Monday, December 3, 2012

ಕೇಜ್ರಿವಾಲ್ ಗೆಲ್ಲಬೇಕು ನಿಜ, ಗೆಲ್ಲಿಸುವವರು ಯಾರು? Dec 02 2012


`ರಾಜಕಾರಣಿಗಳ ವಿರುದ್ಧ ಆರೋಪ ಮಾಡುವುದು ಸುಲಭ, ತಾಕತ್ತಿದ್ದರೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ನೋಡಿ. ಆ ಶಕ್ತಿ ನಿಮಗಿದೆಯೇ?' ಎಂದು ನಮ್ಮ ವೃತ್ತಿಪರ ರಾಜಕಾರಣಿಗಳು, ಅವರ ವಿರುದ್ಧ ಬರೆಯುವ ಪತ್ರಕರ್ತರು ಮತ್ತು ಹೋರಾಟ ನಡೆಸುವ ಸಾಮಾಜಿಕ ಕಾರ್ಯಕರ್ತರನ್ನು ಆಗಾಗ ಕಿಚಾಯಿಸುವುದುಂಟು.
ಕಳೆದೆರಡು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರೀಯ ಸಮರವನ್ನು ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ಮತ್ತು ಸಂಗಾತಿಗಳ `ಎದೆ ಮೇಲೆ ಬಂದೂಕು ಇಟ್ಟು' ನಮ್ಮ ಜನಪ್ರಿಯ ರಾಜಕೀಯ ಪಕ್ಷಗಳು ಕೇಳಿದ್ದು ಇದೇ ಪ್ರಶ್ನೆಯನ್ನು. ಕೇಜ್ರಿವಾಲ್ ತಂಡ ಹಿಂದೆ ಸರಿಯಲಿಲ್ಲ, `ಬಂದೂಕಿನೊಳಗಿನ ಗುಂಡನ್ನು ನುಂಗಿಬಿಟ್ಟಿದೆ'. ತಲೆಗೆ ಗಾಂಧಿ ಟೋಪಿಯೇರಿಸಿ `ಆಮ್ ಆದ್ಮಿ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದೆ.
ಚುನಾವಣಾ ಆಯೋಗದಲ್ಲಿ ನೋಂದಣಿಗೊಂಡ ಸುಮಾರು ಮುನ್ನೂರು ಪಕ್ಷಗಳಿವೆ. ರಾಷ್ಟ್ರೀಯ, ಪ್ರಾದೇಶಿಕ, ಜಾತೀಯ.. ಹೀಗೆ ತರಹೇವಾರಿ ರಾಜಕೀಯ ಪಕ್ಷಗಳಿವೆ. ವೃತ್ತಿಪರ ರಾಜಕಾರಣಿಗಳನ್ನು ದೂರ ಇಟ್ಟು ದಲಿತರು, ರೈತರು, ಕಾರ್ಮಿಕರು ಪ್ರತ್ಯೇಕ ಪಕ್ಷಗಳನ್ನು ಕಟ್ಟುವ ಪ್ರಯತ್ನ ಕೂಡಾ ನಡೆಸಿದ್ದುಂಟು.
ಇವುಗಳಲ್ಲಿ ಎರಡಂಕಿಯಷ್ಟು ಶೇಕಡಾವಾರು ಮತಗಳಿಸಿರುವ ರಾಜಕೀಯ ಪಕ್ಷಗಳು ಮಾತ್ರ ಬೆರಳೆಣಿಕೆಯಷ್ಟು. `ನಿನ್ನೆಯ ಮಳೆಗೆ ಹುಟ್ಟಿ ಇವತ್ತಿನ ಬಿಸಿಲಿಗೆ ಸತ್ತುಹೋದ' ಪಕ್ಷಗಳೇ ಹೆಚ್ಚು. ಭಾರತದ ನೆಲದಲ್ಲಿ `ಆಮ್ ಆದ್ಮಿ ಪಾರ್ಟಿ' ಹಲವು ಕಾರಣಗಳಿಗಾಗಿ ಒಂದು ಹೊಸ ಪ್ರಯೋಗ. ಇತಿಹಾಸದ ಪುಟಗಳಲ್ಲಿ ಇಂತಹದ್ದೊಂದು ಪ್ರಯತ್ನ ಕಂಡುಬರುವುದು ಎಪ್ಪತ್ತರ ದಶಕದ ಕೊನೆಭಾಗದಲ್ಲಿ ಜಯಪ್ರಕಾಶ್ ನಾರಾಯಣ್ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ಪರ್ಯಾಯ ರಾಜಕೀಯ ಶಕ್ತಿಯಲ್ಲಿ ಮಾತ್ರ.
ಆಗ ಅಸ್ತಿತ್ವಕ್ಕೆ ಬಂದಿದ್ದ ಜನತಾ ಪಕ್ಷ ಎನ್ನುವುದು ಜೇಪಿ ನೇತೃತ್ವದ `ಸಂಪೂರ್ಣ ಕ್ರಾಂತಿ' ಎಂಬ ಚಳವಳಿಯ ಉತ್ಪನ್ನ. ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿ ಅಲ್ಲಲ್ಲಿ ಜೇಪಿ ಚಳವಳಿಯನ್ನು ನೆನೆಪಿಸಿದರೂ ಜಯಪ್ರಕಾಶ್ ನಾರಾಯಣ್ ಅವರಿಗಿದ್ದ ಸೈದ್ಧಾಂತಿಕ ತಿಳಿವಳಿಕೆ,ಹೋರಾಟದ ಹಾದಿ ಬಗೆಗಿನ ಸ್ಪಷ್ಟತೆ ಮತ್ತು ವರ್ಚಸ್ಸಿನ ನಾಯಕತ್ವ ಹಜಾರೆ ಅವರಿಗೆ ಇಲ್ಲ.
ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅದು ಸಂಪೂರ್ಣವಾಗಿ ರಾಜಕೀಯ ಚಳವಳಿಯಾಗಿತ್ತು. ಅದಕ್ಕಿದ್ದ ರಾಜಕೀಯ ಮುಖವನ್ನು ಯಾರೂ ಮುಚ್ಚಿಟ್ಟಿರಲಿಲ್ಲ. ಕಾಂಗ್ರೆಸ್ ವಿರೋಧಿ ರಾಜಕೀಯ ಪಕ್ಷಗಳೆಲ್ಲವೂ ಬಹಿರಂಗವಾಗಿ ಅದರಲ್ಲಿ ಪಾಲ್ಗೊಂಡಿದ್ದವು. ಆದುದರಿಂದ ಚಳವಳಿ ರಾಜಕೀಯ ಪಕ್ಷದ ರೂಪ ಪಡೆದಾಗ ಸಂಘಟನೆಯ ಸಮಸ್ಯೆ ಅದನ್ನು ಕಾಡಿರಲಿಲ್ಲ.
ಅರವಿಂದ್ ಕೇಜ್ರಿವಾಲ್ ನೇತೃತ್ವದ `ಆಮ್ ಆದ್ಮಿ ಪಾರ್ಟಿ' ಎನ್ನುವುದು `ರಾಜಕೀಯ ವಿರೋಧಿ ರಾಜಕೀಯ ಪಕ್ಷ'. ಶಾಂತಿಭೂಷಣ್ ಅವರನ್ನೊಬ್ಬರನ್ನು ಹೊರತುಪಡಿಸಿದರೆ ಈ ಪಕ್ಷದ ನಾಯಕರಲ್ಲಿ ಯಾರೂ ರಾಜಕೀಯ ಪಕ್ಷಗಳಿಂದ ಬಂದವರಲ್ಲ. ಈ ರೀತಿಯ `ರಾಜಕೀಯ ವಿರೋಧಿ ಚಹರೆ'ಯಿಂದ ಲಾಭ ಮತ್ತು ನಷ್ಟ ಎರಡೂ ಇವೆ. ಈಗಿನ ರಾಜಕೀಯ ವ್ಯವಸ್ಥೆಯನ್ನು ದ್ವೇಷಿಸುವ ದೊಡ್ಡ ಜನಸಮುದಾಯ ದೇಶದಲ್ಲಿದೆ.
ಅವರ ಬೆಂಬಲದ ಲಾಭವನ್ನು ಪಕ್ಷ ಪಡೆಯಬಹುದು. ನಷ್ಟವೂ ಇದೆ. ರಾಜಕೀಯ ಪಕ್ಷ ಎನ್ನುವುದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಅದೊಂದು ಸಾಮೂಹಿಕ ಪ್ರಯತ್ನ. ಇದಕ್ಕಾಗಿ ನಿಷ್ಠಾವಂತ ಕಾರ್ಯಕರ್ತರನ್ನೊಳಗೊಂಡ ಸಂಘಟನೆಯ ಬಲ ಬೇಕಾಗುತ್ತದೆ. ಕೇಜ್ರಿವಾಲ್ ಪಕ್ಷ ವೃತ್ತಿಪರ ರಾಜಕಾರಣಿಗಳನ್ನು ಅಸ್ಪೃಶ್ಯರಂತೆಯೇ ಕಾಣುತ್ತಾ ಬಂದಿರುವುದರಿಂದ ಅನಿವಾರ್ಯವಾಗಿ ಹೊಸ ಮುಖಗಳನ್ನೇ ಹುಡುಕಾಡಬೇಕಾಗಿದೆ.
ರಾಜಕೀಯ ಪಕ್ಷವೊಂದು ಯಶಸ್ಸನ್ನು ಕಾಣಬೇಕಾದರೆ ಅದರ ಖಾತೆಯಲ್ಲಿ ಬೆಂಬಲದ ಖಾತರಿ ಉಳ್ಳ ಒಂದು ಮತವರ್ಗ ಇರಬೇಕಾಗುತ್ತದೆ. ಈ ಜನಬೆಂಬಲದ `ಠೇವಣಿ'ಯನ್ನು ಇಟ್ಟುಕೊಂಡು ಅದು ಹೊಸ ಬೆಂಬಲಿಗರನ್ನು ಸೇರ್ಪಡೆಗೊಳಿಸುತ್ತಾ ಬೆಳೆಯಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಪ್ರಾರಂಭದಿಂದಲೂ `ಬಡವರು' ಎಂಬ ಸಾಮಾನ್ಯ ಮತಕ್ಷೇತ್ರವನ್ನು ಪೋಷಿಸುತ್ತಾ ಬಂದಿದೆ.
ಅದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ಭಾರತೀಯ ಜನತಾ ಪಕ್ಷ `ಹಿಂದೂ' ಮತಕ್ಷೇತ್ರವನ್ನು ಆರಿಸಿಕೊಂಡಿದೆ. ಈ ರೀತಿ `ಆಮ್ ಆದ್ಮಿ ಪಾರ್ಟಿ'ಯ ಮೂಲ ಮತಬ್ಯಾಂಕ್ ಯಾವುದು? ಪಕ್ಷದ ಹೆಸರನ್ನು ನೋಡಿದರೆ ಅದು `ಸಾಮಾನ್ಯಜನತೆ'ಯನ್ನು ಗುರಿಯಾಗಿಟ್ಟುಕೊಂಡಂತೆ ಕಾಣುತ್ತಿರುವುದು ನಿಜ.
ಆದರೆ ಅಣ್ಣಾಹಜಾರೆ ಮತ್ತು ಕೇಜ್ರಿವಾಲ್ ಜತೆಗೂಡಿ ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದುದು `ಸಾಮಾನ್ಯ ಜನತೆ' ಅಲ್ಲ, ಅದು `ಮಧ್ಯಮ ವರ್ಗ'. ಒಂದು ಕಾಲದಲ್ಲಿ `ಆಮ್‌ಆದ್ಮಿ' ಗುಂಪಿನಲ್ಲಿಯೇ ಇದ್ದ `ಮಧ್ಯಮ ವರ್ಗ' ಆರ್ಥಿಕ ಉದಾರೀಕರಣದ ಯುಗದ ನಂತರ ಸಿಡಿದು ಹೊರಬಂದಿದೆ. ಈಗ ಇವೆರಡೂ ಒಂದೇ ಎಂದು ಹೇಳಲಾಗುವುದಿಲ್ಲ.
ಈ `ಮಧ್ಯಮ ವರ್ಗ' ಬೀದಿಗಿಳಿದು ಬೆವರು ಸುರಿಸಿ ಕೇಜ್ರಿವಾಲ್ ಪಕ್ಷಕ್ಕಾಗಿ ದುಡಿಯುವವರಲ್ಲ. ಇವರಲ್ಲಿ ಹೆಚ್ಚಿನವರು `ಆರಾಮ ಕುರ್ಚಿಯ ದೇಶಭಕ್ತರು'. ಇವರು ಚುನಾವಣೆಯ ದಿನ ಮನೆಯಿಂದ ಹೊರಬಂದು ಮತಚಲಾಯಿಸಿದರೆ ಅದೇ ದೊಡ್ಡ ದೇಶಸೇವೆ.
ಕೇಜ್ರಿವಾಲ್ ಪಕ್ಷದ ಭವಿಷ್ಯದ ಕಾರ್ಯಸೂಚಿಯ ನೋಟವನ್ನು ನೀಡುವ `ಮುನ್ನೋಟದ ದಾಖಲೆ'ಯನ್ನು ಓದಿದರೆ ಅದು ಸಂಪೂರ್ಣವಾಗಿ `ಆಮ್ ಆದ್ಮಿ'ಯ ಪರವಾಗಿಯೇ ಇದ್ದಂತೆ ಕಾಣುತ್ತಿದೆ. `ಅಭಿವೃದ್ಧಿಗೆ `ಬಂಡವಾಳದ ತರ್ಕ' ಮತ್ತು `ಮುಕ್ತ ಮಾರುಕಟ್ಟೆ'ಯ ನೀತಿ ಅಲ್ಲ, `ಸಮಾನತೆ' ಮತ್ತು ಸಮಾಜದ ಕಟ್ಟಕಡೆಯ ಮನುಷ್ಯನ ಕಲ್ಯಾಣ' ಪ್ರೇರಣೆಯಾಗಬೇಕು' ಎಂದು ಪಕ್ಷದ `ಮುನ್ನೋಟದ ದಾಖಲೆ' ಹೇಳಿದೆ.
ಈ ದಾಖಲೆಯ ಆಧಾರದ ಆರ್ಥಿಕ ನೀತಿಯನ್ನು ಕೇಜ್ರಿವಾಲ್ ಬೆಂಬಲಕ್ಕೆ ನಿಂತಿರುವ ಆರ್ಥಿಕ ಉದಾರೀಕರಣದ ಉತ್ಪನ್ನವಾದ `ಮಧ್ಯಮವರ್ಗ' ಒಪ್ಪುತ್ತದೆಯೇ? ಇದು ಕೇಜ್ರಿವಾಲ್ ರಾಜಕೀಯದಲ್ಲಿ ಮೇಲ್ನೋಟಕ್ಕೆ ಕಾಣುವ ವೈರುದ್ಧ್ಯ, ಬಹುಶಃ ಮುಂದಿನ ದಿನಗಳಲ್ಲಿ ಅವರು ಎದುರಿಸಬೇಕಾಗಿರುವ ಬಿಕ್ಕಟ್ಟು ಕೂಡಾ.
ಇಷ್ಟು ಮಾತ್ರ ಅಲ್ಲ, `ಆಮ್‌ಆದ್ಮಿ ಪಾರ್ಟಿ'ಯ ರಾಜಕೀಯ ಸಿದ್ಧಾಂತ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಸಮಾಜವಾದದಿಂದ ಹಿಡಿದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರೆಗೆ ಹಲವಾರು `ಸೈದ್ಧಾಂತಿಕ ಶಾಲೆಗಳ ವಿದ್ಯಾರ್ಥಿಗಳು' ಈ ಪಕ್ಷದಲ್ಲಿದ್ದಾರೆ. ಚುನಾವಣೆ ಎನ್ನುವುದು ಕೇವಲ ಜನಲೋಕಪಾಲ ಮಸೂದೆಗಾಗಿ ನಡೆಯುವ ಜನಮತಗಣನೆ ಅಲ್ಲ.
ದೇಶದ ಮುಂದಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನೀತಿ ಮಾತ್ರ ಅಲ್ಲ, ಖಾಸಗೀಕರಣ, ಮೀಸಲಾತಿ, ವಿದೇಶಿ ನೀತಿ, ಆಂತರಿಕ ಭದ್ರತೆ, ಕೇಂದ್ರ-ರಾಜ್ಯ ಸಂಬಂಧ, ನೆಲ-ಜಲ-ಭಾಷೆಯ ಬಗೆಗಿನ ವಿವಾದಗಳು, ಕಾಶ್ಮೆರದ ಬಿಕ್ಕಟ್ಟು, ಈಶಾನ್ಯ ರಾಜ್ಯಗಳಲ್ಲಿನ ಅಶಾಂತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ.
ಕೇಜ್ರಿವಾಲ್ ಮತ್ತು ಸ್ನೇಹಿತರು ಇಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಜನಲೋಕಪಾಲ ಮಸೂದೆಯ ಹೊರತಾಗಿ ಉಳಿದ ವಿಷಯಗಳ ಬಗ್ಗೆ ಮಾತನಾಡಿದ್ದೇ ಕಡಿಮೆ.ಅರವಿಂದ್ ಕೇಜ್ರಿವಾಲ್ ಮತ್ತು ಸಂಗಡಿಗರ ಮುಂದೆ ಇರುವ ಇನ್ನೊಂದು ಸವಾಲು `ನುಡಿದಂತೆ ನಡೆಯುವುದು'. ಇಂದಿನ ರಾಜಕಾರಣಕ್ಕೆ ಅಂಟಿರುವ ಮಹಾರೋಗ ಎಂದರೆ ಆತ್ಮವಂಚನೆ.
ಬಹಳಷ್ಟು ರಾಜಕಾರಣಿಗಳು ಬಹಿರಂಗವಾಗಿಯೇ ಇದನ್ನು ಒಪ್ಪಿಕೊಳ್ಳುತ್ತಾರೆ. ಶಾಸಕರು ಮತ್ತು ಸಂಸದರಾಗಿ ಅವರು ಕೈಗೊಳ್ಳುವ ಪ್ರಮಾಣವಚನ ಮತ್ತು ಚುನಾವಣಾ ಕಾಲದಲ್ಲಿ ಮತದಾರರಿಗೆ ನೀಡುವ ಆಶ್ವಾಸನೆಗಳಿಗೂ ಅದರ ನಂತರದ ಅವರ ನಡವಳಿಕೆಗಳಿಗೂ ಸಂಬಂಧವೇ ಇಲ್ಲ.
ಕೇಜ್ರಿವಾಲ್ ಮತ್ತು ಸಂಗಡಿಗರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜಕಾರಣದ ಸಾರ ಮಾತ್ರವಲ್ಲ ಅದರ ವಿನ್ಯಾಸದ ಬದಲಾವಣೆ ಬಗ್ಗೆ ಬಾಯಿತುಂಬಾ ಮಾತನಾಡಿದ್ದಾರೆ, ನೀತಿ ಪಾಠವನ್ನು ಅಗತ್ಯಕ್ಕಿಂತ ಹೆಚ್ಚೇ ಮಾಡಿದ್ದಾರೆ. ಆ ಮಟ್ಟದ ಆದರ್ಶ ರಾಜಕಾರಣವನ್ನು ಮಾಡುವುದು ಪ್ರಾಯೋಗಿಕವಾಗಿ ಅಷ್ಟೊಂದು ಸುಲಭವೇ?
`ಆಮ್ ಆದ್ಮಿ ಪಕ್ಷ'ದ ಪಕ್ಷದ ಪ್ರಣಾಳಿಕೆ ರಚನೆಯಿಂದ ಹಿಡಿದು, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ ಹೀಗೆ ಪ್ರತಿಯೊಂದು ಹೆಜ್ಜೆಯನ್ನೂ ರಾಜಕೀಯ ವಿರೋಧಿಗಳು ಮಾತ್ರವಲ್ಲ, ಮತದಾರರೂ ಗಮನಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರೆಲ್ಲ ಈಗ ರಾಜಕಾರಣಿಗಳು. ರಾಜಕೀಯ ಪಕ್ಷ ಕಟ್ಟುವ ನಿರ್ಧಾರವನ್ನು ಕೈಗೊಂಡ ಮರುಗಳಿಗೆಯಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತನಿಗೆ ಇದ್ದ ರಕ್ಷಣೆ ಮತ್ತು ಸಾರ್ವಜನಿಕ ಅನುಕಂಪವನ್ನು ಅವರು ಕಳೆದುಕೊಂಡು ಉಳಿದೆಲ್ಲ ರಾಜಕಾರಣಿಗಳ ಜತೆ ಬೀದಿಯಲ್ಲಿ ಬಂದು ನಿಂತಿದ್ದಾರೆ. ಯಾರೂ ಯಾವ ರಿಯಾಯಿತಿಯನ್ನೂ ಅವರಿಗೆ ಕೊಡುವುದಿಲ್ಲ.
ಈಗ ಅವರು ಸಹೋದ್ಯೋಗಿ ರಾಜಕಾರಣಿಗಳ ಜತೆಯಲ್ಲಿ ರಾಜಕಾರಣದಲ್ಲಿ ಸಾಮಾನ್ಯವಾಗಿರುವ ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟದಲ್ಲಿ ತೊಡಗಬೇಕಾಗುತ್ತದೆ.
ನಮ್ಮೆಲ್ಲ ನೀತಿಗೆಟ್ಟ ರಾಜಕಾರಣ ಮತ್ತು ಭ್ರಷ್ಟಾಚಾರಕ್ಕೆ ಮೂಲವಾಗಿರುವ ದೋಷಪೂರ್ಣ ಚುನಾವಣಾ ವ್ಯವಸ್ಥೆಯಲ್ಲಿಯೇ ಕೇಜ್ರಿವಾಲ್ ಪಕ್ಷ ಪಾಲ್ಗೊಳ್ಳಲು ಹೊರಟಿದೆ. ಚುನಾವಣಾ ಸುಧಾರಣೆಗಳಾಗದೆ ನೀತಿ ಬದ್ಧ ರಾಜಕಾರಣ ಸಾಧ್ಯವೇ ಇಲ್ಲ ಎನ್ನುವಷ್ಟು ಭೀಕರವಾಗಿರುವ ವ್ಯವಸ್ಥೆಯಲ್ಲಿ ಬಹಳ ಬೇಗ ಕೇಜ್ರಿವಾಲ್ ತಂಡದ ಪ್ರಾಮಾಣಿಕತೆ ಮತ್ತು ನೈತಿಕನಿಷ್ಠೆ ಕರಗಿಹೋಗುವ ಅಪಾಯ ಇದೆ.
ಶುದ್ಧ 22 ಕ್ಯಾರೆಟ್‌ನಷ್ಟು ಪ್ರಾಮಾಣಿಕ ಮತ್ತು ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಿಬಿಟ್ಟರೆ ಕೇಜ್ರಿವಾಲ್ ಪಕ್ಷ ಅರ್ಧ ಗೆದ್ದಂತೆ. ಜಾತಿ, ದುಡ್ಡು ಮತ್ತು ತೋಳ್ಬಲದ ಪ್ರಭಾವಕ್ಕೀಡಾಗಿರುವ ಇಂದಿನ ರಾಜಕಾರಣದಲ್ಲಿ ಇದು ಸಾಧ್ಯವೇ? ಕಾನೂನು ಪ್ರಕಾರ ನೂರು ಕೊಲೆಗಳನ್ನು ಮಾಡಿದ ಪಾತಕಿಗೆ ಸಂಬಂಧಿಸಿದ ಮೇಲ್ಮನವಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದರೆ ಆತ ಚುನಾವಣೆಯಲ್ಲಿ ಸ್ಪರ್ಧಿಸಬಹುದು.
ಅದೇ ರೀತಿ ಬೇನಾಮಿಯಾಗಿ ರಾಶಿರಾಶಿ ಕಪ್ಪುಹಣವನ್ನು ಹೊಂದಿದ್ದರೂ ವರಮಾನ ಇಲಾಖೆಗೆ ಸಲ್ಲಿಸಿರುವ ಲೆಕ್ಕ ಕಾನೂನು ಪ್ರಕಾರ ಸರಿ ಎಂದಾದರೆ ಆತನೂ ಸ್ಪರ್ಧೆಗೆ ಅರ್ಹ. ರಾಜಕೀಯ ಪಕ್ಷಗಳ ಈ ನಡವಳಿಕೆಯಲ್ಲಿ ಕಾನೂನು ಪ್ರಕಾರ ತಪ್ಪು ಹುಡುಕಲಾಗದೆ ಇದ್ದರೂ ಇದನ್ನು ನೈತಿಕವಾಗಿ ಸರಿ ಎಂದು ಹೇಳಲಾಗದು. ಕೇಜ್ರಿವಾಲ್ ಪಕ್ಷ ಕೂಡಾ ಈ ವ್ಯತ್ಯಾಸವನ್ನು ಹೀಗೆಯೇ ಗುರುತಿಸುತ್ತದೆಯೇ?
ಗೆಲ್ಲುವ ಅರ್ಹತೆಯೊಂದಿದ್ದರೆ ಕಾನೂನು ಪ್ರಕಾರ ಅಪರಾಧ ಅಲ್ಲದ ಆರೋಪಗಳು ಕ್ಷಮ್ಯ ಎಂದು ಹೇಳುತ್ತದೆಯೇ? ಚುನಾವಣಾ ಆಯೋಗ ಹೇರಿರುವ ಪ್ರಚಾರ ವೆಚ್ಚದ ಮಿತಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು ಹೋಗುತ್ತದೆಯೇ?
ಇಂತಹ ಅನೇಕ ಸವಾಲುಗಳು `ಆಮ್ ಆದ್ಮಿ ಪಾರ್ಟಿ' ಮುಂದೆ ಇವೆ. `ಕೇಜ್ರಿವಾಲ್ ಮೊದಲೇ ರಾಜಕೀಯದ ಗುಪ್ತ ಕಾರ್ಯಸೂಚಿ ಹೊಂದಿದ್ದರು. ಇದಕ್ಕಾಗಿಯೇ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು, ಅಣ್ಣಾಹಜಾರೆಯವರನ್ನು ಬಳಸಿಕೊಂಡರು..'ಇತ್ಯಾದಿ ಆರೋಪಗಳು ಕೂಡಾ ಇವೆ.
ತಂಡದ ಸದಸ್ಯರ ಮೈಗೆ ಅಂಟಿಕೊಂಡಿರುವ ಸಣ್ಣಪುಟ್ಟ ಕಳಂಕಗಳೂ ಇವೆ. ಇವುಗಳೆಲ್ಲದರ ಹೊರತಾಗಿಯೂ ದೇಶದ ಮತದಾರರು `ಆಮ್ ಆದ್ಮಿ ಪಾರ್ಟಿ'ಯನ್ನು ಗೆಲ್ಲಿಸಿದರೆ ಅದರಿಂದ ಖಂಡಿತ ದೇಶದಲ್ಲಿ ಹೊಸ ರಾಜಕೀಯದ ಶಕೆ ಪ್ರಾರಂಭವಾಗಲಿದೆ.
ಸಾಮಾನ್ಯವಾಗಿ ಮತದಾರರು ಅದರಲ್ಲಿಯೂ ನಗರವಾಸಿ ಮತ್ತು ಶಿಕ್ಷಿತರು ಚುನಾವಣಾ ಸಮಯದಲ್ಲಿ `ಒಳ್ಳೆಯ ಅಭ್ಯರ್ಥಿಗಳು ಎಲ್ಲಿದ್ದಾರೆ? ಕೆಟ್ಟವರು ಮತ್ತು ಅತಿಕೆಟ್ಟವರ ನಡುವೆಯೇ ಆಯ್ಕೆ ಮಾಡಬೇಕಾಗಿದೆಯಲ್ಲವೇ' ಎಂದು ವ್ಯವಸ್ಥೆಯನ್ನು ಹಳಿಯುತ್ತಾ ಅರ್ಹ ಅಭ್ಯರ್ಥಿಗಳೇನಾದರೂ ಕಣದಲ್ಲಿದ್ದರೆ ಅವರಿಗೆ ಮತಹಾಕಿಬಿಟ್ಟು ಗೆಲ್ಲಿಸಬಹುದಿತ್ತು ಎಂಬ ಆದರ್ಶದ ಮಾತುಗಳಿಂದ ಕಾಲಹರಣ ಮಾಡುತ್ತಾ ಬಂದಿದ್ದಾರೆ.
ಇಲ್ಲಿಯ ವರೆಗೆ ಇವರಾಡುವ ಮಾತುಗಳಲ್ಲಿನ ಪ್ರಾಮಾಣಿಕತೆಯನ್ನು ಪರೀಕ್ಷೆಗೊಡ್ಡುವ ಬಿಡಿಬಿಡಿ ಅವಕಾಶಗಳು ಅಲ್ಲಿ ಇಲ್ಲಿ ಕಾಣಿಸಿಕೊಂಡಿದ್ದರೂ ರಾಷ್ಟ್ರವ್ಯಾಪಿ ಪರ್ಯಾಯ ರಾಜಕೀಯದ ಅವಕಾಶ ಎಪ್ಪತರ ದಶಕದ ನಂತರ ಎದುರಾಗಿರಲಿಲ್ಲ. ಅಂತಹ ಮಾದರಿ ರಾಜಕೀಯ ಪಕ್ಷವನ್ನು ಕೇಜ್ರಿವಾಲ್ ತಂಡ ಮತದಾರರ ಮುಂದೆ ಕಟ್ಟಿ ನಿಲ್ಲಿಸಿದೆ.
ಈಗ ಈ ಪಕ್ಷವನ್ನು ಗೆಲ್ಲಿಸುವ ಹೊಣೆ ಅವರನ್ನು ಬೆಂಬಲಿಸುತ್ತಿದ್ದ, ಅವರ ಸಭೆಗಳಿಗೆ `ಸ್ವಯಂಪ್ರೇರಿತರಾಗಿ' ಲಕ್ಷಲಕ್ಷ ಸಂಖ್ಯೆಯಲ್ಲಿ ಸೇರುತ್ತಿದ್ದ `ಜಾಗೃತ, ಪ್ರಾಮಾಣಿಕ, ದೇಶಭಕ್ತ' ಜನತೆಯದ್ದು. ಇವರು `ಆಮ್ ಆದ್ಮಿ ಪಾರ್ಟಿ'ಯನ್ನು ಗೆಲ್ಲಿಸುತ್ತಾರಾ?

No comments:

Post a Comment