Showing posts with label ಸೋನಿಯಾ. Show all posts
Showing posts with label ಸೋನಿಯಾ. Show all posts

Sunday, January 20, 2013

ತಾಯಿಗೆ ಸಿಕ್ಕ ಯಶಸ್ಸು ಮಗನಿಗೆ ಸಿಗಬಹುದೇ?

ಸರಿಯಾಗಿ ಹತ್ತು ವರ್ಷಗಳ ಹಿಂದೆ ಶಿವಾಲಿಕ್ ಗಿರಿಶ್ರೇಣಿಯ ಮಡಿಲಲ್ಲಿರುವ ಶಿಮ್ಲಾದಲ್ಲಿ ನಡೆದಿದ್ದ ಕಾಂಗ್ರೆಸ್ ಪಕ್ಷದ ಮೂರು ದಿನಗಳ ಚಿಂತನ ಶಿಬಿರ ಸೋನಿಯಾಗಾಂಧಿಯವರೇ ಪಕ್ಷದ ಪ್ರಧಾನಿ ಅಭ್ಯರ್ಥಿ ಎನ್ನುವುದನ್ನು ಪರೋಕ್ಷವಾಗಿ ಬಿಂಬಿಸಿತ್ತು. ಆ ಶಿಬಿರವನ್ನು ಉದ್ಘಾಟಿಸಿ ಆತ್ಮಾವಲೋಕನ ಮಾಡಿಕೊಳ್ಳುವವರಂತೆ ಸೋನಿಯಾಗಾಂಧಿ ಮಾತನಾಡಿದ್ದರು.
ಮೊದಲ ಬಾರಿ ಅವರು ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಕೊನೆಗೊಂಡಿದೆ ಎನ್ನುವುದನ್ನು ಒಪ್ಪಿಕೊಂಡು `ಮೈತ್ರಿ ರಾಜಕಾರಣಕ್ಕೆ ಸಿದ್ಧ' ಎಂಬ ಸಂದೇಶವನ್ನು ರವಾನೆ ಮಾಡುವ ಮೂಲಕ ಬಹುತೇಕ ಕಾಂಗ್ರೆಸಿಗರನ್ನು ಚಕಿತಗೊಳಿಸಿದ್ದರು.
ಅಂದು ಸೋನಿಯಾಗಾಂಧಿ ಮಾಡಿದ ಹದಿಮೂರು ಪುಟಗಳ ಭಾಷಣವನ್ನು ಕೇಳಿದ್ದ ಹಿರಿಯ ಕಾಂಗ್ರೆಸಿಗರೊಬ್ಬರು `ಇದೊಂದು ಆತ್ಮಹತ್ಯಾಕಾರಿ ನಿಲುವು, ಸೋನಿಯಾಗಾಂಧಿ ಚುನಾವಣೆಗಿಂತ ಮೊದಲೇ ಸೋಲು ಒಪ್ಪಿಕೊಂಡು ಬಿಟ್ಟಿದ್ದಾರೆ' ಎಂದು  ಆ ಶಿಬಿರದ ವರದಿಗೆಂದು ಹೋಗಿದ್ದ ನನ್ನೊಡನೆ ಅಸಮಾಧಾನ ವ್ಯಕ್ತಪಡಿಸಿದ್ದರು. ವೈಯಕ್ತಿಕವಾಗಿ ನನಗೂ ಹಾಗನಿಸಿತ್ತು.
ಸೋನಿಯಾಗಾಂಧಿ ಚಾಚಿದ್ದ ಸ್ನೇಹಹಸ್ತವನ್ನು ಆರ್‌ಜೆಡಿ ಮತ್ತು ಎಡಪಕ್ಷಗಳ ಹೊರತಾಗಿ ಉಳಿದ ಯಾವ ಪ್ರಾದೇಶಿಕ ಪಕ್ಷಗಳೂ ಸ್ವೀಕರಿಸದೆ ಇರುವುದನ್ನು ಕಂಡಾಗ ಹಿರಿಯ ಕಾಂಗ್ರೆಸಿಗರು ವ್ಯಕ್ತಪಡಿಸಿದ್ದ ಆತಂಕ ನಿಜವಾಗಬಹುದೇನೋ ಎಂದು ಅನಿಸಿತ್ತು. ಅದರ ನಂತರ ನಡೆದದ್ದು ಈಗ ಇತಿಹಾಸ. ಒಂಬತ್ತು ವರ್ಷಗಳ ರಾಜಕೀಯ ವನವಾಸಕ್ಕೆ ಅಂತ್ಯಹಾಡಿದ 2004ರ ಲೋಕಸಭಾ ಚುನಾವಣೆಯನ್ನು ಮಾತ್ರವಲ್ಲ, 2009ರ ಚುನಾವಣೆಯನ್ನೂ ಕಾಂಗ್ರೆಸ್ ಪಕ್ಷ ಸೋನಿಯಾಗಾಂಧಿಯವರ ನಾಯಕತ್ವದಲ್ಲಿಯೇ ಗೆದ್ದಿದೆ.
ಶಿಮ್ಲಾ ಶಿಬಿರದಲ್ಲಿ ರಾಹುಲ್‌ಗಾಂಧಿ ಭಾಗವಹಿಸಿರಲೂ ಇಲ್ಲ. ಈಗ ಹತ್ತು ವರ್ಷಗಳ ನಂತರ ಜೈಪುರದಲ್ಲಿ ನಡೆದ ಚಿಂತನ ಶಿಬಿರ ರಾಹುಲ್‌ಗಾಂಧಿಯವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎನ್ನುವುದನ್ನು ಪರೋಕ್ಷವಾಗಿ ಘೋಷಿಸಿದೆ. ಈ ಘೋಷಣೆಯಲ್ಲಿ ಹೊಸತೇನಿಲ್ಲ. ಸೋನಿಯಾಗಾಂಧಿ ರಾಜಕೀಯ ಪ್ರವೇಶಮಾಡಿದ ದಿನದಿಂದಲೇ ರಾಹುಲ್‌ಗಾಂಧಿ ಎರಡನೇ ಸ್ಥಾನದಲ್ಲಿದ್ದರು.
`ಪ್ರಧಾನಿ ಪಟ್ಟದ ತ್ಯಾಗ'ವೂ ಸೇರಿದಂತೆ ಸೋನಿಯಾಗಾಂಧಿ ತನ್ನ ಮಹತ್ವದ ರಾಜಕೀಯ ನಿರ್ಧಾರಗಳನ್ನೆಲ್ಲವನ್ನೂ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಜತೆಯಲ್ಲಿ ಸಮಾಲೋಚನೆ ಮಾಡಿಯೇ ಕೈಗೊಳ್ಳುತ್ತಾ ಬಂದಿದ್ದಾರೆ. ಈಗಿನ ಘೋಷಣೆಯ ಮುಖ್ಯ ಪರಿಣಾಮವೇನೆಂದರೆ ಇಲ್ಲಿಯ ವರೆಗೆ ಜವಾಬ್ದಾರಿ ಇಲ್ಲದೆ ಅಧಿಕಾರವನ್ನು ಚಲಾಯಿಸುತ್ತಾ ಬಂದಿದ್ದ ರಾಹುಲ್‌ಗಾಂಧಿ ಇನ್ನು ಹಾಗೆ ಮಾಡಲಾಗದು.
ಉತ್ತರದಾಯಿತ್ವದ ಉರುಳು ಹೊಸ ಸ್ಥಾನಮಾನದೊಂದಿಗೆ ಅವರ ಕೊರಳು ಸುತ್ತಿಕೊಂಡಿದೆ.
ಸೋನಿಯಾಗಾಂಧಿಯವರಿಗೆ ಸಿಕ್ಕ ಯಶಸ್ಸು ಮಗನಿಗೆ ಸಿಗಬಹುದೇ ಎನ್ನುವುದಷ್ಟೇ ಈಗಿನ ಕುತೂಹಲದ ಪ್ರಶ್ನೆ. ಹತ್ತು ವರ್ಷಗಳ ಹಿಂದಿನ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಿಂದ ನೋಡಿದರೆ ಸೋನಿಯಾಗಾಂಧಿಯವರಿಗಿದ್ದ ಕೆಲವು ಅನುಕೂಲತೆಗಳು ಕಾಣುತ್ತಿರುವುದು ನಿಜ.
ಸೋನಿಯಾಗಾಂಧಿ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾದಾಗ ಕೇವಲ ಐದು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ 2004 ಲೋಕಸಭಾ ಚುನಾವಣೆಯ ವೇಳೆ ಹದಿನೈದು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿತ್ತು. ಎನ್‌ಡಿಎ ಆಗಲೇ ಸುಮಾರು ಆರೂವರೆ ವರ್ಷಗಳ ಕಾಲದ ಅಧಿಕಾರದಿಂದಾಗಿ ಆಡಳಿತ ವಿರೋಧಿ ಅಲೆ ಎದುರಿಸುತ್ತಾ ಇತ್ತು.
ಆದರೆ ಸೋನಿಯಾಗಾಂಧಿ ಪಾಲಿಗೆ ಅನುಕೂಲತೆಗಳ ಜತೆಯಲ್ಲಿ ಕೆಲವು ಅನಾನುಕೂಲತೆಗಳೂ ಇದ್ದವು. ಅವರ `ವಿದೇಶಿ ಮೂಲ' ಅಂದಿನ ಚುನಾವಣಾ ಚರ್ಚೆಯ ಮುಖ್ಯವಸ್ತುವಾಗಿತ್ತು. ಈಗ ಹೆಣ್ಣಿನ ಗೌರವದ ರಕ್ಷಣೆ ಬಗ್ಗೆ ಭಾಷಣ ಬಿಗಿಯುತ್ತಿರುವ ಸುಷ್ಮಾಸ್ವರಾಜ್ `ಸೋನಿಯಾ ಪ್ರಧಾನಿಯಾದರೆ ತಲೆಬೋಳಿಸಿಕೊಳ್ಳುವ' ಪ್ರತಿಜ್ಞೆ ಮಾಡಿದ್ದರು. ಪ್ರಮೋದ್‌ಮಹಾಜನ್ ನೇತೃತ್ವದಲ್ಲಿ ನಡೆಸಲಾಗಿದ್ದ `ಇಂಡಿಯಾ ಶೈನಿಂಗ್' ಅಲೆಯಲ್ಲಿ ಎಲ್ಲರೂ ತೇಲಿ ಹೋಗಿದ್ದರು.
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದೆಂದು ಯಾವ ರಾಜಕೀಯ ಪಂಡಿತರೂ ಭವಿಷ್ಯ ನುಡಿದಿರಲಿಲ್ಲ. ಕಾಂಗ್ರೆಸ್ ಪಕ್ಷದ ಯಾವ ನಾಯಕರಿಗೂ ಗೆಲ್ಲುವ ವಿಶ್ವಾಸ ಇರಲಿಲ್ಲ. ನಿಯಾಗಾಂಧಿಯವರು ಕೂಡಾ ಹೆಚ್ಚು ಆಶಾವಾದಿಗಳಾಗಿದ್ದರೆಂದು ಅನಿಸುವುದಿಲ್ಲ. ಇದಕ್ಕೆ ಕಾರಣಗಳಿವೆ. ಗಂಡ ಸತ್ತನಂತರ ಏಳುವರ್ಷಗಳ ಕಾಲ ಬಾಗಿಲುಮುಚ್ಚಿಕೊಂಡು ಮನೆಯೊಳಗೆ ಕೂತಿದ್ದ ಸೋನಿಯಾಗಾಂಧಿ 1998ರಲ್ಲಿ ರಾಜಕೀಯ ಪ್ರವೇಶಿಸಿ 1999ರಲ್ಲಿ ಮೊದಲ ಬಾರಿ ಲೋಕಸಭಾ ಚುನಾವಣೆ ಎದುರಿಸಿದ್ದರು.
ಅಮೇಠಿಯಲ್ಲಿ ಅವರು ಗೆದ್ದರೂ ಕಾಂಗ್ರೆಸ್ ಪಕ್ಷ ಮಾತ್ರ ಹೀನಾಯ ಸೋಲು ಅನುಭವಿಸಿತ್ತು. ಸೀತಾರಾಂ ಕೇಸರಿ ಅವರ ನೇತೃತ್ವದ 1998ರ ಚುನಾವಣೆಯಲ್ಲಿ ಪಡೆದ ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಈ ರೀತಿಯ  ಸೋಲು, ಅವಮಾನಗಳನ್ನು ಎದುರಿಸಿದ್ದ ಸೋನಿಯಾಗಾಂಧಿಯವರಿಗೆ 2004ರ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇತ್ತೆಂದು ಅನಿಸುವುದಿಲ್ಲ.
ಆದರೆ ಒಂದೇ ಒಂದು ಗೆಲುವು ಮತ್ತು ಅದರ ನಂತರದ `ಅಧಿಕಾರ ತ್ಯಾಗ' ಸೋನಿಯಾಗಾಂಧಿಯವರ ಇಮೇಜನ್ನೇ ಬದಲಾಯಿಸಿಬಿಟ್ಟಿತು. ಬಹುಶಃ ಈಗಲೂ ಯಾರಾದರೂ ಸಮೀಕ್ಷೆ ನಡೆಸಿದರೆ ಮಗನಿಗಿಂತ ತಾಯಿಯೇ ಹೆಚ್ಚು ಜನಪ್ರಿಯರೆನ್ನುವ ಫಲಿತಾಂಶ ಹೊರಬಂದೀತು.
ಸೋನಿಯಾಗಾಂಧಿ ವೈಯಕ್ತಿಕ ನೆಲೆಯಲ್ಲಿ ಎದುರಿಸಿದ್ದ ಅನಾನುಕೂಲತೆಗಳು ಮಗನ ಮುಂದೆ ಇಲ್ಲ, ಬದಲಾಗಿ ರಾಹುಲ್‌ಗೆ ಕೆಲವು ಅನುಕೂಲತೆಗಳಿವೆ. ರಾಹುಲ್‌ಗಾಂಧಿಯನ್ನು ಯಾರೂ ವಿದೇಶಿ ಎನ್ನುವ ಹಾಗಿಲ್ಲ, ವಿರೋಧಪಕ್ಷಗಳ ನಾಯಕರೆಲ್ಲರೂ ತಮ್ಮ ಮಕ್ಕಳನ್ನು  ರಾಜಕೀಯಕ್ಕೆ ಕರೆದುತರುತ್ತಿರುವಾಗ ವಂಶಪರಂಪರೆಯನ್ನು ಟೀಕಿಸುವವರೂ ಉಳಿದಿಲ್ಲ
. ದೇಶದ ಜನಸಂಖ್ಯೆಯಲ್ಲಿ 30-35ವರ್ಷಗಳ ವಯೋಮಾನದ ಯುವಜನರೇ ಅರ್ಧದಷ್ಟಿರುವ ಈ ಕಾಲದಲ್ಲಿ ಬೇರೆ ಯಾವ ಪಕ್ಷಗಳಲ್ಲಿಯೂ ಯುವನಾಯಕರಿಲ್ಲ. ಹತ್ತು ವರ್ಷ ಪಕ್ಷ ಅಧಿಕಾರದಲ್ಲಿದ್ದರೂ ರಾಹುಲ್‌ಗಾಂಧಿ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಲ್ಲ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಆಂತರಿಕವಾಗಿ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಆ ಪಕ್ಷದಲ್ಲಿ ಉಳಿದಿರುವ ಜನಪ್ರಿಯ ನಾಯಕ ನರೇಂದ್ರಮೋದಿಯೊಬ್ಬರೇ. ಅದರೆ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಕ್ಕೆ ಎನ್‌ಡಿಎಯೊಳಗೆ ವಿರೋಧ ಇದೆ. ಮೋದಿಯವರನ್ನು ಮುಂದಿಟ್ಟುಕೊಂಡು ಹೋದರೆ  ಇರುವ ಮಿತ್ರರನ್ನು ಉಳಿಸಿಕೊಳ್ಳುವುದು ಮತ್ತು ಹೊಸ ಮಿತ್ರರನ್ನು ಸಂಪಾದಿಸುವುದು ಎನ್‌ಡಿಎಗೆ ಕಷ್ಟ.
ಆದರೆ ಈ ಅನುಕೂಲತೆಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ರಾಹುಲ್‌ಗಾಂಧಿಯವರಲ್ಲಿದೆಯೇ ಎನ್ನುವುದು ಪ್ರಶ್ನೆ. 2009ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಗಳಿಸಿದ ಗೆಲುವೊಂದೇ ಅವರ ಈವರೆಗಿನ ಸಾಧನೆ. ಅದು ಕೂಡಾ ಕಳೆದವರ್ಷ ಆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸೋಲಿನಲ್ಲಿ ಕೊಚ್ಚಿಹೋಯಿತು. ಅದಕ್ಕಿಂತ ಮೊದಲೇ ಬಿಹಾರದಲ್ಲಿ ರಾಹುಲ್ ಮುಖಭಂಗ ಅನುಭವಿಸಿದ್ದರು.
ಈ ಸೋಲುಗಳು ಒತ್ತಟ್ಟಿಗಿರಲಿ, ಚುನಾವಣಾ ಪ್ರಚಾರ ಸಭೆಗಳಲ್ಲಿ ದನಿ ಎತ್ತಿ ಮಾತನಾಡಿರುವುದನ್ನು ಬಿಟ್ಟರೆ, ಲೋಕಸಭೆಯೊಳಗಾಗಲಿ ಹೊರಗಾಗಲಿ ಬಾಯಿ ಬಿಚ್ಚಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಕಳೆದ ವರ್ಷ ಅನಾರೋಗ್ಯ ಪೀಡಿತರಾದ ಸೋನಿಯಗಾಂಧಿ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವ ಮುನ್ನ ತನ್ನ ಗೈರುಹಾಜರಿಯಲ್ಲಿ ಪಕ್ಷದ ವ್ಯವಹಾರ ನೋಡಿಕೊಳ್ಳಲು ರಾಹುಲ್ ಸದಸ್ಯರಾಗಿರುವ ಸಮಿತಿಯೊಂದನ್ನು ರಚಿಸಿದ್ದರು.
ಅದೇ ಕಾಲದಲ್ಲಿ ಅಣ್ಣಾ ಚಳವಳಿ ಭುಗಿಲೆದ್ದದ್ದು. ದೇಶದ ಯುವಜನತೆಯ ಜತೆ ಮುಖಾಮುಖಿಯಾಗಲು ಒದಗಿಬಂದಿದ್ದ ಅವಕಾಶವನ್ನು ರಾಹುಲ್ ಬಳಸಿಕೊಳ್ಳದೆ ಮೌನವಾಗಿದ್ದುಬಿಟ್ಟರು. ಇತ್ತೀಚೆಗೆ ದೆಹಲಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಪ್ರತಿಭಟಿಸಿ ರಾಜಧಾನಿಯ ಯುವಜನತೆ ಬೀದಿಗಿಳಿದಿದ್ದಾಗಲೂ ರಾಹುಲ್‌ಗಾಂಧಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.
ಸೋನಿಯಾಗಾಂಧಿಯವರ ಮೌನ ಮತ್ತು ಇಂಗ್ಲಿಷ್ ಉಚ್ಚಾರದ ಹಿಂದಿ ಮಾತುಗಳನ್ನು ದೇಶದ ಬಹಳಷ್ಟು ಜನ ಒಪ್ಪಿಕೊಂಡುಬಿಟ್ಟಿದ್ದಾರೆ, ಆದರೆ ಆ ರಿಯಾಯಿತಿಯನ್ನು ರಾಹುಲ್‌ಗಾಂಧಿಗೆ ನೀಡುತ್ತಾರೆ ಎಂದು ಹೇಳುವ ಹಾಗಿಲ್ಲ.24 ಗಂಟೆಗಳ ಕಾಲ ಜಾಗೃತವಾಗಿರುವ ಈಗಿನ ಮಾಧ್ಯಮ ಯುಗದಲ್ಲಿ ರಾಜಕಾರಣಿಯ ಮೌನವನ್ನು `ಬಂಗಾರ' ಎನ್ನಲು ಸಾಧ್ಯ ಇಲ್ಲ.
ನಾಯಕನಾಗುವವನು ಮಾಧ್ಯಮದ ಜತೆ ಮಾತ್ರವಲ್ಲ ಜನತೆ, ಪಕ್ಷದ ನಾಯಕರು ಮತ್ತು ಮಿತ್ರಪಕ್ಷಗಳ ಜತೆ ನಿರಂತರವಾಗಿ ಸಂವಾದ ನಡೆಸುತ್ತಿರಬೇಕಾಗುತ್ತದೆ. ಈ ರೀತಿಯ ಮಾತುಕತೆಯ ಮೂಲಕವೇ ರಾಜಕಾರಣಿ ಅನುಭವ ಗಳಿಸುವುದು. ಯಾವುದೋ ಒಂದು ದಲಿತಕುಟುಂಬದ ಮನೆಗೆ ಹೋಗಿ ರೊಟ್ಟಿ ತಿಂದು ನೀರು ಕುಡಿದ ಮಾತ್ರಕ್ಕೆ, ಇಲ್ಲವೇ ಆತ್ಮಹತ್ಯೆ ಮಾಡಿಕೊಂಡ ಒಂದು ರೈತ ಕುಟುಂಬದ ಸದಸ್ಯೆಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಮಾತ್ರಕ್ಕೆ ಯಾರೂ ನಾಯಕರಾಗುವುದಿಲ್ಲ.
ನಿಜವಾದ ನಾಯಕ ಇಂತಹ ಸಾಮಾನ್ಯ ಸಮಸ್ಯೆಗಳಿಗೆ ಸಾರ್ವತ್ರಿಕ ರೂಪದ ಪರಿಹಾರ ಕಲ್ಪಿಸಲು ಸರ್ಕಾರದ ನೀತಿ-ನಿಯಮಾವಳಿಗಳ ಬದಲಾವಣೆಗೆ ಪ್ರಭಾವ ಬೀರಬೇಕಾಗುತ್ತದೆ. ಕೇವಲ ವೈಯಕ್ತಿಕ ಮಟ್ಟದ ಸಾಂತ್ವನ-ನೆರವು  ಬಿಜೆಪಿ ಆರೋಪಿಸುತ್ತಿರುವಂತೆ `ಬಡತನದ ಪ್ರವಾಸೋದ್ಯಮ' ಆಗುವ ಅಪಾಯ ಇದೆ.
ರಾಹುಲ್‌ಗಾಂಧಿಯವರ ಹೊಸ ಅವತಾರದ ಮುಂದೆ ಇರುವ ಮೊದಲ ಸವಾಲು- ಮುಂದಿನ ಒಂಭತ್ತು ತಿಂಗಳ ಅವಧಿಯಲ್ಲಿ ನಡೆಯಲಿರುವ ರಾಜ್ಯಗಳ ವಿಧಾನಸಭಾ ಚುನಾವಣೆ. ಇವುಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಕರ್ನಾಟಕಗಳಲ್ಲಿ ಬಿಜೆಪಿ ಹಾಗೂ ದೆಹಲಿ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಜಮ್ಮು ಮತ್ತು ಕಾಶ್ಮೆರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್‌ಫರೆನ್ಸ್ ಮೈತ್ರಿಕೂಟದ ಆಳ್ವಿಕೆ ಇದೆ.
ಇವುಗಳ ಜತೆ ತ್ರಿಪುರ,ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ವಿಧಾನಸಭೆಗೂ ಈ ವರ್ಷದ ಅಂತ್ಯದೊಳಗೆ ಚುನಾವಣೆ ನಡೆಯಬೇಕಾಗಿದೆ. ಈ ಹತ್ತು ರಾಜ್ಯಗಳ ಪೈಕಿ ಕರ್ನಾಟಕವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸದಿಂದ ಹೇಳುವ ಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿಯೇ ಬಹಳ ಮಂದಿ ಇಲ್ಲ.
ಎರಡನೆ ಸವಾಲು-ಮಿತ್ರಪಕ್ಷಗಳ ಜತೆಗಿನ ಸಂಬಂಧದ ನಿರ್ವಹಣೆ. ರಾಜಕೀಯ ಪವಾಡ ನಡೆಯದ ಹೊರತಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ. ಯುಪಿಎ ಇಲ್ಲವೇ ಎನ್‌ಡಿಎ, ಇಲ್ಲದೆ ಹೋದರೆ ಈ ಗುಂಪುಗಳಲ್ಲಿ ಯಾವುದಾದರೂ ಒಂದು ಗುಂಪಿನ ಬೆಂಬಲದ ತೃತೀಯರಂಗ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ.
ಈ ಸ್ಥಿತಿಯಲ್ಲಿ ಸ್ವಂತ ಪಕ್ಷದ ಗೆಲುವಿಗಿಂತಲೂ ಅತ್ಯಧಿಕ ಮಿತ್ರಪಕ್ಷಗಳ ಸಂಪಾದನೆ ಸರ್ಕಾರ ರಚನೆಯಲ್ಲಿ ಮುಖ್ಯಪಾತ್ರ ವಹಿಸುವ ಸಾಧ್ಯತೆ ಇದೆ. ಬಹುಶಃ ಮೈತ್ರಿಕೂಟದ ನಿರ್ವಹಣೆಯಲ್ಲಿ ಅಟಲಬಿಹಾರಿ ವಾಜಪೇಯಿ  ನಂತರ ಯಶಸ್ಸು ಕಂಡವರು ಸೋನಿಯಾಗಾಂಧಿ. ಮಾತುಗಾರಿಕೆಯ ಕೌಶಲ ಇಲ್ಲದೆ ಇದ್ದರೂ ಎಡಪಕ್ಷಗಳಿಂದ ಹಿಡಿದು ಬಿಎಸ್‌ಪಿ-ಎಸ್‌ಪಿ ವರೆಗೆ ಬಹುತೇಕ ಪಕ್ಷಗಳು ಸೋನಿಯಾಗಾಂಧಿಯವರ ಮಾತುಗಳನ್ನು ಕೇಳುತ್ತಾ ಬಂದಿವೆ.
ತನ್ನನ್ನು ವಿದೇಶಿ ಮಹಿಳೆ ಎಂದು ತುಚ್ಛೀಕರಿಸಿದ್ದ ಶರದ್‌ಪವಾರ್ ಅವರ ಪಕ್ಷವನ್ನೇ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಔದಾರ್ಯ ತೋರಿಸಿದವರು ಸೋನಿಯಾಗಾಂಧಿ. ಈ ಚಾತುರ್ಯ ರಾಹುಲ್‌ಗಾಂಧಿಗಿದೆಯೇ?  ಈ ಯುವನಾಯಕನಿಗೆ ಪ್ರಾದೇಶಿಕ ಪಕ್ಷಗಳ ಬಗ್ಗೆ ತಿರಸ್ಕಾರ ಇದೆ. ಈ ಕಾರಣದಿಂದಾಗಿಯೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಿ ಸೋಲು ಅನುಭವಿಸಿದ್ದು. ಕಾಂಗ್ರೆಸ್ ಪಕ್ಷವನ್ನು ಹಳೆಯ ಏಕಮೇವಾದ್ವಿತೀಯ ಪಕ್ಷವಾಗಿ ಬೆಳೆಸಬೇಕೆಂಬ ಆಶಯ ಈಗಲೂ ರಾಹುಲ್ ಮನಸ್ಸಿನ ಆಳದಲ್ಲಿದ್ದಂತಿದೆ.
ಮೂರನೆಯ ಸವಾಲು ಮಿತ್ರರ ಆಯ್ಕೆ. ರಾಹುಲ್ ತಂದೆ ರಾಜೀವ್‌ಗಾಂಧಿ ಎಡವಿದ್ದೇ ಮಿತ್ರರ ಆಯ್ಕೆಯಲ್ಲಿ. ಅನುಭವದ ಕೊರತೆಯ ಕಾರಣದಿಂದಾಗಿ ತನ್ನ ಸುತ್ತ ಸದಾ ಸ್ನೇಹಿತರ ಕೂಟವೊಂದನ್ನು ಕಟ್ಟಿಕೊಂಡಿದ್ದ ರಾಜೀವ್ ಕೊನೆಗೆ ಅವರಿಂದಲೇ ವಿಶ್ವಾಸಘಾತಕ್ಕೀಡಾಗಿದ್ದರು.
ಅರುಣ್ ನೆಹರೂ ಎಂಬ ಸ್ನೇಹಿತ ಮತ್ತು ಸಂಬಂಧಿಯ ಮಾತು ಕೇಳಿ ಅಯೋಧ್ಯೆಯ ರಾಮಮಂದಿರದ ಬೀಗ ತೆಗೆಸಿದ್ದ ರಾಜೀವ್ ನಂತರದ ದಿನಗಳಲ್ಲಿ ಪೇಚಿಗೆ ಸಿಕ್ಕಿಹಾಕಿಕೊಂಡಿದ್ದರು. ರಾಹುಲ್‌ಗಾಂಧಿ ಕೂಡಾ ಇಂತಹ ಅಪಾಯವನ್ನು ಎದುರಿಸುವ ಸಾಧ್ಯತೆ ಇದೆ. ಬುದ್ದಿವಂತರಾದರೂ ಸಡಿಲ ಮಾತಿನ ದಿಗ್ವಿಜಯ್‌ಸಿಂಗ್ ಈಗಾಗಲೇ `ರಾಜಗುರು'ವಿನ ರೂಪದಲ್ಲಿ ರಾಹುಲ್ ಪಕ್ಕದಲ್ಲಿ ಕಾಣಿಸಿಕೊಂಡಿರುವುದು ಈ ಅಪಾಯವನ್ನು ಇನ್ನಷ್ಟು ಹೆಚ್ಚಿಸಿದೆ.
ಕೊನೆಯದಾಗಿ ಭಾರತದ ರಾಜಕಾರಣದಲ್ಲಿ ಯುವನಾಯಕರು ಅಧಿಕಾರಕ್ಕೆ ಬಂದರೂ ಯಶಸ್ಸು ಕಂಡದ್ದು ಕಡಿಮೆ ಎನ್ನುವುದು ಅಪ್ರಿಯವಾದ ಸತ್ಯ. ಇದಕ್ಕೆ ಉತ್ತಮ ಉದಾಹರಣೆ ನಲ್ವತ್ತರ ಪ್ರಾಯದಲ್ಲಿ ಪ್ರಧಾನಿಯಾದ ರಾಜೀವ್‌ಗಾಂಧಿ. ಇನ್ನೂ ಹಿಂದಕ್ಕೆ ಹೋದರೆ 42ನೇ ವಯಸ್ಸಿನಲ್ಲಿ  ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಮಾಡಿದ್ದ ಅನಾಹುತಗಳನ್ನು ಕರ್ನಾಟಕದ ಜನ ಇನ್ನೂ ಮರೆತಿಲ್ಲ.
ಒಂದು ಕಾಲದಲ್ಲಿ ಯುವಜನರ ಐಕಾನ್ ಆಗಿದ್ದ ಪ್ರಪುಲ್‌ಕುಮಾರ್ ಮಹಾಂತ ಅವರನ್ನು ಈಗ ನೆನೆಪು ಮಾಡಿಕೊಳ್ಳುವವರೇ ಇಲ್ಲ ಜಮ್ಮು ಮತ್ತು ಕಾಶ್ಮೆರದ ಜನತೆ ಈಗ ಮುಖ್ಯಮಂತ್ರಿಯಾಗಿರುವ ಒಮರ್ ಅಬ್ದುಲ್ಲಾ ಅವರಿಗಿಂತ ತಂದೆಯೇ ವಾಸಿ ಎನ್ನುತ್ತಿದ್ದಾರೆ. 43ನೇ ವಯಸ್ಸಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿ ಕೂಡಾ ಬಹಳದಿನ ಅಧಿಕಾರದಲ್ಲಿ ಉಳಿಯಲಿಲ್ಲ.
ತೀರಾ ಇತ್ತೀಚಿನ ಉದಾಹರಣೆ ಅಧಿಕಾರಕ್ಕೆ ಬಂದ ಆರೇಳು ತಿಂಗಳುಗಳಲ್ಲಿಯೇ ನಿರಾಶೆ ಹುಟ್ಟಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ಯಾದವ್  ಯಶಸ್ಸಿನ ಉದಾಹರಣೆಗಳೇ ಕಡಿಮೆ. ರಾಜಕಾರಣದಲ್ಲಿ ಯಶಸ್ಸಿಗೆ ವಯಸ್ಸಿಗಿಂತಲೂ ಅನುಭವ ಮುಖ್ಯವೆನ್ನುವುದನ್ನು ರಾಹುಲ್‌ಗಾಂಧಿ ಸುಳ್ಳು ಮಾಡಬಹುದೇ? ಯಾಕೋ ಅನುಮಾನ.