Showing posts with label ಚುನಾವಣಾ ನೀತಿ ಸಂಹಿತೆ 2013. Show all posts
Showing posts with label ಚುನಾವಣಾ ನೀತಿ ಸಂಹಿತೆ 2013. Show all posts

Saturday, May 4, 2013

ಚುನಾವಣೆ ಸಂಭ್ರಮ ಮಂಕುಗೊಳಿಸಿರುವ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ಪ್ರಜಾಪ್ರಭುತ್ವದ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಾ ಬಂದಿರುವ ಚುನಾವಣೆ  ತನ್ನ ಸಾಂಪ್ರದಾಯಿಕ ಸಂಭ್ರಮ-ಸಡಗರಗಳನ್ನು ಕಳೆದುಕೊಳ್ಳುತ್ತಿದೆಯೇ?.
ಚುನಾವಣಾ ಕಾಲದಲ್ಲಿ ಸಾಮಾನ್ಯವಾಗಿ ನಡೆಯುವ  ಚರ್ಚೆ -ಜಗಳಗಳೂ ಕೂಡಾ ಅಂಜಿಕೆ-ಅಳುಕಿನ ವಾತಾವರಣದಿಂದಾಗಿ ನಡೆಯದೆ  ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗತ್ಯವಾದ ಸಾರ್ವಜನಿಕ ಸಂವಾದ ನಡೆಯದಂತಾಗಿದೆಯೇ? ರಾಜ್ಯದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ಬೀದಿಗಳಲ್ಲಿ ನೋಡುತ್ತಾ ಬಂದವರನ್ನು ಇಂತಹ ಪ್ರಶ್ನೆಗಳು ಖಂಡಿತ ಕಾಡಬಹುದು.
ಇಪ್ಪತ್ತು ದಿನ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ನಾನು ಅಂದಾಜು ಎರಡುಸಾವಿರ ಕಿ.ಮೀ. ಪ್ರಯಾಣ ಮಾಡಿದ್ದೇನೆ. ರಾಜಕೀಯ ಸಭೆಗಳ ವೇದಿಕೆಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಪೋಸ್ಟರ್,ಬ್ಯಾನರ್, ಕರಪತ್ರ, ಬ್ಯಾಡ್ಜ್, ಪಕ್ಷಗಳ ಧ್ವಜಗಳು ಕಣ್ಣಿಗೆ ಬಿದ್ದಿಲ್ಲ. ನನ್ನ ಕಣ್ಣಿನಲ್ಲಿಯೇ ದೋಷ ಇರಬಹುದೇನೋ ಎಂಬ ಅನುಮಾನ ಮೂಡಿ ಎಲ್ಲಿಯಾದರೂ ಪೋಸ್ಟರ್-ಬ್ಯಾನರ್ ಕಣ್ಣಿಗೆ ಬಿದ್ದರೆ ಕಾರು ನಿಲ್ಲಿಸುವಂತೆ ಚಾಲಕನಿಗೂ ಹೇಳಿದ್ದೆ. ಅವನ ಕಣ್ಣಿಗೂ ಬೀಳಲಿಲ್ಲ. ಇದನ್ನು ಕಂಡು ಎಷ್ಟೊಂದು ಕಟ್ಟುನಿಟ್ಟಿನಿಂದ ಚುನಾವಣೆ ನಡೆಯುತ್ತಿದೆ ಎಂದು ಸಂತೋಷಪಡೋಣವೇ?
ಊರು ತುಂಬಾ ಪೋಸ್ಟರ್,ಬ್ಯಾನರ್‌ಗಳು,ಕಾರು-ಅಟೋರಿಕ್ಷಾಗಳಲ್ಲಿ ಮೈಕ್ ಪ್ರಚಾರ, ಕರಪತ್ರ, ಬ್ಯಾಡ್ಜ್‌ಗಳನ್ನು ಸಂಗ್ರಹಿಸಲು ಕಾರು-ರಿಕ್ಷಾಗಳ ಹಿಂದೆ ಓಡುವ ಬಾಲಕರು, ಪಕ್ಷ ನಿಷ್ಠೆಯನ್ನು ಬಹಿರಂಗವಾಗಿ ಘೋಷಿಸುವ ರೀತಿಯಲ್ಲಿ ಮನೆಗಳ ಮೇಲೆ ಹಾರಾಡುವ ಧ್ವಜಗಳು...ಇವೆಲ್ಲವೂ ಚುನಾವಣೆಯ ಕಾಲದಲ್ಲಿ  ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದ ಕಾಲವೊಂದಿತ್ತು.
ಎಲ್ಲೆಲ್ಲೂ ಖಾಲಿ ಖಾಲಿ: ಪಕ್ಷಗಳ ಪರವಿರೋಧದಿಂದಾಗಿ ನಡೆಯುವ ಸಣ್ಣಪುಟ್ಟ ಜಗಳ ಮತ್ತು  ಕೋಪ-ದ್ವೇಷಗಳು ಒಂದಷ್ಟು ದಿನ ಸ್ನೇಹ-ಸಂಬಂಧಗಳನ್ನು ಕದಡಿ ನಂತರ ತಿಳಿಯಾಗುತ್ತಿತ್ತು. ಆದರೆ ಇಂದು ಯಾವುದಾದರೂ ಊರೊಳಗೆ ಪ್ರವೇಶಿಸಿದರೆ ಇಂತಹ ವಾತಾವರಣವನ್ನು ಕಾಣಲು ಸಾಧ್ಯವಿಲ್ಲ. ಎಲ್ಲಿಯೂ ಚುನಾವಣೆಯ ಸುಳಿವೇ ಇಲ್ಲ. ಎಲ್ಲವೂ ಖಾಲಿ-ಖಾಲಿ, ಬೋಳು-ಬೋಳು.
`ಅನಗತ್ಯ ವೆಚ್ಚವನ್ನು ಕಡಿಮೆ ಮಾಡುವ ಇಂತಹ ಕ್ರಮಗಳು ಸ್ವಾಗತಾರ್ಹ' ಎಂದು ಹೇಳುವವರಿದ್ದಾರೆ. ಚುನಾವಣಾ ಪ್ರಚಾರದ ಅವಧಿಯನ್ನು ಒಂದುವಾರಕ್ಕೆ ಸೀಮಿತಗೊಳಿಸಿದರೆ ಮತದಾರರಿಗೆ ಒಡ್ಡುವ ಆಮಿಷ ಇನ್ನೂ ಕಡಿಮೆಯಾಗಬಹುದು' ಎಂದು ಸಲಹೆ ನೀಡುವವರೂ ಇದ್ದಾರೆ.
ಆದರೆ ದುಡ್ಡು,ಹೆಂಡ,ಬಾಡು,ಸೀರೆ ಹಂಚುವ, ಜಾತಿ-ಧರ್ಮವನ್ನು ಬಳಸಿಕೊಳ್ಳುವ ಚುನಾವಣಾ ಅಕ್ರಮಗಳ ಅತಿರೇಕ ಒಂದೆಡೆಯಾದರೆ, ಈ ಅಕ್ರಮಗಳನ್ನೆಲ್ಲ ತಡೆಯಲು ಹೊರಟು ಚುನಾವಣೆಯಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳದಂತೆ ಮಾಡುವುದು ಇನ್ನೊಂದು ಅತಿರೇಕದಂತೆ ಕಾಣಿಸುತ್ತದೆ.
`ದುಡ್ಡು ಹಂಚುವುದನ್ನು ತಡೆಯಲಿ, ಪ್ರಚಾರಕ್ಕೆ ಬಂದ ಕಾರ್ಯಕರ್ತರು ಊಟ ಮಾಡಿದ ತಟ್ಟೆಗಳನ್ನೂ ಲೆಕ್ಕ ಮಾಡುವುದು ಏನು ಅಸಹ್ಯ ಸಾರ್? ನಮಗಾಗಿ ಬಂದು ಈ ಬಿಸಿಲಿನಲ್ಲಿ ಅವರು ಬೆವರು ಸುರಿಸುತ್ತಾರೆ ಅವರಿಗೆ ಅಷ್ಟೂ ಕೊಡುವುದು ಬೇಡವೇ? ರೂ16 ಲಕ್ಷದಲ್ಲಿ ಚುನಾವಣೆ ಮಾಡ್ಲಿಕ್ಕಾಗುತ್ತಾ? ಎಂದು ಪ್ರಶ್ನಿಸಿದ ಗುಲ್ಬರ್ಗ ಜಿಲ್ಲೆಯ ಕ್ಷೇತ್ರವೊಂದರ ಅಭ್ಯರ್ಥಿಯೊಬ್ಬ.
`ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ನಿಜವಾಗಿ ನಿಮ್ಮ ಚುನಾವಣಾ ವೆಚ್ಚ ಕಡಿಮೆಯಾಗಿದೆಯೇ?' ಎಂಬ ಪ್ರಶ್ನೆಯನ್ನು ಹಲವಾರು ಅಭ್ಯರ್ಥಿಗಳನ್ನು ನಾನು ಕೇಳಿದ್ದೆ. ಕೆಲವರು ವ್ಯಂಗ್ಯವಾಗಿ ನಕ್ಕು ಸುಮ್ಮನಾದರು, ಇನ್ನೂ ಕೆಲವರು ದುಡ್ಡು ಯಾಕೆ ಮತ್ತು ಹೇಗೆ ಖರ್ಚಾಗುತ್ತದೆ ಎಂಬ ವಿವರ ನೀಡಿದರೇ ಹೊರತು  ಯಾರೊಬ್ಬರೂ `ಈ ಬಾರಿ ಖರ್ಚು ಕಡಿಮೆ' ಎಂದು  ಹೇಳಲಿಲ್ಲ.
ಈ ಪೋಸ್ಟರ್,ಬ್ಯಾನರ್,ಕರಪತ್ರ, ಟೋಪಿ, ಬ್ಯಾಡ್ಜ್‌ಗಳಿಗೆ ಒಬ್ಬ ಅಭ್ಯರ್ಥಿ ಮಾಡುವ ಖರ್ಚು ಕೆಲವು ಲಕ್ಷ         ರೂಪಾಯಿ ಮಾತ್ರ. ಸಾಮಾನ್ಯವಾಗಿ ಇವುಗಳನ್ನೆಲ್ಲ ಪಕ್ಷಗಳೇ ಪೂರೈಸುತ್ತವೆ. ಮತದಾರರಿಗೆ ಆಮಿಷವೊಡ್ಡಲು ನೀಡುವ ಹಣದ ಮೊತ್ತವೇ ದೊಡ್ಡದು. ಇದು ಕಡಿಮೆಯಾಗಿದೆಯೇ?
ಹಣದ ಪ್ರಭಾವ ಕಡಿಮೆ?: ಅಕ್ರಮವಾಗಿ ಹಣ ಸಂಗ್ರಹ ಮತ್ತು ಸಾಗಾಣಿಕೆಯ ವಿರುದ್ಧದ ಕ್ರಮದಿಂದಾಗಿ ಚುನಾವಣೆಯಲ್ಲಿ ಹಣದ ಪ್ರಭಾವ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯವೂ ಇದೆ. ಹೆದ್ದಾರಿಗಳಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ವಾಹನಗಳ ತಪಾಸಣೆ  ನಡೆಸಲಾಗುತ್ತದೆ.  ಪ್ರವಾಸದುದ್ದಕ್ಕೂ ಕನಿಷ್ಠ 25-30 ಕಡೆಗಳಲ್ಲಿ ನಮ್ಮ ಕಾರಿನ ತಪಾಸಣೆ ನಡೆಸಿದ್ದಾರೆ. ಎಲ್ಲ ಕಡೆಗಳಲ್ಲಿ ತಪಾಸಣೆಯ ಕ್ರಮ ಒಂದೇ ರೀತಿಯದ್ದು. ಕಾರು ನಿಲ್ಲಿಸಿದ ಮೇಲೆ ಡಿಕ್ಕಿ ತೆರೆಯಲು ಹೇಳುವುದು, ಎಲ್ಲಿಂದ ಬಂದಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳುವುದು, ಚಾಲಕನ ಹೆಸರು ಮತ್ತು ಕಾರಿನ ನಂಬರ್ ಬರೆದುಕೊಳ್ಳುವುದು-ಅಲ್ಲಿಗೆ ತಪಾಸಣೆ ಮುಗಿಯಿತು. ಯಾರೂ ಕೂಡಾ ಕಾರಿನಲ್ಲಿದ್ದ ನನ್ನನ್ನು ಯಾರು ಎಂದು ಕೇಳಿಲ್ಲ, ಕಾರಿನೊಳಗಿದ್ದ ನನ್ನ ಬ್ಯಾಗ್ ಚೆಕ್ ಮಾಡಿಲ್ಲ. `ಈ ರೀತಿ ಹೆದ್ದಾರಿಯಲ್ಲಿ ತಪಾಸಣೆ ಮಾಡುವುದರಿಂದ ಹಣದ ಸಾಗಾಣಿಕೆಗೆ ತೊಂದರೆಯಾಗಿದೆಯೇ?' ಎಂದು ರಾಜಕೀಯ ಪಕ್ಷದ ನಾಯಕರೊಬ್ಬರನ್ನು ಕೇಳಿದೆ. `ದುಡ್ಡು ಸಾಗಿಸುವವರು ಹೆದ್ದಾರಿಯಲ್ಲಿ  ಅದೂ ಕಾರುಗಳಲ್ಲಿ  ಹೋಗುತ್ತಾರೆಯೇ? ಹೆದ್ದಾರಿ ಬಿಟ್ಟು ಊರೊಳಗೆ ಒಳದಾರಿಗಳಿಲ್ಲವೇ? ಕಾರು ಯಾಕೆ ಬೇಕು, ಮೋಟಾರ್ ಸೈಕಲ್,ಬಸ್,ಲಾರಿಗಳಿಲ್ಲವೇ? ಎಂದು ಪ್ರಶ್ನಿಸಿದ, ಆತ ದುಡ್ಡು ಸಾಗಿಸುವ ಅನೇಕ ಹೊಸ ವಿಧಾನಗಳನ್ನು ತಿಳಿಸಿ ಅಚ್ಚರಿಗೊಳಿಸಿದ.
`ಚುನಾವಣಾ ಆಯೋಗದ ಕ್ರಮಗಳಿಂದಾಗಿ ಬರುವ ದುಡ್ಡು ಹೋಯಿತು' ಎಂದು ಹಳ್ಳಿಗಳಲ್ಲಿ ಜನ ಕೊರಗುತ್ತಿದ್ದಾರೆ. `ಖರ್ಚು ಕಡಿಮೆಯಾಗಿಲ್ಲ' ಎಂದು ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಚುನಾವಣೆ ಘೋಷಣೆಯಾದ ಕೂಡಲೇ ಬಹಳಷ್ಟು ರಾಜಕಾರಣಿಗಳು  ಊರುಗಳಲ್ಲಿರುವ ತಮ್ಮ ಬೆಂಬಲಿಗರ ಮನೆಗಳಿಗೆ ಹಣ ಸಾಗಿಸಿದ್ದಾರೆ.
`ಸಮಸ್ಯೆ ಹಣದ್ದು ಸಾರ್, ಸಾಗಿಸುವುದು, ವಿತರಿಸುವುದು ಅಲ್ಲ. ಅದಕ್ಕೆ ಬೇಕಾದಷ್ಟು ದಾರಿಗಳಿವೆ ' ಎಂದ ಹಾಸನದ ರಾಜಕೀಯ ಕಾರ್ಯಕರ್ತನೊಬ್ಬ. `ನಮ್ಮ ಲೀಡರ್‌ಗಳಿಗೆ ದುಡ್ಡು ಕೊಟ್ಟಿದ್ದಾರಂತೆ, ಎಲೆಕ್ಷನ್ ಅಧಿಕಾರಿಗಳ ಭಯ ತೋರಿಸಿ ಅದನ್ನು ತಾವೇ ಇಟ್ಟುಕೊಂಡಿದ್ದಾರೆ' ಎಂದ ಬಳ್ಳಾರಿಯ ಮತದಾರನೊಬ್ಬ.
ಇದಕ್ಕೆಲ್ಲ ಏನು ಪರಿಹಾರ? ಹಿಂದಿನ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಅಕ್ರಮ ಸಂಗ್ರಹಿಸಿದ್ದ ಮತ್ತು ಸಾಗಿಸುತ್ತಿದ್ದ ಹಲವಾರು ಕೋಟಿ ರೂಪಾಯಿಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಂಬ್ಯುಲೆನ್ಸ್‌ನಲ್ಲಿ ಹಣ ಸಾಗಿಸುತ್ತಿರುವವರನ್ನೂ ಬಂಧಿಸಿದ್ದರು. ಆ ಪ್ರಕರಣಗಳೇನಾಯಿತು? ಯಾರಿಗಾದರೂ ಶಿಕ್ಷೆಯಾಯಿತೇ? ಇಂತಹ ಅಕ್ರಮಗಳನ್ನು ಮಾಡಿದ್ದ ಎಷ್ಟು ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದೆ? ಕೋಟ್ಯಂತರ ರೂಪಾಯಿ ಖರ್ಚು ಮಾಡುವವರಿಗೆ ಅದರಲ್ಲಿ ಒಂದಷ್ಟು ಪಾಲು ಕೈಬಿಟ್ಟುಹೋದರೂ ತಲೆಕೆಡಿಸಿಕೊಳ್ಳುವುದಿಲ್ಲ. ಶಿಕ್ಷೆಯ ಭಯದಿಂದ ಮಾತ್ರ ಅವರನ್ನು ಹದ್ದುಬಸ್ಸಿನಲ್ಲಿಡಲು ಸಾಧ್ಯ. ಅದು ಆಗುತ್ತಿಲ್ಲ.
ಕೋಟ್ಯಧಿಪತಿಗಳಲ್ಲದವರು ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆಯನ್ನೂ ಮಾಡದಂತಹ ಸ್ಥಿತಿ ಇದೆ. ಯಾವ ರಾಜಕೀಯ ಪಕ್ಷವೂ ದುಡ್ಡಿಲ್ಲದವರಿಗೆ ಟಿಕೆಟ್ ನೀಡುವುದಿಲ್ಲ. ಟಿಕೆಟ್ ಆಕಾಂಕ್ಷಿ ಕೋಟ್ಯಧಿಪತಿಗಳ ದುಡ್ಡಿನ ಮೂಲ ಯಾವುದು? ಅದು ಅಕ್ರಮವೇ,ಸಕ್ರಮವೇ? ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಸ್ವ ಇಚ್ಛೆಯಿಂದ ನೀಡಿದ ಆಸ್ತಿವಿವರದ ಸತ್ಯಾಸತ್ಯತೆಯನ್ನು ಯಾರಾದರೂ ಪರಿಶೀಲಿಸುತ್ತಾರೆಯೇ? ಅದನ್ನು ಮಾಡಲು ಚುನಾವಣಾ ಆಯೋಗದಲ್ಲಿ ಸಿಬ್ಬಂದಿಯೂ ಇಲ್ಲ, ಅದಕ್ಕೆ ಸಮಯವೂ ಇಲ್ಲ.
ಚುನಾವಣೆ ಮುಗಿದ ನಂತರವಾದರೂ ಅಭ್ಯರ್ಥಿಗಳ ಆಸ್ತಿ ವಿವರವನ್ನು ವರಮಾನ ತೆರಿಗೆ ಇಲಾಖೆಗೆ ಕಳುಹಿಸಿ ಎಂದು ಪರಿಶೀಲನೆಗೆ ಒಳಪಡಿಸಬಹುದಲ್ಲಾ? ಈ ರೀತಿ ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಅದರ ಮೂಲದಲ್ಲಿಯೇ ತಡೆಯುವ ಪ್ರಯತ್ನ ಮಾಡದೆ ಪೋಸ್ಟರ್,ಬ್ಯಾನರ್‌ಗಳ ಮೇಲೆ ಕಡಿವಾಣ ಹಾಕುವುದರಿಂದ ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯವೇ? ಇಂತಹ `ಕಟ್ಟುನಿಟ್ಟಿನ ಕ್ರಮಗಳು' ಚುನಾವಣೆಯ ಸಂಭ್ರಮವನ್ನು ಮಂಕುಗೊಳಿಸಬಹುದು ಅಷ್ಟೆ.