Showing posts with label ಅಡ್ವಾಣಿ. Show all posts
Showing posts with label ಅಡ್ವಾಣಿ. Show all posts

Monday, September 12, 2011

ಅಡ್ವಾಣಿ ಆಗಬೇಕಾಗಿರುವುದು ಕೃಷ್ಣ, ಅರ್ಜುನ ಅಲ್ಲ

ಪ್ರಧಾನಿ ಪಟ್ಟ ಎಲ್ಲೋ ಮರೆಯಿಂದ ಕಣ್ಣು ಮಿಟುಕಿಸುತ್ತಿರುವಂತೆ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಅನಿಸಿರಬಹುದು. ಇಲ್ಲದಿದ್ದರೆ ಅವರ ಸುತ್ತ ಇರುವ ವಂದಿಮಾಗಧರು `ನಿಮ್ಮ ಜೀವಮಾನದ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಇದೇ ಸಮಯ, ನುಗ್ಗಿಬಿಡಿ~ ಎಂದು 84 ವರ್ಷದ ನಾಯಕನನ್ನು ಹುರಿದುಂಬಿಸಿರಬಹುದು.
ಇಂತಹ ಒತ್ತಡಗಳು ಇಲ್ಲದೆ ಇರುತ್ತಿದ್ದರೆ ಆಗಲೇ ವಾನಪ್ರಸ್ಥಾಶ್ರಮದ ಕಡೆಗೆ ಹೊರಟಿದ್ದ ಅಡ್ವಾಣಿ, ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ ರಥಯಾತ್ರೆ ಹೊರಡುವ ಘೋಷಣೆ ಮಾಡುತ್ತಿರಲಿಲ್ಲ.
ಇಷ್ಟೊಂದು ದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿ ಬೆವರು ಸುರಿಸಿರುವ ನಾಯಕನೊಬ್ಬ ಪ್ರಧಾನಿಯಾಗುವ ಕನಸು ಕಂಡರೆ ಅದು ತಪ್ಪೇ? ಖಂಡಿತ ಅಲ್ಲ. ಆ ಪದವಿಗೇರುವ ಅರ್ಹತೆಯೂ ಅವರಿಗಿಲ್ಲವೇ? ಖಂಡಿತ ಇದೆ. ಆದರೆ ರಥಯಾತ್ರೆಗೆ ಪಡೆದಿರುವ ಪ್ರೇರಣೆ ಮತ್ತು ಘೋಷಿತ ಉದ್ದೇಶ ಎರಡರಲ್ಲಿಯೂ ಅಡ್ವಾಣಿ ಎಡವಿದಂತಿದೆ.
ಪ್ರೇರಣೆ : `ವೋಟಿಗಾಗಿ ನೋಟು~ ಹಗರಣದಲ್ಲಿ ತಮ್ಮ ಪಕ್ಷಕ್ಕೆ ಸೇರಿರುವ ಇಬ್ಬರು ಮಾಜಿ ಲೋಕಸಭಾ ಸದಸ್ಯರ ಬಂಧನ. ಉದ್ದೇಶ: ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ.
`ವೋಟಿಗಾಗಿ ನೋಟು~ ಹಗರಣದಲ್ಲಿ ಈ ವರೆಗೆ ಜೈಲಿಗೆ ಹೋಗಿರುವವರು ಕಾಂಗ್ರೆಸ್ ಪಕ್ಷದವರಲ್ಲದೆ ಇರಬಹುದು, ಆದರೆ ಅದು ಆ ಪಕ್ಷದ `ಪಾಪದ ಪಿಂಡ~ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ದೆಹಲಿ ಪೊಲೀಸರು ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಂತರಂಗದ ಚಾವಡಿಯ ಹಿರಿತಲೆಗಳೂ ಜೈಲು ಸೇರಬಹುದು.
 `ವಿರೋಧಪಕ್ಷಗಳ ಸದಸ್ಯರನ್ನು ಖರೀದಿಸಬೇಕಾಗಿರಲಿಲ್ಲ, ಸದನದಲ್ಲಿ ಪಡೆದ ಬಹುಮತವೇ ಇದಕ್ಕೆ ಸಾಕ್ಷಿ~ ಎಂದು ಕಾಂಗ್ರೆಸ್ ನಾಯಕರು ಈಗ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಕೊನೆಗೂ ಗೆದ್ದದ್ದು ಕೇವಲ 19 ಮತಗಳಿಂದ ಎನ್ನುವುದನ್ನು ಮರೆಯಬಾರದು.

ಆ 19 ಮತಗಳಲ್ಲಿ ಹದಿಮೂರು ಮತಗಳು ವಿರೋಧಪಕ್ಷಗಳ ಸದಸ್ಯರು ನಡೆಸಿದ ಅಡ್ಡಮತದಾನದಿಂದ ಗಳಿಸಿದ್ದು. ಎಂಟು ಮಂದಿ ಮತದಾನದಲ್ಲಿ ಭಾಗವಹಿಸಿರಲಿಲ್ಲ. ಈ ಎಲ್ಲ ವಿರೋಧಪಕ್ಷಗಳ ಸದಸ್ಯರು ತಮ್ಮ ಪಕ್ಷಗಳ ವಿಪ್ ಗೌರವಿಸಿ ವಿಶ್ವಾಸಮತಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರೆ ಯುಪಿಎ ಸರ್ಕಾರ ಉಳಿಯುತ್ತಿತ್ತೇ? ಅದೊಂದು ತಾಂತ್ರಿಕವಾದ ಗೆಲುವು, ನೈತಿಕವಾದುದಲ್ಲ. ಆದರೆ ಈ ಹಗರಣದಲ್ಲಿ ಬಿಜೆಪಿ ಪಾತ್ರವೇನೂ ಕಡಿಮೆ ಇರಲಿಲ್ಲ.
ಲಾಲ್‌ಕೃಷ್ಣ ಅಡ್ವಾಣಿ ಅವರು ಸುಮಾರು ನಾಲ್ಕು ದಶಕಗಳಿಂದ ಸಂಸತ್ ಸದಸ್ಯರಾಗಿ ಕಾರ‌್ಯನಿರ್ವಹಿಸುತ್ತಾ ಬಂದಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆ-ಗೌರವ ಪ್ರಶ್ನಾತೀತ. ಅದರ ಆಶಯಗಳಿಗೆ ಭಂಗ ಉಂಟಾದಾಗಲೆಲ್ಲ ಅವರು ಸಿಡಿದೆದ್ದವರು.
ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟದ ಉದ್ದೇಶವನ್ನು ಒಪ್ಪಿಕೊಂಡರೂ ಅವರು ಹಿಡಿದಿರುವ ಹಾದಿ ಸಂಸದೀಯ ಪ್ರಜಾಪ್ರಭುತ್ವದ ಬೇರುಗಳನ್ನು ದುರ್ಬಲಗೊಳಿಸುವಂತಹದ್ದು ಎಂಬ ಕಾರಣಕ್ಕಾಗಿ ವಿರೋಧವನ್ನು ಹೊಂದಿದ್ದವರು.
ಆದರೆ, ಇದೇ ಅಡ್ವಾಣಿಯವರು ಲೋಕಸಭೆಯಲ್ಲಿ ಎದ್ದು ನಿಂತು `ವೋಟಿಗಾಗಿ ನೋಟು~ ಹಗರಣದ `ಕುಟುಕು ಕಾರ್ಯಾಚರಣೆ~ಯ ಸೂತ್ರಧಾರ ತಾನೆಂದು ಘೋಷಿಸಿಕೊಳ್ಳುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ತಮಗೆ ನಂಬಿಕೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆ.

ಒಬ್ಬ ಸಂಸದನ ಮಾನ ಮತ್ತು ಪ್ರಾಣಕ್ಕೆ ಬೆದರಿಕೆ ಎದುರಾದರೆ ಆತ ಮೊದಲು ಮಾಡಬೇಕಾಗಿರುವ ಕೆಲಸ ಸಭಾಧ್ಯಕ್ಷರಿಗೆ ದೂರು ನೀಡುವುದು. ಯಾಕೆಂದರೆ ಸಂಸದರ ರಕ್ಷಣೆಯ ಭಾರವನ್ನು ಸಂವಿಧಾನವೇ ಸಭಾಧ್ಯಕ್ಷರಿಗೆ ನೀಡಿದೆ. ಈ ಹಗರಣದಲ್ಲಿಯೂ ಕಾಂಗ್ರೆಸ್ ಸದಸ್ಯರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಬಿಜೆಪಿ ಸಂಸದರಿಗೆ ಆಮಿಷವೊಡ್ಡಿದ್ದರೆ ಅಡ್ವಾಣಿಯವರು ಮೊದಲು ಮಾಡಬೇಕಾಗಿದ್ದ ಕೆಲಸ ಅವರನ್ನು ಕರೆದೊಯ್ದು ಲೋಕಸಭಾಧ್ಯಕ್ಷರಿಗೆ ದೂರು ಕೊಡಿಸುವುದು, ಜತೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸುವುದು.
ಇದು ಸಂಸದೀಯ ಪ್ರಜಾಪ್ರಭುತ್ವ ಮತ್ತು ನೆಲದ ಕಾನೂನಿನ ಮೇಲೆ ನಂಬಿಕೆ ಇರುವ ವ್ಯಕ್ತಿ ಮಾಡಬೇಕಾದ ಕೆಲಸ. ಆದರೆ ಅಡ್ವಾಣಿಯವರು ಮಾಡಿಸಿದ್ದು `ಕುಟುಕು ಕಾರ್ಯಾಚರಣೆ~. ಅವರು ಯಾಕೆ ಇಂತಹ ಅಡ್ಡಮಾರ್ಗ ಹಿಡಿದರು? ಆಗ ಲೋಕಸಭಾ ಅಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಮೇಲೆಯೂ ಅವರಿಗೆ ನಂಬಿಕೆ ಇರಲಿಲ್ಲವೇ? ಬೇರೆ ಏನಾದರೂ ಉದ್ದೇಶ ಇತ್ತೇ?
`ದೂರು ನೀಡಿದ್ದರೆ ಆಡಳಿತ ಪಕ್ಷವನ್ನು ಎಚ್ಚರಿಸಿದಂತಾಗುತ್ತಿತ್ತು, ಈ ಹಗರಣ ಬಯಲಿಗೆ ಬರುತ್ತಿರಲಿಲ್ಲ~ ಎಂದು ಅಡ್ವಾಣಿ ಅವರ ಪಕ್ಷದ ಕೆಲವು ನಾಯಕರು ಹೇಳುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಆಡಳಿತ ಪಕ್ಷದ ಬಣ್ಣ ಬಯಲು ಮಾಡಲು ಇವರೇ ಮಾಡಿಸಿಟ್ಟುಕೊಂಡಿದ್ದ `ಕುಟುಕು ಕಾರ್ಯಾಚರಣೆ~ಯ ಸಿಡಿ ಇತ್ತಲ್ಲ?
ಲೋಕಸಭಾಧ್ಯಕ್ಷರಿಂದ ನ್ಯಾಯ ಸಿಗದೆ ಇದ್ದಾಗ ಆ ಸಿಡಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಬಹುದಿತ್ತು. ಆದರೆ ಬಿಜೆಪಿ ಹಿಡಿದದ್ದು ಅಡ್ಡಮಾರ್ಗ. ಅದು ಒಂದು ಖಾಸಗಿ ಟಿವಿ ಚಾನೆಲ್ ಜತೆ ಕೂಡಿಕೊಂಡು `ಕುಟುಕು ಕಾರ್ಯಾಚರಣೆ~ ನಡೆಸಿ, ಲೋಕಸಭೆಗೆ ಬಂದು ನೋಟಿನ ಕಂತೆಗಳನ್ನು ಲೋಕಸಭಾಧ್ಯಕ್ಷರ ಮುಂದೆ ಸುರಿದದ್ದು. ಈ ಅಡ್ಡಮಾರ್ಗವನ್ನು ಎಲ್.ಕೆ.ಅಡ್ವಾಣಿಯವರಂತಹ ಹಿರಿಯ ನಾಯಕರು ಈಗ ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ.
ಸತ್ಯ ಸಂಗತಿ ಏನೆಂದರೆ, ಲೋಕಸಭಾಧ್ಯಕ್ಷರು ಇಲ್ಲವೇ ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಕಾರಣಕ್ಕೆ ಬಿಜೆಪಿ `ಕುಟುಕು ಕಾರ್ಯಾಚರಣೆ~ ನಡೆಸಿ ಸದನದಲ್ಲಿ ನೋಟಿನ ಕಂತೆ ಪ್ರದರ್ಶಿಸಿದ್ದಲ್ಲ.
ವಿಶ್ವಾಸ ಮತ ಯಾಚನೆಯ ಮೊದಲೇ ಬಿಜೆಪಿ ನಾಯಕರಿಗೆ ಫಲಿತಾಂಶ ಗೊತ್ತಾಗಿ ಹೋಗಿತ್ತು. ಬಿಜೆಪಿಯ ಏಳೆಂಟು ಸದಸ್ಯರು ಸೇರಿದಂತೆ ಬೇರೆಬೇರೆ ಪಕ್ಷಗಳಿಗೆ ಸೇರಿರುವ 15-20 ಸದಸ್ಯರು ವಿಶ್ವಾಸಮತ ಗೊತ್ತುವಳಿ ಪರ ಮತ ಚಲಾಯಿಸಲು ಇಲ್ಲವೇ ಮತದಾನದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿರುವ ಸುಳಿವು ವಿರೋಧಪಕ್ಷಗಳ ನಾಯಕರಿಗೆ ಸಿಕ್ಕಿತ್ತು (ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಮಂಜುನಾಥ್ ಕುನ್ನೂರು, ಎಚ್.ಟಿ.ಸಾಂಗ್ಲಿಯಾನಾ ಮತ್ತು ಮನೋರಮಾ ಮಧ್ವರಾಜ್ ಪಕ್ಷದ ವಿಪ್ ಉಲ್ಲಂಘಿಸಿ ಗೊತ್ತುವಳಿ ಪರ ಮತ ಚಲಾಯಿಸಲಿದ್ದಾರೆ ಎಂಬ `ಸ್ಕೂಪ್~ ಸುದ್ದಿ ವಿಶ್ವಾಸಮತ ಯಾಚನೆಯ ದಿನವೇ `ಪ್ರಜಾವಾಣಿ~ಯಲ್ಲಿ ಪ್ರಕಟವಾಗಿತ್ತು).
ಅಂತಿಮವಾಗಿ ಬಿಜೆಪಿಯ ನಾಲ್ಕು ಸದಸ್ಯರು ಸೇರಿದಂತೆ  ಬೇರೆ ವಿರೋಧಪಕ್ಷಗಳ ಹದಿಮೂರು ಲೋಕಸಭಾ ಸದಸ್ಯರು ಗೊತ್ತುವಳಿ ಪರ ಮತ ಚಲಾಯಿಸಿದ್ದರು. ಎಂಟು ಸದಸ್ಯರು ಮತದಾನದಲ್ಲಿ ಭಾಗವಹಿಸದೆ ತಮ್ಮ ಪಕ್ಷಗಳ ವಿಪ್ ಉಲ್ಲಂಘಿಸಿದ್ದರು.
ಈ ಫಲಿತಾಂಶವನ್ನು ನಿರೀಕ್ಷಿಸಿದ್ದ ಬಿಜೆಪಿ ನಾಯಕರು `ಯುಪಿಎ ಸರ್ಕಾರ ಪಡೆದ ಬಹುಮತ ಪವಿತ್ರವಾದುದಲ್ಲ, ಕಳಂಕಿತವಾದುದು~ ಎನ್ನುವುದನ್ನು ಸಾಬೀತುಪಡಿಸಲು ಅನುಸರಿಸಿದ ಮಾರ್ಗವೇ ಟಿವಿ ಚಾನೆಲ್ ಜತೆಗೂಡಿ ನಡೆಸಿದ್ದ `ಕುಟುಕು ಕಾರ್ಯಾಚರಣೆ~.
ಆದರೆ ಈ ಮೂಲಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಾವು ಹಾನಿ ಮಾಡುತ್ತಿದ್ದೇವೆ ಎಂಬ ಅರಿವು ಆ ಕಾಲದಲ್ಲಿ ಅಳಿವು-ಉಳಿವುಗಳ ರಾಜಕೀಯದ ಜಿದ್ದಾಜಿದ್ದಿಯಲ್ಲಿ ಮುಳುಗಿದ್ದ ಬಿಜೆಪಿ ನಾಯಕರಿಗೆ ಆಗಿರಲಿಲ್ಲ. ಮೂರು ವರ್ಷಗಳ ನಂತರವಾದರೂ ಅದರ ಅರಿವು ಬಿಜೆಪಿಗೆ ಆಗಿರಬಹುದು ಎಂದು ನಿರೀಕ್ಷಿಸಿದ್ದವರಿಗೆ ಅಡ್ವಾಣಿ ಅವರ ಆವೇಶಭರಿತ ಹೇಳಿಕೆಯಿಂದ ನಿರಾಸೆಯಾಗಿದೆ.ಪಕ್ಷ ಮಾಡಿರುವ ತಪ್ಪನ್ನು ಸರಿಪಡಿಸಬೇಕಾಗಿದ್ದ ಈ ಹಿರಿಯ ನಾಯಕ ಆ ತಪ್ಪನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ.
ಎರಡನೆಯದಾಗಿ ಅಡ್ವಾಣಿ ಅವರ ರಥಯಾತ್ರೆಯ ಘೋಷಿತ ಉದ್ದೇಶ -ಅದು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ. ಅಡ್ವಾಣಿಯವರ ವೈಯಕ್ತಿಕ ಪ್ರಾಮಾಣಿಕತೆಯನ್ನು ಯಾರೂ ಸಂಶಯಿಸುವುದು ಸಾಧ್ಯ ಇಲ್ಲ. ಆದರೆ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆಗೆ ಹೊರಟರೆ ಅವರ ಜತೆಯಲ್ಲಿ ಹೋಗುವವರು ಯಾರು?
ಈಗ ಹೈದರಾಬಾದ್‌ನ ಜೈಲಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಸೋದರರನ್ನು ತಮ್ಮ ಮಕ್ಕಳ ಸಮಾನ ಎಂದು ಮೊನ್ನೆ ಮೊನ್ನೆವರೆಗೂ ಹೇಳುತ್ತಿದ್ದ ಸುಷ್ಮಾ ಸ್ವರಾಜ್ ಅವರೇ? ಗಣಿ ಅಕ್ರಮದ ಗಂಭೀರ ಆರೋಪಗಳನ್ನೊಳಗೊಂಡ ತನಿಖಾ ವರದಿಯನ್ನು ಕರ್ನಾಟಕದ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ನಂತರವೂ  ಬಹಿರಂಗ ಸಭೆಯಲ್ಲಿ ಅವರ ಜತೆ ಪಾಲ್ಗೊಂಡು ಕಾಣಿಕೆಗಳನ್ನು ಸ್ವೀಕರಿಸಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ?
ಭ್ರಷ್ಟಾಚಾರದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಲು ಸಾಧ್ಯ ಇರುವ ಲೋಕಾಯುಕ್ತರ ನೇಮಕವನ್ನು ಏಳುವರ್ಷಗಳಿಂದ ಮುಂದೂಡುತ್ತಾ ಬಂದಿರುವ ನರೇಂದ್ರ ಮೋದಿಯವರೇ?
ಹುಡ್ಕೋ ಹಗರಣದ ಸುಳಿಯಿಂದ ಇನ್ನೂ ಮುಕ್ತರಾಗದೆ ಇರುವ ಅನಂತಕುಮಾರ್ ಅವರೇ? ಭ್ರಷ್ಟಾಚಾರದ ಹಲವು ಹಗರಣಗಳಲ್ಲಿ ಸಿಲುಕಿ ನ್ಯಾಯಾಲಯಕ್ಕೆ ಸುತ್ತುಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ?
ಭ್ರಷ್ಟಾಚಾರದ ಆರೋಪದಿಂದಾಗಿಯೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ರಮೇಶ್ ಪೋಖ್ರಿಯಾಲ್ ಅವರೇ? ಈಗಾಗಲೇ ಜೈಲಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೇ? ಬಂಧನದ ಭೀತಿಯಲ್ಲಿರುವ ಮಾಜಿ ಸಚಿವರಾದ ಕರುಣಾಕರ ರೆಡ್ಡಿ ಮತ್ತು ಶ್ರಿರಾಮುಲು ಅವರೇ? ಇವರೆಲ್ಲರನ್ನೂ ಬಲ್ಲ, ಇವರೆಲ್ಲ ನಡೆಸುತ್ತಿರುವ ಅವಾಂತರಗಳನ್ನು ಕಣ್ಣಾರೆ ಕಂಡೂ ಬಾಯಿ ಮುಚ್ಚಿಕೊಂಡು ಕೂತಿರುವ ಆರ್‌ಎಸ್‌ಎಸ್ ನಾಯಕರೇ? ಯಾರು?
ಅಚ್ಚರಿಯ ಸಂಗತಿಯೆಂದರೆ ಇವರೆಲ್ಲರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದದ್ದು ಕಳೆದ ಒಂದೆರಡು ತಿಂಗಳುಗಳ ಅವಧಿಯಲ್ಲಲ್ಲ. ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಜನ ಮಾತನಾಡುತ್ತಿರುವ ಬಳ್ಳಾರಿಯ ರೆಡ್ಡಿ ಸೋದರರ ಅಕ್ರಮ ಗಣಿಗಾರಿಕೆಯ ಸಂಗತಿ ತಮಗೆ ಗೊತ್ತಿರಲಿಲ್ಲ ಎಂದು ಹೇಳುವಷ್ಟು ಅಡ್ವಾಣಿಯವರು ಅಜ್ಞಾನಿಯಲ್ಲ.
`ಆಪರೇಷನ್ ಕಮಲ~ಕ್ಕೆ ಬಳಕೆಯಾಗಿದ್ದ ಹಣ, ಅದಕ್ಕಿಂತಲೂ ಮೊದಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಿಂದ ರವಾನೆಯಾಗಿರುವ ನಿಧಿ ಯಾವ ಮೂಲದಿಂದ ಬಂದಿರುವುದೆಂದು ತಿಳಿಯದಷ್ಟು ಅಡ್ವಾಣಿ ಅಮಾಯಕರೂ ಅಲ್ಲ.
ಹೌದು, ಅವರು ಈಗ ಎಲ್ಲ ರೀತಿಗಳಿಂದಲೂ ಸ್ಥಾನ ವಂಚಿತರು. ಅವರು ಪಕ್ಷದ ಅಧ್ಯಕ್ಷರಲ್ಲ, ವಿರೋಧಪಕ್ಷದ ನಾಯಕರಲ್ಲ, ಅಧಿಕಾರ ಮೊದಲೇ ಇಲ್ಲ. ಆದರೆ `ಆಪರೇಷನ್ ಕಮಲ~ ನಡೆದಾಗ ವಿರೋಧಪಕ್ಷದ ನಾಯಕರಾಗಿದ್ದರಲ್ಲ? ಪ್ರಧಾನಿ ಅಭ್ಯರ್ಥಿ ಎಂದೇ ಆ ಕಾಲದಲ್ಲಿ ಪಕ್ಷ ಬಿಂಬಿಸಿತ್ತಲ್ಲ? ಅದಕ್ಕಿಂತ ಬೇರೆ ಅಧಿಕಾರ ಏನು ಬೇಕಿತ್ತು? ಆಗಲೂ ಅಡ್ವಾಣಿ ಅವರು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣದ ಬಗ್ಗೆ ಮಾತನಾಡುತ್ತಿದ್ದರೇ ಹೊರತು ತಮ್ಮವರ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿರಲಿಲ್ಲ.
ಈ ಎಲ್ಲ ಪ್ರಶ್ನೆಗಳಿಗೆ ಅಡ್ವಾಣಿಯವರು ತಮ್ಮ ಭ್ರಷ್ಟಾಚಾರ ವಿರೋಧಿ ಯಾತ್ರೆಯಲ್ಲಿ ಉತ್ತರಿಸಬೇಕಾಗುತ್ತದೆ. ಜನತೆಯ ಪ್ರಶ್ನೆಗಳನ್ನು `ರಾಜಕೀಯ ಪ್ರೇರಿತ~ ಎಂದು ಪಕ್ಕಕ್ಕೆ ತಳ್ಳಿಬಿಡಬಹುದು, ಆದರೆ ಆತ್ಮಸಾಕ್ಷಿ ಕೇಳುವ ಪ್ರಶ್ನೆಗೆ? ಉತ್ತರಿಸಬೇಕಾಗಿರುವ ಪ್ರಶ್ನೆ ಇನ್ನೂ ಒಂದು ಇದೆ.
ಅಡ್ವಾಣಿಯವರು ತಮ್ಮ ಮೊದಲ ರಥಯಾತ್ರೆ ಪ್ರಾರಂಭಿಸಿದ್ದು 21 ವರ್ಷಗಳ ಹಿಂದೆ. ಈ ಎರಡು ದಶಕಗಳ ಅವಧಿಯಲ್ಲಿ ಅಡ್ವಾಣಿ ಅವರ ವಯಸ್ಸು ಹೆಚ್ಚಿದೆ, ಭಾರತದ ಮತದಾರರ ಸರಾಸರಿ ವಯಸ್ಸು ಕಡಿಮೆಯಾಗಿದೆ. ಇದಕ್ಕೆ ಅನುಗುಣವಾಗಿ ದೇಶದ ಸಾಮಾಜಿಕ-ರಾಜಕೀಯ ಚಿತ್ರ ಬದಲಾಗಿ ಹೋಗಿದೆ.

ಅಣ್ಣಾ ಹಜಾರೆ ಚಳವಳಿಯಲ್ಲಿ ಪಾಲ್ಗೊಂಡವರ ಸರಾಸರಿ ವಯಸ್ಸು 30-40ಕ್ಕಿಂತ ಹೆಚ್ಚಿರಲಾರದು. ಈ ಯುವಸಮುದಾಯ 84 ವರ್ಷದ ನಾಯಕನನ್ನು ಒಪ್ಪುವುದೇ? ಅದೂ ಎದುರಾಳಿ ಪಕ್ಷದಲ್ಲಿ 40ರ ವಯಸ್ಸಿನ ನಾಯಕನಿರುವಾಗ.
ಅಡ್ವಾಣಿಯವರದ್ದು ಈಗ `ಶ್ರಿಕೃಷ್ಣ~ನಾಗುವ ವಯಸ್ಸು, `ಅರ್ಜುನ~ನಾಗುವುದಲ್ಲ. `ಅರ್ಜುನ~ನನ್ನು ಅವರೇ ಆರಿಸಿ ರಥಕ್ಕೆ ಹತ್ತಿಸಿಕೊಳ್ಳಬೇಕು. ಸದ್ಯಕ್ಕೆ ಬಿಜೆಪಿಯಲ್ಲಿ ಅಂತಹ `ಅರ್ಜುನ~ನ ಸ್ಥಾನ ತುಂಬಬಲ್ಲವರು ಬಹಳ ಇಲ್ಲ. ಇರುವವರಲ್ಲಿ ಒಳ್ಳೆಯ ಆಯ್ಕೆ- ಅರುಣ್ ಜೇಟ್ಲಿ. ಬುದ್ಧಿವಂತ ಮತ್ತು ಕಳಂಕರಹಿತ. ಯುವಕನಲ್ಲದಿದ್ದರೂ ನಿವೃತ್ತಿ ವಯಸ್ಸಲ್ಲ. ಅಡ್ವಾಣಿಯವರೇಕೆ ಈ ಬಗ್ಗೆ ಯೋಚನೆ ಮಾಡಬಾರದು?