Thursday, March 7, 2013

ಸುಭದ್ರ ಸರ್ಕಾರಕ್ಕೆ ಪ್ರಬುದ್ಧ ಆಶೀರ್ವಾದ

ಬೆಂಗಳೂರು: ಉತ್ತರಪ್ರದೇಶದಲ್ಲಿ ಬೀಸಿರುವ ಬದಲಾವಣೆಯ ಬಿರುಗಾಳಿ ಬಹುಜನ ಸಮಾಜ ಪಕ್ಷವನ್ನು ಕೆಡವಿಹಾಕಿದೆ, ಭಾರತೀಯ ಜನತಾ ಪಕ್ಷ ತಲೆ ಎತ್ತದಂತೆ ಮಾಡಿದೆ, ಕಾಂಗ್ರೆಸ್ ಪಕ್ಷವನ್ನು ಒಂದಿಷ್ಟು ಮುಂದಕ್ಕೆ ತಳ್ಳಿ ಕೈಬಿಟ್ಟಿದೆ ಮತ್ತು ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರನ್ನೆತ್ತಿ ಮುಖ್ಯಮಂತ್ರಿ ಸಿಂಹಾಸನದ ಮೇಲೆ ಕೊಂಡೊಯ್ದು ಕೂರಿಸಿದೆ.
ಉತ್ತರಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದ್ದರೂ `ತ್ರಿಶಂಕು ವಿಧಾನಸಭೆ~ ನಿರ್ಮಾಣವಾಗಬಹುದೆಂಬ ಭವಿಷ್ಯವನ್ನು ಮಾತ್ರ ಆ ರಾಜ್ಯದ ಮತದಾರರು ಸುಳ್ಳಾಗಿಸಿದ್ದಾರೆ. ಯಾರ ಹಂಗಿಗೂ ಬೀಳದೆ ಸ್ವಂತಬಲದಿಂದ ಸರ್ಕಾರ ರಚಿಸುವಷ್ಟು ಬಹುಮತವನ್ನು ಸಮಾಜವಾದಿ ಪಕ್ಷಕ್ಕೆ ನೀಡಿದ್ದಾರೆ. ಈ ಮೂಲಕ ಸುಭದ್ರ ಸರ್ಕಾರ ಬೇಕೆಂಬ ಆಶಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ ಪ್ರಬುದ್ಧತೆಯನ್ನು ಮೆರೆದಿದ್ದಾರೆ. ಸಮಾಜವಾದಿ ಪಕ್ಷವನ್ನು `ರಿಮೋಟ್ ಕಂಟ್ರೋಲ್~ ಮೂಲಕ ನಿಯಂತ್ರಿಸಬಹುದೆಂಬ ಕಾಂಗ್ರೆಸ್ ಪಕ್ಷದ ದೂರದ ಆಲೋಚನೆಯನ್ನು ವಿಫಲಗೊಳಿಸಿದ್ದಾರೆ.
ಈ ಚುನಾವಣಾ ಫಲಿತಾಂಶ ತಕ್ಷಣದಲ್ಲಿ ರಾಷ್ಟ್ರರಾಜಕಾರಣದ ಮೇಲೆ ಪ್ರಭಾವ ಬೀರದೆ ಇದ್ದರೂ ನಿಧಾನವಾಗಿ ಮತ್ತೊಂದು ಸುತ್ತಿನ ಧ್ರುವೀಕರಣಕ್ಕೆ ಚಾಲನೆ ನೀಡಲೂಬಹುದು.ಮಹತ್ವಾಕಾಂಕ್ಷಿ ಮುಲಾಯಂಸಿಂಗ್ ಯಾದವ್ ರಾಜ್ಯರಾಜಕಾರಣಕ್ಕಷ್ಟೇ ತಮ್ಮನ್ನು ಕಟ್ಟಿಹಾಕಿಕೊಳ್ಳದೆ ಮತ್ತೆ ತೃತೀಯರಂಗವನ್ನು ಕಟ್ಟುವ ಮತ್ತು ಆ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತುದಿಗಾಲಲ್ಲಿ ನಿಲ್ಲಿಸುವ ಪ್ರಯತ್ನ ಮಾಡಬಹುದು. ಜುಲೈ ತಿಂಗಳಿನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆ ಹಾಗೂ ಮುಂದಿನ ವರ್ಷ ಕೆಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳನ್ನು ತೃತೀಯರಂಗದ ಶಕ್ತಿಪ್ರದರ್ಶನಕ್ಕೆ ವೇದಿಕೆಯನ್ನಾಗಿ ಮಾಡಬಹುದು.
ಸಮಾಜವಾದಿ ಪಕ್ಷಕ್ಕೆ ಗೆಲುವು ನಿರೀಕ್ಷಿತವಾದರೂ ಅದರ ಪ್ರಮಾಣ ಅದನ್ನು ಅಚ್ಚರಿಗೀಡುಮಾಡಿರಲೂ ಬಹುದು. ಕಳೆದ ಹತ್ತುವರ್ಷಗಳಲ್ಲಿ ಸಮಾಜವಾದಿ ಪಕ್ಷ ಸೋತರೂ-ಗೆದ್ದರೂ ಮತಪ್ರಮಾಣ ಮಾತ್ರ ಶೇಕಡಾ 25ರಿಂದ ಕೆಳಗಿಳಿದಿರಲಿಲ್ಲ. ಅಪ್ಪ ಗಟ್ಟಿಗೊಳಿಸಿದ್ದ ಹಳೆಬೇರಿಗೆ ಹೊಸ ಚಿಗುರಿನ ರೂಪದಲ್ಲಿ ಜತೆಯಾದ ಮಗ ಅಖಿಲೇಶ್ ಯಾದವ್ ಪಕ್ಷ ಹಿಂದೆಂದೂ ಕಾಣದಂತಹ ಅಭೂತಪೂರ್ವ ಗೆಲುವನ್ನು ತಂದುಕೊಟ್ಟಿದ್ದಾರೆ.
ಇದಕ್ಕೆ ಕಾರಣಗಳು ಹಲವಾರು. ಹಾದಿ ತಪ್ಪಿಹೋಗಿದ್ದ ಮುಲಾಯಂಸಿಂಗ್ ತನ್ನನ್ನು ತಿದ್ದಿಕೊಂಡು ಮತ್ತೆ ಹಳೆಯ `ನೇತಾಜಿ~ ಆಗಿಬಿಟ್ಟರು. ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಅವರನ್ನು ಜತೆಯಲ್ಲಿ ಸೇರಿಸಿಕೊಂಡ ಕಾರಣಕ್ಕೆ ದೂರ ಹೋಗಿದ್ದ ಮುಸ್ಲಿಮರನ್ನು ಒಲಿಸಿಕೊಂಡು ಅವರು ಮರಳಿ ಕರೆತಂದರು. ಮಾಯಾವತಿ ಅವರಿಂದ ಅವಗಣನೆಗೊಳಗಾಗಿರುವ ರೈತಸಮುದಾಯದ ನಿಜವಾದ ಹಿತರಕ್ಷಕ ಎಂದು ಬಿಂಬಿಸುವ ಮೂಲಕ ಅವರೂ ತಮ್ಮನ್ನು ಹಿಂಬಾಲಿಸುವಂತೆ ಮಾಡಿದರು.
ಅಪ್ಪನ ಪ್ರಯತ್ನಕ್ಕೆ ಜತೆ ನೀಡಿದ ಮಗ ಅಖಿಲೇಶ್ ಕುಖ್ಯಾತ ಕ್ರಿಮಿನಲ್‌ಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ ತಮ್ಮ ಪಕ್ಷಕ್ಕಂಟಿದ್ದ `ಗೂಂಡಾಗಿರಿ~ಯ ಕಳಂಕವನ್ನು ತೊಡೆದುಹಾಕಿದರು.ಇಂಗ್ಲೀಷ್ ಶಿಕ್ಷಣ ಮತ್ತು ಕಂಪ್ಯೂಟರ್ ಬಗ್ಗೆ ಪಕ್ಷದ ಪುರಾತನ ಆಲೋಚನೆಯನ್ನು ಬದಲಾಯಿಸಿ ಪಕ್ಷಕ್ಕೆ ಆಧುನಿಕ ಕಾಲಕ್ಕೆ ಹೊಂದುವ ಚಹರೆ ನೀಡಿದರು. ಅಭಿವೃದ್ಧಿಯ ಅಜೆಂಡಾವನ್ನು ಚರ್ಚೆಗೊಡ್ಡುವ ಜತೆಯಲ್ಲಿ ಜಾತಿಯನ್ನು ಮೀರಿ ರಾಜಕೀಯ ಮಾಡುವ ಸಂದೇಶ ನೀಡಿ ಯುವ ಮತದಾರರನ್ನು ಆಕರ್ಷಿಸಿದರು. ಹೊಸಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸುವಂತೆ ನೋಡಿಕೊಂಡರು.
 ಮಾಯಾವತಿ ಸೋಲು ಅವರಿಗೆ ಅನಿರೀಕ್ಷಿತವಾದರೂ ಅವರ ರಾಜಕೀಯ ಮತ್ತು ಆಡಳಿತವನ್ನು ಗಮನಿಸುತ್ತಾ ಬಂದವರಿಗೆ ನಿರೀಕ್ಷಿತವಾಗಿತ್ತು. ಆದರೆ ಉತ್ತರಪ್ರದೇಶದ ಮತದಾರರು ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ತಮ್ಮನ್ನು ಸೋಲಿಸುತ್ತಾರೆ ಎಂದು ಆಕೆ ನಿರೀಕ್ಷಿಸಿರಲಿಕ್ಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಹುಜನಸಮಾಜ ಪಕ್ಷ ಮೇಲ್ಜಾತಿ ವಿರುದ್ಧದ ತನ್ನ ನಿಲುವನ್ನು ಕೈಬಿಟ್ಟು ನಡೆಸಿದ ಬ್ರಾಹ್ಮಣಜೋಡೊ ಕಾರ್ಯಕ್ರಮದ ರಾಜಕೀಯ ಲಾಭ ಆ ಪಕ್ಷಕ್ಕೆ ಆಗಿತ್ತು. ಆದರೆ ಈ `ಅವಸರದ ಕ್ರಾಂತಿ~ 5 ವರ್ಷಗಳ ಅವಧಿಯಲ್ಲಿಯೇ ವಿಫಲಗೊಂಡಿದೆ. ದಲಿತರು ಮತ್ತು ಬ್ರಾಹ್ಮಣರ ನಡುವೆ ಘರ್ಷಣೆಗಳು ಪ್ರಾರಂಭವಾಗಿದ್ದವು.
ಇದರಿಂದಾಗಿ, ಬಿಎಸ್‌ಪಿ ತೆಕ್ಕೆಗೆ ಬಂದಿದ್ದ `ಅತಿಥಿ~ಗಳು ಹೊರಟು ಹೋದಂತಿದೆ. ಚುನಾವಣೆ ಸಮೀಪಿಸುತ್ತಿರುವಾಗಲೇ ಪಕ್ಷವನ್ನು ಶುಚಿಗೊಳಿಸಲು ಹೊರಟ ಮಾಯಾವತಿ ಅವರು 23 ಸಚಿವರನ್ನು ವಜಾಮಾಡಿದ್ದು ಮತ್ತು ಸುಮಾರು 100 ಶಾಸಕರಿಗೆ ಟಿಕೆಟ್ ನಿರಾಕರಿಸಿದ್ದು ದೊಡ್ಡ ಮಟ್ಟದಲ್ಲಿ ರಾಜಕೀಯ ಹಾನಿ ಮಾಡಿದೆ. ಇದರಿಂದಾಗಿ ಭುಗಿಲೆದ್ದ ಭಿನ್ನಮತವನ್ನು ಎದುರಿಸುವ ಸಿದ್ಧತೆಯಾಗಲಿ, ಅದಕ್ಕೆ ಬೇಕಾದಷ್ಟು ಸಮಯವಾಗಲಿ ಅವರಲ್ಲಿ ಇರಲಿಲ್ಲ. 
ದಮನಕ್ಕೊಳಗಾದ ದಲಿತರಿಗೆ ರಕ್ಷಣೆ ಮತ್ತು ಆತ್ಮಗೌರವವನ್ನೇನೋ ಮಾಯಾವತಿ ತಂದುಕೊಟ್ಟರು. ಆದರೆ ಅದರ ನಂತರ ಏನು ಎಂಬ ಪ್ರಶ್ನೆಗೆ ಅವರಲ್ಲಿಯೂ ಉತ್ತರ ಇರಲಿಲ್ಲ. ಹದಿನಾರು ವರ್ಷಗಳ ಕಾಲ ಬಿಹಾರದಲ್ಲಿ ಲಾಲುಪ್ರಸಾದ್ ಅವರನ್ನು ಬೆಂಬಲಿಸಿದ ಅಲ್ಲಿನ ಮತದಾರರು ಕೊನೆಗೆ ಕೈಬಿಟ್ಟದ್ದು ಇದೇ ಕಾರಣಕ್ಕಾಗಿ. ಸಾಮಾಜಿಕ ಭದ್ರತೆ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ದಲಿತರಿಗೆ ನೀಡಿದ ಮಾಯಾವತಿ  ದಲಿತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಯತ್ನ ಮಾಡಲೇ ಇಲ್ಲ. ಇದರ ಬದಲಿಗೆ ಅಂಬೇಡ್ಕರ್ ಉದ್ಯಾನ ಮತ್ತು ಪ್ರತಿಮೆಗಳ ಸ್ಥಾಪನೆಗಾಗಿ ಖರ್ಚುಮಾಡಿದ ಸಾವಿರಾರು ಕೋಟಿ ರೂಪಾಯಿ ದಲಿತೇತರರಲ್ಲಿ ಮಾತ್ರವಲ್ಲ ದಲಿತರಲ್ಲಿಯೂ ಅಸಮಾಧಾನ ಮೂಡಿಸಿರಬಹುದು.
ಭಾರತೀಯ ಜನತಾ ಪಕ್ಷ ಫಲಿತಾಂಶದ ಚುನಾವಣೆಗೆ ಮೊದಲೇ ಸೋಲನ್ನು ಒಪ್ಪಿಕೊಂಡಿರುವ ಸ್ಥಿತಿಯಲ್ಲಿತ್ತು. ಕಳೆದೆರಡು ದಶಕಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಕೋಮುವಾದದ ಬಣ್ಣ ಬಳಿಯಲು ಹೋಗದೆ ಸಂಯಮ ತೋರಿ ಬಿಜೆಪಿಯನ್ನು ಬಲ್ಲವರೆಲ್ಲರನ್ನೂ ಅಚ್ಚರಿಗೀಡುಮಾಡಿತ್ತು. ಇದರಿಂದಾಗಿ ಸಾಮಾನ್ಯವಾಗಿ ಬಿಜೆಪಿ ಪ್ರಚಾರಕ್ಕೆ ಹಿಮ್ಮೇಳದಂತೆ ಜತೆ ನೀಡುತ್ತಾ ಬಂದಿದ್ದ ಸಾಧು-ಸಂತರೂ ದೂರ ಉಳಿದು ಬಿಟ್ಟರು. ಗೆಲ್ಲುವ ಯಾವ ಕಾರ್ಯತಂತ್ರವೂ ಆ ಪಕ್ಷದಲ್ಲಿರಲಿಲ್ಲ.
ಉತ್ತರಪ್ರದೇಶದ ತನ್ನ ಎರಡನೆ ಹುಟ್ಟೂರು ಎಂದೇ ಹೇಳುತ್ತಿದ್ದ ಅಟಲ ಬಿಹಾರಿ ವಾಜಪೇಯಿ ಹಾಸಿಗೆಯಿಂದ ಎದ್ದು ಬರುವ ಸ್ಥಿತಿಯಲ್ಲಿರಲಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬರುವುದು ಅವರ ಪಕ್ಷದ ಕೆಲವರಿಗೆ ಬೇಕಿರಲಿಲ್ಲ. ಲಾಲ್‌ಕೃಷ್ಣ ಅಡ್ವಾಣಿ ಎಲ್ಲರ ನಾಯಕರಾಗಿ ಉಳಿದಿಲ್ಲ. ನಾಯಕಿಯಾಗಿ ಪ್ರಚಾರದಲ್ಲಿ ತೊಡಗಿದರೂ ಉಮಾ ಭಾರತಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಔದಾರ್ಯವನ್ನು ಪಕ್ಷದ ನಾಯಕರು ತೋರಲಿಲ್ಲ. ಮಧ್ಯಪ್ರದೇಶವನ್ನು ಬಿಟ್ಟು ಬರುವ ಮನಸ್ಸು ಅವರಿಗೂ ಇರಲಿಲ್ಲ. ಆದುದರಿಂದ ಗಂಭೀರ ರಾಜಕಾರಣದಲ್ಲಿ ತೊಡಗಿರುವ ಪಕ್ಷ ತಮ್ಮದು ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಬಿಜೆಪಿಯ ಸದಸ್ಯ ಬಲ ಮತ್ತು ಮತಪ್ರಮಾಣ ಕಡಿಮೆಯಾಗಿದೆ.
ರಾಹುಲ್‌ಗಾಂಧಿಯವರ ಆಕ್ರಮಣಕಾರಿ ಪ್ರಚಾರದ ಮೂಲಕ ಬೆಂಬಲಿಗರ ನಿರೀಕ್ಷೆ ಗಗನಕ್ಕೇರುವಂತೆ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಅದಕ್ಕೆ ತಕ್ಕ ಸಾಧನೆಯನ್ನು ಮಾಡಿ ತೋರಿಸಲಾಗಲಿಲ್ಲ. ತನ್ನ ಸದಸ್ಯಬಲವನ್ನು ದುಪ್ಪಟ್ಟು ಮಾಡಿಕೊಳ್ಳುವ ಜತೆಯಲ್ಲಿ ಮತಪ್ರಮಾಣವನ್ನು ಹೆಚ್ಚಿಸಿಕೊಂಡರೂ ಉತ್ತರಪ್ರದೇಶದ ರಾಜಕೀಯವನ್ನು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ನಿಯಂತ್ರಿಸುವಷ್ಟು ಶಕ್ತಿಯನ್ನು ಗಳಿಸಿಕೊಳ್ಳಲಿಕ್ಕೆ ಸಾಧ್ಯವಾಗಿಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯಿಂದ ಪ್ರಾರಂಭವಾದ ಪಕ್ಷದ ಬಲವರ್ಧನೆಯ ಪ್ರಕ್ರಿಯೆ ಈ ಚುನಾವಣೆಯಲ್ಲಿಯೂ ಮುಂದುವರಿದಿದೆ. ಇದು ಮತಪ್ರಮಾಣದಲ್ಲಿನ ಹೆಚ್ಚಳದಲ್ಲಿ ವ್ಯಕ್ತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 320 ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ದೊಡ್ಡಪ್ರಮಾಣದ ಮತಗಳು ಬೇಕಿತ್ತು. ಆ ಪ್ರಮಾಣದಲ್ಲಿ ಮತ ಬಂದಿಲ್ಲ.
ಕಾಂಗ್ರೆಸ್ ಹಿನ್ನಡೆಗೆ 22 ವರ್ಷಗಳ ರಾಜಕೀಯ ವನವಾಸದಿಂದಾಗಿ ದುರ್ಬಲಗೊಂಡಿರುವ ಪಕ್ಷದ ಸಂಘಟನೆಯೂ ಕಾರಣ.  ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿ ಅವರಿಗೆ ಎದುರಾಗಿ ಬಲಿಷ್ಠವಾದ ಸ್ಥಳೀಯ ನಾಯಕತ್ವವನ್ನು ಬಿಂಬಿಸಲು ಸಾಧ್ಯವಾಗದೆ ಇರುವುದು ಕೂಡಾ ಕಾಂಗ್ರೆಸ್ ಪಕ್ಷದ ದೌರ್ಬಲ್ಯ.
ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಚುನಾವಣಾ ಪೂರ್ವದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಾಗಿ ಮಾಡಿದ ಘೋಷಣೆ ಮತ್ತು ಪ್ರಚಾರ ಕಾಲದಲ್ಲಿ ಅದನ್ನು ಬಳಸಿಕೊಂಡ ರೀತಿ ಕೂಡಾ ಆ ಪಕ್ಷಕ್ಕೆ ತಿರುಗುಬಾಣವಾಗಿ ಹೋಯಿತು. ಪ್ರಿಯಾಂಕಾಗಾಂಧಿ ಪ್ರಚಾರ ಮಾಧ್ಯಮದ ಗಮನ ಸೆಳೆದರೂ ಅಮೇಠಿ ಮತ್ತು ರಾಯಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಗೆಲುವು ತಂದುಕೊಡಲಾಗಲಿಲ್ಲ.  2014ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡ ರಾಹುಲ್ ಗಾಂಧಿಯವರಿಗೆ ಫಲಿತಾಂಶ ಉತ್ತೇಜನ ನೀಡುವಂತಹದ್ದಲ್ಲ.
ಚುನಾವಣಾ ಫಲಿತಾಂಶದಲ್ಲಿಯೇ ರಾಜಕಾರಣದ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಮುಲಾಯಂಸಿಂಗ್  ನಿಜಕ್ಕೂ ಬದಲಾಗಿದ್ದಾರೆಯೇ? ಚುನಾವಣೆಯಲ್ಲಿನ ಸೋಲು ಮಾಯಾವತಿಯವರಲ್ಲಿ ಆತ್ಮಾವಲೋಕನಕ್ಕೆ ಪ್ರೇರಣೆ ನೀಡಲಿದೆಯೇ? ಕೋಮುವಾದಿ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವ ಈಗಿನ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿ ಉಳಿಯಲಿದೆಯೇ? ಆಕ್ರಮಣಕಾರಿ ರಾಜಕೀಯವನ್ನು ಪ್ರಾರಂಭಿಸಿರುವ ಕಾಂಗ್ರೆಸ್ ಪಕ್ಷ ರಚನಾತ್ಮಕ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಲಿದೆಯೇ?- ಇವೆಲ್ಲವೂ ಮುಂದಿನ ದಿನಗಳಲ್ಲಿ ಕೇಳಿಬರಲಿರುವ ಹೊಸ ಪ್ರಶ್ನೆಗಳು.

Sunday, March 3, 2013

ಪ್ರಜಾಪ್ರಭುತ್ವವನ್ನು ಬಾಧಿಸುತ್ತಿರುವ ಪಕ್ಷಾಂತರದ ರೋಗ

ಪಕ್ಷಾಂತರಿಗಳಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದು ಹೇಳುತ್ತಿರುವ ಕಡು ಆಶಾವಾದಿಗಳು ಈಗಲೂ ನಮ್ಮಲ್ಲಿದ್ದಾರೆ. ಸಂವಿಧಾನದ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರೂ ಇದೇ ರೀತಿಯ ವಿಶ್ವಾಸ ಹೊಂದಿದ್ದವರು.
ಈ ಕಾರಣದಿಂದಲೇ ಅವರು `ಯಾವುದೇ ಜನಪ್ರತಿನಿಧಿ ವೈಯಕ್ತಿಕವಾಗಿ ಇಲ್ಲವೇ ಗುಂಪಾಗಿ, ಪಕ್ಷದಿಂದ ಇಲ್ಲವೆ ಮೈತ್ರಿಕೂಟದಿಂದ ಪಕ್ಷಾಂತರ ಹೊಂದಿದರೆ ಅಂತಹವರು ಜನಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು, ಪಕ್ಷ ವಿಭಜನೆಗೆ ಕೂಡಾ ಅವಕಾಶ ನೀಡಬಾರದು' ಎಂದು ಶಿಫಾರಸು ಮಾಡಿದ್ದರು.
ಈಗಿನ ಪಕ್ಷಾಂತರ ನಿಷೇಧ ಕಾಯ್ದೆಗೆ ಈ ಶಿಫಾರಸಿನ ಆಧಾರದಲ್ಲಿ  ತಿದ್ದುಪಡಿ ಮಾಡಿದರೆ ಪಕ್ಷಾಂತರ ಪಿಡುಗನ್ನು ನಿಯಂತ್ರಿಸಬಹುದೇನೋ ಎಂಬ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿಯೇ ಕರ್ನಾಟಕದಲ್ಲಿ `ಆಪರೇಷನ್ ಕಮಲ' ನಡೆದು ಅಂತಹ ತಿದ್ದುಪಡಿ ಕೂಡಾ ವ್ಯರ್ಥ ಪ್ರಯತ್ನ ಎಂಬ ಸಂದೇಶ ನೀಡಿದೆ.
ಕರ್ನಾಟಕದಲ್ಲಿ ಪಕ್ಷಾಂತರ ಮಾಡಿದವರು ತಮ್ಮ ಸ್ಥಾನಕ್ಕೆರಾಜೀನಾಮೆ ನೀಡಿ ಹಿಂದಿನ ಕ್ಷೇತ್ರದಿಂದಲೇ ಮರುಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಸಂವಿಧಾನಕ್ಕೆ ಸವಾಲು ಹಾಕಿದ್ದರು.
ಪಕ್ಷಾಂತರ ಎಂಬ ರೋಗ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಈ ಬಗೆಯಲ್ಲಿ ದುರ್ಬಲಗೊಳಿಸಿ ನಗೆಪಾಟಲಿಗೀಡುಮಾಡಲಿದೆ ಎಂದು ಬಹುಶಃ ಸಂವಿಧಾನತಜ್ಞರು ಕೂಡಾ ನಿರೀಕ್ಷಿಸಿರಲಿಲ್ಲ. ಈ ಪಿಡುಗನ್ನು ನಿಯಂತ್ರಿಸುವ ಮೊದಲ ಪ್ರಯತ್ನ ನಡೆದದ್ದು 1968ರಲ್ಲಿ.
ಕಾಂಗ್ರೆಸ್ ಸದಸ್ಯ ಪಿ.ಎ.ವೆಂಕಟಸುಬ್ಬಯ್ಯ ಈ ಉದ್ದೇಶದ ಖಾಸಗಿ ಸದಸ್ಯರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಅದರ ಪರಿಣಾಮವಾಗಿ ನೇಮಕಗೊಂಡದ್ದು ವೈ.ಬಿ.ಚವ್ಹಾಣ್ ನೇತೃತ್ವದ ಸಮಿತಿ. ಅದು ನೀಡಿದ ವರದಿ ಬಗ್ಗೆ ಚರ್ಚೆಯೇ ನಡೆಯಲಿಲ್ಲ.
1978ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಂಡಿಸಬಯಸಿದಾಗ ಆಡಳಿತ ಮತ್ತು ವಿರೋಧ ಪಕ್ಷಗಳೆರಡು ವಿರೋಧಿಸಿದ್ದವು. ಕೊನೆಗೆ ಮೊರಾರ್ಜಿ ದೇಸಾಯಿ ಸರ್ಕಾರ ಪಕ್ಷಾಂತರಕ್ಕೆ ಬಲಿಯಾಗಿದ್ದು ಇತಿಹಾಸ.
ಕೊನೆಗೂ ಇದರಲ್ಲಿ ಯಶಸ್ಸು ಕಂಡದ್ದು ರಾಜೀವ್‌ಗಾಂಧಿಯವರು. 1985ರಲ್ಲಿ ಪ್ರಧಾನಿ ರಾಜೀವ್‌ಗಾಂಧಿ ಪಕ್ಷಾಂತರವನ್ನು ನಿಷೇಧಿಸಲು ಸಂವಿಧಾನಕ್ಕೆ 52ನೇ ತಿದ್ದುಪಡಿ ಮಾಡಿ ಹತ್ತನೆ ಶೆಡ್ಯೂಲ್‌ನಲ್ಲಿ ಸೇರಿಸಲು ಹೊರಟಾಗ  ಅದನ್ನು ಹಿರಿಯ ಸಮಾಜವಾದಿ ಮಧು ಲಿಮಯೆ ಮತ್ತು ಸಂವಿಧಾನ ತಜ್ಞ ನಾನಿ ಪಾಲ್ಖಿವಾಲ ಬಲವಾಗಿ ವಿರೋಧಿಸಿದ್ದರು.
`ತಮ್ಮ ನಂಬಿಕೆಗೆ ಅನುಗುಣವಾಗಿ ಮತಚಲಾಯಿಸಲು ಸದಸ್ಯರಿಗೆ ಅವಕಾಶ ನಿರಾಕರಿಸಿದರೆ ಅವರನ್ನು ಆಯ್ಕೆ ಮಾಡಿದ ಮತದಾರರ ತೀರ್ಪನ್ನು ಪ್ರಶ್ನಿಸಿದಂತಾಗುತ್ತದೆ. ಸೈದ್ಧಾಂತಿಕ ನೆಲೆಯ ಪಕ್ಷ ವಿಭಜನೆಗೆ ಅವಕಾಶ ನೀಡಬೇಕು, ಇಲ್ಲವಾದರೆ ಪಕ್ಷದಲ್ಲಿ ಕೆಲವು ನಾಯಕರ ಒಡೆತನಕ್ಕೆ ಉಳಿದವರು ಬಯಲಾಗುತ್ತದೆ' ಎಂದು ಸಂಸತ್‌ನಲ್ಲಿ  ಅವರಿಬ್ಬರು ವಾದಿಸಿದ್ದರು.
ಪಕ್ಷಾಂತರ ನಿಷೇಧ ಎನ್ನುವುದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವವನ್ನು ಮಾತ್ರವಲ್ಲ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುತ್ತದೆ ಎಂದು ಆ ಮಹಾನುಭಾವರು ನಂಬಿದ್ದರು. ಈ ಕಾರಣಕ್ಕಾಗಿಯೇ ರಾಜೀವ್‌ಗಾಂಧಿಯವರು ಮೂಲಮಸೂದೆಯಲ್ಲಿ ಬದಲಾವಣೆ ಮಾಡಿ ಮೂರನೆ ಒಂದರಷ್ಟು ಸದಸ್ಯರ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ರಾಜೀವ್‌ಗಾಂಧಿ ಜಾರಿಗೆ ತಂದ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಚುನಾಯಿತ ಸದಸ್ಯ ಸ್ವಇಚ್ಛೆಯಿಂದ ರಾಜಕೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಪಕ್ಷ ಹೊರಡಿಸಿದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದರೆ ಇಲ್ಲವೆ ಪೂರ್ವಾನುಮತಿ ಪಡೆಯದೆ ಗೈರುಹಾಜರಾದರೆ ಅನರ್ಹರಾಗುತ್ತಾರೆ. ಆದರೆ ಒಂದು ಪಕ್ಷದ ಒಟ್ಟು ಸದಸ್ಯ ಬಲದ ಮೂರನೆ ಒಂದರಷ್ಟು ಸದಸ್ಯರು `ಪಕ್ಷಾಂತರ'ಗೊಂಡರೆ ಅದು `ವಿಲೀನ' ಆಗುತ್ತಿತ್ತು.
ಅಂತಹ ಪಕ್ಷಾಂತರಿಗಳನ್ನು ಅನರ್ಹಗೊಳಿಸುವಂತಿರಲಿಲ್ಲ. ಈ ಕಾರಣಕ್ಕಾಗಿಯೇ ಚುನಾವಣಾ ಸುಧಾರಣೆಯ ದಿನೇಶ್ ಗೋಸ್ವಾಮಿ ಸಮಿತಿ, ಕಾನೂನು ಆಯೋಗ ಮತ್ತು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣಾ ಪುನರ್‌ಪರಿಶೀಲನಾ ಆಯೋಗ 52ನೇ ತಿದ್ದುಪಡಿಯನ್ನು ವಿರೋಧಿಸಿದ್ದವು.
`ವೈಯಕ್ತಿಕ ಪಕ್ಷಾಂತರಕ್ಕೆ ಕಡಿವಾಣ ಹಾಕಿ ಸಾಮೂಹಿಕ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದೆ' ಎನ್ನುವುದು ಈ ಕಾಯ್ದೆಯ ವಿರುದ್ಧದ ಮುಖ್ಯ ಆರೋಪವಾಗಿತ್ತು. 2003ರಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ 91ನೇ ತಿದ್ದುಪಡಿ ಮಾಡುವ ಮೂಲಕ ಈ ಅಡ್ಡದಾರಿಯನ್ನು ಮುಚ್ಚುವ ಪ್ರಯತ್ನ ಮಾಡಿತು.
`ವಿಲೀನ'ಗೊಳ್ಳಬೇಕಾದರೆ ಮೂರನೆ ಒಂದರಷ್ಟಲ್ಲ, ಮೂರನೆ ಎರಡರಷ್ಟು ಸದಸ್ಯರು ಪಕ್ಷಾಂತರ ಮಾಡಿರಬೇಕು ಎಂದು ಈ ತಿದ್ದುಪಡಿ ಹೇಳಿದೆ. ಇದಾದ ನಂತರವೂ ಪಕ್ಷಾಂತರದ ರೋಗ ನಿಂತಿಲ್ಲ.
ಪಕ್ಷಾಂತರ ನಿಷೇಧ ಕಾಯ್ದೆಯ ಜಾರಿಯಲ್ಲಿ ಅತ್ಯಂತ ದುರ್ಬಲ ಕೊಂಡಿ ಸಭಾಧ್ಯಕ್ಷರದ್ದು. ಕಾಯ್ದೆ ಜಾರಿಗೆ ಬಂದ ನಂತರದ ಅವಧಿಯಲ್ಲಿ ನಡೆದ ಪಕ್ಷಾಂತರ ವಿವಾದಗಳನ್ನೆಲ್ಲ ನೋಡಿದರೆ ಅವುಗಳಲ್ಲಿ ಹೆಚ್ಚಿನ ಪ್ರಕರಣಗಳ ಕೇಂದ್ರ ಸ್ಥಾನದಲ್ಲಿ ಕಾಣುತ್ತಿರುವುದು ಸಭಾಧ್ಯಕ್ಷರು ಮತ್ತು ರಾಜ್ಯಪಾಲರು.
ಕರ್ನಾಟಕವೂ ಸೇರಿದಂತೆ ಮೇಘಾಲಯ,ಮಿಜೋರಾಂ,ನಾಗಲ್ಯಾಂಡ್,ಗೋವಾ, ತಮಿಳುನಾಡು, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿನ ಪಕ್ಷಾಂತರ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಮೂಲಕಾಯ್ದೆಯಲ್ಲಿ ಸಭಾಧ್ಯಕ್ಷರಿಗೆ ಪರಮಾಧಿಕಾರ ಇತ್ತು.
ಅವರು ಕೈಗೊಂಡ ನಿರ್ಧಾರವನ್ನು ನ್ಯಾಯಾಲಯ ಕೂಡಾ ಪ್ರಶ್ನಿಸುವಂತಿರಲಿಲ್ಲ. ಆದರೆ `ಸಭಾಧ್ಯಕ್ಷರ ತೀರ್ಮಾನ ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ' ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಸಭಾಧ್ಯಕ್ಷರ ನಿರಂಕುಶ ಅಧಿಕಾರಕ್ಕೆ ಕಡಿವಾಣ ಬಿದ್ದರೂ ಅವರು ಅಡ್ಡಮಾರ್ಗ ಹಿಡಿಯುವುದನ್ನು ತಪ್ಪಿಸಲು ಆಗಿಲ್ಲ.
ಸಭಾಧ್ಯಕ್ಷರು ಮೂಲತಃ ರಾಜಕಾರಣಿಗಳೇ ಆಗಿರುವುದರಿಂದ ಅವರ ನಿರ್ಧಾರಗಳಲ್ಲಿ ರಾಜಕೀಯ ಒಲವು ನಿಲುವುಗಳ ಪ್ರಭಾವ ಸಹಜ. ಸಾಮಾನ್ಯವಾಗಿ ಆಡಳಿತ ಪಕ್ಷದ ಶಾಸಕರೇ ಸಭಾಧ್ಯಕ್ಷರಾಗಿ ಆಯ್ಕೆಯಾಗುವ ಕಾರಣ ಅವರು ತನ್ನ ಪಕ್ಷದ ಹಿತವನ್ನು ಮೀರಿ ಪಕ್ಷಾತೀತವಾಗಿ ನಡೆದುಕೊಳ್ಳುವಷ್ಟು ನ್ಯಾಯನಿಷ್ಠುರರಾಗಿರುವುದು ಸಾಧ್ಯವೂ ಇಲ್ಲವೇನೋ? ಸಭಾಧ್ಯಕ್ಷರ ಹುದ್ದೆಯ ದುರುಪಯೋಗಕ್ಕೆ ಇದಕ್ಕೆ 1993 ಮತ್ತು 1994ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಎರಡು ತೀರ್ಪುಗಳಿಗೆ ಕಾರಣವಾದ ಗೋವಾ ರಾಜ್ಯದ ಪಕ್ಷಾಂತರ ಪ್ರಕರಣಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಇರಲಾರದು.
ಆ ಪ್ರಕರಣದಲ್ಲಿ ಸಭಾಧ್ಯಕ್ಷರೇ ಪಕ್ಷಾಂತರಿಗಳ ಜತೆ ಸೇರಿ ಮುಖ್ಯಮಂತ್ರಿಗಳಾಗಿಬಿಟ್ಟಿದ್ದರು. ಎಷ್ಟೊ ಸಂದರ್ಭಗಳಲ್ಲಿ ಸಭಾಧ್ಯಕ್ಷರಿಗೆ ಮುಖ್ಯವಾಗಿ ವಿಧಾನಸಭಾಧ್ಯಕ್ಷರಿಗೆ ಪಕ್ಷಾಂತರ ನಿಷೇಧದಂತಹ ಕಾನೂನಿಗೆ ಸಂಬಂಧಿಸಿದ ಸಂಕೀರ್ಣ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಅರ್ಹತೆ ಮತ್ತು ತರಬೇತಿ ಇರದೆ ಇರುವುದು ಕೂಡಾ ತಪ್ಪು ನಿರ್ಧಾರಕ್ಕೆ ಕಾರಣವಾಗಿದೆ.
ಈ ಕಾರಣಗಳಿಗಾಗಿಯೇ ಪಕ್ಷಾಂತರ ಮಾಡಿದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡದೆ ಅದನ್ನು ಚುನಾವಣಾ ಆಯೋಗಕ್ಕೆ ಬಿಡಬೇಕು ಎಂದು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣಾ ಪುನರ್‌ಪರಿಶೀಲನಾ ಆಯೋಗ ಶಿಫಾರಸು ಮಾಡಿತ್ತು.
ಪಕ್ಷಾಂತರ ವಿವಾದವನ್ನು ಕೇಂದ್ರಮಟ್ಟದಲ್ಲಿ ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಮಟ್ಟದಲ್ಲಿ ರಾಜ್ಯಪಾಲರ ವಿವೇಚನೆಗೆ ನೀಡಬೇಕೆಂಬ ಅಭಿಪ್ರಾಯ ಕೂಡಾ ಇದೆ. ಆದರೆ ಈ ಎರಡು ಸಾಂವಿಧಾನಿಕ ಹುದ್ದೆಗಳು ಕೂಡಾ ಆಡಳಿತ ಪಕ್ಷದ ರಬ್ಬರ್‌ಸ್ಟಾಂಪ್‌ಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಇರುವ ಕಾರಣ ಈ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಸಿಕ್ಕಿಲ್ಲ.
ಇದ್ಯಾವುದೂ ಬೇಡ ಎಂದಾದರೆ ಪಕ್ಷಾಂತರ ವಿವಾದ ಇತ್ಯರ್ಥಕ್ಕೆ ಕೇಂದ್ರದಲ್ಲಿ ಸುಪ್ರೀಂಕೋರ್ಟ್ ಮತ್ತು ರಾಜ್ಯಗಳಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಬೇಕೆಂಬ ಸಲಹೆ ಕೂಡಾ ಇದೆ.
ಆದರೆ ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಾಗ ಎನ್‌ಡಿಎ ಸರ್ಕಾರ ಇವುಗಳಲ್ಲಿ ಯಾವ ಶಿಫಾರಸು,ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
ಪಕ್ಷ ವಿರೋಧಿ ಚಟುವಟಿಕೆಯ ವ್ಯಾಖ್ಯಾನ, ಪಕ್ಷಾಂತರ ನಿಷೇಧ ಕಾಯ್ದೆಯ ಇನ್ನೊಂದು ಮುಖ್ಯ ದೋಷ. ಈಗಿನ ಕಾಯ್ದೆಯ ಪ್ರಕಾರ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ನಡೆಸಿದ ನಂತರವಷ್ಟೇ  ಕ್ರಮ ಕೈಗೊಳ್ಳಲು ಅವಕಾಶ ಇರುವುದು. ವಿಪ್ ಉಲ್ಲಂಘನೆಗಾಗಿ ಪಕ್ಷಾಂತರಿ ಸದಸ್ಯರ ಸದಸ್ಯತ್ವ ರದ್ದಾದರೂ ಅವರು ಚಲಾಯಿಸಿದ ಮತಗಳು ಕ್ರಮಬದ್ಧವಾಗಿರುತ್ತದೆ.
ಆ ಮತಗಳಿಂದಲೇ ಒಂದು ಸರ್ಕಾರ ಉಳಿಯಬಹುದು ಇಲ್ಲವೆ ಪತನಗೊಳ್ಳಬಹುದು. ಇದರಿಂದ ಪಕ್ಷಾಂತರಿ ತನ್ನ ಉದ್ದೇಶದಲ್ಲಿ ಯಶಸ್ಸು ಕಂಡಂತಾಗುತ್ತದೆ.
ಇದಲ್ಲದೆ ತಮ್ಮ ಪಕ್ಷದ ನೀತಿಯನ್ನು ವಿರೋಧಿಸುವುದು, ತಮ್ಮ ಪಕ್ಷದ ನಾಯಕರನ್ನು ಟೀಕಿಸುವುದು ಮತ್ತು ವಿರೋಧಪಕ್ಷಗಳ ನಾಯಕರ ಜತೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವುದು ಪಕ್ಷ ವಿರೋಧಿ ಚಟುವಟಿಕೆ ಎಂಬುದು ನಿಜವಾದರೂ ಕಾನೂನಿನ ಪ್ರಕಾರ ಪಕ್ಷಾಂತರ ಅಲ್ಲ.
ಈ ರಕ್ಷಣೆಯನ್ನು ಬಳಸಿಕೊಂಡೇ ಬಿಜೆಪಿ ಬಂಡುಕೋರರು  ತಮ್ಮ ಸ್ಥಾನ ಉಳಿಸಿಕೊಂಡದ್ದಲ್ಲವೇ?ಪಕ್ಷಾಂತರದ ಪಿಡುಗನ್ನು ನಿಯಂತ್ರಿಸಲು ಕೇವಲ ಪಕ್ಷಾಂತರ ನಿಷೇಧ ಕಾಯ್ದೆಯೊಂದರಿಂದಲೇ ಸಾಧ್ಯವಾಗಲಾರದೆಂಬುದು ಇತ್ತೀಚಿನ ಹಲವಾರು ಪ್ರಕರಣಗಳಿಂದ ಸಾಬೀತಾಗಿದೆ.
ಅಭ್ಯರ್ಥಿಗಳ ಆಯ್ಕೆ ಮಟ್ಟದಲ್ಲಿಯೇ ಜರಡಿ ಹಿಡಿದು ಕಳಂಕಿತರನ್ನು ನಿವಾರಿಸಿಕೊಳ್ಳದಿದ್ದರೆ ಈ ಪಿಡುಗಿನ ನಿವಾರಣೆ ಅಸಾಧ್ಯ. ಇದಕ್ಕಾಗಿ ನ್ಯಾಯಾಲಯ ಮತ್ತು ಚುನಾವಣಾ ಆಯೋಗ ಪ್ರಯತ್ನ ಮಾಡಿದಾಗಲೆಲ್ಲ ಪಕ್ಷಭೇದ ಇಲ್ಲದೆ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಾ ಬಂದಿದ್ದಾರೆ.
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ತಾವು ಹೊಂದಿರುವ ಆಸ್ತಿ, ಅಪರಾಧದ ಹಿನ್ನೆಲೆ, ಬಾಕಿ ಇರಿಸಿಕೊಂಡಿರುವ ತೆರಿಗೆ ಮತ್ತು ಸಾಲ ಹಾಗೂ ಶೈಕ್ಷಣಿಕ ಅರ್ಹತೆಗಳನ್ನು ಕಡ್ಡಾಯವಾಗಿ ಪ್ರಮಾಣಪತ್ರಗಳ ಮೂಲಕ ಸಲ್ಲಿಸಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನ ಜಾರಿಗೆ ಬರದಂತೆ ತಡೆಯಲು ಆಗಿನ ಎನ್‌ಡಿಎ ಸರ್ಕಾರ ಏನೆಲ್ಲ ಸರ್ಕಸ್ ನಡೆಸಿದೆ ಎನ್ನುವುದನ್ನು ದೇಶದ ಜನತೆ ಗಮನಿಸಿದೆ. ಕೊನೆಗೂ ಛಲಬಿಡದ ಸುಪ್ರೀಂಕೋರ್ಟ್‌ನ ಪ್ರಯತ್ನದಿಂದಾಗಿಯೇ ಅದು ಜಾರಿಗೆ ಬಂದಿದ್ದು.
ಪಕ್ಷಾಂತರಿಗಳ ಜಾತಕವನ್ನು ಪರಿಶೀಲಿಸಿದರೆ ಇವರಲ್ಲಿ ಹೆಚ್ಚಿನವರು ಭ್ರಷ್ಟರು, ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಮತ್ತು ಜನಪೀಡಕರು ಆಗಿರುವುದು ಕಂಡುಬರುತ್ತದೆ. ಇಂತಹವರು ಚುನಾವಣಾ ಕಣಕ್ಕೆ ಇಳಿಯಲು ಸಾಧ್ಯವಾಗದಂತೆ ಮೂಲದಲ್ಲಿಯೇ ತಡೆಯಲು ಸಾಧ್ಯವಾದರೆ ಮಾತ್ರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದರ ಮೂಲ ಆಶಯಕ್ಕೆ ಭಂಗ ಉಂಟಾಗದಂತೆ ಉಳಿಸಿಕೊಂಡು ಹೋಗಲು ಸಾಧ್ಯ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಚುನಾವಣಾ ಆಯೋಗ ಚುನಾವಣಾ ಸುಧಾರಣೆಗಳ ಪ್ರಸ್ತಾವ ಸಲ್ಲಿಸಿರುವುದು.
ಐದುವರ್ಷಗಳಿಗಿಂತ ಹೆಚ್ಚು ಅವಧಿಯ ಜೈಲು ವಾಸದ ಶಿಕ್ಷೆಗೆ ಅರ್ಹವಾದ ಅಪರಾಧಗಳ ಆರೋಪ ಹೊತ್ತವರನ್ನು ಚುನಾವಣೆಯಲ್ಲಿ ಸ್ಪರ್ಧೆಗೆ ಅನರ್ಹರೆಂದು ಘೋಷಿಸಬೇಕು, ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಗಳಿಗೆ ವಿಧಿಸಲಾಗುತ್ತಿರುವ ಆರು ತಿಂಗಳ ಶಿಕ್ಷೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು, ತಟಸ್ಥ ಇಲ್ಲವೆ ನೆಗೆಟಿವ್ ಮತದಾನಕ್ಕೆ ಅವಕಾಶ ನೀಡಬೇಕು, ಪಕ್ಷಾಂತರಿ ಸದಸ್ಯರನ್ನು ಅನರ್ಹಗೊಳಿಸಲು ರಾಷ್ಟ್ರಪತಿ ಇಲ್ಲವೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಅಧಿಕಾರವನ್ನು ಚುನಾವಣಾ  ಆಯೋಗಕ್ಕೆನೀಡಬೇಕು ..ಇತ್ಯಾದಿ ಪ್ರಸ್ತಾವಗಳು ಕಳೆದ ಹತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿವೆ.
ಆದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವ ಮತ್ತು ತಿದ್ದುಪಡಿಯ ಮೂಲಕ ಅದನ್ನು ಇನ್ನಷ್ಟು ಬಲಗೊಳಿಸಿದ  ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳೇ ನಿರ್ಲಜ್ಚತೆಯಿಂದ ಪಕ್ಷಾಂತರವನ್ನು ಪ್ರೋತ್ಸಾಹಿಸುತ್ತಿರುವಾಗ ಚುನಾವಣಾ ಆಯೋಗದ ಪ್ರಸ್ತಾವಗಳನ್ನು ಜಾರಿಗೆ ತರುವವರು ಯಾರು?

Sunday, February 24, 2013

ಬೇಹುಗಾರಿಕೆಯ ಕಣ್ಣು ಕುರುಡಾಗಿದ್ದು ಹೇಗೆ?

ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ನಡೆದ ಅವಳಿ ಬಾಂಬು ಸ್ಫೋಟದ ನಂತರ ಕೇಂದ್ರ ಗೃಹಸಚಿವರು `ನಮಗೆ ಮಾಹಿತಿ ಇತ್ತು' ಎಂದು ಹೇಳಿರುವುದರಲ್ಲಿ ಹೊಸತೇನಿಲ್ಲ. ಹಿಂದಿನ ಬಹಳಷ್ಟು ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿಯೂ ಕೇಂದ್ರದ ಬೇಹುಗಾರಿಕಾ ಸಂಸ್ಥೆಗಳು `ನಮಗೆ ಮೊದಲೇ ಗೊತ್ತಿತ್ತು, ರಾಜ್ಯಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದೆವು' ಎಂದು ಹೇಳಿದ್ದವು.
ಹಿಂದೆಲ್ಲ ಈ  ಸುದ್ದಿಯನ್ನು ಬೇಹುಗಾರಿಕಾ ಸಂಸ್ಥೆಗಳು ನೇರವಾಗಿ ತಿಳಿಸದೆ ಮಾಧ್ಯಮಗಳಿಗೆ ಸೋರಿಬಿಡುತ್ತಿದ್ದವು. ಈ ಬಾರಿ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಹುಂಬತನದಿಂದ ಇದನ್ನು ಬಾಯಿಬಿಟ್ಟು ಪತ್ರಕರ್ತರ ಮುಂದೆ ಹೇಳಿ ಮತ್ತೊಮ್ಮೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿದ್ದಾರೆ.
ಗೃಹಸಚಿವರು ಹೇಳಿರುವ ಎರಡು ಸಾಲುಗಳ ಹೇಳಿಕೆಯನ್ನೇ  ಹಿಡಿದುಕೊಂಡು ಆಗಲೇ ಪತ್ರಕರ್ತರು ಮತ್ತು ರಾಜಕೀಯ ನಾಯಕರು ಕೂಡಿ ಆಂಧ್ರಪ್ರದೇಶದ ಪೊಲೀಸರನ್ನು ಅಪರಾಧಿಗಳ ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ. ಪೊಲೀಸರು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕಾಗಿ ಬಾಂಬುಸ್ಫೋಟದ ರಹಸ್ಯವನ್ನು ಭೇದಿಸಿಯೇಬಿಟ್ಟೆವು ಎನ್ನುವ ರೀತಿಯಲ್ಲಿ ಅರೆಬೆಂದ ತನಿಖಾ ವರದಿಗಳನ್ನು ಮಾಧ್ಯಮಗಳಿಗೆ ಸೋರಿಬಿಡುತ್ತಿದ್ದಾರೆ.
ಪೊಲೀಸರು ನೀಡುವ ಇಂತಹ `ಸುದ್ದಿ'ಗಳು ಎಷ್ಟೊಂದು ಅತಿರಂಜಿತ ಮತ್ತು ಸುಳ್ಳು ಎನ್ನುವುದು ಬೆಂಗಳೂರಿನ ವಿಶೇಷ ನ್ಯಾಯಾಲಯ ಶನಿವಾರವಷ್ಟೆ ದೋಷಮುಕ್ತಗೊಳಿಸಿದ ಪತ್ರಕರ್ತ ಮತಿಉರ್ ರೆಹಮಾನ್ ಸಿದ್ದಿಕಿ ಪ್ರಕರಣದಲ್ಲಿ ಮಾತ್ರವಲ್ಲ, ಇದೇ ಹೈದರಾಬಾದ್‌ನಲ್ಲಿ ನಡೆದ ಮೆಕ್ಕಾಮಸೀದಿ ಬಾಂಬುಸ್ಫೋಟದ ಘಟನೆಯಲ್ಲಿಯೂ ಸಾಬೀತಾಗಿದೆ. ಇದಕ್ಕೆ ಕೇವಲ ಪೊಲೀಸರನ್ನು ದೂರಲಾಗದು. ಕೇಂದ್ರ ಬೇಹುಗಾರಿಕಾ ಸಂಸ್ಥೆಗಳ ಕಿತಾಪತಿಯಿಂದಾಗಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗುವ ಪೊಲೀಸರು ಆತ್ಮರಕ್ಷಣೆಗಾಗಿ ಇದನ್ನು ಮಾಡುತ್ತಿರುತ್ತಾರೆ.
ಲೋಪ ಕೇವಲ ಆಂಧ್ರಪ್ರದೇಶ ಪೊಲೀಸರದ್ದೇ? ಕೈಗೆ ಹತ್ತಿದ ಮಾಹಿತಿಯನ್ನು ರಾಜ್ಯಗಳಿಗೆ ರವಾನಿಸಿ ಬಿಟ್ಟರೆ ಕೇಂದ್ರದ ಬೇಹುಗಾರಿಕಾ ಸಂಸ್ಥೆಗಳ ಕೆಲಸ ಮುಗಿಯಿತೇ? ಈ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯದಿರಲು ಜನರಲ್ಲಿ ತಾಳ್ಮೆ ಇಲ್ಲದಿರುವುದು ಮಾತ್ರ ಅಲ್ಲ, ಬೇಹುಗಾರಿಕೆ ಎಂಬ ಮಾಯಾಲೋಕದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದೂ ಕಾರಣ.
ನಮ್ಮಲ್ಲಿ ಬಹುಹಂತಗಳ ಬೇಹುಗಾರಿಕಾ ವ್ಯವಸ್ಥೆ ಇದೆ. ಇಂಟಲಿಜೆನ್ಸ್ ಬ್ಯೂರೋ (ಐಬಿ), ರಿಸರ್ಚ್ ಎಂಡ್ ಅನಾಲಿಸಿಸ್ ವಿಂಗ್ (ರಾ),ರಾಜ್ಯ ಗುಪ್ತಚರ ಇಲಾಖೆ (ಸ್ಪೆಷಲ್ ಬ್ರಾಂಚ್) ಸೇನಾ ಗುಪ್ತಚರ ಇಲಾಖೆ, ಸಿಬಿಐ ಮತ್ತು  ಕೇಂದ್ರ ಆರ್ಥಿಕ ಗುಪ್ತಚರ ಇಲಾಖೆಗಳನ್ನೊಳಗೊಂಡ ಜಾಲವೇ ದೇಶದ ಬೇಹುಗಾರಿಕೆಯ ಕೇಂದ್ರ ವ್ಯವಸ್ಥೆ. ಇವೆಲ್ಲವೂ ರಾಷ್ಟ್ರೀಯ ಭದ್ರತಾ ಸಲಹೆಗಾರರು ಅಧ್ಯಕ್ಷರಾಗಿರುವ `ಜಂಟಿ ಗುಪ್ತಚರ ಸಮಿತಿ' (ಜೆಐಸಿ)ಗೆ ವರದಿ ಮಾಡುತ್ತವೆ. ಈ ಸಮಿತಿಯಲ್ಲಿ `ರಾ' ಮತ್ತು `ಐಬಿ'ಯ ಮುಖ್ಯಸ್ಥರು ಕೂಡಾ ಸದಸ್ಯರು.
ಬೇರೆ ದೇಶಗಳ ಚಟುವಟಿಕೆಗಳು ಮತ್ತು ವಿದೇಶದಲ್ಲಿ ನೆಲೆ ಊರಿರುವ ಭಯೋತ್ಪಾದಕ ತಂಡಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು `ರಾ' ಹೊಣೆ. ಆಂತರಿಕ ಭದ್ರತೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹ ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿರುವ `ಐಬಿ'ಗೆ ಸೇರಿದ್ದು. ಭೂಸೇನೆ, ವಾಯುಸೇನೆ ಮತ್ತು ನೌಕಾದಳ, ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಎಸ್‌ಪಿಜಿ ಇವೆಲ್ಲವೂ ಸಂಗ್ರಹಿಸಿ ನೀಡುವ ಮಾಹಿತಿಯನ್ನು ರಕ್ಷಣೆ ಮತ್ತು ಅರೆಸೇನಾ ಗುಪ್ತಚರ ಇಲಾಖೆ ಜೆಐಸಿಗೆ ಸಲ್ಲಿಸುತ್ತದೆ.
ಆರ್ಥಿಕ ಗುಪ್ತಚರ ಇಲಾಖೆ ಮಾತ್ರವಲ್ಲ ಡಿಆರ್‌ಐ, ಇಡಿ, ವರಮಾನ ತೆರಿಗೆ ಇಲಾಖೆಗಳು ಕೂಡಾ ಮಾಹಿತಿಯನ್ನು ಜೆಐಸಿಗೆ ರವಾನಿಸುತ್ತದೆ. ಇದರ ಆಧಾರದಲ್ಲಿಯೇ ಪ್ರಧಾನಿ ಅಧ್ಯಕ್ಷತೆಯ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಸೇರಿ ಆಂತರಿಕ ಭದ್ರತೆ ಮತ್ತು ಬಾಹ್ಯಬೆದರಿಕೆಗೆ ಸಂಬಂಧಿಸಿದ ನೀತಿ-ನಿರ್ಧಾರಗಳನ್ನು ರೂಪಿಸುತ್ತದೆ. ಹೀಗಿದ್ದರೂ ಮತ್ತೆಮತ್ತೆ ನಮ್ಮ ಬೇಹುಗಾರಿಕೆ ವ್ಯವಸ್ಥೆ ವಿಫಲಗೊಳ್ಳುತ್ತಿರುವುದೇಕೆ?
ಯಾಕೆಂದರೆ ಕಾಗದದ ಮೇಲೆ ಅಚ್ಚುಕಟ್ಟಾಗಿ ಕಾಣುವ ಈ ವ್ಯವಸ್ಥೆಯ ಮೈತುಂಬಾ ತೂತುಗಳಿವೆ. ಮಾಹಿತಿಗಳ ಸಂಗ್ರಹ, ಸಂಕಲನ, ವಿಶ್ಲೇಷಣೆ ಮತ್ತು ತೀರ್ಮಾನ- ಇದು ಬೇಹುಗಾರಿಕೆ ಸಂಸ್ಥೆಗಳ ಕಾರ್ಯನಿರ್ವಹಣೆಯ ಪ್ರಾಥಮಿಕವಾದ ನಾಲ್ಕು ಹಂತಗಳು. ಈ ಕಾರ್ಯ ನಡೆಸಲು ಬೇಕಾದ ಸಿಬ್ಬಂದಿ, ಸಂಪನ್ಮೂಲ ಮತ್ತು ಸ್ವಾತಂತ್ರ್ಯವನ್ನು ಇವುಗಳಿಗೆ ನೀಡಲಾಗಿದೆ.  ಹೀಗಿದ್ದರೂ ವಿಫಲಗೊಳ್ಳಲು  ಮುಖ್ಯವಾಗಿ ಮೂರು ಕಾರಣಗಳು. ಮೊದಲನೆಯದು ರಾಜಕೀಯ ಮಧ್ಯಪ್ರವೇಶ, ಎರಡನೆಯದು ರಾಜಕೀಯವಾಗಿ ದುರ್ಬಳಕೆ, ಮೂರನೆಯದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸೌಹಾರ್ದದ ಕೊರತೆ.
ಬೇಹುಗಾರಿಕಾ ಸಂಸ್ಥೆಗಳ ರಾಜಕೀಯ ದುರ್ಬಳಕೆ ಹೇಗೆ ನಡೆಯುತ್ತದೆ ಎನ್ನುವುದನ್ನು `ಐಬಿ'ಯ ನಿವೃತ್ತ ಜಂಟಿ ನಿರ್ದೇಶಕ ಎಂ.ಕೆ.ಧರ್ ಅವರು ಬರೆದಿರುವ ವಿವಾದಾತ್ಮಕ ಪುಸ್ತಕ `ಓಪನ್ ಸೀಕ್ರೆಟ್'ನಲ್ಲಿ ಬಿಚ್ಚಿಟ್ಟಿದ್ದಾರೆ. `ಐಬಿ ಅಧಿಕಾರಿಗಳು ಪ್ರಧಾನಮಂತ್ರಿಗಳ ದಲ್ಲಾಳಿಗಳಂತೆ ವರ್ತಿಸುತ್ತಾರೆ.
ಪ್ರಧಾನಮಂತ್ರಿಗಳ ಮೌಖಿಕ ಆದೇಶದಂತೆ ಐಬಿ ಅಧಿಕಾರಿಗಳು ಸಂಸತ್ ಮತ್ತು ರಾಷ್ಟ್ರಪತಿ ಭವನದ ಮಾತ್ರವಲ್ಲ ತನ್ನ ಸಹದ್ಯೋಗಿಗಳ ದೂರವಾಣಿಗಳನ್ನು ಕದ್ದಾಲಿಸಿದ ಉದಾಹರಣೆಗಳಿವೆ' ಎಂದು ಧರ್ ಬರೆದಿದ್ದಾರೆ. ಕೇಂದ್ರದಲ್ಲಿ `ಐಬಿ' ಇಲ್ಲವೆ ರಾಜ್ಯದಲ್ಲಿರುವ `ಸ್ಪೆಷಲ್ ಬ್ರಾಂಚ್ (ಎಸ್‌ಬಿ)' ಅತಿಹೆಚ್ಚು ಬಳಕೆಯಾಗುವುದು ಆಡಳಿತಾರೂಢ ಪಕ್ಷ ವಿರೋಧ ಪಕ್ಷಗಳ ನಾಯಕರ ಬಗ್ಗೆ ಮಾಹಿತಿ ಕಲೆಹಾಕಲು ಮತ್ತು ಚುನಾವಣಾ ಪೂರ್ವದಲ್ಲಿ ಜನಾಭಿಪ್ರಾಯ ತಿಳಿದುಕೊಳ್ಳಲು. `ತಾಂತ್ರಿಕವಾಗಿ ಕೇಂದ್ರದ `ಐಬಿ' ನಿರ್ದೇಶಕ ಗೃಹಸಚಿವರಿಗೆ ವರದಿ ನೀಡಬೇಕಾಗಿದ್ದರೂ ಸಾಮಾನ್ಯವಾಗಿ ಅವರ ಸಂಪರ್ಕ ಪ್ರಧಾನಿ ಜತೆಯಲ್ಲಿಯೇ ಇರುತ್ತದೆ.
ನಿತ್ಯ ಪ್ರಧಾನಿಯವರನ್ನು ಭೇಟಿ ಮಾಡುವುದರಿಂದ ಬೆಳೆಸಿಕೊಂಡ ಸಲಿಗೆಯಿಂದಾಗಿ ಮಾತುಕತೆ ಭದ್ರತಾ ವಿಚಾರಗಳಿಗಿಂತ ಹೆಚ್ಚಾಗಿ ರಾಜಕೀಯ ಗಾಸಿಪ್‌ಗಳ ಸುತ್ತಲೇ ಸುತ್ತುತ್ತಿರುತ್ತವೆ' ಎಂದು ಇಂತಹ ಹಲವಾರು ಕೊಳಕು ಕೃತ್ಯಗಳಲ್ಲಿ ಖುದ್ದಾಗಿ ಭಾಗಿಯಾಗಿರುವ ಧರ್ ಬರೆದಿದ್ದಾರೆ. ಪ್ರಣವ್ ಮುಖರ್ಜಿ ಹಣಕಾಸು ಸಚಿವರಾಗಿದ್ದಾಗ ಅವರ ಕಚೇರಿಯನ್ನೇ ಬಗ್ ಮಾಡಿದ್ದು ಮತ್ತು ಇತ್ತೀಚೆಗೆ ವಿರೋಧಪಕ್ಷದ ನಾಯಕ ಅರುಣ್ ಜೇಟ್ಲಿ ಅವರ ದೂರವಾಣಿ ಕರೆಗಳ ಮಾಹಿತಿ ಸಂಗ್ರಹ ಪ್ರಕರಣಗಳನ್ನು ಗಮನಿಸಿದರೆ ಪರಿಸ್ಥಿತಿ ಈಗಲೂ ಬದಲಾಗಿಲ್ಲ ಎಂದು ಸ್ಪಷ್ಟವಾಗುತ್ತದೆ.
ಬೇಹುಗಾರಿಕೆಗಾಗಿ ಹತ್ತಾರು ಸಂಸ್ಥೆಗಳಿದ್ದರೂ ಆಂತರಿಕ ಭದ್ರತೆಯ ವಿಚಾರದಲ್ಲಿ `ಐಬಿ' ಪಾತ್ರವೇ ನಿರ್ಣಾಯಕ. ದೇಶದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕೃತ ಮಾಹಿತಿದಾರರನ್ನು ಇದು ಹೊಂದಿದೆ. ಇದರಲ್ಲಿ ಬೀದಿ ಬದಿಯ ಕ್ಷೌರಿಕನಿಂದ ಹಿಡಿದು, ಭೂಗತ ದೊರೆಗಳು, ಕ್ರಿಮಿನಲ್‌ಗಳು, ಡಬಲ್ ಏಜೆಂಟ್‌ಗಳೆಲ್ಲ ಇದ್ದಾರೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಇದರ ಏಜೆಂಟ್‌ಗಳಿದ್ದಾರೆ. ಆದರೆ ಅಂತಿಮವಾಗಿ ಇದರ ಅವಲಂಬನೆ ರಾಜ್ಯ ಪೊಲೀಸ್ ಇಲಾಖೆಯಲ್ಲಿರುವ ಸ್ಪೆಷಲ್ ಬ್ರಾಂಚ್ ಮೇಲೆ. ಆದರೆ `ರಾ'ದಂತೆ `ಎಸ್‌ಬಿ'ಯಲ್ಲಿಯೂ ಬಹುತೇಕ ಸಿಬ್ಬಂದಿ ಒಲ್ಲದ ಮನಸ್ಸಿನಿಂದಲೇ ಸೇರಿಕೊಂಡವರು.
ಮರುಭೂಮಿಯಂತಿರುವ `ರಾ', `ಎಸ್‌ಬಿ'ಗಳಿಗಿಂತ  ಸಂಬಳದ ಜತೆಯಲ್ಲಿ `ಹೆಚ್ಚುವರಿ ಆದಾಯ'ಕ್ಕೆ ಅವಕಾಶ ಇರುವ ಪೊಲೀಸ್ ಇಲಾಖೆಯೇ ವಾಸಿ ಎನ್ನುವವರೇ ಹೆಚ್ಚು. `ಬೇಹುಗಾರಿಕೆಯ ಮುಖ್ಯ ಕೊಂಡಿ ಬೀಟ್ ಪೊಲೀಸರು.ಆಂತರಿಕ ಭದ್ರತೆಯ ಕೆಲಸ ಒಬ್ಬ ಬೀಟ್ ಪೊಲೀಸ್ ಕಾನ್‌ಸ್ಬೇಬಲ್‌ನಿಂದ ಪ್ರಾರಂಭವಾಗುತ್ತದೆ. ಆ ಬೀಟ್ ವ್ಯವಸ್ಥೆ ಎಲ್ಲಿ ಸರಿ ಇದೆ ?'  ಎಂದು  26/11 ಘಟನೆಯ ನಂತರ ಕೇಂದ್ರ ಸರ್ಕಾರ ತನಿಖೆಗಾಗಿ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾದ ರಾಮ್‌ಪ್ರಧಾನ್ ಇತ್ತೀಚೆಗೆ ಪ್ರಶ್ನಿಸಿದ್ದರು.
ಪೊಲೀಸರ ನೇಮಕಾತಿಯಿಂದ ವರ್ಗಾವಣೆ ವರೆಗೆ ಎಲ್ಲ ಅಧಿಕಾರಗಳನ್ನು ರಾಜಕಾರಣಿಗಳು ಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಪೊಲೀಸ್ ವ್ಯವಸ್ಥೆಯ ಸುಧಾರಣೆಗಾಗಿ ಧರ್ಮವೀರ ಆಯೋಗದಿಂದ ಹಿಡಿದು ಸೋಲಿ ಸೊರಾಬ್ಜಿ ಸಮಿತಿ ವರೆಗೆ ಹಲವು ವರದಿಗಳು ಬಂದಿವೆ. ಯಾವ ಸರ್ಕಾರವೂ ಅವುಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡಿಲ್ಲ. ಕೊನೆಗೆ ಈ ಎಲ್ಲ ಆಯೋಗ-ಸಮಿತಿಗಳ ವರದಿಗಳನ್ನು ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್ ಪೊಲೀಸ್ ಸುಧಾರಣೆಗಾಗಿ ಕೆಲವು ಸಲಹೆಗಳನ್ನು ನೀಡಿ 2006ರ ಅಂತ್ಯದೊಳಗೆ ಇದನ್ನು ಜಾರಿಗೊಳಿಸುವಂತೆ ಆದೇಶ ನೀಡಿದೆ. ಆದರೆ ಕರ್ನಾಟಕವೂ ಸೇರಿದಂತೆ ಹೆಚ್ಚಿನ ರಾಜ್ಯಗಳು ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಜಾರಿಗೊಳಿಸಿಲ್ಲ. ರಾಜಕೀಯ ಒಡೆಯರ `ಬಂಧನ'ದಲ್ಲಿರುವ ಪೊಲೀಸ್ ಇಲಾಖೆಯನ್ನು ಬಿಡುಗಡೆಗೊಳಿಸದಿದ್ದರೆ ಅದರ ಸುಧಾರಣೆ ಅಸಾಧ್ಯ.
ಮುಂಬೈನ 9/11ಭಯೋತ್ಪಾದಕ ಕೃತ್ಯ ನಡೆದ ನಂತರ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸೌಹಾರ್ದದ ಕೊರತೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಮುಖ್ಯವಾಗಿ ಹೊರಹೊಮ್ಮಿದ್ದು ಅಮೆರಿಕದ ಎಫ್‌ಬಿಐ ಮಾದರಿಯಲ್ಲಿ ಭಾರತದಲ್ಲಿಯೂ ಫೆಡರಲ್ ತನಿಖಾ ವ್ಯವಸ್ಥೆ ಸ್ಥಾಪನೆ ಮಾಡಬೇಕೆಂಬ ಬೇಡಿಕೆ. ಯಥಾಪ್ರಕಾರ ಇದು `ಒಕ್ಕೂಟ ವ್ಯವಸ್ಥೆಯ ವಿರೋಧಿ' ಎಂಬ ಕೂಗು ಕೇಳಿಬಂದರೂ ಕೇಂದ್ರ ಸರ್ಕಾರ `ರಾಷ್ಟ್ರೀಯ ತನಿಖಾ ಸಂಸ್ಥೆ' (ಎನ್‌ಐಎ)ಯನ್ನು ಐದು ವರ್ಷಗಳ ಹಿಂದೆ ಸ್ಥಾಪಿಸಿತು.
ಭಯೋತ್ಪಾದನೆಯಂತಹ ರಾಷ್ಟ್ರೀಯ ಅಪರಾಧಗಳ ತನಿಖೆ ನಡೆಸುವ ಎನ್‌ಐಎಗೆ ಕಾರ್ಯವ್ಯಾಪ್ತಿಯ ನಿರ್ಬಂಧ ಇಲ್ಲ. ರಾಜ್ಯಗಳಿಗೆ ಹೋಗಿ ತನಿಖೆ ನಡೆಸಲು ಸಿಬಿಐ ರೀತಿಯಲ್ಲಿ ಎನ್‌ಐಎಗೆ ರಾಜ್ಯಸರ್ಕಾರಗಳ ಅನುಮತಿ ಬೇಕಾಗಿಲ್ಲ. ರಾಜ್ಯಗಳ ಒಳಹೊಕ್ಕು ತನಿಖೆ ನಡೆಸುವ ಸ್ವಾತಂತ್ರ್ಯ  ಇದ್ದರೂ ರಾಜ್ಯಗಳಲ್ಲಿ ಪ್ರತ್ಯೇಕ ಸಿಬ್ಬಂದಿ ಇಲ್ಲದ ಈ ಸಂಸ್ಥೆ ಮತ್ತೆ ರಾಜ್ಯಪೊಲೀಸರನ್ನೇ ಅವಲಂಬಿಸಬೇಕಾಗಿದೆ.
ಇದರ ಜತೆಗೆ ಸ್ಥಾಪಿಸಲಾದ ಅಪರಾಧಿಗಳ ಸಂಪೂರ್ಣ ಡಾಟಾಬೇಸ್ ಹೊಂದಿರುವ `ನ್ಯಾಟ್‌ಗ್ರಿಡ್' ಕೂಡಾ ಕುಂಟುತ್ತಾ ಸಾಗಿದೆ. ಈಗ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳ ವಿಚಾರಣೆಗೆ ಸಂಬಂಧಿಸಿದಂತೆ ಎಲ್ಲ ಬೇಹುಗಾರಿಕಾ ಸಂಸ್ಥೆಗಳ ಜತೆ ಸಮನ್ವಯ ಸಾಧಿಸಲು `ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ಕೇಂದ್ರ' (ಎನ್‌ಸಿಟಿಸಿ) ಸ್ಥಾಪಿಸಲು ಕೇಂದ್ರ ಹೊರಟಿದೆ. ರಾಜ್ಯಗಳು ಇದನ್ನು ವಿರೋಧಿಸತೊಡಗಿವೆ.
ಇಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿರುವ ಬೇಹುಗಾರಿಕಾ ವ್ಯವಸ್ಥೆಯಿಂದ ಯಾವ ಕಸಬುಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯ? ಸಹಜವಾಗಿ ಅವುಗಳು ತಮ್ಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಅಡ್ಡಮಾರ್ಗಗಳನ್ನು ಅನುಸರಿಸುತ್ತವೆ. ಸಾಮಾನ್ಯವಾಗಿ ಬೇಹುಗಾರಿಕೆ ಸಂಸ್ಥೆಗಳು ನೀಡುವ ಮಾಹಿತಿ ನಮ್ಮ ಜೋತಿಷಿಗಳು ಅಡ್ಡಗೋಡೆ ಮೇಲೆ ದೀಪ ಇಟ್ಟ ರೀತಿಯಲ್ಲಿ ನುಡಿಯುವ ಭವಿಷ್ಯವಾಣಿಯಂತಿರುತ್ತವೆ.
ನುಡಿದ ಭವಿಷ್ಯ ನಿಜವಾಗಲಿ, ಸುಳ್ಳಾಗಲಿ ಜೋತಿಷಿಗಳ ಬಳಿ ಸಮರ್ಥನೆಗಳು ಇದ್ದೇ ಇರುತ್ತವೆ. ಕಸಬ್ ಮತ್ತು ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ನಂತರ ಜೆಹಾದಿಗಳು ಪ್ರತೀಕಾರಾತ್ಮಕ ದಾಳಿ ನಡೆಸಬಹುದೆಂಬ ಆತಂಕ ಎಲ್ಲರಲ್ಲಿಯೂ ಇದ್ದೇ ಇತ್ತು. ಈ ಸಂದರ್ಭದಲ್ಲಿ ನಾಲ್ಕೈದು ರಾಜ್ಯಗಳಿಗೆ ಒಂದು ಎಚ್ಚರಿಕೆಯನ್ನು ನೀಡಿ ಬಿಟ್ಟರೆ, ಆಕಸ್ಮಾತ್ ದಾಳಿ ನಡೆದರೂ ತಮ್ಮ ಹೊಣೆಯಿಂದ ಜಾರಿಕೊಳ್ಳಲು  ಅವಕಾಶ ಇರುತ್ತದೆ ಎನ್ನುವುದು ಐಬಿಯ ದೂರಾಲೋಚನೆ. ಕೈಗೆ ಸಿಕ್ಕ ಮಾಹಿತಿಗಳನ್ನೆಲ್ಲ ರಾಜ್ಯಗಳ ಕಡೆ ಹೊತ್ತು ಹಾಕುವುದಷ್ಟೆ ಆಗಿದ್ದರೆ ಕೋಟ್ಯಂತರ ರೂಪಾಯಿ ತೆರಿಗೆಹಣ ವ್ಯಯವಾಗುತ್ತಿರುವ ಗುಪ್ತಚರ ಸಂಸ್ಥೆಗಳು ಯಾಕೆ ಬೇಕು? ಅಂಚೆಕಚೇರಿಗಳು ಸಾಕಾಗುವುದಿಲ್ಲವೇ? ಮಾಹಿತಿ ನೀಡಿದ ನಂತರ ರಾಜ್ಯದ ಪೊಲೀಸರು ಏನು ಕ್ರಮಕೈಗೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಬೇಡವೇ?
ಆದರೆ ಪೊಲೀಸರನ್ನು ನ್ಯಾಯಾಂಗ ಮತ್ತು ಶಾಸಕಾಂಗ ಪ್ರಶ್ನಿಸಿದಂತೆ `ರಾ' ಮತ್ತು `ಐಬಿ'ಯನ್ನು ಪ್ರಶ್ನಿಸಲು ಅವಕಾಶ ಇಲ್ಲದಿರುವುದು ಕೂಡಾ ಈ ಸಂಸ್ಥೆಗಳ ವೈಫಲ್ಯಕ್ಕೆ ಕಾರಣ.  ಕೇವಲ `ರಾ' ಒಂದಕ್ಕೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ವಿವೇಚನಾ  ನಿಧಿಯನ್ನು ಬಜೆಟ್‌ನಲ್ಲಿ ನೀಡಲಾಗುತ್ತದೆ. ಈ ಹಣದ ಖರ್ಚಿನ ವಿವರವನ್ನು ಕೇಳಲು ಅವಕಾಶ ಇಲ್ಲ.
ವಿದೇಶಗಳಲ್ಲಿರುವ `ರಾ' ಏಜಂಟರು ಇದ್ದಕ್ಕಿದ್ದ ಹಾಗೆ ಡಬಲ್ ಏಜೆಂಟ್‌ಗಳಾಗಿ ಕಣ್ಮರೆಯಾಗುತ್ತಿರುತ್ತಾರೆ. ಈಗಲೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಕೆಲಸ ಮಾಡಲು ಹೆಚ್ಚಿನವರು ಒಪ್ಪುವುದಿಲ್ಲವಾದ ಕಾರಣ ಅಲ್ಲಿನ `ರಾ' ಏಜೆಂಟ್ ಹುದ್ದೆಗಳು ಪೂರ್ತಿ ಭರ್ತಿಯಾಗಿಲ್ಲ. ಸಾಮಾನ್ಯ ಜನತೆಯನ್ನು ಬಿಡಿ, ಸಂಸತ್‌ನಲ್ಲಿ ಕೂತಿರುವ ನಮ್ಮ ಪ್ರತಿನಿಧಿಗಳಿಗೂ ಈ ಸಂಸ್ಥೆಗಳ ಬಗ್ಗೆ ಇರುವ ಮಾಹಿತಿ ಅಷ್ಟಕ್ಕಷ್ಟೇ. ಯಾಕೆಂದರೆ ಬೇಹುಗಾರಿಕಾ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ನೀಡಲಾಗುವ ಹಣ ಇಲ್ಲವೇ ಅದರ ಕಾರ್ಯನಿರ್ವಹಣೆ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸುವಂತಿಲ್ಲ.
ಇದರಿಂದಾಗಿ ಇವುಗಳ ಅಂತರಂಗ ಬಹಿರಂಗಗೊಳ್ಳುವುದೇ ಇಲ್ಲ. ಅಮೆರಿಕದ ಎಫ್‌ಬಿಐ ಕೂಡಾ ಅಲ್ಲಿನ ಕಾಂಗ್ರೆಸ್‌ನ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಜರ್ಮನಿ, ಫ್ರಾನ್ಸ್, ಅಸ್ಟ್ರೇಲಿಯಾ ಸೇರಿದಂತೆ ಬಹುತೇಕ ದೇಶಗಳ ಗುಪ್ತಚರ ಸಂಸ್ಥೆಗಳು ಅಲ್ಲಿನ ಸಂಸತ್‌ಗೆ ಉತ್ತರದಾಯಿಯಾಗಿವೆ. ಬ್ರಿಟನ್‌ನಲ್ಲಿ ಸ್ವತಂತ್ರ ಸಮಿತಿಯಿಂದ ಪರಿಶೀಲನೆ ನಡೆಸುವ ವ್ಯವಸ್ಥೆ ಇದೆ. ಆದರೆ ಭಾರತದಲ್ಲಿ ಮಾತ್ರ ಯಾಕೆ `ಪವಿತ್ರ ಗೋವಿನ' ಪಟ್ಟಕಟ್ಟಿ ವಿಶೇಷ ರಕ್ಷಣೆ ನೀಡಲಾಗಿದೆಯೋ ಗೊತ್ತಿಲ್ಲ.
ಬೇಹುಗಾರಿಕಾ ಸಂಸ್ಥೆಗಳನ್ನು ಕನಿಷ್ಠ ಸಂಸತ್‌ಗೆ ಉತ್ತರದಾಯಿಯನ್ನಾಗಿ ಮಾಡಿ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತಂದರೆ ಅವುಗಳು ಸುಧಾರಣೆಯಾಗಬಹುದೇನೋ?

Sunday, February 17, 2013

ಕಾವೇರಿ ಐತೀರ್ಪಿನ ಆಚೆಗೂ ಬದುಕು ಇದೆ

ಕಾವೇರಿ ಐತೀರ್ಪಿನ ಅಧಿಸೂಚನೆಯ ಪ್ರಕಟಣೆ ಎಂದರೆ `ಶವದ ಪೆಟ್ಟಿಗೆಗೆ ಕೊನೆಯ ಮೊಳೆ'ಯೇನಲ್ಲ, ಅದರಾಚೆಗೂ ಬದುಕಿದೆ. ಆ ಬದುಕಿನಲ್ಲಿ ಮಳೆ-ಬೆಳೆ, ರಾಜ್ಯ-ರಾಜ್ಯಗಳ ನಡುವೆ ನೀರಿನ ಜಗಳ, ನ್ಯಾಯಾಲಯ - ನ್ಯಾಯಮಂಡಳಿಗಳಲ್ಲಿ ವ್ಯಾಜ್ಯ, ರೈತರ ಪ್ರತಿಭಟನೆ, ರಾಜಕಾರಣಿಗಳ ಆತ್ಮವಂಚನೆ ಎಲ್ಲವೂ ಇರುತ್ತವೆ.
`ಎಲ್ಲವೂ ಮುಗಿದು ಹೋಗುತ್ತದೆ' ಎಂದು ಹುಯಿಲೆಬ್ಬಿಸುತ್ತಿರುವ ನಮ್ಮ ರಾಜಕಾರಣಿಗಳಲ್ಲಿ ಕೆಲವರು ಎಲ್ಲವೂ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ, ಉಳಿದವರು ಏನೂ ಗೊತ್ತಿಲ್ಲದೆ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಿದ್ದಾರೆ. ಐತೀರ್ಪಿನ ಅಧಿಸೂಚನೆಯ ಪ್ರಕಟಣೆಗೆ ಅಭ್ಯಂತರ ಇಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ತಲೆಬಾಗಿದೆ. ಅದರಂತೆ ಕೊನೆಯ ದಿನಾಂಕವನ್ನೂ ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ಇನ್ನೂ ಅದನ್ನು ತಡೆಯುವುದು ಸಾಧ್ಯ ಇಲ್ಲ. ನೀರಲ್ಲಿ ಗುದ್ದಾಡುವ ಈ ವ್ಯರ್ಥಪ್ರಯತ್ನವನ್ನು ಕೈಬಿಟ್ಟು ಅಧಿಸೂಚನೆಯ ಪ್ರಕಟಣೆಯನ್ನು ನಮ್ಮ ಅನುಕೂಲತೆಗೆ ಬಳಸಿಕೊಳ್ಳುವುದು ಹೇಗೆ ಎಂಬ ಯೋಚನೆ ಮಾಡುವುದು ಜಾಣತನ. ತಮಿಳುನಾಡಿನ ರಾಜಕಾರಣಿಗಳು ನಮ್ಮವರಿಗಿಂತ ಜಾಣರು, ಬಹುಶಃ ಅವರು ಈಗಾಗಲೇ ಈ ಪ್ರಯತ್ನದಲ್ಲಿದ್ದಾರೆ.
`ಅಧಿಸೂಚನೆ ಹೊರಡಿಸಿದರೂ  ಅದು ಐತೀರ್ಪನ್ನು ಪ್ರಶ್ನಿಸುವ ಸಂಬಂಧಿತ ರಾಜ್ಯಗಳ ಹಕ್ಕು ಮತ್ತು ಈಗ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಅಡ್ಡಿಯಾಗುವುದಿಲ್ಲ' ಎಂದು ಸಾಕ್ಷಾತ್ ಸುಪ್ರೀಂಕೋರ್ಟ್ ಹೇಳಿದ ನಂತರ `ಶವದ ಪೆಟ್ಟಿಗೆಗೆ ಕೊನೆಯ ಮೊಳೆ' ಆಗುವುದಾದರೂ ಹೇಗೆ? ಇಂತಹ ಅಪಾಯ ಇರುವುದೇ ನಿಜವಾಗಿದ್ದರೆ, 2007ರಲ್ಲಿ ಅಂತಿಮ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ಐತೀರ್ಪಿನ ಅಧಿಸೂಚನೆ ಪ್ರಕಟಣೆಯನ್ನು ರಾಜ್ಯ ಸರ್ಕಾರ ಯಾಕೆ ವಿರೋಧಿಸಿರಲಿಲ್ಲ?
ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಣದಿದ್ದ ಅಪಾಯ ಈಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಾದಿಯಾಗಿ ಎಲ್ಲರಿಗೂ ಯಾಕೆ ಕಾಣತೊಡಗಿದೆ? ಅಧಿಸೂಚನೆ ಹೊರಡಿಸುವುದರಿಂದ ಕರ್ನಾಟಕಕ್ಕೆ ಆಗಲಿರುವ ಬಹುದೊಡ್ಡ ಲಾಭ ಎಂದರೆ ಕಳೆದ 23 ವರ್ಷಗಳಿಂದ ನಮ್ಮ ಕೊರಳಿಗೆ ನೇಣಿನಂತೆ ಸುತ್ತಿಕೊಂಡಿರುವ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಐತೀರ್ಪಿನಿಂದ ಮುಕ್ತಿ. ಯಾವ ಕೋನದಿಂದ ಅಧ್ಯಯನ ನಡೆಸಿದರೂ ಮಧ್ಯಂತರ ಐತೀರ್ಪಿಗಿಂತ ಅಂತಿಮ ತೀರ್ಪು ಕರ್ನಾಟಕದ ರೈತರಿಗೆ ಹೆಚ್ಚು ಲಾಭವನ್ನುಂಟು ಮಾಡಲಿದೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳದೆ ಇರಲಾಗದು. ಹೀಗಿದ್ದರೂ ಕಳೆದ ಐದು ವರ್ಷಗಳಿಂದ ಮಧ್ಯಂತರ ಐತೀರ್ಪನ್ನು ಕೊರಳಿಗೆ ಕಟ್ಟಿಕೊಂಡು ಕರ್ನಾಟಕ ಯಾಕೆ ಸಂಕಟಪಡುತ್ತಿದೆಯೋ ಗೊತ್ತಿಲ್ಲ.
ಹೌದು, ಅಂತಿಮ ಐತೀರ್ಪಿನಲ್ಲಿ ಎಲ್ಲವೂ ನಮ್ಮ ಪರವಾಗಿ ಇಲ್ಲ, ಸಾಕಷ್ಟು ಅನ್ಯಾಯವಾಗಿದೆ. ಸಂಕಷ್ಟದ ಕಾಲವಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ ತಗ್ಗಿಲ್ಲ, ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಜನತೆಗೆ ಅವಶ್ಯ ಇರುವಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿನ ಪಾಲು ಒದಗಿಸಿಲ್ಲ, ಅಂತರ್ಜಲದ ನೆಪದಲ್ಲಿ ಕರ್ನಾಟಕದ ಚರಂಡಿ ನೀರನ್ನೂ ಲೆಕ್ಕ ಹಾಕಿರುವ ನ್ಯಾಯಮಂಡಳಿ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶದಲ್ಲಿನ ಅಂತರ್ಜಲದ ಬಗ್ಗೆ ಚಕಾರ ಎತ್ತಿಲ್ಲ.
1924ರ ಒಪ್ಪಂದದಿಂದ ಕರ್ನಾಟಕವನ್ನು ಮುಕ್ತಗೊಳಿಸಿದರೂ ಅದೇ ಒಪ್ಪಂದದ ಬಲದಿಂದ ತಮಿಳುನಾಡು ಯದ್ವಾತದ್ವಾ ಹೆಚ್ಚು ಮಾಡಿಕೊಂಡಿರುವ 24.71 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ರಕ್ಷಣೆಗೆ 419 ಟಿಎಂಸಿ ನೀರು ಒದಗಿಸಿರುವ ನ್ಯಾಯಮಂಡಳಿ, ಕರ್ನಾಟಕ ಕೇಳಿಕೊಂಡಿರುವ 25.27 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಪ್ಪಿಕೊಂಡಿಲ್ಲ, 381 ಟಿಎಂಸಿ ನೀರಿನ ಪಾಲನ್ನೂ ನೀಡಿಲ್ಲ.  ಕೇರಳ ರಾಜ್ಯಕ್ಕೆ ಈಗ ಕೇವಲ 9 ಟಿಎಂಸಿಯಷ್ಟೇ ಬಳಸಲು ಸಾಧ್ಯ ಇದ್ದರೂ ಅಲ್ಲಿಗೆ 21 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಹೇಳಿ ಆ ನೀರನ್ನು ಬಳಸಲು ತಮಿಳುನಾಡಿಗೆ ಅವಕಾಶ ಮಾಡಿಕೊಟ್ಟಿರುವ ನ್ಯಾಯಮಂಡಳಿ ಅಂತಹ ಔದಾರ್ಯವನ್ನು ಕರ್ನಾಟಕಕ್ಕೆ ತೋರಿಸಿಲ್ಲ....ಹೀಗೆ ಆಗಿರುವ ಅನ್ಯಾಯದ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು.
ಅಂತಿಮ ಐತೀರ್ಪಿನಿಂದ ಕರ್ನಾಟಕಕ್ಕೆ ಒಂದಷ್ಟು ಅನುಕೂಲಗಳೂ ಆಗಿವೆ. ಮುಖ್ಯವಾಗಿ ಕಳೆದ ಕೆಲವು ದಶಕಗಳಿಂದ ತಲೆ ಮೇಲೆ ಇದ್ದ 1924ರ ಒಪ್ಪಂದದ ತೂಗುಕತ್ತಿಯಿಂದ ಶಾಶ್ವತ ಮುಕ್ತಿ ಸಿಕ್ಕಿದೆ. ಮಧ್ಯಂತರ ಐತೀರ್ಪಿನಲ್ಲಿದ್ದ 11.24 ಲಕ್ಷ ಎಕರೆ ಮೇಲಿನ ನಿರ್ಬಂಧ ರದ್ದಾಗಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ನಿಗದಿಪಡಿಸಿರುವ ನೀರಿನ ಪಾಲನ್ನು ನೀಡಿದ ನಂತರ ಉಳಿಯುವ ಹೆಚ್ಚುವರಿ ನೀರಿನ ಬಳಕೆಯ ಹಕ್ಕನ್ನು ಸಂಪೂರ್ಣವಾಗಿ ಕರ್ನಾಟಕಕ್ಕೆ ನೀಡಲಾಗಿದೆ. ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರದ ನೀರಿನ ಲೆಕ್ಕವೇ ಅಧಿಕೃತ ಎಂದು ಹೇಳುವ ಮೂಲಕ ತಮಿಳುನಾಡಿನ ಮೋಸದ ಲೆಕ್ಕಕ್ಕೆ ಕಡಿವಾಣ ಹಾಕಿದೆ.
ಕರ್ನಾಟಕಕ್ಕೆ ಆಗಿರುವ `ಅನ್ಯಾಯ'ದ ವಿರುದ್ಧ ಹೋರಾಟ ನಡೆಯಲೇಬೇಕು. ನ್ಯಾಯಾಲಯದಲ್ಲಿ ಕಾನೂನಿನ ಹೋರಾಟ, ಕೇಂದ್ರ ಸರ್ಕಾರದ ಜತೆ ರಾಜಕೀಯ ಹೋರಾಟ, ಸರ್ವಪಕ್ಷಗಳ ನಿಯೋಗ, ತಜ್ಞರ ಜತೆ ಸಮಾಲೋಚನೆ, ಪ್ರತಿಭಟನೆ, ಪಾದಯಾತ್ರೆ...ಎಲ್ಲವೂ ನಡೆಯಬೇಕು. ಇದರ ಜತೆಯಲ್ಲಿ ಐತೀರ್ಪಿನಲ್ಲಿ ನಮಗೆ ಸಿಕ್ಕಿರುವ `ನ್ಯಾಯ'ದ ಅನುಕೂಲಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸುವುದು ಬೇಡವೇ? ಇದಕ್ಕಾಗಿ ರಾಜ್ಯ ಸರ್ಕಾರ ಏನು ಮಾಡಿದೆ? ಇಂತಹ ಬಿಕ್ಕಟ್ಟು ಎದುರಾದಾಗೆಲ್ಲ ನಮ್ಮ ಈವರೆಗಿನ ಎಲ್ಲ ಸರ್ಕಾರಗಳು ತಮಿಳುನಾಡು ಎಂಬ `ಭೂತ'ವನ್ನು ಪ್ರತಿಭಟನಕಾರರ ಮುಂದೆ ತಂದು ನಿಲ್ಲಿಸುತ್ತಾ ಬಂದಿವೆ.
ರೋಷತಪ್ತ ಜನ ಕೂಡಿ ಆ `ಭೂತ'ಕ್ಕೆ ಚಪ್ಪಲಿಯಿಂದ ಹೊಡೆದು ಸುಟ್ಟುಹಾಕಿ ಕೋಪ ಶಮನಮಾಡಿಕೊಳ್ಳುತ್ತಾರೆ. ಆದರೆ ಪಕ್ಕದಲ್ಲಿಯೇ ಇರುವ ಹಿತಶತ್ರುವಿನ ಕಡೆ ಯಾರ ಗಮನವೂ ಹೋಗುವುದಿಲ್ಲ. ಯಾರೂ ಅದೇ ಗಟ್ಟಿ ದನಿಯಲ್ಲಿ ಜನಪ್ರತಿನಿಧಿಗಳ ಕರ್ತವ್ಯಲೋಪವನ್ನು ಪ್ರಶ್ನಿಸಲು ಹೋಗುವುದಿಲ್ಲ. ನೆಲ-ಜಲ-ಭಾಷೆಯಂತಹ ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿದ ವಿವಾದದ ಸಮಯದಲ್ಲಿ ಸಿಡಿದೇಳುವ ಭಾವುಕ ಜನರನ್ನು ಹೇಗೆ ಪಳಗಿಸಬೇಕೆಂಬುದು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದ ಇವೆಲ್ಲವೂ ನಡೆಯುತ್ತಾ ಬಂದಿದೆ.
1924ರ ಒಪ್ಪಂದದ ಪ್ರಕಾರ ಕರ್ನಾಟಕದ ಅಚ್ಚುಕಟ್ಟು ಪ್ರದೇಶ 2,35,000 ಎಕರೆ, ಬಳಸಬಹುದಾದ ನೀರಿನ ಪಾಲು ಕೇವಲ 89.82 ಟಿಎಂಸಿ ಆಗಿತ್ತು. ಮಧ್ಯಂತರ ಐತೀರ್ಪಿನಲ್ಲಿ ಈ ಅಚ್ಚುಕಟ್ಟು ಪ್ರದೇಶವನ್ನು 11.24 ಲಕ್ಷ ಎಕರೆವರೆಗೆ ವಿಸ್ತರಿಸಲಾಯಿತು. ಕಾವೇರಿ ನ್ಯಾಯಮಂಡಳಿಯ ಮುಂದೆ ರಾಜ್ಯ ಸರ್ಕಾರ ಆ ಕಾಲದಲ್ಲಿ ಹೇಳಿಕೊಂಡಿರುವ ಪ್ರಕಾರ ನಮ್ಮ ಅಚ್ಚುಕಟ್ಟು ಅಭಿವೃದ್ಧಿಯ ಗುರಿ 27 ಲಕ್ಷ ಎಕರೆ. ಇದರಲ್ಲಿ 24 ಲಕ್ಷ ಎಕರೆ ಅಚ್ಚುಕಟ್ಟು ಅಭಿವೃದ್ಧಿಗೆ ಯೋಜನೆ ಸಿದ್ದ ಇದೆ ಎಂದು ಸರ್ಕಾರ ತಿಳಿಸಿತ್ತು.
ನ್ಯಾಯಮಂಡಳಿ ಕೇವಲ 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಪಡಿಸಬೇಕೆಂದು ಆದೇಶಿಸಿ ಅದಕ್ಕೆ 250 ಟಿಎಂಸಿ ನೀರಿನ ಪಾಲನ್ನಷ್ಟೆ ನೀಡಿ ಅನ್ಯಾಯ ಮಾಡಿರುವುದು ನಿಜ. ಆದರೆ ಹೆಚ್ಚುವರಿ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಸಿಕ್ಕಿರುವ ಅವಕಾಶವನ್ನಾದರೂ ಬಳಸಿಕೊಳ್ಳುವುದು ಬೇಡವೇ? 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದಾಗಿ 2010ರಲ್ಲಿಯೇ ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಮತ್ತು ತಮಿಳುನಾಡು ಸರ್ಕಾರಕ್ಕೆ ತಿಳಿಸಿತ್ತು. ಈ 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮಾನ್ಯತೆ ಪಡೆಯಲಿಕ್ಕಾದರೂ ಅಂತಿಮ ಐತೀರ್ಪು ಅಧಿಸೂಚನೆ ಪ್ರಕಟವಾಗಬೇಕಲ್ಲವೇ?
ಅಂತಿಮ ಐತೀರ್ಪಿನಿಂದ ನಮ್ಮ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಮಾತ್ರ ಅಲ್ಲ, ಹೆಚ್ಚುವರಿ ನೀರಿನ ಬಳಕೆಗೂ ಅವಕಾಶ ಸಿಗಲಿದೆ. ನ್ಯಾಯಮಂಡಳಿ ರಾಜ್ಯಕ್ಕೆ ಅಧಿಕೃತವಾಗಿ ನೀಡಿರುವ ಪಾಲು 270 ಟಿಎಂಸಿಯಾದರೂ ರಾಜ್ಯ ಬಳಸಲು ಅವಕಾಶ ನೀಡಿರುವ ಹೆಚ್ಚುವರಿ ನೀರಿನ ಪಾಲನ್ನು ಸೇರಿಸಿದರೆ ಇದು ಸುಮಾರು 310 ಟಿಎಂಸಿ ಆಗಲಿದೆ ಎಂದು ಹೇಳುತ್ತಿದೆ ಒಳಲೆಕ್ಕ.
1972-73ರಿಂದ 2004-05ರಿಂದ ಇಲ್ಲಿಯವರೆಗೆ ಬಿಳಿಗುಂಡ್ಲು ಜಲಮಾಪನದವರೆಗಿನ ನೀರಿನ ಸರಾಸರಿ ಉತ್ಪನ್ನ 538 ಟಿಎಂಸಿ. ಅಂತಿಮ ಐತೀರ್ಪಿನ ಪ್ರಕಾರ ತಮಿಳುನಾಡಿಗೆ 192 ಟಿಎಂಸಿ ಮತ್ತು ಕೇರಳಕ್ಕೆ 21 ಟಿಎಂಸಿ ನೀರು  ಹರಿಸಿದರೆ ನಮಗೆ ಉಳಿಯುವ ನೀರಿನ ಪ್ರಮಾಣ ಸುಮಾರು 325 ಟಿಎಂಸಿ. ಅಂತಿಮ ಐತೀರ್ಪಿನಲ್ಲಿ ನಮಗೆ ಅಧಿಕೃತವಾಗಿ 270 ಟಿಎಂಸಿ ನೀರನ್ನಷ್ಟೇ ನಿಗದಿಪಡಿಸಲಾಗಿದ್ದರೂ ಸಾಮಾನ್ಯ ಮಳೆಗಾಲದಲ್ಲಿ ನಮಗೆ ಹೆಚ್ಚುವರಿಯಾಗಿ ಸುಮಾರು 55 ಟಿಎಂಸಿ ನೀರು ಸಿಗಲಿದೆ. ಈ ನೀರಿನ ಬಳಕೆಗೆ ಸಂಬಂಧಿಸಿದಂತೆ ಅಂತಿಮ ಐತೀರ್ಪಿನಲ್ಲಿ ಯಾವ ನಿರ್ಬಂಧವನ್ನು ಹೇರಲಾಗಿಲ್ಲ. ಆದರೆ ಈ ನೀರು ಬಳಸಿಕೊಳ್ಳುವ ಎಷ್ಟು ನೀರಾವರಿ ಯೋಜನೆಗಳ ನೀಲಿನಕ್ಷೆಗಳನ್ನು ನಮ್ಮ ಸರ್ಕಾರ ಸಿದ್ದ ಮಾಡಿಟ್ಟುಕೊಂಡಿದೆ?
ಕೊನೆಯದಾಗಿ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸಿದ ಕೂಡಲೇ `ಕಾವೇರಿ ನಿರ್ವಹಣಾ ಮಂಡಳಿ' ಅಸ್ತಿತ್ವಕ್ಕೆ ಬಂದು ನಮ್ಮ ಜಲಾಶಯಗಳ ಮೇಲಿನ ಅಧಿಕಾರವನ್ನು ರಾಜ್ಯ ಕಳೆದುಕೊಳ್ಳಲಿದೆ ಎಂಬ ಆತಂಕದಲ್ಲಿ ಏನಾದರೂ ಹುರುಳಿದೆಯೇ? ವಾಸ್ತವ ಸಂಗತಿ ಏನೆಂದರೆ ಅಧಿಸೂಚನೆ ಹೊರಡಿಸಲಿಕ್ಕಷ್ಟೇ ಸುಪ್ರೀಂಕೋರ್ಟ್ ಹೇಳಿದೆ, `ಮಂಡಳಿ' ರಚನೆಯಾಗಬೇಕಾದರೆ ಕೇಂದ್ರ ಸರ್ಕಾರ ಅಂತರರಾಜ್ಯ ಜಲ ವಿವಾದ ಕಾಯಿದೆಯ 6 (ಎ) ಪ್ರಕಾರ ಇನ್ನೊಂದು ಅಧಿಸೂಚನೆ ಹೊರಡಿಸಬೇಕಾಗುತ್ತದೆ.
ಅದಕ್ಕೆ ಸಂಸತ್ ಅಂಗೀಕಾರ ನೀಡಬೇಕಾಗಿರುವುದರಿಂದ ಅದೊಂದು ಪ್ರತ್ಯೇಕ ಕಸರತ್ತು. ಮಂಡಳಿ ಸ್ಥಾಪನೆಯಾದರೂ ಅದೇನು ಪ್ರಧಾನಿ ಅಧ್ಯಕ್ಷರಾಗಿರುವ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಇಲ್ಲವೆ ಕೇಂದ್ರ ಜಲಸಂಪನ್ಮೂಲ ಖಾತೆಯ ಕಾರ್ಯದರ್ಶಿ ಅಧ್ಯಕ್ಷರಾಗಿರುವ ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳು ಸದಸ್ಯರಾಗಿರುವ ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ)ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ಇರಲಾರದು.
ನ್ಯಾಯಮಂಡಳಿಯ ಶಿಫಾರಸಿನ ಪ್ರಕಾರ ಅಸ್ತಿತ್ವಕ್ಕೆ ಬರಲಿರುವ `ಕಾವೇರಿ ನಿರ್ವಹಣಾ ಮಂಡಳಿ' ಮತ್ತು `ಕಾವೇರಿ ನದಿ ನಿಯಂತ್ರಣಾ ಸಮಿತಿ'ಯಲ್ಲಿ ಯಾವ ಜನಪ್ರತಿನಿಧಿಗೂ ಪ್ರಾತಿನಿಧ್ಯ ಇಲ್ಲ. ನೀರಾವರಿ,ಕೃಷಿ, ಹವಾಮಾನ ತಜ್ಞರು ಮತ್ತು ಕೆಲವು ಅಧಿಕಾರಿಗಳನ್ನೊಳಗೊಂಡ ಈ `ಬಿಳಿ ಆನೆ'ಯ ರಚನೆಗೆ ಸಂಸತ್ ಅಂಗೀಕಾರ ನೀಡಬೇಕು. ತಮಗೆ ಪ್ರಾತಿನಿಧ್ಯ ಇಲ್ಲದ ಈ `ಮಂಡಳಿ', `ಸಮಿತಿ'ಗಳ ರಚನೆಗೆ ಕಾವೇರಿ ನದಿ ಕಣಿವೆಯ ರಾಜ್ಯಗಳ ಜನಪ್ರತಿನಿಧಿಗಳು ಅಷ್ಟೊಂದು ಸುಲಭದಲ್ಲಿ ಅವಕಾಶ ಮಾಡಿಕೊಡಲಿದ್ದಾರೆ ಎಂದು ಹೇಳುವ ಹಾಗಿಲ್ಲ.
ಆದುದರಿಂದ `ಇಂದು ಅಧಿಸೂಚನೆ ಜಾರಿಯಾಗಿ, ನಾಳೆಯೇ ಮಂಡಳಿ ರಚನೆಯಾಗಿ, ನಾಡಿದ್ದು ಜಲಾಶಯಗಳ ಮೇಲಿನ ಅಧಿಕಾರವನ್ನು ರಾಜ್ಯ ಕಳೆದುಕೊಳ್ಳಲಿದೆ' ಎಂಬ ಆತಂಕಕ್ಕೆ ಯಾವ ಆಧಾರಗಳೂ ಇಲ್ಲ. ಒಂದೊಮ್ಮೆ ಕಾವೇರಿ ನದಿನೀರು ನಿರ್ವಹಣೆಗೆ ಅಂತಹದ್ದೊಂದು ಸ್ವತಂತ್ರ ವ್ಯವಸ್ಥೆ ಅಸ್ತಿತ್ವಕ್ಕೆ ಬಂದರೂ ಹೆದರಬೇಕಾಗಿರುವುದು ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಬಹುಪಾಲು ಸತ್ಯವನ್ನೇ ಹೇಳುತ್ತಾ ಬಂದಿರುವ ಕರ್ನಾಟಕ ಅಲ್ಲ, ಬಹುಪಾಲು ಸುಳ್ಳುಗಳನ್ನೇ ಹೇಳುತ್ತಾ ಬಂದಿರುವ ತಮಿಳುನಾಡು. ಇತ್ತೀಚೆಗೆ ಸುಪ್ರೀಂಕೋರ್ಟಿನಲ್ಲಿಯೇ ತಮಿಳುನಾಡಿನ ಸುಳ್ಳು ಬಯಲಾಗಿದೆ. ಆದುದರಿಂದ ಅಧಿಸೂಚನೆಯ ಪ್ರಕಟಣೆ ಎಂದಾಕ್ಷಣ ಅದು ಬದುಕಿನ ಕೊನೆ ಎಂದು ಭೀತಿಪಡಬೇಕಾಗಿಲ್ಲ, ಅದರಾಚೆಗೂ ಬದುಕಿದೆ.