Showing posts with label ಪಶ್ಚಿಮ ಬಂಗಾಳ. Show all posts
Showing posts with label ಪಶ್ಚಿಮ ಬಂಗಾಳ. Show all posts

Thursday, January 19, 2012

ಪಶ್ಚಿಮ ಬಂಗಾಳದ ಜನತೆಯ ಕಷ್ಟಕ್ಕೆ ಅಂತ್ಯವೇ ಇಲ್ಲ January 09, 2012

ಪಶ್ಚಿಮ ಬಂಗಾಳದಲ್ಲಿ ಯಾರೂ ಊಹಿಸದಂತಹ ರಾಜಕೀಯ ಬೆಳವಣಿಗೆಗಳೇನೂ ನಡೆದಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸ್ವಭಾವ ಮತ್ತು ಮಿತ್ರಪಕ್ಷಗಳ ಜತೆಗಿನ ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ಗಮನಿಸುತ್ತಾ ಬಂದ ಯಾರಲ್ಲಿಯೂ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಶಾಶ್ವತವಾದುದು ಎಂಬ ನಿರೀಕ್ಷೆ ಇರಲು ಸಾಧ್ಯವೂ ಇಲ್ಲ. ಆದರೆ ಈಗಿನ ಬೆಳವಣಿಗೆ ನಿರೀಕ್ಷೆಗಿಂತ ಸ್ವಲ್ಪ ಮೊದಲೇ ನಡೆದಿದೆ.

ಎರಡು ಪಕ್ಷಗಳ ನಡುವಿನ ಮೈತ್ರಿಕೂಟದ ಸರ್ಕಾರ 232 ದಿನಗಳನ್ನಷ್ಟೇ ಪೂರ್ಣಗೊಳಿಸಿದೆ. ಆಗಲೇ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷಕ್ಕೆ ಹೊರಗೆ ಹೋಗುವ ಬಾಗಿಲು ತೋರಿಸಿದ್ದಾರೆ. ಬಹಳಷ್ಟು ಸಂದರ್ಭಗಳಲ್ಲಿ ರಾಜಕೀಯ ಮೈತ್ರಿಗಳು ಉಳಿದುಕೊಂಡು ಹೋಗುವುದು ಸಮಾನ ಚಿಂತನೆ, ಪರಸ್ಪರ ಗೌರವ ಇಲ್ಲವೇ ತಿಳಿವಳಿಕೆಯಿಂದ ಅಲ್ಲ, ರಾಜಕೀಯ ಅನಿವಾರ‌್ಯತೆ ಎಂಬ ಅಂಟಿನಿಂದ.

ಈ ಕಾರಣದಿಂದಾಗಿಯೇ ಈ ಎರಡು ಪಕ್ಷಗಳ ಮೈತ್ರಿ ಇನ್ನಷ್ಟು ದಿನ ಮುಂದುವರಿದುಕೊಂಡು ಹೋಗಲೂಬಹುದು. ಆದರೆ ಮನಸ್ಸು ಒಡೆದು ಹೋದ ಮೇಲೆ ಮೈತ್ರಿ ಒಡೆಯಲು ಬಹಳ ದಿನ ಬೇಕಾಗಲಾರದು.

ಮನುಷ್ಯರಿರಲಿ, ರಾಜಕೀಯ ಪಕ್ಷಗಳೇ ಇರಲಿ, ಮೈತ್ರಿಯ ಎಳೆ ಸೂಕ್ಷ್ಮವಾದುದು, ಅದನ್ನು ಅತಿಯಾಗಿ ಎಳೆದಾಡಿದರೆ ಕಡಿದು ಹೋಗುತ್ತದೆ.  ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗಿನ ಮಮತಾ ಬ್ಯಾನರ್ಜಿ ಅವರ ರಾಜಕೀಯ ನಿರ್ಧಾರಗಳನ್ನು ನೋಡಿದರೆ ಅವರು ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡಂತೆ ಕಾಣುವುದಿಲ್ಲ. ಹೊಂದಾಣಿಕೆ ಅವರ ಸ್ವಭಾವವೇ ಅಲ್ಲ. ಅವರು ಎರಡು ಬಾರಿ ಕಾಂಗ್ರೆಸ್ ತೊರೆದು ಎನ್‌ಡಿಎ ಮತ್ತು ಎರಡು ಬಾರಿ ಎನ್‌ಡಿಎ ತೊರೆದು ಕಾಂಗ್ರೆಸ್ ಜತೆ ಸೇರಿಕೊಂಡವರು. ಎನ್‌ಡಿಎದಲ್ಲಿದ್ದಾಗಲೂ ಅವರೊಬ್ಬ ಶಾಶ್ವತ ಭಿನ್ನಮತೀಯರಾಗಿದ್ದರು.
ರಾಜ್ಯದ ಯಾವುದೋ ಒಂದು ಕಾಲೇಜಿನ ಪ್ರಾಚಾರ್ಯರ ಮೇಲೆ ತೃಣಮೂಲ ಕಾಂಗ್ರೆಸ್ ಯುವ ಘಟಕದ ಸದಸ್ಯರು ನಡೆಸಿದ ಹಲ್ಲೆ ಮತ್ತು ಅದರ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗಳದ್ದು ಸಣ್ಣ ಘಟನೆ. ಸಂಬಂಧಗಳು ಸೌಹಾರ್ದಯುತವಾಗಿದ್ದ ಸಂದರ್ಭದಲ್ಲಿ ಸರ್ಕಾರದ ಮುಖ್ಯಸ್ಥರು  ಕೇಳಿ ಮರೆತು ಬಿಡುವಂತಹದ್ದು. ಎರಡು ಪಕ್ಷಗಳ ನಡುವಿನ ಸಂಘರ್ಷಕ್ಕೆ ಈ ಘಟನೆಯೇ ಕಾರಣ ಅಲ್ಲ, ನಿಜವಾದ ಕಾರಣಗಳು ಬೇರೆಲ್ಲೋ ಇವೆ.

ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರ ಹೆಚ್ಚಳ, ಬಾಂಗ್ಲಾದೇಶದ ಜತೆಗೆ ತೀಸ್ತಾ ನದಿ ನೀರು ಹಂಚಿಕೆಯ ಒಪ್ಪಂದ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ), ಲೋಕಪಾಲ ಮತ್ತು ಲೋಕಾಯುಕ್ತರ ನೇಮಕದ ಮಸೂದೆ, ಪಿಂಚಣಿ ಮಸೂದೆ.. ಹೀಗೆ ಯುಪಿಎ ಸರ್ಕಾರದ ಹಲವು ಪ್ರಮುಖ ನಿರ್ಧಾರಗಳನ್ನು ಕಳೆದ ಎಂಟು ತಿಂಗಳ ಕಿರು ಅವಧಿಯಲ್ಲಿ ಮಮತಾ ಬ್ಯಾನರ್ಜಿ ವಿರೋಧಿಸುತ್ತಾ ಬಂದಿದ್ದಾರೆ. ಆ ನಿರ್ಧಾರಗಳನ್ನು ಸರ್ಕಾರ ವಾಪಸು ಪಡೆಯುವ ಹಾಗೆಯೂ ಮಾಡಿದ್ದಾರೆ.

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶ ನೀಡದಿರುವ ಯುಪಿಎ ನಿರ್ಧಾರವನ್ನು ಪ್ರಕಟಿಸಿದ್ದು ಕೇಂದ್ರ ಸಚಿವರಲ್ಲ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ. ತೀಸ್ತಾ ನದಿ ನೀರು ಹಂಚಿಕೆ ವಿವಾದವನ್ನು ಹೊರತುಪಡಿಸಿ ಉಳಿದ ಯಾವ ಸಂಗತಿಗಳೂ ಪಶ್ಚಿಮ ಬಂಗಾಳಕ್ಕೆ ನೇರವಾಗಿ ಸಂಬಂಧಿಸಿದ ವಿಷಯಗಳೂ ಅಲ್ಲ.

ಲೋಕಪಾಲ ನೇಮಕದ ಮಸೂದೆಯನ್ನು ಲೋಕಸಭೆಯಲ್ಲಿ ಬೆಂಬಲಿಸಿ, ಒಕ್ಕೂಟ ವ್ಯವಸ್ಥೆಯನ್ನು ಭಂಗಗೊಳಿಸುವ ಪ್ರಯತ್ನ ಎಂಬ ಕಾರಣವೊಡ್ಡಿ ರಾಜ್ಯಸಭೆಯಲ್ಲಿ ವಿರೋಧಿಸಿದ್ದು ಕಾಲುಕೆರೆದು ಜಗಳಕ್ಕೆ ಇಳಿಯುವಂತಹ ನಡವಳಿಕೆ. ಇದು ಸಾಲದೆಂಬಂತೆ ಕೋಲ್ಕತ್ತದ ಪ್ರತಿಷ್ಠಿತ ಸಾಲ್ಟ್‌ಲೇಕ್‌ನಲ್ಲಿರುವ ಸರ್ಕಾರಿ ಬಂಗಲೆಗೆ ಈಗ ಇರುವ ಇಂದಿರಾಗಾಂಧಿ ಹೆಸರನ್ನು ಕಿತ್ತುಹಾಕಿ ಹೊಸ ನಾಮಕರಣ ಮಾಡಲು ಹೊರಟಿದ್ದಾರೆ.  ಮುಂದಿನ ವರ್ಷ ನಡೆಯಲಿರುವ ಪಂಚಾಯತ್ ಚುನಾವಣೆಯನ್ನು ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಎದುರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. 

ಮಮತಾ ಬ್ಯಾನರ್ಜಿ ಅವರ ಈ ವಿರೋಧಗಳಲ್ಲಿ ಯಾವುದನ್ನೂ ಜನವಿರೋಧಿ ಎಂದು ಹೇಳುವ ಹಾಗಿಲ್ಲ. ಆದರೆ ಅವರಿಗಿರುವ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಅವರ ಆದ್ಯತೆಗಳೇನಾಗಬೇಕಿತ್ತು ಎನ್ನುವುದಷ್ಟೇ ಈಗಿನ ಪ್ರಶ್ನೆ.

ಕಾಂಗ್ರೆಸ್ ಎಷ್ಟೇ ಹಾರಾಡಿದರೂ ಪಶ್ಚಿಮ ಬಂಗಾಳದ ಮಟ್ಟಿಗೆ ಈಗ ಇರುವ ಮೂರನೇ ಸ್ಥಾನದಿಂದ ಮೇಲೆ ಬರಲು ಅದಕ್ಕೆ ಸಾಧ್ಯವಾಗಲಾರದು. ಮಮತಾ ಬ್ಯಾನರ್ಜಿ ಇಷ್ಟು ತಿಳಿದುಕೊಂಡಿದ್ದರೆ ಈಗಿನ ಬಿಕ್ಕಟ್ಟು ಸೃಷ್ಟಿಯಾಗುತ್ತಿರಲಿಲ್ಲ. ಮೈಮೇಲೇರಿ ಹೋಗಿ ಜಗಳ ಮಾಡಿದ ನಂತರ ಕೇಂದ್ರದಲ್ಲಿ ಅಧಿಕಾರವನ್ನು ಹೊಂದಿರುವ ರಾಷ್ಟ್ರೀಯ ಪಕ್ಷ ಕೈಕಟ್ಟಿ ಕೂರಬೇಕೆಂದು ಯಾರೂ ಹೇಳಲಾರರು.

`ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳನ್ನು ತೃಣಮೂಲ ಕಾಂಗ್ರೆಸ್ ಪ್ರಶ್ನಿಸಬಹುದಾದರೆ ನಾವು ಒಪ್ಪದ ರಾಜ್ಯ ಸರ್ಕಾರದ ನಿರ್ಧಾರಗಳನ್ನು ನಾವು ಯಾಕೆ ವಿರೋಧಿಸಬಾರದು?` ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಪ್ರಶ್ನೆ ತಪ್ಪೆಂದು ಮಮತಾ ಬ್ಯಾನರ್ಜಿ ಹೇಳಲು ಸಾಧ್ಯ ಇಲ್ಲ.

ಕಾಂಗ್ರೆಸ್ ಪಕ್ಷವನ್ನು ಅತ್ತಿತ್ತ ಮಿಸುಕಾಡದಂತೆ ಕಟ್ಟಿಹಾಕಿದ್ದ ಮಮತಾ ಬ್ಯಾನರ್ಜಿ ಕೋಲ್ಕೊತ್ತಾದಲ್ಲಿಯೇ ಕೂತು ಕೇಂದ್ರ ಸರ್ಕಾರವನ್ನೂ ನಿಯಂತ್ರಿಸಲು ಹೊರಟಿರುವುದನ್ನು ಕಂಡ ನಂತರವೇ ಕಾಂಗ್ರೆಸ್ ಪಕ್ಷ ಪರ್ಯಾಯ ಮಾರ್ಗದ ಹುಡುಕಾಟದಲ್ಲಿ ತೊಡಗಿರುವುದು. ಆಗ ಅವರಿಗೆ ಎದುರಾದವರು ಮುಲಾಯಂ ಸಿಂಗ್ ಯಾದವ್. ತಮ್ಮ `ಆಜನ್ಮ ಶತ್ರು` ಮಾಯಾವತಿ ಅವರನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವೇ ಇಲ್ಲ ಎಂದು ಮನವರಿಕೆಯಾದ ನಂತರ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ತೋರಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವೂ ಅಷ್ಟೇ ಅಸಹಾಯಕ ಸ್ಥಿತಿಯಲ್ಲಿದೆ. ಎರಡು ಪಕ್ಷಗಳ ಯುವ ಉತ್ತರಾಧಿಕಾರಿಗಳಾದ ರಾಹುಲ್‌ಗಾಂಧಿ ಮತ್ತು ಅಖಿಲೇಶ್‌ಸಿಂಗ್ ನಡುವಿನ ಸೌಹಾರ್ದಯುತ ಸಂಬಂಧವೂ ಮೈತ್ರಿಯ ಸಾಧ್ಯತೆಯನ್ನು ಹೆಚ್ಚಿಸಿವೆ.

ಲೋಕಸಭೆಯಲ್ಲಿ 23 ಸಮಾಜವಾದಿ ಪಕ್ಷದ ಸದಸ್ಯರಿರುವುದರಿಂದ 19 ಲೋಕಸಭಾ ಸದಸ್ಯರನ್ನಷ್ಟೇ ಹೊಂದಿರುವ ಮಮತಾ ಬ್ಯಾನರ್ಜಿ ಮೈತ್ರಿಯನ್ನು ಕಡಿದುಕೊಂಡರೂ ಯುಪಿಎ ಸರ್ಕಾರಕ್ಕೇನೂ ಹಾನಿಯಾಗಲಾರದು. ಆದರೆ ಈ ಮೈತ್ರಿಯನ್ನು ಈಗಾಗಲೇ ಘೋಷಣೆಯಾಗಿರುವ ವಿಧಾನಸಭಾ ಚುನಾವಣೆಯಲ್ಲಿ  ಮಾಡಿಕೊಳ್ಳುವ ಸ್ಥಿತಿಯಲ್ಲಿ ಎರಡೂ ಪಕ್ಷಗಳೂ ಇಲ್ಲ. ಇವೆಲ್ಲವೂ ಉತ್ತರಪ್ರದೇಶದ ಚುನಾವಣೋತ್ತರ ಕಾಲದ ಲೆಕ್ಕಾಚಾರ.

ಮೈತ್ರಿಯನ್ನು ಕಡಿದುಕೊಂಡರೆ ಮಮತಾ ಬ್ಯಾನರ್ಜಿ ಅವರ ಸರ್ಕಾರದ ಸುಭದ್ರತೆಗೂ ಧಕ್ಕೆ ಉಂಟಾಗಲಾರದು. 294 ಸದಸ್ಯ ಬಲದ ವಿಧಾನಸಭೆಯಲ್ಲಿ 186 ಸ್ಥಾನಗಳನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್‌ನ ಸರ್ಕಾರವನ್ನು 42 ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷ ಎಡಪಕ್ಷಗಳ ಜತೆ ಕೂಡಿಕೊಂಡರೂ ಉರುಳಿಸಲು ಸಾಧ್ಯ ಇಲ್ಲ.

ಮಮತಾ ಬ್ಯಾನರ್ಜಿ ಅವರಿಗೆ ಈ ಗಣಿತ ಗೊತ್ತಿರುವ ಕಾರಣದಿಂದಾಗಿಯೇ ಕಾಂಗ್ರೆಸ್ ಪಕ್ಷದ ವಿರುದ್ಧ ಅವರು ದಾಳಿ ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ತಮ್ಮನ್ನು ಮೈತ್ರಿಕೂಟದಿಂದ ಕೈಬಿಡುವ ಮೊದಲೇ ತಾನೇ ಆ ಪಕ್ಷದಿಂದ ದೂರ ಹೋಗುವ ಉದ್ದೇಶವೂ ಅವರಿಗೆ ಇದ್ದಿರಬಹುದು.

ಆದರೆ ಈ ಎರಡು ಪಕ್ಷಗಳ ನಡುವಿನ ಸ್ವಹಿತಾಸಕ್ತಿ ಪ್ರೇರಿತ ಸಂಘರ್ಷದಿಂದ ನಿಜಕ್ಕೂ ಕಷ್ಟ-ನಷ್ಟ ಅನುಭವಿಸಲಿರುವವರು ಪಶ್ಚಿಮಬಂಗಾಳದ ಜನತೆ. `ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾದ` ಸ್ಥಿತಿ ಅವರದ್ದು.

34 ವರ್ಷಗಳ ಎಡಪಕ್ಷಗಳ ಆಡಳಿತದಿಂದ ಬೇಸತ್ತ ಆ ರಾಜ್ಯದ ಜನತೆ ಅನಿವಾರ್ಯವೆಂಬಂತೆ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೆ ತಂದರು. ಅಲ್ಲಿನ ಹಿರಿ ಕಿರಿಯರೆಲ್ಲರೂ `ದೀದಿ` ಎಂದೇ ಪ್ರೀತಿಯಿಂದ ಕರೆಯುವ ಮಮತಾ ಬ್ಯಾನರ್ಜಿ ಅವರ ಬಗ್ಗೆ ಅವರಿಗೆ ತಿಳಿಯದ ಸಂಗತಿಗಳ್ಯಾವುದೂ ಇಲ್ಲ.

ಈ `ದೀದಿ`ಯ ಸರಳತೆ, ಪ್ರಾಮಾಣಿಕತೆ, ಬಡಜನರ ಬಗ್ಗೆ ಇರುವ ಕಾಳಜಿ ಎಲ್ಲವೂ ಅವರಿಗೆ ತಿಳಿದಿದೆ. ಇದರ ಜತೆಗೆ ಸಿಟ್ಟಿನ ಕೈಗೆ ಬುದ್ಧಿ ಕೊಡುವ `ದೀದಿ`ಯ ದೌರ್ಬಲ್ಯ ಮತ್ತು ಆಡಳಿತದ ಅನುಭವದ ಕೊರತೆಯೂ ಅವರಿಗೆ ಗೊತ್ತಿದೆ. ಬಯಸಿದ್ದು ಸಿಕ್ಕಿದ ನಂತರವಾದರೂ ಮಮತಾ ಬ್ಯಾನರ್ಜಿ ಅವರ ತಮ್ಮ ದೌರ್ಬಲ್ಯಗಳನ್ನು ಮೀರುವ ಪ್ರಯತ್ನ ಮಾಡಬಹುದೆಂಬ ನಿರೀಕ್ಷೆ ಅವರಲ್ಲಿತ್ತೋ ಏನೋ? ಅದಕ್ಕಾಗಿ ಭಾರಿ ಬಹುಮತದಿಂದ ಅವರ ಪಕ್ಷವನ್ನು ಗೆಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ `ದೀದಿ` ಮಾಡುತ್ತಿರುವುದೇನು?

 ಕೈಗಾರಿಕಾ ಹಿನ್ನಡೆ, ಮೂಲ ಸೌಕರ್ಯಗಳ ಕೊರತೆ, ಹೆಚ್ಚುತ್ತಿರುವ ನಿರುದ್ಯೋಗ, ಇಳಿಯುತ್ತಿರುವ ಕೃಷಿ ಆದಾಯ ಮೊದಲಾದ ಅನೇಕ ಮೂಲಭೂತ ಸಮಸ್ಯೆಗಳನ್ನು ಮಮತಾ ಬ್ಯಾನರ್ಜಿ ಎಡಪಕ್ಷಗಳಿಂದ ಬಳುವಳಿಯಾಗಿ ಪಡೆದಿದ್ದಾರೆ.

ಇವುಗಳನ್ನೆಲ್ಲ ಎದುರಿಸಿ ಪರಿಹರಿಸಲು ಆಡಳಿತದ ಅನುಭವ, ಅಭಿವೃದ್ಧಿಯ ಮುನ್ನೋಟ, ಹೊಂದಾಣಿಕೆಯ ಮನೋಭಾವ, ತಂತ್ರಗಾರಿಕೆ ಎಲ್ಲವೂ ಬೇಕಾಗುತ್ತದೆ. ಆದರೆ ಇವುಗಳ್ಯಾವುದೂ ಮಮತಾ ಬ್ಯಾನರ್ಜಿ ಅವರಲ್ಲಿ ಇಲ್ಲ.  ಆಡಳಿತದ ಕೌಶಲಕ್ಕೆ ಮಮತಾ ಬ್ಯಾನರ್ಜಿ ಹೆಸರಾದವರಲ್ಲ. ಕೇಂದ್ರದಲ್ಲಿ ಮೂರು ಬಾರಿ ರೈಲ್ವೆ, ಒಂದು ಬಾರಿ ಮಾನವ ಸಂಪನ್ಮೂಲ ಅಭಿವೃದ್ಧಿ, ಇನ್ನೊಂದು ಬಾರಿ ಕಲ್ಲಿದ್ದಲು ಮತ್ತು ಗಣಿ ಖಾತೆಗಳಿಗೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ದೇಶದ ಜನತೆ ನೆನಪಲ್ಲಿಟ್ಟುಕೊಳ್ಳುವಂತಹ ಯಾವ ಕೆಲಸವನ್ನೂ ಮಾಡಿಲ್ಲ. ಕಳೆದ ಏಳೆಂಟು ತಿಂಗಳ ಅವರ ಆಡಳಿತವನ್ನು ನೋಡಿದರೂ ಅಂತಹ ಯಾವ ನಿರೀಕ್ಷೆಯನ್ನು ಅವರು ಹುಟ್ಟುಹಾಕಿಲ್ಲ.

ಶನಿವಾರ ಅವರೇ ಮಾಧ್ಯಮದ ಎದುರು ಆಡಿದ ಮಾತುಗಳು ಅವರ ಅಸಹಾಯಕತೆ ಮತ್ತು ಹತಾಶೆಯನ್ನು  ತೋರಿಸುತ್ತದೆ. `ಎಡಪಕ್ಷಗಳಿಗೆ ನಿಷ್ಠರಾದವರೇ ತುಂಬಿಕೊಂಡಿರುವ ಪೊಲೀಸ್ ಇಲಾಖೆಯನ್ನು ಕಟ್ಟಿಕೊಂಡು ಏನು ಆಡಳಿತ ನಡೆಸಲಿ?` ಎಂದು ಅವರು ಕೇಳಿದ್ದಾರೆ.

ಎಡಪಕ್ಷಗಳ `ಅತಿಕ್ರಮಣ` ಕೇವಲ ಪೊಲೀಸ್ ಇಲಾಖೆಯೊಂದಕ್ಕೆ ಸೀಮಿತವಾಗಿಲ್ಲ. ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಮೇಲಿನಿಂದ ಕೆಳಗಿನವರೆಗೆ ಎಡಪಕ್ಷಗಳಿಗೆ ನಿಷ್ಠರಾದವರೇ ತುಂಬಿಕೊಂಡಿದ್ದಾರೆ.

ಚುನಾವಣೆ ಮೂಲಕ ರಾಜಕೀಯ ಬದಲಾವಣೆಯನ್ನು ಮಾಡಿದಷ್ಟು ಸುಲಭದಲ್ಲಿ ಬ್ಯುರೋಕ್ರಸಿಯನ್ನು ಒಂದೇ ಏಟಿಗೆ ಬದಲಾಯಿಸುವುದು ಸಾಧ್ಯ ಇಲ್ಲ. ಅಲ್ಲಿ ಇರುವವರು ಮಮತಾ ಬ್ಯಾನರ್ಜಿ ಅವರನ್ನು ಅಷ್ಟೊಂದು ಸುಲಭದಲ್ಲಿ ಒಪ್ಪಿಕೊಳ್ಳುವವರೂ ಅಲ್ಲ.

ಅವರನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಮಮತಾ ಅವರಲ್ಲಿಯೂ ಇಲ್ಲ.
ಅವರದ್ದು ಮುಟ್ಟಿದರೆ ಸಿಡಿಯುವಂತಹ ಸ್ವಭಾವ. ಮಮತಾ ಬ್ಯಾನರ್ಜಿ ಅವರ ಈ ದೌರ್ಬಲ್ಯವನ್ನೇ ಉಪಯೋಗಿಸಿಕೊಂಡು ಕಾಂಗ್ರೆಸ್ ಮತ್ತು ಎಡಪಕ್ಷಗಳು ಅವರನ್ನು ಕೆಡವಿಹಾಕಲು ಬೋನು ಇಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಸುಲಭದಲ್ಲಿ ಅದಕ್ಕೆ ಬೀಳುತ್ತಿದ್ದಾರೆ.

ಕೇಂದ್ರ ಸರ್ಕಾರದ ಸಹಕಾರ ಇಲ್ಲದೆ ಪಶ್ಚಿಮ ಬಂಗಾಳವನ್ನು ಈಗಿನ ದುಃಸ್ಥಿತಿಯಿಂದ ಪಾರು ಮಾಡುವುದು ಸಾಧ್ಯವೇ ಇಲ್ಲ. ಮಮತಾ ಬ್ಯಾನರ್ಜಿ ನಿಜಕ್ಕೂ ಜಾಣೆಯಾಗಿದ್ದರೆ ಕೆಲವು ವರ್ಷಗಳ ಕಾಲವಾದರೂ ಕಾಂಗ್ರೆಸ್ ಪಕ್ಷದ ಜತೆ ಹೊಂದಿಕೊಂಡು ಹೋಗುವ ಔದಾರ್ಯವನ್ನು ತೋರಬೇಕಿತ್ತು. ಆ ಮೂಲಕ ಕೇಂದ್ರದ ನೆರವನ್ನು ಪಡೆದು ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಪ್ರಯತ್ನ ಮಾಡಬಹುದಿತ್ತು.

ಕನಿಷ್ಠ ತನ್ನ ನೆರೆಯ ರಾಜ್ಯವಾದ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯವನ್ನು ನೋಡಿಯಾದರೂ ಕಲಿಯಬಹುದಿತ್ತು. ಕೇಂದ್ರದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅದರ ಜತೆ ಎಲ್ಲಿಯೂ ಸಂಘರ್ಷಕ್ಕಿಳಿಯದೆ ಅಗತ್ಯ ಇರುವಲ್ಲಿ ಸಹಕಾರ ಪಡೆಯುತ್ತಾ ಪಶ್ಚಿಮಬಂಗಾಳಕ್ಕಿಂತಲೂ ದುಃಸ್ಥಿತಿಯಲ್ಲಿದ್ದ ಬಿಹಾರವನ್ನು ಸರಿ ದಾರಿಗೆ ತರಲು ನಿತೀಶ್ ಪ್ರಯತ್ನಿಸುತ್ತಿದ್ದಾರೆ. ಸ್ವಂತ ಅನುಭವದಿಂದಲೇ ಕಲಿಯದವರು ಬೇರೆಯವರ ಅನುಭವದಿಂದ ಏನು ಕಲಿಯುತ್ತಾರೆ

Monday, March 7, 2011

ಎಡರಂಗದಿಂದ ಕಲಿಯುವುದೂ ಸಾಕಷ್ಟಿದೆ

ಕಳೆದೆರಡು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೆ ಪಶ್ಚಿಮ ಬಂಗಾಳದ ಮತದಾರರು ಆಗಲೇ ನಿರ್ಧಾರ ಮಾಡಿಮುಗಿಸಿದಂತೆಯೇ ಕಾಣುತ್ತಿದೆ. ಆದ್ದರಿಂದ ಮುಂದಿನ ತಿಂಗಳು ಆ ರಾಜ್ಯದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಗೆಲ್ಲುವುದು ಎಷ್ಟು ಕಷ್ಟವೋ, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೋಲುವುದು ಅಷ್ಟೇ ಕಷ್ಟ.
ಆದರೆ ರಾಜಕೀಯ ಪಕ್ಷಗಳು ಒಮ್ಮೊಮ್ಮೆ ಸುಲಭದ ಗೆಲುವನ್ನು ಕೈಬಿಟ್ಟು ಕಷ್ಟದ ಸೋಲಿನ ಹಿಂದೆ ಓಡುವುದುಂಟು. ಭಾವಾವೇಶಕ್ಕೆ ಒಳಗಾಗಿ ಅನೇಕ ಬಾರಿ ರಾಜಕೀಯ ಎಡವಟ್ಟುಗಳನ್ನು ಮಾಡಿಕೊಂಡಿರುವ ಮಮತಾಬ್ಯಾನರ್ಜಿಯವರಿಂದ ಇಂತಹದ್ದೊಂದು ಹರಾಕಿರಿ ನಡೆಯಲು ಸಾಧ್ಯವೇ ಇಲ್ಲ ಎಂದು ಧೈರ್ಯದಿಂದ ಹೇಳುವಂತಿಲ್ಲ. ಅಲ್ಲದೆ ರಾಜಕೀಯ ಪ್ರಜ್ಞಾವಂತಿಕೆಯಲ್ಲಿ ತಮಗೆ ತಾವೇ ಸಾಟಿಯಾಗಿರುವ ಬಂಗಾಳಿಗಳು ಅಚ್ಚರಿ ನೀಡುವ ಸಣ್ಣ ಸಾಧ್ಯತೆಯೂ ಇದೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳು ನಡೆಯದೆ ಹೋದರೆ ಮೂವತ್ತನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲಾವಧಿಯಲ್ಲಿ ಎಡಪಕ್ಷಗಳು ಪಶ್ಚಿಮಬಂಗಾಳದಲ್ಲಿ ಕಟ್ಟಿ ನಿಲ್ಲಿಸಿರುವ ‘ಕೆಂಪುಕೋಟೆ’ ಇನ್ನೆರಡು ತಿಂಗಳಲ್ಲಿ ಕುಸಿದುಬೀಳಲಿದೆ.  ಕಾಳಿಘಾಟ್‌ನ ‘ಗುಡಿಸಲ ರಾಣಿ’ ಮಮತಾ ಬ್ಯಾನರ್ಜಿ ಕೊಲ್ಕೊತ್ತಾದ ರೈಟರ್ಸ್‌ ಕಟ್ಟಡ ಪ್ರವೇಶಿಸಲಿದ್ದಾರೆ.
ವ್ಯಕ್ತಿ ಇರಲಿ, ಸಂಸ್ಥೆ ಇರಲಿ, ಸೋಲು ಬಹಳ ಕ್ರೂರವಾದುದು. ಸೋತವರ ಮೇಲೆ ಯಾರೂ ಹೂವಿನ ಮಳೆ ಸುರಿಸುವುದಿಲ್ಲ, ಕಲ್ಲೆಸೆಯುವವರೇ ಹೆಚ್ಚು. ಆದರೆ ಪಾಠ ಕಲಿಯಬೇಕಾಗಿರುವುದು ಸೋಲಿನಿಂದಲೇ ಹೊರತು ಗೆಲುವಿನಿಂದ ಅಲ್ಲ. ಸುಮಾರು ಮೂರುವರೆ ದಶಕಗಳಷ್ಟು ಕಾಲ ರಾಜ್ಯಭಾರ ಮಾಡಿದ ಪಶ್ಚಿಮಬಂಗಾಳದ ಎಡಪಕ್ಷಗಳು, ರಾಜಕೀಯವನ್ನು ನೋಡುವ, ಮಾಡುವ ಮತ್ತು ಅನುಭವಿಸುವ ವಿಧಾನವನ್ನೇ ಬದಲಾಯಿಸಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯ ಇಲ್ಲ. ರಾಜಕೀಯಕ್ಕೆ ಸಂಬಂಧಿಸಿದ  ಹಲವಾರು ಸಾಮಾನ್ಯ ವ್ಯಾಖ್ಯಾನ ಮತ್ತು ತೀರ್ಮಾನಗಳು ಕೂಡಾ ಸುಳ್ಳೆಂದು ಅಲ್ಲಿನ ಎಡರಂಗ ಮತ್ತೆಮತ್ತೆ ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಬೇರೆ ಯಾವ ರಾಜ್ಯಗಳ ನೆಲದಲ್ಲಿ ನಿಂತು ನೋಡಿದರೂ ಪಶ್ಚಿಮ ಬಂಗಾಳ ಭಾರತದಲ್ಲಿ ಇಲ್ಲವೇ ಇಲ್ಲವೇನೋ, ಅದು ಪ್ರತ್ಯೇಕವಾದ ದೇಶವೇನೋ ಎಂದು ಅನಿಸುವಷ್ಟು ಆ ರಾಜ್ಯದ ರಾಜಕೀಯ ಭಿನ್ನವಾಗಿದೆ.
ಕಳೆದ ಅರ್ವತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಆಡಳಿತ ವಿರೋಧಿ ಅಲೆಗಳಂತಹ ಮೂರು ಸಂಗತಿಗಳು ಪ್ರಮುಖವಾಗಿ ಚರ್ಚೆಗೊಳಪಟ್ಟಿವೆ. ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿದ್ದು ಕೂಡಾ ಈ ಸಂಗತಿಗಳು. ಆದರೆ ಎಡರಂಗ ಅಧಿಕಾರಕ್ಕೆ ಬಂದ ನಂತರ ಆ ರಾಜ್ಯದಲ್ಲಿ ಇಲ್ಲಿಯ ವರೆಗೆ ನಡೆದ ಆರು ವಿಧಾನಸಭಾ ಚುನಾವಣೆಗಳಲ್ಲಿ ಎಂದೂ ಈ ಮೂರು ಸಂಗತಿಗಳು ಮುಖ್ಯಚರ್ಚೆಯ ಭಾಗ ಆಗಿರಲೇ ಇಲ್ಲ. ಈ ಬಾರಿಯೂ ಆಡಳಿತ ವಿರೋಧಿ ಅಲೆಯ ಸಾಧ್ಯತೆಯ ಹೊರತಾಗಿ ಉಳಿದೆರಡು ಸಂಗತಿಗಳು ಚರ್ಚೆಯಲ್ಲಿ ಇಲ್ಲ. ಪ್ರಾಮಾಣಿಕತೆ ಮತ್ತು ಜಾತ್ಯತೀತತೆಯ ವಿಷಯದಲ್ಲಿ ಯಾರೂ ಅನುಮಾನ ಪಡದಂತಹ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಮಮತಾ ಬ್ಯಾನರ್ಜಿಯವರು ಕೂಡಾ ಎಡರಂಗ ಸರ್ಕಾರ ಭ್ರಷ್ಟಗೊಂಡಿದೆ ಇಲ್ಲವೇ ಕೋಮುವಾದದ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡುತ್ತಿಲ್ಲ ಎನ್ನುವುದು ಗಮನಾರ್ಹ.
ಭ್ರಷ್ಟರಾಗದೆ ರಾಜಕೀಯ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯ ಉತ್ತರದಿಂದ ದಕ್ಷಿಣದ ವರೆಗೆ ಎಲ್ಲ ರಾಜ್ಯಗಳಲ್ಲೂ ಹಬ್ಬಿದೆ. ಇದೇ ಅಭಿಪ್ರಾಯ ಪೂರ್ವದಿಂದ ಪಶ್ಚಿಮದ ವರೆಗಿನ ರಾಜ್ಯಗಳಲ್ಲಿಯೂ ಇದೆ ಎಂದು ಹೇಳುವ ಹಾಗೆ ಇಲ್ಲ, ಯಾಕೆಂದರೆ ಪೂರ್ವದಲ್ಲಿ ಪಶ್ಚಿಮಬಂಗಾಳ ಇದೆ. ಆ ರಾಜ್ಯದ ಎಡರಂಗದ ರಾಜಕೀಯ ದೇಶದಲ್ಲಿನ ಈ ಸಾಮಾನ್ಯ ಅಭಿಪ್ರಾಯ ತಪ್ಪೆಂದು ಕಳೆದ ಮೂವತ್ತನಾಲ್ಕು ವರ್ಷಗಳಿಂದ ಸಾಬೀತುಮಾಡಿಕೊಂಡು ಬಂದಿದೆ. ಅಧಿಕಾರಕ್ಕೆ ಬರಬೇಕಾಗಿಲ್ಲ, ಶಾಸಕರಾದ ತಿಂಗಳ ಅವಧಿಯಲ್ಲಿಯೇ ಭ್ರಷ್ಟಾಚಾರದ ಆರೋಪಗಳು ಕೇಳಲಾರಂಭಿಸುವ ಈಗಿನ ದಿನಮಾನದಲ್ಲಿ ಇಷ್ಟೊಂದು ಕಾಲ ಅಧಿಕಾರದಲ್ಲಿದ್ದೂ ತನ್ನ ಶಾಸಕರು, ಸಂಸದರ ಮೇಲೆ ಭ್ರಷ್ಟಾಚಾರದ ಕಳಂಕ ಅಂಟದಂತೆ ನೋಡಿಕೊಂಡಿರುವುದು ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸುಲಭದ ಕೆಲಸ ಅಲ್ಲ.
ಹಾಗಿದ್ದರೆ ಪಶ್ಚಿಮಬಂಗಾಳದಲ್ಲಿ ಭ್ರಷ್ಟಾಚಾರ ಇಲ್ಲವೇ? ವಿಚಿತ್ರವೆಂದರೆ ಸಾಮಾನ್ಯವಾಗಿ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಮೊದಲು ಭ್ರಷ್ಟರಾಗುವುದು ಆ ಪಕ್ಷದ ಜನಪ್ರತಿನಿಧಿಗಳು. ತಹಶೀಲ್ದಾರ್ ಕಚೇರಿಯಿಂದ ವಿಧಾನಸೌಧದ ವರೆಗೆ ಎಲ್ಲೆಲ್ಲೂ ಅವರೇ ಅಧಿಕಾರ ಚಲಾಯಿಸುವುದರಿಂದ ಹೋದಲ್ಲೆಲ್ಲ ಭ್ರಷ್ಟತೆಯ ಅವಕಾಶದ ಕಿಂಡಿಗಳನ್ನು ಅವರು ಕೊರೆಯುತ್ತಾ ಇರುತ್ತಾರೆ. ಇದೇ ಕಳ್ಳ ಕಿಂಡಿಯಲ್ಲಿ ಕೈಹಾಕಿ ಪಕ್ಷದಲ್ಲಿ ಅವರ ಹಿಂಬಾಲಕರಾಗಿರುವವರು ಸಿಕ್ಕಿದಷ್ಟನ್ನು ಬಾಚಿಕೊಳ್ಳುತ್ತಾರೆ. ಪಶ್ಚಿಮಬಂಗಾಳದ ರಾಜಕೀಯ ಇದಕ್ಕಿಂತ ಸಂಪೂರ್ಣ ಭಿನ್ನ. ಅಲ್ಲಿ ಭ್ರಷ್ಟಾಚಾರದ ಆರೋಪಗಳು ಇರುವುದು ಶಾಸಕರು ಇಲ್ಲವೇ ಸಂಸತ್ ಸದಸ್ಯರ  ಮೇಲಲ್ಲ, ಅದು ಪಕ್ಷದ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳ ಮೇಲೆ. ನೇಮಕಾತಿ, ವರ್ಗಾವಣೆ,  ಫಲಾನುಭವಿಗಳ ಆಯ್ಕೆ ಮೊದಲಾದ ಎಲ್ಲ ವಿಷಯಗಳಲ್ಲಿ ನಿರ್ಧಾರ ಈ ಪದಾಧಿಕಾರಿಗಳದ್ದೇ ಆಗಿರುವುದರಿಂದ ಒಂದಷ್ಟು ಭ್ರಷ್ಟತೆಯ ಕೆಸರು ಅವರ ಕೈಗೆ ಅಂಟಿಕೊಳ್ಳುತ್ತದೆ. ಹೀಗಿದ್ದರೂ ಅಲ್ಲಿ ದೊಡ್ಡ ಹಗರಣಗಳು ಕೇಳಿ ಬಂದೇ ಇಲ್ಲ.
ಭ್ರಷ್ಟಾಚಾರವನ್ನು ಹೊರತುಪಡಿಸಿದರೆ ಕೋಮುವಾದ ದೇಶದ ರಾಜಕೀಯದಲ್ಲಿ ಬಹುಚರ್ಚಿತ ವಿಷಯ. ತೊಂಭತ್ತರ ದಶಕದ ನಂತರದ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಬದಲಾವಣೆಗಳಲ್ಲಿ ಕೋಮುವಾದ ನಿರ್ಣಾಯಕ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಸಿಕ್ಕಿದ ಮೊದಲ ದಿನಗಳನ್ನು ಹೊರತುಪಡಿಸಿದರೆ ಪಶ್ಚಿಮಬಂಗಾಳದಲ್ಲಿ ನಡೆದೇ ಇಲ್ಲವೆನ್ನುವಷ್ಟು ಕೋಮುಗಲಭೆಗಳ ಸಂಖ್ಯೆ ಕಡಿಮೆ. ಕಾಶ್ಮೆರ (67%) ಮತ್ತು ಅಸ್ಸಾಂ (31%)  ನಂತರ ಅತ್ಯಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ (25.3%). ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟು ಮುಸ್ಲಿಮರು ಆ ರಾಜ್ಯದಲ್ಲಿದ್ದಾರೆ. ಶೇ 50ಕ್ಕಿಂತ ಹೆಚ್ಚು ಮುಸ್ಲಿಮರಿರುವ ಕನಿಷ್ಠ ಮೂರು ಜಿಲ್ಲೆಗಳು ಅಲ್ಲಿವೆ. ಹೀಗಿದ್ದರೂ ಬಾಬ್ರಿಮಸೀದಿ ಧ್ವಂಸದ ನಂತರದ ದಿನಗಳಲ್ಲಿಯೂ ಪಶ್ಚಿಮಬಂಗಾಳ ಶಾಂತವಾಗಿತ್ತು.
ಇವೆಲ್ಲದರ ಹೊರತಾಗಿಯೂ ದಶಕಗಳ ಕಾಲ ಎಡಪಕ್ಷಗಳ ಕಟ್ಟಾ ಬೆಂಬಲಿಗರಾಗಿದ್ದ ಮುಸ್ಲಿಮರು ಇತ್ತೀಚೆಗೆ ಯಾಕೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ? ಇದಕ್ಕೆ ತಕ್ಷಣದ ಉತ್ತರ ನಂದಿಗ್ರಾಮದ ವಿವಾದದಲ್ಲಿದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿದ್ದ ನಂದಿಗ್ರಾಮದಲ್ಲಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವುದರಿಂದ ಎಡಪಕ್ಷಗಳ ಬಗ್ಗೆ ಅವರ ಆಕ್ರೋಶ ಸಹಜವಾದುದು. ಆದರೆ ಈ ರೀತಿ ಪಕ್ಷನಿಷ್ಠೆಯನ್ನು ಬದಲಾಯಿಸಿಕೊಂಡವರು ಕೂಡಾ ಎಡಪಕ್ಷಗಳನ್ನು ಕೋಮುವಾದಿಗಳೆಂದು ಹೇಳುತ್ತಿಲ್ಲ. ‘ಭದ್ರತೆ ನೀಡಿದ್ದು ನಿಜ, ಆದರೆ ಅವಕಾಶ ನೀಡಲಿಲ್ಲ’ ಎನ್ನುವುದೇ ಎಡಪಕ್ಷಗಳ ಬಗ್ಗೆ ಅಲ್ಲಿರುವ ಮುಸ್ಲಿಮರಲ್ಲಿರುವ ಸಾಮಾನ್ಯ ಅತೃಪ್ತಿ.
ಎಡಪಕ್ಷಗಳು ಮುಸ್ಲಿಮ್ ಬೆಂಬಲ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣ. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಕಾಲುಭಾಗದಷ್ಟಿದ್ದರೂ ಸರ್ಕಾರಿ ನೌಕರಿಯಲ್ಲಿ ಅವರ ಪಾಲು ಕೇವಲ ಶೇಕಡಾ ಎರಡು ಮಾತ್ರ. ಶೈಕ್ಷಣಿಕವಾಗಿಯೂ ಅಲ್ಲಿನ ಮುಸ್ಲಿಮರು  ಹಿಂದುಳಿದಿದ್ದಾರೆ. ಎಡಪಕ್ಷಗಳು ಈಗಲೂ ನೆಲೆ ಉಳಿಸಿಕೊಂಡಿರುವುದು ಮುಸ್ಲಿಮ್ ಬಾಹುಳ್ಯ ಇರುವ ಪಶ್ಚಿಮಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಉಳಿದೆಲ್ಲ ರಾಜ್ಯಗಳಂತೆ ಈ ಎರಡೂ ರಾಜ್ಯಗಳಲ್ಲಿ ಮುಸ್ಲಿಮರು ಹಿಂದೆ ಇದ್ದಾರೆ. ಸಿಪಿಎಂನ ನೀತಿ ನಿರೂಪಣೆಯ ಉನ್ನತಾಧಿಕಾರದ ಸಮಿತಿಯಾದ ಪಾಲಿಟ್‌ಬ್ಯೂರೋದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲ.
ಈ ರೀತಿ ಭ್ರಮನಿರಸನಕ್ಕೊಳಗಾದ ಮುಸ್ಲಿಮರಿಗೆ ಸರಿಯಾದ ಸಮಯಕ್ಕೆ ಮಮತಾ ಬ್ಯಾನರ್ಜಿ ಎಂಬ ನಾಯಕಿ ಕಾಣಿಸಿಕೊಂಡಿದ್ದಾರೆ. ಸುಮಾರು 27 ವರ್ಷಗಳ ರಾಜಕೀಯ ಜೀವನದಲ್ಲಿ ಮಮತಾ ಬ್ಯಾನರ್ಜಿ ಎಂದೂ ಕೋಮುವಾದಿ ಎಂಬ ಆರೋಪಕ್ಕೆ ಒಳಗಾಗಿಲ್ಲ.  ಕಾಂಗ್ರೆಸ್ ಬಿಟ್ಟ ನಂತರ ಒಂದಷ್ಟು ದಿನ ಬಿಜೆಪಿ ಜತೆ ಸೇರಿಕೊಂಡರೂ ರಾಜಕೀಯ ಲಾಭಕ್ಕಾಗಿ ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರಲಿಲ್ಲ, ಮಿತ್ರಪಕ್ಷಕ್ಕೂ ಅದಕ್ಕೆ ಅವಕಾಶ ನೀಡಿರಲಿಲ್ಲ. ತಸ್ಲಿಮಾ ನಸ್ರೀನ್‌ಗೆ ಆಶ್ರಯ ನೀಡಿದ್ದ ಕಾರಣಕ್ಕೆ ಒಂದಷ್ಟು ದಿನ ಕೋಮುಗಲಭೆ ನಡೆದರೂ ಅದನ್ನು ರಾಜಕೀಯವಾಗಿ ದುರ್ಬಳಕೆ ಮಾಡಲು ಅವರು ಹೋಗಲಿಲ್ಲ. ಇವೆಲ್ಲದರ ಜತೆಗೆ ನಂದಿಗ್ರಾಮವನ್ನು ಉಳಿಸಿಕೊಟ್ಟದ್ದೇ ಮಮತಾ  ಎಂಬ ಕೃತಜ್ಞತೆ ಕೇವಲ ಆ ಊರಲ್ಲಿ ಮಾತ್ರ ಅಲ್ಲ, ಇಡೀ ರಾಜ್ಯದ ಮುಸ್ಲಿಮರಲ್ಲಿದೆ.
ಹನ್ನೊಂದು ವರ್ಷಗಳ ಹಿಂದೆ ಜ್ಯೋತಿಬಸು ಅವರು ಅಧಿಕಾರ ತ್ಯಾಗಮಾಡಿದ್ದ ಕಾಲದಲ್ಲಿಯೇ ಆಡಳಿತ ವಿರೋಧಿ ಅಲೆ ಸಣ್ಣಗೆ ಎದ್ದಿತ್ತು. ಎಡರಂಗಕ್ಕೆ ಭದ್ರಬುನಾದಿ ಹಾಕಿಕೊಟ್ಟ ಜ್ಯೋತಿಬಸು ಅವರ ಕ್ರಾಂತಿಕಾರಿ ಕಾರ್ಯಕ್ರಮವಾದ ಉಳುವವನಿಗೆ ಭೂಮಿಯ ಒಡೆತನ ನೀಡುವ ‘ಬರ್ಗಾ ಕಾರ್ಯಚರಣೆ’ಯ ನೆನಪು ಆಗಲೇ ಜನಮನದಲ್ಲಿ ನಿಧಾನವಾಗಿ ಮರೆಗೆ ಸರಿದು ಅಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಂಡಿದ್ದವು. ‘ಬರ್ಗಾ ಕಾರ್ಯಾಚರಣೆ’ಯ ನಂತರ ಗಣನೀಯವಾಗಿ ಹೆಚ್ಚಿದ್ದ ಕೃಷಿ ಇಳುವರಿ ಇತ್ತಿಚಿನ ವರ್ಷಗಳಲ್ಲಿ ಇಳಿಮುಖವಾಗತೊಡಗಿತ್ತು. ಇದರಿಂದಾಗಿ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗತೊಡಗಿದ್ದವು. ಕೈಗಾರಿಕೆಗಳೆಲ್ಲ ರೋಗಗ್ರಸ್ತವಾದ ನಂತರ ಅಲ್ಲಿ ಉದ್ಯೋಗಾವಕಾಶವೇ ಇಲ್ಲದಂತಾಗಿದೆ.
ಈ ವಾಸ್ತವ ಜ್ಯೋತಿಬಸು ಅವರಿಗೆ ಅರಿವಾಗಿಯೇ ಅಧಿಕಾರದ ಕೊನೆಯ ದಿನಗಳಲ್ಲಿ ಅವರು ಸುಧಾರಣೆಯ ಹಾದಿ ಹಿಡಿದದ್ದು. ಆದರೆ ಅದನ್ನೇ ಉತ್ತರಾಧಿಕಾರಿಯಾದ ಬುದ್ದದೇವ ಭಟ್ಟಾಚಾರ್ಯ ಅವರು ಬಿರುಸಿನಿಂದ ಪ್ರಾರಂಭಿಸಿದಾಗ ಜನ ತಿರುಗಿಬೀಳತೊಡಗಿದ್ದರು. ‘ರೈತರು  ಮಿತ್ರರು, ಉದ್ಯಮಿಗಳು ಶತ್ರು’ ಎಂದು ಪಾಠ ಹೇಳುತ್ತಾ ಬಂದ ಪಕ್ಷವೇ ಶತ್ರುಗಳ ಜತೆ ಸೇರಿಕೊಂಡಿದ್ದನ್ನು ಜನ ಸಹಿಸದಾದರು.  ಕಳೆದ 3 ದಶಕಗಳಲ್ಲಿ ಪಶ್ಚಿಮ ಬಂಗಾಳದ ಎಡಪಕ್ಷಗಳಿಗೆ ನಿಷ್ಠರಾಗಿದ್ದ ಮತದಾರರ ಒಂದು ತಲೆಮಾರು ಬದಲಾಗಿರುವುದೂ ಇದಕ್ಕೆ ಕಾರಣ.
 ಈ ಬದಲಾವಣೆ ಪಕ್ಷದ ಪದಾಧಿಕಾರಿಗಳ ಮಟ್ಟದಲ್ಲಿಯೂ ಆಗಿದೆ. ಈಗಿನ ಪದಾಧಿಕಾರಿಗಳಲ್ಲಿ ಹೆಚ್ಚಿನವರು ವಿರೋಧಪಕ್ಷವಾಗಿದ್ದ ದಿನಗಳಲ್ಲಿ ಜತೆಯಲ್ಲಿದ್ದವರಲ್ಲ. ಇವರೆಲ್ಲ ಪಕ್ಷ ಅಧಿಕಾರಕ್ಕೆ ಬಂದ ನಂತರ ಸೇರಿಕೊಂಡವರು. ಹೋರಾಟದ ಅನುಭವವೇ ಇಲ್ಲದ ಇವರಿಗೆ ಅಧಿಕಾರ ಇಲ್ಲದ ಬದುಕಿಗೆ ಹೊಂದಿಕೊಳ್ಳುವುದು ಕಷ್ಟದ ಕೆಲಸ. ಆದ್ದರಿಂದಲೆ ದಶಕಗಳ ಕಾಲ ಮರುಪ್ರಶ್ನಿಸದೆ ಬೆಂಬಲಿಸುತ್ತಾ ಬಂದ ಮತದಾರನ ನಿಷ್ಠೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಈ ಹೊಸತಲೆಮಾರು ಅಭದ್ರತೆಯಿಂದ ನರಳಾಡುತ್ತದೆ.
ಕೈ ಬಿಟ್ಟು ಹೋಗುತ್ತಿರುವ ಬೆಂಬಲದ ನೆಲೆಯನ್ನು ಉಳಿಸಿಕೊಳ್ಳಲು ಈ ಹತಾಶ ನಾಯಕರು ಹಿಡಿದದ್ದು ಪ್ರಜಾಸತ್ತಾತ್ಮಕ ಹಾದಿಯನ್ನಲ್ಲ, ಸರ್ವಾಧಿಕಾರಿ ಬಳಸುವ ಹಿಂಸಾತ್ಮಕ ಹಾದಿ. ಇದರಿಂದಾಗಿ ಆಕ್ರೋಶಗೊಂಡ ಜನ ತಿರುಗಿಬಿದ್ದಿದ್ದಾರೆ. ಈ ತಪ್ಪು ಕಾರ್ಯತಂತ್ರವೇ ಮಮತಾ ಬ್ಯಾನರ್ಜಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿರುವುದು. ಆದರೆ ಸಂಘಟನೆಯ ಜಾಲ, ಕಾರ್ಯಕ್ರಮ, ಎರಡನೇ ಸಾಲಿನ ನಾಯಕತ್ವ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಪಕ್ಷದ ಏಕೈಕ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಪ್ರಯಾಸಪಟ್ಟು ಪಶ್ಚಿಮ ಬಂಗಾಳವನ್ನು ಗೆದ್ದುಕೊಂಡರೂ ಎಷ್ಟು ಕಾಲ ಉಳಿಸಿಕೊಳ್ಳಬಲ್ಲರು ಎನ್ನುವುದೇ ಈಗ ಉಳಿದಿರುವ ಕುತೂಹಲ.