Showing posts with label ಅಳಗವಾಡಿಯ ರೈತ ಬಸಪ್ಪ ಲಕ್ಕುಂಡಿ ಬಲಿ.. Show all posts
Showing posts with label ಅಳಗವಾಡಿಯ ರೈತ ಬಸಪ್ಪ ಲಕ್ಕುಂಡಿ ಬಲಿ.. Show all posts

Friday, April 19, 2013

ಹರಿದು ಹಂಚಿಹೋಗಿರುವ `ರೈತ ಮತಬ್ಯಾಂಕ್'

ನರಗುಂದ: `ಇಂದಿನ ರಾಜಕೀಯ ಹಾದಿ ತಪ್ಪಲು ಅದನ್ನು ನಿಯಂತ್ರಿಸುವ ಸಾಮರ್ಥ್ಯದ ಚಳವಳಿಗಳು ಇಲ್ಲದಿರುವುದು
ಕಾರಣ' ಎಂದು ಹೇಳುವವರಿದ್ದಾರೆ. ಈ ರೀತಿ ಹೇಳುವವರೆಲ್ಲರೂ ಎಂಬತ್ತರ ದಶಕದ ರೈತ,ಭಾಷಾ ಮತ್ತು ದಲಿತ ಚಳವಳಿಗಳನ್ನು ನೆನಪುಮಾಡಿಕೊಳ್ಳುತ್ತಾರೆ. `ರಾಜಕೀಯದ  ಆಕರ್ಷಣೆಯಿಂದಾಗಿಯೇ ಚಳವಳಿಗಳು ಅಕಾಲ ಸಾವು ಎದುರಿಸುವಂತಾಯಿತು' ಎಂದು ದೂರುವವರೂ ಇದ್ದಾರೆ. ಈ ರೀತಿ ಹೇಳುವವರು ಎಂಬತ್ತರ ದಶಕದ ಉತ್ತರಾರ್ಧದ ಕಾಂಗ್ರೆಸೇತರ ರಾಜಕಾರಣವನ್ನು ಉಲ್ಲೇಖಿಸುತ್ತಾರೆ. ಈ ಎರಡೂ ಅಭಿಪ್ರಾಯಗಳಲ್ಲಿ ಇರುವ ಸತ್ಯಕ್ಕೆ ಸಾಕ್ಷಿಯಾಗಿರುವುದು ನರಗುಂದ.
ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಬೆಳವಣಿಗೆಗಳ ಬೀಜ ಮೊಳಕೆಯೊಡೆದದ್ದು ನರಗುಂದದ ಕಪ್ಪುಮಣ್ಣಿನಲ್ಲಿ. ಮಲಪ್ರಭಾ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿರುವ ನರಗುಂದ, ನವಲಗುಂದ ಮತ್ತು ಸವದತ್ತಿ ತಾಲ್ಲೂಕುಗಳ ರೈತರ ಬಂಡಾಯ ಬೆಳೆಯುತ್ತಾ ಬೇರೆಬೇರೆ ರೂಪಗಳಲ್ಲಿ ರಾಜ್ಯವ್ಯಾಪಿ ವಿಸ್ತರಣೆಗೊಂಡು ಕೊನೆಗೆ  ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿತ್ತು. ರೈತ ಚಳವಳಿಯ ಮೂಲ ಉದ್ದೇಶ, ಅಭಿವೃದ್ಧಿ ಕರ ಮತ್ತು ನೀರಿನ ಶುಲ್ಕದ ರದ್ದತಿ ಹಾಗೂ ವೈಜ್ಞಾನಿಕ ಬೆಲೆ ನಿಗದಿಯಾಗಿತ್ತೇ ಹೊರತು ರಾಜಕೀಯ ಬದಲಾವಣೆ ಅಲ್ಲದೆ ಇದ್ದರೂ ಅದು ನಡೆದು ಹೋಯಿತು. ಆಗಲೇ ಚುನಾವಣೆಯ ಫಲಿತಾಂಶದ ಮೇಲೆ ರೈತ ಚಳವಳಿ ಉಂಟು ಮಾಡಿದ ಪರಿಣಾಮ ರಾಜಕೀಯ ಪಕ್ಷಗಳ ಗಮನಸೆಳೆದದ್ದು. ಇದರಿಂದಾಗಿ ಅಲ್ಲಿಯ ವರೆಗೆ ಅದೃಶ್ಯವಾಗಿದ್ದ `ರೈತ ಮತಬ್ಯಾಂಕ್' ಕಡೆ ರಾಜಕಾರಣಿಗಳು ಕಣ್ಣುಹರಿಸುವಂತಾಯಿತು.
ಮಲಪ್ರಭಾ ರೈತಹೋರಾಟ ಸಮನ್ವಯ ಸಮಿತಿಯ ಸಂಚಾಲಕರಾಗಿದ್ದ ಬಿ.ಆರ್.ಯಾವಗಲ್ ಕ್ರಾಂತಿರಂಗದ ಅಭ್ಯರ್ಥಿಯಾಗಿ 1983ರಲ್ಲಿ ನರಗುಂದ ಕ್ಷೇತ್ರದಿಂದ ಆಯ್ಕೆಯಾಗಿದ್ದು ರಾಜ್ಯ ರೈತಚಳವಳಿಯಲ್ಲಿನ ದೊಡ್ಡ ತಿರುವು. ವಿಚಿತ್ರವೆಂದರೆ ನರಗುಂದದ ಜತೆಯಲ್ಲಿಯೇ ತೀವ್ರಸ್ವರೂಪದ ರೈತ ಚಳವಳಿ ನಡೆದಿದ್ದ ನವಲಗುಂದ ಮತ್ತು ಸವದತ್ತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಇಷ್ಟು ಮಾತ್ರವಲ್ಲ ಈ ಮೂರೂ ಕ್ಷೇತ್ರಗಳಲ್ಲಿ ಗೆದ್ದವರು ಭೂಮಾಲೀಕರಾಗಿದ್ದರು. ಆ ಚುನಾವಣೆಯ  ನಂತರವಾದರೂ ರಾಜಕೀಯ ಮಧ್ಯಪ್ರವೇಶದ ಬಗ್ಗೆ ರೈತ ಚಳವಳಿಯ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಅದರ ನಂತರ ಕರ್ನಾಟಕ ರಾಜ್ಯ ರೈತ ಸಂಘವೇ ನೇರವಾಗಿ ಚುನಾವಣೆಯ ಅಖಾಡಕ್ಕಿಳಿಯಿತು. ಬಾಬಾಗೌಡ ಪಾಟೀಲರು ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯೂ ಆಗಿಬಿಟ್ಟರು.
ಕಳೆದ ಮೂರು ದಶಕಗಳಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಒಂದು ಕಾಲದಲ್ಲಿ ರೈತ ಚಳವಳಿಯಲ್ಲಿದ್ದ ನಾಯಕರು ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್)ಗಳಲ್ಲಿ ಹಂಚಿಹೋಗಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಯುವ ರೈತ ಮುಖಂಡರಾಗಿ ಕಾಂಗ್ರೆಸ್ ವಿರುದ್ಧವೇ ಸ್ಪರ್ಧಿಸಿದ್ದ ಬಿ.ಆರ್.ಯಾವಗಲ್ ಈಗ ನರಗುಂದದಲ್ಲಿ ಅದೇ ಪಕ್ಷದ ಅಭ್ಯರ್ಥಿ. ಅವರ ಎದುರಾಳಿ ಕಳಸಾ-ಬಂಡೂರಿ ಚಳವಳಿಯ ಕಾಲದಲ್ಲಿ ಓಡಾಡುತ್ತಿದ್ದ ಸಿ.ಸಿ. ಪಾಟೀಲ್. ಬಾಬಾಗೌಡ ಪಾಟೀಲ್ ಅವರು ಒಮ್ಮೆ ಬಿಜೆಪಿ ಸೇರಿ ಮತ್ತೆ ಹೊರಬಂದು ಈಗ ಬಿಜೆಪಿ ಸೇರಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣ ನೇರವಾಗಿ ಕೆಜೆಪಿ ಜತೆ ಮೈತ್ರಿ ಮಾಡಿಕೊಂಡು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಇನ್ನೊಂದು ಬಣದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮತ್ತೊಂದು ರಂಗ ಕಟ್ಟಿಕೊಂಡು ಕೆಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.  ಈ ಎಲ್ಲ ಬೆಳವಣಿಗೆಗಳಿಂದಾಗಿ ಪ್ರಾಮಾಣಿಕವಾಗಿ ಸಂಘಟನೆಗೆಂದು ಹೊರಡುವ ನಾಯಕರನ್ನು ಹಳ್ಳಿಗಳಲ್ಲಿ ರೈತರೇ ನಂಬುತಿಲ್ಲ. ರಾಜಕೀಯ ಉದ್ದೇಶದಿಂದಲೇ ಇದನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸುತ್ತಾರೆ. ಈ ಕಾರಣಕ್ಕಾಗಿಯೇ ಹಾವೇರಿಯ ರೈತ ನಾಯಕ ಶಿವಾನಂದ ಗುರುಮಠ್ ಅವರು `ಕರ್ನಾಟಕ ರಾಜ್ಯ ರೈತ (ಚುನಾವಣೇತರ) ಸಂಘಟನೆ'ಯನ್ನು ಕಟ್ಟಿಕೊಂಡಿದ್ದಾರೆ. ಇರುವುದರಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಹಳೆಯ ಚಳವಳಿಯ ನೆನಪಿನ ಚುಂಗು ಹಿಡಿದುಕೊಂಡು ಕೂತಿದೆ.
`1980ರ ಜುಲೈ 21ನೇ ದಿನ ನನಗಿನ್ನೂ ನೆನಪಿದೆ. ನರಗುಂದದಲ್ಲಿ ಎಂಟರಿಂದ ಹತ್ತು ಸಾವಿರದಷ್ಟು ರೈತರು ಸೇರಿದ್ದರು. ಕಚೇರಿ ಪ್ರವೇಶಿಸಲು ಬಿಡದ ತಹಶೀಲ್ದಾರ್ ಪೊಲೀಸರನ್ನು ಕರೆಸಿ ಲಾಠಿ ಪ್ರಹಾರ ಮಾಡಿಸಿದರು.ಕೊನೆಗೆ ಗೋಲಿಬಾರ್ ನಡೆಯಿತು. ಚಿಕ್ಕನರಗುಂದದ ಈರಪ್ಪ ಕಡ್ಲಿಕೊಪ್ಪ ಎಂಬ ಯುವರೈತ ಸ್ಥಳದಲ್ಲಿಯೇ ಮೃತಪಟ್ಟ. ಅದೇ ಹೊತ್ತಿನಲ್ಲಿ ನವಲಗುಂದದಲ್ಲಿ ನಡೆದ ಗೋಲಿಬಾರ್‌ಗೆ ಅಳಗವಾಡಿಯ ಬಸಪ್ಪ ಲಕ್ಕುಂಡಿ ಬಲಿಯಾದ. ಇದರಿಂದ ರೊಚ್ಚಿಗೆದ್ದ ರೈತರು ಮೂವರು ಪೊಲೀಸರನ್ನು ಸಾಯಿಸಿದರು. ಅದರ ನಂತರ ನರಗುಂದ-ನವಲಗುಂದಗಳಲ್ಲಿ ನಡೆದದ್ದು ಭೀಕರ ಪೊಲೀಸ್ ಅಟ್ಟಹಾಸ. ನೂರಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರು, ಸಾವಿರಾರು ರೈತರು ಗಾಯಗೊಂಡರು-ಇವೆಲ್ಲ ವಿಧಾನಸೌಧದಲ್ಲಿ ಹೋಗಿ ಕೂರ‌್ಲಿಕ್ಕೇನು? ಅಲ್ಲಿ ಹೋದವರಾದರೂ ರೈತರ ಹಿತಾಸಕ್ತಿಯ ರಕ್ಷಣೆಯಾದರೂ ಮಾಡಿದರೇ? ಅದೂ ಇಲ್ಲ' ಎಂದು ಸಿಟ್ಟಿನಿಂದಲೇ ಪ್ರಶ್ನಿಸುತ್ತಾರೆ 1980ರ ನರಗುಂದ ರೈತ ಬಂಡಾಯದಲ್ಲಿ ಭಾಗವಹಿಸಿದ್ದ ರೈತ ಮುಖಂಡ ಎಸ್.ಎನ್.ಈರೇಶನವರ್.
ಕಳೆದ ಮೂರು ದಶಕಗಳಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಒಂದು ಕಾಲದಲ್ಲಿ ವರಲಕ್ಷ್ಮಿ ಹತ್ತಿ ರೈತರ ಪಾಲಿನ ಲಕ್ಷ್ಮಿಯಾಗಿತ್ತು. ಈಗ ಶಾಪವಾಗಿದೆ. ಈಗ ರೈತರು ಹತ್ತಿಹಾಕುವುದನ್ನೇ ನಿಲ್ಲಿಸಿ ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ, ಗೋಧಿಯ ಮೊರೆಹೋಗಿದ್ದಾರೆ. ಇತ್ತೀಚಿನ 2-3 ವರ್ಷಗಳಲ್ಲಿ ಬಿಟಿ ಹತ್ತಿಯ ಹುಚ್ಚು ಹತ್ತಿಕೊಂಡಿದೆ. ಭೂಮಿ ಕ್ಷಾರವಾಗುತ್ತಿದೆ. ಕೃಷಿಕೂಲಿಕಾರರ ಅಭಾವ, ಉತ್ಪಾದನಾ ವೆಚ್ಚದಲ್ಲಿ ಏರಿಕೆ, ಇಳುವರಿಯಲ್ಲಿ ಇಳಿಕೆಯಿಂದಾಗಿ ಕೃಷಿ ಯಾರಿಗೂ ಬೇಡದ ವೃತ್ತಿಯಾಗಿದೆ. ಇದರಿಂದಾಗಿ `ಗೈರುಹಾಜರಿ ಜಮೀನ್ದಾರಿಕೆ' ಹೆಚ್ಚಾಗುತ್ತಿದೆ. ರೈತರ ಬದುಕಿನಲ್ಲಿ ಸಮಸ್ಯೆ ಈಗಲೂ ಇದೆ. ಪ್ರಾರಂಭದಲ್ಲಿ ಮಲಪ್ರಭಾ ಜಲಾಶಯದಿಂದ ವರ್ಷಕ್ಕೆ ಐದು ತಿಂಗಳು ನೀರು ಬಿಡ್ತಾ ಇದ್ದರು. ಈಗ 30 ದಿನ ಬಿಟ್ಟರೆ ಹೆಚ್ಚು. ಅಲ್ಲಿಯೂ ನೀರಿಲ್ಲ. ಜಲಾಶಯದಲ್ಲಿ ಹೂಳು ತುಂಬಿದೆ, ಕಾಲುವೆಗಳು ದುರಸ್ತಿಯಾಗಿಲ್ಲ. ಮಳೆ ಕಡಿಮೆಯಾಗುತ್ತಿದೆ. 300-400 ಅಡಿಯಷ್ಟು ಕೊಳವೆ ಬಾಗಿ ಕೊರೆದರೂ ನೀರಿಲ್ಲ. ಇದು ಯಾವುದೂ ಇಲ್ಲಿ ಈ ಬಾರಿಯ ಚುನಾವಣಾ ವಿಷಯ ಅಲ್ಲ. ಹಳ್ಳಿ ಕಟ್ಟೆಯಲ್ಲಿ ಕೂತ ರೈತರು ಬಿಜೆಪಿ-ಕೆಜೆಪಿ ಬಲಾಬಲದ ಚರ್ಚೆಯಲ್ಲಿ ತೊಡಗಿದ್ದರು. ಗೋಲಿಬಾರ್‌ನಲ್ಲಿ ಸಾವಿಗೀಡಾದ ಬಸಪ್ಪ ಲಕ್ಕುಂಡಿ ಮತ್ತು ಈರಪ್ಪ ಕಡ್ಲಿಕೊಪ್ಪನವರಿಗೆ ನಿರ್ಮಿಸಲಾಗಿರುವ ಹುತಾತ್ಮ ಸ್ಮಾರಕಗಳು ಇಂತಹ ಚರ್ಚೆಗಳಿಗೆ ಮೂಕಸಾಕ್ಷಿಯಾಗಿವೆ.
ಮಲಪ್ರಭೆಗೆ ಕಳಸಾ-ಬಂಡೂರಿ ಹಳ್ಳಗಳನ್ನು ಜೋಡಿಸುವ ಮಹದಾಯಿ ಯೋಜನೆಗಾಗಿ ನಡೆದ ಚಳವಳಿ ಮತ್ತೊಮ್ಮೆ ಈ ಭಾಗದ ರೈತರಲ್ಲಿ ಹುರುಪು ತುಂಬಿತ್ತು.  ಇದಕ್ಕಾಗಿಯೇ ರಚನೆಗೊಂಡ ಯುವ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷರಾಗಿದ್ದ ಬಿ.ವಿ.ಸೋಮಾಪುರ 2004ರಲ್ಲಿ ಜೆಡಿ (ಎಸ್)ಟಿಕೆಟ್‌ನಲ್ಲಿ ಸ್ಪರ್ಧಿಸಿ 1300 ಮತಪಡೆದು ಸೋತುಹೋದರು. ಅದರ ನಂತರ ಯುವರೈತ ಮುಖಂಡ ವಿಜಯ ಕುಲಕರ್ಣಿ ಚಳವಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. `ನರಗುಂದದ ಮಣ್ಣಿನಲ್ಲಿಯೇ ಹೋರಾಟದ ಕೆಚ್ಚು ಇದ್ದರೂ ರಾಜಕೀಯದ ಕೈಗೆ ಸಿಕ್ಕಿ ದಾರಿತಪ್ಪುತ್ತಿದೆ' ಎನ್ನುವುದು ಕುಲಕರ್ಣಿಯವರ ವಿಷಾದದ ಮಾತು. ರಾಜ್ಯಜಲ ಸಂಪನ್ಮೂಲ ಸಚಿವರಾಗಿರುವ ಬಸವರಾಜ ಬೊಮ್ಮಾಯಿ  ಚಳವಳಿಯನ್ನು ಬಿಜೆಪಿ ಕಡೆ ಎಳೆದೊಯ್ಯುವ ಪ್ರಯತ್ನವನ್ನು ಮಾಡಿದ್ದರೂ ಅವರು ತೋರಿದ ಆಸಕ್ತಿಯಿಂದಾಗಿ ಒಂದಷ್ಟು ಕಾಮಗಾರಿ ನಡೆದಿದೆ. ಸದ್ಯಕ್ಕೆ ಕೇಂದ್ರ ಸರ್ಕಾರ ವಿವಾದದ ಇತ್ಯರ್ಥಕ್ಕೆ ನ್ಯಾಯಮಂಡಳಿಯನ್ನು ರಚಿಸಿರುವ ಕಾರಣ ಚಳವಳಿ ಕಾವು ಕಳೆದುಕೊಂಡಿದೆ.
`ಸಾಲಮನ್ನಾ, ಪುಕ್ಕಟೆ ವಿದ್ಯುತ್, ನೀರಿನ ಕರ ರದ್ದತಿ ಮೊದಲಾದ ಬೇಡಿಕೆಗಳು ಈಗ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಉದಾರ ಆರ್ಥಿಕ ನೀತಿಯ ಫಲವಾದ ಭೂಸುಧಾರಣೆ, ಎಪಿಎಂಸಿ, ಭೂಸ್ವಾಧೀನ, ಬೀಜ ಮತ್ತು ಪೇಟೆಂಟ್ ಕಾನೂನುಗಳಿಗೆ ಆಗಿರುವ ತಿದ್ದುಪಡಿಗಳು ರೈತನ ಬದುಕಲ್ಲಿ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿವೆ' ಎನ್ನುತ್ತಾರೆ ನರಗುಂದ ರೈತ ಬಂಡಾಯದ ರೂವಾರಿಗಳಲ್ಲೊಬ್ಬರಾದ ಬಿ.ಎಸ್.ಸೊಪ್ಪಿನ್. ಇತ್ತೀಚೆಗೆ ಈ ಚಳವಳಿಯ ಇತಿಹಾಸವನ್ನು ದಾಖಲಿಸುವ ಪುಸ್ತಕವೊಂದನ್ನೂ ಇವರು ಬರೆದಿದ್ದಾರೆ. `ಬದಲಾಗುತ್ತಿರುವ ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ಚಳವಳಿಯನ್ನು ಪುನರ್‌ರೂಪಿಸಲು ಸಾಧ್ಯವಾದರೆ  ಈಗಲೂ ರೈತ ಮತಬ್ಯಾಂಕ್ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯ' ಎನ್ನುವ ವಿಶ್ವಾಸ ಸೊಪ್ಪಿನ್ ಅವರದ್ದು. ಆದರೆ ವಿಧಾನಸೌಧ ಪ್ರವೇಶಿಸುವ ಧಾವಂತದಲ್ಲಿರುವ ರೈತ ನಾಯಕರಿಗೆ ಚಳವಳಿಯನ್ನು ಕಟ್ಟಲು ಬೇಕಾದ ತಾಳ್ಮೆ ಮತ್ತು ವಿಶ್ವಾಸ ಇದ್ದ ಹಾಗಿಲ್ಲ.