Showing posts with label ಬಿಸಿತುಪ್ಪ ಯಡಿಯೂರಪ್ಪ. Show all posts
Showing posts with label ಬಿಸಿತುಪ್ಪ ಯಡಿಯೂರಪ್ಪ. Show all posts

Wednesday, May 23, 2012

ಬಿಜೆಪಿ ಗಂಟಲಿನೊಳಗಿನ ಬಿಸಿತುಪ್ಪ ಯಡಿಯೂರಪ್ಪ, ದಿನೇಶ್ ಅಮೀನ್ ಮಟ್ಟು May 14, 2012

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಸುತ್ತಿಕೊಂಡಿರುವ ಜೋತಿಷಿಗಳು ಮತ್ತು ಅವರು ಅಡ್ಡಬೀಳುತ್ತಿರುವ ದೇವರುಗಳ ಮನಸ್ಸಲೇನಿದೆ ಎಂದು ಗೊತ್ತಿಲ್ಲ, ಆದರೆ ಎದುರಾಗಿರುವ ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ, ಹೋರಾಟದ ಮೂಲಕ `ಬೂದಿಯಿಂದ ಎದ್ದು ಬರುತ್ತೇನೆ` ಎಂಬ ಛಲವನ್ನು ಯಡಿಯೂರಪ್ಪನವರು ಇಟ್ಟುಕೊಂಡಿದ್ದರೆ ಅದಕ್ಕೆ ಭಾರತೀಯ ಜನತಾ ಪಕ್ಷದಲ್ಲಿ ಅವಕಾಶ ಸಿಗುವುದು ಕಷ್ಟ. ಆ ಪಕ್ಷದಲ್ಲಿ ಅವರಿಗೆ ರಾಜಕೀಯ ಭವಿಷ್ಯ ಇಲ್ಲ.

ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಯಡಿಯೂರಪ್ಪನವರು ತಮ್ಮ ದಾರಿ ನೋಡಿಕೊಳ್ಳಬೇಕಾಗಬಹುದು, ಅದು ಕೂಡಾ ಹೂ ಚೆಲ್ಲಿದ ಹಾದಿ ಅಲ್ಲ, ಅಲ್ಲಿಯೂ ಕಲ್ಲು-ಮುಳ್ಳು, ಹೊಂಡ-ಖೆಡ್ಡಾಗಳಿವೆ. ಯಡಿಯೂರಪ್ಪನವರ ರಾಜಕೀಯ ಪಯಣ ನಿಜಕ್ಕೂ ಕಷ್ಟದಲ್ಲಿದೆ.

ಸಿಬಿಐ ತನಿಖೆ ಪ್ರಾರಂಭವಾದ ಕೂಡಲೇ ರಾಜಕಾರಣಿಯೊಬ್ಬನ ಭವಿಷ್ಯ ಅಂತ್ಯಗೊಳ್ಳಬೇಕಾಗಿಲ್ಲ. ಸೆರೆಮನೆವಾಸ ಮಾಡಿಬಂದ ನಂತರವೂ ಚುನಾವಣೆಯಲ್ಲಿ ಗೆದ್ದು ಮೊದಲಿನ (ಮುಖ್ಯಮಂತ್ರಿಯಾಗಿ ಮಾಡಿದ್ದ) `ಪಾಪ`ಗಳನ್ನು ತೊಳೆಯುವ ರೀತಿಯಲ್ಲಿ ದಕ್ಷತೆಯಿಂದ ರೈಲು ಸಚಿವರಾಗಿ ಹೆಸರು ಮಾಡಿದ ಲಾಲುಪ್ರಸಾದ್ ನಮ್ಮ ಕಣ್ಣಮುಂದೆ ಇದ್ದಾರೆ. ಬಿಹಾರದ ರಾಜಕೀಯದಲ್ಲಿ ಅವರ ಆಟ ಮುಗಿದಿದೆ ಎಂದು ಹೇಳುವ ಹಾಗಿಲ್ಲ. ಜೈಲುವಾಸದ ಹೊರತಾಗಿಯೂ ಕುಮಾರಿ  ಜಯಲಲಿತಾ ಮತ್ತೆ ತಮಿಳುನಾಡಿನ ಮುಖ್ಯಮಂತ್ರಿಯಾಗಲಿಲ್ಲವೇ? ಜೈಲಿನಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಗೆದ್ದಿರುವ ಕೊಲೆ-ಸುಲಿಗೆಯ ಆರೋಪಿಗಳಿಲ್ಲವೇ? ನೂರೆಂಟು ಹೀನ ಅಪರಾಧಗಳ ಆರೋಪಗಳನ್ನು ತಲೆಮೇಲೆ ಹೊತ್ತಿದ್ದರೂ, ಎಲ್ಲಿಯವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಾನೂನಿನಲ್ಲಿ ಇರುತ್ತದೋ, ಎಲ್ಲಿಯವರೆಗೆ ಅಂಥವರನ್ನು ಬೇರೆ ಬೇರೆ ಕಾರಣಗಳಿಗಾಗಿ (ಜಾತಿ,ದುಡ್ಡು, ತೋಳ್ಬಲ) ಆಯ್ಕೆಮಾಡುವ ಮೂರ್ಖ, ಭ್ರಷ್ಟ, ಅಸಹಾಯಕ ಮತದಾರರು ಇರುತ್ತಾರೋ ಅಲ್ಲಿಯವರೆಗೆ ಯಾವ ಪಾಪಿ ರಾಜಕಾರಣಿಯ ಭವಿಷ್ಯವೂ ಕೊನೆಗೊಳ್ಳುವುದಿಲ್ಲ.

ಬೇರೆಬೇರೆ ಕಾರಣಗಳಿಗಾಗಿ ಕಳಂಕಿತರಾದ ನಾಯಕರ ಪಟ್ಟಿ ನೋಡಿದರೆ `ಪಾಪ ಸುಟ್ಟುಹಾಕಿದ ಬೂದಿ`ಯಿಂದ ಎದ್ದು ಬಂದವರಲ್ಲಿ ಹೆಚ್ಚಿನವರು ಪ್ರಾದೇಶಿಕ ಪಕ್ಷಗಳ ನಾಯಕರು ಎನ್ನುವುದು ಸ್ಪಷ್ಟವಾಗುತ್ತದೆ. ರಾಷ್ಟ್ರೀಯ ಪಕ್ಷಗಳಲ್ಲಿ ಇಂತಹವರಿಗೆ ಅವಕಾಶ ಕಡಿಮೆ. ರಾಜಕೀಯವಾಗಿ ತಮಗೆ ಹೊರೆ ಎಂದು ಅನಿಸಿದ ಕೂಡಲೇ ರಾಷ್ಟ್ರೀಯ ಪಕ್ಷಗಳು ಇಂತಹವರನ್ನು ಮರುಯೋಚನೆ ಮಾಡದೆ ಹೊರಗೆತ್ತಿ ಎಸೆದುಬಿಡುತ್ತವೆ. ಆರೋಪಗಳಿಂದ ಖುಲಾಸೆ ಹೊಂದಿದ ಬಳಿಕ ಪಕ್ಷ ಇಲ್ಲವೇ ಸರ್ಕಾರದಲ್ಲಿ ಸಣ್ಣಪುಟ್ಟ ಹುದ್ದೆಗಳಿಗಷ್ಟೆ ಅವರು ತೃಪ್ತರಾಗಬೇಕು. ಉದಾಹರಣೆಗೆ ಮುಂದೊಂದು ದಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕೆಂದುಕೊಂಡಿದ್ದ ಸುರೇಶ್ ಕಲ್ಮಾಡಿ ಕನಸು ನನಸಾಗುವುದು ಕಷ್ಟ. ಬಂಗಾರು ಲಕ್ಷ್ಮಣ್ ಅವರ ರಾಜಕೀಯ ಕೊನೆಗೊಂಡು ಆಗಲೇ ಹತ್ತುವರ್ಷಗಳಾಗಿ ಹೋಯಿತು. ಇದರ ಅರ್ಥ ರಾಷ್ಟ್ರೀಯ ಪಕ್ಷಗಳು ಬಹಳ ಪ್ರಾಮಾಣಿಕವಾದ, ಮೌಲ್ಯಾಧಾರಿತ ರಾಜಕಾರಣಕ್ಕೆ ಬದ್ದವಾಗಿವೆ ಎಂದಲ್ಲ. ಅದು ರಾಷ್ಟ್ರರಾಜಕಾರಣದ ಅನಿವಾರ್ಯತೆ ಅಷ್ಟೆ. ಇದೇ ಮಾತನ್ನು ಲಾಲುಪ್ರಸಾದ್, ಮಧು ಕೋಡಾ, ಕನಿಮೋಳಿ ಮೊದಲಾದ ಪ್ರಾದೇಶಿಕ ಪಕ್ಷಗಳ ನಾಯಕರ ಬಗ್ಗೆ ಹೇಳಲಾಗದು. ಇದಕ್ಕಾಗಿಯೇ ಭ್ರಷ್ಟರು ತಾವೇ ಹೈಕಮಾಂಡ್ ಆಗಿರುವ ಪ್ರತ್ಯೇಕ ಪಕ್ಷವೊಂದನ್ನು ಕಟ್ಟಿಕೊಂಡು ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ.

ಈ ಹಿನ್ನೆಲೆಯಿಂದ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಭವಿಷ್ಯವನ್ನು ನೋಡಬೇಕಾಗುತ್ತದೆ. ಭಾರತೀಯ ಜನತಾ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುಪಿಎ ವಿರುದ್ದ  ಭ್ರಷ್ಟಾಚಾರವನ್ನು ಮುಖ್ಯ ಅಸ್ತ್ರವಾಗಿ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ಯುಪಿಎ ಸರ್ಕಾರದ 2ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಗೇಮ್ಸ, ಆದರ್ಶ ಹೌಸಿಂಗ್ ಸೊಸೈಟಿ ಮೊದಲಾದ ಬಹುಕೋಟಿ ಹಗರಣಗಳನ್ನು ಸಂಸತ್‌ನ ಒಳಗೆ ಮತ್ತು ಹೊರಗೆ ಮತ್ತೆಮತ್ತೆ ಕೆದಕಿ ಜೀವಂತವಾಗಿಡಲು ಪ್ರಯತ್ನಿಸುತ್ತಿರುವುದು ಇದೇ ಕಾರಣಕ್ಕೆ. ಆದರೆ  ಬಿಜೆಪಿಯಿಂದ ತೂರಿಬರುತ್ತಿರುವ ಭ್ರಷ್ಟಾಚಾರ ವಿರೋಧಿ ಬಾಣಗಳನ್ನು ಕಾಂಗ್ರೆಸ್ ಪಕ್ಷ ಕರ್ನಾಟಕದ ಭ್ರಷ್ಟ ಸರ್ಕಾರದ ಗುರಾಣಿಯನ್ನು ಮುಂದೊಡ್ಡಿ ಮುರಿದುಹಾಕುತ್ತಿದೆ. ಯಡಿಯೂರಪ್ಪನವರನ್ನು ಬಗಲಲ್ಲಿ ಕಟ್ಟಿಕೊಂಡು ಭ್ರಷ್ಟಾಚಾರ ವಿರೋಧಿ ರಾಜಕೀಯ ಹೋರಾಟವನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಾರದು. ರಾಜಸ್ತಾನದಲ್ಲಿ ವಸುಂಧರ ರಾಜೇ ಅವರ ಬಂಡಾಯದ ಭೀತಿ, ಬಾಬರಿ ಮಸೀದಿ ಧ್ವಂಸದ ಪ್ರಕರಣದಲ್ಲಿ ಮತ್ತೆ ಎಲ್.ಕೆ.ಅಡ್ವಾಣಿ ವಿರುದ್ದ ತನಿಖೆ ಪುನರಾರಂಭಿಸಲು ಸಿಬಿಐ ತೋರಿಸುತ್ತಿರುವ ಆಸಕ್ತಿ, ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಲಂಚ ಹಗರಣದಲ್ಲಿ ಜೈಲಿಗೆ ಹೋಗಿರುವಂತಹ ಮುಜುಗರದ ಪರಿಸ್ಥಿತಿ-ಇವೆಲ್ಲವೂ ಬಿಜೆಪಿಯನ್ನು ನಿತ್ರಾಣಗೊಳಿಸಿದೆ.
ಇಂತಹ ಸ್ಥಿತಿಯಲ್ಲಿ ಭ್ರಷ್ಟನಾಯಕನೊಬ್ಬನನ್ನು ತಲೆಮೇಲೆ ಕೂರಿಸಿಕೊಂಡು ಮುನ್ನಡೆಯುವಷ್ಟು ತ್ರಾಣ ಆ ಪಕ್ಷಕ್ಕೂ ಇದ್ದ ಹಾಗಿಲ್ಲ.  ತನ್ನ ಸುತ್ತ ಸೃಷ್ಟಿಸಿಕೊಂಡಿರುವ ಹುಸಿ ನೈತಿಕತೆಯ ಪ್ರಭಾವಳಿ ಯಡಿಯೂರಪ್ಪನವರಿಂದಾಗಿ ಮಂಕಾಗಿ ಹೋಗುತ್ತಿರುವುದು ಸಂಘ ಪರಿವಾರಕ್ಕೂ ಇರುಸುಮುರುಸು ಉಂಟುಮಾಡುತ್ತಿದೆ. ಆದ್ದರಿಂದ ಪಕ್ಷ ಮತ್ತು ಪರಿವಾರ ಎರಡಕ್ಕೂ ಯಡಿಯೂರಪ್ಪ ಗಂಟಲಲ್ಲಿರುವ ಬಿಸಿತುಪ್ಪ.

ಯಡಿಯೂರಪ್ಪ ವಿರುದ್ಧದ ಸಿಬಿಐ ತನಿಖೆ ಐದಾರು ತಿಂಗಳಲ್ಲಿ ಮುಗಿದುಹೋಗುವಂತಹದ್ದಲ್ಲ, ಹಾಗೆ ಮುಗಿದುಹೋಗಲು ಕೇಂದ್ರ ಸರ್ಕಾರ ಬಿಡಲಾರದು. ಇದನ್ನು ಮುಂದಿನ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯವರೆಗೂ ಎಳೆದುಕೊಂಡು ಹೋಗಲು ಅಧಿಕಾರವನ್ನು ಉಪಯೋಗಿಸಿಕೊಂಡೋ, ದುರುಪಯೋಗಮಾಡಿಕೊಂಡೋ ಕಾಂಗ್ರೆಸ್ ಖಂಡಿತ ಪ್ರಯತ್ನಿಸಲಿದೆ. ಬಂಗಾರು ಲಕ್ಷ್ಮಣ್ ಅವರಂತೆ ಯಡಿಯೂರಪ್ಪನವರು ತಮ್ಮ ಪಾಡಿಗೆ ಮೂಲೆಯಲ್ಲಿದ್ದು ಬಿಟ್ಟರೆ ಸಮಸ್ಯೆ ಇಲ್ಲ. ಹಾಗೆ ಇರುವುದು ಅವರ ಜಾಯಮಾನ ಅಲ್ಲ.

ಮುಖ್ಯಮಂತ್ರಿ ಇಲ್ಲವೇ ಪಕ್ಷದ ಅಧ್ಯಕ್ಷ ಯಾರೇ ಆಗಲಿ, ಪ್ರಮುಖ ನಿರ್ಧಾರಗಳು ಮಾತ್ರ ತಮ್ಮ ಮನೆಯ ಉಪಹಾರದ ಮೇಜಿನಲ್ಲಿಯೇ ನಡೆಯಬೇಕು ಎಂಬ ಹಟಮಾರಿತನವನ್ನು ಹೊಂದಿರುವವರು ಯಡಿಯೂರಪ್ಪ. ಪಕ್ಷ ಮತ್ತು ಸರ್ಕಾರದ ಅತ್ಯುನ್ನತ ಹುದ್ದೆಗಳನ್ನು ಏರುವುದು ಸಾಧ್ಯ ಇಲ್ಲ ಎಂದಾದರೆ ಅಲ್ಲಿ ತಮ್ಮ ಕೈಗೊಂಬೆಗಳು ಇರಬೇಕು ಎಂದು ಬಯಸುತ್ತಾರೆ ಯಡಿಯೂರಪ್ಪ. ಬಿಜೆಪಿ ಇದನ್ನು ಒಪ್ಪಿಕೊಳ್ಳಬಹುದೇ?

ಬಿಜೆಪಿ ಮುಂದೆ ಇರುವ ಇನ್ನೊಂದು ದಾರಿ ಯಡಿಯೂರಪ್ಪನವರನ್ನು ಒಂದೋ ಪಕ್ಷದಿಂದ ಉಚ್ಚಾಟಿಸುವುದು ಇಲ್ಲವೇ ಅವರ ಯಾವ ಬೇಡಿಕೆಗಳನ್ನೂ ಈಡೇರಿಸಲು ಹೋಗದೆ ಅವರಾಗಿಯೇ ಪಕ್ಷ ಬಿಟ್ಟು ಹೋಗುವಂತೆ ಮಾಡುವುದು. ಅಲ್ಲಿಯೂ ಅಪಾಯ ಇದೆ. ಮುಖ್ಯಮಂತ್ರಿಯಾದ ನಂತರ ಯಡಿಯೂರಪ್ಪನವರು ತಮ್ಮ ನಡೆ-ನುಡಿ ಮತ್ತು ಅಧಿಕಾರದ ಮೂಲಕ ತಮ್ಮನ್ನು ಲಿಂಗಾಯತ ನಾಯಕರಾಗಿ ಬಿಂಬಿಸಿಕೊಳ್ಳುವುದರಲ್ಲಿ  ಯಶಸ್ವಿಯಾಗಿದ್ದಾರೆ. ಜಾತಿ ಕಾರಣಕ್ಕಾಗಿ ಬೆಂಬಲ ನೀಡುವ ಮತದಾರರು ತಮ್ಮ ಆಯ್ಕೆಯ ನಾಯಕನ ವಿರುದ್ದದ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎನ್ನುವುದು ಚುನಾವಣೆಯ ಇತಿಹಾಸವನ್ನು ನೋಡಿದರೆ ಮನವರಿಕೆಯಾಗುತ್ತದೆ. ಉಚ್ಚಾಟನೆ ಇಲ್ಲವೇ ಬಂಡಾಯದ ಮೂಲಕ ಪಕ್ಷ ಬಿಟ್ಟು ಹೋದವರಿಗೆ ಗೆಲ್ಲುವ ಸಾಮರ್ಥ್ಯ ಇರದೆ ಇದ್ದರೂ ತಾವು ಹಿಂದೆ ಇದ್ದ ಪಕ್ಷವನ್ನು ಸೋಲಿಸುವ ಶಕ್ತಿ ಇರುತ್ತದೆ. ಯಡಿಯೂರಪ್ಪನವರ ವಿಷಯದಲ್ಲಿಯೂ ಇದು ಸತ್ಯ.  ಅವರು ಪಕ್ಷ ಬಿಟ್ಟುಹೋಗಿ ಸ್ವಂತ ಬಲದಿಂದ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಿ ಗೆದ್ದು ಬಂದು ಮುಖ್ಯಮಂತ್ರಿಯಾಗಲಾರರು, ಆದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ಮಾಡಬಲ್ಲರು.

ಯಡಿಯೂರಪ್ಪನವರ ಭವಿಷ್ಯದ ಹಾದಿ ಕೂಡಾ ನಿರಾತಂಕವಾಗಿಲ್ಲ. ಪಕ್ಷದಲ್ಲಿಯೇ ಉಳಿದು ಒಂದಷ್ಟು ದಿನ ಬಾಯಿಮುಚ್ಚಿಕೊಂಡು ನ್ಯಾಯಾಂಗದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅವರ ಮುಂದಿನ ಒಂದು ಹಾದಿ. ಇದು ವೈಯಕ್ತಿಕವಾಗಿ ಸುರಕ್ಷಿತ ಹಾದಿ. ಇದರಲ್ಲಿ ಬಹಳ ಅಪಾಯಗಳು ಕಡಿಮೆ. ಆದರೆ ಯಡಿಯೂರಪ್ಪ ಆ ರೀತಿ ತೆಪ್ಪಗೆ ಕೂರುವವರಲ್ಲ. ಆಡಳಿತ ಪಕ್ಷದಲ್ಲಿದ್ದರೂ ಅವರು ವಿರೋಧ ಪಕ್ಷದ ನಾಯಕರಂತೆ ಗದ್ದಲ ಉಂಟು ಮಾಡುತ್ತಿದ್ದವರು. ಅವರು ಸುಮ್ಮನಿದ್ದರೂ ಅವರ ಸುತ್ತಮುತ್ತ ಇರುವ ಬೆಂಬಲಿಗರು ಸುಮ್ಮನಿರಲು ಬಿಡಲಾರರು.

ಅಂತಹ ಸಂದರ್ಭದಲ್ಲಿ ಅವರ ಮುಂದೆ ಇರುವ ಇನ್ನೊಂದು ದಾರಿ ಈಗಿನ ಪಕ್ಷ ತ್ಯಜಿಸಿ ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯವಾಗಿ ಸಕ್ರಿಯವಾಗಿ ಇರುವುದು. ಇದರಲ್ಲಿ ಅಪಾಯಗಳು ಹೆಚ್ಚು. ಮೊದಲನೆಯದಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಎಂದೂ ಯಶಸ್ಸು ಕಂಡಿಲ್ಲ. ಇದಕ್ಕೆ ಯಡಿಯೂರಪ್ಪನವರ ಜಿಲ್ಲೆಯವರೇ ಆಗಿದ್ದ ಎಸ್.ಬಂಗಾರಪ್ಪನವರ ರಾಜಕೀಯ ಜೀವನವೇ ಉತ್ತಮ ನಿದರ್ಶನ. ಕಾಂಗ್ರೆಸ್ ಪಕ್ಷದ ವಿರುದ್ಧ ಅವರು ಬಂಡೆದ್ದು ಸ್ಥಾಪಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷ ಶೇ 7.5ರಷ್ಟು ಮತ ಮತ್ತು ಹತ್ತು ಶಾಸಕರನ್ನು ಗಳಿಸಲಷ್ಟೇ ಸಾಧ್ಯವಾಗಿತ್ತು. ಚುನಾವಣೆಯ ನಂತರ ಆ ಶಾಸಕರು ಕೂಡಾ ಬಂಗಾರಪ್ಪನವರ ಜತೆ ಉಳಿಯಲಿಲ್ಲ. ಬಂಗಾರಪ್ಪನವರಿಗೆ ಇಲ್ಲದ ಜಾತಿ ಬೆಂಬಲದ ಯಡಿಯೂರಪ್ಪನವರಿಗೆ ಇದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಇದೇ ಜಾತಿ ಬಲದಿಂದ ದಕ್ಷಿಣ ಕರ್ನಾಟಕದಲ್ಲಿ ಎಚ್.ಡಿ.ದೇವೇಗೌಡರು ಮಾಡುತ್ತಿರುವ ರಾಜಕೀಯವನ್ನು ಉತ್ತರಕರ್ನಾಟಕದಲ್ಲಿ ತಾವೂ ಮಾಡಬಹುದು ಎಂಬ ಲೆಕ್ಕಚಾರವೂ ಅವರ ತಲೆಯಲ್ಲಿ ಸುಳಿದಾಡುತ್ತಿರಬಹುದು.

 ಆದರೆ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಲು ಬೇಕಾದಷ್ಟು ಸಮಯ, ತಾಳ್ಮೆ, ಜಾಣ್ಮೆ ಯಡಿಯೂರಪ್ಪನವರಲ್ಲಿದೆಯೇ ಎನ್ನುವುದು ಪ್ರಶ್ನೆ. ಅವರು ಎದುರಿಸಬೇಕಾಗಿರುವ ಸಿಬಿಐ ತನಿಖೆ ಯಾವ ಹಾದಿ ಹಿಡಿಯಲಿದೆ ಎನ್ನುವುದನ್ನು ಹೇಳಲಾಗದು.

ಯಡಿಯೂರಪ್ಪನವರ ವಿರುದ್ದದ ಆರೋಪಗಳು ಮತ್ತು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ವ್ಯಕ್ತಪಡಿಸಿರುವ ಗಂಭೀರತೆಯನ್ನು ನೋಡಿದರೆ ಅವರ ಬಂಧನ ಅನಿವಾರ್ಯವಾಗಬಹುದು. ತನಿಖೆ ಅವರ ಕುಟುಂಬದ ಸದಸ್ಯರ ಬೆನ್ನು ಕೂಡಾ ಬಿಡಲಾರದು. ಇದರಿಂದಾಗಿ  ಆರೋಪಗಳಿಂದ ಮುಕ್ತವಾಗಿ ಹೊರಬರಲು ನಡೆಸುವ ಕಾನೂನಿನ ಹೋರಾಟದಲ್ಲಿಯೇ ಅವರು ಮುಳುಗಿಬಿಡುವ ಸಾಧ್ಯತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ನಡೆಸಿಕೊಂಡು ಹೋಗುವವರು ಯಾರು?

ಯಡಿಯೂರಪ್ಪನವರೊಬ್ಬರನ್ನು ಹೊರತುಪಡಿಸಿದರೆ ಜತೆಯಲ್ಲಿರುವ ಯಾವ ನಾಯಕರಲ್ಲಿಯೂ ಅವರ ಪರವಾಗಿ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ವರ್ಚಸ್ಸು ಇಲ್ಲವೇ ಸಾಮರ್ಥ್ಯ ಇದ್ದ ಹಾಗಿಲ್ಲ. ಈಗ ರಾಜೀನಾಮೆ ಕೊಟ್ಟವರೆಲ್ಲರೂ ಯಡಿಯೂರಪ್ಪನವರು ಪಕ್ಷ ಬಿಟ್ಟುಹೋದರೆ ಅವರ ಹಿಂದೆ ಹೋಗುತ್ತಾರೆ ಎನ್ನುವುದೂ ಖಾತರಿ ಇಲ್ಲ. ಇವೆಲ್ಲವೂ ತಿಳಿಯದಷ್ಟು ಯಡಿಯೂರಪ್ಪನವರು ದಡ್ಡರಿರಲಾರರು.

ವ್ಯಕ್ತಿ ಎಷ್ಟೇ ಜಾಣನಾಗಿದ್ದರೂ ಕೋಪದ ಕೈಗೆ ಬುದ್ದಿ ಕೊಟ್ಟರೆ ಆಗುವುದೆಲ್ಲವೂ ಅನಾಹುತ. ಅವರ ಮೇಲಿನ ಆರೋಪಗಳಿಗಾಗಲಿ, ಸಿಬಿಐ ಅವರ ವಿರುದ್ಧ ನಡೆಸಲಿರುವ ತನಿಖೆಗಾಗಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಕಾರಣರಲ್ಲ. 

ಗೌಡರು ಕೆಳಗಿಳಿದು ಯಡಿಯೂರಪ್ಪನವರ ಆಪ್ತರು ಮುಖ್ಯಮಂತ್ರಿಯಾದರೂ ಅವರು ಈಗ ಎದುರಿಸುತ್ತಿರುವ ಯಾವ ಕಷ್ಟವೂ ಪರಿಹಾರವಾಗಲಾರದು. ಹೀಗಿದ್ದರೂ ಯಡಿಯೂರಪ್ಪನವರು ತಮ್ಮದೇ ಪಕ್ಷದ ಮುಖ್ಯಮಂತ್ರಿಯ ತಲೆದಂಡಕ್ಕಾಗಿ ಪಟ್ಟು ಹಿಡಿದಿದ್ದಾರೆ. ಇದು ಯಡಿಯೂರಪ್ಪ ಶೈಲಿ. ಅವರು ಸಿಟ್ಟಿಗೆ ಹೆಸರಾದವರೇ ಹೊರತು, ಸಹನೆ-ಸಂಯಮಕ್ಕಲ್ಲ. ತನ್ನ ಒಂದು ಕಣ್ಣುಹೋದರೂ ಸರಿ, ಎದುರಾಳಿಯ ಎರಡೂ ಕಣ್ಣು ಹೋಗಬೇಕೆಂದು ಹೇಳುವಂತಹ ಹಟಮಾರಿ ಅವರು.

ಈ ರೀತಿ ಹತಾಶೆಗೀಡಾಗಿರುವ ವ್ಯಕ್ತಿ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರೇನಾದರೂ ಪಕ್ಷದಿಂದ ಹೊರನಡೆದು ಸ್ವಂತ ಪಕ್ಷ ಕಟ್ಟುವ ನಿರ್ಧಾರಕ್ಕೆ ಬಂದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳಲಿರುವುದು ಖಚಿತ. ಅದಕ್ಕಿಂತಲೂ ಹೆಚ್ಚು ಅನಾಹುತವಾಗಲಿರುವುದು ಅವರು ಬಾಯಿ ಬಿಟ್ಟಾಗ. ಯಡಿಯೂರಪ್ಪನವರು ಅಕ್ರಮಗಳಲ್ಲಿ ಭಾಗಿಯಾಗಿರುವುದು ನಿಜವೇ ಆಗಿದ್ದರೆ ತನ್ನನ್ನು ಮೌಲ್ಯನಿಷ್ಠ ರಾಜಕೀಯ ಪಕ್ಷ ಎಂದು ಬಿಂಬಿಸಿಕೊಳ್ಳುತ್ತಿರುವ ಅವರ ಪಕ್ಷ ಏನು ಮಾಡುತ್ತಿತ್ತು? ಅದರ ರಾಷ್ಟ್ರೀಯ ಅಧ್ಯಕ್ಷರು ಏನು ಮಾಡುತ್ತಿದ್ದರು, ಶಿಕ್ಷೆ ಅವರೊಬ್ಬರೇ ಯಾಕೆ ಅನುಭವಿಸಬೇಕು? ಆದರೆ ಆಗುತ್ತಿರುವುದೇನು? ಯಡಿಯೂರಪ್ಪನವರ ಕೊರಳಿಗೆ ಸಿಬಿಐ ತನಿಖೆಯ ಕುಣಿಕೆ, ಕರ್ನಾಟಕದ ಬಿಜೆಪಿಯ ಎಲ್ಲ ಕರ್ಮಕಾಂಡಗಳಿಗೆ ಮೂಕಪ್ರೇಕ್ಷಕರಾಗಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗುವ ಅವಕಾಶದ ಉಡುಗೊರೆ. ಇದೆಂತಹ ನ್ಯಾಯ?