ಮತ್ತೊಬ್ಬರ ಕಷ್ಟಕ್ಕಾಗಿ ಮರುಗಲು ಈಗ ಯಾರಿಗೂ ಪುರುಸೊತ್ತಿಲ್ಲ. ವಿಶ್ವದ ಕನ್ನಡಿಗರನ್ನು ನೆನಪಿಸಿಕೊಳ್ಳಲೆಂದೇ ಆಯೋಜಿಸಲಾಗಿದ್ದ ವಿಶ್ವಕನ್ನಡ ಸಮ್ಮೇಳನದ ಆಯೋಜಕರಿಗೂ, ಕೆಲವು ಗಂಟೆಗಳ ಮೊದಲಷ್ಟೆ ಸುನಾಮಿಯಿಂದ ತತ್ತರಿಸಿ ಹೋದ ಜಪಾನ್ನ ನೆನಪಾಗಲಿಲ್ಲ. ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನವನ್ನಾದರೂ ಆಚರಿಸುವ ಮಾನವೀಯತೆಯನ್ನು ಯಾರೂ ತೋರಿಸಲಿಲ್ಲ.
ಅಲ್ಲಿ ಸಾವು-ನೋವಿಗೀಡಾದವರಲ್ಲಿ ಕನ್ನಡಿಗರೂ ಇರಬಹುದು ಎಂಬ ಸಣ್ಣ ಅನುಮಾನವೂ ಯಾರಲ್ಲಿಯೂ ಮೂಡಲಿಲ್ಲ. ಬರೀ ಕನ್ನಡ ಸಾಹಿತ್ಯ ಸಮ್ಮೇಳನವಾಗಿದ್ದರೆ ಇದನ್ನು ಮರೆತುಬಿಡಬಹುದಿತ್ತು. ಅದರೆ ಇದು ವಿಶ್ವದ ವ್ಯಾಪ್ತಿಯ ಕನ್ನಡ ಸಮ್ಮೇಳನ. ಸಮ್ಮೇಳನದ ಸಂಭ್ರಮದ ಮೇಲೆ ಸೂತಕದ ಛಾಯೆ ಬೇಡ ಎಂದು ಎಲ್ಲರೂ ಮರೆತುಬಿಟ್ಟರೇನೋ?
ಉದ್ಯಮಿ ಎನ್.ಆರ್.ನಾರಾಯಣಮೂರ್ತಿಯವರು ತಮ್ಮ ಭಾಷಣದಲ್ಲಿ ಹೇಳಿದ್ದ ಬಹಳಷ್ಟು ವಿಚಾರಗಳಿಗೆ ಜಪಾನ್ ದೇಶಕ್ಕಿಂತ ದೊಡ್ಡ ಮಾದರಿ ಯಾವುದಿದೆ? ಜಪಾನಿಯರಷ್ಟು ಕೆಲಸವನ್ನು ಪ್ರೀತಿಸುವ ಇನ್ನೊಂದು ಜನಾಂಗ ವಿಶ್ವದಲ್ಲಿ ಸಿಗಲಾರದು, ಈ ಬಗ್ಗೆ ದಂತಕತೆಗಳೇ ಇವೆ. ಅಣುಬಾಂಬ್ ಸುಟ್ಟುಹಾಕಿದರೂ ಮತ್ತೆ ಬೂದಿಯಿಂದ ಮೇಲೆದ್ದು ಬಂದವರಂತೆ ಹೊಸನಾಡನ್ನು ಕಟ್ಟಿದವರು ಜಪಾನೀಯರು.
ಕಠಿಣಶ್ರಮ, ಜೀವನೋತ್ಸಾಹ ಮತ್ತು ಸ್ವಾಭಿಮಾನದಲ್ಲಿ ಅವರಿಗೆ ಅವರೇ ಸಾಟಿ ಮತ್ತು ಉಳಿದವರಿಗೆ ಸ್ಫೂರ್ತಿ.ವಿಶ್ವವನ್ನು ತನ್ನ ಅಂಗೈಯಷ್ಟೇ ಚೆನ್ನಾಗಿ ಬಲ್ಲ ವಿಶ್ವಸಂಚಾರಿ ಎನ್.ಆರ್.ನಾರಾಯಣಮೂರ್ತಿಯವರಿಗೆ ಜಪಾನ್ ಅಪರಿಚಿತ ನಾಡಲ್ಲ. ಅವರಾದರೂ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೊಂದಿರುವ ಜಪಾನೀಯರ ಬಗ್ಗೆ ಒಂದೆರಡು ಅನುಕಂಪದ ನುಡಿಗಳನ್ನಾಡಬಹುದು, ಧೀರ ಜಪಾನಿಯರನ್ನು ಕೊಂಡಾಡಬಹುದು ಎಂದು ನಿರೀಕ್ಷಿಸಿದವರಿಗೂ ನಿರಾಶೆಯೇ ಕಾದಿತ್ತು.
ಉಕ್ಕಿ ಚೆಲ್ಲಾಪಿಲ್ಲಿಯಾಗಿ ಹರಿದ ಕನ್ನಡಾಭಿಮಾನದ ಹುಚ್ಚುಹೊಳೆಯಲ್ಲಿ ಮಾನವೀಯತೆ ಕೂಡಾ ಕೊಚ್ಚಿಹೋಗಿತ್ತು. ಜಪಾನೀಯರಿಗೆ ಖಂಡಿತ ನಮ್ಮ ಅನುಕಂಪದ ನಿರೀಕ್ಷೆ ಇದ್ದಿರಲಾರದು. 1995ರಲ್ಲಿ ಆರುಸಾವಿರ ಜನ ಬಲಿ ತೆಗೆದುಕೊಂಡ ಭೂಕಂಪದ ನಂತರ ಹೊರದೇಶಗಳು ನೆರವಿನ ಹಸ್ತ ಚಾಚಿದಾಗ ನಯವಾಗಿಯೇ ನಿರಾಕರಿಸಿ ಸ್ವಾಭಿಮಾನ ಮೆರೆದ ನಾಡು ಅದು.
ಪ್ರಕೃತಿ ವಿಕೋಪದ ವಿರುದ್ಧದ ಹೋರಾಟದಲ್ಲಿ ಜಪಾನೀಯರು ವಿಶ್ವಕ್ಕೆಲ್ಲ ಮಾದರಿ. ಈ ಕಾರಣಕ್ಕಾಗಿಯಾದರೂ ಕಷ್ಟದಲ್ಲಿರುವ ಜಪಾನ್ ದೇಶವನ್ನು ನಾವೆಲ್ಲ ನೆನಪಿಸಿಕೊಳ್ಳಬೇಕಾದ ಅಗತ್ಯ ಇದೆ. ಯಾಕೆಂದರೆ ಇದರಿಂದ ನಾವು ಕಲಿಯುವುದೂ ಇದೆ. ರಿಕ್ಟರ್ ಮಾಪನದಲ್ಲಿ 8.9ರಷ್ಟು ತೀವ್ರತೆಯ ಭೂಕಂಪ ಭಾರತದಲ್ಲಿ ಸಂಭವಿಸಿದ್ದರೆ ಏನಾಗಬಹುದಿತ್ತು ಎನ್ನುವುದನ್ನು ಊಹಿಸಲೂ ಭಯವಾಗುತ್ತದೆ.
ಐದು ವರ್ಷಗಳ ಹಿಂದೆ ತಮಿಳುನಾಡಿನ ಕರಾವಳಿಯಲ್ಲಿ ಸಂಭವಿಸಿದ ಹೆಚ್ಚುಕಡಿಮೆ ಇಷ್ಟೇ ತೀವ್ರತೆಯ ಭೂಕಂಪದಿಂದ ಎದ್ದ ಸುನಾಮಿ ದೈತ್ಯಅಲೆಗಳಿಂದಾಗಿ ಆ ರಾಜ್ಯವೊಂದರಲ್ಲೇ ಸುಮಾರು ಎಂಟುಸಾವಿರ ಮಂದಿ ಸಾವಿಗೀಡಾಗಿದ್ದರು.ಇನ್ನೂ ಕಡಿಮೆ ತೀವ್ರತೆಯ (7.6) ಭೂಕಂಪದಿಂದ ಗುಜರಾತ್ನಲ್ಲಿ 20,000 ಜನ ಪ್ರಾಣ ಕಳೆದುಕೊಂಡಿದ್ದರು. 1985ರಲ್ಲಿ ಬೀಸಿದ್ದ ಚಂಡಮಾರುತಕ್ಕೆ ಅಮೆರಿಕದಲ್ಲಿ ಐವರು ಬಲಿಯಾಗಿದ್ದರೆ, ಹೆಚ್ಚುಕಡಿಮೆ ಅಷ್ಟೇ ಶಕ್ತಿಶಾಲಿ ಚಂಡಮಾರುತಕ್ಕೆ ಬಾಂಗ್ಲಾದೇಶದಲ್ಲಿ ಐದು ಲಕ್ಷ ಜನ ಸಾವಿಗೀಡಾಗಿದ್ದರು.
1993ರಲ್ಲಿ ಮಹಾರಾಷ್ಟ್ರದ ಲಾತೂರ್ನಲ್ಲಿ ಭೂಕಂಪ ನಡೆದಷ್ಟೇ ತೀವ್ರತೆಯ ಭೂಕಂಪ ಹೆಚ್ಚುಕಡಿಮೆ ಅದೇ ಕಾಲದಲ್ಲಿ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಡೆದಿತ್ತು. ಇಲ್ಲಿ ಸತ್ತವರು 11,000, ಅಲ್ಲಿ ಸತ್ತಿದ್ದು ಒಬ್ಬನೇ ಒಬ್ಬ. ಪ್ರಕೃತಿ ವಿಕೋಪದಿಂದ ಪೆರುವಿನಲ್ಲಿ ಸಾಯುವವರ ಸರಾಸರಿ ಸಂಖ್ಯೆ 2,900, ಜಪಾನ್ನಲ್ಲಿ 63. ಪ್ರಕೃತಿ ವಿಕೋಪದ ವಿಚಾರದಲ್ಲಿ ಅಷ್ಟೊಂದು ಸುಧಾರಿತ ಮುಂಜಾಗ್ರತಾ ಕ್ರಮಗಳನ್ನು ಜಪಾನ್ ಕೈಗೊಂಡಿರುವ ಕಾರಣದಿಂದಾಗಿಯೇ ಅಲ್ಲಿ ಸಾವು-ನೋವು ಕಡಿಮೆ.
ತಮಿಳುನಾಡಿನ ಕರಾವಳಿಗೆ ಸುನಾಮಿ ಅಲೆಗಳು ಬಂದು ಬಡಿದಾಗ ನಮ್ಮಲ್ಲೊಂದು ಸುನಾಮಿ ಮುನ್ಸೂಚನಾ ವ್ಯವಸ್ಥೆ ಇದ್ದಿದ್ದರೆ... ಎಂದು ಅನೇಕರು ಕೈಕೈ ಹಿಸುಕಿಕೊಂಡಿದ್ದರು. ಆಗ ನಮ್ಮಲ್ಲಿ ಸುನಾಮಿ ಮುನ್ಸೂಚನಾ ವ್ಯವಸ್ಥೆಯೇ ಇರಲಿಲ್ಲ ಎನ್ನುವುದು ನಿಜ. ಆದರೆ ಇಂತಹ ಪ್ರತ್ಯೇಕ ವ್ಯವಸ್ಥೆ ಇಲ್ಲದಿದ್ದರೂ ಭೂಕಂಪ ಮಾಪನದ ಮೂಲಕ ಸುನಾಮಿಯ ಮುನ್ಸೂಚನೆಯನ್ನು ತಿಳಿದುಕೊಳ್ಳಲು ಸಾಧ್ಯ ಇದೆ.
ಸುನಾಮಿ ಎನ್ನುವುದು ಸಮುದ್ರದೊಳಗಿನ ಭೂಕಂಪದ ಬಾಹ್ಯ ಅವತಾರ ಅಷ್ಟೆ. ಸಮುದ್ರದೊಳಗೆ ಭೂಕಂಪಗಳು ನಡೆಯುತ್ತಲೇ ಇರುತ್ತವೆ. ಒಮ್ಮೊಮ್ಮೆ ಅವು ಸುನಾಮಿಯಂತಹ ರೌದ್ರ ರೂಪ ಪಡೆಯುತ್ತವೆ. ಸುಮಾತ್ರ ದ್ವೀಪದ ಪಶ್ಚಿಮ ಕಡಲಿನಲ್ಲಿ 2004ರ ಡಿಸೆಂಬರ್ 26ರ ಬೆಳಿಗ್ಗೆ 6.29ಕ್ಕೆ ಸಂಭವಿಸಿದ್ದ ಭೂಕಂಪನದ ಮಾಹಿತಿ ಮರುಗಳಿಗೆಯಲ್ಲಿ ಭಾರತೀಯ ಹವಾಮಾನ ಇಲಾಖೆಗೆ ಗೊತ್ತಾಗಿತ್ತು. ಅಷ್ಟರಲ್ಲಿ ಕೊಲ್ಕೊತ್ತಾ ಮತ್ತು ವಿಶಾಖಪಟ್ಟಣಗಳ ಹವಾಮಾನ ಇಲಾಖೆಗಳಿಗೆ ಕಂಪನ ನಂತರದ ಆಘಾತಗಳ ಸಂದೇಶವೂ ರವಾನೆಯಾಗಿದ್ದವು.
ಆದರೆ ಈ ಭೂಕಂಪನದ ಕೇಂದ್ರ ಎಲ್ಲಿ? ನಮ್ಮ ಕರಾವಳಿಯ ಮೇಲೆ ಪರಿಣಾಮ ಏನು ಎಂಬುದನ್ನು ವಿಶ್ಲೇಷಿಸಲು ಹವಾಮಾನ ಇಲಾಖೆಯ ತಜ್ಞರು ಒಂದು ಗಂಟೆ ಕಾಲ ವ್ಯಯಿಸಿದ್ದರು. ಅಷ್ಟೊತ್ತಿಗೆ ಸುನಾಮಿ ಒಂದು ಸಾವಿರ ಕಿ.ಮೀ.ಕ್ರಮಿಸಿತ್ತು. ಏಳೂವರೆ ಗಂಟೆಗೆ ಭಾರತೀಯ ವಾಯುಸೇನೆಗೆ ಸುದ್ದಿ ತಲುಪಿತ್ತು. ಆಗಲೇ ಅಂಡಮಾನ್ ನಿಕೋಬಾರ್ ನೀರಲ್ಲಿ ಮುಳುಗತೊಡಗಿತ್ತು.
ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಕರಾವಳಿಗೆ ಎಚ್ಚರಿಕೆ ನೀಡಲು ಆಗಲೂ ಒಂದೂವರೆ ಗಂಟೆಯ ಸಮಯ ಉಳಿದಿತ್ತು. ಇಂತಹ ಸಂದರ್ಭಗಳಲ್ಲಿ ಪ್ರತಿಕ್ಷಣಕ್ಕೂ ಜೀವದ ಬೆಲೆ ಇರುತ್ತದೆ. ಆದರೆ ಪ್ರಕೃತಿವಿಕೋಪ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನವದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ಗೃಹಸಚಿವರ ಕಚೇರಿ ಮತ್ತು ಟೆಕ್ನಾಲಜಿ ಭವನದಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಕಚೇರಿಗಳಲ್ಲಿನ ಕೆಂಪುಪಟ್ಟಿ ತಾಲ್ಲೂಕುಮಟ್ಟದ ಸರ್ಕಾರಿ ಕಚೇರಿಗಳಿಗಿಂತ ಭಿನ್ನವಲ್ಲ.
ಅಲ್ಲಿ ಕೂತಿದ್ದ ಸಚಿವರು ಮತ್ತು ಅವರ ಮಾರ್ಗದರ್ಶಕರಾಗಿರುವ ಸರ್ಕಾರಿ ಬಾಬುಗಳು ವ್ಯಯಮಾಡಿದ್ದು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೇಕಾದ ಸಬೂಬುಗಳನ್ನು ಹುಡುಕಲು. ಅವರಿಗೆ ಜಪಾನೀಯರು ಮಾದರಿಯಾಗಿದ್ದರೆ ಅಷ್ಟೊಂದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲವೇನೋ?
ಶಾಂತ ಸಾಗರದಲ್ಲಿ ಸಾಮಾನ್ಯವಾಗಿರುವ ಸುನಾಮಿ ಹಿಂದೂ ಮಹಾಸಾಗರದಲ್ಲಿ ಅಪರೂಪ ಎನ್ನುವ ಅಭಿಪ್ರಾಯ ನಮ್ಮ ತಜ್ಞರಲ್ಲಿ ಈಗಲೂ ಇದೆ. ಅಮೆರಿಕ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಸೇರಿದಂತೆ ಶಾಂತ ಸಾಗರದ ಕರಾವಳಿಯ 26 ದೇಶಗಳು ಕೂಡಿ 1960ರಲ್ಲಿಯೇ ಹವಾಯ್ನಲ್ಲಿ ಸುನಾಮಿ ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಿದ್ದವು. ವಿಶ್ವಾದ್ಯಂತ ಸುನಾಮಿ ಮುನ್ಸೂಚನಾ ವ್ಯವಸ್ಥೆ ನಿರ್ಮಾಣಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಆಂಧ್ರಪ್ರದೇಶ ಮೂಲದ ವಿಜ್ಞಾನಿ ಡಾ.ಟಾಡ್ ಮೂರ್ತಿ ಸುನಾಮಿ ಮುನ್ಸೂಚನಾ ಕೇಂದ್ರ ಸ್ಥಾಪಿಸಲು 1967ರಲ್ಲಿಯೇ ಭಾರತಕ್ಕೆ ಸಲಹೆ ನೀಡಿದ್ದರಂತೆ.
ಅದಕ್ಕೆ ವಿಶಾಖಪಟ್ಟಣವೇ ಸೂಕ್ತ ಸ್ಥಳ ಎಂಬುದನ್ನೂ ಸೂಚಿಸಿದ್ದರಂತೆ. ನಮ್ಮ ಸರ್ಕಾರಗಳು ಆಸಕ್ತಿ ತೋರದಿದ್ದರೂ ಭಾರತಕ್ಕೆ ನೆರವಾಗುವಂತಹ ಮುನ್ಸೂಚನಾ ಕೇಂದ್ರಗಳಿಗೆ ಸಂಬಂಧಿಸಿದ ಕಂಪ್ಯೂಟರ್ ಪ್ರೊಗ್ರಾಮ್ಗಳನ್ನು ಅವರು ರಚಿಸಿದ್ದರು. ತಮಿಳುನಾಡು ದುರಂತದ ನಂತರ ಕೊನೆಗೂ ಸುನಾಮಿ ಮುನ್ಸೂಚನಾ ಕೇಂದ್ರವೊಂದು ಪ್ರಾರಂಭಗೊಂಡಿದೆ.
ಹೈದರಾಬಾದ್ನಲ್ಲಿರುವ ಭಾರತೀಯ ಸುನಾಮಿ ಪೂರ್ವ ಸೂಚನಾ ಕೇಂದ್ರ ಮಾರ್ಚ್ ಹನ್ನೆರಡರ ಬೆಳಿಗ್ಗೆ 11.24 ಮತ್ತು 12.15ಕ್ಕೆ ಹೊರಡಿಸಿರುವ ಎರಡು ಬುಲೆಟಿನ್ಗಳಲ್ಲಿ ಜಪಾನ್ನ ಹೊನ್ಷು ಪೂರ್ವ ಕರಾವಳಿಯ ಸಮುದ್ರದಲ್ಲಿ ಸಂಭವಿಸಿದ್ದ ಭೂಕಂಪನವನ್ನು ದಾಖಲಿಸಿದೆ. ಎರಡೂ ಬುಲೆಟಿನ್ಗಳನ್ನು ಕೇಂದ್ರ ಬಿಡುಗಡೆಗೊಳಿಸಿದ್ದು ಭೂಕಂಪ ನಡೆದ ನಂತರ. ಮತ್ತೆ ಪೂರ್ವ ಸೂಚನೆ ಎಲ್ಲಿದೆ?
ಸುನಾಮಿ ಮುನ್ಸೂಚನಾ ವ್ಯವಸ್ಥೆಯದು ಈ ಸ್ಥಿತಿಯಾದರೆ ವಿಪತ್ತು ನಿರ್ವಹಣಾ ವ್ಯವಸ್ಥೆಯದು ಇನ್ನೊಂದು ಕತೆ.ಭಾರತದ 25 ರಾಜ್ಯಗಳು ಒಂದಲ್ಲ ಒಂದು ಬಗೆಯ ಪ್ರಕೃತಿ ವಿಕೋಪದ ಭೀತಿಯನ್ನು ಎದುರಿಸುತ್ತಿವೆ. ದೇಶದ ರಾಜಧಾನಿಯೂ ಸೇರಿದಂತೆ ದೇಶದ ಅರ್ಧಭಾಗವನ್ನು ಭೂಕಂಪ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ.
ಪ್ರವಾಹ, ಬರ, ಚಂಡಮಾರುತ, ಭೂಕಂಪ ಮಾತ್ರವಲ್ಲ, ಕೈಗಾರಿಕಾ ದುರಂತ (ಭೋಪಾಲ್), ಬಾಂಬುಸ್ಫೋಟ (ಮುಂಬೈ), ಕೋಮುಗಲಭೆ (ಗುಜರಾತ್), ಸಾಂಕ್ರಾಮಿಕ ರೋಗಗಳು (ಸೂರತ್) ಜನ ತಲ್ಲಣಿಸುವಂತೆ ಮಾಡಿವೆ.ಆದರೆ ಇತ್ತೀಚಿನವರೆಗೂ ‘ವಿಪತ್ತು ನಿರ್ವಹಣಾ ಸಂಸ್ಥೆ’ ಕೃಷಿ ಇಲಾಖೆಯ ಭಾಗವಾಗಿತ್ತು. ಪ್ರಕೃತಿ ವಿಕೋಪ ಎಂದರೆ ಬರ ಮತ್ತು ಪ್ರವಾಹ ಎಂದಷ್ಟೆ ತಿಳಿದುಕೊಂಡಿರುವುದು ಇದಕ್ಕೆ ಕಾರಣ.
ಗುಜರಾತ್ನಲ್ಲಿನ ಭೂಕಂಪ ಇಪ್ಪತ್ತು ಸಾವಿರ ಜನರನ್ನು ಬಲಿತೆಗೆದುಕೊಂಡ ನಂತರ ಎಚ್ಚೆತ್ತ ಕೇಂದ್ರ ಸರ್ಕಾರ ಅದನ್ನು ತರಾತುರಿಯಲ್ಲಿ ಗೃಹ ಇಲಾಖೆಗೆ ವರ್ಗಾಯಿಸಿತು. ಆ ಕಾಲದಲ್ಲಿ ಭಾರತ-ಪಾಕಿಸ್ತಾನದ ಸಂಬಂಧದಲ್ಲಿ ಕಾಣಿಸಿಕೊಂಡ ಬಿಗುವಿನಿಂದ ಹುಟ್ಟಿದ ಅಣ್ವಸ್ತ್ರ ಬಳಕೆಯ ಭೀತಿ ಕೂಡಾ ಇದಕ್ಕೆ ಕಾರಣ.
ವಿಪತ್ತು ನಿರ್ವಹಣಾ ವ್ಯವಸ್ಥೆ ಅಲ್ಲಿಂದ ಇನ್ನೊಂದು ಹೆಜ್ಜೆ ಮುಂದಿಡಲು ತಮಿಳುನಾಡು ಸುನಾಮಿಗೆ ಬಲಿಯಾಗಬೇಕಾಯಿತು. ಕೊನೆಗೂ 2005ರಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯನ್ನು ಜಾರಿಗೊಳಿಸಿತು. ಇದರಡಿ ರಚನೆಗೊಂಡ ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ಕ್ಕೆ ಪ್ರಧಾನಮಂತ್ರಿಯೇ ಅಧ್ಯಕ್ಷರು. ಗೃಹ, ಹಣಕಾಸು ಮತ್ತು ಕೃಷಿ ಸಚಿವರು ಸದಸ್ಯರು. ಈ ಪ್ರಾಧಿಕಾರಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರು.
ಇದರ ಜತೆಯಲ್ಲಿ ಕೇಂದ್ರ ಗೃಹಖಾತೆಯಲ್ಲಿ ಪ್ರತ್ಯೇಕವಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಭಾಗ ಇದೆ. ಅದರ ಭಾಗವಾಗಿಯೇ ‘ಬಿಕ್ಕಟ್ಟು ನಿರ್ವಹಣಾ ಸಮಿತಿ’ ಇದೆ. ಇದು ಸಂಪುಟ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಡನೆ ಕಾರ್ಯನಿರ್ವಹಿಸುತ್ತಿದೆ. ಸದ್ಯಕ್ಕೆ ಇದು ಮಾಡುವ ಮುಖ್ಯ ಕೆಲಸ ನಷ್ಟದ ಅಂದಾಜು ಮತ್ತು ಪರಿಹಾರ ವಿತರಣೆ. ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇದು ಇಷ್ಟದ ಕೆಲಸ ಕೂಡಾ ಹೌದು. ಬಿಕ್ಕಟ್ಟು ನಿರ್ವಹಣೆ?
ಅಲ್ಲಿ ಇಲ್ಲಿ ಪ್ರಕೃತಿ ವಿಕೋಪಗಳು ಎದುರಾದಾಗ ಕೇಂದ್ರ ಗೃಹಸಚಿವರು ಎಲ್ಲ ರಾಜ್ಯಗಳಿಗೆ ಪತ್ರ ಬರೆಯುತ್ತಾರೆ. ಶೋಧ ಮತ್ತು ರಕ್ಷಣಾ ವ್ಯವಸ್ಥೆಯ ತಾಲೀಮು, ಅದಕ್ಕೆ ಬೇಕಾದ ಸಲಕರಣೆಗಳ ಖರೀದಿ, ಪರಿಹಾರ ಸಾಮಗ್ರಿಗಳ ದಾಸ್ತಾನು, ಸ್ವಯಂಸೇವಾ ಕಾರ್ಯಕರ್ತರಿಗೆ ತರಬೇತಿ, ಹೊಸ ತಂತ್ರಜ್ಞಾನ ಅಳವಡಿಕೆ ಬಗ್ಗೆ ತಜ್ಞರೊಡನೆ ಸಮಾಲೋಚನೆ ಇತ್ಯಾದಿ ವಿಷಯಗಳ ಬಗ್ಗೆ ಪತ್ರದಲ್ಲಿ ಮಾರ್ಗದರ್ಶನ ಇರುತ್ತದೆ. ಇವುಗಳನ್ನು ರಾಜ್ಯ ಸರ್ಕಾರಗಳು ಪಾಲಿಸುತ್ತಿವೆಯೇ, ಇಲ್ಲವೇ ಎನ್ನುವುದನ್ನು ನೋಡುವ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲ.
ರಾಜ್ಯಸರ್ಕಾರಗಳಿಗೆ ಈ ಮಾರ್ಗದರ್ಶನದ ಬಗ್ಗೆ ಆಸಕ್ತಿಯೂ ಇರುವುದಿಲ್ಲ. ಅವುಗಳು ಕೇಂದ್ರ ಸರ್ಕಾರದ ಕಡೆ ನೋಡುವುದು ದುಡ್ಡಿಗಾಗಿ ಮಾತ್ರ. ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳು ನೆರೆ ನೀರಿನಲ್ಲಿ ಮುಳುಗಿದ್ದಾಗಲೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಜತೆ ಜಗಳಕ್ಕಿಳಿದದ್ದು ದುಡ್ಡಿಗಾಗಿಯೇ.
ದುಡ್ಡೇನೋ ಬಂತು, ಕೆಲಸವಾಯಿತೇ? ಹದಿನಾರು ತಿಂಗಳುಗಳಾದರೂ ನೆರೆಹಾವಳಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆಲ್ಲ 300 ಚದರ ಅಡಿ ವಿಸ್ತೀರ್ಣದ ಮನೆ ಕಟ್ಟಿ ಕೊಡಲಾಗದ ಸರ್ಕಾರ ಸುನಾಮಿ, ಚಂಡಮಾರುತ, ಭೂಕಂಪ ಬಂದರೆ ಜನರನ್ನು ರಕ್ಷಿಸಬಹುದೇ? ಅಂದ ಹಾಗೆ, ಅಲ್ಲೇ ಇದ್ದ ನೆರೆಸಂತ್ರಸ್ತರನ್ನು ಮರೆತಿರುವ ಸರ್ಕಾರ ದೂರದ ಜಪಾನ್ನಲ್ಲಿರುವ ನೊಂದ ಜನರನ್ನು ಮರೆತಿದ್ದರಲ್ಲಿ ಆಶ್ಚರ್ಯವೇನಿದೆ!

No comments:
Post a Comment