Showing posts with label ಪ್ರಧಾನಿ ಮನಮೋಹನ್‌ಸಿಂಗ್. Show all posts
Showing posts with label ಪ್ರಧಾನಿ ಮನಮೋಹನ್‌ಸಿಂಗ್. Show all posts

Monday, August 29, 2011

ಮಾಡಿದ್ದನ್ನು ಉಣ್ಣಲೇ ಬೇಕಲ್ಲವೇ ಪ್ರಧಾನಿಗಳೇ?

ಎಲ್ಲಿಂದ ಬಂದರು ಈ ಜನ? ಬರುತ್ತಲೇ ಇದ್ದ ಇವರ‌್ಯಾರು? ಅಣ್ಣಾ ಚಳವಳಿ ಬೆಂಬಲಿಸಿ ಬೀದಿಗೆ ಇಳಿದಿದ್ದ ಜನರ ಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ದೃಷ್ಟಿಯಿಂದ ನಗಣ್ಯ ಎನ್ನುವುದು ನಿಜ.

ಹೀಗಿದ್ದರೂ ಸ್ವತಂತ್ರ ಭಾರತದಲ್ಲಿ ನಡೆದಿರುವ ಯಾವುದೇ ಚಳವಳಿಗಳಲ್ಲಿ ಕಾಣದಷ್ಟು ಜನ ಎಲ್ಲಿಂದ ಬಂದರು? ಒಂದಷ್ಟು ದಿನ ಕೂಗಾಡಿ ಮನೆಗೆ ಹೋಗುತ್ತಾರೆ ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿ ಬರುತ್ತಲೇ ಇದ್ದ ಇವರ‌್ಯಾರು?
ಬಹಳ ಜನ ಈ ಹೋರಾಟವನ್ನು ಜಯ ಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ~ಗೆ ಹೋಲಿಸುತ್ತಾರೆ. ಆದರೆ ಆ ಹೋರಾಟದಲ್ಲಿ ಜನ ಇಷ್ಟೊಂದು ದೀರ್ಘಕಾಲ ಬೀದಿಗಿಳಿದು ಹೋರಾಟ ನಡೆಸಿರಲಿಲ್ಲ.

ಅಲ್ಲದೆ, ಅದು ಮುಖ್ಯವಾಗಿ ಗುಜರಾತ್, ಬಿಹಾರ, ಉತ್ತರ ಪ್ರದೇಶ ರಾಜ್ಯಗಳಿಗೆ ಸೀಮಿತವಾಗಿತ್ತು ಎನ್ನುವುದು ಕೂಡಾ ವಾಸ್ತವ. ಆ ಕಾಲದಲ್ಲಿ ದಕ್ಷಿಣದ ರಾಜ್ಯಗಳಲ್ಲಿ  ಸರ್ಕಾರದ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ-ರ‌್ಯಾಲಿಗಳು ನಡೆದದ್ದು ಕಡಿಮೆ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ಕೂಡಾ ನಡೆದದ್ದು ಭೂಗತವಾಗಿ.
ಬಹುಸಂಖ್ಯಾತ ಜನ ಬೀದಿಗಿಳಿಯದೆ ಗುಪ್ತ ಬೆಂಬಲದ ಮೂಲಕ ಹೋರಾಟಕ್ಕೆ ಜತೆ ನೀಡಿದ್ದರು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅದೊಂದು ರಾಜಕೀಯ ಹೋರಾಟವಾಗಿತ್ತು. ಹೆಚ್ಚುಕಡಿಮೆ ಎಲ್ಲ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ಆ ಚಳವಳಿಯ ಬೆಂಬಲಕ್ಕೆ ನಿಂತಿದ್ದವು.

ಅದರಲ್ಲಿ ರಾಜಕೀಯ ಪಕ್ಷಗಳ ನಾಯಕರ ನೇತೃತ್ವ ಮತ್ತು ಕಾರ್ಯಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆ ಇತ್ತು. ಆದ್ದರಿಂದ ಯಾವುದೇ ಕೋನದಿಂದ ನೋಡಿದರೂ ಅಣ್ಣಾ ಚಳವಳಿಯನ್ನು ಜೆಪಿ ನೇತೃತ್ವದ ಹೋರಾಟಕ್ಕೆ ಹೋಲಿಕೆ ಮಾಡಲಾಗದು.
ಸಾಮಾನ್ಯವಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು... ಹೀಗೆ ನಿರ್ದಿಷ್ಟ ವರ್ಗಕ್ಕೆ ಸೇರಿದ ಜನಸಮೂಹದ ಬೆಂಬಲದ ಚಳವಳಿ ಮಾತ್ರ ದೀರ್ಘಕಾಲ ಮುಂದುವರಿದುಕೊಂಡು ಹೋಗುತ್ತದೆ.
ಇದಕ್ಕೆ ಅಂತಹ ಹೋರಾಟಗಳು ಹೊಂದಿರುವ ಸೈದ್ಧಾಂತಿಕ ನೆಲೆಗಟ್ಟು ಮತ್ತು ಕಾರ್ಯಕರ್ತರಲ್ಲಿರುವ ಬದ್ಧತೆಯ ಜತೆ  ಬೇಡಿಕೆಗಳು ಈಡೇರಿದರೆ ತಕ್ಷಣಕ್ಕೆ ಸಿಗುವ ವೈಯಕ್ತಿಕ ಲಾಭ ಕೂಡಾ ಕಾರಣ. ಅಣ್ಣಾ ಚಳವಳಿಯಲ್ಲಿ ಇಂತಹ ಯಾವ ಲಕ್ಷಣಗಳನ್ನೂ ನಾವು ಕಾಣಲಾಗದು. ಬಹಳ ಜನ ಇದನ್ನು ಮಧ್ಯಮವರ್ಗದ ಜನರ ಹೋರಾಟ ಎನ್ನುತ್ತಿದ್ದಾರೆ.
ಇದು ಒಂದು ರೀತಿಯಲ್ಲಿ ಸತ್ಯ, ಆದರೆ ಪೂರ್ಣ ಸತ್ಯ ಅಲ್ಲ. ಮಧ್ಯಮ ವರ್ಗ ನಮ್ಮಲ್ಲಿ ಹಿಂದೆಯೂ ಇತ್ತಲ್ಲವೇ? ಹಿಂದೆ ಎಂದಾದರೂ ಈ ಮಧ್ಯಮ ವರ್ಗ ಈ ಪ್ರಮಾಣದಲ್ಲಿ ಬೀದಿಗಿಳಿದಿದ್ದ ಘಟನೆಗಳು ಇವೆಯೇ?

ಹಾಗಿದ್ದರೆ ಸ್ವತಂತ್ರಭಾರತದ ಯಾವುದೇ ಹೋರಾಟದಲ್ಲಿ ಕಾಣಿಸಿಕೊಳ್ಳದ ಈ ಮಧ್ಯಮ ವರ್ಗದಲ್ಲಿ ಹಠಾತ್ತನೇ ಇಷ್ಟೊಂದು ಜಾಗೃತಿ, ಬದ್ಧತೆ, ಕ್ರಿಯಾಶೀಲತೆ, ದೇಶಪ್ರೇಮ, ಹೋರಾಟದ ಕೆಚ್ಚು ಹುಟ್ಟಿಕೊಂಡಿದ್ದು ಹೇಗೆ?
ಸರಳವಾದ ಸತ್ಯ ಏನೆಂದರೆ,  ಅಣ್ಣಾ ಚಳವಳಿ ಬೆಂಬಲಿಸಿ ಬೀದಿಗಿಳಿದಿರುವ ಮಧ್ಯಮ ವರ್ಗ ಇಪ್ಪತ್ತು ವರ್ಷಗಳ ಹಿಂದಿನ ಮಧ್ಯಮ ವರ್ಗ ಅಲ್ಲವೇ ಅಲ್ಲ. ಹಿಂದಿನ ಮಧ್ಯಮ ವರ್ಗದಲ್ಲಿದ್ದವರು ಮುಖ್ಯವಾಗಿ ಸರ್ಕಾರಿ ನೌಕರರು. ಸರ್ಕಾರಕ್ಕೆ ಸೇರಿರುವ ಇಲಾಖೆಗಳು, ಶಾಲೆ, ಆಸ್ಪತ್ರೆಗಳು, ಬ್ಯಾಂಕುಗಳಲ್ಲಿ ಉದ್ಯೋಗದಲ್ಲಿದ್ದ ಜನ.
ಕಾರ್ಮಿಕ ಸಂಘಟನೆಗಳು ನಡೆಸುವ ಮುಷ್ಕರ-ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಸರ್ಕಾರದ ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಇವರು ಪ್ರತ್ಯಕ್ಷವಾಗಿ ಭಾಗಿಯಾದವರಲ್ಲ. ಯಾವುದೇ ಸಾಮಾಜಿಕ ವಿಷಯಗಳಿಗೆ ಸ್ಪಂದಿಸದ, ಸ್ವಂತದ ಅಭಿಪ್ರಾಯವನ್ನೇ ಹೊಂದಿಲ್ಲದ, ಗಾಳಿ ಬಂದ ಕಡೆ ತೂರಿಕೊಳ್ಳುವ ಹಿಂದಿನ ಮಧ್ಯಮ ವರ್ಗ ಅದು.

ಸ್ವಾರ್ಥಿಗಳು, ಸಿನಿಕರು ಮತ್ತು ಹೇಡಿಗಳೆಂಬ ಟೀಕೆಯನ್ನು ಈ ವರ್ಗ ಎದುರಿಸುತ್ತಾ ಬಂದಿದೆ. ಇವರನ್ನೇ ಕಮ್ಯುನಿಸ್ಟರು `ಬೂರ್ಜ್ವಾ~ಗಳು ಎಂದು ಕರೆಯುತ್ತಿರುವುದು. `ಭಾರತದಲ್ಲಿ ಕ್ರಾಂತಿಯನ್ನು ತಡೆದವರೇ ಈ ಬೂರ್ಜ್ವಾಗಳು~ ಎಂದು ಎಡ ವಿಚಾರವಾದಿಗಳು ಆಕ್ರೋಶ ವ್ಯಕ್ತಪಡಿಸುವುದುಂಟು.
 ಕಳೆದೆರಡು ದಶಕಗಳ ಅವಧಿಯಲ್ಲಿ ದೇಶದಲ್ಲಿ ಹೊಸ ಬಗೆಯ ಮಧ್ಯಮವರ್ಗ ಸೃಷ್ಟಿಯಾಗಿದೆ. ಹಿನ್ನೆಲೆ ಮತ್ತು ಮನೋಭಾವ ಎರಡರ ದೃಷ್ಟಿಯಿಂದಲೂ ಈಗಿನ ಮಧ್ಯಮವರ್ಗ ಹಿಂದಿನದಕ್ಕಿಂತ ಸಂಪೂರ್ಣ ಭಿನ್ನ. ಇವರು ಸರ್ಕಾರಿ ನೌಕರರಲ್ಲ, ಖಾಸಗಿ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವವರು. ಕೈತುಂಬಾ ಸಂಬಳ ಪಡೆಯುತ್ತಿರುವವರು.
`ಎರಡು ಲಕ್ಷ ರೂಪಾಯಿಗಳಿಂದ ಹತ್ತು ಲಕ್ಷ ರೂಪಾಯಿ ವರೆಗೆ ವಾರ್ಷಿಕ ವರಮಾನ ಹೊಂದಿರುವ ಐದು ಕೋಟಿ ಜನ ಈಗ ಭಾರತದಲ್ಲಿದ್ದಾರೆ. 2025ರ ವೇಳೆಗೆ ಇವರ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿ 58 ಕೋಟಿಗೆ ತಲುಪಬಹುದು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇಕಡಾ 41ಕ್ಕೆ ಏರಬಹುದು.
ಮುಂದಿನ ಎರಡು ದಶಕಗಳಲ್ಲಿ ಭಾರತ ವಿಶ್ವದ ಐದನೇ ಅತಿದೊಡ್ಡ ಮಾರುಕಟ್ಟೆ ಆಗಲಿದೆ~ ಎಂದು `ವೆುಕೆನ್ಸಿ ಜಾಗತಿಕ ಸಂಸ್ಥೆ~ ಮೂರು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಹೇಳಿದೆ.

ಅಣ್ಣಾ ಚಳವಳಿಯಲ್ಲಿ ಬೀದಿಗಿಳಿದವರ ಮೂಲ ಇಲ್ಲಿದೆ. ಇವರ ಬಗ್ಗೆ ತಿಳಿದುಕೊಳ್ಳಬೇಕಾದರೆ ಕಳೆದೆರಡು ದಶಕಗಳಲ್ಲಿ ದೇಶ ಸಾಕ್ಷಿಯಾದ ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳನ್ನು ನೋಡಬೇಕಾಗುತ್ತದೆ.
ಇದು ಆರ್ಥಿಕ ಉದಾರೀಕರಣದಿಂದಾಗಿ ಹುಟ್ಟಿಕೊಂಡ ಹೊಸ ಪೀಳಿಗೆ. ಇವರು ಬೆಳಿಗ್ಗೆ ಎದ್ದು ಕುಡಿಯುವುದು ಕಾರ್ಪೋರೇಷನ್ ನೀರು ಅಲ್ಲ, ಇದಕ್ಕಾಗಿ ತಾವೇ ತೋಡಿದ ಬೋರ್‌ವೆಲ್‌ಗಳಿವೆ, ಇಲ್ಲವೇ ಪೇಟೆಯಲ್ಲಿ ಮಾರಾಟವಾಗುತ್ತಿರುವ ಮಿನರಲ್ ವಾಟರ್ ಇದೆ.

ಇವರು ಸರ್ಕಾರ ಸರಬರಾಜು ಮಾಡುವ ವಿದ್ಯುತ್ ಶಕ್ತಿಯನ್ನೇ ನಂಬಿ ಕೂತಿಲ್ಲ, ಜನರೇಟರ್-ಯುಪಿಎಸ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರು ಇರುವ ಫ್ಲಾಟ್‌ಗಳು, ಮನೆ ಕಟ್ಟಿರುವ ನಿವೇಶನಗಳು ಖಾಸಗಿಯವರಿಂದ ಖರೀದಿಸಿದ್ದು. ಸರ್ಕಾರದ ಗೃಹಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರಗಳು ಕೊಟ್ಟದ್ದಲ್ಲ.

ಇವರಿಗೆ ತುರ್ತಾಗಿ ಹಣ ಬೇಕಿದ್ದರೆ ರಗಳೆ ಮಾಡದೆ, ಕಾಡದೆ, ಪೀಡಿಸದೆ ಸಾಲ ಕೊಡುವ ಖಾಸಗಿ ಬ್ಯಾಂಕುಗಳ ಮೊರೆ ಹೋಗುತ್ತಾರೆ, ರಾಷ್ಟ್ರೀಕೃತ ಬ್ಯಾಂಕುಗಳನ್ನೇ ಅವಲಂಬಿಸಿಲ್ಲ. ಇವರು ಭದ್ರತೆಗಾಗಿ ಪೊಲೀಸರನ್ನೇ ಸಂಪೂರ್ಣವಾಗಿ ನಂಬಿಕೊಂಡಿಲ್ಲ, ಇದಕ್ಕಾಗಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇವಿಸಿಕೊಂಡಿದ್ದಾರೆ.
ಇವರು ಕಚೇರಿಗೆ ಹೋಗುವುದು ಸರ್ಕಾರಿ ಬಸ್‌ಗಳಲ್ಲ, ತಮ್ಮ ಸ್ವಂತ ವಾಹನಗಳಲ್ಲಿ. ಇವರ ಮಕ್ಕಳು ಓದುತ್ತಿರುವುದು ಸರ್ಕಾರಿ ಶಾಲೆಗಳಲ್ಲ, ಖಾಸಗಿ ಶಾಲೆಗಳಲ್ಲಿ.ಅಸ್ವಸ್ಥರಾದರೆ ಇವರು ಹೋಗುವುದು ಖಾಸಗಿ ಆಸ್ಪತ್ರೆಗೆ, ಸರ್ಕಾರಿ ಆಸ್ಪತ್ರೆಗಲ್ಲ.

ಇವರ ಮನೆಯಲ್ಲಿನ ಟಿವಿಗಳಲ್ಲಿ ಬಿತ್ತರವಾಗುತ್ತಿರುವ ನೂರಾರು ಚಾನೆಲ್‌ಗಳು ಅವರೇ ಹಾಕಿಕೊಂಡಿರುವ ಡಿಶ್ ಅಂಟೆನಾ ಇಲ್ಲವೇ ಕೇಬಲ್ ವಾಲಾನ ಮೂಲಕ ಹರಿದು ಬರುವಂತಹವು, ಸರ್ಕಾರಿ ದೂರದರ್ಶನವನ್ನು ಇವರು ಮರೆತೇ ಬಿಟ್ಟಿದ್ದಾರೆ.

ಇವರ ಮನೆಯಲ್ಲಿರುವ ಫೋನ್, ಕೈಯಲ್ಲಿರುವ ಮೊಬೈಲ್ ಎಲ್ಲವೂ ಖಾಸಗಿ ಕಂಪೆನಿಗಳದ್ದು. ಸರ್ಕಾರ ನೀಡುವ ಪಡಿತರ ಚೀಟಿ ಇವರಿಗೆ ಬೇಕಿಲ್ಲ, ಸರ್ಕಾರ ನೀಡುವ ತಾಳಿ, ಸೀರೆ, ರವಿಕೆ, ಕಣಗಳು ಇವರಿಗೆ ಬೇಡ. ಸರ್ಕಾರದ ನೂರೆಂಟು ಜನಕಲ್ಯಾಣ ಯೋಜನೆಗಳಲ್ಲಿ ಇವರು ಫಲಾನುಭವಿಗಳು ಅಲ್ಲವೇ ಅಲ್ಲ....
ನಿತ್ಯ ಜೀವನದಲ್ಲಿ `ಸರ್ಕಾರ~ ಎನ್ನುವುದು ಇವರಿಗೆ ಮುಖಾಮುಖಿಯಾಗುವುದು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದಾಗ, ಖರೀದಿ ಮಾಡಿದ ಮನೆ-ಆಸ್ತಿಯ ನೋಂದಣಿ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದಾಗ, ಜಾತಿ-ಆದಾಯ ಪ್ರಮಾಣಪತ್ರ ಮಾಡಿಸಲು ತಹಶೀಲ್ದಾರ್ ಕಚೇರಿಗೆ ಹೋದಾಗ....ಅಲ್ಲೆಲ್ಲಾ ಇವರಿಗೆ ಎದುರಾಗುವುದು ಲಂಚಕೋರ, ಅಪ್ರಾಮಾಣಿಕ ಮತ್ತು ದುರಹಂಕಾರಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು.

ಈ ಅನುಭವ `ಸರ್ಕಾರ~ವನ್ನು ಇವರು ಇನ್ನಷ್ಟು ದ್ವೇಷಿಸುವಂತೆ ಮಾಡುತ್ತದೆ. ಇಂತಹ ಅಧಿಕಾರಿಗಳ ಮೂಲಕವೇ ಸರ್ಕಾರಿ ಖಜಾನೆಯನ್ನು ಲೂಟಿ ಮಾಡುವ ರಾಜಕಾರಣಿಗಳನ್ನು ಕಂಡರೆ ಮೈಯೆಲ್ಲ ಉರಿದುಹೋಗುತ್ತದೆ.
ಈ ಸರ್ಕಾರ ನಮಗೇನು ಕೊಡದಿದ್ದರೂ ನಾವು ತೆರಿಗೆ ಕೊಡಬೇಕು, (ಅನಿವಾರ‌್ಯವಾಗಿ ತೆರಿಗೆ ಕಟ್ಟುವ ದೊಡ್ಡ ವರ್ಗ ಇದು) ಈ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ಆ ತೆರಿಗೆ ಹಣವನ್ನು ಲೂಟಿ ಹೊಡೆದು ಜೇಬು ತುಂಬಿಸಿಕೊಳುತ್ತಿದ್ದಾರೆ ಎಂಬ ಆಕ್ರೋಶ ಇವರಲ್ಲಿದೆ.
ಅಣ್ಣಾ ಚಳವಳಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿರುವುದು ಈ ಐದು ಕೋಟಿ ಮಧ್ಯಮ ವರ್ಗದ ಜನ. ಆರ್ಥಿಕವಾಗಿ ಸುಭದ್ರವಾಗಿರುವ, ವಿವಿಧ ಸಂಪರ್ಕ ಮಾಧ್ಯಮಗಳ ಮೂಲಕ ಕ್ಷಿಪ್ರಗತಿಯಲ್ಲಿ ಸಂಘಟಿತರಾಗಬಲ್ಲ ಮತ್ತು `ಸಾರ್ವಜನಿಕ ಅಭಿಪ್ರಾಯ~ವನ್ನು ಸುಲಭದಲ್ಲಿ ರೂಪಿಸಬಲ್ಲಷ್ಟು ಜಾಣರಾಗಿರುವ ಶಕ್ತಿಶಾಲಿ ವರ್ಗ ಇದು. ಇಂತಹದ್ದೊಂದು ವರ್ಗ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲು ಹೊರಟಿರುವುದು ಒಳ್ಳೆಯದೇ ಅಲ್ಲವೇ ಎಂದು ಪ್ರಶ್ನಿಸುವ ಮುಗ್ಧರೂ ಇದ್ದಾರೆ.
ಆದರೆ ಈ ವರ್ಗದಲ್ಲಿರುವ ಹೆಚ್ಚಿನವರು ತಮ್ಮ ಉದ್ಯೋಗದಾತರಾಗಿರುವ ಕಾರ್ಪೋರೇಟ್ ದೊರೆಗಳು ಇದೇ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ಸರ್ಕಾರಿ ಖಜಾನೆಯನ್ನು ಲೂಟಿ ಹೊಡೆಯುವುದು ಗೊತ್ತಿದ್ದರೂ ಬಾಯಿ ಬಿಚ್ಚುವುದಿಲ್ಲ.
ಈ ದೇಶದ ಶೇಕಡಾ 80ರಷ್ಟು ಜನ ದಿನದ ಆದಾಯವಾದ ಇಪ್ಪತ್ತು ರೂಪಾಯಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂಬ ಸತ್ಯ ಇವರ ಮನಸ್ಸನ್ನು ಕಲಕುವುದಿಲ್ಲ.
ಅಪಾಯಕಾರಿಯಾಗಿ ಬೆಳೆಯುತ್ತಿರುವ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದರ ಇವರಲ್ಲಿ ಗಾಬರಿ ಹುಟ್ಟಿಸುವುದಿಲ್ಲ. `ಸಾಮಾಜಿಕ ನ್ಯಾಯ~ ಎನ್ನುವುದು ಇವರಿಗೆ ಗೇಲಿಯ ಮಾತು.
ಆರ್ಥಿಕ ಉದಾರೀಕರಣವೆಂದರೆ ಕೇವಲ ಖಾಸಗಿಕರಣ ಮತ್ತು ಯಾವ ಬೆಲೆ ತೆತ್ತಾದರೂ ಇದನ್ನು ಸಾಧಿಸಬೇಕೆಂಬ ಅಭಿವೃದ್ಧಿಯ ಕುರುಡು ಮಾದರಿ ಇಂದಿನ ದುರಂತಕ್ಕೆ ಕಾರಣ. ಒಬ್ಬ ಸಾಮಾನ್ಯ ಮನುಷ್ಯನ ಪ್ರತಿಭೆ, ಮತ್ತು  ಸಾಮರ್ಥ್ಯವನ್ನು ಗುರುತಿಸುವ ಮತ್ತು ಬೆಳೆಸುವ ಖಾಸಗೀಕರಣ ತಪ್ಪಲ್ಲವೇ ಅಲ್ಲ.
ಆದರೆ ಭಾರತದಲ್ಲಿ ಹೆಚ್ಚಿನ ಖಾಸಗಿ ಉದ್ಯಮಗಳು ಬೆಳೆದದ್ದು ಕೇವಲ ಸ್ವಂತ ಸಾಮರ್ಥ್ಯದಿಂದ ಇಲ್ಲವೇ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಜತೆಗಿನ ಆರೋಗ್ಯಕರ ಪೈಪೋಟಿ ಮೂಲಕ ಅಲ್ಲ. ಅವರು ಬೆಳೆಯಲು ಬಳಸಿದ್ದು ಅಡ್ಡದಾರಿ.
ಇದರಲ್ಲಿ ಷಾಮೀಲಾಗಿದ್ದು ಈಗ ತಿಹಾರ್ ಜೈಲಿನಲ್ಲಿರುವ ರಾಜಕಾರಣಿಗಳು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳಂತಹವರು. ಬೆಂಗಳೂರಿನಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಬಳಕೆದಾರರನ್ನು ಕೇಳಿ, ಎಲ್ಲರದ್ದೂ ನೆಟ್‌ವರ್ಕ್ ಸಮಸ್ಯೆಯ ಗೋಳು.

ಆದರೆ ಮೊನ್ನೆಮೊನ್ನೆ ಹುಟ್ಟಿಕೊಂಡಿರುವ ಖಾಸಗಿ ಮೊಬೈಲ್ ಕಂಪೆನಿಗಳ ಸೇವೆಯ ಬಳಕೆದಾರರಲ್ಲಿ ಈ ಸಮಸ್ಯೆ ಇಲ್ಲ, ಯಾಕೆ? ಇದೊಂದು ಸಣ್ಣ ಉದಾಹರಣೆ. ಸರ್ಕಾರಿ ಶಾಲೆ, ಆಸ್ಪತ್ರೆ, ಸಂಚಾರ ವ್ಯವಸ್ಥೆ ಎಲ್ಲವನ್ನೂ ವ್ಯವಸ್ಥಿತವಾಗಿ ದುರ್ಬಲಗೊಳಿಸಿ ಖಾಸಗಿಯವರಿಗೆ ದಾರಿ ಮಾಡಿಕೊಟ್ಟವರು ಯಾರು?
ಇದೇ ಉದಾರೀಕರಣದ ಅವತಾರ ಪುರುಷರಲ್ಲವೇ? ಸರ್ಕಾರಿ ಸ್ವಾಮ್ಯದಲ್ಲಿರುವ ಸಂಸ್ಥೆಗಳನ್ನು ಖಾಸಗಿ ಕ್ಷೇತ್ರಕ್ಕೆ ಪೈಪೋಟಿ ನೀಡುವ ರೀತಿಯಲ್ಲಿ ಬಲಗೊಳಿಸಬೇಕಾದ ಸರ್ಕಾರವೇ ಅದನ್ನು ನಾಶ ಮಾಡಿ ಖಾಸಗಿರಂಗವನ್ನು ಬೆಳೆಸಲು ಹೊರಟ ಸ್ವಾರ್ಥ ರಾಜಕಾರಣದ ಫಲಶ್ರುತಿಯನ್ನು ದೇಶ ಉಣ್ಣುತ್ತಿದೆ.
ದುರಂತವೆಂದರೆ ಈ ಐದುಕೋಟಿ ಜನರ ಆಕ್ರೋಶ ಕೇವಲ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗಷ್ಟೇ ಸೀಮಿತವಾಗಿಲ್ಲ, ಅದು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪ್ರಶ್ನಿಸುವಷ್ಟು ಮಟ್ಟಕ್ಕೆ ಬೆಳೆಯುತ್ತಿದೆ.
`ರಾಜಕಾರಣಿಗಳೆಲ್ಲ ಕಳ್ಳರು~, `ಚುನಾವಣೆ ಎನ್ನುವುದು ಮೋಸ~..ಎಂಬಿತ್ಯಾದಿ ಬೇಜವಾಬ್ದಾರಿ ಹೇಳಿಕೆಗಳಿಗೆ ಇದೇ ಕಾರಣ. ಇದಕ್ಕೆಲ್ಲ ಪರಿಹಾರ ಎಂಬಂತೆ ಬಿಂಬಿಸಲಾಗುತ್ತಿರುವ ಸರ್ವಶಕ್ತ ಜನಲೋಕಪಾಲ ಮಸೂದೆ ಕೂಡಾ ಒಂದು ರೀತಿಯಲ್ಲಿ ಸರ್ಕಾರವನ್ನೇ ಖಾಸಗೀಕರಣಗೊಳಿಸುವ ಪ್ರಯತ್ನ.

ಇಂತಹ ಅರಾಜಕ ಮನಸ್ಥಿತಿಯ ಹೊಸ ಪೀಳಿಗೆಯ ಜನಕ ಯಾರೆಂದು ತಿಳಿದುಕೊಂಡಿರಿ? ಅದು ಈ ದೇಶದ ಈಗಿನ ಪ್ರಧಾನಿ ಮನಮೋಹನ್‌ಸಿಂಗ್. ಇಪ್ಪತ್ತು ವರ್ಷಗಳ ಹಿಂದೆ ಅವರು ಬಿತ್ತಿದ್ದು ಇಂದು ಬೆಳೆದು ಅವರ ಬಲಿ ಕೇಳುತ್ತಿದೆ.
ತಪ್ಪು ಈ ಐದುಕೋಟಿ ಜನರದ್ದಲ್ಲ, ಅವರು ಬೆಳೆದದ್ದೇ ಹಾಗೆ. ತಪ್ಪು ಅವರನ್ನು ಬೆಳೆಸಿದವರದ್ದು. ಬಹುನಿರೀಕ್ಷೆಯಿಂದ ಬೆಳೆಸಿದ ಮಕ್ಕಳಿಂದಲೇ ಹೊರದಬ್ಬಲ್ಪಟ್ಟ ತಂದೆಯ ಸ್ಥಿತಿ ಪ್ರಧಾನಿ ಮನಮೋಹನ್‌ಸಿಂಗ್ ಅವರದ್ದು. ಮಾಡಿದ್ದನ್ನು ಉಣ್ಣಲೇ ಬೇಕಾದ ಸ್ಥಿತಿ ಅವರದ್ದು.

Monday, March 21, 2011

ವಿಕಿಲೀಕ್ಸ್‌ನಲ್ಲಿಯೂ ಉತ್ತರ ಇಲ್ಲದ ಪ್ರಶ್ನೆಗಳು

ಎಡಪಕ್ಷಗಳಿಗೆ ಸೆಡ್ಡು ಹೊಡೆದು ಸರ್ಕಾರದ ಭವಿಷ್ಯವನ್ನೇ ಡೋಲಾಯಮಾನ ಮಾಡಿದ್ದ ಮನಮೋಹನ್ ಸಿಂಗ್ ವಿಶ್ವಾಸಮತಯಾಚನೆಗಾಗಿ ಎದೆಯುಬ್ಬಿಸಿಕೊಂಡು ಸಂಸತ್‌ಭವನ ಪ್ರವೇಶಿಸಿದ್ದು... ತನ್ನನ್ನು ಪ್ರಶ್ನಿಸಲು ಬಂದ ಪತ್ರಕರ್ತರಿಗೆ ಏನನ್ನೂ ಹೇಳದೆ ನಗುನಗುತ್ತಾ ಕೈಬೆರಳುಗಳನ್ನೆತ್ತಿ ಗೆಲುವಿನ ಸಂಜ್ಞೆ ಮಾಡಿದ್ದು... ವಿಶ್ವಾಸಮತಯಾಚನೆಯಲ್ಲಿ ಗೆದ್ದ ಮರುಕ್ಷಣದಲ್ಲಿಯೇ ಕಾಂಗ್ರೆಸ್ ಸಂಸದರು ‘ಸಿಂಗ್ ಈಸ್ ಕಿಂಗ್’ ಎಂದು ಹರ್ಷೋದ್ಗಾರ ಮಾಡಿದ್ದು... ಎಲ್ಲವೂ ಮೊನ್ನೆಮೊನ್ನೆ ನಡೆದಂತಿದೆ.
ಇಂತಹ ಒಂದು ಕ್ಷಣಕ್ಕಾಗಿಯೇ ಮನಮೋಹನ್ ಸಿಂಗ್ ಕಾಯುತ್ತಿದ್ದರೋ ಏನೋ ಎಂದು ಆಗ ಅನಿಸಿತ್ತು. ಯಾಕೆಂದರೆ ಪ್ರಧಾನಿಯಾಗಲು ಒಪ್ಪಿಕೊಂಡ ದಿನದಿಂದ ಅವಮಾನ, ಹೀಯಾಳಿಕೆಯ ನುಡಿಗಳನ್ನೇ ಅವರು ಕೇಳುತ್ತಾ ಬಂದಿದ್ದು. ಸಾಮಾನ್ಯವಾಗಿ ಬಳಸುವ ಭಾಷೆ ಬಗ್ಗೆ ಎಚ್ಚರದಿಂದ ಇರುವ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರೇ ಮನಮೋಹನ್‌ಸಿಂಗ್ ಅವರನ್ನು ‘ನಿಕ್ಕಮ್ಮ (ಕೈಲಾಗದವ)’ ‘ದುರ್ಬಲ’, ‘ಅದೃಶ್ಯ’ ಪ್ರಧಾನಿ ಎಂದೆಲ್ಲಾ ಹೀಗಳೆದಿದ್ದರು.

ಅದಕ್ಕೆಲ್ಲ ಉತ್ತರ ನೀಡುವಂತಿತ್ತು ಮನಮೋಹನ್ ಸಿಂಗ್ ಅವರ ಆ ದಿನದ ಧೀರ, ಗಂಭೀರ ನಡಿಗೆ ಮತ್ತು ಹುಸಿನಗೆ.
2008ರ ಜುಲೈ 22ರ  ಆ ದಿನವನ್ನು (ವಿಶ್ವಾಸಮತಯಾಚನೆ ದಿನ) ಮನಮೋಹನ್‌ಸಿಂಗ್ ಮತ್ತು ಅವರ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಆ ದಿನವೇ ತಾನೊಬ್ಬ ದುರ್ಬಲ ಪ್ರಧಾನಿ ಅಲ್ಲ ಎಂದು ಮನಮೋಹನ್ ಸಿಂಗ್ ಸಾಬೀತುಪಡಿಸಿದ್ದು ಮತ್ತು ಅದೇ ದಿನ ಅವರ ಬಿಳಿಬಟ್ಟೆಯ ಮೇಲೆ ಮೊದಲ ಕಳಂಕದ ಕಲೆ ಅಂಟಿಕೊಂಡದ್ದು.

ತುಂಬು ವಿಶ್ವಾಸದಿಂದ ಮನಮೋಹನ್ ಸಿಂಗ್ ಲೋಕಸಭೆ ಪ್ರವೇಶಿಸಿದ್ದ ಮರುಗಳಿಗೆಯಲ್ಲಿಯೇ ಬಿಜೆಪಿಯ ಮೂವರು ಸದಸ್ಯರಾದ ಅಶೋಕ್ ಅರ್ಗಲ್, ಫಗನ್‌ಸಿಂಗ್ ಕುಲಸ್ಥೆ ಮತ್ತು ಮಹಾವೀರ ಭಗೋರಾ ಅವರು ಎರಡು ದೊಡ್ಡ ಚೀಲಗಳನ್ನು ಎತ್ತಿಕೊಂಡು ಸಭಾಧ್ಯಕ್ಷರ ಪೀಠದ ಮಂದಿನ ಅಂಗಳದ ಕಡೆ ನುಗ್ಗಿದ್ದರು.
 ಅವರ ಕೈಯೊಳಗೆ ಸಾವಿರ ರೂಪಾಯಿಗಳ ನೋಟಿನ ಕಂತೆಗಳಿದ್ದವು. ಒಂದು ಕ್ಷಣ ಇಡೀ ಸದನ ಸ್ಥಬ್ದವಾಗಿತ್ತು. ‘ಇದು ವಿಶ್ವಾಸಮತದ ಪರವಾಗಿ ಮತಚಲಾಯಿಸಲು ತಮಗೆ  ಮುಂಗಡವಾಗಿ ಕೊಟ್ಟಿದ್ದ ಒಂದು ಕೋಟಿ ರೂಪಾಯಿ. ಇದನ್ನು ಅಮರ್‌ಸಿಂಗ್ ಸೂಚನೆ ಮೇರೆಗೆ ಅವರ ಸಹಾಯಕರು ತಂದುಕೊಟ್ಟಿದ್ದರು’ ಎಂದು ಅಶೋಕ್ ಅರ್ಗಲ್ ಕೂಗಾಡುತ್ತಿದ್ದರು. ಇತ್ತ ಸೆಂಟ್ರಲ್ ಹಾಲ್‌ನ ಸೈಡ್‌ವಿಂಗ್‌ನಲ್ಲಿ ಕರ್ನಾಟಕದ ಮೂವರು ಬಿಜೆಪಿ ಲೋಕಸಭಾ ಸದಸ್ಯರಾದ ಎಚ್.ಟಿ. ಸಾಂಗ್ಲಿಯಾನಾ, ಮಂಜುನಾಥ ಕುನ್ನೂರು ಮತ್ತು ಮನೋರಮಾ ಮಧ್ವರಾಜ್ ಹಾಗೂ ಜೆಡಿ (ಎಸ್) ಸದಸ್ಯ ಶಿವಣ್ಣ ಕಾಂಗ್ರೆಸ್ ಜತೆ ಕೈಜೋಡಿಸಲು ವೇಷ ಬದಲಿಸುತ್ತಿದ್ದರು. ಎದೆಯುಬ್ಬಿಸಿಕೊಂಡು ಬಂದಿದ್ದ ಮನಮೋಹನ್ ಸಿಂಗ್ ಗದ್ದಲದ ನಡುವೆಯೇ ಸೋನಿಯಾಗಾಂಧಿ ಜತೆಗೂಡಿ ತಲೆತಗ್ಗಿಸಿಕೊಂಡು ಸದನದಿಂದ ಹೊರನಡೆದಿದ್ದರು.
 ಇವೆಲ್ಲವೂ ಹಳೆಯ ಕತೆ, ವಿಕಿಲೀಕ್ಸ್ ಕೇಬಲ್‌ಗಳು ಬಹಿರಂಗಪಡಿಸಿದ್ದರಲ್ಲಿ ಕೂಡಾ ಹೊಸದೇನಿಲ್ಲ, ಒಂದಷ್ಟು ಹೊಸ ಪುರಾವೆಗಳು ಸಿಕ್ಕಿವೆ ಅಷ್ಟೇ.ಆದರೆ  ಸರ್ಕಾರವನ್ನೇ ಪತನದ ಅಂಚಿಗೆ ತಂದು ನಿಲ್ಲಿಸುವಂತಹ ಅಪಾಯಕ್ಕೆ ಆಹ್ವಾನ ನೀಡುವಷ್ಟು ಮತ್ತು ಅಧಿಕಾರ ಉಳಿಸಲು ಸಂಸದರ ಖರೀದಿಯಂತಹ ಹೀನಕೃತ್ಯಕ್ಕೆ ಇಳಿಯುವಷ್ಟು ಅಮೆರಿಕದ ಜತೆಗಿನ ನಾಗರಿಕ ಪರಮಾಣು ಒಪ್ಪಂದ ದೇಶಕ್ಕೆ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಗೆ ವಿಕಿಲೀಕ್ಸ್ ಕೇಬಲ್‌ಗಳಲ್ಲಿಯೂ ಈ ವರೆಗೆ ಉತ್ತರ ಸಿಕ್ಕಿಲ್ಲ. 2004ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಪ್ರಸ್ತಾವವೇ ಇರಲಿಲ್ಲ. ಅದರ ನಂತರ ಯುಪಿಎ ಎಂಬ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಾಗ ರಚನೆಯಾದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಲ್ಲಿಯೂ ಇದರ ಉಲ್ಲೇಖ ಇರಲಿಲ್ಲ.
 ಹೀಗಿದ್ದರೂ ಈ ಒಪ್ಪಂದವನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಡುವ ಅವಶ್ಯಕತೆ ಏನಿತ್ತು? ಇದಕ್ಕೆ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ಉತ್ತರ ಇಂಧನ ಕೊರತೆ. ಭಾರತ ಇಂಧನ ಕೊರತೆಯಿಂದ ಬಳಲುತ್ತಿರುವುದು ನಿಜ. ಆದರೆ ನಾಗರಿಕ ಪರಮಾಣು ಒಪ್ಪಂದದಿಂದ ಈ ಕೊರತೆ ನೀಗುವುದೇ?
‘ಇಡೀ ವಿಶ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ 35 ಅಣುಸ್ಥಾವರಗಳಲ್ಲಿ 24 ಏಷ್ಯಾದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ. ಇಂಧನ ಭದ್ರತೆಯ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ವೇಗದ ಓಟ ಭಾರತಕ್ಕೆ ಅನಿವಾರ್ಯ’ ಎಂದು ಒಪ್ಪಂದವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು. ಆದರೆ ಕಾಂಗ್ರೆಸ್ ಹೇಳಿದಂತೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತವೇನು ಹಿಂದೆ ಉಳಿದಿರಲಿಲ್ಲ.
ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಭಾರತದಲ್ಲಿ ಆರು ಅಣುಸ್ಥಾವರಗಳು ನಿರ್ಮಾಣಗೊಳ್ಳುತ್ತಿತ್ತು. ಏಳು ಅಣುಸ್ಥಾವರಗಳನ್ನು ನಿರ್ಮಿಸುತ್ತಿದ್ದ ಚೀನಾ ದೇಶವೊಂದೇ ಭಾರತಕ್ಕಿಂತ ಮುಂದೆ ಇತ್ತು. ‘ಈಗ ಭಾರತ ಪರಮಾಣು ಮೂಲದಿಂದ ಶೇಕಡಾ 3ರಷ್ಟು ಇಂಧನ ಪಡೆಯುತ್ತಿದೆ.
ಆದರೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತ ಚೀನಾ ಮತ್ತು ರಷ್ಯಾ ದೇಶಗಳಿಗೆ ಸಮನಾಗಿ ನಿಂತಿದೆ’ ಎಂದು ಅಂತರರಾಷ್ಟ್ರೀಯ ಪರಮಾಣುಶಕ್ತಿ ಸಂಸ್ಥೆ (ಐಎಇಎ)ಯ ಮುಖವಾಣಿ ಪತ್ರಿಕೆಯಲ್ಲಿ  ಆ ದಿನಗಳಲ್ಲಿ ಪ್ರಕಟಗೊಂಡಿದ್ದ ಲೇಖನ ಹೇಳಿತ್ತು.
 2030ನೇ ವರ್ಷದಲ್ಲಿ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಮೂಲಗಳ ಇಂಧನದ ಸ್ಥಿತಿಗತಿ ಏನಿರುತ್ತದೆ ಎಂಬ ಬಗ್ಗೆ ವರದಿಯನ್ನು ಅಮೆರಿಕದ ಇಂಧನ ಇಲಾಖೆಗೆ ಸೇರಿರುವ ‘ಇಂಧನ ಮಾಹಿತಿ ಸಂಸ್ಥೆ’ (ಇಐಎ) ಪ್ರಕಟಿಸಿತ್ತು. ಅದರ ಪ್ರಕಾರ 2005ರಲ್ಲಿ 1,38,000 ಮೆಗಾವಾಟ್‌ನಷ್ಟಿದ್ದ ಭಾರತದ ಇಂಧನ ಸಾಮರ್ಥ್ಯ 2030ನೇ ವರ್ಷದಲ್ಲಿ 3,98,00 ಮೆಗಾವಾಟ್‌ನಷ್ಟು ಆಗಲಿದೆ.
 ಇದರಲ್ಲಿ ಅಣುಶಕ್ತಿಯ ಪಾಲು 20,000 ಮೆಗಾವಾಟ್ ಮಾತ್ರ. ಅಂದರೆ ಇಷ್ಟೆಲ್ಲಾ ಹೊಸ ಅಣುಸ್ಥಾವರಗಳ ನಿರ್ಮಾಣದ ನಂತರವೂ 2030ರ ವೇಳೆಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇಕಡಾ ಐದರಷ್ಟಾಗಲಿದೆ. ಇದನ್ನು ಇಂಧನ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ಎನ್ನಬಹುದೇ?
 ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಕುರಿತಂತೆಯೇ ಕೇಂದ್ರ ಯೋಜನಾ ಆಯೋಗದ ಇಂಧನ ಸಂಬಂಧಿ ಕಾರ್ಯತಂಡ ವರದಿಯೊಂದನ್ನು ನೀಡಿದೆ. ಪರಮಾಣು ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶಕ್ಕೂ ಅವಕಾಶ ನೀಡುವ ಬಗ್ಗೆಯೂ ಈ ವರದಿಯಲ್ಲಿ ದೀರ್ಘವಾಗಿ ಚರ್ಚಿಸಲಾಗಿದೆ. ಇವೆಲ್ಲದರ ಪರಿಣಾಮ ಹನ್ನೆರಡನೇ ಯೋಜನೆಯ ಅವಧಿಯಲ್ಲಿ (2012-2017) ನಿಚ್ಚಳವಾಗಿ ಕಾಣಲಿದೆ ಎಂಬ ನಿರೀಕ್ಷೆಯನ್ನು ವರದಿ ವ್ಯಕ್ತಪಡಿಸಿದೆ.
ಇದರ ಆಧಾರದಲ್ಲಿ ಮಾಡಲಾದ ಅಂದಾಜಿನಂತೆ 11 ಮತ್ತು 12ನೇ ಯೋಜನಾ ಅವಧಿಯಲ್ಲಿ 15,960 ಮೆಗಾವಾಟ್ ಅಣುಶಕ್ತಿ ಉತ್ಪಾದನೆಯಾಗಬಹುದು. ಇದರ ಪ್ರಕಾರವೂ ದೇಶದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇ 6.7 ಮಾತ್ರ. ಇದನ್ನು ಕೂಡಾ ಇಂಧನ ಭದ್ರತೆಯಲ್ಲಿ ನಿರ್ಣಾಯಕ ಎಂದು ಹೇಳಲಾಗದು.
ನಾವೆಲ್ಲ ತಿಳಿದುಕೊಂಡ ಹಾಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ಆಗಬಹುದಾದ ಏಕೈಕ ಲಾಭ ಎಂದರೆ ದೇಶದ ಇಂಧನ ಸಾಮರ್ಥ್ಯದ ಹೆಚ್ಚಳ. ಉಳಿದಂತೆ ಆಗಲಿರುವುದು ನಷ್ಟವೇ. ಉದಾಹರಣೆಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ದೇಶದ ಪರಮಾಣು ಅಸ್ತ್ರ ಕಾರ್ಯಕ್ರಮದ ಗತಿ ಏನು ಎಂಬ ಮೂರು ವರ್ಷಗಳ ಹಿಂದಿನ ಪ್ರಶ್ನೆ ಈಗಲೂ ಜ್ವಲಂತವಾಗಿದೆ. ಇದು ಒಪ್ಪಂದದ ಅತ್ಯಂತ ವಿವಾದಾತ್ಮಕ ಅಂಶ. ಪರಮಾಣು ಶಕ್ತಿಯ ನಾಗರಿಕ ಬಳಕೆಯ ಚಟುವಟಿಕೆಗಳಿಗಷ್ಟೇ ಒಪ್ಪಂದ ಅನ್ವಯವಾಗುವುದರಿಂದ ನಾಗರಿಕ ಮತ್ತು ಮಿಲಿಟರಿ ಬಳಕೆಯ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸಬೇಕಾಗಿದೆ.
ನಮ್ಮಲ್ಲಿರುವ 22 ಅಣು ಸ್ಥಾವರಗಳಲ್ಲಿ ಹದಿನಾಲ್ಕು ಮಾತ್ರ ನಾಗರಿಕ ಬಳಕೆಯ ಉದ್ದೇಶದ್ದು ಎಂದು ಹೇಳಿ ಅವುಗಳನ್ನು ಅಂತರರಾಷ್ಟ್ರೀಯ ಸುರಕ್ಷತಾ ಚಕ್ರದೊಳಗೆ ಸೇರಿಸಲು ಭಾರತ ಒಪ್ಪಿಕೊಂಡಿದೆ. ಯುರೇನಿಯಂ ಬಳಕೆಯನ್ನು ಕಡಿಮೆ ಮಾಡಲು ಕಂಡುಹಿಡಿಯಲಾದ ‘ಕಡಿಮೆ ತಿಂದು ಹೆಚ್ಚು ಶಕ್ತಿ ಉತ್ಪಾದಿಸುವ’ ಸ್ವದೇಶಿ ತಂತ್ರಜ್ಞಾನ ಅಳವಡಿಕೆಯ ಫಾಸ್ಟ್ ಬ್ರೀಡರ್ ಸ್ಥಾವರಗಳನ್ನು ನಾಗರಿಕ ಬಳಕೆಯ ಗುಂಪಿನಲ್ಲಿ ಸೇರಿಸಬೇಕೆಂದು ಅಮೆರಿಕ ಒತ್ತಡ ಹೇರುತ್ತಲೇ ಇದೆ.
ಈ ಒಪ್ಪಂದದ ನಂತರ ಮಿಲಿಟರಿ ಬಳಕೆಯ ಅಣುಸ್ಥಾವರಗಳು ಮುಂದೆಂದೂ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಅಮೆರಿಕದ ಪರಮಾಣು ಇಂಧನ ಕಾಯಿದೆ ಪ್ರಕಾರ ‘ಅಣುಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕದ ದೇಶಗಳ ಜತೆ ಆ ದೇಶ ಪರಮಾಣು ಸಹಕಾರ ಸಂಬಂಧ ಹೊಂದುವ ಹಾಗಿಲ್ಲ. ಅದರಿಂದ ಭಾರತಕ್ಕೆ ವಿನಾಯಿತಿ ನೀಡಲೆಂದೇ ಹೈಡ್ ಕಾಯಿದೆ ಎನ್ನುವ ಹೆಸರಲ್ಲಿ ಚರ್ಚೆಗೊಳಗಾಗಿದ್ದ ಹೊಸ ಕಾಯಿದೆಯನ್ನು ಅಮೆರಿಕ ರಚಿಸಿದೆ.
ಈ ಕಾಯಿದೆ ಭಾರತಕ್ಕೆ ಕೆಲವು ವಿನಾಯಿತಿ ನೀಡುವ ಜತೆಯಲ್ಲಿ ಕೆಲವು ಷರತ್ತುಗಳನ್ನು ಹೇರಿದೆ. ಅದರ ಪ್ರಕಾರ ಭಾರತ ಸ್ವತಂತ್ರವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಈ ಷರತ್ತು ಉಲ್ಲಂಘಿಸಿದರೆ ಒಪ್ಪಂದ ತನ್ನಿಂದತಾನೇ ರದ್ದಾಗುತ್ತದೆ. ಹೈಡ್ ಕಾಯಿದೆ ರಚನೆಯಾದ ಸಂದರ್ಭದಲ್ಲಿ ಭಾರತದಲ್ಲಿ ವ್ಯಕ್ತವಾದ ವಿರೋಧವನ್ನು ಕಂಡ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ‘ಹೈಡ್ ಕಾಯಿದೆ ಭಾರತಕ್ಕೆ ಅನ್ವಯವಾಗುವುದಿಲ್ಲ, ಅದು ಸಲಹಾ ರೂಪದ್ದು’ ಎಂದು ಮೌಖಿಕವಾಗಿ ಸಮಾಧಾನ ಹೇಳಿದ್ದರು.
ಇದನ್ನೇ ಕಾಂಗ್ರೆಸ್ ಆತ್ಮರಕ್ಷಣೆಗಾಗಿ ಬಳಸುತ್ತಿದೆ. ಆದರೆ ಅಮೆರಿಕ ಬಿಡುಗಡೆಗೊಳಿಸಿರುವ 123 ಒಪ್ಪಂದದ ಪಠ್ಯದಲ್ಲಿನ ಆರ್ಟಿಕಲ್ 2 (ಸಹಕಾರದ ಅವಕಾಶ) ‘... ಎರಡೂ ದೇಶಗಳು ತಮ್ಮಲ್ಲಿನ ಒಪ್ಪಂದ ರಾಷ್ಟ್ರೀಯ ಕಾನೂನುಗಳು ಮತ್ತು ಅವಶ್ಯಕ ಲೈಸೆನ್ಸ್‌ಗಳಿಗೆ ಅನುಗುಣವಾಗಿ ಒಪ್ಪಂದವನ್ನು ಜಾರಿಗೊಳಿಸಬೇಕು...’ ಎಂದು ಹೇಳಿದೆ. ಅಮೆರಿಕದ ರಾಷ್ಟ್ರೀಯ ಕಾನೂನುಗಳ ವ್ಯಾಪ್ತಿಯಲ್ಲಿ ಹೈಡ್ ಕಾಯಿದೆ ಸೇರಿಕೊಳ್ಳುವುದರಿಂದ ಅದು ಪರಮಾಣು ಸಹಕಾರ ಒಪ್ಪಂದಕ್ಕೆ ಅನ್ವಯವಾಗುತ್ತದೆ.
ಅಣ್ವಸ್ತ್ರ ಪರೀಕ್ಷೆಯ ಮೇಲೆ ಹೇರಲಾಗಿರುವ ಈ ನಿರ್ಬಂಧವನ್ನು ಹಲವಾರು ಹಿರಿಯ ವಿಜ್ಞಾನಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ‘ಹೊಸ ಪರಮಾಣು ಅಸ್ತ್ರಗಳ ತಯಾರಿ ಮಾತ್ರವಲ್ಲ, ಹಳೆಯ ಅಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ನವೀಕರಿಸಲು ಕೂಡಾ ಅಣ್ವಸ್ತ್ರ ಪರೀಕ್ಷೆ ಅಗತ್ಯ’ ಎಂದು  ಭಾಭಾ ಅಣು ಸಂಶೋಧನಾ ಕೇಂದ್ರ (ಬಾರ್ಕ್‌)ದ ನಿವೃತ್ತ ನಿರ್ದೇಶಕ ಎ.ಎನ್. ಪ್ರಸಾದ್ ಹೇಳುತ್ತಿದ್ದಾರೆ.
ಈ ಕಾರಣದಿಂದಾಗಿ ಪರಮಾಣು ಸಹಕಾರ ಒಪ್ಪಂದ ಇನ್ನೊಂದು ರೀತಿಯಲ್ಲಿ ತಮ್ಮ ಭದ್ರತೆಯ ವಿಚಾರದಲ್ಲಿ ಮಾಡಿಕೊಂಡಿರುವ ರಾಜಿ ಎನ್ನುವ ಆರೋಪವನ್ನು ಎದುರಿಸಬೇಕಾಗಿಬಂದಿರುವುದು.ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ನಮ್ಮ ಇಂಧನ ಸಾಮರ್ಥ್ಯ ಗಣನೀಯವಾಗಿ ಹೆಚ್ಚದೆ ಇದ್ದರೂ, ಈ ಒಪ್ಪಂದದಿಂದಾಗಿ ಸೇನಾ ಬಳಕೆಯ ಪರಮಾಣು ಕಾರ್ಯಕ್ರಮಗಳಿಗೆ ಹಿನ್ನಡೆಯಾದರೂ ಮತ್ತು ದೇಶದ ಭದ್ರತೆಯ ವಿಚಾರದಲ್ಲಿಯೇ ರಾಜಿ ಮಾಡಿಕೊಳ್ಳಬೇಕಾಗಿ ಬಂದರೂ ಮನಮೋಹನ್ ಸಿಂಗ್ ಅವರು ಯಾಕೆ ಈ ಒಪ್ಪಂದವನ್ನು ಸರ್ಕಾರದ ಜೀವನ್ಮರಣದ ಪ್ರಶ್ನೆ ಮಾಡಿದ್ದರು?
ನಾಗರಿಕ ಬಳಕೆಗಾಗಿ ಅಣುಶಕ್ತಿ ಅಭಿವೃದ್ಧಿಯ ಕಾರ್ಯಕ್ರಮದಂತೆ ಮೇಲ್ನೋಟಕ್ಕೆ ಕಾಣುವ ಪರಮಾಣು ಸಹಕಾರ ಒಪ್ಪಂದದ ಗುಪ್ತವಾಗಿ ಅಮೆರಿಕ ಮತ್ತು ಭಾರತದ ನಡುವಿನ ಸೇನಾ ಒಪ್ಪಂದವೇ? ಈ ಒಪ್ಪಂದ ಭಾರತವನ್ನು ಚೀನಾ ಎದುರು ಎತ್ತಿಕಟ್ಟುವ ಹುನ್ನಾರವೇ ? ತನ್ನಲ್ಲಿರುವ ಎರಡನೇ ದರ್ಜೆ ಅಣುತಂತ್ರಜ್ಞಾನ ಮತ್ತು ಅಣು ರಿಯಾಕ್ಟರ್‌ಗಳಿಗೆ ಭಾರತದಲ್ಲಿ ಮಾರುಕಟ್ಟೆ ಕುದುರಿಸಲಿಕ್ಕೆ ಈ ಒಪ್ಪಂದವನ್ನು ಮಾಡಿಕೊಂಡಿತೇ? ವಿಕಿಲೀಕ್ಸ್ ಕೇಬಲ್‌ಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾಗಿದೆ.
ಇವೆಲ್ಲಕ್ಕಿಂತಲೂ ಮುಖ್ಯವಾದ ಅಣುಸ್ಥಾವರಗಳ ಸುರಕ್ಷತೆಯ ಪ್ರಶ್ನೆ ಜಪಾನ್‌ನಲ್ಲಿ ಭೂಕಂಪ ಮತ್ತು ಸುನಾಮಿಯನ್ನು ಎದುರಿಸಲಾಗದೆ ಅಲ್ಲಿನ ಅಣುಸ್ಥಾವರಗಳು ಕುಸಿದುಬಿದ್ದನಂತರ ಹುಟ್ಟಿಕೊಂಡಿದೆ.