂತಹ ಚುನಾವಣಾ ಅಕ್ರಮಗಳು ತೀರ್ಥಹಳ್ಳಿ, ಸಾಗರ ಕ್ಷೇತ್ರಗಳಲ್ಲಿ ನಡೆಯುತ್ತಿಲ್ಲ. ಶಾಂತವೇರಿ ಗೋಪಾಲಗೌಡರ ರಾಜಕೀಯವನ್ನು ಕಂಡ ಇಲ್ಲಿನ ಮಣ್ಣಿಗೆ ಈಗಿನ ರಾಜಕೀಯ ಸಂಸ್ಕೃತಿ ಹೊಸತು ಅಷ್ಟೆ..ಇದು ಮುಂದುವರಿಯಲಿದೆಯೇ ಇಲ್ಲವೆ ಕೊನೆಗೊಳ್ಳಲಿದೆಯೇ ಎನ್ನುವುದನ್ನು ಈಗಿನ ಚುನಾವಣೆ ನಿರ್ಧರಿಸಲಿದೆ.