ಪಳನಿಯಪ್ಪ ಚಿದಂಬರಂ ಸ್ವಯಂಘೋಷಿತ ನಾಸ್ತಿಕ. ಅದೃಷ್ಟ-ದುರದೃಷ್ಟದಲ್ಲಿ ತಮಗೆ ನಂಬಿಕೆ ಇದೆ ಎಂದು ಅವರು ಹೇಳಲಾರರು. ಆದರೆ, ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಅವಕಾಶ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸಿಬಿಐ ಕೋರ್ಟ್ ಶನಿವಾರ ವಜಾಗೊಳಿಸಿದ ನಂತರ `ಕಾಣದ ಕೈ`ಗಳನ್ನೆಲ್ಲ ಅವರು ನಂಬುವಂತೆ ಮಾಡಲೂಬಹುದು.
2ಜಿ ತರಂಗಾಂತರ ಹಂಚಿಕೆ ಹಗರಣಗಳ ತನಿಖೆಯನ್ನು ಗಮನಿಸುತ್ತ ಬಂದವರ‌್ಯಾರೂ ಸಿಬಿಐ ಕೋರ್ಟ್‌ನ ಈ ಆದೇಶವನ್ನು ನಿರೀಕ್ಷಿಸಲಾರರು. ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಸಚಿವ ಚಿದಂಬರಂ ಮಾತ್ರ ಇಂತಹದ್ದೊಂದು ಆದೇಶವನ್ನು ನಿರೀಕ್ಷಿಸುತ್ತಿದ್ದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು.
ಅವರ ನಿರೀಕ್ಷೆಯಂತೆಯೇ ಆದೇಶ ಬಂದಿದೆ. ಸದ್ಯಕ್ಕೆ ಪ್ರಧಾನಿಯೂ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ, ಆಡಳಿತ ಪಕ್ಷದ ಮೇಲೆ ಎರಗುತ್ತಿದ್ದ ವಿರೋಧಪಕ್ಷಗಳ ಕೈಯ್ಯಲ್ಲಿದ್ದ ಕತ್ತಿಯೂ ಹರಿತ ಕಳೆದುಕೊಂಡಿದೆ. ಮಾಜಿ ಸಚಿವ ಎ.ರಾಜಾ ಇನ್ನಷ್ಟು ಕಾಲ ಜತೆಗಾರರಿಲ್ಲದೆಯೇ ಜೈಲಿನಲ್ಲಿ ದಿನ ಕಳೆಯಬೇಕಾಗಬಹುದು. ಚಿದಂಬರಂ ಅದೃಷ್ಟದ ಸವಾರಿ ಮುಂದುವರಿದಿದೆ.
ಚಿದಂಬರಂ ಅವರನ್ನು ಮತ್ತೆ ಮತ್ತೆ ಅದೃಷ್ಟಶಾಲಿ ಎಂದು ಹೇಳುವುದಕ್ಕೆ ಕಾರಣ ಇದೆ. `ಕಷ್ಟ ಕಾಲದಲ್ಲಿ ಜತೆಯಲ್ಲಿದ್ದವರನ್ನು ಮಿತ್ರರು ಮತ್ತು ಜತೆಯಲ್ಲಿ ಇಲ್ಲದವರನ್ನು ಶತ್ರುಗಳು` ಎನ್ನುವುದಾದರೆ ಕೇಂದ್ರ ಗೃಹಸಚಿವ ಪಳನಿಯಪ್ಪ ಚಿದಂಬರಂ ಕಾಂಗ್ರೆಸ್ ಪಕ್ಷದ ದೊಡ್ಡ ಶತ್ರು. ಆದರೆ ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರದಲ್ಲಿ ಅವರು ಎರಡನೆಯೋ, ಮೂರನೆಯೋ ಸ್ಥಾನದಲ್ಲಿದ್ದಾರೆ.
ಅವರಿಗೆ ಕಷ್ಟ ಎದುರಾದಾಗ ಪ್ರಧಾನಿ ಮಾತ್ರ ಅಲ್ಲ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಅವರ ನೆರವಿಗೆ ಧಾವಿಸುತ್ತಾರೆ. ಯಾರೂ ಕೇಳದಿದ್ದರೂ ಅವರ ಪ್ರಾಮಾಣಿಕತೆಗೆ ಸರ್ಟಿಫಿಕೇಟ್ ನೀಡುತ್ತಾರೆ. ಇದನ್ನು ಅದೃಷ್ಟ ಎನ್ನದೆ ಬೇರೆ ಏನು ಹೇಳಲು ಸಾಧ್ಯ?
ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದ 1996ರಿಂದ 2004ರ ವರೆಗಿನ ಎಂಟು ವರ್ಷ, ಆ ಪಕ್ಷದ ಪಾಲಿನ ಕಡು ಕಷ್ಟದ ಕಾಲ. ಆ ಸಮಯ ಚಿದಂಬರಂ ಕಾಂಗ್ರೆಸ್ ಪಕ್ಷದಲ್ಲಿ ಇರಲೇ ಇಲ್ಲ. ಅವರು 1996ರಲ್ಲಿ ಕಾಂಗ್ರೆಸ್ ತೊರೆದು ತಮಿಳು ಮಾನಿಲ ಕಾಂಗ್ರೆಸ್ ಸೇರಿಕೊಂಡಿದ್ದರು.
ಕಾಂಗ್ರೆಸ್ ನಾಯಕರು ಅಧಿಕಾರ ಇಲ್ಲದೆ ವನವಾಸ ಅನುಭವಿಸುತ್ತಿದ್ದಾಗ ಚಿದಂಬರಂ ತಮಿಳು ಮಾನಿಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿ 1996ರಿಂದ 1998ರ ವರೆಗೆ ಸಂಯುಕ್ತರಂಗ ಸರ್ಕಾರದಲ್ಲಿ ಹಣಕಾಸು ಸಚಿವರೂ ಆಗಿದ್ದರು.
2004ರಲ್ಲಿ ಇನ್ನೇನು ಚುನಾವಣೆ ಘೋಷಣೆಯಾಗಲಿರುವಾಗ ಚಿದಂಬರಂ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾದರು. ಚುನಾವಣೆಯಲ್ಲಿ ಗೆದ್ದರು, ಹಣಕಾಸು ಸಚಿವರೂ ಆಗಿಬಿಟ್ಟರು. ಅಧಿಕಾರದಲ್ಲಿ ಇಲ್ಲದಿದ್ದಾಗ ಜತೆಯಲ್ಲಿ ಇರಲಿಲ್ಲ, ಹೇಗೋ ಕಷ್ಟಪಟ್ಟು ಪಕ್ಷ ಅಧಿಕಾರ ಗಳಿಸಿದಾಗ ಮತ್ತೆ ಕಾಣಿಸಿಕೊಂಡು ಮತ್ತೆ ಅದೇ ಪಕ್ಷವನ್ನು ಪತನದ ಅಂಚಿಗೆ ಕೊಂಡುಹೋಗಿ ನಿಲ್ಲಿಸಿದವರು ಚಿದಂಬರಂ. ಅವರ ಸಮಕಾಲೀನರಲ್ಲಿ ಯಾರೂ ಇಷ್ಟೊಂದು ದೀರ್ಘಕಾಲ ಕೇಂದ್ರದಲ್ಲಿ ಅಧಿಕಾರ ಅನುಭವಿಸಿಲ್ಲ.
ಕಷ್ಟಕಾಲದಲ್ಲಿ ಜತೆಯಲ್ಲಿ ಇಲ್ಲದೆ, ಅಧಿಕಾರಕ್ಕೆ ಬಂದಾಗ ಒಳಗೆ ಬಂದು ಮೆರೆಯುತ್ತಿರುವ `ಪಿಸಿ` ಬಗ್ಗೆ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ-ಕಿರಿಯ ನಾಯಕರಿಗೆ ಸಿಟ್ಟಿದೆ, ಅದಕ್ಕಿಂತ ಹೆಚ್ಚಾಗಿ ಅಸೂಯೆಯೂ ಇದೆ. ನಾಳೆ ಅವರನ್ನು ಪ್ರಧಾನಿ ಮನಮೋಹನ್‌ಸಿಂಗ್ ಸಂಪುಟದಿಂದ ಕಿತ್ತುಹಾಕಿದರೆ ಅಳುವವರು ಪಕ್ಷದಲ್ಲಿ ಯಾರೂ ಇಲ್ಲ.
ಹಾರ್ವರ್ಡ್‌ನಲ್ಲಿ ಓದಿ ಬಂದಿರುವ ಚಿದಂಬರಂ ರಾಜಕೀಯ ಗಾಳಿ ಬೀಸುವ ದಿಕ್ಕನ್ನು ಗ್ರಹಿಸಬಲ್ಲ ಬುದ್ಧಿವಂತ. ಈ ಬುದ್ಧಿವಂತಿಕೆಯೋ ಇಲ್ಲ, ಅದೃಷ್ಟವೋ ಯಾವುದೋ ಒಂದು, ಚಿದಂಬರಂ ಅವರನ್ನು ರಾಜಕೀಯ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದಿದೆ.
1984ರಿಂದ ಇಲ್ಲಿಯವರೆಗೆ ನಿರಂತರವಾಗಿ ಆರು ಲೋಕಸಭಾ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ. ಈ ನಡುವೆ ಪಕ್ಷ ಬಿಟ್ಟಿದ್ದಾರೆ, ಬೇರೆ ಪಕ್ಷ ಸೇರಿದ್ದಾರೆ, ಸ್ವಂತ ಪಕ್ಷವನ್ನೂ ಕಟ್ಟಿದ್ದಾರೆ. ಆದರೆ ಕಳೆದ ಹದಿನೆಂಟು ವರ್ಷಗಳಲ್ಲಿ ಲೋಕಸಭೆಯಿಂದ ಹೊರಗೆ ಉಳಿದಿಲ್ಲ, ಅಧಿಕಾರದಿಂದಲೂ ಬಹಳ ದಿನ ದೂರವೂ ಉಳಿದಿಲ್ಲ.
ಇನ್ನೇನು ಇವರ ರಾಜಕೀಯ ಜೀವನ ಮುಗಿದೇ ಬಿಟ್ಟಿತು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಹಲವು ಬಾರಿ ಎದ್ದು ಬಂದಿದ್ದಾರೆ. ಈಗಲೂ ಹಾಗೆಯೇ ಆಗಿದೆ. ಇನ್ನೇನು ಅವರ ತಲೆ ಉರುಳಿಯೇ ಬಿಟ್ಟಿತು ಎನ್ನುವಾಗ ಸಿಬಿಐ ವಿಚಾರಣಾ ನ್ಯಾಯಾಲಯ ಅವರತ್ತ ಕರುಣೆಯ ನೋಟ ಹರಿಸಿದೆ. ಆದರೆ ಅವರೆಷ್ಟು ದಿನ ಸುರಕ್ಷಿತರಾಗಿ ಉಳಿಯಬಲ್ಲರು? ಅವರ ಮೇಲಿನ ಹಳೆಯ ಮತ್ತು ಹೊಸ ಆರೋಪಗಳನ್ನು ನೋಡಿದರೆ, ಬಹಳ ದಿನ ಚಿದಂಬರಂ ಅವರನ್ನು ಆದೃಷ್ಟವೊಂದೇ ಕಾಪಾಡಿಕೊಂಡು ಬರಲಾರದು ಎಂದೆನಿಸುತ್ತದೆ.
ಆರೋಪಗಳು, ವಿವಾದಗಳು, ರಾಜೀನಾಮೆಗಳು ಚಿದಂಬರಂ ಅವರಿಗೆ ಹೊಸತೇನಲ್ಲ. ಅವರದು ಕಳಂಕರಹಿತ ಶುಭ್ರ ವ್ಯಕ್ತಿತ್ವವೂ ಅಲ್ಲ. ಇಪ್ಪತ್ತು ವರ್ಷಗಳ ಹಿಂದೆ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದ ಚಿದಂಬರಂ ಷೇರುಹಗರಣದಲ್ಲಿ ಭಾಗಿಯಾಗಿದ್ದ `ಫೇರ್‌ಗ್ರೋತ್` ಎಂಬ ಹಣಕಾಸು ಸಂಸ್ಥೆಯಲ್ಲಿ ಹಣ ಹೂಡಿದ್ದಕ್ಕಾಗಿ ರಾಜೀನಾಮೆ ನೀಡಿದ್ದರು. ದಿವಾಳಿಯಾಗಿದ್ದ ವಿದ್ಯುತ್ ಉತ್ಪಾದನಾ ಸಂಸ್ಥೆ ಎನ್ರಾನ್‌ಗೆ ಅವರು ವಕೀಲರಾಗಿದ್ದರು.
ವಿವಾದಾತ್ಮಕ ದಾಬೋಲ್ ಇಂಧನ ಯೋಜನೆಯ ಪರವಾಗಿಯೂ ಅವರು ಲಾಬಿ ನಡೆಸುತ್ತಿದ್ದರು ಎನ್ನುವ ಆರೋಪವೂ ಕೇಳಿಬಂದಿತ್ತು. ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗಲೇ ಚಿದಂಬರಂ ಗಣಿಗಾರಿಕೆಯಲ್ಲಿ ತೊಡಗಿರುವ ಬ್ರಿಟನ್‌ನ ವೇದಾಂತ ರಿಸೋರ್ಸ್ ಕಂಪೆನಿಗೆ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ತನ್ನ ಉದ್ಧಟತನದ ಉತ್ತರಗಳಿಂದಾಗಿ ಪತ್ರಕರ್ತರನ್ನು ಆಗಾಗ ಕೆರಳಿಸುತ್ತಿರುವ ಚಿದಂಬರಂ ಮೇಲೆ ಹಿಂದಿ ದಿನಪತ್ರಿಕೆಯ ಪತ್ರಕರ್ತನೊಬ್ಬ ಮೂರು ವರ್ಷಗಳ ಹಿಂದೆ ಬೂಟು ಎಸೆದುಬಿಟ್ಟಿದ್ದ.
ಸಚಿವರಾಗಿದ್ದುಕೊಂಡೇ ಸರ್ಕಾರದ ಲಾಭದಾಯಕ ಹುದ್ದೆಯಲ್ಲಿದ್ದರು ಮತ್ತು ಕಕ್ಷಿದಾರರಿಗೆ ನೆರವಾಗಿದ್ದರು ಎನ್ನುವ ಆರೋಪಗಳೂ ಕೇಳಿಬಂದಿದ್ದವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಗಂಗೆ ಕ್ಷೇತ್ರದಿಂದ ಗೆಲ್ಲಲು ಅಕ್ರಮ ಎಸಗಿದ್ದರು ಎನ್ನುವ ದೂರಿನ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಆದರೆ, ಪ್ರತಿ ಬಾರಿಯೂ ಅವರು ಸುಲಭದಲ್ಲಿ ಅಪಾಯದಿಂದ ಪಾರಾಗುತ್ತಾ ಬಂದಿದ್ದಾರೆ. ಇದಕ್ಕೆ ಪಕ್ಷ ಮತ್ತು ಸರ್ಕಾರದಲ್ಲಿರುವ ಹಿರಿಯರ ಜತೆಗೆ ಅವರು ಬೆಳೆಸಿಕೊಳ್ಳುವ ಸಂಬಂಧ ಕಾರಣ ಇರಬಹುದು. ಈಗಿನ ಬಿಕ್ಕಟ್ಟಿನಲ್ಲಿಯೂ ಪಾರಾಗಲು ಮನಮೋಹನ್‌ಸಿಂಗ್ ಜತೆಯಲ್ಲಿ ಅವರಿಗಿದ್ದ ಸೌಹಾರ್ದಯುತ ಸಂಬಂಧ ಕಾರಣ ಎನ್ನುವವರಿದ್ದಾರೆ.
ಇದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮೇಲೆ ಇಟ್ಟಿರುವ ವಿಶ್ವಾಸ ಕಾರಣ ಎನ್ನುವವರೂ ಇದ್ದಾರೆ. ಎರಡನೇ ಕಾರಣ ಸತ್ಯಕ್ಕೆ ಹೆಚ್ಚು ಸಮೀಪ ಇದ್ದಂತೆ ಕಾಣುತ್ತಿದೆ. ಚಿದಂಬರಂ ಸಮರ್ಥರು, ಯಾವ ಖಾತೆ ಕೊಟ್ಟರೂ ದಕ್ಷತೆಯಿಂದ ನಿರ್ವಹಿಸಬಲ್ಲರು ಎನ್ನುವ ಅಭಿಪ್ರಾಯ ಇದೆ. ಒಂದು ಕಾಲದಲ್ಲಿ ದೇಶಕ್ಕೆ `ಕನಸಿನ ಬಜೆಟ್` ಕೊಟ್ಟು ಅವರು ಜನಪ್ರಿಯರಾದವರು.. ಎಲ್ಲವೂ ನಿಜ. ಆದರೆ ಯುಪಿಎ ಎರಡನೇ ಅವಧಿಯಲ್ಲಿ ಸರ್ಕಾರಕ್ಕೆ ಅವರಿಂದಾದ ಲಾಭ-ನಷ್ಟಗಳ ಲೆಕ್ಕಹಾಕಿದರೆ ನಷ್ಟದ ಕಡೆ ತಕ್ಕಡಿ ವಾಲುತ್ತದೆ.
2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಶಿವರಾಜ್ ಪಾಟೀಲ್ ಎಂಬ ಶೋಕಿಲಾಲ ಸಚಿವರಿಂದಾಗಿ ಗೃಹಖಾತೆ ಹೆಚ್ಚುಕಡಿಮೆ ನಿಷ್ಕ್ರಿಯ ಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಗೃಹಖಾತೆಯನ್ನು ವಹಿಸಿಕೊಂಡವರು ಚಿದಂಬರಂ. ಪ್ರಾರಂಭದ ದಿನಗಳ ಅವರ ಕಾರ‌್ಯನಿರ್ವಹಣೆ ವಿರೋಧಪಕ್ಷಗಳ ಶ್ಲಾಘನೆಗೂ ಪಾತ್ರವಾಗಿತ್ತು.
ಆದರೆ ಎಚ್ಚರಿಕೆ ನೀಡುವ ಅವರ ಮಾತುಗಳಿಂದ ಭಯೋತ್ಪಾದಕರ ದುಷ್ಕೃತ್ಯಗಳು ನಿಲ್ಲಲಿಲ್ಲ. ಕಳೆದ ವರ್ಷದ ಜುಲೈನಲ್ಲಿ ಅದೇ ಮುಂಬೈನಲ್ಲಿ ಭಯೋತ್ಪಾದಕರು ಮತ್ತೆ ದಾಳಿ ನಡೆಸಿದ್ದರು. ಗೃಹಸಚಿವರಾದ ನಂತರ ಮಾವೋವಾದಿಗಳ ವಿರುದ್ಧ ಅವರು ಸಮರವನ್ನೇ ಸಾರಿದ್ದರು. ಆದರೆ, ಆ ಸಂಘಟನೆಯ ಒಂದಿಬ್ಬರು ನಾಯಕರನ್ನು ನಕಲಿ ಎನ್‌ಕೌಂಟರ್‌ಗಳ ಮೂಲಕ ಕೊಂದು ಹಾಕಿದ್ದನ್ನು ಹೊರತುಪಡಿಸಿದರೆ ಮಾವೋವಾದಿಗಳನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಿಲ್ಲ.
ಜಾರ್ಖಂಡ್, ಚತ್ತೀಸ್‌ಗಢ, ಒಡಿಶಾ ಮತ್ತು ಪಶ್ಚಿಮಬಂಗಾಳಗಳಲ್ಲಿ ಮಾವೋವಾದಿಗಳ ಹಿಂಸೆಗೆ ಪೊಲೀಸ್ ಸಿಬ್ಬಂದಿ ಮತ್ತು ಅಮಾಯಕ ನಾಗರಿಕರು ಬಲಿಯಾಗುತ್ತಲೇ ಇದ್ದಾರೆ. ಹಿಂದೂ ಭಯೋತ್ಪಾದನೆಯ ವಿರುದ್ಧ ವೀರಾವೇಶದಿಂದ ಮಾತನಾಡುತ್ತಿದ್ದ ಚಿದಂಬರಂ, ಇದೇ ಕಾರಣಕ್ಕೆ ಬಿಜೆಪಿ ತನ್ನನ್ನು ಗುರಿಯಾಗಿರಿಸಿಕೊಂಡಿದೆ ಎನ್ನುವುದು ಅರಿವಾದ ನಂತರ ಮೌನಕ್ಕೆ ಜಾರಿದ್ದಾರೆ. ಅಣ್ಣಾ ಹಜಾರೆಯವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸುವ ಮೂಲಕ ಅವರನ್ನು `ಹೀರೋ` ಮಾಡಿದ ಮೂರ್ಖ ನಿರ್ಧಾರ ಕೂಡಾ ಚಿದಂಬರಂ ಅವರದ್ದು.
ಇವೆಲ್ಲದರ ಜತೆಯಲ್ಲಿ ಹಣಕಾಸು ಸಚಿವರಾಗಿದ್ದ ದಿನಗಳಲ್ಲಿ ನಡೆದ 2ಜಿ ತರಂಗಾಂತರ ಹಗರಣ ಚಿದಂಬರಂ ಕೊರಳಿಗೆ ಸುತ್ತಿಕೊಂಡಿದೆ. ಸಿಬಿಐ ವಿಚಾರಣಾ ನ್ಯಾಯಾಲಯ ಅವರ ವಿರುದ್ಧದ ಆರೋಪಗಳ ತನಿಖೆಗೆ ಆದೇಶ ನೀಡಲು ನಿರಾಕರಿಸಿದ ನಂತರವೂ ಹಗರಣಕ್ಕೆ ಸಂಬಂಧಿಸಿದ ಒಂದಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಬಿಟ್ಟಿವೆ. 2001ರಲ್ಲಿ ನಿಗದಿಪಡಿಸಿದ ದರದಲ್ಲಿ ಆರು ವರ್ಷಗಳ ನಂತರ 2ಜಿ ತರಂಗಾಂತರದ ಪರವಾನಿಗೆಗಳನ್ನು ವಿತರಿಸುವುದನ್ನು ಆಕ್ಷೇಪಿಸಿ ಆಗ ಹಣಕಾಸು ಖಾತೆಯ ಕಾರ್ಯದರ್ಶಿ ಡಿ.ಸುಬ್ಬಾರಾವ್ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಡಿ.ಎಸ್.ಮಾಥುರ್ ಅವರಿಗೆ 2007ರ ನವೆಂಬರ್ 22ರಂದು ಮೊದಲ ಪತ್ರ ಬರೆದಿದ್ದರು.
ಇಂತಹ ಮಹತ್ವದ ನಿರ್ಧಾರ ಕೈಗೊಂಡಾಗ ಹಣಕಾಸು ಇಲಾಖೆಯ ಜತೆ ಯಾಕೆ ಸಮಾಲೋಚನೆ ನಡೆಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಆ ದಿನದಿಂದ 122 ಪರವಾನಿಗೆಗಳ ವಿತರಣೆಯಾದ 2008ರ ಜನವರಿ ಒಂಬತ್ತರ ವರೆಗೆ ಹಣಕಾಸು ಇಲಾಖೆಯ ಅಧಿಕಾರಿಗಳು ಹತ್ತಾರು ಪತ್ರಗಳನ್ನು ದೂರಸಂಪರ್ಕ ಇಲಾಖೆಗೆ ಬರೆದಿದ್ದಾರೆ. ಇವೆಲ್ಲವೂ ಹಣಕಾಸು ಸಚಿವರಾದ ಪಿ.ಚಿದಂಬರಂ ಅವರ ಗಮನಕ್ಕೆ ಬರದಂತೆ ನಡೆದಿತ್ತು ಎಂದು ಯಾರೂ ಹೇಳಲಾರರು. ಒಂದೊಮ್ಮೆ ಹೇಳಿದರೂ ಅದನ್ನು ಯಾರೂ ನಂಬಲಾರರು.
ಸರ್ಕಾರದ ಯಾವುದೇ ಇಲಾಖೆಯಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ನಡೆಯುವ ವ್ಯವಹಾರದಲ್ಲಿ ಮಧ್ಯೆ ಪ್ರವೇಶಿಸುವ ಅಧಿಕಾರ ಹಣಕಾಸು ಸಚಿವರಿಗೆ ಇದೆ. 2ಜಿ ತರಂಗಾಂತರ ಹಗರಣದಲ್ಲಿ ಚಿದಂಬರಂ ಖಾತೆಯ ಅಧಿಕಾರಿಗಳೇ ರಾಜಾ ಅವರ ನಿರ್ಧಾರಕ್ಕೆ ವಿರುದ್ಧವಾಗಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರಗಳನ್ನು ಬರೆದಿರುವುದಕ್ಕೆ ಪುರಾವೆಗಳಿವೆ (ಆ ಪತ್ರಗಳು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿದವರ ಮೂಲಕ ಈಗ ಬಹಿರಂಗಗೊಂಡಿವೆ). ಸ್ವತಃ ಚಿದಂಬರಂ ಅವರೇ ಹರಾಜು ಪರವಾಗಿ ಇದ್ದರು ಮತ್ತು `ಮೊದಲು ಬಂದವರಿಗೆ ಮೊದಲ ಆದ್ಯತೆ` ನೀತಿಗೆ 2007ರ ನವೆಂಬರ್‌ನಿಂದ 2008ರ ಜನವರಿ 15ರವರೆಗೆ ವಿರುದ್ಧವಾಗಿದ್ದರಂತೆ.
ಆ ಅವಧಿಯಲ್ಲಿ ಅವರು ಹಲವಾರು ಬಾರಿ ಎ.ರಾಜಾ ಅವರನ್ನು ಭೇಟಿ ಮಾಡಿ ಚರ್ಚೆ ಕೂಡಾ ನಡೆಸಿದ್ದರು. ಆದರೆ, ಇದ್ದಕ್ಕಿದ್ದಂತೆ ಅವರು 2008ರ ಜನವರಿ 15ರಂದು ಪ್ರಧಾನಿಗೆ `ಎ.ರಾಜಾ ಅವರ ನಿರ್ಧಾರ ಮುಗಿದ ಅಧ್ಯಾಯ` ಎಂದು ಪತ್ರ ಬರೆದು ಸುಮ್ಮನಾಗುತ್ತಾರೆ. ಈ ದಿಢೀರ್ `ಮೌನಸಮ್ಮತಿ`ಗೆ ಕಾರಣವೇನು? ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡುವ ಸಚಿವ ಎ.ರಾಜಾ ಅವರ ನಿರ್ಧಾರವನ್ನು ತಡೆಯಲು ಅವರು ಯಾಕೆ ಪ್ರಯತ್ನಿಸಲಿಲ್ಲ ಎನ್ನುವುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಚಿದಂಬರಂ ಅವರ ಬೆನ್ನ ಹಿಂದೆ ಇರುವ ಆದೃಷ್ಟದೇವತೆಯೂ ಬೆನ್ನು ತಿರುಗಿಸಬಹುದು.