Monday, December 5, 2011

ರಾಜಕೀಯದ ಎಂಜಲಲ್ಲಿ ಅಮಾಯಕರ ಉರುಳುಸೇವೆ

ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಮತ್ತು ಮೂಢನಂಬಿಕೆಯ ನಡುವಿನ ಗೆರೆ ತೀರಾ ತೆಳ್ಳನೆಯದು. ನಂಬಿಕೆಯ ಹಾದಿಯಲ್ಲಿ ಹೋಗುತ್ತಿರುವವರು ತುಸು ಹೆಜ್ಜೆ ತಪ್ಪಿದರೆ ಮೂಢನಂಬಿಕೆಯ ಕಂದಕಕ್ಕೆ ಜಾರಿಬಿಡುವ ಅಪಾಯ ಇದೆ.

ನಂಬಿಕೆ ಪ್ರಜ್ಞಾಪೂರ್ವಕವಾದ ನಡವಳಿಕೆ, ಮೂಢನಂಬಿಕೆ ಪ್ರಜ್ಞೆ ಇಲ್ಲದೆ ಮಾಡಿಕೊಳ್ಳುವ ಅಪಘಾತ. ಆದುದರಿಂದಲೇ ನಂಬಿಕೆ ಎಂದರೆ ಬದುಕು, ಮೂಢನಂಬಿಕೆ ಎಂದರೆ ಒಮ್ಮಮ್ಮೆ  ಸಾವು ಕೂಡಾ.

ನಂಬಿಕೆಯ ಹಾದಿಯಲ್ಲಿ ನಡೆಯುವವರನ್ನು ಮೂಢನಂಬಿಕೆಯ ಗುಂಡಿಗೆ ತಳ್ಳಲು ಕಾಯುತ್ತಿರುವವರು ಎಲ್ಲ ಧರ್ಮಗಳಲ್ಲಿ ಇರುತ್ತಾರೆ, ಹಿಂದೂ ಧರ್ಮದಲ್ಲಿ ಹೊಟ್ಟೆಪಾಡಿಗಾಗಿ ಅಮಾಯಕರ ದಾರಿ ತಪ್ಪಿಸುವ  ಕೆಲಸವನ್ನು ಮಾಡುತ್ತಾ ಬಂದವರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ.
ಖೊಟ್ಟಿ ಜ್ಯೊತಿಷಿಗಳು, ವಂಚಕ ಪೂಜಾರಿಗಳು, ಮಾಟ ಗಾರರು, ಮಂತ್ರವಾದಿಗಳು, ಕೈಮದ್ದು ಹಾಕುವವರು, ತಥಾಕಥಿತ ವಿದ್ವಾಂಸರು -ಇಂತಹವರ ದೊಡ್ಡ ವರ್ಗವೇ ಇದೆ. ಅವರಿಗಿಂತಲೂ ಅಪಾಯಕಾರಿಯಾದ ಹೊಸ ಪೀಳಿಗೆಯೊಂದು ಈಗ ಸೇರಿಕೊಂಡಿದೆ, ಇದು ರಾಜಕಾರಣಿಗಳದ್ದು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವುದು ನಂಬಿಕೆ-ಮೂಢನಂಬಿಕೆಗಳ ನಡುವಿನ ಸಂಘರ್ಷ ಅಲ್ಲವೇ ಅಲ್ಲ, ಅದು ಎಂಜಲು ರಾಜಕೀಯ. ರಕ್ತದ ರುಚಿಹತ್ತಿದ ಹುಲಿಯಂತೆ ಧರ್ಮದ ಹೆಸರಲ್ಲಿ ನಡೆಯುವ ವಿವಾದದ ರಾಜಕೀಯ ಲಾಭದ ರುಚಿ ಏನೆಂದು ಈ `ಎಂಜಲು ರಾಜಕೀಯ~ದಲ್ಲಿ ತೊಡಗಿರುವವರಿಗೆ ಗೊತ್ತಾಗಿಹೋಗಿದೆ.
ಅದಕ್ಕೆ ಹೀಗಾಗುತ್ತಿದೆ. `ಅಯ್ಯ ದಕ್ಷಿಣ ಕನ್ನಡದ ಬುದ್ಧಿವಂತರು ಹೀಗ್ಯಾಕೆ ಮತಾಂಧರಾಗಿ ಹೋದರು? ಎಂದು ಸಾಮಾನ್ಯವಾಗಿ ಅಚ್ಚರಿಪಡುತ್ತಿರುವವರಿಗೆ ಆ ಜಿಲ್ಲೆಯ ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸದ ಅರಿವು ಸರಿಯಾಗಿಲ್ಲ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 75ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಮೂಲನಿವಾಸಿಗಳಾದ ಕೊರಗರು, ಮಲೆಕುಡಿಯರು, ಬಿಲ್ಲವರು, ಮೊಗವೀರರು, ಬಂಟರು, ಗೌಡರು ಯಾರೇ ಇರಲಿ,  ಅವರ‌್ಯಾರೂ ವೈದಿಕ ಸಂಸ್ಕೃತಿ-ಸಂಪ್ರದಾಯವನ್ನು ಆಚರಣೆ ಮಾಡಿಕೊಂಡು ಬಂದವರಲ್ಲ. ಅವರ ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಗುಡ್ಡಗಾಡು ಜನಾಂಗದ ಕೆಲವು ಗುಣಲಕ್ಷಣಗಳಿವೆ.

ಅಲ್ಲಿಯೂ ರಾಮ, ಕೃಷ್ಣ, ಶಿವನ ದೇವಾಲಯಗಳಿವೆ ನಿಜ, ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭೂತದ ಸಾನಗಳು, ನಾಗನ ಬನಗಳು, ಗರೋಡಿಗಳು ಇವೆ.
ಈ ಮೂಲ ನಿವಾಸಿಗಳ `ದೇವರು~ಗಳೇನೇ ಇದ್ದರೂ ಕೋಡ್ದಬ್ಬು, ಜುಮಾದಿ, ಪಂಜುರ್ಲಿ, ನಾಗಬ್ರಹ್ಮ, ಸಿರಿ, ಕೋಟಿ ಚೆನ್ನಯ, ಕಾಂತಬಾರೆ ಬುದಭಾರೆಗಳು. ಈ ಭೂತ-ದೈವ್ವಗಳೆಲ್ಲ ಅನ್ಯಾಯದ ವಿರುದ್ದ ಹೋರಾಡಿ ಹುತಾತ್ಮರಾದ ಹಿಂದಿನ ತಲೆಮಾರುಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರು. 
ಪ್ರತಿ ಊರಿಗೆ ಮಾತ್ರವಲ್ಲ ಪ್ರತಿ ಕುಟುಂಬಕ್ಕೂ ಒಂದು ಭೂತ, ನಾಗ ಇರುತ್ತದೆ. ಕಷ್ಟ ಬಂದಾಗ ಅದಕ್ಕೆ ಹರಕೆಹೊರುತ್ತಾರೆ, ಇಷ್ಟಾರ್ಥ ನೆರವೇರದಿದ್ದಾಗ ಮನೆಯವನಿಗೆ ಬೈದ ಹಾಗೆ ಬೈಯ್ಯುತ್ತಾರೆ, ಫಲಸಿಕ್ಕಿದಾಗ ಉಣ್ಣುವ, ತಿನ್ನುವ, ಉಡುವ ಎಲ್ಲವನ್ನೂ ಅರ್ಪಿಸಿ ಕಣ್ಣುತೇವ ಮಾಡಿಕೊಳ್ಳುತ್ತಾರೆ.
ಈಗ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿಗಳ ರೀತಿ ಈ ಭೂತಗಳು ಯಾವ ಕುಟುಂಬವನ್ನು ಒಡೆದಿಲ್ಲ, ದ್ವೇಷ ಬಿತ್ತಿಲ್ಲ, ಜಗಳ ತಂದು ಹಾಕಿಲ್ಲ. ಅವುಗಳು ನಿಜವಾದ ರಕ್ಷಕರು ಮತ್ತು ಕೌಟುಂಬಿಕ ಸಲಹೆಗಾರರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆಯುವ ಭೂತದ ಕೋಲದ ಕೊನೆಯ ಘಟ್ಟ ಬೆಳಗಿನ ಜಾವ ನಡೆಯುವ ಹರಕೆ ಕಾರ‌್ಯಕ್ರಮ. ಅಲ್ಲಿ ಊರಿನ ಜನ ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ತೋಡಿಕೊಂಡು ಭೂತ ನೀಡುವ ಅಭಯದಿಂದ ಪರಿಹಾರ ಪಡೆದುಕೊಳ್ಳುತ್ತಾರೆ.
ಕಾಯಿಲೆ ಬಿದ್ದವರು ಪಂಜುರ್ಲಿ ನೀಡುವ ಪ್ರಸಾದದಿಂದ `ಗುಣಮುಖ~ರಾಗುತ್ತಾರೆ, ಮಕ್ಕಳಾಗದ ದಂಪತಿಗೆ  ಕೋರ‌್ದಬ್ಬು ನೀಡುವ ಕರಿಗಂಧವನ್ನು ತಿಂದ ನಂತರ `ಮಕ್ಕಳಾಗುತ್ತವೆ~, ಮಗಳಿಗೆ ಮದುವೆಯಾಗಲು `ಸಂಬಂಧಕೂಡಿ~ ಬರುತ್ತವೆ.
ಕಚ್ಚಾಡಿಕೊಂಡ ಅಣ್ಣ-ತಮ್ಮಂದಿರು ಭೂತ ನಡೆಸಿದ ಪಂಚಾಯಿತಿಯಿಂದ ಒಂದಾಗುತ್ತಾರೆ, ಪರಊರಿಗೆ ಹೋದ ಮಕ್ಕಳು ಊರಿನ ಭೂತ ಹಾಕಿದ ಒಂದು ಬೆದರಿಕೆಯಿಂದ ಓಡಿ ಬಂದು ತಂದೆ-ತಾಯಿ ಕಾಲು ಹಿಡಿಯುತ್ತಾರೆ.
ಇನ್ನೂ ಬುದ್ಧಿ ಬಲಿಯದೆ ಇದ್ದ ಬಾಲ್ಯದ ದಿನಗಳಲ್ಲಿ ಇದು ಭೂತದ ಕಾರಣೀಕ ಎಂದು ಎಲ್ಲರಂತೆ ನಮ್ಮಂತವಹರೂ ತಿಳಿದುಕೊಂಡಿದ್ದೆವು. ಬುದ್ಧಿ ಬೆಳೆದ ಹಾಗೆ ಇದರ ಹಿಂದಿನ ಗುಟ್ಟುಗಳೆಲ್ಲ ಒಂದೊಂದಾಗಿ ಅರಿವಾಗತೊಡಗಿತ್ತು.
ಈಗಲೂ ಇದು ನಡೆಯುತ್ತಿದೆ. ಆದರೆ ಜನೋಪಕಾರಿಯಾದ ಮತ್ತು ಸಮಾಜಕ್ಕೆ ಅಪಾಯಕಾರಿಯಲ್ಲದ ಇಂತಹ ನಂಬಿಕೆಗಳ ಪೊಳ್ಳುತನವನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಯಾವ ವಿಚಾರವಾದಿಯೂ ಬಂದು ಇದನ್ನು ತಡೆಯುವುದಿಲ್ಲ, ಇದನ್ನು ಮೂಢನಂಬಿಕೆ ಎಂದು ಹೀಯಾಳಿಸುವುದಿಲ್ಲ.
ಯಾಕೆಂದರೆ ಅಲ್ಲಿ ಭಕ್ತರ ಶೋಷಣೆ ಇರುವುದಿಲ್ಲ. ಇಷ್ಟೆಲ್ಲ ಸೇವೆಗೆ ಭೂತ ಕೇಳುತಿದ್ದದ್ದು ಏನು? `ಒಂದು ಚೆಂಡು ಮಲ್ಲಿಗೆ~ ಒಂದು ಗೊನೆ ಎಳೆನೀರು, ಒಂದು ಹಾಳೆ ಪಿಂಗಾರ  ಇನ್ನೂ ಹೆಚ್ಚೆಂದರೆ ಇನ್ನೊಂದು ಕೋಲ-ನೇಮದ ಸೇವೆ. ಅಲ್ಲಿ ಶೋಷಣೆ ಇಲ್ಲ, ಯಾರ ಆತ್ಮಗೌರವವನ್ನೂ ಅದು ಕೆಣಕುವುದಿಲ್ಲ. ಭೂತದ ಪಾತ್ರಧಾರಿಯಾದ ದಲಿತ ಸಮುದಾಯಕ್ಕೆ ಸೇರಿದ ಪಂಬದ ಇಲ್ಲವೇ ನಲ್ಕೆಯವನ ಮುಂದೆ ಮೇಲ್ಜಾತಿ-ಕೆಳಜಾತಿ ಎನ್ನದೆ ಎಲ್ಲರೂ ಕೈಮುಗಿದು ತಲೆತಗ್ಗಿಸಿ ನಿಲ್ಲುತ್ತಾರೆ.
ಆದರೆ ಈ ಭೂತದ ಕೋಲ-ನೇಮಗಳು ಕೂಡಾ ಹಿಂದಿನಷ್ಟು ಸರಳವಾಗಿ ಉಳಿದಿಲ್ಲ, ಇವುಗಳು ವಾಣಿಜ್ಯೀಕರಣಗೊಳ್ಳಲು ತೊಡಗಿ ಬಹಳ ದಿನಗಳಾಗಿವೆ. ಪಾಡ್ದನ-ಭಜನೆ ಹಾಡುಗಳಿಗೆ, ತೆಂಬರೆ-ದುಡಿಗಳ ವಾದನಕ್ಕೆ ಹೆಜ್ಜೆ ಹಾಕುತ್ತಿದ್ದ ಭೂತಗಳು ಈಗ ಜನಪ್ರಿಯ ಚಿತ್ರಗೀತೆಗಳಿಗೆ ಕುಣಿಯತೊಡಗಿವೆ.

ವೇಷಭೂಷಣ, ಕೋಲದ ದೊಂಪ, ಅಲಂಕಾರ ಎಲ್ಲವೂ ಬದಲಾಗುತ್ತಾ ಬಂದಿದೆ. ಇದೇ ಹೊತ್ತಿಗೆ ಸರಿಯಾಗಿ  `ಅವಿಭಜಿತ ದಕ್ಷಿಣ ಕನ್ನಡ~ವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಲು ಹೊರಟವರು ಶೂದ್ರ ಸಮುದಾಯದ ಆರಾಧಾನ ಕೇಂದ್ರಗಳಾದ ಈ ಭೂತ, ದೈವ್ವ, ನಾಗಗಳ ಲೋಕವನ್ನು ಪ್ರವೇಶಿಸಿದ್ದಾರೆ.
ಕೋಲ ನಡೆಯುವ ಸ್ಥಳಗಳಲ್ಲಿ ಭಗವಧ್ವಜಗಳು, ಹಿಂದುಗಳ ಏಕತೆ ಸಾರುವ ಬ್ಯಾನರ್‌ಗಳು ರಾರಾಜಿಸತೊಡಗಿವೆ. ಈಗ  ಭೂತಗಳು ಕೂಡಾ ಒಮ್ಮಮ್ಮೆ ಹಿಂದುಗಳ ಏಕತೆ ಬಗ್ಗೆ ಭಾಷಣ ಮಾಡಿಬಿಡುವುದುಂಟು. ಮುಂಬೈ ಕಡೆಯಿಂದ ಹರಿದುಬರುತ್ತಿರುವ ಹಣದ ಹೊಳೆಯನ್ನು ಬಳಸಿಕೊಂಡು  ಸಾನ-ಗರೋಡಿ, ನಾಗಬನಗಳ ಜೀರ್ಣೋದ್ಧಾರ ನಡೆಯುತ್ತಿದೆ. ಅಮಾಯಕ ಭೂತ, ದೈವ್ವ, ನಾಗಗಳು ಕೂಡಾ ಯಾವುದೋ `ಅದೃಶ್ಯ ಶಕ್ತಿ~ಗಳ ಕೈಗೊಂಬೆಗಳಾಗಿ ಕುಣಿಯತೊಡಗಿವೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನದ ವೈಭವೀಕರಣ ಇದೇ ಕಾರ‌್ಯಸೂಚಿಯ ಮುಂದುವರಿದ ಭಾಗ. ಇತ್ತೀಚಿನ ವರ್ಷಗಳವರೆಗೂ ಧರ್ಮಸ್ಥಳದ ಮಂಜುನಾಥ ದರ್ಶನ ಮಾಡಲಿಕ್ಕೆ ಹೋದವರು ಸುಬ್ರಹ್ಮಣ್ಯಕ್ಕೆ ಹೋಗಿ ಬರುತ್ತಿದ್ದರು. ಆದರೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಅದರ ಚಹರೆಯೇ ಬದಲಾಗಿ ಹೋಯಿತು.
ರವಿಶಾಸ್ತ್ರಿ, ಸಚಿನ ತೆಂಡೂಲ್ಕರ್ ಮೊದಲಾದ ಕ್ರಿಕೆಟಿಗರು, ಸಿನಿಮಾನಟರು, ಗಣ್ಯರು ದಂಡು ಕಟ್ಟಿ ಹೋಗತೊಡಗಿದರು. ಭ್ರಷ್ಟರಾಜಕಾರಣಿಗಳು ತಮ್ಮ ಪಾಪದ ಭಾರ ಇಳಿಸಿಕೊಳ್ಳಲು ಅಲ್ಲಿಗೆ ಬಂದು ತುಲಾಭಾರ ನಡೆಸತೊಡಗಿದರು. ಇವೆಲ್ಲವೂ ಆಕಸ್ಮಿಕವಾಗಿ ನಡೆದ ಬೆಳವಣಿಗೆಗಳಲ್ಲ, ಇಂತಹ `ಹುಚ್ಚುತನಗಳಲ್ಲಿಯೂ ಒಂದು ಕ್ರಮ~ ಇರುತ್ತದೆ.
ಇಂತಹ ಗೊಡ್ಡು ಆಚರಣೆಗಳನ್ನು ವಿರೋಧಿಸುತ್ತಿರುವವರೆಲ್ಲರೂ `ಹಿಂದೂ ವಿರೋಧಿ~ಗಳು ಮತ್ತು ಸಮರ್ಥಿಸುತ್ತಿರುವವರು `ಹಿಂದೂ ಧರ್ಮದ ರಕ್ಷಕ~ರು ಬ್ರಾಂಡ್ ಮಾಡುತ್ತಾ, ತಮ್ಮ ಬಳಗವನ್ನು ವಿಸ್ತರಿಸುತ್ತಾ ಹೋಗುವ ಹುನ್ನಾರ ಇದು. ಸಿದ್ಧಾಂತ ಮತ್ತು ಕಾರ‌್ಯಕ್ರಮಗಳ ಆಧಾರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ನಡೆಯಬೇಕಾದ ಹೋರಾಟ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೇವಸ್ಥಾನ, ಭೂತಗಳ ಸಾನ, ನಾಗನ ಬನಗಳ ಅಂಗಳಗಳಲ್ಲಿ ನಡೆಯುತ್ತಿದೆ.
ಮಡೆಸ್ನಾನದ ಸಮೂಹಸನ್ನಿಯನ್ನು ಅರ್ಥಮಾಡಿಕೊಳ್ಳಲು ಕುಕ್ಕೆ ಸುಬ್ರಹ್ಮಣ್ಯ ಇರುವ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರವನ್ನು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಿಂದ ಅಧ್ಯಯನ ಮಾಡಿದರೆ ಸಾಕು. ಈ ಕ್ಷೇತ್ರವನ್ನು ಬಿಜೆಪಿಗೆ ಸೇರಿರುವ ಟಿ.
ಅಂಗರ ಅವರು ಕಳೆದ ಐದು ಅವಧಿಗಳಲ್ಲಿ ಪ್ರತಿನಿಧಿಸುತ್ತಾ ಬಂದಿದ್ದಾರೆ. ಊಳಿಗಮಾನ್ಯ ವ್ಯವಸ್ಥೆಯ ಬೇರುಗಳು ಇನ್ನೂ ಬಲವಾಗಿರುವ ಈ ಕ್ಷೇತ್ರದಲ್ಲಿ ಅಂಗರ ಅವರು ತಮ್ಮದೇ ಸಮುದಾಯದ ಜನ ಎಂಜಲೆಲೆ ಮೇಲೆ ಉರುಳಾಡತ್ತಿದ್ದರೂ ತಪ್ಪು ಎಂದು ಬಹಿರಂಗವಾಗಿ ಹೇಳಲಾರದಷ್ಟು ಅಸಹಾಯಕರು.

ಅವರು ಮಾತ್ರವಲ್ಲ ಅವರ ವಿರುದ್ಧ ಸ್ಪರ್ಧಿಸುತ್ತಾ ಬಂದ ಬೇರೆ ಪಕ್ಷದವರೂ ಮಡೆಸ್ನಾನದ ವಿರುದ್ಧ ತಪ್ಪಿಯೂ ಮಾತನಾಡುವುದಿಲ್ಲ.  ದಲಿತರೊಬ್ಬರು ಅಧ್ಯಕ್ಷರು ಮತ್ತು ಹಿಂದುಳಿದ ಜಾತಿ ನಾಯಕರೊಬ್ಬರು ವಿರೋಧಪಕ್ಷದ ನಾಯಕರಾಗಿರುವ ರಾಜ್ಯ ಕಾಂಗ್ರೆಸ್ ವಹಿಸಿರುವ ಮೌನಕ್ಕೆ ಏನನ್ನಬೇಕು?
ವೈದ್ಯರು, ಆಸ್ಪತ್ರೆ, ಆಧುನಿಕ ಔಷಧಿಗಳ್ಯಾವುದೂ ಇಲ್ಲದ ಕಾಲದಲ್ಲಿ ಅಸಹಾಯಕ ಜನ ಇಂತಹ ನಂಬಿಕೆಗಳನ್ನು ಹೊಂದಿರಬಹುದು. ಈಗಲೂ ಹಳ್ಳಿಗಳಲ್ಲಿ ಜ್ವರಬಂದರೆ ತಾಯತ ಕಟ್ಟುವ, ಮಂತ್ರಹಾಕುವ `ಚಿಕಿತ್ಸೆ~ ನೀಡಲಾಗುತ್ತದೆ.
ಇವುಗಳ ಮೇಲಿನ ನಂಬಿಕೆಯಿಂದ ಹುಟ್ಟುವ ಆತ್ಮವಿಶ್ವಾಸ ಸಣ್ಣ-ಪುಟ್ಟರೋಗಗಳನ್ನು ಗುಣಪಡಿಸುತ್ತದೆ ಕೂಡಾ. ಆದರೆ ಇದನ್ನು ಸಮರ್ಥಿಸಿಕೊಳ್ಳಲಾದೀತೇ? ಎಂಜಲೆಲೆ ಯಾರದ್ದೇ ಇರಲಿ ಅದರಲ್ಲಿ ಬೇಕಾದರೆ ಉಂಡವರೇ ಉರುಳಾಡಲಿ, ಆಗಲೂ ಅದು ತಪ್ಪು. ಎಂಜಲು ಮೈಗೆ ಅಂಟುವುದರಿಂದ ರೋಗ ಗುಣವಾಗುವುದು ಒತ್ತಟ್ಟಿಗಿರಲಿ ರೋಗ ಅಂಟಿಕೊಳ್ಳದಿದ್ದರೆ ಸಾಕು.

ಯಾಕೆಂದರೆ ಎಂಜಲಿನ ಮೂಲಕ ಹರಡುವ ರೋಗಗಳೂ ಇವೆ. ಉಡಾಫೆ ಮಾತುಗಳಿಂದ ಆಗಾಗ ಮನರಂಜನೆ ನೀಡುತ್ತಿರುವ ಸಚಿವ ರೇಣುಕಾಚಾರ್ಯರಂತಹವರು ಇದನ್ನು ಸಮರ್ಥಿಸಿ ಮಾತನಾಡಿದ್ದರೆ ನಕ್ಕು ಸುಮ್ಮನಿರಬಹುದಿತ್ತು.

ಆದರೆ ವೈದ್ಯಕೀಯ ವಿಜ್ಞಾನವನ್ನು ವ್ಯಾಸಂಗ ಮಾಡಿರುವ ಡಾ.ವಿ.ಎಸ್.ಆಚಾರ್ಯ ಅವರಂತಹವರೇ ಸಮರ್ಥನೆಗೆ ಇಳಿದುಬಿಟ್ಟರೇ? `ಎಂಜಲೆಲೆ ಮೇಲೆ ಉರುಳಾಡುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ~ ಎಂದು ಭಾರತೀಯ ವೈದ್ಯಕೀಯ ಮಂಡಳಿ ಮುಂದೆ ಹೇಳುವ ಧೈರ್ಯ ಡಾ.ಆಚಾರ್ಯರಲ್ಲಿದೆಯೇ? ಇಷ್ಟು ಸುಲಭದ ಚಿಕಿತ್ಸೆಯ ಉಪಾಯಗಳಿದ್ದರೆ ಜನರ ತೆರಿಗೆಯ ಕೋಟ್ಯಂತರ ರೂಪಾಯಿಗಳನ್ನು ನುಂಗಿಹಾಕುತ್ತಿರುವ ಆರೋಗ್ಯ ಇಲಾಖೆ, ಒಬ್ಬರು ಸಚಿವರು, ಸರ್ಕಾರಿ ಆಸ್ಪತ್ರೆಗಳು, ವೈದ್ಯರು, ವೈದ್ಯಕೀಯ ಕಾಲೇಜುಗಳು ಯಾಕೆ ಬೇಕು? ಆಚಾರ್ಯರು ಯಾಕೆ ಎಂಬಿಬಿಎಸ್ ಓದಿ ವೈದ್ಯರಾಗಬೇಕಿತ್ತು?
ಬೆತ್ತಲೆಸೇವೆ, ದೇವದಾಸಿ ಪದ್ಧತಿ, ಸತಿಸಹಗಮನ, ಅಜಲು ಪದ್ಧತಿ ಮೊದಲಾದವುಗಳೆಲ್ಲ ಧರ್ಮದ ಪೋಷಾಕು ತೊಟ್ಟ ನಂಬಿಕೆಯ ಹೆಸರಲ್ಲಿಯೇ ನಡೆಯುತ್ತಿದ್ದ ಕಂದಾಚಾರಗಳು. ಅವುಗಳನ್ನು ನಡೆಸುತ್ತಿದ್ದವರ‌್ಯಾರೂ ಸರ್ಕಾರಕ್ಕೆ ಅರ್ಜಿ ಹಾಕಿ ನಿಷೇಧ ಹೇರಲು ಕೋರಿಲ್ಲ.
ಜಾಗೃತ ಸಮುದಾಯದ ಒತ್ತಡಕ್ಕೆ ಮಣಿದು ಸರ್ಕಾರವೇ ನಿಷೇಧಿಸಿದ್ದು. ಜನಮತಗಣನೆ ನಡೆಸಿ ಇಂತಹ ಮೂಢನಂಬಿಕೆಗಳನ್ನು ತೊಡೆದುಹಾಕಲು ಸಾಧ್ಯವೇ ಇಲ್ಲ, ಅಂತಹ ನಿದರ್ಶನಗಳೂ ದೇಶದಲ್ಲೆಲ್ಲೂ ಇಲ್ಲ. ಸಮಾಜದಲ್ಲಿ ಅಸ್ಪೃಶ್ಯತೆ ಕಡಿಮೆಯಾಗಿರುವುದು ಅದನ್ನು ಆಚರಿಸುವವರಲ್ಲಿ ಉಂಟಾಗಿರುವ ಜ್ಞಾನೋದಯದಿಂದಲೇ ಅಲ್ಲ, ಅದಕ್ಕೆ ಮುಖ್ಯ ಕಾರಣ ಸರ್ಕಾರ ಜಾರಿಗೆ ತಂದಿರುವ ಕಾನೂನು. ಮೂಢನಂಬಿಕೆಗಳ ವಿರುದ್ಧದ ಹೋರಾಟವನ್ನು ಜಾಗೃತ ಜನಸಮುದಾಯ ಮತ್ತು ಕಾನೂನು ಜತೆಜತೆಯಾಗಿ ನಡೆಸಬೇಕಾಗುತ್ತದೆ.
ಭಾರತದ ಧಾರ್ಮಿಕ ಪರಂಪರೆಯಷ್ಟೇ ದೀರ್ಘವಾದುದು ಅದಕ್ಕೆ ಎದುರಾಗಿ ಬಂದ ಸುಧಾರಣಾವಾದಿ ಚಳವಳಿಗಳ ಪರಂಪರೆ. ಬುದ್ಧ ಬಸವನಿಂದ ಪ್ರಾರಂಭಗೊಂಡು ಜ್ಯೋತಿಬಾ ಪುಲೆ, ನಾರಾಯಣಗುರು, ಪೆರಿಯಾರ್, ಅಂಬೇಡ್ಕರ್, ಗಾಂಧಿ, ಲೋಹಿಯಾ, ಸ್ವಾಮಿ ವಿವೇಕಾನಂದ, ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ ಮೊದಲಾದವರ  ವರೆಗೆ ನಡೆದುಕೊಂಡು ಬಂದ ಈ ಚಳವಳಿಗಳಲ್ಲಿ ಪ್ರತಿಭಟನೆಯ ಭಿನ್ನ ಅಭಿವ್ಯಕ್ತಿಗಳನ್ನು ಕಾಣಬಹುದು.
ಧರ್ಮ ಸಮಾಜವನ್ನು ಜಡಗೊಳಿಸಿದಾಗೆಲ್ಲ ಅದಕ್ಕೆ ಚಲನಶೀಲತೆಯನ್ನು ತಂದುಕೊಟ್ಟದ್ದು ಈ ಚಳುವಳಿಗಳು. ಸನಾತನ ಎಂದು ಹೇಳಿಕೊಳ್ಳುವ ಹಿಂದೂ ಧರ್ಮ ಉಳಿದುಕೊಂಡದ್ದೇ ಈ ಸುಧಾರಣಾವಾದಿ ಚಳವಳಿಗಳು ಕೆಟ್ಟದ್ದನ್ನು ಕಳಚಿಕೊಂಡು ಒಳ್ಳೆಯದನ್ನು ಪಡೆದುಕೊಂಡು ಬೆಳೆಯಲು ನೀಡುತ್ತಾ ಬಂದ ಒತ್ತಾಸೆಯ ಮೂಲಕ. `ತಾಲೀಬಾನಿಕರಣ~ದ ಮೂಲಕ ಧರ್ಮ ಬೆಳೆಯಲಾರದು.
ಇದು ನಡೆಯದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ಸಿ.ಆರ್.ರಾಜಗೋಪಾಲಾಚಾರಿ ಅವರು ಕೇರಳದಲ್ಲಿ ನಾರಾಯಣಗುರು ಚಳವಳಿ ನಡೆಯುತ್ತಿದ್ದ ಕಾಲದಲ್ಲಿ ತಿರುವಾಂಕೂರು ಸಂಸ್ಥಾನದ ದಿವಾನರಿಗೆ ಬರೆದ ಪತ್ರದಲ್ಲಿ ಉತ್ತರ ಇದೆ. ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದುದನ್ನು ಕಂಡ ರಾಜಗೋಪಾಲಾಚಾರಿ ಅವರು ದಿವಾನರಿಗೆ ಪತ್ರಬರೆದು `ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದೆ ಇದ್ದರೆ ಕೇರಳದಲ್ಲಿ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರೈಸ್ತಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು~ ಎಂದು ಎಚ್ಚರಿಸಿದ್ದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂ ಧರ್ಮದಿಂದ ಮತಾಂತರ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ದಾಂದಲೆ ಮಾಡುತ್ತಿರುವವರೇ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದೇ `ಹಿಂದೂ~ಗಳನ್ನು  ಎಂಜಲೆಲೆಯಲ್ಲಿ ಉರುಳಾಡಿಸುತ್ತಿರುವುದು ಎಂತಹ ವ್ಯಂಗ್ಯ ಅಲ್ಲವೇ?

Monday, November 28, 2011

ನಾಯಕನೊಬ್ಬ ಖಳನಾಯಕನಾಗುತ್ತಾ ಹೋದ ದುರಂತ ಕತೆ

ಅಧಿಕಾರದಲ್ಲಿದ್ದಾಗ ರಾಜಕಾರಣಿಗಳು ಭ್ರಷ್ಟರೆನಿಸಿಕೊಂಡು, ಕಳಂಕ ಹಚ್ಚಿಕೊಂಡು ಜನಪ್ರಿಯತೆ ಕಳೆದುಕೊಳ್ಳುವುದು ಸಾಮಾನ್ಯ. ಅಧಿಕಾರದಲ್ಲಿದ್ದಾಗ ಜನಪ್ರಿಯರಾಗಿದ್ದವರು ವಿರೋಧಪಕ್ಷದಲ್ಲಿದ್ದಾಗ ಹೆಸರು ಕೆಡಿಸಿಕೊಂಡು ಜನರ ದೂಷಣೆಗೊಳಗಾಗುವುದು ಅಷ್ಟೇನೂ ಸಾಮಾನ್ಯ ಅಲ್ಲ.
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎರಡನೆಯ `ಅಸಾಮಾನ್ಯ~ರ ಗುಂಪಿಗೆ ಸೇರಿದವರು. ಮುಖ್ಯಮಂತ್ರಿಯಾಗಲು ತಂದೆಯ ವಿರುದ್ಧವೇ `ಬಂಡಾಯ~ ಎದ್ದವರು, ತಮ್ಮ ಪಕ್ಷದ ಜಾತ್ಯತೀತ ನೀತಿಯನ್ನೇ ಗೇಲಿ ಮಾಡಿದ್ದವರು  ಮತ್ತು ತಮ್ಮ ಪಕ್ಷ ವಿರೋಧಿಸುತ್ತಾ ಬಂದ ಬಿಜೆಪಿ ಜತೆಗೇ ಕೈಜೋಡಿಸಿದ್ದವರು ಕುಮಾರಸ್ವಾಮಿ.
ಮುಖ್ಯಮಂತ್ರಿಯಾದ ನಂತರ ಈ ಮೂರು ಕಾರಣಗಳಿಗಾಗಿ ಅವರು ಜನಪ್ರಿಯತೆ ಕಳೆದುಕೊಳ್ಳಬೇಕಿತ್ತು. ಕುಮಾರಣ್ಣನ ನಡೆ ಬಗ್ಗೆ ದೊಡ್ಡಗೌಡರ ಬೆಂಬಲಿಗರು ಅಸಮಾಧಾನಗೊಳ್ಳಬೇಕಿತ್ತು.

ಅವರ ಆತ್ಮವಂಚನೆಯ ಮಾತಿನ ಬಗ್ಗೆ ಜನ ಅವರನ್ನು ದೂಷಿಸಬೇಕಿತ್ತು. ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಆ ಪಕ್ಷದ ವಿರೋಧಿಗಳೆಲ್ಲ ಜೆಡಿ (ಎಸ್)ವಿರೋಧಿಗಳಾಗಬೇಕಿತ್ತು.
ಅಂತಹದ್ದೇನೂ ಆಗಲೇ ಇಲ್ಲ, ಅವರ ಪಕ್ಷದ  ಕಾರ್ಯಕರ್ತರು ಮತ್ತು ರಾಜ್ಯದ ಜನತೆ ಕುಮಾರಸ್ವಾಮಿ ಬಗ್ಗೆ ಉದಾರವಾಗಿ ನಡೆದುಕೊಂಡಿದ್ದರು. ಅವರು ಇಪ್ಪತ್ತು ತಿಂಗಳ ಅವಧಿಯ ಜನಪ್ರಿಯ ಮುಖ್ಯಮಂತ್ರಿ.
ಅಭೂತಪೂರ್ವ ಸಾಧನೆ ಮಾಡಿ ಅವರು ಈ ಜನಪ್ರಿಯತೆ ಗಳಿಸಿದ್ದಲ್ಲ. ದ್ವೇಷಾಸೂಯೆ ಇಲ್ಲದ ಅವರ ಆ ಕಾಲದ ನಡವಳಿಕೆ, ಸಾಮಾನ್ಯ ಜನರ ಜತೆಗೆ ಅವರು ಒಂದಾಗುತ್ತಿದ್ದ ರೀತಿ, ತಪ್ಪು ಮಾತನಾಡಿದರೂ ಅದನ್ನು ತಿದ್ದಿಕೊಳ್ಳುತ್ತಿದ್ದ ವಿನಯವಂತಿಕೆ, ಜನಪರವಾದ ಕೆಲಸಗಳನ್ನು ಮಾಡಿ ಜನಪ್ರೀತಿ ಗಳಿಸಬೇಕೆಂಬ ಅವರ ತುಡಿತ -ಇವೆಲ್ಲವೂ ಅವರನ್ನು ಜನಪ್ರಿಯ ಮಾಡಿತ್ತು.
ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ಮುಖ್ಯಮಂತ್ರಿಗಳೆನಿಸಿದವರು ಇಬ್ಬರು. ಒಬ್ಬರು ರಾಮಕೃಷ್ಣ ಹೆಗಡೆ, ಇನ್ನೊಬ್ಬರು ಎಸ್.ಎಂ.ಕೃಷ್ಣ. ಶಿಕ್ಷಣ, ಓದು, ಅನುಭವ, ಚಿಂತನೆ, ಸಂಪರ್ಕ- ಇವು ಯಾವುದರಲ್ಲಿಯೂ ಕುಮಾರಸ್ವಾಮಿಯವರನ್ನು ಅವರಿಬ್ಬರಿಗೆ ಹೋಲಿಸಲಾಗದು.
ಅವರಿಬ್ಬರೂ ನಗರದ `ಜಂಟಲ್‌ಮೆನ್~ಗಳಾದರೆ, ಕುಮಾರಸ್ವಾಮಿ `ಹಳ್ಳಿ ಹೈದ~. ಜಾಗತೀಕರಣದ ನಂತರದ ದಿನಗಳಲ್ಲಿ ಆಳುವ ದೊರೆಗಳೆಲ್ಲ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ, ತಮ್ಮ ವಿರುದ್ಧವೇ ಸಂಚು ಮಾಡುತ್ತಿದ್ದಾರೆ ಎಂಬ ಕೊರಗು ಮತ್ತು ಆತಂಕದಲ್ಲಿರುವ ಹಳ್ಳಿಜನರಲ್ಲಿ ಕುಮಾರಸ್ವಾಮಿ `ನಮ್ಮವ~ನೆಂಬ ಭಾವನೆ ಹುಟ್ಟಿಸಿದ್ದು ನಿಜ.
ಇವೆಲ್ಲಕ್ಕಿಂತಲೂ ಹೆಚ್ಚಾಗಿ ಪ್ರತೀಕಾರ ಮತ್ತು ಸಂಘರ್ಷದ ರಾಜಕೀಯಕ್ಕೆ ಹೆಸರಾದ ದೇವೇಗೌಡರ ನಡವಳಿಕೆಗೆ ವಿರುದ್ಧವಾದ ಸ್ನೇಹಶೀಲ ಗುಣವೂ ಅವರನ್ನು ಜನಪ್ರಿಯ ಮಾಡಿತ್ತು.
ಜನ ಮೆಚ್ಚಿದ್ದು ಕುಮಾರಸ್ವಾಮಿ ದೇವೇಗೌಡರ ಮಗ ಎಂಬ ಕಾರಣಕ್ಕಲ್ಲ, ಮಗನಾದರೂ ಅವರ ಹಾಗೆ ಇಲ್ಲ ಎನ್ನುವ ಕಾರಣಕ್ಕೆ. ಇದರಿಂದಾಗಿಯೇ ಉತ್ತರ ಕರ್ನಾಟಕದಲ್ಲಿ ಎಂದೂ ದೇವೇಗೌಡರ ಸಭೆಗೆ ಸೇರದಷ್ಟು ಜನ ಕುಮಾರಸ್ವಾಮಿ ಸಭೆಗೆ ಸೇರುತ್ತಿದ್ದರು.
ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡದೆ, ದೀರ್ಘವಾದ ರಾಜಕೀಯ ಅನುಭವವೂ ಇಲ್ಲದೆ ಕ್ಷಿಪ್ರಗತಿಯಲ್ಲಿ ಇಷ್ಟೊಂದು ಜನಪ್ರಿಯರಾದ ಮುಖ್ಯಮಂತ್ರಿಯನ್ನು ಕರ್ನಾಟಕ ಎಂದೂ ಕಂಡಿಲ್ಲ.
ರಾಜ್ಯದ ಬಹಳಷ್ಟು ಪ್ರಜ್ಞಾವಂತರು ಕುಮಾರಸ್ವಾಮಿಯವರಲ್ಲಿ ಭವಿಷ್ಯದ ನಾಯಕನನ್ನು ಕಂಡಿದ್ದರು.
ಇಂತಹ ಮುಖ್ಯಮಂತ್ರಿಯಾಗಿದ್ದ ಎಚ್. ಡಿ.ಕುಮಾರಸ್ವಾಮಿಯವರ ಬಗ್ಗೆ ಈಗ ಯಾರಾದರೂ ಜನಾಭಿಪ್ರಾಯ ಸಂಗ್ರಹ ಮಾಡಿದರೆ ಬಹುಶಃ  ಅವರ ಜನಪ್ರಿಯತೆಯ ಸೂಚ್ಯಂಕ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗಿಂತಲೂ ಕೆಳಗಿರಬಹುದು.
ಹಾಲಿ ಆಗಿದ್ದಾಗ ಶಿಖರದಲ್ಲಿದ್ದ ಜನಪ್ರಿಯತೆ ಮಾಜಿ ಆದ ಮೇಲೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಕರ್ನಾಟಕದ ಆಡಳಿತಾರೂಢರು ದೇಶದಲ್ಲಿಯೇ ಅತೀ ಭ್ರಷ್ಟರು ಎಂಬ ಅಭಿಪ್ರಾಯ ಇರುವ ಕಾಲದಲ್ಲಿ ವಿರೋಧಪಕ್ಷದ ನಾಯಕನೊಬ್ಬ ಈ ರೀತಿ ಜನಪ್ರಿಯತೆ ಕಳೆದುಕೊಳ್ಳುವುದು ಭಾರತದ ರಾಜಕಾರಣದಲ್ಲಿಯೇ ಅಪರೂಪದ ಪ್ರಸಂಗ.
ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗೆಲ್ಲ `ಅಪ್ಪನಿಗಿಂತ ಮಗ ವಾಸಿ~ ಎನ್ನುತ್ತಿದ್ದವರೇ ಈಗ `ಮಗನಿಗಿಂತ ಅಪ್ಪನೇ ವಾಸಿ~ ಎನ್ನುವಂತಾಗಿದೆ.
ಯಾಕೆ ಹೀಗಾಯಿತು?
ಅಧಿಕಾರ ಹಸ್ತಾಂತರ ಮಾಡದೆ ವಚನ ಭ್ರಷ್ಟನೆಂದು ಅನಿಸಿಕೊಂಡಾಗಲೂ ಯಾರೂ ಕುಮಾರಸ್ವಾಮಿಯವರನ್ನು ಅಧಿಕಾರಲಾಲಸಿ ಎಂದು ದೂರಲಿಲ್ಲ, `ಅಪ್ಪನ ಹಟಕ್ಕೆ ಕಟ್ಟುಬಿದ್ದು ಅವರು ಹೀಗೆ ಮಾಡಬೇಕಾಯಿತು~ ಎಂದು ಅನುಕಂಪ ವ್ಯಕ್ತಪಡಿಸಿದವರೇ ಹೆಚ್ಚು.
ಆದರೆ ತಮ್ಮ ಬಗ್ಗೆ ಜನತೆ ಹೊಂದಿದ್ದ ಅಭಿಪ್ರಾಯ ತಪ್ಪೆನ್ನುವುದನ್ನು ಕುಮಾರಸ್ವಾಮಿಯವರೇ ನಂತರದ ದಿನಗಳಲ್ಲಿ ಸಾಬೀತುಪಡಿಸುತ್ತಾ ಬಂದಿದ್ದಾರೆ.
ಅಧಿಕಾರ ಹಸ್ತಾಂತರ ಮಾಡದೆ ಇದ್ದಾಗ ಅವರನ್ನು ಅಧಿಕಾರ ಲಾಲಸಿ ಎಂದು ಹೇಳದವರು ಈಗ ಅದನ್ನು ಹೇಳುತ್ತಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕನಾಗಿ ಅವರು ನಡೆದುಕೊಳ್ಳುತ್ತಿರುವ ರೀತಿ ಕಾರಣ.
ಅಧಿಕಾರದಲ್ಲಿದ್ದವರನ್ನು ಕೆಳಗಿಳಿಸುವುದೇ ವಿರೋಧಪಕ್ಷಗಳ ಕೆಲಸ ಅಲ್ಲ, ಆ ರೀತಿಯ ವರ್ತನೆಯನ್ನು ಐದು ವರ್ಷಗಳ ಅವಧಿಗೆ ಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಜನ ಇಷ್ಟಪಡುವುದಿಲ್ಲ.
ವಿರೋಧಪಕ್ಷಗಳು ಆಡಳಿತಾರೂಢರನ್ನು ಎಚ್ಚರಿಸಬೇಕು, ಟೀಕಿಸಬೇಕು ಮತ್ತು ತಿದ್ದುವ ಪ್ರಯತ್ನ ಮಾಡಬೇಕು. ಮಿತಿ ಮೀರಿದರೆ ಮಾತ್ರ ಅಧಿಕಾರದಿಂದ ಕೆಳಗಿಳಿಸುವ ಕಸರತ್ತಿಗೆ ಕೈ ಹಾಕಬೇಕು.
ಅಧಿಕಾರಕ್ಕೆ ಬಂದ ಬಿಜೆಪಿಯವರನ್ನು ಸಾವರಿಸಿಕೊಳ್ಳಲು ಬಿಡದೆ ಕುಮಾರಸ್ವಾಮಿ ಅವರ ಮೇಲೆ ದಾಳಿಗೆ ಇಳಿದಿದ್ದರು. ಸರ್ಕಾರ ರಚನೆಯ ಮೊದಲೇ ಅದನ್ನು ಉರುಳಿಸುವ ಕಾರ್ಯಾಚರಣೆಯನ್ನು ಅವರು ಪ್ರಾರಂಭಿಸಿದ್ದರು.
ಪುಕ್ಕಲತನದಿಂದಲೋ, ಒಳ್ಳೆಯತನದಿಂದಲೋ ಕಾಂಗ್ರೆಸ್ ನಾಯಕರು ಆಗ ಅವರ ಜತೆ ಕೈಜೋಡಿಸದೆ ಇದ್ದ ಕಾರಣ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.
ಅದರ ನಂತರ ಮತ್ತೆ ಬಿಜೆಪಿ ಭಿನ್ನಮತೀಯರನ್ನು ಅವರು ಎತ್ತಿಕಟ್ಟಿದರು, ಹೋಟೆಲ್, ರೆಸಾರ್ಟ್ ವಾಸ, ತೀರ್ಥಯಾತ್ರೆ ಎಂದು ಊರೆಲ್ಲ ಸುತ್ತಾಡಿಸಿದರು.
ಕುಮಾರಸ್ವಾಮಿಯವರ ಯಾವ ಪ್ರಯತ್ನವೂ ಜವಾಬ್ದಾರಿಯುತ ವಿರೋಧಪಕ್ಷದ ನಾಯಕ ಮಾಡಬೇಕಾದ ಎಚ್ಚರಿಸುವ, ಟೀಕಿಸುವ ಇಲ್ಲವೇ ತಿದ್ದುವ ಪ್ರಯತ್ನ ಆಗಿರಲಿಲ್ಲ. ಸರ್ಕಾರ ಉರುಳಿಸುವುದೇ ಆಗಿತ್ತು. ಅಲ್ಲಿಂದಲೇ ಅವರ ಜನಪ್ರಿಯತೆ ಕುಸಿಯತೊಡಗಿದ್ದು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡತೊಡಗಿದ ನಂತರದ ದಿನಗಳಲ್ಲಿ ಕುಮಾರಸ್ವಾಮಿಯವರು ಇನ್ನಷ್ಟು ತ್ವರಿತಗತಿಯಲ್ಲಿ ಜನಪ್ರಿಯತೆ ಕಳೆದುಕೊಳ್ಳತೊಡಗಿದರು.
ಅವರು ಮಾಡಿದ ಆರೋಪಗಳೆಲ್ಲವೂ ನಿರಾಧಾರವಾದುವೇನಲ್ಲ. ಅವುಗಳಲ್ಲಿ ಕೆಲವು ಆರೋಪಗಳು ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರನ್ನು ಕಷ್ಟಕ್ಕೆ ಸಿಲುಕಿಸಲೂಬಹುದು.
ಆದರೆ ಆರೋಪಗಳನ್ನು ಮಾಡುವವರು ಕಳಂಕಿತರಾಗಿದ್ದಾಗ ಮಾಡಿದ ಆರೋಪಗಳು ದುರ್ಬಲವಾಗುತ್ತವೆ. ಜನ ಆರೋಪ ಮಾಡುವವರ ಪ್ರಾಮಾಣಿಕತೆಯನ್ನು ಪ್ರಶ್ನಿಸತೊಡಗುತ್ತಾರೆ.
ಬಹುಶಃ ಕುಮಾರಸ್ವಾಮಿಯವರು ಬಯಲುಗೊಳಿಸಿದ ಹಗರಣಗಳನ್ನು ಬೇರೆ ಯಾರಾದರೂ ಹೊರಹಾಕಿದ್ದರೆ ಪರಿಣಾಮ ಬೇರೆಯೇ ಆಗುತ್ತಿತ್ತು.
ಆದರೆ ಕುಮಾರಸ್ವಾಮಿಯವರು ತಾವು ಪ್ರಾಮಾಣಿಕರು, ಶುದ್ಧಹಸ್ತರು ಎಂದು ಎಷ್ಟೇ ಎದೆಬಡಿದುಕೊಂಡರೂ ರಾಜ್ಯದ ಜನತೆ ಹಾಗೆಂದು ತಿಳಿದಿಲ್ಲ. ಕಾನೂನಿನ ಬಲೆಯಲ್ಲಿ ಅವರನ್ನು ಕೆಡವಿಹಾಕುವುದು ಸಾಧ್ಯವಾಗದೆ ಹೋಗಬಹುದು.
ಆದರೆ ಅಧಿಕಾರದಲ್ಲಿದ್ದ 20 ತಿಂಗಳ ಅವಧಿಯಲ್ಲಿ ಅವರ ಮತ್ತು ಕುಟುಂಬದ ಆಸ್ತಿ ಇದ್ದಕ್ಕಿದ್ದಂತೆ ವೃದ್ಧಿಸಿದ್ದನ್ನು ನೈತಿಕವಾಗಿ ಸಮರ್ಥಿಸಿಕೊಳ್ಳುವುದು ಅವರಿಗೂ ಕಷ್ಟ.
ಇದರಿಂದಾಗಿ ಯಡಿಯೂರಪ್ಪನವರಿಗೂ ಕಳಂಕಿತ ಕುಮಾರಸ್ವಾಮಿಯವರನ್ನು ಎದುರಿಸುವುದು ಸುಲಭವಾಗಿ ಹೋಯಿತು. ದಿನ ಕಳೆದಂತೆ ಜನ ಕೂಡಾ `ಇವರೇನು ಸಾಚಾನಾ?~ ಎಂದೇ ಮಾತನಾಡಿಕೊಳ್ಳತೊಡಗಿದರು.
ಇದರಿಂದಾಗಿಯೇ ಯಡಿಯೂರಪ್ಪನವರ ಪದಚ್ಯುತಿಗೆ ಅವರು ತೋರಿದ ಆತುರವನ್ನು ಕಂಡ ಜನ ಅವರನ್ನು `ಅಧಿಕಾರ ಲಾಲಸಿ~ ಎಂದು ಕರೆಯುವಂತಾಯಿತು.
ಅದಕ್ಕೆ ಸರಿಯಾಗಿ ಲೋಕಾಯುಕ್ತರು ಕೂಡಾ ತಮ್ಮ ವರದಿಯಲ್ಲಿ ಅವರ ಅಧಿಕಾರ ಕಾಲದ ಗಣಿ ಅಕ್ರಮಗಳನ್ನು ಬಯಲಿಗೆಳೆದರು. ಯಾವಾಗ ಆರೋಪಿಯ ಕಟಕಟೆಯಲ್ಲಿ ತಾನು ಕೂಡಾ ಯಡಿಯೂರಪ್ಪನವರ ಜತೆಯಲ್ಲಿ ನಿಲ್ಲಬೇಕಾಯಿತೋ, ಅದರ ನಂತರ ಅವರ ಮಾತಿನ ವರಸೆ ಬದಲಾಗಿಹೋಯಿತು.

`ಜೈಲಿಗೆ ಕಳುಹಿಸಿಯೇ ಸಿದ್ಧ~ ಎಂದು ತೊಡೆತಟ್ಟುತ್ತಿದ್ದ ಅವರು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ಬಗ್ಗೆ ಅನುಕಂಪದ ಮಳೆ ಹರಿಸತೊಡಗಿದರು.

ಉಕ್ಕಿ ಹರಿದ ಅನುಕಂಪ ಅವರನ್ನು ಪರಪ್ಪನ ಅಗ್ರಹಾರದ ವರೆಗೂ ಕರೆದುಕೊಂಡು ಹೋಯಿತು. ಅದರ ನಂತರ ಇಬ್ಬರು ಆರೋಪಿಗಳು ಕೂಡಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರ ಮೇಲೆ ನಾಲಿಗೆ ಸಡಿಲ ಬಿಟ್ಟು ದಾಳಿ ಮಾಡತೊಡಗಿದರು.
ನ್ಯಾ.ಹೆಗ್ಡೆ ವಿರುದ್ದ ಮಾಡಿದ ಆಧಾರರಹಿತ ಆರೋಪಗಳು ಬೂಮರಾಂಗ್ ಆಗಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಜನ ಚರ್ಚೆ ನಡೆಸುವಂತಾಯಿತು.

ಆದರೆ ಇದ್ಯಾವುದರಿಂದಲೂ ಕುಮಾರಸ್ವಾಮಿಯವರು ಬುದ್ಧಿ ಕಲಿತಂತೆ ಇಲ್ಲ. ಸಹವಾಸ ದೋಷವೋ, ಸುಲಭದಲ್ಲಿ ಅನುಭವಿಸಿದ ಅಧಿಕಾರದ ಮೇಲೆ ಹುಟ್ಟಿದ ಲಾಲಸೆಯೋ, ಕನಸುಗಳು ಭಗ್ನಗೊಂಡ ಕಾರಣದಿಂದ ಉಂಟಾದ ಹತಾಶೆಯೋ -ರಾಜ್ಯದ ರಾಜಕೀಯದಲ್ಲಿ ಎತ್ತರಕ್ಕೆ ಏರಬಹುದೆಂದು ಜನ ನಿರೀಕ್ಷಿಸಿದ್ದ ಕುಮಾರಸ್ವಾಮಿಯವರು ಜಾರಿ ಬೀಳುತ್ತಿದ್ದಾರೆ.
ಈಗ ರಾಜಕೀಯ ಆತ್ಮವಂಚನೆಯ ಕ್ಲೈಮ್ಯಾಕ್ಸ್ ಎಂಬಂತೆ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಶ್ರಿರಾಮುಲು ಅವರಿಗೆ ಕುಮಾರಸ್ವಾಮಿ ಬೆಂಬಲ ಘೋಷಿಸಿದ್ದಾರೆ.
ಯಾರು ಈ ಶ್ರಿರಾಮುಲು? ಲೋಕಾಯುಕ್ತರ ವರದಿ ಪ್ರಕಾರ ಯಡಿಯೂರಪ್ಪ ಅವರಂತೆ ಶ್ರಿರಾಮುಲು ಕೂಡಾ ಒಬ್ಬ ಆರೋಪಿ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತು ಹೈದರಾಬಾದ್‌ನ ಸೆರೆಮನೆಯಲ್ಲಿರುವ ಗಾಲಿ ಜನಾರ್ದನ ರೆಡ್ಡಿಯವರ ಆಪ್ತ ಸ್ನೇಹಿತ.

ಬಳ್ಳಾರಿಯಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿ ಮಾಡಿದ ಮತ್ತು ರಾಜ್ಯ ರಾಜಕೀಯವನ್ನು ವ್ಯಾಪಾರೀಕರಣಗೊಳಿಸಿ ಅಧೋಗತಿಗಿಳಿಸಿದ ಆರೋಪಗಳನ್ನು ಹೊತ್ತವರು ಜನಾರ್ದನ ರೆಡ್ಡಿ.
ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿಗಳ ಗಣಿಕಪ್ಪ ಪಡೆದಿರುವ ಗಂಭೀರ ಆರೋಪವನ್ನು ಜನಾರ್ದನ ರೆಡ್ಡಿ ಮಾಡಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.
ದೇವೇಗೌಡ ಮತ್ತು ಕುಟುಂಬದ ಸದಸ್ಯರನ್ನು ಮೊನ್ನೆಮೊನ್ನೆ ವರೆಗೂ ಅವರು ಸಾರ್ವಜನಿಕವಾಗಿ ಏಕವಚನದಲ್ಲಿ ನಿಂದಿಸುತ್ತಿದ್ದುದನ್ನು ಜನ ಕೇಳಿದ್ದಾರೆ. ಶ್ರಿರಾಮುಲು ಅವರೂ ಅದಕ್ಕೆ ದನಿಗೂಡಿಸುತ್ತಾ ಬಂದವರು.
ಎರಡೂ ಕುಟುಂಬಗಳು ಬೀದಿಯಲ್ಲಿ ನಿಂತು ತೀರಾ ಕೆಳಮಟ್ಟದಲ್ಲಿ ಕಚ್ಚಾಡಿವೆ. ಇವೆಲ್ಲವೂ ಕಳೆದ 4-5 ವರ್ಷಗಳ ಅವಧಿಯಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಬೆಳವಣಿಗೆ. ಇಂತಹ ಜನಾರ್ದನ ರೆಡ್ಡಿ ತನ್ನ ಪಾಲಿನ ದೇವರು ಎನ್ನುತ್ತಾರೆ ಶ್ರಿರಾಮುಲು.
ರೆಡ್ಡಿ ಸೋದರರ ಎಲ್ಲ ಕೆಲಸಗಳಲ್ಲಿಯೂ ಶ್ರಿರಾಮುಲು ಪಾತ್ರಧಾರಿ. ಇಂತಹವರಿಗೆ ಕುಮಾರಸ್ವಾಮಿಯವರ ಪಕ್ಷ ಬೆಂಬಲ ಘೋಷಿಸಿದೆ.
ನ್ಯಾಯ-ಅನ್ಯಾಯದ ಪರಾಮರ್ಶೆ, ಜನರ ಹಿತದ ಮಾತು ಒತ್ತಟ್ಟಿಗಿರಲಿ, ಕನಿಷ್ಠ ಆತ್ಮಾಭಿಮಾನ ಉಳ್ಳವರು ಇಂತಹ ರಾಜಿ ಮಾಡಿಕೊಳ್ಳಲಾರರು.`ನಾಯಕನಾಗಲಾರೆ, ಖಳನಾಯಕನಾಗುವೆ~ ಎಂದು ಹೊರಟವರನ್ನು ಏನು ಮಾಡಲು ಸಾಧ್ಯ?
ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಅಧಿಕಾರ ಹಸ್ತಾಂತರದ ವಿವಾದದ ಸಂದರ್ಭದಲ್ಲಿ `ಯಯಾತಿ ಮತ್ತು ಪುರು ಎಂಬ ತಂದೆ- ಮಗನ ನೆನಪಿನಲ್ಲಿ...~ ಎಂಬ ಅಂಕಣವೊಂದನ್ನು ಬರೆದಿದ್ದೆ. 
ಶಾಪಗ್ರಸ್ತನಾಗಿ ಅಕಾಲ ವೃದ್ದಾಪ್ಯ ಪಡೆದ ಯಯಾತಿ ತನ್ನ ಮಗ ಪುರುವಿಗೆ ಶಾಪ ವರ್ಗಾಯಿಸಿ ಯೌವ್ವನವನ್ನು ಪಡೆದ ಕತೆ ಮಹಾಭಾರತದಲ್ಲಿದೆ.
`ಬಿಜೆಪಿ ಜತೆ ಮೈತ್ರಿಮಾಡಿಕೊಂಡ ಮಗನಿಂದಾಗಿ ಶಾಪಗ್ರಸ್ತನಾದೆ~ ಎಂದು ತಿಳಿದುಕೊಂಡಿದ್ದ ದೇವೇಗೌಡರು ವಯಸ್ಸಿಗೆ ಮೀರಿದ ವೃದ್ಧಾಪ್ಯದಿಂದ ಬಳಲುತ್ತಿರುವ `ಯಯಾತಿ~ಯಂತೆ ವರ್ತಿಸತೊಡಗಿದ್ದರು.

ಇಪ್ಪತ್ತು ತಿಂಗಳ ನಂತರ ಶಾಪಕ್ಕೆ ಮುಕ್ತಿ ಪಡೆಯ ಬಯಸಿದ ಗೌಡರು ಅಧಿಕಾರ ಹಸ್ತಾಂತರ ಮಾಡದಂತೆ ಮಗನ ಮನವೊಲಿಸುವಲ್ಲಿ ಸಫಲರಾಗಿದ್ದರು.
ಅಲ್ಲಿಯ ವರೆಗೆ `ಯಯಾತಿ~ಯಂತೆ ವೃದ್ಧಾಪ್ಯದಿಂದ ಬಳಲುತ್ತಿದ್ದ ಗೌಡರು ನಂತರ ಯುವಕರಂತೆ ಅಬ್ಬರಿಸತೊಡಗಿದ್ದರು. ಅಲ್ಲಿಯ ವರೆಗೆ ಯೌವ್ವನ ಸಹಜ ಉತ್ಸಾಹದಲ್ಲಿ ಬೀಗುತ್ತಿದ್ದ ಕುಮಾರಸ್ವಾಮಿ ಅಪ್ಪನ ವೃದ್ದಾಪ್ಯವನ್ನು ಪಡೆದ `ಪುರು~ವಿನಂತೆ ಬಾಡಿಹೋಗಿದ್ದರು.

ಮಹಾಭಾರತದಲ್ಲಿರುವ ಕತೆಯ ಪ್ರಕಾರ ಪುರು ಪಶ್ಚಾತ್ತಾಪಕ್ಕೀಡಾದ ತಂದೆಯಿಂದ ಯೌವ್ವನವನ್ನು ಮರಳಿ ಪಡೆಯುತ್ತಾನೆ.

ಆದರೆ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿದ ನಂತರ ಯೌವ್ವನವನ್ನು ಕಳೆದುಕೊಂಡಂತೆ ಬಳಲಿಹೋಗಿದ್ದ ಕುಮಾರಸ್ವಾಮಿ ಮರಳಿ ಅದನ್ನು ಪಡೆಯಲೇ ಇಲ್ಲ.

Monday, November 21, 2011

ನ್ಯಾ. ಖಟ್ಜು ಹೇಳಿದ್ದು ಮತ್ತು ಹೇಳದೆ ಉಳಿದದ್ದು...

ಭ್ರಷ್ಟರು, ಪತ್ನಿ ಪೀಡಕರು, ಎನ್‌ಕೌಂಟರ್ ಮಾಡುವ ಪೊಲೀಸರು, ಮರ್ಯಾದಾ ಹತ್ಯೆಕೋರರು -ಎಲ್ಲರನ್ನೂ `ಸಮೀಪದ ಲೈಟ್‌ಕಂಬ~ಕ್ಕೆ ನೇತುಹಾಕಿ ಗಲ್ಲುಶಿಕ್ಷೆ ನೀಡಬೇಕೆಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದ ದಿನಗಳಲ್ಲಿ ಹೇಳಿ ವಿವಾದ ಸೃಷ್ಟಿಸಿದ್ದವರು ಮಾರ್ಕಾಂಡೇಯ ಖಟ್ಜು.

ಪತ್ರಕರ್ತರ ಬಗ್ಗೆ ಯಾಕೋ ಅವರು ಸ್ವಲ್ಪ ಕರುಣೆ ತೋರಿಸಿದ್ದಾರೆ, `ಅಜ್ಞಾನಿ~ ಮತ್ತು `ಸಮಾಜದ್ರೋಹಿ~ ಪತ್ರಕರ್ತರನ್ನು ಗಲ್ಲಿಗೇರಿಸಬೇಕೆಂದು ಹೇಳಲಿಲ್ಲ, `ಕೆಟ್ಟ~ ಪತ್ರಕರ್ತರು ಬದುಕಿಕೊಂಡಿದ್ದಾರೆ. ಒಂದು ಟಿವಿ ಚಾನೆಲ್‌ಗೆ ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ನ್ಯಾ.ಖಟ್ಜು ನೀಡಿದ್ದ ಸಂದರ್ಶನದಲ್ಲಿ ಹೇಳಿರುವ ಮಾತುಗಳು ಪತ್ರಕರ್ತರನ್ನು ಕೆರಳಿಸಿವೆ.
ಕೈಯಲ್ಲಿದ್ದ ಲೇಖನಿ ನಿಜಕ್ಕೂ ಖಡ್ಗವೇ ಆಗಿದ್ದರೆ ಖಟ್ಜು ಅವರ ತಲೆ ಇಷ್ಟೊತ್ತಿಗೆ ಹೋಳುಹೋಳಾಗುತ್ತಿತ್ತು. ಅವರೂ ಬದುಕಿಕೊಂಡಿದ್ದಾರೆ. ನ್ಯಾ.ಖಟ್ಜು ಬಗ್ಗೆ ಪತ್ರಕರ್ತರಿಗೆ ಇಷ್ಟೊಂದು ಕೋಪ ಯಾಕೆ? ಸುಳ್ಳು ಹೇಳಿದ್ದಕ್ಕೋ, ಅಪ್ರಿಯವಾದ ಸತ್ಯ ಹೇಳಿದ್ದಕ್ಕೋ?
ನೀವು ಸಮಾಜದಲ್ಲಿ ಅತಿ ಹೆಚ್ಚು ದ್ವೇಷಿಸುವವರು ಯಾರು ಎಂದು ಪ್ರಶ್ನಿಸಿ ಅಮೆರಿಕದಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆ ನಡೆದಿತ್ತು. ಜನತೆ ದ್ವೇಷಿಸುವ ವ್ಯಕ್ತಿಗಳ ಮೊದಲ ಸಾಲಲ್ಲಿ ರಾಜಕಾರಣಿಗಳಿದ್ದರು, ಎರಡನೇ ಸಾಲಿನಲ್ಲಿ ಪತ್ರಕರ್ತರಿದ್ದರು (ಅತ್ಯಂತ ಪ್ರೀತಿಸುವವರ ಮೊದಲ ಸಾಲಿನಲ್ಲಿ ದಾದಿಯರಿದ್ದರು).

ಭಾರತವೂ ಸೇರಿದಂತೆ ಯಾವ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದರೂ ಹೆಚ್ಚುಕಡಿಮೆ ಇದೇ ಮಾದರಿಯ ಫಲಿತಾಂಶ ಹೊರಹೊಮ್ಮಬಹುದು. ನ್ಯಾ.ಖಟ್ಜು ಹೇಳಿಕೆ ಬಗ್ಗೆ ನಮ್ಮಲ್ಲಿಯೇ ಸಮೀಕ್ಷೆ ನಡೆದರೆ ಅವರ ಪರವಾಗಿ ಮತ ಚಲಾಯಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿರಬಹುದೇನೋ?

ಆದ್ದರಿಂದ ನ್ಯಾ.ಖಟ್ಜು ಅವರ ಕಟುಮಾತುಗಳು ಪತ್ರಕರ್ತರ ಆತ್ಮಾವಲೋಕನಕ್ಕೆ ಕಾರಣವಾಗಬೇಕಿತ್ತು, ಆದರೆ ಅವರು ಪ್ರತೀಕಾರಕ್ಕೆ ಹೊರಟಿದ್ದಾರೆ. ಪತ್ರಿಕಾ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಅವರನ್ನು ಕಿತ್ತುಹಾಕಬೇಕೆಂಬ ಕೂಗು ಕೇಳತೊಡಗಿದೆ.
ನ್ಯಾ.ಖಟ್ಜು ಅವರು ಬಿಟ್ಟ ಬಾಣ ಗುರಿತಪ್ಪಲು ವೈಯಕ್ತಿಕವಾಗಿ ಅವರೂ ಕಾರಣ. ಆಡುವ ಮಾತುಗಳಲ್ಲಿ ಎಷ್ಟೇ ಸತ್ಯ-ಪ್ರಾಮಾಣಿಕತೆಗಳಿರಲಿ, ಹೇಳುವ ರೀತಿ ಸರಿ ಇಲ್ಲದೆ ಇದ್ದರೆ ಮಾತು ಸೋತುಹೋಗುತ್ತದೆ, ಅತಿರೇಕಕ್ಕೆ ಹೋದರೆ ಬಾಯಿಬಡುಕತನವಾಗುತ್ತದೆ.
ಕೇಂದ್ರದ ಮಾಜಿ ಕಾನೂನು ಸಚಿವರ ಮೊಮ್ಮಗ ಮತ್ತು ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ಮಗನಾದ ನ್ಯಾ.ಖಟ್ಜು ಅವರಂತಹ `ಬುದ್ಧಿಜೀವಿ ನ್ಯಾಯಮೂರ್ತಿ~ಗಳನ್ನು ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಕಂಡಿಲ್ಲ.

ಬಾಯಿಬಿಟ್ಟರೆ ಮಿರ್ಜಾ ಗಾಲಿಬ್, ಫಯಾಜ್ ಅಹ್ಮದ್ ಫಯಾಜ್ ಅವರಂತಹ ಕವಿಗಳ ಪದ್ಯಗಳನ್ನು ನಿರರ್ಗಳವಾಗಿ ಉದಹರಿಸುವ ಖಟ್ಜು ಅವರಿಗೆ  ಮಾತಿನ ಮೇಲೆ ಮಾತ್ರ ಲಗಾಮಿಲ್ಲ.

ಅದೇ ಅವರ ದೌರ್ಬಲ್ಯ.  ಸುಪ್ರೀಂ ಕೋರ್ಟ್‌ನಲ್ಲಿ ಅವರು ನಡೆಸಿರುವ ಕೆಲವು ಪ್ರಕರಣಗಳ ವಿಚಾರಣೆಗಳ ಸಂದರ್ಭದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ನಾನು ಕಿವಿಯಾರೆ ಕೇಳಿ ಬೆಚ್ಚಿ ಬಿದ್ದಿದ್ದೇನೆ.

ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟೀಕರಣವನ್ನೂ ನೀಡಿತ್ತು. ಆದರೆ ತಮ್ಮ ಮಾತಿನ ಅತಿರೇಕತನಗಳೆಲ್ಲ ವಿಚಾರಣಾ ಸಂದರ್ಭದ ಅಭಿಪ್ರಾಯಗಳಿಗಷ್ಟೇ ಸೀಮಿತಗೊಳಿಸುತ್ತಿದ್ದ ಅವರು, ತೀರ್ಪುಗಳಲ್ಲಿ ಅದನ್ನು ವ್ಯಕ್ತಪಡಿಸುತ್ತಿರಲಿಲ್ಲ.

ಅವರ ಈ `ಜಾಣತನ~ದ ಕಾರಣದಿಂದಾಗಿಯೇ ಜನಪರ ಕಾಳಜಿಯ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತಿತ್ತು, `ಪ್ರಚಾರಪ್ರಿಯರು~ ಎನ್ನುವ ಆರೋಪವನ್ನು ಅವರು ಎದುರಿಸುವಂತಾಗಿತ್ತು.
ಪತ್ರಕರ್ತರ ಅಜ್ಞಾನವಾಗಲಿ, ವರದಿಗಾರಿಕೆಯಲ್ಲಿ ಮುಖ್ಯವಾಗಿ ಕೋಮುಗಲಭೆಗಳು ನಡೆದ ಸಂದರ್ಭದಲ್ಲಿ ಅವರು ತೋರಿಸುವ ಬೇಜವಾಬ್ದಾರಿತನಗಳಾಗಲಿ, ಸಿನಿಮಾ, ಕ್ರಿಕೆಟ್, ಜ್ಯೋತಿಷಗಳಿಗೆ ನೀಡಲಾಗುತ್ತಿರುವ ಅತಿ ಪ್ರಾಮುಖ್ಯತೆಯಾಗಲಿ, ಯಾವುದೂ ಹೊಸತಲ್ಲ.
ಬಹಿರಂಗವಾಗಿ ಬೀದಿಗಳಲ್ಲಿ ಮತ್ತು ಅಂತರಂಗದಲ್ಲಿ ಮಾಧ್ಯಮಗಳ ಕಚೇರಿಯೊಳಗೆ ಈ ವಿಷಯದ ಚರ್ಚೆ ನಡೆಯುತ್ತಲೇ ಇದೆ. ನ್ಯಾ.ಖಟ್ಜು ಅವರು ಎರಡು ತಪ್ಪುಗಳನ್ನು ಮಾಡಿದ್ದಾರೆ.
ಮೊದಲನೆಯದಾಗಿ ಎಲ್ಲ ಪತ್ರಕರ್ತರನ್ನು ಒಂದೇ ಸಾಲಲ್ಲಿ ನಿಲ್ಲಿಸಿ ಕತ್ತಿಬೀಸಿದ್ದಾರೆ, ಎರಡನೆಯದಾಗಿ ಬೀಸು ಹೇಳಿಕೆಗಳ ಮೂಲಕ ಆರೋಪಗಳನ್ನಷ್ಟೇ ಮಾಡಿದ್ದಾರೆ, ಅದರ ಹಿಂದಿನ ಕಾರಣಗಳನ್ನು ಚರ್ಚಿಸಲು ಹೋಗಿಲ್ಲ.
ಯಾರೂ ಹುಟ್ಟುಜ್ಞಾನಿಯಾಗಿರುವುದಿಲ್ಲ, ಹುಟ್ಟಿನೊಂದಿಗೆ ಬರುವುದು ಅಜ್ಞಾನ ಮಾತ್ರ. ಜ್ಞಾನವನ್ನು ಸಂಪಾದನೆ ಮಾಡಬೇಕಾಗುತ್ತದೆ. ಇದನ್ನು ಪತ್ರಕರ್ತರಿಗೆ ಸೀಮಿತಗೊಳಿಸಿ ಹೇಳುವುದಾದರೆ ಪತ್ರಕರ್ತರ ಜ್ಞಾನಸಂಪಾದನೆಯ ದಾರಿಯಲ್ಲಿಯೇ ದೋಷ ಇದೆ.
ಪತ್ರಕರ್ತರನ್ನು ನೇಮಿಸಿಕೊಳ್ಳಲು ಹೊರಟ ಎಲ್ಲ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರ ಅನುಭವ ಇದು. ಇತ್ತೀಚಿನ ದಿನಗಳಲ್ಲಿ ಪ್ರವೃತ್ತಿಯಿಂದ ಪತ್ರಕರ್ತರಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇದೊಂದು ಹೊಟ್ಟೆಪಾಡಿನ ವೃತ್ತಿ ಎಂದು ತಿಳಿದುಕೊಂಡವರೇ ಹೆಚ್ಚು.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಕಲಿತು ಬಂದ ವಿದ್ಯಾರ್ಥಿಗಳ ಅರ್ಹತೆಯನ್ನೇ ಮಾನದಂಡವನ್ನಾಗಿಟ್ಟುಕೊಂಡು ಅವರಿಗೆ ಬೋಧನೆ ಮಾಡಿದವರ ಸಾಧನೆಯ ಮೌಲ್ಯಮಾಪನ ಮಾಡಿದರೆ ಶೇಕಡಾ 90ರಷ್ಟು ಪತ್ರಿಕೋದ್ಯಮದ ಗುರುಗಳು ಕೆಲಸ ಕಳೆದುಕೊಳ್ಳಬೇಕಾಗಬಹುದು.
ಬೋಧಿಸುವವರ ಅಜ್ಞಾನ, ನಿರಾಸಕ್ತಿ, ಪ್ರಾಯೋಗಿಕ ಅನುಭವದ ಕೊರತೆ  ಮತ್ತು ಕಾಲದ ಜತೆ ಹೆಜ್ಜೆಹಾಕಲಾಗದ ಜಿಡ್ಡುಗಟ್ಟಿದ ಮನಃಸ್ಥಿತಿ ಕೂಡಾ `ಅಜ್ಞಾನಿ~ ಪತ್ರಕರ್ತರ ಸಂತತಿಗೆ ಒಂದು ಕಾರಣ. ಇದರಲ್ಲಿ ಓಬಿರಾಯನ ಕಾಲದ ಪಠ್ಯಕ್ರಮದ ಕೊಡುಗೆಯೂ ಇದೆ. ಇದಕ್ಕೆ ಬಲಿಯಾಗುತ್ತಿರುವವರು ಮಾತ್ರ ಬಡಪಾಯಿ ವಿದ್ಯಾರ್ಥಿಗಳು.
ಮಾಧ್ಯಮ ಕ್ಷೇತ್ರದ  ಬಗ್ಗೆ ಸ್ವತಃ `ಅಜ್ಞಾನಿ~ಯಾಗಿರುವ ನ್ಯಾ.ಖಟ್ಜು ಅವರಿಗೆ ಇದೆಲ್ಲ ತಿಳಿದಿರಲಿಕ್ಕಿಲ್ಲ, ಮಾಧ್ಯಮರಂಗ ಮೈಯೊಡ್ಡುತ್ತಿರುವ ಕ್ಷಿಪ್ರಗತಿಯ ಬದಲಾವಣೆಗಳನ್ನೂ ಅವರು ಸರಿಯಾಗಿ ಗ್ರಹಿಸಿಲ್ಲ.
ಕಾನೂನು, ತತ್ವಜ್ಞಾನ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ  ಮೊದಲಾದ ಎಲ್ಲ ವಿಷಯಗಳಲ್ಲಿಯೂ ನ್ಯಾಯಮೂರ್ತಿಗಳಿಗೆ ಹೇಗೆ ಪಾಂಡಿತ್ಯ ಬೇಕಾಗುವುದಿಲ್ಲವೋ ಹಾಗೆ ಪತ್ರಕರ್ತರು ಕೂಡಾ ಆ ಎಲ್ಲ ವಿಷಯಗಳಲ್ಲಿ ಪಂಡಿತರಾಗಬೇಕಾಗಿಲ್ಲ. ಅವರ ಕೆಲಸ ಸಂಶೋಧನಾ ಪ್ರಬಂಧ ಮಂಡನೆ ಅಲ್ಲ.

ವರದಿ, ವಿಶ್ಲೇಷಣೆ, ಲೇಖನಗಳ ಬರವಣಿಗೆ ಅಷ್ಟೇ ಅವರ ಕೆಲಸ. ಅದಕ್ಕೆ ಬೇಕಾದಷ್ಟು ಜ್ಞಾನವನ್ನು ಅವರು ಹೊಂದಿದ್ದರೆ ಸಾಕು. ಅಷ್ಟೂ ಇಲ್ಲದೆ ಇದ್ದವರು ಇರುವುದೂ ನಿಜ. ಬಾಡಿಗೆ ಬರಹಗಾರರನ್ನು ಇಟ್ಟುಕೊಂಡು ಪತ್ರಕರ್ತರೆಂದು, ಅಂಕಣಕಾರರೆಂದು ಮೆರೆಯುತ್ತಿರುವ ಹಿರಿಯ ಪತ್ರಕರ್ತರೂ ನಮ್ಮಲ್ಲಿದ್ದಾರೆ.
 ಮಾಧ್ಯಮ ಸಂಸ್ಥೆಗಳಲ್ಲಿ ಕೂಡಾ `ಪ್ರತಿಭೆಗಿಂತಲೂ ಹೆಚ್ಚಾಗಿ ರಾಜಕಾರಣಿಗಳ ಜತೆಗಿನ `ಸಂಪರ್ಕ~ದ ಆಧಾರದಲ್ಲಿ ಪತ್ರಕರ್ತರನ್ನು ನೇಮಿಸಿಕೊಳ್ಳುವ ಕೆಟ್ಟಚಾಳಿಯೂ ಬೆಳೆಯುತ್ತಿದೆ. ಇದರ ಜತೆಗೆ ಒಂದಷ್ಟು ಸಕಾರಾತ್ಮಕವಾದ ಬೆಳವಣಿಗೆಗಳು ನಡೆಯುತ್ತಿವೆ.
ಮೊಳೆ ಜೋಡಿಸುವುದರಿಂದ ಹಿಡಿದು ಪತ್ರಿಕೆ ವಿತರಿಸುವವರೆಗೆ ಎಲ್ಲವನ್ನೂ ಒಬ್ಬರೇ ಮಾಡುತ್ತಿದ್ದ ಮತ್ತು ಎಲ್ಲ ವಿಷಯಗಳನ್ನು ಒಬ್ಬರೇ ವರದಿ ಮಾಡುತ್ತಿದ್ದ ಕಾಲ ಸರಿದುಹೋಗಿದೆ. ಈಗ `ಸ್ಪೆಷಲೈಷೇಶನ್~ಗಳ ಕಾಲ. ನಿರ್ದಿಷ್ಟವಾದ ವಿಭಾಗಕ್ಕೆ ಅಗತ್ಯವಾದ ವಿಷಯವನ್ನು ಅಭ್ಯಾಸ ಮಾಡಿದವರನ್ನೇ ನೇಮಿಸಲಾಗುತ್ತಿದೆ.
ಆದ್ದರಿಂದ ಸಮೂಹ ಮಾಧ್ಯಮ ಅಧ್ಯಯನ ಮಾಡಿದವರು ಮಾತ್ರವಲ್ಲ, ಸಾಹಿತ್ಯ, ಇತಿಹಾಸ, ಕಾನೂನು ಮತ್ತು ಎಂಬಿಎ ಪದವೀಧರರು, ವೈದ್ಯರು, ಎಂಜಿನಿಯರ್‌ಗಳು ಕೂಡಾ ಪತ್ರಕರ್ತರಾಗಿ ನೇಮಕಗೊಳ್ಳುತ್ತಿದ್ದಾರೆ.

ನ್ಯಾಯಾಂಗದಲ್ಲಿ ಇಂತಹ ಅವಕಾಶ ಇಲ್ಲದೆ ಇರುವುದರಿಂದ ನ್ಯಾಯಮೂರ್ತಿಗಳು ಎಲ್ಲವನ್ನೂ ಓದಿಕೊಂಡಿರಬೇಕಾಗುತ್ತದೆ. ಇದು ನ್ಯಾ.ಖಟ್ಜು ಅವರ ಅನುಭವದ ಮಿತಿ.
ನ್ಯಾ.ಖಟ್ಜು ಅವರು ನೀಡಿರುವ ಸಂದರ್ಶನವನ್ನು ಅವರು ಹೇಳಿರುವ ವಿಷಯಕ್ಕಲ್ಲ, ಹೇಳದೆ ಇರುವ ವಿಷಯಕ್ಕಾಗಿ ಆಕ್ಷೇಪಿಸಬೇಕಾಗುತ್ತದೆ. ಅವರು ಅಗತ್ಯವಾಗಿ ಚರ್ಚೆಯಾಗಬೇಕಾಗಿರುವ ಮುಖ್ಯ ವಿಷಯವನ್ನೇ ಕೈಬಿಟ್ಟಿದ್ದಾರೆ..

`ಭ್ರಷ್ಟರನ್ನು ಗಲ್ಲಿಗೇರಿಸಿ~ ಎಂದು ಒಂದು ಕಾಲದಲ್ಲಿ ಗುಡುಗಿದ್ದ ನ್ಯಾ.ಖಟ್ಜು ಅವರು ಅಜ್ಞಾನಿ ಪತ್ರಕರ್ತರ ಮೇಲೇರಿ ಹೋಗುವ ಭರದಲ್ಲಿ (ಇಲ್ಲವೇ ಉದ್ದೇಶಪೂರ್ವಕವಾಗಿ) ಮಾಧ್ಯಮರಂಗದ ಭ್ರಷ್ಟಾಚಾರವನ್ನು ಮರೆತೇ ಬಿಟ್ಟಿದ್ದಾರೆ. ಮಾಧ್ಯಮರಂಗ ಮತ್ತು ಸಮಾಜಕ್ಕೆ ಇಂದು ಯಾರಿಂದಾದರೂ ಹೆಚ್ಚು ಅನ್ಯಾಯವಾಗುತ್ತಿದ್ದರೆ ಅದು ಅಜ್ಞಾನಿ ಪತ್ರಕರ್ತರಿಂದಲ್ಲ, ಅದು ಭ್ರಷ್ಟ ಪತ್ರಕರ್ತರಿಂದ ಎನ್ನುವುದು ಕಟು ವಾಸ್ತವ.

ಕಾಸು ಪಡೆದು ಸುದ್ದಿ ಪ್ರಕಟಿಸುತ್ತಿದ್ದ, ರಾಡಿಯಾ ಟೇಪ್ ಹಗರಣ ಬಯಲು ಮಾಡಿದಂತೆ ರಾಜಕೀಯ ಸಂಪರ್ಕ ಬಳಸಿಕೊಂಡು ಕಾರ್ಪೋರೇಟ್ ದೊರೆಗಳ ದಲ್ಲಾಳಿಗಿರಿ ಮಾಡುತ್ತಿದ್ದ  ಮತ್ತು ಗಣಿ ಲೂಟಿಕೋರರಿಂದ ಕಾಣಿಕೆ ಪಡೆದಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಪತ್ರಕರ್ತರು ಖಂಡಿತ `ಅಜ್ಞಾನಿ~ಗಳು ಅಲ್ಲವೇ ಅಲ್ಲ, ಅವರೆಲ್ಲ ಪರಮ ಬುದ್ಧಿವಂತರು.

ನ್ಯಾ. ಖಟ್ಜು ಅವರ ನಿರೀಕ್ಷೆಯಂತೆ ಅವರೆಲ್ಲ ರಾಜಕೀಯ ಶಾಸ್ತ್ರ, ಸಾಹಿತ್ಯ, ತತ್ವಶಾಸ್ತ್ರಗಳಲ್ಲಿ ಪಾರಂಗತರಾದವರು. ಮಾಧ್ಯಮರಂಗ ಇಂದು ಎದುರಿಸುತ್ತಿರುವ ಮಾರಣಾಂತಿಕ ರೋಗ ಭ್ರಷ್ಟಾಚಾರದ್ದು. ಗಲ್ಲು ಶಿಕ್ಷೆ ವಿಧಿಸುವುದನ್ನು ಹೊರತುಪಡಿಸಿ ನ್ಯಾ. ಖಟ್ಜು ಅವರಲ್ಲಿ ಈ ರೋಗ ಗುಣಪಡಿಸುವ ಬೇರೆ ಔಷಧಿಯೇನಾದರೂ ಇದೆಯೇ?
ಮಾಧ್ಯಮರಂಗವನ್ನು ಶುಚಿಗೊಳಿಸಬೇಕೆಂಬ ಪ್ರಾಮಾಣಿಕವಾದ ಉದ್ದೇಶ ನ್ಯಾ.ಖಟ್ಜು ಅವರಲ್ಲಿದ್ದರೆ ಅದನ್ನು ತೋರಿಸುವ ಒಂದು ಅವಕಾಶ ಅವರ ಮುಂದಿದೆ. `ಕಾಸಿಗಾಗಿ ಸುದ್ದಿ~ ಹಗರಣದ ಬಗ್ಗೆ ತನಿಖೆ ನಡೆಸಲು ಭಾರತೀಯ ಪತ್ರಿಕಾ ಮಂಡಳಿಯೇ ನೇಮಿಸಿದ್ದ ಉಪಸಮಿತಿ ನೀಡಿರುವ ವರದಿ ಅವರ ಮೇಜಿನ ಮೇಲಿದೆ. ಅದರಲ್ಲಿ ಅಪರಾಧ ಎಸಗಿದ ಪತ್ರಿಕಾ ಸಂಸ್ಥೆಗಳ ಹೆಸರೂ ಸೇರಿದಂತೆ ಎಲ್ಲ ವಿವರಗಳೂ ಇವೆ.

ಪತ್ರಿಕಾ ಮಂಡಳಿಯ ಹಿಂದಿನ ಅಧ್ಯಕ್ಷರಿಗೆ ಅದನ್ನು ಮುಟ್ಟಿನೋಡುವ ಧೈರ್ಯವೂ ಇರಲಿಲ್ಲ, ಶಕ್ತಿಶಾಲಿ ಪತ್ರಿಕಾಸಂಸ್ಥೆಗಳ ಮಾಲೀಕರ ಒತ್ತಡಕ್ಕೆ ಮಣಿದು ಅವರು ಆ ವರದಿಯನ್ನು ಮುಚ್ಚಿಟ್ಟಿದ್ದರು.

ನ್ಯಾ.ಖಟ್ಜು ಅಂತಹ ಒತ್ತಡಕ್ಕೆ ಮಣಿಯುವವರಲ್ಲವಾದ ಕಾರಣ ವರದಿ ಆಧಾರದಲ್ಲಿ ಅವರು ಕ್ರಮ ಕೈಗೊಂಡರೆ ಮಾಧ್ಯಮರಂಗಕ್ಕೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ಜತೆಗೆ ರಾಡಿಯಾ ಟೇಪ್ ಹಗರಣ ಮತ್ತು ಗಣಿಲೂಟಿಕೋರರಿಂದ ಲಂಚ ಪಡೆದಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಿ.
ನ್ಯಾ.ಖಟ್ಜು ಅವರು ಪ್ರಸ್ತಾಪಿಸಿರುವ ಎರಡನೇ ಮುಖ್ಯ ವಿಷಯ-ಸುದ್ದಿ ಪ್ರಕಟಣೆ ಮತ್ತು ಪ್ರಸಾರದಲ್ಲಿ ಮಾಧ್ಯಮಗಳು ತೋರಿಸುವ ಆದ್ಯತೆಗೆ ಸಂಬಂಧಿಸಿದ್ದು. ಅವರ ಆರೋಪದಲ್ಲಿ ಹುರುಳಿದೆ.

ಆದರೆ ಪೌಷ್ಟಿಕಾಂಶದ ಕೊರತೆಯಿಂದ ಸಾಯುತ್ತಿರುವ ಮಕ್ಕಳ ಬಗೆಗಿನ ಸುದ್ದಿಗಿಂತ ಐಶ್ಚರ್ಯ ರೈಗೆ ಮಗುವಾಗಿದ್ದು ದೊಡ್ಡ ಸುದ್ದಿಯಾಗುತ್ತಿರುವುದಕ್ಕೆ ಕಾರಣಗಳೇನು ಎಂಬುದನ್ನು ನ್ಯಾ.ಖಟ್ಜು ಅವರು ಯೋಚಿಸಿದಂತಿಲ್ಲ. ಎರಡನೆಯ ಸುದ್ದಿಗೆ ದೊಡ್ಡ ಸಂಖ್ಯೆಯ ಓದುಗ-ನೋಡುಗ ಜನವರ್ಗ ಇದೆ.

ಆದ್ದರಿಂದಲೇ ಅಂತಹ ಸುದ್ದಿಗಳಿಗಾಗಿ ಜಾಹೀರಾತು ಹರಿದು ಬರುತ್ತದೆ. ಒಂದು ಪತ್ರಿಕೆಯ ಶೇಕಡಾ 80ರಷ್ಟು ಆದಾಯ ಜಾಹೀರಾತಿನಿಂದಲೇ ಬರುತ್ತಿರುವುದರಿಂದ ಪತ್ರಿಕೆಯ ಮಾಲೀಕರಿಗೆ ಸಹಜವಾಗಿಯೇ ಐಶ್ಚರ‌್ಯ ರೈನ ಮಗುವೇ ಮುಖ್ಯವಾಗುತ್ತದೆ ಹೊರತು ಬಡಮಕ್ಕಳಲ್ಲ.
ಕೇವಲ ಪ್ರಚಾರಕ್ಕಾಗಿ ನಿಷ್ಪ್ರಯೋಜಕ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನ್ಯಾ.ಖಟ್ಜು ಅವರಂತಹ ಪ್ರಾಜ್ಞರು ಜಾಹೀರಾತಿನ  ವಿಷವರ್ತುಲದೊಳಗೆ ಸಿಕ್ಕಿಹಾಕಿಕೊಂಡಿರುವ ಮಾಧ್ಯಮಗಳ ಬಿಡುಗಡೆಗೆ ದಾರಿ ತೋರಿಸಬೇಕು.
ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟಮಾಡುವುದು ಕಾನೂನು ಪ್ರಕಾರ ಅಪರಾಧ. ಇದನ್ನು ಪತ್ರಿಕೆಗಳಿಗೂ ಯಾಕೆ ಅನ್ವಯಿಸಬಾರದು? ಈಗ ಪತ್ರಿಕೆಗಳ ಮುಖಬೆಲೆಗೂ ಅದರ ಉತ್ಪಾದನಾ ವೆಚ್ಚಕ್ಕೂ ಸಂಬಂಧವೇ ಇಲ್ಲದಂತಹ ಸ್ಥಿತಿ ಇದೆ.

ಇದನ್ನು ತಡೆಯಲು ನ್ಯಾಯಮೂರ್ತಿಗಳು ಒಂದು ಕಾನೂನನ್ನು ರಚಿಸಿ ಸರ್ಕಾರಕ್ಕೆ ಯಾಕೆ ಕಳುಹಿಸಬಾರದು? ಅನಾರೋಗ್ಯಕರವಾದ ದರಸಮರಕ್ಕೆ ಸಿಕ್ಕಿ ಮಾಧ್ಯಮ ಕ್ಷೇತ್ರ ದಾರಿ ತಪ್ಪುವುದನ್ನಾದರೂ ಇದರಿಂದ ತಪ್ಪಿಸಲು ಸಾಧ್ಯ.
ಮಾಧ್ಯಮ ಕ್ಷೇತ್ರದ ಕೆಂಗಣ್ಣಿಗೆ ಕಾರಣವಾದ ನ್ಯಾ.ಖಟ್ಜು ಅವರ ಹೇಳಿಕೆಯ ಮೂರನೆಯ ಅಂಶ- ಅವರು ಸರ್ಕಾರವನ್ನು ಕೇಳಿರುವ ಮಾಧ್ಯಮದ ಮೇಲಿನ ನಿಯಂತ್ರಣಾಧಿಕಾರ.  ಭಾರತೀಯ ಪತ್ರಿಕಾ ಮಂಡಳಿಯನ್ನು `ಹಲ್ಲಿಲ್ಲದ ಸಂಸ್ಥೆ~ ಎಂದು ಹಂಗಿಸುವ ಪತ್ರಕರ್ತರೇ ಇನ್ನೊಂದೆಡೆ ಅದಕ್ಕೆ ಹೆಚ್ಚಿನ ಅಧಿಕಾರ ನೀಡುವುದನ್ನು ವಿರೋಧಿಸುತ್ತಿರುವುದು ವಿಪರ್ಯಾಸದಂತೆ ಕಾಣುತ್ತಿರುವುದು ನಿಜ.

ಈ ಭೀತಿಗೂ ಕಾರಣ ಇದೆ. ಸ್ವಯಂ ಸರ್ಕಾರವೇ ನೇಮಿಸುವ ವ್ಯಕ್ತಿಯ ಕೈಗೆ ಕೊಡುವ ನಿಯಂತ್ರಣದ ಅಧಿಕಾರ ಪರೋಕ್ಷವಾಗಿ ಸರ್ಕಾರದ ಕೈಗೆ ಕೊಟ್ಟಂತಾಗುತ್ತದೆ. ಆದರೆ ಇದಕ್ಕೆ ಸ್ವಯಂ ನಿಯಂತ್ರಣ ಕೂಡಾ ಪರಿಹಾರ ಅಲ್ಲ, ಸ್ವಯಂನಿಯಂತ್ರಣ ವೈಯಕ್ತಿಕವಾಗಿ ಇಲ್ಲವೇ ಸಾಮಾಹಿಕವಾಗಿ ಯಶಸ್ವಿಯಾಗಿದ್ದು ಕಡಿಮೆ.

ಸುಲಭದ ಒಂದು ಪರಿಹಾರ ಇದೆ. ಶೀಘ್ರದಲ್ಲಿ ನೇಮಕಗೊಳ್ಳಲಿರುವ ಜನಲೋಕಪಾಲರ ಮೂಲಕ ನಿಯಂತ್ರಣಕ್ಕೆ ಮಾಧ್ಯಮಗಳು ಸ್ವ ಇಚ್ಛೆಯಿಂದ ಯಾಕೆ ತಮ್ಮನ್ನು ಒಪ್ಪಿಸಿಕೊಳ್ಳಬಾರದು?

Monday, November 14, 2011

ಕರ್ನಾಟಕ ಹಳೆಯ ಬಿಹಾರ ಆಗುತ್ತಿದೆಯೇ?

ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭವಿಷ್ಯ ಇಲ್ಲವೇನೋ ಎಂಬ ಕಳವಳಕಾರಿ ಪರಿಸ್ಥಿತಿ ಆರು ತಿಂಗಳ ಹಿಂದಿನವರೆಗೂ ಇತ್ತು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜತೆಯಲ್ಲಿ ಪತ್ರಿಕಾರಂಗದ ಮೇಲಿನ ವಿಶ್ವಾಸವನ್ನೂ ಕಳೆದುಕೊಂಡವರಂತೆ ಜನ ಮಾತನಾಡುತ್ತಿದ್ದರು.

ಭ್ರಷ್ಟಾಚಾರದ ಗೆದ್ದಲು ಹಿಡಿದು ದುರ್ಬಲಗೊಂಡಿರುವ ಈ ನಾಲ್ಕು ಅಂಗಗಳಿಂದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಸಾಧ್ಯವೇ ಇಲ್ಲವೆನ್ನುವ ನಿರಾಶೆ ಅವರ ಮುಖದಲ್ಲಿತ್ತು.
ಕಾರ್ಯಾಂಗ ಮತ್ತು ಶಾಸಕಾಂಗದ ಬಗ್ಗೆ ಜನತೆಗೆ ಎಂದೂ ನಿರೀಕ್ಷೆ ಇರಲಿಲ್ಲ, ಆದರೆ ನಂಬಿಕೆ ಇಟ್ಟುಕೊಂಡಿದ್ದ ನ್ಯಾಯಾಂಗ ಮತ್ತು ಪತ್ರಿಕಾರಂಗದ ಬಗ್ಗೆಯೂ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಜನತೆ ಭವಿಷ್ಯದ ಬಗೆಗಿನ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಿದ್ದು ನಿಜ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಗೆ ವ್ಯಕ್ತವಾದ ಬೆಂಬಲಕ್ಕೆ ಜನಸಮೂಹದಲ್ಲಿದ್ದ ಈ ನಿರಾಶೆ ಮತ್ತು ಹತಾಶೆಯೂ ಕಾರಣ.
ಭ್ರಷ್ಟಾಚಾರದ ಆರೋಪದ ಮೇಲೆ ಯಾರಾದರೂ ರಾಜಕಾರಣಿಗಳು ಜೈಲಿಗೆ ಹೋಗುವುದಿದ್ದರೆ ಅದು ಬಿಹಾರ, ಜಾರ್ಖಂಡ್, ಉತ್ತರಪ್ರದೇಶಗಳಲ್ಲಿ ಮಾತ್ರ ಎಂದು ಎಲ್ಲರೂ ತಿಳಿದುಕೊಂಡಿದ್ದ ಕಾಲವೊಂದಿತ್ತು.
ಆ ನಿಯಮಕ್ಕೆ ಅಪವಾದವೆಂಬಂತೆ ಜೈಲು ಸೇರಿದವರು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಮಾತ್ರ. ಉತ್ತರದ ಮೂರು ರಾಜ್ಯಗಳಲ್ಲಿ ಜೈಲಿಗೆ ಹೋಗಿರುವ ಬಹುತೇಕ ಶಾಸಕರು ಮತ್ತು ಸಂಸದರು ಅಪರಾಧ ಜಗತ್ತಿನಿಂದಲೇ ಬಂದವರಾಗಿರುವುದರಿಂದ ಅವರ ಬಂಧನದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಮುಖ್ಯಮಂತ್ರಿಗಳಾಗಿದ್ದ ಲಾಲು ಪ್ರಸಾದ್ ಮತ್ತು ಮಧುಕೋಡಾ ಅವರ `ಖ್ಯಾತಿ~ ಜೈಲು ಸೇರುವ ಮೊದಲೇ ದೇಶದಾದ್ಯಂತ ಹರಡಿದ್ದ ಕಾರಣ ಅವರ ಬಂಧನ ಯಾರಿಗೂ ಅಚ್ಚರಿ ಉಂಟುಮಾಡಿರಲಿಲ್ಲ. ಅದನ್ನು ನ್ಯಾಯಾಂಗದ ಕ್ರಿಯಾಶೀಲತೆ ಎಂದು ಯಾರೂ ವ್ಯಾಖ್ಯಾನಿಸಲೂ ಇಲ್ಲ.

ಆದರೆ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಈಗ ಮುಖ್ಯಮಂತ್ರಿಗಳು, ಮಂತ್ರಿಗಳು, ಹಿರಿಯ ಅಧಿಕಾರಿಗಳು, ಕಾರ್ಪೋರೇಟ್ ಕುಳಗಳು ಎಲ್ಲರೂ ಜೈಲಿನ ಅನ್ನ ತಿನ್ನತೊಡಗಿದ್ದಾರೆ. ಈ ಬದಲಾವಣೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪನೆ ಮಾಡಿರುವುದು.
ಆಡಳಿತ ಪಕ್ಷದ ಕೈಗೊಂಬೆ ಎಂಬ ತಮ್ಮ ಮೇಲಿನ ಆರೋಪವನ್ನು ಕೇಂದ್ರ ತನಿಖಾ ದಳ (ಸಿಬಿಐ) ಸುಳ್ಳೆಂದು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದು ಕಡಿಮೆ. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಕಟ್ಟಿದ ಈ ಸಂಸ್ಥೆಯನ್ನು ಆಡಳಿತಾರೂಢ ಪಕ್ಷ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಬಳಸಿದ್ದೇ ಹೆಚ್ಚು.

ಅದೇ ಸ್ಥಿತಿ ಮಹಾಲೇಖಪಾಲರದ್ದು (ಸಿಎಜಿ). ಸಾರ್ವಜನಿಕ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಸಂವಿಧಾನಬದ್ಧ ಸಂಸ್ಥೆಯಾಗಿ ರಚನೆಗೊಂಡರೂ ಅದೊಂದು ಹಲ್ಲಿಲ್ಲದ ಸಂಸ್ಥೆಯಾಗಿಯೇ ಉಳಿದಿತ್ತು. ಅದು ನೀಡಿದ ವರದಿ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು ಅಪರೂಪ. ಅದರ ವರದಿಗಳನ್ನು ವ್ಯವಸ್ಥಿತವಾಗಿ ಮೂಲೆಗೆ ತಳ್ಳಲಾಗುತ್ತಿತ್ತು.

ಭ್ರಷ್ಟಾಚಾರ ನಿಗ್ರಹ ಕಾಯಿದೆ 1947ರಿಂದಲೇ ಜಾರಿಯಲ್ಲಿದ್ದರೂ ಅದಕ್ಕೆ ದೊಡ್ಡ ತಿಮಿಂಗಿಲಗಳನ್ನು ಹಿಡಿದು ಹಾಕುವ ಶಕ್ತಿ ಇರಲಿಲ್ಲ.  ಚುನಾವಣಾ ಅಕ್ರಮಗಳ ಬಗ್ಗೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ಕೂಡಾ ಹಲವಾರು ಬಾರಿ ಅಸಹಾಯಕತೆಯಿಂದ ಕೈಚೆಲ್ಲಿತ್ತು.

ಸವಾಲು ಹಾಕುವ ರೀತಿಯಲ್ಲಿ ಕರ್ನಾಟಕದಲ್ಲಿ ನಡೆದ `ಆಪರೇಷನ್ ಕಮಲ~ವನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಲೋಕಾಯುಕ್ತರಿದ್ದ ರಾಜ್ಯಗಳಲ್ಲಿ ಸಾಲುಸಾಲು ದಾಳಿ ನಡೆಸಿದ್ದರೂ ಎಷ್ಟು ಮಂದಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂದು ಕೇಳಿದರೆ ಉತ್ತರ ನೀಡುವ ಸ್ಥಿತಿಯಲ್ಲಿ ಅವುಗಳೂ ಇರಲಿಲ್ಲ.
ಇವೆಲ್ಲವೂ ಆರೇಳು ತಿಂಗಳು, ಹೆಚ್ಚೆಂದರೆ ಒಂದು ವರ್ಷದ ಹಿಂದಿನ ಕತೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದ್ದಕ್ಕಿದ್ದಂತೆ ಕ್ರಿಯಾಶೀಲವಾಗಿರುವ ನ್ಯಾಯಾಂಗ, ಆಡಳಿತ ನಡೆಸುವವರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಸಿಬಿಐ ಹೆಸರು ಹೇಳಿದಾಕ್ಷಣ ಇದೇ ಮೊದಲ ಬಾರಿ ಆಡಳಿತಾರೂಢ ಪಕ್ಷಗಳ ನಾಯಕರು ಕೂಡಾ ನಡುಗತೊಡಗಿದ್ದಾರೆ.
ಮಹಾಲೇಖಪಾಲರ ವರದಿ ಕೇಂದ್ರ ಸಚಿವರು, ಅಧಿಕಾರಿಗಳು, ಉದ್ಯಮಿಗಳು, ರಾಜಕೀಯ ನಾಯಕರು ಜೈಲು ಸೇರುವಂತೆ ಮಾಡಿದೆ. ಮುಖದಲ್ಲಿ ಅಲ್ಲಲ್ಲಿ ಕಳಂಕ ಮೆತ್ತಿಕೊಂಡಿದ್ದರೂ ಪೈಪೋಟಿಗೆ ಬಿದ್ದ ಮಾಧ್ಯಮಗಳು ಭ್ರಷ್ಟಾಚಾರದ ಹಗರಣಗಳನ್ನು ಬಚ್ಚಿಟ್ಟುಕೊಳ್ಳಲಾಗದೆ ಅನಿವಾರ್ಯವಾಗಿ ಬಯಲು ಮಾಡುತ್ತಲೇ ಇವೆ.
ಕೇಂದ್ರದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಈ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಕ್ರಮ ಗಣಿಗಾರಿಕೆಯ ಮೂಲಕ ಗಳಿಸಿದ ಹಣದಿಂದ ರಾಜ್ಯ ರಾಜಕೀಯವನ್ನು ಮುಷ್ಟಿಯಲ್ಲಿಟ್ಟುಕೊಂಡಿದ್ದ ರೆಡ್ಡಿ ಸೋದರರಲ್ಲಿ ಒಬ್ಬರು ಜೈಲು ಸೇರಿದ್ದಾರೆ.
ಮೊದಲು ಮಹಾನಗರಪಾಲಿಕೆ ಸದಸ್ಯ, ನಂತರ ಸಚಿವರು ಕೊನೆಗೆ ಮುಖ್ಯಮಂತ್ರಿಗಳೇ ಜೈಲು ಸೇರಬೇಕಾಯಿತು. ಉಳಿದ ಸಚಿವರು ಜೈಲಿಗೆ ಹೋಗಲು ಸರತಿ ಸಾಲಲ್ಲಿ ನಿಂತಿದ್ದಾರೆ. ಲೋಕಾಯುಕ್ತ ವರದಿಯ ಕುಣಿಕೆ ಇನ್ನೆಷ್ಟು ಮಂದಿಯ ಕೊರಳಿಗೆ ಬೀಳುತ್ತದೆಯೋ ಗೊತ್ತಿಲ್ಲ.
ಇಷ್ಟಾದ ಮೇಲೆ ನ್ಯಾಯಾಲಯ, ಸಿಬಿಐ, ಸಿಎಜಿ, ಲೋಕಾಯುಕ್ತದ ಕಾರ‌್ಯನಿರ್ವಹಣೆಯ ಬಗ್ಗೆ ಯಾರೂ ಬೊಟ್ಟು ಮಾಡುವಂತಿಲ್ಲ. ಈಗ ಪ್ರಜಾಪ್ರಭುತ್ವಕ್ಕೆ ಭಾರತದ ನೆಲದಲ್ಲಿ ಭವಿಷ್ಯ ಇಲ್ಲ ಎಂಬ ಸಿನಿಕತನವನ್ನು ಯಾರೂ ವ್ಯಕ್ತಪಡಿಸಬೇಕಾಗಿಲ್ಲ. ಸಂವಿಧಾನ ವಿಫಲಗೊಂಡಿದೆ ಎಂದು ಯಾರೂ ದೂರುವಂತೆಯೂ ಇಲ್ಲ. ಅವುಗಳು ಮಾಡಬೇಕಾಗಿರುವ ಕೆಲಸವನ್ನು ಮಾಡಿವೆ.

ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವಾಗಿ ಕಾಣಬಯಸುವರು, ಪ್ರಜಾಪ್ರಭುತ್ವವನ್ನು ಪ್ರೀತಿಸುವವರು, ಸಂವಿಧಾನದ ಮೇಲೆ ಗೌರವ ಇಟ್ಟುಕೊಂಡವರೆಲ್ಲರೂ ಈ ಸಂಸ್ಥೆಗಳ ಕರ್ತವ್ಯಪ್ರಜ್ಞೆ, ನ್ಯಾಯನಿಷ್ಠುರತೆ ಮತ್ತು ಇಚ್ಛಾಶಕ್ತಿಯಿಂದ ಕೂಡಿರುವ ಕಾರ್ಯ ನಿರ್ವಹಣೆಯನ್ನು ಮೆಚ್ಚಬೇಕು, ಬೆಂಬಲ ನೀಡಬೇಕು ಅಲ್ಲವೇ. ಹಾಗಾಗುತ್ತಿದೆಯೇ?
ಭ್ರಷ್ಟಾಚಾರದ ಆರೋಪ ಹೊತ್ತವರನ್ನು ನ್ಯಾಯಾಲಯ ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಕಳುಹಿಸಿದರೆ ಅವರನ್ನು ಭೇಟಿ ಮಾಡಲು ಸ್ವಾಮೀಜಿಗಳು ಗುಂಪುಗುಂಪಾಗಿ ಜೈಲಿಗೆ ಹೋಗುತ್ತಾರೆ. ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾದವರಿಗೆ ಅವರ ಅಭಿಮಾನಿಗಳು ವೀರೋಚಿತವಾದ ಸ್ವಾಗತ ನೀಡುತ್ತಾರೆ.

ಈ ಪರಿಸ್ಥಿತಿಯಲ್ಲಿ ನ್ಯಾಯನಿಷ್ಠುರತೆಯಿಂದ ಕೆಲಸ ನಿರ್ವಹಿಸಿದ ಲೋಕಾಯುಕ್ತದ ಒಬ್ಬ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿಗಳ ಪರಿಸ್ಥಿತಿ ಏನಾಗಬೇಕು? ತಾಂತ್ರಿಕವಾಗಿ ಇದು ನ್ಯಾಯಾಂಗದ ನಿಂದನೆ ಅಲ್ಲದೆ ಇರಬಹುದು, ಆದರೆ ನೈತಿಕವಾಗಿ? ಪ್ರಾಮಾಣಿಕರನ್ನು ನೈತಿಕವಾಗಿ ಕುಂದಿಸಲು ಇಂತಹ ಸಮಾಜ ವಿರೋಧಿ ನಡವಳಿಕೆಗಳು ಸಾಕಲ್ಲವೇ?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತ್ರವಲ್ಲ ಎ.ರಾಜಾ, ಸುರೇಶ್ ಕಲ್ಮಾಡಿ, ಕನಿಮೊಳಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಮೊದಲಾದವರು ಸೇರಿದಂತೆ ಭ್ರಷ್ಟಾಚಾರದ ಹಗರಣಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿರುವವರೆಲ್ಲರೂ ಅವರೇ ಹೇಳಿಕೊಂಡಂತೆ ನಿರಪರಾಧಿಗಳಾಗಿರಲೂಬಹುದು. ಆದರೆ ಸದ್ಯಕ್ಕೆ ಯಾವ ನ್ಯಾಯಾಲಯವೂ ಅವರನ್ನು ದೋಷಮುಕ್ತರನ್ನಾಗಿ ಮಾಡಿಲ್ಲ.
ಆರೋಪಿಗಳಿಗೆ ದೋಷ ಮುಕ್ತರಾಗುವ ಅವಸರ ಸಹಜ. ಆದರೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರುವ ಧಾರ್ಮಿಕ ನಾಯಕರಿಗೆ, ಸಮಾಜದ ಗಣ್ಯರಿಗೆ ನಿರಪರಾಧಿತನದ ಸರ್ಟಿಫಿಕೇಟ್ ನೀಡುವ ಅವಸರ ಯಾಕೆ?  ಭಾರತದ ರಾಜಕೀಯದ ಆರೋಗ್ಯ ಹಾಳು ಮಾಡಿರುವುದು ದುಡ್ಡು ಮತ್ತು ಜಾತಿ ಎಂಬ ಎರಡು ರೋಗಗಳು.
`ದುಡ್ಡಿನ ಬಲದಿಂದ ಏನಾದರೂ ಮಾಡಬಲ್ಲೆ, ಸರ್ಕಾರವನ್ನು ಸ್ಥಾಪಿಸಬಲ್ಲೆ, ಅಗತ್ಯವೆನಿಸಿದರೆ ಅದನ್ನು ಉರುಳಿಸಲು ಬಲ್ಲೆ~ ಎಂದಲ್ಲವೇ ರೆಡ್ಡಿ ಸೋದರರು ಹೇಳುತ್ತಿದ್ದದ್ದು.
ಯಡಿಯೂರಪ್ಪನವರು `ಆಪರೇಷನ್ ಕಮಲ~ವನ್ನು ವಿಧಾನಸೌಧದಿಂದ ಹಾಲಿನ ಸೊಸೈಟಿವರೆಗೆ ಎಲ್ಲೆಂದರಲ್ಲಿ ನಡೆಸಿ ವಿರೋಧಿಗಳು ಅಸಹಾಯಕರಂತೆ ಬಾಯಿಬಡಿದುಕೊಳ್ಳುವಂತೆ ಮಾಡಿದ್ದು ಇದೇ ದುಡ್ಡಿನ ಬಲದಿಂದ ಅಲ್ಲವೇ?

ಆದರೆ ನ್ಯಾಯ ಪಾಲನೆಯ ಸಂಸ್ಥೆಗಳು ಮೇಲೆರಗಿದಾಗ ಚಿನ್ನದ ಸಿಂಹಾಸನದ ಮೇಲೆ ಕೂತಿದ್ದ ಜನಾರ್ದನ ರೆಡ್ಡಿಯವರಿಗೂ ತಾವು ಜೈಲು ಪಾಲಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವಾಗದ ದುಡ್ಡು ಒಂದು ಕ್ಷಣ ನಿಷ್ಪ್ರಯೋಜಕ ಎಂದು ಅವರಿಗೆ ಅನಿಸಿರಬಹುದು.
ಯಡಿಯೂರಪ್ಪ, ಎ.ರಾಜಾ, ಸುರೇಶ್ ಕಲ್ಮಾಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ -ಇವರಲ್ಲಿ ಯಾರಿಗೂ ದುಡ್ಡಿನ ಕೊರತೆ ಇಲ್ಲ. `ದುಡ್ಡೊಂದು ಇದ್ದರೆ ಏನನ್ನಾದರೂ ಸಾಧಿಸಬಲ್ಲೆ~ ಎಂದು ಬಲವಾಗಿ ನಂಬಿದವರು ಇವರೆಲ್ಲ.

ರಾಜಕಾರಣಿಗಳು ನಂಬಿದ್ದ ದುಡ್ಡಿನ ಸೊಂಟವನ್ನು ನ್ಯಾಯದ ದಂಡ ಮುರಿದುಹಾಕಿದೆ. ಕೇವಲ ದುಡ್ಡಿನ ಬಲದಿಂದಲೇ ರಾಜಕೀಯದಲ್ಲಿ ಉಳಿಯಲು-ಬೆಳೆಯಲು ಸಾಧ್ಯ ಇಲ್ಲ ಎನ್ನುವುದನ್ನು ಈಗಿನ ಬೆಳವಣಿಗೆಗಳು ಮನವರಿಕೆ ಮಾಡಿಕೊಟ್ಟಿವೆ. ಆದರೆ ಜಾತಿ?
ರಾಜಕೀಯವನ್ನು ಕಾಡುತ್ತಿರುವ ಜಾತಿಯ ರೋಗಕ್ಕೆ ಕಾನೂನಿನಲ್ಲಿಯೂ ಔಷಧಿ ಇಲ್ಲ.
ಅಸ್ಪೃಶ್ಯತೆ ಆಚರಣೆಗೆ, ಜಾತಿ ಆಧಾರದ ತಾರತಮ್ಯಗಳಿಗೆ ಕಾನೂನಿನಲ್ಲಿ ಶಿಕ್ಷೆ ಇದೆ. ಆದರೆ ಜಾತಿಯ ಕಾರಣಕ್ಕೆ ಭ್ರಷ್ಟರು, ಅಪ್ರಾಮಾಣಿಕರು, ಅನರ್ಹರು ಇಲ್ಲವೇ ಅಪರಾಧಿಗಳನ್ನು ಬೆಂಬಲಿಸುವವರಿಗೆ ಎಲ್ಲಿದೆ ಶಿಕ್ಷೆ?

ಈ ಕಾರಣದಿಂದಾಗಿಯೇ ದುಡ್ಡಿನ ಬಲದಿಂದ ಮಾಡಲಾರದ್ದನ್ನು ಜಾತಿಯ ಬಲದ ಮೂಲಕ ಮಾಡಲು  ಕರ್ನಾಟಕದ ರಾಜಕಾರಣಿಗಳು ಹೊರಟಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಯಡಿಯೂರಪ್ಪನವರು ಆತ್ಮರಕ್ಷಣೆಗಾಗಿ ಜೋತುಬಿದ್ದಿರುವುದು ಜಾತಿ ಮೇಲೆ.
ಪಕ್ಷದೊಳಗೆ ಮತ್ತು ಹೊರಗೆ ಇರುವ ಅವರ ವಿರೋಧಿಗಳು ಕೂಡಾ ಅವರಿಗೆ ಹೆದರುತ್ತಿರುವುದು ಅವರಿಗಿದೆಯೆಂದು ಹೇಳಲಾಗುತ್ತಿರುವ ಜಾತಿ ಬೆಂಬಲಕ್ಕಾಗಿ.
ಲೋಕಾಯುಕ್ತ ವರದಿಯಲ್ಲಿ ತನ್ನ ವಿರುದ್ಧ ಆರೋಪವಿರುವುದನ್ನು ಪ್ರತಿಭಟಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಪಕ್ಷವನ್ನೂ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಶ್ರಿರಾಮುಲು ಅವರೂ ಮತ್ತೆ ಗೆದ್ದು ಬರುತ್ತೇನೆಂದು ಸವಾಲು ಹಾಕುತ್ತಿರುವುದಕ್ಕೂ ಜಾತಿ ಕಾರಣ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಜಾತಿ ಜನ ಬಹುಸಂಖ್ಯೆಯಲ್ಲಿದ್ದಿದ್ದರೆ ದೇವೇಗೌಡರು ಕೂಡಾ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅದನ್ನೇ ಮಾಡುತ್ತಿದ್ದರು.
ಕರ್ನಾಟಕದ ರಾಜಕೀಯದ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಹತ್ತುವರ್ಷಗಳ ಹಿಂದಿನ ಬಿಹಾರ ನೆನಪಾಗುತ್ತದೆ. ಜಯಪ್ರಕಾಶ್ ನಾರಾಯಣ್ ಅವರ `ಸಂಪೂರ್ಣ ಕ್ರಾಂತಿ~ಯ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶಿಸಿದ್ದ ಲಾಲುಪ್ರಸಾದ್ ಜಾತಿವಾದಿಯೇನೂ ಆಗಿರಲಿಲ್ಲ.

ಮುಖ್ಯಮಂತ್ರಿಯಾಗಿ ಮೊದಲ ಅವಧಿಯ ಸಾಧನೆ ಜನ ಕೊಂಡಾಡುವಂತಿತ್ತು. ನಂತರದ ದಿನಗಳಲ್ಲಿ  ಭ್ರಷ್ಟಗೊಳ್ಳುತ್ತಾ ಹೋದ ಲಾಲು ರಾಜಕೀಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಾತಿವಾದಿಯಾಗುತ್ತಾ ಹೋದರು.

ಜಾತಿ ಸಂಘರ್ಷದ ಮೂಲಕವೇ ಜಾತಿ ನಾಶ ಮಾಡಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಸಮಾಜವಾದದ ಪಾಠವನ್ನು ತಿರುಚಿದ ಲಾಲು, ರಾಜಕೀಯ ಉಳಿವಿಗಾಗಿ ಜಾತಿ ಕಲಹವನ್ನು ಬಳಸಿಕೊಂಡರು.
ಲಾಲು ಅವರ ಜಾತಿ ರಾಜಕೀಯವನ್ನು ಜಾತಿಯಿಂದಲೇ ಎದುರಿಸುವ ಪ್ರಯತ್ನಗಳು ನಡೆದವು. ಇದರಿಂದಾಗಿ ಬಿಹಾರದ ರಾಜಕೀಯವೇ ಜಾತಿಮಯವಾಗಿ ಹೋಯಿತು.
ಬಿಹಾರದ ಕೆಟ್ಟು ನಾರುತ್ತಿದ್ದ ವ್ಯವಸ್ಥೆಗೆ ಅವರು `ಪ್ರತಿಕ್ರಿಯೆ~ ಆದರೇ  ಹೊರತು `ಪರಿಹಾರ~ ಆಗಲಿಲ್ಲ. ಜನ ಎಚ್ಚೆತ್ತು ಕೊಳ್ಳಲು ಹದಿನಾರು ವರ್ಷ ಬೇಕಾಯಿತು. ಅಷ್ಟರಲ್ಲಿ ಬಿಹಾರ `ಜಂಗಲ್ ರಾಜ್~ ಆಗಿತ್ತು. ಕೊನೆಗೂ ಲಾಲು ಅವರನ್ನು ಬೆಂಬಲಿಸುತ್ತಾ ಬಂದಿದ್ದ ಆ ರಾಜ್ಯದ ಜನಸಂಖ್ಯೆಯಲ್ಲಿ ಶೇ 13ರಷ್ಟಿರುವ ಯಾದವರು ತಿರುಗಿಬಿದ್ದರು.
ಲಾಲು ಇತಿಹಾಸದ ಕಸದ ಬುಟ್ಟಿ ಸೇರಿದರು. ಇತಿಹಾಸ ಪುನರಾವರ್ತನೆಯಾಗುವಾಗ ಒಮ್ಮಮ್ಮೆ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತದೆಯಂತೆ.
ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಜಾತಿ ರಾಜಕೀಯವನ್ನು ನೋಡಿದರೆ ಬಿಹಾರದ ಇತಿಹಾಸ ಕರ್ನಾಟಕದಲ್ಲಿ ಪುನರಾವರ್ತನೆಯಾಗುತ್ತಿರುವಂತೆ ಕಾಣುತ್ತಿದೆ. ಇದನ್ನು ತಡೆಯಲು ದೇಶದ ನ್ಯಾಯಪಾಲನಾ ವ್ಯವಸ್ಥೆ ಶಕ್ತಿ ಮೀರಿಪ್ರಯತ್ನ ಮಾಡುತ್ತಿದೆ, ಈಗ ಎಚ್ಚೆತ್ತುಕೊಳ್ಳಬೇಕಾಗಿರುವುದು ಜನತೆ.