Friday, April 19, 2013

ಹರಿದು ಹಂಚಿಹೋಗಿರುವ `ರೈತ ಮತಬ್ಯಾಂಕ್'

ನರಗುಂದ: `ಇಂದಿನ ರಾಜಕೀಯ ಹಾದಿ ತಪ್ಪಲು ಅದನ್ನು ನಿಯಂತ್ರಿಸುವ ಸಾಮರ್ಥ್ಯದ ಚಳವಳಿಗಳು ಇಲ್ಲದಿರುವುದು
ಕಾರಣ' ಎಂದು ಹೇಳುವವರಿದ್ದಾರೆ. ಈ ರೀತಿ ಹೇಳುವವರೆಲ್ಲರೂ ಎಂಬತ್ತರ ದಶಕದ ರೈತ,ಭಾಷಾ ಮತ್ತು ದಲಿತ ಚಳವಳಿಗಳನ್ನು ನೆನಪುಮಾಡಿಕೊಳ್ಳುತ್ತಾರೆ. `ರಾಜಕೀಯದ  ಆಕರ್ಷಣೆಯಿಂದಾಗಿಯೇ ಚಳವಳಿಗಳು ಅಕಾಲ ಸಾವು ಎದುರಿಸುವಂತಾಯಿತು' ಎಂದು ದೂರುವವರೂ ಇದ್ದಾರೆ. ಈ ರೀತಿ ಹೇಳುವವರು ಎಂಬತ್ತರ ದಶಕದ ಉತ್ತರಾರ್ಧದ ಕಾಂಗ್ರೆಸೇತರ ರಾಜಕಾರಣವನ್ನು ಉಲ್ಲೇಖಿಸುತ್ತಾರೆ. ಈ ಎರಡೂ ಅಭಿಪ್ರಾಯಗಳಲ್ಲಿ ಇರುವ ಸತ್ಯಕ್ಕೆ ಸಾಕ್ಷಿಯಾಗಿರುವುದು ನರಗುಂದ.
ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಬೆಳವಣಿಗೆಗಳ ಬೀಜ ಮೊಳಕೆಯೊಡೆದದ್ದು ನರಗುಂದದ ಕಪ್ಪುಮಣ್ಣಿನಲ್ಲಿ. ಮಲಪ್ರಭಾ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿರುವ ನರಗುಂದ, ನವಲಗುಂದ ಮತ್ತು ಸವದತ್ತಿ ತಾಲ್ಲೂಕುಗಳ ರೈತರ ಬಂಡಾಯ ಬೆಳೆಯುತ್ತಾ ಬೇರೆಬೇರೆ ರೂಪಗಳಲ್ಲಿ ರಾಜ್ಯವ್ಯಾಪಿ ವಿಸ್ತರಣೆಗೊಂಡು ಕೊನೆಗೆ  ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿತ್ತು. ರೈತ ಚಳವಳಿಯ ಮೂಲ ಉದ್ದೇಶ, ಅಭಿವೃದ್ಧಿ ಕರ ಮತ್ತು ನೀರಿನ ಶುಲ್ಕದ ರದ್ದತಿ ಹಾಗೂ ವೈಜ್ಞಾನಿಕ ಬೆಲೆ ನಿಗದಿಯಾಗಿತ್ತೇ ಹೊರತು ರಾಜಕೀಯ ಬದಲಾವಣೆ ಅಲ್ಲದೆ ಇದ್ದರೂ ಅದು ನಡೆದು ಹೋಯಿತು. ಆಗಲೇ ಚುನಾವಣೆಯ ಫಲಿತಾಂಶದ ಮೇಲೆ ರೈತ ಚಳವಳಿ ಉಂಟು ಮಾಡಿದ ಪರಿಣಾಮ ರಾಜಕೀಯ ಪಕ್ಷಗಳ ಗಮನಸೆಳೆದದ್ದು. ಇದರಿಂದಾಗಿ ಅಲ್ಲಿಯ ವರೆಗೆ ಅದೃಶ್ಯವಾಗಿದ್ದ `ರೈತ ಮತಬ್ಯಾಂಕ್' ಕಡೆ ರಾಜಕಾರಣಿಗಳು ಕಣ್ಣುಹರಿಸುವಂತಾಯಿತು.
ಮಲಪ್ರಭಾ ರೈತಹೋರಾಟ ಸಮನ್ವಯ ಸಮಿತಿಯ ಸಂಚಾಲಕರಾಗಿದ್ದ ಬಿ.ಆರ್.ಯಾವಗಲ್ ಕ್ರಾಂತಿರಂಗದ ಅಭ್ಯರ್ಥಿಯಾಗಿ 1983ರಲ್ಲಿ ನರಗುಂದ ಕ್ಷೇತ್ರದಿಂದ ಆಯ್ಕೆಯಾಗಿದ್ದು ರಾಜ್ಯ ರೈತಚಳವಳಿಯಲ್ಲಿನ ದೊಡ್ಡ ತಿರುವು. ವಿಚಿತ್ರವೆಂದರೆ ನರಗುಂದದ ಜತೆಯಲ್ಲಿಯೇ ತೀವ್ರಸ್ವರೂಪದ ರೈತ ಚಳವಳಿ ನಡೆದಿದ್ದ ನವಲಗುಂದ ಮತ್ತು ಸವದತ್ತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಇಷ್ಟು ಮಾತ್ರವಲ್ಲ ಈ ಮೂರೂ ಕ್ಷೇತ್ರಗಳಲ್ಲಿ ಗೆದ್ದವರು ಭೂಮಾಲೀಕರಾಗಿದ್ದರು. ಆ ಚುನಾವಣೆಯ  ನಂತರವಾದರೂ ರಾಜಕೀಯ ಮಧ್ಯಪ್ರವೇಶದ ಬಗ್ಗೆ ರೈತ ಚಳವಳಿಯ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಅದರ ನಂತರ ಕರ್ನಾಟಕ ರಾಜ್ಯ ರೈತ ಸಂಘವೇ ನೇರವಾಗಿ ಚುನಾವಣೆಯ ಅಖಾಡಕ್ಕಿಳಿಯಿತು. ಬಾಬಾಗೌಡ ಪಾಟೀಲರು ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯೂ ಆಗಿಬಿಟ್ಟರು.
ಕಳೆದ ಮೂರು ದಶಕಗಳಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಒಂದು ಕಾಲದಲ್ಲಿ ರೈತ ಚಳವಳಿಯಲ್ಲಿದ್ದ ನಾಯಕರು ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್)ಗಳಲ್ಲಿ ಹಂಚಿಹೋಗಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಯುವ ರೈತ ಮುಖಂಡರಾಗಿ ಕಾಂಗ್ರೆಸ್ ವಿರುದ್ಧವೇ ಸ್ಪರ್ಧಿಸಿದ್ದ ಬಿ.ಆರ್.ಯಾವಗಲ್ ಈಗ ನರಗುಂದದಲ್ಲಿ ಅದೇ ಪಕ್ಷದ ಅಭ್ಯರ್ಥಿ. ಅವರ ಎದುರಾಳಿ ಕಳಸಾ-ಬಂಡೂರಿ ಚಳವಳಿಯ ಕಾಲದಲ್ಲಿ ಓಡಾಡುತ್ತಿದ್ದ ಸಿ.ಸಿ. ಪಾಟೀಲ್. ಬಾಬಾಗೌಡ ಪಾಟೀಲ್ ಅವರು ಒಮ್ಮೆ ಬಿಜೆಪಿ ಸೇರಿ ಮತ್ತೆ ಹೊರಬಂದು ಈಗ ಬಿಜೆಪಿ ಸೇರಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣ ನೇರವಾಗಿ ಕೆಜೆಪಿ ಜತೆ ಮೈತ್ರಿ ಮಾಡಿಕೊಂಡು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಇನ್ನೊಂದು ಬಣದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮತ್ತೊಂದು ರಂಗ ಕಟ್ಟಿಕೊಂಡು ಕೆಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.  ಈ ಎಲ್ಲ ಬೆಳವಣಿಗೆಗಳಿಂದಾಗಿ ಪ್ರಾಮಾಣಿಕವಾಗಿ ಸಂಘಟನೆಗೆಂದು ಹೊರಡುವ ನಾಯಕರನ್ನು ಹಳ್ಳಿಗಳಲ್ಲಿ ರೈತರೇ ನಂಬುತಿಲ್ಲ. ರಾಜಕೀಯ ಉದ್ದೇಶದಿಂದಲೇ ಇದನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸುತ್ತಾರೆ. ಈ ಕಾರಣಕ್ಕಾಗಿಯೇ ಹಾವೇರಿಯ ರೈತ ನಾಯಕ ಶಿವಾನಂದ ಗುರುಮಠ್ ಅವರು `ಕರ್ನಾಟಕ ರಾಜ್ಯ ರೈತ (ಚುನಾವಣೇತರ) ಸಂಘಟನೆ'ಯನ್ನು ಕಟ್ಟಿಕೊಂಡಿದ್ದಾರೆ. ಇರುವುದರಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಹಳೆಯ ಚಳವಳಿಯ ನೆನಪಿನ ಚುಂಗು ಹಿಡಿದುಕೊಂಡು ಕೂತಿದೆ.
`1980ರ ಜುಲೈ 21ನೇ ದಿನ ನನಗಿನ್ನೂ ನೆನಪಿದೆ. ನರಗುಂದದಲ್ಲಿ ಎಂಟರಿಂದ ಹತ್ತು ಸಾವಿರದಷ್ಟು ರೈತರು ಸೇರಿದ್ದರು. ಕಚೇರಿ ಪ್ರವೇಶಿಸಲು ಬಿಡದ ತಹಶೀಲ್ದಾರ್ ಪೊಲೀಸರನ್ನು ಕರೆಸಿ ಲಾಠಿ ಪ್ರಹಾರ ಮಾಡಿಸಿದರು.ಕೊನೆಗೆ ಗೋಲಿಬಾರ್ ನಡೆಯಿತು. ಚಿಕ್ಕನರಗುಂದದ ಈರಪ್ಪ ಕಡ್ಲಿಕೊಪ್ಪ ಎಂಬ ಯುವರೈತ ಸ್ಥಳದಲ್ಲಿಯೇ ಮೃತಪಟ್ಟ. ಅದೇ ಹೊತ್ತಿನಲ್ಲಿ ನವಲಗುಂದದಲ್ಲಿ ನಡೆದ ಗೋಲಿಬಾರ್‌ಗೆ ಅಳಗವಾಡಿಯ ಬಸಪ್ಪ ಲಕ್ಕುಂಡಿ ಬಲಿಯಾದ. ಇದರಿಂದ ರೊಚ್ಚಿಗೆದ್ದ ರೈತರು ಮೂವರು ಪೊಲೀಸರನ್ನು ಸಾಯಿಸಿದರು. ಅದರ ನಂತರ ನರಗುಂದ-ನವಲಗುಂದಗಳಲ್ಲಿ ನಡೆದದ್ದು ಭೀಕರ ಪೊಲೀಸ್ ಅಟ್ಟಹಾಸ. ನೂರಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರು, ಸಾವಿರಾರು ರೈತರು ಗಾಯಗೊಂಡರು-ಇವೆಲ್ಲ ವಿಧಾನಸೌಧದಲ್ಲಿ ಹೋಗಿ ಕೂರ‌್ಲಿಕ್ಕೇನು? ಅಲ್ಲಿ ಹೋದವರಾದರೂ ರೈತರ ಹಿತಾಸಕ್ತಿಯ ರಕ್ಷಣೆಯಾದರೂ ಮಾಡಿದರೇ? ಅದೂ ಇಲ್ಲ' ಎಂದು ಸಿಟ್ಟಿನಿಂದಲೇ ಪ್ರಶ್ನಿಸುತ್ತಾರೆ 1980ರ ನರಗುಂದ ರೈತ ಬಂಡಾಯದಲ್ಲಿ ಭಾಗವಹಿಸಿದ್ದ ರೈತ ಮುಖಂಡ ಎಸ್.ಎನ್.ಈರೇಶನವರ್.
ಕಳೆದ ಮೂರು ದಶಕಗಳಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಒಂದು ಕಾಲದಲ್ಲಿ ವರಲಕ್ಷ್ಮಿ ಹತ್ತಿ ರೈತರ ಪಾಲಿನ ಲಕ್ಷ್ಮಿಯಾಗಿತ್ತು. ಈಗ ಶಾಪವಾಗಿದೆ. ಈಗ ರೈತರು ಹತ್ತಿಹಾಕುವುದನ್ನೇ ನಿಲ್ಲಿಸಿ ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ, ಗೋಧಿಯ ಮೊರೆಹೋಗಿದ್ದಾರೆ. ಇತ್ತೀಚಿನ 2-3 ವರ್ಷಗಳಲ್ಲಿ ಬಿಟಿ ಹತ್ತಿಯ ಹುಚ್ಚು ಹತ್ತಿಕೊಂಡಿದೆ. ಭೂಮಿ ಕ್ಷಾರವಾಗುತ್ತಿದೆ. ಕೃಷಿಕೂಲಿಕಾರರ ಅಭಾವ, ಉತ್ಪಾದನಾ ವೆಚ್ಚದಲ್ಲಿ ಏರಿಕೆ, ಇಳುವರಿಯಲ್ಲಿ ಇಳಿಕೆಯಿಂದಾಗಿ ಕೃಷಿ ಯಾರಿಗೂ ಬೇಡದ ವೃತ್ತಿಯಾಗಿದೆ. ಇದರಿಂದಾಗಿ `ಗೈರುಹಾಜರಿ ಜಮೀನ್ದಾರಿಕೆ' ಹೆಚ್ಚಾಗುತ್ತಿದೆ. ರೈತರ ಬದುಕಿನಲ್ಲಿ ಸಮಸ್ಯೆ ಈಗಲೂ ಇದೆ. ಪ್ರಾರಂಭದಲ್ಲಿ ಮಲಪ್ರಭಾ ಜಲಾಶಯದಿಂದ ವರ್ಷಕ್ಕೆ ಐದು ತಿಂಗಳು ನೀರು ಬಿಡ್ತಾ ಇದ್ದರು. ಈಗ 30 ದಿನ ಬಿಟ್ಟರೆ ಹೆಚ್ಚು. ಅಲ್ಲಿಯೂ ನೀರಿಲ್ಲ. ಜಲಾಶಯದಲ್ಲಿ ಹೂಳು ತುಂಬಿದೆ, ಕಾಲುವೆಗಳು ದುರಸ್ತಿಯಾಗಿಲ್ಲ. ಮಳೆ ಕಡಿಮೆಯಾಗುತ್ತಿದೆ. 300-400 ಅಡಿಯಷ್ಟು ಕೊಳವೆ ಬಾಗಿ ಕೊರೆದರೂ ನೀರಿಲ್ಲ. ಇದು ಯಾವುದೂ ಇಲ್ಲಿ ಈ ಬಾರಿಯ ಚುನಾವಣಾ ವಿಷಯ ಅಲ್ಲ. ಹಳ್ಳಿ ಕಟ್ಟೆಯಲ್ಲಿ ಕೂತ ರೈತರು ಬಿಜೆಪಿ-ಕೆಜೆಪಿ ಬಲಾಬಲದ ಚರ್ಚೆಯಲ್ಲಿ ತೊಡಗಿದ್ದರು. ಗೋಲಿಬಾರ್‌ನಲ್ಲಿ ಸಾವಿಗೀಡಾದ ಬಸಪ್ಪ ಲಕ್ಕುಂಡಿ ಮತ್ತು ಈರಪ್ಪ ಕಡ್ಲಿಕೊಪ್ಪನವರಿಗೆ ನಿರ್ಮಿಸಲಾಗಿರುವ ಹುತಾತ್ಮ ಸ್ಮಾರಕಗಳು ಇಂತಹ ಚರ್ಚೆಗಳಿಗೆ ಮೂಕಸಾಕ್ಷಿಯಾಗಿವೆ.
ಮಲಪ್ರಭೆಗೆ ಕಳಸಾ-ಬಂಡೂರಿ ಹಳ್ಳಗಳನ್ನು ಜೋಡಿಸುವ ಮಹದಾಯಿ ಯೋಜನೆಗಾಗಿ ನಡೆದ ಚಳವಳಿ ಮತ್ತೊಮ್ಮೆ ಈ ಭಾಗದ ರೈತರಲ್ಲಿ ಹುರುಪು ತುಂಬಿತ್ತು.  ಇದಕ್ಕಾಗಿಯೇ ರಚನೆಗೊಂಡ ಯುವ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷರಾಗಿದ್ದ ಬಿ.ವಿ.ಸೋಮಾಪುರ 2004ರಲ್ಲಿ ಜೆಡಿ (ಎಸ್)ಟಿಕೆಟ್‌ನಲ್ಲಿ ಸ್ಪರ್ಧಿಸಿ 1300 ಮತಪಡೆದು ಸೋತುಹೋದರು. ಅದರ ನಂತರ ಯುವರೈತ ಮುಖಂಡ ವಿಜಯ ಕುಲಕರ್ಣಿ ಚಳವಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. `ನರಗುಂದದ ಮಣ್ಣಿನಲ್ಲಿಯೇ ಹೋರಾಟದ ಕೆಚ್ಚು ಇದ್ದರೂ ರಾಜಕೀಯದ ಕೈಗೆ ಸಿಕ್ಕಿ ದಾರಿತಪ್ಪುತ್ತಿದೆ' ಎನ್ನುವುದು ಕುಲಕರ್ಣಿಯವರ ವಿಷಾದದ ಮಾತು. ರಾಜ್ಯಜಲ ಸಂಪನ್ಮೂಲ ಸಚಿವರಾಗಿರುವ ಬಸವರಾಜ ಬೊಮ್ಮಾಯಿ  ಚಳವಳಿಯನ್ನು ಬಿಜೆಪಿ ಕಡೆ ಎಳೆದೊಯ್ಯುವ ಪ್ರಯತ್ನವನ್ನು ಮಾಡಿದ್ದರೂ ಅವರು ತೋರಿದ ಆಸಕ್ತಿಯಿಂದಾಗಿ ಒಂದಷ್ಟು ಕಾಮಗಾರಿ ನಡೆದಿದೆ. ಸದ್ಯಕ್ಕೆ ಕೇಂದ್ರ ಸರ್ಕಾರ ವಿವಾದದ ಇತ್ಯರ್ಥಕ್ಕೆ ನ್ಯಾಯಮಂಡಳಿಯನ್ನು ರಚಿಸಿರುವ ಕಾರಣ ಚಳವಳಿ ಕಾವು ಕಳೆದುಕೊಂಡಿದೆ.
`ಸಾಲಮನ್ನಾ, ಪುಕ್ಕಟೆ ವಿದ್ಯುತ್, ನೀರಿನ ಕರ ರದ್ದತಿ ಮೊದಲಾದ ಬೇಡಿಕೆಗಳು ಈಗ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಉದಾರ ಆರ್ಥಿಕ ನೀತಿಯ ಫಲವಾದ ಭೂಸುಧಾರಣೆ, ಎಪಿಎಂಸಿ, ಭೂಸ್ವಾಧೀನ, ಬೀಜ ಮತ್ತು ಪೇಟೆಂಟ್ ಕಾನೂನುಗಳಿಗೆ ಆಗಿರುವ ತಿದ್ದುಪಡಿಗಳು ರೈತನ ಬದುಕಲ್ಲಿ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿವೆ' ಎನ್ನುತ್ತಾರೆ ನರಗುಂದ ರೈತ ಬಂಡಾಯದ ರೂವಾರಿಗಳಲ್ಲೊಬ್ಬರಾದ ಬಿ.ಎಸ್.ಸೊಪ್ಪಿನ್. ಇತ್ತೀಚೆಗೆ ಈ ಚಳವಳಿಯ ಇತಿಹಾಸವನ್ನು ದಾಖಲಿಸುವ ಪುಸ್ತಕವೊಂದನ್ನೂ ಇವರು ಬರೆದಿದ್ದಾರೆ. `ಬದಲಾಗುತ್ತಿರುವ ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ಚಳವಳಿಯನ್ನು ಪುನರ್‌ರೂಪಿಸಲು ಸಾಧ್ಯವಾದರೆ  ಈಗಲೂ ರೈತ ಮತಬ್ಯಾಂಕ್ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯ' ಎನ್ನುವ ವಿಶ್ವಾಸ ಸೊಪ್ಪಿನ್ ಅವರದ್ದು. ಆದರೆ ವಿಧಾನಸೌಧ ಪ್ರವೇಶಿಸುವ ಧಾವಂತದಲ್ಲಿರುವ ರೈತ ನಾಯಕರಿಗೆ ಚಳವಳಿಯನ್ನು ಕಟ್ಟಲು ಬೇಕಾದ ತಾಳ್ಮೆ ಮತ್ತು ವಿಶ್ವಾಸ ಇದ್ದ ಹಾಗಿಲ್ಲ.

Thursday, April 18, 2013

ಸುಂಟರಗಾಳಿಯೊಂದು ಬೀಸಿ ಹೋದ ಮೇಲೆ...

ಗದಗ: ಸುಂಟರಗಾಳಿಯೊಂದು ಬೀಸಿಹೋದ ನಂತರದ ಸ್ಥಿತಿ ಗದಗ ಜಿಲ್ಲೆಯಲ್ಲಿದೆ. `ಹುಲಕೋಟಿಯ ಹುಲಿ' ಮತ್ತು ಅದರ `ಮರಿ'ಗಳು ಸುಮಾರು ಮೂರು-ನಾಲ್ಕು ದಶಕಗಳಿಂದ ಕಷ್ಟಪಟ್ಟು ಕಟ್ಟಿಕೊಂಡಿದ್ದ ರಾಜಕೀಯ ಸಾಮ್ರಾಜ್ಯವನ್ನು ಬಳ್ಳಾರಿ
ಕಡೆಯಿಂದ ಬಂದ ಶ್ರಿರಾಮುಲು ಎಂಬ ಸುಂಟರಗಾಳಿ ಕಳೆದ ಚುನಾವಣೆಯಲ್ಲಿ ಕೆಡವಿಹಾಕಿತ್ತು. ಇಂದಿನ ರಾಜಕೀಯದಲ್ಲಿ ಅಪರೂಪವಾಗಿರುವ ಅಭಿವೃದ್ಧಿಯ ಮುನ್ನೋಟ ಮತ್ತು ಸ್ವಚ್ಚ ರಾಜಕಾರಣದ ಹಂಬಲವನ್ನು ಹೊಂದಿರುವ ಎಚ್.ಕೆ.ಪಾಟೀಲ್ ಮತ್ತು ಡಿ.ಆರ್.ಪಾಟೀಲ್ ಎಂಬ ಸೋದರರು  ರಾಮುಲು ಅವರ `ಕೊಡುಗೈ ದಾನಿ' ವ್ಯಕ್ತಿತ್ವದ ಎದುರು ನಿಸ್ಸಹಾಯಕರಾಗಿದ್ದರು.  ಹಣದ ಬಲದಿಂದ ನೋಡನೋಡುತ್ತಿದ್ದಂತೆಯೇ ರಾಮುಲು ಪ್ರತಿಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದ್ದರು.
ಗತವೈಭವದ ಆ ದಿನಗಳನ್ನು ಮೆಲುಕುಹಾಕುತ್ತಾ ವಿರಹಿಗಳಂತೆ ನಿಟ್ಟುಸಿರು ಬಿಡುತ್ತಿರುವ ಹಳೆಯ ಫಲಾನುಭವಿಗಳನ್ನು ಈಗಲೂ ಗದಗ ನಗರದ ಬೀದಿಗಳಲ್ಲಿ ಕಾಣಬಹುದು. ಕ್ರಿಕೆಟ್, ನಾಟಕ, ಮದುವೆ, ಸಾವು ಎಲ್ಲವೂ ದುಡ್ಡು ಹಂಚಲಿಕ್ಕೆ ಒಂದು ನೆಪವಾಗಿತ್ತು ಅಷ್ಟೆ. ಈ ಊರಲ್ಲಿ ಇಂತಹ ರಾಜಕೀಯ ಸಂಸ್ಕೃತಿಗೆ ಅವಕಾಶ ಇರಲಾರದು ಎಂದು ತಿಳಿದುಕೊಂಡವರೆಲ್ಲ ಮೂಗಿನ ಮೇಲೆ ಬೆರಳಿಡುವ ರೀತಿಯಲ್ಲಿ ಜನ ಕಿಂದರಿಜೋಗಿಯ ಹಿಂದೆ ಹೋಗಿದ್ದ ಮೂಷಕಸಂಕುಲದಂತೆ ಕೊಚ್ಚಿಕೊಂಡು ಹೋಗಿದ್ದರು.
ಎಚ್.ಕೆ.ಪಾಟೀಲರ ಸಹಕಾರ ತತ್ವದ ಪಾಠ, ಡಿ.ಆರ್.ಪಾಟೀಲರ ಗ್ರಾಮಸ್ವರಾಜ್ಯದ ಬಗೆಗಿನ ಬೋಧನೆಯನ್ನು ಕೇಳುವವರೇ ಇಲ್ಲದಂತಾಗಿತ್ತು. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಪರಾಭವ ಹೊಂದಿದ್ದರು. ಇವೆಲ್ಲವೂ ಈಗ ಹಳೆಯ ಕತೆ.  ಐದೇ ವರ್ಷಗಳ ಅವಧಿಯಲ್ಲಿ ರಾಮುಲು ಎಂಬ ಸುಂಟರಗಾಳಿ ಬೀಸಿ ಬಂದಷ್ಟೆ ವೇಗವಾಗಿ ಶಕ್ತಿ ಕಳೆದುಕೊಂಡು ದುರ್ಬಲವಾಗಿ ಹುಟ್ಟಿದೂರಿನಲ್ಲಿಯೇ  ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ.  ಗದಗ ಜಿಲ್ಲೆಯ ಐದು ವರ್ಷಗಳ ಕಿರು ಅವಧಿಯಲ್ಲಿ ನಡೆದ ಕ್ಷಿಪ್ರಗತಿಯ ರಾಜಕೀಯದ ಏಳು-ಬೀಳುಗಳು ರಾಜಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಒಳ್ಳೆಯ ವಸ್ತು.
`ನಿಮ್ಮ ತಪ್ಪು ಇರಲಿಲ್ಲವೇ?' ಎಂದು ಚುನಾವಣಾ ಪ್ರಚಾರದಲ್ಲಿದ್ದ ಎಚ್.ಕೆ.ಪಾಟೀಲರನ್ನು  ಕೇಳಿದೆ. ಅವರು ಎಂದಿನಂತೆ ನಕ್ಕು ಸುಮ್ಮನಾದರು. ಇದೇ ಪ್ರಶ್ನೆಯನ್ನು ಜನರನ್ನು ಕೇಳಿದೆ. `ಮನುಷ್ಯ ಒಳ್ಳೆಯವರು, ಪ್ರಾಮಾಣಿಕರು, ಬುದ್ಧಿವಂತರು. ಆದರೆ ಸಾಮಾನ್ಯ ಮನುಷ್ಯರ ಜತೆ ಬೆರೆಯುತ್ತಿರಲಿಲ್ಲ. ಅವರದ್ದೇನಿದ್ದರೂ ಹುಬ್ಬಳ್ಳಿ ಕ್ಯಾಂಪ್. ಪಾಟೀಲ್ ಸೋದರರು ಮತ್ತು ರಾಮುಲು ಅವರ ವ್ಯಕ್ತಿತ್ವಗಳ ನಡುವೆ ರಾತ್ರಿಹಗಲುಗಳ ಅಂತರ ಇದೆ. ಸೋದರರಿಬ್ಬರದ್ದೂ ಥಟ್ಟನೆ ಆಕರ್ಷಿಸುವ ವ್ಯಕ್ತಿತ್ವ ಅಲ್ಲ, ನಿಧಾನವಾಗಿ ಅರ್ಥಮಾಡಿಕೊಳ್ಳುವಂತಹದ್ದು. ಹಿರಿಯರಿಗೆ ಇದು ಗೊತ್ತಿತ್ತು, ಅಷ್ಟೊಂದು ವ್ಯವಧಾನ ಇಲ್ಲದ ಕಿರಿಯರು ಥಳುಕುಬಳುಕಿನ ರಾಜಕೀಯದ ಹಿಂದೆ ಹೋಗಿಬಿಟ್ಟರು. ಸಂಕೋಚ ಇಲ್ಲದೆ  ಎಲ್ಲರ ಜತೆ ಬೆರೆಯುವ  `ಹಳ್ಳಿಹೈದ' ರಾಮುಲು `ನಮ್ಮವನು' ಎಂದು ಅನಿಸಿದ್ದು ಕೂಡಾ ಪಾಟೀಲ್ ಸೋಲಿಗೆ ಕಾರಣ ಇರಬಹುದು' ಎಂದರು ವಕೀಲರೊಬ್ಬರು.
ಬಹುಶಃ ಎಚ್‌ಕೆ ಬದಲಿಗೆ ಡಿ.ಆರ್. ಪಾಟೀಲರು ಸ್ಪರ್ಧಿಸಿದ್ದರೆ ಗೆದ್ದುಬಿಡುತ್ತಿದ್ದರೋ ಏನೋ ಎಂದು ಹೇಳುವವರೂ ಇದ್ದಾರೆ. ಮೂರು ಬಾರಿ ತಾನು ಪ್ರತಿನಿಧಿಸಿದ್ದ ಕ್ಷೇತ್ರವನ್ನು ಮರುಮಾತಿಲ್ಲದೆ ತಮ್ಮನಿಗೆ ಕೊಟ್ಟುಬಿಟ್ಟವರು ಡಿ.ಆರ್.ಪಾಟೀಲರು. ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿರುವುದು ಮಾತ್ರ ಅಲ್ಲ ತಮ್ಮನ ಗೆಲುವಿಗಾಗಿ ರಾತ್ರಿಹಗಲು ಶ್ರಮಿಸುತ್ತಿರುವವರು ಡಿ.ಆರ್.ಪಾಟೀಲ್. ಭಾರತದ ರಾಜಕಾರಣದಲ್ಲಿ ಇಂತಹ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.
ರಾಜಕಾರಣಿಗಳು ಸೋಲಿನಿಂದ ಪಾಠವನ್ನು ಕಲಿಯುವುದು ಕಡಿಮೆ. ಆದರೆ ಎಚ್.ಕೆ.ಪಾಟೀಲ್ ಸ್ವಲ್ಪ ಭಿನ್ನ ರಾಜಕಾರಣಿ. ತನ್ನ ದೋಷವನ್ನು ಎತ್ತಿ ತೋರಿಸಿದ ಚುನಾವಣಾ ಫಲಿತಾಂಶದಿಂದ ಪಾಠ ಕಲಿತ ಎಚ್‌ಕೆ ಜನರನ್ನು ನೇರವಾಗಿ ಮುಟ್ಟಬಲ್ಲಂತಹ ದಾರಿಯ ಹುಡುಕಾಟದಲ್ಲಿದ್ದಾಗ ಅವರಿಗೆ ತೋಚಿದ್ದು ಶುದ್ಧ ಕುಡಿಯುವ ನೀರು ಪೂರೈಕೆಯ ಯೋಜನೆ.  ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆ ಗದಗ. ಗದಗ ನಗರದಲ್ಲಿಯೇ 20-25 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯಲಿಕ್ಕೆ ನೀರು ಕೊಟ್ಟರಷ್ಟೇ ಸಾಕು ಎನ್ನುವ ವಾತಾವರಣ ಇದೆ. ಇನ್ನು ಶುದ್ಧ ಕುಡಿಯುವ ನೀರನ್ನು ಕೊಡುವವರು ಯಾರು? ತಮ್ಮ ಆಸ್ಪತ್ರೆಯಲ್ಲಿದ್ದ ಇಂತಹದ್ದೊಂದು ಘಟಕವನ್ನು ನೋಡಿದ ಪಾಟೀಲರಿಗೆ ಇದನ್ನು ಸಾರ್ವಜನಿಕರಿಗಾಗಿಯೂ ನಿರ್ಮಿಸಿದರೆ ಹೇಗೆ ಎನ್ನುವ ಯೋಚನೆ ಬಂತು. ಇದರ ಪರಿಣಾಮವಾಗಿ ಗದಗ ಮತ್ತು ಸುತ್ತಮುತ್ತಲಿನ 101 ಕಡೆಗಳಲ್ಲಿ  ದಿನದ 24 ಗಂಟೆಗಳ ಕಾಲ `ಶುದ್ಧ ಜೀವ ಜಲ' ನೀಡುವ ಘಟಕಗಳನ್ನು ಸ್ಥಾಪಿಸಿದ್ದಾರೆ.
`ಶುದ್ಧ ಜೀವ ಜಲ' ಘಟಕದ ಮುಂದೆ ನೀರಿಗೆ ನಿಂತ ಜನಕೊಳವೆಬಾವಿ ನೀರನ್ನೇ ಆಧುನಿಕ ತಂತ್ರಜ್ಞಾನದ ಮೂಲಕ ಏಳುಹಂತಗಳಲ್ಲಿ ಶುದ್ಧೀಕರಿಸಿ ಹತ್ತು ಪೈಸೆಗೆ ಹತ್ತು ಲೀಟರ್‌ನಂತೆ ನೀಡಲಾಗುತ್ತಿದೆ. ಒಂದೊಂದು ಘಟಕಗಳಲ್ಲಿಯೂ ಹತ್ತರಿಂದ ಹದಿನೈದು ಸಾವಿರ ಲೀಟರ್ ನೀರನ್ನು ಜನ ಕೊಂಡೊಯ್ಯುತ್ತಾರೆ. ರಾಜಕೀಯದಲ್ಲಿ ವಿರೋಧಿಗಳಿಗೆ ನೀರು ಕುಡಿಸಿ ಗೆಲ್ಲುವುದುಂಟು. ಎಚ್.ಕೆ. ಪಾಟೀಲ್ ತಾನು ನಂಬಿದ ಜನರಿಗೆ ನೀರು ಕುಡಿಸಿ ಗೆಲ್ಲಲು ಹೊರಟಿದ್ದಾರೆ. `ಪಾಟೀಲರು ಸೋಲದೆ ಇದ್ದಿದ್ದರೆ ಇಂತಹದ್ದೊಂದು ಯೋಜನೆ ಬರುತ್ತಿತ್ತೊ ಇಲ್ಲವೋ ಗೊತ್ತಿಲ್ಲ. ಈ ದೃಷ್ಟಿಯಿಂದ ಅವರು ಸೋತಿದ್ದು ಒಳ್ಳೆಯದೇ ಆಯಿತು' ಎಂದ ಎಚ್‌ಕೆ ಅಭಿಮಾನಿಯೊಬ್ಬ ಮುಗುಳ್ನಗುತ್ತಾ.
ಗದಗ ಕ್ಷೇತ್ರ ಮಾತ್ರವಲ್ಲ ಇಡೀ ಜಿಲ್ಲೆಯ ರಾಜಕೀಯದ ಗಾಳಿ ದಿಕ್ಕು ಬದಲಾಗಿರುವ ಸೂಚನೆಗಳು ಹೋದಲ್ಲಿ ಬಂದಲ್ಲಿ ಸಿಗುತ್ತವೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರೋಣ ಜಿಲ್ಲೆಯ ಗಜೇಂದ್ರಗಡ ಮತ್ತು ನರಗುಂದ ಜಿಲ್ಲೆಯನ್ನು ಹೊರತುಪಡಿಸಿದರೆ ಉಳಿದೆಲ್ಲೆಡೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಗದಗ-ಬೆಟಗೇರಿಯ 35 ಸ್ಥಾನಗಳಲ್ಲಿ 20, ಮುಳಗುಂದದ ಎಲ್ಲ 16 ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ರಾಮುಲು ಗಾಳಿಯ ಬಲದಿಂದಾಗಿ ಗದಗ ಕ್ಷೇತ್ರದಲ್ಲಿ ಗೆದ್ದ ಬಿಜೆಪಿಯ ಶ್ರಿಶೈಲಪ್ಪ ಬಿದರೂರು ಈಗ ಗಾಳಿ ಇಲ್ಲದ ಬಲೂನ್ ಆಗಿದ್ದಾರೆ. ಕೆಜೆಪಿಗೆ ಹೋಗಿಯೇ ಬಿಟ್ಟರು ಎಂದು ಹೇಳಲಾಗುತ್ತಿದ್ದ ಬಿದರೂರು ಕೊನೆಗೂ ಬಿಜೆಪಿಯಲ್ಲಿಯೇ ಉಳಿದು ಅಭ್ಯರ್ಥಿಯಾಗಿದ್ದಾರೆ. ಅವರು ಆ ಕಡೆ ಹೋದರೆ ತಮಗೆ ಟಿಕೆಟ್ ಖಂಡಿತ ಎಂದು ಕಾಯುತ್ತಿದ್ದ ಎಸ್.ಬಿ.ಸಂಕಣ್ಣವರ ಈಗ ಅನಿವಾರ್ಯವಾಗಿ ಕೆಜೆಪಿ ಅಭ್ಯರ್ಥಿ. ಇವರ ಜತೆಗೆ ಬಿಎಸ್‌ಆರ್ ಕಾಂಗ್ರೆಸ್‌ನ ಅನಿಲ್ ಮೆಣಸಿನಕಾಯಿ ಕಣದಲ್ಲಿದ್ದಾರೆ. ಇವರು ಮೂವರು ಲಿಂಗಾಯತ ಪಂಚಮಸಾಲಿ ಬಣಕ್ಕೆ ಸೇರಿದವರಾಗಿರುವುದು ಜಾತಿ ಲೆಕ್ಕಾಚಾರ ಕೂಡಾ ಪಾಟೀಲರ ಪರವಾಗಿರುವಂತೆ ಮಾಡಿದೆ. ಜೆಡಿಎಸ್ ಅಭ್ಯರ್ಥಿಯ ಸುಳಿವೇ ಇಲ್ಲ.
ಹಾವೇರಿ ಜಿಲ್ಲೆ ಬಿಟ್ಟರೆ ಯಡಿಯೂರಪ್ಪನವರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಗದಗ ಜಿಲ್ಲೆಯ ಮೇಲೆ. ಜಗದೀಶ್ ಶೆಟ್ಟರ್ ಅವರಿಗೆ ವೈಯಕ್ತಿಕವಾಗಿ ಸಮೀಪದವರಾಗಿರುವ ಕಳಕಪ್ಪ ಬಂಡಿ (ರೋಣ) ಅವರನ್ನು ಹೊರತುಪಡಿಸಿದರೆ ಉಳಿದ ಮೂವರು ಶಾಸಕರಾದ ಶ್ರಿಶೈಲಪ್ಪ ಬಿದರೂರು (ಗದಗ), ಸಿ.ಸಿ. ಪಾಟೀಲ್ (ನರಗುಂದ) ಮತ್ತು ರಾಮಣ್ಣ ಲಮಾಣಿ (ಶಿರಹಟ್ಟಿ) ಬಹಿರಂಗವಾಗಿಯೇ ಯಡಿಯೂರಪ್ಪನವರ ಜತೆ ಗುರುತಿಸಿಕೊಂಡಿದ್ದರು. ಕೊನೆಗೆ ಮೂವರೂ ಬಿಜೆಪಿಯಲ್ಲಿಯೇ ಉಳಿದರು. ಇದರಿಂದಾಗಿ ಕೆಜೆಪಿ ಕೂಡಾ ಇಲ್ಲಿ ದುರ್ಬಲ. ಸದ್ಯಕ್ಕೆ ಎಲ್ಲ ರಾಜಕೀಯ ಅನುಕೂಲತೆಗಳು ಪಾಟೀಲ್ ಪರವಾಗಿಯೇ ಇದೆ. ಇದನ್ನು ಕಂಡ ರಾಜಕೀಯ ವಿರೋಧಿಗಳು ಪಾಟೀಲ್ ವಿರುದ್ಧ ಏಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಕೊನೆಗಳಿಗೆಯಲ್ಲಿ ಪ್ರಯತ್ನ ನಡೆಸಿದ್ದರು. ಇಂತಹ ಯಾವ ಪ್ರಯತ್ನವೂ ಈ ಬಾರಿ ಎಚ್ಕೆಯವರಿಗೆ ಇರುವ ಅವಕಾಶವನ್ನು ಕಿತ್ತುಕೊಳ್ಳಲಾರದೇನೋ? ಚುನಾವಣಾ ರಾಜಕೀಯವೇನೇ ಇರಲಿ, ಆದರೆ ಎಚ್,ಕೆ. ಪಾಟೀಲ್ ಅವರಂತಹ ರಾಜಕಾರಣಿಗಳು  ವಿಧಾನಸಭೆಯಲ್ಲಿ ಇರಬೇಕಾಗಿರುವುದು ನ್ಯಾಯ.
ಹುಲಕೋಟಿ ಮಾದರಿ
ಪಾಟೀಲ್ ಸೋದರರಲ್ಲಿ ಬಹಳಷ್ಟು ಕಡಿಮೆ ರಾಜಕಾರಣಿಗಳಲ್ಲಿರುವ ಅಭಿವೃದ್ಧಿಯ ಮುನ್ನೋಟ ಇದೆ. ಇದು ಕುಟುಂಬದ ಹಿರಿಯ ಕೆ.ಎಚ್.ಪಾಟೀಲರಿಂದ ವಂಶಪರಂಪರೆಯಾಗಿ ಬಂದ ಗುಣ. ಈ ಮುನ್ನೋಟಕ್ಕೆ ಸಾಕ್ಷಿ ಹುಲಕೋಟಿ.  ಈ ಊರಿನ ಸುಮಾರು 36 ಎಕರೆ ಜಮೀನಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ವಸತಿ ಶಾಲೆ, 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಪ್ರಕೃತಿ ಚಿಕಿತ್ಸೆಯ ಘಟಕ ಮತ್ತು ಕೃಷಿ ವಿಕಾಸ ಕೇಂದ್ರಗಳಿವೆ. ಯುವ ಉದ್ಯಮಶೀಲರಿಗಾಗಿಯೇ ನಿರ್ಮಿಸಲಾಗಿರುವ ನೂರು ಉದ್ಯಮಗಳ ಕೈಗಾರಿಕಾ ಕೇಂದ್ರ ಇದೆ. ಎಲ್ಲವೂ ಸಹಕಾರ ತತ್ವದಡಿಯಲ್ಲಿಯೇ ಸ್ಥಾಪಿಸಲಾಗಿದೆ.
ಸುಮಾರು ಹತ್ತು ಸಾವಿರ ಜನಸಂಖ್ಯೆಯ ಪುಟ್ಟ ಊರಿನಲ್ಲಿ ಗದಗ ನಗರದಲ್ಲಿ ಇಲ್ಲದ ಒಳಚರಂಡಿ ವ್ಯವಸ್ಥೆ ಇದೆ. ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಇದೆ. ಇಲ್ಲಿನ ಸರ್ವಜಾತಿಗಳ ಸಾರ್ವಜನಿಕ ಸ್ಮಶಾನವನ್ನು ಸುಂದರ ಉದ್ಯಾನದ ರೀತಿ ನಿರ್ಮಿಸಿ ನಿರ್ವಹಿಸಲಾಗುತ್ತಿದೆ. ಇಲ್ಲಿನ ವಸತಿ ಶಾಲೆಯಲ್ಲಿ ಕಲಿತ ಕನಿಷ್ಠ 25 ವಿದ್ಯಾರ್ಥಿಗಳು ವಿದೇಶಗಳಲ್ಲಿ ನೆಲೆಸಿದ್ದಾರೆ.
ಗ್ರಾಮೀಣ ಅಭಿವೃದ್ಧಿಗೆ ಹುಲಕೋಟಿಗಿಂತ ಪರಿಪೂರ್ಣವಾದ ಇನ್ನೊಂದು ಮಾದರಿ ಇಡೀ ದೇಶದಲ್ಲಿ ಇರಲಾರದೇನೋ? ಆದರೆ ಪಾಟೀಲ್ ಸೋದರರು ಇದನ್ನು ಕನಿಷ್ಠ ಗದಗ ಜಿಲ್ಲೆಗಾದರೂ  ಯಾಕೆ ವಿಸ್ತರಿಸಲಿಲ್ಲವೋ ಗೊತ್ತಿಲ್ಲ. ಬಹಳಷ್ಟು ಮತದಾರರು ಕೂಡಾ ಕೇಳುವ ಪ್ರಶ್ನೆ ಇದು.

Wednesday, April 17, 2013

ಹಾವೇರಿಯಲ್ಲಿ ಕಾವೇರಿದ ಚುನಾವಣಾ ಕದನ

ಹಾವೇರಿ: ಭಾರತೀಯ ಜನತಾ ಪಕ್ಷದ ಆಳ್ವಿಕೆಯ ಐದು ವರ್ಷಗಳ ಅವಧಿಯಲ್ಲಿ ಸದಾ ಸುದ್ದಿಯಲ್ಲಿದ್ದ ಜಿಲ್ಲೆ ಹಾವೇರಿ. ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳ ವಿಜಯೋತ್ಸಾಹಕ್ಕೆ `ದೃಷ್ಟಿಬೊಟ್ಟು' ಇಟ್ಟಂತೆ ನಡೆದ ರೈತರ ಮೇಲಿನ ಗೋಲಿಬಾರ್, ಬಿಜೆಪಿ ತೊರೆದು ಬಂದ ಬಿ.ಎಸ್.ಯಡಿಯೂರಪ್ಪನವರ ಶಕ್ತಿ ಪ್ರದರ್ಶನದ ಸಮಾವೇಶ, ಒಂದು ಜಿಲ್ಲೆಯ
ಬಹುಪಾಲು ಬಿಜೆಪಿ ಶಾಸಕರ ಪಕ್ಷಾಂತರ... ಎಲ್ಲವೂ ನಡೆದದ್ದು ಈ ಜಿಲ್ಲೆಯಲ್ಲಿ.
ಕಳೆದ ಚುನಾವಣೆಯಲ್ಲಿ ಇಲ್ಲಿನ ಆರರಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅವರಲ್ಲಿ ನಾಲ್ಕು ಮಂದಿಯ ಜತೆಗೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿವರಾಜ್ ಸಜ್ಜನರ್ ಕೂಡಾ ಈಗ ಕೆಜೆಪಿ ಅಭ್ಯರ್ಥಿಗಳು. ಯಡಿಯೂರಪ್ಪ  ಸ್ಪರ್ಧಿಸದೆ ಇದ್ದರೂ ಈ ಜಿಲ್ಲೆ ಅವರ ಪಾಲಿನ ಪ್ರತಿಷ್ಠೆಯ ಕಣ. ಇಲ್ಲಿ ಅವರು ಗೆದ್ದರೆ ಕೆಜೆಪಿ ಚುನಾವಣೆಯನ್ನು ಅರ್ಧ ಗೆದ್ದಂತೆ.
ತನ್ನನ್ನು ನಂಬಿಕೊಂಡು ಬೆನ್ನಹಿಂದೆ ಬಂದ ಐದು ಮಂದಿ ಬೆಂಬಲಿಗರನ್ನು ಇಲ್ಲಿ ಗೆಲ್ಲಿಸುವ ಜತೆಯಲ್ಲಿ ಕೊನೆಕ್ಷಣದಲ್ಲಿ ಕೈಕೊಟ್ಟ `ನೀಲಿ ಕಣ್ಣಿನ ಹುಡುಗ' ಬಸವರಾಜ್ ಬೊಮ್ಮಾಯಿ ಅವರನ್ನು ಸೋಲಿಸುವ ಸವಾಲು ಯಡಿಯೂರಪ್ಪನವರ ಮುಂದಿದೆ. ಇದಕ್ಕಾಗಿ ಜಾತಿ,ದುಡ್ಡು, ಕಣ್ಣೀರು ಎಲ್ಲವೂ ಬಳಕೆಯಾಗುತ್ತಿದೆ.  ಸಾದರ ಜಾತಿಗೆ ಸೇರಿದ ಬೊಮ್ಮಾಯಿಯವರಿಗೆ ಇದಿರಾಗಿ ಸಂಖ್ಯೆಯಲ್ಲಿ ಹೆಚ್ಚಿರುವ ಮತ್ತು ಸಂಘಟನಾತ್ಮಕವಾಗಿ ಬಲವಾಗಿರುವ ಪಂಚಮಸಾಲಿ ಬಣಕ್ಕೆ ಸೇರಿರುವ ಬಾಪುಗೌಡ ಪಾಟೀಲರನ್ನು ಶಿಗ್ಗಾವಿ ಕ್ಷೇತ್ರದಲ್ಲಿ ಯಡಿಯೂರಪ್ಪ ಅಖಾಡಕ್ಕಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಣ್ಣುಮುಚ್ಚಿ ಬೊಮ್ಮಾಯಿ ಅವರನ್ನು ಬೆಂಬಲಿಸಿದ್ದ ಪಂಚಮಸಾಲಿ ಸಮುದಾಯ ಈಗ ಕಣ್ಣುಬಿಡುತ್ತಿರುವುದಕ್ಕೆ ಅಲ್ಲಲ್ಲಿ ನಡೆಯುತ್ತಿರುವ ಗುಪ್ತ ಸಭೆಗಳು ಸಾಕ್ಷಿ. `ಇಪ್ಪತ್ತರ ನಂತರ ಎಲ್ಲ ನಿರ್ಧಾರ ಆಗ್ತೈತಿ. ಅಲ್ಲಿಯ ವರೆಗೆ ಸುಮ್ಮನಿರಾಕ ಹೇಳ್ಯಾರೆ, ಅಜ್ಜಾವ್ರ (ಪಂಚಮಸಾಲಿ ಮಠದ ಸ್ವಾಮಿಗಳು) ಹೇಳ್ದಂಗ ಮಾಡ್ತೇವ್ರಿ' ಎನ್ನುವ ಶಿವಾನಂದ ಬಾಗೂರು ಹಿಂದಿನ ದಿನವಷ್ಟೇ ಇಂತಹದ್ದೇ ಗುಪ್ತಸಭೆಯಲ್ಲಿ ಭಾಗವಹಿಸಿ ಬಂದವ.
`ಯಡಿಯೂರಪ್ಪನವರ ಬೆನ್ನಿಗೆ ಬೊಮ್ಮಾಯಿ ಚೂರಿ ಹಾಕಿದರು' ಎನ್ನುವ ಸಾಮಾನ್ಯ ಅಭಿಪ್ರಾಯ ಜನತೆಯಲ್ಲಿದೆ. ಕೆಜೆಪಿ ಸಮಾವೇಶಕ್ಕೆ ಮುನ್ನ ಹಾವೇರಿಯ ಶಿವರಾಜ್ ಸಜ್ಜನರ್ ಮನೆಯಲ್ಲಿ ನಡೆದ `ಟೀ ಪಾರ್ಟಿ'ಯಲ್ಲಿಯೂ ಭಾಗವಹಿಸಿ ಬೆಂಬಲ ಸೂಚಿಸಿದ್ದ ಬೊಮ್ಮಾಯಿ ನಂತರ ಯಾಕೆ ಹಿಂದೆ ಸರಿದರು ಎನ್ನುವುದು ಎಲ್ಲರ ಕುತೂಹಲದ ಪ್ರಶ್ನೆ. ಬಿಜೆಪಿಯಲ್ಲಿಯೇ ಉಳಿದರೂ ಅಲ್ಲಿಯೂ ಇವರೇನು ಸರ್ವಜನಪ್ರಿಯರಲ್ಲ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಇದಿರಾಗಿ ಪ್ರತಿಸ್ಪರ್ಧಿಯೊಬ್ಬನನ್ನು ನಿಲ್ಲಿಸಬೇಕೆಂಬ ರಾಜಕೀಯ ಉದ್ದೇಶದಿಂದಲೇ ಯಡಿಯೂರಪ್ಪನವರು  ಬೊಮ್ಮಾಯಿ ಅವರನ್ನು ಬೆಳೆಸಿದ್ದರು. ಇದಕ್ಕಾಗಿಯೇ ಜಲಸಂಪನ್ಮೂಲದಂತಹ ಪ್ರಮುಖ ಖಾತೆಯನ್ನು ವಹಿಸಿಕೊಡುವ ಜತೆಯಲ್ಲಿ ರಾಜಕೀಯ ಬೆಂಬಲವನ್ನು ಅವರಿಗೆ ಧಾರೆಯೆರೆದಿದ್ದರು. ಈ ಹುನ್ನಾರವನ್ನು ಬಲ್ಲ ಶೆಟ್ಟರ್ ಹೃತ್ಪೂರ್ವಕವಾಗಿ ಬೊಮ್ಮಾಯಿ ಗೆಲುವಿಗೆ ಪ್ರಯತ್ನಿಸುತ್ತಾರೆ ಎಂದು ಹೇಳಲಾಗದು.   
ಹಾವೇರಿ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಸೇನಾಪತಿ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ. ಬೊಮ್ಮಾಯಿಯವರಂತೆ ಉದಾಸಿಯವರಿಗೂ ಯಡಿಯೂರಪ್ಪನವರು ಪ್ರಮುಖವಾದ ಲೋಕೋಪಯೋಗಿ ಖಾತೆಯನ್ನು ನೀಡಿ ರಾಜಕೀಯವಾಗಿ ಪ್ರೊತ್ಸಾಹ ನೀಡಿದ್ದರು. ಮುಂಬೈ ಕರ್ನಾಟಕದ ಮಟ್ಟಿಗೆ ಉದಾಸಿ-ಬೊಮ್ಮಾಯಿ ಇಬ್ಬರೂ ಯಡಿಯೂರಪ್ಪನವರ ಎಡಗೈ-ಬಲಗೈಗಳಾಗಿದ್ದವರು. ಉದಾಸಿ ವಿಶ್ವಾಸ ಭಂಗಗೊಳಿಸದೆ ಯಡಿಯೂರಪ್ಪನವರ ಜತೆಯಲ್ಲಿಯೇ ಉಳಿದಿದ್ದಾರೆ.
ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಇನ್ನೊಬ್ಬ ಬಂಟ ಉಮೇಶ್ ಕತ್ತಿ ಬಿಜೆಪಿ ಲೋಕಸಭಾ ಸದಸ್ಯನಾದ ತನ್ನ ಸೋದರನ ಕಾರಣಕ್ಕಾಗಿ ಪಕ್ಷದಲ್ಲಿಯೇ ಉಳಿದರೆಂದು ಹೇಳಲಾಗುತ್ತಿದೆ. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಉದಾಸಿಯವರೂ ಎದುರಿಸಿದ್ದಾರೆ. ಆದರೆ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಗನ ರಾಜಕೀಯ ಭವಿಷ್ಯವನ್ನು ಲೆಕ್ಕಿಸದೆ ಅವರು ಕೆಜೆಪಿ ಜತೆ ಗುರುತಿಸಿಕೊಂಡಿದ್ದಾರೆ.
ಬಿಜೆಪಿ ಈಗಾಗಲೇ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿ ಅವರನ್ನು ಅಮಾನತ್‌ಗೊಳಿಸಿದೆ.ವೈಯಕ್ತಿಕವಾಗಿ ಉದಾಸಿ ಅವರಿಗೆ ತಾವು ಎದುರಿಸುತ್ತಿರುವ ಈ ಚುನಾವಣೆ ಸೆಮಿಫೈನಲ್, ಇನ್ನೊಂದು ವರ್ಷಕ್ಕೆ ಮಗ ಎದುರಿಸಲಿರುವ ಮುಂದಿನ ಲೋಕಸಭಾ ಚುನಾವಣೆಯೇ ಫೈನಲ್. ಈ ಹಿನ್ನೆಲೆಯಲ್ಲಿ ತಮ್ಮ ಹಾಗೂ ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಾವೇರಿ ಜಿಲ್ಲೆಯಲ್ಲಿ ಕೆಜೆಪಿಯನ್ನು ಗೆಲ್ಲಿಸುವುದು ಉದಾಸಿ ಅವರಿಗೆ ಅನಿವಾರ್ಯ.
ತಾವೂ ಸೇರಿದಂತೆ ನಾಲ್ವರು ಹಾಲಿ ಶಾಸಕರಾದ ನೆಹರೂ ಓಲೇಕಾರ್ (ಹಾವೇರಿ) ಜಿ.ಶಿವಣ್ಣ (ರಾಣೆಬೆನ್ನೂರು), ಮತ್ತು ಸುರೇಶ್‌ಗೌಡ ಪಾಟೀಲ್ (ಬ್ಯಾಡಗಿ) ಕೆಜೆಪಿಯಲ್ಲಿರುವುದು ಉದಾಸಿ ಅವರು ಹೊಂದಿರುವ ಅನುಕೂಲತೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಾನಗಲ್, ಬ್ಯಾಡಗಿ ಮತ್ತು ಹಿರೇಕೆರೂರಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವುದು ಕೆಜೆಪಿ.
ಮೂಲತಃ ಜನತಾ ಪರಿವಾರಕ್ಕೆ ಸೇರಿದ್ದ ಉದಾಸಿ ಅವರಿಗೆ ಇದು ಎಂಟನೆ ಚುನಾವಣೆ. ಹಿಂದಿನ ಏಳು ಚುನಾವಣೆಗಳಲ್ಲಿ ಐದರಲ್ಲಿ ಗೆದ್ದಿದ್ದಾರೆ. ಹಿಂದಿನ ಏಳು ಚುನಾವಣೆಗಳಲ್ಲಿಯೂ ಉದಾಸಿ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು ಕಾಂಗ್ರೆಸ್ ಪಕ್ಷದ ಮನೋಹರ್ ತಹಶೀಲ್ದಾರ್. ಈ ಬಾರಿಯೂ ಅವರೇ ಎದುರಾಳಿ. ವಿಚಿತ್ರವೆಂದರೆ ಚುನಾವಣೆಯಲ್ಲಿ ಜಾತಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳಲಾಗುತ್ತಿದ್ದರೂ ಇಬ್ಬರು ಅಭ್ಯರ್ಥಿಗಳಿಗೂ ಹೇಳಿಕೊಳ್ಳುವಂತಹ ಜಾತಿ ಬಲ ಇಲ್ಲ. ಉದಾಸಿ ಅವರ ಲಿಂಗಾಯತ ಬಣವಾದ ಬಣಜಿಗರ ಸಂಖ್ಯೆ ಅವರ ಸ್ವಂತ ಕ್ಷೇತ್ರವಾದ ಹಾನಗಲ್‌ನಲ್ಲಿ ಕಡಿಮೆ.
ಹಿಂದುಳಿದ ಬೆಸ್ತ ಜಾತಿಗೆ ಸೇರಿದ ಮನೋಹರ್ ತಹಶೀಲ್ದಾರ್ ಅವರ ಜಾತಿಯವರನ್ನು ದೂರದರ್ಶಕ ಹಿಡಿದುಕೊಂಡು ಹುಡುಕಬೇಕು. ಈ ದೃಷ್ಟಿಯಿಂದ ಹಾನಗಲ್ ಮಟ್ಟಿಗೆ ಚುನಾವಣೆ ಜಾತ್ಯತೀತವಾದುದು. `ಬಿಜೆಪಿಯಲ್ಲಿದ್ದಾಗ ಈ ವೈಶಿಷ್ಟತೆಯ ಲಾಭವನ್ನು ಪಡೆದುಕೊಳ್ಳಲಾಗಿರಲಿಲ್ಲ. ಪ್ರಾರಂಭದಿಂದಲೂ ನನ್ನನ್ನು ಬೆಂಬಲಿಸುತ್ತಾ ಬಂದಿದ್ದ ಮುಸ್ಲಿಂ ಮತದಾರರು ಬಿಜೆಪಿಯಿಂದ ಸ್ಪರ್ಧಿಸಿದ್ದ ಕಳೆದೆರಡು ಚುನಾವಣೆಗಳಲ್ಲಿ ದೂರವಾಗಿದ್ದರು. ಈಗ ಮತ್ತೆ ಹತ್ತಿರವಾಗಿದ್ದಾರೆ. ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಕೇರಿಗಳಲ್ಲಿಯೇ ನಮ್ಮ ಅಭ್ಯರ್ಥಿಗಳು ಗೆದ್ದಿರುವುದು ಇದಕ್ಕೆ ಸಾಕ್ಷಿ' ಎನ್ನುತ್ತಾರೆ ಸಿ.ಎಂ.ಉದಾಸಿ.
ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹುಬ್ಬಳ್ಳಿ ಕೇಂದ್ರ ಸ್ಥಾನವಾಗಿರುವಂತೆ ಕೆಜೆಪಿಗೆ ಹಾವೇರಿ. ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳ ತವರೂರಾಗಿರುವ ಅವಿಭಜಿತ ಧಾರವಾಡ ಜಿಲ್ಲೆಯ ಚುನಾವಣೆ ಬಿಜೆಪಿ ಪಾಲಿಗೂ ಪ್ರತಿಷ್ಠೆಯ ಪ್ರಶ್ನೆ. ಕೆಜೆಪಿ-ಬಿಜೆಪಿ ನಡುವಿನ ನಿಜವಾದ ರಾಜಕೀಯ ಸಮರಕ್ಕೆ ಹಾವೇರಿ ಜಿಲ್ಲೆ ರಣರಂಗವಾಗಲಿದೆ. ಈ ಎರಡು ಪಕ್ಷಗಳ ಹೊಡೆದಾಟವನ್ನು ದೂರದಿಂದಲೇ ನೋಡುತ್ತಿರುವ  ಕಾಂಗ್ರೆಸ್ ಪಕ್ಷ ಯುದ್ಧಕ್ಕಿಳಿಯದೆ ಯುದ್ಧದ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ.
`ಅತ್ತ ಸಾಯಂಗಿಲ್ಲ, ಇತ್ತ ಬದುಕೊಂಗಿಲ್ಲ...'
ಚುನಾವಣಾ ರಾಜಕೀಯದ ಗದ್ದಲದಲ್ಲಿ ಐದು ವರ್ಷಗಳ ಹಿಂದೆ ರೈತರ ಮೇಲೆ ನಡೆದ ಗೋಲಿಬಾರ್ ಘಟನೆ ಈ ಜಿಲ್ಲೆಯ ಸಾಮಾನ್ಯ ಮತದಾರನ ನೆನೆಪಿನಿಂದಲೂ ಮರೆಯಾಗಿ ಹೋಗಿದೆ. ಮೃತಪಟ್ಟ ಇಬ್ಬರು ರೈತರಾದ ಪುಟ್ಟಪ್ಪ ಹೊನ್ನತ್ತಿ ಮತ್ತು ಸಿದ್ದಲಿಂಗಪ್ಪ ಚೂರಿ ಕುಟುಂಬಗಳ ಸದಸ್ಯರು ಕೂಡಾ `ಸಮಸ್ಯೆ ಏನೂ ಇಲ್ಲಾರಿ, ಆರಾಮವಾಗಿದ್ದೀವಿ' ಎಂದು ಹೇಳುವಷ್ಟು ನಿಶ್ಚಿಂತೆಯಾಗಿದ್ದಾರೆ. ಚುನಾವಣೆಯಲ್ಲಿ ಪ್ರಧಾನ ವಿಷಯವಾಗಿ ರಾಜಕೀಯ ಪಕ್ಷಗಳನ್ನು `ಸತ್ತವರು ರೈತರಲ್ಲ ಗೂಂಡಾಗಳು' ಎಂದು ನಾಲಗೆ ಸಡಿಲಬಿಟ್ಟು ಮಾತನಾಡಿದ್ದ ಹಾವೇರಿ ಶಾಸಕ ನೆಹರೂ ಓಲೇಕಾರ್ ಕೆಜೆಪಿಯಿಂದ  ಮರು ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಗೋಲಿಬಾರ್ ಘಟನೆಯ ಬಗ್ಗೆ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಜಗನ್ನಾಥ್ ಶೆಟ್ಟಿ ಆಯೋಗದ ವರದಿ ವಿಧಾನಸೌಧದಲ್ಲಿ ಎಲ್ಲೋ ದೂಳು ತಿನ್ನುತ್ತಾ ಬಿದ್ದಿದೆ.
ಗಾಯಗೊಂಡಿದ್ದ ಹದಿಮೂರು ಮಂದಿ ಮಾತ್ರ ನರಕಯಾತನೆ ಅನುಭವಿಸುತ್ತಿದ್ದಾರೆ. `ಗುಂಡು ಬಿದ್ದು ಸತ್ತ್ ಹೋಗಿದ್ರೆ ಮನಿಮಂದಿಗೆ ಒಂದಿಷ್ಟ್ ರೊಕ್ಕ ಬರ‌್ತಿತ್ತು. ಈಗ ಅತ್ತ ಸಾಯಂಗಿಲ್ಲ, ಇತ್ತ ಬದುಕೊಂಗಿಲ್ಲ ತ್ರಿಸಂಕು ಸ್ಥಿತಿ ಆಗೈತೆ. ಇದರಿಂದ ಪಾರು ಮಾಡಿ' ಎಂದು ಕೈಮುಗಿಯುತ್ತಾನೆ ಆಲದಕಟ್ಟಿಯ ಅಬ್ದುಲ್ ರಜಾಕ್. ಇದೇ ಸ್ಥಿತಿ ಉಳಿದವರದ್ದು. ಗುಂಡು ತಗಲಿದ್ದ ಈತನ ಬಲಗೈ ಸಂಪೂರ್ಣ ನಿಷ್ಕ್ರೀಯವಾಗಿದೆ. ಹಮಾಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಜಾಕ್ ಕುಟುಂಬಕ್ಕೆ ಈಗ ನಾಲ್ವರು ಹೆಣ್ಣುಮಕ್ಕಳು ಮಾಡುವ ಕೂಲಿ ಕೆಲಸವೇ ಜೀವನಾಧಾರ. ಇನ್ನೊಬ್ಬ ಗಾಯಾಳು ಹೆಡಿಗ್ಗೊಂಡದ ಮಲ್ಲಪ್ಪ ಬಣಕಾರ್ ಅವರದ್ದೂ ಇದೇ ಸ್ಥಿತಿ. ತೋಳಿಗೆ ಗುಂಡು ತಗಲಿದ ನಂತರ ಬೇಸಾಯ ಮಾಡಲಿಕ್ಕಾಗದೆ ಇದ್ದ ಎರಡು ಎಕರೆ ಹೊಲವನ್ನು ಲಾವಣಿಗೆ ಕೊಟ್ಟಿದ್ದಾರೆ.
`ಮೂರೂ ಹೊತ್ತು ತೋಳು ಹರಿತೈತಿ, ನೋವ್ ಮರ‌್ಯಾಕ್ ಇಂಜಕ್ಷನ್ ಚುಚ್ಚಿಸಿಕೊಂಡು ಜೀವ್ನಾ ಸಾಕಾಗಿಹೋಗೈತಿ' ಎನ್ನುತ್ತಾರೆ ಬಣಕಾರ್.ಪೊಲೀಸರ ಲಾಠಿ ಏಟಿನಿಂದಾಗಿ ಬಲ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ನೆಲೋಗಲ್‌ನ ವೀರಭದ್ರ ಬಸವನಗೌಡರಿಗೆ ಆಗಾಗ ತಲೆ ಸುತ್ತುವುದರಿಂದ ಒಬ್ಬಂಟಿಯಾಗಿ ಮನೆಯಿಂದ ಹೊರಗೆ ಕಾಲಿಡುವ ಹಾಗಿಲ್ಲ. ಇವರೂ ಇದ್ದ ಮೂರು ಎಕರೆ ಜಮೀನನ್ನು ಲಾವಣಿಗೆ ಕೊಟ್ಟು ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಗಾಯಾಳುಗಳಿಗೆಲ್ಲ ಪ್ರಾರಂಭದಲ್ಲಿ 25 ರಿಂದ 50 ಸಾವಿರ ರೂಪಾಯಿ ಕೊಟ್ಟು ಕೈತೊಳೆದುಕೊಂಡ ಸರ್ಕಾರ ಆ ಮೇಲೆ ಇವರ ಕಡೆ ಕಣ್ಣೆತ್ತಿ ನೋಡಿಲ್ಲ.  ನ್ಯಾ.ಜಗನ್ನಾಥ್ ಶೆಟ್ಟಿ ಆಯೋಗ ಶಿಫಾರಸು ಮಾಡಿದಂತೆ ಗಾಯಾಳುಗಳಾಗಿರುವ ತಮಗೆ ತಲಾ ಮೂರು ಲಕ್ಷ ರೂಪಾಯಿ ನೀಡಬೇಕೆಂದು ಕೋರಿ ಕನಿಷ್ಠ ಹತ್ತು ಬಾರಿ ಬೆಂಗಳೂರಿಗೆ ಹೋಗಿ ಅರ್ಜಿ ನೀಡಿ ಬಂದಿದ್ದಾರೆ.
`ಗೋಲಿಬಾರ್ ನಡೆದದ್ದು ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು. ಆ ಸಮಸ್ಯೆ ಈಗಲೂ ಇದೆ. ಈ ಜಿಲ್ಲೆಯಲ್ಲಿ ತುಂಗಾಭದ್ರಾ, ವರದಾ, ಕುಮದ್ವತಿ ಮತ್ತು ಧರ್ಮಾ ನದಿಗಳು ಹರಿಯುತ್ತಿದ್ದರೂ ನೀರಾವರಿ ಯೋಜನೆಗಳೇ ಇಲ್ಲ. ಏನಿದ್ದರೂ ಪಂಪ್‌ಸೆಟ್ ನೀರಾವರಿ. ಇವೆಲ್ಲವೂ ಚುನಾವಣೆಯ ಕಾಲದಲ್ಲಿ ಚರ್ಚೆಗೆ ಬರಬೇಕಿತ್ತು. ಯಾರೂ ಮಾತನಾಡುವವರೇ ಇಲ್ಲ. ರೈತರೂ ಪರಿಸ್ಥಿತಿಗೆ ಒಗ್ಗಿಹೋಗಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಬಿಟಿ ಹತ್ತಿ ವಿರೋಧಿಸಿ ಚಳವಳಿ ನಡೆದ ಜಿಲ್ಲೆಯಲ್ಲಿ ಈಗ ರೈತರು ಅತಿಹೆಚ್ಚಿನ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯುತ್ತಿದ್ದಾರೆ' ಎಂದು ದೀರ್ಘ ನಿಟ್ಟುಸಿರು ಬಿಟ್ಟರು ಕರ್ನಾಟಕ ರಾಜ್ಯ ರೈತ (ಚುನಾವಣೇತರ) ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ್.

Monday, April 8, 2013

ರಾಹುಲ್ ಗಾಂಧಿ ಕಳೆದುಕೊಳ್ಳುತ್ತಿರುವ ಅವಕಾಶ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗದೆ ಏದುಸಿರು ಬಿಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಅನುಭವ ಹೊಸದೇನಲ್ಲ. ವಿವಾದವೇ ಇಲ್ಲದೆ  ಚುನಾವಣಾ ಅಭ್ಯರ್ಥಿಗಳ ಆಯ್ಕೆ ಸುಸೂತ್ರವಾಗಿ ನಡೆದ ಉದಾಹರಣೆ ಕಾಂಗ್ರೆಸ್ ಪಕ್ಷದಲ್ಲಿ  ಇಲ್ಲ. ಟಿಕೆಟ್‌ಗಾಗಿ ಬಹಿರಂಗವಾಗಿ ನಡೆಯುತ್ತಿರುವ ಕಾದಾಟ, ಗುಟ್ಟಾಗಿ ನಡೆಯುವ ಮಸಲತ್ತು, ಪ್ರತಿಭಟನೆ, ಬಂಡಾಯ, ವಶೀಲಿ, ಆಮಿಷ, ಪ್ರಭಾವ, ಕಣ್ಣೀರು, ಜೈಕಾರ, ಧಿಕ್ಕಾರ ...ಇವೆಲ್ಲವೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯ ಭಾಗವೇ ಆಗಿಬಿಟ್ಟಿದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ದೆಹಲಿಯ ಸರ್ಕಾರಿ ಭವನಗಳು, ಹೊಟೇಲ್‌ಗಳು ತುಂಬಿ ತುಳುಕಾಡುವುದು, ಸೋನಿಯಾಗಾಂಧಿ ಮನೆ ಮತ್ತು ಎಐಸಿಸಿ ಕಚೇರಿಗಳಿರುವ ಜನಪಥ ಮತ್ತು ಅಕ್ಬರ್ ರಸ್ತೆ ತುಂಬಾ ಜನಜಂಗುಳಿ ಎಲ್ಲವೂ ಸಾಮಾನ್ಯ ದೃಶ್ಯ. ಆದರೆ ಈ ಬಾರಿ ಹೀಗಾಗಲಿಕ್ಕಿಲ್ಲ ಎಂದು ತಿಳಿದುಕೊಂಡಿದ್ದ ಒಂದಷ್ಟು ಕಡು ಆಶಾವಾದಿಗಳಿದ್ದರು.
ಇತ್ತೀಚೆಗೆ ಹಲವಾರು ವೇದಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ನೂತನ ಉಪಾಧ್ಯಕ್ಷ ರಾಹುಲ್‌ಗಾಂಧಿಯವರು ಮಾತನಾಡಿದ ಆದರ್ಶ ರಾಜಕಾರಣದ ಮಾತುಗಳು ಈ ಆಶಾವಾದಕ್ಕೆ ಕಾರಣ. `ರಾಜಕೀಯ ಅಧಿಕಾರದ ಹಿಂದೆ ಓಡಬೇಡಿ, ಅದು ಪಾಷಾಣ' ಎಂದು ರಾಹುಲ್ ಜೈಪುರ ಚಿಂತನಾ ಶಿಬಿರದಲ್ಲಿ ಎಚ್ಚರಿಸಿದ್ದರು. ಅಲ್ಲಿ ಅವರು ಆಡಿದ ಮಾತುಗಳು ದೇಶದ ಅಮಾಯಕ ಜನರನ್ನು ರೋಮಾಂಚನಗೊಳಿಸಿದ್ದು ಮಾತ್ರವಲ್ಲ ಕಡು ನಿರಾಶವಾದಿಗಳಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಹಿಂದಿನ ಮಾತುಗಳ ಮುಂದುವರಿಕೆಯಂತೆ ನಂತರದ ದಿನಗಳಲ್ಲಿ ಮಾತನಾಡಿದ ರಾಹುಲ್ `ಹೈಕಮಾಂಡ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು' ಎಂದಿದ್ದರು. ಕೊನೆಯದಾಗಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಾರಂಭವಾಗುವಾಗ  `ಅಭ್ಯರ್ಥಿಗಳ ಆಯ್ಕೆ ಸ್ಥಳೀಯ ಮಟ್ಟದಲ್ಲಿಯೇ ನಡೆಯುತ್ತದೆ, ಯಾರೂ ದೆಹಲಿಗೆ ಬರುವ ಅಗತ್ಯ ಇಲ್ಲ' ಎಂದಿದ್ದರು. ಇವೆಲ್ಲವನ್ನು ಹೇಳಿದ ರಾಹುಲ್‌ಗಾಂಧಿಯ ನಾಲಗೆಯ ಪಸೆ ಆರುವುದರೊಳಗಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಅಸಹ್ಯ ಪ್ರದರ್ಶನ ಯಥಾ ಪ್ರಕಾರ ಪ್ರಾರಂಭವಾಗಿತ್ತು.
ರಾಹುಲ್‌ಗಾಂಧಿಯವರಂತೆ, ಅವರ ಅಮ್ಮನೂ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಇಂತಹದ್ದೇ ಆದರ್ಶ ರಾಜಕಾರಣದ ಮಾತುಗಳನ್ನಾಡಿದ್ದು ಮಾತ್ರವಲ್ಲ ಬದಲಾವಣೆಯ ಪ್ರಯತ್ನಕ್ಕೂ ಕೈಹಾಕಿದ್ದರು. ಅಟಲಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ 1999ರಲ್ಲಿ ಎರಡನೇ ಬಾರಿ ಲೋಕಸಭಾ ಚುನಾವಣೆ ಗೆದ್ದಾಗ ಸೋನಿಯಾಗಾಂಧಿ ಕಂಗಾಲಾಗಿದ್ದರು. ಸೀತಾರಾಂ ಕೇಸರಿಯವರನ್ನು ಕೆಳಗಿಳಿಸಿ ಪಕ್ಷದ ಅಧ್ಯಕ್ಷರಾದ ಸೋನಿಯಾ ನಾಯಕತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 119 ಸ್ಥಾನಗಳನ್ನು ಗಳಿಸಿದ್ದ ಕಾಲ ಅದು. ಸೋಲಿಗೆ ಕಾರಣಗಳನ್ನು ಹುಡುಕಿ ಗೆಲುವಿಗೆ ದಾರಿ ತೋರಿಸಲು ಎ.ಕೆ.ಆಂಟನಿ ನೇತೃತ್ವದ 19 ಸದಸ್ಯರ ಸಮಿತಿಯೊಂದನ್ನು ಸೋನಿಯಾಗಾಂಧಿ ರಚಿಸಿದ್ದರು. ಸಮಿತಿ ಸದಸ್ಯರು ಒಂಬತ್ತು ರಾಜ್ಯಗಳಲ್ಲಿ  ಕಾಲ ಓಡಾಡಿ ಅಭಿಪ್ರಾಯ ಸಂಗ್ರಹಿಸಿದ್ದರು. 40 ದಿನಗಳ ಅಧ್ಯಯನದ ನಂತರ ಆಂಟನಿ ಸಮಿತಿ 200 ಪುಟಗಳ ವರದಿಯನ್ನು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದ್ದರು. ಈ ವರದಿಯನ್ನು ಗೌಪ್ಯವಾಗಿಡುವ ಉದ್ದೇಶದಿಂದ ಅದರ ಒಂದು ಪ್ರತಿಯನ್ನು ಮಾತ್ರ ಮಾಡಲಾಗಿತ್ತಂತೆ. (ಯಾಕೆ ಈ ರಹಸ್ಯವೊ ಗೊತ್ತಿಲ್ಲ) ಸೋನಿಯಾಗಾಂಧಿ ಮತ್ತು ಕೆಲವು ಆಪ್ತರನ್ನು ಹೊರತುಪಡಿಸಿದರೆ ಅದನ್ನು ನೋಡಿದವರೂ ಇಲ್ಲ. ದೆಹಲಿಯಲ್ಲಿರುವಾಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರ ಕೈಯಲ್ಲಿದ್ದ ವರದಿ ಮೇಲೆ ಕಣ್ಣಾಡಿಸಿದ್ದ ನನ್ನ ನೆನಪಿನ ಪ್ರಕಾರ ಅದರ ಕೆಲವು ಮುಖ್ಯಾಂಶಗಳು ಹೀಗಿವೆ:
-ಚುನಾವಣೆಗೆ ಅಭ್ಯರ್ಥಿಗಳನ್ನು ಮೂರು ತಿಂಗಳ ಮೊದಲೇ ಆಯ್ಕೆ ಮಾಡಿ ಪ್ರಚಾರಕ್ಕೆ ಅನುಕೂಲ ಮಾಡಿಕೊಡಬೇಕು.
-ಗೆಲುವಿನ ಅವಕಾಶದ ಖಾತರಿ ಇಲ್ಲದೆ ನಾಯಕರ ಪತ್ನಿ ಇಲ್ಲವೆ ಮಕ್ಕಳಿಗೆ ಟಿಕೆಟ್ ನೀಡಬಾರದು.
-ಪಕ್ಷದ ಜಿಲ್ಲಾಸಮಿತಿಗಳು ಶೇಕಡಾ 75ರಷ್ಟು, ಪ್ರದೇಶ ಕಾಂಗ್ರೆಸ್ ಸಮಿತಿ ಶೇಕಡಾ 20ರಷ್ಟು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಶೇಕಡಾ ಐದರಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.
-ಚುನಾವಣೆಯ ಪೂರ್ವದಲ್ಲಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬಾರದು.
-ಪ್ರಚಾರದಲ್ಲಿ ಅಭಿವೃದ್ಧಿಯ ಚರ್ಚೆಗೆ ಮಹತ್ವ ನೀಡಬೇಕು, ಇದಕ್ಕೆ ಅನುಗುಣವಾಗಿ ಚುನಾವಣಾ ತಂತ್ರವನ್ನು ರೂಪಿಸಬೇಕು
-ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯವನ್ನು ಸಂಗ್ರಹಿಸಬೇಕು.
ಇಂತಹ ಮಾನದಂಡಗಳನ್ನು ಶಿಫಾರಸು ಮಾಡಿದ್ದು ಆಂಟನಿ ಸಮಿತಿಯೊಂದೇ ಅಲ್ಲ, 1998ರಲ್ಲಿ ಪಿ.ಎ.ಸಂಗ್ಮಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. 2003ರಲ್ಲಿ ರಾಜಸ್ತಾನ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಡ ವಿಧಾನಸಭಾ ಚುನಾವಣೆ ಸೋತಾಗ ಪ್ರಣಬ್ ಮುಖರ್ಜಿ ಅಧ್ಯಕ್ಷತೆಯ ಸಮಿತಿ ವರದಿಯನ್ನು ನೀಡಿತ್ತು. ಮನಮೋಹನ್‌ಸಿಂಗ್, ಕರುಣಾಕರನ್ ಹೀಗೆ ಪಕ್ಷದ ಹಿರಿಯ ನಾಯಕರೆಲ್ಲ ತಲೆಗೊಂದರಂತೆ ಚುನಾವಣಾ ಸೋಲಿನ ಆತ್ಮಾವಲೋಕನ ಮತ್ತು ಮಾನದಂಡಗಳ ಪಾಲನೆ ಬಗ್ಗೆ ವರದಿಗಳನ್ನು ನೀಡಿದ್ದರು. 2012ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಚತ್ತೀಸ್‌ಗಡಗಳಲ್ಲಿ ಪಕ್ಷ ಪರಾಭವಗೊಂಡ ನಂತರ ಆಂಟನಿ ನೇತೃತ್ವದ ಸಮಿತಿ ವರದಿಯನ್ನು ನೀಡಿತ್ತು. ಇವೆಲ್ಲವೂ 1999ರ ಆಂಟನಿ ವರದಿಯ ಮಾದರಿಯಲ್ಲಿಯೇ ಇವೆ. ಗೆಲುವಿನ ಕಾರ್ಯತಂತ್ರ, ಸೋಲಿನ ಆತ್ಮಾವಲೋಕನ, ಮಾನದಂಡ-ನೀತಿ ಸಂಹಿತೆಗಳ ವರದಿಗಳಿಗೇನು ಕಾಂಗ್ರೆಸ್ ಪಕ್ಷದಲ್ಲಿ ಬರ ಇಲ್ಲ.
`ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಗಳೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು, ದೆಹಲಿಗೆ ಬರಬಾರದು ...ಇತ್ಯಾದಿ ಬುದ್ದಿಮಾತುಗಳನ್ನು ಆಂಟನಿ ವರದಿಯ ದೂಳು ಕೊಡವಿದ ನಂತರವೇ ರಾಹುಲ್‌ಗಾಂಧಿ ಹೇಳಿರುವುದು. ಇದನ್ನು ಪಾಲಿಸುವವರು ಯಾರು? ಪಾಲಿಸುವಂತೆ ಮಾಡುವವರು ಯಾರು?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಾರಿ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣಾ ಸಮಿತಿಗಳಲ್ಲದೆ ಹಿರಿಯ ನಾಯಕರ ನೇತೃತ್ವದಲ್ಲಿ ಪ್ರಾಂತೀಯ ಸಮಿತಿಗಳನ್ನು ಕೂಡಾ ರಚಿಸಿತ್ತು. ಜಿಲ್ಲಾ ಸಮಿತಿ ಅಧ್ಯಕ್ಷರು ಒಂದು ಇಲ್ಲವೆ ಎರಡು ಹೆಸರುಗಳನ್ನು ಮಾತ್ರ ಶಿಫಾರಸು ಮಾಡಬೇಕೆಂದು ತಿಳಿಸಲಾಗಿತ್ತು. ಇಷ್ಟೆಲ್ಲ ಕಸರತ್ತಿನ ನಂತರ ನಡೆದದ್ದು ಮಾತ್ರ ಹಳೆಯ ಪ್ರಹಸನದ ಮರುಪ್ರದರ್ಶನ. ಯಥಾಪ್ರಕಾರ ಬೆಂಬಲಿಗರೊಂದಿಗೆ ನಾಯಕರ ದಂಡು ದೆಹಲಿಗೆ ದಾಳಿ ಹಾರಿತು. ಹೋದವರೆಲ್ಲರೂ ತಮ್ಮ ಸಾಮರ್ಥ್ಯಕ್ಕೆ ಎಟುಕಬಲ್ಲ  ನಾಯಕರನ್ನು ಭೇಟಿ ಮಾಡಿದರು. ಒಂದಷ್ಟು ಮಹಿಳಾ ಆಕಾಂಕ್ಷಿಗಳು ಸೋನಿಯಾ ಮನೆ ಮುಂದೆ ಧರಣಿಯನ್ನೂ ಮಾಡಿದರು. ಇಷ್ಟೆಲ್ಲಾ ನಡೆಯುವಾಗ `ದೆಹಲಿಗೆ ಬರಬೇಡಿ' ಎಂಬ ಆದೇಶ ನೀಡಿದ್ದ ರಾಹುಲ್‌ಗಾಂಧಿ ಎಲ್ಲಿದ್ದರು? ತಮ್ಮ ಆದೇಶ ಉಲ್ಲಂಘಿಸಿದ್ದ ನಾಲ್ಕು ನಾಯಕರಿಗೆ ಟಿಕೆಟ್ ನಿರಾಕರಿಸುವ ಶಿಸ್ತುಕ್ರಮಕೈಗೊಂಡಿದ್ದರೆ ಉಳಿದವರು ಕರ್ನಾಟಕಕ್ಕೆ ಓಡಿಬರುತ್ತಿದ್ದರು. ಇದನ್ನೆಲ್ಲ ನೋಡಿದ ಟಿಕೆಟ್ ವಂಚಿತ ಯುವ ಅಭ್ಯರ್ಥಿಯೊಬ್ಬ `ನಮ್ಮ ನಾಯಕರ ಮಾತು ಕೇಳಿ ದೆಹಲಿಗೆ ಹೋಗದೆ ಇಲ್ಲಿಯೇ ಇದ್ದು ತಪ್ಪು ಮಾಡಿದೆ. ನನ್ನನ್ನು ವಿರೋಧಿಸಿ ಅಲ್ಲಿಗೆ ಹೋದವರೆಲ್ಲರೂ ಸಂಚು ಮಾಡಿ ಟಿಕೆಟ್ ತಪ್ಪಿಸಿದರು' ಎಂದು ಗೋಳಾಡುತ್ತಿದ್ದ.
2008ರಲ್ಲಿ ಸತತ ಎರಡನೆ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಾಗ ಪಕ್ಷದ ಹೈಕಮಾಂಡ್ ಚಿಂತಾಕ್ರಾಂತವಾಗಿತ್ತು. ಆಗಲೂ ಸೋಲಿನ ಕಾರಣಗಳನ್ನು ಹುಡುಕಲು ಎ.ಕೆ.ಆಂಟನಿ ನೇತೃತ್ವದಲ್ಲಿಯೇ ಸಮಿತಿ ರಚಿಸಲಾಗಿತ್ತು. ಬೆಳಕಿಗೆ ಬಾರದ ಈ ವರದಿಯಲ್ಲಿಯೂ `ಕಾಂಗ್ರೆಸ್ ಸೋಲಿಗೆ ಆಂತರಿಕ ಕಚ್ಚಾಟ ಮತ್ತು ಹಿರಿಯ ನಾಯಕರು ಸ್ವಂತ ಕ್ಷೇತ್ರಗಳಲ್ಲಿ ಗೆಲ್ಲಲು ವಿಫಲವಾಗಿದ್ದು ಕಾರಣ' ಎಂಬ ಅಂಶ ಪ್ರಮುಖವಾಗಿ ಉಲ್ಲೇಖವಾಗಿತ್ತಂತೆ. `ಕಾಂಗ್ರೆಸ್ ಸೋಲಿಗೆ ಕಾಂಗ್ರೆಸಿನವರೇ ಸಾಕು, ವಿರೋಧಪಕ್ಷಗಳು ಬೇಕಿಲ್ಲ' ಎನ್ನುವ ವ್ಯಂಗ್ಯೋಕ್ತಿ ರಾಜ್ಯದ ರಾಜಕಾರಣದಲ್ಲಿ ಪ್ರಚಾರದಲ್ಲಿದೆ. ಇದನ್ನು ಸುಳ್ಳೆಂದು ಕಾಂಗ್ರೆಸಿನವರೇ ಹೇಳುವುದಿಲ್ಲ. ಕಳೆದ ವರ್ಷ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ಮಾತನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. 2008ರ ಚುನಾವಣಾ ಕಾಲದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಖರ್ಗೆ ಅವರು ಬಹಿರಂಗವಾಗಿ ಹೇಳಲಾಗದ ಇನ್ನಷ್ಟು ಸತ್ಯಗಳನ್ನು ಬಚ್ಚಿಟ್ಟುಕೊಂಡಿರಬಹುದು.
2008ರ ಕಾಂಗ್ರೆಸ್ ಪಕ್ಷದ ಸೋಲಿಗೆ ದಲಿತ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರೋಕ್ಷವಾಗಿ ಬಿಂಬಿಸಿದ್ದೂ ಕಾರಣ ಎಂದು ಇಂದಿಗೂ ಹೇಳುವವರಿದ್ದಾರೆ. ಆದರೆ ಆಂಟನಿ ಸಮಿತಿ ಎತ್ತಿರುವ ಪ್ರಶ್ನೆಗಳಿಗೆ ಯಾರೂ ಉತ್ತರ ನೀಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿದ್ದ 34 ಮಾಜಿ ಸಚಿವರು ಸೋಲು ಅನುಭವಿಸಿದ್ದರು ಎನ್ನುವುದನ್ನು ಬಹಳ ಮಂದಿ ಮರೆತೇ ಬಿಟ್ಟಿದ್ದಾರೆ. ಸೋಲಿನ ಸರದಾರರ ಪಟ್ಟಿಯಲ್ಲಿ ಎನ್.ಧರ್ಮಸಿಂಗ್, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಎಚ್.ವಿಶ್ವನಾಥ್, ಅಂಬರೀಷ್, ಎಚ್.ಸಿ.ಶ್ರಿಕಂಠಯ್ಯ, ಡಿ.ಬಿ.ಚಂದ್ರೇಗೌಡ, ಎಂ.ಪಿ.ಪ್ರಕಾಶ್, ಕಾಗೋಡು ತಿಮ್ಮಪ್ಪ, ವಸಂತ್ ವಿ.ಸಾಲ್ಯಾನ್,ಎಂ.ವೈ ಮೇಟಿ, ಕೆ.ಬಿ.ಕೋಳಿವಾಡ್, ಶ್ರಿನಿವಾಸಗೌಡ ಮೊದಲಾದವರ ಹೆಸರುಗಳಿವೆ. ಇವರಲ್ಲಿ ಒಂದಷ್ಟು ಮಂದಿ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳೂ ಆಗಿದ್ದರು. ಇವರಲ್ಲಿ ಹತ್ತು ನಾಯಕರು ಗೆದ್ದುಬಿಟ್ಟಿದ್ದರೂ ರಾಜ್ಯದ ರಾಜಕೀಯ ಚಿತ್ರವೇ ಬದಲಾಗಿರುತ್ತಿತ್ತು. ಬೇರೆ ಕ್ಷೇತ್ರಗಳಿಗೆ ಹೋಗಿ ಪ್ರಚಾರಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದ್ದ ಈ ನಾಯಕರನ್ನು ಅವರ ಕ್ಷೇತ್ರಗಳಲ್ಲಿ ಗೆಲ್ಲಿಸಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಪ್ರಚಾರಕ್ಕೆ ಹೋಗಬೇಕಿತ್ತೇ? ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ `ಕಾಲೆಳೆಯುವ ರಾಜಕಾರಣ' ಕೂಡಾ ಕಾರಣ ಎನ್ನುವುದನ್ನು ಆಂಟನಿ ಗುರುತಿಸಿದ್ದಾರೆ. ಹಲವಾರು ನಾಯಕರು ಪಕ್ಷದಲ್ಲಿರುವ ತಮ್ಮ ವಿರೋಧಿಗಳನ್ನು ಸೋಲಿಸಲು ವಿರೋಧಪಕ್ಷಗಳ ಅಭ್ಯರ್ಥಿಗೆ ಹಣಕಾಸು ನೆರವು ನೀಡಿದ್ದ ಪ್ರಕರಣಗಳನ್ನು ಕೂಡಾ ಪಕ್ಷದ ಹಿರಿಯ ನಾಯಕರು ಆಂಟನಿ ಅವರ ಗಮನಕ್ಕೆ ತಂದಿದ್ದರು. ಆದರೆ ಯಾರ ತಲೆಯೂ ಉರುಳಲಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಹಾಕಿದ ಆರೋಪ ಹೊತ್ತವರಿಗೆ ಟಿಕೆಟ್ ನೀಡಿದ ನಂತರ ಯಾವ ತಲೆ ಉರುಳಲು ಸಾಧ್ಯ?
ತಾನು ಕನಸು ಕಾಣುತ್ತಿರುವ ಆದರ್ಶ ರಾಜಕಾರಣವನ್ನು ಕಾರ್ಯರೂಪಕ್ಕೆ ತರಲು ರಾಹುಲ್‌ಗಾಂಧಿ ಈ ಬಾರಿ ಕರ್ನಾಟಕವನ್ನು ಪ್ರಯೋಗಶಾಲೆಯಾಗಿ ಮಾಡಬಹುದಿತ್ತು. ಅಂತಹದ್ದೊಂದು ಅಪೂರ್ವ ಅವಕಾಶ ಕೂಡಿ ಬಂದಿತ್ತು. ಇತ್ತೀಚಿನ ಎಲ್ಲ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಬಹುಮತ ಗಳಿಸಬಹುದೆಂಬ ಭವಿಷ್ಯ ನುಡಿಯುತ್ತಿವೆ.  `ರಾಜಕೀಯ ಆತ್ಮಹತ್ಯೆ' ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ರಾಜಕೀಯ ಪಕ್ಷವೊಂದು `ರಿಸ್ಕ್'ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಂತಹ ಅನುಕೂಲಕರ ಪರಿಸ್ಥಿತಿಯಲ್ಲಿ. ಅಷ್ಟೇನು ಜನಪ್ರಿಯರಲ್ಲದ, ಜಾತಿ ಮತ್ತು ದುಡ್ಡಿನ ಬಲ ಇಲ್ಲದ, ಸಜ್ಜನ, ಪ್ರಾಮಾಣಿಕ, ಕಳಂಕರಹಿತ ಮತ್ತು ಸೇವಾಸಕ್ತ ವ್ಯಕ್ತಿಗಳನ್ನು ಗುರುತಿಸಿ ಟಿಕೆಟ್‌ನೀಡಲು ಇದೊಂದು ಅವಕಾಶ. ಪಕ್ಷದ ಜನಪ್ರಿಯತೆಯ ಅಲೆಯ ಮೇಲೇರಿ ಇಂತಹವರು ಗೆಲುವಿನ ದಡ ಸೇರುವ ಸಾಧ್ಯತೆ ಇರುತ್ತದೆ. ಮುಳುಗುತ್ತಿರುವ ಹಡಗಿನಂತಾಗಿರುವ ಬಿಜೆಪಿ ಇಂತಹ ದಿಟ್ಟತನದ ರಾಜಕೀಯ ನಿರ್ಧಾರವನ್ನು ತೋರಿಸುವ ಸ್ಥಿತಿಯಲ್ಲಿ ಇಲ್ಲ.  ಆದರೆ ಈಗಾಗಲೇ ಬಿಡುಗಡೆಗೊಂಡಿರುವ ಅಭ್ಯರ್ಥಿಗಳ ಪಟ್ಟಿ ಮತ್ತು ಅದರ ಬೆನ್ನಲ್ಲಿಯೇ ಎದ್ದಿರುವ ವಿವಾದಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷ ರಾಹುಲ್‌ಗಾಂಧಿ ತೋರುತ್ತಿರುವ ದಾರಿಯನ್ನು ಬಿಟ್ಟು ಹಳೆಯ ದಾರಿಯಲ್ಲಿಯೇ ಸಾಗುವ ಹಾಗೆ ಕಾಣುತ್ತಿದೆ. ಇಷ್ಟೆಲ್ಲ ಅವಾಂತರಗಳ ನಂತರವೂ ಕಾಂಗ್ರೆಸ್ ಪಕ್ಷವೇ ಚುನಾವಣೆಯಲ್ಲಿ ಬಹುಮತ ಗಳಿಸಬಹುದು, ಆ ಪಕ್ಷವೇ ಸರ್ಕಾರ ರಚಿಸಬಹುದು. ಆದರೆ ಪಕ್ಷ ಗೆದ್ದರೂ ಕೂಡ ಪ್ರಧಾನಮಂತ್ರಿಯಾಗಲು ಹೊರಟ ರಾಹುಲ್‌ಗಾಂಧಿಯ ಆದರ್ಶದ ಸೋಲು ಆಗಲಿದೆ.