Sunday, February 17, 2013

ಕಾವೇರಿ ಐತೀರ್ಪಿನ ಆಚೆಗೂ ಬದುಕು ಇದೆ

ಕಾವೇರಿ ಐತೀರ್ಪಿನ ಅಧಿಸೂಚನೆಯ ಪ್ರಕಟಣೆ ಎಂದರೆ `ಶವದ ಪೆಟ್ಟಿಗೆಗೆ ಕೊನೆಯ ಮೊಳೆ'ಯೇನಲ್ಲ, ಅದರಾಚೆಗೂ ಬದುಕಿದೆ. ಆ ಬದುಕಿನಲ್ಲಿ ಮಳೆ-ಬೆಳೆ, ರಾಜ್ಯ-ರಾಜ್ಯಗಳ ನಡುವೆ ನೀರಿನ ಜಗಳ, ನ್ಯಾಯಾಲಯ - ನ್ಯಾಯಮಂಡಳಿಗಳಲ್ಲಿ ವ್ಯಾಜ್ಯ, ರೈತರ ಪ್ರತಿಭಟನೆ, ರಾಜಕಾರಣಿಗಳ ಆತ್ಮವಂಚನೆ ಎಲ್ಲವೂ ಇರುತ್ತವೆ.
`ಎಲ್ಲವೂ ಮುಗಿದು ಹೋಗುತ್ತದೆ' ಎಂದು ಹುಯಿಲೆಬ್ಬಿಸುತ್ತಿರುವ ನಮ್ಮ ರಾಜಕಾರಣಿಗಳಲ್ಲಿ ಕೆಲವರು ಎಲ್ಲವೂ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ, ಉಳಿದವರು ಏನೂ ಗೊತ್ತಿಲ್ಲದೆ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಿದ್ದಾರೆ. ಐತೀರ್ಪಿನ ಅಧಿಸೂಚನೆಯ ಪ್ರಕಟಣೆಗೆ ಅಭ್ಯಂತರ ಇಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ತಲೆಬಾಗಿದೆ. ಅದರಂತೆ ಕೊನೆಯ ದಿನಾಂಕವನ್ನೂ ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ಇನ್ನೂ ಅದನ್ನು ತಡೆಯುವುದು ಸಾಧ್ಯ ಇಲ್ಲ. ನೀರಲ್ಲಿ ಗುದ್ದಾಡುವ ಈ ವ್ಯರ್ಥಪ್ರಯತ್ನವನ್ನು ಕೈಬಿಟ್ಟು ಅಧಿಸೂಚನೆಯ ಪ್ರಕಟಣೆಯನ್ನು ನಮ್ಮ ಅನುಕೂಲತೆಗೆ ಬಳಸಿಕೊಳ್ಳುವುದು ಹೇಗೆ ಎಂಬ ಯೋಚನೆ ಮಾಡುವುದು ಜಾಣತನ. ತಮಿಳುನಾಡಿನ ರಾಜಕಾರಣಿಗಳು ನಮ್ಮವರಿಗಿಂತ ಜಾಣರು, ಬಹುಶಃ ಅವರು ಈಗಾಗಲೇ ಈ ಪ್ರಯತ್ನದಲ್ಲಿದ್ದಾರೆ.
`ಅಧಿಸೂಚನೆ ಹೊರಡಿಸಿದರೂ  ಅದು ಐತೀರ್ಪನ್ನು ಪ್ರಶ್ನಿಸುವ ಸಂಬಂಧಿತ ರಾಜ್ಯಗಳ ಹಕ್ಕು ಮತ್ತು ಈಗ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಅಡ್ಡಿಯಾಗುವುದಿಲ್ಲ' ಎಂದು ಸಾಕ್ಷಾತ್ ಸುಪ್ರೀಂಕೋರ್ಟ್ ಹೇಳಿದ ನಂತರ `ಶವದ ಪೆಟ್ಟಿಗೆಗೆ ಕೊನೆಯ ಮೊಳೆ' ಆಗುವುದಾದರೂ ಹೇಗೆ? ಇಂತಹ ಅಪಾಯ ಇರುವುದೇ ನಿಜವಾಗಿದ್ದರೆ, 2007ರಲ್ಲಿ ಅಂತಿಮ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ಐತೀರ್ಪಿನ ಅಧಿಸೂಚನೆ ಪ್ರಕಟಣೆಯನ್ನು ರಾಜ್ಯ ಸರ್ಕಾರ ಯಾಕೆ ವಿರೋಧಿಸಿರಲಿಲ್ಲ?
ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಣದಿದ್ದ ಅಪಾಯ ಈಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಾದಿಯಾಗಿ ಎಲ್ಲರಿಗೂ ಯಾಕೆ ಕಾಣತೊಡಗಿದೆ? ಅಧಿಸೂಚನೆ ಹೊರಡಿಸುವುದರಿಂದ ಕರ್ನಾಟಕಕ್ಕೆ ಆಗಲಿರುವ ಬಹುದೊಡ್ಡ ಲಾಭ ಎಂದರೆ ಕಳೆದ 23 ವರ್ಷಗಳಿಂದ ನಮ್ಮ ಕೊರಳಿಗೆ ನೇಣಿನಂತೆ ಸುತ್ತಿಕೊಂಡಿರುವ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಐತೀರ್ಪಿನಿಂದ ಮುಕ್ತಿ. ಯಾವ ಕೋನದಿಂದ ಅಧ್ಯಯನ ನಡೆಸಿದರೂ ಮಧ್ಯಂತರ ಐತೀರ್ಪಿಗಿಂತ ಅಂತಿಮ ತೀರ್ಪು ಕರ್ನಾಟಕದ ರೈತರಿಗೆ ಹೆಚ್ಚು ಲಾಭವನ್ನುಂಟು ಮಾಡಲಿದೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳದೆ ಇರಲಾಗದು. ಹೀಗಿದ್ದರೂ ಕಳೆದ ಐದು ವರ್ಷಗಳಿಂದ ಮಧ್ಯಂತರ ಐತೀರ್ಪನ್ನು ಕೊರಳಿಗೆ ಕಟ್ಟಿಕೊಂಡು ಕರ್ನಾಟಕ ಯಾಕೆ ಸಂಕಟಪಡುತ್ತಿದೆಯೋ ಗೊತ್ತಿಲ್ಲ.
ಹೌದು, ಅಂತಿಮ ಐತೀರ್ಪಿನಲ್ಲಿ ಎಲ್ಲವೂ ನಮ್ಮ ಪರವಾಗಿ ಇಲ್ಲ, ಸಾಕಷ್ಟು ಅನ್ಯಾಯವಾಗಿದೆ. ಸಂಕಷ್ಟದ ಕಾಲವಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ ತಗ್ಗಿಲ್ಲ, ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಜನತೆಗೆ ಅವಶ್ಯ ಇರುವಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿನ ಪಾಲು ಒದಗಿಸಿಲ್ಲ, ಅಂತರ್ಜಲದ ನೆಪದಲ್ಲಿ ಕರ್ನಾಟಕದ ಚರಂಡಿ ನೀರನ್ನೂ ಲೆಕ್ಕ ಹಾಕಿರುವ ನ್ಯಾಯಮಂಡಳಿ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶದಲ್ಲಿನ ಅಂತರ್ಜಲದ ಬಗ್ಗೆ ಚಕಾರ ಎತ್ತಿಲ್ಲ.
1924ರ ಒಪ್ಪಂದದಿಂದ ಕರ್ನಾಟಕವನ್ನು ಮುಕ್ತಗೊಳಿಸಿದರೂ ಅದೇ ಒಪ್ಪಂದದ ಬಲದಿಂದ ತಮಿಳುನಾಡು ಯದ್ವಾತದ್ವಾ ಹೆಚ್ಚು ಮಾಡಿಕೊಂಡಿರುವ 24.71 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ರಕ್ಷಣೆಗೆ 419 ಟಿಎಂಸಿ ನೀರು ಒದಗಿಸಿರುವ ನ್ಯಾಯಮಂಡಳಿ, ಕರ್ನಾಟಕ ಕೇಳಿಕೊಂಡಿರುವ 25.27 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಪ್ಪಿಕೊಂಡಿಲ್ಲ, 381 ಟಿಎಂಸಿ ನೀರಿನ ಪಾಲನ್ನೂ ನೀಡಿಲ್ಲ.  ಕೇರಳ ರಾಜ್ಯಕ್ಕೆ ಈಗ ಕೇವಲ 9 ಟಿಎಂಸಿಯಷ್ಟೇ ಬಳಸಲು ಸಾಧ್ಯ ಇದ್ದರೂ ಅಲ್ಲಿಗೆ 21 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಹೇಳಿ ಆ ನೀರನ್ನು ಬಳಸಲು ತಮಿಳುನಾಡಿಗೆ ಅವಕಾಶ ಮಾಡಿಕೊಟ್ಟಿರುವ ನ್ಯಾಯಮಂಡಳಿ ಅಂತಹ ಔದಾರ್ಯವನ್ನು ಕರ್ನಾಟಕಕ್ಕೆ ತೋರಿಸಿಲ್ಲ....ಹೀಗೆ ಆಗಿರುವ ಅನ್ಯಾಯದ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು.
ಅಂತಿಮ ಐತೀರ್ಪಿನಿಂದ ಕರ್ನಾಟಕಕ್ಕೆ ಒಂದಷ್ಟು ಅನುಕೂಲಗಳೂ ಆಗಿವೆ. ಮುಖ್ಯವಾಗಿ ಕಳೆದ ಕೆಲವು ದಶಕಗಳಿಂದ ತಲೆ ಮೇಲೆ ಇದ್ದ 1924ರ ಒಪ್ಪಂದದ ತೂಗುಕತ್ತಿಯಿಂದ ಶಾಶ್ವತ ಮುಕ್ತಿ ಸಿಕ್ಕಿದೆ. ಮಧ್ಯಂತರ ಐತೀರ್ಪಿನಲ್ಲಿದ್ದ 11.24 ಲಕ್ಷ ಎಕರೆ ಮೇಲಿನ ನಿರ್ಬಂಧ ರದ್ದಾಗಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ನಿಗದಿಪಡಿಸಿರುವ ನೀರಿನ ಪಾಲನ್ನು ನೀಡಿದ ನಂತರ ಉಳಿಯುವ ಹೆಚ್ಚುವರಿ ನೀರಿನ ಬಳಕೆಯ ಹಕ್ಕನ್ನು ಸಂಪೂರ್ಣವಾಗಿ ಕರ್ನಾಟಕಕ್ಕೆ ನೀಡಲಾಗಿದೆ. ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರದ ನೀರಿನ ಲೆಕ್ಕವೇ ಅಧಿಕೃತ ಎಂದು ಹೇಳುವ ಮೂಲಕ ತಮಿಳುನಾಡಿನ ಮೋಸದ ಲೆಕ್ಕಕ್ಕೆ ಕಡಿವಾಣ ಹಾಕಿದೆ.
ಕರ್ನಾಟಕಕ್ಕೆ ಆಗಿರುವ `ಅನ್ಯಾಯ'ದ ವಿರುದ್ಧ ಹೋರಾಟ ನಡೆಯಲೇಬೇಕು. ನ್ಯಾಯಾಲಯದಲ್ಲಿ ಕಾನೂನಿನ ಹೋರಾಟ, ಕೇಂದ್ರ ಸರ್ಕಾರದ ಜತೆ ರಾಜಕೀಯ ಹೋರಾಟ, ಸರ್ವಪಕ್ಷಗಳ ನಿಯೋಗ, ತಜ್ಞರ ಜತೆ ಸಮಾಲೋಚನೆ, ಪ್ರತಿಭಟನೆ, ಪಾದಯಾತ್ರೆ...ಎಲ್ಲವೂ ನಡೆಯಬೇಕು. ಇದರ ಜತೆಯಲ್ಲಿ ಐತೀರ್ಪಿನಲ್ಲಿ ನಮಗೆ ಸಿಕ್ಕಿರುವ `ನ್ಯಾಯ'ದ ಅನುಕೂಲಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸುವುದು ಬೇಡವೇ? ಇದಕ್ಕಾಗಿ ರಾಜ್ಯ ಸರ್ಕಾರ ಏನು ಮಾಡಿದೆ? ಇಂತಹ ಬಿಕ್ಕಟ್ಟು ಎದುರಾದಾಗೆಲ್ಲ ನಮ್ಮ ಈವರೆಗಿನ ಎಲ್ಲ ಸರ್ಕಾರಗಳು ತಮಿಳುನಾಡು ಎಂಬ `ಭೂತ'ವನ್ನು ಪ್ರತಿಭಟನಕಾರರ ಮುಂದೆ ತಂದು ನಿಲ್ಲಿಸುತ್ತಾ ಬಂದಿವೆ.
ರೋಷತಪ್ತ ಜನ ಕೂಡಿ ಆ `ಭೂತ'ಕ್ಕೆ ಚಪ್ಪಲಿಯಿಂದ ಹೊಡೆದು ಸುಟ್ಟುಹಾಕಿ ಕೋಪ ಶಮನಮಾಡಿಕೊಳ್ಳುತ್ತಾರೆ. ಆದರೆ ಪಕ್ಕದಲ್ಲಿಯೇ ಇರುವ ಹಿತಶತ್ರುವಿನ ಕಡೆ ಯಾರ ಗಮನವೂ ಹೋಗುವುದಿಲ್ಲ. ಯಾರೂ ಅದೇ ಗಟ್ಟಿ ದನಿಯಲ್ಲಿ ಜನಪ್ರತಿನಿಧಿಗಳ ಕರ್ತವ್ಯಲೋಪವನ್ನು ಪ್ರಶ್ನಿಸಲು ಹೋಗುವುದಿಲ್ಲ. ನೆಲ-ಜಲ-ಭಾಷೆಯಂತಹ ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿದ ವಿವಾದದ ಸಮಯದಲ್ಲಿ ಸಿಡಿದೇಳುವ ಭಾವುಕ ಜನರನ್ನು ಹೇಗೆ ಪಳಗಿಸಬೇಕೆಂಬುದು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದ ಇವೆಲ್ಲವೂ ನಡೆಯುತ್ತಾ ಬಂದಿದೆ.
1924ರ ಒಪ್ಪಂದದ ಪ್ರಕಾರ ಕರ್ನಾಟಕದ ಅಚ್ಚುಕಟ್ಟು ಪ್ರದೇಶ 2,35,000 ಎಕರೆ, ಬಳಸಬಹುದಾದ ನೀರಿನ ಪಾಲು ಕೇವಲ 89.82 ಟಿಎಂಸಿ ಆಗಿತ್ತು. ಮಧ್ಯಂತರ ಐತೀರ್ಪಿನಲ್ಲಿ ಈ ಅಚ್ಚುಕಟ್ಟು ಪ್ರದೇಶವನ್ನು 11.24 ಲಕ್ಷ ಎಕರೆವರೆಗೆ ವಿಸ್ತರಿಸಲಾಯಿತು. ಕಾವೇರಿ ನ್ಯಾಯಮಂಡಳಿಯ ಮುಂದೆ ರಾಜ್ಯ ಸರ್ಕಾರ ಆ ಕಾಲದಲ್ಲಿ ಹೇಳಿಕೊಂಡಿರುವ ಪ್ರಕಾರ ನಮ್ಮ ಅಚ್ಚುಕಟ್ಟು ಅಭಿವೃದ್ಧಿಯ ಗುರಿ 27 ಲಕ್ಷ ಎಕರೆ. ಇದರಲ್ಲಿ 24 ಲಕ್ಷ ಎಕರೆ ಅಚ್ಚುಕಟ್ಟು ಅಭಿವೃದ್ಧಿಗೆ ಯೋಜನೆ ಸಿದ್ದ ಇದೆ ಎಂದು ಸರ್ಕಾರ ತಿಳಿಸಿತ್ತು.
ನ್ಯಾಯಮಂಡಳಿ ಕೇವಲ 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಪಡಿಸಬೇಕೆಂದು ಆದೇಶಿಸಿ ಅದಕ್ಕೆ 250 ಟಿಎಂಸಿ ನೀರಿನ ಪಾಲನ್ನಷ್ಟೆ ನೀಡಿ ಅನ್ಯಾಯ ಮಾಡಿರುವುದು ನಿಜ. ಆದರೆ ಹೆಚ್ಚುವರಿ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಸಿಕ್ಕಿರುವ ಅವಕಾಶವನ್ನಾದರೂ ಬಳಸಿಕೊಳ್ಳುವುದು ಬೇಡವೇ? 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದಾಗಿ 2010ರಲ್ಲಿಯೇ ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಮತ್ತು ತಮಿಳುನಾಡು ಸರ್ಕಾರಕ್ಕೆ ತಿಳಿಸಿತ್ತು. ಈ 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮಾನ್ಯತೆ ಪಡೆಯಲಿಕ್ಕಾದರೂ ಅಂತಿಮ ಐತೀರ್ಪು ಅಧಿಸೂಚನೆ ಪ್ರಕಟವಾಗಬೇಕಲ್ಲವೇ?
ಅಂತಿಮ ಐತೀರ್ಪಿನಿಂದ ನಮ್ಮ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಮಾತ್ರ ಅಲ್ಲ, ಹೆಚ್ಚುವರಿ ನೀರಿನ ಬಳಕೆಗೂ ಅವಕಾಶ ಸಿಗಲಿದೆ. ನ್ಯಾಯಮಂಡಳಿ ರಾಜ್ಯಕ್ಕೆ ಅಧಿಕೃತವಾಗಿ ನೀಡಿರುವ ಪಾಲು 270 ಟಿಎಂಸಿಯಾದರೂ ರಾಜ್ಯ ಬಳಸಲು ಅವಕಾಶ ನೀಡಿರುವ ಹೆಚ್ಚುವರಿ ನೀರಿನ ಪಾಲನ್ನು ಸೇರಿಸಿದರೆ ಇದು ಸುಮಾರು 310 ಟಿಎಂಸಿ ಆಗಲಿದೆ ಎಂದು ಹೇಳುತ್ತಿದೆ ಒಳಲೆಕ್ಕ.
1972-73ರಿಂದ 2004-05ರಿಂದ ಇಲ್ಲಿಯವರೆಗೆ ಬಿಳಿಗುಂಡ್ಲು ಜಲಮಾಪನದವರೆಗಿನ ನೀರಿನ ಸರಾಸರಿ ಉತ್ಪನ್ನ 538 ಟಿಎಂಸಿ. ಅಂತಿಮ ಐತೀರ್ಪಿನ ಪ್ರಕಾರ ತಮಿಳುನಾಡಿಗೆ 192 ಟಿಎಂಸಿ ಮತ್ತು ಕೇರಳಕ್ಕೆ 21 ಟಿಎಂಸಿ ನೀರು  ಹರಿಸಿದರೆ ನಮಗೆ ಉಳಿಯುವ ನೀರಿನ ಪ್ರಮಾಣ ಸುಮಾರು 325 ಟಿಎಂಸಿ. ಅಂತಿಮ ಐತೀರ್ಪಿನಲ್ಲಿ ನಮಗೆ ಅಧಿಕೃತವಾಗಿ 270 ಟಿಎಂಸಿ ನೀರನ್ನಷ್ಟೇ ನಿಗದಿಪಡಿಸಲಾಗಿದ್ದರೂ ಸಾಮಾನ್ಯ ಮಳೆಗಾಲದಲ್ಲಿ ನಮಗೆ ಹೆಚ್ಚುವರಿಯಾಗಿ ಸುಮಾರು 55 ಟಿಎಂಸಿ ನೀರು ಸಿಗಲಿದೆ. ಈ ನೀರಿನ ಬಳಕೆಗೆ ಸಂಬಂಧಿಸಿದಂತೆ ಅಂತಿಮ ಐತೀರ್ಪಿನಲ್ಲಿ ಯಾವ ನಿರ್ಬಂಧವನ್ನು ಹೇರಲಾಗಿಲ್ಲ. ಆದರೆ ಈ ನೀರು ಬಳಸಿಕೊಳ್ಳುವ ಎಷ್ಟು ನೀರಾವರಿ ಯೋಜನೆಗಳ ನೀಲಿನಕ್ಷೆಗಳನ್ನು ನಮ್ಮ ಸರ್ಕಾರ ಸಿದ್ದ ಮಾಡಿಟ್ಟುಕೊಂಡಿದೆ?
ಕೊನೆಯದಾಗಿ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸಿದ ಕೂಡಲೇ `ಕಾವೇರಿ ನಿರ್ವಹಣಾ ಮಂಡಳಿ' ಅಸ್ತಿತ್ವಕ್ಕೆ ಬಂದು ನಮ್ಮ ಜಲಾಶಯಗಳ ಮೇಲಿನ ಅಧಿಕಾರವನ್ನು ರಾಜ್ಯ ಕಳೆದುಕೊಳ್ಳಲಿದೆ ಎಂಬ ಆತಂಕದಲ್ಲಿ ಏನಾದರೂ ಹುರುಳಿದೆಯೇ? ವಾಸ್ತವ ಸಂಗತಿ ಏನೆಂದರೆ ಅಧಿಸೂಚನೆ ಹೊರಡಿಸಲಿಕ್ಕಷ್ಟೇ ಸುಪ್ರೀಂಕೋರ್ಟ್ ಹೇಳಿದೆ, `ಮಂಡಳಿ' ರಚನೆಯಾಗಬೇಕಾದರೆ ಕೇಂದ್ರ ಸರ್ಕಾರ ಅಂತರರಾಜ್ಯ ಜಲ ವಿವಾದ ಕಾಯಿದೆಯ 6 (ಎ) ಪ್ರಕಾರ ಇನ್ನೊಂದು ಅಧಿಸೂಚನೆ ಹೊರಡಿಸಬೇಕಾಗುತ್ತದೆ.
ಅದಕ್ಕೆ ಸಂಸತ್ ಅಂಗೀಕಾರ ನೀಡಬೇಕಾಗಿರುವುದರಿಂದ ಅದೊಂದು ಪ್ರತ್ಯೇಕ ಕಸರತ್ತು. ಮಂಡಳಿ ಸ್ಥಾಪನೆಯಾದರೂ ಅದೇನು ಪ್ರಧಾನಿ ಅಧ್ಯಕ್ಷರಾಗಿರುವ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಇಲ್ಲವೆ ಕೇಂದ್ರ ಜಲಸಂಪನ್ಮೂಲ ಖಾತೆಯ ಕಾರ್ಯದರ್ಶಿ ಅಧ್ಯಕ್ಷರಾಗಿರುವ ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳು ಸದಸ್ಯರಾಗಿರುವ ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ)ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ಇರಲಾರದು.
ನ್ಯಾಯಮಂಡಳಿಯ ಶಿಫಾರಸಿನ ಪ್ರಕಾರ ಅಸ್ತಿತ್ವಕ್ಕೆ ಬರಲಿರುವ `ಕಾವೇರಿ ನಿರ್ವಹಣಾ ಮಂಡಳಿ' ಮತ್ತು `ಕಾವೇರಿ ನದಿ ನಿಯಂತ್ರಣಾ ಸಮಿತಿ'ಯಲ್ಲಿ ಯಾವ ಜನಪ್ರತಿನಿಧಿಗೂ ಪ್ರಾತಿನಿಧ್ಯ ಇಲ್ಲ. ನೀರಾವರಿ,ಕೃಷಿ, ಹವಾಮಾನ ತಜ್ಞರು ಮತ್ತು ಕೆಲವು ಅಧಿಕಾರಿಗಳನ್ನೊಳಗೊಂಡ ಈ `ಬಿಳಿ ಆನೆ'ಯ ರಚನೆಗೆ ಸಂಸತ್ ಅಂಗೀಕಾರ ನೀಡಬೇಕು. ತಮಗೆ ಪ್ರಾತಿನಿಧ್ಯ ಇಲ್ಲದ ಈ `ಮಂಡಳಿ', `ಸಮಿತಿ'ಗಳ ರಚನೆಗೆ ಕಾವೇರಿ ನದಿ ಕಣಿವೆಯ ರಾಜ್ಯಗಳ ಜನಪ್ರತಿನಿಧಿಗಳು ಅಷ್ಟೊಂದು ಸುಲಭದಲ್ಲಿ ಅವಕಾಶ ಮಾಡಿಕೊಡಲಿದ್ದಾರೆ ಎಂದು ಹೇಳುವ ಹಾಗಿಲ್ಲ.
ಆದುದರಿಂದ `ಇಂದು ಅಧಿಸೂಚನೆ ಜಾರಿಯಾಗಿ, ನಾಳೆಯೇ ಮಂಡಳಿ ರಚನೆಯಾಗಿ, ನಾಡಿದ್ದು ಜಲಾಶಯಗಳ ಮೇಲಿನ ಅಧಿಕಾರವನ್ನು ರಾಜ್ಯ ಕಳೆದುಕೊಳ್ಳಲಿದೆ' ಎಂಬ ಆತಂಕಕ್ಕೆ ಯಾವ ಆಧಾರಗಳೂ ಇಲ್ಲ. ಒಂದೊಮ್ಮೆ ಕಾವೇರಿ ನದಿನೀರು ನಿರ್ವಹಣೆಗೆ ಅಂತಹದ್ದೊಂದು ಸ್ವತಂತ್ರ ವ್ಯವಸ್ಥೆ ಅಸ್ತಿತ್ವಕ್ಕೆ ಬಂದರೂ ಹೆದರಬೇಕಾಗಿರುವುದು ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಬಹುಪಾಲು ಸತ್ಯವನ್ನೇ ಹೇಳುತ್ತಾ ಬಂದಿರುವ ಕರ್ನಾಟಕ ಅಲ್ಲ, ಬಹುಪಾಲು ಸುಳ್ಳುಗಳನ್ನೇ ಹೇಳುತ್ತಾ ಬಂದಿರುವ ತಮಿಳುನಾಡು. ಇತ್ತೀಚೆಗೆ ಸುಪ್ರೀಂಕೋರ್ಟಿನಲ್ಲಿಯೇ ತಮಿಳುನಾಡಿನ ಸುಳ್ಳು ಬಯಲಾಗಿದೆ. ಆದುದರಿಂದ ಅಧಿಸೂಚನೆಯ ಪ್ರಕಟಣೆ ಎಂದಾಕ್ಷಣ ಅದು ಬದುಕಿನ ಕೊನೆ ಎಂದು ಭೀತಿಪಡಬೇಕಾಗಿಲ್ಲ, ಅದರಾಚೆಗೂ ಬದುಕಿದೆ.

Sunday, February 10, 2013

ಅಫ್ಜಲ್ ಗುರು ಸತ್ತರೂ, ಸಾಯದಿರುವ ಪ್ರಶ್ನೆಗಳು

ಮ್ಮ ಸಂಸದರ ಅಮೂಲ್ಯ ಪ್ರಾಣ ಮತ್ತು ದೇಶದ ಮಾನವನ್ನು ಭಯೋತ್ಪಾದಕರ ದಾಳಿಯಿಂದ ರಕ್ಷಿಸಲು ಹೋಗಿ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡ ಸಂಸತ್ ಮೇಲಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿದೆ. ಕೊನೆಗೂ ಅಪರಾಧಿಯೊಬ್ಬನಿಗೆ ಶಿಕ್ಷೆಯಾಯಿತಲ್ಲ ಎಂದು ದೇಶದ ಸಾಮಾನ್ಯ ಜನತೆ ನಿಟ್ಟುಸಿರುಬಿಟ್ಟರೆ, ಒಂದಷ್ಟು ಅತ್ಯುಗ್ರ ದೇಶಾಭಿಮಾನಿಗಳು ಬೀದಿಗಿಳಿದು ಹಬ್ಬ ಆಚರಿಸುವ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
ಇದರೊಂದಿಗೆ `ಸಂಸತ್‌ಮೇಲೆ ದಾಳಿ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ, ನಿಜವಾದ ಅಪರಾಧಿಗಳೆಲ್ಲರಿಗೂ ಶಿಕ್ಷೆಯಾಗಿದೆ' ಎಂದು ಸಮಾಧಾನ ಪಟ್ಟುಕೊಳ್ಳಬಹುದೇ?
ಸಂಸತ್‌ಭವನದ ಮೇಲೆ ಭಯೋತ್ಪಾದಕರ ದಾಳಿ ನಡೆದ ಎರಡೇ ದಿನಗಳಲ್ಲಿ ಕಿಕ್ಕಿರಿದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ದೆಹಲಿ ಪೊಲೀಸರ ವಿಶೇಷ ದಳ ಈ ದುಷ್ಕೃತ್ಯಕ್ಕೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೋಯಬಾ ಮತ್ತು ಜೈಷ್-ಎ-ಮೊಹಮ್ಮದ್ ಎಂಬ ಎರಡು ಉಗ್ರಗಾಮಿ ಸಂಘಟನೆಗಳು ಕಾರಣ ಎಂದು ಘೋಷಿಸಿತ್ತು. ಆರೋಪಿಗಳನ್ನೆಲ್ಲ ಪತ್ತೆಹಚ್ಚಿದ್ದಾಗಿ ಹೇಳಿದ್ದ ಪೊಲೀಸರು ಹನ್ನೆರಡು ಆರೋಪಿಗಳ ಪಟ್ಟಿಯನ್ನೂ ನೀಡಿದ್ದರು.
ಎಲ್‌ಇಟಿಗೆ ಸೇರಿದ ಘಾಜಿ ಬಾಬಾ ಮತ್ತು ಮೌಲಾನ ಮಸೂದ್ ಅಜರ್, ತಾರೀಖ್ ಮಹಮ್ಮದ್, ಮೃತರಾದ ಐವರು ದಾಳಿಕೋರರು, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್.ಎ.ಆರ್.ಗಿಲಾನಿ, ಅಫ್ಜಲ್‌ಗುರು,  ಶೌಕತ್‌ಹುಸೇನ್ ಗುರು ಮತ್ತು ಪತ್ನಿ ಅಫ್ಸನ್‌ಗುರುವಿನ ಹೆಸರು ಆ ಪಟ್ಟಿಯಲ್ಲಿತ್ತು. ಈ ಹನ್ನೆರಡು ಆರೋಪಿಗಳಲ್ಲಿ ಆ ಕ್ಷಣದಲ್ಲಿ ಜೀವಂತವಾಗಿದ್ದವರು ಏಳು ಮಂದಿ ಮಾತ್ರ.
ಕೆಲವು ವರ್ಷಗಳ ನಂತರ ಘಾಜಿಬಾಬಾ ಕೂಡಾ ಎಲ್ಲೋ ಭದ್ರತಾಪಡೆಯ ಗುಂಡಿಗೆ ಬಲಿಯಾಗಿದ್ದ. ಮಸೂದ್ ಅಜರ್ ಪಾಕಿಸ್ತಾನದಲ್ಲಿ ನಿಶ್ಚಿಂತೆಯಾಗಿ ಸಾವಿನ ವ್ಯಾಪಾರವನ್ನು ನಡೆಸಿಕೊಂಡು ಹೋಗುತ್ತಿದ್ದಾನೆ. ಗಿಲಾನಿ ಮತ್ತು ಅಫ್ಸನ್‌ಗುರುವನ್ನು ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಶೌಕತ್‌ಗುರುವಿಗೆ ಹೈಕೋರ್ಟ್ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ಹತ್ತುವರ್ಷಗಳ ಜೈಲು ಶಿಕ್ಷೆಯಾಗಿ ಪರಿವರ್ತಿಸಿದ್ದರಿಂದ ಬಿಡುಗಡೆಗೊಂಡಿದ್ದಾನೆ. ಕೊನೆಗೂ ಗಲ್ಲಿಗೇರಿದ್ದು ಅಫ್ಜಲ್‌ಗುರು ಒಬ್ಬನೇ.
ಸಂಸತ್ ಮೇಲಿನ ದಾಳಿಯಲ್ಲಿ ಎಲ್‌ಎಟಿ ಇಲ್ಲವೇ ಜೆಎಎಂ ಪಾತ್ರ ಏನೆಂದು ಹೇಳಲು ಕಳೆದ ಹನ್ನೆರಡು ವರ್ಷಗಳಲ್ಲಿ ಪೊಲೀಸರಿಗೆ ಸಾಧ್ಯವಾಗಿಲ್ಲ. ಇಡೀ ಪ್ರಕರಣದಲ್ಲಿ ನಿಗೂಢ ರೀತಿಯಲ್ಲಿ (ಮಾಧ್ಯಮಗಳು ಸೇರಿದಂತೆ) ಎಲ್ಲರ ಕಣ್ಣುಗಳಿಂದಲೂ ತಪ್ಪಿಸಿಕೊಂಡಿರುವ ತಾರೀಖ್ ಮೊಹಮ್ಮದ್ ಎಂಬ ಆರೋಪಿಯನ್ನು ಬಂಧಿಸಲೂ ಅವರಿಂದ ಆಗಿಲ್ಲ.
ಭಾರತ ಮತ್ತು ಪಾಕಿಸ್ತಾನದ ನಡುವೆ ಅಣುಸಮರ ನಡೆದೇ ಬಿಟ್ಟಿತು ಎನ್ನುವಷ್ಟು ಗಂಭೀರರೂಪ ಪಡೆದಿದ್ದ ಘಟನೆ ಇದು. ಪಾಕಿಸ್ತಾನದ ಕೈವಾಡದ ಬಗ್ಗೆ `ವಿವಾದಾತೀತ ಪುರಾವೆ' ಇದೆ ಎಂದು ಸಂಸತ್‌ನಲ್ಲಿಯೇ ಘೋಷಿಸಿ, ಆ ದೇಶದ ಮೇಲೆ ಯುದ್ಧವನ್ನೆ ಸಾರುವಂತೆ ಸೇನೆಯನ್ನು ಗಡಿಯಲ್ಲಿ ಕೊಂಡೊಯ್ದು ನಿಲ್ಲಿಸಿದ್ದ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಂದ ಹಿಡಿದು ಈಗಿನ ಪ್ರಧಾನಿ ಮನಮೋಹನ್‌ಸಿಂಗ್ ವರೆಗೂ ಈವರೆಗೂ ದಾಳಿಯಲ್ಲಿ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಶಾಮೀಲಾಗಿರುವುದನ್ನು ಸಾಬೀತುಪಡಿಸಲು ಆಗಲಿಲ್ಲ.
ದಾಳಿ ನಡೆದ ನಂತರ ಅಫ್ಜಲ್‌ಗುರುವಿಗಿಂತ ಮೊದಲೇ ಬಂಧಿಸಿದ್ದ ಎಸ್.ಎ.ಆರ್.ಗಿಲಾನಿ ವಿರುದ್ಧದ ಆರೋಪವನ್ನು ಕೂಡಾ ಸಾಬೀತುಪಡಿಸಲು ಪೊಲೀಸರಿಂದ ಸಾಧ್ಯ ಆಗಿಲ್ಲ. ಉಳಿದವರೆಲ್ಲರೂ ಪೊಲೀಸರಿಂದ ತಪ್ಪಿಸಿಕೊಂಡರೂ ಅಫ್ಜಲ್‌ಗುರು ಮಾತ್ರ ಯಾಕೆ ಸಿಕ್ಕಿಹಾಕಿಕೊಂಡ?
ಸಾಮಾನ್ಯವಾಗಿ ಆರೋಪಿಯೊಬ್ಬ ತನಗೆ ವಕೀಲರ ಅವಶ್ಯಕತೆ ಇಲ್ಲ ಎಂದು ಹೇಳಿದರೂ ಕೂಡಾ ನ್ಯಾಯಾಲಯ ಆತನ ಪರ ವಾದಿಸಲು ವಕೀಲರನ್ನು ನೇಮಿಸುತ್ತದೆ. ಆದರೆ  ಅಫ್ಜಲ್‌ಗುರುವಿನ ಬಗ್ಗೆ ಮಾತ್ರ ನ್ಯಾಯಾಲಯ ಅಂತಹ ದಯೆಯನ್ನು ತೋರಲಿಲ್ಲ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ಎಸ್.ಎ.ಆರ್ ಗಿಲಾನಿ ಪರ ಹೈಕೋರ್ಟ್‌ನಲ್ಲಿ ರಾಮ್‌ಜೇಠ್ಮಲಾನಿಯಂತಹ ಖ್ಯಾತ ವಕೀಲರೇ ವಾದ ಮಂಡಿಸಿ ಅವರ ಬಿಡುಗಡೆಗೆ ಕಾರಣರಾಗಿದ್ದರು. ಆದರೆ ಆರೋಪಪಟ್ಟಿ ಸಲ್ಲಿಸಿದ ದಿನದಿಂದ 2005ರ ಮೇ 14ರವರೆಗೆ  ಸುಮಾರು ನಾಲ್ಕು ವರ್ಷ ಸಂಸತ್‌ದಾಳಿಯ ಸಂಚಿನ ಪ್ರಮುಖ ಪಾತ್ರಧಾರಿ ಎಂದು ಹೇಳಲಾಗಿದ್ದ ಅಫ್ಜಲ್‌ಗುರುವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಯಾವ ವಕೀಲರೂ ಇರಲಿಲ್ಲ.
ಕೊನೆಗೆ ನ್ಯಾಯಾಲಯ ವಕೀಲರೊಬ್ಬರನ್ನು ನೇಮಿಸಿದರೂ ಅವರು ಹಾಜರಾಗಲೇ ಇಲ್ಲ. ಅದರ ನಂತರ ಮತ್ತೊಬ್ಬರನ್ನು ನೇಮಿಸಲಾಯಿತು. ಅವರು ಅಫ್ಜಲ್ ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ವಿಚಾರಗಳನ್ನೆಲ್ಲ ನ್ಯಾಯಾಲಯದಲ್ಲಿ ಒಪ್ಪಿಕೊಂಡುಬಿಟ್ಟರು. ಕೊನೆಗೆ ಏನೋ ಕಾರಣ ನೀಡಿ ಅವರು ಅಫ್ಜಲ್ ವಕಾಲತ್ತಿನಿಂದ ಬಿಡುಗಡೆಗೊಳಿಸಬೇಕೆಂದು ಕೋರಿದರು.
ಈ ನಡುವೆ ಅಫ್ಜಲ್ ಸೂಚಿಸಿದ್ದ ನಾಲ್ವರು ವಕೀಲರು ಒಪ್ಪಿಕೊಳ್ಳಲಿಲ್ಲ. ಕೊನೆಗೆ ನೀರಜ್ ಬನ್ಸಾಲ್ ಎಂಬವರನ್ನು ನ್ಯಾಯಾಲಯ ಅಮಿಕಸ್ ಕ್ಯುರಿಯೇ (ನ್ಯಾಯಾಲಯದ ಮಿತ್ರ) ಆಗಿ ನೇಮಿಸಿತು. ಆದರೆ ಈ `ಮಿತ್ರ' ಅಫ್ಜಲ್‌ನಿಂದ ಯಾವ ಮಾಹಿತಿಯನ್ನು ಪಡೆಯುವ ಪ್ರಯತ್ನ ಮಾಡಲಿಲ್ಲ. ಆತನ ವಿರುದ್ಧ ಪ್ರಾಸಿಕ್ಯೂಶನ್ ಹಾಜರುಪಡಿಸಿದ್ದ ಸಾಕ್ಷಿಗಳನ್ನು ಪಾಟಿಸವಾಲು ನಡೆಸಲಿಲ್ಲ. ಈ ವಕೀಲರ ಮೇಲೆ ತನಗೆ ವಿಶ್ವಾಸ ಇಲ್ಲ ಎಂದು ಅಫ್ಜಲ್ ನ್ಯಾಯಾಲಯದಲ್ಲಿಯೇ ಹೇಳಿದ್ದ.
ಅಫ್ಜಲ್‌ಗುರುವಿಗೆ ಪ್ರಾರಂಭದಲ್ಲಿಯೇ ನುರಿತ ವಕೀಲರೊಬ್ಬರ ನೆರವು ಸಿಕ್ಕಿದ್ದರೆ ಇಡೀ ಪ್ರಕರಣ ಬೇರೆ ತಿರುವು ಪಡೆಯುತ್ತಿತ್ತೆ? ಘಟನೆಯ ಬಗ್ಗೆ ಆತ ನೀಡಿದ್ದ ಅನೇಕ ಪ್ರಮುಖ ಸುಳಿವುಗಳ ಜಾಡುಹಿಡಿದು ಪೊಲೀಸರು ಘಟನೆಯ ಆಳಕ್ಕೆ ಹೋಗಿದ್ದರೆ ಸಂಸತ್‌ಮೇಲಿನ ದಾಳಿಯ ಸಂಚಿನಲ್ಲಿ ಶಾಮೀಲಾಗಿದ್ದ ಇನ್ನಷ್ಟು ವ್ಯಕ್ತಿಗಳ ಪಾತ್ರ ಬಯಲಾಗುತ್ತಿತ್ತೇ? ಹೀಗೆ ಮಾಡದ ಪೊಲೀಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ಮಾಡಿ ಮುಗಿಸುವ ಅವಸರದಲ್ಲಿದ್ದರೇ? ಇಲ್ಲವೆ ಯಾರನ್ನೋ ರಕ್ಷಿಸುವ ಒತ್ತಡದಲ್ಲಿ ಅವರು ಸಿಕ್ಕಿ ಹಾಕಿಕೊಂಡಿದ್ದರೇ?  ಅಫ್ಜಲ್‌ಗುರು ತಿಹಾರ್ ಜೈಲಿನಲ್ಲಿ ಮಣ್ಣಾಗಿಹೋಗಿದ್ದರೂ ಇಂತಹ ಅನೇಕ ಪ್ರಶ್ನೆಗಳನ್ನು ಬಿಟ್ಟುಹೋಗಿದ್ದಾನೆ.
ಎಂಬತ್ತರ ದಶಕದ ಕೊನೆಭಾಗದಲ್ಲಿ ಕಾಶ್ಮೆರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದ ನೂರಾರು ಯುವರಕಲ್ಲಿ ಒಬ್ಬ ಅಫ್ಜಲ್‌ಗುರು. 1989ರಲ್ಲಿ ಉಗ್ರಗಾಮಿ ತರಬೇತಿ ಪಡೆಯಲು ಪಾಕಿಸ್ತಾನ ಆಕ್ರಮಿತ ಕಾಶ್ಮೆರಕ್ಕೆ ಹೋಗಿದ್ದ ಈತ ಬಹಳ ಬೇಗ ಭ್ರಮನಿರಸನಗೊಂಡು ವಾಪಸು ಬಂದಿದ್ದ. ಅದರ ನಂತರ ಸ್ವಇಚ್ಛೆಯಿಂದ ಗಡಿ ಭದ್ರತಾ ಪಡೆಯ ಮುಂದೆ ಶರಣಾಗತನಾಗಿದ್ದ. ಅಂದಿನಿಂದ ಸತತವಾಗಿ ಈತ ಕಾಶ್ಮೆರದ `ವಿಶೇಷ ಪೊಲೀಸ್ ದಳ'ದ (ಎಸ್‌ಟಿಎಫ್) ಕಣ್ಗಾವಲಿನಲ್ಲಿದ್ದ. ಆಗಾಗ ಎಸ್‌ಟಿಎಫ್ ಅಫ್ಜಲ್‌ನನ್ನು ತನ್ನಲ್ಲಿಗೆ ಕರೆಸಿಕೊಂಡು ಮಾಹಿತಿಗಾಗಿ ಪೀಡಿಸುತ್ತಿತ್ತು.
ಈ ರೀತಿ ಎಸ್‌ಟಿಎಫ್ ನಿಗಾ ಇಟ್ಟಿರುವ ವ್ಯಕ್ತಿಯೊಬ್ಬನನ್ನು ಯಾವುದೇ ಉಗ್ರಗಾಮಿ ಸಂಘಟನೆ ತನ್ನ ಪ್ರಮುಖ  ಕಾರ್ಯಾಚರಣೆಯಲ್ಲಿ ಯಾವ ಧೈರ್ಯದಿಂದ ಬಳಸಿಕೊಳ್ಳಲು ಸಾಧ್ಯ? ಅಂತಹ ಧೈರ್ಯವನ್ನು ಅದು ತೋರಿದರೂ ಈ ಬೆಳವಣಿಗೆಗಳು ಎಸ್‌ಟಿಎಫ್ ಗಮನಕ್ಕೆ ಯಾಕೆ ಬರಲಿಲ್ಲ?
ಅಫ್ಜಲ್‌ಗುರು ತನ್ನ ತಪ್ಪೊಪ್ಪಿಗೆಯಲ್ಲಿ ಕಾಶ್ಮೆರದ ಎಸ್‌ಟಿಎಫ್ ಪಾತ್ರವನ್ನು ವಿವರವಾಗಿ ದಾಖಲಿಸಿದ್ದ. ದಾಳಿಯ ವೇಳೆ ಭದ್ರತಾಪಡೆಯ ಗುಂಡಿಗೆ ಬಲಿಯಾಗಿದ್ದ ಮೊಹಮ್ಮದ್ ಎಂಬ ಭಯೋತ್ಪಾದಕನ ಜತೆಗಿನ ಸಂಬಂಧವನ್ನು ನಿರಾಕರಿಸಿರಲಿಲ್ಲ. ಅದರ ಜತೆಯಲ್ಲಿ ಮೊಹಮ್ಮದ್ ಹೇಗೆ ಪರಿಚಯವಾದ ಎನ್ನುವುದನ್ನು ಕೂಡಾ ಹೇಳಿದ್ದ. ಇಲ್ಲಿಯೇ ತಾರೀಖ್ ಮತ್ತು ಎಸ್‌ಟಿಎಫ್ ಡಿವೈಎಸ್‌ಪಿ ದ್ರಾವಿಂದರ್ ಸಿಂಗ್ ಎಂಬ ಇಬ್ಬರು  ನಿಗೂಢ ವ್ಯಕ್ತಿಗಳು ಕಾಣಿಸಿಕೊಳ್ಳುವುದು.
ತಾರೀಖ್‌ನನ್ನು ಆರೋಪಿಯೆಂದು ಪೊಲೀಸರು ಗುರುತಿಸಿದ್ದರೂ ಘಟನೆ ನಡೆದ ದಿನದಿಂದ ಇಲ್ಲಿಯ ವರೆಗೆ ಆತನ ಪತ್ತೆಯಾಗಿಲ್ಲ. ಮೊಹಮ್ಮದ್‌ನ ಹಿನ್ನೆಲೆ ಬಯಲಿಗೆ ಬಂದಿಲ್ಲ, ದ್ರಾವಿಂದರ್ ಸಿಂಗ್ ಬಗ್ಗೆ ಕನಿಷ್ಠ ವಿಚಾರಣೆ ಕೂಡಾ ನಡೆದಿಲ್ಲ.
`ತಾರೀಖ್‌ನ ಮೂಲಕ ನನಗೆ ಮೊಹಮ್ಮದ್ ಪರಿಚಯವಾಗಿತ್ತು.  ಎಸ್‌ಟಿಎಫ್‌ಗೆ ಕೆಲಸ ಮಾಡುತ್ತಿದ್ದನೆಂದು ಹೇಳುತ್ತಿದ್ದ ತಾರೀಖ್ ಜತೆಯಲ್ಲಿಯೇ ನಾನು ಡಿವೈಎಸ್‌ಪಿ ದ್ರಾವಿಂದರ್ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಮೊಹಮ್ಮದ್‌ನನ್ನು ದೆಹಲಿಗೆ ಕರೆದೊಯ್ಯುವಂತೆ ಅವರೇ ನನ್ನನ್ನು ಒತ್ತಾಯಿಸಿದ್ದು. ಎಸ್‌ಟಿಎಫ್ ಆದೇಶವನ್ನು ನಾನು ಮೀರುವುದು ಸಾಧ್ಯ ಇರಲಿಲ್ಲವಾದ ಕಾರಣ ಮೊಹಮ್ಮದನನ್ನು ಕರೆದುಕೊಂಡು ಬಂದೆ.
ದಾಳಿಯಲ್ಲಿ ಉಪಯೋಗಿಸಲಾಗಿದ್ದ ಅಂಬಾಸಿಡರ್ ಕಾರು ಖರೀದಿ ಮಾಡಲು ಕೂಡಾ ನಾನು ಸಹಾಯ ಮಾಡಿದ್ದೆ. ಆದರೆ ಆತ ಭಯೋತ್ಪಾದಕನೆಂದು ನನಗೆ ಗೊತ್ತಿರಲಿಲ್ಲ. ತಾರೀಖ್ ಮತ್ತು ದ್ರಾವಿಂದರ್ ಸಿಂಗ್ ನೀಡಿದ್ದ ಆದೇಶಗಳನ್ನಷ್ಟೇ ನಾನು ಪಾಲಿಸಿದ್ದೇನೆ. ನನ್ನ ಹೇಳಿಕೆಯನ್ನು ನಂಬುವುದಿಲ್ಲವಾದರೆ ದಯವಿಟ್ಟು ನನ್ನ ಮತ್ತು ಮೊಹಮ್ಮದ್‌ನ ಸೆಲ್‌ಪೋನ್‌ಗಳಿಗೆ ತಾರೀಖ್ ಮತ್ತು ದ್ರಾವಿಂದರ್‌ಸಿಂಗ್ ಮಾಡಿದ್ದ ಫೋನ್ ಕರೆಗಳ ವಿವರಗಳನ್ನಾದರೂ ಪರಿಶೀಲಿಸಿ' ಎಂದು ಅಫ್ಜಲ್‌ಗುರು ನ್ಯಾಯಾಲಯದ ಮುಂದೆ (ಪೊಲೀಸರ ಮುಂದೆ ಅಲ್ಲ) ನೀಡಿದ್ದ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದ. ಟಿವಿ ಚಾನೆಲ್‌ಗಳ ಮುಂದೆ ಹಾಜರಾಗಿದ್ದ ದ್ರಾವಿಂದರ್‌ಸಿಂಗ್ ತಾನು ಅಫ್ಜಲ್‌ನನ್ನು ಬಂಧಿಸಿದ್ದು ಮತ್ತು ಚಿತ್ರಹಿಂಸೆ ನೀಡಿದ್ದನ್ನು ಒಪ್ಪಿಕೊಂಡಿದ್ದರು.
ಅಫ್ಜಲ್‌ಗುರು ಹೇಳಿಕೆಯ ಸತ್ಯಾಸತ್ಯತೆಗಳೇನೇ ಇದ್ದರೂ ಪೊಲೀಸರು ತಾರೀಖ್ ಮತ್ತು ಪೊಲೀಸ್ ಅಧಿಕಾರಿ ದ್ರಾವಿಂದರ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಬಹುದಿತ್ತು. ಇಷ್ಟು ಮಾತ್ರ ಅಲ್ಲ ದಾಳಿಯ ಸಂಚಿನಲ್ಲಿ ಅಫ್ಜಲ್‌ನನ್ನು ಜೋಡಿಸಿದ್ದ ಮೊಹಮ್ಮದ್ ಎಂಬ ಭಯೋತ್ಪಾದಕನ ಬಗ್ಗೆಯೂ ಪೊಲೀಸರು ಯಾಕೋ ಆಳಕ್ಕೆ ಇಳಿದು ತನಿಖೆ ನಡೆಸಿಲ್ಲ. ದಾಳಿ ನಡೆದ ನಂತರ ಈ ಭಯೋತ್ಪಾದಕನ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ಮಹಾರಾಷ್ಟ್ರದ ಥಾಣೆಯ ಪೊಲೀಸ್ ಕಮಿಷನರ್ ಎಸ್.ಎಂ.ಶಾಂಗಾರಿ ಅವರು `ಮೃತ ಭಯೋತ್ಪಾದಕ ಮೊಹಮ್ಮದ್ ಅಲಿಯಾಸ್ ಅಬು ಹಮ್ಜಾ  ಎಂಬಾತ ಲಷ್ಕರ್-ಎ-ತೊಯ್ಬಾಗೆ ಸೇರಿರುವ ಉಗ್ರನಾಗಿದ್ದು ಆತನನ್ನು 2000ನೇ ವರ್ಷದಲ್ಲಿ  ಬಂಧಿಸಿ ಜಮ್ಮು ಮತ್ತು ಕಾಶ್ಮೆರದ ಪೊಲೀಸರ ವಶಕ್ಕೆ ಒಪ್ಪಿಸಿದ್ದಾಗಿ ಹೇಳಿದ್ದರು.
ಇದು ನಿಜವೇ ಆಗಿದ್ದರೆ ಪೊಲೀಸರ ವಶದಲ್ಲಿದ್ದ ಈತ ಹೇಗೆ ದಾಳಿಯಲ್ಲಿ ಭಾಗಿಯಾಗಿದ್ದ? ದಾಳಿಯಲ್ಲಿ ಭಾಗಿಯಾಗದೆ ಇದ್ದಿದ್ದರೆ ಬಂಧಿತ ಮೊಹಮ್ಮದ್ ಈಗ ಎಲ್ಲಿದ್ದಾನೆ?' ಈ ಪ್ರಶ್ನೆಗೂ ಪೊಲೀಸರ ತನಿಖೆಯಲ್ಲಿ ಉತ್ತರ ಸಿಗುವುದಿಲ್ಲ.
ಸಂಸತ್‌ನ ಮೇಲೆ ದಾಳಿ ನಡೆಸುವ ಭಯೋತ್ಪಾದಕರ ಕೃತ್ಯದ ಬಗ್ಗೆ ಗೊತ್ತಿದ್ದರೂ ಮೌನವಾಗಿರುವ ಅಪರಾಧವನ್ನು ಅಫ್ಜಲ್‌ಗುರು ಮಾಡಿರಬಹುದು. ಇದು ಗಲ್ಲು ಶಿಕ್ಷೆಗೆ ಅರ್ಹವಾದ `ದೇಶದ ವಿರುದ್ಧ ಯುದ್ಧ ಸಾರಿರುವ ವಿದ್ರೋಹ'ವಾಗಿರಬಹುದು. ಆದರೆ ಇಂತಹ ಮಹಾ ಅಪರಾಧದ ತನಿಖೆ ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಲು ಸಾಧ್ಯ ಇರುವಷ್ಟು ದುರ್ಬಲವಾಗಿರಬಾರದಿತ್ತು. ಇಲ್ಲಿಯವರೆಗೆ ಗಲ್ಲಿಗೇರಿಸಲಾದ ಯಾವ ಅಪರಾಧಿಯ ಬಗ್ಗೆ ನಡೆದ ತನಿಖೆ ಕೂಡಾ ಇಷ್ಟೊಂದು ವಿವಾದವನ್ನು ಹುಟ್ಟುಹಾಕಿರಲಿಲ್ಲ.
ವಿಚಿತ್ರವೆಂದರೆ ಸುಪ್ರೀಂಕೋರ್ಟ್ ಕೂಡಾ ತನ್ನ ತೀರ್ಪಿನಲ್ಲಿ `ಅಫ್ಜಲ್‌ಗುರು ಸಂಸತ್‌ಭವನದ ಮೇಲಿನ ದಾಳಿಯ ಸಂಚನ್ನು ರೂಪಿಸಿಲ್ಲ ಮತ್ತು ಅದರ ಅನುಷ್ಠಾನದಲ್ಲಿ ಪಾಲ್ಗೊಂಡಿಲ್ಲ' ಎನ್ನುವುದನ್ನು ಒಪ್ಪಿಕೊಂಡಿದೆ. ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿಯೇ ಅದು ಅಫ್ಜಲ್‌ಗುರು ಅಪರಾಧಿ ಎಂದು ಹೇಳಿದೆ. `ಈ ಸಂಚಿಗೆ ಸಂಬಂಧಿಸಿದ ಸ್ಪಷ್ಟ ಮತ್ತು ನೇರ ಸಾಕ್ಷ್ಯಗಳಿಲ್ಲ.
ಹೀಗಿದ್ದರೂ ಸಂದರ್ಭ ಮತ್ತು ಪರಿಸ್ಥಿತಿ ಉಗ್ರಗಾಮಿಗಳೊಂದಿಗೆ ಆರೋಪಿ ಅಫ್ಜಲ್‌ನ ಸಹಭಾಗಿತ್ವ ಇತ್ತು ಎನ್ನುವುದನ್ನು ನಿಸ್ಸಂದೇಹವಾಗಿ ಸೂಚಿಸುತ್ತದೆ' ಎನ್ನುವ ಸುಪ್ರೀಂಕೋರ್ಟ್ ತೀರ್ಪು ಈಗಾಗಲೇ ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ, ಬದಲಿಗೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

Sunday, February 3, 2013

ಆಶಿಶ್ ನಂದಿ ಮಾತುಗಳಲ್ಲಿನ ಸತ್ಯವನ್ನು ಹುಡುಕುತ್ತಾ..

ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಮಾಜಿಕ ಚಿಂತಕ ಆಶಿಶ್ ನಂದಿ ಆಡಿದ್ದ ಮಾತುಗಳು ವಿವಾದಕ್ಕೀಡಾಗಿ ಭಿನ್ನ ರೂಪ, ಬಣ್ಣ, ವಾಸನೆಗಳನ್ನು ಪಡೆಯತೊಡಗಿವೆ. `ಅವರ ಮಾತುಗಳಲ್ಲಿನ ಆಯ್ದಭಾಗಗಳನ್ನಷ್ಟೆ ಹೆಕ್ಕಿ ತೆಗೆದು ಮುದ್ರಿಸಿದ ಮತ್ತು ಪ್ರಸಾರ ಮಾಡಿದ ಮಾಧ್ಯಮಗಳು ಕೂಡಾ ವಿವಾದಕ್ಕೆ ಕಾರಣ' ಎಂಬ ಆರೋಪ ಕೂಡಾ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಆ ದಿನ ನಡೆದ `ಆಲೋಚನೆಗಳ ಪ್ರಜಾಪ್ರಭುತ್ವ' ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ಆಶಿಶ್ ನಂದಿ ಮತ್ತು ಅವರ ಪ್ರತಿಕ್ರಿಯೆಗೆ ಸ್ಪೂರ್ತಿ ನೀಡಿತ್ತೆಂದು ಹೇಳಲಾದ ಪತ್ರಕರ್ತ ತರುಣ್ ತೇಜಪಾಲ್ ಅವರಾಡಿದ್ದ ಮಾತುಗಳೇನೆಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇದಕ್ಕಾಗಿ ಚರ್ಚೆಯ ಕೊನೆಯಲ್ಲಿ ಇಬ್ಬರೂ ಆಡಿದ್ದ ಮಾತುಗಳ ಪೂರ್ಣ ಪಾಠ ಇಲ್ಲಿ ನೀಡಲಾಗಿದೆ:
ತರುಣ್ ತೇಜ್‌ಪಾಲ್: `..... ಭಾರತದಂತಹ ದೇಶದಲ್ಲಿ ಭ್ರಷ್ಟಾಚಾರ ಎನ್ನುವುದು ವರ್ಗ ಸಮಾನತೆಯ ಒಂದು ಸಾಧನ. ನನ್ನ ಮನೆಯ ಚಾಲಕ ಇಲ್ಲವೆ ಅಡಿಗೆಯವ ನಾನು ಪ್ರತಿನಿಧಿಸುವ ವರ್ಗದ ಮಕ್ಕಳ ಜತೆಯಲ್ಲಿಯೇ ಶಾಲೆಗೆ ಹೋಗಿ ಕಲಿಯುವಂತಹ ರೀತಿಯಲ್ಲಿ ನಾವು ದೇಶವನ್ನು ಕಟ್ಟಿಲ್ಲ. `ಎಲೀಟ್' ಮತ್ತು `ಪ್ರಿವಿಲೆಜ್ಡ್' ವರ್ಗಕ್ಕೆ ಸೇರಿದ್ದ ನಮ್ಮಂತಹವರು ತಮಗೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ರೂಪಿಸಿಕೊಂಡಿದ್ದೇವೆ. ಆದರೆ ಇನ್ನೊಂದು ಬದಿಯಲ್ಲಿರುವ ನೂರು ಕೋಟಿ ಜನವರ್ಗಕ್ಕೆ ಈ ನಿಯಮಗಳ ಮೂಲಕ ಭ್ರಷ್ಟ ವ್ಯವಸ್ಥೆಯಲ್ಲಿನ ಪಾಲನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಅವರು ಆ ನಿಯಮಗಳನ್ನೇ ಮುರಿಯತೊಡಗಿದ್ದಾರೆ.'
ಆಶಿಶ್ ನಂದಿ :` ಈ ಕತೆಯ ಬಹುಮುಖ್ಯ ಭಾಗವನ್ನು ಅವರು (ತೇಜ್‌ಪಾಲ್) ಹೇಳಲಿಲ್ಲ. ಅದನ್ನು ಕೇಳಿದರೆ ಆಘಾತವಾದೀತು. ಅದು ಘನತೆಗೆ ತಕ್ಕುದ್ದಲ್ಲ ಎಂದೂ ಅನಿಸಬಹುದು. ನನ್ನ ಮಟ್ಟಿಗೆ ಇದೊಂದು ಅಶ್ಲೀಲ ಹೇಳಿಕೆ. ಆದರೆ ಅತಿ ಹೆಚ್ಚಿನ ಸಂಖ್ಯೆಯ ಭ್ರಷ್ಟರು ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಎಲ್ಲಿಯವರೆಗೆ ಈ ಪರಿಸ್ಥಿತಿ ಮುಂದುವರಿಯುತ್ತದೋ ಅಲ್ಲಿಯವರೆಗೆ ಭಾರತದ ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ. ನಾನೊಂದು ಉದಾಹರಣೆ ಕೊಡುತ್ತೇನೆ. ಸಿಪಿಎಂ ಅಧಿಕಾರದಲ್ಲಿರುವವರೆಗೆ ಭಾರತದ ಅತ್ಯಂತ ಕಡಿಮೆ ಭ್ರಷ್ಟತೆಯ ರಾಜ್ಯ ಪಶ್ಚಿಮ ಬಂಗಾಳವಾಗಿತ್ತು. ಕಳೆದ 100 ವರ್ಷಗಳಲ್ಲಿ ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಯಾರೂ ಅಧಿಕಾರಕ್ಕೆ ಬಂದಿಲ್ಲ ಎಂಬುದನ್ನೂ ನಾನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಆದುದರಿಂದಲೇ ಅದೊಂದು ಸ್ವಚ್ಛ ರಾಜ್ಯ'
ತರುಣ್ ತೇಜಪಾಲ್ ಮಂಡಿಸಿದ್ದು ವರ್ಗ ಸಂಘರ್ಷದ ಒಂದು ಚರ್ವಿತಚರ್ವಣ ಥಿಯರಿ.  ಅವರು ಮಾತನಾಡಿದ್ದು `ವರ್ಗ'ಗಳ ಬಗ್ಗೆ. ಅವರೆಲ್ಲಿಯೂ `ಜಾತಿ'ಯ ಪ್ರಸ್ತಾವ ಮಾಡಿರಲಿಲ್ಲ.. ಈಗಿನ ಭ್ರಷ್ಟಾಚಾರ ಕೂಡಾ `ವರ್ಗ ಸಮಾನತೆಯ ಸಾಧನ' ಆಗುತ್ತಿದೆ ಎಂದು ಅವರು ಹೇಳಿದ್ದರೇ ಹೊರತು `ಜಾತಿ ಸಮಾನತೆ'ಯ ಸಾಧನವಾಗುತ್ತಿದೆ ಎಂದು ಹೇಳಿಲ್ಲ. ಭಯೋತ್ಪಾದನೆಯಂತೆ ಭ್ರಷ್ಟಾಚಾರಕ್ಕೂ ಜಾತಿ-ಧರ್ಮಗಳಿಲ್ಲ, ಅದೊಂದು ಪ್ರತ್ಯೇಕ ವರ್ಗ ಎನ್ನುವ ಜನಪ್ರಿಯ ಅಭಿಪ್ರಾಯವನ್ನೇ ಅವರ ಮಾತುಗಳು ಧ್ವನಿಸುತ್ತವೆ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ಆಶಿಶ್‌ನಂದಿ ನೇರವಾಗಿ ಕೈಹಾಕಿದ್ದು ಜಾತಿಮೂಲಕ್ಕೆ. ಅವರು ಭ್ರಷ್ಟಾಚಾರದ ಜತೆ ನಿರ್ದಿಷ್ಟವಾಗಿ ಕೆಲವು ಜಾತಿಗಳನ್ನು ಜೋಡಿಸಿದ್ದರು. ತರುಣ್ ಹೇಳಿದ್ದನ್ನು ಸರಿಯಾಗಿ ಗ್ರಹಿಸಲು ನಂದಿ ಸೋತರೇ ಇಲ್ಲವೇ, ಹೇಳಲೇಬೇಕೆಂದು ಮೊದಲೇ ಸಿದ್ದತೆ ಮಾಡಿಕೊಂಡಿದ್ದ ಅಭಿಪ್ರಾಯವನ್ನು ಮಂಡಿಸಲು ಅವರು ತರುಣ್ ಮಾತುಗಳನ್ನು ಬಳಸಿಕೊಂಡರೇ? ಈ ಪ್ರಶ್ನೆಗಳಿಗೆ ಉತ್ತರ ಏನೇ ಇರಲಿ, ಆಶಿಶ್‌ನಂದಿ ಎಡವಿರುವುದು ಸತ್ಯ. ಒಮ್ಮೆ ಮಾತ್ರ ಎಡವಿದ್ದಲ್ಲ ಅದರ ನಂತರ ನಡೆದ ವಾಗ್ವಾದಗಳಲ್ಲಿ ತನ್ನ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಾ, ನಿರಾಕರಿಸುತ್ತಾ, ಸ್ಪಷ್ಟೀಕರಿಸುತ್ತಾ ಮತ್ತೆ ಮತ್ತೆ ಎಡವುತ್ತಿದ್ದಾರೆ.
ತಮ್ಮ ಬರವಣಿಗೆಯಲ್ಲಿನ ಅಪರೂಪದ ಒಳನೋಟಗಳ ಮೂಲಕ ನಮ್ಮಂತಹ ಲಕ್ಷಾಂತರ ಕಿರಿಯ `ಏಕಲವ್ಯ'ರು ವೈಚಾರಿಕ ಸ್ಪಷ್ಟತೆಯನ್ನು ರೂಪಿಸಿಕೊಳ್ಳಲು ನೆರವಾದ `ಗುರು' ಆಶಿಶ್‌ದಾ. (ಕನ್ನಡದ ಬಹುಮುಖ್ಯ ಪ್ರತಿಭೆಯಾಗಿದ್ದ ಡಾ.ಡಿ.ಆರ್.ನಾಗರಾಜ್ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದವರು ಆಶಿಶ್ ನಂದಿ ಎನ್ನುವುದು ಅವರ ಬಗೆಗಿನ ಪ್ರೀತಿ-ಅಭಿಮಾನವನ್ನು ಇಮ್ಮಡಿಗೊಳಿಸುತ್ತದೆ.). ಇಂತಹ ಹಿರಿಯ ಜೀವ ಈ ಇಳಿವಯಸ್ಸಿನಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲು ನಡೆಸುತ್ತಿರುವ ಪರದಾಟವನ್ನು ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಅವರು ಜೈಲು ಶಿಕ್ಷೆ ಅನುಭವಿಸುವಂತಹ ಘೋರ ಅಪರಾಧವನ್ನೇನು ಮಾಡಿಲ್ಲ. ಈಗ ಆಶಿಶ್‌ನಂದಿ ಅವರ ತಲೆಕಡಿಯಲು ಕತ್ತಿಹಿರಿದು ನಿಂತಿರುವ ಜನವರ್ಗದ ಪರವಾಗಿಯೇ ಕಳೆದ 40 ವರ್ಷಗಳಲ್ಲಿ  ಅವರು ಬರೆದದ್ದು ಮತ್ತು ಮಾತನಾಡಿದ್ದು ಎಂಬುದನ್ನು ಅವರನ್ನು ಶಿಕ್ಷಿಸಲು ಹೊರಟಿರುವ ನಾಯಕರು ತಿಳಿದುಕೊಳ್ಳದೆ ಇರುವುದು ನೋವು ಮತ್ತು ವಿಷಾದದ ಸಂಗತಿ.
ಈಗ ನಡೆಯಬೇಕಾಗಿರುವುದು ಆಶಿಶ್‌ನಂದಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ಮುಕ್ತವಾದ ಚರ್ಚೆ ಮಾತ್ರ. `ಗುರುಭಕ್ತಿ'ಯ ಕಾರಣಕ್ಕಾಗಿ ಅವರಾಡಿದ ಮಾತುಗಳನ್ನು ಬಾಯಿಮುಚ್ಚಿಕೊಂಡು ಒಪ್ಪಿಕೊಳ್ಳುವುದು ಕೂಡಾ ಸರಿಯಾಗಲಾರದು.
ಭಿನ್ನಾಭಿಪ್ರಾಯಗಳನ್ನು ಮಾನ್ಯಮಾಡುತ್ತಲೇ ತನ್ನ ಸಿದ್ದಾಂತವನ್ನು ಕಟ್ಟಿಕೊಳ್ಳುತ್ತಾ ಬಂದ ಆಶಿಶ್‌ನಂದಿಯವರೂ ಈ ರೀತಿಯ `ರಿಯಾಯಿತಿ'ಯನ್ನು ಒಪ್ಪಲಾರರು ಕೂಡಾ. ಈ ಹಿನ್ನೆಲೆಯಲ್ಲಿ ಅವರನ್ನು ಕೇಳಬೇಕಾಗಿರುವ ಮೊದಲ ಪ್ರಶ್ನೆ- `ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳಲ್ಲೇ ಹೆಚ್ಚು ಭ್ರಷ್ಟರಿದ್ದಾರೆ' ಎಂದು ಹೇಳುವುದು `ಘನತೆಗೆ ತಕ್ಕುದ್ದಲ್ಲ' ಮತ್ತು ' ಎಂದು ನಿಮ್ಮ ಆತ್ಮಸಾಕ್ಷಿಗೆ ಅನಿಸಿದ ಮೇಲೆ ಆ ಮಾತನ್ನು ಯಾಕೆ ಹೇಳಿದಿರಿ? ಎರಡನೆಯ ಪ್ರಶ್ನೆ -  ಅಂತಹ ಗಂಭೀರ ಆರೋಪವನ್ನು ಮಾಡುವಾಗ ಅದನ್ನು ಸಾಬೀತುಪಡಿಸುವಂತಹ ಪುರಾವೆಗಳನ್ನು ಯಾಕೆ ಒದಗಿಸಲಿಲ್ಲ? ಮೂರನೆಯ ಪ್ರಶ್ನೆ- ಕೆಳವರ್ಗದ ಭ್ರಷ್ಟಾಚಾರದಿಂದ ಸಮಾನತೆ ಸಾಧ್ಯ ಮತ್ತು ಇದರಿಂದ ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ ಎಂದು ಹೇಳಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?
ಆಶಿಶ್‌ನಂದಿ ಅವರು `ಅಪರಾಧಿ' ಸ್ಥಾನದಲ್ಲಿ ನಿಲ್ಲಿಸಿರುವ ವರ್ಗ ದೇಶದ ಜನಸಂಖ್ಯೆಯ ಶೇಕಡಾ 75ರಷ್ಟಾಗುವುದರಿಂದ ಸಹಜವಾಗಿಯೇ ಭ್ರಷ್ಟರ ಪ್ರಮಾಣವೂ ಆ ವರ್ಗದಲ್ಲಿ ಹೆಚ್ಚು ಎಂಬ ಕುತರ್ಕವನ್ನು ಮಂಡಿಸಲು ಸಾಧ್ಯ. ಆದರೆ ಭ್ರಷ್ಟಾಚಾರವನ್ನು ಅಳೆಯುವವರು ಗಮನಕ್ಕೆ ತೆಗೆದುಕೊಳ್ಳಬೇಕಾಗಿರುವುದು ಭ್ರಷ್ಟರ ಸಂಖ್ಯೆಯನ್ನಲ್ಲ, ಭ್ರಷ್ಟತೆಯ ಪ್ರಮಾಣವನ್ನು. ಕಳೆದ 65 ವರ್ಷಗಳ ದೇಶದ ರಾಜಕೀಯ ಕ್ಷೇತ್ರದಲ್ಲಿ ತೀರ್ಮಾನ ಕೈಗೊಳ್ಳುವಂತಹ ಸ್ಥಾನಗಳಲ್ಲಿ, ಅಂದರೆ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವ ಪದವಿಗಳನ್ನು ಪಡೆದಿರುವ ಒಬಿಸಿ, ಎಸ್‌ಸಿ-ಎಸ್‌ಟಿಗಳ ಸಂಖ್ಯೆ ಎಷ್ಟು? ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯ, ಗ್ರಾಮಪಂಚಾಯತ್ ಸದಸ್ಯ ಮೊದಲಾದ ಸ್ಥಾನಗಳಲ್ಲಿ ಈ ವರ್ಗದ ಸಂಖ್ಯೆ ಹೆಚ್ಚಿರಬಹುದು (ರಾಜಕೀಯ ಮೀಸಲಾತಿಯ ಕಾರಣದಿಂದ), ಇವರಲ್ಲಿ ಭ್ರಷ್ಟರೂ ಇರಬಹುದು. ಆದರೆ ಒಬ್ಬ ಪ್ರಧಾನಿ,ಮುಖ್ಯಮಂತ್ರಿ ಇಲ್ಲವೇ ಸಚಿವರ ಭ್ರಷ್ಟಾಚಾರಕ್ಕೆ ಇಂತಹ ಕೆಳಹಂತದ ನೂರಾರು ಜನಪ್ರತಿನಿಧಿಗಳು ಮಾಡುವ ಭ್ರಷ್ಟಾಚಾರ ಸಮನಾಗಬಹುದೇ?
ಅದೇ ರೀತಿ ಆಡಳಿತ ಕ್ಷೇತ್ರದಲ್ಲಿ ಜವಾನ-ಕಾರಕೂನ ಹುದ್ದೆಗಳಲ್ಲಿ ಈ ವರ್ಗದ ಸಂಖ್ಯೆ ಹೆಚ್ಚಿರಬಹುದು. ಅವರಲ್ಲಿ ಒಂದಷ್ಟು ಮಂದಿ ಭ್ರಷ್ಟರೂ ಆಗಿರಬಹುದು. ಆದರೆ  ಪ್ರಮುಖ ತೀರ್ಮಾನ ಕೈಗೊಳ್ಳುವಂತಹ ಆಡಳಿತದ ಉನ್ನತ ಸ್ಥಾನಗಳಲ್ಲಿ ಈ ವರ್ಗದ ಪ್ರಾತಿನಿಧ್ಯ ಎಷ್ಟು? ಒಂದು ಸರ್ಕಾರಿ ಇಲಾಖೆಯ ಮುಖ್ಯಸ್ಥರಾಗಿರುವ ಅಧಿಕಾರಿ ಭ್ರಷ್ಟಾಚಾರದಿಂದ ಗಳಿಸುವ ಹಣಕ್ಕೆ, ಆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಜವಾನ-ಕಾರಕೂನರು ಲಂಚದ ರೂಪದಲ್ಲಿ ಪಡೆಯುತ್ತಿರುವ ಪುಡಿಗಾಸು ಸಮನಾಗಬಹುದೇ? ಇವೆಲ್ಲಕ್ಕಿಂತಲೂ ಮುಖ್ಯವಾಗಿ  ಮೇಲ್ಮಟ್ಟದಲ್ಲಿರುವವರು ಭ್ರಷ್ಟರಾದಾಗಲೇ ಭ್ರಷ್ಟಾಚಾರ ನಿಯಂತ್ರಣ ಮೀರಿ ಬೆಳೆಯುತ್ತಾ ಹೋಗುತ್ತದೆ ಎನ್ನುವ ಸರಳ ಸತ್ಯ ಆಶಿಶ್ ನಂದಿ ಅವರಿಗೆ ಯಾಕೆ ಹೊಳೆಯದೆ ಹೋಯಿತು ಎನ್ನುವುದು ಅಚ್ಚರಿ ಉಂಟುಮಾಡುತ್ತಿದೆ.
ಅವರ ಹೇಳಿಕೆಯ ಮೂರನೆಯ ಭಾಗ ಅರ್ಥಹೀನ ಮಾತ್ರ ಅಲ್ಲ ಅಪಾಯಕಾರಿ ಕೂಡಾ. ಶಿಕ್ಷಣ ಮತ್ತು ಉದ್ಯೋಗ ಸಮಾನತೆಯ ಪ್ರಮುಖ ಸಾಧನಗಳು ಎಂಬ ಅಭಿಪ್ರಾಯವನ್ನು ಬಹುತೇಕ ಸಮಾಜಶಾಸ್ತ್ರಜ್ಞರು ಒಪ್ಪಿಕೊಳ್ಳುತ್ತಾ ಬಂದಿದ್ದಾರೆ. ಇದಕ್ಕಾಗಿಯೇ ಅಲ್ಲವೇ, ಈ ಎರಡು ಕ್ಷೇತ್ರಗಳಲ್ಲಿ ಮೀಸಲಾತಿ ಜಾರಿಗೆ ತಂದಿರುವುದು. ಈ ಸಾಮಾನ್ಯ ಅಭಿಪ್ರಾಯವನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಆಶಿಶ್‌ನಂದಿ ಅವರು `ಭ್ರಷ್ಟಚಾರ' ಎಂಬ ಹೊಸ ಸಾಧನವನ್ನು ಮುಂದಿಟ್ಟಿದ್ದಾರೆ. ಅಲ್ಲಿಗೆ ನಿಲ್ಲದೆ `ಭ್ರಷ್ಟಾಚಾರದ ಮೂಲಕ ಸಾಮಾಜಿಕ ಸಮಾನತೆ ಆಗ್ತಾ ಇರುವವರೆಗೆ ಪ್ರಜಾಪ್ರಭುತ್ವ ಸುರಕ್ಷಿತ' ಎಂಬ ತೀರ್ಮಾನವನ್ನು ಕೊಟ್ಟುಬಿಟ್ಟಿದ್ದಾರೆ. ಒಂದಷ್ಟು ಒಬಿಸಿ - ಎಸ್‌ಸಿ -ಎಸ್‌ಟಿಗಳು  ಭ್ರಷ್ಟಾಚಾರದಿಂದ ದುಡ್ಡು ಸಂಪಾದನೆ ಮಾಡುವುದರಿಂದ ಸಮಾನತೆ ಬರುತ್ತದೆ, ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಅವರಲ್ಲಿ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ಆದರೆ ಎಲ್ಲರಿಗೂ ಗೊತ್ತಿರುವ ಸತ್ಯ ಏನೆಂದರೆ ಭ್ರಷ್ಟರು ಕೇವಲ ಭ್ರಷ್ಟರಾಗಿರುವುದಿಲ್ಲ ಅವರು ಕಡು ಸ್ವಾರ್ಥಿಗಳಾಗಿರುತ್ತಾರೆ. ಮಾಯಾವತಿ-ಲಾಲು-ಮುಲಾಯಂ-ಕೋಡಾ ಅವರು ಭ್ರಷ್ಟಾಚಾರದ ಮೂಲಕ ಗಳಿಸಿದ್ದನ್ನು ಸಮಾನತೆಯನ್ನು ಸಾಧಿಸುವ  ಸದುದ್ದೇಶದಿಂದ ತಮ್ಮ ಜಾತಿ ಜನರಿಗೆ ಹಂಚಿಬಿಡುವಷ್ಟು ಮೂರ್ಖರಲ್ಲ. ಇಲ್ಲವೆ ಇವರ‌್ಯಾರೂ ತಾವು ಪ್ರತಿನಿಧಿಸುವ ಜಾತಿಗಳ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅವರ ಜೀವನಮಟ್ಟದಲ್ಲಿ ಸುಧಾರಣೆ ಮಾಡಿದವರೂ ಅಲ್ಲ. ಅಧಿಕಾರ ಗಳಿಕೆಗಾಗಿ ಜಾತಿ ಹೆಸರಲ್ಲಿ ವೋಟ್‌ಬ್ಯಾಂಕ್ ಸೃಷ್ಟಿಸಿದವರು ಅಷ್ಟೇ.  ಉತ್ತರಪ್ರದೇಶ-ಬಿಹಾರಗಳಿಗೆ ಹೋಗಿ ಅಲ್ಲಿನ ಸಾಮಾನ್ಯ ಒಬಿಸಿ,ಎಸ್‌ಸಿ,ಎಸ್‌ಟಿಗಳ ಸ್ಥಿತಿಗತಿಯನ್ನು ಯಾರಾದರೂ ಕಣ್ಣಾರೆ ನೋಡಿದರೆ ಆಶಿಶ್‌ನಂದಿ ಥಿಯರಿಯಲ್ಲಿ ಎಷ್ಟೊಂದು ತೂತುಗಳಿವೆ ಎನ್ನುವುದು ಅರಿವಾಗಬಹುದು. ಹದಿನಾರು ವರ್ಷಗಳ ಕಾಲ `ಹಮಾರಾ ಲಲುವಾ' ಎಂದು ಎದೆಗಪ್ಪಿಕೊಂಡ ಬಿಹಾರದ ಒಬಿಸಿಗಳು ಯಾಕೆ ಲಾಲುಪ್ರಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು? ಕಳೆದ ಚುನಾವಣೆಯಲ್ಲಿ ಮಾಯಾವತಿ ಅವರ ಸೋಲಿಗೆ ಏನು ಕಾರಣ? ಇವೆಲ್ಲವೂ ಗೊತ್ತಿದ್ದ ಆಶಿಶ್‌ನಂದಿ ಅವರು ಇಂತಹ ಬೀಸು ಹೇಳಿಕೆ ನೀಡಲು ಹೇಗೆ ಸಾಧ್ಯ?
ಹೆಚ್ಚು ಚರ್ಚೆಗೊಳಗಾಗದ ಅವರ ಹೇಳಿಕೆಯ ಕೊನೆಯ ಭಾಗ ಆಶಿಶ್ ನಂದಿ ಅವರ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಿದೆ. `ಕಳೆದ ನೂರುವರ್ಷಗಳಲ್ಲಿ ಪಶ್ಚಿಮಬಂಗಾಳದಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿಗಳು ಅಧಿಕಾರಕ್ಕೆ ಬರದೆ ಇರುವುದರಿಂದಲೇ ಅದು ಭ್ರಷ್ಟಾಚಾರ ಮುಕ್ತ `ಸ್ವಚ್ಛ' ರಾಜ್ಯವಾಗಿ ಉಳಿದಿದೆ' ಎನ್ನುವ ಅವರ ಅಭಿಪ್ರಾಯ ತಿಳಿವಳಿಕೆಯ ಕೊರತೆಯಿಂದ ಆಗಿದ್ದರೆ ನಿರ್ಲಕ್ಷಿಸಿಬಿಡಬಹುದಿತ್ತು. ಆದರೆ ಆ ರಾಜ್ಯದ `ಮಣ್ಣಿನ ಮಗ'ನಾಗಿರುವ ಆಶಿಶ್‌ನಂದಿ ಅವರಿಗೆ ಉಳಿದವರೆಲ್ಲರಿಗಿಂತಲೂ ಆ ರಾಜ್ಯ ಚೆನ್ನಾಗಿ ಗೊತ್ತಿದೆ. ಮೊದಲನೆಯದಾಗಿ ಪಶ್ಚಿಮಬಂಗಾಳದ  ಶೇಕಡಾ 90ರಷ್ಟು ಎಡಪಕ್ಷಗಳ ಜನಪ್ರತಿನಿಧಿಗಳು ಪ್ರಾಮಾಣಿಕರೆನ್ನುವುದು ನಿರ್ವಿವಾದ. ಆದರೆ ಅಲ್ಲಿನ ಸಿಪಿಎಂ ಪದಾಧಿಕಾರಿಗಳ ಬಗ್ಗೆ ಇದೇ ರೀತಿಯ ಸರ್ಟಿಫಿಕೇಟ್ ನೀಡಲು ಸಾಧ್ಯವೇ? ಎಡರಂಗದ 32 ವರ್ಷಗಳ ಆಡಳಿತದ ಕಾಲದಲ್ಲಿ ಸಿಪಿಎಂನ ಶಕ್ತಿಶಾಲಿ ಹುದ್ದೆಯಾದ `ಲೋಕಲ್ ಕಮಿಟಿ ಸೆಕ್ರೆಟರಿ (ಎಲ್‌ಸಿಎಸ್)ಗಳಾಗಿ ಕೆಲಸ ಮಾಡಿದವರ ಆದಾಯವೃದ್ಧಿ ಬಗ್ಗೆ ಯಾರಾದರೂ ತನಿಖೆ ನಡೆಸಿದರೆ ಆಶಿಶ್‌ನಂದಿ ಅವರು ಹೇಳುವ `ಸ್ವಚ್ಛರಾಜ್ಯ'ದ ಬಣ್ಣಬಯಲಾಗಬಹುದು.
ಇವೆಲ್ಲಕ್ಕಿಂತಲೂ ಗಂಭೀರವಾದ ವಿಚಾರವನ್ನು ಆಶಿಶ್‌ನಂದಿ ಚರ್ಚೆಗೊಳಪಡಿಸಿಲ್ಲ. `ಭದ್ರಲೋಕ'ದವರೆಂದು ಕರೆಯಲಾಗುವ ಅಲ್ಲಿನ ಬ್ರಾಹ್ಮಣ ಜಮೀನ್ದಾರರು ಸ್ವಇಚ್ಛೆಯಿಂದ ಸಾವಿರಾರು ಎಕರೆ ಜಮೀನನ್ನು ಗೇಣಿದಾರರಿಗೆ ಬಿಟ್ಟುಕೊಟ್ಟಿರುವುದು ನಿಜ. ಆದರೆ ಭೂಮಿ ಮೇಲಿನ ಅಧಿಕಾರ ಕಳೆದುಕೊಂಡ ಅವರಿಗೆ ಬಯಸಿಯೋ, ಬಯಸದೆಯೋ ರಾಜಕೀಯ ಅಧಿಕಾರ ಕೈಗೆ ಸಿಕ್ಕಿದೆ. ಅದಿನ್ನೂ ಅವರ ಕೈಯಲ್ಲಿಯೇ `ಭದ್ರ'ವಾಗಿ ಉಳಿದಿದೆ. ಅದನ್ನು ಇನ್ನೂ ಕೆಳಗೆ ಬಿಟ್ಟುಕೊಟ್ಟಿಲ್ಲ. ಇಂದಿಗೂ ಅಲ್ಲಿನ ಎಡಪಕ್ಷಗಳ ಹಿರಿಯ ನಾಯಕರಲ್ಲಿ ಶೇಕಡಾ 90ರಷ್ಟು `ಭದ್ರಲೋಕ'ಕ್ಕೆ ಸೇರಿದವರು. ಶೇಕಡಾ 25ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಮರಿಗೆ ರಾಜಕೀಯವೂ ಸೇರಿದಂತೆ ಯಾವ ಕ್ಷೇತ್ರಗಳಲ್ಲಿ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎನ್ನುವುದನ್ನು ಸಾಚಾರ್ ಸಮಿತಿ ಬಯಲು ಮಾಡಿದೆ.
ಒಬಿಸಿ, ಎಸ್‌ಸಿ, ಎಸ್‌ಟಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅದೊಂದು `ಸ್ವಚ್ಛ ರಾಜ್ಯ' ಎಂಬ ಸರ್ಟಿಫಿಕೇಟ್ ನೀಡುವ ಆಶಿಶ್‌ನಂದಿ ಅವರಿಗೆ ಅಲ್ಲಿನ ಶೇಕಡಾ 75ರಷ್ಟು ಕುಟುಂಬಗಳ ಬಡತನ ಯಾಕೆ ಕಾಣುತ್ತಿಲ್ಲ?  ಕೊನೆಯದಾಗಿ ಒಬಿಸಿ, ಎಸ್‌ಸಿ, ಎಸ್‌ಟಿಗಳು ಅಧಿಕಾರಕ್ಕೆ ಬರದೆ ಇರುವುದರಿಂದಲೇ ಪಶ್ಚಿಮಬಂಗಾಳ ಸ್ವಚ್ಛವಾಗಿ ಉಳಿದಿದೆ ಎನ್ನುವುದು ನಿಜವಾಗಿದ್ದರೆ ಇಡೀ ಭಾರತ ಸ್ವಚ್ಛವಾಗಿ ಉಳಿಯಬೇಕಿತ್ತಲ್ಲಾ? ಯಾಕೆಂದರೆ ಕಳೆದ 65ವರ್ಷಗಳಲ್ಲಿ  ಒಬಿಸಿ, ಎಸ್‌ಸಿ,ಎಸ್‌ಟಿಗೆ ಸೇರಿದವರ‌್ಯಾರೂ ಪ್ರಧಾನಿಯಾಗಲೇ ಇಲ್ಲವಲ್ಲಾ?

Sunday, January 27, 2013

ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿರುವ ಶಿಂಧೆ

ಕಾಂಗ್ರೆಸ್ ಪಕ್ಷದಲ್ಲಿ ಭಟ್ಟಂಗಿತನ ಮಾಡಲು ಹೋಗಿ ಪೇಚಿಗೆ ಸಿಕ್ಕಿಹಾಕಿಕೊಂಡವರ ದೊಡ್ಡ ಪಟ್ಟಿ ಇದೆ. ಕೇಂದ್ರ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ಇದನ್ನೇ ಮಾಡಲು ಹೋಗಿ ಭಾರತೀಯ ಜನತಾ ಪಕ್ಷದ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿದ್ದಾರೆ. ಪತ್ರಿಕೆಗಳ ಮೇಲೆ ನಿತ್ಯ ಕಣ್ಣಾಡಿಸುವ ಇಲ್ಲವೆ ಟಿವಿ ಸುದ್ದಿಗಳಿಗೆ ಕಿವಿಕೊಡುವ ಯಾರೂ ಕೂಡಾ  ಸುಶೀಲ್‌ಕುಮಾರ್ ಶಿಂಧೆ ಅವರಾಡಿದ್ದ ಮಾತುಗಳು `ಸುದ್ದಿ ಸ್ಪೋಟ' ಇಲ್ಲವೆ, `ಬ್ರೇಕಿಂಗ್‌ನ್ಯೂಸ್' ಎಂದು ಖಂಡಿತ ಹೇಳಲಾರರು.
ಎರಡು ವರ್ಷಗಳ ಹಿಂದೆ ದೇಶದ ಎಲ್ಲ ಪತ್ರಿಕೆಗಳ ಪುಟ-ಪುಟಗಳಲ್ಲಿ `ಹಿಂದೂ ಭಯೋತ್ಪಾದನೆ' ಬಗ್ಗೆ ಸುದ್ದಿ ಮತ್ತು ವಿಶ್ಲೇಷಣೆಗಳು ಪ್ರಕಟವಾಗಿವೆ. ಟಿವಿಗಳ ಪ್ರೈಮ್‌ಟೈಮ್‌ನಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿದೆ. ಆದರೆ ಶಿಂಧೆ ಅವರು ದೇಶದ ಗೃಹಸಚಿವರಾಗಿ ಇದನ್ನು ಪ್ರಸ್ತಾಪಿಸಿದ ರೀತಿ ಮತ್ತು ಸಂದರ್ಭ ಸರಿಯಾಗಿರಲಿಲ್ಲ. ವೇದಿಕೆ ಮೇಲಿದ್ದ ಪಕ್ಷದ ನಾಯಕಿ ಮತ್ತು ಯುವರಾಜನನ್ನು ಮೆಚ್ಚಿಸಲೆಂಬಂತೆ ಶಿಂಧೆ ಎಚ್ಚರತಪ್ಪಿ ಮಾತನಾಡಿದ್ದಾರೆ.  ತಾನು ಕಾಂಗ್ರೆಸ್ ಪಕ್ಷದ ನಾಯಕ ಮಾತ್ರ ಅಲ್ಲ, ಭಾರತ ಸರ್ಕಾರದ ಒಬ್ಬ ಜವಾಬ್ದಾರಿಯುತ ಸಚಿವ ಕೂಡಾ ಹೌದು ಎನ್ನುವುದನ್ನು ಮರೆತು ನಾಲಿಗೆ ಸಡಿಲ ಬಿಟ್ಟಿದ್ದಾರೆ.
ಶಿಂಧೆ ಅವರ ಮಾತುಗಳಲ್ಲಿನ ಎರಡು ಹೊಸ ಸಂಗತಿಗಳೇನೆಂದರೆ, ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ನೇರವಾಗಿ ಹಿಂದೂ ಭಯೋತ್ಪಾದನೆಯ ಜತೆ ಜೋಡಿಸಿದ್ದು ಮತ್ತು ಈ ಎರಡು ಸಂಘಟನೆಗಳು ತರಬೇತಿ ಶಿಬಿರಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದ್ದು. ಈ ಆರೋಪಗಳನ್ನು ಪುರಾವೆ ಸಹಿತ ಸಾಬೀತುಪಡಿಸುವುದು ಗೃಹಸಚಿವರಿಗೂ ಕಷ್ಟದ ಕೆಲಸ. ಅವರು `ಹಿಂದೂ ಭಯೋತ್ಪಾದನೆ' ಎಂದು ಹೆಸರಿಸಿದ್ದರಲ್ಲಿಯೂ ಹೊಸದೇನಿಲ್ಲ.`ಮುಸ್ಲಿಮ್ ಭಯೋತ್ಪಾದನೆ' ಎಂದ ಕೂಡಲೇ ಎಲ್ಲ ಮುಸ್ಲಿಮರು ಹೇಗೆ ಭಯೋತ್ಪಾದಕರಾಗುವುದಿಲ್ಲವೊ, ಹಾಗೆಯೇ `ಹಿಂದೂ ಭಯೋತ್ಪಾದನೆ' ಎಂದ ಕೂಡಲೇ ಎಲ್ಲ ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯ ಇಲ್ಲ ಎನ್ನುವುದು ಸರಳ ಸತ್ಯ. ಈಗ `ಹಿಂದೂ ಇಲ್ಲವೇ ಕೇಸರಿ ಭಯೋತ್ಪಾದನೆ' ಎಂದು ಕರೆಯುವುದನ್ನು ವಿರೋಧಿಸುತ್ತಿರುವ ಸಂಘ ಪರಿವಾರದ ನಾಯಕರು ಕಳೆದೆರಡು ದಶಕಗಳಲ್ಲಿ ಎಷ್ಟು ಬಾರಿ `ಮುಸ್ಲಿಮ್ ಭಯೋತ್ಪಾದನೆ' ಎಂದು ಹೇಳಿರುವುದನ್ನು ಲೆಕ್ಕಹಾಕಬೇಕು.
`ಹಿಂದೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆರೋಪಿಗಳಾಗಿರುವವರು ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಜತೆ ಸಂಬಂಧ ಹೊಂದಿದ್ದರು' ಎಂದಷ್ಟೇ ಶಿಂಧೆ ಹೇಳಿದ್ದರೆ ಅವರ ವಿರೋಧಿಗಳ ಕೈಗೆ ಈಗಿನ ಬಡಿಗೆ ಸಿಗುತ್ತಿರಲಿಲ್ಲ. ಬಿಜೆಪಿ, ಆರ್‌ಎಸ್‌ಎಸ್ ಮಾತ್ರ ಅಲ್ಲ,  ಕಾಂಗ್ರೆಸ್ ಇಲ್ಲವೆ ಸಿಪಿಐ-ಸಿಪಿಎಂ ಪಕ್ಷಗಳ ಸದಸ್ಯರಾಗಿದ್ದವರು ಕೂಡಾ ದಿಢೀರನೇ ಭಯೋತ್ಪಾದಕರಾಗಿ ಬದಲಾಗಿಬಿಟ್ಟರೆ ಆ ಪಕ್ಷಗಳನ್ನು ಹೊಣೆ ಮಾಡುವುದು ಸರಿಯಾಗಲಾರದು. ಆದರೆ ಇತರ ಪಕ್ಷಗಳಂತೆ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಹಿಂದೂ ಭಯೋತ್ಪಾದನೆಯ ಆರೋಪಕ್ಕೊಳಗಾದವರ ಜತೆಗಿನ ಸಂಬಂಧವನ್ನು ಖಡಾಖಂಡಿತವಾಗಿ ನಿರಾಕರಿಸುವುದು ಕಷ್ಟ. ಇದಕ್ಕೆ ಕಾರಣಗಳಿವೆ.
2002ರಿಂದ 2008ರ ವರೆಗಿನ ಅವಧಿಯಲ್ಲಿ ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಲ್ಲಿ ಹಲವಾರು ಬಾಂಬು ಸ್ಫೋಟಗಳು ನಡೆದಿದ್ದವು.  ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರಿಂದ ಮೊದಲು ಬಂಧನಕ್ಕೊಳಗಾಗಿದ್ದವರು ಮುಸ್ಲಿಮ್ ಯುವಕರು. 2006ರಲ್ಲಿ ನಾಂದೇಡ್‌ನ ಆರ್‌ಎಸ್‌ಎಸ್ ಸದಸ್ಯರೊಬ್ಬರ ಮನೆಯಲ್ಲಿ ಬಾಂಬು ತಯಾರಿಸುತ್ತಿದ್ದಾಗ ನಡೆದ ಸ್ಫೋಟ ಮೊದಲ ಬಾರಿಗೆ ಪೊಲೀಸರು ಮುಸ್ಲಿಮರನ್ನು ಬಿಟ್ಟು ಇತರರ ಕಡೆ ಕಣ್ಣುಹರಿಸಲು ಕಾರಣವಾಯಿತು.
​ಈ ನಡುವೆ 2008ರ ಸೆಪ್ಟೆಂಬರ್ 29ರಂದು ಮಾಲೆಗಾಂವ್‌ನಲ್ಲಿ ನಡೆದ ಬಾಂಬು ಸ್ಫೋಟ ಆರು ಮಂದಿಯನ್ನು ಬಲಿತೆಗೆದುಕೊಂಡು ಬಿಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ ಕರ್ಕರೆ ನೇತೃತ್ವದ `ಭಯೋತ್ಪಾದನಾ ನಿಗ್ರಹ ದಳ' (ಎಟಿಎಸ್) ಹತ್ತು ಮಂದಿ `ಹಿಂದೂ'ಗಳನ್ನು ಬಂಧಿಸಿದಾಗಲೇ ಮೊದಲ ಬಾರಿ `ಹಿಂದೂ ಭಯೋತ್ಪಾದನೆ'ಯ ಹೆಸರು ಹುಟ್ಟಿಕೊಂಡದ್ದು. ಅಲ್ಲಿಯವರೆಗೆ `ಮುಸ್ಲಿಮ್ ಭಯೋತ್ಪಾದಕರು' ಎಂದು ಸಲೀಸಾಗಿ ಹೇಳುತ್ತಿದ್ದ ಬಿಜೆಪಿ ಕೂಡಾ ನಂತರದ ದಿನಗಳಲ್ಲಿ ಭಯೋತ್ಪಾದನೆಗೆ ಜಾತಿ-ಧರ್ಮ ಇಲ್ಲ ಎನ್ನುವ ಉದಾರವಾದಿ ನಿಲುವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದು.
ಎಟಿಎಸ್‌ನಿಂದ ಬಂಧನಕ್ಕೀಡಾದವರಲ್ಲಿ ಬಿಜೆಪಿಯ ಮಹಿಳಾ ಘಟಕ ದುರ್ಗಾವಾಹಿನಿಯ ಮಾಜಿ ಸದಸ್ಯೆ ಪ್ರಾಗ್ನಾ ಠಾಕೂರ್, ಸೇವೆಯಲ್ಲಿದ್ದ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ನಿವೃತ್ತ ಸೇನಾಧಿಕಾರಿ ಮೇಜರ್ ರಮೇಶ್ ಉಪಾಧ್ಯಾಯ ಮತ್ತು ಸ್ವಯಂಘೋಷಿತ ಸ್ವಾಮಿ ದಯಾನಂದ ಪಾಂಡೆ ಮೊದಲಾದವರಿದ್ದರು. ಇವರೆಲ್ಲರೂ ವೀರ ಸಾವರ್ಕರ್ ಸಿದ್ಧಾಂತದ ಪ್ರೇರಣೆಯಿಂದ ಪುಣೆಯಲ್ಲಿ ಸ್ಥಾಪನೆಗೊಂಡ `ಅಭಿನವ ಭಾರತ'ದ ಸದಸ್ಯರಾಗಿದ್ದವರು. ಇದು ಬಯಲಾದ ಕೂಡಲೇ ಸಂಘ ಪರಿವಾರದ ಸದಸ್ಯರು ಪೊಲೀಸ್ ಅಧಿಕಾರಿ ಹೇಮಂತ ಕರ್ಕರೆ ಮೇಲೆ ಎರಗಿ ಬಿದ್ದಿದ್ದರು. ಇದರಿಂದ ಮಾನಸಿಕ ಕ್ಲೇಶಕ್ಕೆ ಒಳಗಾಗಿದ್ದ ಸ್ಥಿತಿಯಲ್ಲಿಯೇ ಕರ್ಕರೆ ಅವರು 26/11ರ ಭಯೋತ್ಪಾದಕರನ್ನು ಎದುರಿಸಲು ಹೋಗಿ ಪ್ರಾಣ ಕಳೆದುಕೊಳ್ಳಬೇಕಾಯಿತು.
ಇವೆಲ್ಲದರ ಹೊರತಾಗಿಯೂ ಬಿಜೆಪಿಯ ಆಗಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜನಾಥ್‌ಸಿಂಗ್ ಅವರು ಜೈಲಿಗೆ ಹೋಗಿ ಪ್ರಾಗ್ನಾ ಠಾಕೂರ್ ಮತ್ತಿತರರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಬಂದಿದ್ದರು. ( ಆದುದರಿಂದ ರಾಜನಾಥ್ ಸಿಂಗ್ ಅವರ ಈಗಿನ ಆಕ್ರೋಶಕ್ಕೆ ಅಚ್ಚರಿ ಪಡಬೇಕಾಗಿಲ್ಲ). ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿಯಾಗಿ ಈ ಆರೋಪಿಗಳನ್ನು ಪೊಲೀಸರು ಮಾನವೀಯವಾಗಿ ನಡೆಸಿಕೊಳ್ಳಬೇಕೆಂದು ಮನವಿ ಮಾಡಿದ್ದರು.
ನಿಜ, ಪ್ರಾಗ್ನಾ ಠಾಕೂರ್ ಮತ್ತಿತರರು ಈಗಲೂ ಕೇವಲ ಆರೋಪಿಗಳು, ಒಬ್ಬ ಆರೋಪಿಗೆ ನಿರಪರಾಧಿತನವನ್ನು ಸಾಬೀತುಪಡಿಸಲು ಕಾನೂನುಬದ್ಧವಾಗಿ ಇರುವ ಅವಕಾಶಗಳನ್ನು ನೀಡಲೇಬೇಕು. ನ್ಯಾಯಾಲಯ ತೀರ್ಪು ನೀಡುವ ಮೊದಲೇ ಅವರನ್ನು ಅಪರಾಧಿಗಳೆಂದು ಘೋಷಿಸುವುದು ತಪ್ಪು. ಈ ಕಾರಣದಿಂದಲೇ ಅವರು ಪೊಲೀಸರಿಗೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ನ್ಯಾಯಾಲಯದಲ್ಲಿ ಸ್ವೀಕಾರಾರ್ಹ ಅಲ್ಲವಾದ ಕಾರಣ ಯಾರೂ ಗಂಭೀರವಾಗಿ ಸ್ವೀಕರಿಸಲಿಲ್ಲ.
ಆದರೆ ಮೆಕ್ಕಾ ಮಸೀದಿ ಬಾಂಬು ಸ್ಫೋಟದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಅವರು 2010ರ ಡಿಸೆಂಬರ್ 18ರಂದು ದೆಹಲಿಯ ತೀಸ್‌ಹಜಾರ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆ `ಹಿಂದೂ ಭಯೋತ್ಪಾದನೆ' ಬಗ್ಗೆ ಅಲ್ಲಿಯ ವರೆಗೆ ಕಂಡು ಕೇಳರಿಯದ ಹಲವಾರು ಮುಖಗಳನ್ನು ಬಯಲುಗೊಳಿಸಿತ್ತು. `2006 ಮತ್ತು 2008ರಲ್ಲಿ ಮಾಲೆಗಾಂವ್, 2007ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್, ಜೈಪುರದ ಅಜ್ಮೀರ್ ಷರೀಫ್ ದರ್ಗಾ ಮತ್ತು ಹೈದರಾಬಾದ್‌ನ ಮೆಕ್ಕಾಮಸೀದಿಗಳಲ್ಲಿ ಬಾಂಬು ಸ್ಫೋಟ ನಡೆಸಿದ್ದು ಆರ್‌ಎಸ್‌ಎಸ್ ಜತೆ ಸಂಬಂಧ ಹೊಂದಿದ್ದ ಹಿಂದೂ ಸಂಘಟನೆಗಳ ಸದಸ್ಯರು' ಎಂದು ಅವರು ತನ್ನ 48 ಪುಟಗಳ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಸೀಮಾನಂದ ಸಾಮಾನ್ಯ ಹಿಂದೂ ನಾಯಕರಲ್ಲ, ಅವರು ಆರ್‌ಎಸ್‌ಎಸ್‌ನ ನಿಷ್ಠಾವಂತ ಕಾರ್ಯಕರ್ತ. ಬಾಲ್ಯದಿಂದಲೇ ಸಂಘದ ಜತೆಯಲ್ಲಿದ್ದ ಅಸೀಮಾನಂದ ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ಗುಡ್ಡಗಾಡು ಜನಾಂಗದ ಕಲ್ಯಾಣಕ್ಕಾಗಿ `ಶಬರಿಧಾಮ' ನಡೆಸುತ್ತಿದ್ದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್, ಆರ್‌ಎಸ್‌ಎಸ್‌ನ ಹಿಂದಿನ ಸರಸಂಘ ಚಾಲಕ  ಕೆ.ಎಸ್.ಸುದರ್ಶನ್, ಈಗಿನ ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ ಸಂಘ ಪರಿವಾರದ ಜತೆ ಅಸೀಮಾನಂದರು ನಿಕಟ ಸಂಪರ್ಕ ಹೊಂದಿದ್ದರು. ಅವರ ಜತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಮಾಲೆಗಾಂವ್ ಬಾಂಬು ಸ್ಫೋಟದ ನಂತರ ರಚನೆಗೊಂಡ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ ಕರ್ಕರೆ ಅವರು ಕಷ್ಟಪಟ್ಟು ಕೇವಲ ಎರಡೇ ತಿಂಗಳ ಅವಧಿಯಲ್ಲಿ 1400 ಪುಟಗಳ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆ ವರದಿಯ ಗತಿ ಏನಾಗಿದೆ ಎನ್ನುವುದನ್ನು ಮಹಾರಾಷ್ಟ್ರದವರೇ ಆಗಿರುವ ಗೃಹಸಚಿವರು ಹೇಳಬೇಕು. `ಆರ್‌ಎಸ್‌ಎಸ್‌ನ ಪ್ರಚಾರಕ ರಾಮಚಂದ್ರ  ಕಲ್ಸಾಂಗ್ರ ಮತ್ತು ರಾಮಚಂದ್ರ ಡಾಂಗೆ ಅವರು ಬಾಂಬುಸ್ಫೋಟಗಳ ರೂವಾರಿಗಳು' ಎಂದು ಕರ್ಕರೆ ತನ್ನ ವರದಿಯಲ್ಲಿ ತಿಳಿಸಿದ್ದಾರೆ. ಕರ್ಕರೆ ನಂತರ ಎಟಿಎಸ್ ಮುಖ್ಯಸ್ಥರಾಗಿದ್ದ ರಘುವಂಶಿ, ಅವರಿಬ್ಬರನ್ನು ಬಂಧಿಸಲು ಹೋಗದೆ ಆರೋಪಪಟ್ಟಿಯಲ್ಲಿ ಹೆಸರು ಉಲ್ಲೇಖಿಸಿ ಜಾರಿಕೊಂಡಿದ್ದಾರೆ.
ಅಜ್ಮೀರ್ ಬಾಂಬು ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜಸ್ತಾನದ ಪೊಲೀಸರು ದೇವೇಂದ್ರ ಗುಪ್ತಾ ಮತ್ತು ಲೋಕೇಶ್ ಶರ್ಮಾ ಎಂಬ ಇಬ್ಬರು ಆರ್‌ಎಸ್‌ಎಸ್ ಪ್ರಚಾರಕರನ್ನು ಬಂಧಿಸಿದ್ದರು. ಇವರಿಬ್ಬರೂ ಸಿಬಿಐಗೆ ನೀಡಿರುವ ಹೇಳಿಕೆಗಳಲ್ಲಿ `ಮಾಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೀರ್ ಮತ್ತು ಹೈದರಾಬಾದ್‌ನ ಮೆಕ್ಕಾ ಮಸೀದಿ ಬಾಂಬು ಸ್ಫೋಟ ಪ್ರಕರಣಗಳಲ್ಲಿ ಆರ್‌ಎಸ್‌ಎಸ್‌ನ ಕೇಂದ್ರ ಸಮಿತಿ ಸದಸ್ಯರಾದ ಇಂದ್ರೇಶ್‌ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ' ಎಂದು ಹೇಳಿದ್ದಾರೆ. ಇಂದ್ರೇಶ್ ಕುಮಾರ್ ಪಾತ್ರದ ಬಗ್ಗೆ ಅಸೀಮಾನಂದರ ತಪ್ಪೊಪ್ಪಿಗೆ ಇನ್ನಷ್ಟು ಬೆಳಕು ಚೆಲ್ಲುತ್ತದೆ.
ಕುತೂಹಲದ ಸಂಗತಿಯೆಂದರೆ ಭಯೋತ್ಪಾದನೆಯ ಜತೆ ಹಿಂದೂ ಸಂಘಟನೆಗಳ ಸಂಬಂಧದ ಸುಳಿವು ಸಿಕ್ಕಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಕಾಲದಲ್ಲಿ. ಆದರೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಏನು ಮಾಡಿದೆ?  ಈ ನಿಷ್ಕ್ರಿಯತೆ ಬಗ್ಗೆ ಅಚ್ಚರಿಪಡಬೇಕಾಗಿಲ್ಲ. ಸಂಜೋತಾ ಎಕ್ಸ್‌ಪ್ರೆಸ್ ಬಾಂಬು ಸ್ಫೋಟದಲ್ಲಿ ಹಿಂದೂ ಮೂಲಭೂತವಾದಿಗಳ ಕೈವಾಡದ  ಬಗ್ಗೆ ತನಿಖೆ ನಡೆಸುತ್ತಿದ್ದ ಹರಿಯಾಣದ ವಿಶೇಷ ತನಿಖಾದಳ ಇನ್ನೇನು ಆರೋಪಿಗಳನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದ್ದಾಗಲೇ ಹಠಾತ್ತನೆ ತನಿಖೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ಕಾಲದಲ್ಲಿ ಪ್ರಧಾನಿ ಆಂತರಿಕ ಭದ್ರತೆಯ ಸಲಹೆಗಾರರಾಗಿದ್ದ ಎಂ.ಕೆ.ನಾರಾಯಣನ್ ಅವರ ಸೂಚನೆ ಮೇರೆಗೆ ಇದು ನಡೆದಿತ್ತು ಎಂಬ ಸುದ್ದಿ ಪತ್ರಿಕೆಗಳಲ್ಲಿ ಚರ್ಚೆಯಾಗಿತ್ತು. `ದೇಶದಲ್ಲಿ ಭಯೋತ್ಪಾದನೆಯ ಕೃತ್ಯಗಳು ನಡೆದಾಗೆಲ್ಲ ಅದಕ್ಕೆ ಪಾಕಿಸ್ತಾನವನ್ನೇ  ಸರ್ಕಾರ ಹೊಣೆ ಮಾಡುತ್ತಾ ಬರುತ್ತಿರುವಾಗ, ಈಗ ಹಠಾತ್ತನೇ ಹಿಂದೂ ಭಯೋತ್ಪಾದಕರ ಕೈವಾಡ ಇದೆ ಎಂದು ಹೇಳುವುದು ಸರಿಯಾಗಲಾರದು' ಎಂದು ಎಂ.ಕೆ.ನಾರಾಯಣನ್ ಅಭಿಪ್ರಾಯ ಪಟ್ಟಿದ್ದರಂತೆ.
ಈ ಎಲ್ಲ ಮಾಹಿತಿ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಮೇಜಿನ ಮೇಲೆ ಇದೆ. ಅವರು ಮಾಡಬೇಕಾಗಿರುವುದು ಬಹಳ ಸರಳವಾದ ಕೆಲಸ. ಮುಸ್ಲಿಮ್ ಭಯೋತ್ಪಾದನೆಯ ಜತೆಯಲ್ಲಿ ಹಿಂದೂ ಭಯೋತ್ಪಾದನೆಗೆ ಸಂಬಂಧಿಸಿದ ತನಿಖೆಯನ್ನು ಕೂಡಾ ತ್ವರಿತಗತಿಯಲ್ಲಿ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು. ಭಯೋತ್ಪಾದನೆಯಲ್ಲಿ ಹಿಂದೂ ಇಲ್ಲವೇ ಮುಸ್ಲಿಮ್ ನಾಯಕರು ಭಾಗಿಯಾಗಿದ್ದರೆ, ಅವರೆಷ್ಟೇ ಪ್ರಭಾವಶಾಲಿಯಾಗಿದ್ದರೂ ಅಂತಹವರ ಪಾತ್ರವನ್ನು ಬಯಲುಗೊಳಿಸಬೇಕು. ಯಾವುದಾದರೂ ಪಕ್ಷ ಇಲ್ಲವೇ ಸಂಘಟನೆ ಇಂತಹ ಕುಕೃತ್ಯಗಳಿಗೆ ಪ್ರತ್ಯಕ್ಷ ಇಲ್ಲವೆ ಪರೋಕ್ಷ ಬೆಂಬಲ ನೀಡುತ್ತಿದ್ದರೆ ಅಂತಹ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು. ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದೆ ಇದ್ದರೆ ಜೈಲಲ್ಲಿ ಕೊಳೆಯುತ್ತಿರುವ ನಿರಪರಾಧಿ ಹಿಂದೂ ಮತ್ತು ಮುಸ್ಲಿಮ್ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು.
ತನಗೊಪ್ಪಿಸಿರುವ ಈ ಕೆಲಸವನ್ನು ನಿಷ್ಠೆಯಿಂದ ಮಾಡುವ ಬದಲಿಗೆ ಕಾಂಗ್ರೆಸ್ ಅಧ್ಯಕ್ಷರ ಸೆರಗಿನ ಮರೆಯಲ್ಲಿ ನಿಂತು ಹಾದಿಹೋಕರ ರೀತಿಯಲ್ಲಿ  ಶಿಂಧೆ ಮಾತನಾಡುವುದು ಅವರು ಹೊಂದಿರುವ ಗೃಹಸಚಿವ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ. ಈ ರೀತಿ ಬಾಯಿಬಡುಕರ ರೀತಿಯಲ್ಲಿ ಮಾತನಾಡುವುದೇ ಅವರಿಗೆ ಇಷ್ಟವೆಂದಾದರೆ ಮತ್ತು ಇದರಿಂದಲೇ ರಾಜಕೀಯವಾಗಿ ತನಗೆ ಅನುಕೂಲವಾಗಲಿದೆ ಎಂದು ಅವರು ತಿಳಿದುಕೊಂಡಿದ್ದರೆ ಗೌರವದಿಂದ ಸಚಿವ ಸ್ಥಾನ ಬಿಟ್ಟುಕೊಟ್ಟು ಪಕ್ಷದ ವಕ್ತಾರರಾಗಿ ಇದೇ ರೀತಿ ಬಾಯ್ತುಂಬಾ ಮಾತನಾಡುತ್ತಾ ದೇಶ ಸುತ್ತಿಕೊಂಡು ಇರಬಹುದು. ಜನ ತೀರ್ಮಾನಕ್ಕೆ ಬರುತ್ತಾರೆ.