Sunday, March 17, 2013

ನ್ಯಾಯಮೂರ್ತಿ ಕಟ್ಜು ಅವರ ತಪ್ಪು ರೋಗನಿದಾನ

ಪತ್ರಕರ್ತರ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿಗೆ ಸಂಬಂಧಿಸಿದ ಹಳೆಯ ವಿವಾದದ ಜೇನುಗೂಡಿಗೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ)ಯ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಮಾರ್ಕಂಡೇಯ ಕಟ್ಜು ಕೈಹಾಕಿದ್ದಾರೆ.
`ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಅರ್ಹತೆಯನ್ನು ಕಾನೂನುಬದ್ಧವಾಗಿ ನಿಗದಿಪಡಿಸುವ ಅಗತ್ಯ ಇದೆ' ಎಂದು ಪ್ರತಿಪಾದಿಸಿರುವ ನ್ಯಾ.ಕಟ್ಜು ಮಾಧ್ಯಮ ರಂಗ ಪ್ರವೇಶಿಸಲು ಅಗತ್ಯವಾದ ಅರ್ಹತೆಯೇನಿರಬೇಕೆಂದು ಸೂಚಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
`ತರಬೇತಿ ಇಲ್ಲದವರ ಪ್ರವೇಶ ಮಾಧ್ಯಮರಂಗದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ. ಈ ರೀತಿ ಬಂದವರು ಮಾಧ್ಯಮರಂಗದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡುತ್ತಿಲ್ಲ' ಎಂದು ಯಥಾಪ್ರಕಾರ ತನ್ನದೇ `ತೀರ್ಪು' ಕೂಡಾ ಅವರು ನೀಡಿದ್ದಾರೆ. `....ಬೇರೆ ಯಾವುದೋ ವಿಷಯದ ಮೇಲೆ ಪಿಎಚ್‌ಡಿಯನ್ನೇ ಪಡೆದುಕೊಂಡಿದ್ದರೂ ಪತ್ರಕರ್ತರಾಗಲು ಬಯಸುವವರು ಕಡ್ಡಾಯವಾಗಿ ಪತ್ರಿಕೋದ್ಯಮದ ಶಿಕ್ಷಣವನ್ನು ಪಡೆದಿರಬೇಕು. ಇದಾದ ನಂತರ ವಕೀಲರಿಗೆ ಬಾರ್ ಕೌನ್ಸಿಲ್ ನೀಡುವಂತೆ ಪತ್ರಕರ್ತರಿಗೂ ಪರವಾನಗಿ ಪತ್ರ ನೀಡಬೇಕು. ಪತ್ರಕರ್ತರು ತಪ್ಪುಮಾಡಿದರೆ ಅವರಿಗೆ ನೀಡಲಾಗಿರುವ ಪರವಾನಗಿಯನ್ನು ವಾಪಸು ಪಡೆಯಬೇಕು....' ಎಂದು ನ್ಯಾ.ಕಟ್ಜು ಮೊದಲ ಪತ್ರಿಕಾ ಹೇಳಿಕೆಯ ನಂತರ ನೀಡಿದ ಸ್ಪಷ್ಟೀಕರಣದಲ್ಲಿ ವಿವರಿಸಿದ್ದಾರೆ.
ಪಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ದಿನದಿಂದ ನ್ಯಾ.ಕಟ್ಜು ಚರ್ಚೆಗೆ ಒಡ್ಡಿರುವ ಹಲವು ವಿಷಯಗಳಲ್ಲಿ ಪತ್ರಕರ್ತರ ಅರ್ಹತೆ ಕೂಡಾ ಒಂದು. ವಕೀಲರು, ವೈದ್ಯರು, ಶಿಕ್ಷಕರಿಗೆಲ್ಲ ನಿರ್ದಿಷ್ಟ ವಿದ್ಯಾರ್ಹತೆ ಮತ್ತು ತರಬೇತಿ ಕಡ್ಡಾಯವಾಗಿರುವಾಗ ಪತ್ರಕರ್ತರಿಗೆ ಯಾಕೆ ಬೇಡ ಎನ್ನುವ ಪ್ರಶ್ನೆಯನ್ನು ನ್ಯಾ.ಕಟ್ಜು ಮಾತ್ರ ಅಲ್ಲ, ಸಾಮಾನ್ಯ ಜನರೂ ಕೇಳುತ್ತಿದ್ದಾರೆ. `
ಪತ್ರಕರ್ತರೆಂದರೆ ರಾಜಕಾರಣಿಗಳು ಇದ್ದ ಹಾಗೆ, ಯಾವುದೇ ಅರ್ಹತೆ ಬೇಡ, ಟಿವಿ ಚಾನೆಲ್‌ಗಳ ಪ್ರವೇಶದ ನಂತರ ಪತ್ರಕರ್ತರಾಗುವುದು ಇನ್ನೂ ಸುಲಭವಾಗಿದೆ. ಓದು-ಬರಹ ಕೂಡಾ ಬೇಡ, ಬಾಯ್ತುಂಬಾ ಮಾತನಾಡಲು ಬಂದರೆ ಸಾಕು ಪತ್ರಕರ್ತರಾಗಬಹುದು' ಎಂಬ ಸಾಮಾನ್ಯ ಜನರ ವ್ಯಂಗ್ಯದ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕುವಂತಹ ಸ್ಥಿತಿಯಲ್ಲಿಯೂ ಯಾರೂ ಇಲ್ಲ.
ಆದರೆ ದೇಶದ ಮಾಧ್ಯಮರಂಗಕ್ಕೆ ಹತ್ತಿರುವ ರೋಗಕ್ಕೆ ಪತ್ರಕರ್ತರ  ಶೈಕ್ಷಣಿಕ ಅರ್ಹತೆ ಮತ್ತು ತರಬೇತಿಯ ಕೊರತೆ ಕಾರಣ ಎಂಬ ಸುಲಭ ತೀರ್ಮಾನಕ್ಕೆ ಬರಬಹುದೇ? ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯಗೊಳಿಸುವುದರಿಂದ ರೋಗಗ್ರಸ್ತ ಮಾಧ್ಯಮರಂಗ ಕಳೆದುಕೊಂಡಿರುವ ಆರೋಗ್ಯವನ್ನು ಮರಳಿ ಪಡೆಯಬಹುದೇ?
ಸ್ಥಳೀಯವಾದ ಸಣ್ಣಪುಟ್ಟ ಹಗರಣಗಳನ್ನು ಪಕ್ಕಕ್ಕೆ ಇಟ್ಟುಬಿಡುವ, ದೇಶದ ಮಾಧ್ಯಮರಂಗದ ನೈತಿಕ ಬುನಾದಿಯನ್ನೇ ಅಲುಗಾಡಿಸಿದ `ಕಾಸಿಗಾಗಿ ಸುದ್ದಿ' ಮತ್ತು `ರಾಡಿಯಾ ಟೇಪ್'ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಖ್ಯಾತ ಪತ್ರಕರ್ತರು, ಉದ್ಯಮಿಯೊಬ್ಬರಿಂದ ಹಣಸುಲಿಗೆ ಮಾಡಲು ಹೊರಟಿದ್ದರೆಂಬ ಆರೋಪಕ್ಕೊಳಗಾಗಿರುವ ಟಿವಿಚಾನೆಲ್‌ನ ಹಿರಿಯ ಪತ್ರಕರ್ತರು, 2ಜಿ ಹಗರಣದಿಂದ ಹಿಡಿದು ಅಕ್ರಮ ಗಣಿಗಾರಿಕೆ ವರೆಗಿನ ಹಲವಾರು ಹಗರಣಗಳಲ್ಲಿ ಫಲಾನುಭವಿಗಳೆಂಬ ಆರೋಪ ಹೊತ್ತಿರುವ ಪತ್ರಕರ್ತರಲ್ಲಿ ಯಾರು ಅನಕ್ಷರಸ್ಥರು? ಯಾರು ಪತ್ರಿಕೋದ್ಯಮದ ಬಗ್ಗೆ ತರಬೇತಿ ಪಡೆಯದವರು ? ವಿಚಿತ್ರವೆಂದರೆ ಪತ್ರಕರ್ತರಿಗೆ ಅರ್ಹತೆಯನ್ನು ನಿಗದಿಪಡಿಸಲು ಹೊರಟಿರುವ ನ್ಯಾ.ಕಟ್ಜು ಅವರು ಮಾಧ್ಯಮ ಸಂಸ್ಥೆಗಳನ್ನು ಸ್ಥಾಪಿಸುವವರಿಗೆ ಏನು ಅರ್ಹತೆ ಇರಬೇಕೆಂದು ಈ ವರೆಗೆ ಹೇಳಿಲ್ಲ.
`ಕಾಸಿಗಾಗಿ ಸುದ್ದಿ' ಹಗರಣದಲ್ಲಿ ಭಾಗಿಯಾದವರು ಪತ್ರಕರ್ತರಲ್ಲ, ಕೆಲವು ದೊಡ್ಡ ಮಾಧ್ಯಮಸಂಸ್ಥೆಗಳ ಮಾಲೀಕರು. ಪಿಸಿಐ ಕಪಾಟಿನಲ್ಲಿ ದೂಳು ತಿನ್ನುತ್ತಿರುವ ಅವರದ್ದೇ ಸಂಸ್ಥೆಯ ತನಿಖಾ ವರದಿಯನ್ನು ತಿರುವುಹಾಕಿದರೆ ನ್ಯಾ.ಕಟ್ಜು ಅವರಿಗೆ ಸತ್ಯ ಗೊತ್ತಾದೀತು. ಎರಡನೆಯದಾಗಿ `ರಾಡಿಯಾ ಟೇಪ್' ಹಗರಣದಲ್ಲಿ ಆರೋಪ ಕೇಳಿಬಂದ ಪ್ರಖ್ಯಾತ ಪತ್ರಕರ್ತರಾದ ವೀರ್ ಸಾಂಘ್ವಿ, ಬರ್ಖಾದತ್ ಮೊದಲಾದವರಲ್ಲಿ ಯಾವ ಶೈಕ್ಷಣಿಕ ಅರ್ಹತೆ, ತರಬೇತಿಯ ಕಮ್ಮಿ ಇತ್ತು?
ಹುಟ್ಟಿನಿಂದ ಮಾತ್ರ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯದಂತೆ ಶಿಕ್ಷಣ ಮತ್ತು ತರಬೇತಿಯಿಂದ ಮಾತ್ರ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯವೂ ಬಾಲಿಶತನದ್ದು. ಕನಿಷ್ಠ ಪದವಿಯನ್ನೂ ಪಡೆಯಲಾಗದ ವಿನೋದ್ ಮೆಹ್ತಾ, ಪತ್ರಿಕೋದ್ಯಮವನ್ನೇ ಓದದೆ ಇರುವ ಅರುಣ್‌ಶೌರಿ ಮೊದಲಾದವರು ಯಶಸ್ವಿ ಸಂಪಾದಕರಾಗಿರುವ ಉದಾಹರಣೆಗಳು ಕಣ್ಣಮುಂದಿವೆ.
ಈಗಿನ ಜನಾಂಗ ಗೌರವದಿಂದ ನೆನಪು ಮಾಡಿಕೊಳ್ಳುವ ಹಳೆಯ ಪೀಳಿಗೆಯ ಬಹುತೇಕ ಹಿರಿಯ ಪತ್ರಕರ್ತರು ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದವರಲ್ಲ. ಅವಸರದ ಸೃಷ್ಟಿ ಎಂದೇ ವ್ಯಾಖ್ಯಾನಿಸಲಾಗುವ ಪತ್ರಿಕಾ ಬರವಣಿಗೆಗಳು ಸೃಜನಶೀಲವಾದುದಲ್ಲ ಎನ್ನುವವರಿದ್ದಾರೆ. ಪತ್ರಿಕೋದ್ಯಮವನ್ನು ಪ್ರವೇಶಿಸಿರುವ ತಂತ್ರಜ್ಞಾನ ಇಂತಹ ಟೀಕೆ-ಟಿಪ್ಪಣಿಗಳಿಗೆ ಇನ್ನಷ್ಟು ಅವಕಾಶ ನೀಡಿದೆ. ಭಾಷಾಂತರದ ಸಾಫ್ಟ್‌ವೇರ್ ಕೂಡಾ ಲಭ್ಯ ಇರುವುದರಿಂದ ಕಂಪ್ಯೂಟರ್ ಜ್ಞಾನದ ಬಲದಿಂದಲೇ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯವೂ ಹೊಸಪೀಳಿಗೆಯ ಪತ್ರಕರ್ತರಲ್ಲಿದೆ. ಪತ್ರಕರ್ತನ ವೃತ್ತಿಯಲ್ಲಿ ಬರವಣಿಗೆಯ ಕಲೆಯಷ್ಟೇ ತಂತ್ರಜ್ಞಾನ ಕೂಡಾ ಮುಖ್ಯವಾಗುತ್ತಿದೆ.
ಎಲ್ಲರೂ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲಿಯೂ ಯಶಸ್ಸು ಕಂಡ ಅರ್ನೆಸ್ಟ್ ಹೆಮ್ಮಿಂಗ್ವೆಯಂತಹ ಪತ್ರಕರ್ತರಾಗಲು ಸಾಧ್ಯ ಇಲ್ಲ ಎನ್ನುವುದು ನಿಜವಾದರೂ ಬರವಣಿಗೆಯ ಶಕ್ತಿ ಇಲ್ಲದವರು  ಯಶಸ್ವಿ ಪತ್ರಕರ್ತರಾಗಿ ಬೆಳೆಯುವುದು ಕಷ್ಟ, ಅವರು ಹೆಚ್ಚೆಂದರೆ ಕಾರಕೂನ ಪತ್ರಕರ್ತರಾಗಬಹುದು ಅಷ್ಟೇ. ಬರವಣಿಗೆ ಎನ್ನುವುದು ಸ್ವಂತ ಆಸಕ್ತಿಯಿಂದ ಸಿದ್ದಿಸಿಕೊಳ್ಳಬೇಕಾದ ಕಲೆ, ಅದನ್ನು ಶಿಕ್ಷಣ ಇಲ್ಲವೇ ತರಬೇತಿಯಿಂದ ಒಲಿಸಿಕೊಳ್ಳಲಾಗದು ಎನ್ನುವುದನ್ನು ನ್ಯಾ.ಕಟ್ಜು ಅವರಿಗೆ ತಿಳಿಸಿ ಹೇಳುವವರು ಯಾರು?
ಸಮಕಾಲೀನ ವಿದ್ಯಮಾನಗಳಿಗೆ ಆಗಾಗ ಪ್ರತಿಕ್ರಿಯಿಸುವ ಮೂಲಕ ಪುರೋಗಾಮಿ ಚಿಂತಕನೆಂಬಂತೆ ಬಿಂಬಿಸಿಕೊಳ್ಳುತ್ತಿರುವ ನ್ಯಾ.ಕಟ್ಜು ಅವರು ಸಾಂಪ್ರದಾಯಿಕವಾದ ಶಿಕ್ಷಣದ ಬಗ್ಗೆ ಇಷ್ಟೊಂದು ಭರವಸೆಯನ್ನು ಇಟ್ಟುಕೊಂಡಿರುವುದೇ ಅಚ್ಚರಿ ಹುಟ್ಟಿಸುತ್ತದೆ. ಶಿಕ್ಷಿತರು, ಬುದ್ದಿವಂತರು ಮಾಡಿದಷ್ಟು ಅನ್ಯಾಯ, ಅಕ್ರಮಗಳನ್ನು ಅನಕ್ಷರಸ್ಥರು ಮತ್ತು ದಡ್ಡರು ಮಾಡಿಲ್ಲ ಎನ್ನುವುದು ತೀರಾ ಸರಳೀಕೃತ ಹೇಳಿಕೆ ಎಂದು ಅನಿಸಿದರೂ ಸಾಬೀತುಪಡಿಸಲು ಹೊರಟರೆ ಪುರಾವೆಗಳು ಊರೆಲ್ಲ ಸಿಗುತ್ತವೆ. ವ್ಯತ್ಯಾಸವೆಂದರೆ ಅನಕ್ಷರಸ್ಥರು, ದಡ್ಡರು ತಮಗೆ ತಾವೇ ಅನ್ಯಾಯ ಮಾಡಿಕೊಂಡು ಕಷ್ಟಕಾರ್ಪಣ್ಯಗಳಲ್ಲಿ ನರಳಾಡಿದರೆ, ಶಿಕ್ಷಿತರು, ಬುದ್ದಿವಂತರು ಊರಿಗೆಲ್ಲ ಅನ್ಯಾಯ ಮಾಡಿ ತಾವು ಸುಖವಾಗಿರಲು ನೋಡುತ್ತಾರೆ.
ಸ್ವಾತಂತ್ರ್ಯ ಪಡೆದ ಪ್ರಾರಂಭದ ದಿನಗಳಲ್ಲಿ ಮಾತ್ರವಲ್ಲ ಈಗಲೂ ಶಿಕ್ಷಣವೇ `ಸರ್ವರೋಗಕ್ಕೆ ರಾಮಬಾಣ' ಎಂಬ ಅಭಿಪ್ರಾಯ ಇದೆ. ಬಡತನ, ಅನಾರೋಗ್ಯ, ಮೂಢನಂಬಿಕೆ, ಜಾತೀಯತೆ, ಕೋಮುವಾದ, ಅಪರಾಧ ಹೀಗೆ ಎಲ್ಲ ಬಗೆಯ ಸಾಮಾಜಿಕ ಅನಿಷ್ಟಗಳಿಗೆ ಶಿಕ್ಷಣವೊಂದೇ ಪರಿಹಾರ ಎಂದು ರಾಜಕೀಯ ನಾಯಕರು ಮಾತ್ರವಲ್ಲ, ಆರೋಗ್ಯಪೂರ್ಣ ಸಮಾಜಕ್ಕಾಗಿ ಹಂಬಲಿಸುವ ಪ್ರಜ್ಞಾವಂತ ಹಿರಿಯರು ಕೂಡಾ ಹೇಳುತ್ತಲೇ ಬಂದಿದ್ದಾರೆ. ಆದರೆ ದೇಶ ದಾಟಿ ಬಂದ 65 ವರ್ಷಗಳ ಹಾದಿಗೆ ಕಣ್ಣಾಡಿಸಿದರೆ ಕಾಣುವ ಚಿತ್ರವೇ ಬೇರೆ.
ಬಡತನದ ಪ್ರಮಾಣ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿರಬಹುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸ್ಪಲ್ಪಮಟ್ಟಿಗೆ ಸುಧಾರಣೆಯಾಗಿರಲೂ ಬಹುದು. ಆದರೆ ಉಳಿದ ಅನಿಷ್ಠಗಳು  ಉಲ್ಭಣಗೊಳ್ಳುತ್ತಿರುವುದು  ಮಾತ್ರವಲ್ಲ ಹಳೆಯದರ ಜತೆಗೆ ಹೊಸ ಪಿಡುಗುಗಳು ಹುಟ್ಟಿಕೊಂಡಿವೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಎಂಜಲೆಲೆಯ ಮೇಲೆ ಉರುಳಾಡುತ್ತಿರುವವರು, ಟಿವಿಚಾನೆಲ್‌ಗಳಲ್ಲಿ  ಜ್ಯೋತಿಷಿ ಒದರುತ್ತಿರುವ ಸುಳ್ಳು ಭವಿಷ್ಯಗಳನ್ನು ಕೇಳಲು ಮತ್ತು ಅದರಂತೆ ನಡೆದುಕೊಳ್ಳಲು ಮೈಯೆಲ್ಲ ಕಣ್ಣು-ಕಿವಿಯಾಗಿ ಟಿವಿ ಮುಂದೆ ಕೂತಿರುವವರಲ್ಲಿ ಹೆಚ್ಚಿನವರು ಶಿಕ್ಷಿತರು. ಇವರಲ್ಲಿ ವೈದ್ಯರು, ಶಿಕ್ಷಕರು,ವಿಜ್ಞಾನಿಗಳು ಎಲ್ಲರೂ ಸೇರಿದ್ದಾರೆ.
ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ನಡೆದ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾದವರ ಶೈಕ್ಷಣಿಕ ಅರ್ಹತೆಯನ್ನು ಯಾರಾದರೂ ಹುಡುಕಿ ತೆಗೆದು ಪಟ್ಟಿಮಾಡಿದರೆ ಅಪರಾಧ ನಡೆಸಲು ಬೇಕಾಗಿರುವ ಒಂದು ಅರ್ಹತೆ ಶಿಕ್ಷಣ ಇರಬಹುದೇ ಎಂಬ ಅನುಮಾನ ಹುಟ್ಟಲು ಸಾಧ್ಯ. ಪತ್ರಕರ್ತರನ್ನು ಈ ಎಲ್ಲ ಬೆಳವಣಿಗೆಗಳಿಂದ ದೂರ ಇಟ್ಟು ನೋಡಲಾಗುವುದಿಲ್ಲ.
ನ್ಯಾ.ಕಟ್ಜು ಅವರು ನಂಬಿರುವಂತೆ ಇಂದಿನ ಮಾಧ್ಯಮರಂಗವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆ ಕೇವಲ ಪತ್ರಕರ್ತರ ಅರ್ಹತೆ ಇಲ್ಲವೇ ತರಬೇತಿಯ ಕೊರತೆ ಖಂಡಿತ ಅಲ್ಲ. ರಾಷ್ಟ್ರಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಇಂದಿನ ಬಹುಪಾಲು ಪತ್ರಿಕೆಗಳು ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿಯೇ ಪತ್ರಕರ್ತರನ್ನು ನೇಮಿಸಿಕೊಳ್ಳುತ್ತವೆ. ವಶೀಲಿ ಮಾಡಿ ಸೇರಿಕೊಳ್ಳುವವರಿಗೂ ಕನಿಷ್ಠ ವಿದ್ಯಾರ್ಹತೆ ಇರಲೇ ಬೇಕಾಗುತ್ತದೆ.
ತೀರಾ ಸ್ಥಳೀಯವಾದ ಪತ್ರಿಕೆ-ಚಾನೆಲ್‌ಗಳನ್ನು ಹೊರತುಪಡಿಸಿ ಮಾಧ್ಯಮರಂಗಕ್ಕೆ ಪ್ರವೇಶಿಸುವವರೆಲ್ಲರ  ಕೈಯಲ್ಲಿ ಪದವಿ ಇಲ್ಲವೆ ಸ್ನಾತಕೋತ್ತರ ಪದವಿ ಇರುತ್ತದೆ. ಸೇರ್ಪಡೆಯಾದ ನಂತರ ತರಬೇತಿಯನ್ನು ಪಡೆಯುತ್ತಾರೆ, ಇಂದಿನ ಅಗತ್ಯವಾದ ಕಂಪ್ಯೂಟರ್ ಜ್ಞಾನವೂ ಅವರಲ್ಲಿರುತ್ತದೆ. ಕಾಗುಣಿತ ತಪ್ಪಿಲ್ಲದೆ ಬರೆಯುವುದನ್ನೂ ಕಲಿತಿರುತ್ತಾರೆ. ನ್ಯಾ.ಕಟ್ಜು ಅವರು ನಿರೀಕ್ಷಿಸುತ್ತಿರುವ ಪತ್ರಿಕೋದ್ಯಮದ ಗುಣಮಟ್ಟವನ್ನು ಎತ್ತಿಹಿಡಿಯುವ ಪತ್ರಕರ್ತನಾಗಲು ಇಷ್ಟು ಅರ್ಹತೆ ಮತ್ತು ತರಬೇತಿ ಸಾಕೆ? ಒಬ್ಬ ಒಳ್ಳೆಯ ಪತ್ರಕರ್ತನನ್ನು ರೂಪಿಸುವುದು ಕೇವಲ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿ ಅಲ್ಲ. ಇದರ ಜತೆಗೆ ಎಲ್ಲ ಕ್ಷೇತ್ರಗಳ ವೃತ್ತಿಪರರಂತೆ ಪತ್ರಕರ್ತರಲ್ಲಿ ಪ್ರಾಮಾಣಿಕತೆ, ವೃತ್ತಿನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ. ವೈಯಕ್ತಿಕವಾಗಿ ಅಳವಡಿಸಿಕೊಳ್ಳಬೇಕಾದ ಈ ಗುಣಗಳನ್ನು ಶಿಕ್ಷಣ ಇಲ್ಲವೇ ತರಬೇತಿಯಿಂದ ನೆಟ್ಟು ಬೆಳೆಸಲು ಸಾಧ್ಯವೇ?.
ನ್ಯಾ.ಕಟ್ಜು ಪತ್ರಕರ್ತರು ಹೊಂದಿರಬೇಕಾದ ಅರ್ಹತೆ ಬಗ್ಗೆ ಪ್ರತಿಪಾದನೆ ಮಾಡುವಾಗಲೂ ತಪ್ಪು ಪ್ರಶ್ನೆಯನ್ನು ಎತ್ತಿಕೊಂಡಿದ್ದಾರೆ. ಇದು ಅರ್ಥವಾಗಬೇಕಾದರೆ ಇಂದಿನ ವಿಶ್ವವಿದ್ಯಾಲಯಗಳಿಂದ ಪತ್ರಿಕೋದ್ಯಮ ಶಿಕ್ಷಣ ಪಡೆದು ಬಂದವರನ್ನು ಕರೆದು ಅವರು ಮಾತನಾಡಿಸಬೇಕು. ಈ ಬಡಪಾಯಿ ವಿದ್ಯಾರ್ಥಿಗಳನ್ನು ದೂರಿಯೂ ಏನೂ ಪ್ರಯೋಜನ ಇಲ್ಲ. ಯಾವುದೋ ಓಬಿರಾಯನ ಕಾಲದ ಪಠ್ಯಕ್ರಮವನ್ನು ಓದಿ ಪ್ರಾಧ್ಯಾಪಕರಾಗಿ ನೇಮಕಗೊಂಡವರು ಅದೇ ಹಳೆಯ ಪಠ್ಯವನ್ನು ಹಿಡಿದುಕೊಂಡು ಮಾಡುವ ಪಾಠವನ್ನು ಕೇಳುವ ವಿದ್ಯಾರ್ಥಿಗಳಿಂದ ವೃತ್ತಿಗೆ ಅವಶ್ಯಕವಾದ ಯಾವ ಅರ್ಹತೆಯನ್ನು ನಿರೀಕ್ಷಿಸಲು ಸಾಧ್ಯ?
  ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಲ್ಲಿ ಎಷ್ಟು ಮಂದಿಗೆ ಮಾಧ್ಯಮರಂಗದ ಪ್ರತ್ಯಕ್ಷ ಅನುಭವ ಇದೆ? ಅವರಲ್ಲಿ ಎಷ್ಟು ಮಂದಿ ಪತ್ರಿಕಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ? ಪ್ರಾಯೋಗಿಕವಾದ ಅನುಭವವೇ ಇಲ್ಲದ ಇವರು ಎಂತಹ ವೃತ್ತಿಪರ ಪತ್ರಕರ್ತರನ್ನು ಸೃಷ್ಟಿಮಾಡಬಲ್ಲರು?
ಇಂದು ಬಹಳಷ್ಟು ವಿದ್ಯಾರ್ಥಿಗಳು ಪತ್ರಕರ್ತರಾಗಬಯಸುತ್ತಿರುವುದು ಆಯ್ಕೆಯಿಂದಲ್ಲ. ಬೇರೆ ಯಾವ ವಿಷಯದಲ್ಲಿಯೂ ಸೀಟು ಸಿಗಲಿಲ್ಲವೆನ್ನುವ ಕಾರಣಕ್ಕೆ ಪತ್ರಿಕೋದ್ಯಮವನ್ನು ಆರಿಸಿಕೊಂಡವರೇ ಹೆಚ್ಚು. ಪತ್ರಿಕೋದ್ಯಮ ಶಿಕ್ಷಣ ಅವರಲ್ಲಿ ವೃತ್ತಿ ಬಗ್ಗೆ ಆಸಕ್ತಿಯನ್ನು ಹುಟ್ಟಿಸದೆ ಇರುವುದರಿಂದ ಅವರ ಪಾಲಿಗೆ ಪತ್ರಕರ್ತನ ವೃತ್ತಿ ಎಂದರೆ ಅದು ಹೊಟ್ಟೆಪಾಡಿಗಾಗಿ ಇರುವ ನೂರೆಂಟು ವೃತ್ತಿಗಳಲ್ಲೊಂದು ಅಷ್ಟೆ. ಇದರಿಂದಾಗಿ ಆ ವೃತ್ತಿಗಳಲ್ಲಿ ಕಾಣಿಸಿಕೊಂಡಿರುವ ಪಿಡುಗುಗಳೆಲ್ಲ ಮಾಧ್ಯಮರಂಗಕ್ಕೂ ತಗಲಿವೆ.
ಪತ್ರಕರ್ತರಾಗಲು ಕಲಿತ ಶಿಕ್ಷಣ ನೆರವಾಗಿದೆಯೇ ಎಂಬ ಪ್ರಶ್ನೆಯನ್ನು ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳ ಉತ್ಪನ್ನಗಳಾದ ಪತ್ರಕರ್ತರನ್ನು ಕೇಳಿದರೆ ಬಹುಪಾಲು ಮಂದಿ ಉತ್ತರಿಸದೆ ತಲೆತಗ್ಗಿಸುತ್ತಾರೆ. ಶಿಕ್ಷಣವನ್ನು ಪತ್ರಕರ್ತರ ಅರ್ಹತೆಯ ಮಾನದಂಡವನ್ನಾಗಿ ಮಾಡಲು ಹೊರಟವರು ಮೊದಲು ಪತ್ರಿಕೋದ್ಯಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆಗೊಳಪಡಿಸಬೇಕಾಗುತ್ತದೆ. ನ್ಯಾಯಮೂರ್ತಿ ಕಟ್ಜು ಅವರು ಮಾಧ್ಯಮರಂಗಕ್ಕೆ ತಗಲಿರುವ ರೋಗದ ಕಾರಣವನ್ನೇ ಹುಡುಕಲು ವಿಫಲರಾಗಿದ್ದಾರೆ. ರೋಗನಿದಾನವೇ ತಪ್ಪಾಗಿಬಿಟ್ಟರೆ ಯಾವ ಔಷಧಿಯಿಂದಲೂ ಕಾಯಿಲೆಯನ್ನು ಗುಣಪಡಿಸಲು ಸಾಧ್ಯ ಇಲ್ಲ.

Sunday, March 10, 2013

ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಣದ ಕೈಗಳ ಕಾಟ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರು ಬಂದು ಇಲ್ಲಿನ ಪಂಚತಾರಾ ಹೊಟೇಲಲ್ಲಿ ಸಭೆ ನಡೆಸಿ ಏನೆಲ್ಲ ಕಸರತ್ತು ನಡೆಸಿದರೂ ಪಕ್ಷದ ನೂತನ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಹೋದುದರಲ್ಲಿ ಆಶ್ಚರ್ಯವೇನಿಲ್ಲ.
ಸಮಸ್ಯೆಯ ಮೂಲ ಆ ಸಭೆಯಲ್ಲಿದ್ದ ನಾಯಕರಲ್ಲ, ಅಲ್ಲಿ ಇಲ್ಲದೆ ಇದ್ದ ನಾಯಕರು. ಮೊದಲನೆಯದಾಗಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಎರಡನೆಯದಾಗಿ ಸಂಘ ಪರಿವಾರದ ನಾಯಕರು, ಮೂರನೆಯದಾಗಿ ಅಲ್ಲಿ ಇದ್ದೂ ಇಲ್ಲದಂತಿದ್ದು ತನ್ನದೇ ಲೆಕ್ಕಾಚಾರದಲ್ಲಿ ಮುಳುಗಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್.
ನಾಯಕನ ಆಯ್ಕೆಯಲ್ಲಿ ಬಿಜೆಪಿ ಎದುರಿಸುತ್ತಿರುವ ಕಷ್ಟಗಳನ್ನು ಅರ್ಥಮಾಡಿಕೊಳ್ಳಬಹುದು. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ತಾನೇ ಬೆಳೆಸಿದ ನಾಯಕ ಹಠಾತ್ತನೆ ಪಕ್ಷ ಬಿಟ್ಟು ಹೋದಾಗ ನಿರ್ಮಾಣವಾಗಿರುವ ನಿರ್ವಾತವನ್ನು ತುಂಬುವುದು ಸುಲಭದ ಕೆಲಸ ಅಲ್ಲ.
ಬಿ.ಎಸ್.ಯಡಿಯೂರಪ್ಪ ಎಂಬ ನಾಯಕನ ವ್ಯಕ್ತಿತ್ವವೇ ಅಂತಹದ್ದು. ಪಕ್ಷ ತನ್ನ ನಿಯಂತ್ರಣಕ್ಕೆ ಬಂದ ನಂತರ ಎರಡನೆ ಸಾಲಿನ ಯಾವ ನಾಯಕರನ್ನೂ ಅವರು ಬೆಳೆಯಲು ಬಿಡಲಿಲ್ಲ. ಮುಂದೊಂದು ದಿನ ತನ್ನ ಹಾದಿಗೆ ಮುಳ್ಳಾಗಬಹುದೆಂಬ ದೂರಾಲೋಚನೆಯಿಂದ 2008ರ ಚುನಾವಣೆಯ ಗೆಲುವಿನ ನಂತರ ಜಗದೀಶ್ ಶೆಟ್ಟರ್ ಅವರನ್ನೇ ಸಂಪುಟ ಸೇರದಂತೆ ತಡೆದವರು ಬಿಎಸ್‌ವೈ.
ಪಕ್ಷದೊಳಗೆ ಇನ್ನೊಬ್ಬ ಲಿಂಗಾಯತ ನಾಯಕ ತನಗೆ ಸವಾಲಾಗಬಾರದು, ತಾನೇ ಜಾತಿಯ ಪ್ರಶ್ನಾತೀತ ನಾಯಕನಾಗಬೇಕೆಂಬ ಉದ್ದೇಶದಿಂದ ಲಿಂಗಾಯತ ಮಠಗಳಿಗೆ ತೆರಿಗೆಹಣವನ್ನು ಸುರಿದದ್ದು ಕೂಡಾ ಇದೇ ಕಾರಣಕ್ಕೆ. ಇದರಿಂದಾಗಿ ಬಿಜೆಪಿ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಬಿಎಸ್‌ವೈ ಪಕ್ಷದ ನಾಯಕರಾಗಿ ಉಳಿಯಲಿಲ್ಲ, ಅವರ ಗೈರುಹಾಜರಿಯಲ್ಲಿ ಅವರಿಗೆ ಸರಿಸಾಟಿಯಾಗಬಲ್ಲ ಬೇರೆ ನಾಯಕರೂ ಇಲ್ಲ.
ಎರಡನೆಯದಾಗಿ ಸಂಘ ಪರಿವಾರದ ನಾಯಕರು. ಬಿಜೆಪಿಗೆ ಉಳಿದ ರಾಜಕೀಯ ಪಕ್ಷಗಳಂತೆ ಇರುವುದು ಒಂದು ಹೈಕಮಾಂಡ್ ಅಲ್ಲ, ಇನ್ನೊಂದೂ ಇದೆ. ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಬಿಜೆಪಿಯ ನಾಯಕನ ಆಯ್ಕೆಗೂ ತಮಗೂ ಸಂಬಂಧ ಇಲ್ಲ ಎಂದು ಸಂಘದ ನಾಯಕರು ಎಷ್ಟೇ ಕೂಗಿಹೇಳಿದರೂ ನಂಬುವವರು ಯಾರು?
ಸಂಬಂಧ ಇಲ್ಲದೆ ಇದ್ದರೆ ಸಂಘದ ಪ್ರತಿನಿಧಿಯನ್ನು ಬಿಜೆಪಿಯ ಸಂಘಟನೆಯ ಕೆಲಸಕ್ಕೆ ಮಾತ್ರ ಎರವಲು ಸೇವೆ ರೂಪದಲ್ಲಿ ಯಾಕೆ ಕಳುಹಿಸಿಕೊಡಲಾಗುತ್ತಿದೆ? ಈ ಸಂಬಂಧದ ಸತ್ಯ ಇನ್ನಷ್ಟು ತಿಳಿದುಕೊಳ್ಳಬೇಕಾದರೆ ಯಡಿಯೂರಪ್ಪ ಮತ್ತು ಅವರ ಪಕ್ಷದ ವಕ್ತಾರ ವಿ.ಧನಂಜಯ ಕುಮಾರ್ ಕಳೆದೆರಡು ತಿಂಗಳುಗಳಿಂದ ನೀಡುತ್ತಿರುವ ಹೇಳಿಕೆಗಳಲ್ಲಿ ಯಾರ ಹೆಸರುಗಳು ಪ್ರಸ್ತಾಪವಾಗುತ್ತಿದೆ ಎಂಬುದನ್ನು ನೋಡಬಹುದು.
ಪಕ್ಷದ ಅಧ್ಯಕ್ಷಸ್ಥಾನದ ಆಯ್ಕೆ ಕಸರತ್ತು ಇಷ್ಟೊಂದು ಜಟಿಲಗೊಳ್ಳಲು ಸಂಘ ಪರಿವಾರ ಎಂಬ ಅಗೋಚರ ಶಕ್ತಿ ಕಾರಣ ಎನ್ನುವುದು ನಿರ್ವಿವಾದ. ಬಿಜೆಪಿ ಅಧಿಕಾರ ಗಳಿಸದೆ ವಿರೋಧಪಕ್ಷದಲ್ಲಿ ಕೂತರೂ ಸರಿ, ಯಾವುದೇ ಕಾರಣಕ್ಕೂ ಪಕ್ಷ ತನ್ನ ನಿಯಂತ್ರಣ ಮೀರಿ ಹೋಗಬಾರದೆನ್ನುವುದು ಸಂಘದ ನಾಯಕರ ಲೆಕ್ಕಾಚಾರ.
ಎನ್‌ಡಿಎ ಅಧಿಕಾರದಲ್ಲಿದ್ದಾಗ ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಟ ಅಡ್ವಾಣಿಯವರನ್ನು ಯಾವ ರೀತಿ ಆರ್‌ಎಸ್‌ಎಸ್ ಕಾಡಿತ್ತು, ಈಗಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ಏನೆಲ್ಲ ಕಸರತ್ತು ನಡೆಸಿತ್ತು ಎನ್ನುವುದು ಜನರ ಕಣ್ಣಮುಂದಿದೆ. ರಾಷ್ಟ್ರಮಟ್ಟದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ  ನಿದ್ದೆಗೆಡಿಸುತ್ತಿರುವ ಈ ಸಂದರ್ಭದಲ್ಲಿ ಸಂಘ ಪರಿವಾರ ಯಾವ ರಾಜ್ಯದಲ್ಲಿಯೂ ಇನ್ನೊಬ್ಬ ಮೋದಿಯೋ, ಯಡಿಯೂರಪ್ಪನೋ ಬೆಳೆಯುವುದನ್ನು ಖಂಡಿತ ಇಷ್ಟಪಡಲಾರದು. ಯಡಿಯೂರಪ್ಪನವರಿಗೆ ಸಮನಾದ ಇನ್ನೊಬ್ಬ ನಾಯಕ ಪಕ್ಷದಲ್ಲಿ ಇಲ್ಲ ಎನ್ನುವುದು ಎಷ್ಟು ನಿಜವೋ, ಅಂತಹ ನಾಯಕ ಸಂಘ ಪರಿವಾರಕ್ಕೆ ಬೇಕಿಲ್ಲ ಎನ್ನುವುದೂ ಅಷ್ಟೇ ನಿಜ.
ಸಂಘ ಪರಿವಾರದ ಮನಸ್ಥಿತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬೇಕಾದರೆ ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರನ್ನು ಗಮನಿಸಬಹುದು. ಡಿ.ವಿ.ಸದಾನಂದ ಗೌಡರು ಕಳೆದ ಚುನಾವಣೆಯಲ್ಲಿ ಪಕ್ಷ ಗೆದ್ದಾಗ ಅಧ್ಯಕ್ಷರಾಗಿದ್ದವರು, ಅದರ ನಂತರ ಮುಖ್ಯಮಂತ್ರಿಯೂ ಆಗಿಬಿಟ್ಟರು. ಅಧಿಕಾರದಲ್ಲಿದ್ದದ್ದು ಅಲ್ಪಕಾಲವಾದರೂ ಹೆಸರು ಕೆಡಿಸಿಕೊಳ್ಳಲಿಲ್ಲ, ಬಗೆಬಗೆಯ ಒತ್ತಡಗಳ ನಡುವೆಯೂ ತೃಪ್ತಿಕರವಾದ ಆಡಳಿತ ಕೊಟ್ಟವರು.
ರಾಜಕೀಯ ಕಾರಣಗಳಿಗಾಗಿ ಇತ್ತೀಚೆಗೆ ಒಕ್ಕಲಿಗ ಜಾತಿ ಜತೆ ಗುರುತಿಸಿಕೊಂಡರೂ ಜಾತಿವಾದಿ ಎಂಬ ಹಣೆಪಟ್ಟಿ ಬೀಳದಂತೆ ಎಚ್ಚರಿಕೆ ವಹಿಸಿದವರು. ಪಕ್ಷದಲ್ಲಿರುವ ಒಕ್ಕಲಿಗರು ಕೂಡಾ ಗೌಡರನ್ನು ತಮ್ಮ ನಾಯಕನೆಂದು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳದೆ ಇರುವುದರಿಂದ ಬೇರೆ ಜಾತಿ ನಾಯಕರಲ್ಲಿಯೂ ಅವರ ಬಗ್ಗೆ ಹೆಚ್ಚಿನ ವಿರೋಧ ಇಲ್ಲ. ಇಷ್ಟೆಲ್ಲ ಅನುಕೂಲಕರ ಅಂಶಗಳಿರುವುದೇ ಸದಾನಂದ ಗೌಡರಿಗೆ ಮುಳುವಾಗಿದೆ. ಅಧ್ಯಕ್ಷರಾಗಿಬಿಟ್ಟರೆ ಗೌಡರು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿ ಇರಲಾರರು ಎಂಬ ಅಸುರಕ್ಷತೆ ಸಂಘದ ನಾಯಕರಲ್ಲಿದ್ದ ಹಾಗಿದೆ.
ವೈಯಕ್ತಿಕ ಇಮೇಜ್ ಬಗ್ಗೆ ಸೂಕ್ಷ್ಮಮತಿಯಾಗಿರುವ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಘ ಪರಿವಾರ ಮುಖ್ಯವಾಗಿ ಕರಾವಳಿಯ `ಪ್ರಭಾವಳಿ' ನಾಯಕರು ಸಲ್ಲಿಸಿದ ಬೇಡಿಕೆಗಳ ಪಟ್ಟಿಯನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳದೆ ಇರುವುದೂ ಅವರಿಗೆ ವಿರುದ್ಧವಾಗಿದೆಯಂತೆ. ಹೀಗಲ್ಲದಿದ್ದರೆ ತಾನೇ ಬೆಳೆಸಿದ ನಾಯಕನ ತಲೆಮೇಲಿದ್ದ ಅಭಯಹಸ್ತವನ್ನು ಸಂಘಪರಿವಾರ ಇದ್ದಕ್ಕಿದ್ದಂತೆ ಹಿಂದಕ್ಕೆ ಪಡೆಯಲು ಬೇರೆ ಕಾರಣಗಳ್ಯಾವುದೂ ಕಾಣುತ್ತಿಲ್ಲ.
ಸಂಘ ಪರಿವಾರದ ಒಳಮನಸ್ಸನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದರೆ ತನ್ನ ಅಭ್ಯರ್ಥಿಯಾಗಿ ಅದು ಬಿಂಬಿಸುತ್ತಿರುವ ನಾಯಕನನ್ನು ನೋಡಬಹುದು. ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರನ್ನು ಸೋಲಿಸುವ ವರೆಗೆ ನಳಿನಿಕುಮಾರ್ ಕಟೀಲ್ ಮಂಗಳೂರು ಮಹಾನಗರಪಾಲಿಕೆಯಿಂದ ಆಚೆಗೆ ಯಾರಿಗಾದರೂ ಗೊತ್ತಿತ್ತು ಎಂದು ಅನಿಸುವುದಿಲ್ಲ. ಸಾಮಾನ್ಯವಾಗಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಲ್ಲಿ ಇರುವ ವಾಕ್ಪಟುತ್ವ ಮತ್ತು ಸಂಘಟನಾ ಚಾತುರ್ಯ ತನ್ನಲ್ಲಿದೆ ಎಂದು ಅವರು ಈ ವರೆಗೆ ಸಾಬೀತುಪಡಿಸಿಲ್ಲ. ತುಳು-ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಅವರು ಮಾತನಾಡಿದ್ದನ್ನು ಯಾರೂ ಕೇಳಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿಯ ಕೋಟೆ ಎಂದು ಹೇಳಲಾಗುತ್ತಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು ಎಂಟರಲ್ಲಿ ನಾಲ್ಕು ಸ್ಥಾನಗಳನ್ನು ಮಾತ್ರ. ನಳಿನ್‌ಕುಮಾರ್ ಅವರಿಗೆ ಲೋಕಸಭಾ ಟಿಕೆಟ್ ನೀಡಲು ಅವರದ್ದೇ ಜಾತಿಯಾದ ಬಂಟರ ಮತಗಳನ್ನು ಸೆಳೆಯುವ ಒಳ ಉದ್ದೇಶವೂ ಇತ್ತು.ಆದರೆ ಹಾಲಾಡಿ ಶ್ರಿನಿವಾಸ ಶೆಟ್ಟಿಯವರಿಗೆ ಸಚಿವ ಪದವಿ ನಿರಾಕರಣೆ ಜಿಲ್ಲೆಯ ಬಂಟರು ಬಿಜೆಪಿ ವಿರುದ್ಧ ಬಂಡೇಳುವಂತೆ ಮಾಡಿದೆ.
ಇದರ ಜತೆಗೆ ಇನ್ನೊಬ್ಬ ಬಿಜೆಪಿ ನಾಯಕ ನಾಗರಾಜ ಶೆಟ್ಟಿ ಮತ್ತು ಹೊಟೇಲ್‌ಉದ್ಯಮಿ ಸದಾನಂದ ಶೆಟ್ಟಿಯವರು ಜೆಡಿ (ಎಸ್) ಸೇರಿದ್ದಾರೆ. ರಾಜ್ಯದ ಉಳಿದೆಡೆಗಳಲ್ಲಿ ಬಿಡಿ, ತವರು ಜಿಲ್ಲೆಯ ತನ್ನ ಜಾತಿಯ ಮತಗಳನ್ನೇ ಬಿಜೆಪಿಗೆ ತಂದುಕೊಡುವ ಸಾಮರ್ಥ್ಯ ನಳಿನ್‌ಕುಮಾರ್ ಕಟೀಲ್‌ಗೆ ಈಗ ಇದ್ದ ಹಾಗೆ ಇಲ್ಲ. ಹೀಗಿದ್ದರೂ ಸಂಘ ಪರಿವಾರ ನಳಿನ್‌ಕುಮಾರ್ ಬೆಂಬಲಕ್ಕೆ ನಿಲ್ಲಲು ಇರುವ ಏಕೈಕ ಕಾರಣ-'ಹೇಳಿದಂತೆ ಕೇಳಿಕೊಂಡು ಇರಬಲ್ಲ ನಮ್ಮ ಹುಡುಗ' ಎನ್ನುವುದಲ್ಲದೆ ಬೇರೇನಿದೆ?
ಬಿಜೆಪಿಯ ಮೂರನೆಯ ಸಮಸ್ಯೆಯ ಹೆಸರು ಅನಂತಕುಮಾರ್. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯೊಳಗೆ ನಡೆದ ತುಮುಲಗಳಲ್ಲೆಲ್ಲ ಅನಂತಕುಮಾರ್ ಕೈವಾಡದ ಆರೋಪಗಳು ಕೇಳಿಬಂದರೂ ಅದು ಬಹಿರಂಗವಾಗಿ ಚರ್ಚೆಯಾಗಿದ್ದು ಕಡಿಮೆ. ಯಡಿಯೂರಪ್ಪನವರು ಪಕ್ಷತ್ಯಜಿಸಿದ ನಂತರವಷ್ಟೇ ಅದು ಅಲ್ಲಲ್ಲಿ ಸ್ಪೋಟಗೊಂಡಿರುವುದು. ಇಂತಹ ಅನಂತಕುಮಾರ್ ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಸ್ಪರ್ಧೆಯಲ್ಲಿರುವ ಐವರಲ್ಲಿ ಮೂವರಾದ ಪ್ರಹ್ಲಾದ ಜೋಷಿ, ಆರ್.ಅಶೋಕ್ ಮತ್ತು ಗೋವಿಂದ ಕಾರಜೋಳ ತಿಳಿದುಕೊಂಡಿದ್ದಾರೆ. ಈ ರೀತಿ ಬೆಂಬಲದ ಭರವಸೆ ನೀಡಲು ಅನಂತಕುಮಾರ್ ತಲೆಯಲ್ಲಿರುವ ಬೇರೆ ಲೆಕ್ಕಾಚಾರ ಕಾರಣ ಎಂದು ಹೇಳುವವರೂ ಇದ್ದಾರೆ.
ಜನಸಂಖ್ಯೆಯ ಶೇಕಡಾ ನಾಲ್ಕರಷ್ಟಿರುವ ಬ್ರಾಹ್ಮಣರು ಬಿಜೆಪಿಯ ನಂಬಿಕೆಯ ಮತಬ್ಯಾಂಕ್. ರಾಜ್ಯದಲ್ಲಿರುವ ಹನ್ನೊಂದು ಬ್ರಾಹ್ಮಣ ಶಾಸಕರಲ್ಲಿ ಒಂಬತ್ತು ಮಂದಿ ಇರುವುದು ಬಿಜೆಪಿಯಲ್ಲಿ. ಕನಿಷ್ಠ ಬಿಜೆಪಿಯೊಳಗೆ ಅನಂತಕುಮಾರ್ ಪ್ರಶ್ನಾತೀತವಾಗಿ ಈ ಸಮುದಾಯದ ನಾಯಕ. ಬ್ರಾಹ್ಮಣರಿಗೆ ಅವಕಾಶ ನೀಡಿಲ್ಲ ಎನ್ನುವ ಅಪವಾದ ತನ್ನ ಮೇಲೆ ಬರಬಾರದು ಎಂಬ ಕಾರಣಕ್ಕಾಗಿ ಜೋಷಿ ಅವರ ಹೆಸರನ್ನು ತೇಲಿಬಿಟ್ಟಿದ್ದಾರೆಯೇ ಹೊರತು ಈ ಬಗ್ಗೆ ಅನಂತಕುಮಾರ್ ಗಂಭೀರವಾಗಿಲ್ಲ ಎಂದು ಹೇಳಲಾಗುತ್ತಿದೆ.
ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ  ಎಂದು ಘೋಷಿಸಲಾಗಿರುವ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ ಜೋಷಿ ಒಂದೇ ಊರಿನವರಾಗಿರುವ ಕಾರಣ ಅವರ ನೇಮಕ ಸಾಧ್ಯ ಇಲ್ಲ ಎನ್ನುವುದು ಅನಂತಕುಮಾರ್ ಅವರಿಗೆ ಗೊತ್ತಿಲ್ಲವೇ? ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ನೀಡಲೇ ಬೇಕಾದರೆ ಬಿಜೆಪಿಯಲ್ಲಿ ಈಗಲೂ ಸಾರ್ವಜನಿಕರ ಗೌರವಕ್ಕೆ ಪಾತ್ರರಾಗಿರುವ ಕೆಲವೇ ನಾಯಕರಲ್ಲಿ ಒಬ್ಬರಾದ ಸಚಿವ ಸುರೇಶ್ ಕುಮಾರ್ ಅವರ ಹೆಸರನ್ನು ಪರಿಗಣಿಸಬಹುದಿತ್ತು. ವಿಚಿತ್ರವೆಂದರೆ ಬೇರೆ ಪಕ್ಷಗಳ ನಾಯಕರು ಮತ್ತು ಮತದಾರರು ಕೂಡಾ ಒಪ್ಪಬಹುದಾದ ಸುರೇಶ್‌ಕುಮಾರ್  ಹೆಸರು ಸ್ಪರ್ಧೆಯಲ್ಲಿಯೇ ಇಲ್ಲ. ಈ ವೈಚಿತ್ರ್ಯದ ಹಿಂದೆ ತನ್ನ ಕೈವಾಡ ಇಲ್ಲ ಎಂದು ಅನಂತಕುಮಾರ್ ಹೇಳಬಹುದು.ಆದರೆ ಇಬ್ಬರ ನಡುವಿನ ಪೈಪೋಟಿಯನ್ನು ಬಲ್ಲ ಯಾರೂ ಈ ಸಮಜಾಯಿಷಿಯನ್ನು ನಂಬಲಾರರು.
ಸಚಿವ ಆರ್.ಅಶೋಕ್ ಅವರಿಗೆ ನೀಡಿರುವ ಬೆಂಬಲದಲ್ಲಿಯೂ ಅನಂತಕುಮಾರ್ ಅವರಿಗೆ ಬೇರೆ ಉದ್ದೇಶ ಇದ್ದಂತಿದೆ. ಯಡಿಯೂರಪ್ಪನವರ ವಿರೋಧದಿಂದಾಗಿ ರಾಜ್ಯದ ಪ್ರಮುಖ ಜಾತಿಯಾದ ಲಿಂಗಾಯತರು ತಮ್ಮ ಪರವಾಗಿಲ್ಲ ಎನ್ನುವುದು ಅನಂತಕುಮಾರ್ ಅವರಿಗೆ ಗೊತ್ತಿದೆ. ಆದುದರಿಂದ ತನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಒಕ್ಕಲಿಗರನ್ನಾದರೂ ಓಲೈಸುವುದು ಅವರಿಗೆ ಅನಿವಾರ್ಯವಾಗಿದೆ.
ಇದೇ ವೇಳೆ ತನ್ನ ಗುಂಪಿನಲ್ಲಿ ಇಲ್ಲದ ಸದಾನಂದ ಗೌಡರ ಅವಕಾಶವನ್ನು ಕೂಡಾ ತಪ್ಪಿಸಬೇಕಾಗಿದೆ. ಅಶೋಕ್ ಅವರನ್ನು ಬೆಂಬಲಿಸುವ ಮೂಲಕ ಅನಂತಕುಮಾರ್ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಅಶೋಕ್ ಅವರು ಒಕ್ಕಲಿಗರ ನಾಯಕರಾಗುವುದು ಕಷ್ಟ. ಈಗಲೂ ದೇವೇಗೌಡರೇ ಒಕ್ಕಲಿಗರ ಪ್ರಶ್ನಾತೀತ ನಾಯಕ, ಎರಡನೇ ಸ್ಥಾನದಲ್ಲಿರುವುದು ಎಚ್.ಡಿ.ಕುಮಾರಸ್ವಾಮಿ.
ಕಳೆದ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ಮಂಡ್ಯ,ಹಾಸನ,ರಾಮನಗರ ಜಿಲ್ಲೆಗಳಲ್ಲಿ ಬಿಜೆಪಿಯ ಒಬ್ಬ ಶಾಸಕ ಕೂಡಾ ಆರಿಸಿ ಬರಲಿಲ್ಲ ಎನ್ನುವುದು ಗಮನಾರ್ಹ. ಇದರ ಜತೆ ಅಶೋಕ್ ಅವರಿಗೆ ಸಂಘ ಪರಿವಾರದ ಬೆಂಬಲವೂ ಇಲ್ಲ. ಈ ಕಾರಣಗಳಿಂದಾಗಿ ಅಶೋಕ್ ಅವರಿಗೆ ಅವಕಾಶ ಕಡಿಮೆ ಎನ್ನುವುದು ಅನಂತಕುಮಾರ್ ಅವರಿಗೆ ತಿಳಿದಿದೆ. ಬೆಂಬಲಿಸಿದ ಹಾಗೂ ಆಗಬೇಕು, ಅವರು ಅಧ್ಯಕ್ಷರಾಗಲೂ ಬಾರದು ಇದು ಅನಂತಕುಮಾರ್ ಲೆಕ್ಕಾಚಾರ ಇರಬಹುದು.
ಹಾಗಿದ್ದರೆ ಅನಂತಕುಮಾರ್ ಯಾರ ಪರವಾಗಿದ್ದಾರೆ ಎನ್ನುವ ಯಕ್ಷ ಪ್ರಶ್ನೆಗೆ ಸಿಗುವ ಮೊದಲ ಉತ್ತರ ಗೋವಿಂದ ಕಾರಜೋಳ. ರಾಜ್ಯದ 33 ಪರಿಶಿಷ್ಟಜಾತಿಯ ಶಾಸಕರಲ್ಲಿ 22 ಶಾಸಕರು ಇರುವುದು ಬಿಜೆಪಿಯಲ್ಲಿ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಉಳಿದೆಲ್ಲ ಅಂಶಗಳ ಜತೆ ಅದು ನಡೆಸಿದ್ದ ಸೋಷಿಯಲ್ ಎಂಜನಿಯರಿಂಗ್ ಕೂಡಾ ಕಾರಣ. ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ನಾಯಕರು ಬಹುಸಂಖ್ಯೆಯಲ್ಲಿದ್ದರೂ ಅವರಲ್ಲಿ ಶೇಕಡಾ 90ರಷ್ಟು ಬಲಗೈ ಗುಂಪಿಗೆ ಸೇರಿದವರು. ಇದನ್ನು ಗಮನಿಸಿದ ಬಿಜೆಪಿ ಹೆಚ್ಚುಕಡಿಮೆ ಬಲಗೈ ಗುಂಪಿಗೆ ಸಮನಾದ ಸಂಖ್ಯೆಯಲ್ಲಿರುವ ಎಡಗೈ ಗುಂಪಿಗೆ ಗಾಳ ಹಾಕಿತು. ಮೊದಲು ರಮೇಶ್ ಜಿಗಜಿಣಗಿ,ನಂತರ ಕೆ.ಬಿ.ಶಾಣಪ್ಪ ಮತ್ತು ಗೋವಿಂದ ಕಾರಜೋಳ ಮೊದಲಾದ ಎಡಗೈ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿತು.
ಇದರ ಲಾಭವನ್ನೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಡೆದಿದೆ. ಈ ರೀತಿ ಪಕ್ಷಕ್ಕೆ ಬಂದಿರುವ ಎಡಗೈ ಗುಂಪಿನ ದಲಿತ ನಾಯಕರು ಅನಂತಕುಮಾರ್ ಅವರಿಗೆ ನಿಷ್ಠಾವಂತರಾಗಿರುವುದು ನಿಜ. ಈ ಹಿನ್ನೆಲೆಯಲ್ಲಿ ಕಾರಜೋಳ ಅವರು ಅಧ್ಯಕ್ಷರಾಗಿಬಿಟ್ಟರೆ ತಮಗೆ ಅನುಕೂಲ ಎಂದು ಅನಂತಕುಮಾರ್ ಸಹಜವಾಗಿ ತಿಳಿದುಕೊಂಡಿದ್ದಾರೆ. ಆದರೆ ಜನತಾ ಪರಿವಾರದಿಂದ ಬಂದ `ಹೊರಗಿನವರನ್ನು' ಸಂಘ ಪರಿವಾರ ಒಪ್ಪುವುದೇ?
ಅನಂತಕುಮಾರ್ ಅವರ ಈ ಎಲ್ಲ ಲೆಕ್ಕಾಚಾರದೊಳಗೆ ಇನ್ನೊಂದು ಒಳಲೆಕ್ಕ ಇದೆ ಎಂದು ಹೇಳಲಾಗುತ್ತಿದೆ. ಅವರು ಯಾರ ಪರವಾಗಿಯೂ ಇಲ್ಲ ಅಧ್ಯಕ್ಷರಾಗಲು ತಾನೇ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವವರೂ ಇದ್ದಾರೆ. ಮಹತ್ವಾಕಾಂಕ್ಷಿಯಾದ ಅನಂತಕುಮಾರ್ ಅವರ ಶಕ್ತಿಯ ಮೂಲ ದೆಹಲಿಯಲ್ಲಿರುವ ಎಲ್.ಕೆ.ಅಡ್ವಾಣಿ. ಬಿಜೆಪಿಯ ಬಿಕ್ಕಟ್ಟುಗಳು ಪರಿಹಾರಕ್ಕಾಗಿ ದೆಹಲಿಗೆ ಹೋದಾಗಲೆಲ್ಲ ಆ ಪರಿಹಾರ ತಮ್ಮ ಕಡೆಯಾಗುವಂತೆ ಅನಂತಕುಮಾರ್ ನೋಡಿಕೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯ ಬಿಕ್ಕಟ್ಟು ದೆಹಲಿಗೆ ರವಾನೆಯಾಗಿರುವುದರಿಂದ ಅಲ್ಲಿ ಯಾರ ಕೈವಾಡ ನಡೆಯಬಹುದೆಂಬುದನ್ನು ಊಹಿಸುವುದು ಕಷ್ಟ ಅಲ್ಲ.

Thursday, March 7, 2013

ಸುಭದ್ರ ಸರ್ಕಾರಕ್ಕೆ ಪ್ರಬುದ್ಧ ಆಶೀರ್ವಾದ

ಬೆಂಗಳೂರು: ಉತ್ತರಪ್ರದೇಶದಲ್ಲಿ ಬೀಸಿರುವ ಬದಲಾವಣೆಯ ಬಿರುಗಾಳಿ ಬಹುಜನ ಸಮಾಜ ಪಕ್ಷವನ್ನು ಕೆಡವಿಹಾಕಿದೆ, ಭಾರತೀಯ ಜನತಾ ಪಕ್ಷ ತಲೆ ಎತ್ತದಂತೆ ಮಾಡಿದೆ, ಕಾಂಗ್ರೆಸ್ ಪಕ್ಷವನ್ನು ಒಂದಿಷ್ಟು ಮುಂದಕ್ಕೆ ತಳ್ಳಿ ಕೈಬಿಟ್ಟಿದೆ ಮತ್ತು ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರನ್ನೆತ್ತಿ ಮುಖ್ಯಮಂತ್ರಿ ಸಿಂಹಾಸನದ ಮೇಲೆ ಕೊಂಡೊಯ್ದು ಕೂರಿಸಿದೆ.
ಉತ್ತರಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದ್ದರೂ `ತ್ರಿಶಂಕು ವಿಧಾನಸಭೆ~ ನಿರ್ಮಾಣವಾಗಬಹುದೆಂಬ ಭವಿಷ್ಯವನ್ನು ಮಾತ್ರ ಆ ರಾಜ್ಯದ ಮತದಾರರು ಸುಳ್ಳಾಗಿಸಿದ್ದಾರೆ. ಯಾರ ಹಂಗಿಗೂ ಬೀಳದೆ ಸ್ವಂತಬಲದಿಂದ ಸರ್ಕಾರ ರಚಿಸುವಷ್ಟು ಬಹುಮತವನ್ನು ಸಮಾಜವಾದಿ ಪಕ್ಷಕ್ಕೆ ನೀಡಿದ್ದಾರೆ. ಈ ಮೂಲಕ ಸುಭದ್ರ ಸರ್ಕಾರ ಬೇಕೆಂಬ ಆಶಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ ಪ್ರಬುದ್ಧತೆಯನ್ನು ಮೆರೆದಿದ್ದಾರೆ. ಸಮಾಜವಾದಿ ಪಕ್ಷವನ್ನು `ರಿಮೋಟ್ ಕಂಟ್ರೋಲ್~ ಮೂಲಕ ನಿಯಂತ್ರಿಸಬಹುದೆಂಬ ಕಾಂಗ್ರೆಸ್ ಪಕ್ಷದ ದೂರದ ಆಲೋಚನೆಯನ್ನು ವಿಫಲಗೊಳಿಸಿದ್ದಾರೆ.
ಈ ಚುನಾವಣಾ ಫಲಿತಾಂಶ ತಕ್ಷಣದಲ್ಲಿ ರಾಷ್ಟ್ರರಾಜಕಾರಣದ ಮೇಲೆ ಪ್ರಭಾವ ಬೀರದೆ ಇದ್ದರೂ ನಿಧಾನವಾಗಿ ಮತ್ತೊಂದು ಸುತ್ತಿನ ಧ್ರುವೀಕರಣಕ್ಕೆ ಚಾಲನೆ ನೀಡಲೂಬಹುದು.ಮಹತ್ವಾಕಾಂಕ್ಷಿ ಮುಲಾಯಂಸಿಂಗ್ ಯಾದವ್ ರಾಜ್ಯರಾಜಕಾರಣಕ್ಕಷ್ಟೇ ತಮ್ಮನ್ನು ಕಟ್ಟಿಹಾಕಿಕೊಳ್ಳದೆ ಮತ್ತೆ ತೃತೀಯರಂಗವನ್ನು ಕಟ್ಟುವ ಮತ್ತು ಆ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತುದಿಗಾಲಲ್ಲಿ ನಿಲ್ಲಿಸುವ ಪ್ರಯತ್ನ ಮಾಡಬಹುದು. ಜುಲೈ ತಿಂಗಳಿನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆ ಹಾಗೂ ಮುಂದಿನ ವರ್ಷ ಕೆಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳನ್ನು ತೃತೀಯರಂಗದ ಶಕ್ತಿಪ್ರದರ್ಶನಕ್ಕೆ ವೇದಿಕೆಯನ್ನಾಗಿ ಮಾಡಬಹುದು.
ಸಮಾಜವಾದಿ ಪಕ್ಷಕ್ಕೆ ಗೆಲುವು ನಿರೀಕ್ಷಿತವಾದರೂ ಅದರ ಪ್ರಮಾಣ ಅದನ್ನು ಅಚ್ಚರಿಗೀಡುಮಾಡಿರಲೂ ಬಹುದು. ಕಳೆದ ಹತ್ತುವರ್ಷಗಳಲ್ಲಿ ಸಮಾಜವಾದಿ ಪಕ್ಷ ಸೋತರೂ-ಗೆದ್ದರೂ ಮತಪ್ರಮಾಣ ಮಾತ್ರ ಶೇಕಡಾ 25ರಿಂದ ಕೆಳಗಿಳಿದಿರಲಿಲ್ಲ. ಅಪ್ಪ ಗಟ್ಟಿಗೊಳಿಸಿದ್ದ ಹಳೆಬೇರಿಗೆ ಹೊಸ ಚಿಗುರಿನ ರೂಪದಲ್ಲಿ ಜತೆಯಾದ ಮಗ ಅಖಿಲೇಶ್ ಯಾದವ್ ಪಕ್ಷ ಹಿಂದೆಂದೂ ಕಾಣದಂತಹ ಅಭೂತಪೂರ್ವ ಗೆಲುವನ್ನು ತಂದುಕೊಟ್ಟಿದ್ದಾರೆ.
ಇದಕ್ಕೆ ಕಾರಣಗಳು ಹಲವಾರು. ಹಾದಿ ತಪ್ಪಿಹೋಗಿದ್ದ ಮುಲಾಯಂಸಿಂಗ್ ತನ್ನನ್ನು ತಿದ್ದಿಕೊಂಡು ಮತ್ತೆ ಹಳೆಯ `ನೇತಾಜಿ~ ಆಗಿಬಿಟ್ಟರು. ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಅವರನ್ನು ಜತೆಯಲ್ಲಿ ಸೇರಿಸಿಕೊಂಡ ಕಾರಣಕ್ಕೆ ದೂರ ಹೋಗಿದ್ದ ಮುಸ್ಲಿಮರನ್ನು ಒಲಿಸಿಕೊಂಡು ಅವರು ಮರಳಿ ಕರೆತಂದರು. ಮಾಯಾವತಿ ಅವರಿಂದ ಅವಗಣನೆಗೊಳಗಾಗಿರುವ ರೈತಸಮುದಾಯದ ನಿಜವಾದ ಹಿತರಕ್ಷಕ ಎಂದು ಬಿಂಬಿಸುವ ಮೂಲಕ ಅವರೂ ತಮ್ಮನ್ನು ಹಿಂಬಾಲಿಸುವಂತೆ ಮಾಡಿದರು.
ಅಪ್ಪನ ಪ್ರಯತ್ನಕ್ಕೆ ಜತೆ ನೀಡಿದ ಮಗ ಅಖಿಲೇಶ್ ಕುಖ್ಯಾತ ಕ್ರಿಮಿನಲ್‌ಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ ತಮ್ಮ ಪಕ್ಷಕ್ಕಂಟಿದ್ದ `ಗೂಂಡಾಗಿರಿ~ಯ ಕಳಂಕವನ್ನು ತೊಡೆದುಹಾಕಿದರು.ಇಂಗ್ಲೀಷ್ ಶಿಕ್ಷಣ ಮತ್ತು ಕಂಪ್ಯೂಟರ್ ಬಗ್ಗೆ ಪಕ್ಷದ ಪುರಾತನ ಆಲೋಚನೆಯನ್ನು ಬದಲಾಯಿಸಿ ಪಕ್ಷಕ್ಕೆ ಆಧುನಿಕ ಕಾಲಕ್ಕೆ ಹೊಂದುವ ಚಹರೆ ನೀಡಿದರು. ಅಭಿವೃದ್ಧಿಯ ಅಜೆಂಡಾವನ್ನು ಚರ್ಚೆಗೊಡ್ಡುವ ಜತೆಯಲ್ಲಿ ಜಾತಿಯನ್ನು ಮೀರಿ ರಾಜಕೀಯ ಮಾಡುವ ಸಂದೇಶ ನೀಡಿ ಯುವ ಮತದಾರರನ್ನು ಆಕರ್ಷಿಸಿದರು. ಹೊಸಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸುವಂತೆ ನೋಡಿಕೊಂಡರು.
 ಮಾಯಾವತಿ ಸೋಲು ಅವರಿಗೆ ಅನಿರೀಕ್ಷಿತವಾದರೂ ಅವರ ರಾಜಕೀಯ ಮತ್ತು ಆಡಳಿತವನ್ನು ಗಮನಿಸುತ್ತಾ ಬಂದವರಿಗೆ ನಿರೀಕ್ಷಿತವಾಗಿತ್ತು. ಆದರೆ ಉತ್ತರಪ್ರದೇಶದ ಮತದಾರರು ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ತಮ್ಮನ್ನು ಸೋಲಿಸುತ್ತಾರೆ ಎಂದು ಆಕೆ ನಿರೀಕ್ಷಿಸಿರಲಿಕ್ಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಹುಜನಸಮಾಜ ಪಕ್ಷ ಮೇಲ್ಜಾತಿ ವಿರುದ್ಧದ ತನ್ನ ನಿಲುವನ್ನು ಕೈಬಿಟ್ಟು ನಡೆಸಿದ ಬ್ರಾಹ್ಮಣಜೋಡೊ ಕಾರ್ಯಕ್ರಮದ ರಾಜಕೀಯ ಲಾಭ ಆ ಪಕ್ಷಕ್ಕೆ ಆಗಿತ್ತು. ಆದರೆ ಈ `ಅವಸರದ ಕ್ರಾಂತಿ~ 5 ವರ್ಷಗಳ ಅವಧಿಯಲ್ಲಿಯೇ ವಿಫಲಗೊಂಡಿದೆ. ದಲಿತರು ಮತ್ತು ಬ್ರಾಹ್ಮಣರ ನಡುವೆ ಘರ್ಷಣೆಗಳು ಪ್ರಾರಂಭವಾಗಿದ್ದವು.
ಇದರಿಂದಾಗಿ, ಬಿಎಸ್‌ಪಿ ತೆಕ್ಕೆಗೆ ಬಂದಿದ್ದ `ಅತಿಥಿ~ಗಳು ಹೊರಟು ಹೋದಂತಿದೆ. ಚುನಾವಣೆ ಸಮೀಪಿಸುತ್ತಿರುವಾಗಲೇ ಪಕ್ಷವನ್ನು ಶುಚಿಗೊಳಿಸಲು ಹೊರಟ ಮಾಯಾವತಿ ಅವರು 23 ಸಚಿವರನ್ನು ವಜಾಮಾಡಿದ್ದು ಮತ್ತು ಸುಮಾರು 100 ಶಾಸಕರಿಗೆ ಟಿಕೆಟ್ ನಿರಾಕರಿಸಿದ್ದು ದೊಡ್ಡ ಮಟ್ಟದಲ್ಲಿ ರಾಜಕೀಯ ಹಾನಿ ಮಾಡಿದೆ. ಇದರಿಂದಾಗಿ ಭುಗಿಲೆದ್ದ ಭಿನ್ನಮತವನ್ನು ಎದುರಿಸುವ ಸಿದ್ಧತೆಯಾಗಲಿ, ಅದಕ್ಕೆ ಬೇಕಾದಷ್ಟು ಸಮಯವಾಗಲಿ ಅವರಲ್ಲಿ ಇರಲಿಲ್ಲ. 
ದಮನಕ್ಕೊಳಗಾದ ದಲಿತರಿಗೆ ರಕ್ಷಣೆ ಮತ್ತು ಆತ್ಮಗೌರವವನ್ನೇನೋ ಮಾಯಾವತಿ ತಂದುಕೊಟ್ಟರು. ಆದರೆ ಅದರ ನಂತರ ಏನು ಎಂಬ ಪ್ರಶ್ನೆಗೆ ಅವರಲ್ಲಿಯೂ ಉತ್ತರ ಇರಲಿಲ್ಲ. ಹದಿನಾರು ವರ್ಷಗಳ ಕಾಲ ಬಿಹಾರದಲ್ಲಿ ಲಾಲುಪ್ರಸಾದ್ ಅವರನ್ನು ಬೆಂಬಲಿಸಿದ ಅಲ್ಲಿನ ಮತದಾರರು ಕೊನೆಗೆ ಕೈಬಿಟ್ಟದ್ದು ಇದೇ ಕಾರಣಕ್ಕಾಗಿ. ಸಾಮಾಜಿಕ ಭದ್ರತೆ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ದಲಿತರಿಗೆ ನೀಡಿದ ಮಾಯಾವತಿ  ದಲಿತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಯತ್ನ ಮಾಡಲೇ ಇಲ್ಲ. ಇದರ ಬದಲಿಗೆ ಅಂಬೇಡ್ಕರ್ ಉದ್ಯಾನ ಮತ್ತು ಪ್ರತಿಮೆಗಳ ಸ್ಥಾಪನೆಗಾಗಿ ಖರ್ಚುಮಾಡಿದ ಸಾವಿರಾರು ಕೋಟಿ ರೂಪಾಯಿ ದಲಿತೇತರರಲ್ಲಿ ಮಾತ್ರವಲ್ಲ ದಲಿತರಲ್ಲಿಯೂ ಅಸಮಾಧಾನ ಮೂಡಿಸಿರಬಹುದು.
ಭಾರತೀಯ ಜನತಾ ಪಕ್ಷ ಫಲಿತಾಂಶದ ಚುನಾವಣೆಗೆ ಮೊದಲೇ ಸೋಲನ್ನು ಒಪ್ಪಿಕೊಂಡಿರುವ ಸ್ಥಿತಿಯಲ್ಲಿತ್ತು. ಕಳೆದೆರಡು ದಶಕಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಕೋಮುವಾದದ ಬಣ್ಣ ಬಳಿಯಲು ಹೋಗದೆ ಸಂಯಮ ತೋರಿ ಬಿಜೆಪಿಯನ್ನು ಬಲ್ಲವರೆಲ್ಲರನ್ನೂ ಅಚ್ಚರಿಗೀಡುಮಾಡಿತ್ತು. ಇದರಿಂದಾಗಿ ಸಾಮಾನ್ಯವಾಗಿ ಬಿಜೆಪಿ ಪ್ರಚಾರಕ್ಕೆ ಹಿಮ್ಮೇಳದಂತೆ ಜತೆ ನೀಡುತ್ತಾ ಬಂದಿದ್ದ ಸಾಧು-ಸಂತರೂ ದೂರ ಉಳಿದು ಬಿಟ್ಟರು. ಗೆಲ್ಲುವ ಯಾವ ಕಾರ್ಯತಂತ್ರವೂ ಆ ಪಕ್ಷದಲ್ಲಿರಲಿಲ್ಲ.
ಉತ್ತರಪ್ರದೇಶದ ತನ್ನ ಎರಡನೆ ಹುಟ್ಟೂರು ಎಂದೇ ಹೇಳುತ್ತಿದ್ದ ಅಟಲ ಬಿಹಾರಿ ವಾಜಪೇಯಿ ಹಾಸಿಗೆಯಿಂದ ಎದ್ದು ಬರುವ ಸ್ಥಿತಿಯಲ್ಲಿರಲಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬರುವುದು ಅವರ ಪಕ್ಷದ ಕೆಲವರಿಗೆ ಬೇಕಿರಲಿಲ್ಲ. ಲಾಲ್‌ಕೃಷ್ಣ ಅಡ್ವಾಣಿ ಎಲ್ಲರ ನಾಯಕರಾಗಿ ಉಳಿದಿಲ್ಲ. ನಾಯಕಿಯಾಗಿ ಪ್ರಚಾರದಲ್ಲಿ ತೊಡಗಿದರೂ ಉಮಾ ಭಾರತಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಔದಾರ್ಯವನ್ನು ಪಕ್ಷದ ನಾಯಕರು ತೋರಲಿಲ್ಲ. ಮಧ್ಯಪ್ರದೇಶವನ್ನು ಬಿಟ್ಟು ಬರುವ ಮನಸ್ಸು ಅವರಿಗೂ ಇರಲಿಲ್ಲ. ಆದುದರಿಂದ ಗಂಭೀರ ರಾಜಕಾರಣದಲ್ಲಿ ತೊಡಗಿರುವ ಪಕ್ಷ ತಮ್ಮದು ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಬಿಜೆಪಿಯ ಸದಸ್ಯ ಬಲ ಮತ್ತು ಮತಪ್ರಮಾಣ ಕಡಿಮೆಯಾಗಿದೆ.
ರಾಹುಲ್‌ಗಾಂಧಿಯವರ ಆಕ್ರಮಣಕಾರಿ ಪ್ರಚಾರದ ಮೂಲಕ ಬೆಂಬಲಿಗರ ನಿರೀಕ್ಷೆ ಗಗನಕ್ಕೇರುವಂತೆ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಅದಕ್ಕೆ ತಕ್ಕ ಸಾಧನೆಯನ್ನು ಮಾಡಿ ತೋರಿಸಲಾಗಲಿಲ್ಲ. ತನ್ನ ಸದಸ್ಯಬಲವನ್ನು ದುಪ್ಪಟ್ಟು ಮಾಡಿಕೊಳ್ಳುವ ಜತೆಯಲ್ಲಿ ಮತಪ್ರಮಾಣವನ್ನು ಹೆಚ್ಚಿಸಿಕೊಂಡರೂ ಉತ್ತರಪ್ರದೇಶದ ರಾಜಕೀಯವನ್ನು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ನಿಯಂತ್ರಿಸುವಷ್ಟು ಶಕ್ತಿಯನ್ನು ಗಳಿಸಿಕೊಳ್ಳಲಿಕ್ಕೆ ಸಾಧ್ಯವಾಗಿಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯಿಂದ ಪ್ರಾರಂಭವಾದ ಪಕ್ಷದ ಬಲವರ್ಧನೆಯ ಪ್ರಕ್ರಿಯೆ ಈ ಚುನಾವಣೆಯಲ್ಲಿಯೂ ಮುಂದುವರಿದಿದೆ. ಇದು ಮತಪ್ರಮಾಣದಲ್ಲಿನ ಹೆಚ್ಚಳದಲ್ಲಿ ವ್ಯಕ್ತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 320 ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ದೊಡ್ಡಪ್ರಮಾಣದ ಮತಗಳು ಬೇಕಿತ್ತು. ಆ ಪ್ರಮಾಣದಲ್ಲಿ ಮತ ಬಂದಿಲ್ಲ.
ಕಾಂಗ್ರೆಸ್ ಹಿನ್ನಡೆಗೆ 22 ವರ್ಷಗಳ ರಾಜಕೀಯ ವನವಾಸದಿಂದಾಗಿ ದುರ್ಬಲಗೊಂಡಿರುವ ಪಕ್ಷದ ಸಂಘಟನೆಯೂ ಕಾರಣ.  ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿ ಅವರಿಗೆ ಎದುರಾಗಿ ಬಲಿಷ್ಠವಾದ ಸ್ಥಳೀಯ ನಾಯಕತ್ವವನ್ನು ಬಿಂಬಿಸಲು ಸಾಧ್ಯವಾಗದೆ ಇರುವುದು ಕೂಡಾ ಕಾಂಗ್ರೆಸ್ ಪಕ್ಷದ ದೌರ್ಬಲ್ಯ.
ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಚುನಾವಣಾ ಪೂರ್ವದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಾಗಿ ಮಾಡಿದ ಘೋಷಣೆ ಮತ್ತು ಪ್ರಚಾರ ಕಾಲದಲ್ಲಿ ಅದನ್ನು ಬಳಸಿಕೊಂಡ ರೀತಿ ಕೂಡಾ ಆ ಪಕ್ಷಕ್ಕೆ ತಿರುಗುಬಾಣವಾಗಿ ಹೋಯಿತು. ಪ್ರಿಯಾಂಕಾಗಾಂಧಿ ಪ್ರಚಾರ ಮಾಧ್ಯಮದ ಗಮನ ಸೆಳೆದರೂ ಅಮೇಠಿ ಮತ್ತು ರಾಯಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಗೆಲುವು ತಂದುಕೊಡಲಾಗಲಿಲ್ಲ.  2014ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡ ರಾಹುಲ್ ಗಾಂಧಿಯವರಿಗೆ ಫಲಿತಾಂಶ ಉತ್ತೇಜನ ನೀಡುವಂತಹದ್ದಲ್ಲ.
ಚುನಾವಣಾ ಫಲಿತಾಂಶದಲ್ಲಿಯೇ ರಾಜಕಾರಣದ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಮುಲಾಯಂಸಿಂಗ್  ನಿಜಕ್ಕೂ ಬದಲಾಗಿದ್ದಾರೆಯೇ? ಚುನಾವಣೆಯಲ್ಲಿನ ಸೋಲು ಮಾಯಾವತಿಯವರಲ್ಲಿ ಆತ್ಮಾವಲೋಕನಕ್ಕೆ ಪ್ರೇರಣೆ ನೀಡಲಿದೆಯೇ? ಕೋಮುವಾದಿ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವ ಈಗಿನ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿ ಉಳಿಯಲಿದೆಯೇ? ಆಕ್ರಮಣಕಾರಿ ರಾಜಕೀಯವನ್ನು ಪ್ರಾರಂಭಿಸಿರುವ ಕಾಂಗ್ರೆಸ್ ಪಕ್ಷ ರಚನಾತ್ಮಕ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಲಿದೆಯೇ?- ಇವೆಲ್ಲವೂ ಮುಂದಿನ ದಿನಗಳಲ್ಲಿ ಕೇಳಿಬರಲಿರುವ ಹೊಸ ಪ್ರಶ್ನೆಗಳು.

Sunday, March 3, 2013

ಪ್ರಜಾಪ್ರಭುತ್ವವನ್ನು ಬಾಧಿಸುತ್ತಿರುವ ಪಕ್ಷಾಂತರದ ರೋಗ

ಪಕ್ಷಾಂತರಿಗಳಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದು ಹೇಳುತ್ತಿರುವ ಕಡು ಆಶಾವಾದಿಗಳು ಈಗಲೂ ನಮ್ಮಲ್ಲಿದ್ದಾರೆ. ಸಂವಿಧಾನದ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರೂ ಇದೇ ರೀತಿಯ ವಿಶ್ವಾಸ ಹೊಂದಿದ್ದವರು.
ಈ ಕಾರಣದಿಂದಲೇ ಅವರು `ಯಾವುದೇ ಜನಪ್ರತಿನಿಧಿ ವೈಯಕ್ತಿಕವಾಗಿ ಇಲ್ಲವೇ ಗುಂಪಾಗಿ, ಪಕ್ಷದಿಂದ ಇಲ್ಲವೆ ಮೈತ್ರಿಕೂಟದಿಂದ ಪಕ್ಷಾಂತರ ಹೊಂದಿದರೆ ಅಂತಹವರು ಜನಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು, ಪಕ್ಷ ವಿಭಜನೆಗೆ ಕೂಡಾ ಅವಕಾಶ ನೀಡಬಾರದು' ಎಂದು ಶಿಫಾರಸು ಮಾಡಿದ್ದರು.
ಈಗಿನ ಪಕ್ಷಾಂತರ ನಿಷೇಧ ಕಾಯ್ದೆಗೆ ಈ ಶಿಫಾರಸಿನ ಆಧಾರದಲ್ಲಿ  ತಿದ್ದುಪಡಿ ಮಾಡಿದರೆ ಪಕ್ಷಾಂತರ ಪಿಡುಗನ್ನು ನಿಯಂತ್ರಿಸಬಹುದೇನೋ ಎಂಬ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿಯೇ ಕರ್ನಾಟಕದಲ್ಲಿ `ಆಪರೇಷನ್ ಕಮಲ' ನಡೆದು ಅಂತಹ ತಿದ್ದುಪಡಿ ಕೂಡಾ ವ್ಯರ್ಥ ಪ್ರಯತ್ನ ಎಂಬ ಸಂದೇಶ ನೀಡಿದೆ.
ಕರ್ನಾಟಕದಲ್ಲಿ ಪಕ್ಷಾಂತರ ಮಾಡಿದವರು ತಮ್ಮ ಸ್ಥಾನಕ್ಕೆರಾಜೀನಾಮೆ ನೀಡಿ ಹಿಂದಿನ ಕ್ಷೇತ್ರದಿಂದಲೇ ಮರುಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಸಂವಿಧಾನಕ್ಕೆ ಸವಾಲು ಹಾಕಿದ್ದರು.
ಪಕ್ಷಾಂತರ ಎಂಬ ರೋಗ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಈ ಬಗೆಯಲ್ಲಿ ದುರ್ಬಲಗೊಳಿಸಿ ನಗೆಪಾಟಲಿಗೀಡುಮಾಡಲಿದೆ ಎಂದು ಬಹುಶಃ ಸಂವಿಧಾನತಜ್ಞರು ಕೂಡಾ ನಿರೀಕ್ಷಿಸಿರಲಿಲ್ಲ. ಈ ಪಿಡುಗನ್ನು ನಿಯಂತ್ರಿಸುವ ಮೊದಲ ಪ್ರಯತ್ನ ನಡೆದದ್ದು 1968ರಲ್ಲಿ.
ಕಾಂಗ್ರೆಸ್ ಸದಸ್ಯ ಪಿ.ಎ.ವೆಂಕಟಸುಬ್ಬಯ್ಯ ಈ ಉದ್ದೇಶದ ಖಾಸಗಿ ಸದಸ್ಯರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಅದರ ಪರಿಣಾಮವಾಗಿ ನೇಮಕಗೊಂಡದ್ದು ವೈ.ಬಿ.ಚವ್ಹಾಣ್ ನೇತೃತ್ವದ ಸಮಿತಿ. ಅದು ನೀಡಿದ ವರದಿ ಬಗ್ಗೆ ಚರ್ಚೆಯೇ ನಡೆಯಲಿಲ್ಲ.
1978ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಂಡಿಸಬಯಸಿದಾಗ ಆಡಳಿತ ಮತ್ತು ವಿರೋಧ ಪಕ್ಷಗಳೆರಡು ವಿರೋಧಿಸಿದ್ದವು. ಕೊನೆಗೆ ಮೊರಾರ್ಜಿ ದೇಸಾಯಿ ಸರ್ಕಾರ ಪಕ್ಷಾಂತರಕ್ಕೆ ಬಲಿಯಾಗಿದ್ದು ಇತಿಹಾಸ.
ಕೊನೆಗೂ ಇದರಲ್ಲಿ ಯಶಸ್ಸು ಕಂಡದ್ದು ರಾಜೀವ್‌ಗಾಂಧಿಯವರು. 1985ರಲ್ಲಿ ಪ್ರಧಾನಿ ರಾಜೀವ್‌ಗಾಂಧಿ ಪಕ್ಷಾಂತರವನ್ನು ನಿಷೇಧಿಸಲು ಸಂವಿಧಾನಕ್ಕೆ 52ನೇ ತಿದ್ದುಪಡಿ ಮಾಡಿ ಹತ್ತನೆ ಶೆಡ್ಯೂಲ್‌ನಲ್ಲಿ ಸೇರಿಸಲು ಹೊರಟಾಗ  ಅದನ್ನು ಹಿರಿಯ ಸಮಾಜವಾದಿ ಮಧು ಲಿಮಯೆ ಮತ್ತು ಸಂವಿಧಾನ ತಜ್ಞ ನಾನಿ ಪಾಲ್ಖಿವಾಲ ಬಲವಾಗಿ ವಿರೋಧಿಸಿದ್ದರು.
`ತಮ್ಮ ನಂಬಿಕೆಗೆ ಅನುಗುಣವಾಗಿ ಮತಚಲಾಯಿಸಲು ಸದಸ್ಯರಿಗೆ ಅವಕಾಶ ನಿರಾಕರಿಸಿದರೆ ಅವರನ್ನು ಆಯ್ಕೆ ಮಾಡಿದ ಮತದಾರರ ತೀರ್ಪನ್ನು ಪ್ರಶ್ನಿಸಿದಂತಾಗುತ್ತದೆ. ಸೈದ್ಧಾಂತಿಕ ನೆಲೆಯ ಪಕ್ಷ ವಿಭಜನೆಗೆ ಅವಕಾಶ ನೀಡಬೇಕು, ಇಲ್ಲವಾದರೆ ಪಕ್ಷದಲ್ಲಿ ಕೆಲವು ನಾಯಕರ ಒಡೆತನಕ್ಕೆ ಉಳಿದವರು ಬಯಲಾಗುತ್ತದೆ' ಎಂದು ಸಂಸತ್‌ನಲ್ಲಿ  ಅವರಿಬ್ಬರು ವಾದಿಸಿದ್ದರು.
ಪಕ್ಷಾಂತರ ನಿಷೇಧ ಎನ್ನುವುದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವವನ್ನು ಮಾತ್ರವಲ್ಲ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುತ್ತದೆ ಎಂದು ಆ ಮಹಾನುಭಾವರು ನಂಬಿದ್ದರು. ಈ ಕಾರಣಕ್ಕಾಗಿಯೇ ರಾಜೀವ್‌ಗಾಂಧಿಯವರು ಮೂಲಮಸೂದೆಯಲ್ಲಿ ಬದಲಾವಣೆ ಮಾಡಿ ಮೂರನೆ ಒಂದರಷ್ಟು ಸದಸ್ಯರ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ರಾಜೀವ್‌ಗಾಂಧಿ ಜಾರಿಗೆ ತಂದ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಚುನಾಯಿತ ಸದಸ್ಯ ಸ್ವಇಚ್ಛೆಯಿಂದ ರಾಜಕೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಪಕ್ಷ ಹೊರಡಿಸಿದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದರೆ ಇಲ್ಲವೆ ಪೂರ್ವಾನುಮತಿ ಪಡೆಯದೆ ಗೈರುಹಾಜರಾದರೆ ಅನರ್ಹರಾಗುತ್ತಾರೆ. ಆದರೆ ಒಂದು ಪಕ್ಷದ ಒಟ್ಟು ಸದಸ್ಯ ಬಲದ ಮೂರನೆ ಒಂದರಷ್ಟು ಸದಸ್ಯರು `ಪಕ್ಷಾಂತರ'ಗೊಂಡರೆ ಅದು `ವಿಲೀನ' ಆಗುತ್ತಿತ್ತು.
ಅಂತಹ ಪಕ್ಷಾಂತರಿಗಳನ್ನು ಅನರ್ಹಗೊಳಿಸುವಂತಿರಲಿಲ್ಲ. ಈ ಕಾರಣಕ್ಕಾಗಿಯೇ ಚುನಾವಣಾ ಸುಧಾರಣೆಯ ದಿನೇಶ್ ಗೋಸ್ವಾಮಿ ಸಮಿತಿ, ಕಾನೂನು ಆಯೋಗ ಮತ್ತು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣಾ ಪುನರ್‌ಪರಿಶೀಲನಾ ಆಯೋಗ 52ನೇ ತಿದ್ದುಪಡಿಯನ್ನು ವಿರೋಧಿಸಿದ್ದವು.
`ವೈಯಕ್ತಿಕ ಪಕ್ಷಾಂತರಕ್ಕೆ ಕಡಿವಾಣ ಹಾಕಿ ಸಾಮೂಹಿಕ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದೆ' ಎನ್ನುವುದು ಈ ಕಾಯ್ದೆಯ ವಿರುದ್ಧದ ಮುಖ್ಯ ಆರೋಪವಾಗಿತ್ತು. 2003ರಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ 91ನೇ ತಿದ್ದುಪಡಿ ಮಾಡುವ ಮೂಲಕ ಈ ಅಡ್ಡದಾರಿಯನ್ನು ಮುಚ್ಚುವ ಪ್ರಯತ್ನ ಮಾಡಿತು.
`ವಿಲೀನ'ಗೊಳ್ಳಬೇಕಾದರೆ ಮೂರನೆ ಒಂದರಷ್ಟಲ್ಲ, ಮೂರನೆ ಎರಡರಷ್ಟು ಸದಸ್ಯರು ಪಕ್ಷಾಂತರ ಮಾಡಿರಬೇಕು ಎಂದು ಈ ತಿದ್ದುಪಡಿ ಹೇಳಿದೆ. ಇದಾದ ನಂತರವೂ ಪಕ್ಷಾಂತರದ ರೋಗ ನಿಂತಿಲ್ಲ.
ಪಕ್ಷಾಂತರ ನಿಷೇಧ ಕಾಯ್ದೆಯ ಜಾರಿಯಲ್ಲಿ ಅತ್ಯಂತ ದುರ್ಬಲ ಕೊಂಡಿ ಸಭಾಧ್ಯಕ್ಷರದ್ದು. ಕಾಯ್ದೆ ಜಾರಿಗೆ ಬಂದ ನಂತರದ ಅವಧಿಯಲ್ಲಿ ನಡೆದ ಪಕ್ಷಾಂತರ ವಿವಾದಗಳನ್ನೆಲ್ಲ ನೋಡಿದರೆ ಅವುಗಳಲ್ಲಿ ಹೆಚ್ಚಿನ ಪ್ರಕರಣಗಳ ಕೇಂದ್ರ ಸ್ಥಾನದಲ್ಲಿ ಕಾಣುತ್ತಿರುವುದು ಸಭಾಧ್ಯಕ್ಷರು ಮತ್ತು ರಾಜ್ಯಪಾಲರು.
ಕರ್ನಾಟಕವೂ ಸೇರಿದಂತೆ ಮೇಘಾಲಯ,ಮಿಜೋರಾಂ,ನಾಗಲ್ಯಾಂಡ್,ಗೋವಾ, ತಮಿಳುನಾಡು, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿನ ಪಕ್ಷಾಂತರ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಮೂಲಕಾಯ್ದೆಯಲ್ಲಿ ಸಭಾಧ್ಯಕ್ಷರಿಗೆ ಪರಮಾಧಿಕಾರ ಇತ್ತು.
ಅವರು ಕೈಗೊಂಡ ನಿರ್ಧಾರವನ್ನು ನ್ಯಾಯಾಲಯ ಕೂಡಾ ಪ್ರಶ್ನಿಸುವಂತಿರಲಿಲ್ಲ. ಆದರೆ `ಸಭಾಧ್ಯಕ್ಷರ ತೀರ್ಮಾನ ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ' ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಸಭಾಧ್ಯಕ್ಷರ ನಿರಂಕುಶ ಅಧಿಕಾರಕ್ಕೆ ಕಡಿವಾಣ ಬಿದ್ದರೂ ಅವರು ಅಡ್ಡಮಾರ್ಗ ಹಿಡಿಯುವುದನ್ನು ತಪ್ಪಿಸಲು ಆಗಿಲ್ಲ.
ಸಭಾಧ್ಯಕ್ಷರು ಮೂಲತಃ ರಾಜಕಾರಣಿಗಳೇ ಆಗಿರುವುದರಿಂದ ಅವರ ನಿರ್ಧಾರಗಳಲ್ಲಿ ರಾಜಕೀಯ ಒಲವು ನಿಲುವುಗಳ ಪ್ರಭಾವ ಸಹಜ. ಸಾಮಾನ್ಯವಾಗಿ ಆಡಳಿತ ಪಕ್ಷದ ಶಾಸಕರೇ ಸಭಾಧ್ಯಕ್ಷರಾಗಿ ಆಯ್ಕೆಯಾಗುವ ಕಾರಣ ಅವರು ತನ್ನ ಪಕ್ಷದ ಹಿತವನ್ನು ಮೀರಿ ಪಕ್ಷಾತೀತವಾಗಿ ನಡೆದುಕೊಳ್ಳುವಷ್ಟು ನ್ಯಾಯನಿಷ್ಠುರರಾಗಿರುವುದು ಸಾಧ್ಯವೂ ಇಲ್ಲವೇನೋ? ಸಭಾಧ್ಯಕ್ಷರ ಹುದ್ದೆಯ ದುರುಪಯೋಗಕ್ಕೆ ಇದಕ್ಕೆ 1993 ಮತ್ತು 1994ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಎರಡು ತೀರ್ಪುಗಳಿಗೆ ಕಾರಣವಾದ ಗೋವಾ ರಾಜ್ಯದ ಪಕ್ಷಾಂತರ ಪ್ರಕರಣಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಇರಲಾರದು.
ಆ ಪ್ರಕರಣದಲ್ಲಿ ಸಭಾಧ್ಯಕ್ಷರೇ ಪಕ್ಷಾಂತರಿಗಳ ಜತೆ ಸೇರಿ ಮುಖ್ಯಮಂತ್ರಿಗಳಾಗಿಬಿಟ್ಟಿದ್ದರು. ಎಷ್ಟೊ ಸಂದರ್ಭಗಳಲ್ಲಿ ಸಭಾಧ್ಯಕ್ಷರಿಗೆ ಮುಖ್ಯವಾಗಿ ವಿಧಾನಸಭಾಧ್ಯಕ್ಷರಿಗೆ ಪಕ್ಷಾಂತರ ನಿಷೇಧದಂತಹ ಕಾನೂನಿಗೆ ಸಂಬಂಧಿಸಿದ ಸಂಕೀರ್ಣ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಅರ್ಹತೆ ಮತ್ತು ತರಬೇತಿ ಇರದೆ ಇರುವುದು ಕೂಡಾ ತಪ್ಪು ನಿರ್ಧಾರಕ್ಕೆ ಕಾರಣವಾಗಿದೆ.
ಈ ಕಾರಣಗಳಿಗಾಗಿಯೇ ಪಕ್ಷಾಂತರ ಮಾಡಿದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡದೆ ಅದನ್ನು ಚುನಾವಣಾ ಆಯೋಗಕ್ಕೆ ಬಿಡಬೇಕು ಎಂದು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣಾ ಪುನರ್‌ಪರಿಶೀಲನಾ ಆಯೋಗ ಶಿಫಾರಸು ಮಾಡಿತ್ತು.
ಪಕ್ಷಾಂತರ ವಿವಾದವನ್ನು ಕೇಂದ್ರಮಟ್ಟದಲ್ಲಿ ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಮಟ್ಟದಲ್ಲಿ ರಾಜ್ಯಪಾಲರ ವಿವೇಚನೆಗೆ ನೀಡಬೇಕೆಂಬ ಅಭಿಪ್ರಾಯ ಕೂಡಾ ಇದೆ. ಆದರೆ ಈ ಎರಡು ಸಾಂವಿಧಾನಿಕ ಹುದ್ದೆಗಳು ಕೂಡಾ ಆಡಳಿತ ಪಕ್ಷದ ರಬ್ಬರ್‌ಸ್ಟಾಂಪ್‌ಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಇರುವ ಕಾರಣ ಈ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಸಿಕ್ಕಿಲ್ಲ.
ಇದ್ಯಾವುದೂ ಬೇಡ ಎಂದಾದರೆ ಪಕ್ಷಾಂತರ ವಿವಾದ ಇತ್ಯರ್ಥಕ್ಕೆ ಕೇಂದ್ರದಲ್ಲಿ ಸುಪ್ರೀಂಕೋರ್ಟ್ ಮತ್ತು ರಾಜ್ಯಗಳಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಬೇಕೆಂಬ ಸಲಹೆ ಕೂಡಾ ಇದೆ.
ಆದರೆ ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಾಗ ಎನ್‌ಡಿಎ ಸರ್ಕಾರ ಇವುಗಳಲ್ಲಿ ಯಾವ ಶಿಫಾರಸು,ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
ಪಕ್ಷ ವಿರೋಧಿ ಚಟುವಟಿಕೆಯ ವ್ಯಾಖ್ಯಾನ, ಪಕ್ಷಾಂತರ ನಿಷೇಧ ಕಾಯ್ದೆಯ ಇನ್ನೊಂದು ಮುಖ್ಯ ದೋಷ. ಈಗಿನ ಕಾಯ್ದೆಯ ಪ್ರಕಾರ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ನಡೆಸಿದ ನಂತರವಷ್ಟೇ  ಕ್ರಮ ಕೈಗೊಳ್ಳಲು ಅವಕಾಶ ಇರುವುದು. ವಿಪ್ ಉಲ್ಲಂಘನೆಗಾಗಿ ಪಕ್ಷಾಂತರಿ ಸದಸ್ಯರ ಸದಸ್ಯತ್ವ ರದ್ದಾದರೂ ಅವರು ಚಲಾಯಿಸಿದ ಮತಗಳು ಕ್ರಮಬದ್ಧವಾಗಿರುತ್ತದೆ.
ಆ ಮತಗಳಿಂದಲೇ ಒಂದು ಸರ್ಕಾರ ಉಳಿಯಬಹುದು ಇಲ್ಲವೆ ಪತನಗೊಳ್ಳಬಹುದು. ಇದರಿಂದ ಪಕ್ಷಾಂತರಿ ತನ್ನ ಉದ್ದೇಶದಲ್ಲಿ ಯಶಸ್ಸು ಕಂಡಂತಾಗುತ್ತದೆ.
ಇದಲ್ಲದೆ ತಮ್ಮ ಪಕ್ಷದ ನೀತಿಯನ್ನು ವಿರೋಧಿಸುವುದು, ತಮ್ಮ ಪಕ್ಷದ ನಾಯಕರನ್ನು ಟೀಕಿಸುವುದು ಮತ್ತು ವಿರೋಧಪಕ್ಷಗಳ ನಾಯಕರ ಜತೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವುದು ಪಕ್ಷ ವಿರೋಧಿ ಚಟುವಟಿಕೆ ಎಂಬುದು ನಿಜವಾದರೂ ಕಾನೂನಿನ ಪ್ರಕಾರ ಪಕ್ಷಾಂತರ ಅಲ್ಲ.
ಈ ರಕ್ಷಣೆಯನ್ನು ಬಳಸಿಕೊಂಡೇ ಬಿಜೆಪಿ ಬಂಡುಕೋರರು  ತಮ್ಮ ಸ್ಥಾನ ಉಳಿಸಿಕೊಂಡದ್ದಲ್ಲವೇ?ಪಕ್ಷಾಂತರದ ಪಿಡುಗನ್ನು ನಿಯಂತ್ರಿಸಲು ಕೇವಲ ಪಕ್ಷಾಂತರ ನಿಷೇಧ ಕಾಯ್ದೆಯೊಂದರಿಂದಲೇ ಸಾಧ್ಯವಾಗಲಾರದೆಂಬುದು ಇತ್ತೀಚಿನ ಹಲವಾರು ಪ್ರಕರಣಗಳಿಂದ ಸಾಬೀತಾಗಿದೆ.
ಅಭ್ಯರ್ಥಿಗಳ ಆಯ್ಕೆ ಮಟ್ಟದಲ್ಲಿಯೇ ಜರಡಿ ಹಿಡಿದು ಕಳಂಕಿತರನ್ನು ನಿವಾರಿಸಿಕೊಳ್ಳದಿದ್ದರೆ ಈ ಪಿಡುಗಿನ ನಿವಾರಣೆ ಅಸಾಧ್ಯ. ಇದಕ್ಕಾಗಿ ನ್ಯಾಯಾಲಯ ಮತ್ತು ಚುನಾವಣಾ ಆಯೋಗ ಪ್ರಯತ್ನ ಮಾಡಿದಾಗಲೆಲ್ಲ ಪಕ್ಷಭೇದ ಇಲ್ಲದೆ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಾ ಬಂದಿದ್ದಾರೆ.
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ತಾವು ಹೊಂದಿರುವ ಆಸ್ತಿ, ಅಪರಾಧದ ಹಿನ್ನೆಲೆ, ಬಾಕಿ ಇರಿಸಿಕೊಂಡಿರುವ ತೆರಿಗೆ ಮತ್ತು ಸಾಲ ಹಾಗೂ ಶೈಕ್ಷಣಿಕ ಅರ್ಹತೆಗಳನ್ನು ಕಡ್ಡಾಯವಾಗಿ ಪ್ರಮಾಣಪತ್ರಗಳ ಮೂಲಕ ಸಲ್ಲಿಸಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನ ಜಾರಿಗೆ ಬರದಂತೆ ತಡೆಯಲು ಆಗಿನ ಎನ್‌ಡಿಎ ಸರ್ಕಾರ ಏನೆಲ್ಲ ಸರ್ಕಸ್ ನಡೆಸಿದೆ ಎನ್ನುವುದನ್ನು ದೇಶದ ಜನತೆ ಗಮನಿಸಿದೆ. ಕೊನೆಗೂ ಛಲಬಿಡದ ಸುಪ್ರೀಂಕೋರ್ಟ್‌ನ ಪ್ರಯತ್ನದಿಂದಾಗಿಯೇ ಅದು ಜಾರಿಗೆ ಬಂದಿದ್ದು.
ಪಕ್ಷಾಂತರಿಗಳ ಜಾತಕವನ್ನು ಪರಿಶೀಲಿಸಿದರೆ ಇವರಲ್ಲಿ ಹೆಚ್ಚಿನವರು ಭ್ರಷ್ಟರು, ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಮತ್ತು ಜನಪೀಡಕರು ಆಗಿರುವುದು ಕಂಡುಬರುತ್ತದೆ. ಇಂತಹವರು ಚುನಾವಣಾ ಕಣಕ್ಕೆ ಇಳಿಯಲು ಸಾಧ್ಯವಾಗದಂತೆ ಮೂಲದಲ್ಲಿಯೇ ತಡೆಯಲು ಸಾಧ್ಯವಾದರೆ ಮಾತ್ರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದರ ಮೂಲ ಆಶಯಕ್ಕೆ ಭಂಗ ಉಂಟಾಗದಂತೆ ಉಳಿಸಿಕೊಂಡು ಹೋಗಲು ಸಾಧ್ಯ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಚುನಾವಣಾ ಆಯೋಗ ಚುನಾವಣಾ ಸುಧಾರಣೆಗಳ ಪ್ರಸ್ತಾವ ಸಲ್ಲಿಸಿರುವುದು.
ಐದುವರ್ಷಗಳಿಗಿಂತ ಹೆಚ್ಚು ಅವಧಿಯ ಜೈಲು ವಾಸದ ಶಿಕ್ಷೆಗೆ ಅರ್ಹವಾದ ಅಪರಾಧಗಳ ಆರೋಪ ಹೊತ್ತವರನ್ನು ಚುನಾವಣೆಯಲ್ಲಿ ಸ್ಪರ್ಧೆಗೆ ಅನರ್ಹರೆಂದು ಘೋಷಿಸಬೇಕು, ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಗಳಿಗೆ ವಿಧಿಸಲಾಗುತ್ತಿರುವ ಆರು ತಿಂಗಳ ಶಿಕ್ಷೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು, ತಟಸ್ಥ ಇಲ್ಲವೆ ನೆಗೆಟಿವ್ ಮತದಾನಕ್ಕೆ ಅವಕಾಶ ನೀಡಬೇಕು, ಪಕ್ಷಾಂತರಿ ಸದಸ್ಯರನ್ನು ಅನರ್ಹಗೊಳಿಸಲು ರಾಷ್ಟ್ರಪತಿ ಇಲ್ಲವೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಅಧಿಕಾರವನ್ನು ಚುನಾವಣಾ  ಆಯೋಗಕ್ಕೆನೀಡಬೇಕು ..ಇತ್ಯಾದಿ ಪ್ರಸ್ತಾವಗಳು ಕಳೆದ ಹತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿವೆ.
ಆದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವ ಮತ್ತು ತಿದ್ದುಪಡಿಯ ಮೂಲಕ ಅದನ್ನು ಇನ್ನಷ್ಟು ಬಲಗೊಳಿಸಿದ  ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳೇ ನಿರ್ಲಜ್ಚತೆಯಿಂದ ಪಕ್ಷಾಂತರವನ್ನು ಪ್ರೋತ್ಸಾಹಿಸುತ್ತಿರುವಾಗ ಚುನಾವಣಾ ಆಯೋಗದ ಪ್ರಸ್ತಾವಗಳನ್ನು ಜಾರಿಗೆ ತರುವವರು ಯಾರು?