Showing posts with label ಬೆಳಗಾವಿ ರಾಜಕೀಯ ಸಿಂಡಿಕೇಟ್. Show all posts
Showing posts with label ಬೆಳಗಾವಿ ರಾಜಕೀಯ ಸಿಂಡಿಕೇಟ್. Show all posts

Saturday, April 20, 2013

ಬೆಳಗಾವಿ ಜಿಲ್ಲೆಯ `ಸಿಂಡಿಕೇಟ್ ಪ್ರಜಾಪ್ರಭುತ್ವ'

ಗೋಕಾಕ (ಬೆಳಗಾವಿ ಜಿಲ್ಲೆ) : ಪಾಳೆಪಟ್ಟುಗಳು ಅಳಿದುಹೋಗಿ ಜನರ ಕೈಗೆ ಅಧಿಕಾರ ಬಂದಿದೆ ಎಂದು ಹೇಳುವವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ,ಗೋಕಾಕ, ಅರಬಾವಿ, ಯಮಕನಮರಡಿ ಕಡೆ ಹೋಗಿ ಇಣುಕಿ ಬರಬೇಕು. `ಪ್ರಜೆಗಳು,
ಪ್ರಜೆಗಳಿಗಾಗಿ, ಪ್ರಜೆಗಳಿಂದ... ಎನ್ನುವ ಪ್ರಜಾಪ್ರಭುತ್ವ ತತ್ವಾಧಾರಿತ ವ್ಯಾಖ್ಯಾನಕ್ಕೆ ಇಲ್ಲಿನ ರಾಜಕೀಯದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ. ಇಲ್ಲಿರುವ `ಪ್ರಜಾಪ್ರಭುತ್ವದ ಪಾಳೆಯಗಾರರು' ನಡೆಸುತ್ತಾ ಬಂದಿರುವ ರಾಜಕಾರಣವನ್ನು ಸಾಂಪ್ರದಾಯಿಕ ರೀತಿಯಲ್ಲಿ ವ್ಯಾಖ್ಯಾನಿಸುವುದು ಕಷ್ಟ. ಇಲ್ಲಿರುವುದು `ಸಂಸದೀಯ ಪ್ರಜಾಪ್ರಭುತ್ವ' ಅಲ್ಲವೇ ಅಲ್ಲ, ಇದೊಂದು ರೀತಿಯ `ಸಿಂಡಿಕೇಟ್ ಪ್ರಜಾಪ್ರಭುತ್ವ'.
ಗೋಕಾಕದ ಜಾರಕಿಹೊಳಿ ಸೋದರರು ಮತ್ತು ಹುಕ್ಕೇರಿಯ ಕತ್ತಿ ಸೋದರರು ಕಳೆದ ಕೆಲವು ವರ್ಷಗಳಿಂದ ಸುಭದ್ರವಾದ ಪ್ರತ್ಯೇಕ ರಾಜಕೀಯ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ. ಇವರ ಸಾಲಿನಲ್ಲಿಯೇ ಇರುವ ಪ್ರಭಾಕರ ಕೋರೆ, ಪ್ರಕಾಶ್ ಹುಕ್ಕೇರಿ ಮೊದಲಾದವರ ರಾಜಕೀಯ ಜೀವನ ಕೂಡಾ ಅಷ್ಟೇ ಸುರಕ್ಷಿತವಾಗಿದೆ . ಒಂದು ಕಾಲದಲ್ಲಿ `ಬೆಳಗಾವಿ ಹುಲಿ' ಎಂಬ ಖ್ಯಾತಿ ಪಡೆದಿದ್ದ ವಿ.ಎಲ್.ಪಾಟೀಲ್ ಅವರೂ ನಡೆಸಿದ್ದು ಇದೇ ಮಾದರಿ ರಾಜಕೀಯ. ತಮ್ಮ ಉದ್ಯಮ ಮತ್ತು ರಾಜಕೀಯ ಸಾಮ್ರಾಜ್ಯದ ರಕ್ಷಣೆಗಾಗಿ ಕಟ್ಟಿಕೊಂಡಿರುವ `ರಾಜಕೀಯ ಸಿಂಡಿಕೇಟ್' ಇವರೆಲ್ಲರ ಯಶಸ್ಸಿನ ಗುಟ್ಟು `ಜಾತ್ಯತೀತ ಮತ್ತು ಪಕ್ಷಾತೀತವಾದ ಈ `ಸಿಂಡಿಕೇಟ್' ಯಾವ  ದಾಖಲೆಯಲ್ಲಿಯೂ ಇಲ್ಲ, ಕಣ್ಣಿಗೂ ಕಾಣುವುದಿಲ್ಲ. ಆದರೆ  ಗ್ರಾಮಪಂಚಾಯತ್‌ನಿಂದ ಲೋಕಸಭೆಯ ವರೆಗೆ, ಸಹಕಾರಿ ಬ್ಯಾಂಕ್‌ನಿಂದ ಹಾಲಿನ ಸೊಸೈಟಿ ವರೆಗೆ ನಡೆಯುವ ಎಲ್ಲ ಚುನಾವಣೆಗಳ ಫಲಿತಾಂಶದಲ್ಲಿ ಈ `ಸಿಂಡಿಕೇಟ್'ನ ನೆರಳನ್ನು ಕಾಣಬಹುದು.
ಈಗಿನ ವಿಧಾನಸಭೆಯಲ್ಲಿ ಜಾರಕಿಹೊಳಿ ಕುಟುಂಬದ ಮೂವರು ಸೋದರರು ಸದಸ್ಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಯಮಕನಮರಡಿಯಿಂದ ಮತ್ತು ರಮೇಶ್ ಜಾರಕಿಹೊಳಿ ಗೋಕಾಕ ಕ್ಷೇತ್ರಗಳಿಂದ ಕಾಂಗ್ರೆಸ್ ಹುರಿಯಾಳುಗಳಾಗಿ ಆರಿಸಿ ಬಂದಿದ್ದರು. ಬಾಲಚಂದ್ರ ಜಾರಕಿಹೊಳಿ ಜಾತ್ಯತೀತ ಜನತಾದಳದಿಂದ ಅರಬಾವಿಯಿಂದ ಗೆದ್ದು ನಂತರ ಆಪರೇಷನ್‌ಕಮಲದಲ್ಲಿ ಬಿಜೆಪಿ ಸೇರಿದ್ದಾರೆ. ಈ ಕ್ಷೇತ್ರದ ಪಕ್ಕದಲ್ಲಿಯೇ ಇರುವ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಸದಸ್ಯ ಉಮೇಶ್ ಕತ್ತಿ, ಅವರ ಸೋದರ ರಮೇಶ್ ಕತ್ತಿ ಲೋಕಸಭಾ ಸದಸ್ಯ. ಈ ರೀತಿ ಒಂದೇ ಜಿಲ್ಲೆಯ ಅಕ್ಕಪಕ್ಕದ ಮೂರು ಕ್ಷೇತ್ರಗಳಲ್ಲಿ ಮೂವರು ಸೋದರರು ಶಾಸಕರಾಗಿರುವ ಹಾಗೂ ಪಕ್ಕದ ಕ್ಷೇತ್ರಗಳಲ್ಲಿ ಅಣ್ಣತಮ್ಮಂದಿರು ಶಾಸಕ ಮತ್ತು ಸಂಸದರಾಗಿರುವ ಉದಾಹರಣೆ ದೇಶದಲ್ಲೆಲ್ಲೂ ಇಲ್ಲ.
ಇವರಲ್ಲಿ ಯಾರಿಗೂ ಈಗಿನ ಚುನಾವಣೆಯಲ್ಲಿ ಗೆಲುವಿನ ಬಗ್ಗೆಯೂ ಹೆಚ್ಚಿನ ಚಿಂತೆ ಇಲ್ಲ. ಮತದಾರರ ಅಂತರಂಗದಲ್ಲಿ ಏನೇ ಅಭಿಪ್ರಾಯ ಇದ್ದರೂ ಮತಯಂತ್ರದ ಮೇಲೆ ಕೈಯಾಡಿಸಿದಾಗ ಬೆರಳುಗಳು ತಮ್ಮನ್ನೇ ಆಯ್ಕೆ ಮಾಡುತ್ತವೆ ಎಂಬ ನಂಬಿಕೆ ಇವರಲ್ಲಿದೆ. ಹಿಂದಿನ ಚುನಾವಣೆಗಳ ಫಲಿತಾಂಶದ ಮೇಲೆ ಕಣ್ಣಾಡಿಸಿದರೆ ಈ ನಾಯಕರ ನಂಬಿಕೆ ಹುಸಿಯಾಗಬಹುದು ಎಂದು ಅನಿಸುವುದಿಲ್ಲ. ಉಮೇಶ್ ಕತ್ತಿ ಕಳೆದ ಐದು ಚುನಾವಣೆಗಳನ್ನು ಐದು ಪಕ್ಷಗಳಿಂದ ಗೆದ್ದಿದ್ದಾರೆ. ಆಪರೇಷನ್ ಕಮಲದಲ್ಲಿ ಭಾಗಿಯಾಗಿ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಾಲಚಂದ್ರ ಜಾರಕಿಹೊಳಿ ಉಪಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಮರುಆಯ್ಕೆಯಾಗಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿದ್ದ ಸತೀಶ್ ಜಾರಕಿಹೊಳಿ ಕ್ಷೇತ್ರವಿಂಗಡಣೆಯ ನಂತರ ಯಮಕನಮರಡಿ ಎಂಬ ಹೊಸ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.
ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡಾ ಬೆಳಗಾವಿ ಜಿಲ್ಲೆಯ `ಸಿಂಡಿಕೇಟ್' ರಾಜಕೀಯದ ಒಳನೋಟವನ್ನು ನೀಡುತ್ತದೆ. ಈ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 361 ಕ್ಷೇತ್ರಗಳ ಪೈಕಿ 196 ಪಕ್ಷೇತರರ ಪಾಲಾಗಿವೆ. ಗೋಕಾಕ ನಗರಸಭೆಯ 31ಕ್ಕೆ 31 ಸ್ಥಾನಗಳಲ್ಲಿ, ಚಿಕ್ಕೋಡಿ ಪುರಸಭೆಯ 23ಕ್ಕೆ 23ರಲ್ಲಿ, ಖಾನಾಪುರ ಪಟ್ಟಣ ಪಂಚಾಯತ್‌ನ 16ಕ್ಕೆ 16ರಲ್ಲಿ, ಚಿಕ್ಕೊಡಿ ಸದಲಗಾ ಪಟ್ಟಣ ಪಂಚಾಯತ್‌ನ 20ಕ್ಕೆ 20ರಲ್ಲಿ, ಗೋಕಾಕದ ಕೊಣ್ಣೂರು ಪಟ್ಟಣಪಂಚಾಯತ್‌ನ 17ಕ್ಕೆ 15ರಲ್ಲಿ ಪಕ್ಷೇತರರು ಆರಿಸಿ ಬಂದಿದ್ದಾರೆ. ಅಲ್ಲೆಲ್ಲ ಬೇರೆಬೇರೆ ಪಕ್ಷಗಳಿಗೆ ಸೇರಿರುವ ಶಾಸಕರಿದ್ದಾರೆ. ಆದರೆ ಅವರ ಪಕ್ಷದ ಸದಸ್ಯರೇ ಅಲ್ಲ, ಹೇಗೆ? ಮನಸ್ಸು ಮಾಡಿದರೆ ಈ ಶಾಸಕರು ತಮ್ಮ ಪಕ್ಷದ ಸದಸ್ಯರನ್ನೂ ಗೆಲ್ಲಿಸಬಲ್ಲರು ಎನ್ನುವುದಕ್ಕೆ ಹುಕ್ಕೇರಿ ಸಾಕ್ಷಿ.
ಇಲ್ಲಿನ ಶಾಸಕರಾದ ಉಮೇಶ್ ಕತ್ತಿಯವರು ಬಿಜೆಪಿಯೋ, ಕೆಜೆಪಿಯೋ ಎನ್ನುವ ಗೊಂದಲದಲ್ಲಿರುವಾಗಲೇ ಇಲ್ಲಿನ ಪಟ್ಟಣ ಪಂಚಾಯತ್‌ನ 19ರಲ್ಲಿ 18 ಸ್ಥಾನಗಳಲ್ಲಿ ಮತ್ತು ಇದೇ ಕ್ಷೇತ್ರಕ್ಕೆ ಸೇರಿದ ಸಂಕೇಶ್ವರ ಪುರಸಭೆಯ 23ಕ್ಕೆ 22ರಲ್ಲಿ ಬಿಜೆಪಿ ಗೆದ್ದಿದೆ. ತಮ್ಮ ಪಕ್ಷದ ಶಾಸಕರು ಇರುವ ಕಡೆಗಳಲ್ಲಿ ಪಕ್ಷದ ಸದಸ್ಯರು ಯಾಕೆ ಆರಿಸಿ ಬಂದಿಲ್ಲ ಎಂದು ಆ ಪಕ್ಷಗಳು ಕೇಳಬೇಕಲ್ಲವೇ? ಉದಾಹರಣೆಗೆ ಗೋಕಾಕ ನಗರಸಭೆ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿಯವರ ವ್ಯಾಪ್ತಿಯಲ್ಲಿ ಬರುತ್ತದೆ. ಅವರನ್ನು ಯಾರು ಕೇಳಿದ್ದಾರೆ? ಆರಿಸಿಬಂದಿರುವ ಪಕ್ಷೇತರರಲ್ಲಿ ಬಹುಸಂಖ್ಯಾತರು ಸ್ಥಳೀಯ ಶಾಸಕರ ಅನುಯಾಯಿಗಳು. ಉಳಿದವರನ್ನು ಶಾಸಕರು `ಮ್ಯಾನೇಜ್' ಮಾಡ್ತಾರೆ. ಆಡಳಿತದ ಸೂತ್ರ ಮಾತ್ರ ಶಾಸಕರ ಕೈಯಲ್ಲಿರುತ್ತದೆ. ಇದು ಒಟ್ಟು ಕಾರ್ಯತಂತ್ರ.
ಇಷ್ಟೊಂದು ಲೀಲಾಜಾಲವಾಗಿ ಚುನಾವಣೆಯಲ್ಲಿ ಗೆಲ್ಲಲು `ಸಿಂಡಿಕೇಟ್ ರಾಜಕಾರಣ' ಒಂದೇ ಅಲ್ಲದೆ ಬೇರೆ ಕಾರಣಗಳೂ ಇವೆ. ಜಾರಕಿಹೊಳಿ, ಕತ್ತಿ,ಕೋರೆ ಮೊದಲಾದವರ ಮೊದಲ ಆಸಕ್ತಿ ರಾಜಕೀಯ ಅಲ್ಲ ಉದ್ಯಮ. ಉಮೇಶ್ ಕತ್ತಿಯವರು ಖಾಸಗಿ ಸಕ್ಕರೆ ಕಾರ್ಖಾನೆಯ ಮಾಲೀಕರು ಮಾತ್ರವಲ್ಲ, ಸಹಕಾರಿ ಸಕ್ಕರೆ ಕಾರ್ಖಾನೆಯೊಂದು ಕೂಡಾ ಅವರ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ ಇಲ್ಲಿ ಮಾತ್ರ ಇರುವ ಸಹಕಾರಿ ವಿದ್ಯುತ್ ವಿತರಣಾ ಸಂಘದ ಜತೆ ಹುಕ್ಕೇರಿ ಕ್ಷೇತ್ರದಲ್ಲಿರುವ ಸಹಕಾರಿ ರಂಗದ ಎಲ್ಲ ಸಂಸ್ಥೆಗಳು ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಕತ್ತಿ ಅವರ ಹಿಡಿತದಲ್ಲಿವೆ. ಇದರ ಜತೆಗೆ ಶಿಕ್ಷಣ ಸಂಸ್ಥೆಗಳಿವೆ. ಜಾರಕಿಹೊಳಿ ಕುಟುಂಬ ಒಂದು ಕಾಲದಲ್ಲಿ ಅಬಕಾರಿ ಉದ್ಯಮದಲ್ಲಿದ್ದವರು. ಸಾರಾಯಿ ನಿಷೇಧದ ನಂತರ ಸ್ವಲ್ಪ ಹಿನ್ನಡೆಯಾದರೂ ಸಂಪೂರ್ಣವಾಗಿ ಮದ್ಯದ ಉದ್ಯಮವನ್ನು ಬಿಟ್ಟಿಲ್ಲ. ಸತೀಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಕ್ಕರೆ ಕಾರ್ಖಾನೆಗಳಿವೆ. ಇದರ ಜತೆಗೆ ಬೆಂಗಳೂರಿನಿಂದ ಬೆಳಗಾವಿ ವರೆಗೆ ಬೇರೆಬೇರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದ್ದಾರೆ. ರಾಜಕೀಯಕ್ಕೆ ಬೇಕಾದ ದುಡ್ಡಿನ ಅವಶ್ಯಕತೆ ಪೂರೈಸಲು ಗುತ್ತಿಗೆದಾರರು ಇದ್ದೇ ಇರುತ್ತಾರೆ.
ಹಾಗಿದ್ದರೆ ದುಡ್ಡೊಂದೇ ಇವರ ರಾಜಕೀಯ ಯಶಸ್ಸಿಗೆ ಕಾರಣವೇ? ಇವರಿಗಿಂತ ನೂರಾರು ಪಟ್ಟು ಶ್ರಿಮಂತರು ರಾಜ್ಯದಲ್ಲಿದ್ದಾರೆ, ವಿಧಾನಸಭೆಯ ಒಂದು ಟಿಕೆಟ್‌ಗಾಗಿ ಕೋಟಿ-ಕೋಟಿ ರೂಪಾಯಿ ಚೆಲ್ಲುವವರಿದ್ದಾರೆ.  ಅವರಿಗೆ ಯಾಕೆ ರಾಜಕೀಯ ಯಶಸ್ಸು ಸಿಗಲಿಲ್ಲ ಎನ್ನುವ ಪ್ರಶ್ನೆಯೂ ಇದೆ. ಕಾರಣಗಳು ಬೇರೆ ಇವೆ. ಮಹಾರಾಷ್ಟ್ರದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಲಾಬಿಯ ಸೋಂಕು ಆ ರಾಜ್ಯದ ಗಡಿಭಾಗದಲ್ಲಿರುವ ಬೆಳಗಾವಿಗೂ ತಗಲಿದೆ. ದೇಶದಲ್ಲಿ ಈ ರೀತಿಯ `ಸಿಂಡಿಕೇಟ್ ರಾಜಕಾರಣ'ಕ್ಕೆ ಖ್ಯಾತಿಯೋ, ಕುಖ್ಯಾತಿಯೋ ಪಡೆದವರು ಶರದ್ ಪವಾರ್. ಇಲ್ಲಿನ ರಾಜಕೀಯ ಬಹುಪಾಲು ಅವರ ತಂತ್ರವನ್ನು ಹೋಲುತ್ತದೆ.
ಇವರಲ್ಲಿ ಯಾರಿಗೂ ತಾವಿದ್ದ ಪಕ್ಷದ ಮೇಲೆ ಕಟ್ಟಾ ನಿಷ್ಠೆ ಇಲ್ಲ. ಇವರ ರಾಜಕೀಯ ಜೀವನದ ಪಕ್ಷಾಂತರಗಳ ಇತಿಹಾಸವೇ ಇದಕ್ಕೆ ಸಾಕ್ಷಿ.   ರಾಜಕೀಯ ಎದುರಾಳಿಗಳು ತಲೆಎತ್ತದಂತೆ ನಿರ್ನಾಮ ಮಾಡಿಬಿಡುವುದು, ಜನತೆಯ ಪಾಲುದಾರಿಕೆ ಇರುವ ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ, ಪಕ್ಷಾತೀತವಾಗಿ ರಾಜಕೀಯ ನಾಯಕರ ಜತೆ ಸೌಹಾರ್ದಯುತ ಹೊಂದಾಣಿಕೆ ಮತ್ತು ಮತದಾರರ ತಲೆ ಮೇಲೆ ವೈಯಕ್ತಿಕ ಋಣಭಾರದ ಹೇರಿಕೆ- ಇದು ಇವರ ರಾಜಕೀಯ ಕಾರ್ಯಚರಣೆಯ ಮೋಡಸ್ ಅಪರೆಂಡಿ. ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿ ದುರ್ಬಲ ವಾಗಿರುವಂತೆ ತಮ್ಮೆಲ್ಲ ಸಂಪರ್ಕ -ಸಾಮರ್ಥ್ಯವನ್ನು ಬಳಸಿಕೊಂಡು ಇವರು ಪರಸ್ಪರ ನೆರವಾಗುತ್ತಾರೆ. ಉದಾಹರಣೆಗೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಉಮೇಶ್ ಕತ್ತಿ ಜನತಾದಳ ಇಲ್ಲವೆ ಬಿಜೆಪಿಯಿಂದ ಸ್ಪರ್ಧಿಸಿದಾಗ `ಸಿಂಡಿಕೇಟ್'ನಲ್ಲಿರುವ ಕಾಂಗ್ರೆಸ್ ಸದಸ್ಯರು ಅವರ ಎದುರು ದುರ್ಬಲ ಅಭ್ಯರ್ಥಿ ಕಣಕ್ಕಿಳಿಸುವಂತೆ ನೋಡಿಕೊಳ್ಳುತ್ತಾರೆ.
ಅರಬಾವಿಯಿಂದ ಬಾಲಚಂದ್ರ ಜಾರಕಿಹೊಳಿ ಜೆಡಿ(ಎಸ್)ನಿಂದ ಸ್ಪರ್ಧಿಸಿದಾಗ ಅವರ ಎದುರಾಳಿಯಾಗಿದ್ದದ್ದು ಕಾಂಗ್ರೆಸ್‌ನ ದುರ್ಬಲ ಅಭ್ಯರ್ಥಿ. ಪಕ್ಷ ಯಾವುದೇ ಇರಲಿ ಇಡೀ ಜಾರಕಿಹೊಳಿ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ಮೇಲೆ ಇರುವ ನಿಷ್ಠೆಯೂ ಇದಕ್ಕೆ ನೆರವಾಗಿದೆ ಎಂಬ ಆರೋಪ ಇದೆ. ಹುಕ್ಕೇರಿ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿರುವ ಉಮೇಶ್ ಕತ್ತಿ ಎದುರು ವಿರೋಧ ಪಕ್ಷಗಳು ಬಲಿಷ್ಠ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇ ಅಪರೂಪ. ಇದ್ದ ಒಬ್ಬ ವಿರೋಧಿ ಎ.ಬಿ.ಪಾಟೀಲ್ ಕ್ಷೇತ್ರ ವಿಂಗಡಣೆಯ ನಂತರ ಅನಾಥರಾಗಿದ್ದಾರೆ. ಅಂತರಂಗದಲ್ಲಿ ದ್ವೇಷಾಸೂಯೆಗಳಿದ್ದರೂ ಸಾಮಾನ್ಯವಾಗಿ `ಸಿಂಡಿಕೇಟ್' ಸದಸ್ಯರು ಒಬ್ಬರು ಮತ್ತೊಬ್ಬರ ಕಾರ್ಯಕ್ಷೇತ್ರಕ್ಕೆ ಅಕ್ರಮವಾಗಿ ಪ್ರವೇಶ ಮಾಡುವುದಿಲ್ಲ.
ಇವರೆಲ್ಲರೂ ತಮ್ಮ ಜನಪ್ರಿಯತೆಯಿಂದಲೇ ಆರಿಸಿಬರುತ್ತಾರೆ ಎಂದು ಹೇಳಲಿಕ್ಕೂ ಆಗದು. ಜನರನ್ನು ಮಾತಿಗೆಳೆದರೆ ಇದು ಸ್ಪಷ್ಟವಾಗುತ್ತದೆ. `ಇವರನ್ನು ಸೋಲಿಸುವ ಅಭ್ಯರ್ಥಿಗಳು ಬೇಕಲ್ಲಾ? ಅಂತಹವರು ಬಂದರೆ ಜನಾನೂ ಬದಲಾವಣೆಗೆ ಸಿದ್ಧರಾಗಬಹುದು. ಉಳಿದವರನ್ನು ಬೆಳೆಯಲಿಕ್ಕೆ ಬಿಡುವುದೇ ಇಲ್ಲವಲ್ಲಾ?' ಎಂದ ಯರಗಟ್ಟಿಯಲ್ಲಿ ಸಿಕ್ಕ ರೈತ ಶಿವನಗೌಡ ಪಾಟೀಲರ ಅಭಿಪ್ರಾಯವೇ ಈ ಕ್ಷೇತ್ರಗಳ ಬಹಳ ಮಂದಿಯಲ್ಲಿದೆ. ಇವರೆಲ್ಲರ ಮಾತು ಕೇಳಿದರೆ ಈ ಅಸಹಾಯಕ ಜನ ತಮ್ಮನ್ನು ರಾಜಕೀಯ ಗುಲಾಮಗಿರಿಯಿಂದ ಪಾರು ಮಾಡಲು `ಕುದುರೆ ಏರಿ ಬರುವ ಸರದಾರ'ನಿಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ. ಆ `ಸರದಾರ' ಸದ್ಯಕ್ಕೆ ಬರುವ ಹಾಗೆ ಕಾಣುವುದಿಲ್ಲ.