Showing posts with label 2013 ಕಾಂಗ್ರೆಸ್ ಸರ್ಕಾರ. Show all posts
Showing posts with label 2013 ಕಾಂಗ್ರೆಸ್ ಸರ್ಕಾರ. Show all posts

Monday, May 6, 2013

ಕಾಂಗ್ರೆಸ್ ಸರ್ಕಾರ ರಚಿಸಬಹುದು, ಆದರೆ...?

ರ್ನಾಟಕದಲ್ಲಿ ಈ ಬಾರಿ ಚುನಾವಣೋತ್ತರ ಭವಿಷ್ಯ ನುಡಿಯುವುದಕ್ಕೆ ಚುನಾವಣಾ ಶಾಸ್ತ್ರದ ಪರಿಣತಿ ಬೇಕಾಗಿಲ್ಲ. ಮೊದಲಿನ ನಾಲ್ಕು ಸ್ಥಾನಗಳ
ಲ್ಲಿ ಯಾರು ಇರುತ್ತಾರೆ ಎನ್ನುವುದು ಚುನಾವಣೆ ಘೋಷಣೆಯಾಗುವ ದಿನವೇ ನಿರ್ಧಾರವಾಗಿದೆ. ಅದು ಕ್ರಮವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್) ಮತ್ತು ಕೆಜೆಪಿ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವುದನ್ನು ಊಹಿಸುವುದು ಕೂಡಾ ಕಷ್ಟದ ಕೆಲಸ ಅಲ್ಲ, ಅದು ಕಾಂಗ್ರೆಸ್. ಯಾವ ಪಕ್ಷದವರು ಮುಖ್ಯಮಂತ್ರಿಯಾಗಬಹುದು ಎನ್ನುವುದನ್ನು ಕೂಡಾ ಹೇಳಿಬಿಡಬಹುದು, ಅದೂ ಕಾಂಗ್ರೆಸ್. ಇಷ್ಟು ಹೇಳಿದ ಮಾತ್ರಕ್ಕೆ ಚುನಾವಣೋತ್ತರ ಭವಿಷ್ಯ ಪೂರ್ಣವಾಗುವುದಿಲ್ಲ. ಯಾಕೆಂದರೆ ಇದರೊಳಗೆ ಒಂದಷ್ಟು ಒಳಸುಳಿಗಳಿವೆ.
ಕಾಂಗ್ರೆಸ್ ಎಷ್ಟೇ ಕಡಿಮೆ ಸ್ಥಾನಗಳಿಸಿದರೂ ಎಂಬತ್ತಕ್ಕಿಂತ ಕೆಳಗಿಳಿಯಲಾರದು. ಅದು 80,90,100,120 ಹೀಗೆ ಯಾವುದೇ ಸಂಖ್ಯೆಯಲ್ಲಿ ಹೋಗಿ ನಿಲ್ಲಬಹುದು. ಚುನಾವಣಾಪೂರ್ವ ಮೈತ್ರಿ ಇಲ್ಲದ ಸಂದರ್ಭಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದ ಪಕ್ಷವನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ಹಾನಿಸುವುದು ಸಂಪ್ರದಾಯ. ಇದನ್ನು ಮುರಿದ ಅನೇಕ ಪ್ರಸಂಗಗಳಿದ್ದರೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರ ರಾಜ್ಯಪಾಲರೆಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳತೊಡಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಒಂದು ಅನುಕೂಲತೆ ಇದೆ. ಇಲ್ಲಿನ ರಾಜ್ಯಪಾಲರು ಒಂದು ಕಾಲದಲ್ಲಿ ಕಾಂಗ್ರೆಸಿಗರಾಗಿದ್ದವರು ಮಾತ್ರವಲ್ಲ ತಮ್ಮ ಹಳೆಯ ಪಕ್ಷದ ಬಗೆಗಿನ ಒಲವನ್ನು ಬಚ್ಚಿಟ್ಟುಕೊಳ್ಳಲಾಗದಷ್ಟು ಪಕ್ಷ ನಿಷ್ಠರಾಗಿರುವುದರಿಂದ ಮೊದಲ ಆಹ್ವಾನ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ಖಾತರಿ.
ಒಮ್ಮೆ ರಾಜ್ಯಪಾಲರಿಂದ ಆಹ್ವಾನ ಬಂದುಬಿಟ್ಟರೆ ಬಹುಮತವನ್ನು ಗಳಿಸುವುದು ಯಾವ ರಾಜಕೀಯ ಪಕ್ಷಕ್ಕೂ ಕಷ್ಟದ ಕೆಲಸ ಅಲ್ಲ.
ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ ಎಂಬತ್ತು ತಲುಪಬಲ್ಲ ಇಲ್ಲವೆ ಅದಕ್ಕಿಂತಲೂ ಮುಂದೆ ಹೋಗಬಲ್ಲ ಯಾವ ರಾಜಕೀಯ ಪಕ್ಷವೂ ಸದ್ಯ ಚುನಾವಣಾ ಕಣದಲ್ಲಿ ಇಲ್ಲ. ಸ್ವಂತ ಬಲದಿಂದ ಸರ್ಕಾರ ರಚಿಸುವುದಾಗಿ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಕೂಗಿ ಕೂಗಿ ಹೇಳಿದರೂ ಖಾಸಗಿಯಾಗಿ ಅವರು ಕೊಡುವ ಲೆಕ್ಕಾಚಾರ ಅರವತ್ತರ ಸಂಖ್ಯೆಯನ್ನು ದಾಟುವುದಿಲ್ಲ. ದೇವೇಗೌಡರು ತಮ್ಮ ಪಕ್ಷವೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಎಂದು ಗುಡುಗಿದರೂ ಅವರ ಶಾಸಕರ ಸಂಖ್ಯೆ 30-40ಕ್ಕಿಂತ ಮೇಲೇರಲಾರದು. ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ನಾಯಕ ಬಿ.ಎಸ್.ಯಡಿಯೂರಪ್ಪನವರೇ ಒಪ್ಪಿಕೊಂಡಿರುವ ಪ್ರಕಾರ ಅವರ ನಿರೀಕ್ಷೆಯ ಗರಿಷ್ಠ ಸಂಖ್ಯೆ ಅರವತ್ತು.
ಯಡಿಯೂರಪ್ಪನವರ ಲೆಕ್ಕದ ಮೂರನೆ ಒಂದರಷ್ಟು ಸ್ಥಾನಗಳನ್ನು ಗೆದ್ದರೂ ಅದು ಅವರ ಪಕ್ಷದ ದೊಡ್ಡ ಸಾಧನೆ. `ಸ್ವಂತಬಲದಿಂದ ಸರ್ಕಾರ ರಚಿಸಲಿದ್ದೇವೆ' ಎಂದು ದೇವೇಗೌಡ ಇಲ್ಲವೆ ಯಡಿಯೂರಪ್ಪನವರು ಹೇಳುತ್ತಿಲ್ಲ, `ನಮ್ಮನ್ನು ಬಿಟ್ಟು ಬೇರೆಯವರು ಸರ್ಕಾರ ರಚನೆ ಮಾಡುವುದು ಸಾಧ್ಯ ಇಲ್ಲ' ಎಂದಷ್ಟೇ ಅವರ ವಾದ. ಈ ರೀತಿ ಕಾಂಗ್ರೆಸ್ ಪಕ್ಷವೇ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ವಿರೋಧಪಕ್ಷಗಳೇ ಪರೋಕ್ಷವಾಗಿ ಒಪ್ಪಿಕೊಂಡಿರುವಾಗ ಸರ್ಕಾರ ರಚನೆಗಾಗಿ  ಕಾಂಗ್ರೆಸ್ ಪಕ್ಷ ಮೊದಲ ಆಹ್ವಾನ ಪಡೆಯುವುದಕ್ಕೆ ಏನು ಅಡ್ಡಿ ಇದೆ?
ಕಾಂಗ್ರೆಸ್ ಪಕ್ಷವೇನೋ ಸರ್ಕಾರ ರಚಿಸಿಬಿಡಬಹುದು. ಆದರೆ ಆ ಸರ್ಕಾರ ಏಕಪಕ್ಷದ್ದೇ ಇಲ್ಲವೆ ಮೈತ್ರಿಕೂಟದ್ದೇ? ಎನ್ನುವುದನ್ನು ಮಾತ್ರ  ಚುನಾವಣಾ ಫಲಿತಾಂಶ ನಿರ್ಧರಿಸಬೇಕಾಗಿದೆ. ಬಹುಮತಕ್ಕೆ ಬೇಕಾಗಿರುವ 113 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ ವಿಧಾನಸೌಧ ಪ್ರವೇಶಿಸಲು ಬೇರೆಯವರ ನೆರವು ಬೇಕಾಗಲಾರದು. ಒಂದೊಮ್ಮೆ ಅದು 105ರ ವರೆಗೂ ಇಳಿದರೂ ಸಮಸ್ಯೆಯಾಗಲಾರದು, ಏಳೆಂಟು ಪಕ್ಷೇತರರು ಮತ್ತುಬಂಡುಕೋರರು ಆರಿಸಿಬರುವ ಸಾಧ್ಯತೆ ಇರುವುದರಿಂದ ಅವರನ್ನು ಕಟ್ಟಿಕೊಂಡು ಸರ್ಕಾರ ರಚಿಸಬಹುದು. ಆದರೆ ನೂರು ಇಲ್ಲವೆ ಅದಕ್ಕಿಂತಲೂ ಕೆಳಗಿಳಿದರೆ ಮಿತ್ರಪಕ್ಷಗಳನ್ನು ಹುಡುಕುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಂದೆ ಇರುವುದು ಎರಡೇ ಆಯ್ಕೆ - ಜಾತ್ಯತೀತ ಜನತಾದಳ ಮತ್ತು ಕರ್ನಾಟಕ ಜನತಾ ಪಕ್ಷ. ಚುನಾವಣಾ ಪ್ರಚಾರವನ್ನು ಗಮನಿಸಿದರೆ ಈ ಎರಡು ಪಕ್ಷಗಳಲ್ಲಿ ಜೆಡಿ(ಎಸ್) ನಿರಂತರವಾಗಿ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಪಕ್ಷದ ವಿರುದ್ಧ. ಬಿಜೆಪಿ ಬಗೆಗಿನ ಅದರ ಮೆದುಧೋರಣೆ `ಎರಡು ಪಕ್ಷಗಳೊಳಗೆ ಒಳಒಪ್ಪಂದ ಆಗಿದೆ' ಎಂದು ಆರೋಪಿಸುವಷ್ಟು ಎದ್ದು ಕಾಣುತ್ತಿತ್ತು. ಅಧಿಕಾರಾರೂಢ ಪಕ್ಷ ಬಿಜೆಪಿಯಾದರೂ ಜೆಡಿ (ಎಸ್) ಆ ಪಕ್ಷವನ್ನು ಕಾಂಗ್ರೆಸ್‌ನಷ್ಟು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿಲ್ಲ ಎನ್ನುವುದು ಗಮನಾರ್ಹ.
ಇದೇ ರೀತಿ ಕೆಜೆಪಿ ಗುರಿ ಮಾಡಿದ್ದು ಜೆಡಿ (ಎಸ್) ಮತ್ತು ಬಿಜೆಪಿಯನ್ನು ಕಾಂಗ್ರೆಸ್ ಪಕ್ಷವನ್ನಲ್ಲ. ಚುನಾವಣಾ ಪ್ರಚಾರದ ಮಧ್ಯೆ ಮಾತಿಗೆ ಸಿಕ್ಕಿದ್ದ ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪನವರು ಕಾಂಗ್ರೆಸ್ ಮತ್ತು ಕೆಜೆಪಿ ಮೈತ್ರಿಕೂಟದ ಸರ್ಕಾರದ ಇಂಗಿತ ವ್ಯಕ್ತಪಡಿಸಿದ್ದರು. ಸ್ಪಷ್ಟವಾಗಿ ಏನನ್ನೂ ಹೇಳದೆ ಇದ್ದರೂ ಕಾಂಗ್ರೆಸ್ ಪಕ್ಷದ ದೆಹಲಿ ನಾಯಕರ ಮೇಲೆ ವಿಪರೀತ ಭರವಸೆಯಿಂದ ಅವರು ಮಾತನಾಡಿ ಅಚ್ಚರಿಗೊಳಿಸಿದ್ದರು. ಯಡಿಯೂರಪ್ಪನರು ಇನ್ನೂ ಸಿಬಿಐ ಕಣ್ಗಾವಲಿನಲ್ಲಿ ಇರುವುದರಿಂದ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸುಲಭ ಮತ್ತು ವೈಯಕ್ತಿಕವಾಗಿ ದೇವೇಗೌಡರಿಗಿಂತ ಇವರು ವಾಸಿ ಎನ್ನುವ ಕಾಂಗ್ರೆಸ್ ನಾಯಕರ ಅಭಿಪ್ರಾಯ ನಿಜ ಇರಬಹುದು. ಆದರೆ ಕೆಜೆಪಿ ಜತೆ ಮೈತ್ರಿಗೆ ಕಾಂಗ್ರೆಸ್ ಸಿದ್ಧ ಇದೆಯೇ ಎನ್ನುವುದು ಪ್ರಶ್ನೆ. ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾದಾಗ ಅವರ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್ ಯಾವ ಮುಖ ಹೊತ್ತು ಅವರ ನೇತೃತ್ವದ ಪಕ್ಷದ ಜತೆ ಮೈತ್ರಿ ಮಾಡಲು ಸಾಧ್ಯ? ಇನ್ನೇನು ಒಂದು ವರ್ಷದೊಳಗೆ ಎದುರಾಗಲಿರುವ ಲೋಕಸಭಾ ಚುನಾವಣೆಯನ್ನು ಯಡಿಯೂರಪ್ಪನವರನ್ನು ಕಟ್ಟಿಕೊಂಡು ಎದುರಿಸಲು ಸಾಧ್ಯವೇ?
ಇದು ಸಾಧ್ಯ ಇಲ್ಲ ಎಂದಾದರೆ ಕಾಂಗ್ರೆಸ್‌ಗೆ ಉಳಿದಿರುವ ಆಯ್ಕೆ ಜೆಡಿ (ಎಸ್). ಈ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದರ ಬದಲಿಗೆ ವಿರೋಧಪಕ್ಷದಲ್ಲಿ ಕೂರುವುದು ಒಳ್ಳೆಯ ಮಾರ್ಗ ಎನ್ನುವವರು ಕಾಂಗ್ರೆಸ್‌ನಲ್ಲಿ ಬಹಳ ಸಂಖ್ಯೆಯಲ್ಲಿದ್ದಾರೆ.  ಈ ಮೈತ್ರಿಯಲ್ಲಿ ಸೈದ್ಧಾಂತಿಕವಾದ ತೊಡಕುಗಳಿಲ್ಲ, ನೈತಿಕ ಪ್ರಶ್ನೆಗಳ ಮುಜುಗರವೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿದರೆ ಬಿಜೆಪಿಯನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಕೂಡಾ ಒಪ್ಪುವಂತಹದ್ದು. ಆದರೆ ಈ ಮೈತ್ರಿ ಬಗ್ಗೆ ಇಡೀ ಕಾಂಗ್ರೆಸ್ ಪಕ್ಷದಲ್ಲಿ ಭಯ ಇದೆ. ಹಿಂದಿನ ಇಪ್ಪತ್ತು ತಿಂಗಳ ಅವಧಿಯ ಮೈತ್ರಿ ಸರ್ಕಾರದ ದುಃಸ್ವಪ್ನ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ದೇವೇಗೌಡರ ಜತೆ ಚೌಕಾಶಿ ಮಾಡುವುದು ಸುಲಭದ ಕೆಲಸ ಅಲ್ಲ. ಕಾಂಗ್ರೆಸ್ ಕಡೆಯಿಂದ ಮೈತ್ರಿ ಕೋರಿ ಯಾರಾದರೂ ಕೈಚಾಚಿದರೆ ಗೌಡರು ಹಳೆಸಾಲವನ್ನೆಲ್ಲ ಬಡ್ಡಿ ಸಮೇತ ತೀರಿಸಿಕೊಳ್ಳಲು ಮುಂದಾಗಬಹುದು.
ದೇವೇಗೌಡರಿಗೆ ಸಂಪೂರ್ಣ ಶರಣಾಗಿ  ಜೆಡಿ (ಎಸ್) ಜತೆ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷ ಮೊದಲ ಬಂಡಾಯವನ್ನು ಮನೆಯೊಳಗಿಂದಲೇ ಎದುರಿಸಬೇಕಾಗಬಹುದು. ಜೆಡಿ (ಎಸ್) ಜತೆ ಮೈತ್ರಿ ಏರ್ಪಟ್ಟರೆ  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದನ್ನು ದೇವೇಗೌಡರು ಖಂಡಿತ ಒಪ್ಪಲಾರರು.  ಜೀವಂತವಿರುವಾಗಲೇ ಬೀದಿಗಳಲ್ಲಿ ಸಿದ್ದರಾಮಯ್ಯನವರ ಬೆಂಬಲಿಗರು ತನ್ನ `ಹೆಣ'ಸುಟ್ಟದ್ದನ್ನು ಮರೆತುಬಿಡುವವರು ಗೌಡರಲ್ಲ. ದೇವೇಗೌಡರಿಂದ ಇಂತಹದ್ದೊಂದು ಷರತ್ತು ಎದುರಾದರೆ ಅದನ್ನು ಸಿದ್ದರಾಮಯ್ಯ ಸುಮ್ಮನಿದ್ದು ಸಹಿಸಿಕೊಳ್ಳುವವರೂ ಅಲ್ಲ. ಪಕ್ಷ ತೊರೆಯುವ ಅತಿರೇಕದ ನಿರ್ಧಾರವನ್ನು ಕೈಗೊಳ್ಳಲು ಕೂಡಾ ಅವರು ಹಿಂಜರಿಯಲಾರರು. ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ತನ್ನ ಬೆಂಬಲಿಗರಿಗೂ ಒಂದಷ್ಟು ಟಿಕೆಟ್ ಕೊಡಿಸಿರುವುದರಿಂದ ಒಂದೊಮ್ಮೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಾಲಿಟ್ಟರೆ ಜತೆಯಲ್ಲಿ ಒಂದಷ್ಟು ಶಾಸಕರೂ ಅವರನ್ನು ಹಿಂಬಾಲಿಸಬಹುದು. ಇಂತಹ ಸಂದರ್ಭದಲ್ಲಿ ಜೆಡಿ (ಎಸ್) ಬೆಂಬಲದ ಮೂಲಕ ಸಂಖ್ಯೆಯನ್ನು ಹೊಂದಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಲಾರದು ನಿಜ, ಆದರೆ ದೇವೇಗೌಡರನ್ನು ನಂಬಿಕೊಂಡು ಸಿದ್ದರಾಮಯ್ಯನವರನ್ನು ತ್ಯಾಗ ಮಾಡಲು ಕಾಂಗ್ರೆಸ್ ಮುಂದಾಗಬಹುದೇ?
ಈ ಎರಡು ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೆ ಸಂಖ್ಯಾಬಲ ಗಳಿಸುವ ಮೂರನೆಯ ದಾರಿಯೂ ಇದೆ, ಇದು ಅಡ್ಡದಾರಿ. ಇದು ಕಳೆದ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಹಿಡಿದ ದಾರಿಯೂ ಹೌದು. ಈ ಬಾರಿ ಕಾಂಗ್ರೆಸ್ ಇಂತಹ ಅಡ್ಡದಾರಿ ಹಿಡಿದರೆ ಅದಕ್ಕೆ ಬಲಿಯಾಗಲಿರುವುದು ಅದೇ ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಜನತಾ ಪಕ್ಷ. ಕೆಜೆಪಿ 30ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದರೆ `ಮನೆಮುರಿಯುವುದು' ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಬಹುದು. ಒಂದೊಮ್ಮೆ ಕೆಜೆಪಿ 15-20ರಲ್ಲಿ ಉಳಿದುಬಿಟ್ಟರೆ `ಆಪರೇಷನ್ ಕೈ' ನಡೆಯಬಹುದು. ಬಿಜೆಪಿಯಂತೆ ಶಾಸಕರಿಂದ ರಾಜೀನಾಮೆ ಕೊಡಿಸದೆ ನೇರವಾಗಿ ಕೆಜೆಪಿಯ ಮೂರನೆಯ ಎರಡರಷ್ಟು ಶಾಸಕರನ್ನು ಕಾಂಗ್ರೆಸ್ ಹೊತ್ತುಕೊಂಡು ಹೋಗಬಹುದು. ವೈಯಕ್ತಿಕ ಮತ್ತು ರಾಜಕೀಯ ನಡವಳಿಕೆಯ ಹಲವಾರು ಮಾದರಿಗಳಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರನ್ನು ಹೋಲುವ ಯಡಿಯೂರಪ್ಪನವರು ಈ ವಿಷಯದಲ್ಲಿಯೂ ಸೊರಬದ ಸರದಾರ ಎದುರಿಸಿದ ಪರಿಸ್ಥಿತಿಯನ್ನೇ ಎದುರಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. 2004ರಲ್ಲಿ ಬಂಗಾರಪ್ಪನವರು ಸ್ವತಂತ್ರ ಪಕ್ಷ ಕಟ್ಟಿ ಗೆಲ್ಲಿಸಿಕೊಂಡು ಬಂದ ಹತ್ತು ಶಾಸಕರಲ್ಲಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಜನತಾದಳ ಸೇರಿಬಿಟ್ಟಿದ್ದರು. ಅದೇ ರೀತಿ ಯಡಿಯೂರಪ್ಪನವರೂ ತನ್ನ ಶಾಸಕರ ಪಕ್ಷದ್ರೋಹಕ್ಕೆ ಬಲಿಯಾಗಲೂಬಹುದು. ಇಂತಹ `ಆಪರೇಷನ್'ಗಳಲ್ಲಿ ಕಾಂಗ್ರೆಸ್ ಹಳೆಯ ವೈದ್ಯ ಎನ್ನುವುದನ್ನು ಮರೆಯಬಾರದು.
ಇದರ ಹೊರತಾಗಿ ಸರ್ಕಾರ ರಚನೆಯ ಇನ್ನೊಂದು ಸಾಧ್ಯತೆಯೂ ಇದೆ. ರಾಜ್ಯದ ಒಟ್ಟು 224 ಸ್ಥಾನಗಳಲ್ಲಿ ಕಾಂಗ್ರೆಸ್ ನೂರನ್ನು ಗೆದ್ದರೂ ಉಳಿಯುವುದು 124 ಎನ್ನುವುದು ಸರಳ ಲೆಕ್ಕ. ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಈ 124 ಶಾಸಕರು ಒಟ್ಟಾಗಿಬಿಟ್ಟರೆ? ಅಂದರೆ ಬಿಜೆಪಿ,ಕೆಜೆಪಿ,ಜೆಡಿ (ಎಸ್),ಬಿಎಸ್‌ಆರ್ ಮತ್ತು ಪಕ್ಷೇತರರೆಲ್ಲರೂ ಒಂದಾಗಿಬಿಟ್ಟರೆ? ಈ ರೀತಿ  ಮೈತ್ರಿಕೂಟ ಸರ್ಕಾರದ ರಚನೆ  ಅಸಾಧ್ಯವಲ್ಲ. ಆದರೆ ಇದು ಸಾಧ್ಯವಾಗಬೇಕಾದರೆ ಮೊದಲ ಆಹ್ಹಾನ ಪಡೆದ ಕಾಂಗ್ರೆಸ್ ಬಹುಮತವನ್ನು ಹೊಂದಿಸಿಕೊಳ್ಳಲಾಗದೆ ಅವಕಾಶವನ್ನು ಬಿಟ್ಟುಕೊಡಬೇಕು ಮತ್ತು ಜೆಡಿ (ಎಸ್) ಹಾಗೂ ಕೆಜೆಪಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಸೇರಿಕೊಳ್ಳುವುದಿಲ್ಲ ಎನ್ನುವ ದೃಢ ನಿರ್ಧಾರ ಕೈಗೊಳ್ಳಬೇಕು. ಆದರೆ ಈ ಎರಡು ಪಕ್ಷಗಳಲ್ಲಿ ಕನಿಷ್ಠ ಕೆಜೆಪಿಯ ಮಂಡಿ ಊರಿಸುವುದು ಹೇಗೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತು. ಸಿಬಿಐ ಇರುವುದಾದರೂ ಯಾಕೆ?
ಚುನಾವಣೋತ್ತರ ಸ್ಥಿತಿಯ ಈ ಚಿತ್ರ ಸುಮಾರು ಇಪ್ಪತ್ತು ದಿನಗಳ ಕಾಲ ರಾಜ್ಯದಲ್ಲಿ ಅಡ್ಡಾಡಿದಾಗ ಎದುರಾದ ಮತದಾರರ ಅಭಿಪ್ರಾಯವನ್ನು ಆಧರಿಸಿದ್ದು. ಕಳೆದ ಒಂಬತ್ತು ವರ್ಷಗಳ ಅವಧಿಯ ಅಭದ್ರ ಸರ್ಕಾರಗಳು ಸಾಮಾನ್ಯ ಜನರನ್ನು ಕೆರಳಿಸಿದೆ. ಈ ಹತಾಶ ಮತದಾರ ವರ್ಗ ಒಳ್ಳೆಯವರೋ ,ಕೆಟ್ಟವರೋ ಯಾವುದೋ ಒಂದು ಪಕ್ಷ ಇರಲಿ ಎಂದು ಮತಹಾಕುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಮುಖ್ಯವಾಗಿ ಈ ಚುನಾವಣೆಯಲ್ಲಿ ಸೇರ್ಪಡೆಯಾಗಿರುವ 35 ಲಕ್ಷ ಯುವ ಮತದಾರರಲ್ಲಿ ನಾನು ಕಂಡ ಈ ಅಭಿಪ್ರಾಯ ಅವರು ಹಾಕುವ ಮತಗಳಲ್ಲಿ ಪ್ರತಿಫಲಿಸಿದರೆ ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಬಹುದು. ಮತದಾನದ ಪ್ರಮಾಣ ಶೇಕಡಾ 70-75 ದಾಟಿ ಬಿಟ್ಟರೆ ಈ ಸಾಧ್ಯತೆ ಇನ್ನೂ ಹೆಚ್ಚಿದೆ. ಕಾದು ನೋಡೋಣ.