Thursday, October 18, 2012

ಕಷ್ಟ ಹಂಚಿಕೊಳ್ಳುವುದು ಸುಖ ಹಂಚಿಕೊಳ್ಳುವಷ್ಟು ಸುಲಭ ಅಲ್ಲ September 17, 2012

ಕಾವೇರಿ ನದಿನೀರು ಹಂಚಿಕೆಯ ವಿವಾದವನ್ನು ಕೊರಳಿಗೆ ಸುತ್ತಿಕೊಂಡು ಎರಡು ಶತಕಗಳಿಗಿಂತಲೂ ಹೆಚ್ಚು ಕಾಲ ಸುಸ್ತಾಗುವಷ್ಟು ಜಗಳವಾಡಿ, ಹಳ್ಳಿಯಿಂದ ದಿಲ್ಲಿ ವರೆಗೆ ಸುತ್ತಾಡಿ, ಇಷ್ಟ ಬಂದಷ್ಟು ಖರ್ಚು ಮಾಡಿದರೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡಿಗೆ ಸಾಧ್ಯವಾಗಿಲ್ಲ. 

ಈಗ ಎರಡೂ ರಾಜ್ಯಗಳು ಹೊರಟ ಜಾಗದಲ್ಲಿಯೇ ಮತ್ತೆ ಬಂದು ನಿಂತಿವೆ. 1799ರಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಕೆರೆಗಳ ದುರಸ್ತಿಯನ್ನು ವಿರೋಧಿಸಿ ತಂಜಾವೂರು ಜಿಲ್ಲೆಯ ರೈತರು ಮೊದಲ ಬಾರಿ ನಡೆಸಿದ ಪ್ರತಿಭಟನೆಯ ದಿನದಿಂದ ಪ್ರಾರಂಭವಾಗಿರುವ ನೀರಿನ ಜಗಳ ಇನ್ನೂ ನಿಂತಿಲ್ಲ. 

ಇದೇ ಸೆಪ್ಟೆಂಬರ್ 19ರಂದು ನಡೆಯಲಿರುವ ಪ್ರಧಾನಿ ಅಧ್ಯಕ್ಷರಾಗಿರುವ ಮತ್ತು ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ಮತ್ತೊಂದು ಸುತ್ತಿನ ಕಾದಾಟಕ್ಕೆ ಎರಡೂ ರಾಜ್ಯಗಳು ತಾಲೀಮು ನಡೆಸತೊಡಗಿವೆ.

ಸುಪ್ರೀಂಕೋರ್ಟ್ ಆದೇಶದಂತೆಯೇ ರಚನೆಯಾದ ಕಾವೇರಿ ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡಿದ ನಂತರವೂ ಮೂಲವಿವಾದ ಬಗೆಹರಿದಿಲ್ಲ ಎನ್ನುವುದಕ್ಕೆ ಈಗಿನ ಜಗಳವೇ ಸಾಕ್ಷಿ. `ಮಳೆಗಾಲದಲ್ಲಿ ನೂರಾರು ನೆಂಟರು, ಬರಗಾಲ ಅನಾಥ` ಎಂಬಂತಾಗಿದೆ ಕಾವೇರಿ ಕಣಿವೆಯ ರೈತರ ಸ್ಥಿತಿ. ಹದಿನಾರು ವರ್ಷಗಳಷ್ಟು ದೀರ್ಘಕಾಲ ಅಳೆದು, ತೂಗಿ, ಸೋಸಿ ನೀಡಿದ ಅಂತಿಮ ಐತೀರ್ಪು ಕೊನೆಗೂ ಮಳೆಬಂದ ದಿನಗಳಲ್ಲಿ ನೀರನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನಷ್ಟೇ ಹೇಳಿದ್ದು. 

ಇದಕ್ಕಿಂತಲೂ ಮುಖ್ಯವಾಗಿ ಮಳೆ ಇಲ್ಲದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನು ನ್ಯಾಯಮಂಡಳಿ ಹೇಳಬೇಕಾಗಿತ್ತು. ಆದರೆ `ಮಳೆ ಕೊರತೆಯ ವರ್ಷದಲ್ಲಿ ಕಡಿಮೆಯಾಗುವ ನೀರಿನ ಉತ್ಪನ್ನದ ಅನುಪಾತಕ್ಕೆ ಅನುಗುಣವಾಗಿ ಬಿಡಬೇಕಾಗಿರುವ ನೀರಿನ ಪಾಲು ಕಡಿಮೆಯಾಗಲಿದೆ` ಎಂದಷ್ಟೇ ಹೇಳಿರುವ ನ್ಯಾಯಮಂಡಳಿ ಇದಕ್ಕೊಂದು ಸ್ಪಷ್ಟವಾದ ಸೂತ್ರ ಇಲ್ಲವೇ ಮಾರ್ಗಸೂಚಿಯನ್ನು ನೀಡದೆ ಜಾರಿಕೊಂಡಿದೆ.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನೀರಿನ ಜಗಳವನ್ನು ಇನ್ನಷ್ಟು ಸರಳವಾಗಿ ವ್ಯಾಖ್ಯಾನಿಸುವುದಾದರೆ ಇದು ಮುಖ್ಯವಾಗಿ `ಮಳೆ ಇಲ್ಲದ ಕಷ್ಟದ ದಿನಗಳಲ್ಲಿನ ನೀರು ಹಂಚಿಕೆಯ ಸಮಸ್ಯೆ`. ಸಮೃದ್ಧವಾಗಿ ಮಳೆ ಬಿದ್ದಾಗ ನೀರು ಹರಿಸಲು ಕರ್ನಾಟಕ ತಕರಾರು ಮಾಡುವುದಿಲ್ಲ, ನೀರು ಬಿಡಲೇಬೇಕೆಂದು ತಮಿಳುನಾಡು ಕೂಡಾ ಹಟ ಹಿಡಿಯುವುದಿಲ್ಲ. 

1991ರಲ್ಲಿ ಮಧ್ಯಂತರ ಐತೀರ್ಪು ನೀಡಿದ ನಂತರದ ಇಪ್ಪತ್ತೊಂದು ವರ್ಷಗಳಲ್ಲಿ ನಾಲ್ಕು ವರ್ಷಗಳನ್ನು ( 2001-02: 189 ಟಿಎಂಸಿ, 2002-03: 109.45 ಟಿಎಂಸಿ, 2003-04: 75.87 ಟಿಎಂಸಿ ಮತ್ತು 2004-05: 185.55 ಟಿಎಂಸಿ) ಹೊರತುಪಡಿಸಿ ಉಳಿದೆಲ್ಲ ವರ್ಷಗಳಲ್ಲಿ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಹರಿಸಬೇಕಾಗಿರುವ 192 ಟಿಎಂಸಿಗಿಂತಲೂ ಹೆಚ್ಚು ನೀರು ಕರ್ನಾಟಕದಿಂದ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದುಹೋಗಿದೆ. 

ವಿವಾದ ಒಟ್ಟು ನೀರಿನ ಪಾಲಿಗೆ ಸಂಬಂಧಿಸಿದ್ದಲ್ಲ, ಅದು ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ಹರಿಸಬೇಕಾಗಿರುವ ನೀರಿನ ಪಾಲಿನದ್ದು. ಇದರಿಂದಾಗಿಯೇ ಮಳೆ ಇಲ್ಲದ ಸಂಕಷ್ಟದ ಕಾಲದಲ್ಲಿ ಎರಡು ರಾಜ್ಯಗಳ ನಡುವೆ ಸಂಘರ್ಷದ ಕಿಡಿಹಾರುತ್ತಿರುವುದು.

ಇದು ಗೊತ್ತಿದ್ದರೂ ಇದಕ್ಕೊಂದು ಸರ್ವಸಮ್ಮತ ಪರಿಹಾರವನ್ನು ಸೂಚಿಲು ಸಾಧ್ಯವಾಗದೆ ಇರುವುದು ಕಾವೇರಿ ನ್ಯಾಯಮಂಡಳಿಯ ದೊಡ್ಡ ವೈಫಲ್ಯ. `ಮಳೆ ಕೊರತೆಯ ದಿನಗಳಲ್ಲಿ ಬಳಸಲು ಸಾಧ್ಯವಾಗುವಂತೆ ಉತ್ತಮ ಮಳೆಯ ಸಾಮಾನ್ಯ ಜಲವರ್ಷದ ಕೊನೆಯಲ್ಲಿ ಜಲಾಶಯಗಳಲ್ಲಿ ಸಾಧ್ಯ ಇದ್ದಷ್ಟು ನೀರಿನ ಸಂಗ್ರಹ ಇಟ್ಟುಕೊಳ್ಳಬೇಕು. 

ಸತತ ಎರಡು ವರ್ಷ ಮಳೆ ಕೊರತೆ ಕಾಣಿಸಿಕೊಂಡಲ್ಲಿ ಕಾವೇರಿ ಜಲನಿರ್ವಹಣಾ ಮಂಡಳಿ ಇಲ್ಲ ಕಾವೇರಿ ನದಿ ಪ್ರಾಧಿಕಾರ ನೀರು ಬಿಡುಗಡೆಯ ಮಾಸಿಕ ಕಂತುಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು` ಎಂದಷ್ಟೇ ಅಂತಿಮ ಐತೀರ್ಪು ಹೇಳಿದೆ ( ಐದನೆ ಸಂಪುಟ, ಪುಟ 213). ಸ್ಪಷ್ಟ ಪರಿಹಾರದ ಮಾರ್ಗವನ್ನು ಅದು ತೋರಿಸಿಲ್ಲ.

ಜೂನ್-ಸೆಪ್ಟೆಂಬರ್ ವರೆಗಿನ ವಿವಾದಾತ್ಮಕ ನಾಲ್ಕು ತಿಂಗಳ ಅವಧಿಯಲ್ಲಿ ಕರ್ನಾಟಕ 137 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಮಧ್ಯಂತರ ಐತೀರ್ಪು ಹೇಳಿತ್ತು. ಅದರಲ್ಲಿ ಮೂರು ಟಿಎಂಸಿಯನ್ನಷ್ಟೇ ಕಡಿಮೆ ಮಾಡಿರುವ ಅಂತಿಮ ಐತೀರ್ಪು ವಿವಾದದ ಮೂಲಕಾರಣವನ್ನು ಜೀವಂತವಾಗಿ ಇಟ್ಟಿದೆ. 

ಜೂನ್‌ನಿಂದ ಸೆಪ್ಟೆಂಬರ್ ವರೆಗೆ 100 ಟಿಎಂಸಿ ಅದರ ನಂತರ 92 ಟಿಎಂಸಿ ನೀರು ಹರಿಸಿ ಎಂದು ನ್ಯಾಯಮಂಡಳಿ ಹೇಳಿದ್ದರೂ ವಿವಾದದ ಇತ್ಯರ್ಥಕ್ಕೆ ನೆರವಾಗುತ್ತಿತ್ತೊ ಏನೋ? ತಮಿಳುನಾಡು ಖುದ್ದಾಗಿ ಒಪ್ಪಿಕೊಂಡ 20 ಟಿಎಂಸಿ ಅಂತರ್ಜಲದ ಬಳಕೆಯನ್ನು ಗಣನೆಗೆ ತೆಗೆದುಕೊಂಡಿದ್ದರೂ ಕರ್ನಾಟಕದ ಮೇಲಿನ ಅಷ್ಟು ಭಾರ ಕಡಿಮೆಯಾಗಲು ಸಾಧ್ಯ ಇತ್ತು.

ನ್ಯಾಯಮಂಡಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ ಕಾರಣದಿಂದಾಗಿ ಮಧ್ಯಂತರ ಐತೀರ್ಪಿನಲ್ಲಿ ಹೇಳಿರುವಂತೆ ಮಳೆ ಇಲ್ಲದ ಕಾಲದಲ್ಲಿ ಸಂಕಷ್ಟ ಹಂಚಿಕೆ ಸೂತ್ರವನ್ನು ರೂಪಿಸುವ ಜವಾಬ್ದಾರಿ 1998ರಲ್ಲಿ ರಚನೆಗೊಂಡ ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ್ದಾಗಿದೆ. ನ್ಯಾಯಮಂಡಳಿ ತನಗೊಪ್ಪಿಸಿರುವ ಜವಾಬ್ದಾರಿಯ ನಿರ್ವಹಣೆಗಾಗಿ ಕಾವೇರಿ ಉಸ್ತುವಾರಿ ಸಮಿತಿಯನ್ನು ಪ್ರಾಧಿಕಾರ ರಚಿಸಿದೆ. 

ಉಸ್ತುವಾರಿ ಸಮಿತಿ ಇದಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಿದೆ. ಈ ಮೂಲಕ ಕಾವೇರಿ ನದಿ ನೀರು ಹಂಚಿಕೆಯ ವಿವಾದವನ್ನು ಇತ್ಯರ್ಥಗೊಳಿಸಬೇಕಾಗಿರುವ ಸುಪ್ರೀಂಕೋರ್ಟ್‌ನ ಆದೇಶದ ಮೂಲಕ ರಚನೆಗೊಂಡ ನ್ಯಾಯಮಂಡಳಿಯ ಹೊಣೆ ಅಂತಿಮವಾಗಿ ಒಂದಷ್ಟು ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯ ಹೆಗಲ ಮೇಲೆ ಬಂದು ಕೂತಿದೆ. ಕಳೆದ ಹನ್ನೆರಡು ವರ್ಷಗಳಿಂದ ಈ ತಾಂತ್ರಿಕ ಸಮಿತಿ `ಸಂಕಷ್ಟ ಹಂಚಿಕೆಯ ಸೂತ್ರ`ಗಳನ್ನು ಹೆಣೆಯುತ್ತಲೇ ಇದ್ದರೂ ಅದಕ್ಕೆ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳನ್ನು ಒಪ್ಪಿಸಲು ಸಾಧ್ಯವಾಗಿಲ್ಲ. 

ಈ ಬಾರಿ ಕೂಡಾ ಕರ್ನಾಟಕದಲ್ಲಿ ನಡೆದ ಸರ್ವಪಕ್ಷಗಳ ಸಭೆ `ಸಂಕಷ್ಟ ಹಂಚಿಕೆ ಸೂತ್ರ`ವನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯದೊಂದಿಗೆ ಬರ್ಖಾಸ್ತುಗೊಂಡಿದೆ. ಇದರಿಂದಾಗಿ ವಿವಾದ ಪ್ರಾಧಿಕಾರದ ಹೊಸ್ತಿಲಲ್ಲಿ ಬಂದು ನಿಂತಿದೆ.
ತಮಿಳುನಾಡಿನ ರಾಜಕೀಯ ಒತ್ತಡಕ್ಕೆ ಈಡಾಗುತ್ತ ಬಂದಿರುವ ಕಾವೇರಿ ನದಿ ಪ್ರಾಧಿಕಾರ ಇಲ್ಲಿಯ ವರೆಗೆ ರಚಿಸಿದ ಸಂಕಷ್ಟ ಹಂಚಿಕೆಯ ಕರಡು ಸೂತ್ರಗಳೆಲ್ಲವೂ ತಮಿಳುನಾಡಿನ ರೈತರ ಹಿತವನ್ನಷ್ಟೇ ಕಾಯಲು ರೂಪುಗೊಂಡಿರುವಂತಹದ್ದು ಎಂದು ಹೇಳಲು ಆಧಾರಗಳಿವೆ. 

ಕರ್ನಾಟಕ ನೀಡಿರುವ ಸಲಹೆಗಳನ್ನು ಪ್ರಾಧಿಕಾರದಿಂದ ನೇಮಕಗೊಂಡ ತಾಂತ್ರಿಕ ಸಮಿತಿ ಪರಿಗಣಿಸಿಯೇ ಇಲ್ಲ. ಅವುಗಳು ಹೀಗಿವೆ:

-ಕರ್ನಾಟಕದಲ್ಲಿ ಬಹುಪಾಲು ಮಳೆಯನ್ನು ತಂದುಕೊಡುವ ನೈರುತ್ಯ ಮಾರುತದ ಮಳೆಯನ್ನಷ್ಟೇ ಪರಿಗಣಿಸದೆ ತಮಿಳುನಾಡಿನಲ್ಲಿ ಅಕ್ಟೋಬರ್ ಮಧ್ಯಭಾಗದಿಂದ ಜನವರಿ ವರೆಗೆ ಸುರಿಯವ ಈಶಾನ್ಯ ಮಾರುತವನ್ನೂ ಪರಿಗಣಿಸಬೇಕು. ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರು ಕುರುವೈ ಬೆಳೆಗೆ ನೈರುತ್ಯ ಮಾರುತವನ್ನು ಅವಲಂಬಿಸಿದ್ದರೆ ನಂತರ ಬೆಳೆಯುವ ಸಾಂಬಾ ಬೆಳೆಗೆ ಬೇಕಾಗಿರುವ ಮಳೆಯ ಮೂರನೆ ಎರಡರಷ್ಟರನ್ನು ಈಶಾನ್ಯ ಮಾರುತದಿಂದ ಪಡೆಯುತ್ತಾರೆ. 

ಇಲ್ಲಿಯ ವರೆಗಿನ ಸಂಕಷ್ಟ ಹಂಚಿಕೆ ಸೂತ್ರಗಳು ಈಶಾನ್ಯ ಮಾರುತವನ್ನು ಪರಿಗಣಿಸಿಲ್ಲ. ( ಪ್ರತಿವರ್ಷ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ನೀರು ಸಂಗ್ರಹ ಮತ್ತು ಜೂನ್ ಒಂದರಿಂದ ಅಕ್ಟೋಬರ್ 15ರ ವರೆಗಿನ ನೈರುತ್ಯ ಮಾರುತ ಮತ್ತು ಅಕ್ಟೋಬರ್ 16ರಿಂದ ಜನವರಿ 31ರ ವರೆಗಿನ ಈಶಾನ್ಯ ಮಾರುತದ ಮಳೆಯನ್ನು ದಾಖಲಿಸುವ ಹೊಣೆಯನ್ನು ನ್ಯಾಯಮಂಡಳಿ ಅಂತಿಮ ಐತೀರ್ಪಿನಲ್ಲಿ ಕಾವೇರಿ ನಿಯಂತ್ರಣಾ ಪ್ರಾಧಿಕಾರ ಮತ್ತು ನಿರ್ವಹಣಾ ಸಮಿತಿಗೆ ಒಪ್ಪಿಸಿರುವುದು ಕರ್ನಾಟಕದ ಈ ಸಲಹೆಗೆ ಬಲ ತಂದುಕೊಟ್ಟಿದೆ.)

-ನೈರುತ್ಯ ಮಾರುತ ಕೊನೆಗೊಳ್ಳುವ ಸೆಪ್ಟೆಂಬರ್ ತಿಂಗಳ ಅಂತ್ಯದ ವರೆಗಿನ ನೀರಿನ ಕೊರತೆಯನ್ನಷ್ಟೇ ಲೆಕ್ಕ ಹಾಕಿ ಅಲ್ಲಿಂದ ನಂತರದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳಬೇಕೆಂಬ ಸೂತ್ರ ಸರಿ ಅಲ್ಲ. ನ್ಯಾಯಮಂಡಳಿ ಐತೀರ್ಪು ನೀಡುವಾಗ ಜೂನ್‌ನಿಂದ ಡಿಸೆಂಬರ್ ವರೆಗೆ ಬಿಟ್ಟ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಿದ್ದು ಸಂಕಷ್ಟ ಸ್ಥಿತಿಯ ಅಂದಾಜಿಗೆ ನೀರಿನ ಕೊರತೆಯನ್ನು ಲೆಕ್ಕ ಹಾಕುವಾಗಲೂ ಆ ಅವಧಿಯನ್ನೇ (ಜೂನ್-ಡಿಸೆಂಬರ್) ಪರಿಗಣಿಸಬೇಕು.

-ಸಂಕಷ್ಟ ಹಂಚಿಕೆ ಸೂತ್ರ ರಚಿಸುವಾಗ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶವನ್ನಷ್ಟೇ ಪರಿಗಣಿಸದೆ ತಮಿಳುನಾಡಿನ ಜಲಾಶಯಗಳ ನೀರು ಸಂಗ್ರಹವನ್ನೂ ಪರಿಗಣಿಸಬೇಕು. ನೀರಾವರಿ ವರ್ಷದ ಪ್ರಾರಂಭದಲ್ಲಿ ಮೆಟ್ಟೂರು ಜಲಾಶಯದಲ್ಲಿ ಸಂಗ್ರಹ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು. 

ನರ್ಮದಾ ನದಿ ನೀರು ಹಂಚಿಕೆ ವಿವಾದವನ್ನು ಇತ್ಯರ್ಥಗೊಳಿಸಿದ್ದ ನ್ಯಾಯಮಂಡಳಿ `..ನಿರ್ದಿಷ್ಠ ನೀರಾವರಿ ವರ್ಷದಲ್ಲಿ ಬಳಕೆಗೆ ಲಭ್ಯ ಇರುವ ನೀರಿನ ಪ್ರಮಾಣದಲ್ಲಿ ಹಿಂದಿನ ವರ್ಷದ ಮಿಗತೆ ನೀರಿನ ಪ್ರಮಾಣ ಕೂಡಾ ಸೇರಿದೆ..` ಎಂದು ತನ್ನ ಐತೀರ್ಪಿನಲ್ಲಿ ಹೇಳಿದೆ.

- ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರ ಮತ್ತು ಮೆಟ್ಟೂರು ಜಲಾಶಯದ ನಡುವೆ 5535 ಚದರ ಕಿ.ಮೀ. ವಿಸ್ತೀರ್ಣದ ಜಲಾನಯನ ಪ್ರದೇಶ ಇದೆ. ಸಂಕಷ್ಟದ ಸ್ಥಿತಿಯನ್ನು ಲೆಕ್ಕಹಾಕುವಾಗ ಈ ಜಲಾನಯನ ಪ್ರದೇಶದಲ್ಲಿ ಪ್ರತಿ ಜಲವರ್ಷ ಉತ್ಪತ್ತಿಯಾಗುವ ಸುಮಾರು 25 ಟಿಎಂಸಿ ನೀರನ್ನು ಗಣನೆಗೆ ತೆಗೆದುಕೊಳ್ಳಬೇಕು.

-ತಮಿಳುನಾಡಿಗೆ ಬಿಟ್ಟ ನೀರಿನ ಲೆಕ್ಕವನ್ನು ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಜಲ ಆಯೋಗದ ಜಲಮಾಪನ ಕೇಂದ್ರದ ಆಧಾರದಲ್ಲಿಯೇ ನಡೆಸಬೇಕು. ಮೆಟ್ಟೂರಿನಲ್ಲಿ ಅಧಿಕೃತ ಜಲಮಾಪನ ವ್ಯವಸ್ಥೆಯೇ ಇಲ್ಲದೆ ಇರುವುದರಿಂದ ಅಲ್ಲಿನ ನೀರಿನ ದಾಖಲೆಯನ್ನು ಪರಿಗಣಿಸುವುದು ಸರಿ ಅಲ್ಲ. (ಬಿಳಿಗುಂಡ್ಲು ಜಲಮಾಪನದ ನೀರಿನ ಲೆಕ್ಕವೇ ಅಧಿಕೃತ ಎಂದು ನ್ಯಾಯಮಂಡಳಿಯ ಅಂತಿಮ ಐತೀರ್ಪಿನಲ್ಲಿ ಹೇಳಿರುವುದು ಈ ಸಲಹೆಗೆ ಪೂರಕವಾಗಿದೆ.)

-ಎರಡು ಗರಿಷ್ಠ ಮತ್ತು ಎರಡು ಕನಿಷ್ಠ ಮಳೆಯ ವರ್ಷಗಳ ಸರಾಸರಿಯನ್ನು ಪರಿಗಣಿಸದೆ, 1974ರಿಂದ ಈ ವರೆಗಿನ ಮಳೆ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಬೇಕು.
ಕಾವೇರಿ ನದಿ ಪ್ರಾಧಿಕಾರದ ಕಾರ್ಯನಿರ್ವಹಣೆಯನ್ನು ಕಳೆದ ಹನ್ನೆರಡು ವರ್ಷಗಳಿಂದ ಗಮನಿಸುತ್ತಾ ಬಂದ ಯಾರು ಕೂಡಾ ಕರ್ನಾಟಕದ ಈ ಸಲಹೆಗಳಿಗೆ ಮಾನ್ಯತೆ ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ ಇಲ್ಲ. 

ಸೂತ್ರ ರಚನೆ ತಾಂತ್ರಿಕ ಸ್ವರೂಪದ್ದಾಗಿದ್ದರೂ ಅಂತಿಮವಾಗಿ ಅದೊಂದು ರಾಜಕೀಯ ತೀರ್ಮಾನವಾಗಿರುವುದು ಪರಿಹಾರ ಕಗ್ಗಂಟಾಗಲು ಕಾರಣ. ಮಳೆಯ ಪ್ರಮಾಣ, ಜಲಾಶಯದಲ್ಲಿ ನೀರಿನ ಸಂಗ್ರಹ ಮತ್ತು ರೈತರ ನೀರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಸೂತ್ರ ರಚನೆಯಾಗಬೇಕಾಗಿದ್ದರೂ ಅಲ್ಲಿ ಮುಖ್ಯವಾಗಿ ಗಣನೆಗೆ ಬರುವುದು ರಾಜಕೀಯ ಲೆಕ್ಕಾಚಾರ.

ಕೇಂದ್ರ ಸರ್ಕಾರವನ್ನು ಸದಾ ತನ್ನ ಋಣದ ಉರುಳಲ್ಲಿ ಇಟ್ಟುಕೊಂಡಿರುವ ತಮಿಳುನಾಡು, ರಾಜಕೀಯ ಬಲಾಬಲದ ಪರೀಕ್ಷೆ ಎದುರಾದಾಗೆಲ್ಲ ಸುಲಭದಲ್ಲಿ ಕರ್ನಾಟಕವನ್ನು ಹಿಂದಕ್ಕೆ ತಳ್ಳುತ್ತಾ ಬಂದಿದೆ. ಈ ಬಾರಿಯೂ ಹಾಗಾಗುವುದಿಲ್ಲ ಎನ್ನುವುದಕ್ಕೆ ಪ್ರಬಲವಾದ ಯಾವ ಕಾರಣಗಳೂ ಹೊಳೆಯುತ್ತಿಲ್ಲ. ರಾಜಕೀಯವಾಗಿ ಕರ್ನಾಟಕ ಇಂದಿನಷ್ಟು ದುರ್ಬಲ ಹಿಂದೆಂದೂ ಆಗಿರಲಿಲ್ಲ.

ಸಕೀನಾಬಾಯಿ ನಂಬಿಕೆ ಉಳಿಸಿದ ಶಿವ September 10, 2012

ನರೋಡಾ ಪಾಟಿಯಾ ಹತ್ಯಾಕಾಂಡದ ಅಪರಾಧಿಗಳಿಗೆ ಗುಜರಾತ್ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದ್ದನ್ನು ಕೇಳಿದಾಗ ನನಗೆ ನೆನಪಾದವರು ಸಕೀನಾ ಬಾಯಿ. ಐದು ವರ್ಷಗಳ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆಂದು ಹೋದವನಿಗೆ ನರೋಡಾ ಪಾಟಿಯಾದಲ್ಲಿ ಭೇಟಿಯಾಗಿದ್ದ ಸಕೀನಾಬಾಯಿ ಹಳೆಯ ದಿನಗಳನ್ನು ಮೆಲುಕುಹಾಕುತ್ತಾ `ನಾವೆಲ್ಲ ಒಂದು ಕುಟುಂಬದ ರೀತಿ ಇದ್ದವರು, ಆ ಕಾಲ ಹೊರಟೋಯ್ತು, ಈಗ ಎಲ್ಲೋ ಗಲಭೆ ನಡೆದ ಗಾಳಿಸುದ್ದಿ ಬಂದರೂ ಎದೆ ನಡ್‌ಗತೈತಿ. ಯಾರ ಮೇಲೂ ನಂಬಿಕೆ ಬರೋಲ್ಲ, ಆ ಶಿವನೇ ಕಾಯಬೇಕು` ಎಂದಿದ್ದರು ಅಚ್ಚ ಕನ್ನಡದಲ್ಲಿ. (ಪ್ರಜಾವಾಣಿ ವರದಿ: 15.12.2007). ಮುಸ್ಲಿಂ ಧರ್ಮಕ್ಕೆ ಸೇರಿದವರೆಂಬ ಕಾರಣಕ್ಕಾಗಿ `ಹಿಂದೂ ಶಿವ`ಯಾದಗೀರ್ ತಾಲ್ಲೂಕಿನ ಅತ್ತಿಗುಣಿಯ ಸಕೀನಾಬಾಯಿಯ ಕೈಬಿಡಲಿಲ್ಲ. ಅವರು ತನ್ನ ಮೇಲೆ ಇಟ್ಟ ನಂಬಿಕೆಯನ್ನು ಹುಸಿಮಾಡದೆ `ನ್ಯಾಯದೇವತೆಯ ಕಣ್ಣು ತೆರೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ.`

ಆದರೆ ನ್ಯಾಯಕ್ಕೆ ಸಿಕ್ಕಿದ ಈ ಜಯಕ್ಕಾಗಿ ಉಳಿದೆಲ್ಲರಿಗಿಂತ ಹೆಚ್ಚು ಸಂತಸ ಪಡಬೇಕಾದವರು ತಾವು ಎಂದು ಕರ್ನಾಟಕದ ಬಹಳಷ್ಟು ಜನರಿಗೆ ತಿಳಿದಿಲ್ಲ. 35 ಮಕ್ಕಳು, 32 ಮಹಿಳೆಯರು ಮತ್ತು 30 ಗಂಡಸರು ಸೇರಿದಂತೆ ನರೋಡಾ ಪಾಟಿಯಾದಲ್ಲಿ ಹತ್ಯೆಗೀಡಾದವರ ಅಧಿಕೃತ ಸಂಖ್ಯೆ 97. ಇವರಲ್ಲಿ ಹೆಚ್ಚಿನವರು ಕರ್ನಾಟಕ ಮತ್ತು ಮಹಾರಾಷ್ಟ್ರ ಮೂಲದವರು. ಹುಬ್ಬಳ್ಳಿ, ಧಾರವಾಡ, ಹಾನಗಲ್, ಸುರಪುರ, ಶಹಪುರ, ಜೇವರ್ಗಿ, ಯಾದಗೀರ್ ಕಡೆಗಳಿಂದ ವರ್ಷಗಳ ಹಿಂದೆ ಅಲ್ಲಿಗೆ ವಲಸೆ ಹೋದವರಿದ್ದಾರೆ. ಸಕೀನಾಬಾಯಿಯಂತೆ ಅಚ್ಚಕನ್ನಡ ಮಾತನಾಡುವವರು ಈಗಲೂ ಅಲ್ಲಿದ್ದಾರೆ. ಇದಕ್ಕಾಗಿಯೇ ಸ್ಥಳೀಯರು ನರೋಡಾ ಪಾಟಿಯಾಕ್ಕೆ `ಛೋಟಾ ಕರ್ನಾಟಕ್` ಎನ್ನುತ್ತಾರೆ.  ಊರಲ್ಲಿ ನೇಕಾರಿಕೆ ಮಾಡುತ್ತಿದ್ದ ಇವರು  ಕೈಮಗ್ಗ ನಿಂತುಹೋದ ಮೇಲೆ ಅಹಮದಾಬಾದ್‌ಗೆ ಹೋಗಿ ಬಟ್ಟೆಗಿರಣಿಗಳಲ್ಲಿ ಸೇರಿಕೊಂಡಿದ್ದರು. ಗಿರಣಿಗಳು ಯಾಂತ್ರಿಕೃತಗೊಳ್ಳುತ್ತಿದ್ದಂತೆಯೇ ಅದಕ್ಕೆ ಬೇಕಾದ ಕೌಶಲ ಇಲ್ಲದೆ ನಿರುದ್ಯೋಗಿಗಳಾಗಿ ಅನಿವಾರ್ಯವಾಗಿ ಟೈಲರಿಂಗ್, ಲಾರಿ-ಅಟೋರಿಕ್ಷಾ ಓಡಿಸುವುದು, ಮಾಂಸ ಮಾರಾಟ, ಎಲೆಕ್ಟ್ರಿಕಲ್ ರಿಪೇರಿ ಮೊದಲಾದ ಸಣ್ಣಪುಟ್ಟ ವೃತ್ತಿಯಲ್ಲಿ ತೊಡಗಿಸಿಕೊಂಡು ಬಡತನದ ನಡುವೆಯೂ ತಮ್ಮ ಪಾಡಿಗೆ ತಾವಿದ್ದರು. ಹತ್ತು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ದಿನ ಅವರ ಬದುಕಿಗೆ ಬೆಂಕಿ ಬಿತ್ತು. ಕೋಮುಗಲಭೆಯ ನಂತರ ಶಹಾ ಅಲಂ ನಿರಾಶ್ರಿತರ ಶಿಬಿರದಲ್ಲಿ ಭೇಟಿಯಾಗಿದ್ದ ಸುರಪುರ ತಾಲ್ಲೂಕಿನ ಜೈನುಲ್ಲಾ ನನ್ನ ಕೈಹಿಡಿದು  `ಸಾಯಲಿಕ್ಕೆ ಇಲ್ಲಿಗೆ ಬರಬೇಕಿತ್ತಾ?` ಎಂದು ಕೇಳಿದ್ದು (ಪ್ರಜಾವಾಣಿ ವರದಿ, ಮಾರ್ಚ್ 8, 2002)  ಕಿವಿಯಲ್ಲಿ ಈಗಲೂ ಗುಂಯ್‌ಗುಡುತ್ತಿದೆ.

ಅಹಮದಾಬಾದ್ ನಗರದಿಂದ ಸುಮಾರು 15 ಕಿ.ಮೀ.ದೂರದ ಹೊರವಲಯದಲ್ಲಿರುವ ನರೋಡಾ ಪಾಟಿಯಾಕ್ಕೂ ಗೋಧ್ರಾಹತ್ಯಾಕಾಂಡಕ್ಕೂ ಸಂಬಂಧವೇ ಇಲ್ಲ. ಇದು ಆ ಪ್ರಕರಣದ ವಿಚಾರಣೆಯಲ್ಲಿಯೂ ಸಾಬೀತಾಗಿದೆ. `ಪ್ರತೀಕಾರ`ಕ್ಕಾಗಿ ನರೋಡಾಪಾಟಿಯಾವನ್ನೇ ಆರಿಸಿಕೊಳ್ಳಲು ಮುಖ್ಯವಾಗಿ ಎರಡು ಕಾರಣ. ಮೊದಲನೆಯದು ಒಂದೇ ಕಡೆ ಸುಲಭದಲ್ಲಿ ನೂರಾರು  ಮುಸ್ಲಿಂ ತಲೆಗಳು ಸಿಗುತ್ತವೆ ಎಂಬ ದುಷ್ಟ ಮನಸ್ಸಿನ ಯೋಚನೆ. ಸುಮಾರು 15 ಸಾವಿರ ಜನಸಂಖ್ಯೆಯ ನರೋಡಾಪಾಟಿಯಾ ಬಡಾವಣೆಗೆ ಸೇರಿರುವ ಹುಸೇನ್‌ನಗರ, ಜವಾಹರ ನಗರ, ಪಂಡಿತ್ ಕೀ ಚಾಳ್, ಮಸ್ಜೀದ್‌ಗಲ್ಲಿಗಳಲ್ಲಿ ಸುಮಾರು 250-300  ಮುಸ್ಲಿಂ ಕುಟುಂಬಗಳಿವೆ. ಅಲ್ಲಿರುವ ಹಿಂದೂ ಕುಟುಂಬಗಳ ಸಂಖ್ಯೆ 25 ಕೂಡಾ ದಾಟಲಾರದು. ನರೋಡಾ ಪಾಟಿಯಾದ ಈ ಚಾಳ್‌ಗಳನ್ನು ಗಂಗೋತ್ರಿ ಸೊಸೈಟಿ ಮತ್ತು ಗೋಪಿನಾಥ್ ಸೊಸೈಟಿ ಎಂಬ ಎರಡು ವಸತಿಸಂಕೀರ್ಣಗಳು ಸುತ್ತುವರಿದಿವೆ. 

`ರಕ್ಷಣೆ ಕೋರಿ ಓಡಿ ಬಂದ ನಮ್ಮನ್ನು ಪೊಲೀಸರು ಕತ್ತಲಾದ ಮೇಲೆ ಬೇರೆ ಕಡೆ ಸಾಗಿಸುತ್ತೇವೆ ಎಂದು ಹೇಳಿ ಒಂದು ಕಡೆ ಸೇರಿಸಿಬಿಟ್ಟಿದ್ದರು. ಎರಡು ವಸತಿಸಂಕೀರ್ಣಗಳ ನಡುವಿನ ಓಣಿಯಲ್ಲಿ ಸೇರಿದ್ದ ನಮ್ಮ ಮೇಲೆ ಕಟ್ಟಡಗಳ ಮೇಲಿನಿಂದ ಪೆಟ್ರೋಲ್-ಸೀಮೆ ಎಣ್ಣೆ ಸುರಿಯತೊಡಗಿದ್ದರು. ಆಗ ಪ್ರತ್ಯಕ್ಷವಾದ ಬೆಂಕಿ ಕೊಳ್ಳಿ ಹಿಡಿದುಕೊಂಡ ಗುಂಪು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನೆಲ್ಲ ಬೆಂಕಿಗೆ ದೂಡಿತ್ತು. ಅವರೆಲ್ಲ ಮೊದಲೇ ಪ್ಲಾನ್ ಮಾಡಿದ್ದರು ಸಾಬ್...` ಎಂದು ಕುರೇಷಿಲಾಲ್ ಆ ಕರಾಳ ದಿನದ ಘಟನಾವಳಿಗಳನ್ನು ಗಲಭೆಯ ನಂತರ ವಿವರಿಸಿದ್ದರು.

ಎರಡನೆ ಕಾರಣ ಈಗ ಜೈಲು ಸೇರಿರುವ ಮಾಯಾಬೆನ್ ಕೊಡ್ನಾನಿಯ ಬೆಂಬಲ. ಸ್ಥಳೀಯ ಶಾಸಕರ ನಿಯಂತ್ರಣದಲ್ಲಿ ಪೊಲೀಸರು ಇರುವುದರಿಂದ ಅಪರಾಧಿಗಳಿಗೆ ರಕ್ಷಣೆ ನೀಡುವುದು ಮತ್ತು ಜನಬಲ-ಸಂಪನ್ಮೂಲ ಹೊಂದಿಸಿಕೊಳ್ಳುವುದು ಸುಲಭ. ಈ ಲೆಕ್ಕಾಚಾರ ಕೂಡಾ ಹುಸಿಯಾಗಲಿಲ್ಲ. ನರೋಡಾ ಪಾಟಿಯಾದ ಎದುರಿನ ರಸ್ತೆಯಲ್ಲಿಯೇ ರಾಜ್ಯ ಮೀಸಲು ಪಡೆಯ ಕೇಂದ್ರ ಕಚೇರಿ ಇದ್ದರೂ ಯಾವ ಪೊಲೀಸರೂ 2002ರ ಫೆಬ್ರವರಿ 28ರಂದು ಬೆಳಿಗ್ಗೆಯಿಂದ ಸಂಜೆ ವರೆಗೆ ರಕ್ಷಣೆಗೆ ಬಂದಿರಲಿಲ್ಲ. ರಕ್ಷಣೆ ಕೋರಿ ಓಡಿಬಂದ ಮಹಿಳೆಯರು ಮತ್ತು ಮಕ್ಕಳ ಮೇಲೆಯೇ ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಖಾಕಿಧಾರಿ ಖಳನಾಯಕರಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿರುವ ಸ್ಥಳೀಯ ಇನ್‌ಸ್ಪೆಕ್ಟರ್ ಎಂ.ಕೆ.ಮೈಸೂರ್‌ವಾಲಾ ಒಬ್ಬರು. ಇಷ್ಟೆ ಅಲ್ಲ, ನರೋಡಾಪಾಟಿಯಾದ ಅಗ್ನಿಕಾಂಡಕ್ಕೆ ಬಳಸಿದ್ದು ಎದುರಿನ ರಸ್ತೆಯಲ್ಲಿರುವ ರಾಜ್ಯ ರಸ್ತೆಸಾರಿಗೆಯ ದಾಸ್ತಾನು ಮಳಿಗೆಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್.

ಅಲ್ಲಿ ಬದುಕುಳಿದವರ ಬಾಯಿಯಿಂದಲೇ ಕೇಳದೆ ಇದ್ದರೆ ಎಲ್ಲರಂತೆ ತಾಯಿಯ ಹೊಟ್ಟೆಯಿಂದ ಬಂದ ಮನುಷ್ಯರು ಈ ರೀತಿ ವರ್ತಿಸಲು ಸಾಧ್ಯ ಎನ್ನುವುದನ್ನು ನಂಬುವುದು ಕಷ್ಟ. ಗುಜರಾತ್‌ನಲ್ಲಿ ಕೋಮುಗಲಭೆಯ ನಂತರ ಅಲ್ಲಿನ ನಿರಾಶ್ರಿತರು ಹೇಳಿದ್ದ ಕತೆಗಳನ್ನು ನಾನು ಕೂಡಾ ಆಗ ಸಂಪೂರ್ಣವಾಗಿ ನಂಬಿರಲಿಲ್ಲ. ಇಂತಹ ಘಟನೆಗಳು ನಡೆದಿದ್ದರೂ ಅದು ಕೋಮುದ್ವೇಷದಿಂದ ಕುರುಡರಾಗಿರುವ ಹುಚ್ಚರು ಮತ್ತು ಒಂದಷ್ಟು ಪುಂಡರು ಇದನ್ನು ನಡೆಸಿರಬಹುದೆಂದು ಬಹಳ ಮಂದಿಯಂತೆ ನಾನು ತಿಳಿದಿದ್ದೆ. ಆದರೆ ನಂತರದ ದಿನಗಳಲ್ಲಿ ಹೊರಬರತೊಡಗಿದ  ಸತ್ಯಸಂಗತಿಗಳು  ಬೆಚ್ಚಿಬೀಳಿಸುವಂತಹದ್ದು. 

28 ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿರುವ ಮಾಯಾ ಕೊಡ್ನಾನಿ ಮಹಿಳೆ ಮತ್ತು ಸ್ಥಳೀಯ ಶಾಸಕಿ ಮಾತ್ರವಲ್ಲ, ಸ್ತ್ರೀರೋಗ ತಜ್ಞೆ ಕೂಡಾ. ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಸಿಂಧಿ ಸಮುದಾಯಕ್ಕೆ  ಸೇರಿರುವ ಮಾಯಾ ಕೊಡ್ನಾನಿ ವಿದ್ಯಾರ್ಥಿದೆಸೆಯಿಂದಲೇ ಆರ್‌ಎಸ್‌ಎಸ್ ಜತೆ ಗುರುತಿಸಿಕೊಂಡವರು ಮತ್ತು ನರೇಂದ್ರ ಮೋದಿಯವರ ಜತೆಗಿದ್ದವರು.  ಈ ಪ್ರಕರಣದ ವಿಚಾರಣೆಯ ಪ್ರಾರಂಭದ ದಿನಗಳಲ್ಲಿ ಮಾಯಾ ಕೊಡ್ನಾನಿ ಹೆಸರು ಹೆಚ್ಚು ಕೇಳಿಬಂದಿರಲಿಲ್ಲ. ಆದರೆ ಈಕೆಯ ಬೆನ್ನುಹತ್ತಿದ ರಾಹುಲ್ ಶರ್ಮಾ ಎಂಬ ದಿಟ್ಟ ಪೊಲೀಸ್ ಅಧಿಕಾರಿ 2002ರ ಫೆಬ್ರವರಿ 28ರಂದು ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿ ನರೋಡಾಪಾಟಿಯಾದ ಆಸುಪಾಸಿನಲ್ಲಿಯೇ ಇದ್ದರೆನ್ನುವ ಮಾಹಿತಿಯನ್ನು ಮೊಬೈಲ್ ಸಿಗ್ನಲ್‌ಗಳ ದಾಖಲೆಗಳಿಂದ ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಮಾಹಿತಿಯನ್ನು ರಾಜ್ಯಸರ್ಕಾರಕ್ಕೆ ನೀಡದೆ ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರೆಂಬ ಕಾರಣಕ್ಕೆ ನರೇಂದ್ರಮೋದಿ ಸರ್ಕಾರ ಶರ್ಮಾ ಅವರನ್ನು ದುರ್ವರ್ತನೆಯ ಆರೋಪದಡಿ ಶಿಕ್ಷಿಸಲು ಪ್ರಯತ್ನಿಸಿತ್ತು. ಶರ್ಮಾ ಅವರ ಪ್ರಯತ್ನ ವಿಫಲವಾಗಲಿಲ್ಲ.

`ಗುಜರಾತ್ ಕೋಮುಗಲಭೆ ಗೋಧ್ರಾ ಹತ್ಯಾಕಾಂಡಕ್ಕೆ ಸಹಜವಾಗಿ ವ್ಯಕ್ತವಾದ ಪ್ರತಿಕ್ರಿಯೆ, ಇದರಲ್ಲಿ ಸರ್ಕಾರ ಇಲ್ಲವೇ ಪಕ್ಷದ ಪಾತ್ರ ಇಲ್ಲ` ಎಂದು ಕಳೆದ ಹತ್ತುವರ್ಷಗಳಲ್ಲಿ ಹೇಳುತ್ತಾ ಬಂದಿರುವ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಸಮರ್ಥನೆಯನ್ನು ಕೂಡಾ ವಿಶೇಷ ನ್ಯಾಯಾಲಯ ಸುಳ್ಳೆಂದು ಸಾಬೀತುಮಾಡಿದೆ. 

ಗೋಧ್ರಾ ಹತ್ಯಾಕಾಂಡ ನಂತರ ಮುಸ್ಲಿಮರನ್ನೇ ಗುರಿಯಾಗಿಟ್ಟುಕೊಂಡು ನಡೆದ ಕೊಲೆ,ಸುಲಿಗೆ, ಅತ್ಯಾಚಾರಗಳೆಲ್ಲವೂ ಪೂರ್ವಯೋಜಿತ ಮತ್ತು ಅದರಲ್ಲಿ ತೊಡಗಿದ್ದ ಅಪರಾಧಿಗಳಿಗೆಲ್ಲ ಸರ್ಕಾರ ರಕ್ಷಣೆ ನೀಡುತ್ತ ಬಂದಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ನರೇಂದ್ರಮೋದಿ ನಿರಾಕರಿಸುವ ಸ್ಥಿತಿಯಲ್ಲಿ ಈಗ ಇಲ್ಲ. ಗಲಭೆಯ ಸಂದರ್ಭದಲ್ಲಿ ಕೇವಲ ಶಾಸಕಿಯಾಗಿದ್ದ ಮಾಯಾ ಕೊಡ್ನಾನಿಯನ್ನು  2007ರಲ್ಲಿ ಸಚಿವರನ್ನಾಗಿ ನೇಮಿಸಿದ್ದಾಗ ಗಲಭೆಯಲ್ಲಿ ಆಕೆಯ ಪಾತ್ರದ ಬಗ್ಗೆ ಮೋದಿ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದರೂ ಯಾರೂ ನಂಬಲಾರರು.

ನರೋಡಾ ಪಾಟಿಯಾ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಇನ್ನೂ ಒಂದು ಕಾರಣಕ್ಕಾಗಿ ಮಹತ್ವಪೂರ್ಣವಾದುದು. ಸಾಮಾನ್ಯವಾಗಿ ಕೋಮುಗಲಭೆಗಳ ಪ್ರಕರಣದಲ್ಲಿ ಗೂಂಡಾಗಳು, ನಿರುದ್ಯೋಗಿಗಳು, ಬಡವರು, ನಿರ್ಗತಿಕರು, ಹಿಂದುಳಿದವರು, ದಲಿತರೇ ಅಪರಾಧಿಗಳೆನಿಸಿಕೊಂಡು ಶಿಕ್ಷೆ ಅನುಭವಿಸುತ್ತಾರೆ. ಹಿಂದೂ ಧರ್ಮದ ರಕ್ಷಣೆಗಾಗಿ ನಡೆದ ಉತ್ತರಪ್ರದೇಶದ ಬಾಬ್ರಿಮಸೀದಿ ಧ್ವಂಸದ ಕಾರ್ಯಾಚರಣೆಯಿಂದ ಹಿಡಿದು ಮಂಗಳೂರಿನ ಹೋಂಸ್ಟೇ ಮೇಲಿನ ದಾಳಿವರೆಗಿನ ಎಲ್ಲ ಪ್ರಕರಣಗಳಲ್ಲಿಯೂ ಇದು ಸತ್ಯ. ಇದನ್ನು ಯಾರಿಗಾದರೂ ಪರಾಮರ್ಶಿಸಿಕೊಳ್ಳಬೇಕೆಂದು ಅನಿಸಿದರೆ ಸ್ವಾತಂತ್ರ್ಯಾನಂತರ ದೇಶದಲ್ಲಿ ನಡೆದ ಕೋಮುಗಲಭೆಗಳಿಗೆ ಸಂಬಂಧಿಸಿದ  ಪ್ರಥಮ ಮಾಹಿತಿ ವರದಿ ಮತ್ತು ಆರೋಪಪಟ್ಟಿಗಳಲ್ಲಿ ಇರುವ ಹೆಸರುಗಳನ್ನು ಪರಿಶೀಲಿಸಬಹುದು. 

ಆರೋಪಿಗಳಾದವರಲ್ಲಿ ಶೇಕಡಾ 99ರಷ್ಟು ಮಂದಿ ಬರೀ `ಪಾತ್ರಧಾರಿಗಳು`. `ಸೂತ್ರಧಾರಿಗಳು` ತಮ್ಮ ಸುತ್ತ  ಭದ್ರತೆಗಾಗಿ ಪೊಲೀಸರನ್ನು ಇಟ್ಟುಕೊಂಡು ಸುರಕ್ಷಿತವಾಗಿರುತ್ತಾರೆ. `ಪಾತ್ರಧಾರಿಗಳು` ಜೈಲು ಸೇರುತ್ತಾರೆ, ಅವರ ಕುಟುಂಬಗಳು ಬೀದಿಗೆ ಬೀಳುತ್ತವೆ. ಇದು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡಕ್ಕೂ ಸೇರಿರುವ ಸತ್ಯ.ಆದರೆ ಇದೇ ಮೊದಲ ಬಾರಿಗೆ `ಸೂತ್ರದಾರರು` ಕೂಡಾ ಶಿಕ್ಷೆಗೊಳಗಾಗಿದ್ದಾರೆ. ಹಾಲಿ ಶಾಸಕಿ ಮಾಯಾ ಕೊಡ್ನಾನಿಗೆ ನ್ಯಾಯಾಲಯ ವಿಧಿಸಿರುವ  28 ವರ್ಷಗಳ ಸೆರೆವಾಸದ ಶಿಕ್ಷೆ `ಕಂಡವರ ಮಕ್ಕಳನ್ನು ಬಾಯಿಗೆ ತಳ್ಳುವ` ದುಷ್ಟ ಮನಸ್ಸುಗಳಿಗೆಲ್ಲ ಎಚ್ಚರಿಕೆಯ ಗಂಟೆಯಂತಿದೆ.

ಬಾಬ್ರಿ ಮಸೀದಿ ಧ್ವಂಸದ ನಂತರ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋಮುದ್ವೇಷದ ಜ್ವಾಲೆ ನಿಯಂತ್ರಣಕ್ಕೆ ಬರಬಹುದೇನೋ ಎಂಬ ಸಣ್ಣ ಆಸೆಯ ಬೆಳಕು ಕೂಡಾ ಗುಜರಾತ್‌ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿದೆ. ಹಿಂದೂ ಕೋಮುವಾದಕ್ಕೆ ವಿರುದ್ಧವಾಗಿ ಅಷ್ಟೇ ಅಪಾಯಕಾರಿಯಾಗಿ ಮುಸ್ಲಿಂ ಕೋಮುವಾದ ಇತ್ತೀಚೆಗೆ ಬೆಳೆಯುತ್ತಿದೆ. ಮುಸ್ಲಿಂ ಕೋಮುವಾದವನ್ನು ಬೆಳೆಸುವವರು ಕೂಡಾ ಇಲ್ಲಿಯ ವರೆಗೆ ಬಳಸುತ್ತಾ ಬಂದಿರುವುದು ಗುಜರಾತ್ ಮತ್ತಿತರ ಕಡೆಗಳಲ್ಲಿ ನಡೆದಿರುವ ಕೋಮುಗಲಭೆಗಳ ಅತಿರಂಜಿತ ವರದಿಗಳನ್ನು. ಇವರು ಮುಸ್ಲಿಂ ಯುವಕರ ತಲೆಕೆಡಿಸುವುದೇ `ಗುಜರಾತ್‌ನಲ್ಲಿ ಸರ್ಕಾರವೇ ಮುಂದೆ ನಿಂತು ಸಾವಿರಾರು ಮುಸ್ಲಿಮರ ಮಾರಣ ಹೋಮ ನಡೆಸಿದರೂ ನೊಂದವರಿಗೆ ಇಲ್ಲಿಯ ವರೆಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯಗಳಿಂದಲೂ ರಕ್ಷಣೆ ಸಿಗದೆ ಇದ್ದರೆ ಈ ದೇಶದ ಮೇಲೆ ಹೇಗೆ ಭರವಸೆ ಇಟ್ಟುಕೊಳ್ಳಲು ಸಾಧ್ಯ?` ಎನ್ನುವ ಪ್ರಶ್ನೆಯೊಂದಿಗೆ. ಇಂತಹದ್ದೇ ಪ್ರಶ್ನೆಯನ್ನು ನರೋಡಾ ಪಾಟಿಯಾದ ಇಸ್ಲಾಮಿಕ್ ಪರಿಹಾರ ಸಮಿತಿಯ ಕಾರ್ಯದರ್ಶಿ ನಜೀರ್‌ಖಾನ್ ಪಠಾಣ್ ಐದು ವರ್ಷಗಳ ಹಿಂದೆ ನನಗೂ ಕೇಳಿದ್ದರು. ಆಗ ನನ್ನಲ್ಲಿಯೂ ಉತ್ತರ ಇರಲಿಲ್ಲ, ಈಗ  ಕೈಯಲ್ಲಿರುವ ಗುಜರಾತ್ ವಿಶೇಷ ನ್ಯಾಯಾಲಯದ ತೀರ್ಪನ್ನು ತೋರಿಸಿ ಉತ್ತರಿಸ ಬಲ್ಲೆ.

 `ಇತ್ತೀಚೆಗೆ ಮದರಸಾಕ್ಕೆ ಬರುತ್ತಿರುವ ಹುಡುಗರೆಲ್ಲ ಮಾತೆತ್ತಿದರೆ ಸದ್ದಾಂಹುಸೇನ್, ಒಸಾಮ ಬಿನ್ ಲಾಡೆನ್ ಎನ್ನುತ್ತಿದ್ದಾರೆ..` ಎಂದು ವಿಷಾದದಿಂದ ಅದೇ ಪಠಾಣ್ ಹೇಳಿದ್ದರು. ಆ ಹುಡುಗರೆಲ್ಲ ಮಾತನಾಡಿಕೊಳ್ಳಲು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೊತ್ನಾ ಯಾಗ್ನಿಕ್‌ನಿಂದ ಹಿಡಿದು ನಿವೃತ್ತ ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಅರಿಜಿತ್ ಪಸಾಯತ್ ಮತ್ತು ಹೊಸಬೆಟ್ಟು ಸುರೇಶ್, ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್, ರಾಹುಲ್ ಶರ್ಮಾ ಮತ್ತು ಸಂಜೀವ್ ಭಟ್, ವಕೀಲರಾದ ಮುಕುಲ್ ಸಿನ್ಹಾ ಮತ್ತು ಗೋವಿಂದ್ ಪರಮಾರ್, ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆಟಲ್‌ವಾದ್, ಕಲಾವಿದೆ ಮಲ್ಲಿಕಾ ಸಾರಾಭಾಯ್, ಇಳಿವಯಸ್ಸಿನಲ್ಲಿಯೂ ಹಿಂದೂ-ಮುಸ್ಲಿಂ ಸೌಹಾರ್ದತೆಗಾಗಿ ಶ್ರಮಿಸುತ್ತಿರುವ  ಪ್ರೊ.ಬಂದೂಕ್‌ವಾಲಾ ಸೇರಿದಂತೆ ಎಷ್ಟೊಂದು ಹೆಸರುಗಳಿವೆಯಲ್ಲಾ ಎಂದು ಅವರಿಗೆ ಹೇಳಬೇಕೆಂದಿದ್ದೇನೆ.

ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ... September 03, 2012


ಕಳೆದ ನಾಲ್ಕಾರು ದಿನಗಳಲ್ಲಿ ಮಾಧ್ಯಮಗಳ ಮೂಲಕ ಸೋರಿಬರುತ್ತಿರುವ ಸುದ್ದಿಗಳೆಲ್ಲವೂ ನಿಜವಾಗಿದ್ದರೆ ದೇಶದ ಭವಿಷ್ಯ ಭಯಾನಕವಾಗಿದೆ. ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ ಮೇಲೆ ಹನ್ನೊಂದು ಮುಸ್ಲಿಮ್ ಯುವಕರನ್ನು ಬಂಧಿಸಿದ ನಂತರದ `ಸುದ್ದಿ ಸ್ಫೋಟ`ವನ್ನು ನಂಬಿದ ಯಾರಲ್ಲಿಯೂ ಹೊರಗೆ ಹೊರಟ ಮೇಲೆ ಸುರಕ್ಷಿತವಾಗಿ ಮನೆಗೆ ಮರಳುತ್ತೇನೆ ಎಂಬ ವಿಶ್ವಾಸ ಹುಟ್ಟಲಾರದು.

`...ರಾಜ್ಯದ ಮೆಟ್ರೊ ರೈಲ್ವೆ ನಿಲ್ದಾಣದಿಂದ ಹಿಡಿದು ಕೈಗಾ ಅಣುಸ್ಥಾವರದವರೆಗೆ, ಗಣೇಶೋತ್ಸವದಿಂದ ಹಿಡಿದು ಮೈಸೂರು ದಸರಾದ ವರೆಗೆ ಹಲವಾರು ಕಡೆ ಬಾಂಬು ಸ್ಫೋಟ ನಡೆಸುವ ಉದ್ದೇಶವನ್ನು ಈ ಶಂಕಿತ ಉಗ್ರರು ಹೊಂದಿದ್ದರು. ಎಲ್‌ಇಟಿ, ಹುಜಿ ಸೇರಿದಂತೆ ಹಲವು ಪ್ರಮುಖ ಉಗ್ರಗಾಮಿ ಸಂಘಟನೆಗಳ ಜತೆ ಇವರು ಸಂಪರ್ಕ ಹೊಂದಿದ್ದರು. ಉತ್ತರಪ್ರದೇಶ, ಮಹಾರಾಷ್ಟ್ರ, ಹೈದರಾಬಾದ್‌ಗಳಲ್ಲಿಯೂ ಇವರ ಜಾಲ ಹರಡಿದೆ, ಪಾಕಿಸ್ತಾನ ಮಾತ್ರವಲ್ಲ ಆಫ್ಘಾನಿಸ್ತಾನ ಮತ್ತು ಸೌದಿ ಅರೆಬಿಯಾ ದೇಶಗಳಿಗೂ ಇವರು ಭೇಟಿ ನೀಡಿದ್ದರು......` ಇತ್ಯಾದಿ ಊಹಾಪೋಹ ಆಧರಿತ ಸುದ್ದಿಗಳ ಮಹಾಪೂರವೇ ಹರಿದುಬರುತ್ತಿದೆ.

 ಇವುಗಳಲ್ಲಿ ಯಾವುದೂ ಪೊಲೀಸರ ಅಧಿಕೃತ ಹೇಳಿಕೆಗಳಲ್ಲ, ಸಾರ್ವಜನಿಕ ದಾಖಲೆಯಾಗಿರುವ ಪ್ರಥಮ ಮಾಹಿತಿ ವರದಿಯನ್ನೂ ಪೊಲೀಸರು ಹೊರಗೆ ಬಿಟ್ಟುಕೊಡುತ್ತಿಲ್ಲ.

ಹೀಗೆ ಹೇಳಿದ ಮಾತ್ರಕ್ಕೆ ಅವರು ಕಟ್ಟುನಿಟ್ಟಾಗಿ ತನಿಖೆಯ ರಹಸ್ಯಪಾಲನೆ ಮಾಡುತ್ತಿದ್ದಾರೆ ಎಂದು ಅರ್ಥವಲ್ಲ, ಪರಿಚಿತ ಪತ್ರಕರ್ತರಿಗೆ ಪೊಲೀಸ್ ಅಧಿಕಾರಿಗಳು ಮುಕ್ತವಾಗಿ `ತನಿಖೆಯ ವಿವರ`ಗಳನ್ನು ಸೋರಿಬಿಡುತ್ತಿದ್ದಾರೆ. ಒಬ್ಬರು ಹೇಳಿರುವುದನ್ನು ಇನ್ನೊಬ್ಬರು ನಿರಾಕರಿಸುತ್ತಿದ್ದಾರೆ. ಕೈಗಾ ಅಣುಸ್ಥಾವರ ಶಂಕಿತ ಉಗ್ರರ ಗುರಿಯಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ಮಾಡಿರುವ ವರದಿಯನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ನಿರಾಕರಿಸುತ್ತಿದ್ದಾರೆ.

ಮೆಟ್ರೊ ನಿಲ್ದಾಣ ಸ್ಫೋಟ ಪ್ರಯತ್ನದ ಸುದ್ದಿಯನ್ನು ಕೂಡಾ ನಿರಾಕರಿಸಲಾಗಿದೆ. ಹಳೆಯ ಸುದ್ದಿಗಳನ್ನು ನಿರಾಕರಿಸಲಾಗುತ್ತಿದ್ದಂತೆಯೇ ಹೊಸ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಪೈಪೋಟಿಯ ಯುಗದಲ್ಲಿ ಸಿಕ್ಕ ಸುದ್ದಿಯನ್ನು ದೃಢೀಕರಿಸಲು ಬೇಕಾದ ಸಮಯಾವಕಾಶ ಪತ್ರಕರ್ತರಿಗೂ ಇಲ್ಲ. ಮಾಧ್ಯಮರಂಗದ ಈ ದೌರ್ಬಲ್ಯವನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೋ ಏನೋ ಎಂದು ಅನುಮಾನ ಪಡುವ ರೀತಿಯಲ್ಲಿ `ಸುದ್ದಿಸ್ಫೋಟ` ನಡೆಯುತ್ತಿದೆ.

ಇವೆಲ್ಲವನ್ನೂ ನೋಡುತ್ತಿದ್ದಾಗ `ಕಾಶ್ಮೆರ್ ಟೈಮ್ಸ` ಪತ್ರಿಕೆಯ ದೆಹಲಿ ಬ್ಯೂರೊ ಮುಖ್ಯಸ್ಥರಾದ ಇಫ್ತಿಕರ್ ಗಿಲಾನಿ ಎಂಬ ಪತ್ರಕರ್ತ ನೆನಪಾಗುತ್ತಿದ್ದಾರೆ. ದೆಹಲಿಯಲ್ಲಿ ನಮ್ಮ ಪತ್ರಿಕೆಯ ಕಚೇರಿ ಇರುವ ಐಎನ್‌ಎಸ್ ಕಟ್ಟಡದಲ್ಲಿಯೇ ಗಿಲಾನಿ ಅವರ ಪತ್ರಿಕೆಯ ಕಚೇರಿಯೂ ಇದೆ. ಸ್ವಲ್ಪ ಕುಳ್ಳಗಿನ, ಸೌಮ್ಯ ಸ್ವಭಾವದ ಸುಮಾರು 35ರ ಆಜುಬಾಜಿನ ಈ ಗಿಲಾನಿ `ಪಾಕಿಸ್ತಾನದ ಜತೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ`ನೆಂದು ಒಂದು ದಿನ ಇದ್ದಕ್ಕಿದ್ದಂತೆ ಟಿವಿಚಾನೆಲ್‌ಗಳು ಕಿರಿಚಾಡುತ್ತಿರುವಾಗ ಅವರನ್ನು ಮೂರು ವರ್ಷಗಳಿಂದ ಆಗಾಗ ನೋಡುತ್ತಿದ್ದ ನನಗೆ ಆಘಾತವಾಗಿತ್ತು.

ಇಫ್ತಿಕರ್ ಗಿಲಾನಿ ಅವರು ಕಾಶ್ಮೆರದ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಹಾ ಗಿಲಾನಿ ಅಳಿಯನೆಂದು ಹೆಚ್ಚಿನವರಿಗೆ ಗೊತ್ತಾಗಿದ್ದು ಕೂಡಾ ಅವರ ಬಂಧನದ ನಂತರ. 2002ರ ಜುಲೈ ಒಂಬತ್ತರಂದು ದೆಹಲಿಯ ಮಾಳವೀಯ ನಗರದ ಅವರ ಮನೆ ಮೇಲೆ ದಾಳಿ ನಡೆಸಿದ ವರಮಾನ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಬಂದ ಐಬಿ ಅಧಿಕಾರಿಗಳು ಗಿಲಾನಿ ಅವರನ್ನು ಉಟ್ಟ ಬಟ್ಟೆಯಲ್ಲಿಯೇ ಬಂಧಿಸಿ ಕರೆದೊಯ್ದಿದ್ದರು.

`ಅಧಿಕೃತ ರಹಸ್ಯ ಕಾಯಿದೆ`ಯಡಿ ಬಂಧಿಸಲಾದ ಅವರ ಮೇಲೆ ಬೇಹುಗಾರಿಕೆ, ರಾಜದ್ರೋಹದ ಆರೋಪಗಳನ್ನು ಮಾತ್ರವಲ್ಲ ಅಬ್ದುಲ್ ಗನಿ ಲೋನ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆರೋಪಗಳನ್ನೂ ಹೊರಿಸಲಾಗಿತ್ತು. ಅವರನ್ನು ಬಂಧಿಸಿದ ಎರಡು ತಿಂಗಳ ನಂತರ `ಅಶ್ಲೀಲ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದರು` ಎಂಬ ಹೊಸ ಆರೋಪ ಮಾಡಲಾಗಿತ್ತು.

 ಈ ಎಲ್ಲ ಆರೋಪಗಳಿಗೆ ಗುಪ್ತಚರ ಇಲಾಖೆ ಆಧಾರವಾಗಿ ಬಳಸಿದ್ದು ಅವರ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ `ಫ್ಯಾಕ್ಟ್‌ಶೀಟ್ ಆನ್ ಇಂಡಿಯನ್ ಫೋರ್ಸಸ್ ಇನ್ ಇಂಡಿಯಾ ಹೆಲ್ಡ್ ಕಾಶ್ಮೆರ್` ಎಂಬ ಹೆಸರಿನ ಫೈಲ್‌ನಲ್ಲಿದ್ದ ಐದು ಪುಟಗಳ ದಾಖಲೆ. ಕಾಶ್ಮೆರದ ಉತ್ತರ ಕಮಾಂಡ್‌ನ ವ್ಯಾಪ್ತಿಯಲ್ಲಿರುವ ಭಾರತೀಯ ಸೇನೆ ಮತ್ತು ಅರೆಸೇನಾಪಡೆಯ ಸಾಮರ್ಥ್ಯದ ಬಗ್ಗೆ ಅದರಲ್ಲಿ ವಿವರಗಳಿದ್ದವು.

ಈ ಬಗ್ಗೆ ಸೇನಾ ಗುಪ್ತಚರ ಮಹಾನಿರ್ದೇಶಕರ (ಡಿಜಿಎಂಐ) ಅಭಿಪ್ರಾಯ ಪಡೆಯಲಾಗಿತ್ತು. ` ..ಈ ಮಾಹಿತಿ ದೇಶದ ಭದ್ರತೆಗೆ ಅಪಾಯಕಾರಿ ಹಾಗೂ ಜಮ್ಮು ಮತ್ತು ಕಾಶ್ಮೆರದಲ್ಲಿನ ಕಾರ್ಯಾಚರಣೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ..`ಎಂದು ಡಿಜಿಎಂಐ ಹೇಳಿತ್ತು. ಇಂಟಲಿಜೆನ್ಸ್ ಬ್ಯೂರೋ (ಐಬಿ) ಆಗಲೇ ಗಿಲಾನಿ ಅಪರಾಧಿ ಎಂದು ತೀರ್ಮಾನಿಸಿಯಾಗಿತ್ತು.

ಏಳು ತಿಂಗಳ ನಂತರ ಆರೋಪಮುಕ್ತರಾಗಿ ಹೊರಬಂದ ಗಿಲಾನಿ ತಿಹಾರ್ ಜೈಲಿನೊಳಗೆ ಪ್ರವೇಶಿಸಿದ ಮೊದಲ ದಿನದ ಅನುಭವವನ್ನು  `ಮೈ ಡೇಸ್ ಇನ್ ಪ್ರಿಸನ್` ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾರೆ:

`.....ತಿಹಾರ್ ಜೈಲು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಒಬ್ಬ ಅಧಿಕಾರಿ ತನ್ನನ್ನು ಹಿಂಬಾಲಿಸುವಂತೆ ನನಗೆ ಸೂಚನೆ ನೀಡಿದರು. ಅಲ್ಲಿರುವ ಮೇಜಿನ ಹಿಂದೆ ಕಿಶನ್ ಎನ್ನುವ ಅಧಿಕಾರಿ ಕೂತಿದ್ದರು,ಅವರ ಸುತ್ತ 10-12 ಮಂದಿ ನೆರೆದಿದ್ದರು. ಅವರಲ್ಲಿ ಕೆಲವರು ಜೈಲು ಸಿಬ್ಬಂದಿ, ಉಳಿದವರು ಕೈದಿಗಳು.

ನನ್ನ ಹೆಸರೇನೆಂದು ಕಿಶನ್ ಕೇಳಿದರು. ನಾನು ಉತ್ತರಿಸುವಷ್ಟರಲ್ಲಿ ಅಲ್ಲಿದ್ದ ಜೈಲು ಸಿಬ್ಬಂದಿಯೊಬ್ಬ ನನ್ನ ಕೆನ್ನೆಗೆ ಬೀಸಿ ಹೊಡೆದ. ತಕ್ಷಣ ಅಲ್ಲಿದ್ದವರೆಲ್ಲರೂ ನನ್ನ ಮೇಲೆ ಎರಗಿದರು, ಹೊಟ್ಟೆ,ಬೆನ್ನು, ತಲೆ ಸೇರಿದಂತೆ ಸಿಕ್ಕಸಿಕ್ಕಲ್ಲಿ ಹೊಡೆದದ್ದು ಮಾತ್ರವಲ್ಲ ನನ್ನ ಕೂದಲನ್ನು ಹಿಡಿದು ಜಗ್ಗಿ ತಲೆಯನ್ನು ಮೇಜಿಗೆ ಅಪ್ಪಳಿಸಿದರು. ನನ್ನ ಬಾಯಿ,ಕಿವಿ, ಮೂಗುಗಳಿಂದ ರಕ್ತ ಸುರಿಯುತ್ತಿತ್ತು.

`ಸಾಲಾ, ಗದ್ದಾರ್, ಪಾಕಿಸ್ತಾನಿ ಏಜಂಟ್, ನಿನ್ನಂತಹವರು ಬದುಕಬಾರದು, ನೇರವಾಗಿ ಗಲ್ಲಿಗೇರಿಸಬೇಕು..` ಎಂದು ಬೈಯ್ಯುತ್ತಿರುವುದು ಪ್ರಜ್ಞೆ ತಪ್ಪುವವರೆಗೆ ಕೇಳುತ್ತಲೇ ಇತ್ತು. ಪ್ರಜ್ಞೆ ಬಂದ ಮೇಲೆ ನನ್ನ ಅಂಗಿಯಿಂದ ಟಾಯ್ಲೆಟ್ ಶುಚಿ ಮಾಡುವಂತೆ ತಿಳಿಸಿ ಮೂರು ದಿನಗಳ ಕಾಲ ಅದೇ ಅಂಗಿಯನ್ನು ತೊಡುವಂತೆ ಮಾಡಿದರು......`

ಯಾವ ಉದ್ದೇಶದಿಂದ ಗಿಲಾನಿ ಅವರನ್ನು ಬಂಧಿಸಿದ್ದರೆಂಬುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಬಂಧಿಸಿದ ಮರುಕ್ಷಣವೇ ಐಬಿ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿರಬಹುದು.

ಮಾಡಿರುವ ಆರೋಪವನ್ನು ಸಮರ್ಥಿಸಿಕೊಳ್ಳುವ ಸಾಕ್ಷ್ಯಾಧಾರಗಳು ಅವರಲ್ಲಿ ಇರಲಿಲ್ಲ. ಆಗ ಗೃಹಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ಹದಿನೇಳು ಬಾರಿ ಗಿಲಾನಿ ಸಂಬಂಧಿತ ಕಡತವನ್ನು ತರಿಸಿಕೊಂಡು ಪರಿಶೀಲಿಸಿದ್ದಾರೆ. ಪ್ರತಿಬಾರಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕೇಳಿದ್ದರು. ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವ ಬದಲಿಗೆ ಐಬಿ ಅಧಿಕಾರಿಗಳು ಒಂದಷ್ಟು ಸುಳ್ಳುಕತೆಗಳನ್ನು ಕಟ್ಟಿ ಮಾಧ್ಯಮಗಳಲ್ಲಿ ತೇಲಿ ಬಿಡತೊಡಗಿದ್ದರು.

ಮಾಧ್ಯಮಗಳು ಕೂಡಾ `ನಂಬಲರ್ಹ ಮೂಲಗಳು` ಕೊಟ್ಟ ಮಾಹಿತಿಯನ್ನು ಪರಾಮರ್ಶಿಸಲು ಹೋಗದೆ ಪ್ರಕಟಣೆ-ಪ್ರಸಾರ ನಡೆಸಿದವು. `ಹಿಂದಿ ಟಿವಿ ಚಾನೆಲ್‌ನ ಒಬ್ಬ ವರದಿಗಾರ ತಮ್ಮ ಮನೆಯ ಮುಂಭಾಗದಲ್ಲಿ ತನ್ನ ಹೆಸರಿದ್ದ ಅಂಚೆಪೆಟ್ಟಿಗೆಯ ಮುಂದೆ ನಿಂತು `ಗಿಲಾನಿ ಪರಾರಿಯಾಗಿದ್ದಾರೆ` ಎಂದು ಹೇಳುತ್ತಿರುವಾಗ ಮನೆಯೊಳಗೆ ಐಬಿ ಅಧಿಕಾರಿಗಳು ತಮ್ಮನ್ನು ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದುದನ್ನು ಗಿಲಾನಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತೆಯೊಬ್ಬರು `ನಾನು ಐಎಸ್‌ಐ ಏಜಂಟ್ ಎಂದು ಗಿಲಾನಿ ತಪ್ಪೊಪ್ಪಿಕೊಂಡಿದ್ದಾರೆ` ಎಂದು ಐಬಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದರು. ಇದರಿಂದ ನೊಂದ ಗಿಲಾನಿ ಪತ್ನಿ ಅನಿಸಾ ಅವರು ಆ ಪತ್ರಿಕೆಯ ಮಾಲೀಕರನ್ನು ಸಂಪರ್ಕಿಸಿ ಆಗಿರುವ ಅನಾಹುತವನ್ನು ತಿಳಿಸಿದ್ದರು. ಮರುದಿನ ಪತ್ರಿಕೆ ಕ್ಷಮಾಪಣೆ ಕೇಳಿತ್ತು.

ನಿಜಾಂಶ ಏನೆಂದರೆ ಗಿಲಾನಿ ಅವರ ಮೇಲೆ `ಅಧಿಕೃತ ರಹಸ್ಯ ಕಾಯ್ದೆ`ಯ ಉಲ್ಲಂಘನೆಯ ಆರೋಪಕ್ಕೆ ಕಾರಣವಾದ ಅವರದ್ದೇ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ ದಾಖಲೆ ಭಾರತ ಸರ್ಕಾರದ್ದಾಗಿರದೆ, ಪಾಕಿಸ್ತಾನದ್ದಾಗಿತ್ತು. ಡಾ.ನಾಸಿರ್ ಕಮಾಲ್ ಎಂಬ ಪಾಕಿಸ್ತಾನಿ ರಕ್ಷಣಾ ತಜ್ಞರು ಬರೆದ ಈ ಲೇಖನವನ್ನು ಇಸ್ಲಾಮಾಬಾದ್‌ನ ರಕ್ಷಣಾ ಅಧ್ಯಯನ ಸಂಸ್ಥೆ ಪ್ರಕಟಿಸಿತ್ತು. ಅದನ್ನು ಗಿಲಾನಿ ತಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿ ಇಟ್ಟುಕೊಂಡಿದ್ದರು.

ಇದು ಆಗಲೇ ರಕ್ಷಣಾ ಖಾತೆಯ ಗ್ರಂಥಾಲಯಗಳಲ್ಲಿ ಲಭ್ಯ ಇತ್ತು. ಪಾಕಿಸ್ತಾನಿಗಳು ಜಮ್ಮು ಮತ್ತು ಕಾಶ್ಮೆರವನ್ನು ಹಾಗೆಂದು ಕರೆಯದೆ `ಇಂಡಿಯನ್ ಹೆಲ್ಡ್ ಕಾಶ್ಮೆರ್` ಎಂದೇ ಈಗಲೂ ಕರೆಯುವುದು. (ಅವರು `ಆಜಾದಿ ಕಾಶ್ಮೆರ` ಎಂದು ಹೇಳುತ್ತಿರುವ ಪ್ರದೇಶವನ್ನು ನಾವು `ಪಾಕಿಸ್ತಾನ ಆಕ್ರಮಿತ ಕಾಶ್ಮೆರ` ಎಂದು ಕರೆಯುತ್ತೇವೆಯಲ್ಲ ಹಾಗೆ). ಇದರ ಅರಿವಿದ್ದ ಐಬಿ ತಾನು ವಶಪಡಿಸಿಕೊಂಡ ದಾಖಲೆಯಲ್ಲಿ `ಇಂಡಿಯನ್‌ಹೆಲ್ಡ್ ಕಾಶ್ಮೆರ` ಎಂದು ಇದ್ದ ಕಡೆಗಳೆಲ್ಲ `ಜಮ್ಮು ಮತ್ತು ಕಾಶ್ಮೆರ` ಎಂದು ತಿದ್ದಿತ್ತು.

ಆಗಲೇ ಡಿಜಿಎಂಐಗೆ ತಪ್ಪಿನ ಅರಿವಾಗಿ ತಾನು ಮೊದಲು ನೀಡಿದ್ದ ಅಭಿಪ್ರಾಯವನ್ನು ವಾಪಸು ಪಡೆದು `ಪ್ರಾರಂಭದಲ್ಲಿ ನಾವು ನೀಡಿದ್ದ ಅಭಿಪ್ರಾಯ ಅತಿರಂಜಿತವಾಗಿತ್ತು. ಈ ದಾಖಲೆ ಎಲ್ಲ ಕಡೆ ಸುಲಭದಲ್ಲಿ ಲಭ್ಯ ಇರುವುದರಿಂದ ಅದಕ್ಕೆ ಭದ್ರತಾ ಮೌಲ್ಯ ಇಲ್ಲ` ಎಂಬ ಪರಿಷ್ಕೃತ ಅಭಿಪ್ರಾಯ ನೀಡಿತ್ತು.

ಅಷ್ಟು ಹೊತ್ತಿಗೆ ಪ್ರಾರಂಭದಿಂದಲೂ ಈ ಪ್ರಕರಣದಲ್ಲಿ ಗಿಲಾನಿ ಬಗ್ಗೆ ಅನುಕಂಪ ಹೊಂದಿದ್ದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರಿಗೆ ಕೂಡಾ ಐಬಿ ಎಡವಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಕೊನೆಗೆ ಏಳು ತಿಂಗಳ ನಂತರ ಇಫ್ತಿಕರ್ ಗಿಲಾನಿ ಅವರನ್ನು 2003 ಜೂನ್ 13ರಂದು ಬಿಡುಗಡೆ ಮಾಡಲಾಯಿತು. ಆದರೆ ಯಾರದೋ ಒತ್ತಡಕ್ಕೆ ಸಿಕ್ಕಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿದ ಅಧಿಕಾರಿಗಳ ಬಗ್ಗೆ ಯಾವ ವಿಚಾರಣೆಯೂ ನಡೆಯಲಿಲ್ಲ.

ಭಯೋತ್ಪಾದಕರು ಮತ್ತು ನಕ್ಸಲೀಯರ ಜತೆ ಸಂಪರ್ಕ ಕಲ್ಪಿಸಿ ಪತ್ರಕರ್ತರನ್ನು ಬಂಧಿಸಿ ಹಿಂಸಿಸುವ ಕಾರ್ಯ ದೇಶದಾದ್ಯಂತ ಈಗಲೂ ಮುಂದುವರಿದಿದೆ. ಕಳೆದ ಫೆಬ್ರವರಿಯಲ್ಲಿ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಯ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನಿ ವಾರ್ತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕಾಜ್ಮಿ ಎಂಬ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಐದು ತಿಂಗಳುಗಳಾದರೂ ಅವರು ಬಿಡುಗಡೆಯಾಗಿಲ್ಲ. ಬೆಂಗಳೂರು ಬಾಂಬು ಸ್ಫೋಟಕ್ಕೆ ಸಂಬಂಧಿಸಿದ ಇಬ್ಬರು ಸಾಕ್ಷಿಗಳ ಜತೆ ಮಾತನಾಡಿದ್ದರು ಎನ್ನುವ ಕಾರಣಕ್ಕೆ ದೆಹಲಿಯ ವಾರಪತ್ರಿಕೆಯ ಕೇರಳ ವರದಿಗಾರರಾಗಿದ್ದ ಶಾಹಿನಾ ಎಂಬುವವರ ಮೇಲೆ ಕರ್ನಾಟಕ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಇಫ್ತಿಕರ್ ಗಿಲಾನಿ ಅವರು ನಿರಪರಾಧಿಯಾಗಿ ಹೊರಬಂದ ಮಾತ್ರಕ್ಕೆ ಭಯೋತ್ಪಾದನೆ ಸಂಬಂಧಿ ಆರೋಪಿಗಳೆಲ್ಲರೂ ನಿರಪರಾಧಿಗಳಿರಲಾರರು. ಆದರೆ ಮಾಡಿದ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗದ ನಮ್ಮ ಪೊಲೀಸ್ ತನಿಖಾ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ ನಿರಪರಾಧಿಗಳು ಅಪರಾಧಿಯಾಗುತ್ತಿರುವುದು ಮಾತ್ರವಲ್ಲ, ಅಪರಾಧಿ ನಿರಪರಾಧಿ ಎಂದು ಅನಿಸಿಕೊಂಡು ತಪ್ಪಿಸಿಕೊಳ್ಳುವ ಸಾಧ್ಯತೆಗಳೂ ಇವೆ.

ಮೊದಲನೆಯದರಷ್ಟೇ ಎರಡನೆಯದೂ ಅಪಾಯಕಾರಿ. ಆರೋಪಗಳನ್ನು ಹೊರಿಸಲು ಒಂದೆರಡು ನಾಲಿಗೆ, ಒಂದಷ್ಟು ಕಿವಿಗಳಷ್ಟೇ ಸಾಕು. ಆದರೆ ಅದನ್ನು ಸಾಬೀತುಪಡಿಸಲು ಅಷ್ಟೇ ಸಾಲದು, ಸತ್ಯದ ನೆರವು ಕೂಡಾ ಬೇಕಾಗುತ್ತದೆ.

Monday, August 27, 2012

ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ August 27, 2012

ನ್ಯಾಯಾಂಗದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಕಲ್ಲೆಸೆಯಲು ಹೊರಟವರು ಮೊದಲು ಗಾಜಿನ ಮನೆಯಲ್ಲಿ ಕೂತಿರುವ ನ್ಯಾಯಾಂಗದ ಕಡೆ  ಕಣ್ಣುಹಾಯಿಸಬೇಕು.  ಮಮತಾ ಬ್ಯಾನರ್ಜಿ ಅವರಿಗೆ ಈ ರೀತಿಯ ಆರೋಪ ಹೊರಿಸುವುದಕ್ಕೆ ವೈಯಕ್ತಿಕವಾದ ಕಾರಣಗಳು ಇದ್ದಿರಬಹುದು.

ಆದರೆ ಅವರು ಹೇಳಿರುವುದು ಸಂಪೂರ್ಣ ಸುಳ್ಳು ಎಂದು ಎದೆಮುಟ್ಟಿ ಹೇಳುವ ಧೈರ್ಯ ವಕೀಲರು, ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನೊಳಗೊಂಡ ನ್ಯಾಯಾಂಗ ವ್ಯವಸ್ಥೆಗೆ ಇದೆಯೇ?

2007ರಲ್ಲಿ `ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್` ಮತ್ತು ದೆಹಲಿ ಮೂಲದ ಸಂಶೋಧನಾ ಸಂಸ್ಥೆ `ಮಾಧ್ಯಮ ಅಧ್ಯಯನ ಕೇಂದ್ರ` ಭಾರತದಲ್ಲಿನ ಭ್ರಷ್ಟಾಚಾರದ ಬಗ್ಗೆ ಅಧ್ಯಯನ ನಡೆಸಿತ್ತು.  ಸಾರ್ವಜನಿಕ ಸೇವೆ ನೀಡುವ ಮತ್ತು ಪಡೆಯುವ ವ್ಯಕ್ತಿಗಳ ಜತೆಗಿನ ಸಂದರ್ಶನವೂ ಸೇರಿದಂತೆ ಇಪ್ಪತ್ತು ರಾಜ್ಯಗಳ 14,405 ವ್ಯಕ್ತಿಗಳ ಪ್ರತಿಕ್ರಿಯೆ ಪಡೆದು ಈ ಎರಡು ಸಂಸ್ಥೆಗಳು ಸಮೀಕ್ಷಾ ವರದಿಯೊಂದನ್ನು ನೀಡಿದ್ದವು.

`ಹನ್ನೊಂದು ಬಗೆಯ ಸಾರ್ವಜನಿಕ ಸೇವೆಗಳನ್ನು ಪಡೆಯಲು ಭಾರತೀಯರು ವರ್ಷಕ್ಕೆ 21,068 ಕೋಟಿ ರೂಪಾಯಿಗಳನ್ನು ಲಂಚದ ರೂಪದಲ್ಲಿ ನೀಡುತ್ತಿದ್ದಾರೆ. ಇದರಲ್ಲಿ ನ್ಯಾಯಾಂಗದ ಪಾಲು 2,630 ಕೋಟಿ ರೂಪಾಯಿ.

  ಶೇಕಡಾ 59ರಷ್ಟು ವಕೀಲರು, ಶೇಕಡಾ 30ರಷ್ಟು ನ್ಯಾಯಾಲಯದ ಅಧಿಕಾರಿಗಳು ಮತ್ತು ಶೇಕಡಾ ಐದರಷ್ಟು ನ್ಯಾಯಮೂರ್ತಿಗಳು ಲಂಚಪಡೆಯುತ್ತಿದ್ದಾರೆ` ಎಂದು ಆ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಸ್.ಪಿ.ಭರೂಚಾ ಅವರು ಹತ್ತುವರ್ಷಗಳ ಹಿಂದೆಯೇ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. `

ಶೇಕಡಾ 20ರಷ್ಟು ನ್ಯಾಯಮೂರ್ತಿಗಳು ಭ್ರಷ್ಟರು` ಎಂಬ ಅವರ ಆರೋಪ ಸಾರ್ವಜನಿಕವಾಗಿ ಸಂಚಲನವನ್ನುಂಟುಮಾಡಿತ್ತು. ಈ ಹತ್ತು ವರ್ಷಗಳ ಅವಧಿಯಲ್ಲಿ ನ್ಯಾಯಾಂಗದ ಭ್ರಷ್ಟಾಚಾರದ ಮಟ್ಟ ಕಡಿಮೆಯಾಗಿದೆ ಎಂದು ಹೇಳಲು ಆಧಾರಗಳು ಸಿಗುತ್ತಿಲ್ಲ, ಹೆಚ್ಚಾಗಿದೆ ಎಂದು ಅನುಮಾನ ಪಡಲು ಕಾರಣಗಳಿವೆ.

ನ್ಯಾ.ಭರೂಚಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಆರುತಿಂಗಳ ನಂತರ ಪಂಜಾಬ್ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಶಾಮೀಲಾಗಿದ್ದ ಕೋಟ್ಯಂತರ ರೂಪಾಯಿ ಲಂಚದ ಆರೋಪದ ಲೋಕಸೇವಾ ಹಗರಣ ಬಯಲಾಯಿತು. ಪ್ರಶ್ನೆಪತ್ರಿಕೆಯ ಸೋರಿಕೆಗೆ ಅವಕಾಶ ನೀಡಿರುವುದು ಮಾತ್ರವಲ್ಲ ಉತ್ತರಪತ್ರಿಕೆಗಳನ್ನು ತಿದ್ದಲು ನ್ಯಾಯಮೂರ್ತಿಗಳು ಅವಕಾಶ ನೀಡಿದ್ದರೆಂದು ರಾಜ್ಯ ಜಾಗೃತದಳ ಆರೋಪ ಮಾಡಿತ್ತು.

ಭೂ ಮಾಫಿಯಾಗಳಿಂದ ಹಣ-ಹೆಂಡ-ಹೆಣ್ಣುಗಳನ್ನು ಪಡೆದು ತೀರ್ಪು ನೀಡಿದ್ದಾರೆಂಬ ಆರೋಪದ ಮೇಲೆ ಸಿಬಿಐ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಶಮಿತ್ ಮುಖರ್ಜಿ ಅವರನ್ನು ಬಂಧಿಸಿತ್ತು. ನ್ಯಾಯಾಲಯದ ಸಿಬ್ಬಂದಿಯ ಭವಿಷ್ಯನಿಧಿ ಹಣವನ್ನು ದುರ್ಬಳಕೆ ಮಾಡಿದ್ದಾರೆಂದು ಸುಪ್ರೀಂಕೋರ್ಟ್‌ನಿಂದ ಹಿಡಿದು ಕೆಳ ನ್ಯಾಯಾಲಯದವರೆಗಿನ 34 ನ್ಯಾಯಮೂರ್ತಿಗಳ ವಿರುದ್ಧ ಆರೋಪ ಕೇಳಿಬಂದಿತ್ತು.

ಅಹ್ಮದಾಬಾದ್‌ನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ 40,000 ರೂಪಾಯಿ ಹಣ ಪಡೆದು ರಾಷ್ಟ್ರಪತಿಗಳ ವಿರುದ್ಧವೇ ಬಂಧನದ ವಾರೆಂಟ್ ಹೊರಡಿಸಿರುವುದನ್ನು ಒಂದು ಟಿವಿಚಾನೆಲ್ ಕುಟುಕುಕಾರ್ಯಾಚರಣೆ ಮೂಲಕ ಬಯಲಿಗೆಳೆದಿತ್ತು. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರಿಗೆ ಸಂಬಂಧಿಸಿದ ಜಾಮೀನು ನೀಡಿಕೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಆಂಧ್ರಪ್ರದೇಶದ ನಾಲ್ವರು ನ್ಯಾಯಾಧೀಶರು ಕಂಬಿ ಎಣಿಸುತ್ತಿರುವುದು ಇತ್ತೀಚಿನ ಉದಾಹರಣೆ.

ಭ್ರಷ್ಟಾಚಾರದ ವಿಷಯದಲ್ಲಿ ಈಗಲೂ ನ್ಯಾಯಾಂಗವನ್ನು ಕಾರ್ಯಾಂಗ ಮತ್ತು ಶಾಸಕಾಂಗಗಳ ಸಮಕ್ಕೆ ಹೋಲಿಸಲಾಗದು. ನಮ್ಮ ಬಹುಸಂಖ್ಯಾತ ನ್ಯಾಯಮೂರ್ತಿಗಳು ವೃತ್ತಿನಿಷ್ಠೆಯಿಂದ ಕಾರ್ಯನಿರ್ವಹಿಸುವ ಪ್ರಾಮಾಣಿಕರೆನ್ನುವುದು ನಿಜ. ಆದರೆ ಕೆಳನ್ಯಾಯಾಲಯಗಳಿಗೆ ಸೀಮಿತವಾಗಿದ್ದ ಭ್ರಷ್ಟಾಚಾರದ ವೈರಸ್ ನಿಧಾನವಾಗಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಿಗೂ ಪ್ರವೇಶಿಸಿದೆ.

ಸಂವಿಧಾನದ ಉಳಿದೆರಡು ಅಂಗಗಳ ರೀತಿಯಲ್ಲಿ ನ್ಯಾಯಾಂಗಕ್ಕೆ ತಗಲಿರುವ ರೋಗವನ್ನು ಸುಲಭದಲ್ಲಿ ನಿಯಂತ್ರಿಸುವುದು ಕಷ್ಟ. ಇದಕ್ಕೆ ಮೊದಲನೆಯ ಕಾರಣ- ನ್ಯಾಯಾಂಗದ ಭ್ರಷ್ಟತೆಯ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾರ್ಯಾಂಗ ಮತ್ತು ಶಾಸಕಾಂಗ ಮಾತ್ರವಲ್ಲ ಮಾಧ್ಯಮರಂಗವೂ ಉಳಿಸಿಕೊಳ್ಳದೆ ಇರುವುದು. ಎರಡನೆಯ ಕಾರಣ-ಉಳಿದ ಮೂರು ಅಂಗಗಳನ್ನೂ ಮೀರಿದ ವಿಶೇಷ ರಕ್ಷಣೆ (ಇಮ್ಯುನಿಟಿ)ಯನ್ನು ನ್ಯಾಯಾಂಗ ಪಡೆದಿರುವುದು.

ಭಾರತದಲ್ಲಿ ಈಗಲೂ ನ್ಯಾಯಾಂಗ ಎನ್ನುವುದು ಒಂದು `ಪವಿತ್ರಗೋವು`. ಬೀದಿಯಲ್ಲಿ ನಿಂತು ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ಆಡುವ ಮಾತುಗಳನ್ನು ನ್ಯಾಯಮೂರ್ತಿಗಳ ಬಗ್ಗೆ ಮಾತನಾಡಲಾಗದು. ನ್ಯಾಯಾಂಗ ನಿಂದನೆಯ ಕತ್ತಿ ತಲೆ ಮೇಲೆ ಸದಾ ತೂಗುತ್ತಿರುತ್ತದೆ.

ಬಹುಪದರಗಳ ಈ `ಆತ್ಮರಕ್ಷಣೆ`ಯ ವ್ಯವಸ್ಥೆಯೇ ನ್ಯಾಯಾಂಗದ ಆರೋಗ್ಯವನ್ನು ಒಳಗಿಂದೊಳಗೆ ಕೆಡಿಸುತ್ತಿದೆಯೇ?ಈಗಿನ ಕಾನೂನಿನ ಪ್ರಕಾರ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳ ಪೂರ್ವಾನುಮತಿ ಇಲ್ಲದೆ ನ್ಯಾಯಮೂರ್ತಿಗಳ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸುವಂತಿಲ್ಲ.

ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದೂ ಸಾಧ್ಯ ಇಲ್ಲ. ಹೈಕೋರ್ಟ್ ಇಲ್ಲವೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳನ್ನು ಸಂಸತ್‌ನ ಎರಡೂ ಸದನಗಳ ಸದಸ್ಯರು ಬಹುಮತದ `ವಾಗ್ದಂಡನೆ` ಮೂಲಕವಷ್ಟೇ ಕಿತ್ತುಹಾಕಬಹುದು. ಆದರೆ  ಇಲ್ಲಿಯವರೆಗೆ ಯಾವ ನ್ಯಾಯಮೂರ್ತಿಯವರನ್ನೂ `ವಾಗ್ದಂಡನೆ`ಯ ಮೂಲಕ ಕಿತ್ತುಹಾಕಲು ಸಂಸತ್‌ಗೆ ಸಾಧ್ಯವಾಗಿಲ್ಲ. ನ್ಯಾಯಮೂರ್ತಿ ವಿ.ರಾಮಸ್ವಾಮಿ ಅವರಿಗೆ ವಾಗ್ದಂಡನೆ  ವಿಧಿಸಬೇಕೆಂಬ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರವೇ ಸಿಗದೆ ಬಿದ್ದುಹೋಗಿತ್ತು. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲಿಯೂ ಕಾಂಗ್ರೆಸ್ ಸದಸ್ಯರು ಗೈರುಹಾಜರಾಗಿದ್ದರು.

ನ್ಯಾಯಾಲಯದ ರಿಸೀವರ್ ಆಗಿ ಸ್ವೀಕರಿಸಿದ್ದ 24 ಲಕ್ಷ ರೂಪಾಯಿಯನ್ನು ದುರುಪಯೋಗ ಮಾಡಿಕೊಂಡಿದ್ದ ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರಸೇನ್ ವಿರುದ್ಧದ ವಾಗ್ದಂಡನೆಗೆ ಲೋಕಸಭೆ ಅಂಗೀಕಾರ ನೀಡಿದರೂ, ಅದು ರಾಜ್ಯಸಭೆಗೆ ಹೋಗುವ ಮೊದಲೇ ಅವರು  ರಾಜೀನಾಮೆ ನೀಡಿದ್ದರು. ತನಿಖೆ ನಡೆಯುತ್ತಿರುವಾಗಲೇ ನ್ಯಾಯಮೂರ್ತಿ ಪಿ.ಡಿ.ದಿನಕರನ್ ರಾಜೀನಾಮೆ ನೀಡಿದ ಕಾರಣ  ಅವರಿಗೂ ವಾಗ್ದಂಡನೆ ನೀಡಲು ಸಾಧ್ಯವಾಗಲಿಲ್ಲ.

ಆರೋಪ ಹೊತ್ತ ನ್ಯಾಯಮೂರ್ತಿಗಳ ವಿಚಾರಣೆ ನಡೆಸುವ ಈಗಿನ ವ್ಯವಸ್ಥೆ ತೀರಾ ದುರ್ಬಲವಾಗಿದೆ. ಇದೊಂದು `ಗೃಹಸಮಿತಿ`. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ನ್ಯಾಯಾಂಗ ಆಯೋಗದಲ್ಲಿ ಹೈಕೋರ್ಟ್‌ನ ತಲಾ ಇಬ್ಬರು ನ್ಯಾಯಮೂರ್ತಿಗಳು ಸದಸ್ಯರು.

ನ್ಯಾಯಮೂರ್ತಿಗಳ ಮೇಲಿನ ಆರೋಪ ಸಾಬೀತಾದಾರೂ ಆಯೋಗ ಹೆಚ್ಚೆಂದರೆ ಆರೋಪಿ ನ್ಯಾಯಮೂರ್ತಿಗಳನ್ನು ಅಮಾನತ್‌ನಲ್ಲಿಡಬಹುದು ಇಲ್ಲವೆ ವರ್ಗಾವಣೆ ಮಾಡಬಹುದು. ಆಯೋಗಕ್ಕೆ ಕಾನೂನುಬದ್ಧ ಅಧಿಕಾರ ಇಲ್ಲ. ಆರೋಪಿ ಸ್ಥಾನದಲ್ಲಿರುವವರು ಆಯೋಗದ ನಿರ್ಧಾರವನ್ನು ಪ್ರಶ್ನಿಸಬಹುದು.

ನ್ಯಾಯಾಂಗ ಎದುರಿಸುತ್ತಿರುವ ಈಗಿನ ಆರೋಪಗಳಿಗೆ ನ್ಯಾಯಮೂರ್ತಿಗಳ ನೇಮಕದಲ್ಲಿರುವ ದೋಷವೂ ಕಾರಣ. 1950ರಿಂದ 1993ರ ವರೆಗೆ ನ್ಯಾಯಮೂರ್ತಿಗಳ ನೇಮಕದ ಅಧಿಕಾರ ಶಾಸಕಾಂಗದ ಕೈಯಲ್ಲಿಯೇ ಇತ್ತು. `ಸೆಕೆಂಡ್ ಜಡ್ಜಸ್` ಎಂದೇ ಜನಪ್ರಿಯವಾಗಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಒಂಬತ್ತು ಸದಸ್ಯರ ಪೀಠ ಸಂವಿಧಾನದ 124ನೇ ಕಲಂ ಅನ್ನು ಪುನರ್‌ವ್ಯಾಖ್ಯಾನಿಸಿ ನ್ಯಾಯಮೂರ್ತಿಗಳ ನೇಮಕದಲ್ಲಿ ನ್ಯಾಯಾಂಗಕ್ಕೆ ಪರಮಾಧಿಕಾರವನ್ನು ನೀಡಿತ್ತು.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳದ್ದೇ ಅಂತಿಮ ನಿರ್ಧಾರ. ಈ ಬಗ್ಗೆ ಕೇಂದ್ರ ಸರ್ಕಾರದ `ಸಲಹೆ`ಪಡೆದರಷ್ಟೇ ಸಾಕು, `ಅನುಮತಿ` ಬೇಕಾಗಿಲ್ಲ. ಮುಖ್ಯನ್ಯಾಯಮೂರ್ತಿಗಳು ಇಬ್ಬರು ಹಿರಿಯಸಹೋದ್ಯೋಗಿಗಳ ಜತೆ ಸಮಾಲೋಚನೆ ನಡೆಸಿ ಕೈಗೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇಬೇಕು. ಕೆಲವು ವಿವಾದಾತ್ಮಕ ನ್ಯಾಯಮೂರ್ತಿಗಳ ಪ್ರಕರಣವನ್ನು ಪರಿಶೀಲಿಸಿದರೆ ನೇಮಕಾತಿಯ ಈ ವ್ಯವಸ್ಥೆಯಲ್ಲಿನ ದೋಷ ಸ್ಪಷ್ಟವಾಗುತ್ತದೆ.

ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಸೌಮಿತ್ರಸೇನ್ ಹಣ ದುರುಪಯೋಗ ಮಾಡಿಕೊಂಡದ್ದು 1993ರಲ್ಲಿ. ಆದರೆ ಅದು ಬೆಳಕಿಗೆ ಬಂದದ್ದು 2009ರಲ್ಲಿ. ನ್ಯಾಯಮೂರ್ತಿ ಸೇನ್ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಮೊದಲು ಹಳೆಯ ಆರೋಪಗಳನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಯಾಕೆ ಪರಿಶೀಲಿಸಿರಲಿಲ್ಲ? ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾಗ ಪಿ.ಡಿ.ದಿನಕರನ್ ಅವರು ಅಕ್ರಮವಾಗಿ ನೂರಾರು ಎಕರೆ ಜಮೀನು ಕಬಳಿಸಿದ್ದಾರೆ ಎನ್ನುವುದು ಆರೋಪ.

ಆದರೆ ಅದು ಬಯಲಿಗೆ ಬಂದಿರುವುದು ಅವರನ್ನು ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ ಸಂದರ್ಭದಲ್ಲಿ. ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ ಸುಪ್ರೀಂಕೋರ್ಟ್ ಸಮಿತಿ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹೇಗೆ ನೇಮಿಸಿತು?

ಇದು ಆರೋಪಕ್ಕೊಳಗಾಗಿರುವ ಒಬ್ಬಿಬ್ಬರು ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ಲೋಪಗಳಲ್ಲ. ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಹಲವಾರು ನ್ಯಾಯಮೂರ್ತಿಗಳ ಹಿನ್ನೆಲೆ ಸಂಶಯಾಸ್ಪದವಾಗಿಯೇ ಇದ್ದರೂ ಅವರೆಲ್ಲ ಸಲೀಸಾಗಿ  ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.

 ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದ ಯಾರೂ ಕೂಡಾ ನ್ಯಾಯಾಂಗ ಎನ್ನುವುದು 50ವರ್ಷಗಳ ಹಿಂದಿನಷ್ಟೇ ಆರೋಗ್ಯಕರವಾಗಿದೆ ಎಂದು ಹೇಳಲಾರರು. ಆರೋಗ್ಯ ಹಾಳಾಗಿದ್ದರೆ ಚಿಕಿತ್ಸೆ ಅನಿವಾರ್ಯ. ಆದರೆ ನಮ್ಮ ಸಂವಿಧಾನದಲ್ಲಿ ನ್ಯಾಯಾಂಗದ ಅನಾರೋಗ್ಯಕ್ಕೆ ಔಷಧಿ ಏನೆಂದು ಹೇಳಿಲ್ಲ.

ಭವಿಷ್ಯದಲ್ಲಿ ನ್ಯಾಯಮೂರ್ತಿಗಳ ಪ್ರಾಮಾಣಿಕತೆಯನ್ನೇ ಸಂಶಯಿಸುವಂತಹ ದಿನಗಳು ಬರಬಹುದೆಂದು ಸಂವಿಧಾನ ರಚನೆಯ ಕಾಲದಲ್ಲಿ  ಸ್ವತ: ವಕೀಲರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಯಾರೂ ಊಹಿಸಿರಲಿಲ್ಲವೇನೋ? ನ್ಯಾಯಾಂಗವನ್ನು ಪ್ರಶ್ನಾತೀತವಾಗಿ ಉಳಿಸಿಕೊಳ್ಳಬೇಕೆಂಬ ಅವರ ಸದಾಶಯವೂ ಇದಕ್ಕೆ ಕಾರಣ ಇರಬಹುದು. ಆದರೆ ಈ ಭರವಸೆಯನ್ನು ನ್ಯಾಯಾಂಗ ಉಳಿಸಿಕೊಂಡಿದೆಯೇ?

ಇತ್ತೀಚಿನ ವರ್ಷಗಳಲ್ಲಿ ಬಯಲಾಗುತ್ತಿರುವ ನ್ಯಾಯಾಂಗದ ಹಗರಣಗಳ ನಂತರ ನ್ಯಾಯಮೂರ್ತಿಗಳನ್ನು ಕೂಡಾ ಸಮಾಜಕ್ಕೆ ಉತ್ತರದಾಯಿಯನ್ನಾಗಿ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂವಿಧಾನ ಪುನರ್‌ಪರಿಶೀಲನಾ ಆಯೋಗ  `ರಾಷ್ಟ್ರೀಯ ನ್ಯಾಯಾಂಗ ಆಯೋಗ` ರಚನೆಗೆ ಶಿಫಾರಸು ಮಾಡಿತ್ತು. ಎನ್‌ಡಿಎ ಸರ್ಕಾರದ ಕಾಲದಲ್ಲಿ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಯ ಅಧಿಕಾರವನ್ನೂ ಒಳಗೊಂಡ `ರಾಷ್ಟ್ರೀಯ ನ್ಯಾಯಾಂಗ ಆಯೋಗ`ದ ಮಸೂದೆಯನ್ನು ರೂಪಿಸಿತ್ತು.

ಕೇಂದ್ರ ಕಾನೂನು ಸಚಿವರು ಮತ್ತು ಕೇಂದ್ರ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡ ಆಯೋಗದ ಮುಂದೆ ನ್ಯಾಯಮೂರ್ತಿಗಳು ಆಸ್ತಿ ಘೋಷಣೆ ಮಾಡಬೇಕು ಎಂದು ಮಸೂದೆ ಹೇಳಿತ್ತು. ಆಗಲೂ ನ್ಯಾಯಮೂರ್ತಿಗಳು ಆಯೋಗ ರಚನೆಯನ್ನು ವಿರೋಧಿಸಿದ್ದರು.

ವಿಳಂಬವಾಗಿಯಾದರೂ ಈ ವರ್ಷದ ಮೇ ತಿಂಗಳಲ್ಲಿ ಲೋಕಸಭೆ `ನ್ಯಾಯಾಂಗ ಗುಣಮಟ್ಟ ಮತ್ತು ಉತ್ತರದಾಯಿತ್ವ ಮಸೂದೆ 2002`ಕ್ಕೆ ಅನುಮೋದನೆ ನೀಡಿದೆ. 2011ರಲ್ಲಿ ಮಂಡನೆಯಾಗಿದ್ದ ಈ ಮಸೂದೆಯನ್ನು ತಿದ್ದುಪಡಿಯೊಂದಿಗೆ ಮರಳಿ ಮಂಡಿಸಲಾಗಿತ್ತು. ಆದರೆ ಆಗಲೇ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಅವರು  ಮಸೂದೆಯ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗದ ಸುಧಾರಣೆಯ ಪ್ರಯತ್ನ ನಡೆದಾಗಲೆಲ್ಲ, ಅದನ್ನು ನ್ಯಾಯಾಂಗದ ಮೇಲೆ ಶಾಸಕಾಂಗದ ಆಕ್ರಮಣ ಎಂದೇ ಬಿಂಬಿಸುತ್ತಾ ನ್ಯಾಯಮೂರ್ತಿಗಳು ಆತ್ಮರಕ್ಷಣೆಗಿಳಿಯುವುದು ಸಹಜ. ಈಗಿನ ಮುಖ್ಯನ್ಯಾಯಮೂರ್ತಿಗಳು ಅದನ್ನು ಮಾತಿನಲ್ಲಿ ಹೇಳದೆ ಇದ್ದರೂ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ತನ್ನ ಕಬಂಧಬಾಹುಗಳನ್ನು ಎಲ್ಲೆಡೆ ಚಾಚುತ್ತಿರುವ ಸಮಯದಲ್ಲಿ ಎಲ್ಲ ವ್ಯವಸ್ಥೆಗಳೂ  ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿ ಆಗಿರಬೇಕು ಎಂದು ಸಾರ್ವಜನಿಕರು ಬಯಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬಹಳ ದಿನಗಳ ಕಾಲ ನ್ಯಾಯಾಂಗ ಮುಸುಕುಹಾಕಿಕೊಂಡು ತನ್ನನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಗಲಾರದು.