ಪ್ರಜಾಪ್ರಭುತ್ವದ ಹಾದಿ ತಪ್ಪಿಸುವ ಪ್ರಯತ್ನ ನಡೆದ
ಸಂದರ್ಭಗಳಲ್ಲಿ ಕೆಲವರು ವ್ಯಂಗ್ಯವಾಗಿ `ಇಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು
ಸಮಾನರು' ಎಂದು ಹೇಳುವುದುಂಟು. ಮುಂಬೈ ಸ್ಫೋಟದ ಅಪರಾಧಿಗಳಲ್ಲಿ ಒಬ್ಬನಾದ ಹಿಂದಿ
ಚಿತ್ರನಟ ಸಂಜಯ್ದತ್ಗೆ ಐದುವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಕ್ಕಾಗಿ ಗಣ್ಯಾತಿಗಣ್ಯರು
ಕಣ್ಣೀರು ಸುರಿಸುತ್ತಿರುವುದು ಇಂತಹದ್ದೊಂದು ಸಂದರ್ಭ. ಚಲನಚಿತ್ರ ನಟನಟಿಯರಿಂದ ಹಿಡಿದು
ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ (ನಿವೃತ್ತ) ಮಾರ್ಕಂಡೇಯ ಕಟ್ಜು
ವರೆಗೆ ಹಲವು ಖ್ಯಾತನಾಮರು ಸಂಜಯ್ದತ್ ಪರವಾಗಿ ಬೊಗಸೆಯೊಡ್ಡಿ ಸರ್ಕಾರ ಮತ್ತು
ನ್ಯಾಯಾಲಯದ ಮುಂದೆ ದಯಾಭಿಕ್ಷೆ ಬೇಡುತ್ತಿದ್ದಾರೆ. ಸಾರ್ವಜನಿಕ ಅಭಿಪ್ರಾಯ ರೂಪಿಸುವ
ಶಕ್ತಿ ಹೊಂದಿರುವ ಸಮಾಜದ `ಕೆನೆಪದರ'ದಂತಿರುವ ಈ ಗಣ್ಯರು ತಮ್ಮ ಪ್ರಭಾವಳಿಯ ಬಲದಿಂದ
ಸಂಜಯ್ದತ್ಗೆ ಜೈಲು ಶಿಕ್ಷೆಯಾಗದಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿ ಗೆಲ್ಲಲೂ ಬಹುದು.
ಆದರೆ ಸಮಾನತೆಯ ಬೀಜ ಮಂತ್ರದ ಪ್ರಜಾಪ್ರಭುತ್ವವನ್ನು ತಾವು ಸೋಲಿಸುತ್ತಿದ್ದೇವೆ ಎಂಬ
ಕನಿಷ್ಠ ಜ್ಞಾನವಾದರೂ ಈ ಗಣ್ಯರಿಗಿದೆಯೇ?
ಮುಂಬೈ ಸ್ಫೋಟ ನಡೆದಾಗ ಸಂಜಯ್ದತ್ ಎಳೆಯ ಬಾಲಕನಾಗಿರಲಿಲ್ಲ, ಆತನಿಗೆ 33
ವರ್ಷವಾಗಿತ್ತು. ಸರಿ-ತಪ್ಪುಗಳನ್ನು ಅರ್ಥಮಾಡಿಕೊಳ್ಳದಷ್ಟು ಆತ ಅಮಾಯಕನಾಗಿರಲಿಲ್ಲ.
ಲೋಕಸಭಾ ಸದಸ್ಯ ತಂದೆ ಮತ್ತು ಖ್ಯಾತ ನಟಿ ನರ್ಗಿಸ್ದತ್ನಂತಹ ಪ್ರಭಾವಿ ದಂಪತಿಗಳ
ಮುದ್ದಿನ ಮಗನಾದ ಸಂಜಯ್ ಆತನ ಓರಗೆಯ ಇತರ ಕೆಲವು ಯುವಕರು ಅನುಭವಿಸುತ್ತಿದ್ದಂತಹ
ಅಸಹಾಯಕತೆ, ಅಸುರಕ್ಷತೆ ಹೊಂದಿರಲು ಕಾರಣಗಳೇ ಇಲ್ಲ. ಒಂದಲ್ಲ ಒಂದು ಬಗೆಯ ಅಪರಾಧಗಳಿಗಾಗಿ
ಮುಂಬೈನ ಪತ್ರಿಕೆಗಳಲ್ಲಿ ನಿತ್ಯ ಸುದ್ದಿಯಲ್ಲಿರುತ್ತಿದ್ದ ದಾವೂದ್ ಇಬ್ರಾಹಿಂ,
ಅಬುಸಲೇಮ್, ಶರತ್ಶೆಟ್ಟಿ ಮೊದಲಾದವರ ಅಸಲಿ ಚಹರೆಯೇನು ಎಂದು ತಿಳಿಯದಷ್ಟು ಸಂಜಯ್ದತ್
ಮುಗ್ಧನಾಗಿರಲಿಲ್ಲ. ಬೇಕಿದ್ದರೆ ಆತ್ಮರಕ್ಷಣೆಗಾಗಿ ರೈಫಲ್ ಇಟ್ಟುಕೊಳ್ಳಲು ಪರವಾನಗಿ
ಪಡೆಯುವುದು ಸಂಸದರ ಮಗನಿಗೆ ಕಷ್ಟವೂ ಆಗಿರಲಿಲ್ಲ. ಆತ್ಮರಕ್ಷಣೆಗಿಂತ ಬೇರೆ ದುರುದ್ದೇಶ
ಆತನಿಗೆ ಇತ್ತು ಎನ್ನುವುದನ್ನು ಆಗಿನ ಸಾಂಧರ್ಭಿಕ ಪುರಾವೆಗಳು ಹೇಳುತ್ತವೆ.ಗುಜರಾತ್ನ ಕರಾವಳಿಯಲ್ಲಿ ಬಂದು ಬಿದ್ದಿದ್ದ ಬಂದೂಕು, ಪಿಸ್ತೂಲ್ ಮತ್ತು ಕೈಬಾಂಬುಗಳನ್ನು ದಾವೂದ್ ಸೂಚನೆ ಮೇರೆಗೆ ಮುಂಬೈಗೆ ತಂದಿದ್ದವನು ಅಬುಸಲೇಮ್. ಅವುಗಳನ್ನು ಎಲ್ಲಿ ಸಂಗ್ರಹಿಸಿಡುವುದು ಎನ್ನುವ ಪ್ರಶ್ನೆ ಎದುರಾದಾಗ ನೆನಪಾದವನು ಪರಿಚಯಸ್ಥನಾದ ಸಂಜಯ್ದತ್ ಎಂಬ ನಟ. ದುಬೈನಿಂದ ಬಂದ ಆದೇಶದ ಮೇರೆಗೆ ಈ ಕೆಲಸವನ್ನು ಸಂತೋಷದಿಂದಲೇ ಒಪ್ಪಿಕೊಂಡಿದ್ದ ಸಂಜಯ್ದತ್ ಶಸ್ತ್ರಾಸ್ತ್ರಗಳನ್ನೆಲ್ಲ ತಮ್ಮ ಮನೆಯ ಗ್ಯಾರೇಜ್ನಲ್ಲಿಟ್ಟುಕೊಂಡಿದ್ದ. ಕೆಲವು ದಿನಗಳನಂತರ ಕೈಬಾಂಬುಗಳನ್ನು ವಾಪಸು ಕೊಂಡುಹೋಗುವಂತೆ ಅಬುಸಲೇಮ್ಗೆ ಹೇಳಿದ್ದ ಸಂಜಯದತ್ ಎಕೆ-56 ಬಂದೂಕು ಮತ್ತು ಪಿಸ್ತೂಲ್ಗಳನ್ನು ಮಾತ್ರ ತನ್ನಲ್ಲಿಯೇ ಇಟ್ಟುಕೊಂಡಿದ್ದ. ಒಂದು ಪಿಸ್ತೂಲ್ ಮಾತ್ರ ಇಟ್ಟುಕೊಂಡಿದ್ದರೆ ಅದು ಆತ್ಮರಕ್ಷಣೆಗೆಂದು ವಾದವನ್ನಾದರೂ ಮಾಡಬಹುದಿತ್ತು. ಇದರ ಸುಳಿವು ಪೊಲೀಸರಿಗೆ ಇದ್ದರೂ ಮಾರಿಷಸ್ನಲ್ಲಿದ್ದ ಸಂಜಯ್ದತ್ ದೇಶಕ್ಕೆ ಹಿಂದಿರುಗಲೆಂದು ಕಾಯುತ್ತಾ ಕೂತಿದ್ದರು.ಆದರೆ ಪತ್ರಿಕೆಯೊಂದು ಈ ಸುದ್ದಿ ಪ್ರಕಟಿಸಿದ ಕೂಡಲೇ ವಿಷಯ ತಿಳಿದುಕೊಂಡು ಜಾಗೃತನಾದ ಸಂಜಯ್ದತ್ ಗೆಳೆಯರಿಗೆ ಪೋನ್ ಮಾಡಿ ಮನೆಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವಂತೆ ಕೇಳಿಕೊಂಡಿದ್ದ. ಸಂಜಯ್ದತ್ ಈ ಎಲ್ಲ ಕೃತ್ಯಗಳನ್ನು ಅಮಾಯಕತನದಿಂದ ಇಲ್ಲವೆ ಆತ್ಮರಕ್ಷಣೆಗಾಗಿ ಮಾಡಿದ್ದ ಎಂದು ಹೇಳುವವರನ್ನು ಮೂರ್ಖರೆನ್ನದೆ ಬೇರೆ ಹೇಗೆ ಕರೆಯಲು ಸಾಧ್ಯ? 1993ರಲ್ಲಿ ಆತ ಏನು ಮಾಡಿದ್ದನೋ ಅದು ಬುದ್ದಿಪೂರ್ವಕವಾಗಿ, ಪರಿಣಾಮದ ಬಗ್ಗೆ ಅರಿವಿದ್ದೂ ಮಾಡಿದ್ದ ಅಪರಾಧ. ಎಲ್ಲರಿಗೂ ಅನ್ವಯವಾಗುವ ಕಾನೂನು ಪ್ರಕಾರ ಒಬ್ಬ ವ್ಯಕ್ತಿ ಅಪರಾಧಿ ಎಂದೆನಿಸಿಕೊಳ್ಳಲು ಇನ್ನೇನು ಬೇಕು?
ಸಂಜಯ್ದತ್ನ ನುಣುಪು ಕೆನ್ನೆಗಳಿಂದ ಜಾರಿಬೀಳುತ್ತಿರುವ ಕಣ್ಣೀರು ಒರೆಸಲು ಹೊರಟ ಈ ಗಣ್ಯರಿಗೆ 1993ರಲ್ಲಿ ಮುಂಬೈನ ಹನ್ನೆರಡು ಕಡೆಗಳಲ್ಲಿ ನಡೆದ ಬಾಂಬ್ ಸ್ಫೋಟದಿಂದ ಮೃತರಾದ 257 ಅಮಾಯಕರ ಕುಟುಂಬದ ಸದಸ್ಯರು 20 ವರ್ಷಗಳಿಂದ ಹರಿಸುತ್ತಿರುವ ಕಣ್ಣೀರು ಯಾಕೆ ಕಾಣಿಸುತ್ತಿಲ್ಲವೋ ಗೊತ್ತಿಲ್ಲ. ಸಂಜಯ್ದತ್ ಬಂಧನದಿಂದ ಆತನ ಮೇಲೆ ಚಿತ್ರನಿರ್ಮಾಪಕರು ಹೂಡಿದ್ದ 250 ಕೋಟಿ ರೂಪಾಯಿ ಮುಳುಗಿ ಹೋಗುತ್ತದೆ ಎನ್ನುವುದು ಇನ್ನು ಕೆಲವರ ಚಿಂತೆ. ಬಾಲಿವುಡ್ನ ಬಹುತೇಕ ನಿರ್ಮಾಪಕರ ಹಿನ್ನೆಲೆ ಏನು, ಅವರ ದುಡ್ಡಿನ ಮೂಲ ಯಾವುದು ಎನ್ನುವುದು ಈ ಗಣ್ಯರಿಗೆ ಗೊತ್ತಿಲ್ಲವೇ? ಇದರಿಂದ ಚಿತ್ರರಂಗವನ್ನೇ ನಂಬಿದ್ದ ನೂರಾರು ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಎಂದಿನ ಒಗ್ಗರಣೆ ಬೇರೆ. ಮುಂಬೈನ ಬಟ್ಟೆಗಿರಣಿಗಳು ಮುಚ್ಚಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಾಗ ಇವರ್ಯಾರೂ ಕಣ್ಣೀರು ಹಾಕಿಲ್ಲ. ಮಹಾರಾಷ್ಟ್ರದಲ್ಲಿಯೇ ಬರದ ಬೇಗೆ ಮತ್ತ ಸಾಲದ ಹೊರೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಇವರ್ಯಾರೂ ದನಿ ಎತ್ತಲಿಲ್ಲ. ವಿರೋಧಿಗಳಿಂದ `ಆಸ್ಥಾನ ವಿದೂಷಕ'ನೆಂದು ಆರೋಪಕ್ಕೊಳಗಾಗಿರುವ ನ್ಯಾ.ಕಟ್ಜು ಅವರು ಒಮ್ಮಮ್ಮೆ ಈ ಪಾತ್ರವನ್ನು ಗಂಭೀರವಾಗಿ ಸ್ವೀಕರಿಸಲು ಹೊರಟವರಂತೆ ಕಾಣುತ್ತಾರೆ. ಮಹಾತ್ಮಗಾಂಧೀಜಿಯನ್ನು ಬಳಸಿಕೊಂಡು ಒಂದೆರಡು ವ್ಯಾಪಾರಿ ಚಿತ್ರಗಳಲ್ಲಿ ನಟಿಸಿದ್ದ ನಟನೊಬ್ಬನನ್ನು ಸಮಾಜಸುಧಾರಕನೆಂದು ಬಿಂಬಿಸಲು ಹೊರಟಿರುವ ನ್ಯಾ.ಕಟ್ಜು ಅವರ ಕುರುಡುಕಣ್ಣಿಗೆ ಏನೆನ್ನಬೇಕು. ಅವರಿಗೆ ಕಾಣದೆ ಇದ್ದದ್ದು ಇನ್ನಷ್ಟು ಇದೆ.
ಯುಸೂಪ್ ನಲ್ವಾಲಾ ಜೀವನದಲ್ಲಿ ಮಾಡಿದ್ದ ಏಕೈಕ ತಪ್ಪೆಂದರೆ ಸಂಜಯ್ದತ್ನ ಇನ್ನೊಂದು ಅಕ್ರಮ ಚಟುವಟಿಕೆಯಾಗಿದ್ದ ಮೃಗ ಬೇಟೆಗೆ ಆಗಾಗ ಜತೆಯಲ್ಲಿ ಹೋಗಿದ್ದು. ಉಳಿದಂತೆ ದಾವೂದ್ ಮತ್ತಿತರ ಪಾತಕಿಗಳ ಜತೆ ಆತನಿಗೆ ಯಾವ ಸಂಬಂಧವೂ ಇರಲಿಲ್ಲ. ಸಂಜಯ್ದತ್ ಸೂಚನೆಯಂತೆ ಆತನ ಮನೆಯಲ್ಲಿದ್ದ ಎಕೆ-56 ಮತ್ತು ಪಿಸ್ತೂಲ್ಗಳನ್ನು ಕುಲುಮೆಯಲ್ಲಿ ಹಾಕಿ ನಾಶಪಡಿಸಲು ಪ್ರಯತ್ನಿಸಿದ್ದ ನಲ್ವಾಲಾ ಈಗಾಗಲೇ ಐದುವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ನಲ್ವಾಲಾನಿಗೆ ನೆರವಾಗಿದ್ದ ಕುಲುಮೆಯ ಮಾಲೀಕ ಕೇರ್ಸಿ ಅಡ್ಜೇನಿಯಾ ಎರಡು ವರ್ಷ, ಶಸ್ತ್ರಾಸ್ತ್ರ ನಾಶಕ್ಕೆ ಮೊದಲು ಅವುಗಳನ್ನು ಎರಡು ದಿನ ಮನೆಯಲ್ಲಿ ಇಟ್ಟುಕೊಂಡಿದ್ದ ಜೈಬುನ್ಸಿಯಾ ಖಾದ್ರಿ ಐದು ವರ್ಷ, ಶಸ್ತ್ರಾಸ್ತ್ರಗಳನ್ನು ಸಂಜಯ್ದತ್ ಮನೆಯಿಂದ ಕೊಂಡೊಯ್ದಿದ್ದ ಮನಸೂರ್ ಅಹ್ಮದ್ ಐದುವರ್ಷ, ಸಂಜಯ್ದತ್ಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದ ಇಬ್ರಾಹಿಂ ಮೂಸಾ ಹತ್ತುವರ್ಷ, ಸಂಜಯ್ದತ್ ಮನೆಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದಿದ್ದ ಸಮೀರ್ ಹಿಂಗೋರಾ 9 ವರ್ಷ, ಮತ್ತು ದುಬೈನಲ್ಲಿ ನಡೆದಿದ್ದ ಸಂಚಿನ ಸಭೆಯಲ್ಲಿ ಪಾಲ್ಗೊಂಡಿದ್ದ ಏಜಾಜ್ ಪಠಾಣ್ ಹತ್ತು ವರ್ಷ ಉಗ್ರ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾರೆ. ಇವರೆಲ್ಲರಿಗೂ ಮುಂಬೈ ಟಾಡಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಶಸ್ತ್ರಾಸ್ತ್ರಗಳ ಸಂಗ್ರಹ ಮತ್ತು ನಾಶದ ಪ್ರಕರಣದಲ್ಲಿ ಸಂಜಯ್ದತ್ ಜತೆ ಭಾಗಿಯಾಗಿದ್ದ ಕಾರಣಕ್ಕಾಗಿ ಎರಡರಿಂದ ಹತ್ತುವರ್ಷಗಳ ಜೈಲುಶಿಕ್ಷೆ ಅನುಭವಿಸಿದ್ದ ಏಳು ಮಂದಿಯ ಬಗ್ಗೆ ಯಾರೂ ಹಿಂದೆಯೂ ಮಾತನಾಡಿಲ್ಲ ಮತ್ತು ಈಗಲೂ ಮಾತನಾಡುತ್ತಿಲ್ಲ. ಇವರಲ್ಲಿ ಹೆಚ್ಚಿನವರಿಗೆ ದೊಡ್ಡ ಅಪರಾಧಗಳ ಹಿನ್ನೆಲೆ ಇರಲಿಲ್ಲ, ಅವರು ಮಾಡಿದ್ದ ಏಕೈಕ ಅಪರಾಧ ಎಂದರೆ ಸಂಜಯ್ದತ್ ಜತೆಗಿನ ಸ್ನೇಹ ಮಾಡಿದ್ದು.
ಈ ಏಳು ಮಂದಿಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಲಯ ಸಂಜಯ್ದತ್ ಅವರನ್ನು ಮುಂಬೈ ಬಾಂಬುಸ್ಫೋಟದ ಸಂಚಿನ ಆರೋಪದಿಂದ ಬಿಡುಗಡೆಗೊಳಿಸಿತ್ತು. ಇದರಲ್ಲಿ ಆ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಶಿವಸೇನೆಯ ನಾಯಕ ಬಾಳ್ ಠಾಕ್ರೆ ಪಾತ್ರ ಇತ್ತು. ಮುಸ್ಲಿಮರೆಂದರೆ ಬೆಂಕಿಕಾರುತ್ತಿದ್ದ ಮತ್ತು ಬಾಂಬು ಸ್ಫೋಟದಲ್ಲಿ ಭಾಗವಹಿಸಿದ್ದವರನ್ನೆಲ್ಲ ಗಲ್ಲಿಗೇರಿಸಬೇಕೆಂದು ಮಾತನಾಡುತ್ತಿದ್ದ ಠಾಕ್ರೆ ಅದೇ ಪ್ರಕರಣದ ಒಬ್ಬ ಆರೋಪಿ ಸಂಜಯ್ದತ್ಗೆ ಯಾಕೆ ನೆರವಾದರು? ಇದರಲ್ಲಿ ಅವರಿಗೆ ಏನು ಆಸಕ್ತಿ ಇತ್ತು? ಈ ಪ್ರಶ್ನೆಗಳ ಬಗ್ಗೆ ಈ ವರೆಗೆ ಚರ್ಚೆಯಾಗಿಲ್ಲ. ಈಗ ಬಾಳ್ ಠಾಕ್ರೆ ಮಾದರಿಯಲ್ಲಿಯೇ ಇತರರು ಮಾತನಾಡತೊಡಗಿದ್ದಾರೆ.
`ಮರಣದಂಡನೆಗೆ ಗುರಿಯಾಗಿರುವವರೆಲ್ಲರೂ ಯಾಕೆ ಸಮಾಜದಲ್ಲಿರುವ ಬಡವರು, ದುರ್ಬಲರು, ದಲಿತರು ಮತ್ತು ಅಲ್ಪಸಂಖ್ಯಾತರು ಮಾತ್ರ ಆಗಿರುತ್ತಾರೆ?' ಎಂದು ಡಾ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ಪ್ರಶ್ನಿಸಿದ್ದರು. ಇದೇ ಅಭಿಪ್ರಾಯವನ್ನು ಬೆಂಬಲಿಸುವವರಂತೆ ಮಾತನಾಡಿದ್ದ ಹಿರಿಯ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ` ಯಾಕೆ ಬಡವರು, ಕೆಳಜಾತಿ ಜನರು ಮತ್ತು ವ್ಯವಸ್ಥೆಯನ್ನು ಪ್ರಶ್ನಿಸುವವರು ಮಾತ್ರ ಮರಣದಂಡನೆಗೆ ಗುರಿಯಾಗುತ್ತಾರೆ, ಶ್ರಿಮಂತರು, ಮೇಲ್ಜಾತಿ ಜನರು ಮತ್ತು ವ್ಯವಸ್ಥೆಯ ಪರಿಪಾಲಕರು ಯಾಕೆ ಮರಣದಂಡನೆಗೀಡಾದವರ ಅಪರಾಧಿಗಳ ಪಟ್ಟಿಯಲ್ಲಿ ಕಾಣುತ್ತಿಲ್ಲ' ಎಂದು ಪ್ರಶ್ನಿಸಿದ್ದರು. ಗಲ್ಲಿಗೇರಲು ಸಿದ್ದವಾಗಿ ಜೈಲಲ್ಲಿ ದಿನ ಎಣಿಸುತ್ತಿರುವ ಅಪರಾಧಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಅಧ್ಯಯನವನ್ನು ಯಾರಾದರೂ ಮಾಡಿದರೆ ಡಾ.ಕಲಾಂ ಮತ್ತು ನ್ಯಾ.ಅಯ್ಯರ್ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಮನುಷ್ಯನ ಸಹಜ ಸ್ವಭಾವಗಳಲ್ಲೊಂದಾದ ಅಪರಾಧಗಳಿಗೆ ಜಾತಿ,ಧರ್ಮ ವರ್ಗಗಳ ಭೇದ ಇಲ್ಲದೆ ಇದ್ದರೂ ಅಪರಾಧಿಗಳಲ್ಲಿ ಮಾತ್ರ ಈ ಭೇದ ಯಾಕೆ ಕಾಣುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಹೋದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ನಾವು ನೋಡಲಿಚ್ಚಿಸದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ.
ಪ್ರಶ್ನೆ ಅಷ್ಟೊಂದು ಕಷ್ಟದ್ದಲ್ಲ. ಎಂತಹ ಘನಘೋರ ಅಪರಾಧಗಳನ್ನು ಮಾಡಿದರೂ ಖ್ಯಾತ ವಕೀಲರನ್ನು ನೇಮಿಸಿಕೊಂಡರೆ ಯಾವ ಕಾನೂನಿನಿಂದಲೂ ಕೂದಲು ಕೊಂಕದ ರೀತಿಯಲ್ಲಿ ಪಾರಾಗಬಹುದೆನ್ನುವುದಕ್ಕೆ ಎಷ್ಟಾದರೂ ಉದಾಹರಣೆಗಳನ್ನು ಕೊಡುತ್ತಾಹೋಗಬಹುದು. ಆದರೆ ಆ ಕ್ಷಣದ ಆವೇಶ, ಅಮಾಯಕತನ ಇಲ್ಲವೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಅಪರಾಧ ಮಾಡಿ ಜೈಲು ಸೇರುವ ದುರ್ಬಲ,ಬಡವ, ಕೆಳಜಾತಿಯ ಕೈದಿಗಳಿಗೆ ದುಬಾರಿ ವಕೀಲರನ್ನು ನೇಮಿಸಿಕೊಳ್ಳುವ ಆರ್ಥಿಕ ಶಕ್ತಿಯೂ ಇರುವುದಿಲ್ಲ. ಒಂದೊಮ್ಮೆ ನ್ಯಾಯಾಲಯ ಜಾಮೀನು ನೀಡಿದರೂ ಅದನ್ನು ಒದಗಿಸುವ ಸಾಮರ್ಥ್ಯ ಅವರಲ್ಲಿಲ್ಲದೆ ಜೈಲಲ್ಲಿಯೇ ಇದ್ದು ಬಿಡುತ್ತಾರೆ. ಎಷ್ಟೊ ಸಂದರ್ಭಗಳಲ್ಲಿ ಒಡೆಯನ ಮೇಲಿನ ಆರೋಪವನ್ನು ಬೆದರಿಕೆಯಿಂದಲೋ, ದುಡ್ಡಿನ ಆಸೆಯಿಂದಲೋ ತಮ್ಮ ತಲೆಮೇಲೆ ಹೊತ್ತು ಜೈಲು ಸೇರುವವರೂ ಇದ್ದಾರೆ. ಸಲ್ಮಾನ್ಖಾನ್ ಡ್ರೈವ್ ಮಾಡುತ್ತಿದ್ದ ಕಾರು ಅಪಘಾತ ಮಾಡಿದರೂ ಆರೋಪಿ ಮಾತ್ರ ಆತನ ಚಾಲಕನಾಗಿರುತ್ತಾನೆ.ವಿಚಾರಾಧೀನ ಕೈದಿಗಳಲ್ಲಿ ಬಹುಪಾಲು ಮಂದಿ ಈ ರೀತಿ ದಾಳಗಳಾಗಿ ಬಳಕೆಯಾದವರು. ಸೂತ್ರದಾರರು ಬೇರೆಲ್ಲೊ ಇರುತ್ತಾರೆ. ಅಪರಾಧಗಳ ಸುಪಾರಿ ಕೊಟ್ಟವರನ್ನು ಪೊಲೀಸರು ಬಂಧಿಸಿದ್ದೇ ಕಡಿಮೆ, ಜೈಲು ಸೇರಿದವರಲ್ಲಿ ಹೆಚ್ಚಿನವರು ಕಾಸಿಗಾಗಿ ಸುಪಾರಿ ಪಡೆದು ಕೊಲೆ-ಹಲ್ಲೆ ನಡೆಸಿದವರು. ಸಾಮಾನ್ಯವಾಗಿ ಅವರಿಗೂ ಮತ್ತು ಅವರಿಗೆ ಬಲಿಯಾದವರಿಗೂ ವೈಯಕ್ತಿಕವಾದ ಯಾವ ದ್ವೇಷವೂ ಇರುವುದಿಲ್ಲ.
ಎಂಟುವರ್ಷಗಳ ಹಿಂದೆ ಅಸ್ಸಾಂನ ಗುಡ್ಡಗಾಡು ಜನಾಂಗಕ್ಕೆ ಸೇರಿದ್ದ ಮಾಚಂಗ್ ಲಲುಂಗ್ ಹೆಸರು ಇಡೀ ದೇಶದ ಗಮನ ಸೆಳೆದಿತ್ತು . ಯಾರದ್ದೋ ಮೇಲೆ ಹಲ್ಲೆ ನಡೆಸಿದ್ದ ಕಾರಣಕ್ಕೆ 23ನೇ ವರ್ಷದಲ್ಲಿ ಬಂಧಿತನಾಗಿದ್ದ ಲಲುಂಗ್ 54 ವರ್ಷಗಳನ್ನು ಜೈಲಲ್ಲಿ ಕಳೆದು 77ನೇ ವರ್ಷದಲ್ಲಿ ಬಿಡುಗಡೆಯಾಗಿದ್ದರು. ಅದರ ನಂತರದ ಎರಡೇ ವರ್ಷಗಳಲ್ಲಿ ಅವರು ಮೃತಪಟ್ಟಿದ್ದರು. ಇದು ಒಬ್ಬ ಲಲುಂಗ್ ಅವರಿಗೆ ಸಂಬಂಧಿಸಿದ್ದ ಕತೆಯಲ್ಲ. ಭಾರತದ ಜೈಲುಗಳ ಒಳಗೆ ಇಣುಕಿದರೆ ಇಂತಹ ನೂರಾರು ಲಲುಂಗ್ಗಳು ಪತ್ತೆಯಾಗಬಹುದು. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ದೇಶದ 1356 ಜೈಲುಗಳಲ್ಲಿರುವ ಮೂರುವರೆ ಲಕ್ಷ ಕೈದಿಗಳಲ್ಲಿ ವಿಚಾರಣಾಧೀನ ಕೈದಿಗಳೇ ಶೇಕಡಾ 70ರಷ್ಟಿದ್ದಾರೆ. ಈ ವಿಚಾರಾಧೀನ ಕೈದಿಗಳಲ್ಲಿ ಸುಮಾರು 1.75 ಲಕ್ಷ ಕೈದಿಗಳು ಹಲ್ಲೆ, ಕಳ್ಳತನ ಮೊದಲಾದ ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾಗಿದ್ದವರಂತೆ. ಇವರೆಲ್ಲ ತಮ್ಮ ಮೇಲಿನ ಆರೋಪಿತ ಅಪರಾಧಗಳಿಗೆ ನೀಡಲಾಗುವ ಶಿಕ್ಷೆಯನ್ನು ಎಂದೋ ಅನುಭವಿಸಿಬಿಟ್ಟಿದ್ದಾರೆ. ಇಂತಹ ವಿಚಾರಣಾಧೀನ ಕೈದಿಗಳ ಬಗ್ಗೆ ಶೀಘ್ರಗತಿಯಲ್ಲಿ ವಿಚಾರಣೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ಕೆಳನ್ಯಾಯಾಲಯಗಳಿಗೆ ಸೂಚನೆ ನೀಡುವಂತೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಎಂ.ವೀರಪ್ಪ ಮೊಯಿಲಿ ಕಾನೂನು ಸಚಿವರಾಗಿದ್ದ ಪತ್ರ ಬರೆದಿದ್ದರು. ಇದಕ್ಕಾಗಿ ಬಡ ಮತ್ತು ದುರ್ಬಲ ಕೈದಿಗಳಿಗೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ನೀಡಲು ಕೂಡಾ ಸೂಚನೆ ನೀಡಿದ್ದರು. ಆದರೆ ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ.
ಸಂಜೂಬಾಬಾನಿಗಾಗಿ ಕಣ್ಣೀರು ಸುರಿಸುವವರು ಅದರ ಬದಲಿಗೆ ಜೈಲಲ್ಲಿ ಕೊಳೆಯುತ್ತಿರುವ ಆರೋಪಿಗಳ ಶೀಘ್ರ ವಿಚಾರಣೆಗಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಮುಂದಾದರೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನತೆಯ ವಿಶ್ವಾಸವನ್ನು ಉಳಿಸಲು ನೆರವು ನೀಡಿದ ಪುಣ್ಯವನ್ನಾದರೂ ಕಟ್ಟಿಕೊಳ್ಳಬಹುದು. ಅದನ್ನು ಮಾಡಲಿಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಇಂತಹ `ಗಣ್ಯ ಅಪರಾಧಿ'ಗಳ ನೆರವಿಗೆ ಧಾವಿಸಿ ಪ್ರಜಾಪ್ರಭುತ್ವವನ್ನು ಅಪಹ್ಯಾಸಕ್ಕೀಡು ಮಾಡಬಾರದು, ಬಾಯಿ ಮುಚ್ಚಿಕೊಂಡು ಕೂರಬೇಕು.
No comments:
Post a Comment