Monday, November 14, 2011

ಕರ್ನಾಟಕ ಹಳೆಯ ಬಿಹಾರ ಆಗುತ್ತಿದೆಯೇ?

ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭವಿಷ್ಯ ಇಲ್ಲವೇನೋ ಎಂಬ ಕಳವಳಕಾರಿ ಪರಿಸ್ಥಿತಿ ಆರು ತಿಂಗಳ ಹಿಂದಿನವರೆಗೂ ಇತ್ತು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜತೆಯಲ್ಲಿ ಪತ್ರಿಕಾರಂಗದ ಮೇಲಿನ ವಿಶ್ವಾಸವನ್ನೂ ಕಳೆದುಕೊಂಡವರಂತೆ ಜನ ಮಾತನಾಡುತ್ತಿದ್ದರು.

ಭ್ರಷ್ಟಾಚಾರದ ಗೆದ್ದಲು ಹಿಡಿದು ದುರ್ಬಲಗೊಂಡಿರುವ ಈ ನಾಲ್ಕು ಅಂಗಗಳಿಂದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಸಾಧ್ಯವೇ ಇಲ್ಲವೆನ್ನುವ ನಿರಾಶೆ ಅವರ ಮುಖದಲ್ಲಿತ್ತು.
ಕಾರ್ಯಾಂಗ ಮತ್ತು ಶಾಸಕಾಂಗದ ಬಗ್ಗೆ ಜನತೆಗೆ ಎಂದೂ ನಿರೀಕ್ಷೆ ಇರಲಿಲ್ಲ, ಆದರೆ ನಂಬಿಕೆ ಇಟ್ಟುಕೊಂಡಿದ್ದ ನ್ಯಾಯಾಂಗ ಮತ್ತು ಪತ್ರಿಕಾರಂಗದ ಬಗ್ಗೆಯೂ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಜನತೆ ಭವಿಷ್ಯದ ಬಗೆಗಿನ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಿದ್ದು ನಿಜ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಗೆ ವ್ಯಕ್ತವಾದ ಬೆಂಬಲಕ್ಕೆ ಜನಸಮೂಹದಲ್ಲಿದ್ದ ಈ ನಿರಾಶೆ ಮತ್ತು ಹತಾಶೆಯೂ ಕಾರಣ.
ಭ್ರಷ್ಟಾಚಾರದ ಆರೋಪದ ಮೇಲೆ ಯಾರಾದರೂ ರಾಜಕಾರಣಿಗಳು ಜೈಲಿಗೆ ಹೋಗುವುದಿದ್ದರೆ ಅದು ಬಿಹಾರ, ಜಾರ್ಖಂಡ್, ಉತ್ತರಪ್ರದೇಶಗಳಲ್ಲಿ ಮಾತ್ರ ಎಂದು ಎಲ್ಲರೂ ತಿಳಿದುಕೊಂಡಿದ್ದ ಕಾಲವೊಂದಿತ್ತು.
ಆ ನಿಯಮಕ್ಕೆ ಅಪವಾದವೆಂಬಂತೆ ಜೈಲು ಸೇರಿದವರು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಮಾತ್ರ. ಉತ್ತರದ ಮೂರು ರಾಜ್ಯಗಳಲ್ಲಿ ಜೈಲಿಗೆ ಹೋಗಿರುವ ಬಹುತೇಕ ಶಾಸಕರು ಮತ್ತು ಸಂಸದರು ಅಪರಾಧ ಜಗತ್ತಿನಿಂದಲೇ ಬಂದವರಾಗಿರುವುದರಿಂದ ಅವರ ಬಂಧನದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಮುಖ್ಯಮಂತ್ರಿಗಳಾಗಿದ್ದ ಲಾಲು ಪ್ರಸಾದ್ ಮತ್ತು ಮಧುಕೋಡಾ ಅವರ `ಖ್ಯಾತಿ~ ಜೈಲು ಸೇರುವ ಮೊದಲೇ ದೇಶದಾದ್ಯಂತ ಹರಡಿದ್ದ ಕಾರಣ ಅವರ ಬಂಧನ ಯಾರಿಗೂ ಅಚ್ಚರಿ ಉಂಟುಮಾಡಿರಲಿಲ್ಲ. ಅದನ್ನು ನ್ಯಾಯಾಂಗದ ಕ್ರಿಯಾಶೀಲತೆ ಎಂದು ಯಾರೂ ವ್ಯಾಖ್ಯಾನಿಸಲೂ ಇಲ್ಲ.

ಆದರೆ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಈಗ ಮುಖ್ಯಮಂತ್ರಿಗಳು, ಮಂತ್ರಿಗಳು, ಹಿರಿಯ ಅಧಿಕಾರಿಗಳು, ಕಾರ್ಪೋರೇಟ್ ಕುಳಗಳು ಎಲ್ಲರೂ ಜೈಲಿನ ಅನ್ನ ತಿನ್ನತೊಡಗಿದ್ದಾರೆ. ಈ ಬದಲಾವಣೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪನೆ ಮಾಡಿರುವುದು.
ಆಡಳಿತ ಪಕ್ಷದ ಕೈಗೊಂಬೆ ಎಂಬ ತಮ್ಮ ಮೇಲಿನ ಆರೋಪವನ್ನು ಕೇಂದ್ರ ತನಿಖಾ ದಳ (ಸಿಬಿಐ) ಸುಳ್ಳೆಂದು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದು ಕಡಿಮೆ. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಕಟ್ಟಿದ ಈ ಸಂಸ್ಥೆಯನ್ನು ಆಡಳಿತಾರೂಢ ಪಕ್ಷ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಬಳಸಿದ್ದೇ ಹೆಚ್ಚು.

ಅದೇ ಸ್ಥಿತಿ ಮಹಾಲೇಖಪಾಲರದ್ದು (ಸಿಎಜಿ). ಸಾರ್ವಜನಿಕ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಸಂವಿಧಾನಬದ್ಧ ಸಂಸ್ಥೆಯಾಗಿ ರಚನೆಗೊಂಡರೂ ಅದೊಂದು ಹಲ್ಲಿಲ್ಲದ ಸಂಸ್ಥೆಯಾಗಿಯೇ ಉಳಿದಿತ್ತು. ಅದು ನೀಡಿದ ವರದಿ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು ಅಪರೂಪ. ಅದರ ವರದಿಗಳನ್ನು ವ್ಯವಸ್ಥಿತವಾಗಿ ಮೂಲೆಗೆ ತಳ್ಳಲಾಗುತ್ತಿತ್ತು.

ಭ್ರಷ್ಟಾಚಾರ ನಿಗ್ರಹ ಕಾಯಿದೆ 1947ರಿಂದಲೇ ಜಾರಿಯಲ್ಲಿದ್ದರೂ ಅದಕ್ಕೆ ದೊಡ್ಡ ತಿಮಿಂಗಿಲಗಳನ್ನು ಹಿಡಿದು ಹಾಕುವ ಶಕ್ತಿ ಇರಲಿಲ್ಲ.  ಚುನಾವಣಾ ಅಕ್ರಮಗಳ ಬಗ್ಗೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ಕೂಡಾ ಹಲವಾರು ಬಾರಿ ಅಸಹಾಯಕತೆಯಿಂದ ಕೈಚೆಲ್ಲಿತ್ತು.

ಸವಾಲು ಹಾಕುವ ರೀತಿಯಲ್ಲಿ ಕರ್ನಾಟಕದಲ್ಲಿ ನಡೆದ `ಆಪರೇಷನ್ ಕಮಲ~ವನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಲೋಕಾಯುಕ್ತರಿದ್ದ ರಾಜ್ಯಗಳಲ್ಲಿ ಸಾಲುಸಾಲು ದಾಳಿ ನಡೆಸಿದ್ದರೂ ಎಷ್ಟು ಮಂದಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂದು ಕೇಳಿದರೆ ಉತ್ತರ ನೀಡುವ ಸ್ಥಿತಿಯಲ್ಲಿ ಅವುಗಳೂ ಇರಲಿಲ್ಲ.
ಇವೆಲ್ಲವೂ ಆರೇಳು ತಿಂಗಳು, ಹೆಚ್ಚೆಂದರೆ ಒಂದು ವರ್ಷದ ಹಿಂದಿನ ಕತೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದ್ದಕ್ಕಿದ್ದಂತೆ ಕ್ರಿಯಾಶೀಲವಾಗಿರುವ ನ್ಯಾಯಾಂಗ, ಆಡಳಿತ ನಡೆಸುವವರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಸಿಬಿಐ ಹೆಸರು ಹೇಳಿದಾಕ್ಷಣ ಇದೇ ಮೊದಲ ಬಾರಿ ಆಡಳಿತಾರೂಢ ಪಕ್ಷಗಳ ನಾಯಕರು ಕೂಡಾ ನಡುಗತೊಡಗಿದ್ದಾರೆ.
ಮಹಾಲೇಖಪಾಲರ ವರದಿ ಕೇಂದ್ರ ಸಚಿವರು, ಅಧಿಕಾರಿಗಳು, ಉದ್ಯಮಿಗಳು, ರಾಜಕೀಯ ನಾಯಕರು ಜೈಲು ಸೇರುವಂತೆ ಮಾಡಿದೆ. ಮುಖದಲ್ಲಿ ಅಲ್ಲಲ್ಲಿ ಕಳಂಕ ಮೆತ್ತಿಕೊಂಡಿದ್ದರೂ ಪೈಪೋಟಿಗೆ ಬಿದ್ದ ಮಾಧ್ಯಮಗಳು ಭ್ರಷ್ಟಾಚಾರದ ಹಗರಣಗಳನ್ನು ಬಚ್ಚಿಟ್ಟುಕೊಳ್ಳಲಾಗದೆ ಅನಿವಾರ್ಯವಾಗಿ ಬಯಲು ಮಾಡುತ್ತಲೇ ಇವೆ.
ಕೇಂದ್ರದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಈ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಕ್ರಮ ಗಣಿಗಾರಿಕೆಯ ಮೂಲಕ ಗಳಿಸಿದ ಹಣದಿಂದ ರಾಜ್ಯ ರಾಜಕೀಯವನ್ನು ಮುಷ್ಟಿಯಲ್ಲಿಟ್ಟುಕೊಂಡಿದ್ದ ರೆಡ್ಡಿ ಸೋದರರಲ್ಲಿ ಒಬ್ಬರು ಜೈಲು ಸೇರಿದ್ದಾರೆ.
ಮೊದಲು ಮಹಾನಗರಪಾಲಿಕೆ ಸದಸ್ಯ, ನಂತರ ಸಚಿವರು ಕೊನೆಗೆ ಮುಖ್ಯಮಂತ್ರಿಗಳೇ ಜೈಲು ಸೇರಬೇಕಾಯಿತು. ಉಳಿದ ಸಚಿವರು ಜೈಲಿಗೆ ಹೋಗಲು ಸರತಿ ಸಾಲಲ್ಲಿ ನಿಂತಿದ್ದಾರೆ. ಲೋಕಾಯುಕ್ತ ವರದಿಯ ಕುಣಿಕೆ ಇನ್ನೆಷ್ಟು ಮಂದಿಯ ಕೊರಳಿಗೆ ಬೀಳುತ್ತದೆಯೋ ಗೊತ್ತಿಲ್ಲ.
ಇಷ್ಟಾದ ಮೇಲೆ ನ್ಯಾಯಾಲಯ, ಸಿಬಿಐ, ಸಿಎಜಿ, ಲೋಕಾಯುಕ್ತದ ಕಾರ‌್ಯನಿರ್ವಹಣೆಯ ಬಗ್ಗೆ ಯಾರೂ ಬೊಟ್ಟು ಮಾಡುವಂತಿಲ್ಲ. ಈಗ ಪ್ರಜಾಪ್ರಭುತ್ವಕ್ಕೆ ಭಾರತದ ನೆಲದಲ್ಲಿ ಭವಿಷ್ಯ ಇಲ್ಲ ಎಂಬ ಸಿನಿಕತನವನ್ನು ಯಾರೂ ವ್ಯಕ್ತಪಡಿಸಬೇಕಾಗಿಲ್ಲ. ಸಂವಿಧಾನ ವಿಫಲಗೊಂಡಿದೆ ಎಂದು ಯಾರೂ ದೂರುವಂತೆಯೂ ಇಲ್ಲ. ಅವುಗಳು ಮಾಡಬೇಕಾಗಿರುವ ಕೆಲಸವನ್ನು ಮಾಡಿವೆ.

ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವಾಗಿ ಕಾಣಬಯಸುವರು, ಪ್ರಜಾಪ್ರಭುತ್ವವನ್ನು ಪ್ರೀತಿಸುವವರು, ಸಂವಿಧಾನದ ಮೇಲೆ ಗೌರವ ಇಟ್ಟುಕೊಂಡವರೆಲ್ಲರೂ ಈ ಸಂಸ್ಥೆಗಳ ಕರ್ತವ್ಯಪ್ರಜ್ಞೆ, ನ್ಯಾಯನಿಷ್ಠುರತೆ ಮತ್ತು ಇಚ್ಛಾಶಕ್ತಿಯಿಂದ ಕೂಡಿರುವ ಕಾರ್ಯ ನಿರ್ವಹಣೆಯನ್ನು ಮೆಚ್ಚಬೇಕು, ಬೆಂಬಲ ನೀಡಬೇಕು ಅಲ್ಲವೇ. ಹಾಗಾಗುತ್ತಿದೆಯೇ?
ಭ್ರಷ್ಟಾಚಾರದ ಆರೋಪ ಹೊತ್ತವರನ್ನು ನ್ಯಾಯಾಲಯ ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಕಳುಹಿಸಿದರೆ ಅವರನ್ನು ಭೇಟಿ ಮಾಡಲು ಸ್ವಾಮೀಜಿಗಳು ಗುಂಪುಗುಂಪಾಗಿ ಜೈಲಿಗೆ ಹೋಗುತ್ತಾರೆ. ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾದವರಿಗೆ ಅವರ ಅಭಿಮಾನಿಗಳು ವೀರೋಚಿತವಾದ ಸ್ವಾಗತ ನೀಡುತ್ತಾರೆ.

ಈ ಪರಿಸ್ಥಿತಿಯಲ್ಲಿ ನ್ಯಾಯನಿಷ್ಠುರತೆಯಿಂದ ಕೆಲಸ ನಿರ್ವಹಿಸಿದ ಲೋಕಾಯುಕ್ತದ ಒಬ್ಬ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿಗಳ ಪರಿಸ್ಥಿತಿ ಏನಾಗಬೇಕು? ತಾಂತ್ರಿಕವಾಗಿ ಇದು ನ್ಯಾಯಾಂಗದ ನಿಂದನೆ ಅಲ್ಲದೆ ಇರಬಹುದು, ಆದರೆ ನೈತಿಕವಾಗಿ? ಪ್ರಾಮಾಣಿಕರನ್ನು ನೈತಿಕವಾಗಿ ಕುಂದಿಸಲು ಇಂತಹ ಸಮಾಜ ವಿರೋಧಿ ನಡವಳಿಕೆಗಳು ಸಾಕಲ್ಲವೇ?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತ್ರವಲ್ಲ ಎ.ರಾಜಾ, ಸುರೇಶ್ ಕಲ್ಮಾಡಿ, ಕನಿಮೊಳಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಮೊದಲಾದವರು ಸೇರಿದಂತೆ ಭ್ರಷ್ಟಾಚಾರದ ಹಗರಣಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿರುವವರೆಲ್ಲರೂ ಅವರೇ ಹೇಳಿಕೊಂಡಂತೆ ನಿರಪರಾಧಿಗಳಾಗಿರಲೂಬಹುದು. ಆದರೆ ಸದ್ಯಕ್ಕೆ ಯಾವ ನ್ಯಾಯಾಲಯವೂ ಅವರನ್ನು ದೋಷಮುಕ್ತರನ್ನಾಗಿ ಮಾಡಿಲ್ಲ.
ಆರೋಪಿಗಳಿಗೆ ದೋಷ ಮುಕ್ತರಾಗುವ ಅವಸರ ಸಹಜ. ಆದರೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರುವ ಧಾರ್ಮಿಕ ನಾಯಕರಿಗೆ, ಸಮಾಜದ ಗಣ್ಯರಿಗೆ ನಿರಪರಾಧಿತನದ ಸರ್ಟಿಫಿಕೇಟ್ ನೀಡುವ ಅವಸರ ಯಾಕೆ?  ಭಾರತದ ರಾಜಕೀಯದ ಆರೋಗ್ಯ ಹಾಳು ಮಾಡಿರುವುದು ದುಡ್ಡು ಮತ್ತು ಜಾತಿ ಎಂಬ ಎರಡು ರೋಗಗಳು.
`ದುಡ್ಡಿನ ಬಲದಿಂದ ಏನಾದರೂ ಮಾಡಬಲ್ಲೆ, ಸರ್ಕಾರವನ್ನು ಸ್ಥಾಪಿಸಬಲ್ಲೆ, ಅಗತ್ಯವೆನಿಸಿದರೆ ಅದನ್ನು ಉರುಳಿಸಲು ಬಲ್ಲೆ~ ಎಂದಲ್ಲವೇ ರೆಡ್ಡಿ ಸೋದರರು ಹೇಳುತ್ತಿದ್ದದ್ದು.
ಯಡಿಯೂರಪ್ಪನವರು `ಆಪರೇಷನ್ ಕಮಲ~ವನ್ನು ವಿಧಾನಸೌಧದಿಂದ ಹಾಲಿನ ಸೊಸೈಟಿವರೆಗೆ ಎಲ್ಲೆಂದರಲ್ಲಿ ನಡೆಸಿ ವಿರೋಧಿಗಳು ಅಸಹಾಯಕರಂತೆ ಬಾಯಿಬಡಿದುಕೊಳ್ಳುವಂತೆ ಮಾಡಿದ್ದು ಇದೇ ದುಡ್ಡಿನ ಬಲದಿಂದ ಅಲ್ಲವೇ?

ಆದರೆ ನ್ಯಾಯ ಪಾಲನೆಯ ಸಂಸ್ಥೆಗಳು ಮೇಲೆರಗಿದಾಗ ಚಿನ್ನದ ಸಿಂಹಾಸನದ ಮೇಲೆ ಕೂತಿದ್ದ ಜನಾರ್ದನ ರೆಡ್ಡಿಯವರಿಗೂ ತಾವು ಜೈಲು ಪಾಲಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವಾಗದ ದುಡ್ಡು ಒಂದು ಕ್ಷಣ ನಿಷ್ಪ್ರಯೋಜಕ ಎಂದು ಅವರಿಗೆ ಅನಿಸಿರಬಹುದು.
ಯಡಿಯೂರಪ್ಪ, ಎ.ರಾಜಾ, ಸುರೇಶ್ ಕಲ್ಮಾಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ -ಇವರಲ್ಲಿ ಯಾರಿಗೂ ದುಡ್ಡಿನ ಕೊರತೆ ಇಲ್ಲ. `ದುಡ್ಡೊಂದು ಇದ್ದರೆ ಏನನ್ನಾದರೂ ಸಾಧಿಸಬಲ್ಲೆ~ ಎಂದು ಬಲವಾಗಿ ನಂಬಿದವರು ಇವರೆಲ್ಲ.

ರಾಜಕಾರಣಿಗಳು ನಂಬಿದ್ದ ದುಡ್ಡಿನ ಸೊಂಟವನ್ನು ನ್ಯಾಯದ ದಂಡ ಮುರಿದುಹಾಕಿದೆ. ಕೇವಲ ದುಡ್ಡಿನ ಬಲದಿಂದಲೇ ರಾಜಕೀಯದಲ್ಲಿ ಉಳಿಯಲು-ಬೆಳೆಯಲು ಸಾಧ್ಯ ಇಲ್ಲ ಎನ್ನುವುದನ್ನು ಈಗಿನ ಬೆಳವಣಿಗೆಗಳು ಮನವರಿಕೆ ಮಾಡಿಕೊಟ್ಟಿವೆ. ಆದರೆ ಜಾತಿ?
ರಾಜಕೀಯವನ್ನು ಕಾಡುತ್ತಿರುವ ಜಾತಿಯ ರೋಗಕ್ಕೆ ಕಾನೂನಿನಲ್ಲಿಯೂ ಔಷಧಿ ಇಲ್ಲ.
ಅಸ್ಪೃಶ್ಯತೆ ಆಚರಣೆಗೆ, ಜಾತಿ ಆಧಾರದ ತಾರತಮ್ಯಗಳಿಗೆ ಕಾನೂನಿನಲ್ಲಿ ಶಿಕ್ಷೆ ಇದೆ. ಆದರೆ ಜಾತಿಯ ಕಾರಣಕ್ಕೆ ಭ್ರಷ್ಟರು, ಅಪ್ರಾಮಾಣಿಕರು, ಅನರ್ಹರು ಇಲ್ಲವೇ ಅಪರಾಧಿಗಳನ್ನು ಬೆಂಬಲಿಸುವವರಿಗೆ ಎಲ್ಲಿದೆ ಶಿಕ್ಷೆ?

ಈ ಕಾರಣದಿಂದಾಗಿಯೇ ದುಡ್ಡಿನ ಬಲದಿಂದ ಮಾಡಲಾರದ್ದನ್ನು ಜಾತಿಯ ಬಲದ ಮೂಲಕ ಮಾಡಲು  ಕರ್ನಾಟಕದ ರಾಜಕಾರಣಿಗಳು ಹೊರಟಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಯಡಿಯೂರಪ್ಪನವರು ಆತ್ಮರಕ್ಷಣೆಗಾಗಿ ಜೋತುಬಿದ್ದಿರುವುದು ಜಾತಿ ಮೇಲೆ.
ಪಕ್ಷದೊಳಗೆ ಮತ್ತು ಹೊರಗೆ ಇರುವ ಅವರ ವಿರೋಧಿಗಳು ಕೂಡಾ ಅವರಿಗೆ ಹೆದರುತ್ತಿರುವುದು ಅವರಿಗಿದೆಯೆಂದು ಹೇಳಲಾಗುತ್ತಿರುವ ಜಾತಿ ಬೆಂಬಲಕ್ಕಾಗಿ.
ಲೋಕಾಯುಕ್ತ ವರದಿಯಲ್ಲಿ ತನ್ನ ವಿರುದ್ಧ ಆರೋಪವಿರುವುದನ್ನು ಪ್ರತಿಭಟಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಪಕ್ಷವನ್ನೂ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಶ್ರಿರಾಮುಲು ಅವರೂ ಮತ್ತೆ ಗೆದ್ದು ಬರುತ್ತೇನೆಂದು ಸವಾಲು ಹಾಕುತ್ತಿರುವುದಕ್ಕೂ ಜಾತಿ ಕಾರಣ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಜಾತಿ ಜನ ಬಹುಸಂಖ್ಯೆಯಲ್ಲಿದ್ದಿದ್ದರೆ ದೇವೇಗೌಡರು ಕೂಡಾ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅದನ್ನೇ ಮಾಡುತ್ತಿದ್ದರು.
ಕರ್ನಾಟಕದ ರಾಜಕೀಯದ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಹತ್ತುವರ್ಷಗಳ ಹಿಂದಿನ ಬಿಹಾರ ನೆನಪಾಗುತ್ತದೆ. ಜಯಪ್ರಕಾಶ್ ನಾರಾಯಣ್ ಅವರ `ಸಂಪೂರ್ಣ ಕ್ರಾಂತಿ~ಯ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶಿಸಿದ್ದ ಲಾಲುಪ್ರಸಾದ್ ಜಾತಿವಾದಿಯೇನೂ ಆಗಿರಲಿಲ್ಲ.

ಮುಖ್ಯಮಂತ್ರಿಯಾಗಿ ಮೊದಲ ಅವಧಿಯ ಸಾಧನೆ ಜನ ಕೊಂಡಾಡುವಂತಿತ್ತು. ನಂತರದ ದಿನಗಳಲ್ಲಿ  ಭ್ರಷ್ಟಗೊಳ್ಳುತ್ತಾ ಹೋದ ಲಾಲು ರಾಜಕೀಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಾತಿವಾದಿಯಾಗುತ್ತಾ ಹೋದರು.

ಜಾತಿ ಸಂಘರ್ಷದ ಮೂಲಕವೇ ಜಾತಿ ನಾಶ ಮಾಡಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಸಮಾಜವಾದದ ಪಾಠವನ್ನು ತಿರುಚಿದ ಲಾಲು, ರಾಜಕೀಯ ಉಳಿವಿಗಾಗಿ ಜಾತಿ ಕಲಹವನ್ನು ಬಳಸಿಕೊಂಡರು.
ಲಾಲು ಅವರ ಜಾತಿ ರಾಜಕೀಯವನ್ನು ಜಾತಿಯಿಂದಲೇ ಎದುರಿಸುವ ಪ್ರಯತ್ನಗಳು ನಡೆದವು. ಇದರಿಂದಾಗಿ ಬಿಹಾರದ ರಾಜಕೀಯವೇ ಜಾತಿಮಯವಾಗಿ ಹೋಯಿತು.
ಬಿಹಾರದ ಕೆಟ್ಟು ನಾರುತ್ತಿದ್ದ ವ್ಯವಸ್ಥೆಗೆ ಅವರು `ಪ್ರತಿಕ್ರಿಯೆ~ ಆದರೇ  ಹೊರತು `ಪರಿಹಾರ~ ಆಗಲಿಲ್ಲ. ಜನ ಎಚ್ಚೆತ್ತು ಕೊಳ್ಳಲು ಹದಿನಾರು ವರ್ಷ ಬೇಕಾಯಿತು. ಅಷ್ಟರಲ್ಲಿ ಬಿಹಾರ `ಜಂಗಲ್ ರಾಜ್~ ಆಗಿತ್ತು. ಕೊನೆಗೂ ಲಾಲು ಅವರನ್ನು ಬೆಂಬಲಿಸುತ್ತಾ ಬಂದಿದ್ದ ಆ ರಾಜ್ಯದ ಜನಸಂಖ್ಯೆಯಲ್ಲಿ ಶೇ 13ರಷ್ಟಿರುವ ಯಾದವರು ತಿರುಗಿಬಿದ್ದರು.
ಲಾಲು ಇತಿಹಾಸದ ಕಸದ ಬುಟ್ಟಿ ಸೇರಿದರು. ಇತಿಹಾಸ ಪುನರಾವರ್ತನೆಯಾಗುವಾಗ ಒಮ್ಮಮ್ಮೆ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತದೆಯಂತೆ.
ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಜಾತಿ ರಾಜಕೀಯವನ್ನು ನೋಡಿದರೆ ಬಿಹಾರದ ಇತಿಹಾಸ ಕರ್ನಾಟಕದಲ್ಲಿ ಪುನರಾವರ್ತನೆಯಾಗುತ್ತಿರುವಂತೆ ಕಾಣುತ್ತಿದೆ. ಇದನ್ನು ತಡೆಯಲು ದೇಶದ ನ್ಯಾಯಪಾಲನಾ ವ್ಯವಸ್ಥೆ ಶಕ್ತಿ ಮೀರಿಪ್ರಯತ್ನ ಮಾಡುತ್ತಿದೆ, ಈಗ ಎಚ್ಚೆತ್ತುಕೊಳ್ಳಬೇಕಾಗಿರುವುದು ಜನತೆ.

Monday, November 7, 2011

ಹಾದಿ ತಪ್ಪುತ್ತಿರುವ ಭ್ರಷ್ಟಾಚಾರ ವಿರೋಧಿ ಚಳವಳಿ

..ಎಲ್ಲಿಯವರೆಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ, ಅಲ್ಲಿಯವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು.
ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ಧವಾಗಬೇಕಾಗಬಹುದು.
ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿ ಮತ್ತು ಶಕ್ತಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ.
ರಾಜಕೀಯ ಪಕ್ಷಗಳು ಕೂಡಾ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ~ ಎಂದು ಏಳು ತಿಂಗಳ ಹಿಂದೆ ಈ ಅಂಕಣದಲ್ಲಿ (`ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ~) ಬರೆದಾಗ ಕೆಲವು ಅಣ್ಣಾ ಬೆಂಬಲಿಗರು `ಅಷ್ಟೊಂದು ಸಿನಿಕರಾಗುವುದು ಬೇಡ~ ಎಂದಿದ್ದರು.
ಅವರಲ್ಲಿ ಕೆಲವರಿಗಾದರೂ ಅಣ್ಣಾ ಹಜಾರೆ ಅವರು ಈಗ ನಿರಾಶೆ ಉಂಟು ಮಾಡಿರಬಹುದು.
ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ದ ಹೋರಾಟ ಪ್ರಾರಂಭಿಸಿದಾಗ ಪ್ರಮುಖವಾಗಿ ಎರಡು ಕಾರಣಗಳಿಂದಾಗಿ ಜನಬೆಂಬಲ ಹರಿದು ಬಂದಿತ್ತು. ಮೊದಲನೆಯದಾಗಿ ಸಾರಾಸಗಟಾಗಿ ರಾಜಕಾರಣಿಗಳನ್ನು ದ್ವೇಷಿಸುವಷ್ಟು ರಾಜಕೀಯದ ಬಗ್ಗೆ ಜನರು ಹೊಂದಿರುವ ತಿರಸ್ಕಾರ.
ಎರಡನೆಯದಾಗಿ ಭ್ರಷ್ಟಾಚಾರದ ವಿರುದ್ಧದ ಸಾರ್ವಜನಿಕ ಆಕ್ರೋಶ. ಈ ಪರಿಸ್ಥಿತಿಯಲ್ಲಿ ಪ್ರವೇಶ ಮಾಡಿದ ಅಣ್ಣಾಹಜಾರೆ ಜನರ ಕಣ್ಣಿಗೆ ತಮ್ಮನ್ನು ಸಂಕಷ್ಟಗಳಿಂದ ಪಾರು ಮಾಡಲು ಬಂದ ಅವತಾರ ಪುರುಷನಂತೆ ಕಂಡಿದ್ದರು.
ಯಾಕೆಂದರೆ ಅಣ್ಣಾ ಹಜಾರೆ ರಾಜಕಾರಣಿಯಾಗಿರಲಿಲ್ಲ ಮತ್ತು ಪ್ರಾಮಾಣಿಕರಾಗಿದ್ದರು. ಇದು ಏಳು ತಿಂಗಳ ಹಿಂದಿನ ಕತೆ, ಈಗಲೂ ಅವರು ಅಂದಿನ ಅಣ್ಣಾ ಆಗಿಯೇ ಉಳಿದಿದ್ದಾರೆಯೇ? ಅವರ ಅಭಿಮಾನಿಗಳಿಗೂ ಉತ್ತರಿಸುವುದು ಕಷ್ಟ.

ರಾಜಕಾರಣಿಗಳನ್ನು ವಿರೋಧಿಸುತ್ತಲೇ ಅಣ್ಣಾ ಹಜಾರೆ ರಾಜಕಾರಣಿಯಾದಂತಿದೆ ಮತ್ತು ಇತರರ ವಿರುದ್ಧ ಬಳಸುತ್ತಿದ್ದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತು ಕುಯ್ಯತೊಡಗಿದೆ.
ಜನಪ್ರಿಯತೆಯಿಂದ ಸಾರ್ಥಕ್ಯದ ಭಾವನೆ ಮೂಡುವುದರಿಂದ ಅದು ವೈಯಕ್ತಿಕವಾಗಿ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಸಾಧ್ಯವಾಗದೆ ಹೋದರೆ ಬಹಳ ಅಪಾಯಕಾರಿ.
ಸಂಭಾಳಿಸಿಕೊಳ್ಳಲಾಗದ ಜನಪ್ರಿಯತೆಯ ವ್ಯಸನಕ್ಕೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಬಹುತೇಕ ದೇಶಗಳ ಸಾರ್ವಜನಿಕ ಜೀವನದಲ್ಲಿ ಜನಪ್ರಿಯರಾದವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನವನ್ನು ಅಭಿಮಾನಿ ಬಳಗ ಮಾಡುತ್ತಾ ಬಂದಿದೆ.
ಅವರ ಜನಪ್ರಿಯತೆಯನ್ನು ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಲಿಕ್ಕಾಗಿ ಪಟ್ಟಭದ್ರ ರಾಜಕಾರಣಿಗಳೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುತ್ತಾರೆ. ಪ್ರಮುಖವಾಗಿ ಸಮಾಜ ಸೇವಕರು, ಚಿತ್ರನಟರು, ಕ್ರೀಡಾಪಟುಗಳು, ಉದ್ಯಮಿಗಳೆಲ್ಲ ಈ ಗುಂಪಲ್ಲಿ ಬರುತ್ತಾರೆ.
ಇವರಲ್ಲಿ ಕೆಲವರು ಯಶಸ್ವಿಯೂ ಆಗಿದ್ದಾರೆ, ಆದರೆ ಗುಂಡಿಗೆ ಬಿದ್ದವರೇ ಹೆಚ್ಚು. ಅಣ್ಣಾ ಹಜಾರೆ ವಿಷಯದಲ್ಲಿಯೂ ಇದು ನಡೆದಿದೆ.
ಕಳೆದ ಏಪ್ರಿಲ್‌ನಲ್ಲಿ ಮೊದಲ ಉಪವಾಸ ಕೈಬಿಟ್ಟ ಮರುಕ್ಷಣವೇ ಅವರನ್ನು ಮುತ್ತಿಕೊಂಡ ಪತ್ರಕರ್ತರು `ನೀವು ರಾಜಕೀಯ ಪ್ರವೇಶ ಮಾಡುತ್ತೀರಾ? ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?~ ಎಂಬ ಪ್ರಶ್ನೆಗಳನ್ನು ಕೇಳಿದ್ದರು.
ರಾಜಕೀಯದಲ್ಲಿ ತಮಗೆ ಆಸಕ್ತಿ ಇಲ್ಲವೇ ಇಲ್ಲ ಎಂದು ಆ ಕ್ಷಣದಲ್ಲೇನೋ ಅಣ್ಣಾಹಜಾರೆ ತಲೆಕೊಡವಿಬಿಟ್ಟರು. ಆದರೆ ಅವರ ಅಕ್ಕಪಕ್ಕದಲ್ಲಿರುವ ತಲೆಗೆ ಆಗಲೇ ರಾಜಕೀಯದ ಗುಂಗಿಹುಳ ಪ್ರವೇಶ ಮಾಡಿಬಿಟ್ಟಿತ್ತು.
ಭ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ ದೇಶದಾದ್ಯಂತ ವ್ಯಕ್ತವಾದ ಜನಬೆಂಬಲ, ಮಾಧ್ಯಮಗಳಲ್ಲಿ, ಮುಖ್ಯವಾಗಿ 24ಗಂಟೆಗಳ ಸುದ್ದಿ ಚಾನೆಲ್‌ಗಳಲ್ಲಿ ನೀಡಲಾದ ಪ್ರಚಾರ, `ಅಣ್ಣಾ ಎಂದರೆ ಇಂಡಿಯಾ~ ಎನ್ನುವಂತಹ ಮೂರ್ಖ ಘೋಷಣೆಗಳು, `ಅಣ್ಣಾ ಸಂಸತ್‌ಗಿಂತಲೂ ದೊಡ್ಡವರು~ ಎನ್ನುವ ಅಪ್ರಬುದ್ಧ ಹೇಳಿಕೆಗಳು - ಎಂತಹ ಸಂಯಮಿಯ ಮನಸ್ಸೂ ಕೂಡಾ ಆಚೀಚೆ ಹೊಯ್ದಾಡಲು ಸಾಕು. ಇವತ್ತು `ಇಮೇಜ್ ಬಿಲ್ಡಿಂಗ್~ ಎನ್ನುವುದು ಬಹಳ ಜನಪ್ರಿಯ ದಂಧೆ.
ಅಣ್ಣಾ ಹಜಾರೆ ಜತೆಯಲ್ಲಿದ್ದವರು ಬಹಳ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಧಾನವಾಗಿ ಅಣ್ಣಾ ಹಜಾರೆ ಹೋರಾಟವಾಗಿ ಪರಿವರ್ತನೆಗೊಳ್ಳುತ್ತಾ ಬಂದದ್ದು, ಎಲ್ಲರ ಮೈಮೇಲೆ `ಐ ಯಾಮ್ ಅನ್ನಾ~ ಎಂಬ ಘೋಷಣೆಗಳು ಕಾಣಿಸಲಾರಂಭಿಸಿದ್ದು ಇವೆಲ್ಲವೂ ಈ ಪ್ರಯತ್ನದ ಭಾಗ.
ಆದರೆ ನಾಮಬಲದಿಂದಲೇ ರಾಜಕೀಯದಲ್ಲಿ ಯಶಸ್ವಿಯಾಗುವ ಕಾಲ ಎಂದೋ ಕಳೆದುಹೋಗಿದೆ. ಯಶಸ್ವಿ ರಾಜಕಾರಣ ಮಾಡಲು ಬದ್ಧ ಕಾರ್ಯಕರ್ತರ ಪಡೆ ಮತ್ತು ಸಂಪನ್ಮೂಲ ಬೇಕಾಗುತ್ತದೆ.

ವಾರಂತ್ಯದ ರಜೆಗಳನ್ನು ಉಪವಾಸ ಶಿಬಿರದಲ್ಲಿ ಕಳೆದುಕೊಳ್ಳುವುದೇ ಸಮಾಜಸೇವೆ ಎಂದು ತಿಳಿದುಕೊಂಡ ಬೆಂಬಲಿಗರನ್ನು ಕಟ್ಟಿಕೊಂಡು ರಾಜಕೀಯ ಮಾಡಲಾಗುವುದಿಲ್ಲ.
ಚುನಾವಣಾ ಸುಧಾರಣೆಯಾಗದ ಹೊರತು, ರಶೀದಿ ಕೊಟ್ಟು ಸಂಗ್ರಹಿಸುವ ದೇಣಿಗೆಯ ದುಡ್ಡಿನಿಂದ ಈಗಾಗಲೇ ಬೇರು ಬಿಟ್ಟಿರುವ ರಾಜಕೀಯ ಪಕ್ಷಗಳನ್ನು ಎದುರಿಸಲು ಸಾಧ್ಯವೂ ಇಲ್ಲ.
ರಾಜಕೀಯದ ಈ ವಾಸ್ತವ ಅಣ್ಣಾ ತಂಡಕ್ಕೆ ಖಂಡಿತ ಗೊತ್ತಿದೆ. ಅದಕ್ಕಾಗಿ ಅವರು `ಹವ್ಯಾಸಿ ರಾಜಕಾರಣ~ವನ್ನು ಪ್ರಾರಂಭಿಸಿದ್ದಾರೆ. ಯಾವುದೋ ಒಂದು ಚುನಾವಣೆಯಲ್ಲಿ ಒಂದು ಪಕ್ಷದ ವಿರುದ್ಧ ಪ್ರಚಾರ ಮಾಡಿ ಒಬ್ಬ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನಿಸುವುದು.
ಆ ಗೆಲುವೇ ತಮ್ಮ ಗೆಲುವು, ತಮ್ಮ ಬೇಡಿಕೆಗೆ ಸಿಕ್ಕ ಜನಮನ್ನಣೆ ಎಂದು ಹೇಳಿಕೊಂಡು ತಿರುಗಾಡುವುದು- ಇದು ಸದ್ಯಕ್ಕೆ ಅಣ್ಣಾ ತಂಡದ ಕಾರ್ಯತಂತ್ರ. ಆದರೆ ರಾಜಕಾರಣ ಎನ್ನುವುದು ಪೂರ್ಣಾವಧಿ ವೃತ್ತಿ, ಅದು ಹವ್ಯಾಸ ಅಲ್ಲ.

ಹವ್ಯಾಸಿ ರಾಜಕಾರಣಿಗಳನ್ನು ಜನ ಒಪ್ಪುವುದೂ ಇಲ್ಲ, ಯಾಕೆಂದರೆ ಅದು ಕರ್ತವ್ಯ ನಿರ್ವಹಣೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇಲ್ಲದ ರಾಜಕಾರಣ.
ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ತಾವು ಕಾರಣ ಎಂದು ಹೇಳಿಕೊಳ್ಳುತ್ತಿರುವ ಅಣ್ಣಾ ತಂಡ, ಅಲ್ಲಿ ಗೆದ್ದಿರುವ ಕುಲದೀಪ್ ವೈಷ್ಣೋವಿ ಅವರ ನಡವಳಿಕೆಗೆ ಉತ್ತರದಾಯಿಯಾಗುವುದೇ? `ಇಲ್ಲ~ ಎಂದಾದರೆ ಇದು ಪಲಾಯನವಾದವಾಗುವುದಿಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ ಜನದ್ರೋಹವಾಗುವುದಿಲ್ಲವೇ?
ಅಣ್ಣಾ ಹಜಾರೆ ಅವರ ಅನಿಶ್ಚಿತ ನಿಲುವುಗಳಿಗೆ ಕೂಡಾ `ಹವ್ಯಾಸಿ ರಾಜಕಾರಣ~ ನೀಡುವ ಸ್ವಾತಂತ್ರ್ಯ ಕಾರಣ.
ಹಿಸ್ಸಾರ್ ಉಪಚುನಾವಣೆಯ ನಂತರ  ಅಣ್ಣಾ ಅವರು ದಿಢೀರ್ ಜ್ಞಾನೋದಯವಾದವರಂತೆ `ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವುದಿಲ್ಲ~ ಎಂದು ಬಿಟ್ಟರು. ದೆಹಲಿಗೆ ಬಂದವರೇ ಮತ್ತೆ ಕಾಂಗ್ರೆಸ್ ವಿರುದ್ಧದ ಪ್ರಚಾರದ ಹಳೆ ಬೆದರಿಕೆಯನ್ನೇ ಪುನರುಚ್ಚರಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಇತ್ತೀಚಿಗೆ ತಮ್ಮದೇ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್ ವರೆಗೆ ಕಳೆದ ಆರು ತಿಂಗಳಲ್ಲಿ ಅಣ್ಣಾ ಹಜಾರೆ ಅವರು ನೀಡುತ್ತಾ ಬಂದ ಹೇಳಿಕೆಗಳನ್ನು ಗಮನಿಸುತ್ತಾ ಬಂದರೆ ಉದ್ದಕ್ಕೂ ಗೊಂದಲಕಾರಿ ನಿಲುವುಗಳನ್ನು ಕಾಣಬಹುದು.

ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸುವ ರಾಜಕಾರಣಿಗಳಿಂದ ರೋಸಿಹೋದ ಜನರಿಗೆ ಅಣ್ಣಾ ಅವರಲ್ಲಿಯೂ ಅದೇ ಬಣ್ಣಗಳು ಕಂಡರೆ ಅವರನ್ನೂ ಹಳೆಯ ರಾಜಕಾರಣಿಗಳ ಗುಂಪಿಗೆ ಸೇರಿಸಿಬಿಡುವ ಅಪಾಯ ಇದೆ, ಹಾಗಾಗುತ್ತಿದೆ.
ಇದರಿಂದ ಈಗಾಗಲೇ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಹಾನಿಯೂ ಆಗಿದೆ, ಇದು ಅಣ್ಣಾತಂಡಕ್ಕೆ ಗೊತ್ತಾಗಬೇಕು, ಅಷ್ಟೆ.ಇದರ ಜತೆಗೆ ಅಣ್ಣಾ ಹಜಾರೆಯವರು ಝಳಪಿಸುತ್ತಾ ಬಂದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತನ್ನೇ ಕುಯ್ಯತೊಡಗಿದೆ.
ಹಣದ ಮೊತ್ತ ಇಲ್ಲವೇ ಉದ್ದೇಶದ ದೃಷ್ಟಿಯಿಂದ ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ವಿರುದ್ಧ ಕೇಳಿ ಬಂದ ಆರೋಪಗಳು ಅಷ್ಟೊಂದು ಗಂಭೀರವಾದವೇನೂ ಅಲ್ಲ.

ಆದರೆ  ಸಾರ್ವಜನಿಕ ಜೀವನದಲ್ಲಿರಬೇಕಾದ ಪ್ರಾಮಾಣಿಕತೆಯ ಮಟ್ಟವನ್ನು ಇಷ್ಟೊಂದು ಎತ್ತರಕ್ಕೆ ಏರಿಸಿಟ್ಟವರು ಅದೇ ಮಟ್ಟದ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ.
ಚುನಾಯಿತ ಪ್ರತಿನಿಧಿಯೊಬ್ಬ ಮಾತಿನಲ್ಲಿ ಮಾತ್ರವಲ್ಲ, ಯೋಚನೆಯಲ್ಲಿಯೂ ಪ್ರಾಮಾಣಿಕವಾಗಿರಬೇಕೆಂದು ಬಯಸುತ್ತದೆ ಅಣ್ಣಾ ತಂಡ.
ಇದಕ್ಕಾಗಿಯೇ ಅಲ್ಲವೇ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂದು ಪ್ರಧಾನಿ ಸಾರ್ವಜನಿಕವಾಗಿ ಹೇಳಿದರೂ ನಂಬದೆ ಲಿಖಿತ ಹೇಳಿಕೆಗಾಗಿ ಒತ್ತಾಯಿಸಿದ್ದು.
ತೆರಿಗೆ ವಂಚನೆಯನ್ನು ಚಿತ್ರನಟನೋ, ಕೇಜ್ರಿವಾಲಾನೋ ಯಾರು ಮಾಡಿದರೂ ಅಪರಾಧವೇ. ತಾನು ತಪ್ಪನ್ನು ಮಾಡಿಲ್ಲ, ವರಮಾನ ತೆರಿಗೆ ಇಲಾಖೆಯೇ ದುರುದ್ದೇಶದಿಂದ ವರ್ತಿಸಿದೆ ಎನ್ನುವುದು ಅರವಿಂದ್ ಕೇಜ್ರಿವಾಲಾ ಅವರ ವಾದವಾಗಿದ್ದರೆ ಬಾಕಿ ಉಳಿಸಿಕೊಂಡಿರುವುದನ್ನು ಪಾವತಿ ಮಾಡದೆ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿತ್ತು.
ಕಾನೂನಿನಲ್ಲಿ ಪರಿಣತಿ ಹೊಂದಿರುವ ಕೇಜ್ರಿವಾಲಾ ಅವರಿಗೆ ಇದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಬಾಕಿ ಪಾವತಿಸುವುದೆಂದರೆ ತಪ್ಪನ್ನು ಒಪ್ಪಿಕೊಂಡಂತಲ್ಲವೇ? ಹಾಗಿದ್ದರೆ ತನ್ನಿಂದ ತಪ್ಪಾಗಿದೆ ಎಂದಾದರೂ ಹೇಳಬಹುದಿತ್ತಲ್ಲವೇ?
ಇಷ್ಟು ಮಾತ್ರವಲ್ಲ, ಜನಲೋಕಪಾಲ ಚಳವಳಿಗಾಗಿ ಸಂಗ್ರಹಿಸಿದ್ದ ಹಣದಲ್ಲಿ ಸುಮಾರು 70-80 ಲಕ್ಷ ರೂಪಾಯಿಗಳನ್ನು ತಮ್ಮ `ಸಾರ್ವಜನಿಕ ಹಿತಾಸಕ್ತಿ ಸಂಶೋಧನಾ ಸಂಸ್ಥೆ~ಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಕೂಡಾ ಕೇಜ್ರಿವಾಲಾ ಅವರ ಮೇಲಿದೆ. ಈ ಸಂಸ್ಥೆಯಲ್ಲಿ ಅಣ್ಣಾ ತಂಡದ ಯಾರೂ ಸದಸ್ಯರಾಗಿಲ್ಲ.
 ಕಿರಣ್ ಬೇಡಿಯವರದ್ದೂ ಇನ್ನೊಂದು  ಕತೆ. ಕಡಿಮೆ ಟಿಕೆಟ್ ದರದ ವಿಭಾಗದಲ್ಲಿ ವಿಮಾನ ಪ್ರಯಾಣ ಮಾಡಿ ಉಳಿಸಿದ ದುಡ್ಡನ್ನು ತಾನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಗೆ ದೇಣಿಗೆಯಾಗಿ ನೀಡುವುದು ಒಳ್ಳೆಯ ಕೆಲಸ.
ಆದರೆ ಸರಳ ಜೀವಿ ಅಣ್ಣಾ ಹಜಾರೆಯವರ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಕಿರಣ್ ಬೇಡಿ ಅವರಿಂದ ಒಂದು ಭಾಷಣ ಮಾಡಿಸಬೇಕಾದರೆ ಪ್ರಯಾಣಕ್ಕಾಗಿಯೇ 39ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿದೆಯೆಂಬುದು ನಿಜಕ್ಕೂ ಅಚ್ಚರಿಯ ಸುದ್ದಿ.
ಅದೂ ಅಲ್ಲದೆ, ಕಿರಣ್ ಬೇಡಿಯವರು ತನ್ನ ಸರ್ಕಾರೇತರ ಸಂಸ್ಥೆಗೆ ಹಣ ಸಂಗ್ರಹಿಸಲು ಪ್ರಯಾಣವೆಚ್ಚವನ್ನು ಅಧಿಕವಾಗಿ ವಸೂಲಿ ಮಾಡಿರುವುದು ತನ್ನಂತೆಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇಂದೋರ್‌ನ `ಅಭ್ಯಾಸ್ ಮಂಡಳ್~ನಿಂದ ಎನ್ನುವುದು ಗಮನಾರ್ಹ.
ಕಿರಣ್ ಬೇಡಿಯವರ ಭಾಷಣದಿಂದ ಅಲ್ಲಿನ ಸಮಾಜಕ್ಕೆ ಏನು ಸೇವೆ ಆಗಿದೆಯೋ ಗೊತ್ತಿಲ್ಲ, ಆದರೆ ಆ ಭಾಷಣ ಮಾಡದಿದ್ದರೆ ಉಳಿಯುತ್ತಿದ್ದ ಕನಿಷ್ಠ 50 ಸಾವಿರ ರೂಪಾಯಿಗಳಿಂದ ಆ ಸಂಸ್ಥೆ ಸಮಾಜಕ್ಕೆ ಒಂದಷ್ಟು ಸೇವೆ ಮಾಡಲು ಸಾಧ್ಯವಾಗುತ್ತಿತ್ತೋ ಏನೋ?
ಇವೆಲ್ಲವೂ ಸಣ್ಣ ವಿಚಾರಗಳು ನಿಜ, ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳ ನಡವಳಿಕೆಯಲ್ಲಿನ ಪ್ರಾಮಾಣಿಕತೆಯ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿರುವ ಅಣ್ಣಾ ತಂಡದ ಸದಸ್ಯರು ಅದನ್ನು ಪಾಲಿಸುವುದು ಬೇಡವೇ?
ತಮ್ಮ ವಿರುದ್ಧದ ಆರೋಪಗಳೆಲ್ಲವೂ ದುರುದ್ದೇಶದಿಂದ ಕೂಡಿದ್ದು ಎಂದು ಕೇಜ್ರಿವಾಲಾ ಮತ್ತು ಬೇಡಿ ಹೇಳುತ್ತಲೇ ಬಂದಿದ್ದಾರೆ. ಹಾಗಿದ್ದರೆ ಅಣ್ಣಾ ತಂಡದಿಂದ ಹೊರಬಿದ್ದಿರುವ ರಾಜಿಂದರ್‌ಸಿಂಗ್ ಮತ್ತು ಪಿ.ವಿ.ರಾಜಗೋಪಾಲ್ ಹಾಗೂ ಈಗಲೂ ತಂಡದಲ್ಲಿರುವ

ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಈ ಇಬ್ಬರು ಸದಸ್ಯರ ಬಗ್ಗೆ ವ್ಯಕ್ತಪಡಿಸಿರುವ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನೂ ಹಾಗೆಯೇ ತಳ್ಳಿಹಾಕಲು ಸಾಧ್ಯವೇ? `ಸಾಧ್ಯ ಇಲ್ಲ~ ಎಂದಾದರೆ ದೇಶದ ಕೋಟ್ಯಂತರ ಸಾಮಾನ್ಯ ಜನ ಈಗಲೂ ಅಪಾರವಾದ ಭರವಸೆ ಇಟ್ಟುಕೊಂಡಿರುವ ಚಳವಳಿಯ ತಂಡವನ್ನು ಪುನರ್‌ರಚಿಸಿ ಅದನ್ನು ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿಯನ್ನಾಗಿ ಮಾಡಲು ಅಣ್ಣಾ ಹಜಾರೆಯವರು ಮುಂದಾಗಬೇಕು.
ಇದನ್ನು ಮಾಡಬೇಕಾದಾಗ ಒಂದಷ್ಟು ತಲೆ ಉರುಳಿಸಬೇಕಾಗಿ ಬಂದರೆ ಅದಕ್ಕೂ ಹಿಂಜರಿಯಬಾರದು. ವಿಳಂಬ ಮಾಡಿದರೆ ಅನಾಹುತವಾದೀತು.

Monday, October 31, 2011

ನಿನ್ನೆ ದುಬೆ, ಇಂದು ಕುಲಕರ್ಣಿ, ನಾಳೆ ಯಾರು?

ಪರಮಾಪ್ತರು ಸಂಕಷ್ಟಕ್ಕೀಡಾದಾಗ ಎಂತಹ ಉಕ್ಕಿನ ಮನುಷ್ಯರೂ ಕುಗ್ಗಿಹೋಗುತ್ತಾರೆ. ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರದ್ದು ಇದೇ ಸ್ಥಿತಿ. ತಮಗೆ ರಾಜಕೀಯ ಸಲಹೆಗಾರ, ಮಾರ್ಗದರ್ಶಕ, ಗೆಳೆಯ ಎಲ್ಲವೂ ಆಗಿದ್ದ ಸುಧೀಂದ್ರ ಕುಲಕರ್ಣಿ ಅವರ ಬಂಧನದ ದು:ಖ ಬಹುಷ: ಅಡ್ವಾಣಿಯವರನ್ನು ಸಹಿಸಲಾಗದಷ್ಟು ಘಾಸಿಗೊಳಿಸಿದೆ.
ಈ ಕಾರಣದಿಂದಾಗಿಯೇ `ವೋಟಿಗಾಗಿ ನೋಟು ಪ್ರಕರಣದಲ್ಲಿ ಸುಧೀಂದ್ರ ಕುಲಕರ್ಣಿ ಮತ್ತು ಬಿಜೆಪಿ ಸಂಸದರು ಆರೋಪಿಗಳೆಂದಾದರೆ ನಾನೂ ಆರೋಪಿ, ನನ್ನನ್ನೂ ಬಂಧಿಸಿ~ ಎಂದು ಅವರು ಭಾವಾವೇಶದಿಂದ ಲೋಕಸಭೆಯಲ್ಲಿ ಗುಡುಗಿದ್ದು. ಅವರ ಈಗಿನ `ಜನಚೇತನ ಯಾತ್ರೆ~ಗೆ ಈ ಘಟನೆಯೂ ಒಂದು ಪ್ರೇರಣೆ ಎನ್ನಲಾಗುತ್ತಿದೆ.
 ವೈಯಕ್ತಿಕವಾಗಿ ನಾನೂ ಬಲ್ಲ ಕನ್ನಡಿಗರಾದ ಸುಧೀಂದ್ರ ಕುಲಕರ್ಣಿ  ಆಳವಾದ ಅಧ್ಯಯನ ಮತ್ತು ವಿಸ್ತಾರವಾದ ಅನುಭವ ಹೊಂದಿರುವ ಸಜ್ಜನ ಪತ್ರಕರ್ತ. ರಾಜಕೀಯದ ಮೋಹಪಾಶಕ್ಕೆ ಸಿಲುಕದೆ ಇದ್ದಿದ್ದರೆ ಅವರು ಈಗ ಯಾವುದಾದರೂ ರಾಷ್ಟ್ರೀಯ ದಿನಪತ್ರಿಕೆಯ ಸಂಪಾದಕರ ಕುರ್ಚಿಯಲ್ಲಿರುತ್ತಿದ್ದರು.
ಖಂಡಿತ ಅವರ ಸ್ಥಾನ ಸೆರೆಮನೆಯಲ್ಲ. ಮೇಲ್ನೋಟದಲ್ಲಿಯೇ  ಕುಲಕರ್ಣಿ ಬಂಧನದಲ್ಲಿನ ವಿರೋಧಾಭಾಸ ಕಾಣುತ್ತಿದೆ. `ವಿಶ್ವಾಸ ಮತಗಳಿಸಲು ದುಡ್ಡುಕೊಟ್ಟು ಮತ ಖರೀದಿ ಮಾಡಿದ್ದಾರೆ ಎಂಬ ಆರೋಪಕ್ಕೊಳಗಾದವರು ನಿಶ್ಚಿಂತೆಯಾಗಿ ಅಧಿಕಾರದಲ್ಲಿದ್ದಾರೆ, ಇದನ್ನು ಬಯಲು ಮಾಡಲು ಹೊರಟವರು ಜೈಲಿನಲ್ಲಿದ್ದಾರೆ~ ಎಂಬ ಬಿಜೆಪಿ ನಾಯಕರ ಹೇಳಿಕೆ, `ಸೀಟಿ ಊದುವವರಿಗೆ (ವಿಷಲ್ ಬ್ಲೋವರ್ಸ್‌) ರಕ್ಷಣೆ  ಬೇಕು ಎನ್ನುವ ಅಡ್ವಾಣಿ ಅವರ ಕಳಕಳಿ, ಕುಲಕರ್ಣಿಯವರಿಗೆ ಆಗಿರುವ ಅನ್ಯಾಯ ಎಲ್ಲವೂ ಅರ್ಥಮಾಡಿಕೊಳ್ಳುವಂತಹದ್ದೇ. ಆದರೆ....
ಸರಿಯಾಗಿ ಹತ್ತು ವರ್ಷಗಳ ಹಿಂದೆ ಲಾಲ್‌ಕೃಷ್ಣ ಅಡ್ವಾಣಿ ಮತ್ತು ಅವರ ಪಕ್ಷದ ನಾಯಕರ ನಡೆ-ನುಡಿಗಳೆರಡೂ ಹೀಗಿರಲಿಲ್ಲವಲ್ಲಾ? ತೆಹೆಲ್ಕಾದ ತನಿಖಾ ತಂಡ ಆಗಿನ ಎನ್‌ಡಿಎ ಸರ್ಕಾರದ ರಕ್ಷಣಾ ಇಲಾಖೆಯೊಳಗಿನ ಹಗರಣಗಳ ಬೆನ್ನತ್ತಿ `ಕುಟುಕು ಕಾರ‌್ಯಾಚರಣೆ~ಯ ಮೂಲಕ ಹಿರಿಯ ಸೇನಾಧಿಕಾರಿಗಳು, ರಾಜಕಾರಣಿಗಳು ಮತ್ತು ದಲ್ಲಾಳಿಗಳ ಭ್ರಷ್ಟ ಮುಖಗಳನ್ನು ಬಯಲು ಮಾಡಿತ್ತು.
ತೆಹೆಲ್ಕಾ ರಹಸ್ಯವಾಗಿ ಚಿತ್ರೀಕರಿಸಿದ್ದ ಭ್ರಷ್ಟರ ಮುಖಗಳು 2001ರ ಮಾರ್ಚ್ ಹದಿಮೂರರಂದು ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಂಡಾಗ ದೇಶದ ಜನ ಬೆಚ್ಚಿಬಿದ್ದಿದ್ದರು.
ಸೇನಾಧಿಕಾರಿಗಳು ಹೆಣ್ಣು ಮತ್ತು ಹೆಂಡಕ್ಕಾಗಿ ರಕ್ಷಣಾ ಇಲಾಖೆಯನ್ನೇ ಮಾರಾಟಕ್ಕಿಡಲು ಹೊರಟಿದ್ದನ್ನು, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಮನೆಯಲ್ಲಿಯೇ ದಲ್ಲಾಳಿಗಳು ವ್ಯವಹಾರ ಕುದುರಿಸುತ್ತಿರುವುದನ್ನು, ಬಿಜೆಪಿಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ಲಂಚ ಸ್ವೀಕರಿಸುತ್ತಿರುವುದನ್ನು ದೇಶದ ಜನ ಕಣ್ಣಾರೆ ನೋಡಿದರೂ ನಂಬಲಾಗದೆ ಕಣ್ಣುಜ್ಜಿಕೊಂಡಿದ್ದರು.
ಒತ್ತಡಕ್ಕೆ ಸಿಕ್ಕಿ ಜಾರ್ಜ್ ಫರ್ನಾಂಡಿಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು, ಬಯಲಾದ ಹಗರಣಗಳ ತನಿಖೆಗೆ ನ್ಯಾಯಮೂರ್ತಿ ವೆಂಕಟಸ್ವಾಮಿ ನೇತೃತ್ವದ ಆಯೋಗವನ್ನೂ ಎನ್‌ಡಿಎ ಸರ್ಕಾರ ರಚಿಸಿತ್ತು.
ವಿಚಿತ್ರವೆಂದರೆ ಹಗರಣಗಳ ಬಗ್ಗೆ ಮಾತ್ರವಲ್ಲ ತೆಹೆಲ್ಕಾ ಕಾರ‌್ಯಾಚರಣೆಯ `ಉದ್ದೇಶ~ವನ್ನೂ ತನಿಖೆ ಮಾಡಲು ಎನ್‌ಡಿಎ ಸರ್ಕಾರ ಆದೇಶ ನೀಡಿತ್ತು. ಅದರ ನಂತರದ ಸುಮಾರು ಮೂರುವರ್ಷಗಳ ಕಾಲ ಎನ್‌ಡಿಎ ಸರ್ಕಾರ ತೆಹೆಲ್ಕಾ ಸಂಸ್ಥೆಗೆ ನೀಡಿದ್ದ ಕಿರುಕಳ ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾಗಾಂಧಿ ಪತ್ರಿಕೆಗಳ ಮೇಲೆ ನಡೆಸಿದ್ದ ದಾಳಿಯನ್ನು ನೆನೆಪಿಸುವಂತಿತ್ತು.
ಸಂಸ್ಥೆಯಲ್ಲಿ ಬಂಡವಾಳ ಹೂಡಿದವರ ಮನೆಮೇಲೆ ವರಮಾನ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು, ಸೆಬಿ, ಅನುಷ್ಠಾನ ನಿರ್ದೇಶನಾಲಯ ಹೀಗೆ ಸರ್ಕಾರದ ಹಲವಾರು ಇಲಾಖೆಗಳು ಒಟ್ಟಾಗಿ ತೆಹೆಲ್ಕಾದ ಮೇಲೆ ಎರಗಿ ಬಿದ್ದಿದ್ದವು, ಅದರಲ್ಲಿದ್ದ ಕೆಲವು ಪತ್ರಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ತಳ್ಳಲಾಗಿತ್ತು, ಉಳಿದವರು ಪ್ರಾಣ ಬೆದರಿಕೆ ಎದುರಿಸುತ್ತಿದ್ದರು, ಸಂಸ್ಥೆ ದಿವಾಳಿಯಾಗಿತ್ತು. ತೆಹೆಲ್ಕಾ ಟೇಪ್‌ನ ವಿಶ್ವಾಸಾರ್ಹತೆಯನ್ನು ಮತ್ತೆಮತ್ತೆ ಪ್ರಶ್ನಿಸಲಾಯಿತು.
ಆಯೋಗ ತೆಹೆಲ್ಕಾ ಪರವಾಗಿಯೇ ವರದಿ ನೀಡಲಿರುವ ಗುಮಾನಿ ಬಂದಾಗ ಅದನ್ನು ಬರ್ಖಾಸ್ತುಗೊಳಿಸಿ ಮತ್ತೊಂದನ್ನು ರಚಿಸಲಾಯಿತು. ಮೂರುವರ್ಷಗಳ ನಂತರ ಹೊಸ ತನಿಖಾ ಆಯೋಗವನ್ನು ಕೂಡಾ ರದ್ದು ಮಾಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಅದರ ನಂತರ ಏನಾಯಿತೆಂದು ಯಾರಿಗೂ ಗೊತ್ತಿಲ್ಲ.
ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದೆ ಎನ್ನುವ ಒಂದೇ ಕಾರಣಕ್ಕೆ ಎನ್‌ಡಿಎ ಸರ್ಕಾರ ಈ ರೀತಿ ಮಾಧ್ಯಮ ಸಂಸ್ಥೆಯೊಂದರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿರುವಾಗ ಲಾಲ್‌ಕೃಷ್ಣ ಅಡ್ವಾಣಿ ಗೃಹಸಚಿವರಾಗಿದ್ದರು. ಈಗ `ಸೀಟಿ ಊದುವವರ~ ರಕ್ಷಣೆಯ ಬಗ್ಗೆ ಭಾಷಣಮಾಡುತ್ತಿರುವ ಅರುಣ್ ಜೇಟ್ಲಿ ತೆಹೆಲ್ಕಾ ವಿರುದ್ದದ ನ್ಯಾಯಾಂಗ ಹೋರಾಟದ ಮುಂಚೂಣಿಯಲ್ಲಿದ್ದರು.

ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡುವುದು `ದೇಶದ್ರೋಹದ ಕೆಲಸ~ವೆಂದು ಆಗ ಇವರೆಲ್ಲರ ಅಭಿಪ್ರಾಯವಾಗಿತ್ತು, ಇದು `ಎನ್‌ಡಿಎ ವಿರುದ್ದದ ದೊಡ್ಡ ಸಂಚು~ ಎಂದೇ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದರು.

ಹೀಗಿರುವಾಗ ಯಾವ ನೈತಿಕ ಬಲದಿಂದ ಅಡ್ವಾಣಿಯವರು ಈಗ  `ಕುಟುಕು ಕಾರ‌್ಯಾಚಾರಣೆ~ಯಲ್ಲಿ ಭಾಗಿಯಾಗಿದ್ದ ಸ್ನೇಹಿತ ಸುಧೀಂದ್ರ ಕುಲಕರ್ಣಿ ಮತ್ತು ಪಕ್ಷದ ಸಂಸದರನ್ನು  ಸಮರ್ಥನೆ ಮಾಡಿಕೊಳ್ಳಲು ಸಾಧ್ಯ?
ಹೋಗ್ಲಿಬಿಡಿ, ತೆಹೆಲ್ಕಾಕ್ಕೇನೋ ದುಷ್ಟ ಉದ್ದೇಶ ಇದ್ದಿರಬಹುದೆಂದು ಅಂದುಕೊಳ್ಳೋಣ. ಸತ್ಯೇಂದ್ರ ದುಬೆ ಎಂಬ 31 ವರ್ಷದ ಐಐಟಿ ಪದವೀಧರ ಏನು ಅನ್ಯಾಯ ಮಾಡಿದ್ದರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯುಟಿ ಜನರಲ್ ಮ್ಯಾನೆಜರ್ ಆಗಿದ್ದ ದುಬೆ ತನ್ನ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ರಹಸ್ಯ ಪತ್ರ ಬರೆದಿದ್ದರು. ಪ್ರಾಣ ಭಯ ಇರುವುದರಿಂದ ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ಪತ್ರದಲ್ಲಿ ವಿನಂತಿಯನ್ನೂ ಮಾಡಿದ್ದರು.
ಆದರೆ ಆ ಪತ್ರ ಪ್ರಧಾನಿ ಕಾರ‌್ಯಾಲಯದಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೋಗಿ ಕೊನೆಗೆ ಯಾರ ಕೈಗೆ ಸಿಗಬಾರದಿತ್ತೋ ಅವರಿಗೆ ಸಿಕ್ಕಿತು. ಪತ್ರ ಬರೆದ ಹದಿನಾರನೇ ದಿನ ಸತ್ಯೇಂದ್ರ ದುಬೆ ಅವರನ್ನು ಗಯಾದ ಬೀದಿಯಲ್ಲಿ ಹಾಡಹಗಲೇ ಹತ್ಯೆ ಮಾಡಿದ್ದರು.
ಅದಾದ ನಂತರ ಭುಗಿಲೆದ್ದ ಸಾರ್ವಜನಿಕ ಆಕ್ರೋಶ ಕಂಡು ಸುಪ್ರೀಂಕೋರ್ಟ್ `ಸಾರ್ವಜನಿಕ ಹಿತಾಸಕ್ತಿ ಬಹಿರಂಗ ಮತ್ತು ರಕ್ಷಣಾ ಗೊತ್ತುವಳಿ~ಯನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಇದರ ಅನುಷ್ಠಾನದ ಹೊಣೆಯನ್ನು ಕೇಂದ್ರ ಜಾಗೃತ ಆಯೋಗಕ್ಕೆ ವಹಿಸಿಕೊಟ್ಟಿತ್ತು.
ಆದರೆ ಅದಾದ ಒಂದು ವರ್ಷದ ನಂತರ ಭಾರತೀಯ ತೈಲನಿಗಮದ ಮ್ಯಾನೇಜರ್ ಆಗಿದ್ದ ಕೋಲಾರದ ಮಂಜುನಾಥ ಷಣ್ಮುಗಂ ಎಂಬ ಐಐಎಂ ಪದವೀಧರನನ್ನು ಉತ್ತರಪ್ರದೇಶದಲ್ಲಿ ಹತ್ಯೆ ಮಾಡಲಾಯಿತು. ಪೆಟ್ರೋಲ್ ಕಲಬೆರಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳ ವಿರುದ್ದ ದನಿ ಎತ್ತಿದ್ದೇ ಆ ಯುವಕನ ಪ್ರಾಣಕ್ಕೆ ಮುಳುವಾಯಿತು.

ಮತ್ತೆ `ಸೀಟಿ ಊದುವವರ~ ರಕ್ಷಣೆಯ ಕೂಗೆದ್ದಿತ್ತು. 2001ರ ಕಾನೂನು ಆಯೋಗ ಮಾಡಿರುವ ಶಿಫಾರಸಿಗೆ ಅನುಗುಣವಾಗಿ ಕಾಯಿದೆ ರೂಪಿಸುವುದಾಗಿ ಎನ್‌ಡಿ ಸರ್ಕಾರ ಆಶ್ವಾಸನೆಯನ್ನೂ ನೀಡಿತ್ತು.
ಅದು ಅಧಿಕಾರ ಕಳೆದುಕೊಂಡಿತೇ ವಿನ: ಆಶ್ವಾಸನೆ ಈಡೇರಿಸಲೇ ಇಲ್ಲ. ಅಡ್ವಾಣಿ, ಜೇಟ್ಲಿ, ಸುಷ್ಮಾಸ್ವರಾಜ್ ಎಲ್ಲರೂ ಸೇರಿ `ಸೀಟಿ ಊದುವವರ~ ರಕ್ಷಣಾ ಕಾಯಿದೆಯೊಂದನ್ನು ಆಗ ಜಾರಿಗೆ ತಂದಿದ್ದರೆ ಬಹುಷ: ಸುಧೀಂದ್ರ ಕುಲಕರ್ಣಿಯವರು ಇಂದು ಜೈಲಿನಲ್ಲಿ ಇರುತ್ತಿರಲಿಲ್ಲವೇನೋ?
ಭ್ರಷ್ಟರೇ ಬಹುಸಂಖ್ಯೆಯಲ್ಲಿರುವುದು ನಿಜವಾದರೂ ಪ್ರಾಮಾಣಿಕರಿಗೇನು ಸಮಾಜದಲ್ಲಿ ಕೊರತೆ ಇಲ್ಲ. ಆದರೆ ಅವರು ಯಾವತ್ತೂ ಅಲ್ಪಸಂಖ್ಯಾತರು. ಇಲಾಖೆಗಳಿಗೆ ಸಂಬಂಧಿಸಿದ ಅವ್ಯವಹಾರದಲ್ಲಿ ಸಹೋದ್ಯೋಗಿಗಳ ಪಾತ್ರವೂ ಇರುವುದರಿಂದ ಮೊದಲ ಶತ್ರುಗಳು ಅವರೇ ಆಗಿರುತ್ತಾರೆ.  ಮೊದಲು `ಸೀಟಿ ಊದುವವರ~ ವಿರುದ್ಧ ಅಪಪ್ರಚಾರ ನಡೆಯುತ್ತದೆ. ಅದರ ನಂತರ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತದೆ.

ಇವೆಲ್ಲದರ ನಡುವೆ ಅವರನ್ನು ಒಂಟಿಯಾಗಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ತಂತ್ರಗಳ ಮೂಲಕವೇ ಅವರನ್ನು `ತಮ್ಮ ದಾರಿಗೆ ತರುವ~ ಪ್ರಯತ್ನ ನಡೆಯುತ್ತದೆ. ಇದಕ್ಕೆ ಕೆಲವರು ಶರಣಾಗಿ ಬದುಕುವ ದಾರಿ ಕಂಡುಕೊಳ್ಳುತ್ತಾರೆ. `ದಾರಿಗೆ ಬರದವರು~ ಒಂದೋ ಮೂಲೆ ಗುಂಪಾಗುತ್ತಾರೆ ಇಲ್ಲವೇ ಮಸಣದ ಹಾದಿ ಹಿಡಿಯುತ್ತಾರೆ.
ನಕಲಿ ಛಾಪಾ ಕಾಗದ ಹಗರಣದ ಸುಳಿವನ್ನು ಮೊದಲು ನೀಡಿದ್ದ ಮಹಾರಾಷ್ಟ್ರದ ಸ್ಟಾಂಪ್ಸ್ ಸುಪರಿಂಟೆಂಡೆಂಟ್ ರಾಧೇಶ್ಯಾಮ್ ಮೋಪಾಲ್‌ವಾಲ್, ಮುಂಬೈನ ಅಕ್ರಮ ಕಟ್ಟಡಗಳ ವಿರುದ್ದ ಸಮರಸಾರಿದ ಜಿ.ಎಸ್. ಖೈರ್ನಾರ್, 26 ವರ್ಷಗಳ ಸೇವಾವಧಿಯಲ್ಲಿ 26 ಬಾರಿ ವರ್ಗಾವಣೆಯ ಶಿಕ್ಷೆಗೊಳಗಾದ ಪುಣೆಯ ಮುನ್ಸಿಪಲ್ ಕಮಿಷನರ್ ಅರುಣ್ ಭಾಟಿಯಾ... ಹೀಗೆ  ಅನ್ಯಾಯ,ಅಕ್ರಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲಿಗೆಳೆದ `ಸೀಟಿ ಊದುವವರು~ ಎಲ್ಲೋ ಮೂಲೆಗುಂಪಾಗಿ ಹೋಗಿದ್ದಾರೆ.
ದುಬೆ, ಮಂಜುನಾಥ್ ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಭ್ರಷ್ಟರನ್ನು ಬಯಲುಗೊಳಿಸಲು ಹೊರಟ ಭೋಪಾಲದ ಶೆಹಲಾ ಮಸೂದ್, ಗುಜರಾತ್‌ನ ಅಮಿತ್ ಜೆಟ್ವಾ, ಪುಣೆಯ ಸತೀಶ್ ಶೆಟ್ಟಿ, ಮಹಾರಾಷ್ಟ್ರದ ದತ್ತಾತ್ರೇಯ ಪಾಟೀಲ್, ಆಂಧ್ರಪ್ರದೇಶದ ಸೋಲಾ ರಂಗರಾವ್-ಇವರಲ್ಲಿ ಯಾರೂ ಈಗ ಬದುಕಿ ಉಳಿದಿಲ್ಲ. ಎಲ್ಲರೂ ಭ್ರಷ್ಟರ ಕೈಯಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ.
ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ತಂಡ ಚಳುವಳಿ ಪ್ರಾರಂಭಿಸಿದ ನಂತರ ಮತ್ತೊಮ್ಮೆ `ಸೀಟಿ ಊದುವವರ~ ರಕ್ಷಣೆಯ ಕಾನೂನಿನ ಚರ್ಚೆ ಪ್ರಾರಂಭವಾಗಿದೆ. ಅಣ್ಣಾ ತಂಡ ರಚಿಸಿರುವ `ಜನಲೋಕಪಾಲ ಮಸೂದೆ~ಯಲ್ಲಿ `ಸೀಟಿ ಊದುವವರ ರಕ್ಷಣೆಯೂ ಸೇರಿದೆ.
ಆದರೆ ಸರ್ಕಾರದ `ಲೋಕಪಾಲ ಮಸೂದೆ~ಯಲ್ಲಿ ಅದು ಸೇರಿಲ್ಲ. ಇದನ್ನು ಪ್ರತ್ಯೇಕವಾಗಿ ಜಾರಿಗೆ ತರುವುದಾಗಿ ಹೇಳಿ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಕೂಡಾ ಮಂಡನೆಯಾಗಿದೆ.
`ಅಧಿಕಾರ ದುರುಪಯೋಗ, ಭ್ರಷ್ಟಾಚಾರ ನಿರೋಧ ಕಾಯಿದೆ ಇಲ್ಲವೇ ಭಾರತೀಯ ದಂಡಸಂಹಿತೆಯಲ್ಲಿ ವ್ಯಾಖ್ಯಾನಿಸಲಾದ ಅಪರಾಧ ಮತ್ತು ದುರಾಡಳಿತ- ಈ ಮೂರು ಅಂಶಗಳಿಗೆ ಸಂಬಂಧಿಸಿದ ದೂರುಗಳನ್ನು `ಸೀಟಿ ಊದುವವರ ರಕ್ಷಣಾ ಮಸೂದೆಯಲ್ಲಿ ಸೇರಿಸಲಾಗಿದೆ.
ಇದರಲ್ಲಿಯೂ ಕಾರ್ಪೋರೇಟ್ ಕ್ಷೇತ್ರದಲ್ಲಿನ `ಸೀಟಿ ಊದುವವರನ್ನು~ ಸೇರಿಸಲಾಗಿಲ್ಲ. ಎರಡನೆ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಕಾರ್ಪೋರೇಟ್ ಕ್ಷೇತ್ರವನ್ನೂ ಕಾಯ್ದೆಯ ವ್ಯಾಪ್ತಿಗೆ ತರಬೇಕೆಂದು ಶಿಫಾರಸು ಮಾಡಿತ್ತು.
ಇದರ ಬಗ್ಗೆ ಅಣ್ಣಾತಂಡವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮೌನವಾಗಿವೆ.
ಭಾರತದಲ್ಲಿ ಮಾತ್ರವಲ್ಲ, ನಾಲ್ಕು ದೇಶಗಳನ್ನು ಹೊರತುಪಡಿಸಿದರೆ ಬೇರೆಲ್ಲೂ `ಸೀಟಿ ಊದುವವರ~ ರಕ್ಷಣೆಗಾಗಿ ಕಾನೂನು ಇಲ್ಲ. 1989ರಲ್ಲಿ ಅಮೆರಿಕಾ ಮೊದಲ ಬಾರಿ ಈ ಕಾನೂನು ರೂಪಿಸಿತ್ತು.
ಅದರ ನಂತರ ಬ್ರಿಟನ್, ಅಸ್ಟೇಲಿಯಾ ಮತ್ತು ನ್ಯೂಜಿಲೇಂಡ್‌ಗಳು ಹಿಂಬಾಲಿಸಿದವು. ಈ ಕಾನೂನು ಇರುವ ಕಾರಣಕ್ಕಾಗಿಯೇ ಎನ್ರಾನ್ ಸಂಸ್ಥೆಯ ತಪ್ಪು ಲೆಕ್ಕಪತ್ರವನ್ನು ಬಯಲಿಗೆಳೆದ ಅದರ ಉಪಾಧ್ಯಕ್ಷ ಶೆರ‌್ರಾನ್ ವಾಟ್ಕಿನ್ಸ್, 9/11 ದಾಳಿ ನಡೆಸಿದ ಭಯೋತ್ಪಾದಕರ ಸುಳಿವಿನ ಮುನ್ಸೂಚನೆ ನಿರ್ಲಕ್ಷಿಸಿದ್ದನ್ನು ಪತ್ರಬರೆದು ಬಹಿರಂಗಗೊಳಿಸಿದ ಎಫ್‌ಬಿಐ ಅಟಾರ್ನಿ ಕೊಲೀನ್ ರೌಲೆ, ವರ್ಲ್ಡ್‌ಕಾಮ್ ಸುಮಾರು 3.8 ಬಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಮುಚ್ಚಿಹಾಕಿದ್ದನ್ನು ನಿರ್ದೇಶಕ ಮಂಡಳಿಗೆ ತಿಳಿಸಿ ಸುದ್ದಿ ಮಾಡಿದ ಸಿಂಥಿಯಾ ಕೂಪರ್ ಅಮೆರಿಕಾದಲ್ಲಿ  `ತಾರಾಮೌಲ್ಯ~ ಗಳಿಸುವಷ್ಟು ಜನಪ್ರಿಯರು.
ವಿಕಿಲೀಕ್ಸ್‌ನ ಮೂಲಕ ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳು ಬಹಿರಂಗವಾಗಲು ಕೂಡಾ ಅನಾಮಿಕ `ಸೀಟಿ ಊದುವವರು~ ಕಾರಣ.
ಆದರೆ ಭಾರತದಲ್ಲಿ  ಇವರಿಗೆ ಯಾವ ರಕ್ಷಣೆಯೂ ಇಲ್ಲ, ಬದಲಿಗೆ ಕಿರುಕುಳ, ಜೈಲು, ಸಾವು-ನೋವುಗಳ ಕೊಡುಗೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯವರ  ಭ್ರಷ್ಟಾಚಾರದ ವಿರುದ್ಧ ದೂರು ದಾಖಲು ಮಾಡಿರುವ ಇಬ್ಬರು ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೆಳೆಯ ಸುಧೀಂದ್ರ ಕುಲಕರ್ಣಿ ಅವರಿಗಾಗಿ ಕಣ್ಣೀರು ಸುರಿಸುತ್ತಿರುವ ಲಾಲ್‌ಕೃಷ್ಣ ಅಡ್ವಾಣಿಯವರು ಇದಕ್ಕೇನನ್ನುತ್ತಾರೆ?

Monday, October 24, 2011

ಅಚ್ಚರಿ ಹುಟ್ಟಿಸಿರುವ ಅಡ್ವಾಣಿ ಬಂಡುಕೋರತನ

ಲಾಲಕೃಷ್ಣ ಅಡ್ವಾಣಿಯವರ ಮನಸ್ಸಿನೊಳಗೆ ಬಹಳ ಕಾಲದಿಂದ ಸುಳಿದಾಡುತ್ತಿದ್ದ ಬಂಡುಕೋರನೊಬ್ಬ ನಿಧಾನವಾಗಿ ತಲೆ ಹೊರಗೆ ಚಾಚುತ್ತಿರುವಂತೆ ಕಾಣುತ್ತಿದೆ. ಈ ಬಂಡುಕೋರತನ ಅವರನ್ನು ಪಕ್ಷ ತೊರೆಯುವ ಕಠಿಣ ನಿರ್ಧಾರದ ಅಂಚಿಗೆ ತಳ್ಳಬಹುದೆಂದು ಈಗಲೇ ಹೇಳಲಾಗುವುದಿಲ್ಲ.
ಉಸಿರುಗಟ್ಟುತ್ತಿರುವ ತಮ್ಮವರ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಇಲ್ಲವೇ, ತಮ್ಮನ್ನು ನಿರ್ಲಕ್ಷಿಸುತ್ತಿರುವವರಿಗೆ ಎಚ್ಚರಿಕೆ ನೀಡುವ ಇಲ್ಲವೇ, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಈ ಬಂಡುಕೋರ ನಡವಳಿಕೆಯಲ್ಲಿ ಇದ್ದರೂ ಇರಬಹುದು.

ಆರ್‌ಎಸ್‌ಎಸ್‌ಗೆ ಸೇರಿದಂದಿನಿಂದ ಇಂದಿನವರೆಗೆ ಸುಮಾರು ಎಪ್ಪತ್ತು ವರ್ಷಗಳ ಅವರ ಜೀವನದಲ್ಲಿ ಅಡ್ವಾಣಿಯವರು ಈ ರೀತಿ ನಡೆದುಕೊಂಡೇ ಇಲ್ಲ. ಬಹಿರಂಗವಾಗಿ ಎಂದೂ ಪಕ್ಷಕ್ಕೆ ಇಲ್ಲವೇ ಸಂಘ ಪರಿವಾರಕ್ಕೆ ಸವಾಲು ಹಾಕದ ಅಡ್ವಾಣಿಯವರು 84ರ ಇಳಿವಯಸ್ಸಿನಲ್ಲಿ ತೋರುತ್ತಿರುವ ಬಂಡುಕೋರ ನಡವಳಿಕೆ ಈ ಕಾರಣದಿಂದಲೇ ಅಚ್ಚರಿ ಮೂಡಿಸುತ್ತದೆ.
 ಪಕ್ಷದ ಹಿತದೃಷ್ಟಿಯಿಂದ ನೋಡಿದರೆ ಇದು ಅಡ್ವಾಣಿಯವರು ರಥಯಾತ್ರೆ ಹೊರಡುವ ಸಮಯ ಅಲ್ಲ. ಇದು ಬಿಜೆಪಿಗೆ ಕಷ್ಟದ ಸಮಯ. ಕಾಡುತ್ತಿರುವುದು ಭ್ರಷ್ಟಾಚಾರ ಒಂದೇ ಅಲ್ಲ, ಅಧಿಕಾರದಲ್ಲಿರುವ ಪ್ರತಿಯೊಂದು ರಾಜ್ಯದಲ್ಲಿಯೂ ಭಾರತೀಯ ಜನತಾ ಪಕ್ಷ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ರಾಷ್ಟ್ರೀಯ ನಾಯಕತ್ವಕ್ಕಾಗಿ ನಡೆಯುತ್ತಿರುವ ಸಂಘರ್ಷ ಪಕ್ಷವನ್ನು ದುರ್ಬಲಗೊಳಿಸುವ ಮಟ್ಟಕ್ಕೆ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಹೊರಟಿರುವ ಅಡ್ವಾಣಿಯವರ ರಥಯಾತ್ರೆ ಈ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದೆಯೇ ಹೊರತು ಅದರ ಪರಿಹಾರಕ್ಕೆ ಖಂಡಿತ ನೆರವಾಗುತ್ತಿಲ್ಲ.
ಭಾರತೀಯ ಜನತಾ ಪಕ್ಷ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಭಾರಿ ಭರವಸೆ ಇಟ್ಟುಕೊಂಡಿರುವ ರಾಜ್ಯ ಗುಜರಾತ್. ಆದರೆ ಕಳೆದ ಹತ್ತುವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪಕ್ಷದೊಳಗೆ ಮತ್ತು ಹೊರಗೆ ವಿರೋಧದ ಅಲೆಯನ್ನು ಎದುರಿಸುತ್ತಿದ್ದಾರೆ.
ಮೋದಿ ಅವರ ಜನಪ್ರಿಯತೆಗೆ ಹೆದರಿ ಇಲ್ಲಿಯವರೆಗೆ ಅವರ ಉದ್ಧಟತನದ ನಡವಳಿಕೆಗಳೆಲ್ಲವನ್ನೂ ಸಹಿಸುತ್ತಾ ಬಂದ ಆರ್‌ಎಸ್‌ಎಸ್ ಈಗ ಅವರನ್ನು ನಿಯಂತ್ರಿಸಲು ಹೊರಟಿದೆ.

ಸಂಘದ ಸಲಹೆಯ ಪ್ರಕಾರವೇ ಸಂಜಯ್ ಜೋಷಿ ಎಂಬ ಮೋದಿ ಅವರ ಕಟ್ಟಾವಿರೋಧಿಯನ್ನು ಅಜ್ಞಾತವಾಸದಿಂದ ಬಿಡುಗಡೆಗೊಳಿಸಿ ನಿರ್ಣಾಯಕವಾದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಪಕ್ಷ ನೀಡಿದೆ.
ಐದು ವರ್ಷಗಳ ಹಿಂದೆ ಲೈಂಗಿಕ ಹಗರಣದ ಆರೋಪಕ್ಕೆ ಒಳಗಾಗಿ ಮೂಲೆಗೆ ತಳ್ಳಲ್ಪಟ್ಟ ಜೋಷಿ ಅವರಿಗೆ ಪ್ರಮುಖ ಜವಾಬ್ದಾರಿ ವಹಿಸಿಕೊಟ್ಟಿರುವುದು ಮೋದಿ ಅವರಿಗೆ ನೀಡಿರುವ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಇದರಿಂದ ಮೋದಿ ಎಷ್ಟೊಂದು ಅಸಮಾಧಾನಗೊಂಡಿದ್ದರೆಂದರೆ ದೆಹಲಿಯಲ್ಲಿ ನಡೆದ ಪಕ್ಷದ ಕಾರ‌್ಯಕಾರಿ ಸಮಿತಿ ಸಭೆಗೇ ಗೈರುಹಾಜರಾಗಿ ಬಿಟ್ಟರು. ಬಿಗಿಗೊಳ್ಳುತ್ತಿರುವ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕುಣಿಕೆಗಳು, ಸರ್ಕಾರಿ ಯಂತ್ರದ ದುರುಪಯೋಗದ ಆರೋಪಗಳು, ಸಾಧನೆಯ ಬಗೆಗಿನ ಅತಿರಂಜಿತ ಹೇಳಿಕೆಗಳ ಪೊಳ್ಳುತನಗಳು ಮೋದಿ ಅವರ ಜನಪ್ರಿಯತೆಯನ್ನು ಕುಂದಿಸುತ್ತಿವೆ.
ಅಡ್ವಾಣಿಯವರ ಸಹಜ ಸ್ವಭಾವದ ಪ್ರಕಾರ ಅವರು ಕಷ್ಟದಲ್ಲಿರುವ ಮೋದಿ ಅವರ ರಕ್ಷಣೆಗೆ ಧಾವಿಸಬೇಕಾಗಿತ್ತು. ಆದರೆ ಅಡ್ವಾಣಿ ಮೋದಿ ಮೇಲೆ ಎರಗಿ ಬಿದ್ದಿದ್ದಾರೆ. 21 ವರ್ಷಗಳ ಹಿಂದೆ ಅಡ್ವಾಣಿ ಅಯೋಧ್ಯೆಗೆ ಯಾತ್ರೆ ಹೊರಟಿದ್ದು ಗುಜರಾತ್ ರಾಜ್ಯದ ಸೋಮನಾಥಪುರದಿಂದ.

ಆ ಯಾತ್ರೆ ಪ್ರಾರಂಭದ ದಿನ ಅವರ ಎಡಬಲಕ್ಕಿದ್ದ ಇಬ್ಬರಲ್ಲಿ ಒಬ್ಬರು ಪ್ರಮೋದ್ ಮಹಾಜನ್, ಇನ್ನೊಬ್ಬರು ನರೇಂದ್ರ ಮೋದಿ. ಈ ಬಾರಿಯೂ ಅಲ್ಲಿಂದಲೇ ಯಾತ್ರೆ ಹೊರಡುವುದೆಂದು ನಿರ್ಧರಿಸಿದ್ದ ಅಡ್ವಾಣಿ ನಂತರ ಮನಸ್ಸು ಬದಲಾಯಿಸಿ ಬಿಹಾರದಲ್ಲಿರುವ ಜಯಪ್ರಕಾಶ್ ನಾರಾಯಣ್ ಜನ್ಮಸ್ಥಳವನ್ನು ಆರಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಕಾಲಿಡಲು ಸಾಧ್ಯವಾಗದಂತಹ ರಾಜ್ಯ ಬಿಹಾರ. ಅಲ್ಲಿರುವ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಮೋದಿಯವರ ಕಟ್ಟಾ ವಿರೋಧಿ. ಮೋದಿಯನ್ನು ದೂರ ಇಟ್ಟು ನಿತೀಶ್ ಅವರನ್ನು ಪಕ್ಕಕ್ಕಿಟ್ಟುಕೊಂಡದ್ದು ಕೇವಲ ಕಾಕತಾಳೀಯ ಇರಲಾರದು. ಈ ಮೂಲಕ ಭವಿಷ್ಯದ ರಾಜಕೀಯದ ಸೂಚನೆಯನ್ನು ಕೊಡುವ ಪ್ರಯತ್ನವನ್ನು ಅಡ್ವಾಣಿ ಮಾಡಿದ್ದಾರೆಯೇ?
ಬಿಜೆಪಿ ಅಧಿಕಾರದಲ್ಲಿರುವ ಎರಡನೇ ರಾಜ್ಯ ಮಧ್ಯಪ್ರದೇಶ. ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಉಮಾ ಭಾರತಿ ಮುಖ್ಯಮಂತ್ರಿಯಾದರೂ ವಿವಾದದ ಸುಳಿಗೆ ಸಿಕ್ಕಿ ರಾಜೀನಾಮೆ ನೀಡಬೇಕಾಯಿತು. ಅದರ ನಂತರ ಮುಖ್ಯಮಂತ್ರಿಯಾದ ಬಾಬುಲಾಲ್ ಗೌರ್ ಕೂಡಾ ಬಹಳ ದಿನ ಅಧಿಕಾರದಲ್ಲಿ ಉಳಿಯಲಿಲ್ಲ. ಆಗ ಆ ಸ್ಥಾನಕ್ಕೆ ಬಂದವರು ಒಂದು ಕಾಲದ ಉಮಾಭಾರತಿ ಶಿಷ್ಯ ಶಿವರಾಜ್‌ಸಿಂಗ್ ಚೌಹಾಣ್.
ಸ್ವಲ್ಪಕಾಲದಲ್ಲಿಯೇ ಗುರುಶಿಷ್ಯರ ಸಂಬಂಧ ಕೆಟ್ಟುಹೋಗಿದ್ದಲ್ಲದೆ ಉಮಾಭಾರತಿಯವರು ಪಕ್ಷದಿಂದಲೇ ಉಚ್ಚಾಟನೆಗೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಮಾಭಾರತಿ ಅವರ ನೇತೃತ್ವದ ಪ್ರಾದೇಶಿಕ ಪಕ್ಷದ ವಿರುದ್ಧವೇ ಸೆಣಸಿ ಚೌಹಾಣ್ ಅವರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರು.
ಮೋದಿ ಅವರಂತೆ ವಿವಾದಕ್ಕೆ ಒಡ್ಡಿಕೊಳ್ಳದೆ, ಯಡಿಯೂರಪ್ಪನವರಂತೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಆರೋಪದಲ್ಲಿಯೂ ಸಿಕ್ಕಿಹಾಕಿಕೊಳ್ಳದೆ ತನ್ನ ಪಾಡಿಗೆ ತಣ್ಣಗೆ ಕೆಲಸ ಮಾಡುತ್ತಿರುವವರು ಶಿವರಾಜ್‌ಸಿಂಗ್ ಚೌಹಾಣ್.
ಈಗ ಇದ್ದಕ್ಕಿದ್ದಂತೆ ಉಮಾಭಾರತಿ ಮರಳಿ ಪಕ್ಷ ಸೇರಿದ್ದಲ್ಲದೆ ಅಡ್ವಾಣಿಯವರ ರಥಯಾತ್ರೆಯ ಪ್ರಮುಖ ಸಾರಥಿಯಾಗಿದ್ದಾರೆ. ದೂರವೇ ಇಟ್ಟಿದ್ದ ಉಮಾಭಾರತಿಯನ್ನು ಪಕ್ಕಕ್ಕೆ ಕರೆದು ಆಕೆ ತನ್ನ ಎರಡನೇ ಮಗಳು ಎಂದು ಹೇಳುವಷ್ಟು ಮಮಕಾರವನ್ನು ಅಡ್ವಾಣಿ ತೋರಿದ್ದಾರೆ.

ಉಮಾಭಾರತಿ ಕುಣಿದಾಡಲು ಇಷ್ಟು ಸಾಕು. ರಥಯಾತ್ರೆ ಮುಗಿದ ನಂತರ ರಥದಿಂದ ಇಳಿದು ಅವರು ನೇರವಾಗಿ ಹೋಗುವುದು ಮಧ್ಯಪ್ರದೇಶಕ್ಕೆ. ಅಲ್ಲಿನ ಮುಖ್ಯಮಂತ್ರಿ ಕುರ್ಚಿ ತನ್ನದೇ ಎಂದು ಹೇಳಿ ಚೌಹಾಣ್ ಅವರನ್ನು ಕೆಳಗಿಳಿಯಲು ಹೇಳಿದರೂ ಅಚ್ಚರಿ ಇಲ್ಲ. ಆ ಹಂತಕ್ಕೆ ಹೋಗದಿದ್ದರೂ ಉಮಾಭಾರತಿಯವರ ಈ ಹೊಸ ಪಾತ್ರ ಚೌಹಾಣ್ ಅವರನ್ನು ಅಭದ್ರಗೊಳಿಸಿರುವುದು ನಿಜ.

ಕೇಂದ್ರದಲ್ಲಿ  ಪಕ್ಷ ಅಧಿಕಾರಕ್ಕೆ ಬರುವುದು ಖಾತರಿ ಇಲ್ಲದಿರುವ ಈ ಸಂದರ್ಭದಲ್ಲಿ ಉಮಾಭಾರತಿ ಮಧ್ಯಪ್ರದೇಶದ ಚುನಾವಣಾ ಅಖಾಡಕ್ಕೆ ಇಳಿಯಬಹುದು. ಕಷ್ಟಕಾಲದಲ್ಲಿ ಪಕ್ಷವನ್ನು ಸಂಭಾಳಿಸಿಕೊಂಡು ಬಂದ ಚೌಹಾಣ್‌ಗೆ ರಥಯಾತ್ರೆಯ ಸಂದರ್ಭದಲ್ಲಿ ಉಮಾಭಾರತಿಯವರನ್ನು ಕೊಡುಗೆಯಾಗಿ ನೀಡುವ ಮೂಲಕ ಅಡ್ವಾಣಿಯವರು ಏನು ಹೇಳಲು ಹೊರಟಿದ್ದಾರೆ?
ಬಿಜೆಪಿ ಅಧಿಕಾರದಲ್ಲಿರುವ ಮೂರನೇ ರಾಜ್ಯ ಕರ್ನಾಟಕ. ಈ ರಾಜ್ಯದಲ್ಲಿ ಜೈಲುಯಾತ್ರೆಗೆ ಹೊರಟವರ ಸಾಲನ್ನು ನೋಡಿದರೆ ಅವರ ಪಕ್ಷದಲ್ಲಿ ಅಳಿದುಳಿದ ಪ್ರಾಮಾಣಿಕರು ಕೂಡಾ ಹೊರಗೆ ಮುಖ ಎತ್ತಿ ಅಡ್ಡಾಡಲಾಗದ ವಾತಾವರಣ ಇದೆ. ಈ ಪರಿಸ್ಥಿತಿಯಲ್ಲಿ ರಥಯಾತ್ರೆ ಹೊರಡುವುದೆಂದರೆ ಜನರನ್ನು ಹುಡುಕಿಕೊಂಡು ಹೋಗಿ ಮುಖಾಮುಖಿಯಾಗಿ ಅವರು ಎತ್ತುವ ಪ್ರಶ್ನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದೆಂದೇ ಅರ್ಥ.

ಕರ್ನಾಟಕದ ಬಿಜೆಪಿ ನಾಯಕರ ಭ್ರಷ್ಟಾಚಾರದ ಚರ್ಚೆ ದೇಶವ್ಯಾಪಿ ನಡೆಯುತ್ತಿರುವುದೇ ಅಡ್ವಾಣಿಯವರ ರಥಯಾತ್ರೆಯಿಂದ ಎಂದಾಗಿದೆ. ಭ್ರಷ್ಟಾಚಾರದ ವಿರುದ್ಧ ಜನ ಮಾತನಾಡುವಾಗ ತಮ್ಮವರ ಹೆಸರನ್ನೇ ಮೊದಲು ಚರ್ಚೆಯ ಮೇಜಿಗೆ ಎಳೆದುಕೊಳ್ಳುತ್ತಾರೆ ಎಂದು ಅವರಿಗೆ ಗೊತ್ತಾಗಲಿಲ್ಲವೇ? ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಬಹುದೆಂದು ಅಡ್ವಾಣಿಯವರಂತಹ ಸೂಕ್ಷ್ಮಜ್ಞರು ಊಹಿಸಿರಲಿಲ್ಲವೇ? ಇಲ್ಲ, ಇಂತಹದ್ದೊಂದು ಚರ್ಚೆ ನಡೆಯಬೇಕೆಂಬುದೇ ಅಡ್ವಾಣಿ ಅವರ ಉದ್ದೇಶವೇ?
ಪಕ್ಷದ ಮೇಲಿರುವ ದೆಹಲಿ ನಿಯಂತ್ರಣವನ್ನು ಸಡಿಲುಗೊಳಿಸಲಿಕ್ಕಾಗಿಯೇ ಆರ್‌ಎಸ್‌ಎಸ್ ಮಹಾರಾಷ್ಟ್ರದ ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದು. ಇದನ್ನು ವಿರೋಧಿಸಿದವರು `ಡೆಲ್ಲಿ-4~ ಎಂದೇ ಕರೆಯಲಾಗುವ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಅನಂತಕುಮಾರ್.
ಇವರೆಲ್ಲರನ್ನು ಒಂದು ಕಾಲದಲ್ಲಿ ಬೆಳೆಸಿದವರು ಅಡ್ವಾಣಿ. ಆದರೆ ಅವರನ್ನು ಪಕ್ಕಕ್ಕೆ ಸರಿಸುವ ಮೂಲಕ ಆರ್‌ಎಸ್‌ಎಸ್ ಅಡ್ವಾಣಿ ಯುಗ ಮುಗಿಯಿತು ಎನ್ನುವ ಸಂದೇಶವನ್ನು ನೀಡಿತ್ತು.
ಅಡ್ವಾಣಿಯವರು ರಥಯಾತ್ರೆ ಪ್ರಾರಂಭಿಸಿದಾಗ ಬಿಜೆಪಿ ಆಳ್ವಿಕೆಯ ರಾಜ್ಯಗಳ ಯಾವ ಮುಖ್ಯಮಂತ್ರಿಯೂ ಅಲ್ಲಿರಲಿಲ್ಲ.  ಮುರಳಿ ಮನೋಹರ ಜೋಷಿ, ಯಶವಂತ್‌ಸಿನ್ಹಾ, ಜಸ್ವಂತ್ ಸಿಂಗ್ ಮೊದಲಾದ ಹಿರಿಯರ ನಾಯಕರೂ ಇರಲಿಲ್ಲ. ಅಲ್ಲಿದ್ದವರು ನಿತಿನ್ ಗಡ್ಕರಿ ಅವರನ್ನು ಈಗಲೂ ಒಳಗಿಂದೊಳಗೆ ವಿರೊಧಿಸುತ್ತಿರುವ ಮತ್ತು ಆರ್‌ಎಸ್‌ಎಸ್ ಉದ್ದೇಶಪೂರ್ವಕವಾಗಿ ದೂರ ಇಟ್ಟಿರುವ  `ಡೆಲ್ಲಿ-4~ನ ಸದಸ್ಯರು.
ಅಡ್ವಾಣಿಯವರ ಹಿಂದಿನ ಐದೂ ಯಾತ್ರೆಗಳು ಭಾರತೀಯ ಜನತಾ ಪಕ್ಷದ ಒಮ್ಮತದ ತೀರ್ಮಾನವಾಗಿದ್ದವು. ಅದಕ್ಕೆ ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಂತೆ ಸಂಘ ಪರಿವಾರಕ್ಕೆ ಸೇರಿರುವ ಎಲ್ಲ ಸಂಘಟನೆಗಳ ಬೆಂಬಲವೂ ಇತ್ತು.

ಅಡ್ವಾಣಿಯವರ ಮೊದಲ ರಥಯಾತ್ರೆ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಸಾರಿದ ಬಿಜೆಪಿಯ ಪಾಲಂಪುರ ಕಾರ‌್ಯಕಾರಿಣಿಯ ಐತಿಹಾಸಿಕ ಗೊತ್ತುವಳಿಯಿಂದ ಪ್ರೇರಿತವಾಗಿತ್ತು. ಆದರೆ ಈಗಿನ ರಥಯಾತ್ರೆಯದ್ದು ಅಡ್ವಾಣಿಯವರ ಸ್ವಯಂಘೋಷಣೆ.
ಲೋಕಸಭೆಯಲ್ಲಿ ಅಡ್ವಾಣಿಯವರು ಇದ್ದಕ್ಕಿದ್ದಂತೆ `ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಗೆ ಯಾತ್ರೆ ಹೊರಡಲಿದ್ದೇನೆ~ ಎಂದು ಘೋಷಿಸಿದಾಗ ಅಚ್ಚರಿಪಟ್ಟವರು ವಿರೋಧಿ ಪಕ್ಷಗಳಲ್ಲ, ಅದು ಸಂಘ ಪರಿವಾರ.
ತನ್ನ ವಿರೋಧವನ್ನು ಮುಚ್ಚಿಟ್ಟುಕೊಳ್ಳದ ಆರ್‌ಎಸ್‌ಎಸ್ ನಾಯಕರು ಅಡ್ವಾಣಿ ಅವರನ್ನು ಖುದ್ದಾಗಿ ನಾಗಪುರಕ್ಕೆ ಕರೆಸಿಕೊಂಡು ರಥಯಾತ್ರೆಯನ್ನು ಕೈಬಿಡುವಂತೆ ಹೇಳಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಾರದೆಂಬ ಷರತ್ತು ಹಾಕಿ ಒಪ್ಪಿಗೆ ನೀಡಿದ್ದಾರೆ.
ಆರ್‌ಎಸ್‌ಎಸ್ ಇಚ್ಛೆಗೆ ವಿರುದ್ಧವಾಗಿ ಇಂತಹದ್ದೊಂದು ಪಕ್ಷದ ಕಾರ್ಯಕ್ರಮವನ್ನು ಅಡ್ವಾಣಿಯವರು ಹಮ್ಮಿಕೊಂಡಿದ್ದು ಅವರ ರಾಜಕೀಯ ಜೀವನದಲ್ಲಿಯೇ ಮೊದಲ ಬಾರಿ ಇರಬಹುದು. ಜಿನ್ನಾ ಪ್ರಕರಣದಲ್ಲಿಯೂ ಕೊನೆಗೆ ಅಡ್ವಾಣಿ ಆರ್‌ಎಸ್‌ಎಸ್ ಆದೇಶಕ್ಕೆ ಶರಣಾಗಿ ತಲೆದಂಡ ಕೊಟ್ಟಿದ್ದರು. ಆದರೆ ಯಾಕೋ ಈ ಬಾರಿ ತಿರುಗಿಬಿದ್ದಿದ್ದಾರೆ.
ದೇಶದ ಜನ ಅಸ್ತಿತ್ವದಲ್ಲಿರುವ ಎಲ್ಲ ಪಕ್ಷಗಳ ಬಗ್ಗೆ ಭ್ರಮನಿರಸನಕ್ಕೀಡಾಗಿರುವ ಹೊತ್ತಿನಲ್ಲಿ ರಾಜಕೀಯ ಬಂಡಾಯಗಳಿಗೆ ನೆಲ ಹದವಾಗಿದೆ. ಸ್ವಲ್ಪ ಇತಿಹಾಸವನ್ನು ಕೆದಕಿದರೆ ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕದ ಕೊನೆಭಾಗದಲ್ಲಿಯೂ ಹೆಚ್ಚುಕಡಿಮೆ ಇಂತಹದ್ದೇ ಪರಿಸ್ಥಿತಿ ಇದ್ದುದನ್ನು ಕಾಣಬಹುದು.

ಅದನ್ನು ಬಳಸಿೊಂಡೇ ಜನತಾ, ಸಂಯುಕ್ತರಂಗ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗಗಳು ಅಧಿಕಾರಕ್ಕೆ ಬಂದದ್ದು. ಎಲ್ಲ ಪಕ್ಷಗಳಲ್ಲಿಯೂ ನಡೆದ ಸಣ್ಣಸಣ್ಣ ಬಂಡಾಯಗಳ ಮೂಲಕವೇ ಹೊರಬಂದ ನಾಯಕರು ಒಟ್ಟಾಗಿ ಆಗಿನ ಪರ್ಯಾಯ ರಾಜಕೀಯವನ್ನು ರೂಪಿಸಿದ್ದರು;
ಸಕ್ರಿಯವಾಗಿದ್ದ ಯಾವುದೇ ಒಂದು ಪಕ್ಷ ಪರ್ಯಾಯವಾಗಿದ್ದಲ್ಲ. ಅಣ್ಣಾ ಹಜಾರೆ ಚಳವಳಿ ಅಂತಿಮವಾಗಿ ಇಂತಹದ್ದೊಂದು ಪರ್ಯಾಯ ರಾಜಕೀಯ ರೂಪುಗೊಳ್ಳಲು ನೆರವಾಗಬಹುದು ಎಂಬ ನಿರೀಕ್ಷೆ ಅದರ ನಾಯಕರ ಬಾಲಿಶ ನಡವಳಿಕೆಯಿಂದಾಗಿ ಹುಸಿಯಾಗತೊಡಗಿದೆ.
ಆದ್ದರಿಂದ ಅಡ್ವಾಣಿಯವರ ಬಂಡಾಯಕ್ಕೆ ದೇಶದ ಸಮಕಾಲೀನ ರಾಜಕೀಯದಲ್ಲಿ ಅವಕಾಶ ಖಂಡಿತ ಇದೆ. ಅಂತಹ ದಿಟ್ಟತನವನ್ನು ತೋರಿದರೆ ಅವರ ಮೊದಲ ರಥಯಾತ್ರೆಯ ಪರಿಣಾಮವನ್ನು ಜನ ಮರೆತುಬಿಡಬಹುದು. ಆ ಬಗ್ಗೆ ಈಗಾಗಲೇ ಅವರು ವಿಷಾದ ವ್ಯಕ್ತಪಡಿಸಿರುವುದರಿಂದ ಕ್ಷಮಿಸುವುದು ಕಷ್ಟವಾಗಲಾರದು.
ಆದರೆ ತನ್ನ ಬಂಡುಕೋರತನವನ್ನು ಒಂದು ತಾರ್ಕಿಕ ಅಂತ್ಯದ ಕಡೆಗೆ ಕೊಂಡೊಯ್ಯುವ ಧೈರ್ಯ ಅಡ್ವಾಣಿಯವರಲ್ಲಿದೆಯೇ ಎನ್ನುವುದು ಬಹುದೊಡ್ಡ ಪ್ರಶ್ನೆ. ಅವರ ಮುಂದೆ ಇರುವುದು ಎರಡೇ ಎರಡು ಆಯ್ಕೆ.

ಒಂದೋ ಕಣ್ಣು-ಕಿವಿ-ಬಾಯಿ ಎಲ್ಲವನ್ನೂ ಮುಚ್ಚಿಕೊಂಡು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಸದಸ್ಯನಾಗಿ ರಾಜಕೀಯ ನಿವೃತ್ತಿ ಜೀವನವನ್ನು ಆರಾಮವಾಗಿ ಕಳೆಯುವುದು, ಇಲ್ಲವೇ, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನಾಯಕತ್ವ ನೀಡಿ ಒಂದಷ್ಟು ಹಳೆಯ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದು.
`ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ~ ಎಂದು ಅಡ್ವಾಣಿಯವರು ದೇಶಕ್ಕೆ ಒಂದಲ್ಲ, ಮೂರು ಸುತ್ತು ಯಾತ್ರೆ ನಡೆಸಿದರೂ ಅದೊಂದು ಆರೋಗ್ಯ ಸುಧಾರಣೆಯ ವ್ಯಾಯಾಮವಾಗಬಹುದೇ ಹೊರತು ಅದಂದ ಯಾವ ಉದ್ದೇಶವೂ ಈಡೇರಲಾರದು.