ಕಾವೇರಿ ನದಿನೀರು ಹಂಚಿಕೆಯ ವಿವಾದವನ್ನು ಕೊರಳಿಗೆ ಸುತ್ತಿಕೊಂಡು ಎರಡು ಶತಕಗಳಿಗಿಂತಲೂ ಹೆಚ್ಚು ಕಾಲ ಸುಸ್ತಾಗುವಷ್ಟು ಜಗಳವಾಡಿ, ಹಳ್ಳಿಯಿಂದ ದಿಲ್ಲಿ ವರೆಗೆ ಸುತ್ತಾಡಿ, ಇಷ್ಟ ಬಂದಷ್ಟು ಖರ್ಚು ಮಾಡಿದರೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡಿಗೆ ಸಾಧ್ಯವಾಗಿಲ್ಲ.
ಈಗ ಎರಡೂ ರಾಜ್ಯಗಳು ಹೊರಟ ಜಾಗದಲ್ಲಿಯೇ ಮತ್ತೆ ಬಂದು ನಿಂತಿವೆ. 1799ರಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಕೆರೆಗಳ ದುರಸ್ತಿಯನ್ನು ವಿರೋಧಿಸಿ ತಂಜಾವೂರು ಜಿಲ್ಲೆಯ ರೈತರು ಮೊದಲ ಬಾರಿ ನಡೆಸಿದ ಪ್ರತಿಭಟನೆಯ ದಿನದಿಂದ ಪ್ರಾರಂಭವಾಗಿರುವ ನೀರಿನ ಜಗಳ ಇನ್ನೂ ನಿಂತಿಲ್ಲ.
ಇದೇ ಸೆಪ್ಟೆಂಬರ್ 19ರಂದು ನಡೆಯಲಿರುವ ಪ್ರಧಾನಿ ಅಧ್ಯಕ್ಷರಾಗಿರುವ ಮತ್ತು ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ಮತ್ತೊಂದು ಸುತ್ತಿನ ಕಾದಾಟಕ್ಕೆ ಎರಡೂ ರಾಜ್ಯಗಳು ತಾಲೀಮು ನಡೆಸತೊಡಗಿವೆ.
ಸುಪ್ರೀಂಕೋರ್ಟ್ ಆದೇಶದಂತೆಯೇ ರಚನೆಯಾದ ಕಾವೇರಿ ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡಿದ ನಂತರವೂ ಮೂಲವಿವಾದ ಬಗೆಹರಿದಿಲ್ಲ ಎನ್ನುವುದಕ್ಕೆ ಈಗಿನ ಜಗಳವೇ ಸಾಕ್ಷಿ. `ಮಳೆಗಾಲದಲ್ಲಿ ನೂರಾರು ನೆಂಟರು, ಬರಗಾಲ ಅನಾಥ` ಎಂಬಂತಾಗಿದೆ ಕಾವೇರಿ ಕಣಿವೆಯ ರೈತರ ಸ್ಥಿತಿ. ಹದಿನಾರು ವರ್ಷಗಳಷ್ಟು ದೀರ್ಘಕಾಲ ಅಳೆದು, ತೂಗಿ, ಸೋಸಿ ನೀಡಿದ ಅಂತಿಮ ಐತೀರ್ಪು ಕೊನೆಗೂ ಮಳೆಬಂದ ದಿನಗಳಲ್ಲಿ ನೀರನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನಷ್ಟೇ ಹೇಳಿದ್ದು.
ಇದಕ್ಕಿಂತಲೂ ಮುಖ್ಯವಾಗಿ ಮಳೆ ಇಲ್ಲದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನು ನ್ಯಾಯಮಂಡಳಿ ಹೇಳಬೇಕಾಗಿತ್ತು. ಆದರೆ `ಮಳೆ ಕೊರತೆಯ ವರ್ಷದಲ್ಲಿ ಕಡಿಮೆಯಾಗುವ ನೀರಿನ ಉತ್ಪನ್ನದ ಅನುಪಾತಕ್ಕೆ ಅನುಗುಣವಾಗಿ ಬಿಡಬೇಕಾಗಿರುವ ನೀರಿನ ಪಾಲು ಕಡಿಮೆಯಾಗಲಿದೆ` ಎಂದಷ್ಟೇ ಹೇಳಿರುವ ನ್ಯಾಯಮಂಡಳಿ ಇದಕ್ಕೊಂದು ಸ್ಪಷ್ಟವಾದ ಸೂತ್ರ ಇಲ್ಲವೇ ಮಾರ್ಗಸೂಚಿಯನ್ನು ನೀಡದೆ ಜಾರಿಕೊಂಡಿದೆ.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನೀರಿನ ಜಗಳವನ್ನು ಇನ್ನಷ್ಟು ಸರಳವಾಗಿ ವ್ಯಾಖ್ಯಾನಿಸುವುದಾದರೆ ಇದು ಮುಖ್ಯವಾಗಿ `ಮಳೆ ಇಲ್ಲದ ಕಷ್ಟದ ದಿನಗಳಲ್ಲಿನ ನೀರು ಹಂಚಿಕೆಯ ಸಮಸ್ಯೆ`. ಸಮೃದ್ಧವಾಗಿ ಮಳೆ ಬಿದ್ದಾಗ ನೀರು ಹರಿಸಲು ಕರ್ನಾಟಕ ತಕರಾರು ಮಾಡುವುದಿಲ್ಲ, ನೀರು ಬಿಡಲೇಬೇಕೆಂದು ತಮಿಳುನಾಡು ಕೂಡಾ ಹಟ ಹಿಡಿಯುವುದಿಲ್ಲ.
1991ರಲ್ಲಿ ಮಧ್ಯಂತರ ಐತೀರ್ಪು ನೀಡಿದ ನಂತರದ ಇಪ್ಪತ್ತೊಂದು ವರ್ಷಗಳಲ್ಲಿ ನಾಲ್ಕು ವರ್ಷಗಳನ್ನು ( 2001-02: 189 ಟಿಎಂಸಿ, 2002-03: 109.45 ಟಿಎಂಸಿ, 2003-04: 75.87 ಟಿಎಂಸಿ ಮತ್ತು 2004-05: 185.55 ಟಿಎಂಸಿ) ಹೊರತುಪಡಿಸಿ ಉಳಿದೆಲ್ಲ ವರ್ಷಗಳಲ್ಲಿ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಹರಿಸಬೇಕಾಗಿರುವ 192 ಟಿಎಂಸಿಗಿಂತಲೂ ಹೆಚ್ಚು ನೀರು ಕರ್ನಾಟಕದಿಂದ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದುಹೋಗಿದೆ.
ವಿವಾದ ಒಟ್ಟು ನೀರಿನ ಪಾಲಿಗೆ ಸಂಬಂಧಿಸಿದ್ದಲ್ಲ, ಅದು ಜೂನ್ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ಹರಿಸಬೇಕಾಗಿರುವ ನೀರಿನ ಪಾಲಿನದ್ದು. ಇದರಿಂದಾಗಿಯೇ ಮಳೆ ಇಲ್ಲದ ಸಂಕಷ್ಟದ ಕಾಲದಲ್ಲಿ ಎರಡು ರಾಜ್ಯಗಳ ನಡುವೆ ಸಂಘರ್ಷದ ಕಿಡಿಹಾರುತ್ತಿರುವುದು.
ಇದು ಗೊತ್ತಿದ್ದರೂ ಇದಕ್ಕೊಂದು ಸರ್ವಸಮ್ಮತ ಪರಿಹಾರವನ್ನು ಸೂಚಿಲು ಸಾಧ್ಯವಾಗದೆ ಇರುವುದು ಕಾವೇರಿ ನ್ಯಾಯಮಂಡಳಿಯ ದೊಡ್ಡ ವೈಫಲ್ಯ. `ಮಳೆ ಕೊರತೆಯ ದಿನಗಳಲ್ಲಿ ಬಳಸಲು ಸಾಧ್ಯವಾಗುವಂತೆ ಉತ್ತಮ ಮಳೆಯ ಸಾಮಾನ್ಯ ಜಲವರ್ಷದ ಕೊನೆಯಲ್ಲಿ ಜಲಾಶಯಗಳಲ್ಲಿ ಸಾಧ್ಯ ಇದ್ದಷ್ಟು ನೀರಿನ ಸಂಗ್ರಹ ಇಟ್ಟುಕೊಳ್ಳಬೇಕು.
ಸತತ ಎರಡು ವರ್ಷ ಮಳೆ ಕೊರತೆ ಕಾಣಿಸಿಕೊಂಡಲ್ಲಿ ಕಾವೇರಿ ಜಲನಿರ್ವಹಣಾ ಮಂಡಳಿ ಇಲ್ಲ ಕಾವೇರಿ ನದಿ ಪ್ರಾಧಿಕಾರ ನೀರು ಬಿಡುಗಡೆಯ ಮಾಸಿಕ ಕಂತುಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು` ಎಂದಷ್ಟೇ ಅಂತಿಮ ಐತೀರ್ಪು ಹೇಳಿದೆ ( ಐದನೆ ಸಂಪುಟ, ಪುಟ 213). ಸ್ಪಷ್ಟ ಪರಿಹಾರದ ಮಾರ್ಗವನ್ನು ಅದು ತೋರಿಸಿಲ್ಲ.
ಜೂನ್-ಸೆಪ್ಟೆಂಬರ್ ವರೆಗಿನ ವಿವಾದಾತ್ಮಕ ನಾಲ್ಕು ತಿಂಗಳ ಅವಧಿಯಲ್ಲಿ ಕರ್ನಾಟಕ 137 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಮಧ್ಯಂತರ ಐತೀರ್ಪು ಹೇಳಿತ್ತು. ಅದರಲ್ಲಿ ಮೂರು ಟಿಎಂಸಿಯನ್ನಷ್ಟೇ ಕಡಿಮೆ ಮಾಡಿರುವ ಅಂತಿಮ ಐತೀರ್ಪು ವಿವಾದದ ಮೂಲಕಾರಣವನ್ನು ಜೀವಂತವಾಗಿ ಇಟ್ಟಿದೆ.
ಜೂನ್ನಿಂದ ಸೆಪ್ಟೆಂಬರ್ ವರೆಗೆ 100 ಟಿಎಂಸಿ ಅದರ ನಂತರ 92 ಟಿಎಂಸಿ ನೀರು ಹರಿಸಿ ಎಂದು ನ್ಯಾಯಮಂಡಳಿ ಹೇಳಿದ್ದರೂ ವಿವಾದದ ಇತ್ಯರ್ಥಕ್ಕೆ ನೆರವಾಗುತ್ತಿತ್ತೊ ಏನೋ? ತಮಿಳುನಾಡು ಖುದ್ದಾಗಿ ಒಪ್ಪಿಕೊಂಡ 20 ಟಿಎಂಸಿ ಅಂತರ್ಜಲದ ಬಳಕೆಯನ್ನು ಗಣನೆಗೆ ತೆಗೆದುಕೊಂಡಿದ್ದರೂ ಕರ್ನಾಟಕದ ಮೇಲಿನ ಅಷ್ಟು ಭಾರ ಕಡಿಮೆಯಾಗಲು ಸಾಧ್ಯ ಇತ್ತು.
ನ್ಯಾಯಮಂಡಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ ಕಾರಣದಿಂದಾಗಿ ಮಧ್ಯಂತರ ಐತೀರ್ಪಿನಲ್ಲಿ ಹೇಳಿರುವಂತೆ ಮಳೆ ಇಲ್ಲದ ಕಾಲದಲ್ಲಿ ಸಂಕಷ್ಟ ಹಂಚಿಕೆ ಸೂತ್ರವನ್ನು ರೂಪಿಸುವ ಜವಾಬ್ದಾರಿ 1998ರಲ್ಲಿ ರಚನೆಗೊಂಡ ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ್ದಾಗಿದೆ. ನ್ಯಾಯಮಂಡಳಿ ತನಗೊಪ್ಪಿಸಿರುವ ಜವಾಬ್ದಾರಿಯ ನಿರ್ವಹಣೆಗಾಗಿ ಕಾವೇರಿ ಉಸ್ತುವಾರಿ ಸಮಿತಿಯನ್ನು ಪ್ರಾಧಿಕಾರ ರಚಿಸಿದೆ.
ಉಸ್ತುವಾರಿ ಸಮಿತಿ ಇದಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಿದೆ. ಈ ಮೂಲಕ ಕಾವೇರಿ ನದಿ ನೀರು ಹಂಚಿಕೆಯ ವಿವಾದವನ್ನು ಇತ್ಯರ್ಥಗೊಳಿಸಬೇಕಾಗಿರುವ ಸುಪ್ರೀಂಕೋರ್ಟ್ನ ಆದೇಶದ ಮೂಲಕ ರಚನೆಗೊಂಡ ನ್ಯಾಯಮಂಡಳಿಯ ಹೊಣೆ ಅಂತಿಮವಾಗಿ ಒಂದಷ್ಟು ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯ ಹೆಗಲ ಮೇಲೆ ಬಂದು ಕೂತಿದೆ. ಕಳೆದ ಹನ್ನೆರಡು ವರ್ಷಗಳಿಂದ ಈ ತಾಂತ್ರಿಕ ಸಮಿತಿ `ಸಂಕಷ್ಟ ಹಂಚಿಕೆಯ ಸೂತ್ರ`ಗಳನ್ನು ಹೆಣೆಯುತ್ತಲೇ ಇದ್ದರೂ ಅದಕ್ಕೆ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳನ್ನು ಒಪ್ಪಿಸಲು ಸಾಧ್ಯವಾಗಿಲ್ಲ.
ಈ ಬಾರಿ ಕೂಡಾ ಕರ್ನಾಟಕದಲ್ಲಿ ನಡೆದ ಸರ್ವಪಕ್ಷಗಳ ಸಭೆ `ಸಂಕಷ್ಟ ಹಂಚಿಕೆ ಸೂತ್ರ`ವನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯದೊಂದಿಗೆ ಬರ್ಖಾಸ್ತುಗೊಂಡಿದೆ. ಇದರಿಂದಾಗಿ ವಿವಾದ ಪ್ರಾಧಿಕಾರದ ಹೊಸ್ತಿಲಲ್ಲಿ ಬಂದು ನಿಂತಿದೆ.
ತಮಿಳುನಾಡಿನ ರಾಜಕೀಯ ಒತ್ತಡಕ್ಕೆ ಈಡಾಗುತ್ತ ಬಂದಿರುವ ಕಾವೇರಿ ನದಿ ಪ್ರಾಧಿಕಾರ ಇಲ್ಲಿಯ ವರೆಗೆ ರಚಿಸಿದ ಸಂಕಷ್ಟ ಹಂಚಿಕೆಯ ಕರಡು ಸೂತ್ರಗಳೆಲ್ಲವೂ ತಮಿಳುನಾಡಿನ ರೈತರ ಹಿತವನ್ನಷ್ಟೇ ಕಾಯಲು ರೂಪುಗೊಂಡಿರುವಂತಹದ್ದು ಎಂದು ಹೇಳಲು ಆಧಾರಗಳಿವೆ.
ಕರ್ನಾಟಕ ನೀಡಿರುವ ಸಲಹೆಗಳನ್ನು ಪ್ರಾಧಿಕಾರದಿಂದ ನೇಮಕಗೊಂಡ ತಾಂತ್ರಿಕ ಸಮಿತಿ ಪರಿಗಣಿಸಿಯೇ ಇಲ್ಲ. ಅವುಗಳು ಹೀಗಿವೆ:
-ಕರ್ನಾಟಕದಲ್ಲಿ ಬಹುಪಾಲು ಮಳೆಯನ್ನು ತಂದುಕೊಡುವ ನೈರುತ್ಯ ಮಾರುತದ ಮಳೆಯನ್ನಷ್ಟೇ ಪರಿಗಣಿಸದೆ ತಮಿಳುನಾಡಿನಲ್ಲಿ ಅಕ್ಟೋಬರ್ ಮಧ್ಯಭಾಗದಿಂದ ಜನವರಿ ವರೆಗೆ ಸುರಿಯವ ಈಶಾನ್ಯ ಮಾರುತವನ್ನೂ ಪರಿಗಣಿಸಬೇಕು. ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರು ಕುರುವೈ ಬೆಳೆಗೆ ನೈರುತ್ಯ ಮಾರುತವನ್ನು ಅವಲಂಬಿಸಿದ್ದರೆ ನಂತರ ಬೆಳೆಯುವ ಸಾಂಬಾ ಬೆಳೆಗೆ ಬೇಕಾಗಿರುವ ಮಳೆಯ ಮೂರನೆ ಎರಡರಷ್ಟರನ್ನು ಈಶಾನ್ಯ ಮಾರುತದಿಂದ ಪಡೆಯುತ್ತಾರೆ.
ಇಲ್ಲಿಯ ವರೆಗಿನ ಸಂಕಷ್ಟ ಹಂಚಿಕೆ ಸೂತ್ರಗಳು ಈಶಾನ್ಯ ಮಾರುತವನ್ನು ಪರಿಗಣಿಸಿಲ್ಲ. ( ಪ್ರತಿವರ್ಷ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ನೀರು ಸಂಗ್ರಹ ಮತ್ತು ಜೂನ್ ಒಂದರಿಂದ ಅಕ್ಟೋಬರ್ 15ರ ವರೆಗಿನ ನೈರುತ್ಯ ಮಾರುತ ಮತ್ತು ಅಕ್ಟೋಬರ್ 16ರಿಂದ ಜನವರಿ 31ರ ವರೆಗಿನ ಈಶಾನ್ಯ ಮಾರುತದ ಮಳೆಯನ್ನು ದಾಖಲಿಸುವ ಹೊಣೆಯನ್ನು ನ್ಯಾಯಮಂಡಳಿ ಅಂತಿಮ ಐತೀರ್ಪಿನಲ್ಲಿ ಕಾವೇರಿ ನಿಯಂತ್ರಣಾ ಪ್ರಾಧಿಕಾರ ಮತ್ತು ನಿರ್ವಹಣಾ ಸಮಿತಿಗೆ ಒಪ್ಪಿಸಿರುವುದು ಕರ್ನಾಟಕದ ಈ ಸಲಹೆಗೆ ಬಲ ತಂದುಕೊಟ್ಟಿದೆ.)
-ನೈರುತ್ಯ ಮಾರುತ ಕೊನೆಗೊಳ್ಳುವ ಸೆಪ್ಟೆಂಬರ್ ತಿಂಗಳ ಅಂತ್ಯದ ವರೆಗಿನ ನೀರಿನ ಕೊರತೆಯನ್ನಷ್ಟೇ ಲೆಕ್ಕ ಹಾಕಿ ಅಲ್ಲಿಂದ ನಂತರದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳಬೇಕೆಂಬ ಸೂತ್ರ ಸರಿ ಅಲ್ಲ. ನ್ಯಾಯಮಂಡಳಿ ಐತೀರ್ಪು ನೀಡುವಾಗ ಜೂನ್ನಿಂದ ಡಿಸೆಂಬರ್ ವರೆಗೆ ಬಿಟ್ಟ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಿದ್ದು ಸಂಕಷ್ಟ ಸ್ಥಿತಿಯ ಅಂದಾಜಿಗೆ ನೀರಿನ ಕೊರತೆಯನ್ನು ಲೆಕ್ಕ ಹಾಕುವಾಗಲೂ ಆ ಅವಧಿಯನ್ನೇ (ಜೂನ್-ಡಿಸೆಂಬರ್) ಪರಿಗಣಿಸಬೇಕು.
-ಸಂಕಷ್ಟ ಹಂಚಿಕೆ ಸೂತ್ರ ರಚಿಸುವಾಗ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶವನ್ನಷ್ಟೇ ಪರಿಗಣಿಸದೆ ತಮಿಳುನಾಡಿನ ಜಲಾಶಯಗಳ ನೀರು ಸಂಗ್ರಹವನ್ನೂ ಪರಿಗಣಿಸಬೇಕು. ನೀರಾವರಿ ವರ್ಷದ ಪ್ರಾರಂಭದಲ್ಲಿ ಮೆಟ್ಟೂರು ಜಲಾಶಯದಲ್ಲಿ ಸಂಗ್ರಹ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು.
ನರ್ಮದಾ ನದಿ ನೀರು ಹಂಚಿಕೆ ವಿವಾದವನ್ನು ಇತ್ಯರ್ಥಗೊಳಿಸಿದ್ದ ನ್ಯಾಯಮಂಡಳಿ `..ನಿರ್ದಿಷ್ಠ ನೀರಾವರಿ ವರ್ಷದಲ್ಲಿ ಬಳಕೆಗೆ ಲಭ್ಯ ಇರುವ ನೀರಿನ ಪ್ರಮಾಣದಲ್ಲಿ ಹಿಂದಿನ ವರ್ಷದ ಮಿಗತೆ ನೀರಿನ ಪ್ರಮಾಣ ಕೂಡಾ ಸೇರಿದೆ..` ಎಂದು ತನ್ನ ಐತೀರ್ಪಿನಲ್ಲಿ ಹೇಳಿದೆ.
- ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರ ಮತ್ತು ಮೆಟ್ಟೂರು ಜಲಾಶಯದ ನಡುವೆ 5535 ಚದರ ಕಿ.ಮೀ. ವಿಸ್ತೀರ್ಣದ ಜಲಾನಯನ ಪ್ರದೇಶ ಇದೆ. ಸಂಕಷ್ಟದ ಸ್ಥಿತಿಯನ್ನು ಲೆಕ್ಕಹಾಕುವಾಗ ಈ ಜಲಾನಯನ ಪ್ರದೇಶದಲ್ಲಿ ಪ್ರತಿ ಜಲವರ್ಷ ಉತ್ಪತ್ತಿಯಾಗುವ ಸುಮಾರು 25 ಟಿಎಂಸಿ ನೀರನ್ನು ಗಣನೆಗೆ ತೆಗೆದುಕೊಳ್ಳಬೇಕು.
-ತಮಿಳುನಾಡಿಗೆ ಬಿಟ್ಟ ನೀರಿನ ಲೆಕ್ಕವನ್ನು ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಜಲ ಆಯೋಗದ ಜಲಮಾಪನ ಕೇಂದ್ರದ ಆಧಾರದಲ್ಲಿಯೇ ನಡೆಸಬೇಕು. ಮೆಟ್ಟೂರಿನಲ್ಲಿ ಅಧಿಕೃತ ಜಲಮಾಪನ ವ್ಯವಸ್ಥೆಯೇ ಇಲ್ಲದೆ ಇರುವುದರಿಂದ ಅಲ್ಲಿನ ನೀರಿನ ದಾಖಲೆಯನ್ನು ಪರಿಗಣಿಸುವುದು ಸರಿ ಅಲ್ಲ. (ಬಿಳಿಗುಂಡ್ಲು ಜಲಮಾಪನದ ನೀರಿನ ಲೆಕ್ಕವೇ ಅಧಿಕೃತ ಎಂದು ನ್ಯಾಯಮಂಡಳಿಯ ಅಂತಿಮ ಐತೀರ್ಪಿನಲ್ಲಿ ಹೇಳಿರುವುದು ಈ ಸಲಹೆಗೆ ಪೂರಕವಾಗಿದೆ.)
-ಎರಡು ಗರಿಷ್ಠ ಮತ್ತು ಎರಡು ಕನಿಷ್ಠ ಮಳೆಯ ವರ್ಷಗಳ ಸರಾಸರಿಯನ್ನು ಪರಿಗಣಿಸದೆ, 1974ರಿಂದ ಈ ವರೆಗಿನ ಮಳೆ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಬೇಕು.
ಕಾವೇರಿ ನದಿ ಪ್ರಾಧಿಕಾರದ ಕಾರ್ಯನಿರ್ವಹಣೆಯನ್ನು ಕಳೆದ ಹನ್ನೆರಡು ವರ್ಷಗಳಿಂದ ಗಮನಿಸುತ್ತಾ ಬಂದ ಯಾರು ಕೂಡಾ ಕರ್ನಾಟಕದ ಈ ಸಲಹೆಗಳಿಗೆ ಮಾನ್ಯತೆ ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ ಇಲ್ಲ.
ಸೂತ್ರ ರಚನೆ ತಾಂತ್ರಿಕ ಸ್ವರೂಪದ್ದಾಗಿದ್ದರೂ ಅಂತಿಮವಾಗಿ ಅದೊಂದು ರಾಜಕೀಯ ತೀರ್ಮಾನವಾಗಿರುವುದು ಪರಿಹಾರ ಕಗ್ಗಂಟಾಗಲು ಕಾರಣ. ಮಳೆಯ ಪ್ರಮಾಣ, ಜಲಾಶಯದಲ್ಲಿ ನೀರಿನ ಸಂಗ್ರಹ ಮತ್ತು ರೈತರ ನೀರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಸೂತ್ರ ರಚನೆಯಾಗಬೇಕಾಗಿದ್ದರೂ ಅಲ್ಲಿ ಮುಖ್ಯವಾಗಿ ಗಣನೆಗೆ ಬರುವುದು ರಾಜಕೀಯ ಲೆಕ್ಕಾಚಾರ.
ಕೇಂದ್ರ ಸರ್ಕಾರವನ್ನು ಸದಾ ತನ್ನ ಋಣದ ಉರುಳಲ್ಲಿ ಇಟ್ಟುಕೊಂಡಿರುವ ತಮಿಳುನಾಡು, ರಾಜಕೀಯ ಬಲಾಬಲದ ಪರೀಕ್ಷೆ ಎದುರಾದಾಗೆಲ್ಲ ಸುಲಭದಲ್ಲಿ ಕರ್ನಾಟಕವನ್ನು ಹಿಂದಕ್ಕೆ ತಳ್ಳುತ್ತಾ ಬಂದಿದೆ. ಈ ಬಾರಿಯೂ ಹಾಗಾಗುವುದಿಲ್ಲ ಎನ್ನುವುದಕ್ಕೆ ಪ್ರಬಲವಾದ ಯಾವ ಕಾರಣಗಳೂ ಹೊಳೆಯುತ್ತಿಲ್ಲ. ರಾಜಕೀಯವಾಗಿ ಕರ್ನಾಟಕ ಇಂದಿನಷ್ಟು ದುರ್ಬಲ ಹಿಂದೆಂದೂ ಆಗಿರಲಿಲ್ಲ.

No comments:
Post a Comment