Showing posts with label ಗಾಂಧೀಜಿ ಉಪವಾಸ. Show all posts
Showing posts with label ಗಾಂಧೀಜಿ ಉಪವಾಸ. Show all posts

Monday, October 3, 2011

ಹಾಗಿದ್ದರೆ ಗಾಂಧೀಜಿಯಿಂದ ನಾವು ಕಲಿತದ್ದೇನು?

ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಷ್ಟು `ಗಾಂಧಿ ಸ್ಮರಣೆ~ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ನಡೆದಿರಲಿಕ್ಕಿಲ್ಲ. ಅಣ್ಣಾ ಹಜಾರೆಯವರ ಚಳವಳಿಯಿಂದ ಪ್ರಾರಂಭಗೊಂಡು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ `ಸದ್ಭಾವನಾ ಉಪವಾಸ~ದ ವರೆಗೆ ಈ ಸ್ಮರಣೆಯ ಯಾತ್ರೆ ಮುಂದುವರಿದಿದೆ.
ಅಣ್ಣಾ ಹಜಾರೆಯವರನ್ನು ಆಗಲೇ ಜನ `ದೇಶ ಕಂಡ ಎರಡನೇ ಗಾಂಧಿ~ ಎಂದು ಕೊಂಡಾಡತೊಡಗಿದ್ದಾರೆ. `ಗುಜರಾತ್‌ನ ಮಣ್ಣಿನ ಮಗ ಗಾಂಧೀಜಿಯವರೇ ನನ್ನ ಆದರ್ಶ~ ಎಂದು ನರೇಂದ್ರ ಮೋದಿ ಗುಣಗಾನ ಮಾಡುತ್ತಿದ್ದಾರೆ.

ಇವರಿಬ್ಬರಿಂದಾಗಿ ಮಾತ್ರವಲ್ಲ, ಭಾರತ ಇಂದು ಎದುರಿಸುತ್ತಿರುವ ಎರಡು ಬಹುದೊಡ್ಡ ಸಮಸ್ಯೆಗಳಾದ ಭ್ರಷ್ಟಾಚಾರ ಮತ್ತು ಕೋಮುವಾದದ ನಿರ್ಮೂಲನೆಗಾಗಿಯೂ ಗಾಂಧೀಜಿಯ ಹೊರತಾಗಿ ಬೇರೆ ದಾರಿ ಕಾಣದಿರುವುದು ಕೂಡಾ ಈ ಸ್ಮರಣೆಗೆ ಕಾರಣ ಇರಬಹುದು. ಆದರೆ ಈ ರೀತಿ ಗಾಂಧಿ ಸ್ಮರಣೆಯಲ್ಲಿ ತೊಡಗಿರುವವರೆಲ್ಲರೂ ಅವರು ತೋರಿದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆಯೇ?
ಗಾಂಧೀಜಿಯವರ ಅಹಿಂಸಾ ಹೋರಾಟದ ಮೊದಲ ಪ್ರಯೋಗ ಭೂಮಿ ಬಿಹಾರದ ಉತ್ತರತುದಿಯಲ್ಲಿರುವ ಚಂಪಾರಣ್. `ಈ ಚಳವಳಿ ನನಗೆ ದೇವರು, ಅಹಿಂಸೆ ಮತ್ತು ಸತ್ಯದ ದರ್ಶನ ಮಾಡಿಸಿತು~ ಎಂದು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕಿಂತ ಮೊದಲು ಗಾಂಧೀಜಿಯವರಿಗೆ ಕರಾರು ಕೂಲಿ ವಲಸೆ ರದ್ದುಗೊಳಿಸಲು ನಡೆಸಿದ್ದ ಹೋರಾಟದ ಅನುಭವ ಮಾತ್ರ ಇತ್ತು. ನಂತರದ ದಿನಗಳಲ್ಲಿ ಗಳಿಸಿದ ಜನಪ್ರಿಯತೆ ಆ ದಿನಗಳಲ್ಲಿ ಅವರಿಗೆ ಇರಲಿಲ್ಲ. ಕಾಂಗ್ರೆಸ್ ಬಗ್ಗೆಯೂ ಆ ಕಾಲದಲ್ಲಿ ಅಲ್ಲಿನ ಜನರಿಗೆ ಗೊತ್ತಿಲ್ಲದಿದ್ದ ಕಾರಣ ಪಕ್ಷವನ್ನು ದೂರ ಇಟ್ಟು ಗಾಂಧೀಜಿ ಹೋರಾಟ ನಡೆಸಿದ್ದರು. ಆದ್ದರಿಂದಲೇ ಒಬ್ಬ ಸಾಮಾನ್ಯ ಗಾಂಧೀಜಿಯನ್ನು ಚಂಪಾರಣ್ ಚಳವಳಿ ಮೂಲಕ ಕಾಣಲು ಸಾಧ್ಯ.

ಚಂಪಾರಣ್ ರೈತರು ತಮ್ಮ ತೋಟಗಳ ಮುಕ್ಕಾಲು ಪಾಲು ಜಾಗದಲ್ಲಿ ಇಂಡಿಗೋ (ನೀಲಿ)ಬೆಳೆ ಬೆಳೆಯಬೇಕೆಂಬ ಕಾನೂನಿನ (ತೀನ್ ಕಾಥಿಯಾ) ಕುಣಿಕೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅದನ್ನು ಜಾರಿಗೊಳಿಸಿದ್ದವರು ನೀಲಿ ತಯಾರಿಕೆಯ ಕಾರ್ಖಾನೆಗಳ ಬ್ರಿಟಿಷ್ ಒಡೆಯರು. ಜೀತದಾಳುಗಳಂತಿದ್ದ ರೈತರು ನೀಲಿ ಬೆಳೆಯಲ್ಲಿ ಹೆಚ್ಚಿನ ಆದಾಯ ಇಲ್ಲದೆ ಬಡತನದಲ್ಲಿ ನರಳುತ್ತಿದ್ದರೂ ದನಿ ಎತ್ತಲಾಗದಷ್ಟು ಅಸಹಾಯಕರಾಗಿದ್ದರು.
ಆ ಪ್ರದೇಶಕ್ಕೆ ಗಾಂಧೀಜಿ ಭೇಟಿ ನೀಡಿ ಮೊದಲು ಮಾಡಿದ ಕೆಲಸ `ಕಾರ್ಖಾನೆ ಮಾಲೀಕರು ನನ್ನ ಶತ್ರುಗಳಲ್ಲ, ಅವರಿಗೂ ಒಳ್ಳೆಯದನ್ನು ಬಯಸುತ್ತೇನೆ~ ಎಂದು ಘೋಷಿಸಿದ್ದು. ಚಳವಳಿ ಕಾವೇರುತ್ತಿದ್ದಂತೆಯೇ ಬ್ರಿಟಿಷ್ ಸರ್ಕಾರ ತನಿಖೆಗೆ ಆಯೋಗವನ್ನು ನೇಮಿಸಿತು.

ರೈತರ ಮೇಲೆ ನಡೆಸಲಾಗಿದ್ದ ದೌರ್ಜನ್ಯ, ಶೋಷಣೆಗಳಿಗೆ ಸಂಬಂಧಿಸಿದ ಪುರಾವೆಗಳು ಆಯೋಗದ ಮುಂದೆ ಬರತೊಡಗಿದ್ದವು. ಅವುಗಳನ್ನು ಬಳಸಿಕೊಂಡು ಕಾರ್ಖಾನೆ ಮಾಲೀಕರ ಮೇಲೆ ಕ್ರಮಕ್ಕೆ ಗಾಂಧೀಜಿ ಒತ್ತಾಯಿಸಬಹುದಿತ್ತು. ಹಾಗೆ ಮಾಡಿದ್ದರೆ ಬಹಳಷ್ಟು ಮಂದಿಗೆ ಕಠಿಣ ಶಿಕ್ಷೆಯೂ ಆಗುತ್ತಿತ್ತು.

ಆದರೆ ಹಳೆಯದನ್ನು ಕೆದಕುವುದು ತಮಗೆ ಇಷ್ಟ ಇಲ್ಲ ಎಂದು ಪ್ರಾರಂಭದಲ್ಲಿಯೇ ಹೇಳಿದ ಗಾಂಧೀಜಿ, ಅವರ ಮನಸ್ಸಿನಲ್ಲಿದ್ದ ಭಯವನ್ನು ನಿವಾರಿಸಿದ್ದರು. ಹೋರಾಟದುದ್ದಕ್ಕೂ ಅವರು ಕಾರ್ಖಾನೆಯ ಮಾಲೀಕರ ಬಗ್ಗೆ ಒಂದೇ ಒಂದು ದೂಷಣೆಯ ಮಾತುಗಳನ್ನು ಆಡಿರಲಿಲ್ಲ.
ಇದರಿಂದಾಗಿ ರೈತರು ಮಾತ್ರವಲ್ಲ, ಪ್ರಾರಂಭದಲ್ಲಿ ಗಾಂಧೀಜಿಯವರನ್ನು ಅನುಮಾನದಿಂದ ನೋಡಿದ ಕಾರ್ಖಾನೆ ಮಾಲೀಕರು ನಂತರದ ದಿನಗಳಲ್ಲಿ ಅವರ ಅಭಿಮಾನಿಗಳಾಗಿ ಬಿಟ್ಟರು. ರೈತ ವಿರೋಧಿ ಕಾನೂನು ರದ್ದಾಗಿದ್ದು ಮಾತ್ರವಲ್ಲ, ರೈತರಿಗೆ ಪರಿಹಾರವೂ ಸಿಕ್ಕಿತು. ಗೌರವಯುತವಾಗಿಯೇ ಕಾರ್ಖಾನೆ ಮಾಲೀಕರು ಊರು ಬಿಟ್ಟು ಹೋದರು.
ಮುಂದಿನ ಹೋರಾಟದುದ್ದಕ್ಕೂ ಗಾಂಧೀಜಿ ಅನುಸರಿಸಿದ್ದು ಇದೇ ಕಾರ‌್ಯತಂತ್ರವನ್ನು. ಸಂಧಾನದ ಮೇಜಿನಲ್ಲಿ ಎದುರಿಗೆ ಕೂತವರನ್ನು ಎಂದೂ ಅವರು ಶತ್ರುಗಳೆಂದು ಪರಿಗಣಿಸುತ್ತಿರಲಿಲ್ಲ. ಅವರನ್ನು ತನ್ನತ್ತ ಒಲಿಸಿಕೊಂಡು ಉದ್ದೇಶ ಸಾಧಿಸಿಬಿಡುತ್ತಿದ್ದರು.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರ ಜತೆ ಮಾತುಕತೆ ನಡೆಸಿದ ನಂತರ ಅದರ ವಿವರವನ್ನೊಳಗೊಂಡ ಪತ್ರಿಕಾ ಹೇಳಿಕೆಯನ್ನು ಬ್ರಿಟಿಷ್ ಸಂಧಾನಕಾರರಿಗೆ ತೋರಿಸಿ ಸಮ್ಮತಿ ಪಡೆದು ನಂತರವಷ್ಟೇ ಮಾಧ್ಯಮಗಳಿಗೆ ನೀಡುತ್ತಿದ್ದರಂತೆ. ಇದು ಮಾತುಕತೆಯ ಪ್ರಕ್ರಿಯೆ ಮುಂದುವರಿಸಿಕೊಂಡು ಹೋಗಲು  ನೆರವಾಗುತ್ತಿತ್ತು. ಅಹಿಂಸೆಯ ಮಾರ್ಗದಲ್ಲಿ ಯಶಸ್ಸು ನಿಧಾನ ಎನ್ನುವ ಅರಿವು ಅವರಿಗಿತ್ತು.

ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಚಳವಳಿಯನ್ನು ನೋಡಿದಾಗ ಕಾಣುವುದೇನು? ಅಣ್ಣಾಹಜಾರೆ ತಂಡ ಪ್ರಾರಂಭದಲ್ಲಿಯೇ ಚುನಾಯಿತ ಸರ್ಕಾರವನ್ನು ಶತ್ರು ಸ್ಥಾನದಲ್ಲಿಟ್ಟು ಬಿಟ್ಟಿತ್ತು. ಸಂಘರ್ಷದ ಮೂಲಕವೇ ಸಂಧಾನ ಎಂಬ ಕಾರ್ಯತಂತ್ರವನ್ನು ಅವರು ಅನುಸರಿಸಿದಂತಿತ್ತು.
ಆದ್ದರಿಂದಲೇ ಗಾಂಧೀಜಿ ಇಲ್ಲವೇ ಅವರ ಅನುಯಾಯಿಗಳು ಭಾರತೀಯರನ್ನು ಗುಲಾಮರನ್ನಾಗಿ ಮಾಡಿಕೊಂಡ ಬ್ರಿಟಿಷರ ವಿರುದ್ಧ ಬಳಸದ ಭಾಷೆಯನ್ನೆಲ್ಲ ಅಣ್ಣಾ ಹಜಾರೆ ಮತ್ತು ಅವರ ಸಂಗಾತಿಗಳು ಕೇಂದ್ರ ಸರ್ಕಾರದ ಪ್ರತಿನಿಧಿಗಳ ವಿರುದ್ಧ ಬಳಸಿದ್ದಾರೆ.
ಲೋಕಪಾಲ ಮಸೂದೆಯ ರಚನಾ ಸಮಿತಿಯ ಸಭೆ ಮುಗಿಸಿ ಹೊರಗೆ ಬಂದ ಅಣ್ಣಾ ಹಜಾರೆ ಸಂಗಾತಿಗಳು ಮೊದಲು ಮಾಡುತ್ತಿದ್ದ ಕೆಲಸ ತಮಗಾಗಿ ಕಾಯುತ್ತಿದ್ದ ಟಿವಿ ಚಾನೆಲ್‌ಗಳ ಮೈಕ್ ಮುಂದೆ ಸರ್ಕಾರವನ್ನು ದೂಷಿಸುವುದು. ಗಾಂಧೀಜಿಯವರು ಇದ್ದಿದ್ದರೆ ಹೀಗೆ ಮಾಡುತ್ತಿದ್ದರೇ? ಅಂದ ಹಾಗೆ, ಗಾಂಧೀಜಿ ತಮ್ಮ ಹೋರಾಟದ ಬದುಕಿನಲ್ಲಿ ಎರಡು ಬಾರಿ 21ದಿನಗಳ ಉಪವಾಸವೂ ಸೇರಿದಂತೆ 16 ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ.
ಆದರೆ, ಅವರೆಂದೂ ಬ್ರಿಟಿಷರ ವಿರುದ್ಧ ಅದನ್ನು ಬಳಸಿಲ್ಲ. ಅವರು ಉಪವಾಸ ಸತ್ಯಾಗ್ರಹದ ಅಸ್ತ್ರವನ್ನು `ತಮ್ಮವರ~ ವಿರುದ್ಧವೇ ಪ್ರಯೋಗಿಸಿದ್ದು. ಅದು ಕೋಮು ಸೌಹಾರ್ದತೆಗಾಗಿ ಇಲ್ಲವೇ ಅಸ್ಪೃಶ್ಯತೆಯ ನಿವಾರಣೆಗಾಗಿ, ರಾಜಕೀಯ ಉದ್ದೇಶಕ್ಕಲ್ಲ.
* * * * * *
ಕಳೆದ ಹತ್ತು ವರ್ಷಗಳಲ್ಲಿ ಗಾಂಧೀಜಿಯವರನ್ನು ಉಳಿದೆಲ್ಲ ರಾಜಕಾರಣಿಗಳಿಗಿಂತ ಹೆಚ್ಚು ನೆನಪು ಮಾಡಿಕೊಂಡದ್ದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ಪ್ರತಿ ಚುನಾವಣೆಯ ಭಾಷಣಗಳಲ್ಲಿ ಅವರ ಬಾಯಿಯಿಂದ ಪುಂಖಾನುಪುಂಖವಾಗಿ ಗಾಂಧಿ ಹೆಸರು ಹೊರಬೀಳುತ್ತದೆ. ಕೆಲವು ವರ್ಷಗಳ ಹಿಂದೆ ಗುಜರಾತ್‌ನ ಪತ್ರಿಕೆಗಳಲ್ಲಿ  ತನಗಿಂತ ಎತ್ತರದ ಲಾಠಿ ಹಿಡಿದ ಗಾಂಧೀಜಿಯ ಚಿತ್ರ ಹೊಂದಿದ್ದ ಸರ್ಕಾರಿ ಜಾಹೀರಾತು ಪ್ರಕಟವಾಗಿತ್ತು. ಅದರ ಶೀರ್ಷಿಕೆ  `ಲಾಠಿ~ ಆಗಿತ್ತು(ಗಾಂಧಿ ಅಲ್ಲ).

`ಲಾಠಿ ರಕ್ಷಣೆ ಮತ್ತು ಸುಭದ್ರತೆಯ ಸಂಕೇತ, ದೌರ್ಜನ್ಯ ಮತ್ತು ಹಿಂಸೆಯ ಸಂಕೇತ ಅಲ್ಲ~ ಎಂಬ ಅಡಿ ಬರಹ ಅದರಲ್ಲಿತ್ತು. ಇದು ಮೋದಿ ಕಲ್ಪನೆಯ ಗಾಂಧಿ. ಆದರೆ ಗುಜರಾತ್‌ನ ಪೋರಬಂದರ್‌ನ ಮೂರು ಮಾಳಿಗೆಗಳ ಮನೆ ಕೀರ್ತಿಮಂದಿರದಲ್ಲಿ ಪುತಲೀಬಾಯಿ ಜನ್ಮ ನೀಡಿದ್ದ ಗಾಂಧೀಜಿ ಬೇರೆಯೇ ಆಗಿದ್ದರು. ಒಬ್ಬ ದಾರ್ಶನಿಕ ಮಾತ್ರ ಕಾಣಬಲ್ಲ ಭವಿಷ್ಯದ ಚಿತ್ರವನ್ನು ಅವರು ತಮ್ಮ ಕೊನೆಯ ದಿನಗಳಲ್ಲಿ ಕಂಡಿದ್ದರು, ಅದು ಹೆಡೆ ಬಿಚ್ಚುತ್ತಿದ್ದ ಕೋಮುವಾದ ಎಂಬ ಘಟಸರ್ಪದ ಚಿತ್ರ.
ಬ್ರಿಟಿಷರ ವಿರುದ್ಧದ ಹೋರಾಟದ ಗುರಿ, ದಾರಿ ಮತ್ತು ಪರಿಣಾಮಗಳೆಲ್ಲದರ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇತ್ತು. ಆದರೆ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಎದುರಾದ ಹಿಂದೂ-ಮುಸ್ಲಿಮರ ನಡುವಿನ ಕೋಮುದ್ವೇಷವನ್ನು ಕಂಡು ಅವರು ಆಘಾತಕ್ಕೀಡಾಗಿದ್ದರು.
ದೇಶ ವಿಭಜನೆಗೆ ಒತ್ತಾಯಿಸಿ ಮುಸ್ಲಿಮ್ ಲೀಗ್ `ನೇರ ಕಾರ್ಯಾಚರಣೆ~ಗೆ ಕರೆ ಕೊಟ್ಟಾಗ ಮೊದಲು ಕೋಲ್ಕತ್ತದಲ್ಲಿ, ನಂತರ ನೌಖಾಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ಕಂಡ ಗಾಂಧೀಜಿ ಸ್ವತಂತ್ರ ಭಾರತದ ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದರು. ಅದರ ನಂತರ ಬದುಕುವ ಆಸೆಯನ್ನೇ ಕಳೆದುಕೊಂಡವರಂತೆ ಮಾತನಾಡುತ್ತಿದ್ದರು.
ನೌಖಾಲಿಗೆ ಭೇಟಿ ನೀಡಿದ್ದಾಗ ಸ್ವಾಗತಿಸಲು ಬಂದವರನ್ನು ಉದ್ದೇಶಿಸಿ ಮಾತನಾಡಿದ್ದ ಅವರು `ನಾನಿಲ್ಲಿ ಒಂದು ವರ್ಷ ಇಲ್ಲವೇ ಅದಕ್ಕಿಂತಲೂ ಹೆಚ್ಚಿನ ಕಾಲ ಇರಬಲ್ಲೆ. ಆದರೆ ಜನರ ಭರವಸೆ ಮತ್ತು ನಿರೀಕ್ಷೆಯನ್ನು ಈಡೇರಿಸಲು ಸಾಧ್ಯವಾಗದೆ ಹೋದರೆ ಬದುಕುಳಿಯುವುದಕ್ಕಿಂತ ಸಾವೇ ಲೇಸು~ ಎಂದು ಹೇಳಿದ್ದರು.
ಅದಕ್ಕಿಂತ ಮೊದಲು ಹಿಂಸೆಯ ಬೆಂಕಿಯಿಂದ ಧಗಧಗಿಸುತ್ತಿದ್ದ ನೌಖಾಲಿಗೆ ಹೊರಟಿದ್ದ ಅವರನ್ನು ತಡೆಯಲು ಬಂದವರ ಜತೆ ಮಾತನಾಡಿದ್ದ ಗಾಂಧೀಜಿ `ನನ್ನನ್ನು ಈ ವರೆಗೆ ಬದುಕಿಸಿದ ಮತ್ತು ಆ ಬದುಕನ್ನು ಅರ್ಥಪೂರ್ಣವಾಗಿಸಿದ್ದ ಸಿದ್ಧಾಂತದ ಸತ್ವಪರೀಕ್ಷೆಗಾಗಿ ಮತ್ತು ಹೊಸ ಕಾರ್ಯತಂತ್ರದ ಶೋಧಕ್ಕಾಗಿ ಅಲ್ಲಿಗೆ ಹೊರಟಿದ್ದೇನೆ~ ಎಂದು ಹೇಳಿದ್ದರು.
ಹಿಂದೂ-ಮುಸ್ಲಿಮ್ ಸೌಹಾರ್ದ ಅವರಿಗೆ ಇನ್ನೊಂದು ರಾಜಕೀಯ ಕಾರ‌್ಯಕ್ರಮವಾಗಿರಲಿಲ್ಲ, ಜೀವನವಿಧಾನವಾಗಿತ್ತು. ಇದರಿಂದಾಗಿಯೇ ಕೋಮುಸಾಮರಸ್ಯವನ್ನು ಅವರು ಕೊನೆಯ ದಿನಗಳಲ್ಲಿ ಜೀವನ್ಮರಣದ ಪ್ರಶ್ನೆಯಾಗಿಯೇ ಸ್ವೀಕರಿಸಿದ್ದರು.
ಸುಮಾರು ಆರು ಸಾವಿರ ಜನ ಪ್ರಾಣ ಕಳೆದುಕೊಂಡಿದ್ದ ಕೋಲ್ಕತ್ತ ಕೋಮುಗಲಭೆಯ ನಂತರ ಪ್ರತೀಕಾರ ರೂಪದಲ್ಲಿ ನೌಖಾಲಿಯಲ್ಲಿ ಪ್ರಾರಂಭವಾದ ಕೋಮು ಸೇಡಿನ ಜ್ವಾಲೆಯನ್ನು ನಂದಿಸುವುದು ಗಾಂಧೀಜಿಯವರ ಕೈಯನ್ನೂ ಮೀರಿದ್ದು ಎಂದು ಎಲ್ಲರೂ ಭಾವಿಸಿದ್ದರು.

ಕಾಂಗ್ರೆಸ್‌ನ ಉಳಿದ ನಾಯಕರೆಲ್ಲ ದೆಹಲಿಯಲ್ಲಿ ಕೂತು ಸ್ವಾತಂತ್ರ್ಯದೇವತೆಯ ಸ್ವಾಗತಕ್ಕೆ ಸಿದ್ದತೆ ನಡೆಸುತ್ತಿದ್ದಾಗ ಗಾಂಧೀಜಿ ತಮ್ಮ ಕೆಲವು ಆಪ್ತರನ್ನಷ್ಟೇ ಜತೆಯಲ್ಲಿಟ್ಟುಕೊಂಡು ಗಲಭೆಪೀಡಿತ ನೌಖಾಲಿಯಲ್ಲಿ ಪಾದಯಾತ್ರೆ ನಡೆಸಿದ್ದರು.
ಏಳು ವಾರಗಳ ಕಾಲ 116 ಮೈಲು ಕ್ರಮಿಸಿ ಅಲ್ಲಿನ 47 ಗ್ರಾಮಗಳಿಗೆ ಅವರು ಭೇಟಿ ನೀಡಿದ್ದರು. ಅಸಾಧ್ಯ ಎನಿಸಿದ್ದು ಸಾಧ್ಯವಾಗಿತ್ತು. ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ನೌಖಾಲಿಯಲ್ಲಿ ನಂತರದ ದಿನಗಳಲ್ಲಿ ಕೋಮುಗಲಭೆ ನಡೆಯಲಿಲ್ಲ.
ಆದರೆ ನೌಖಾಲಿಯ ಯಶಸ್ಸಿನ ಖುಷಿ ಬಹಳ ದಿನ ಗಾಂಧೀಜಿಯವರಲ್ಲಿ ಉಳಿಯಲಿಲ್ಲ. ಸ್ವಾತಂತ್ರ್ಯ ಸಿಕ್ಕ ಒಂದು ತಿಂಗಳ ಅವಧಿಯಲ್ಲಿ ಕೋಲ್ಕತ್ತ ಮತ್ತೆ ಕೋಮುಗಲಭೆಗೆ ಆಹುತಿಯಾಗಿತ್ತು. ಈ ಬಾರಿ ಅವರು `ಮಾಡು ಇಲ್ಲವೇ ಮಡಿ~ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಅದರಂತೆ ಆಮರಣಾಂತ ಉಪವಾಸ ಕೈಗೊಳ್ಳಲು ನಿರ್ಧರಿಸಿದರು.
ಕೇವಲ 73 ಗಂಟೆಗಳ ಉಪವಾಸದ ಮೂಲಕವೇ ಗಾಂಧೀಜಿ ಕೋಲ್ಕತ್ತದಲ್ಲಿ ಶಾಂತಿ ಸ್ಥಾಪನೆ ಮಾಡಿದ್ದರು. ಕೋಲ್ಕತ್ತದ ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಬಂದು `ಇನ್ನೆಂದು ಕೋಮುಗಲಭೆಗೆ ಅವಕಾಶ ನೀಡುವುದಿಲ್ಲ, ಅಂತಹದ್ದೇನಾದರೂ ನಡೆದರೆ ಪ್ರಾಣ ಕೊಟ್ಟಾದರೂ ಅದನ್ನು ತಡೆಯುತ್ತೇವೆ~ ಎಂದು ಭರವಸೆ ನೀಡಿದ್ದರು.
ಜೀವನದ ಕೊನೆಯ ಉಪವಾಸವನ್ನೂ ಅವರು ಕೈಗೊಂಡಿದ್ದು ಕೂಡಾ ಕೋಮು ಸೌಹಾರ್ದತೆಗಾಗಿ. ಆಗ ಉಳಿದೆಲ್ಲ ಕಡೆ ಕೋಮುಗಲಭೆ ನಿಯಂತ್ರಣಕ್ಕೆ ಬರುತ್ತಿದ್ದರೂ ರಾಜಧಾನಿ ದೆಹಲಿ ಮಾತ್ರ ಹೊತ್ತಿ ಉರಿಯುತ್ತಲೇ ಇತ್ತು. ಅದೇ ವೇಳೆ ವಿಭಜನೆಯ ಕಾಲದ ಒಪ್ಪಂದದಂತೆ ತಮಗೆ ಸಂದಾಯವಾಗಬೇಕಾಗಿದ್ದ ಬಾಕಿ  55 ಕೋಟಿ ರೂಪಾಯಿ ಪಾವತಿಸುವಂತೆ ಪಾಕಿಸ್ತಾನ ಒತ್ತಾಯಿಸುತ್ತಿತ್ತು.
ಆದರೆ ಕಾಶ್ಮೀರ ವಿವಾದ ಇತ್ಯರ್ಥವಾಗದೆ ಈ ಹಣವನ್ನು ಪಾವತಿ ಮಾಡಬಾರದೆಂಬ ಒತ್ತಡ ಸರ್ಕಾರದ ಮೇಲಿತ್ತು. ಇದರಿಂದಾಗಿ ದೇಶದೊಳಗೂ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿ ಕೋಮುಗಲಭೆ ಸ್ಫೋಟಗೊಳ್ಳುವ ಸೂಚನೆ ಕಂಡ ಗಾಂಧೀಜಿ ಕೋಮುಸೌಹಾರ್ದಕ್ಕಾಗಿ ಉಪವಾಸ ಪ್ರಾರಂಭಿಸಿಯೇ ಬಿಟ್ಟರು.
1924ರಲ್ಲಿ ಮೊದಲ ಉಪವಾಸ ಕೈಗೊಂಡಿದ್ದಾಗ ಅವರಿಗೆ 54 ವರ್ಷ.  ಕೊನೆಯ ಉಪವಾಸ ಕೈಗೊಂಡಿದ್ದಾಗ ಅವರಿಗೆ 78. ಕೋಲ್ಕತ್ತ ಉಪವಾಸದಿಂದಾಗಿ ಆಗಲೇ ಅವರ ಮೂತ್ರಪಿಂಡಗಳು ಹಾನಿಗೀಡಾಗಿದ್ದವು.
ಉಪವಾಸದ ಕೊನೆಯ ದಿನಗಳಲ್ಲಿ ಅವರಿಗೆ ಚಾಪೆ ಬಿಟ್ಟು ಏಳಲಾಗುತ್ತಿರಲಿಲ್ಲ, ಮಾತು ನಿಂತುಹೋಗಿತ್ತು, ವೈದ್ಯರು ಕೈಚೆಲ್ಲಿ ಬಿಟ್ಟಿದ್ದರು. ಉಳಿದದ್ದು ಯಾವುದನ್ನೂ ಲೆಕ್ಕಿಸದೆ ಗಾಂಧೀಜಿ ಸಾಯಲು ಸಿದ್ಧರಾಗಿದ್ದರು. 121ಗಂಟೆ 30 ನಿಮಿಷಗಳ ಅವಧಿಯ ಉಪವಾಸದ ನಂತರ ಸರ್ಕಾರ ಮತ್ತು ಜನತೆ ಮಣಿಯಿತು, ಅವರು ಸಾವನ್ನು ಗೆದ್ದಿದ್ದರು.
ಆದರೆ ಅದೇ ದಿನ, ಇನ್ನೊಂದು ಕಡೆಯಿಂದ ಸಾವು ಅವರ ಬೆನ್ನಟ್ಟಿಕೊಂಡು ಬರುತ್ತಿತ್ತು. ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ ಮುಂಬೈನ ವೀರ್ ಸಾವರ್ಕರ್ ಮನೆಯಿಂದ ಬೀಳ್ಕೊಂಡು ಮುಂಬೈ-ದೆಹಲಿ ವಿಮಾನ ಹತ್ತಿದ್ದರು. ಸರಿಯಾಗಿ ಹದಿಮೂರು ದಿನಗಳ ನಂತರ ಗೋಡ್ಸೆ ಪಿಸ್ತೂಲಿನ ಗುಂಡು ಗಾಂಧೀಜಿ ಎದೆ ಸೀಳಿತ್ತು.
ಗಾಂಧೀಜಿಯನ್ನು ಬಲಿ ತೆಗೆದುಕೊಂಡ ಒಬ್ಬ ಮತಾಂಧನ ಗುಂಡು, ಸಾವಿಗೆ ನೆಪ ಅಷ್ಟೆ. ದೇಶ ವಿಭಜನೆಯಾದಾಗಲೇ ಅವರು ಅರ್ಧ ಸತ್ತಿದ್ದರು, ಉಳಿದರ್ಧ ಜೀವವನ್ನು ಸ್ವಾತಂತ್ರ್ಯಾನಂತರ ಭುಗಿಲೆದ್ದ ಕೋಮುಗಲಭೆ ಬಲಿ ತೆಗೆದುಕೊಂಡು ಬಿಟ್ಟಿತ್ತು. ಅದರ ನಂತರ ನೂರಾರು ಬಾರಿ ಗಾಂಧೀಜಿ ಸತ್ತಿದ್ದಾರೆ.
2002ರ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ತನ್ನ ಹುಟ್ಟೂರಾದ ಗುಜರಾತ್‌ನಲ್ಲಿಯೂ ಅವರು ಸತ್ತಿದ್ದರು. ಆ ಹೊತ್ತಿನಲ್ಲಿ ಗಾಂಧೀಜಿ ಅಲ್ಲಿದ್ದರೆ ಏನು ಮಾಡುತ್ತಿದ್ದರು? ಆಗ ಸುಮ್ಮನಿದ್ದು, ಒಂಬತ್ತು ವರ್ಷಗಳ ನಂತರ ಹವಾ ನಿಯಂತ್ರಿತ ಸಭಾಂಗಣದಲ್ಲಿ ಮೂರು ದಿನಗಳ ಉಪವಾಸ ಮಾಡುತ್ತಿದ್ದರೇ? ಹಾಗಿದ್ದರೆ ಗಾಂಧೀಜಿಯಿಂದ ನಾವು ಕಲಿತದ್ದೇನು?