`ನಗರದಲ್ಲಿ ನಡೆಯುವ ಅಪರಾಧಗಳ ಮಾಹಿತಿ ನಮಗೆ ಗೊತ್ತಾಗದೆ ಪತ್ರಕರ್ತರಿಗೆ ಹೇಗೆ ಗೊತ್ತಾಗುತ್ತದೆ?` ಎಂದು ಯಾರಾದರೂ ಪೊಲೀಸರು ಕೇಳಿದರೆ ಅವರು ತಮಗೆ ಗೊತ್ತಿಲ್ಲದೆಯೇ ತಾವು ಅದಕ್ಷರೆಂದು ಒಪ್ಪಿಕೊಂಡ ಹಾಗೆ. ಈಗ ದಕ್ಷಿಣ ಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್‌ಸಿಂಗ್ ಈ ಪ್ರಶ್ನೆ ಕೇಳಿದ್ದಾರೆ. ಅಷ್ಟು ಮಾತ್ರವಲ್ಲ ಕಳೆದ ಶನಿವಾರ ಪಡೀಲ್‌ನ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಹುಡುಗಿಯರೂ ಸೇರಿದಂತೆ ಹನ್ನೆರಡು ಮಂದಿ ನಿರಪರಾಧಿಗಳ ಮೇಲೆ ಹಲ್ಲೆ ನಡೆಸಿದ ಪಾಶವೀ ಕೃತ್ಯವನ್ನು ಚಿತ್ರೀಕರಿಸಿಕೊಂಡ ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂದೇಶವನ್ನು ಪಕ್ಕಕ್ಕಿಟ್ಟು ಸಂದೇಶವಾಹಕರ ತಲೆಗೆ ಬಂದೂಕು ಇಡುವುದು ಪೊಲೀಸರ ಹಳೆಯ ಚಾಳಿ. ಅರಣ್ಯದಲ್ಲಿಯೇ ಹೋಗಿ ಟೆಂಟ್‌ಹಾಕಿದ್ದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಾವಿರಾರು ಪೊಲೀಸರ ಕಣ್ಣಿಗೆ ಬೀಳದ ಪಾತಕಿ ವೀರಪ್ಪನ್‌ನನ್ನು ತಮಿಳುನಾಡಿನ `ನಕ್ಕೀರನ್`ಪತ್ರಿಕೆಯ ಸಂಪಾದಕ ಸಲೀಸಾಗಿ ಅತ್ತೆಮನೆಯಂತೆ ಹೋಗಿ ಸಂದರ್ಶನ ಮಾಡಿಬರುತ್ತಿದ್ದರು. ಆಗಲೂ ಪೊಲೀಸರು ಈ ಪ್ರಶ್ನೆ ಕೇಳಿದ್ದರು.
ಶೋಧಕಾರ್ಯಕ್ಕೆ ಅನುಕೂಲವಾಗುವ ಅತ್ಯಾಧುನಿಕ ಸಲಕರಣೆಗಳ ಜತೆ ಈ ಕೆಲಸಕ್ಕಾಗಿಯೇ ವಿಶೇಷ ತರಬೇತಿ ಪಡೆದ ಪೊಲೀಸರು ಪತ್ತೆಹಚ್ಚಲಾಗದ ನಕ್ಸಲೀಯ ನಾಯಕರನ್ನು ಆಂಧ್ರಪ್ರದೇಶ, ಒರಿಸ್ಸಾ, ಛತ್ತೀಸ್‌ಘಡ, ಪಶ್ಚಿಮ ಬಂಗಾಳಗಳಲ್ಲಿ ಈಗಲೂ ಪತ್ರಕರ್ತರು ಹೋಗಿ ಮಾತನಾಡಿಸಿಕೊಂಡು ಬರುತ್ತಿದ್ದಾರೆ. ಅಲ್ಲಿಯ ಪೊಲೀಸರು ಕೂಡಾ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ನಕ್ಸಲೀಯರನ್ನು ಸಂದರ್ಶಿಸಿದ ಪತ್ರಕರ್ತರನ್ನು ಮಾತ್ರವಲ್ಲ ನಕ್ಸಲೀಯರ ಪ್ರಭಾವ ಇರುವ ಪ್ರದೇಶಕ್ಕೆ ಭೇಟಿ ನೀಡಿ ಲೇಖನ ಬರೆದಿದ್ದ ಪ್ರಖ್ಯಾತ ಲೇಖಕಿ ಅರುಂಧತಿ ರಾಯ್ ವಿರುದ್ಧವೂ ಮೊಕದ್ದಮೆ ದಾಖಲಿಸುವ ಪ್ರಯತ್ನ ಮಾಡಿತ್ತು. ಇಂತಹ ಘಟನೆಗಳು ನೂರಾರು ಇವೆ.
ಪತ್ರಕರ್ತರೆಲ್ಲರೂ ಸಂಭಾವಿತರಿರಲಾರರು, ಟಿಆರ್‌ಪಿಗಾಗಿ ಕಿಡಿಗೇಡಿತನ ಮಾಡುತ್ತಿರುವ ಟಿವಿ ಚಾನೆಲ್‌ಗಳು ಅತಿರಂಜನೆ, ರೋಚಕತೆಯ ಬೆನ್ನುಹತ್ತಿ ಪತ್ರಿಕಾವೃತ್ತಿಯ ಮೂಲವ್ಯಾಖ್ಯೆಯನ್ನೇ ಬದಲಿಸಲು ಹೊರಟಿರುವುದೂ ನಿಜ. ಆದರೆ ಪೊಲೀಸರು ತಮ್ಮ ಅದಕ್ಷತೆಯನ್ನು ಮುಚ್ಚಿಕೊಳ್ಳಲು ಪತ್ರಕರ್ತರ `ಅಧಿಕಪ್ರಸಂಗ`ವನ್ನು ಗುರಾಣಿಯಾಗಿ ಬಳಸುತ್ತಿರುವುದು ಅಕ್ಷಮ್ಯ. ಮಂಗಳೂರು ನಗರದ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿರುವುದು ಹೆಚ್ಚು ಪೊಲೀಸರೋ, ಪತ್ರಕರ್ತರೋ? ಅಲ್ಲಿನ ನಗರ ವ್ಯಾಪ್ತಿಯಲ್ಲಿ ಕನಿಷ್ಠ 25 ಪೊಲೀಸ್‌ಠಾಣೆಗಳಿರಬಹುದು, ಒಂದೊಂದು ಠಾಣೆಯಲ್ಲಿ ಕನಿಷ್ಠ 50 ಸಿಬ್ಬಂದಿ ಇರಬಹುದು. ಅಂದರೆ ಅಂದಾಜು 1250 ಪೊಲೀಸರಿದ್ದಾರೆ. ನಗರದಲ್ಲಿರುವ ಹಿರಿಯ-ಕಿರಿಯ ವರದಿಗಾರರನ್ನು ಒಟ್ಟು ಸೇರಿಸಿದರೂ ಸಂಖ್ಯೆ 50 ದಾಟಲಾರದು. ಈ 50 ಪತ್ರಕರ್ತರಿಗೆ ಅಪರಾಧಿ ಕೃತ್ಯಗಳು ತಕ್ಷಣ ಗೊತ್ತಾಗುವುದಿದ್ದರೆ, ಮೊಬೈಲ್, ವಾಕಿಟಾಕಿ, ಕಾರು-ಜೀಪು ಮತ್ತು ಶಸ್ತ್ರಾಸ್ತ್ರಗಳ ಜತೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿಯೇ ಇರುವ ಗುಪ್ತಚರ ವಿಭಾಗವನ್ನೂ ಹೊಂದಿರುವ 1250 ಸಿಬ್ಬಂದಿ ಸಾಮರ್ಥ್ಯದ ಪೊಲೀಸರಿಗೆ ಯಾಕೆ ಗೊತ್ತಾಗುತ್ತಿಲ್ಲ?
ನಿರ್ದಿಷ್ಟವಾಗಿ ಶನಿವಾರ ಮಂಗಳೂರಿನಲ್ಲಿ ನಡೆದ ಘಟನೆಯ ಉದಾಹರಣೆಯನ್ನೇ ನೋಡುವುದಾದರೆ, ಘಟನೆ ನಡೆದ ಸ್ಥಳಕ್ಕೆ ಹೋಗಿದ್ದ ಟಿವಿ ಚಾನೆಲ್‌ನ ವರದಿಗಾರ ಮೊದಲು ಮಾಡಿದ್ದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಫೋನ್. ಅದರ ನಂತರ ಇನ್ನೊಂದು ಚಾನೆಲ್‌ನ ವರದಿಗಾರ ಕೂಡಾ ಅದೇ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ನ ಮೊಬೈಲ್‌ಗೆ ಪೋನ್ ಮಾಡಿದ್ದರು. ಆ ಅಧಿಕಾರಿ ಎತ್ತಲಿಲ್ಲವಂತೆ. (ಎಸ್‌ಪಿಯವರು ಮೊಬೈಲ್‌ನ ಕಾಲ್ ವಿವರ ತರಿಸಿಕೊಂಡು ತನಿಖೆ ನಡೆಸಲಿ) ಘಟನೆ ನಡೆದ ಸ್ಥಳಕ್ಕೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹೆಚ್ಚೆಂದರೆ 2-3ಕಿ.ಮೀ.ದೂರ. ಇಂತಹ ಘಟನೆಗಳು ನಡೆದಾಗ ಅಕ್ಕಪಕ್ಕದ ಮನೆಯವರಲ್ಲಿ ಯಾರಾದರೂ ಫೋನ್ ಮಾಡಿರುತ್ತಾರೆ. ಹೀಗಿದ್ದರೂ ಪೊಲೀಸರು ಸ್ಥಳಕ್ಕೆ ಹೋಗಲು ಅಷ್ಟೊಂದು ವಿಳಂಬ ಮಾಡಿದ್ದು ಯಾಕೆ? ಇಂತಹ ಘಟನೆಗಳು ನಡೆದಾಗ ದುಷ್ಕರ್ಮಿಗಳ ಸಂಖ್ಯೆ ಹೆಚ್ಚಿರುತ್ತದೆ ಎಂದು ಗೊತ್ತಿದ್ದರೂ ಮೊದಲು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಯಾಕೆ ಕಳುಹಿಸಿಲ್ಲ?
ದುಷ್ಕರ್ಮಿಗಳು ಹುಡುಗಿಯ ಎದೆಯ ಮೇಲೆ ಕೈಹಾಕುತ್ತಿದ್ದಾಗ ಅಲ್ಲಿಯೇ ಎದುರಿಗಿದ್ದ ಪೊಲೀಸರು ಕಣ್ಣುಕಣ್ಣುಬಿಟ್ಟು ನಿಂತಿದ್ದರಲ್ಲಾ, ಇದಕ್ಕೇನು ಅನ್ನುತ್ತೀರಿ ಪೊಲೀಸ್ ವರಿಷ್ಠಾಧಿಕಾರಿಯವರೇ? ಈ ದೃಶ್ಯಗಳನ್ನು ಟಿವಿಗಳಲ್ಲಿ ನೋಡಿದ ಯಾರಿಗೂ ಬರಿಗೈಯಲ್ಲಿಯಾದರೂ ಹೋಗಿ ಆ ದುಷ್ಕರ್ಮಿಗಳ ಮುಸುಡಿಗೆ ಗುದ್ದುವ ಎಂದಾಗುತ್ತದೆ, ಪೊಲೀಸರು ಕೈಯಲ್ಲಿದ್ದ ಲಾಠಿಯನ್ನೂ ಎತ್ತದೆ ನಿಂತಲ್ಲೇ ಕಲ್ಲಾಗಿದ್ದರಲ್ಲಾ? ದಾಳಿಯಲ್ಲಿ ಪಾಲ್ಗೊಂಡವರೆಲ್ಲರ ಚಿತ್ರಗಳನ್ನು ಟಿವಿ ಚಾನೆಲ್‌ಗಳು ಪ್ರಸಾರಮಾಡಿವೆ. ಆದರೆ ಇಲ್ಲಿಯ ವರೆಗೆ ಬಂಧಿಸಿರುವುದು ಕೇವಲ ಎಂಟು ಮಂದಿಯನ್ನು. ಉಳಿದವರನ್ನು ಬಂಧಿಸಲು ಯಾಕೆ ಸಾಧ್ಯವಾಗಿಲ್ಲ?
ಪೊಲೀಸರು ಪತ್ರಕರ್ತರ ಮೇಲೆ ಹೊರಿಸುತ್ತಿರುವ ಆರೋಪ ಆತ್ಮರಕ್ಷಣೆಯ ಹತಾಶ ಪ್ರಯತ್ನ ಅಷ್ಟೆ. ವಾಸ್ತವ ಸಂಗತಿ ಏನೆಂದರೆ ದಕ್ಷಿಣಕನ್ನಡದಲ್ಲಿ ಪೊಲೀಸ್ ಇಲಾಖೆಯೇ ಇಲ್ಲ. ಯಾಕೆಂದರೆ ಅಲ್ಲಿ ಆಡಳಿತಾರೂಢ ಪಕ್ಷ ಮತ್ತು ಸಂಘ ಪರಿವಾರದ ನಾಯಕರ ಮಧ್ಯಪ್ರವೇಶದಿಂದಾಗಿ ದಕ್ಷತೆ, ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯಿಂದ ಕೆಲಸ ಮಾಡುವ ಪೊಲೀಸರಿಗೆ ಜಾಗವೇ ಇಲ್ಲದಂತಾಗಿದೆ. ಈಗ ಸಿಬಿಐಗೆ ವರ್ಗಾವಣೆಯಾಗಿರುವ ಸುಬ್ರಹ್ಮಣ್ಯೇಶ್ವರ ರಾವ್ ಎಂಬುವವರು ಸುಮಾರು ಎರಡೂವರೆ ವರ್ಷಗಳ ಕಾಲ ದಕ್ಷಿಣಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರ ಕಾಲದಲ್ಲಿ ಹಿಂದೂ ಸಂಸ್ಕೃತಿಯ `ಮಾನ ಉಳಿಸುವ` ಹಾವಳಿ ಕಡಿಮೆ ಇತ್ತು. ಆದರೆ ಅವರಿಗೆ ಬಹಳ ದಿನ ಅಲ್ಲಿ ಉಳಿಯಲು ಆಗಲಿಲ್ಲ. ಸಂಘ ಪರಿವಾರದ ಸದಸ್ಯರ ವಿರುದ್ಧ ಕ್ರಮ ಕೈಗೊಂಡ ಸುಳ್ಯ ಪೊಲೀಸ್ ಠಾಣೆಯ ಅಧಿಕಾರಿಯ ಬೆಂಬಲಕ್ಕೆ ನಿಂತ ಕಾರಣಕ್ಕಾಗಿ ಆಡಳಿತಾರೂಢ ಪಕ್ಷಕ್ಕೆ ಸೇರಿದ ಸ್ಥಳೀಯ ರಾಜಕಾರಣಿಗಳ ಕಣ್ಣುಕೆಂಪಾಯಿತು. ಕೊನೆಗೆ ಅವರ ವರ್ಗಾವಣೆಯಾಯಿತು. ಈಗ ಹಿಂದೂ ಹುಡುಗಿಯ ಜತೆ ಮಾತನಾಡುತ್ತಿರುವ ಮುಸ್ಲಿಮ್ ಹುಡುಗರನ್ನು ಬೇಟೆಯಾಡುವ ಕಾರ್ಯಾಚರಣೆ ಮತ್ತೆ ಪ್ರಾರಂಭವಾಗಿದೆ. `ಈ ರೀತಿ ಪಾರ್ಟಿಗಳು ನಡೆಯುತ್ತಿರುವ ಸ್ಥಳಕ್ಕೆ ನುಗ್ಗಿ ದಾಂಧಲೆಗಳು ವಾರಕ್ಕೆ ಒಂದೆರಡಾದರೂ ಅಲ್ಲಿ ನಡೆಯುತ್ತಿವೆ. ಆದರೆ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳದಿರುವ ಕಾರಣ ಅವುಗಳನ್ನೂ ವರದಿ ಮಾಡಲೂ ಆಗುತ್ತಿಲ್ಲ` ಎನ್ನುತ್ತಾರೆ ಸ್ಥಳೀಯ ಪತ್ರಕರ್ತರು.
ಸಾರ್ವಜನಿಕರು ತಮಗೆ ತಿಳಿದಿರುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸದೆ ಪತ್ರಕರ್ತರಿಗೆ ಪೋನ್ ಮಾಡಿ ಯಾಕೆ ತಿಳಿಸುತ್ತಾರೆ ಎನ್ನುವುದನ್ನು ಕಂಡು ಹಿಡಿಯಲು ವಿಶೇಷ ತನಿಖೆಯ ಅಗತ್ಯ ಇಲ್ಲ. ಯಾಕೆಂದರೆ ದಕ್ಷಿಣ ಕನ್ನಡದ ಸಾಮಾನ್ಯ ಜನ ಪೊಲೀಸರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಇದೇ ಮಂಗಳೂರಿನ ಪಬ್ ಮೇಲೆ ದಾಳಿ ನಡೆಸಿದ ಬಜರಂಗದಳದ ಸದಸ್ಯರು ಅಲ್ಲಿದ್ದ ಹುಡುಗಿಯರ ಕೂದಲು ಹಿಡಿದು ಎಳೆದಾಡಿದರು, ಹುಡುಗರ ಮೇಲೆ ಹಲ್ಲೆ ನಡೆಸಿದರು. ಆ ದುಷ್ಕೃತ್ಯದಲ್ಲಿ ತೊಡಗಿದ್ದವರಿಗೇನಾದರೂ ಶಿಕ್ಷೆಯಾಯಿತೇ? ಆ ಆರೋಪಿಗಳಲ್ಲಿ ಎಷ್ಟು ಮಂದಿ ಈಗ ಜೈಲಲ್ಲಿದ್ದಾರೆ? ಯಾವುದೋ ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದ ಹುಡುಗ-ಹುಡುಗಿಯನ್ನು ಪೊಲೀಸ್‌ಠಾಣೆಗೆ ಎಳೆದೊಯ್ದಾಗ, ಕಾನೂನು ಕೈಗೆತ್ತಿಕೊಂಡ ಪುಂಡರ ವಿರುದ್ಧ ದೂರು ದಾಖಲು ಮಾಡದೆ, ಆ ಹುಡುಗ-ಹುಡುಗಿಯ ಮೇಲೆ ಸುಳ್ಳು ಆರೋಪ ಹೊರಿಸಿದರೆ ಸಾರ್ವಜನಿಕರಿಗಾದರೂ ಪೊಲೀಸರ ಮೇಲೆ ಎಲ್ಲಿಂದ ನಂಬಿಕೆ ಬರಬೇಕು?
ಮಂಗಳೂರಿನಲ್ಲಿ ಹಿಂದೂ ಮತ್ತು ಮುಸ್ಲಿಮ್ ಯುವಕರಲ್ಲಿ ತಮ್ಮದೇ ಆಗಿರುವ `ಗುಪ್ತಚರ ವ್ಯವಸ್ಥೆ` ಇದೆ. ಹಿಂದೂ ಹುಡುಗಿಯ ಜತೆಗಿರುವ ಮುಸ್ಲಿಮ್ ಹುಡುಗರನ್ನು ಹುಡುಕಿಕೊಂಡು ಹಿಂದೂ ಯುವಕರು ಅಡ್ಡಾಡುತ್ತಿದ್ದರೆ, ಅವರನ್ನು ಹಿಂಬಾಲಿಸಿಕೊಂಡೇ ಇರುವ ಮುಸ್ಲಿಮ್ ಯುವಕರ ಗುಂಪು ಕೂಡಾ ಇದೆ. ಇದೇ ರೀತಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಹಿಂಬಾಲಿಸುತ್ತಿದ್ದ ಮುಸ್ಲಿಮ್ ಯುವಕರಿಗೆ, ಅವರು ನಡೆಸಲು ಯೋಜಿಸಿರುವ `ಆಪರೇಷನ್ ಹೋಮ್-ಸ್ಟೇ`ಯ ಸುಳಿವು ಸಿಕ್ಕಿದೆ. ತಕ್ಷಣ ಅವರು ತಮಗೆ ಪರಿಚಯ ಇದ್ದ ಕೆಲವು ಚಾನೆಲ್ ವರದಿಗಾರರಿಗೆ ಸುದ್ದಿ ರವಾನಿಸಿದ್ದಾರೆ. ಪೊಲೀಸರಿಗೆ ತಿಳಿಸುವುದರಿಂದ ಏನೂ ಆಗಲಾರದು ಎಂದು ತೀರ್ಮಾನಕ್ಕೆ ಬರಲು ಅವರ ಅನುಭವ ಕಾರಣ ಇರಬಹುದು. ಇದು ದಕ್ಷಿಣ ಕನ್ನಡದ ಪೊಲೀಸ್ ವ್ಯವಸ್ಥೆ ತಲುಪಿರುವ ಸ್ಥಿತಿ. ಅಪರಾಧ ಪತ್ತೆಯಲ್ಲಿ ನೆರವಾಗುವುದು ಲಾಠಿ, ಬಂದೂಕು, ಗುಂಡುಗಳಲ್ಲ. ಅದು ಸಾರ್ವಜನಿಕವಾಗಿ ಪೊಲೀಸರು ಗಳಿಸುವ ವಿಶ್ವಾಸ. ಅದನ್ನು ಕಳೆದುಕೊಂಡರೆ ಹೀಗಾಗುತ್ತದೆ.
ಪತ್ರಕರ್ತರು ಮತ್ತು ಪೊಲೀಸರು ಹಲವಾರು ವಿಷಯಗಳಲ್ಲಿ ಸಮಾನ ದುಃಖಿಗಳು. ಅದೇ ರೀತಿ ಕರ್ತವ್ಯನಿರ್ವಹಣೆಯ ಹಾದಿಯಲ್ಲಿ ಸಹಪ್ರಯಾಣಿಕರು. ಎಷ್ಟೋ ಅಪರಾಧಗಳ ಪತ್ತೆಕಾರ್ಯದಲ್ಲಿ ಪತ್ರಕರ್ತರು ಪೊಲೀಸರಿಗೆ ನೆರವಾಗಿದ್ದುಂಟು, ಅದೇ ರೀತಿ ಪತ್ರಕರ್ತರು ಯಾವುದಾದರೂ ಅಪಾಯದ ಸುಳಿಗೆ ಸಿಲುಕಬಹುದೆಂಬ ಸುಳಿವು ಸಿಕ್ಕಾಗ ಪೊಲೀಸರು ಎಚ್ಚರಿಸಿ ಕಾಪಾಡಿದ್ದುಂಟು. ಅಂತಹ ಸಂಬಂಧ ಇದ್ದ ಕಾಲದಲ್ಲಿ ಪತ್ರಕರ್ತರಿಗೆ ಬೇಕಾಗಿದ್ದ ಅಪರಾಧಗಳ ಸುದ್ದಿಯ ಮೂಲ ಪೊಲೀಸರು ಮಾತ್ರ ಆಗಿದ್ದರು. ಎಲ್ಲ ಸಂಬಂಧಗಳಂತೆ ಪೊಲೀಸರು ಮತ್ತು ಪತ್ರಕರ್ತರ ಸಂಬಂಧ ಕೂಡಾ ಬದಲಾಗಿದೆ. ಊರಲ್ಲಿ ನಡೆಯುವ ಅಪರಾಧಗಳ ಬಗ್ಗೆ ಕ್ರೈಮ್ ಬೀಟ್‌ನ ವರದಿಗಾರರು ಸಂಜೆ ಹೊತ್ತು ಕಂಟ್ರೋಲ್ ರೂಮ್‌ಗೆ ಫೋನ್ ಮಾಡಿ ಸುದ್ದಿ ಸಂಗ್ರಹಿಸುವ ಕಾಲ ಎಂದೋ ಸರಿದುಹೋಗಿದೆ. ಈಗ ಪೊಲೀಸರೇ ಟಿ.ವಿಯನ್ನು ನೋಡಿಕೊಂಡು ಅಪರಾಧಗಳ ಸುದ್ದಿ ಸಂಗ್ರಹಿಸುತ್ತಾರೆ.
ಪೊಲೀಸ್ ವ್ಯವಸ್ಥೆಗೆ ಹಿಡಿದಿರುವ `ನಿಷ್ಕ್ರಿಯತೆಯ ರೋಗ`ದ ಮೂಲ ಭ್ರಷ್ಟ ಮತ್ತು ಸ್ವಾರ್ಥ ರಾಜಕಾರಣದಲ್ಲಿದೆ. ರಾಜಕಾರಣಿಗಳ ಮಧ್ಯಪ್ರವೇಶದಿಂದಾಗಿ ಪೊಲೀಸರು ಕಾನೂನಿಗೆ ನಿಷ್ಠರಾಗಿ ಕರ್ತವ್ಯ ನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿ ಈಗ ಜಾರಿಯಲ್ಲಿರುವ ಬ್ರಿಟಿಷರು 1861ರಲ್ಲಿ ರಚಿಸಿದ್ದ ಪೊಲೀಸ್ ಕಾಯ್ದೆ. ಆ ಕಾಲದಲ್ಲಿ `ಸಿಪಾಯಿ ದಂಗೆ`ಯಿಂದ ಭೀತಿಗೀಡಾಗಿದ್ದ ಬ್ರಿಟಿಷರು ತಮಗೆ `ರಾಜಕೀಯವಾಗಿ ಉಪಯೋಗವಾಗಬಲ್ಲ` ರೀತಿಯಲ್ಲಿ ಪೊಲೀಸ್ ವ್ಯವಸ್ಥೆ ಕಟ್ಟಲು ರೂಪಿಸಿದ ಕಾಯ್ದೆ ಈಗಿನ ರಾಜಕಾರಣಿಗಳಿಗೆ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಲು ಹೇಳಿಮಾಡಿಸಿದಂತಿದೆ. ಇದರ ಸುಧಾರಣೆಗಾಗಿ ಧರ್ಮವೀರ, ಜ್ಯುಲಿಯೊ ರೆಬಿರೋ ಹಾಗೂ ಪದ್ಮನಾಭಯ್ಯ ಅವರ ನೇತೃತ್ವದ ಆಯೋಗಗಳು ಪ್ರತ್ಯೇಕವಾಗಿ ಮೂರು ವರದಿಗಳನ್ನು ನೀಡಿವೆ. ಎನ್‌ಡಿಎ ಸರ್ಕಾರ ಹಿರಿಯ ವಕೀಲ ಸೋಲಿ ಸೊರಾಬ್ಜಿ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿತ್ತು. ಕ್ರಿಮಿನಲ್ ನ್ಯಾಯವ್ಯವಸ್ಥೆಯ ಸುಧಾರಣೆಗಾಗಿ ನ್ಯಾಯಮೂರ್ತಿ ವಿ.ಎಸ್.ಮಳೀಮಠ ಅವರೂ ಒಂದು ವರದಿ ನೀಡಿದ್ದರು. ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸುವುದು ಈ ಎಲ್ಲ ಸಮಿತಿ-ಆಯೋಗಗಳ ವರದಿಗಳ ಮೂಲ ಉದ್ದೇಶವಾಗಿತ್ತು. ಇದೇ ಕಾರಣಕ್ಕೆ ಯಾವ ರಾಜ್ಯ ಸರ್ಕಾರ ಕೂಡಾ ಇದನ್ನು ಜಾರಿಗೆ ತರಲು ಆಸಕ್ತಿ ತೋರುತ್ತಿಲ್ಲ.
ಈ ವರದಿಗಳನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್ ಪೊಲೀಸ್ ಸುಧಾರಣೆಗಾಗಿ ಕೆಲವು ಸಲಹೆಗಳನ್ನು ನೀಡಿ 2006ರ ಅಂತ್ಯದೊಳಗೆ ಅವುಗಳನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು. ಇದನ್ನು ನೇರವಾಗಿ ವಿರೋಧಿಸಲಾಗದ ರಾಜಕೀಯ ಪಕ್ಷಗಳು `ಇದು ಒಕ್ಕೂಟ ವ್ಯವಸ್ಥೆಗೆ ಕೊಡಲಿಯೇಟು`, `ನ್ಯಾಯಾಂಗದ ಅತಿಕ್ರಮಣಕಾರಿ ನಿಲುವು` ಇತ್ಯಾದಿ ಜನಪ್ರಿಯ ಆರೋಪಗಳ ಮೂಲಕ ವಿರೋಧಿಸುತ್ತಾ ಕಾಲ ತಳ್ಳುತ್ತಿವೆ. ಪೊಲೀಸರಿಗೆ ತಮ್ಮ ಅಸಹಾಯಕತೆಯ ಕಾರಣಗಳು ಗೊತ್ತಿದ್ದರೂ ಅದನ್ನು ಹೇಳಲಾಗದೆ ತಮ್ಮ ನಿಷ್ಕ್ರಿಯತೆಯನ್ನು ಮುಚ್ಚಿಕೊಳ್ಳಲು ಹೊಸ ಹೊಸ ಬಲಿಪಶುಗಳನ್ನು ಹುಡುಕುತ್ತಿರುತ್ತಾರೆ. ಮಂಗಳೂರಿನ ಪೊಲೀಸರ ಕೈಗೆ ಪತ್ರಕರ್ತರು ಸಿಕ್ಕಿದ್ದಾರೆ, ಆದರೆ ಇದು ಕೈಸುಡುವ ಕೆಂಡ ಎಂದು ಅವರಿಗೂ ಗೊತ್ತು.