Showing posts with label ಶರದ್ ಪವಾರ್. Show all posts
Showing posts with label ಶರದ್ ಪವಾರ್. Show all posts

Thursday, July 26, 2012

ಹಳೆಯ ಕನಸಿನ ಚುಂಗು ಹಿಡಿದು ಹೊರಟಿರುವ ಪವಾರ್ July 23, 2012

ಬಹುಕಾಲದಿಂದ ದೇಶದ ರಾಜಕೀಯ ಅಖಾಡದಲ್ಲಿರುವ ಶರದ್ ಪವಾರ್, ಮುಲಾಯಂಸಿಂಗ್ ಯಾದವ್, ಎಚ್.ಡಿ.ದೇವೇಗೌಡರಂತಹ  ಹಳೆಯ ಜಟ್ಟಿಗಳು ಸುಮ್ಮನೆ ಕೆಮ್ಮುವುದಿಲ್ಲ, ಆಕಳಿಸುವುದೂ ಇಲ್ಲ. ಮೇಲ್ನೋಟಕ್ಕೆ ಸಹಜವಾಗಿ ಕಾಣುವ ಕೆಮ್ಮು-ಆಕಳಿಕೆಗಳ ಆಳದಲ್ಲಿ ರಾಜಕೀಯ ಹವಾಮಾನದ ಮುನ್ಸೂಚನೆಗಳಿರುತ್ತವೆ.

ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದ ಕಾರಣದಿಂದಾಗಿ ಮನೆಯೊಳಗೆ ಉಳಿದುಕೊಂಡಿದ್ದ ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಇದ್ದಕ್ಕಿದ್ದಂತೆ ಲವಲವಿಕೆಯಿಂದ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿರುವುದಕ್ಕೂ, ಬಿಜೆಪಿಯ ಅತೃಪ್ತ ಶಾಸಕರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನೆ ಮುಂದೆ ಕ್ಯೂ ನಿಲ್ಲುವುದಕ್ಕೂ ಪರಸ್ಪರ ಸಂಬಂಧ ಮೇಲ್ನೋಟಕ್ಕೆ ಕಾಣಿಸದೆ ಇರಬಹುದು.

ಆದರೆ ಗೌಡರ ರಾಜಕೀಯ ನಡೆಗಳನ್ನು ನೋಡುತ್ತಾ ಬಂದವರಿಗೆ ಅವರ ಆರೋಗ್ಯ ಸುಧಾರಣೆ ಮತ್ತು ರಾಜಕೀಯ ಬೆಳವಣಿಗೆಗಳಿಗೂ ಸಂಬಂಧ ಕಲ್ಪಿಸುವುದು ಕಷ್ಟವಲ್ಲ. ಅದೇ ರೀತಿ ಕೇಂದ್ರ ಸಚಿವ ಶರದ್ ಪವಾರ್.

ಸಂಪುಟದಲ್ಲಿ ಎರಡನೇ ಸ್ಥಾನ ನೀಡದೆ ಇರುವುದರಿಂದ ಅತೃಪ್ತರಾಗಿ ಸರ್ಕಾರದಿಂದಲೇ ಹೊರಬರುವ ಘೋಷಣೆಯನ್ನು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮಾಡಿದೆ.

ಒಂದು ಕಾಲದಲ್ಲಿ ದೇಶದ ಪ್ರಧಾನಿಯಾಗಬೇಕೆಂದು ಹಂಬಲಿಸಿದ್ದ, ಅದಕ್ಕೆ ಬೇಕಾಗಿರುವ ಎಲ್ಲ ತಂತ್ರ-ಕುತಂತ್ರಗಳನ್ನು ಮಾಡಿ ವಿಫಲಗೊಂಡ ಪವಾರ್ ಈಗ ಸಂಪುಟದಲ್ಲಿ ಯಕಶ್ಚಿತ್ ಎರಡನೆ ಸ್ಥಾನಕ್ಕಾಗಿ ಕಾಂಗ್ರೆಸ್ ಜತೆ ಸಂಬಂಧ ಕಡಿದುಕೊಳ್ಳುವ ಮಟ್ಟಕ್ಕೆ ಹೋಗುವ  ಅವರ ನಿರ್ಧಾರವನ್ನು ಮುಖಬೆಲೆಯಲ್ಲಿಯೇ ಒಪ್ಪಿಕೊಳ್ಳುವುದು ಕಷ್ಟ.

`ಮನಮೋಹನ್‌ಸಿಂಗ್ ಅವರನ್ನು ಬದಲಾವಣೆ ಮಾಡುವುದಿದ್ದರೆ ಆ ಸ್ಥಾನದಲ್ಲಿಯೇ ನನ್ನನ್ನೇ ಕೂರಿಸಿ` ಎನ್ನುವ ಹಾಗಿದೆ ಪವಾರ್ ಬೇಡಿಕೆ. ಮೈತ್ರಿಕೂಟದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಸದಸ್ಯ ಬಲ ಹೊಂದಿರುವ ಪಕ್ಷ ನೇತೃತ್ವ ವಹಿಸುವ ಸಾಮಾನ್ಯ ಸಂಪ್ರದಾಯ ಪವಾರ್ ಅವರಿಗೆ ತಿಳಿಯದೆ ಇರಲು ಸಾಧ್ಯವೇ ಇಲ್ಲ.

ಸಂಪುಟದಲ್ಲಿ ಎರಡನೆ ಸ್ಥಾನವಾಗಲಿ, ಪ್ರಧಾನಿಯವರ ಗೈರುಹಾಜರಿಯಲ್ಲಿ ಉಸ್ತುವಾರಿ ನೋಡಿಕೊಳ್ಳುವವರ ಸ್ಥಾನವಾಗಲಿ ಅಧಿಕೃತ ಸ್ಥಾನಮಾನ ಅಲ್ಲ. ಎರಡನೆ ಸ್ಥಾನದಲ್ಲಿರುವವರೇ ಅಧಿಕಾರದಲ್ಲಿರುವ ಪ್ರಧಾನಿಯ ಉತ್ತರಾಧಿಕಾರಿ ಆಗುವುದಿಲ್ಲ.

ಲೋಕಸಭೆ ಇಲ್ಲವೆ ವಿಧಾನಸಭಾ ಸದಸ್ಯರಾಗದೆ ಇರುವವರು ಕೂಡಾ ಆರು ತಿಂಗಳ ಕಾಲ ಪ್ರಧಾನಿ ಇಲ್ಲವೆ ಮುಖ್ಯಮಂತ್ರಿಯಾಗಲು ಸಾಧ್ಯವಿರುವಷ್ಟು ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು. ಪ್ರಧಾನಿಯಾಗುವವರು ಯಾರೆನ್ನುವುದೇ ಖಾತರಿ ಇಲ್ಲದೆ ಇರುವ ವಾತಾವರಣದಲ್ಲಿ ಸಂಪುಟದಲ್ಲಿ ಎರಡನೆ ಸ್ಥಾನವನ್ನು ಕಟ್ಟಿಕೊಂಡು ಏನು ಮಾಡುತ್ತೀರಿ?

ಪವಾರ್  ನಿರ್ಧಾರದ  ಬಗ್ಗೆ ಸಂಶಯ ಮೂಡಲು ಇನ್ನೊಂದು ಕಾರಣವೂ ಇದೆ. ಕಾಂಗ್ರೆಸ್ ಪಕ್ಷದ ಇಚ್ಛೆಗೆ ವಿರುದ್ಧವಾಗಿ ರಾಷ್ಟ್ರಪತಿ ಅಭ್ಯರ್ಥಿಯಾಗಲು ಹೊರಟ ಪಿ.ಎ.ಸಂಗ್ಮಾ ತಮ್ಮ ಬಹುಕಾಲದ ಸಂಗಾತಿ ಎನ್ನುವುದನ್ನೇ ಲೆಕ್ಕಿಸದೆ ಪಕ್ಷದಿಂದ ಉಚ್ಚಾಟಿಸಿದವರು ಪವಾರ್.

ಕನಿಷ್ಠ ಅವರನ್ನು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್‌ಮೇಲೆ ಒತ್ತಡ ಹೇರಬಹುದಿತ್ತು, ಕಾಂಗ್ರೆಸ್ ಬಳಿ ಕೂಡಾ ಆ ಸ್ಥಾನಕ್ಕೆ ಸರಿಯಾದ ಅಭ್ಯರ್ಥಿಗಳಿರಲಿಲ್ಲ, ಅದಕ್ಕಲ್ಲವೇ ಅನ್ಸಾರಿ ಅವರಿಗೆ ಮತ್ತೊಂದು ಅವಕಾಶ ನೀಡಿದ್ದು? ಪವಾರ್ ಹಾಗೆ ಮಾಡಿದ್ದರೆ ಅದು ಖಂಡಿತ ಸ್ವಾರ್ಥ ಎಂದು ಯಾರಿಗೂ ಅನಿಸುತ್ತಿರಲಿಲ್ಲ.

ಸಂಗ್ಮಾ ಅವರ ಬೆಂಬಲಕ್ಕೆ ಪವಾರ್ ದೃಢವಾಗಿ ನಿಂತಿದ್ದರೆ ರಾಷ್ಟ್ರಪತಿ ಚುನಾವಣೆಯ ಗಣಿತವೇ ಬದಲಾಗಿ ಯುಪಿಎ ಈಗಿನಷ್ಟು ಬಲಿಷ್ಠವಾಗಿ ಹೊರಹೊಮ್ಮುತ್ತಿರಲಿಲ್ಲ. ಅಂತಹ ಸಮಯದಲ್ಲಿ ಯುಪಿಎಗೆ ಸಂಪೂರ್ಣವಾಗಿ ಶರಣಾದ ಪವಾರ್ ಇನ್ನೇನು ಚುನಾವಣೆ ಮುಗಿಯುವ ಹೊತ್ತಿಗೆ ಗುಟುರು ಹಾಕುತ್ತಿರುವುದಕ್ಕೆ ಕೇವಲ ನಂಬರ್ 2 ಸ್ಥಾನವೊಂದೇ ಕಾರಣ ಇರಲಾರದು.

ಅದೇನು ಎಂಬುದನ್ನು ಪವಾರ್ ಅವರು ಬಹಿರಂಗಪಡಿಸಬೇಕು. ಮೈತ್ರಿಕೂಟ ಸರ್ಕಾರ ಎಂದ ಮಾತ್ರಕ್ಕೆ ಆರಿಸಿ ಕಳುಹಿಸಿದ ಮತದಾರರನ್ನು ಕತ್ತಲಲ್ಲಿಟ್ಟು ಎಲ್ಲವನ್ನೂ ಮುಚ್ಚಿದ ಕೋಣೆಯೊಳಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದಿಲ್ಲ.

ರಾಜಕೀಯವಾಗಿ ತನ್ನನ್ನು ಬೆಳೆಸಿದ್ದ ವಸಂತದಾದಾ ಪಾಟೀಲ್ ಎಂಬ ಗುರುವಿಗೆ ತಿರುಮಂತ್ರ ಹೇಳಿ 38ನೇ ವರ್ಷಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ಶರದ್ ಪವಾರ್ ಅವರ ಈಗಿನ ನಿರ್ಧಾರವನ್ನು, ಅವರ ಹಿಂದಿನ ಎಲ್ಲ ರಾಜಕೀಯ ನಿರ್ಧಾರಗಳ ಜತೆಯಲ್ಲಿಟ್ಟು ನೋಡಿದರೆ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. `ಪಕ್ಷಾಂತರ, ಭ್ರಷ್ಟಾಚಾರ, ವಿಶ್ವಾಸದ್ರೋಹ, ಸ್ವಜನ ಪಕ್ಷಪಾತ, ಆತ್ಮವಂಚನೆ, ಕರ್ತವ್ಯಲೋಪ...

ಹೀಗೆ ರಾಜಕಾರಣಿಗಳಿಗೆ ಇರುವ ಎಲ್ಲ ದುರ್ಗುಣಗಳನ್ನು ಹೊಂದಿಯೂ, ಅವುಗಳಿಂದ ಯಾವ ಹಿನ್ನಡೆಯನ್ನೂ ಅನುಭವಿಸದೆ ದಶಕಗಳ ಕಾಲ ರಾಜಕೀಯ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವೇ? ಸಾಧ್ಯ ಇದೆ, ಅದಕ್ಕಾಗಿ ಶರದ್‌ಚಂದ್ರ ಗೋವಿಂದರಾವ್ ಪವಾರ್ ಆಗಬೇಕು` ಎಂದು ನಾನು ಹಿಂದೆ ಇದೇ ಅಂಕಣದಲ್ಲಿ (17,ಜನವರಿ 2011) ಬರೆದಿದ್ದೆ.

ಈ ಮಾತುಗಳು ಈಗಲೂ ಅವರಿಗೆ ಅನ್ವಯಿಸುತ್ತವೆ. ಅರ್ಧ ಶತಮಾನದಷ್ಟು ಸುದೀರ್ಘವಾದ ತಮ್ಮ ರಾಜಕೀಯ ಜೀವನದಲ್ಲಿ ಶರದ್ ಪವಾರ್ ಭಾರತದ ಇಂದಿನ ರಾಜಕಾರಣಿ ಸಾಮಾನ್ಯವಾಗಿ ಮಾಡುತ್ತಿರುವ ಯಾವ ಕೆಟ್ಟ ಕೆಲಸವನ್ನು ಮಾಡದೆ ಬಿಟ್ಟಿಲ್ಲ, ಅವರು ಎದುರಿಸದ ಆರೋಪಗಳೇ ಇಲ್ಲ.

ಆದರೆ ಇದ್ಯಾವುದೂ ಅವರನ್ನು ಒಟ್ಟು ಏಳು ವರ್ಷಗಳ ಕಾಲ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದನ್ನು, ಒಟ್ಟು ಹತ್ತು ವರ್ಷಗಳ ಕಾಲ ಕೇಂದ್ರ ಸಚಿವರಾಗುವುದನ್ನು, ಬಿಸಿಸಿಐ,ಐಸಿಸಿ ಅಧ್ಯಕ್ಷರಾಗುವುದನ್ನು ತಡೆಯಲಿಲ್ಲ.

ಇದು ಶರದ್ ಪವಾರ್. ಹೆಚ್ಚು ಕಡಿಮೆ ಅವರಷ್ಟೇ ದೀರ್ಘ ಅವಧಿಯ ರಾಜಕಾರಣ ನಡೆಸಿದ್ದ ಎಸ್.ಬಂಗಾರಪ್ಪ, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪನವರು ಅನುಭವಿಸಿದ ಅಧಿಕಾರದ ಅವಧಿ ಎಷ್ಟು?

ಬೆಂಬಲಿಗರು ಅಭಿಮಾನದಿಂದ `ಸಾಹೇಬ್` ಎಂದು ಕರೆಯುವ ಶರದ್ ಪವಾರ್ ಅವರ ರಾಜಕೀಯ ಪ್ರಾಣವಾಯು ಮಹಾರಾಷ್ಟ್ರದಲ್ಲಿದೆ. ಅಲ್ಲಿ ತನ್ನ ನಿಯಂತ್ರಣ ಸಡಿಲಗೊಳ್ಳುತ್ತಿದೆ ಎಂದು ಅನಿಸಿದ ಕೂಡಲೇ ಅವರು ಅಧೀರರಾಗುತ್ತಾರೆ.

ತಮ್ಮದೇ ಬೆಂಬಲಿಗ ಸುಧಾಕರ್ ನಾಯಕ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ದೇಶ ಆಳುವ ಆಸೆಯೊಂದಿಗೆ ದೆಹಲಿಗೆ ಹೋಗಿದ್ದ ಪವಾರ್, ಯಾಕೋ ಶಿಷ್ಯ ನಿಯಂತ್ರಣ ತಪ್ಪಿಹೋಗುತ್ತಿದ್ದಾನೆ ಎಂದು ಅನಿಸಿದ ಕೂಡಲೇ ಮತ್ತೆ ಮಹಾರಾಷ್ಟ್ರಕ್ಕೆ ಓಡಿಹೋಗಿ ಮುಖ್ಯಮಂತ್ರಿಯಾದವರು.

1992ರ ಮುಂಬೈ ಕೋಮುಗಲಭೆ ಅಷ್ಟೊಂದು ಅತಿರೇಕಕ್ಕೆ ಹೋಗಲು ಯಾರು ಕಾರಣಕರ್ತರು ಎನ್ನುವುದನ್ನು ಯಾರಾದರೂ ತನಿಖೆ ನಡೆಸಿದರೆ ಪವಾರ್ ತಮ್ಮ ಜಾತ್ಯತೀತ ನಿಲುವನ್ನು ಸಮರ್ಥಿಸಿಕೊಳ್ಳಲು ಪರದಾಡಬೇಕಾಗಬಹುದು.

ವಿಲಾಸ್‌ರಾವ್ ದೇಶ್‌ಮುಖ್, ಸುಶೀಲ್‌ಕುಮಾರ್ ಶಿಂಧೆ, ಅಶೋಕ್ ಚವಾಣ್ ಹೀಗೆ ಯಾರೂ ಕೂಡಾ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದಲ್ಲಿ ನೆಲೆ ಊರುವುದನ್ನು ಈ `ಸಾಹೇಬ್` ಸಹಿಸುವುದಿಲ್ಲ.

ಈಗ ಅವರ ಕಣ್ಣು  ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಪೃಥ್ವಿರಾಜ್ ಚವಾಣ್ ಎಂಬ ಇನ್ನೊಬ್ಬ ಮರಾಠನ ಮೇಲೆ ಬಿದ್ದಿದೆ.  ಹಳಿತಪ್ಪಿಹೋಗಿದ್ದ ಮಹಾರಾಷ್ಟ್ರದ ಆಡಳಿತವನ್ನು ಪ್ರಚಾರದ ಹಪಾಹಪಿ ಇಲ್ಲದೆ ಸದ್ದಿಲ್ಲದ ರೀತಿಯಲ್ಲಿ ಸರಿದಾರಿಗೆ ತರಲು ಪ್ರಯತ್ನಿಸುತ್ತಿರುವ ಚವಾಣ್ ಇತ್ತೀಚೆಗೆ ಎನ್‌ಸಿಪಿ ಸಚಿವರ ಭ್ರಷ್ಟಾಚಾರದ ಬೆನ್ನಿಗೆ ಬಿದ್ದಿದ್ದಾರೆ.

ಶರದ್ ಪವಾರ್ ಮತ್ತು ಅವರ ಬೆಂಬಲಿಗರಿಗೆ ತಮ್ಮ ಕಪಾಟಿನ ತುಂಬ ಇರುವ ಅಸ್ಥಿಪಂಜರಗಳ ಬಗ್ಗೆ ಭಯ ಇದೆ. ಕರ್ನಾಟಕವನ್ನು ಮೀರಿಸುವ ಭೂಹಗರಣಗಳು ಅಲ್ಲಿ ನಡೆದಿವೆ.

ಪವಾರ್ ಮಗಳು ಮತ್ತು ಅಳಿಯ ಅವರನ್ನೊಳಗೊಂಡ ಕೃಷ್ಣಾ ಕಣಿವೆ ಅಭಿವೃದ್ಧಿ ನಿಗಮದ ಮೇಲಿನ ಆರೋಪಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಬಹಳಷ್ಟು ವರ್ಷಗಳಿಂದ ಮಹಾರಾಷ್ಟ್ರ ರಾಜಕೀಯವನ್ನು ರಿಯಲ್ ಎಸ್ಟೇಟ್ ಕುಳಗಳು ಮತ್ತು ಸಹಕಾರಿ ಕ್ಷೇತ್ರದ ತಿಮಿಂಗಲಗಳ ಲಾಬಿ ನಿಯಂತ್ರಿಸುತ್ತಿವೆ.

ಈ ಲಾಬಿಗಳಿಗೆ ಸಮೀಪವಾಗಿರುವವರು ಶರದ್‌ಪವಾರ್. ಸುಮಾರು ಹನ್ನೆರಡು ಕೋಟಿ ರೂಪಾಯಿ ಠೇವಣಿ ಹೊಂದಿರುವ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಪವಾರ್ ಕುಟುಂಬದ ಮುಷ್ಟಿಯೊಳಗಿದೆ.

ಈ ಬ್ಯಾಂಕ್‌ನ ಸದಸ್ಯತ್ವ ಹೊಂದಿರುವ 169 ಸಕ್ಕರೆ ಕಾರ್ಖಾನೆಗಳಲ್ಲಿ 95 ಪವಾರ್ ನಿಯಂತ್ರಣದಲ್ಲಿದೆಯಂತೆ. ಇತ್ತೀಚೆಗೆ ಅವ್ಯವಹಾರದ ಆರೋಪಕ್ಕೆ ಈಡಾಗಿದ್ದ ಈ ಸಹಕಾರಿ ಬ್ಯಾಂಕ್‌ಗೆ ಮುಖ್ಯಮಂತ್ರಿ ಚವಾಣ್ ಅವರು ಆಡಳಿತಾಧಿಕಾರಿಯನ್ನು ನೇಮಿಸಿದ್ದಾರೆ.

ಮೈತ್ರಿಕೂಟದ ಸರ್ಕಾರದುದ್ದಕ್ಕೂ ಎನ್‌ಸಿಪಿ ಬಳಿಯೇ ಇರುವ ನೀರಾವರಿ ಖಾತೆಯಲ್ಲಿನ ಭ್ರಷ್ಟಾಚಾರವನ್ನು ಇತ್ತೀಚೆಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ಬಯಲುಗೊಳಿಸಿದ ನಂತರ ಚವಾಣ್ ಅವರು ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸುವ ಸನ್ನಾಹದಲ್ಲಿದ್ದಾರೆ.

ಇದು ಶರದ್‌ಪವಾರ್ ಸಿಡಿಮಿಡಿಗೊಳ್ಳಲು ಮುಖ್ಯವಾದ ಕಾರಣ.
ಶರದ್ ಪವಾರ್ ಪ್ರಾರಂಭದಿಂದಲೂ ಕೃಷಿ ಕ್ಷೇತ್ರದ ಜತೆ ತಮ್ಮನ್ನು ಗುರುತಿಸಿಕೊಂಡವರು. ಅವರ ಆಸಕ್ತಿ ಮತ್ತು ಸಾಧನೆಗೆ ಸ್ವಕ್ಷೇತ್ರವಾದ ಬಾರಾಮತಿ ಸಾಕ್ಷಿ.

ಕೃಷಿ, ವಾಣಿಜ್ಯ, ಕೈಗಾರಿಕೆ ಮತ್ತು ಶಿಕ್ಷಣದ ಕೇಂದ್ರವಾಗಿ ಪವಾರ್ ಈ ಕ್ಷೇತ್ರವನ್ನು ಬೆಳೆಸಿದ್ದಾರೆ. ಈ ಅನುಭವದ ಹಿನ್ನೆಲೆಯಲ್ಲಿಯೇ ಪ್ರಧಾನಿ ಮನಮೋಹನ್‌ಸಿಂಗ್ ಪವಾರ್ ಅವರಿಗೆ ಕೃಷಿ ಖಾತೆಯನ್ನು ನೀಡಿದ್ದು.

ಗ್ರಾಮೀಣ ಮೂಲಸೌಕರ್ಯ, ನೀರಾವರಿ, ದಾಸ್ತಾನು ಮಳಿಗೆಗಳ ಸೌಲಭ್ಯ, ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಸ್ಥಳೀಯ ಕೃಷಿ ಮಾರುಕಟ್ಟೆಯ ಕೊರತೆಗಳಿಂದ ಬಳಲುತ್ತಿರುವ ಕೃಷಿ ಕ್ಷೇತ್ರ, ಪವಾರ್ ಈ ಖಾತೆಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಹೇಗಿತ್ತೋ, ಅದಕ್ಕಿಂತಲೂ ಹೆಚ್ಚು ಕೆಟ್ಟು ಹೋಗಿದೆ.

ಇದರ ಜತೆಗೆ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿರುವ ಬರದ ಕರಿನೆರಳು, ಕುಸಿಯುತ್ತಿರುವ ಕೃಷಿ ಉತ್ಪಾದನೆ, ಏರುತ್ತಲೇ ಇರುವ ಕೃಷಿ ಕ್ಷೇತ್ರದ ಹಣದುಬ್ಬರ ಯುಪಿಎ ಸರ್ಕಾರದ ತಲೆನೋವನ್ನು ಇನ್ನಷ್ಟು ಹೆಚ್ಚಿಸಿದೆ.

ಬರ ಪರಿಸ್ಥಿತಿ ಬಗ್ಗೆ ಅವರು ನೀಡುತ್ತಿರುವ ಉಡಾಫೆತನದ ಹೇಳಿಕೆಗಳು ನೊಂದ ರೈತವರ್ಗ ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ. ಕರ್ತವ್ಯಲೋಪದ ಈ ಅಪವಾದದಿಂದ ತಪ್ಪಿಸಿಕೊಳ್ಳುವುದು ಕೂಡಾ ಸಂಪುಟದಿಂದ ಹೊರಗೆ ಹೋಗುವ ಪವಾರ್ ಅವರ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ.

ಪವಾರ್ ಅವರ ಮೆದು ಬಂಡಾಯಕ್ಕೆ ಇನ್ನೂ ಒಂದು ಕಾರಣ ಇದ್ದ ಹಾಗಿದೆ. ಪ್ರಧಾನಿ ಪಟ್ಟದ ಮೇಲಿನ ವ್ಯಾಮೋಹ ಅವರನ್ನು ಇನ್ನೂ ಬಿಟ್ಟಿಲ್ಲ. ಆಂತರಿಕ ಬಿಕ್ಕಟ್ಟಿನಿಂದಾಗಿ ದುರ್ಬಲಗೊಳ್ಳುತ್ತಿರುವ ಪ್ರಮುಖ ವಿರೋಧಪಕ್ಷವಾದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಹೊರಹೊಮ್ಮುವ ಸಾಧ್ಯತೆ ಕ್ಷೀಣವಾಗುತ್ತಿರುವುದು ಪವಾರ್ ಅವರಂತಹ ಪ್ರಾದೇಶಿಕ ಪಕ್ಷಗಳ ಪಾಳೆಯಗಾರರ ಎದೆಯೊಳಗೆ ಆಸೆಯ ಕಿಚ್ಚು ಹಚ್ಚಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆಯ ಚುನಾವಣೆಯ ನಂತರ ತೃತೀಯರಂಗಕ್ಕೆ ಸೇರಿದ ಪಕ್ಷಗಳು ಸೇರಿ ಕಾಂಗ್ರೆಸ್ ಇಲ್ಲವೇ ಬಿಜೆಪಿ ಬೆಂಬಲದೊಡನೆ ಸರ್ಕಾರ ರಚನೆಯ ಪ್ರಯತ್ನ ಮಾಡಿದರೆ ಅದರ ನಾಯಕನ ಸ್ಥಾನದಲ್ಲಿ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಲು ಪವಾರ್ ಈಗಲೇ ತಾಲೀಮು ನಡೆಸುತ್ತಿದ್ದಾರೆ.

ಶಿವಸೇನೆಯಿಂದ ಹಿಡಿದು ಕಮ್ಯುನಿಸ್ಟರ ವರೆಗೆ ಎಲ್ಲ ಪಕ್ಷಗಳ ನಾಯಕರ ಜತೆಯಲ್ಲಿಯೂ ಸೌಹಾರ್ದಯುತ ಸಂಬಂಧ ಉಳಿಸಿಕೊಂಡು ಬಂದಿರುವ ತನ್ನ ಅಜಾತಶತ್ರುವಿನ ವ್ಯಕ್ತಿತ್ವ ಜೀವಮಾನದ ಆಸೆಯನ್ನು ಈಡೇರಿಸಿಕೊಳ್ಳಲು ನೆರವಾಗಬಹುದು ಎಂದು ಅವರು ನಂಬಿದಂತಿದೆ. ರಾಜಕಾರಣಿಗಳ ಮನೆಮುಂದೆ ಸದಾ ಜೀನು ಹೊದ್ದುಕೊಂಡು ನಿಂತಿರುವ ಆಸೆಯ ಕುದುರೆ ಪವಾರ್ ಅವರನ್ನು ಕರೆಯುತ್ತಿದೆ.