Monday, November 5, 2012

ರಾಹುಲ್ ಭವಿಷ್ಯ ಅವರ ಕೈಯಲ್ಲಿಯೇ ಇದೆ Nov 05 2012


ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ತಾನು ಹೋದಲ್ಲೆಲ್ಲಾ `ಇಸ್ ಪ್ರದೇಶ್ ಕಾ ಭವಿಷ್ಯ್ ಆಫ್ ಕಾ ಹಾಥ್ ಮೇ ಹೈ~ ಎಂದು ಕೈ ಎತ್ತಿ ಎತ್ತಿ ಹೇಳುತ್ತಿದ್ದರು. ರಾಹುಲ್ ಲಖನೌದ ಸಾರ್ವಜನಿಕ ಸಭೆಯಲ್ಲಿ ಇದೇ ರೀತಿ ಹೇಳುತ್ತಿದ್ದಾಗ ಪಕ್ಕದಲ್ಲಿದ್ದ ಪತ್ರಕರ್ತ ಗೆಳೆಯನೊಬ್ಬ `ಉತ್ತರಪ್ರದೇಶ್ ಕಾ ನಹೀ, ಆಪ್ ಕಾ ಭವಿಷ್ಯ್~ ಎಂದು ಕಣ್ಣುಮಿಟುಕಿಸಿ ನಕ್ಕಿದ್ದ.
`2007ರ ಚುನಾವಣೆಯ ಕಾಲದಲ್ಲಿ ನಾನಿಲ್ಲಿ ಬಂದಿದ್ದಾಗಲೂ ನೀವೆಲ್ಲ ಹೀಗೆಯೇ ಹೇಳಿದ್ದ ನೆನಪು, ಆದರೆ 403 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 25 ಸ್ಥಾನಗಳನ್ನು ಗೆದ್ದರೂ ರಾಹುಲ್ ಭವಿಷ್ಯ ಮಂಕಾಗಲಿಲ್ಲವಲ್ಲಾ? ಆತ ಈಗಲೂ ನಾಯಕನಲ್ಲವೇ?~ ಎಂದು ಆ ಗೆಳೆಯನನ್ನು ಕಿಚಾಯಿಸಿದ್ದೆ. ಹೌದು ಇದು ವಂಶಪರಂಪರೆಯ ಶಕ್ತಿ.
ಯಾವಾಗಲೂ ಹೀಗೆ, ಮೇಲೇರುವುದು ಸುಲಭ, ಏರಿರುವ ಎತ್ತರವನ್ನು ಉಳಿಸಿಕೊಳ್ಳುವುದು ಕಷ್ಟ. ರಾಹುಲ್‌ಗಾಂಧಿ ಈಗ ಎದುರಿಸುತ್ತಿರುವುದು ಈ ಕಷ್ಟವನ್ನು. ನಿರೀಕ್ಷೆಯ ಭಾರದಿಂದ ಆಗಲೇ ಅವರು ಬಗ್ಗಿಹೋಗಿದ್ದಾರೆ.
ಕಾಂಗ್ರೆಸ್ ಪಕ್ಷ ಮಾತ್ರ ಅಲ್ಲ, ಇಡೀ ದೇಶದ ಕಣ್ಣು ರಾಹುಲ್‌ಗಾಂಧಿ ಕಡೆಗಿದೆ. ಇನ್ನೇನು ಕೇಂದ್ರ ಸಚಿವ ಸಂಪುಟ ಸೇರಿಯೇ ಬಿಡುತ್ತಾರೆ ಎಂಬ ಊಹಾಪೋಹ ಪುನರ‌್ರಚನೆಯ ಹಿಂದಿನ ಕ್ಷಣದ ವರೆಗೂ ಕೇಳಿಬಂದಿತ್ತು. ಈ ಬಾರಿಯೂ ಅವರು ಧೈರ್ಯ ತೋರಲಿಲ್ಲ. ಹಾಗಾಗದಿದ್ದರೂ ಸಣ್ಣಖಾತೆಗಳನ್ನು ಹೊಂದಿದ್ದ ಯುವಸಚಿವರಿಗೆ ನೀಡಲಾಗಿರುವ ಬಡ್ತಿಯನ್ನೇ `ಸಂಪುಟಕ್ಕೆ ಯುವ ರಕ್ತ~ ಎಂದು ಬಣ್ಣಿಸಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ಮತ್ತು ಪಕ್ಷದ ಪ್ರತಿಯೊಂದು ನಿರ್ಧಾರದಲ್ಲಿಯೂ ಮಾಧ್ಯಮಗಳ ಕಣ್ಣಿಗೆ `ರಾಹುಲ್ ಮೊಹರು~  ಕಾಣುತ್ತಿದೆ. ಭಾರತದ ಯಾವ ಯುವ ರಾಜಕಾರಣಿಗೆ ಈ ಅನುಕೂಲತೆಗಳು ಒದಗಿ ಬಂದಿವೆ? ಆದರೆ  ಇವುಗಳನ್ನೆಲ್ಲ ಬಳಸಿಕೊಂಡು ರಾಹುಲ್‌ಗಾಂಧಿ ಬೆಳೆದಿದ್ದಾರೆಯೇ ಎನ್ನುವುದು ಪ್ರಶ್ನೆ. ರಾಜಕೀಯದಲ್ಲಿ ಅನುಕೂಲತೆಗಳನ್ನೇ ಬಳಸಿಕೊಳ್ಳಲಾಗದವರು ಅನಾನೂಕುಲತೆಗಳನ್ನು ಹೇಗೆ ಎದುರಿಸಲು ಸಾಧ್ಯ?
ರಾಹುಲ್‌ಗಾಂಧಿಯ ರಾಜಕೀಯ ಪ್ರವೇಶದ ನಂತರದ ಎಂಟುವರ್ಷಗಳ ಅವಧಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ` ಈ ಯುವ ನಾಯಕ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ~ ಎಂದು ಅನಿಸಿಬಿಡುತ್ತದೆ. ಉತ್ತರಪ್ರದೇಶದ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು `ಈ ಬಾರಿ ನೀವು ಅಲ್ಲಿಗೆ ಹೋಗಿದ್ದಾಗ ರಾಹುಲ್‌ನಲ್ಲಿ ಏನಾದರೂ ಬದಲಾವಣೆಯನ್ನು ಕಾಣಲು ಸಾಧ್ಯವಾಯಿತೇ?~ಎಂದು ಬಹಳ ನಿರೀಕ್ಷೆಯಿಂದ ನನ್ನನ್ನು ಕೇಳಿದ್ದರು. ಆಗಿನ್ನೂ ಚುನಾವಣೆಯ ಫಲಿತಾಂಶ ಪ್ರಕಟವಾಗಿರಲಿಲ್ಲ.
 `ಚುನಾವಣೆಗೆ ಮೊದಲೇ ನಡೆಸಿದ್ದ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ವಹಿಸಿದ್ದ ಪಾತ್ರ, ಆಕ್ರಮಣಕಾರಿ ಪ್ರಚಾರ ಶೈಲಿ, ಕೆಲವೆಡೆ ಸಡಿಲಗೊಂಡರೂ ಆತ್ಮವಿಶ್ವಾಸದಿಂದ ಕೂಡಿದ ಮಾತುಗಳು ಇವೆಲ್ಲವನ್ನೂ ನೋಡಿದಾಗ ಕೊನೆಗೂ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿತ್ತು.
ಆದರೆ ಒಬ್ಬ ರಾಜಕೀಯ ನಾಯಕನ ನಿಜವಾದ ಬಣ್ಣ ಗೊತ್ತಾಗುವುದು ಚುನಾವಣೆಯಲ್ಲಿ ಸೋತಾಗ ನಡೆದುಕೊಳ್ಳುವ ರೀತಿಯಿಂದ. ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ಕುಗ್ಗಿಹೋಗದೆ ಮರುದಿನದಿಂದಲೇ ಪಕ್ಷ ಸಂಘಟನೆಗಾಗಿ ಉತ್ತರಪ್ರದೇಶದಲ್ಲಿ ಓಡಾಡಿದರೆ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ ಎಂದು ಹೇಳಬಹುದು.
ಮತದಾನ ಮುಗಿದ ಮರುದಿನವೇ ದಣಿವಾರಿಸಿಕೊಳ್ಳಲು ವಿದೇಶಕ್ಕೆ ಹಾರಿದರೆ ಆತ ಗಂಭೀರವಾಗಿಲ್ಲ ಎಂದು ಹೇಳಬೇಕಾಗುತ್ತದೆ~ ಎಂದು ಅವರಿಗೆ ಉತ್ತರಿಸಿದ್ದೆ. ಫಲಿತಾಂಶ ಪ್ರಕಟವಾದ ಕೆಲವು ದಿನಗಳ ನಂತರ ರಾಹುಲ್ ಯಾವುದೋ ದೇಶಕ್ಕೆ ಹೋಗಿ ಹಲವು ದಿನಗಳನ್ನು ಹಾಯಾಗಿ ಕಳೆದು ಬಂದಿದ್ದರು. ನನಗೆ ನಿರಾಶೆಯಾಗಿರಲಿಲ್ಲ, ಯುವನಾಯಕನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಕಾಂಗ್ರೆಸ್‌ನ ಆ ಹಿರಿಯರಿಗೆ ನಿರಾಶೆಯಾಗಿತ್ತು.
ರಾಜಕೀಯ ಎನ್ನುವುದು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ತೊಡಗಿಕೊಳ್ಳಬೇಕಾದ ಗಂಭೀರ ವೃತ್ತಿ. ಐದು ದಿನ ಕೆಲಸ ಮಾಡಿ ವಾರಾಂತ್ಯದ ಎರಡು ದಿನಗಳನ್ನು ಎಲ್ಲಿಯೋ ಮೋಜಿನ ತಾಣದಲ್ಲಿ ಕಳೆದು ದಣಿವಾರಿಸಿಕೊಳ್ಳುವ ಕಾರ್ಪೋರೇಟ್ ಉದ್ಯೋಗ ಅಲ್ಲ. ಖಾದಿ ಜುಬ್ಬಾಪೈಜಾಮ ಧರಿಸಿ ಹಳ್ಳಿಗಳಲ್ಲಿ ತಿರುಗಾಡಿ, ದಲಿತರ ಮನೆಗಳಲ್ಲಿ ಒಂದು ತುಂಡು ರೊಟ್ಟಿ ತಿಂದು ನಂತರ ದೆಹಲಿಗೆ ಹೋಗಿ ಟೀಶರ್ಟ್, ಜೀನ್ಸ್‌ಪ್ಯಾಂಟ್ ಧರಿಸಿ `ಪೇಜ್ ತ್ರಿ~ಪಾರ್ಟಿಗೆ ಹೋಗಿ ಕುಣಿಯುವುದರಿಂದ ರಾಜಕೀಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲ. ಭಾರತದ ಮತದಾರರ ಮನಸ್ಥಿತಿ ಕೂಡಾ ಭಿನ್ನ.
ಇಲ್ಲಿನ ಮತದಾರರು ಆತ್ಮವಿಶ್ವಾಸದಿಂದ ಕೂಡಿದ  ಆಕ್ರಮಣಕಾರಿ ನಡವಳಿಕೆಯ ಮತ್ತು ಕ್ಷಿಪ್ರನಿರ್ಧಾರ ಕೈಗೊಳ್ಳುವ ಧೈರ್ಯವಂತ ನಾಯಕರನ್ನು ಇಷ್ಟಪಡುತ್ತಾರೆ. ಅಂತರ್ಮುಖಿಯಾದ, ಸೌಮ್ಯಸ್ವಭಾವದ ಮತ್ತು ನಿರ್ಧಾರಕೈಗೊಳ್ಳಲು ಹಿಂಜರಿಯುವ ಪುಕ್ಕಲುತನದ ನಾಯಕರು ಅವರ ಆಯ್ಕೆ ಅಲ್ಲ.  ಒಂದೆರಡು ಕಡೆ  ಜುಬ್ಬಾದ ತೋಳುಗಳನ್ನು ಮೇಲೆತ್ತಿ ವೀರಾವೇಶದ ಭಾಷಣ ಮಾಡಿದ ಕೂಡಲೇ ಯಾರೂ ನಾಯಕರಾಗುವುದಿಲ್ಲ. ರಾಹುಲ್‌ಗಾಂಧಿ ತಾನೊಬ್ಬ ಕಸುಬುದಾರ ರಾಜಕಾರಣಿಯೆಂದು ಇನ್ನೂ ಸಾಬೀತುಪಡಿಸಿಲ್ಲ.
ರಾಹುಲ್‌ಗಾಂಧಿಗೆ ಹೋಲಿಸಿದರೆ ತಾಯಿ ಸೋನಿಯಾಗಾಂಧಿಯೇ ನಿಜವಾದ ನಾಯಕಿಯಂತೆ ಕಾಣುತ್ತಾರೆ. ಗಂಡ ರಾಜಕೀಯ ಪ್ರವೇಶ ಮಾಡುವುದರ ವಿರುದ್ಧ `ಹುಲಿಯಂತೆ ಹೋರಾಟ~ ಮಾಡಿದ್ದ ಸೋನಿಯಾಗಾಂಧಿ ಅನಿವಾರ್ಯವಾಗಿ ಪ್ರವೇಶ ಮಾಡಿದ ರಾಜಕೀಯದಲ್ಲಿ ಉಳಿಯಲು ಅದೇ ರೀತಿಯ ಹೋರಾಟ ನಡೆಸುತ್ತಾ ಬಂದಿದ್ದಾರೆ. ಪಕ್ಷ ಎದುರಿಸಿದ ಸೋಲಿನ ಸರಮಾಲೆ, ವಿದೇಶಿ ಮಹಿಳೆ ಎಂಬ ಚುಚ್ಚುನುಡಿ, ನಾಡಿನ ಭಾಷೆ-ಸಂಸ್ಕೃತಿ ಗೊತ್ತಿಲ್ಲದ ಪರಕೀಯ ಭಾವನೆ... ಇವೆಲ್ಲದರ ವಿರುದ್ಧ ಹೋರಾಡುತ್ತಲೇ ಬಂದಿರುವ ಸೋನಿಯಾಗಾಂಧಿ ಇತ್ತೀಚೆಗೆ ತನ್ನ  ಅನಾರೋಗ್ಯದ ವಿರುದ್ಧವೂ ಹೋರಾಟ ನಡೆಸಿದ್ದಾರೆ. ಮಗ ಅಮ್ಮನಿಂದಾದರೂ ಪ್ರೇರಣೆ ಪಡೆಯಬಾರದೇ?
ಸಂಪುಟ ಸೇರಲು ಪ್ರಧಾನಿ ಮನಮೋಹನ್‌ಸಿಂಗ್ ನೀಡುತ್ತಲೇ ಇರುವ ಆಹ್ಹಾನದ ನಿರಾಕರಣೆಯಲ್ಲಿಯೂ ಪೂರ್ಣಪ್ರಮಾಣದ ರಾಜಕೀಯ ನಾಯಕನ ಪಾತ್ರವಹಿಸಲು ಹಿಂದೇಟು ಹಾಕುತ್ತಿರುವ ರಾಹುಲ್‌ಗಾಂಧಿಯ ದೌರ್ಬಲ್ಯವನ್ನು ಕಾಣಬಹುದು. ಯುಪಿಎ ಎರಡನೆ ಅವಧಿಯಲ್ಲಿಯಾದರೂ ರಾಹುಲ್ ಸಂಪುಟ ಸೇರಿ ಅನುಭವ ಗಳಿಸಿಕೊಳ್ಳಬಹುದಿತ್ತು. ರಾಜೀವ್‌ಗಾಂಧಿ ತನ್ನೆಲ್ಲ ಒಳ್ಳೆಯತನ ಮತ್ತು ಜನಪರ ಕಾಳಜಿಯ ಹೊರತಾಗಿಯೂ ವಿಫಲಗೊಳ್ಳಲು ಕಾರಣ ಅನುಭವದ ಕೊರತೆ ಎನ್ನುವುದನ್ನು ರಾಹುಲ್ ಅರ್ಥಮಾಡಿಕೊಂಡಿಲ್ಲ. ಈ ಕೊರತೆಯನ್ನು ನೀಗಿಸಲು ಗೆಳೆಯರ ಗುಂಪಿನ ಮೊರೆಹೋದ ರಾಜೀವ್‌ಗಾಂಧಿ ಅವರ ಮಾತುಕೇಳಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದರು.
ಅವರಿಗೆ ಎರಡನೆ ಅವಧಿ ಸಿಕ್ಕಿಬಿಟ್ಟಿದ್ದರೆ ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಗುತ್ತಿದ್ದರೇನೋ? ಪ್ರಧಾನಿಯಾದ ನಂತರ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಮಹಾಅಧಿವೇಶನದಲ್ಲಿ ಮಾತನಾಡಿದ್ದ ರಾಜೀವ್ `ಪಕ್ಷದಲ್ಲಿ ಅಧಿಕಾರದ ದಲ್ಲಾಳಿಗಳಿದ್ದಾರೆ~ ಎಂದು ಹೇಳಿ ಸೇರಿದ್ದವರನ್ನು ಬೆಚ್ಚಿಬೀಳಿಸಿದ್ದರು. ಅಂತಹ ದಿಟ್ಟತನವನ್ನು ಪ್ರದರ್ಶಿಸಿದ್ದಕ್ಕಾಗಿಯೇ ಅರುಣ್‌ಶೌರಿಯವರಂತಹ ನೆಹರೂ ಕುಟುಂಬದ ಕಟುಟೀಕಾಕಾರ ಪತ್ರಕರ್ತರೂ ಒಂದಷ್ಟು ಕಾಲ ರಾಜೀವ್‌ಗಾಂಧಿ ಅಭಿಮಾನಿಗಳಾಗಿಬಿಟ್ಟಿದ್ದರು.
ಬಹಳಷ್ಟು ಮಂದಿ ರಾಹುಲ್‌ಗಾಂಧಿಯನ್ನು ಅಪ್ಪ ರಾಜೀವ್‌ಗಾಂಧಿಗೆ ಹೋಲಿಸುತ್ತಾರೆ. ರೂಪವೊಂದನ್ನು ಬಿಟ್ಟರೆ ಇಬ್ಬರ ನಡುವೆ ಸಮಾನ ಅಂಶಗಳು ಕಡಿಮೆ ಎಂದೇ ಹೇಳಬೇಕಾಗುತ್ತದೆ. ಮೊದಲನೆಯದಾಗಿ ರಾಜೀವ್ ತಾನು ಪ್ರೀತಿಸಿದ್ದ ಕ್ರಿಶ್ಚಿಯನ್ ಧರ್ಮದ ವಿದೇಶಿ ಹುಡುಗಿಯನ್ನು 21ನೇ ವರ್ಷಕ್ಕೆ ಮದುವೆಯಾಗುವ ಧೈರ್ಯ ತೋರಿಸಿದ್ದರು. 26ನೇ ವರ್ಷಕ್ಕೆ ರಾಹುಲ್‌ಗಾಂಧಿ ಹುಟ್ಟಿಯೇ ಬಿಟ್ಟಿದ್ದರು. ನಲ್ವತ್ತೆರಡು ದಾಟಿದರೂ ರಾಹುಲ್‌ಗಾಂಧಿಗೆ ತನ್ನ ಮದುವೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.   ರಾಜಕೀಯ ಪ್ರವೇಶ ರಾಜೀವ್‌ಗಾಂಧಿಯವರ ಜೀವನದ ಉದ್ದೇಶವಾಗಿರಲಿಲ್ಲ.
ಸೋದರ ಸಂಜಯ್‌ಗಾಂಧಿ ಸಾವಿನ ನಂತರ ತಾಯಿಗೆ ನೆರವಾಗಲು ಒಲ್ಲದ ಮನಸ್ಸಿನಿಂದ ಅವರು ರಾಜಕೀಯ ಪ್ರವೇಶಿಸಬೇಕಾಯಿತು. ಆದರೆ ರಾಜಕೀಯದಲ್ಲಿ ನೆಹರೂ ಕುಟುಂಬದ ಪರಂಪರೆಯನ್ನು ಉಳಿಸಿಕೊಳ್ಳಲು ಇಂದಲ್ಲ ನಾಳೆ ರಾಜಕೀಯ ಪ್ರವೇಶಿಸುವುದು ಅನಿವಾರ್ಯ ಎಂದು ರಾಹುಲ್‌ಗಾಂಧಿಗೆ ಗೊತ್ತಿತ್ತು. ರಾಜೀವ್ ಗಾಂಧಿಯಂತೆ ರಾಜಕೀಯ ಮಾರ್ಗದರ್ಶನ ನೀಡಲು ಇಂದಿರಾಗಾಂಧಿಯಂತಹ ತಾಯಿ ರಾಹುಲ್‌ಗೆ ಇರಲಿಲ್ಲ ನಿಜ, ಆದರೆ ಮಾನಸಿಕವಾಗಿ ಸಿದ್ಧಗೊಳ್ಳಲು ಅವರಿಗೆ ಬೇಕಾದಷ್ಟು ಕಾಲಾವಕಾಶ ಇತ್ತು. ರಾಜೀವ್‌ಗಾಂಧಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು 37ನೇ ವರ್ಷದಲ್ಲಿ, ಅವರಿಗಿಂತ ಮೂರುವರ್ಷ ಕಡಿಮೆ ವಯಸ್ಸಿನಲ್ಲಿಯೇ ರಾಹುಲ್ ಅಮೇಠಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ನಿರಂತರ ಎಂಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಬಾಯಿಬಿಟ್ಟು ಹೇಳಬೇಕಾಗಿಲ್ಲ ಕೇವಲ ಸನ್ನೆಯ ಮೂಲಕವೇ ಸರ್ಕಾರಕ್ಕೆ ಆದೇಶವನ್ನು ನೀಡುವಂತಹ ಸ್ಥಾನದಲ್ಲಿ ರಾಹುಲ್‌ಗಾಂಧಿ ಇದ್ದಾರೆ. ಆದರೆ ಮಾಡಿದ್ದೇನು?
ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಎಂದೋ ಸ್ವೀಕರಿಸಿಬಿಟ್ಟಿದ್ದಾರೆ. ಆದರೆ ಕೇವಲ ಅದರ ಬಲದಿಂದಲೇ ರಾಜಕೀಯದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವಷ್ಟು ಇಂದಿನ ಮತದಾರರು ಉದಾರಿಗಳಲ್ಲ. ವಂಶದ ಬಲದಿಂದ ರಂಗಪ್ರವೇಶವಷ್ಟೇ ಸಲೀಸು, ಆದರೆ ರಂಗದ ಮೇಲೆ ಉಳಿಸುವುದು ಸಾಧನೆ ಮಾತ್ರ. ಅದರಲ್ಲಿ ಸೋತುಹೋದರೆ ಜೈಕಾರ ಹಾಕಿದ ಅದೇ ಜನ ಮುಖತಿರುಗಿಸಿಬಿಡುತ್ತಾರೆ. ಇದಕ್ಕಾಗಿಯೇ ಅಗಾಧವಾದ ಸಾಧ್ಯತೆಗಳನ್ನು ಹೊಂದಿರುವಂತಹ ನಾಯಕ ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು, ಇತರರನ್ನು ಬೆರಗುಗೊಳಿಸುವಂತಹ ಸವಾಲುಗಳನ್ನು ಸ್ವೀಕರಿಸಬೇಕು. ಅದರ ಮೂಲಕವೇ ತಾನೊಬ್ಬ ನಾಯಕನೆಂಬುದನ್ನು ಸಾಬೀತುಪಡಿಸಬೇಕು. ರಾಮಮನೋಹರ ಲೋಹಿಯಾ ಅವರಿಂದ `ಗೂಂಗಿಗುಡಿಯಾ~ ಎಂದು ಗೇಲಿಮಾಡಿಸಿಕೊಂಡ ಇಂದಿರಾಗಾಂಧಿ,  `ದುರ್ಗಿ~ ಎಂದು ಅಟಲಬಿಹಾರಿ ವಾಜಪೇಯಿ ಅವರಿಂದ ಅಭಿಮಾನದಿಂದ ಕರೆಸಿಕೊಳ್ಳುವವರೆಗೆ ಸವೆಸಿದ್ದ ರಾಜಕೀಯ ಪಯಣದ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಸಂಜಯ್ ಮತ್ತು ರಾಜೀವ್ ಕೂಡಾ ಇಂತಹ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಭಾರತವನ್ನು ಇಪ್ಪತ್ತೊಂದನೆ ಶತಮಾನಕ್ಕೆ ಕೊಂಡೊಯ್ಯುವ ಮಾತನ್ನು ಪ್ರವಾದಿಯಂತೆ ರಾಜೀವ್ ಹೇಳಿದಾಗ ಗೇಲಿಮಾಡಿದವರೇ ಹೆಚ್ಚು. ಆ ಕನಸು ಒಂದು ತಲೆಮಾರಿನ ಆಯುಷ್ಯದೊಳಗೆಯೇ ನಿಜವಾದಾಗ ರಾಜೀವ್‌ಗಾಂಧಿಯವರ ದೂರಾಲೋಚನೆಯನ್ನು ಶ್ಲಾಘಿಸದಿರಲು ಹೇಗೆ ಸಾಧ್ಯ?
ಒಂದೆರಡು ಲಿಖಿತ ಭಾಷಣಗಳನ್ನು ಓದಿರುವುದನ್ನು ಬಿಟ್ಟರೆ ಲೋಕಸಭೆಯ ಯಾವ ಚರ್ಚೆಯಲ್ಲಿಯೂ ಓರಗೆಯ ಇತರ ಯುವನಾಯಕರಂತೆ ರಾಹುಲ್ ಭಾಗವಹಿಸಿಲ್ಲ.  ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್‌ಗಳಿಗೆ ಪೂರ್ಣಪ್ರಮಾಣದ ಸಂದರ್ಶನವನ್ನು ನೀಡಿಲ್ಲ. ಒಂದಷ್ಟು ಚುನಾವಣಾ ಭಾಷಣಗಳು,ಪತ್ರಿಕಾ ವರದಿಗಳು ಮತ್ತು ಟಿವಿ ಬೈಟ್‌ಗಳ ಹೊರತಾಗಿ ರಾಹುಲ್ ಮನಸ್ಸಲ್ಲೇನಿದೆ ಎಂದು ತಿಳಿದುಕೊಳ್ಳಲು ಬೇರೆದಾರಿ ಇಲ್ಲ.
ನಾಲ್ಕು ದಿಕ್ಕುಗಳಿಂದಲೂ ಮಾಧ್ಯಮಗಳು ಮುತ್ತಿಕೊಂಡಿರುವ ಈಗಿನ ದಿನಮಾನದಲ್ಲಿ ಅದರಿಂದ ದೂರ ಓಡುವವ ಹೇಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ನಾಯಕನಾಗಲು ಸಾಧ್ಯವೋ ಗೊತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆ, ಸಾಮಾಜಿಕ ಜಾಲತಾಣಗಳು ಮತ್ತು ಭ್ರಷ್ಟಾಚಾರದ ವಿರುದ್ದದ ಹೋರಾಟದಿಂದಾಗಿ ಭಾರತದ ರಾಜಕೀಯ ಕ್ಷೇತ್ರ ಅನಿವಾರ್ಯವಾಗಿ ಪಾರದರ್ಶಕತೆಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲೇಬೇಕಾಗಿದೆ. ಕಳೆದ ಒಂದು ವಾರದಿಂದ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ತಾಯಿ-ಮಗನ ವಿರುದ್ಧ ಹಣದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಮಾಡಿದ್ದಾರೆ.
ಇದಕ್ಕೆಲ್ಲ ಕಾಂಗ್ರೆಸ್ ಬೆಂಬಲಿಗರಿಂದ ಉತ್ತರ ಕೊಡಿಸಿ ರಾಹುಲ್‌ಗಾಂಧಿ ಎಷ್ಟು ದಿನ ದಂತಗೋಪುರದಲ್ಲಿ ಉಳಿಯಲು ಸಾಧ್ಯ? ಉಳಿದ ಕ್ಷೇತ್ರಗಳಂತೆ ರಾಜಕೀಯದಲ್ಲಿಯೂ ತನ್ನ ಶಿಲುಬೆಯನ್ನು ತಾನೇ ಹೊರಬೇಕು.
ಸಚಿವ ಸಂಪುಟ ಸೇರುವ ಅವಕಾಶವನ್ನು ರಾಹುಲ್‌ಗಾಂಧಿ ಕಳೆದುಕೊಂಡಿದ್ದಾರೆ. ಈಗ ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸುವ ಬಗ್ಗೆ ಊಹಾಪೋಹಗಳು ಎದ್ದಿವೆ. ರಾಜಕೀಯ ಜೀವನವನ್ನು ರಾಹುಲ್‌ಗಾಂಧಿ ನಿಜಕ್ಕೂ ಗಂಭೀರವಾಗಿ ಸ್ವೀಕರಿಸಲು ನಿರ್ಧರಿಸಿದ್ದರೆ ಅಲಂಕಾರಿಕ ಹುದ್ದೆಗಳಲ್ಲಿ ಕೂರುವುದಲ್ಲ, ತಾಯಿಗೆ ನಿವೃತ್ತಿಯನ್ನು ದಯಪಾಲಿಸಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು.  ಜವಾಹರಲಾಲ್ ನೆಹರೂ 40ನೇ ವರ್ಷಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಬಿಟ್ಟಿದ್ದರು.ಆ ಧೈರ್ಯ ರಾಹುಲ್‌ಗಾಂಧಿಯಲ್ಲಿದೆಯೇ?