Monday, December 17, 2012

ಗುಜರಾತ್ ಜಾತಿ ಸೂತ್ರ ಬದಲಾಯಿಸಿದ ಮೋದಿ Dec 17 2012

`ಗುಜರಾತ್ ರಾಜ್ಯವನ್ನು ನರೇಂದ್ರಮೋದಿ ತನ್ನ ಮಾಯಾಜಾಲದಲ್ಲಿ ಕೆಡವಿಹಾಕಿದಂತೆ ಕಾಣುತ್ತಿದೆ. ಯಾವ ಚುನಾವಣಾ ಸಮೀಕ್ಷೆಯ ಸೂತ್ರಗಳಿಗೂ ನಿಲುಕದ ಮೋದಿ ಯಶಸ್ಸಿನ ಒಗಟನ್ನು ಒಡೆಯುವುದು ಕಷ್ಟ. ಅವರ ಜನಪ್ರಿಯತೆ ನೂರಕ್ಕೆ ನೂರರಷ್ಟು ಮತಗಳಾಗಿ ಪರಿವರ್ತನೆ ಹೊಂದಿದರೆ ಬಿಜೆಪಿ ಈ ರಾಜ್ಯದಲ್ಲಿ `ಹ್ಯಾಟ್ರಿಕ್' ಜಯ ಗಳಿಸಬಹುದು..' ಎಂದು ಹತ್ತುವರ್ಷಗಳ ಹಿಂದೆ ( ಪ್ರಜಾವಾಣಿ ವರದಿ:11,ಡಿಸೆಂಬರ್ 2002) ಆ ರಾಜ್ಯಕ್ಕೆ ವಿಧಾನಸಭಾ ಚುನಾವಣಾ ಸಮೀಕ್ಷೆಗೆಂದು ಹೋದವನು `ಮೋದಿ ಮೋಡಿ'ಗೆ ಬೆರಗಾಗಿ ಬರೆದಿದ್ದೆ. 

2002ರ ಕೋಮುದಂಗೆಯ ಹಸಿಹಸಿ ನೆನಪಿನ ಜತೆಯಲ್ಲಿಯೇ ನಡೆದ ಚುನಾವಣೆ ಅದು. `ನೀವು ನನಗೆ ಮತನೀಡಬೇಕೆಂದು ಹೇಳುವುದಿಲ್ಲ, ಆದರೆ ಗೋಧ್ರಾ ಹತ್ಯಾಕಾಂಡವನ್ನು ಮಾತ್ರ ಮರೆತುಬಿಡಿ ಎಂದು ಹೇಳಬೇಡಿ.  ಅದನ್ನು ನಾನು ಹೇಗೆ ಮರೆಯಲಿ? ಬೆಂಕಿ ಹತ್ತಿಕೊಂಡ ರೈಲ್ವೆಬೋಗಿಯೊಳಗಿನ ದೈವಭಕ್ತರ ಆರ್ತನಾದ ನನ್ನ ಕಿವಿಗಳಲ್ಲಿ ಈಗಲೂ ಗುಂಯ್‌ಗುಡುತ್ತಿದೆ....' -ಮೋದಿಯವರ ಕಣ್ಣೀರು `ನರ್ಮದಾ ನದಿ'ಯಾಗಿ ಹರಿಯುತ್ತಿದ್ದರೆ, ಅವರ ಗುಜರಾತಿ ಭಾಷೆಯ ಭಾಷಣ ಕೇಳಿದವರು ನಿಂತಲ್ಲೇ ಕಣ್ಣೀರಾಗಿ ಬಿಡುತ್ತಿದ್ದರು. ಇದು ಮೋದಿ ಮೋಡಿ.
 
ಈ ಮೋಡಿಯೇ ನರೇಂದ್ರಮೋದಿ ಅವರನ್ನು ಸತತ ಎರಡು ಬಾರಿ ಗೆಲ್ಲಿಸಿದ್ದೇ? ಹಾಗೆಂದು 2002ರ ಚುನಾವಣೆಯ ಕಾಲದಲ್ಲಿ ಮೂರ್ಖನಂತೆ ನಾನೂ ತಿಳಿದುಕೊಂಡಿದ್ದೆ, ಆದರೆ 2007ರ ವಿಧಾನಸಭಾ ಚುನಾವಣೆಯನ್ನು ತುಸು ಆಳಕ್ಕೆ ಇಳಿದು ನೋಡಿದಾಗ ಮೋದಿಯವರ ಇನ್ನೊಂದು ಮುಖ ಅನಾವರಣಗೊಳ್ಳಹತ್ತಿತ್ತು. ಹೊರನೋಟಕ್ಕೆ  ಕಟ್ಟಾ ಕೋಮುವಾದಿಯಂತೆ ಕಾಣುವ ನರೇಂದ್ರ ಮೋದಿ ಅವರೊಳಗೊಬ್ಬ ಚಾಣಾಕ್ಷ ರಾಜಕಾರಣಿ ಇದ್ದಾನೆ. ಸಂಖ್ಯೆಯ ಆಟವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯೆಯಲ್ಲಿ ಜಾತಿಜನರನ್ನು ಹೊಂದಿರುವ ರಾಜಕೀಯ ನಾಯಕರಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಅಸುರಕ್ಷತೆ ಅವರನ್ನು ಹೆಚ್ಚು ಜಾಗೃತರು ಮತ್ತು ಚಾಣಾಕ್ಷರನ್ನಾಗಿ ಮಾಡುತ್ತದೆ. ಮೋದಿ  ಇದಕ್ಕೆ ಹೊರತಲ್ಲ. ಈ ಚಾಣಾಕ್ಷತನದ ಬಲದಿಂದಲೇ ಅವರು ಜನಸಂಖ್ಯೆಯಲ್ಲಿ ಶೇಕಡಾ ಹದಿನಾರರಷ್ಟಿರುವ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಪಟೇಲರನ್ನು ಎದುರಿಸಿ ಹಿಂದಿನ ಎರಡು ಚುನಾವಣೆಗಳನ್ನು ಗ್ದ್ದೆದದ್ದು.
 
ಕಳೆದ ಹತ್ತುವರ್ಷಗಳಲ್ಲಿ ಗುಜರಾತ್ ರಾಜಕೀಯ ಬದಲಾಗಿದೆ ಎಂದು ಅನಿಸುವುದಿಲ್ಲ. ಕೇಶುಭಾಯಿಪಟೇಲ್ ಬಂಡೆದ್ದು ರಚಿಸಿರುವ ಹೊಸ ಪಕ್ಷದ ಪರಿಣಾಮದಿಂದಾಗಿ ಮೋದಿಗೆ ಹಿನ್ನಡೆ ಆಗಬಹುದು ಎಂದು ಹಲವಾರು ರಾಜಕೀಯ ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ.
ಆದರೆ ಕೇಶುಭಾಯಿ ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಕಟ್ಟಿದ್ದು ಹೊಸದಾಗಿದ್ದರೂ ಅವರ ಬಂಡಾಯ ಹೊಸದಲ್ಲ, ಹತ್ತುವರ್ಷಗಳ ಹಿಂದೆ ನರೇಂದ್ರ ಮೋದಿ ತನ್ನಿಂದ ಮುಖ್ಯಮಂತ್ರಿ ಪಟ್ಟ ಕಸಿದುಕೊಂಡ ದಿನದಿಂದಲೂ ಕೇಶುಭಾಯಿ ಬಂಡುಕೋರರು. ನರೇಂದ್ರ ಮೋದಿ ಹಿಂದುಳಿದ ಗಾಂಚಿ (ಗಾಣಿಗ) ಜಾತಿಗೆ ಸೇರಿದವರು. ಪಟೇಲರು ಎಣ್ಣೆಗಿರಣಿ ಮಾಲೀಕರು. ಕೆಳಜಾತಿಯ ಒಬ್ಬ ವ್ಯಕ್ತಿ ಪಟೇಲರ ನಾಯಕನನ್ನು ಕೆಳಗಿಳಿಸಿ ಮುಖ್ಯಮಂತ್ರಿಯಾಗಿದ್ದನ್ನು ಕೇಶುಭಾಯಿ ಪಟೇಲ್ ಮತ್ತು ಬೆಂಬಲಿಗರು ಇನ್ನೂ ಮರೆತಿಲ್ಲ. ಕಳೆದೆರಡೂ ಚುನಾವಣೆಗಳಲ್ಲಿ ಕೇಶುಭಾಯಿ ಬೆಂಬಲಿಗರು ಕಾಂಗ್ರೆಸ್ ಜತೆ ಗುಪ್ತಹೊಂದಾಣಿಕೆಯೂ ಸೇರಿದಂತೆ ಮೋದಿಯವರನ್ನು ಸೋಲಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ.  ಸಾಮಾನ್ಯವಾಗಿ ಆಡಳಿತ ಪಕ್ಷದ ಆಂತರಿಕ ಬಂಡಾಯ ವಿರೋಧಪಕ್ಷಗಳಿಗೆ ನೆರವಾಗುತ್ತದೆ. ಒಳಗಿನ ಬಂಡುಕೋರರು ಪ್ರತ್ಯೇಕ ಪಕ್ಷ ಕಟ್ಟಿ ಚುನಾವಣೆ ಎದುರಿಸಿದಾಗ ಅವರ ಪಾಲಿನ ಮತಗಳು ಅವರ ಪಕ್ಷಕ್ಕೆ ಹೋಗುವುದರಿಂದ ವಿರೋಧಪಕ್ಷಗಳಿಗೆ ಹೆಚ್ಚು ಲಾಭವಾಗುವುದಿಲ್ಲ. ಹೌದು, ಈ ಬಾರಿ ಬಿಜೆಪಿ ಶಾಸಕರ ಸಂಖ್ಯೆ ಕುಸಿಯಲೂಬಹುದು, ಆದರೆ ಕೇಶುಭಾಯಿ ಬಂಡಾಯ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಾರದು.
 
 ರಾಜಕೋಟ್, ಅಮ್ರೇಲಿ, ಪೋರಬಂದರ್, ಜುನಾಗಡ್,ಸುರೇಂದ್ರನಗರ ಮತ್ತು ಭಾವನಗರ ಜಿಲ್ಲೆಗಳನ್ನೊಳಗೊಂಡ ಸೌರಾಷ್ಟ್ರ ಎನ್ನುವುದು `ಪಟೇಲರ ಕೋಟೆ'. ರಾಜ್ಯದ 182 ಕ್ಷೇತ್ರಗಳ ಪೈಕಿ 60ರಲ್ಲಿ ಪಟೇಲರು ನಿರ್ಣಾಯಕರಾಗುವಷ್ಟು ಸಂಖ್ಯೆಯಲ್ಲಿದ್ದಾರೆ. ಇವರು ಮೂಲತ: ಕೃಷಿಕರಾದರೂ ಈಗ  ಉದ್ಯಮ ಕ್ಷೇತ್ರವನ್ನೂ ಪ್ರವೇಶಿಸಿದ್ದಾರೆ. ಸೌರಾಷ್ಟ್ರದಲ್ಲಿನ ಎಣ್ಣೆ ಗಿರಣಿಗಳು ಮತ್ತು ಸೂರತ್‌ನಲ್ಲಿನ ವಜ್ರದ ವ್ಯಾಪಾರದಲ್ಲಿ ಅವರದ್ದೇ ಪ್ರಾಬಲ್ಯ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಿಗೂ ಅವರು ಕೈಚಾಚಿದ್ದಾರೆ.
ಅನಿವಾಸಿ ಗುಜರಾತಿಗಳಲ್ಲಿ ಪಟೇಲರದ್ದೇ ಮೇಲುಗೈ. ರಾಜ್ಯದ ನೌಕರಶಾಹಿಯಲ್ಲಿಯೂ ಅವರು ಆಯಕಟ್ಟಿನ ಸ್ಥಾನದಲ್ಲಿದ್ದಾರೆ. 
ಇಂತಹ ಪಟೇಲರನ್ನು ಮೋದಿ  ಎದುರಿಸಿದ್ದು ಹೇಗೆ? ಇದಕ್ಕೆ ಕಾರಣ- `ಗುಜರಾತ್‌ನಲ್ಲಿ ಈಗ ಇರುವುದು ದೇಶದಾದ್ಯಂತ ಕಾಣುತ್ತಿರುವ ಬಿಜೆಪಿ ಅಲ್ಲ, ಮೋದಿ ನೇತೃತ್ವದ ಪಕ್ಷದೊಳಗಿರುವುದು 20 ವರ್ಷಗಳ ಹಿಂದಿನ ಕಾಂಗ್ರೆಸ್'. ಈ ಒಳನೋಟವನ್ನು ನನಗೆ ನೀಡಿದ್ದವರು `ಗುಜರಾತ್‌ನ ದೇವರಾಜ ಅರಸು' ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಮಾಧವಸಿನ್ಹ ಸೋಳಂಕಿ. 2007ರ ಚುನಾವಣಾ ಸಮೀಕ್ಷೆಗೆಂದು ಹೋದವ ಗಾಂಧಿನಗರದ ಹಳೆಯ ಬಂಗಲೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದ ಸೋಳಂಕಿ ಅವರನ್ನು ಭೇಟಿಮಾಡಿದ್ದೆ.
ಗುಜರಾತ್ ರಾಜಕೀಯವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ `ಪಟೇಲ್‌ಗಿರಿ'ಯನ್ನು `ಕ್ಷತ್ರಿಯ-ಹರಿಜನ- ಆದಿವಾಸಿ-ಮುಸ್ಲಿಮ್'   ಸಮುದಾಯಗಳನ್ನೊಳಗೊಂಡ `ಖಾಮ್' ಕೂಟಕಟ್ಟಿ  ಮೊದಲ ಬಾರಿ ಮುರಿದವರು  ಸೋಳಂಕಿ. ಈ ಜಾತಿ ಸಮೀಕರಣದ ರಾಜಕೀಯ ಲಾಭವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟವರು ಹಿಂದುಳಿದ ಜಾತಿಗಳ ಹಿರಿಯ ನಾಯಕ ಜೀನಾಭಾಯಿ ದರ್ಜಿ. ಈ ಬಲದಿಂದ ಕಾಂಗ್ರೆಸ್‌ಪಕ್ಷಕ್ಕೆ ಸೇರಿರುವ ಕ್ಷತ್ರಿಯ ಸೋಳಂಕಿ ಮಾತ್ರವಲ್ಲ ಆದಿವಾಸಿ ಸಮುದಾಯಕ್ಕೆ ಸೇರಿರುವ ಅಮರ್‌ಸಿಂಗ್ ಚೌದರಿ ಕೂಡಾ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು.
 
ಆದರೆ ಬದಲಾದ ರಾಜಕೀಯದ ಆಟ ಬಹಳ ದಿನ ನಡೆಯಲಿಲ್ಲ. ಜನಸಂಖ್ಯೆ ಮತ್ತು ಸಂಪನ್ಮೂಲದ ಬಲದಿಂದಾಗಿ ರಾಜಕೀಯವಾಗಿ ಶಕ್ತಿಶಾಲಿಯಾಗಿದ್ದ ಪಟೇಲರು ಬಹಳ ಬೇಗ ತಿರುಗೇಟು ನೀಡಿದ್ದರು. 1990ರ ವಿಧಾನಸಭಾ ಚುನಾವಣೆಯಲ್ಲಿ ಚಿಮಣ್‌ಭಾಯ್ ಪಟೇಲ್ ನಾಯಕತ್ವದಲ್ಲಿ ಪಟೇಲರು ಜನತಾದಳದ ಗಾಡಿ ಹತ್ತಿದರು. ಅದರ ಫಲವಾಗಿಯೇ 1990ರಲ್ಲಿ ಬಿಜೆಪಿ-ಜನತಾ ಮೈತ್ರಿಕೂಟ ಅಧಿಕಾರಕ್ಕೆ ಬಂದದ್ದು. ಆ ಸರ್ಕಾರದಲ್ಲಿ ಚಿಮಣ್‌ಭಾಯ್ ಮುಖ್ಯಮಂತ್ರಿಯಾಗಿದ್ದರೆ, ಕೇಶುಭಾಯಿ ಉಪಮುಖ್ಯಮಂತ್ರಿಯಾಗಿದ್ದರು. ಇಂತಹ ಜನತಾದಳವನ್ನು ಬಿಜೆಪಿಯೇ ಒಡೆದುಹಾಕಿತು. ಕಾಂಗ್ರೆಸ್ ಪಕ್ಷದ ಯಶಸ್ವಿ `ಖಾಮ್' ಸೂತ್ರವನ್ನು ಮುರಿಯುವ ಜತೆಯಲ್ಲಿ ಜನತಾದಳದಲ್ಲಿದ್ದ ಪಟೇಲರನ್ನು ಪಕ್ಷಕ್ಕೆ ಕರೆತರುವ `ಮಹಾ ಜಾತಿ ಧ್ರುವೀಕರಣ'ದ ಯೋಜನೆಯನ್ನು ರೂಪಿಸಿದ್ದ ಬಿಜೆಪಿ, ಅದಕ್ಕಾಗಿ ಕಣಕ್ಕಿಳಿಸಿದ್ದು ಕೇಶುಭಾಯಿ, ನರೇಂದ್ರಮೋದಿ ಮತ್ತು ಶಂಕರ್‌ಸಿಂಗ್ ವಘೇಲಾ ಎಂಬ ತ್ರಿಮೂರ್ತಿಗಳನ್ನು.
 
 ನರೇಂದ್ರಮೋದಿ ಅವರು `ಮುಸ್ಲಿಮ್' ಭೂತವನ್ನು ಬಳಸಿಕೊಂಡು ಆದಿವಾಸಿಗಳನ್ನು `ಹಿಂದೂ'ಗಳಾಗಿ ಪರಿವರ್ತಿಸುವ ಕೆಲಸವನ್ನು ಮಾಡಿದರೆ, ಕ್ಷತ್ರಿಯರಾದ ವಘೇಲಾ `ಖಾಮ್' ಸೂತ್ರದ ಪ್ರಮುಖ ಕೊಂಡಿಯಾಗಿದ್ದ ಕ್ಷತ್ರಿಯರನ್ನು ಕರೆತಂದರು. ಮಾಧವಸಿನ್ಹಾ ಸೋಳಂಕಿಯವರ `ಖಾಮ್' ರಾಜಕೀಯದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ನೆಲೆ ಕಳೆದುಕೊಂಡು ಜನತಾ ಮತ್ತು ಬಿಜೆಪಿಯಲ್ಲಿ ಸೇರಿಕೊಂಡಿದ್ದ ಪಟೇಲರನ್ನು ಬಿಜೆಪಿ ಕಡೆ ಎಳೆದು ತರುವ ಕೆಲಸವನ್ನು ಕೇಶುಭಾಯಿ ಮಾಡಿದರು. ಈ ಜಾತಿ ಮರುಧ್ರುವೀಕರಣದಿಂದಾಗಿ ಬಹುಸಂಖ್ಯೆಯಲ್ಲಿ `ಹಿಂದೂ' ಮತದಾರರು  ಬಿಜೆಪಿ ಕಡೆ ವಲಸೆ ಹೋಗುವಂತಾಯಿತು. ಕಾಂಗ್ರೆಸ್ ಪಕ್ಷದ `ಖಾಮ್'ಕೂಟಕ್ಕೆ ನಿಷ್ಠರಾಗಿ ಉಳಿದವರು ಮುಸ್ಲಿಮರು ಮಾತ್ರ, ಅದು ಅವರಿಗೆ ಅನಿವಾರ್ಯವೂ ಆಗಿತ್ತು. ಇದರಿಂದಾಗಿ 1985ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದ ಗೆಲುವೇ ಕೊನೆಯದ್ದು, ಅದರ ನಂತರದ ಐದು ಚುನಾವಣೆಗಳಲ್ಲಿಯೂ ಅದು ಸೋತಿದೆ.
 
2002ರಲ್ಲಿ ನರೇಂದ್ರಮೋದಿ  ಮುಖ್ಯಮಂತ್ರಿಯಾಗಿ ರಾಜಕೀಯ ಪ್ರವೇಶಿಸಿದ ನಂತರ ಈ ಜಾತಿ ಸಮೀಕರಣ ಮತ್ತೆ ಬದಲಾಗಿಹೋಯಿತು. ಕೇಶುಭಾಯಿ ಪದಚ್ಯುತಿಯಿಂದಾಗಿ ಅತೃಪ್ತರಾಗಿರುವ ಪಟೇಲರನ್ನು ನಂಬಿಕೊಂಡು ಅಧಿಕಾರದಲ್ಲಿ ಉಳಿಯುವುದು ಸಾಧ್ಯವಾಗಲಾರದು ಎಂಬ ವಾಸ್ತವ ಬಹಳ ಬೇಗ ಮೋದಿಯವರಿಗೆ ಅರಿವಾಗಿತ್ತು. ಆಗಲೇ ಅವರು `ಉಗ್ರ ಹಿಂದುತ್ವ'ದ ಪ್ರತಿಪಾದನೆಯ ಮೂಲಕ ಮುಸ್ಲಿಮೇತರರ ಸಮುದಾಯವನ್ನು ಒಗ್ಗೂಡಿಸುವ ಜತೆಗೆ ಪಟೇಲ್ ಸಮುದಾಯವನ್ನು  ಒಡೆಯುವ ಪ್ರಯತ್ನಕ್ಕೆ ಚಾಲನೆ ನೀಡಿದ್ದು. ಲೇವಾ ಮತ್ತು ಕಡುವಾ ಎಂಬ ಪಟೇಲರೊಳಗಿನ ಎರಡು ಪ್ರಮುಖ ಒಳಪಂಗಡಗಳ ರಾಜಕೀಯವನ್ನು ಮೋದಿ ಕಳೆದ ಒಂದು ದಶಕದಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಕೇಶುಭಾಯಿ ಪ್ರತಿನಿಧಿಸುವ ಲೇವಾ ಪಟೇಲರು ರಾಜಕೋಟ್ ಮತ್ತು ಅಮ್ರೇಲಿಗಳಲ್ಲಿ ಬಹುಸಂಖ್ಯೆಯಲ್ಲಿದ್ದರೆ ಸೂರತ್ ಮತ್ತು ಉತ್ತರ ಗುಜರಾತ್‌ಗಳಲ್ಲಿ ಕಡುವಾ ಪಟೇಲರಿದ್ದಾರೆ. ಮೋದಿ ಬಲಗೈಯಂತಿರುವ ವಜುಭಾಯಿವಾಲಾ ಕಡುವಾ ಪಟೇಲ್. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೆಚ್ಚು ಟಿಕೆಟ್ ಪಡೆದದ್ದೇ ಕಡುವಾ ಪಟೇಲರು.
 
ಮೋದಿಯವರ ಇನ್ನೊಂದು ಶಕ್ತಿ ಕೇಂದ್ರ ಆದಿವಾಸಿ ಬಾಹುಳ್ಯದ ಪಂಚಮಹಲ್, ದಾಹೋದ್, ವಡೋದರ ಜಿಲ್ಲೆಗಳನ್ನೊಳಗೊಂಡ ಕೇಂದ್ರ ಗುಜರಾತ್. ಅಲ್ಲಿ ಒಟ್ಟು 48 ವಿಧಾನಸಭಾ ಕ್ಷೇತ್ರಗಳಿವೆ. ಕಳೆದೆರಡೂ ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. 2007ರ ಚುನಾವಣೆಯ ಕಾಲದಲ್ಲಿ ಕಲೋಲ್ ಕಡೆ ಹೊರಟಿದ್ದ ನಾನು ಹೆದ್ದಾರಿ ಪಕ್ಕದ ಚಹದಂಗಡಿಯಲ್ಲಿ ಕೂತಿದ್ದೆ. ನಮ್ಮ ವಾಹನ ನೋಡಿ ಪತ್ರಕರ್ತನಿರಬಹುದೆಂಬ ಸುಳಿವು ಸಿಕ್ಕ ಹಣೆಗೆ ಕೇಸರಿಪಟ್ಟಿ ಕಟ್ಟಿಕೊಂಡಿದ್ದ ಯುವಕನೊಬ್ಬ `ಜೈ ಶ್ರಿರಾಮ್' ಎಂದು ಎದೆಯುಬ್ಬಿಸಿ ಕೂಗಿದ್ದ. ಅಲ್ಲಿಯೇ ಮೂಲೆಯೊಂದರಲ್ಲಿ ಕೂತಿದ್ದ ಅರೆಬೆತ್ತಲೆ ವೃದ್ಧರೊಬ್ಬರು  ಎತ್ತಲೋ ನೋಡುತ್ತಾ ` ಹಮ್ಹಾರಾ ಬಾಬೋ ಪಿತೋರೋ ಚೆ' ಎಂದು ಸಣ್ಣಗೆ ಕೆಮ್ಮುವಂತೆ ಗೊಣಗಿದ. ಜಗಳದ ಕಿಡಿ ಹಾರಿಯೇ ಬಿಟ್ಟಿತ್ತು.
ಅಷ್ಟರಲ್ಲಿ ವೃದ್ಧ ವ್ಯಕ್ತಿ ಅಲ್ಲಿಂದ ಸದ್ದಿಲ್ಲದೆ ಕಣ್ಮರೆಯಾಗಿದ್ದ. ಆ ನಂತರ ತಿಳಿದುಬಂದಂತೆ ಇಬ್ಬರೂ ಆದಿವಾಸಿ ಸಮುದಾಯದವರು. ಇದು ಕೇವಲ ಬೀದಿ ಜಗಳ ಅಲ್ಲ, ಗುಜರಾತ್‌ನ ಜನಸಂಖ್ಯೆಯಲ್ಲಿ ಶೇಕಡಾ ಹದಿನೇಳರಷ್ಟಿರುವ ಆದಿವಾಸಿಗಳ `ಮನೆ' ಜಗಳ ಕೂಡಾ ಹೌದು.
 
ಆದಿವಾಸಿಗಳು ಪಾರಂಪರಿಕವಾಗಿ ಧಾರ್ಮಿಕ ವ್ಯಕ್ತಿಗಳು. ಆದರೆ ಅವರು ಪೂಜಿಸುವುದು ಅವರದ್ದೇ ದೇವತೆಗಳನ್ನು. ಗುಜರಾತ್‌ನ ಆದಿವಾಸಿಗಳು ಬಾಬೋ ಪಿತೋರೇ, ಇತೆರಾನ್, ಮಾಕಾಳಿ ಮೊದಲಾದ ದೇವತೆಗಳನ್ನು ಪೂಜಿಸುತ್ತಾ ಬಂದವರು. ಹಳೆಯ ತಲೆಮಾರಿನ ಆದಿವಾಸಿಗಳು ಈ ದೇವತೆಗಳಿಗೆ ನಿಷ್ಠರಾಗಿಯೇ ಉಳಿದಿದ್ದಾರೆ. ಆದರೆ ತಲೆಗೆ ಕೇಸರಿಪಟ್ಟಿ ಕಟ್ಟಿಕೊಂಡ ಹೊಸತಲೆಮಾರಿನ ಕುಟುಂಬಗಳ ಮನೆಯಲ್ಲಿ ಆಗಲೇ ರಾಮ,ಕೃಷ್ಣ, ಲಕ್ಷ್ಮಿ, ಸರಸ್ವತಿಗಳ ಪ್ರವೇಶವಾಗಿದೆ. ಆಸಾರಾಮ್ ಬಾಪೂ, ಜಯಶ್ರಿ ತಲವಾಲ್ಕರ್, ದಾದಾ ಭಗವಾನ್ ಪ್ರವಚನಗಳಿಗೆ ಪಂಚಮಹಲ್, ದಾಹೋದ್ ಜಿಲ್ಲೆಗಳಲ್ಲಿ ಸಾವಿರಾರು ಆದಿವಾಸಿಗಳು ಸೇರುತ್ತಾರೆ. ಒಂದು ಕಾಲದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಗುತ್ತಿಗೆಯಾಗಿ ಹೋಗಿದ್ದ ಆದಿವಾಸಿ ಪ್ರದೇಶದಲ್ಲಿ ಸಂಘ ಪರಿವಾರಕ್ಕೆ ಸೇರಿರುವ `ವನವಾಸಿ ಕಲ್ಯಾಣ ಪರಿಷತ್'ಗಳ ಶಾಖೆಗಳು ಕಳೆದ 15-20 ವರ್ಷಗಳಲ್ಲಿ ವ್ಯಾಪಕವಾಗಿ ಹರಡಿವೆ. ಅನಿವಾಸಿ ಗುಜರಾತಿಗಳ ದೇಣಿಗೆಯಿಂದಾಗಿ ಈ ಹಿಂದೂ ಎನ್‌ಜಿಒಗಳು ಸಂಪನ್ಮೂಲದ ವಿಷಯದಲ್ಲಿಯೂ ಕ್ರಿಶ್ಚಿಯನ್ ಮಿಷನರಿಗಳನ್ನು ಮೀರಿಸುವಂತಿವೆ. ಚಹದಂಗಡಿಯಲ್ಲಿ ನನ್ನೆದುರಿಗೆ ಬಂದು `ಜೈ ಶ್ರಿರಾಮ್'ಎಂದು ಕೂಗಿದ್ದ ಯುವಕನ ಹೆಸರು ಭಾನು ರಾತ್ವಾ. ಆತ ಒಂದಷ್ಟು ದಿನ ಕ್ರಿಶ್ಚಿಯನ್ ಮಿಷನರಿ ಜತೆ ಇದ್ದವನಂತೆ.
ಆದರೆ ಅಲ್ಲಿ ಆದಿವಾಸಿ ದೇವತೆಗಳ ಹಾಡು ಹಾಡಬಾರದು, ಅವರ ಚಿತ್ರ ಬಿಡಿಸಬಾರದು ಎಂದೆಲ್ಲ ಪ್ರತಿಬಂಧನೆಗಳು ಹೆಚ್ಚತೊಡಗಿದಾಗ ಪ್ರತಿಭಟಿಸಿ ಹೊರಬಂದವ. ಅಲ್ಲಿಂದ ಆತ ಪಾವಗಡದ ವನವಾಸಿ ಕಲ್ಯಾಣ ಪರಿಷತ್ ಸೇರಿಕೊಂಡು ಮೋದಿ ಪ್ರಚಾರಕನಾಗಿದ್ದಾನೆ. 2002ರ ಕೋಮುಗಲಭೆಯಲ್ಲಿ ಅಹಮದಾಬಾದ್ ನಗರವನ್ನು ಹೊರತುಪಡಿಸಿದರೆ ಅತಿಹೆಚ್ಚು ಸಾವು-ನೋವು ಸಂಭವಿಸಿದ್ದು ಪಂಚಮಹಲ್ ಮತ್ತು ದಾಹೋದ್ ಜಿಲ್ಲೆಗಳಲ್ಲಿ.
 
 `ಕೋಮು ಗಲಭೆಗಳಲ್ಲಿ ಸಂಘಪರಿವಾರದ ಕಾಲಾಳುಗಳಾಗಿ ಕೆಲಸ ಮಾಡಿದ್ದವರು ನಿರುದ್ಯೋಗಿ ಆದಿವಾಸಿ ಯುವಕರು. ಅವರಲ್ಲಿ ಈಗಲೂ ಬಹಳಷ್ಟು ಮಂದಿ ಜೈಲಲ್ಲಿದ್ದಾರೆ. ತಮ್ಮ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರಿಗೆ ಅರಿವಾಗಿದೆ' ಎಂದು ಕಳೆದ ಚುನಾವಣೆಯ ಕಾಲದಲ್ಲಿ ವಡೋಧರಾದ ಸಮಾಜವಿಜ್ಞಾನ ಸಂಶೋಧಕ ಗಣೇಶ್ ದೇವಿ ನನಗೆ ಹೇಳಿದ್ದರು. ಆದರೆ `ಪಟೇಲರ ಬಂಡಾಯ, ಸಂಘಪರಿವಾರದ ಅಸಮಾಧಾನ, ಆದಿವಾಸಿ ಯುವಕರ ಜ್ಞಾನೋದಯ'ಗಳ ಹೊರತಾಗಿಯೂ 2007ರ ಚುನಾವಣೆಯಲ್ಲಿ ನರೇಂದ್ರಮೋದಿ ಗೆದ್ದಿದ್ದರು. ಈ ಬಾರಿಯೂ ಗೆಲ್ಲದಿರಲು ಕಾರಣಗಳು ಬಹಳ ಇಲ್ಲ.

Monday, December 10, 2012

ಸುಭದ್ರ ಸರ್ಕಾರ ಎಂಬ ಮಾಯಾಮೃಗದ ಬೆನ್ನಟ್ಟಿ... Dec 10 2012

`ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡ ಏಕೈಕ ಪಕ್ಷ ಕಾಂಗ್ರೆಸ್. ಬಹಿರಂಗ ಘೋಷಣೆಗಳೇನೇ ಇರಲಿ, ಬೇರೆ ಯಾವ ಪಕ್ಷವೂ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಅಂತರಂಗದಲ್ಲಿ ಇಟ್ಟುಕೊಂಡ ಹಾಗೆ ಕಾಣುವುದಿಲ್ಲ.
ಹಿಂದಿನ ಯಾವ ಚುನಾವಣೆಯಲ್ಲಿಯೂ ಈ ಪರಿಸ್ಥಿತಿಯನ್ನು ನಾನು ಕಂಡಿರಲಿಲ್ಲ, ಕನಿಷ್ಠ ಎರಡು ಪಕ್ಷಗಳ ನಡುವೆ ಬಹುಮತಕ್ಕಾಗಿ ಒಂದಷ್ಟು ಪೈಪೋಟಿ ಇರುತ್ತಿತ್ತು, ಫಲಿತಾಂಶವನ್ನು ಊಹಿಸುವುದು ಕಷ್ಟವಾಗುತ್ತಿತ್ತು..' ಎಂದು ಹೇಳಿದವರು ಲಂಡನ್‌ನ ಕಾಮನ್‌ವೆಲ್ತ್ ಅಧ್ಯಯನ ಸಂಸ್ಥೆಯ ಪ್ರೊ.ಜೇಮ್ಸ ಮೇನರ್.
ಇತ್ತೀಚೆಗೆ `ಪ್ರಜಾವಾಣಿ' ಕಚೇರಿಗೆ ಬಂದು ನಮ್ಮನ್ನುದ್ದೇಶಿಸಿ ಮಾತನಾಡಿದ ಜೇಮ್ಸ ತನ್ನ ಇತ್ತೀಚಿನ ಸುತ್ತಾಟದಲ್ಲಿ ಕಂಡುಕೊಂಡ ಈ ರಾಜಕೀಯ ಒಳನೋಟವನ್ನು ನೀಡಿದರು. 1972ರಿಂದ ರಾಜ್ಯದಲ್ಲಿ ನಡೆದ ಎಲ್ಲ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಸಮೀಪದಿಂದ ಕಂಡಿರುವ, ಅದರ ವಿಶ್ಲೇಷಣೆಗಳನ್ನು ನಿಖರವಾಗಿ ಮಾಡಿರುವ ಮತ್ತು ಕರ್ನಾಟಕದ ಮೂಲೆಮೂಲೆಗಳನ್ನು ಸುತ್ತಿ ಹೆಚ್ಚು ಕಡಿಮೆ ಕನ್ನಡಿಗರೇ ಆಗಿರುವ ಜೇಮ್ಸ, ಕರ್ನಾಟಕದ ರಾಜಕೀಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ರಾಜಕೀಯ ಪಂಡಿತ. ಅವರು ಹೇಳಿದ್ದನ್ನು ನಂಬಲೇ ಬೇಕು ಆದರೆ..?
ಹಿಂದಿನ ಚುನಾವಣೆಗಳ ಫಲಿತಾಂಶ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ನೋಡಿದರೆ ಅಧಿಕಾರದ ಕಡೆಗೆ ಕಾಂಗ್ರೆಸ್ ಹಾದಿ ಸುಲಭದ್ದೆಂದು  ಅನಿಸಿಬಿಡುವುದು ಸಹಜ. ಎಚ್.ಡಿ.ಕುಮಾರಸ್ವಾಮಿಯವರ ವಚನಭಂಗದಿಂದಾಗಿ ಯಡಿಯೂರಪ್ಪನವರ ಪರ ಎದ್ದಿದ್ದ ಅನುಕುಂಪದ ಅಲೆ, ಬಳ್ಳಾರಿಯ ರೆಡ್ಡಿ ಸೋದರರ ದುಡ್ಡಿನ ಬಲ, ತಳಮಟ್ಟದಲ್ಲಿನ ಸಂಘ ಪರಿವಾರದ ಬದ್ದ ಕಾರ್ಯಕರ್ತರ ಜಾಲ ಹಾಗೂ ಪರಿಶಿಷ್ಟ ಜಾತಿಯ ಗುಂಪನ್ನು ಒಡೆದು ಮಾದಿಗರು, ಲಂಬಾಣಿ ಮತ್ತು ಬೋವಿ ಸಮುದಾಯಗಳನ್ನು ಸೆಳೆದುಕೊಂಡ `ಸೋಷಿಯಲ್ ಎಂಜಿನಿಯರಿಂಗ್'- 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಈಗ ಬಿಜೆಪಿ ನಾಯಕರು ಚೀರಿಚೀರಿ ಹೇಳಿದರೂ ಅಂದಿನ ಪರಿಸ್ಥಿತಿ ಈಗ ಇಲ್ಲವೆನ್ನುವುದು ಅವರ ಅಂತರಂಗಕ್ಕೂ ಗೊತ್ತು.
ಯಡಿಯೂರಪ್ಪನವರ ನಿರ್ಗಮನ ಮತ್ತು ರೆಡ್ಡಿ ಸೋದರರ ಜೈಲು ವಾಸದಿಂದಾಗಿ ಈ ಎರಡು ಮೂಲಗಳ ಬಲವನ್ನು ಬಿಜೆಪಿ ಕಳೆದುಕೊಂಡಿದೆ. ಬಿಜೆಪಿಯ ಸೋಲು ನಿಶ್ಚಿತ ಎಂಬುದಕ್ಕೆ ಬೇರೆ ಕಾರಣಗಳು ಬೇಕಿಲ್ಲ. ಆದರೆ ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಬಹುದೇ?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಶೇಕಡಾ 1.2ರಷ್ಟು ಹೆಚ್ಚು ಮತಗಳನ್ನು ಗಳಿಸಿದ್ದರೂ ಸ್ಥಾನಗಳ ಲೆಕ್ಕದಲ್ಲಿ ಬಿಜೆಪಿಗಿಂತ 30 ಸ್ಥಾನಗಳನ್ನು ಕಡಿಮೆ ಪಡೆದಿತ್ತು.
ಚುನಾವಣಾ ಫಲಿತಾಂಶದ ಈ ಗಣಿತ ಸುಲಭದಲ್ಲಿ ಅರ್ಥವಾಗುವಂತಹದ್ದಲ್ಲ. ಮತಪ್ರಮಾಣಕ್ಕೆ ಅನುಗುಣವಾಗಿ ಸ್ಥಾನಗಳ ಲೆಕ್ಕ ಹಾಕಲಾಗುವುದಿಲ್ಲ. ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸುವುದು ಕೇವಲ ಮತಗಳಲ್ಲ, ಅದು ಮತಸಾಂದ್ರತೆ. ಈ ಕಾರಣದಿಂದಾಗಿಯೇ ಹಳೆಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಜೆಡಿ(ಎಸ್) ಶೇಕಡಾ 19.44ರಷ್ಟು ಮತಗಳಿಸಿದರೂ 28  ಸ್ಥಾನಗಳನ್ನು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಿಜೆಪಿ 33.93ರಷ್ಟು ಮತಗಳ ಆಧಾರದಲ್ಲಿ  110 ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿರುವುದು.
ಕಾಂಗ್ರೆಸ್ ಪಕ್ಷ ಶೇಕಡಾ 35.13ರಷ್ಟು ಮತಗಳನ್ನು ಪಡೆದರೂ 80ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಾಗದಿರುವುದಕ್ಕೂ ಇದೇ ಕಾರಣ. ಕಾಂಗ್ರೆಸ್ ರಾಜ್ಯದ ಎಲ್ಲ ಭಾಗಗಳಲ್ಲಿ ಸಾಮಾನ್ಯವಾದ ಜನ ಬೆಂಬಲ ಹೊಂದಿದ್ದರೆ, ಬಿಜೆಪಿ ಮತ್ತು ಜೆಡಿ (ಎಸ್) ನಿರ್ದಿಷ್ಟ ಪ್ರದೇಶಗಳಲ್ಲಿ ಕಾಂಗ್ರೆಸ್‌ಪಕ್ಷದ ಸರಾಸರಿ ಜನಬೆಂಬಲಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಂಬಲ ಹೊಂದಿವೆ.
ಯಡಿಯೂರಪ್ಪನವರ ನಿರ್ಗಮನದಿಂದ ಬಿಜೆಪಿ ಶಕ್ತಿ ಕುಂದಲಿರುವುದು ಖಾತರಿ. ಆದರೆ ಬಿಜೆಪಿ ಬುಟ್ಟಿಯಿಂದ ಜಿಗಿದ ಮತಗಳು ನೇರವಾಗಿ ಕಾಂಗ್ರೆಸ್ ಮಡಿಲಿಗೆ ಬೀಳುವುದೇ ಇಲ್ಲವೆ ಅದು ಯಡಿಯೂರಪ್ಪನವರ ಕಡೆಗೆ ಹೋಗಲಿದೆಯೇ ಎನ್ನುವುದು ಪ್ರಶ್ನೆ. ಬಹುಶಃ ಈ ಪ್ರಶ್ನೆಯೇ ಮುಂದಿನ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ.
ಬಿಜೆಪಿಯಿಂದ ಸಿಡಿದುಹೋಗಲಿರುವುದು ಬಹುತೇಕ ಲಿಂಗಾಯತ ಮತಗಳು. ಅವುಗಳು ಯಡಿಯೂರಪ್ಪನವರ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು. ಈ `ಮತಾಂತರ'ದಿಂದ ಯಾರಿಗೆ ಎಷ್ಟು ಲಾಭ? ಕಾಂಗ್ರೆಸ್ ಹೆಚ್ಚುವರಿ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಬಹುದೇ? ಯಡಿಯೂರಪ್ಪನವರ ಪಕ್ಷವನ್ನು ನಿರ್ಣಾಯಕ ಸ್ಥಾನದಲ್ಲಿ ಕೊಂಡೊಯ್ದು ನಿಲ್ಲಿಸಬಹುದೇ?
ಯಡಿಯೂರಪ್ಪನವರೇ ಬಿಜೆಪಿಯಿಂದ ಒಂದಷ್ಟು ಮತಗಳನ್ನು ಕಿತ್ತುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭವಾಗಲಾರದು. ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿಯಿಂದ ಹೊರಹೋಗುವ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುವಂತೆ ಕಾಂಗ್ರೆಸ್ ಪಕ್ಷ ಮಾಡಬೇಕಾಗುತ್ತದೆ. ಅದೇ ರೀತಿ ಬಿಜೆಪಿಯಿಂದ ಕಿತ್ತುಕೊಂಡ ಮತಗಳಿಂದಲೇ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಯಡಿಯೂರಪ್ಪನವರಿಗೂ ಸಾಧ್ಯವಾಗಲಾರದು.
ಲಿಂಗಾಯತರೆಲ್ಲರೂ ಮತಹಾಕಿದರೂ ಅದು ಶೇಕಡಾ ಹದಿನೈದರ ಪ್ರಮಾಣವನ್ನು ದಾಟುವುದಿಲ್ಲ, ಉತ್ತರ ಕರ್ನಾಟಕದ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಲಿಂಗಾಯತರ ಜನಸಂಖ್ಯೆ ಶೇಕಡಾ 20-25ರಷ್ಟಿದೆ ಎಂದಿಟ್ಟುಕೊಂಡರೂ ಅವರೆಲ್ಲರೂ ಕಣ್ಣುಮುಚ್ಚಿ ಯಡಿಯೂರಪ್ಪನವರ ಪಕ್ಷಕ್ಕೆ ಮತಹಾಕಲಿದ್ದಾರೆ ಎಂಬ ಖಾತರಿ ಇಲ್ಲ. ಕನಿಷ್ಠ ಶೇಕಡಾ 25ರಿಂದ 30ರಷ್ಟು ಮತಗಳನ್ನು ಪಡೆಯದೆ ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಇದಕ್ಕಾಗಿ ಎಲ್ಲ ಜಾತಿ-ಧರ್ಮಗಳ ಮತದಾರರ ಬೆಂಬಲ ಅಗತ್ಯ.
ಯಡಿಯೂರಪ್ಪನವರು ಅದೇ ಪ್ರಯತ್ನದಲ್ಲಿದ್ದಾರೆ.  ಯಡಿಯೂರಪ್ಪನವರ ಬಂಡಾಯ ಬಿಜೆಪಿ ಸೋಲಿನಲ್ಲಿ ಕೊನೆಗೊಳ್ಳಬಹುದು, ಆದರೆ ಕೆಜೆಪಿ ಇಲ್ಲವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಬಹುದು ಎಂದು ಹೇಳಲು ಸಾಧ್ಯ ಇಲ್ಲ.ಹೀಗಾದರೆ ಸುಭದ್ರ ಸರ್ಕಾರ ಸಾಧ್ಯವೇ? ಯಾವುದಾದರೂ ಒಂದು ಪಕ್ಷ 113 ಸ್ಥಾನಗಳನ್ನು ಗಳಿಸಿದರೆ ಇದು ಸಾಧ್ಯವಾಗಬಹುದು.
ಜೇಮ್ಸ ಮೇನರ್ ಪ್ರಕಾರ  ಸದ್ಯಕ್ಕೆ ಅಂತಹ ಅವಕಾಶ ಇರುವುದು ಕಾಂಗ್ರೆಸ್ ಪಕ್ಷಕ್ಕೆ. ಆದರೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯಾವ ಪಕ್ಷವೂ ನೂರರ ಗಡಿಯನ್ನು ದಾಟದೆ ಹೋದರೆ? ಉದಾಹರಣೆಗೆ ಕಾಂಗ್ರೆಸ್ ಪಕ್ಷ 90-95, ಬಿಜೆಪಿ 60-65, ಬಿ.ಎಸ್.ಯಡಿಯೂರಪ್ಪ 30-35, ಜೆಡಿ (ಎಸ್) 30-35 ಮತ್ತು ಬಿಎಸ್‌ಆರ್ ಪಕ್ಷ ಹಾಗೂ ಪಕ್ಷೇತರರು 10-15 ಸ್ಥಾನಗಳನ್ನು ಗಳಿಸಿದರೆ ಸುಲಭದಲ್ಲಿ ಸರ್ಕಾರ ರಚಿಸುವುದು ಸಾಧ್ಯವಾದೀತೇ? ಅತ್ಯಧಿಕ ಸ್ಥಾನಗಳನ್ನು ಹೊಂದಿರುವ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡುವುದು ರೂಢಿಯಾಗಿರುವ ಕಾರಣ ಮತ್ತು ರಾಜಭವನದಲ್ಲಿ ಅನುಕೂಲಕರ ರಾಜ್ಯಪಾಲರೇ ಕೂತಿರುವುದರಿಂದ  ಸರ್ಕಾರ ರಚನೆಗೆ ಆಹ್ವಾನ ಪಡೆಯುವುದು ಆಗಲೂ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಅಲ್ಲ.
ಯಾರಿಗೂ ಸ್ಪಷ್ಟ ಬಹುಮತ ಇಲ್ಲದೆ ಇರುವ ಇಂತಹ ಸಂದರ್ಭದಲ್ಲಿ ಬಗೆಬಗೆಯ ಆಪರೇಷನ್‌ಗಳು ನಡೆಯಲಿರುವುದು ಖಂಡಿತ. ಹೆಚ್ಚು ಸ್ಥಾನಗಳನ್ನು ಹೊಂದಿರುವ ಮತ್ತು ಕೇಂದ್ರದಲ್ಲಿಯೂ ಅಧಿಕಾರದಲ್ಲಿರುವ ಕಾರಣಗಳಿಂದಾಗಿ ಕಾಂಗ್ರೆಸ್ ನಡೆಸುವ `ಆಪರೇಷನ್'ಗಳಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿದ್ದರೂ ಉಳಿದ ಪಕ್ಷಗಳೂ ಕೈಕಟ್ಟಿ ಕೂರಲಾರವು.
ಯಡಿಯೂರಪ್ಪನವರು ಬಿಜೆಪಿಯನ್ನು ತೊರೆದು ಬಂದಿರಬಹುದು, ಬಿಜೆಪಿ ನಾಯಕರನ್ನು ಮನಸಾರೆ ನಿಂದಿಸಿರಬಹುದು, ಅಷ್ಟೇ ಕೆಟ್ಟದಾಗಿ ಯಡಿಯೂರಪ್ಪ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮಾತನಾಡಿರಬಹುದು. ಆದರೆ ಮುಂದಿನ ಚುನಾವಣೆಯ ಫಲಿತಾಂಶದ ನಂತರ ಪರಸ್ಪರ ಒಟ್ಟಾಗುವುದರಿಂದ ಅಧಿಕಾರ ಹಿಡಿಯುವುದು ಸಾಧ್ಯ ಎಂದು ಗೊತ್ತಾದ ಮರುಕ್ಷಣವೇ ಬಿಜೆಪಿ ನಾಯಕರು ಯಡಿಯೂರಪ್ಪನವರಿಗೆ `ನೀವೇ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಹೇಳಿ ಕೆಜೆಪಿಯನ್ನು ತಮ್ಮ ಪಕ್ಷದ ಜತೆ ವಿಲೀನಗೊಳಿಸಲೂ ಮನವೊಲಿಸಬಹುದು.
ಯಡಿಯೂರಪ್ಪನವರು ಒಪ್ಪದೆ ಇದ್ದರೆ (ಅಂತಹ ಆಹ್ವಾನವನ್ನು ಯಡಿಯೂರಪ್ಪ ಖಂಡಿತ ತಿರಸ್ಕರಿಸಲಾರರು) ಕೆಜೆಪಿಯನ್ನೇ ಒಡೆದು ಹಾಕಲು ಬಿಜೆಪಿ ಮುಂದಾಗಬಹುದು. ಯಡಿಯೂರಪ್ಪನವರೂ ಸುಮ್ಮನಿರಲಾರರು, ಬಿಜೆಪಿಯನ್ನು ಒಡೆದು ತಮ್ಮ ಬಲ ಹೆಚ್ಚಿಸಿಕೊಳ್ಳಲು ಅವರೂ ಪ್ರಯತ್ನ ಪಡಬಹುದು.
ಇಷ್ಟೇ ಅಲ್ಲ, ಒಂದೊಮ್ಮೆ ಕೆಜೆಪಿ 45-50, ಜೆಡಿ (ಎಸ್) 45-50  ಮತ್ತು ಬಿಎಸ್‌ಆರ್ ಪಕ್ಷ 10-15 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ತೃತೀಯರಂಗದ ಪ್ರಯೋಗ ನಡೆಸಲೂ ಅವಕಾಶ ಇದೆ. ಈ ಮೂರು ಪಕ್ಷಗಳ ನಾಯಕರ ಇಲ್ಲಿಯ ವರೆಗಿನ ನಡವಳಿಕೆಗಳನ್ನು ಗಮನಿಸುತ್ತಾ ಬಂದರೆ  ಯಾವುದೇ ನಿರ್ದಿಷ್ಠ ರಾಜಕೀಯ ಸಿದ್ಧಾಂತ ಇಲ್ಲವೇ ಮೌಲ್ಯಗಳ ಬಗ್ಗೆ ಅವರಿಗೆ ಬದ್ಧತೆ ಕಂಡುಬರುವುದಿಲ್ಲ.
ಪರಸ್ಪರ ಎಷ್ಟೇ ಕೆಸರೆರಚಾಡಿಕೊಂಡರೂ ಅಧಿಕಾರ ಹಿಡಿಯಲು ಮತ್ತೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾದರೆ ಆಶ್ಚರ್ಯವೇನಿಲ್ಲ. ಈ ಇಬ್ಬರಿಗೂ ಶ್ರಿರಾಮುಲು ಆತ್ಮೀಯರಾಗಿರುವ ಕಾರಣ ಅವರು ಹೊಂದಿಕೊಳ್ಳುವುದು ಕಷ್ಟ ಅಲ್ಲ. ಮುಂದಿನ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತೃತೀಯರಂಗ ಅಧಿಕಾರಕ್ಕೆ ಬರಬಹುದೆಂಬ ಕನಸನ್ನು ಅನೇಕ ಪ್ರಾದೇಶಿಕ ಪಕ್ಷಗಳ ನಾಯಕರು ಕಾಣುತ್ತಿರುವುದರಿಂದ ದೇವೇಗೌಡರು ಕೂಡಾ ಈ ಪ್ರಯೋಗವನ್ನು ಬೆಂಬಲಿಸಬಹುದು.
ಆದರೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಖಚಿತವಾಗಿ ನಂಬಿರುವ ಕಾಂಗ್ರೆಸ್ ನಾಯಕರು ಮನೆಹೊಸಿಲಿಗೆ ಬಂದಿರುವ ಅಧಿಕಾರವನ್ನು ಅಷ್ಟು ಸುಲಭದಲ್ಲಿ ಉಳಿದವರು ಅಪಹರಿಸಿಕೊಂಡು ಹೋಗಲು ಬಿಡಲಾರದು. ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಾಕ್ಷಣ  ಕೆಜೆಪಿ ಇಲ್ಲವೇ ಜೆಡಿ (ಎಸ್) ಜತೆ ಅದು ವ್ಯವಹಾರಕ್ಕೆ ಇಳಿಯಬಹುದು.
ಜೆಡಿ (ಎಸ್)ಗಿಂತಲೂ ಕೆಜೆಪಿಯನ್ನು ಒಲಿಸಿಕೊಳ್ಳುವುದು ಕಾಂಗ್ರೆಸ್‌ಗೆ ಸುಲಭ. ಬಿಜೆಪಿ ತೊರೆದ ನಂತರ ಅವರು `ಸೆಕ್ಯುಲರ್' ಆಗಿರುವುದರಿಂದ ಕೋಮುವಾದಿಗಳ ಜತೆ ಕೈಜೋಡಿಸಿದ ಅಪವಾದವನ್ನು ಕೂಡಾ ಎದುರಿಸಬೇಕಾಗಿಲ್ಲ. ತಲೆಮೇಲೆ ಸಿಬಿಐ ತೂಗುಕತ್ತಿಯನ್ನು ಇಟ್ಟುಕೊಂಡೇ ತಿರುಗಾಡುತ್ತಿರುವ ಯಡಿಯೂರಪ್ಪ ಬಹಳ ಬೇಗ ಕಾಂಗ್ರೆಸ್ ಹಾಕುವ ಗಾಳವನ್ನು ನುಂಗಿಬಿಡಲೂಬಹುದು. ಈ ಎಲ್ಲ ಸಾಧ್ಯತೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಬಹುಕಾಲದಿಂದ ಮರೀಚಿಕೆಯಾಗಿದ್ದ ಸುಭದ್ರ ಸರ್ಕಾರವೊಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಬಹಳ ಕಾರಣಗಳು ಸಿಗುತ್ತಿಲ್ಲ.
ಜೇಮ್ಸ ಮೇನರ್ ಅವರು ರಾಜ್ಯದ ಚುನಾವಣಾ ಇತಿಹಾಸವನ್ನು ಮೆಲುಕುಹಾಕುತ್ತಾ ಕೊನೆಯಲ್ಲಿ ಕರ್ನಾಟಕದ ಜಾಗೃತ ಮತದಾರರನ್ನು ಬಾಯ್ತುಂಬಾ ಹೊಗಳಿದರು. ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು ಉಲ್ಲೇಖಿಸಿದ್ದು 1984ರ ಲೋಕಸಭಾ ಚುನಾವಣೆ ಮತ್ತು 1985ರ ಮಧ್ಯಂತರ ವಿಧಾನಸಭಾ ಚುನಾವಣೆಯನ್ನು.
1984ರ ಡಿಸೆಂಬರ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ ನಾಲ್ಕು ಸ್ಥಾನಗಳನ್ನಷ್ಟೇ ನೀಡಿ ರಾಜ್ಯದ ಆಡಳಿತಾರೂಢ ಜನತಾ ಪಕ್ಷಕ್ಕೆ ಮುಖಭಂಗ ಮಾಡಿದ್ದ ಮತದಾರರು, ಎರಡು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ 139 ಕ್ಷೇತ್ರಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. `ಭಾರತ ಮಾತ್ರವಲ್ಲ ಬೇರೆ ಯಾವ ದೇಶದಲ್ಲಿಯೂ ಇಂತಹ ನಿದರ್ಶನ ಅಪರೂಪ' ಎಂದು ಅವರು ಬಣ್ಣಿಸಿದರು.
ಕರ್ನಾಟಕದ ಮತದಾರರು ರಾಜ್ಯಕ್ಕೊಂದು ಸುಭದ್ರ ಸರ್ಕಾರ ನೀಡುತ್ತಾರೆ ಎಂಬ ಭರವಸೆ ಅವರ ಮಾತಿನಲ್ಲಿತ್ತು.  ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಮೇ ತಿಂಗಳಲ್ಲಿ ಬರುವುದಾಗಿ ಜೇಮ್ಸ ಮೇನರ್ ಹೇಳಿ ಹೋಗಿದ್ದಾರೆ. ಅವರು ಇಟ್ಟಿರುವ ನಂಬಿಕೆಯನ್ನು ಕರ್ನಾಟಕದ ಜಾಗೃತ ಮತದಾರರು ಉಳಿಸಿಕೊಳ್ಳುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನು ಐದು ತಿಂಗಳು ಕಾಯಬೇಕು.

Monday, December 3, 2012

ಕೇಜ್ರಿವಾಲ್ ಗೆಲ್ಲಬೇಕು ನಿಜ, ಗೆಲ್ಲಿಸುವವರು ಯಾರು? Dec 02 2012

`ರಾಜಕಾರಣಿಗಳ ವಿರುದ್ಧ ಆರೋಪ ಮಾಡುವುದು ಸುಲಭ, ತಾಕತ್ತಿದ್ದರೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ನೋಡಿ. ಆ ಶಕ್ತಿ ನಿಮಗಿದೆಯೇ?' ಎಂದು ನಮ್ಮ ವೃತ್ತಿಪರ ರಾಜಕಾರಣಿಗಳು, ಅವರ ವಿರುದ್ಧ ಬರೆಯುವ ಪತ್ರಕರ್ತರು ಮತ್ತು ಹೋರಾಟ ನಡೆಸುವ ಸಾಮಾಜಿಕ ಕಾರ್ಯಕರ್ತರನ್ನು ಆಗಾಗ ಕಿಚಾಯಿಸುವುದುಂಟು.
ಕಳೆದೆರಡು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರೀಯ ಸಮರವನ್ನು ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ಮತ್ತು ಸಂಗಾತಿಗಳ `ಎದೆ ಮೇಲೆ ಬಂದೂಕು ಇಟ್ಟು' ನಮ್ಮ ಜನಪ್ರಿಯ ರಾಜಕೀಯ ಪಕ್ಷಗಳು ಕೇಳಿದ್ದು ಇದೇ ಪ್ರಶ್ನೆಯನ್ನು. ಕೇಜ್ರಿವಾಲ್ ತಂಡ ಹಿಂದೆ ಸರಿಯಲಿಲ್ಲ, `ಬಂದೂಕಿನೊಳಗಿನ ಗುಂಡನ್ನು ನುಂಗಿಬಿಟ್ಟಿದೆ'. ತಲೆಗೆ ಗಾಂಧಿ ಟೋಪಿಯೇರಿಸಿ `ಆಮ್ ಆದ್ಮಿ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದೆ.
ಚುನಾವಣಾ ಆಯೋಗದಲ್ಲಿ ನೋಂದಣಿಗೊಂಡ ಸುಮಾರು ಮುನ್ನೂರು ಪಕ್ಷಗಳಿವೆ. ರಾಷ್ಟ್ರೀಯ, ಪ್ರಾದೇಶಿಕ, ಜಾತೀಯ.. ಹೀಗೆ ತರಹೇವಾರಿ ರಾಜಕೀಯ ಪಕ್ಷಗಳಿವೆ. ವೃತ್ತಿಪರ ರಾಜಕಾರಣಿಗಳನ್ನು ದೂರ ಇಟ್ಟು ದಲಿತರು, ರೈತರು, ಕಾರ್ಮಿಕರು ಪ್ರತ್ಯೇಕ ಪಕ್ಷಗಳನ್ನು ಕಟ್ಟುವ ಪ್ರಯತ್ನ ಕೂಡಾ ನಡೆಸಿದ್ದುಂಟು.
ಇವುಗಳಲ್ಲಿ ಎರಡಂಕಿಯಷ್ಟು ಶೇಕಡಾವಾರು ಮತಗಳಿಸಿರುವ ರಾಜಕೀಯ ಪಕ್ಷಗಳು ಮಾತ್ರ ಬೆರಳೆಣಿಕೆಯಷ್ಟು. `ನಿನ್ನೆಯ ಮಳೆಗೆ ಹುಟ್ಟಿ ಇವತ್ತಿನ ಬಿಸಿಲಿಗೆ ಸತ್ತುಹೋದ' ಪಕ್ಷಗಳೇ ಹೆಚ್ಚು. ಭಾರತದ ನೆಲದಲ್ಲಿ `ಆಮ್ ಆದ್ಮಿ ಪಾರ್ಟಿ' ಹಲವು ಕಾರಣಗಳಿಗಾಗಿ ಒಂದು ಹೊಸ ಪ್ರಯೋಗ. ಇತಿಹಾಸದ ಪುಟಗಳಲ್ಲಿ ಇಂತಹದ್ದೊಂದು ಪ್ರಯತ್ನ ಕಂಡುಬರುವುದು ಎಪ್ಪತ್ತರ ದಶಕದ ಕೊನೆಭಾಗದಲ್ಲಿ ಜಯಪ್ರಕಾಶ್ ನಾರಾಯಣ್ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ಪರ್ಯಾಯ ರಾಜಕೀಯ ಶಕ್ತಿಯಲ್ಲಿ ಮಾತ್ರ.
ಆಗ ಅಸ್ತಿತ್ವಕ್ಕೆ ಬಂದಿದ್ದ ಜನತಾ ಪಕ್ಷ ಎನ್ನುವುದು ಜೇಪಿ ನೇತೃತ್ವದ `ಸಂಪೂರ್ಣ ಕ್ರಾಂತಿ' ಎಂಬ ಚಳವಳಿಯ ಉತ್ಪನ್ನ. ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿ ಅಲ್ಲಲ್ಲಿ ಜೇಪಿ ಚಳವಳಿಯನ್ನು ನೆನೆಪಿಸಿದರೂ ಜಯಪ್ರಕಾಶ್ ನಾರಾಯಣ್ ಅವರಿಗಿದ್ದ ಸೈದ್ಧಾಂತಿಕ ತಿಳಿವಳಿಕೆ,ಹೋರಾಟದ ಹಾದಿ ಬಗೆಗಿನ ಸ್ಪಷ್ಟತೆ ಮತ್ತು ವರ್ಚಸ್ಸಿನ ನಾಯಕತ್ವ ಹಜಾರೆ ಅವರಿಗೆ ಇಲ್ಲ.
ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅದು ಸಂಪೂರ್ಣವಾಗಿ ರಾಜಕೀಯ ಚಳವಳಿಯಾಗಿತ್ತು. ಅದಕ್ಕಿದ್ದ ರಾಜಕೀಯ ಮುಖವನ್ನು ಯಾರೂ ಮುಚ್ಚಿಟ್ಟಿರಲಿಲ್ಲ. ಕಾಂಗ್ರೆಸ್ ವಿರೋಧಿ ರಾಜಕೀಯ ಪಕ್ಷಗಳೆಲ್ಲವೂ ಬಹಿರಂಗವಾಗಿ ಅದರಲ್ಲಿ ಪಾಲ್ಗೊಂಡಿದ್ದವು. ಆದುದರಿಂದ ಚಳವಳಿ ರಾಜಕೀಯ ಪಕ್ಷದ ರೂಪ ಪಡೆದಾಗ ಸಂಘಟನೆಯ ಸಮಸ್ಯೆ ಅದನ್ನು ಕಾಡಿರಲಿಲ್ಲ.
ಅರವಿಂದ್ ಕೇಜ್ರಿವಾಲ್ ನೇತೃತ್ವದ `ಆಮ್ ಆದ್ಮಿ ಪಾರ್ಟಿ' ಎನ್ನುವುದು `ರಾಜಕೀಯ ವಿರೋಧಿ ರಾಜಕೀಯ ಪಕ್ಷ'. ಶಾಂತಿಭೂಷಣ್ ಅವರನ್ನೊಬ್ಬರನ್ನು ಹೊರತುಪಡಿಸಿದರೆ ಈ ಪಕ್ಷದ ನಾಯಕರಲ್ಲಿ ಯಾರೂ ರಾಜಕೀಯ ಪಕ್ಷಗಳಿಂದ ಬಂದವರಲ್ಲ. ಈ ರೀತಿಯ `ರಾಜಕೀಯ ವಿರೋಧಿ ಚಹರೆ'ಯಿಂದ ಲಾಭ ಮತ್ತು ನಷ್ಟ ಎರಡೂ ಇವೆ. ಈಗಿನ ರಾಜಕೀಯ ವ್ಯವಸ್ಥೆಯನ್ನು ದ್ವೇಷಿಸುವ ದೊಡ್ಡ ಜನಸಮುದಾಯ ದೇಶದಲ್ಲಿದೆ.
ಅವರ ಬೆಂಬಲದ ಲಾಭವನ್ನು ಪಕ್ಷ ಪಡೆಯಬಹುದು. ನಷ್ಟವೂ ಇದೆ. ರಾಜಕೀಯ ಪಕ್ಷ ಎನ್ನುವುದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಅದೊಂದು ಸಾಮೂಹಿಕ ಪ್ರಯತ್ನ. ಇದಕ್ಕಾಗಿ ನಿಷ್ಠಾವಂತ ಕಾರ್ಯಕರ್ತರನ್ನೊಳಗೊಂಡ ಸಂಘಟನೆಯ ಬಲ ಬೇಕಾಗುತ್ತದೆ. ಕೇಜ್ರಿವಾಲ್ ಪಕ್ಷ ವೃತ್ತಿಪರ ರಾಜಕಾರಣಿಗಳನ್ನು ಅಸ್ಪೃಶ್ಯರಂತೆಯೇ ಕಾಣುತ್ತಾ ಬಂದಿರುವುದರಿಂದ ಅನಿವಾರ್ಯವಾಗಿ ಹೊಸ ಮುಖಗಳನ್ನೇ ಹುಡುಕಾಡಬೇಕಾಗಿದೆ.
ರಾಜಕೀಯ ಪಕ್ಷವೊಂದು ಯಶಸ್ಸನ್ನು ಕಾಣಬೇಕಾದರೆ ಅದರ ಖಾತೆಯಲ್ಲಿ ಬೆಂಬಲದ ಖಾತರಿ ಉಳ್ಳ ಒಂದು ಮತವರ್ಗ ಇರಬೇಕಾಗುತ್ತದೆ. ಈ ಜನಬೆಂಬಲದ `ಠೇವಣಿ'ಯನ್ನು ಇಟ್ಟುಕೊಂಡು ಅದು ಹೊಸ ಬೆಂಬಲಿಗರನ್ನು ಸೇರ್ಪಡೆಗೊಳಿಸುತ್ತಾ ಬೆಳೆಯಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಪ್ರಾರಂಭದಿಂದಲೂ `ಬಡವರು' ಎಂಬ ಸಾಮಾನ್ಯ ಮತಕ್ಷೇತ್ರವನ್ನು ಪೋಷಿಸುತ್ತಾ ಬಂದಿದೆ.
ಅದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ಭಾರತೀಯ ಜನತಾ ಪಕ್ಷ `ಹಿಂದೂ' ಮತಕ್ಷೇತ್ರವನ್ನು ಆರಿಸಿಕೊಂಡಿದೆ. ಈ ರೀತಿ `ಆಮ್ ಆದ್ಮಿ ಪಾರ್ಟಿ'ಯ ಮೂಲ ಮತಬ್ಯಾಂಕ್ ಯಾವುದು? ಪಕ್ಷದ ಹೆಸರನ್ನು ನೋಡಿದರೆ ಅದು `ಸಾಮಾನ್ಯಜನತೆ'ಯನ್ನು ಗುರಿಯಾಗಿಟ್ಟುಕೊಂಡಂತೆ ಕಾಣುತ್ತಿರುವುದು ನಿಜ.
ಆದರೆ ಅಣ್ಣಾಹಜಾರೆ ಮತ್ತು ಕೇಜ್ರಿವಾಲ್ ಜತೆಗೂಡಿ ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದುದು `ಸಾಮಾನ್ಯ ಜನತೆ' ಅಲ್ಲ, ಅದು `ಮಧ್ಯಮ ವರ್ಗ'. ಒಂದು ಕಾಲದಲ್ಲಿ `ಆಮ್‌ಆದ್ಮಿ' ಗುಂಪಿನಲ್ಲಿಯೇ ಇದ್ದ `ಮಧ್ಯಮ ವರ್ಗ' ಆರ್ಥಿಕ ಉದಾರೀಕರಣದ ಯುಗದ ನಂತರ ಸಿಡಿದು ಹೊರಬಂದಿದೆ. ಈಗ ಇವೆರಡೂ ಒಂದೇ ಎಂದು ಹೇಳಲಾಗುವುದಿಲ್ಲ.
ಈ `ಮಧ್ಯಮ ವರ್ಗ' ಬೀದಿಗಿಳಿದು ಬೆವರು ಸುರಿಸಿ ಕೇಜ್ರಿವಾಲ್ ಪಕ್ಷಕ್ಕಾಗಿ ದುಡಿಯುವವರಲ್ಲ. ಇವರಲ್ಲಿ ಹೆಚ್ಚಿನವರು `ಆರಾಮ ಕುರ್ಚಿಯ ದೇಶಭಕ್ತರು'. ಇವರು ಚುನಾವಣೆಯ ದಿನ ಮನೆಯಿಂದ ಹೊರಬಂದು ಮತಚಲಾಯಿಸಿದರೆ ಅದೇ ದೊಡ್ಡ ದೇಶಸೇವೆ.
ಕೇಜ್ರಿವಾಲ್ ಪಕ್ಷದ ಭವಿಷ್ಯದ ಕಾರ್ಯಸೂಚಿಯ ನೋಟವನ್ನು ನೀಡುವ `ಮುನ್ನೋಟದ ದಾಖಲೆ'ಯನ್ನು ಓದಿದರೆ ಅದು ಸಂಪೂರ್ಣವಾಗಿ `ಆಮ್ ಆದ್ಮಿ'ಯ ಪರವಾಗಿಯೇ ಇದ್ದಂತೆ ಕಾಣುತ್ತಿದೆ. `ಅಭಿವೃದ್ಧಿಗೆ `ಬಂಡವಾಳದ ತರ್ಕ' ಮತ್ತು `ಮುಕ್ತ ಮಾರುಕಟ್ಟೆ'ಯ ನೀತಿ ಅಲ್ಲ, `ಸಮಾನತೆ' ಮತ್ತು ಸಮಾಜದ ಕಟ್ಟಕಡೆಯ ಮನುಷ್ಯನ ಕಲ್ಯಾಣ' ಪ್ರೇರಣೆಯಾಗಬೇಕು' ಎಂದು ಪಕ್ಷದ `ಮುನ್ನೋಟದ ದಾಖಲೆ' ಹೇಳಿದೆ.
ಈ ದಾಖಲೆಯ ಆಧಾರದ ಆರ್ಥಿಕ ನೀತಿಯನ್ನು ಕೇಜ್ರಿವಾಲ್ ಬೆಂಬಲಕ್ಕೆ ನಿಂತಿರುವ ಆರ್ಥಿಕ ಉದಾರೀಕರಣದ ಉತ್ಪನ್ನವಾದ `ಮಧ್ಯಮವರ್ಗ' ಒಪ್ಪುತ್ತದೆಯೇ? ಇದು ಕೇಜ್ರಿವಾಲ್ ರಾಜಕೀಯದಲ್ಲಿ ಮೇಲ್ನೋಟಕ್ಕೆ ಕಾಣುವ ವೈರುದ್ಧ್ಯ, ಬಹುಶಃ ಮುಂದಿನ ದಿನಗಳಲ್ಲಿ ಅವರು ಎದುರಿಸಬೇಕಾಗಿರುವ ಬಿಕ್ಕಟ್ಟು ಕೂಡಾ.
ಇಷ್ಟು ಮಾತ್ರ ಅಲ್ಲ, `ಆಮ್‌ಆದ್ಮಿ ಪಾರ್ಟಿ'ಯ ರಾಜಕೀಯ ಸಿದ್ಧಾಂತ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಸಮಾಜವಾದದಿಂದ ಹಿಡಿದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರೆಗೆ ಹಲವಾರು `ಸೈದ್ಧಾಂತಿಕ ಶಾಲೆಗಳ ವಿದ್ಯಾರ್ಥಿಗಳು' ಈ ಪಕ್ಷದಲ್ಲಿದ್ದಾರೆ. ಚುನಾವಣೆ ಎನ್ನುವುದು ಕೇವಲ ಜನಲೋಕಪಾಲ ಮಸೂದೆಗಾಗಿ ನಡೆಯುವ ಜನಮತಗಣನೆ ಅಲ್ಲ.
ದೇಶದ ಮುಂದಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನೀತಿ ಮಾತ್ರ ಅಲ್ಲ, ಖಾಸಗೀಕರಣ, ಮೀಸಲಾತಿ, ವಿದೇಶಿ ನೀತಿ, ಆಂತರಿಕ ಭದ್ರತೆ, ಕೇಂದ್ರ-ರಾಜ್ಯ ಸಂಬಂಧ, ನೆಲ-ಜಲ-ಭಾಷೆಯ ಬಗೆಗಿನ ವಿವಾದಗಳು, ಕಾಶ್ಮೆರದ ಬಿಕ್ಕಟ್ಟು, ಈಶಾನ್ಯ ರಾಜ್ಯಗಳಲ್ಲಿನ ಅಶಾಂತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ.
ಕೇಜ್ರಿವಾಲ್ ಮತ್ತು ಸ್ನೇಹಿತರು ಇಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಜನಲೋಕಪಾಲ ಮಸೂದೆಯ ಹೊರತಾಗಿ ಉಳಿದ ವಿಷಯಗಳ ಬಗ್ಗೆ ಮಾತನಾಡಿದ್ದೇ ಕಡಿಮೆ.ಅರವಿಂದ್ ಕೇಜ್ರಿವಾಲ್ ಮತ್ತು ಸಂಗಡಿಗರ ಮುಂದೆ ಇರುವ ಇನ್ನೊಂದು ಸವಾಲು `ನುಡಿದಂತೆ ನಡೆಯುವುದು'. ಇಂದಿನ ರಾಜಕಾರಣಕ್ಕೆ ಅಂಟಿರುವ ಮಹಾರೋಗ ಎಂದರೆ ಆತ್ಮವಂಚನೆ.
ಬಹಳಷ್ಟು ರಾಜಕಾರಣಿಗಳು ಬಹಿರಂಗವಾಗಿಯೇ ಇದನ್ನು ಒಪ್ಪಿಕೊಳ್ಳುತ್ತಾರೆ. ಶಾಸಕರು ಮತ್ತು ಸಂಸದರಾಗಿ ಅವರು ಕೈಗೊಳ್ಳುವ ಪ್ರಮಾಣವಚನ ಮತ್ತು ಚುನಾವಣಾ ಕಾಲದಲ್ಲಿ ಮತದಾರರಿಗೆ ನೀಡುವ ಆಶ್ವಾಸನೆಗಳಿಗೂ ಅದರ ನಂತರದ ಅವರ ನಡವಳಿಕೆಗಳಿಗೂ ಸಂಬಂಧವೇ ಇಲ್ಲ.
ಕೇಜ್ರಿವಾಲ್ ಮತ್ತು ಸಂಗಡಿಗರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜಕಾರಣದ ಸಾರ ಮಾತ್ರವಲ್ಲ ಅದರ ವಿನ್ಯಾಸದ ಬದಲಾವಣೆ ಬಗ್ಗೆ ಬಾಯಿತುಂಬಾ ಮಾತನಾಡಿದ್ದಾರೆ, ನೀತಿ ಪಾಠವನ್ನು ಅಗತ್ಯಕ್ಕಿಂತ ಹೆಚ್ಚೇ ಮಾಡಿದ್ದಾರೆ. ಆ ಮಟ್ಟದ ಆದರ್ಶ ರಾಜಕಾರಣವನ್ನು ಮಾಡುವುದು ಪ್ರಾಯೋಗಿಕವಾಗಿ ಅಷ್ಟೊಂದು ಸುಲಭವೇ?
`ಆಮ್ ಆದ್ಮಿ ಪಕ್ಷ'ದ ಪಕ್ಷದ ಪ್ರಣಾಳಿಕೆ ರಚನೆಯಿಂದ ಹಿಡಿದು, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ ಹೀಗೆ ಪ್ರತಿಯೊಂದು ಹೆಜ್ಜೆಯನ್ನೂ ರಾಜಕೀಯ ವಿರೋಧಿಗಳು ಮಾತ್ರವಲ್ಲ, ಮತದಾರರೂ ಗಮನಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರೆಲ್ಲ ಈಗ ರಾಜಕಾರಣಿಗಳು. ರಾಜಕೀಯ ಪಕ್ಷ ಕಟ್ಟುವ ನಿರ್ಧಾರವನ್ನು ಕೈಗೊಂಡ ಮರುಗಳಿಗೆಯಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತನಿಗೆ ಇದ್ದ ರಕ್ಷಣೆ ಮತ್ತು ಸಾರ್ವಜನಿಕ ಅನುಕಂಪವನ್ನು ಅವರು ಕಳೆದುಕೊಂಡು ಉಳಿದೆಲ್ಲ ರಾಜಕಾರಣಿಗಳ ಜತೆ ಬೀದಿಯಲ್ಲಿ ಬಂದು ನಿಂತಿದ್ದಾರೆ. ಯಾರೂ ಯಾವ ರಿಯಾಯಿತಿಯನ್ನೂ ಅವರಿಗೆ ಕೊಡುವುದಿಲ್ಲ.
ಈಗ ಅವರು ಸಹೋದ್ಯೋಗಿ ರಾಜಕಾರಣಿಗಳ ಜತೆಯಲ್ಲಿ ರಾಜಕಾರಣದಲ್ಲಿ ಸಾಮಾನ್ಯವಾಗಿರುವ ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟದಲ್ಲಿ ತೊಡಗಬೇಕಾಗುತ್ತದೆ.
ನಮ್ಮೆಲ್ಲ ನೀತಿಗೆಟ್ಟ ರಾಜಕಾರಣ ಮತ್ತು ಭ್ರಷ್ಟಾಚಾರಕ್ಕೆ ಮೂಲವಾಗಿರುವ ದೋಷಪೂರ್ಣ ಚುನಾವಣಾ ವ್ಯವಸ್ಥೆಯಲ್ಲಿಯೇ ಕೇಜ್ರಿವಾಲ್ ಪಕ್ಷ ಪಾಲ್ಗೊಳ್ಳಲು ಹೊರಟಿದೆ. ಚುನಾವಣಾ ಸುಧಾರಣೆಗಳಾಗದೆ ನೀತಿ ಬದ್ಧ ರಾಜಕಾರಣ ಸಾಧ್ಯವೇ ಇಲ್ಲ ಎನ್ನುವಷ್ಟು ಭೀಕರವಾಗಿರುವ ವ್ಯವಸ್ಥೆಯಲ್ಲಿ ಬಹಳ ಬೇಗ ಕೇಜ್ರಿವಾಲ್ ತಂಡದ ಪ್ರಾಮಾಣಿಕತೆ ಮತ್ತು ನೈತಿಕನಿಷ್ಠೆ ಕರಗಿಹೋಗುವ ಅಪಾಯ ಇದೆ.
ಶುದ್ಧ 22 ಕ್ಯಾರೆಟ್‌ನಷ್ಟು ಪ್ರಾಮಾಣಿಕ ಮತ್ತು ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಿಬಿಟ್ಟರೆ ಕೇಜ್ರಿವಾಲ್ ಪಕ್ಷ ಅರ್ಧ ಗೆದ್ದಂತೆ. ಜಾತಿ, ದುಡ್ಡು ಮತ್ತು ತೋಳ್ಬಲದ ಪ್ರಭಾವಕ್ಕೀಡಾಗಿರುವ ಇಂದಿನ ರಾಜಕಾರಣದಲ್ಲಿ ಇದು ಸಾಧ್ಯವೇ? ಕಾನೂನು ಪ್ರಕಾರ ನೂರು ಕೊಲೆಗಳನ್ನು ಮಾಡಿದ ಪಾತಕಿಗೆ ಸಂಬಂಧಿಸಿದ ಮೇಲ್ಮನವಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದರೆ ಆತ ಚುನಾವಣೆಯಲ್ಲಿ ಸ್ಪರ್ಧಿಸಬಹುದು.
ಅದೇ ರೀತಿ ಬೇನಾಮಿಯಾಗಿ ರಾಶಿರಾಶಿ ಕಪ್ಪುಹಣವನ್ನು ಹೊಂದಿದ್ದರೂ ವರಮಾನ ಇಲಾಖೆಗೆ ಸಲ್ಲಿಸಿರುವ ಲೆಕ್ಕ ಕಾನೂನು ಪ್ರಕಾರ ಸರಿ ಎಂದಾದರೆ ಆತನೂ ಸ್ಪರ್ಧೆಗೆ ಅರ್ಹ. ರಾಜಕೀಯ ಪಕ್ಷಗಳ ಈ ನಡವಳಿಕೆಯಲ್ಲಿ ಕಾನೂನು ಪ್ರಕಾರ ತಪ್ಪು ಹುಡುಕಲಾಗದೆ ಇದ್ದರೂ ಇದನ್ನು ನೈತಿಕವಾಗಿ ಸರಿ ಎಂದು ಹೇಳಲಾಗದು. ಕೇಜ್ರಿವಾಲ್ ಪಕ್ಷ ಕೂಡಾ ಈ ವ್ಯತ್ಯಾಸವನ್ನು ಹೀಗೆಯೇ ಗುರುತಿಸುತ್ತದೆಯೇ?
ಗೆಲ್ಲುವ ಅರ್ಹತೆಯೊಂದಿದ್ದರೆ ಕಾನೂನು ಪ್ರಕಾರ ಅಪರಾಧ ಅಲ್ಲದ ಆರೋಪಗಳು ಕ್ಷಮ್ಯ ಎಂದು ಹೇಳುತ್ತದೆಯೇ? ಚುನಾವಣಾ ಆಯೋಗ ಹೇರಿರುವ ಪ್ರಚಾರ ವೆಚ್ಚದ ಮಿತಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು ಹೋಗುತ್ತದೆಯೇ?
ಇಂತಹ ಅನೇಕ ಸವಾಲುಗಳು `ಆಮ್ ಆದ್ಮಿ ಪಾರ್ಟಿ' ಮುಂದೆ ಇವೆ. `ಕೇಜ್ರಿವಾಲ್ ಮೊದಲೇ ರಾಜಕೀಯದ ಗುಪ್ತ ಕಾರ್ಯಸೂಚಿ ಹೊಂದಿದ್ದರು. ಇದಕ್ಕಾಗಿಯೇ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು, ಅಣ್ಣಾಹಜಾರೆಯವರನ್ನು ಬಳಸಿಕೊಂಡರು..'ಇತ್ಯಾದಿ ಆರೋಪಗಳು ಕೂಡಾ ಇವೆ.
ತಂಡದ ಸದಸ್ಯರ ಮೈಗೆ ಅಂಟಿಕೊಂಡಿರುವ ಸಣ್ಣಪುಟ್ಟ ಕಳಂಕಗಳೂ ಇವೆ. ಇವುಗಳೆಲ್ಲದರ ಹೊರತಾಗಿಯೂ ದೇಶದ ಮತದಾರರು `ಆಮ್ ಆದ್ಮಿ ಪಾರ್ಟಿ'ಯನ್ನು ಗೆಲ್ಲಿಸಿದರೆ ಅದರಿಂದ ಖಂಡಿತ ದೇಶದಲ್ಲಿ ಹೊಸ ರಾಜಕೀಯದ ಶಕೆ ಪ್ರಾರಂಭವಾಗಲಿದೆ.
ಸಾಮಾನ್ಯವಾಗಿ ಮತದಾರರು ಅದರಲ್ಲಿಯೂ ನಗರವಾಸಿ ಮತ್ತು ಶಿಕ್ಷಿತರು ಚುನಾವಣಾ ಸಮಯದಲ್ಲಿ `ಒಳ್ಳೆಯ ಅಭ್ಯರ್ಥಿಗಳು ಎಲ್ಲಿದ್ದಾರೆ? ಕೆಟ್ಟವರು ಮತ್ತು ಅತಿಕೆಟ್ಟವರ ನಡುವೆಯೇ ಆಯ್ಕೆ ಮಾಡಬೇಕಾಗಿದೆಯಲ್ಲವೇ' ಎಂದು ವ್ಯವಸ್ಥೆಯನ್ನು ಹಳಿಯುತ್ತಾ ಅರ್ಹ ಅಭ್ಯರ್ಥಿಗಳೇನಾದರೂ ಕಣದಲ್ಲಿದ್ದರೆ ಅವರಿಗೆ ಮತಹಾಕಿಬಿಟ್ಟು ಗೆಲ್ಲಿಸಬಹುದಿತ್ತು ಎಂಬ ಆದರ್ಶದ ಮಾತುಗಳಿಂದ ಕಾಲಹರಣ ಮಾಡುತ್ತಾ ಬಂದಿದ್ದಾರೆ.
ಇಲ್ಲಿಯ ವರೆಗೆ ಇವರಾಡುವ ಮಾತುಗಳಲ್ಲಿನ ಪ್ರಾಮಾಣಿಕತೆಯನ್ನು ಪರೀಕ್ಷೆಗೊಡ್ಡುವ ಬಿಡಿಬಿಡಿ ಅವಕಾಶಗಳು ಅಲ್ಲಿ ಇಲ್ಲಿ ಕಾಣಿಸಿಕೊಂಡಿದ್ದರೂ ರಾಷ್ಟ್ರವ್ಯಾಪಿ ಪರ್ಯಾಯ ರಾಜಕೀಯದ ಅವಕಾಶ ಎಪ್ಪತರ ದಶಕದ ನಂತರ ಎದುರಾಗಿರಲಿಲ್ಲ. ಅಂತಹ ಮಾದರಿ ರಾಜಕೀಯ ಪಕ್ಷವನ್ನು ಕೇಜ್ರಿವಾಲ್ ತಂಡ ಮತದಾರರ ಮುಂದೆ ಕಟ್ಟಿ ನಿಲ್ಲಿಸಿದೆ.
ಈಗ ಈ ಪಕ್ಷವನ್ನು ಗೆಲ್ಲಿಸುವ ಹೊಣೆ ಅವರನ್ನು ಬೆಂಬಲಿಸುತ್ತಿದ್ದ, ಅವರ ಸಭೆಗಳಿಗೆ `ಸ್ವಯಂಪ್ರೇರಿತರಾಗಿ' ಲಕ್ಷಲಕ್ಷ ಸಂಖ್ಯೆಯಲ್ಲಿ ಸೇರುತ್ತಿದ್ದ `ಜಾಗೃತ, ಪ್ರಾಮಾಣಿಕ, ದೇಶಭಕ್ತ' ಜನತೆಯದ್ದು. ಇವರು `ಆಮ್ ಆದ್ಮಿ ಪಾರ್ಟಿ'ಯನ್ನು ಗೆಲ್ಲಿಸುತ್ತಾರಾ?