Monday, April 2, 2012

ಇದು ಮೂರ್ಖರು ಮತ್ತು ತಿಕ್ಕಲರ ನಡುವಿನ ಪೈಪೋಟಿ March 19, 2012

ಕೇಂದ್ರ ಸರ್ಕಾರದಲ್ಲಿ ಕಾಣಿಸಿಕೊಂಡಿರುವ  ಬಿಕ್ಕಟ್ಟಿಗೆ ಎರಡು ಮುಖಗಳಿವೆ. ಮೊದಲನೆಯದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ತಿಕ್ಕಲುತನ, ಎರಡನೆಯದು ಕಾಂಗ್ರೆಸ್ ಪಕ್ಷದ ಮೂರ್ಖತನ.

ಈಗಿನ ರಾಜಕೀಯ ಬಿಕ್ಕಟ್ಟಿಗೆ ಮೊದಲನೆಯದಕ್ಕಿಂತ ಎರಡನೆಯದ್ದೇ ಮುಖ್ಯ ಕಾರಣ. ಅಣ್ಣಾಹಜಾರೆ ಚಳುವಳಿಯಿಂದ ಹಿಡಿದು ರೈಲ್ವೆ ಬಜೆಟ್ ಪ್ರಹಸನದವರೆಗೆ ಕಾಂಗ್ರೆಸ್ ಕಾರ್ಯವೈಖರಿಯನ್ನು ನೋಡುತ್ತಾ ಬಂದರೆ ಆ ಪಕ್ಷದ ಮೂರ್ಖ ನಡವಳಿಕೆಗಳಿಗೆ ಇನ್ನಷ್ಟು ಸಮರ್ಥನೆಗಳು ಸಿಗುತ್ತವೆ.

ರಾಜಕೀಯದಲ್ಲಿ ಎದುರಾಳಿಗಳಿಗೆ ಬಡಿಯುವುದು, ಬಡಿಸಿಕೊಳ್ಳುವುದು ಇದ್ದೇ ಇರುತ್ತದೆ. ಆದರೆ ಮೂರ್ಖರು ಮಾತ್ರ ಎದುರಾಳಿಯ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ಳುತ್ತಾರೆ. ಮಮತಾ ಬ್ಯಾನರ್ಜಿ ಜತೆಗಿನ ಸಂಘರ್ಷದಲ್ಲಿ ಇದನ್ನೇ ಕಾಂಗ್ರೆಸ್ ಮಾಡಿಕೊಂಡಿರುವುದು.

ಭಾರತದ ರಾಜಕೀಯದ ನಾಲ್ವರು ಕುಮಾರಿಯರಾದ ಜೆ.ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಉಮಾಭಾರತಿ ಜತೆಗಿನ ರಾಜಕೀಯ ಸಂಬಂಧ ಎಷ್ಟು ಕಠಿಣ ಎಂಬುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ತನ್ನ ಒಂದು ಕಣ್ಣು ಹೋದರೂ ಸರಿ, ವಿರೋಧಿಯ ಎರಡು ಕಣ್ಣು ಕಿತ್ತುಹಾಕಬೇಕೆನ್ನುವಷ್ಟು ಹಟಮಾರಿಗಳು ಈ ನಾಯಕಿಯರು.

ಇವರ ಅತಿರೇಕದ ನಡವಳಿಕೆಗಳಿಂದ ಆಗಿರುವ ರಾಜಕೀಯ ಅವಾಂತರಗಳನ್ನು ಜನರೂ ಮರೆತಿರಲಾರರು. ಉತ್ತರಪ್ರದೇಶದಲ್ಲಿ ಬಿಜೆಪಿ ಸೋತರೆ ಗಂಗಾನದಿಯಲ್ಲಿ ಮುಳುಗಿ ಸಾಯುವುದಾಗಿ ಮೊನ್ನೆ ಮೊನ್ನೆ ಉಮಾಭಾರತಿ ಸಾರ್ವಜನಿಕ ಸಭೆಯಲ್ಲಿ ಪ್ರತಿಜ್ಞೆ ಮಾಡಿದ್ದರು. ಆ ಪ್ರತಿಜ್ಞೆಯನ್ನು ನೆರವೇರಿಸಿದ ಸುದ್ದಿ ಇಲ್ಲಿಯವರೆಗೆ ಬಂದಿಲ್ಲ.

ಅಟಲಬಿಹಾರಿ ವಾಜಪೇಯಿಯವರು ಈ ನಾಲ್ವರು ಕುಮಾರಿಯರಿಂದ ಸಾಕಷ್ಟು ತಲೆನೋವು ಅನುಭವಿಸಿದ್ದಾರೆ. ಮಾತನಾಡುವ ಸ್ಥಿತಿಯಲ್ಲಿ ಇದ್ದಿದ್ದರೆ  ಅವರು ಮನಮೋಹನ್ ಸಿಂಗ್ ಅವರನ್ನು ಕರೆದು  ಅನುಭವವನ್ನು ಹಂಚಿಕೊಳ್ಳುತ್ತಿದ್ದರೇನೋ? ಆದ್ದರಿಂದ ಕಾಂಗ್ರೆಸ್ ಕೀಟಳೆಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ಅನಿರೀಕ್ಷಿತವೇನಲ್ಲ.

ಅವರು ಇರುವುದೇ ಹಾಗೆ, ಅವರ ಜತೆ ಮೈತ್ರಿ ಬೇಕಿದ್ದರೆ ಆ ಸ್ಥಿತಿಯಲ್ಲಿಯೇ ಒಪ್ಪಿಕೊಂಡು ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು, ಇಲ್ಲವಾದರೆ ಅದನ್ನು ಕಡಿದುಕೊಳ್ಳಬೇಕು. ಇದಕ್ಕೆ ಬದಲಾಗಿ ಸುಮ್ಮನೆ ಚಿವುಟಲು ಹೋದರೆ ಮುಸುಡಿಗೆ ಬಡಿಸಿಕೊಳ್ಳಬೇಕಾಗುತ್ತದೆ.

ಪೆಟ್ರೋಲ್ ದರ ಏರಿಕೆಯಿಂದ ಎನ್‌ಎಟಿಸಿ ರಚನೆವರೆಗೆ ಯುಪಿಎ ಸರ್ಕಾರದ ಹಲವಾರು ಪ್ರಮುಖ ನೀತಿ-ನಿರ್ಧಾರಗಳನ್ನು ತಡೆಹಿಡಿಯುವ ಮೂಲಕ ಮಮತಾ ಬ್ಯಾನರ್ಜಿ ತನ್ನನ್ನು ನಿರ್ಲಕ್ಷಿಸಬೇಡಿ ಎಂಬ ಸಂದೇಶವನ್ನು ಕಳುಹಿಸುತ್ತಲೇ ಇದ್ದಾರೆ.

ವಿರೋಧಿಸುವುದು ಅವರ ಮೂಲ ಸ್ವಭಾವ, ಜತೆಗೆ ಪಶ್ಚಿಮ ಬಂಗಾಳದಲ್ಲಿ ತನ್ನ ಪಕ್ಷದ ನೆಲೆಯನ್ನು ಉಳಿಸಿಕೊಳ್ಳಲು ಈ ರೀತಿಯ ಕಾಂಗ್ರೆಸ್ ವಿರೋಧದ ಸಂದೇಶವನ್ನು ಕಳುಹಿಸುವುದು ಅವರಿಗೂ ಅನಿವಾರ್ಯವಾಗಿರಲೂಬಹುದು.

ಇದನ್ನು ಅರ್ಥಮಾಡಿಕೊಂಡು ಈ ಒಳಜಗಳ ಬೀದಿಗೆ ಬರದಂತೆ ನೋಡಿಕೊಳ್ಳಬೇಕಾಗಿದ್ದ ಜವಾಬ್ದಾರಿ ಕಾಂಗ್ರೆಸ್ ಪಕ್ಷದ್ದಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿಯೇ ಸಮಾಜವಾದಿ ಪಕ್ಷದ ಜತೆಗಿನ ಸಂಭವನೀಯ ಮೈತ್ರಿಯ ಗಾಳಿಸುದ್ದಿಯನ್ನು ತೇಲಿಬಿಟ್ಟು ಮಮತಾ ಅವರನ್ನು ಇನ್ನಷ್ಟು ಕೆರಳಿಸಿದ್ದರು.

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ರೈಲ್ವೆ ಬಜೆಟ್ ದಿಟ್ಟತನದ ಪ್ರಯತ್ನ ಎನ್ನುವುದರಲ್ಲಿ ಅನುಮಾನ ಇಲ್ಲವೇ ಇಲ್ಲ.  ರೈಲ್ವೆಸಚಿವ ದಿನೇಶ್ ತ್ರಿವೇದಿ ಅವರ ಪಕ್ಷದ ನಾಯಕಿಯಾಗಿರುವ ಮಮತಾ ಬ್ಯಾನರ್ಜಿಯವರೂ ಸೇರಿದಂತೆ ಕಳೆದ ಹತ್ತುವರ್ಷಗಳ ಅವಧಿಯ ಎಲ್ಲ ರೈಲ್ವೆ ಸಚಿವರೂ ಕೇವಲ ಜನಪ್ರಿಯತೆಗಾಗಿ ಪ್ರಯಾಣ ದರವನ್ನು ಹೆಚ್ಚಿಸದೆ ಇಲಾಖೆಯನ್ನು ದಿವಾಳಿ ಸ್ಥಿತಿಗೆ ತಂದು ನಿಲ್ಲಿಸಿದ್ದರು. ತ್ರಿವೇದಿಯವರು ಈ ಜನವಿರೋಧಿ ಪರಂಪರೆಯನ್ನು ಮುರಿದು ಬಜೆಟ್ ಮಂಡಿಸಿದ್ದಾರೆ.

ಸದಾ ಅಭದ್ರತೆಯಿಂದ ನರಳುತ್ತಿರುವ ಮಮತಾ ಬ್ಯಾನರ್ಜಿ  ಸಹೋದ್ಯೋಗಿಯ ಇಂತಹ ದಿಟ್ಟತನವನ್ನು ಸಹಿಸಿಕೊಳ್ಳುವ ಸ್ವಭಾವದವರಲ್ಲ. ಅವರದ್ದು ಆಂತರಿಕ ಪ್ರಜಾತಂತ್ರ ಇಲ್ಲದ ಏಕವ್ಯಕ್ತಿ ಕೇಂದ್ರಿತ ಪಕ್ಷ.ಈ ವಿಷಯದಲ್ಲಿ ಅವರು ಜಯಲಲಿತಾ ಮತ್ತು ಮಾಯಾವತಿ ಪರಂಪರೆಗೆ ಸೇರಿದವರು.

ರೈಲ್ವೆ ಖಾತೆಯೊಂದನ್ನು ಹೊರತುಪಡಿಸಿ ಬೇರೆ ಯಾವ ಖಾತೆಯಲ್ಲಿಯೂ ತಮ್ಮ ಪಕ್ಷದ ಸದಸ್ಯರನ್ನು ಸಂಪುಟ ಸಚಿವರಾಗಲು ಬಿಡದಷ್ಟು ಸಣ್ಣ ಮನಸ್ಸಿನ ನಾಯಕಿ ಮಮತಾ.

ಇವೆಲ್ಲವೂ ಕಾಂಗ್ರೆಸ್ ನಾಯಕರಿಗೆ ಗೊತ್ತಿದ್ದ ಕಾರಣ ಅವರು ಇನ್ನಷ್ಟು ಎಚ್ಚರಿಕೆಯಿಂದ ವರ್ತಿಸಬೇಕಿತ್ತು. ಪ್ರಯಾಣ ದರ ಹೆಚ್ಚಳದಂತಹ ಪ್ರಮುಖ ನಿರ್ಧಾರವನ್ನು ಬಜೆಟ್‌ನಲ್ಲಿ ಪ್ರಕಟಿಸಲು ಹೊರಟಾಗ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷದ ಜತೆ ಸಮಾಲೋಚನೆ ನಡೆಸುವುದು ಬೇಡವೇ? ಅದೂ ಅದೇ ಪಕ್ಷದವರು ರೈಲ್ವೆ ಸಚಿವರಾಗಿದ್ದಾಗ. ಅಂತಹದ್ದೊಂದು ಮಾತುಕತೆ ನಡೆಸಿದ್ದರೆ ಸರ್ಕಾರ ಈಗಿನ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಿರಲಿಲ್ಲ.

ಆದರೆ ಅದು ಮಾಡಿದ್ದೇನು? ಸ್ವಂತ ಬಲದಿಂದ ಮುನ್ಸಿಪಾಲಿಟಿ ಚುನಾವಣೆಯಲ್ಲಿಯೂ ಗೆಲ್ಲಲಾಗದ ದಿನೇಶ್ ತ್ರಿವೇದಿ ಎಂಬ ದುರ್ಬಲ ನಾಯಕನನ್ನು ಮುಂದಿಟ್ಟುಕೊಂಡು ಮಮತಾ ಬ್ಯಾನರ್ಜಿ ವಿರುದ್ಧ ದಾಳಿ ಮಾಡಲು ಹೊರಟಿತು. ಸಂಸದೀಯ ನಡವಳಿಕೆಗಳ ಪ್ರಕಾರ ಕೇಂದ್ರ ಸಂಪುಟದ ಸಚಿವರು ತಮ್ಮ ಖಾತೆಯ ನಿರ್ವಹಣೆಯಲ್ಲಿ ಪಕ್ಷದ ನಾಯಕರ ಸಲಹೆಯನ್ನು ಪಡೆಯಬೇಕಾಗಿಲ್ಲ ಎನ್ನುವುದು ನಿಜ.

ಆದರೆ ಒಂದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿನ ಅಭ್ಯರ್ಥಿಯ ಆಯ್ಕೆಗಾಗಿಯೂ ಸೋನಿಯಾ ಗಾಂಧಿಯವರ ಮನೆ ಬಾಗಿಲು ತಟ್ಟಬೇಕಾಗಿರುವ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ಮಿತ್ರಪಕ್ಷದಿಂದ ಇಷ್ಟೊಂದು ವಿಶಾಲ ಮನಸ್ಸನ್ನು ಹೇಗೆ ನಿರೀಕ್ಷಿಸಲು ಸಾಧ್ಯ?

 ಈಗಿನ ಬಿಕ್ಕಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರ ತಿಕ್ಕಲುತನದ ಕೊಡುಗೆಯೂ ದೊಡ್ಡದು. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವ ಮೊದಲು ಈ ತಿಕ್ಕಲುತನದ ಪರಿಣಾಮವನ್ನು ಅವರು ನಿರ್ವಹಿಸಿದ ಖಾತೆಗಳು ಮತ್ತು ಪಕ್ಷ ಮಾತ್ರ ಅನುಭವಿಸುತ್ತಿತ್ತು, ಈಗ ಇಡೀ ದೇಶ  ಅನುಭವಿಸುವಂತಾಗಿದೆ. ಮತ್ತೆ ಉಳಿದ ಮೂವರು ಕುಮಾರಿಯರಿಗೆ ಹೋಲಿಸುವುದಾದರೆ ಅವರೆಲ್ಲರಿಗಿಂತ ಮಮತಾ ಬ್ಯಾನರ್ಜಿ ಪ್ರಾಮಾಣಿಕರು ಮತ್ತು ಸರಳ ಜೀವಿ.

ಈ ಎರಡು ಗುಣಗಳನ್ನು ಸನ್ಯಾಸಿನಿ ಎಂದು ಹೇಳಿಕೊಳ್ಳುತ್ತಿರುವ ಉಮಾಭಾರತಿಯವರಲ್ಲಿಯೂ ಕಾಣಲಾಗದು, ಜಯಲಲಿತಾ ಮತ್ತು ಮಾಯಾವತಿ ಅವರಿಗೆ ಅಂಟಿಕೊಂಡಿರುವ ಭ್ರಷ್ಟಾಚಾರದ ಕಳಂಕ ಮತ್ತು ಐಷಾರಾಮಿ ಜೀವನದ ಶೋಕಿಗಳು ಮಮತಾ ಬ್ಯಾನರ್ಜಿ ಅವರಿಗಿಲ್ಲ. ರಾಜಕೀಯದಲ್ಲಿರುವ ಹೆಣ್ಣು-ಗಂಡು ಎಲ್ಲರನ್ನೂ ಸೇರಿಸಿ ಹೇಳುವುದಾದರೆ ಸರಳ ಜೀವನದ ವಿಷಯದಲ್ಲಿ ಮಮತಾ ಬ್ಯಾನರ್ಜಿಯವರಿಗೆ ಮತ್ತೊಬ್ಬರು ಸಾಟಿ ಇಲ್ಲ.

ಆದರೆ ಇವುಗಳ ಜತೆ ಮಾಯಾವತಿ ಮತ್ತು ಜಯಲಲಿತಾ ನಾಯಕಿಯರು ಬಿಗಿಯಾದ ಆಡಳಿತಕ್ಕಾಗಿಯೂ ಖ್ಯಾತಿ ಹೊಂದಿದವರು, ಆ ಸಾಮರ್ಥ್ಯ ಮಮತಾ ಬ್ಯಾನರ್ಜಿ ಅವರಲ್ಲಿಲ್ಲ. ಪಶ್ಚಿಮ ಬಂಗಾಳದ ಜನತೆ ಎಡಪಕ್ಷಗಳ ಮೇಲಿನ ಸಿಟ್ಟಿನಿಂದ ಮಮತಾ ಬ್ಯಾನರ್ಜಿ ಅವರ ಪಕ್ಷವನ್ನು ಆಯ್ಕೆ ಮಾಡಿದ್ದಾರೆ, ಬೇರೆ ನಿರೀಕ್ಷೆಗಳೂ ಅವರಿಗೂ ಇದ್ದಿರಲಾರದು.

ಎಡಪಕ್ಷಗಳನ್ನು ಅಭಿವೃದ್ಧಿ ವಿರೋಧಿಗಳೆನ್ನುವುದಾದರೆ ಮಮತಾ ಬ್ಯಾನರ್ಜಿ ಯಾವ ಅಭಿವೃದ್ಧಿಯ ಹರಿಕಾರರು? ಅಭಿವೃದ್ಧಿಪರ ನಿಲುವು ಅವರ ಯಾವ ಮಾತು-ಕೃತಿಗಳಲ್ಲಿ ವ್ಯಕ್ತವಾಗಿದೆ? ಮೂರು ಬಾರಿ ರೈಲ್ವೆ ಸಚಿವರಾಗಿ, ಒಂದು ಬಾರಿ ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ಮಮತಾ ಬ್ಯಾನರ್ಜಿ ಮಾಡಿರುವ ಸಾಧನೆಗಳು ಯಾರ ನೆನಪಿನಲ್ಲಾದರೂ ಇವೆಯೇ?

ಮಮತಾ ಬ್ಯಾನರ್ಜಿ ಅವರು ಬುದ್ದಿವಂತೆಯಾಗಿದ್ದರೆ, ಪಶ್ಚಿಮ ಬಂಗಾಳದ ಜನತೆಯ ಬಗ್ಗೆ ಕಾಳಜಿ ಹೊಂದಿದ್ದರೆ ಕೇಂದ್ರ ಸರ್ಕಾರದ ಜತೆ ಕಾಲು ಕೆರೆದು ಜಗಳ ಮಾಡುತ್ತಿರಲಿಲ್ಲ. ಕನಿಷ್ಠ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಕಾರ್ಯಶೈಲಿಯನ್ನಾದರೂ ಅವರು ಅನುಸರಿಸಬಹುದಿತ್ತು.

ಎನ್‌ಡಿಎ ನಾಯಕತ್ವ ಹೊಂದಿರುವ ಬಿಜೆಪಿಯ ಎಲ್ಲ ನೀತಿ-ನಿರ್ಧಾರಗಳನ್ನು ನಿತೀಶ್‌ಕುಮಾರ್ ಈಗಲೂ ಒಪ್ಪುವುದಿಲ್ಲ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಬಿಹಾರಕ್ಕೆ ಕಾಲಿಡಲು ಅವರು ಬಿಟ್ಟಿಲ್ಲ. ಆದರೆ ಅದೇ ವೇಳೆ ಎನ್‌ಡಿಎ ಜತೆ ನೇರಾನೇರ ಗುದ್ದಾಟವನ್ನೂ ಅವರು ನಡೆಸುತ್ತಿಲ್ಲ.

ವಿರೋಧಪಕ್ಷವಾದ ಕಾಂಗ್ರೆಸ್ ಜತೆಯಲ್ಲಿಯೂ ಅವರು ಸಂಘರ್ಷಕ್ಕೆ ಇಳಿಯದೆ ರಾಜ್ಯದ ಅಭಿವೃದ್ಧಿಗೆ ಬೇಕಾದ ಕೇಂದ್ರದ ನೆರವನ್ನು ಉಪಾಯದಿಂದ ಪಡೆದುಕೊಂಡು ಸದ್ದಿಲ್ಲದಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.

ಅಭಿವೃದ್ಧಿಯ ಮಾನದಂಡದಲ್ಲಿ ಬಿಹಾರಕ್ಕಿಂತ ಪಶ್ಚಿಮ ಬಂಗಾಳವೇನೂ ಬಹಳ ಮುಂದಿಲ್ಲ. ಅಲ್ಲಿನ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆನ್ನುವ ತಮ್ಮ ಹಳೆಯ ಬೇಡಿಕೆಯನ್ನು ಮಮತಾ ಬ್ಯಾನರ್ಜಿಯವರೇ ಮರೆತುಬಿಟ್ಟಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿಯೂ ಅದರ ಉಲ್ಲೇಖ ಇದ್ದಂತಿಲ್ಲ. ಇಂತಹ ವಿಷಯಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷದ ಜತೆ ಚೌಕಾಶಿ ನಡೆಸಿದ್ದರೆ ಪಶ್ಚಿಮ ಬಂಗಾಳದ ಜನರಾದರೂ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದರು.

ರಾಜಕೀಯವಾಗಿ ಪ್ರಜ್ಞಾವಂತರಾಗಿರುವ ಆ ರಾಜ್ಯದ ಜನತೆ ಮಮತಾ ಬ್ಯಾನರ್ಜಿ ಅವರ ಈಗಿನ ತಿಕ್ಕಲು ನಡವಳಿಕೆಯನ್ನು ಬಹಳ ದಿನ ಸಹಿಸಿಕೊಳ್ಳಲಾರರು. ಇದರಿಂದಾಗಿ ಎಡಪಕ್ಷಗಳು ಪೂರ್ಣವಾಗಿ ಐದು ವರ್ಷ ವಿರೋಧಪಕ್ಷದ ಸ್ಥಾನದಲ್ಲಿಯೇ ಕೂರಬೇಕಾದ ಪರಿಸ್ಥಿತಿ ಇರಲಾರದು.

ಮಮತಾ ಬ್ಯಾನರ್ಜಿ ಅವರಿಂದ ಬಿಡುಗಡೆ ಪಡೆಯಲು ಕಾಂಗ್ರೆಸ್ ಪಕ್ಷ ಹೂಡಿರುವ ತಂತ್ರ ಕೂಡಾ ಅಷ್ಟೇ ಆತ್ಮಹತ್ಯಾಕಾರಿಯಾದುದು. ಯಾವ ಪಕ್ಷದ ಬಲದಿಂದ ಕಾಂಗ್ರೆಸ್ ಪಕ್ಷ ಮಮತಾ ಬ್ಯಾನರ್ಜಿ ಅವರನ್ನು ಎದುರು ಹಾಕಿಕೊಳ್ಳಲು ಹೊರಟಿದೆಯೋ ಆ ಪಕ್ಷ ಇನ್ನೂ ಅಪಾಯಕಾರಿ.

ಬ್ಯಾನರ್ಜಿ ಮೂಲತಃ ಕಾಂಗ್ರೆಸಿನವರು, ಒಂದು ರೀತಿಯಲ್ಲಿ ಅವರು ಅರ್ಧ ಕಾಂಗ್ರೆಸ್. ಅಷ್ಟು ಮಾತ್ರವಲ್ಲ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡಮಟ್ಟದ ನಿರೀಕ್ಷೆಗಳೂ ಇಲ್ಲ. ಅಲ್ಲಿ ಅದು ಆಡಳಿತ ಪಕ್ಷವನ್ನು ಹಿಂಬಾಲಿಸಿಕೊಂಡು ಇರುವುದರಿಂದ ಅದಕ್ಕೆ ನಷ್ಟವೂ ಇಲ್ಲ.

ಆದರೆ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಅಷ್ಟು ಸರಳವಾಗಿಲ್ಲ. ಕಾಂಗ್ರೆಸ್ ವಿರೋಧಿ ರಾಜಕಾರಣವನ್ನೇ ಮಾಡುತ್ತಾ ಬಂದ ಮುಲಾಯಂಸಿಂಗ್ ಯಾದವ್ ಬದಲಾಗುವುದು ಸಾಧ್ಯವೇ ಇಲ್ಲ.

ಇಷ್ಟು ಮಾತ್ರವಲ್ಲ ಉತ್ತರಪ್ರದೇಶವನ್ನು ಮರಳಿ ಗೆಲ್ಲಬೇಕೆಂಬ ಆಸೆಯನ್ನು ಕಾಂಗ್ರೆಸ್ ಹೇಗೆ ಬಿಟ್ಟುಕೊಟ್ಟಿಲ್ಲವೋ ಹಾಗೆ ತೃತೀಯ ರಂಗ ರಚನೆಯ ಪ್ರಯತ್ನವನ್ನು ಮುಲಾಯಂಸಿಂಗ್ ಯಾದವ್ ಅವರೂ ಕೈಬಿಟ್ಟಿಲ್ಲ. ಈ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಎಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ.

ಈಗಿನ ಬಿಕ್ಕಟ್ಟು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳಿಗಷ್ಟೇ ಸೀಮಿತವಾಗಿ ಕೊನೆಗೊಳ್ಳುವಂತಹದ್ದಲ್ಲ. ಈಗಿನದ್ದು ಮಾತ್ರವಲ್ಲ ಬಹುಶಃ ಮುಂದಿನದ್ದು ಕೂಡಾ ಮೈತ್ರಿಕೂಟದ ಯುಗ.

ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಯಾವ ಪಕ್ಷ ಕೂಡಾ ಸರಳ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಲಾರದು. ಈ ವಾಸ್ತವವನ್ನು ಒಪ್ಪಿಕೊಂಡರೆ ಎಲ್ಲರಿಗೂ ಕ್ಷೇಮ.

ಬದಲಾಗಿರುವ ಕಾಲಕ್ಕೆ ತಕ್ಕ ಹಾಗೆ ಪಕ್ಷಗಳು ಮುಖ್ಯವಾಗಿ ಮೈತ್ರಿಕೂಟದ ನೇತೃತ್ವ ವಹಿಸಿರುವ ಪಕ್ಷ ತಮ್ಮ ರಾಜಕೀಯ ನಡವಳಿಕೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

ಏಕಪಕ್ಷದ ಆಡಳಿತ ಸರ್ವಾಧಿಕಾರಕ್ಕೆ ದಾರಿಮಾಡಿಕೊಟ್ಟಂತೆ ಬಹುಪಕ್ಷಗಳಿಂದ ಕೂಡಿದ ಮೈತ್ರಿಕೂಟ  ಸದಾ ಕೇಂದ್ರ ನಾಯಕತ್ವವನ್ನು ದುರ್ಬಲಗೊಳಿಸಲು  ಪ್ರಯತ್ನಿಸುತ್ತಿರುತ್ತದೆ. ಮೈತ್ರಿಕೂಟದ ನಾಯಕತ್ವ ವಹಿಸಿದ್ದ ಪಕ್ಷ ದುರ್ಬಲವಾದಷ್ಟು ತಾವು ಸುರಕ್ಷಿತ ಎಂಬ ಭಾವನೆ ಪ್ರಾದೇಶಿಕ ಪಕ್ಷಗಳಲ್ಲಿದೆ.

ಯಾವ ಪ್ರಾದೇಶಿಕ ಪಕ್ಷ ಕೂಡಾ ಬಲಿಷ್ಠವಾದ ಕೇಂದ್ರ ಸರ್ಕಾರವನ್ನು ಬಯಸುವುದಿಲ್ಲ, ಅಂತಹ ಸರ್ಕಾರ ತಮ್ಮ ಹಿತಾಸಕ್ತಿಗೆ ಮಾರಕ ಎಂದು ಅವುಗಳು ಅನುಭವದ ಬಲದಿಂದ ತಿಳಿದುಕೊಂಡಿದೆ.

ಆದರೆ ಇಂತಹ ದುರ್ಬಲ ಕೇಂದ್ರ ಸರ್ಕಾರ ದೇಶದ ಹಿತಾಸಕ್ತಿಗೆ ಮಾರಕ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಮಾತ್ರವಲ್ಲ ದೇಶ ಕೂಡಾ ಎದುರಿಸಲಿರುವ ಬಹುದೊಡ್ಡ ಸವಾಲು ಇದು.

Sunday, March 18, 2012

ಕಾಲವನ್ನು ಮೀರಿ ಯೋಚಿಸಿದ್ದ ದಾರ್ಶನಿಕ ಅರಸು

`ಕಾಲದ ಜತೆ ಹೆಜ್ಜೆ ಹಾಕುವಾಗ ಒಂದಷ್ಟು ಹೆಜ್ಜೆ ಮುಂದೆ ಹೋಗಿಬಿಟ್ಟೆನೇನೋ ಎಂದು ಅನಿಸುತ್ತಿದೆ~ ಎಂದು ಖ್ಯಾತ ರಾಜಕೀಯ ಚಿಂತಕ ರಾಮಮನೋಹರ ಲೋಹಿಯಾ ಹೇಳಿದ್ದರು. ತನ್ನನ್ನು ಸಮಾಜವಾದಿ ಎಂದು ಘೋಷಿಸಿಕೊಳ್ಳದೆ  ಲೋಹಿಯಾ ಅವರ ಬಹಳಷ್ಟು ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಬದುಕನ್ನು ನೋಡಿದಾಗಲೂ ಹೀಗೆಯೇ ಅನಿಸುತ್ತಿದೆ. ಪ್ರಾದೇಶಿಕ ಪಕ್ಷಗಳು ದೇಶದ ರಾಜಕಾರಣದ ದಿಕ್ಕು-ದೆಸೆಯನ್ನು ನಿರ್ಧರಿಸುವಷ್ಟು ನಿರ್ಣಾಯಕ ಪಾತ್ರ ವಹಿಸುತ್ತಿರುವ ಈ ಸಂದರ್ಭದಲ್ಲಿ ದೇವರಾಜ ಅರಸು ಪ್ರಾದೇಶಿಕ ರಾಜಕಾರಣದ ಮೂಲಕ ರಾಷ್ಟ್ರರಾಜಕಾರಣ ಪ್ರವೇಶಿಸಿದ್ದರೆ ಅವರ ಬದುಕು ದುರಂತದಲ್ಲಿ ಕೊನೆಗೊಳ್ಳುತ್ತಿರಲಿಲ್ಲವೇನೋ?
ಇದಕ್ಕಾಗಿ ಅರಸು ಅವರು 10-15ವರ್ಷಗಳ ನಂತರ ಹುಟ್ಟಬೇಕಿತ್ತು. ಅವರು ದೆಹಲಿ ಕಡೆ ಕತ್ತುಚಾಚಿದ್ದಾಗ ದೇಶದಲ್ಲಿ ಅದಕ್ಕೆ ಪೂರಕವಾದ ರಾಜಕೀಯ ವಾತಾವರಣ ಇರಲಿಲ್ಲ. ತುರ್ತುಪರಿಸ್ಥಿತಿಯ ನಂತರದ ಜನತಾ ಪ್ರಯೋಗದ ಕೇಂದ್ರ ಸ್ಥಾನದಲ್ಲಿದ್ದ ಕಾಂಗ್ರೆಸ್ ವಿರೋಧಿ ಗುಂಪಲ್ಲಿ ದೆಹಲಿ ಕೇಂದ್ರಿತ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಅವರ‌್ಯಾರೂ ಪ್ರಾದೇಶಿಕ ರಾಜಕಾರಣದ ಉತ್ಪನ್ನಗಳಾಗಿರಲಿಲ್ಲ. ಆದ್ದರಿಂದ ಪ್ರಾದೇಶಿಕ ನಾಯಕನಾಗಿ ರಾಷ್ಟ್ರರಾಜಕಾರಣದಲ್ಲಿ ಕಾಣಿಸಿಕೊಳ್ಳುವ ಅವರ ಮಹತ್ವಾಕಾಂಕ್ಷೆ ಆ ಕಾಲವನ್ನು ಮೀರಿದ ಹೆಜ್ಜೆಯಾಗಿತ್ತು. ಇದು ಅರಸು ಅವರಿಗೂ ಗೊತ್ತಿತ್ತು. ಅವರ ಕೊನೆಯ ದೆಹಲಿ ಭೇಟಿಯ ಸಂದರ್ಭದಲ್ಲಿ (1982 ಮೇ, 25) ಆಗ ದೆಹಲಿಯ ವರದಿಗಾರರಾಗಿದ್ದ ಪ್ರಜಾವಾಣಿಯ ಡಿ.ವಿ.ರಾಜಶೇಖರ್ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಕೆ.ವಿ.ರಮೇಶ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಅರಸು ಇದನ್ನು ಒಪ್ಪಿಕೊಂಡಿದ್ದರು. `ವೈಯಕ್ತಿಕವಾಗಿ ಹೇಳುವುದಾದರೆ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯ ಸೊನ್ನೆ~ ಎಂದು ಪ್ರಶ್ನೆಯೊಂದಕ್ಕೆ ಅರಸು ಉತ್ತರಿಸಿದ್ದರು.
ದೇಶದಲ್ಲಿ ಪ್ರಾದೇಶಿಕ ರಾಜಕಾರಣವನ್ನು ಕೇಂದ್ರವಾಗಿಟ್ಟುಕೊಂಡ ಮೈತ್ರಿ ರಾಜಕಾರಣ ಪ್ರಾರಂಭವಾಗಿದ್ದು 1989ರ ನಂತರದ ದಿನಗಳಲ್ಲಿ. ಅದು ಪೂರ್ಣಪ್ರಮಾಣದಲ್ಲಿ ಬೆಳೆದದ್ದು 1996ರ ನಂತರ. ಅದರ ಫಲವಾಗಿಯೇ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಾಗಿದ್ದು. ಇದಕ್ಕೆ ನಿಧಾನವಾಗಿ ದುರ್ಬಲಗೊಳ್ಳುತ್ತಾ ಬಂದ ಕಾಂಗ್ರೆಸ್ ಪಕ್ಷ, ಆ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾ ಬಂದ ಪ್ರಾದೇಶಿಕ ಪಕ್ಷಗಳು, ಮಂಡಲ ವರದಿಯ ಜಾರಿಯ ನಂತರ ಹಿಂದುಳಿದ ಜಾತಿಗಳಲ್ಲಿ ಮೂಡಿದ ರಾಜಕೀಯ ಜಾಗೃತಿ-ಇವೆಲ್ಲ ಕಾರಣ. ದೇವರಾಜ ಅರಸು ಬದುಕಿದ್ದರೆ ಈ ಎಲ್ಲ ಬೆಳವಣಿಗೆಗಳು ಅವರ ರಾಜಕೀಯಕ್ಕೆ ಸಹಕಾರಿಯಾಗುತ್ತಿತ್ತು. ಆದರೆ ಆ ಅವಕಾಶವನ್ನು ಬಳಸಿಕೊಳ್ಳಲು ಅರಸು ಬದುಕುಳಿಯಲಿಲ್ಲ ಎನ್ನುವುದು ವಿಷಾದನೀಯ.
ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇಲ್ಲದೆ ಸೊರಗಿದ್ದ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ತಂದು ಕೊಡುವ ಅವರ ಯೋಚನೆ ಕೂಡಾ ಆ ಕಾಲವನ್ನು ಮೀರಿದ್ದಾಗಿತ್ತು. ಮಂಡಲ್ ವರದಿ ಅನುಷ್ಠಾನದ ಮೂಲಕ ಪ್ರಧಾನಿ ವಿ.ಪಿ.ಸಿಂಗ್ ರಾಷ್ಟ್ರಮಟ್ಟದಲ್ಲಿ ಆ ಯೋಚನೆ ಮಾಡಿದ್ದು ಹಾವನೂರು ವರದಿ ಜಾರಿಯಾದ ಹದಿನೈದು ವರ್ಷಗಳ ನಂತರ ಎನ್ನುವುದನ್ನು ಮರೆಯಬಾರದು. ಅರಸು ಕೇವಲ ಶಕ್ತಿರಾಜಕಾರಣವನ್ನು ಉದ್ದೇಶವಾಗಿಟ್ಟುಕೊಂಡ ಒಬ್ಬ ನಾಯಕರಾಗಿರಲಿಲ್ಲ ಅವರಲ್ಲೊಬ್ಬ ದಾರ್ಶನಿಕ ಇದ್ದ. ಅವರಿಗೆ ನಿಖರವಾದ ರಾಜಕೀಯ ಮತ್ತು ಸಾಮಾಜಿಕ ಮುನ್ನೋಟಗಳಿದ್ದವು. ರಾಜಕೀಯ ಅಧಿಕಾರ ಯಾಕೆ ಬೇಕು ಮತ್ತು ಅದರ ಮೂಲಕ ತಾವು ಮಾಡಬೇಕಾಗಿರುವುದು ಏನು ಎಂಬ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆ ಇತ್ತು.
1972ರ ವಿಧಾನಸಭಾ ಚುನಾವಣೆಗೆ ಪೂರ್ವದಲ್ಲಿಯೇ ಅದಕ್ಕೊಂದು ಭೂಮಿಕೆಯ ಸಿದ್ಧತೆಯಲ್ಲಿ ಅವರು ತೊಡಗಿದ್ದರು. ರಾಜ್ಯದಲ್ಲಿದ್ದ ಜಾತಿ ಸಮೀಕರಣವನ್ನು ಬದಲಾಯಿಸದೆ ಇದ್ದರೆ ತಾವು ಬಯಸಿರುವ ಪರಿವರ್ತನೆಯನ್ನು ಸಮಾಜದಲ್ಲಿ ತರಲು ಸಾಧ್ಯ ಇಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ಇದಕ್ಕಾಗಿ ಅಲ್ಲಿಯವರೆಗೆ ನಿರ್ಲಕ್ಷಿತರಾಗಿ ಮೂಲೆ ಸೇರಿದ್ದ ಕೆಳಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಇವೆಲ್ಲವನ್ನೂ ಸರಿಯಾದ ತಯಾರಿಯೊಂದಿಗೆ ಮಾಡಿ ಸಮರ್ಥರನ್ನು ಹುಡುಕಾಡುವಷ್ಟು ಸಮಯ ಅವರಿಗೆ ಇರಲಿಲ್ಲ. ಆದ್ದರಿಂದ ಕಣ್ಣಿಗೆ ಬಿದ್ದ ಹಿಂದುಳಿದ ಜಾತಿಗಳ ನಾಯಕರನ್ನು ಹುಡುಕಾಡಿ ತೆಗೆದು ಟಿಕೆಟ್ ಕೊಟ್ಟು ಜತೆಗೆ ದುಡ್ಡು ಕೊಟ್ಟು ಗೆಲ್ಲಿಸಿದರು. ಅಭ್ಯರ್ಥಿಗಳನ್ನು ಆರಿಸುವಾಗ ಈ ನಾಯಕರಿಗೆ ಇರುವ ಅರ್ಹತೆಯನ್ನು ಪರೀಕ್ಷೆಗೊಳಪಡಿಸುವಷ್ಟು ಪುರುಸೊತ್ತು ಅವರಿಗೆ ಇರಲಿಲ್ಲ.
 ಹಠಾತ್ತನೆ ಶಾಸಕರಾದವರಿಗೆ ಅರಸು ಅವರಿಗಿದ್ದ ರಾಜಕೀಯ ಚಿಂತನೆ, ಸಾಮಾಜಿಕ ಕಳಕಳಿ ಇಲ್ಲವೇ ದೂರದೃಷ್ಟಿ ಯಾವುದೂ ಇರಲಿಲ್ಲ. ಅವರಲ್ಲಿ ಬಹಳಷ್ಟು ಮಂದಿ ಮೂಲತಃ ಜಾತಿವಾದಿಗಳು, ಆಳದಲ್ಲಿ ಸ್ವಾರ್ಥಿಗಳು ಮತ್ತು ದುರ್ಬಲ ಮನಸ್ಸಿನವರಾಗಿದ್ದರು. ಅವರಲ್ಲಿ ಯಾರೂ ಹೋರಾಟದ ಮೂಲಕ ನಾಯಕರಾಗಿ ರೂಪುಗೊಂಡವರಲ್ಲ.
ಈ ಕಾರಣದಿಂದಾಗಿಯೇ ಮುಂದಿನ ದಿನಗಳಲ್ಲಿ ಅವರಲ್ಲಿ ಹೆಚ್ಚಿನವರು ಅವಕಾಶವಾದಿಗಳಾಗಿ, ಪಕ್ಷಾಂತರಿಗಳಾಗಿ ಬೆಳೆದರೇ ಹೊರತು ಅರಸು ಅವರಂತೆ ಪರಿವರ್ತನೆಯ ಹರಿಕಾರರಾಗಲಿಲ್ಲ. ಅರಸು ಅವರ ಈ `ಅವಸರದ ಕ್ರಾಂತಿ~ವಿಫಲಗೊಳ್ಳಲು ಇದು ಮುಖ್ಯ ಕಾರಣ. ಕೊನೆಗಾಲದಲ್ಲಿ ಅರಸು ಅವರು ಇಂದಿರಾ ಕಾಂಗ್ರೆಸ್‌ನಿಂದ ದೂರವಾಗಿ ರಾಜಕೀಯವಾಗಿ ಏಕಾಂಗಿಯಾದಾಗ ಅವರು ಬೆಳೆಸಿದವರಲ್ಲಿ ಯಾರೂ ಅವರ ಬೆಂಬಲಕ್ಕೆ ನಿಲ್ಲಲೇ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಮೀಸಲಾತಿ, ಭೂಸುಧಾರಣೆ ಮೊದಲಾದ ಅರಸು ಅವರ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ನಂತರದ ಸರ್ಕಾರಗಳು ತಿರುಚಿ ಸಾಯಿಸಿದಾಗ ಈ ನಾಯಕರಲ್ಲಿ ಯಾರೂ ಅದರ ವಿರುದ್ದ ದನಿ ಎತ್ತಲಿಲ್ಲ.
1995ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ದೇವೇಗೌಡರು ಕೈಗಾರಿಕೆಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡುವಂತೆ ಭೂ ಸುಧಾರಣೆಗೆ ಮೊದಲ ತಿದ್ದುಪಡಿಯನ್ನು ತಂದರು. ಈ ತಿದ್ದುಪಡಿ ಮೊದಲು ಕೃಷಿ ಆಧರಿತ ಕೈಗಾರಿಕೆಗಳಿಗಾಗಿ ನಡೆಯುವ ಭೂಸ್ವಾಧೀನಕ್ಕೆ ಸೀಮಿತವಾಗಿದ್ದರೂ ನಂತರದ ದಿನಗಳಲ್ಲಿ ಅದನ್ನು ಇನ್ನಷ್ಟು ಸಡಿಲಗೊಳಿಸಲಾಯಿತು.

ಕೃಷಿ ಭೂಮಿ ಪಡೆಯಲು ನಿಗದಿಗೊಳಿಸಲಾಗಿದ್ದ ಆದಾಯದ ಮಿತಿ ಮತ್ತು ಒಬ್ಬ ವ್ಯಕ್ತಿ ಹೊಂದಿರಬಹುದಾದ ಜಮೀನಿನ ಗರಿಷ್ಠಮಿತಿಗಳೆರಡನ್ನೂ ತಿದ್ದುಪಡಿ ಮೂಲಕ ಹೆಚ್ಚಿಸಲಾಯಿತು. ಇದರಿಂದಾಗಿ ಅರಸು ಅವರ ಕಲ್ಪನೆಯ ಭೂಸುಧಾರಣೆಯ ಅಸ್ಥಿಪಂಜರವಷ್ಟೇ ಈಗ ಉಳಿದಿದೆ. ಹೀಗೆ ಅರಸು ನಂತರ ಬಂದ ಸರ್ಕಾರಗಳು ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ಮೇಲೆ ತಿದ್ದುಪಡಿಗಳನ್ನು ತಂದು ಕೆಡಿಸಿದಾಗ ಅರಸು ಅವರ ಅನುಯಾಯಿಗಳಲ್ಲಿ ಕೆಲವರು ಆಡಳಿತ ಪಕ್ಷದಲ್ಲಿ, ಇನ್ನು ಕೆಲವರು ವಿರೋಧಪಕ್ಷದಲ್ಲಿದ್ದರು.

ಯಾರಿಂದಲೂ ಒಂದು ಸಂಘಟಿತ ಪ್ರತಿರೋಧ ವ್ಯಕ್ತವಾಗಲಿಲ್ಲ. ರಾಜ್ಯದಲ್ಲಿರುವ ಶಾಶ್ವತ ಹಿಂದುಳಿದ ಜಾತಿಗಳ ಆಯೋಗವನ್ನು ಕೂಡಾ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಕಾಟಾಚಾರಕ್ಕಷ್ಟೆ ಉಳಿಸಿಕೊಂಡು ಹೋಗಿವೆ. ವಕೀಲ ಸಿ.ಎಸ್.ದ್ವಾರಕನಾಥ್ ಆಯೋಗದ ಅಧ್ಯಕ್ಷರಾಗಿದ್ದಾಗ ಈಗಿನ ಬಿಜೆಪಿ ಸರ್ಕಾರ ಅವರಿಗೆ ನಿರಂತರವಾಗಿ ಕಿರುಕುಳ ಕೊಟ್ಟಿತು. ಅವರು ತಯಾರಿಸಿದ್ದ ವರದಿಯ ಅನುಷ್ಠಾನ ಬಿಡಿ, ಯಾರಾದರೂ ಅದರ ಪುಟ ತಿರುವಿ ನೋಡಿದ್ದಾರೆಂದು ಅನಿಸುವುದಿಲ್ಲ. ಪ್ರೊ.ರವಿವರ್ಮಕುಮಾರ್ ಸಲ್ಲಿಸಿದ್ದ ವರದಿಗೂ ಇದೇ ಗತಿ ಆಗಿದೆ. ಅರಸು ಗರಡಿಯಲ್ಲಿ ಪಳಗಿದವರು, ತಮ್ಮನ್ನು `ಅಹಿಂದ~ ನಾಯಕನೆಂದು ಬಿಂಬಿಸಿಕೊಳ್ಳುವ ನೂರಾರು ನಾಯಕರು ನಮ್ಮಲ್ಲಿ ಇದ್ದಾರೆ. ಯಾರಾದರೂ ಪ್ರತಿಭಟನೆಯ ಸೊಲ್ಲು ಎತ್ತಿದ್ದಾರೆಯೇ?
ಅನುಯಾಯಿಗಳನ್ನು ಬಿಟ್ಟುಬಿಡಿ, ಯಾರಿಗಾಗಿ ಅವರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದರೋ ಆ ಫಲಾನುಭವಿಗಳು ಕೂಡಾ ಅರಸು ಅವರ ಪರವಾಗಿ ನಿಲ್ಲಲಿಲ್ಲ. ಇದಕ್ಕೆ ಕೂಡಾ ಅರಸು ಅವರ ಕಾಲವನ್ನು ಮೀರಿದ ಚಿಂತನೆ ಕಾರಣ. ಅರಸು ಕ್ರಾಂತಿಯ ಫಲಾನುಭವಿಗಳ ಪಾಲಿಗೆ ಬಯಸಿದ್ದು ಮಾತ್ರವಲ್ಲ ಬಯಸದೆ ಇದ್ದದ್ದು ಕೂಡಾ ನಿರಾಯಾಸವಾಗಿ ಬಂತು. ಕಾಗೋಡು ಸತ್ಯಾಗ್ರಹವೊಂದನ್ನು ಹೊರತುಪಡಿಸಿ ಭೂ ಒಡೆತನಕ್ಕಾಗಿ ರಾಜ್ಯದಲ್ಲಿ ಎಲ್ಲಿಯೂ ದೊಡ್ಡಮಟ್ಟದ ಹೋರಾಟಗಳೇ ನಡೆದಿಲ್ಲ.
ಕೇಂದ್ರ ಸರ್ಕಾರ ಮಂಡಲ ವರದಿ ಅನುಷ್ಠಾನಕ್ಕೆ ತಂದಾಗ ಪರ-ವಿರೋಧವಾಗಿ ನಡೆದ ಚಳವಳಿಗಳೇನೂ ಹಾವನೂರು ಆಯೋಗದ ವರದಿ ಅನುಷ್ಠಾನದ ಹಿಂದೆಮುಂದೆ ನಡೆದಿರಲಿಲ್ಲ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಮೀಸಲಾತಿ ಇರಬಹುದು.
ಗೇಣಿದಾರರಿಗೆ ಸಿಕ್ಕ ಭೂ ಒಡೆತನ ಇರಬಹುದು, ಮಲಹೊರುವ ಪದ್ದತಿಯ ನಿಷೇಧ, ಜೀತ ನಿರ್ಮೂಲನೆ, ಋಣ ಪರಿಹಾರದ ಕಾರ್ಯಕ್ರಮಗಳಿರಬಹುದು. ಇವೆಲ್ಲವೂ ಬೆವರು-ಕಣ್ಣೀರು ಸುರಿಸದೆ ಸುಲಭದಲ್ಲಿ ಲಾಟರಿ ಹೊಡೆದಂತೆ ಸಿಕ್ಕಿಬಿಟ್ಟವು. ಈ ರೀತಿ ಸುಲಭದಲ್ಲಿ, ಪುಕ್ಕಟೆಯಾಗಿ ಸಿಕ್ಕರೆ ಅದರ ಮಹತ್ವ ಗೊತ್ತಾಗುವುದಿಲ್ಲ. ಪುಕ್ಕಟೆಯಾಗಿ ಪಡೆದದ್ದನ್ನು ಕಳೆದುಕೊಂಡರೂ ಯಾರಿಗೂ ಏನೂ ಅನಿಸುವುದಿಲ್ಲ, ಆದರೆ ದುಡಿದು ಗಳಿಸಿದ್ದನ್ನು ಕಳೆದುಕೊಂಡರೆ ಹೊಟ್ಟೆ ಉರಿಯುತ್ತದೆ ಅಲ್ಲವೇ ಹಾಗೆ.

ಅರಸು ಅವತಾರಪುರುಷನಂತೆ ಕಾಣಿಸಿಕೊಂಡು ಕೇಳಿದ್ದು-ಕೇಳದಿರುವುದು ಎಲ್ಲವನ್ನೂ ಕೊಟ್ಟು ಮಿಂಚಿ ಮರೆಯಾಗಿ ಹೋದ ಕಾರಣ ಅವರಿಂದ ಲಾಭಪಡೆದವರಿಗೂ ಅವರನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಬಹಳ ಮಂದಿಗೆ ಅದು ಬೇಕಾಗಿಯೂ ಇಲ್ಲ. ಇದು ನಿಜವಾದ ದುರಂತ.
ಇತ್ತೀಚೆಗೆ ನಾನು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ನಡೆಸಿದ್ದ ವಿಚಾರಸಂಕಿರಣಕ್ಕೆ ಹೋಗಿದ್ದೆ. ನಾನು ಮಾತನಾಡಿದ ನಂತರ ಸಭೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಪ್ರತಿಕ್ರಿಯಿಸಿ `ಕೆಲವು ದಿನಗಳ ಹಿಂದೆ ಹಿಂದುಳಿದ ಜಾತಿಗೆ ಸೇರಿರುವ ಬಳ್ಳಾರಿಯ ಶಾಸಕರೊಬ್ಬರು ನಡುರಾತ್ರಿಯಲ್ಲಿ ಫೋನ್ ಮಾಡಿ ನನ್ನನ್ನು ಎಬ್ಬಿಸಿ ದೇವರಾಜ ಅರಸು ಬಗ್ಗೆ ಸ್ಪಲ್ಪ ಹೇಳಿ ಎಂದರು.

ಮರುದಿನ ಅರಸು ಕುರಿತ ಕಾರ್ಯಕ್ರಮವೊಂದರಲ್ಲಿ ಅವರು ಭಾಷಣ ಮಾಡಬೇಕಿತ್ತಂತೆ. ಹಿಂದುಳಿದ ಜಾತಿಗಳ ನಾಯಕರಿಗೆ ಏನು ಗತಿ ಬಂತು ನೋಡಿ~ ಎಂದು ನಕ್ಕರು, ಸಭೆಯಲ್ಲಿದ್ದವರೆಲ್ಲರೂ ಕೂಡಿ ನಕ್ಕರು. ಆ ಶಾಸಕನ ಹೆಸರು ಶ್ರಿರಾಮುಲು. ಇವರು ಹಿಂದುಳಿದ ಜಾತಿಗಳ ಲೇಟೆಸ್ಟ್ ನಾಯಕ. ಅರಸು ಅವರ ಆತ್ಮ ತಣ್ಣಗಿರಲಿ.

Monday, March 12, 2012

ತೃತೀಯರಂಗ ಎಂಬ ಮರೀಚಿಕೆಯ ಬೆನ್ನತ್ತಿ.... March 12, 2012


ಯಾವುದೋ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲವೇ ಬಿಜೆಪಿಯನ್ನು ಬಿಟ್ಟು ಬೇರೊಂದು ಪ್ರಾದೇಶಿಕ ಪಕ್ಷ ಚುನಾವಣೆಯಲ್ಲಿ ಗೆದ್ದ ಕೂಡಲೇ ನಾಲ್ಕು ದಿಕ್ಕುಗಳಿಂದಲೂ ತೃತೀಯರಂಗದ ಗಂಟೆಗಳು ಮೊಳಗತೊಡಗುತ್ತವೆ. ಒಂದು ಕಾಲದಲ್ಲಿ ಈ ಗಂಟೆ ಆಡಿಸುತ್ತಿದ್ದವರು ಸಿಪಿಎಂ ಪಕ್ಷದ ನಾಯಕ ಹರಿಕಿಷನ್‌ಸಿಂಗ್ ಸುರ್ಜಿತ್.  ಬದುಕಿದ್ದರೆ ದೆಹಲಿಯಲ್ಲಿದ್ದ ಅವರ ಮನೆ ಈಗ ತೃತೀಯರಂಗದ ತಥಾಕಥಿತ ನಾಯಕರಿಂದ ತುಂಬಿ ತುಳುಕಾಡುತ್ತಿತ್ತೋ ಏನೋ? ಸುರ್ಜಿತ್ ನಂತರ ಅವರ ಚಪ್ಪಲಿಯಲ್ಲಿ ಕಾಲುತೂರಿ ಹೊರಟವರು ಮುಲಾಯಂ ಸಿಂಗ್ ಯಾದವ್. ಇದರಿಂದಾಗಿಯೇ ಉತ್ತರಪ್ರದೇಶದ ಚುನಾವಣೆಯ ನಂತರ ತೃತೀಯ ರಂಗದ ಆಶಾವಾದಿಗಳು ಮೈಮುರಿದು ಎದ್ದು ಕೂತಿದ್ದಾರೆ. ಆಗಲೇ ಮಾಧ್ಯಮಗಳು ತೃತೀಯರಂಗವನ್ನು ರಾಜಕೀಯ ಚರ್ಚೆಯ ಕೇಂದ್ರಸ್ಥಾನದಲ್ಲಿ ತಂದು ನಿಲ್ಲಿಸಿವೆ. ವಾಸ್ತವ ಸಂಗತಿ ಏನೆಂದರೆ, ಸದ್ಯದ ಭವಿಷ್ಯದಲ್ಲಿ ತೃತೀಯರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ. ಇನ್ನೂ ಸ್ವಲ್ಪ ಹುಂಬ ಧೈರ್ಯದಿಂದ ಹೇಳುವುದಾದರೆ ಭಾರತದಲ್ಲಿ ಕನಿಷ್ಠ ಮುಂದಿನ ಹತ್ತು ವರ್ಷ ತೃತೀಯರಂಗಕ್ಕೆ ಭವಿಷ್ಯ ಇಲ್ಲ.
ಈ ಸತ್ಯ ತೃತೀಯರಂಗದ ಪ್ರತಿಪಾದಕರೆಲ್ಲರಿಗೂ ಗೊತ್ತು, ಹೀಗಿದ್ದರೂ ಅವರು ತೃತೀಯ ರಂಗದ ಕನಸುಗಳನ್ನು ತುಂಬಿದ ಬಣ್ಣಬಣ್ಣದ ಬಲೂನ್‌ಗಳ ಮಾರಾಟವನ್ನು ನಿಲ್ಲಿಸುವುದಿಲ್ಲ, ಆ ಕನಸುಗಳ ಬಲೂನ್ ಎಷ್ಟು ಬಾರಿ ಒಡೆದುಹೋದರೂ ಅದನ್ನು ಒಂದಷ್ಟು ಜನ ಕೊಂಡು ಕೊಳ್ಳುವುದನ್ನೂ ನಿಲ್ಲಿಸುವುದಿಲ್ಲ. ಮೊದಲನೆಯದಾಗಿ, ತೃತೀಯರಂಗದ ಸ್ವರೂಪದ ಬಗ್ಗೆಯೇ ನಮ್ಮಲ್ಲಿ ಬಹಳಷ್ಟು ಗೊಂದಲಗಳಿವೆ. ಮೂಲ ಅರ್ಥದ ಪ್ರಕಾರ ತೃತೀಯರಂಗ ಎನ್ನುವುದು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೂರ ಇರುವ ಪಕ್ಷಗಳ ಒಕ್ಕೂಟ. ಈ ದೂರ ತತ್ವದ ಆಧಾರದ್ದು. ಆದರೆ ಬಹುತೇಕ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ವಿರೋಧಿಸುತ್ತಾ ವಿರೋಧಿಸುತ್ತಾ ಕೊನೆಗೆ ಅವುಗಳ ಗುಣಲಕ್ಷಣಗಳನ್ನೇ ಮೈಗೂಡಿಸಿಕೊಂಡಿವೆ. ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆ ಮತ್ತು ವಂಶಪರಂಪರೆಯನ್ನು ವಿರೋಧಿಸಿಯೇ 1977ರಲ್ಲಿ  ಪರ್ಯಾಯ ಹುಟ್ಟಿಕೊಂಡದ್ದು. ಆದರೆ ಉತ್ತರಪ್ರದೇಶದಲ್ಲಿ ಈಗ ನಡೆಯುತ್ತಿರುವುದೇನು?
ಈಗಿನ ವಿಜಯೋತ್ಸಾಹದ ಭರದಲ್ಲಿ ಮಾಧ್ಯಮಗಳು ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಎರಡು ಮುಖ್ಯ ಅನಿಷ್ಟಗಳಾದ ವಂಶಪರಂಪರೆಯ ಮುಂದುವರಿಕೆ ಮತ್ತು ಆಂತರಿಕ ಪ್ರಜಾಪ್ರಭುತ್ವದ ದಮನ, ಸಮಾಜವಾದಿ ಪಕ್ಷದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಕುರುಡರಾಗಿದ್ದಾರೆ. ಮಗನಿಗೆ ಪಟ್ಟ ಕಟ್ಟುವ ಅವಸರದಲ್ಲಿರುವ ಮುಲಾಯಂಸಿಂಗ್ ಯಾದವ್, ಪಕ್ಷ ಕಟ್ಟಲು ಬೆವರು ಸುರಿಸಿದ ಹಿರಿಯ ನಾಯಕರನ್ನು ಮೂಲೆಗೆ ತಳ್ಳಿದ್ದಾರೆ. ಅದು ನಿಜವಾದ ಅರ್ಥದಲ್ಲಿ `ತಂದೆ-ಮಗ`ನ ಪಕ್ಷವಾಗಿ ಹೋಗಿದೆ.  `ಲೋಹಿಯಾ ಕೆ ಸಾಥ್` ಎಂಬ ಬ್ಯಾನರ್-ಪೋಸ್ಟರ್‌ಗಳ ಮೂಲಕ ಚುನಾವಣಾ ಪ್ರಚಾರ ನಡೆಸಿದ ಸಮಾಜವಾದಿ ಪಕ್ಷ, ರಾಜಕೀಯದಲ್ಲಿ ವಂಶಪರಂಪರೆಯನ್ನು ಲೋಹಿಯಾ ವಿರೋಧಿಸಿದ್ದರು ಎನ್ನುವುದನ್ನು ಜಾಣತನದಿಂದ ಮರೆತುಬಿಟ್ಟಿದೆ.
ತತ್ವದ ವಿಚಾರವನ್ನು ಪಕ್ಕಕ್ಕಿಟ್ಟು ಸಂಖ್ಯೆಯನ್ನಷ್ಟೇ ಗಮನಕ್ಕೆ ತೆಗೆದುಕೊಳ್ಳುವುದಾದರೆ ತೃತೀಯರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಎರಡು ರಾಷ್ಟ್ರೀಯ ಪಕ್ಷಗಳ ಬೆಂಬಲ ಇಲ್ಲದೆ ಸಾಮಾನ್ಯ ಬಹುಮತಕ್ಕೆ ಬೇಕಾಗಿರುವ 272 ಸದಸ್ಯರ ಸ್ವಂತ ಬಲವನ್ನು ಗಳಿಸಬೇಕು. 1952ರಿಂದ 2004ರ ವರೆಗಿನ ದೇಶದ ಚುನಾವಣಾ ಇತಿಹಾಸವನ್ನು ನೋಡಿದರೆ 1977ರ ಚುನಾವಣೆಯೊಂದನ್ನು (ಕಾಂಗ್ರೆಸ್ 154+ ಜನಸಂಘ 93=247) ಹೊರತುಪಡಿಸಿ ಬೇರೆ ಯಾವುದರಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿಯ ಒಟ್ಟು ಬಲ 272ಕ್ಕಿಂತ ಕೆಳಗೆ ಇಳಿದಿಲ್ಲ. ಕನಿಷ್ಠ ಎಂದರೆ 1989ರಲ್ಲಿ ಈ ಎರಡು ಪಕ್ಷಗಳು ಒಟ್ಟಾಗಿ ಗಳಿಸಿದ್ದ 282 ಸ್ಥಾನಗಳು. ಅಂದರೆ 1977ರ ಚುನಾವಣೆಯೊಂದನ್ನು ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ಒಟ್ಟು ಸದಸ್ಯ ಬಲ ಎಂದೂ 272 ತಲುಪಿಲ್ಲ. 1991ರ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿದರೆ ಈ ಎರಡು ಪಕ್ಷಗಳು ಅತ್ಯಧಿಕ ಸ್ಥಾನಗಳನ್ನು ಗೆದ್ದಿರುವುದು 2009ರ ಚುನಾವಣೆಯಲ್ಲಿ (ಕಾಂಗ್ರೆಸ್ 206+ಬಿಜೆಪಿ 114=320). ಹೀಗಿದ್ದಾಗ ಈ ಎರಡೂ ಪಕ್ಷಗಳನ್ನು ಹೊರಗಿಟ್ಟ ತೃತೀಯರಂಗ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ?
`ಅಂತರ ಇರುವುದು 40-50 ಸ್ಥಾನಗಳಲ್ಲವೇ? ಅದನ್ನು ಗಳಿಸುವುದು ಅಷ್ಟೇನೂ ಕಷ್ಟವಾಗಲಾರದು. ಉತ್ತರಪ್ರದೇಶದಲ್ಲಿಯೇ ಅದನ್ನು ಪಡೆದುಕೊಳ್ಳಬಹುದು` ಎಂದು ಯಾರೋ ಕಡು ಆಶಾವಾದಿಗಳು ಹೇಳಬಹುದು. ಅದು ಕೂಡಾ ನಿಜವಾಯಿತೆಂದು ತಿಳಿದುಕೊಳ್ಳಿ, ಆಗಲೂ ತೃತೀಯರಂಗ ಅಧಿಕಾರಕ್ಕೆ ಬರಲು ಸಾಧ್ಯವಾಗಲಾರದು. ಇದಕ್ಕೆ ಕಾರಣ ತೃತೀಯ ರಂಗದೊಳಗಿರುವ ಪಕ್ಷಗಳ ನಡುವಿನ ಬಿಕ್ಕಟ್ಟು. ಇದನ್ನು ಉತ್ತರಪ್ರದೇಶದಿಂದಲೇ ಪ್ರಾರಂಭಿಸೋಣ. ಅಲ್ಲಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಒಟ್ಟಾಗಿ ಒಂದೇ ಸರ್ಕಾರದಲ್ಲಿ ಸೇರಿಕೊಳ್ಳಲು ಸಾಧ್ಯವೇ? ಅದೇ ರೀತಿ, ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ, ಬಿಹಾರದ ಜೆಡಿ (ಯು) ಮತ್ತು ಆರ್‌ಜೆಡಿ, ಪಶ್ಚಿಮಬಂಗಾಳದ ಎಡಪಕ್ಷಗಳು ಮತ್ತು ಟಿಎಂಸಿ, ಕಾಶ್ಮೀರದ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ಒಟ್ಟಾಗಿ ಒಂದು ಮೈತ್ರಿಕೂಟದಡಿ ಇರಲು ಸಾಧ್ಯವೇ? ತೃತೀಯರಂಗದ ಆಶಾವಾದಿಗಳು ಎಷ್ಟೇ ಬೊಬ್ಬಿಟ್ಟರೂ ಅಂತಿಮವಾಗಿ ಅವರು ಒಂದೋ ಕಾಂಗ್ರೆಸ್ ನೇತೃತ್ವದ ಯುಪಿಎ ಜತೆ ಇಲ್ಲವೇ ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಸೇರಿಕೊಳ್ಳಲೇಬೇಕು. ಅದನ್ನು ತೃತೀಯರಂಗ ಎಂದು ಕರೆಯಲು ಹೇಗೆ ಸಾಧ್ಯ? ಇನ್ನೂ ಹುಟ್ಟದ ತೃತೀಯರಂಗದ ಗಾಳಿಪಟ ಹಾರುತ್ತಿರುವುದನ್ನು ನೋಡಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮರೆಯಲ್ಲಿ ನಿಂತು ನಗುತ್ತಿರುವುದು ಈ ಕಾರಣಕ್ಕೆ. ಕೊನೆಗೂ ಈ ನಾಯಕರು ನಮ್ಮ ಮನೆ ಬಾಗಿಲು ತಟ್ಟಲೇ ಬೇಕು ಎಂದು ಅವರಿಗೆ ಗೊತ್ತಿದೆ.
ಈ ಹಿನ್ನೆಲೆಯಲ್ಲಿ 2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಪೂರ್ವ ಮತ್ತು ನಂತರದಲ್ಲಿ ಕುತೂಹಲದಿಂದ ನೋಡಬೇಕಾಗಿರುವುದು ತೃತೀಯರಂಗದ ಹುಟ್ಟು-ಬೆಳವಣಿಗೆಯಲ್ಲ, ಅದು ಯುಪಿಎ ಇಲ್ಲವೇ ಎನ್‌ಡಿಎ-ಇವುಗಳಲ್ಲಿ ಯಾವ ರಂಗದ ಬಲವರ್ಧನೆಯಾಗಲಿದೆ ಎನ್ನುವುದನ್ನು. ಈಗಿನ ಬಲಾಬಲದಲ್ಲಿ ಕಾಂಗ್ರೆಸ್ (206) ನೇತೃತ್ವದ ಯುಪಿಎನಲ್ಲಿ, ತೃಣಮೂಲ ಕಾಂಗ್ರೆಸ್ (19), ಡಿಎಂಕೆ (18), ಎನ್‌ಸಿಪಿ (9) ಮತ್ತು ಇತರ ಸಣ್ಣಪಕ್ಷಗಳು (21) ಇವೆ. ಎಸ್‌ಪಿ (22), ಬಿಎಸ್‌ಪಿ (21) ಮತ್ತು ಇತರ ಸಣ್ಣಪಕ್ಷಗಳು (7) ಅದಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿವೆ. ಅದೇ ರೀತಿ, ಬಿಜೆಪಿ (114) ನೇತೃತ್ವದ ಎನ್‌ಡಿಎನಲ್ಲಿ ಜೆಡಿ (ಯು) (20) ಮತ್ತು ಇತರ ಸಣ್ಣಪಕ್ಷಗಳು (15) ಇವೆ. ಇವುಗಳ ಜತೆಗೆ ಈ ಎರಡೂ ಗುಂಪಿಗೂ ಸೇರದ ಸಿಪಿಎಂ (16), ಬಿಜೆಡಿ (14), ಎಐಎಡಿಎಂಕೆ (9) ಮತ್ತು ಇತರ ಪಕ್ಷಗಳು (26) ಇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳ ಬಲಾಬಲ ಏನಾಗಲಿದೆ ಎಂಬುದರ ಮೇಲೆ ಯಾವ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎನ್ನುವುದು ನಿರ್ಧಾರವಾಗಬಹುದು.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯೇನಾದರೂ ಕನಿಷ್ಠ 80-100 ಸ್ಥಾನಗಳನ್ನು ಗಳಿಸಿದ್ದರೆ ಆ ಗೆಲುವು ಎನ್‌ಡಿಎ ಬಲವರ್ಧನೆಗೆ ಚಾಲನೆ ನೀಡುತ್ತಿತ್ತೋ ಏನೋ? ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ಅನುಕೂಲಗಳಿರುವುದು ಯುಪಿಎಗೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ನಾಯಕರಲ್ಲಿ ಮುಲಾಯಂಸಿಂಗ್ ಯಾದವ್ ಸೇರಿದಂತೆ ಆಂತರಿಕವಾಗಿ ಹೆಚ್ಚಿನವರ ಒಲವು ಇರುವುದು ಎನ್‌ಡಿಎ ಕಡೆಗೆ. ಇದಕ್ಕೆ ವಾಜಪೇಯಿ ನೇತೃತ್ವದ ಆರು ವರ್ಷಗಳ ಎನ್‌ಡಿಎ ಸರ್ಕಾರದಲ್ಲಿ ಬಿಜೆಪಿ ನಾಯಕರು ಮಿತ್ರಪಕ್ಷಗಳನ್ನು ನಡೆಸಿಕೊಂಡ ರೀತಿ ಮೊದಲ ಕಾರಣ. ಬೇರೆ ಪಕ್ಷಗಳಿಗೆ ಎಷ್ಟು ಜಾಗ ಮತ್ತು ಅವಕಾಶವನ್ನು ಕೊಡಬೇಕೆಂದು ಆ ಪಕ್ಷದ ನಾಯಕರಿಗೆ ಗೊತ್ತಿದೆ. ಆದುದರಿಂದಲೇ ಬಿಜೆಪಿಯ ಕೇಂದ್ರನಾಯಕರೊಂದಿಗೆ ಜಗಳವಾಡಿಕೊಂಡು ಎನ್‌ಡಿಎಯಿಂದ ಹೊರಹೋದ ಪಕ್ಷಗಳು ಕಡಿಮೆ. ಹೆಚ್ಚಿನವರು ಎನ್‌ಡಿಎ ಜತೆ ಸಂಬಂಧ ಕಡಿದುಕೊಂಡಿದ್ದು ಮುಖ್ಯವಾಗಿ ತಮ್ಮ ರಾಜ್ಯದಲ್ಲಿನ ಮುಸ್ಲಿಂ ಮತದಾರರನ್ನು ಕಳೆದುಕೊಳ್ಳಬಹುದೆಂಬ ಭಯದಿಂದ. ಇನ್ನು ಕೆಲವು ಪಕ್ಷಗಳು ರಾಜ್ಯಮಟ್ಟದ ಬಿಜೆಪಿ ನಾಯಕರ ಜತೆಗಿನ ಸಂಘರ್ಷದ ಕಾರಣಕ್ಕೆ ದೂರವಾಗಿವೆ.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ದುರಹಂಕಾರಿ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಮೈಗೂಡಿಸಿಕೊಂಡ ಪಕ್ಷ. ಏಕಚಕ್ರಾಧಿಪತ್ಯವನ್ನು ಅದು ಎಂದೋ ಕಳೆದುಕೊಂಡಿದ್ದರೂ ಆ ಗುಂಗಿನಿಂದ ಹೊರಬಂದಿಲ್ಲ. ಅದಕ್ಕೆ ಪ್ರತಿಯೊಂದು ಮಿತ್ರಪಕ್ಷಗಳ ಬೆಳವಣಿಗೆಯಲ್ಲಿಯೂ ತನ್ನ ವಿರುದ್ಧದ ಸಂಚು ಕಾಣಿಸುತ್ತದೆ. ಯುಪಿಎ ಯಲ್ಲಿ ಈಗ ಇರುವ ಟಿಎಂಸಿ, ಡಿಎಂಕೆ ಇಲ್ಲವೇ ಎನ್‌ಸಿಪಿ ಯಾವ ಪಕ್ಷದ ಜತೆಯಲ್ಲಿಯೂ ಕಾಂಗ್ರೆಸ್ ಸಂಬಂಧ ಸೌಹಾರ್ದವಾಗಿಲ್ಲ. ಬೇರೆ ದಾರಿ ಇಲ್ಲದೆ ಈ ಪಕ್ಷಗಳು ಯುಪಿಎ ಜತೆಯಲ್ಲಿವೆ. ಮೂಲತಃ ಕಾಂಗ್ರೆಸ್ ವಿರೋಧಿಯಾಗಿರುವ ಮುಲಾಯಂಸಿಂಗ್ ಯಾದವ್ ಅವರಿಗೆ ಇದು ಚೆನ್ನಾಗಿ ಗೊತ್ತು. ದುರಂತವೆಂದರೆ ಈಗಲೂ ಅವರು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯ ಇದ್ದರೆ ಅದು ತಾನು ವೈಯಕ್ತಿಕವಾಗಿ ಒಲ್ಲದ ಆದರೆ ರಾಜಕೀಯವಾಗಿ ಅನಿವಾರ್ಯವಾಗಿರುವ ಯುಪಿಎ ಜತೆ ಮಾತ್ರ. ಎನ್‌ಡಿಎ ಜತೆ ಕೂಡಿಕೊಂಡರೆ  ಅವರು ಮತ್ತೊಮ್ಮೆ ಮುಸ್ಲಿಮರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಈ ಚುನಾವಣೆಯಲ್ಲಿ ಗಳಿಸಿರುವ ಹೆಚ್ಚುವರಿ ನಾಲ್ಕುವರೆಯಷ್ಟು ಮತಗಳು ಕೈಜಾರಿ ಹೋಗಬಹುದು. ಆದುದರಿಂದ ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ತೃತೀಯರಂಗದ ಬಲವರ್ಧನೆಗೆ ನೆರವಾಗುವ ಸಾಧ್ಯತೆ ಇಲ್ಲ.
ಉತ್ತರ ಪ್ರದೇಶದ ಮತದಾರರಂತೆ ದೇಶದ ಮತದಾರರು ಕೂಡಾ ತ್ರಿಶಂಕು ಸ್ಥಿತಿ ಬೇಡವೇ ಬೇಡ ಎಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏನಾದರೂ ತೀರ್ಮಾನಿಸಿದರೂ ಅದರ ಲಾಭ ಎರಡರಲ್ಲಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಸಿಗಬಹುದೇ ಹೊರತು, ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಸಿಗಲಾರದು. ಒಂದು ವೇಳೆ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕರಿಸಿ ಅವುಗಳ ಬಲ ತೀರಾ ಕುಸಿದು ಬಿಟ್ಟರೆ, ಆಗ ತೃತೀಯರಂಗಕ್ಕೆ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ ಯಾವುದಾದರೂ ಒಂದು ರಾಷ್ಟ್ರೀಯ ಪಕ್ಷದ ಬೆಂಬಲ ಪಡೆದು ತೃತೀಯ ರಂಗದ ನಾಯಕನೊಬ್ಬ ಪ್ರಧಾನಮಂತ್ರಿಯಾಗಲು ಸಾಧ್ಯ. ಅಂತಹ ಸಂದರ್ಭದಲ್ಲಿ  ಇಬ್ಬರ ಅವಕಾಶ ಉಜ್ವಲವಾಗಿದೆ. ಮೊದಲನೆಯವರು ನಿತೀಶ್‌ಕುಮಾರ್, ಎರಡನೆಯವರು ಮುಲಾಯಂಸಿಂಗ್ ಯಾದವ್. ಬೆಂಬಲಕ್ಕಾಗಿ ಯಾವ ರಾಷ್ಟ್ರೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಇವರಿಬ್ಬರಿಗೂ ಹೆಚ್ಚು ಆಯ್ಕೆಗಳಿಲ್ಲ. ನಿತೀಶ್‌ಗೆ ಬಿಜೆಪಿ ಮತ್ತು ಮುಲಾಯಂ ಸಿಂಗ್‌ಗೆ ಕಾಂಗ್ರೆಸ್ ಅನಿವಾರ್ಯ. ಆದರೆ ಕಾಂಗ್ರೆಸ್ ಇಲ್ಲವೇ ಬಿಜೆಪಿ ಬೆಂಬಲಿಸಿದ್ದ ತೃತೀಯರಂಗದ ಸರ್ಕಾರಗಳ ರಚನೆಯ ಈ ವರೆಗಿನ ಇತಿಹಾಸವನ್ನು ನೋಡಿದರೆ ಅಂತಹ ಸರ್ಕಾರ ಬಹಳ ದಿನ ಬಾಳಬಹುದೆಂದು ಅನಿಸುವುದಿಲ್ಲ. 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವನ್ನು ಬಿಜೆಪಿ ಉರುಳಿಸಿದ್ದರೆ, 1996ರಲ್ಲಿ ಮೊದಲು ಎಚ್.ಡಿ.ದೇವೇಗೌಡ ಮತ್ತು ನಂತರ ಐ.ಕೆ.ಗುಜ್ರಾಲ್ ನೇತೃತ್ವದ ಸಂಯುಕ್ತರಂಗ ಸರ್ಕಾರವನ್ನು ಉರುಳಿಸಿದ್ದು ಕಾಂಗ್ರೆಸ್. ತೃತೀಯರಂಗ ಎನ್ನುವುದು ಕೊನೆಗೂ ಮರೀಚಿಕೆಯೇ...

Monday, March 5, 2012

ಮುಖ್ಯಮಂತ್ರಿಗಳಿದ್ದಾರೆ, ಅವರ ಕೈಯಲ್ಲಿ ಅಧಿಕಾರ ಎಲ್ಲಿದೆ? March 05, 2012

ಕಳೆದ ತಿಂಗಳ ಎಂಟರಂದು ನಾನು ಉತ್ತರಪ್ರದೇಶದ ಫೈಜಾಬಾದ್‌ನಲ್ಲಿದ್ದೆ. ಆ ದಿನ ನಡೆಯಲಿದ್ದ ಮೊದಲ ಸುತ್ತಿನ ಮತದಾನವನ್ನು ಅಯೋಧ್ಯೆಯಿಂದ ವರದಿ ಮಾಡಲೆಂದು ಬಂದಿದ್ದ ಪತ್ರಕರ್ತರ ದಂಡು ನಾನಿದ್ದ ಹೊಟೇಲ್‌ನಲ್ಲಿಯೇ ಬೀಡುಬಿಟ್ಟಿತ್ತು.
 
ಬೆಳಿಗ್ಗೆ ಇನ್ನೂ ಏಳು ಗಂಟೆ ಆಗಿರಲಿಲ್ಲ, ಅಷ್ಟರಲ್ಲಿ ಯಾರೋ ಬಾಗಿಲು ಬಡಿದಂತಾಯಿತೆಂದು ತೆರೆದು ನೋಡಿದರೆ ಪಕ್ಕದ ಕೋಣೆಯಲ್ಲಿದ್ದ ಟಿವಿ ಚಾನೆಲ್‌ನ ವರದಿಗಾರ ಕೈಯಲ್ಲಿ `ದೈನಿಕ್ ಜಾಗರಣ್` ಪತ್ರಿಕೆ ಮತ್ತು ಮೈಕ್ ಹಿಡಿದುಕೊಂಡು ನಿಂತಿದ್ದ. ಹಿಂದಿನ ರಾತ್ರಿಯಷ್ಟೇ ಆತನ ಪರಿಚಯವಾಗಿತ್ತು. `ಆಪ್ ಹಿಂದಿ ಮೇ ದೋ ಶಬ್ದ್ ಬೋಲ್ ಸಕ್ತೆ ಹೋ?` ಎಂದ. `ಯಾಕೆ` ಎಂದು ಕೇಳಿದೆ.
 
ಆತ ನನ್ನ ಮುಖಕ್ಕೆ ಪತ್ರಿಕೆಯ ಮುಖಪುಟ ಹಿಡಿದ. ಅದರಲ್ಲಿ `ಬಿಜೆಪಿ ಮಂತ್ರಿಯೋಂ ಸದನ್ ಮೇ ಪೊರ್ನ್ ವಿಡಿಯೋ ದೇಖಾ` (ಬಿಜೆಪಿ ಮಂತ್ರಿಗಳು ಸದನದಲ್ಲಿ ಪೊರ್ನೋ ವಿಡಿಯೋ ನೋಡಿದರು) ಎಂಬ ಸುದ್ದಿ ಎರಡನೇ ಲೀಡ್ ಆಗಿ ಪ್ರಕಟವಾಗಿತ್ತು. ಆತನಿಗೆ ಅರ್ಜೆಂಟಾಗಿ ಒಂದು ಬೈಟ್ ಬೇಕಿತ್ತು. `ಸಾರಿ, ನನ್ನ ಹಿಂದಿ ಅಷ್ಟೊಂದು ಚೆನ್ನಾಗಿಲ್ಲ` (ಅಷ್ಟೊಂದು ಕೆಟ್ಟದೂ ಆಗಿಲ್ಲ) ಎಂದು ಹೇಳಿ ಬಾಗಿಲು ಮುಚ್ಚಿದೆ.

ಅದರ ನಂತರದ ದಿನಗಳಲ್ಲಿ ಯಾರಿಗೆ ನನ್ನನ್ನು ಪರಿಚಯಿಸಿಕೊಂಡರೂ ಅವರು ಮೊದಲು ಕೇಳುತ್ತಿದ್ದದು `ಶಾಸಕರ ಅಶ್ಲೀಲ ವಿಡಿಯೋ ವೀಕ್ಷಣೆ ಮತ್ತು ಯಡಿಯೂರಪ್ಪನವರಿಗೆ ಸಂಬಂಧಿಸಿದ್ದ ಪ್ರಶ್ನೆಗಳನ್ನು. ಉತ್ತರಪ್ರದೇಶದ ಬಹಳ ಮಂದಿ ಪತ್ರಕರ್ತರು ಯಡಿಯೂರಪ್ಪನವರನ್ನು `ವೊ ತೋ ಕರ್ನಾಟಕ್ ಕಾ ಕಲ್ಯಾಣ್‌ಸಿಂಗ್` ಎನ್ನುತ್ತಿದ್ದರು. ಇಬ್ಬರ ರಾಜಕೀಯ ಮತ್ತು ಖಾಸಗಿ ಜೀವನಗಳಿಗೆ ಬಹಳಷ್ಟು ಹೋಲಿಕೆಯೂ ಇದೆ. ಬಿಜೆಪಿಯ ಒಂದು ಕಾಲದ ಕಣ್ಮಣಿ ಕಲ್ಯಾಣ್‌ಸಿಂಗ್ ಕುಸುಮಾ ರಾಯ್ ಎಂಬ ಹೆಣ್ಣಿನ ಸ್ನೇಹಕ್ಕೆ ಬಿದ್ದು ರಾಜಕೀಯ ಜೀವನವನ್ನೇ ಕಳೆದುಕೊಂಡು ವನವಾಸ ಅನುಭವಿಸುತ್ತಿದ್ದಾರೆ. 

ಅವರೆಲ್ಲರ ಆಸಕ್ತಿಗೆ ಮುಖ್ಯ ಕಾರಣ ಉತ್ತರ ಭಾರತದ ಮಾಧ್ಯಮಗಳಲ್ಲಿ ಆ ಪ್ರಕರಣಕ್ಕೆ ನೀಡಿದ್ದ ವ್ಯಾಪಕ ಪ್ರಚಾರ. ಸ್ಥಳೀಯ ಕೇಬಲ್ ಚಾನೆಲ್‌ಗಳು ಯಾವುದೋ ಬ್ಲೂಫಿಲಂಗಳ ಕ್ಲಿಪ್ಪಿಂಗ್ಸ್‌ಗಳನ್ನೆಲ್ಲ ಕರ್ನಾಟಕದ ಬಿಜೆಪಿ ಶಾಸಕರು ನೋಡಿದ್ದೆಂದು ಹೇಳಿ ತೋರಿಸಿ ಪ್ರಸಾರ ಮಾಡುತ್ತಿದ್ದವು. 

 ಹೊರರಾಜ್ಯಗಳಲ್ಲಿ ಈ ರೀತಿ ಕರ್ನಾಟಕದ ಮಾನ ಎಂದೂ ಹರಾಜಾಗಿರಲಿಲ್ಲ. `ಬಿಮಾರು` ರಾಜ್ಯಗಳೆಂಬ ಕುಖ್ಯಾತಿ ಪಡೆದಿದ್ದ ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರಪ್ರದೇಶಗಳಲ್ಲಿಯಾದರೂ ಕರ್ನಾಟಕದವರೆಂದು ಹೇಳಿಕೊಂಡರೆ ಒಂದಿಷ್ಟು ಮರ್ಯಾದೆ -ಗೌರವ ಇತ್ತು. ಈಗ ಆ ರಾಜ್ಯದ ಜನರೂ ನಮ್ಮನ್ನೂ ಗೇಲಿ ಮಾಡುತ್ತಿರುವವರಂತೆ ನೋಡುತ್ತಿದ್ದಾರೆ. ರೋಗಗ್ರಸ್ತವಾಗಿದ್ದ ಆ ನಾಲ್ಕೂ ರಾಜ್ಯಗಳಲ್ಲಿಯೂ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ.
 
ಕರ್ನಾಟಕ ಮತ್ತೆ ಶಿಲಾಯುಗದ ಕಡೆ ಹೋಗುತ್ತಿದೆ. ಬಹುಶಃ ನಿನ್ನೆಯೂ ಪತ್ರಕರ್ತರಿಗೆ ಕಲ್ಲೆತ್ತಿಕೊಂಡು ಹೊಡೆಯಲು ನಿಂತ ವಕೀಲರು ಮತ್ತು ಪಕ್ಕದಲ್ಲಿ ಕೈಕಟ್ಟಿ ನಿಂತ ಪೊಲೀಸರ ಚಿತ್ರಗಳು ಅಲ್ಲಿನ  ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗಿರಬಹುದು. ಇದು `ಶಿಲಾ`ಯುಗವಲ್ಲದೆ ಮತ್ತೇನು?

ಚುನಾಯಿತ ಸರ್ಕಾರವೊಂದು ಕೊನೆಯ ದಿನಗಳಲ್ಲಿ ಇಂತಹ  ಪರಿಸ್ಥಿತಿಯನ್ನು ಎದುರಿಸುತ್ತದೆ. ಆಡಳಿತದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವುದು, ಮನೆಗೆ ಹೋಗಲಿರುವ ಸರ್ಕಾರ ಎಂದು ಅಧಿಕಾರಿಗಳು ಕೂಡಾ ಆಡಳಿತಾರೂಢರ ಮಾತಿಗೆ ಬೆಲೆ ಕೊಡದಿರುವುದು, ಅಸಹಾಯಕ ಜನ ಬೀದಿಗಿಳಿಯುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು, ಸರ್ಕಾರದ ವಿರುದ್ಧ ಮಾತ್ರವಲ್ಲ, ಪರಸ್ಪರ ಬಡಿದಾಡಿಕೊಳ್ಳುವುದು... ಇವೆಲ್ಲ ಸಾಮಾನ್ಯ. ಆದರೆ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ಇಂತಹ ಪರಿಸ್ಥಿತಿ ಇತ್ತು. 

ಬಿ.ಎಸ್.ಯಡಿಯೂರಪ್ಪನವರು ವಿಧಾನಸೌಧದ ಒಳಗೆ ಹೋಗಿ ಕೂತದ್ದೇ ಕಡಿಮೆ. ಕೂತಾಗಲೂ ಅವರ ಕೈಯಲ್ಲಿ ಅಧಿಕಾರ ಮಾತ್ರ ಇರಲೇ ಇಲ್ಲ. ಅವರ ಆಡಳಿತದ ಬಗ್ಗೆ ನಾನು ಬರೆದ ಮೊದಲ ಅಂಕಣ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು (`ಮುಖ್ಯಮಂತ್ರಿಗಳೇ, ಅಧಿಕಾರ ನಿಮ್ಮ ಕೈಯಲ್ಲಿಯೇ ಇರಲಿ`- ದೆಹಲಿನೋಟ. ಅಕ್ಟೋಬರ್ 6, 2008). ಪರಿಸ್ಥಿತಿ ಹಾಗೆಯೇ ಮುಂದುವರಿದಿತ್ತು, ಈಗಲೂ ಬದಲಾಗಿಲ್ಲ.

ಎರಡು ತಿಂಗಳುಗಳ ಹಿಂದೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಊರಾಗಿರುವ ಸುಳ್ಯದಲ್ಲಿಯೇ ಒಂದು ಘಟನೆ ನಡೆದಿತ್ತು. ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಜೈಲಿನಿಂದ ಬಿಡುಗಡೆಯಾಗಿದ್ದ ನಾಲ್ಕು ಮಂದಿ ಕಾರಿನಲ್ಲಿ ಊರಿಗೆ ಹೋಗುತ್ತಿದ್ದಾಗ ಸುಳ್ಯ ಬಳಿ ಅವರನ್ನು ತಡೆದು ನಿಲ್ಲಿಸಿದ ಹಿಂದು ಸಂಘಟನೆಯ ಸದಸ್ಯರು ಬಲಾತ್ಕಾರವಾಗಿ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದರು. 

ಕಾರಿನಲ್ಲಿ ಜತೆಯಲ್ಲಿ ಹೋಗುವುದನ್ನು ಅಪರಾಧ ಎಂದು ಸಾಬೀತುಪಡಿಸುವುದು ಹೇಗೆ ಎನ್ನುವುದು ಅರ್ಥವಾಗದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಅವರನ್ನು ಬಿಟ್ಟುಬಿಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲೆಸೆದಿದ್ದರು. ಕಲ್ಲಿನೇಟಿನಿಂದ ಮಹಿಳಾ ಕಾನ್‌ಸ್ಟೇಬಲ್ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದರು. ತಕ್ಷಣ ಪೊಲೀಸರು ದುಷ್ಕೃತ್ಯದಲ್ಲಿ ತೊಡಗಿದ್ದವರನ್ನು ಬಂಧಿಸಿದರು. ಅವರಲ್ಲಿ ಕೆಲವರು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೂ ಇದ್ದರು. 

ಮರುದಿನ ಪೊಲೀಸರ ವಿರುದ್ದ ಭಾರಿ ಪ್ರತಿಭಟನೆ ನಡೆಯಿತು. `ಊರಿನ ಮಗ`ನಾದ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲಾಯಿತು. ಅದರ ಮರುದಿನ ಆ ಠಾಣೆಯ ಒಬ್ಬ ಸರ್ಕಲ್ ಇನ್‌ಸ್ಪೆಕ್ಟರ್, ಇಬ್ಬರು ಸಬ್‌ಇನ್‌ಸ್ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆ ಮಾಡಲಾಯಿತು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವರ್ಗಾವಣೆಯೂ ನಡೆಯಿತು. ತಾವು ಮಾಡಿರುವ ತಪ್ಪೇನು ಎನ್ನುವುದು ಪೊಲೀಸರಿಗೆ ಇನ್ನೂ ಗೊತ್ತಾಗಿಲ್ಲ.

ಆದುದರಿಂದ ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಟಿವಿ ಚಾನೆಲ್‌ಗಳ ವರದಿಗಾರರು ಮತ್ತು ಕ್ಯಾಮೆರಾಮೆನ್‌ಗಳ ಮೇಲೆ ವಕೀಲರು ನಡೆಸುವಷ್ಟರ ಮಟ್ಟಿಗೆ ತೋರಿದ ದಾರ್ಷ್ಟ್ಯ ಮತ್ತು  ಮೂಕಪ್ರೇಕ್ಷಕರಂತೆ ನಿಂತಿದ್ದ ಪೊಲೀಸರ ವರ್ತನೆ  ಹೊಸತೇನಲ್ಲ. ಈ ಪ್ರಕರಣವನ್ನಷ್ಟೆ ಪ್ರತ್ಯೇಕವಾಗಿಟ್ಟು ನೋಡಿದರೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೂ ಇಲ್ಲ. 

ಇದೊಂದು ಸರಣಿ. ಇದನ್ನು ಬಿಜೆಪಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಘಟನೆಯಿಂದ ಪ್ರಾರಂಭಿಸಿ ಅದರ ನಂತರ ನಡೆದ ಚರ್ಚ್‌ಗಳ ಮೇಲೆ ದಾಳಿ, ಮಂಗಳೂರಿನಲ್ಲಿ ಪಬ್‌ಗಳಿಗೆ ನುಗ್ಗಿ ಹುಡುಗಿಯರ ಮೇಲೆ ನಡೆಸಲಾದ ದೌರ್ಜನ್ಯ, ಸಚಿವರೊಬ್ಬರ ವಿರುದ್ದ ನರ್ಸ್ ನೀಡಿರುವ ದೂರು, ಶಾಸಕರೊಬ್ಬರ ಪತ್ನಿಯ ಆತ್ಮಹತ್ಯೆ, ಬೆಂಗಳೂರಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ, ವಿಧಾನಸಭೆಯಲ್ಲಿಯೇ ಶಾಸಕರು ಅಶ್ಲೀಲ ವಿಡಿಯೋ ನೋಡಿದ ಪ್ರಸಂಗದ ವರೆಗಿನ ಎಲ್ಲ ಘಟನೆಗಳೊಂದಿಗೆ ಸೇರಿಸಿ ನೋಡಬೇಕಾಗುತ್ತದೆ.

 ಇವೆಲ್ಲವುಗಳಲ್ಲಿನ ಒಂದು ಸಾಮಾನ್ಯ ಅಂಶ ಏನೆಂದರೆ ಯಾವ ಪ್ರಕರಣಗಳಲ್ಲಿಯೂ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗದಿರುವುದು ಮತ್ತು ಎಷ್ಟೋ ಸಂದರ್ಭಗಳಲ್ಲಿ ನಿರಪರಾಧಿಗಳಿಗೆ ಶಿಕ್ಷೆಯಾಗಿರುವುದು. ಚುನಾಯಿತ ಸರ್ಕಾರವೊಂದು ಸಂವಿಧಾನದತ್ತ ಅಧಿಕಾರವನ್ನು ತನ್ನಲ್ಲಿ ಇಟ್ಟುಕೊಳ್ಳದೆ, ಪ್ರಜೆಗಳಿಗಾಗಲಿ, ಸರ್ಕಾರಕ್ಕಾಗಲಿ ಉತ್ತರದಾಯಿ ಅಲ್ಲದ ಸಂವಿಧಾನೇತರ ಶಕ್ತಿಗಳ ಕೈಗೆ ಅದನ್ನು ಕೊಟ್ಟು ಬಿಟ್ಟರೆ ಇಂತಹ ಅನಾಹುತಗಳಲ್ಲದೆ ಬೇರೇನೂ ನಡೆಯಲು ಸಾಧ್ಯ? 

ಇದರಿಂದಾಗಿಯೇ ಯಡಿಯೂರಪ್ಪನವರು ಹಾದಿ ತಪ್ಪಿದ್ದು. ಮುಖ್ಯಮಂತ್ರಿಯಾಗಿದ್ದಾಗ ಅವರು ಪಕ್ಷದ ಹೈಕಮಾಂಡ್‌ಗಿಂತಲೂ ಹೆಚ್ಚು ನಿಷ್ಠರಾಗಿದ್ದು ಉಳಿದ ಮೂರು ಹೈಕಮಾಂಡ್‌ಗಳಿಗೆ. ಮೊದಲನೆಯದು ಸಂಘ ಪರಿವಾರ, ಎರಡನೆಯದು ವೀರಶೈವ ಮಠಗಳು ಮತ್ತು ಮೂರನೆಯದು ಬಳ್ಳಾರಿಯ ರೆಡ್ಡಿ ಸೋದರರು. 

ಯಡಿಯೂರಪ್ಪನವರು ರಾಜ್ಯದ ಖಜಾನೆಯ ಕೀಲಿಕೈಯನ್ನಷ್ಟೇ ತಾವಿಟ್ಟುಕೊಂಡು ಆಡಳಿತದ ಕೀಲಿಕೈಯನ್ನು ಮೊದಲಿನ ಮೂರು ಹೈಕಮಾಂಡ್‌ಗಳಿಗೆ ಕೊಟ್ಟು ಬಿಟ್ಟಿದ್ದರು. 

ತಾವು, ತಮ್ಮ ಕುಟುಂಬದ ಸದಸ್ಯರು ಹಾಗೂ ಕೆಲವು ಆಪ್ತ ಸಚಿವರು ಮಧ್ಯೆ ಪ್ರವೇಶಿಸಿದ ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದಂತೆ ಅಧಿಕಾರಿಗಳ ನೇಮಕ, ವರ್ಗಾವಣೆ, ಬಡ್ತಿ ಎಲ್ಲವೂ ಈ ಮೂರು ಹೈಕಮಾಂಡ್‌ಗಳ ಆದೇಶದಂತೆಯೇ ನಡೆಯುತ್ತಿತ್ತು. `ಆಪರೇಷನ್ ಕಮಲ`ವೂ ಸೇರಿದಂತೆ ಎಲ್ಲ ಬಗೆಯ ಅನೈತಿಕ ರಾಜಕಾರಣಕ್ಕೆ ಬೇಕಾದ ದುಡ್ಡನ್ನು ಗಣಿ ಲೂಟಿಕೋರರು ನೀಡಿದರೆ, ಜಾತಿಯ ಬೆಂಬಲವನ್ನು ವೀರಶೈವ ಮಠಗಳು ಧಾರೆ ಎರೆದವು.

ಸಂಘ ಪರಿವಾರದ ನಾಯಕರು ತಮ್ಮ ರಹಸ್ಯ ಕಾರ್ಯಸೂಚಿಯ ಅನುಷ್ಠಾನಕ್ಕೆ ಸರ್ಕಾರ ನೀಡುತ್ತಿರುವ ಬೆಂಬಲಕ್ಕೆ ಪ್ರತಿಯಾಗಿ ರಾಜಾರೋಷವಾಗಿ ನಡೆಯುತ್ತಿರುವ ಆರ್ಥಿಕ ಮತ್ತು ನೈತಿಕ ಭ್ರಷ್ಟಾಚಾರವನ್ನು ನೋಡಿಯೂ ನೋಡದಂತೆ ಕಣ್ಣುಮುಚ್ಚಿಕೊಂಡು ಕೂತುಬಿಟ್ಟರು. ಎಷ್ಟೋ ಸಂದರ್ಭಗಳಲ್ಲಿ ಅದರಲ್ಲಿ ಅವರೂ ಪಾಲುದಾರರಾಗಿ ಹೋದರು. ವಿಧಾನಸೌಧದಲ್ಲಿ ಆಡಳಿತ ಎಲ್ಲಿತ್ತು? ಸದ್ಯಕ್ಕೆ ಒಂದಷ್ಟು ವೀರಶೈವ ಮಠಗಳನ್ನು ಹೊರತುಪಡಿಸಿದರೆ ಉಳಿದೆಲ್ಲ `ಹೈಕಮಾಂಡ್`ಗಳು ಯಡಿಯೂರಪ್ಪನವರನ್ನು ಕೈ ಬಿಟ್ಟಿದ್ದರೂ ಅವರು ಪಾಠ ಕಲಿತ ಹಾಗಿಲ್ಲ.

ಈಗ ಡಿ.ವಿ.ಸದಾನಂದ ಗೌಡರ ಸರದಿ. ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ, ಶ್ರಿರಾಮುಲು ಪಕ್ಷ ಬಿಟ್ಟಿದ್ದಾರೆ. ಆದುದರಿಂದ ಆ ಹೈಕಮಾಂಡ್ ಈಗ ಇಲ್ಲ. ವೀರಶೈವ ಮಠಗಳು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿರುವ ಕಾರಣ ಆ ಕಡೆಯ ನಿಯಂತ್ರಣವೂ ಇಲ್ಲ. ಹೀಗಿದ್ದರೂ ಅವರದ್ದು ಇನ್ನೂ ದಯನೀಯ ಪರಿಸ್ಥಿತಿ. 

`ನಿಮ್ಮನ್ನು ನಾನೇ ಮುಖ್ಯಮಂತ್ರಿ ಮಾಡಿದ್ದು` ಎಂದು ಯಡಿಯೂರಪ್ಪನವರೇನೋ ಆಗಾಗ ಗುಡುಗುತ್ತಾರೆ. ಆದರೆ ಮಾಡಿದ್ದು ಯಾರು ಎನ್ನುವುದು ಅವರಿಗೂ ಗೊತ್ತು, ಸದಾನಂದ ಗೌಡರಿಗೂ ಗೊತ್ತು. ಇವರೆಲ್ಲರಿಗಿಂತಲೂ ಚೆನ್ನಾಗಿ ಕರಾವಳಿ, ಶಿವಮೊಗ್ಗ ಮತ್ತು ಬೆಂಗಳೂರಿನ ರಾಜ್ಯದ ಆರ್‌ಎಸ್‌ಎಸ್ ಮುಖಂಡರಿಗೆ ಗೊತ್ತು.
 
ಸಂಘ ಪರಿವಾರದ ಬೆಂಬಲದಿಂದಲೇ ಮುಖ್ಯಮಂತ್ರಿಯಾಗಿರುವ ಕಾರಣ ಆ `ಹೈಕಮಾಂಡ್`ಗೆ ಗೌಡರು ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಇದರಿಂದಾಗಿ ತಮ್ಮ ಹುಟ್ಟೂರಿನಲ್ಲಿಯೇ ಒಬ್ಬ ನಿರಪರಾಧಿ ಪೊಲೀಸ್ ಪೇದೆಗೆ ರಕ್ಷಣೆ ಕೊಡುವ ಸ್ಥಿತಿಯಲ್ಲಿಯೂ ಅವರಿಲ್ಲ. ಇದು ಒಂದು ಇಲಾಖೆಯ ಕತೆಯಲ್ಲ, ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಈ ಸ್ಥಿತಿ ಇದೆ. ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯಿಂದ ಕೆಲಸ ಮಾಡಬೇಕೆಂದು ಬಯಸುವವರ ನೈತಿಕಸ್ಥೈರ್ಯ ಕುಸಿದುಹೋಗುವಂತೆ ಮಾಡಲಾಗುತ್ತಿದೆ. ಭ್ರಷ್ಟರು ತಮಗೆ ಬೇಕಾದವರ `ಪ್ರಭಾವಳಿ`ಯ ರಕ್ಷಣೆಯಲ್ಲಿ ಪ್ರಜಾಪೀಡನೆ ನಡೆಸುತ್ತಾ ನಿಶ್ಚಿಂತೆಯಾಗಿದ್ದಾರೆ.

 ಆರೋಪಿ ಜನಾರ್ದನ ರೆಡ್ಡಿಯವರನ್ನು ನ್ಯಾಯಾಲಯಕ್ಕೆ ಕರೆತಂದ ದಿನ ಬೆಳಿಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಬ್ಬರು ಪತ್ರಕರ್ತರ ಬಳಿ ಬಂದು `ಇಂದು ನಿಮ್ಮ ಮೇಲೆ ದಾಳಿ ನಡೆಯಬಹುದು, ಎಚ್ಚರಿಕೆಯಿಂದ ಇರಿ` ಎಂದು ಹೇಳಿ ಹೋಗಿದ್ದರಂತೆ. ಅಂದರೆ ಪೂರ್ವನಿಯೋಜಿತವಾದ ಈ ದಾಳಿಯ ಮುನ್ಸೂಚನೆ ಪೊಲೀಸರಿಗೆ ಇತ್ತು ಎಂದಾಯಿತು. ಹಾಗಿದ್ದರೆ ಗೃಹಸಚಿವರಾದ ಆರ್.ಅಶೋಕ್ ಅವರಿಗೂ ಮಾಹಿತಿ ಇತ್ತೆಂದು ಆಯಿತಲ್ಲ? `ಇಲ್ಲ` ಎಂದು ಅವರು ಹೇಳಿದರೆ ಅವರ ದಕ್ಷತೆಯನ್ನು ಪ್ರಶ್ನಿಸಬೇಕಾಗುತ್ತದೆ. ಮಾಹಿತಿ ಇದ್ದೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಅವರು ತಿಳಿಸಿಲ್ಲ ಎಂದಾದರೆ ಅವರಿಗೆ ಬೇರೇನೋ ದುರುದ್ದೇಶ ಇದ್ದಿರಬಹುದು ಎಂದಾಗುತ್ತದೆ. 

ಇಡೀ ಅಪರಾಧದ ಘಟನಾವಳಿಗಳನ್ನು ಚಿತ್ರೀಕರಿಸಿದ ವಿಡಿಯೋ ಕ್ಲಿಪ್ಪಿಂಗ್ಸ್‌ಗಳು ಮತ್ತು ಚಿತ್ರಗಳು ಎದುರಿಗಿದ್ದರೂ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಹೆಚ್ಚು ಕಡಿಮೆ 30 ಗಂಟೆ ಬೇಕಾಗುವಂತಹ ವ್ಯವಸ್ಥೆಯಲ್ಲಿ ಜನರೆಷ್ಟು ಸುರಕ್ಷಿತರು? ಜನರಿಗೆ ಕನಿಷ್ಠ ಭದ್ರತೆಯ ಭಾವನೆಯನ್ನು ನೀಡಲಾಗದಿದ್ದರೆ ಸರ್ಕಾರವಾದರೂ ಯಾಕಿರಬೇಕು? ಮುಖ್ಯಮಂತ್ರಿಗಳು, ಸಚಿವ ಸಂಪುಟ ಯಾಕೆ ಬೇಕು?