Monday, October 31, 2011

ನಿನ್ನೆ ದುಬೆ, ಇಂದು ಕುಲಕರ್ಣಿ, ನಾಳೆ ಯಾರು?

ಪರಮಾಪ್ತರು ಸಂಕಷ್ಟಕ್ಕೀಡಾದಾಗ ಎಂತಹ ಉಕ್ಕಿನ ಮನುಷ್ಯರೂ ಕುಗ್ಗಿಹೋಗುತ್ತಾರೆ. ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರದ್ದು ಇದೇ ಸ್ಥಿತಿ. ತಮಗೆ ರಾಜಕೀಯ ಸಲಹೆಗಾರ, ಮಾರ್ಗದರ್ಶಕ, ಗೆಳೆಯ ಎಲ್ಲವೂ ಆಗಿದ್ದ ಸುಧೀಂದ್ರ ಕುಲಕರ್ಣಿ ಅವರ ಬಂಧನದ ದು:ಖ ಬಹುಷ: ಅಡ್ವಾಣಿಯವರನ್ನು ಸಹಿಸಲಾಗದಷ್ಟು ಘಾಸಿಗೊಳಿಸಿದೆ.
ಈ ಕಾರಣದಿಂದಾಗಿಯೇ `ವೋಟಿಗಾಗಿ ನೋಟು ಪ್ರಕರಣದಲ್ಲಿ ಸುಧೀಂದ್ರ ಕುಲಕರ್ಣಿ ಮತ್ತು ಬಿಜೆಪಿ ಸಂಸದರು ಆರೋಪಿಗಳೆಂದಾದರೆ ನಾನೂ ಆರೋಪಿ, ನನ್ನನ್ನೂ ಬಂಧಿಸಿ~ ಎಂದು ಅವರು ಭಾವಾವೇಶದಿಂದ ಲೋಕಸಭೆಯಲ್ಲಿ ಗುಡುಗಿದ್ದು. ಅವರ ಈಗಿನ `ಜನಚೇತನ ಯಾತ್ರೆ~ಗೆ ಈ ಘಟನೆಯೂ ಒಂದು ಪ್ರೇರಣೆ ಎನ್ನಲಾಗುತ್ತಿದೆ.
 ವೈಯಕ್ತಿಕವಾಗಿ ನಾನೂ ಬಲ್ಲ ಕನ್ನಡಿಗರಾದ ಸುಧೀಂದ್ರ ಕುಲಕರ್ಣಿ  ಆಳವಾದ ಅಧ್ಯಯನ ಮತ್ತು ವಿಸ್ತಾರವಾದ ಅನುಭವ ಹೊಂದಿರುವ ಸಜ್ಜನ ಪತ್ರಕರ್ತ. ರಾಜಕೀಯದ ಮೋಹಪಾಶಕ್ಕೆ ಸಿಲುಕದೆ ಇದ್ದಿದ್ದರೆ ಅವರು ಈಗ ಯಾವುದಾದರೂ ರಾಷ್ಟ್ರೀಯ ದಿನಪತ್ರಿಕೆಯ ಸಂಪಾದಕರ ಕುರ್ಚಿಯಲ್ಲಿರುತ್ತಿದ್ದರು.
ಖಂಡಿತ ಅವರ ಸ್ಥಾನ ಸೆರೆಮನೆಯಲ್ಲ. ಮೇಲ್ನೋಟದಲ್ಲಿಯೇ  ಕುಲಕರ್ಣಿ ಬಂಧನದಲ್ಲಿನ ವಿರೋಧಾಭಾಸ ಕಾಣುತ್ತಿದೆ. `ವಿಶ್ವಾಸ ಮತಗಳಿಸಲು ದುಡ್ಡುಕೊಟ್ಟು ಮತ ಖರೀದಿ ಮಾಡಿದ್ದಾರೆ ಎಂಬ ಆರೋಪಕ್ಕೊಳಗಾದವರು ನಿಶ್ಚಿಂತೆಯಾಗಿ ಅಧಿಕಾರದಲ್ಲಿದ್ದಾರೆ, ಇದನ್ನು ಬಯಲು ಮಾಡಲು ಹೊರಟವರು ಜೈಲಿನಲ್ಲಿದ್ದಾರೆ~ ಎಂಬ ಬಿಜೆಪಿ ನಾಯಕರ ಹೇಳಿಕೆ, `ಸೀಟಿ ಊದುವವರಿಗೆ (ವಿಷಲ್ ಬ್ಲೋವರ್ಸ್‌) ರಕ್ಷಣೆ  ಬೇಕು ಎನ್ನುವ ಅಡ್ವಾಣಿ ಅವರ ಕಳಕಳಿ, ಕುಲಕರ್ಣಿಯವರಿಗೆ ಆಗಿರುವ ಅನ್ಯಾಯ ಎಲ್ಲವೂ ಅರ್ಥಮಾಡಿಕೊಳ್ಳುವಂತಹದ್ದೇ. ಆದರೆ....
ಸರಿಯಾಗಿ ಹತ್ತು ವರ್ಷಗಳ ಹಿಂದೆ ಲಾಲ್‌ಕೃಷ್ಣ ಅಡ್ವಾಣಿ ಮತ್ತು ಅವರ ಪಕ್ಷದ ನಾಯಕರ ನಡೆ-ನುಡಿಗಳೆರಡೂ ಹೀಗಿರಲಿಲ್ಲವಲ್ಲಾ? ತೆಹೆಲ್ಕಾದ ತನಿಖಾ ತಂಡ ಆಗಿನ ಎನ್‌ಡಿಎ ಸರ್ಕಾರದ ರಕ್ಷಣಾ ಇಲಾಖೆಯೊಳಗಿನ ಹಗರಣಗಳ ಬೆನ್ನತ್ತಿ `ಕುಟುಕು ಕಾರ‌್ಯಾಚರಣೆ~ಯ ಮೂಲಕ ಹಿರಿಯ ಸೇನಾಧಿಕಾರಿಗಳು, ರಾಜಕಾರಣಿಗಳು ಮತ್ತು ದಲ್ಲಾಳಿಗಳ ಭ್ರಷ್ಟ ಮುಖಗಳನ್ನು ಬಯಲು ಮಾಡಿತ್ತು.
ತೆಹೆಲ್ಕಾ ರಹಸ್ಯವಾಗಿ ಚಿತ್ರೀಕರಿಸಿದ್ದ ಭ್ರಷ್ಟರ ಮುಖಗಳು 2001ರ ಮಾರ್ಚ್ ಹದಿಮೂರರಂದು ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಂಡಾಗ ದೇಶದ ಜನ ಬೆಚ್ಚಿಬಿದ್ದಿದ್ದರು.
ಸೇನಾಧಿಕಾರಿಗಳು ಹೆಣ್ಣು ಮತ್ತು ಹೆಂಡಕ್ಕಾಗಿ ರಕ್ಷಣಾ ಇಲಾಖೆಯನ್ನೇ ಮಾರಾಟಕ್ಕಿಡಲು ಹೊರಟಿದ್ದನ್ನು, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಮನೆಯಲ್ಲಿಯೇ ದಲ್ಲಾಳಿಗಳು ವ್ಯವಹಾರ ಕುದುರಿಸುತ್ತಿರುವುದನ್ನು, ಬಿಜೆಪಿಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ಲಂಚ ಸ್ವೀಕರಿಸುತ್ತಿರುವುದನ್ನು ದೇಶದ ಜನ ಕಣ್ಣಾರೆ ನೋಡಿದರೂ ನಂಬಲಾಗದೆ ಕಣ್ಣುಜ್ಜಿಕೊಂಡಿದ್ದರು.
ಒತ್ತಡಕ್ಕೆ ಸಿಕ್ಕಿ ಜಾರ್ಜ್ ಫರ್ನಾಂಡಿಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು, ಬಯಲಾದ ಹಗರಣಗಳ ತನಿಖೆಗೆ ನ್ಯಾಯಮೂರ್ತಿ ವೆಂಕಟಸ್ವಾಮಿ ನೇತೃತ್ವದ ಆಯೋಗವನ್ನೂ ಎನ್‌ಡಿಎ ಸರ್ಕಾರ ರಚಿಸಿತ್ತು.
ವಿಚಿತ್ರವೆಂದರೆ ಹಗರಣಗಳ ಬಗ್ಗೆ ಮಾತ್ರವಲ್ಲ ತೆಹೆಲ್ಕಾ ಕಾರ‌್ಯಾಚರಣೆಯ `ಉದ್ದೇಶ~ವನ್ನೂ ತನಿಖೆ ಮಾಡಲು ಎನ್‌ಡಿಎ ಸರ್ಕಾರ ಆದೇಶ ನೀಡಿತ್ತು. ಅದರ ನಂತರದ ಸುಮಾರು ಮೂರುವರ್ಷಗಳ ಕಾಲ ಎನ್‌ಡಿಎ ಸರ್ಕಾರ ತೆಹೆಲ್ಕಾ ಸಂಸ್ಥೆಗೆ ನೀಡಿದ್ದ ಕಿರುಕಳ ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾಗಾಂಧಿ ಪತ್ರಿಕೆಗಳ ಮೇಲೆ ನಡೆಸಿದ್ದ ದಾಳಿಯನ್ನು ನೆನೆಪಿಸುವಂತಿತ್ತು.
ಸಂಸ್ಥೆಯಲ್ಲಿ ಬಂಡವಾಳ ಹೂಡಿದವರ ಮನೆಮೇಲೆ ವರಮಾನ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು, ಸೆಬಿ, ಅನುಷ್ಠಾನ ನಿರ್ದೇಶನಾಲಯ ಹೀಗೆ ಸರ್ಕಾರದ ಹಲವಾರು ಇಲಾಖೆಗಳು ಒಟ್ಟಾಗಿ ತೆಹೆಲ್ಕಾದ ಮೇಲೆ ಎರಗಿ ಬಿದ್ದಿದ್ದವು, ಅದರಲ್ಲಿದ್ದ ಕೆಲವು ಪತ್ರಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ತಳ್ಳಲಾಗಿತ್ತು, ಉಳಿದವರು ಪ್ರಾಣ ಬೆದರಿಕೆ ಎದುರಿಸುತ್ತಿದ್ದರು, ಸಂಸ್ಥೆ ದಿವಾಳಿಯಾಗಿತ್ತು. ತೆಹೆಲ್ಕಾ ಟೇಪ್‌ನ ವಿಶ್ವಾಸಾರ್ಹತೆಯನ್ನು ಮತ್ತೆಮತ್ತೆ ಪ್ರಶ್ನಿಸಲಾಯಿತು.
ಆಯೋಗ ತೆಹೆಲ್ಕಾ ಪರವಾಗಿಯೇ ವರದಿ ನೀಡಲಿರುವ ಗುಮಾನಿ ಬಂದಾಗ ಅದನ್ನು ಬರ್ಖಾಸ್ತುಗೊಳಿಸಿ ಮತ್ತೊಂದನ್ನು ರಚಿಸಲಾಯಿತು. ಮೂರುವರ್ಷಗಳ ನಂತರ ಹೊಸ ತನಿಖಾ ಆಯೋಗವನ್ನು ಕೂಡಾ ರದ್ದು ಮಾಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಅದರ ನಂತರ ಏನಾಯಿತೆಂದು ಯಾರಿಗೂ ಗೊತ್ತಿಲ್ಲ.
ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದೆ ಎನ್ನುವ ಒಂದೇ ಕಾರಣಕ್ಕೆ ಎನ್‌ಡಿಎ ಸರ್ಕಾರ ಈ ರೀತಿ ಮಾಧ್ಯಮ ಸಂಸ್ಥೆಯೊಂದರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿರುವಾಗ ಲಾಲ್‌ಕೃಷ್ಣ ಅಡ್ವಾಣಿ ಗೃಹಸಚಿವರಾಗಿದ್ದರು. ಈಗ `ಸೀಟಿ ಊದುವವರ~ ರಕ್ಷಣೆಯ ಬಗ್ಗೆ ಭಾಷಣಮಾಡುತ್ತಿರುವ ಅರುಣ್ ಜೇಟ್ಲಿ ತೆಹೆಲ್ಕಾ ವಿರುದ್ದದ ನ್ಯಾಯಾಂಗ ಹೋರಾಟದ ಮುಂಚೂಣಿಯಲ್ಲಿದ್ದರು.

ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡುವುದು `ದೇಶದ್ರೋಹದ ಕೆಲಸ~ವೆಂದು ಆಗ ಇವರೆಲ್ಲರ ಅಭಿಪ್ರಾಯವಾಗಿತ್ತು, ಇದು `ಎನ್‌ಡಿಎ ವಿರುದ್ದದ ದೊಡ್ಡ ಸಂಚು~ ಎಂದೇ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದರು.

ಹೀಗಿರುವಾಗ ಯಾವ ನೈತಿಕ ಬಲದಿಂದ ಅಡ್ವಾಣಿಯವರು ಈಗ  `ಕುಟುಕು ಕಾರ‌್ಯಾಚಾರಣೆ~ಯಲ್ಲಿ ಭಾಗಿಯಾಗಿದ್ದ ಸ್ನೇಹಿತ ಸುಧೀಂದ್ರ ಕುಲಕರ್ಣಿ ಮತ್ತು ಪಕ್ಷದ ಸಂಸದರನ್ನು  ಸಮರ್ಥನೆ ಮಾಡಿಕೊಳ್ಳಲು ಸಾಧ್ಯ?
ಹೋಗ್ಲಿಬಿಡಿ, ತೆಹೆಲ್ಕಾಕ್ಕೇನೋ ದುಷ್ಟ ಉದ್ದೇಶ ಇದ್ದಿರಬಹುದೆಂದು ಅಂದುಕೊಳ್ಳೋಣ. ಸತ್ಯೇಂದ್ರ ದುಬೆ ಎಂಬ 31 ವರ್ಷದ ಐಐಟಿ ಪದವೀಧರ ಏನು ಅನ್ಯಾಯ ಮಾಡಿದ್ದರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯುಟಿ ಜನರಲ್ ಮ್ಯಾನೆಜರ್ ಆಗಿದ್ದ ದುಬೆ ತನ್ನ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ರಹಸ್ಯ ಪತ್ರ ಬರೆದಿದ್ದರು. ಪ್ರಾಣ ಭಯ ಇರುವುದರಿಂದ ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ಪತ್ರದಲ್ಲಿ ವಿನಂತಿಯನ್ನೂ ಮಾಡಿದ್ದರು.
ಆದರೆ ಆ ಪತ್ರ ಪ್ರಧಾನಿ ಕಾರ‌್ಯಾಲಯದಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೋಗಿ ಕೊನೆಗೆ ಯಾರ ಕೈಗೆ ಸಿಗಬಾರದಿತ್ತೋ ಅವರಿಗೆ ಸಿಕ್ಕಿತು. ಪತ್ರ ಬರೆದ ಹದಿನಾರನೇ ದಿನ ಸತ್ಯೇಂದ್ರ ದುಬೆ ಅವರನ್ನು ಗಯಾದ ಬೀದಿಯಲ್ಲಿ ಹಾಡಹಗಲೇ ಹತ್ಯೆ ಮಾಡಿದ್ದರು.
ಅದಾದ ನಂತರ ಭುಗಿಲೆದ್ದ ಸಾರ್ವಜನಿಕ ಆಕ್ರೋಶ ಕಂಡು ಸುಪ್ರೀಂಕೋರ್ಟ್ `ಸಾರ್ವಜನಿಕ ಹಿತಾಸಕ್ತಿ ಬಹಿರಂಗ ಮತ್ತು ರಕ್ಷಣಾ ಗೊತ್ತುವಳಿ~ಯನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಇದರ ಅನುಷ್ಠಾನದ ಹೊಣೆಯನ್ನು ಕೇಂದ್ರ ಜಾಗೃತ ಆಯೋಗಕ್ಕೆ ವಹಿಸಿಕೊಟ್ಟಿತ್ತು.
ಆದರೆ ಅದಾದ ಒಂದು ವರ್ಷದ ನಂತರ ಭಾರತೀಯ ತೈಲನಿಗಮದ ಮ್ಯಾನೇಜರ್ ಆಗಿದ್ದ ಕೋಲಾರದ ಮಂಜುನಾಥ ಷಣ್ಮುಗಂ ಎಂಬ ಐಐಎಂ ಪದವೀಧರನನ್ನು ಉತ್ತರಪ್ರದೇಶದಲ್ಲಿ ಹತ್ಯೆ ಮಾಡಲಾಯಿತು. ಪೆಟ್ರೋಲ್ ಕಲಬೆರಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳ ವಿರುದ್ದ ದನಿ ಎತ್ತಿದ್ದೇ ಆ ಯುವಕನ ಪ್ರಾಣಕ್ಕೆ ಮುಳುವಾಯಿತು.

ಮತ್ತೆ `ಸೀಟಿ ಊದುವವರ~ ರಕ್ಷಣೆಯ ಕೂಗೆದ್ದಿತ್ತು. 2001ರ ಕಾನೂನು ಆಯೋಗ ಮಾಡಿರುವ ಶಿಫಾರಸಿಗೆ ಅನುಗುಣವಾಗಿ ಕಾಯಿದೆ ರೂಪಿಸುವುದಾಗಿ ಎನ್‌ಡಿ ಸರ್ಕಾರ ಆಶ್ವಾಸನೆಯನ್ನೂ ನೀಡಿತ್ತು.
ಅದು ಅಧಿಕಾರ ಕಳೆದುಕೊಂಡಿತೇ ವಿನ: ಆಶ್ವಾಸನೆ ಈಡೇರಿಸಲೇ ಇಲ್ಲ. ಅಡ್ವಾಣಿ, ಜೇಟ್ಲಿ, ಸುಷ್ಮಾಸ್ವರಾಜ್ ಎಲ್ಲರೂ ಸೇರಿ `ಸೀಟಿ ಊದುವವರ~ ರಕ್ಷಣಾ ಕಾಯಿದೆಯೊಂದನ್ನು ಆಗ ಜಾರಿಗೆ ತಂದಿದ್ದರೆ ಬಹುಷ: ಸುಧೀಂದ್ರ ಕುಲಕರ್ಣಿಯವರು ಇಂದು ಜೈಲಿನಲ್ಲಿ ಇರುತ್ತಿರಲಿಲ್ಲವೇನೋ?
ಭ್ರಷ್ಟರೇ ಬಹುಸಂಖ್ಯೆಯಲ್ಲಿರುವುದು ನಿಜವಾದರೂ ಪ್ರಾಮಾಣಿಕರಿಗೇನು ಸಮಾಜದಲ್ಲಿ ಕೊರತೆ ಇಲ್ಲ. ಆದರೆ ಅವರು ಯಾವತ್ತೂ ಅಲ್ಪಸಂಖ್ಯಾತರು. ಇಲಾಖೆಗಳಿಗೆ ಸಂಬಂಧಿಸಿದ ಅವ್ಯವಹಾರದಲ್ಲಿ ಸಹೋದ್ಯೋಗಿಗಳ ಪಾತ್ರವೂ ಇರುವುದರಿಂದ ಮೊದಲ ಶತ್ರುಗಳು ಅವರೇ ಆಗಿರುತ್ತಾರೆ.  ಮೊದಲು `ಸೀಟಿ ಊದುವವರ~ ವಿರುದ್ಧ ಅಪಪ್ರಚಾರ ನಡೆಯುತ್ತದೆ. ಅದರ ನಂತರ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತದೆ.

ಇವೆಲ್ಲದರ ನಡುವೆ ಅವರನ್ನು ಒಂಟಿಯಾಗಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ತಂತ್ರಗಳ ಮೂಲಕವೇ ಅವರನ್ನು `ತಮ್ಮ ದಾರಿಗೆ ತರುವ~ ಪ್ರಯತ್ನ ನಡೆಯುತ್ತದೆ. ಇದಕ್ಕೆ ಕೆಲವರು ಶರಣಾಗಿ ಬದುಕುವ ದಾರಿ ಕಂಡುಕೊಳ್ಳುತ್ತಾರೆ. `ದಾರಿಗೆ ಬರದವರು~ ಒಂದೋ ಮೂಲೆ ಗುಂಪಾಗುತ್ತಾರೆ ಇಲ್ಲವೇ ಮಸಣದ ಹಾದಿ ಹಿಡಿಯುತ್ತಾರೆ.
ನಕಲಿ ಛಾಪಾ ಕಾಗದ ಹಗರಣದ ಸುಳಿವನ್ನು ಮೊದಲು ನೀಡಿದ್ದ ಮಹಾರಾಷ್ಟ್ರದ ಸ್ಟಾಂಪ್ಸ್ ಸುಪರಿಂಟೆಂಡೆಂಟ್ ರಾಧೇಶ್ಯಾಮ್ ಮೋಪಾಲ್‌ವಾಲ್, ಮುಂಬೈನ ಅಕ್ರಮ ಕಟ್ಟಡಗಳ ವಿರುದ್ದ ಸಮರಸಾರಿದ ಜಿ.ಎಸ್. ಖೈರ್ನಾರ್, 26 ವರ್ಷಗಳ ಸೇವಾವಧಿಯಲ್ಲಿ 26 ಬಾರಿ ವರ್ಗಾವಣೆಯ ಶಿಕ್ಷೆಗೊಳಗಾದ ಪುಣೆಯ ಮುನ್ಸಿಪಲ್ ಕಮಿಷನರ್ ಅರುಣ್ ಭಾಟಿಯಾ... ಹೀಗೆ  ಅನ್ಯಾಯ,ಅಕ್ರಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲಿಗೆಳೆದ `ಸೀಟಿ ಊದುವವರು~ ಎಲ್ಲೋ ಮೂಲೆಗುಂಪಾಗಿ ಹೋಗಿದ್ದಾರೆ.
ದುಬೆ, ಮಂಜುನಾಥ್ ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಭ್ರಷ್ಟರನ್ನು ಬಯಲುಗೊಳಿಸಲು ಹೊರಟ ಭೋಪಾಲದ ಶೆಹಲಾ ಮಸೂದ್, ಗುಜರಾತ್‌ನ ಅಮಿತ್ ಜೆಟ್ವಾ, ಪುಣೆಯ ಸತೀಶ್ ಶೆಟ್ಟಿ, ಮಹಾರಾಷ್ಟ್ರದ ದತ್ತಾತ್ರೇಯ ಪಾಟೀಲ್, ಆಂಧ್ರಪ್ರದೇಶದ ಸೋಲಾ ರಂಗರಾವ್-ಇವರಲ್ಲಿ ಯಾರೂ ಈಗ ಬದುಕಿ ಉಳಿದಿಲ್ಲ. ಎಲ್ಲರೂ ಭ್ರಷ್ಟರ ಕೈಯಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ.
ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ತಂಡ ಚಳುವಳಿ ಪ್ರಾರಂಭಿಸಿದ ನಂತರ ಮತ್ತೊಮ್ಮೆ `ಸೀಟಿ ಊದುವವರ~ ರಕ್ಷಣೆಯ ಕಾನೂನಿನ ಚರ್ಚೆ ಪ್ರಾರಂಭವಾಗಿದೆ. ಅಣ್ಣಾ ತಂಡ ರಚಿಸಿರುವ `ಜನಲೋಕಪಾಲ ಮಸೂದೆ~ಯಲ್ಲಿ `ಸೀಟಿ ಊದುವವರ ರಕ್ಷಣೆಯೂ ಸೇರಿದೆ.
ಆದರೆ ಸರ್ಕಾರದ `ಲೋಕಪಾಲ ಮಸೂದೆ~ಯಲ್ಲಿ ಅದು ಸೇರಿಲ್ಲ. ಇದನ್ನು ಪ್ರತ್ಯೇಕವಾಗಿ ಜಾರಿಗೆ ತರುವುದಾಗಿ ಹೇಳಿ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಕೂಡಾ ಮಂಡನೆಯಾಗಿದೆ.
`ಅಧಿಕಾರ ದುರುಪಯೋಗ, ಭ್ರಷ್ಟಾಚಾರ ನಿರೋಧ ಕಾಯಿದೆ ಇಲ್ಲವೇ ಭಾರತೀಯ ದಂಡಸಂಹಿತೆಯಲ್ಲಿ ವ್ಯಾಖ್ಯಾನಿಸಲಾದ ಅಪರಾಧ ಮತ್ತು ದುರಾಡಳಿತ- ಈ ಮೂರು ಅಂಶಗಳಿಗೆ ಸಂಬಂಧಿಸಿದ ದೂರುಗಳನ್ನು `ಸೀಟಿ ಊದುವವರ ರಕ್ಷಣಾ ಮಸೂದೆಯಲ್ಲಿ ಸೇರಿಸಲಾಗಿದೆ.
ಇದರಲ್ಲಿಯೂ ಕಾರ್ಪೋರೇಟ್ ಕ್ಷೇತ್ರದಲ್ಲಿನ `ಸೀಟಿ ಊದುವವರನ್ನು~ ಸೇರಿಸಲಾಗಿಲ್ಲ. ಎರಡನೆ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಕಾರ್ಪೋರೇಟ್ ಕ್ಷೇತ್ರವನ್ನೂ ಕಾಯ್ದೆಯ ವ್ಯಾಪ್ತಿಗೆ ತರಬೇಕೆಂದು ಶಿಫಾರಸು ಮಾಡಿತ್ತು.
ಇದರ ಬಗ್ಗೆ ಅಣ್ಣಾತಂಡವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮೌನವಾಗಿವೆ.
ಭಾರತದಲ್ಲಿ ಮಾತ್ರವಲ್ಲ, ನಾಲ್ಕು ದೇಶಗಳನ್ನು ಹೊರತುಪಡಿಸಿದರೆ ಬೇರೆಲ್ಲೂ `ಸೀಟಿ ಊದುವವರ~ ರಕ್ಷಣೆಗಾಗಿ ಕಾನೂನು ಇಲ್ಲ. 1989ರಲ್ಲಿ ಅಮೆರಿಕಾ ಮೊದಲ ಬಾರಿ ಈ ಕಾನೂನು ರೂಪಿಸಿತ್ತು.
ಅದರ ನಂತರ ಬ್ರಿಟನ್, ಅಸ್ಟೇಲಿಯಾ ಮತ್ತು ನ್ಯೂಜಿಲೇಂಡ್‌ಗಳು ಹಿಂಬಾಲಿಸಿದವು. ಈ ಕಾನೂನು ಇರುವ ಕಾರಣಕ್ಕಾಗಿಯೇ ಎನ್ರಾನ್ ಸಂಸ್ಥೆಯ ತಪ್ಪು ಲೆಕ್ಕಪತ್ರವನ್ನು ಬಯಲಿಗೆಳೆದ ಅದರ ಉಪಾಧ್ಯಕ್ಷ ಶೆರ‌್ರಾನ್ ವಾಟ್ಕಿನ್ಸ್, 9/11 ದಾಳಿ ನಡೆಸಿದ ಭಯೋತ್ಪಾದಕರ ಸುಳಿವಿನ ಮುನ್ಸೂಚನೆ ನಿರ್ಲಕ್ಷಿಸಿದ್ದನ್ನು ಪತ್ರಬರೆದು ಬಹಿರಂಗಗೊಳಿಸಿದ ಎಫ್‌ಬಿಐ ಅಟಾರ್ನಿ ಕೊಲೀನ್ ರೌಲೆ, ವರ್ಲ್ಡ್‌ಕಾಮ್ ಸುಮಾರು 3.8 ಬಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಮುಚ್ಚಿಹಾಕಿದ್ದನ್ನು ನಿರ್ದೇಶಕ ಮಂಡಳಿಗೆ ತಿಳಿಸಿ ಸುದ್ದಿ ಮಾಡಿದ ಸಿಂಥಿಯಾ ಕೂಪರ್ ಅಮೆರಿಕಾದಲ್ಲಿ  `ತಾರಾಮೌಲ್ಯ~ ಗಳಿಸುವಷ್ಟು ಜನಪ್ರಿಯರು.
ವಿಕಿಲೀಕ್ಸ್‌ನ ಮೂಲಕ ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳು ಬಹಿರಂಗವಾಗಲು ಕೂಡಾ ಅನಾಮಿಕ `ಸೀಟಿ ಊದುವವರು~ ಕಾರಣ.
ಆದರೆ ಭಾರತದಲ್ಲಿ  ಇವರಿಗೆ ಯಾವ ರಕ್ಷಣೆಯೂ ಇಲ್ಲ, ಬದಲಿಗೆ ಕಿರುಕುಳ, ಜೈಲು, ಸಾವು-ನೋವುಗಳ ಕೊಡುಗೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯವರ  ಭ್ರಷ್ಟಾಚಾರದ ವಿರುದ್ಧ ದೂರು ದಾಖಲು ಮಾಡಿರುವ ಇಬ್ಬರು ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೆಳೆಯ ಸುಧೀಂದ್ರ ಕುಲಕರ್ಣಿ ಅವರಿಗಾಗಿ ಕಣ್ಣೀರು ಸುರಿಸುತ್ತಿರುವ ಲಾಲ್‌ಕೃಷ್ಣ ಅಡ್ವಾಣಿಯವರು ಇದಕ್ಕೇನನ್ನುತ್ತಾರೆ?

Monday, October 24, 2011

ಅಚ್ಚರಿ ಹುಟ್ಟಿಸಿರುವ ಅಡ್ವಾಣಿ ಬಂಡುಕೋರತನ

ಲಾಲಕೃಷ್ಣ ಅಡ್ವಾಣಿಯವರ ಮನಸ್ಸಿನೊಳಗೆ ಬಹಳ ಕಾಲದಿಂದ ಸುಳಿದಾಡುತ್ತಿದ್ದ ಬಂಡುಕೋರನೊಬ್ಬ ನಿಧಾನವಾಗಿ ತಲೆ ಹೊರಗೆ ಚಾಚುತ್ತಿರುವಂತೆ ಕಾಣುತ್ತಿದೆ. ಈ ಬಂಡುಕೋರತನ ಅವರನ್ನು ಪಕ್ಷ ತೊರೆಯುವ ಕಠಿಣ ನಿರ್ಧಾರದ ಅಂಚಿಗೆ ತಳ್ಳಬಹುದೆಂದು ಈಗಲೇ ಹೇಳಲಾಗುವುದಿಲ್ಲ.
ಉಸಿರುಗಟ್ಟುತ್ತಿರುವ ತಮ್ಮವರ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಇಲ್ಲವೇ, ತಮ್ಮನ್ನು ನಿರ್ಲಕ್ಷಿಸುತ್ತಿರುವವರಿಗೆ ಎಚ್ಚರಿಕೆ ನೀಡುವ ಇಲ್ಲವೇ, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಈ ಬಂಡುಕೋರ ನಡವಳಿಕೆಯಲ್ಲಿ ಇದ್ದರೂ ಇರಬಹುದು.

ಆರ್‌ಎಸ್‌ಎಸ್‌ಗೆ ಸೇರಿದಂದಿನಿಂದ ಇಂದಿನವರೆಗೆ ಸುಮಾರು ಎಪ್ಪತ್ತು ವರ್ಷಗಳ ಅವರ ಜೀವನದಲ್ಲಿ ಅಡ್ವಾಣಿಯವರು ಈ ರೀತಿ ನಡೆದುಕೊಂಡೇ ಇಲ್ಲ. ಬಹಿರಂಗವಾಗಿ ಎಂದೂ ಪಕ್ಷಕ್ಕೆ ಇಲ್ಲವೇ ಸಂಘ ಪರಿವಾರಕ್ಕೆ ಸವಾಲು ಹಾಕದ ಅಡ್ವಾಣಿಯವರು 84ರ ಇಳಿವಯಸ್ಸಿನಲ್ಲಿ ತೋರುತ್ತಿರುವ ಬಂಡುಕೋರ ನಡವಳಿಕೆ ಈ ಕಾರಣದಿಂದಲೇ ಅಚ್ಚರಿ ಮೂಡಿಸುತ್ತದೆ.
 ಪಕ್ಷದ ಹಿತದೃಷ್ಟಿಯಿಂದ ನೋಡಿದರೆ ಇದು ಅಡ್ವಾಣಿಯವರು ರಥಯಾತ್ರೆ ಹೊರಡುವ ಸಮಯ ಅಲ್ಲ. ಇದು ಬಿಜೆಪಿಗೆ ಕಷ್ಟದ ಸಮಯ. ಕಾಡುತ್ತಿರುವುದು ಭ್ರಷ್ಟಾಚಾರ ಒಂದೇ ಅಲ್ಲ, ಅಧಿಕಾರದಲ್ಲಿರುವ ಪ್ರತಿಯೊಂದು ರಾಜ್ಯದಲ್ಲಿಯೂ ಭಾರತೀಯ ಜನತಾ ಪಕ್ಷ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ರಾಷ್ಟ್ರೀಯ ನಾಯಕತ್ವಕ್ಕಾಗಿ ನಡೆಯುತ್ತಿರುವ ಸಂಘರ್ಷ ಪಕ್ಷವನ್ನು ದುರ್ಬಲಗೊಳಿಸುವ ಮಟ್ಟಕ್ಕೆ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಹೊರಟಿರುವ ಅಡ್ವಾಣಿಯವರ ರಥಯಾತ್ರೆ ಈ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದೆಯೇ ಹೊರತು ಅದರ ಪರಿಹಾರಕ್ಕೆ ಖಂಡಿತ ನೆರವಾಗುತ್ತಿಲ್ಲ.
ಭಾರತೀಯ ಜನತಾ ಪಕ್ಷ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಭಾರಿ ಭರವಸೆ ಇಟ್ಟುಕೊಂಡಿರುವ ರಾಜ್ಯ ಗುಜರಾತ್. ಆದರೆ ಕಳೆದ ಹತ್ತುವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪಕ್ಷದೊಳಗೆ ಮತ್ತು ಹೊರಗೆ ವಿರೋಧದ ಅಲೆಯನ್ನು ಎದುರಿಸುತ್ತಿದ್ದಾರೆ.
ಮೋದಿ ಅವರ ಜನಪ್ರಿಯತೆಗೆ ಹೆದರಿ ಇಲ್ಲಿಯವರೆಗೆ ಅವರ ಉದ್ಧಟತನದ ನಡವಳಿಕೆಗಳೆಲ್ಲವನ್ನೂ ಸಹಿಸುತ್ತಾ ಬಂದ ಆರ್‌ಎಸ್‌ಎಸ್ ಈಗ ಅವರನ್ನು ನಿಯಂತ್ರಿಸಲು ಹೊರಟಿದೆ.

ಸಂಘದ ಸಲಹೆಯ ಪ್ರಕಾರವೇ ಸಂಜಯ್ ಜೋಷಿ ಎಂಬ ಮೋದಿ ಅವರ ಕಟ್ಟಾವಿರೋಧಿಯನ್ನು ಅಜ್ಞಾತವಾಸದಿಂದ ಬಿಡುಗಡೆಗೊಳಿಸಿ ನಿರ್ಣಾಯಕವಾದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಪಕ್ಷ ನೀಡಿದೆ.
ಐದು ವರ್ಷಗಳ ಹಿಂದೆ ಲೈಂಗಿಕ ಹಗರಣದ ಆರೋಪಕ್ಕೆ ಒಳಗಾಗಿ ಮೂಲೆಗೆ ತಳ್ಳಲ್ಪಟ್ಟ ಜೋಷಿ ಅವರಿಗೆ ಪ್ರಮುಖ ಜವಾಬ್ದಾರಿ ವಹಿಸಿಕೊಟ್ಟಿರುವುದು ಮೋದಿ ಅವರಿಗೆ ನೀಡಿರುವ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಇದರಿಂದ ಮೋದಿ ಎಷ್ಟೊಂದು ಅಸಮಾಧಾನಗೊಂಡಿದ್ದರೆಂದರೆ ದೆಹಲಿಯಲ್ಲಿ ನಡೆದ ಪಕ್ಷದ ಕಾರ‌್ಯಕಾರಿ ಸಮಿತಿ ಸಭೆಗೇ ಗೈರುಹಾಜರಾಗಿ ಬಿಟ್ಟರು. ಬಿಗಿಗೊಳ್ಳುತ್ತಿರುವ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕುಣಿಕೆಗಳು, ಸರ್ಕಾರಿ ಯಂತ್ರದ ದುರುಪಯೋಗದ ಆರೋಪಗಳು, ಸಾಧನೆಯ ಬಗೆಗಿನ ಅತಿರಂಜಿತ ಹೇಳಿಕೆಗಳ ಪೊಳ್ಳುತನಗಳು ಮೋದಿ ಅವರ ಜನಪ್ರಿಯತೆಯನ್ನು ಕುಂದಿಸುತ್ತಿವೆ.
ಅಡ್ವಾಣಿಯವರ ಸಹಜ ಸ್ವಭಾವದ ಪ್ರಕಾರ ಅವರು ಕಷ್ಟದಲ್ಲಿರುವ ಮೋದಿ ಅವರ ರಕ್ಷಣೆಗೆ ಧಾವಿಸಬೇಕಾಗಿತ್ತು. ಆದರೆ ಅಡ್ವಾಣಿ ಮೋದಿ ಮೇಲೆ ಎರಗಿ ಬಿದ್ದಿದ್ದಾರೆ. 21 ವರ್ಷಗಳ ಹಿಂದೆ ಅಡ್ವಾಣಿ ಅಯೋಧ್ಯೆಗೆ ಯಾತ್ರೆ ಹೊರಟಿದ್ದು ಗುಜರಾತ್ ರಾಜ್ಯದ ಸೋಮನಾಥಪುರದಿಂದ.

ಆ ಯಾತ್ರೆ ಪ್ರಾರಂಭದ ದಿನ ಅವರ ಎಡಬಲಕ್ಕಿದ್ದ ಇಬ್ಬರಲ್ಲಿ ಒಬ್ಬರು ಪ್ರಮೋದ್ ಮಹಾಜನ್, ಇನ್ನೊಬ್ಬರು ನರೇಂದ್ರ ಮೋದಿ. ಈ ಬಾರಿಯೂ ಅಲ್ಲಿಂದಲೇ ಯಾತ್ರೆ ಹೊರಡುವುದೆಂದು ನಿರ್ಧರಿಸಿದ್ದ ಅಡ್ವಾಣಿ ನಂತರ ಮನಸ್ಸು ಬದಲಾಯಿಸಿ ಬಿಹಾರದಲ್ಲಿರುವ ಜಯಪ್ರಕಾಶ್ ನಾರಾಯಣ್ ಜನ್ಮಸ್ಥಳವನ್ನು ಆರಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಕಾಲಿಡಲು ಸಾಧ್ಯವಾಗದಂತಹ ರಾಜ್ಯ ಬಿಹಾರ. ಅಲ್ಲಿರುವ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಮೋದಿಯವರ ಕಟ್ಟಾ ವಿರೋಧಿ. ಮೋದಿಯನ್ನು ದೂರ ಇಟ್ಟು ನಿತೀಶ್ ಅವರನ್ನು ಪಕ್ಕಕ್ಕಿಟ್ಟುಕೊಂಡದ್ದು ಕೇವಲ ಕಾಕತಾಳೀಯ ಇರಲಾರದು. ಈ ಮೂಲಕ ಭವಿಷ್ಯದ ರಾಜಕೀಯದ ಸೂಚನೆಯನ್ನು ಕೊಡುವ ಪ್ರಯತ್ನವನ್ನು ಅಡ್ವಾಣಿ ಮಾಡಿದ್ದಾರೆಯೇ?
ಬಿಜೆಪಿ ಅಧಿಕಾರದಲ್ಲಿರುವ ಎರಡನೇ ರಾಜ್ಯ ಮಧ್ಯಪ್ರದೇಶ. ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಉಮಾ ಭಾರತಿ ಮುಖ್ಯಮಂತ್ರಿಯಾದರೂ ವಿವಾದದ ಸುಳಿಗೆ ಸಿಕ್ಕಿ ರಾಜೀನಾಮೆ ನೀಡಬೇಕಾಯಿತು. ಅದರ ನಂತರ ಮುಖ್ಯಮಂತ್ರಿಯಾದ ಬಾಬುಲಾಲ್ ಗೌರ್ ಕೂಡಾ ಬಹಳ ದಿನ ಅಧಿಕಾರದಲ್ಲಿ ಉಳಿಯಲಿಲ್ಲ. ಆಗ ಆ ಸ್ಥಾನಕ್ಕೆ ಬಂದವರು ಒಂದು ಕಾಲದ ಉಮಾಭಾರತಿ ಶಿಷ್ಯ ಶಿವರಾಜ್‌ಸಿಂಗ್ ಚೌಹಾಣ್.
ಸ್ವಲ್ಪಕಾಲದಲ್ಲಿಯೇ ಗುರುಶಿಷ್ಯರ ಸಂಬಂಧ ಕೆಟ್ಟುಹೋಗಿದ್ದಲ್ಲದೆ ಉಮಾಭಾರತಿಯವರು ಪಕ್ಷದಿಂದಲೇ ಉಚ್ಚಾಟನೆಗೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಮಾಭಾರತಿ ಅವರ ನೇತೃತ್ವದ ಪ್ರಾದೇಶಿಕ ಪಕ್ಷದ ವಿರುದ್ಧವೇ ಸೆಣಸಿ ಚೌಹಾಣ್ ಅವರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರು.
ಮೋದಿ ಅವರಂತೆ ವಿವಾದಕ್ಕೆ ಒಡ್ಡಿಕೊಳ್ಳದೆ, ಯಡಿಯೂರಪ್ಪನವರಂತೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಆರೋಪದಲ್ಲಿಯೂ ಸಿಕ್ಕಿಹಾಕಿಕೊಳ್ಳದೆ ತನ್ನ ಪಾಡಿಗೆ ತಣ್ಣಗೆ ಕೆಲಸ ಮಾಡುತ್ತಿರುವವರು ಶಿವರಾಜ್‌ಸಿಂಗ್ ಚೌಹಾಣ್.
ಈಗ ಇದ್ದಕ್ಕಿದ್ದಂತೆ ಉಮಾಭಾರತಿ ಮರಳಿ ಪಕ್ಷ ಸೇರಿದ್ದಲ್ಲದೆ ಅಡ್ವಾಣಿಯವರ ರಥಯಾತ್ರೆಯ ಪ್ರಮುಖ ಸಾರಥಿಯಾಗಿದ್ದಾರೆ. ದೂರವೇ ಇಟ್ಟಿದ್ದ ಉಮಾಭಾರತಿಯನ್ನು ಪಕ್ಕಕ್ಕೆ ಕರೆದು ಆಕೆ ತನ್ನ ಎರಡನೇ ಮಗಳು ಎಂದು ಹೇಳುವಷ್ಟು ಮಮಕಾರವನ್ನು ಅಡ್ವಾಣಿ ತೋರಿದ್ದಾರೆ.

ಉಮಾಭಾರತಿ ಕುಣಿದಾಡಲು ಇಷ್ಟು ಸಾಕು. ರಥಯಾತ್ರೆ ಮುಗಿದ ನಂತರ ರಥದಿಂದ ಇಳಿದು ಅವರು ನೇರವಾಗಿ ಹೋಗುವುದು ಮಧ್ಯಪ್ರದೇಶಕ್ಕೆ. ಅಲ್ಲಿನ ಮುಖ್ಯಮಂತ್ರಿ ಕುರ್ಚಿ ತನ್ನದೇ ಎಂದು ಹೇಳಿ ಚೌಹಾಣ್ ಅವರನ್ನು ಕೆಳಗಿಳಿಯಲು ಹೇಳಿದರೂ ಅಚ್ಚರಿ ಇಲ್ಲ. ಆ ಹಂತಕ್ಕೆ ಹೋಗದಿದ್ದರೂ ಉಮಾಭಾರತಿಯವರ ಈ ಹೊಸ ಪಾತ್ರ ಚೌಹಾಣ್ ಅವರನ್ನು ಅಭದ್ರಗೊಳಿಸಿರುವುದು ನಿಜ.

ಕೇಂದ್ರದಲ್ಲಿ  ಪಕ್ಷ ಅಧಿಕಾರಕ್ಕೆ ಬರುವುದು ಖಾತರಿ ಇಲ್ಲದಿರುವ ಈ ಸಂದರ್ಭದಲ್ಲಿ ಉಮಾಭಾರತಿ ಮಧ್ಯಪ್ರದೇಶದ ಚುನಾವಣಾ ಅಖಾಡಕ್ಕೆ ಇಳಿಯಬಹುದು. ಕಷ್ಟಕಾಲದಲ್ಲಿ ಪಕ್ಷವನ್ನು ಸಂಭಾಳಿಸಿಕೊಂಡು ಬಂದ ಚೌಹಾಣ್‌ಗೆ ರಥಯಾತ್ರೆಯ ಸಂದರ್ಭದಲ್ಲಿ ಉಮಾಭಾರತಿಯವರನ್ನು ಕೊಡುಗೆಯಾಗಿ ನೀಡುವ ಮೂಲಕ ಅಡ್ವಾಣಿಯವರು ಏನು ಹೇಳಲು ಹೊರಟಿದ್ದಾರೆ?
ಬಿಜೆಪಿ ಅಧಿಕಾರದಲ್ಲಿರುವ ಮೂರನೇ ರಾಜ್ಯ ಕರ್ನಾಟಕ. ಈ ರಾಜ್ಯದಲ್ಲಿ ಜೈಲುಯಾತ್ರೆಗೆ ಹೊರಟವರ ಸಾಲನ್ನು ನೋಡಿದರೆ ಅವರ ಪಕ್ಷದಲ್ಲಿ ಅಳಿದುಳಿದ ಪ್ರಾಮಾಣಿಕರು ಕೂಡಾ ಹೊರಗೆ ಮುಖ ಎತ್ತಿ ಅಡ್ಡಾಡಲಾಗದ ವಾತಾವರಣ ಇದೆ. ಈ ಪರಿಸ್ಥಿತಿಯಲ್ಲಿ ರಥಯಾತ್ರೆ ಹೊರಡುವುದೆಂದರೆ ಜನರನ್ನು ಹುಡುಕಿಕೊಂಡು ಹೋಗಿ ಮುಖಾಮುಖಿಯಾಗಿ ಅವರು ಎತ್ತುವ ಪ್ರಶ್ನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದೆಂದೇ ಅರ್ಥ.

ಕರ್ನಾಟಕದ ಬಿಜೆಪಿ ನಾಯಕರ ಭ್ರಷ್ಟಾಚಾರದ ಚರ್ಚೆ ದೇಶವ್ಯಾಪಿ ನಡೆಯುತ್ತಿರುವುದೇ ಅಡ್ವಾಣಿಯವರ ರಥಯಾತ್ರೆಯಿಂದ ಎಂದಾಗಿದೆ. ಭ್ರಷ್ಟಾಚಾರದ ವಿರುದ್ಧ ಜನ ಮಾತನಾಡುವಾಗ ತಮ್ಮವರ ಹೆಸರನ್ನೇ ಮೊದಲು ಚರ್ಚೆಯ ಮೇಜಿಗೆ ಎಳೆದುಕೊಳ್ಳುತ್ತಾರೆ ಎಂದು ಅವರಿಗೆ ಗೊತ್ತಾಗಲಿಲ್ಲವೇ? ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಬಹುದೆಂದು ಅಡ್ವಾಣಿಯವರಂತಹ ಸೂಕ್ಷ್ಮಜ್ಞರು ಊಹಿಸಿರಲಿಲ್ಲವೇ? ಇಲ್ಲ, ಇಂತಹದ್ದೊಂದು ಚರ್ಚೆ ನಡೆಯಬೇಕೆಂಬುದೇ ಅಡ್ವಾಣಿ ಅವರ ಉದ್ದೇಶವೇ?
ಪಕ್ಷದ ಮೇಲಿರುವ ದೆಹಲಿ ನಿಯಂತ್ರಣವನ್ನು ಸಡಿಲುಗೊಳಿಸಲಿಕ್ಕಾಗಿಯೇ ಆರ್‌ಎಸ್‌ಎಸ್ ಮಹಾರಾಷ್ಟ್ರದ ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದು. ಇದನ್ನು ವಿರೋಧಿಸಿದವರು `ಡೆಲ್ಲಿ-4~ ಎಂದೇ ಕರೆಯಲಾಗುವ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಅನಂತಕುಮಾರ್.
ಇವರೆಲ್ಲರನ್ನು ಒಂದು ಕಾಲದಲ್ಲಿ ಬೆಳೆಸಿದವರು ಅಡ್ವಾಣಿ. ಆದರೆ ಅವರನ್ನು ಪಕ್ಕಕ್ಕೆ ಸರಿಸುವ ಮೂಲಕ ಆರ್‌ಎಸ್‌ಎಸ್ ಅಡ್ವಾಣಿ ಯುಗ ಮುಗಿಯಿತು ಎನ್ನುವ ಸಂದೇಶವನ್ನು ನೀಡಿತ್ತು.
ಅಡ್ವಾಣಿಯವರು ರಥಯಾತ್ರೆ ಪ್ರಾರಂಭಿಸಿದಾಗ ಬಿಜೆಪಿ ಆಳ್ವಿಕೆಯ ರಾಜ್ಯಗಳ ಯಾವ ಮುಖ್ಯಮಂತ್ರಿಯೂ ಅಲ್ಲಿರಲಿಲ್ಲ.  ಮುರಳಿ ಮನೋಹರ ಜೋಷಿ, ಯಶವಂತ್‌ಸಿನ್ಹಾ, ಜಸ್ವಂತ್ ಸಿಂಗ್ ಮೊದಲಾದ ಹಿರಿಯರ ನಾಯಕರೂ ಇರಲಿಲ್ಲ. ಅಲ್ಲಿದ್ದವರು ನಿತಿನ್ ಗಡ್ಕರಿ ಅವರನ್ನು ಈಗಲೂ ಒಳಗಿಂದೊಳಗೆ ವಿರೊಧಿಸುತ್ತಿರುವ ಮತ್ತು ಆರ್‌ಎಸ್‌ಎಸ್ ಉದ್ದೇಶಪೂರ್ವಕವಾಗಿ ದೂರ ಇಟ್ಟಿರುವ  `ಡೆಲ್ಲಿ-4~ನ ಸದಸ್ಯರು.
ಅಡ್ವಾಣಿಯವರ ಹಿಂದಿನ ಐದೂ ಯಾತ್ರೆಗಳು ಭಾರತೀಯ ಜನತಾ ಪಕ್ಷದ ಒಮ್ಮತದ ತೀರ್ಮಾನವಾಗಿದ್ದವು. ಅದಕ್ಕೆ ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಂತೆ ಸಂಘ ಪರಿವಾರಕ್ಕೆ ಸೇರಿರುವ ಎಲ್ಲ ಸಂಘಟನೆಗಳ ಬೆಂಬಲವೂ ಇತ್ತು.

ಅಡ್ವಾಣಿಯವರ ಮೊದಲ ರಥಯಾತ್ರೆ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಸಾರಿದ ಬಿಜೆಪಿಯ ಪಾಲಂಪುರ ಕಾರ‌್ಯಕಾರಿಣಿಯ ಐತಿಹಾಸಿಕ ಗೊತ್ತುವಳಿಯಿಂದ ಪ್ರೇರಿತವಾಗಿತ್ತು. ಆದರೆ ಈಗಿನ ರಥಯಾತ್ರೆಯದ್ದು ಅಡ್ವಾಣಿಯವರ ಸ್ವಯಂಘೋಷಣೆ.
ಲೋಕಸಭೆಯಲ್ಲಿ ಅಡ್ವಾಣಿಯವರು ಇದ್ದಕ್ಕಿದ್ದಂತೆ `ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಗೆ ಯಾತ್ರೆ ಹೊರಡಲಿದ್ದೇನೆ~ ಎಂದು ಘೋಷಿಸಿದಾಗ ಅಚ್ಚರಿಪಟ್ಟವರು ವಿರೋಧಿ ಪಕ್ಷಗಳಲ್ಲ, ಅದು ಸಂಘ ಪರಿವಾರ.
ತನ್ನ ವಿರೋಧವನ್ನು ಮುಚ್ಚಿಟ್ಟುಕೊಳ್ಳದ ಆರ್‌ಎಸ್‌ಎಸ್ ನಾಯಕರು ಅಡ್ವಾಣಿ ಅವರನ್ನು ಖುದ್ದಾಗಿ ನಾಗಪುರಕ್ಕೆ ಕರೆಸಿಕೊಂಡು ರಥಯಾತ್ರೆಯನ್ನು ಕೈಬಿಡುವಂತೆ ಹೇಳಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಾರದೆಂಬ ಷರತ್ತು ಹಾಕಿ ಒಪ್ಪಿಗೆ ನೀಡಿದ್ದಾರೆ.
ಆರ್‌ಎಸ್‌ಎಸ್ ಇಚ್ಛೆಗೆ ವಿರುದ್ಧವಾಗಿ ಇಂತಹದ್ದೊಂದು ಪಕ್ಷದ ಕಾರ್ಯಕ್ರಮವನ್ನು ಅಡ್ವಾಣಿಯವರು ಹಮ್ಮಿಕೊಂಡಿದ್ದು ಅವರ ರಾಜಕೀಯ ಜೀವನದಲ್ಲಿಯೇ ಮೊದಲ ಬಾರಿ ಇರಬಹುದು. ಜಿನ್ನಾ ಪ್ರಕರಣದಲ್ಲಿಯೂ ಕೊನೆಗೆ ಅಡ್ವಾಣಿ ಆರ್‌ಎಸ್‌ಎಸ್ ಆದೇಶಕ್ಕೆ ಶರಣಾಗಿ ತಲೆದಂಡ ಕೊಟ್ಟಿದ್ದರು. ಆದರೆ ಯಾಕೋ ಈ ಬಾರಿ ತಿರುಗಿಬಿದ್ದಿದ್ದಾರೆ.
ದೇಶದ ಜನ ಅಸ್ತಿತ್ವದಲ್ಲಿರುವ ಎಲ್ಲ ಪಕ್ಷಗಳ ಬಗ್ಗೆ ಭ್ರಮನಿರಸನಕ್ಕೀಡಾಗಿರುವ ಹೊತ್ತಿನಲ್ಲಿ ರಾಜಕೀಯ ಬಂಡಾಯಗಳಿಗೆ ನೆಲ ಹದವಾಗಿದೆ. ಸ್ವಲ್ಪ ಇತಿಹಾಸವನ್ನು ಕೆದಕಿದರೆ ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕದ ಕೊನೆಭಾಗದಲ್ಲಿಯೂ ಹೆಚ್ಚುಕಡಿಮೆ ಇಂತಹದ್ದೇ ಪರಿಸ್ಥಿತಿ ಇದ್ದುದನ್ನು ಕಾಣಬಹುದು.

ಅದನ್ನು ಬಳಸಿೊಂಡೇ ಜನತಾ, ಸಂಯುಕ್ತರಂಗ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗಗಳು ಅಧಿಕಾರಕ್ಕೆ ಬಂದದ್ದು. ಎಲ್ಲ ಪಕ್ಷಗಳಲ್ಲಿಯೂ ನಡೆದ ಸಣ್ಣಸಣ್ಣ ಬಂಡಾಯಗಳ ಮೂಲಕವೇ ಹೊರಬಂದ ನಾಯಕರು ಒಟ್ಟಾಗಿ ಆಗಿನ ಪರ್ಯಾಯ ರಾಜಕೀಯವನ್ನು ರೂಪಿಸಿದ್ದರು;
ಸಕ್ರಿಯವಾಗಿದ್ದ ಯಾವುದೇ ಒಂದು ಪಕ್ಷ ಪರ್ಯಾಯವಾಗಿದ್ದಲ್ಲ. ಅಣ್ಣಾ ಹಜಾರೆ ಚಳವಳಿ ಅಂತಿಮವಾಗಿ ಇಂತಹದ್ದೊಂದು ಪರ್ಯಾಯ ರಾಜಕೀಯ ರೂಪುಗೊಳ್ಳಲು ನೆರವಾಗಬಹುದು ಎಂಬ ನಿರೀಕ್ಷೆ ಅದರ ನಾಯಕರ ಬಾಲಿಶ ನಡವಳಿಕೆಯಿಂದಾಗಿ ಹುಸಿಯಾಗತೊಡಗಿದೆ.
ಆದ್ದರಿಂದ ಅಡ್ವಾಣಿಯವರ ಬಂಡಾಯಕ್ಕೆ ದೇಶದ ಸಮಕಾಲೀನ ರಾಜಕೀಯದಲ್ಲಿ ಅವಕಾಶ ಖಂಡಿತ ಇದೆ. ಅಂತಹ ದಿಟ್ಟತನವನ್ನು ತೋರಿದರೆ ಅವರ ಮೊದಲ ರಥಯಾತ್ರೆಯ ಪರಿಣಾಮವನ್ನು ಜನ ಮರೆತುಬಿಡಬಹುದು. ಆ ಬಗ್ಗೆ ಈಗಾಗಲೇ ಅವರು ವಿಷಾದ ವ್ಯಕ್ತಪಡಿಸಿರುವುದರಿಂದ ಕ್ಷಮಿಸುವುದು ಕಷ್ಟವಾಗಲಾರದು.
ಆದರೆ ತನ್ನ ಬಂಡುಕೋರತನವನ್ನು ಒಂದು ತಾರ್ಕಿಕ ಅಂತ್ಯದ ಕಡೆಗೆ ಕೊಂಡೊಯ್ಯುವ ಧೈರ್ಯ ಅಡ್ವಾಣಿಯವರಲ್ಲಿದೆಯೇ ಎನ್ನುವುದು ಬಹುದೊಡ್ಡ ಪ್ರಶ್ನೆ. ಅವರ ಮುಂದೆ ಇರುವುದು ಎರಡೇ ಎರಡು ಆಯ್ಕೆ.

ಒಂದೋ ಕಣ್ಣು-ಕಿವಿ-ಬಾಯಿ ಎಲ್ಲವನ್ನೂ ಮುಚ್ಚಿಕೊಂಡು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಸದಸ್ಯನಾಗಿ ರಾಜಕೀಯ ನಿವೃತ್ತಿ ಜೀವನವನ್ನು ಆರಾಮವಾಗಿ ಕಳೆಯುವುದು, ಇಲ್ಲವೇ, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನಾಯಕತ್ವ ನೀಡಿ ಒಂದಷ್ಟು ಹಳೆಯ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದು.
`ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ~ ಎಂದು ಅಡ್ವಾಣಿಯವರು ದೇಶಕ್ಕೆ ಒಂದಲ್ಲ, ಮೂರು ಸುತ್ತು ಯಾತ್ರೆ ನಡೆಸಿದರೂ ಅದೊಂದು ಆರೋಗ್ಯ ಸುಧಾರಣೆಯ ವ್ಯಾಯಾಮವಾಗಬಹುದೇ ಹೊರತು ಅದಂದ ಯಾವ ಉದ್ದೇಶವೂ ಈಡೇರಲಾರದು.

Monday, October 17, 2011

ಯಡಿಯೂರಪ್ಪನವರೆ, ಹೀಗೇಕೆ ಮಾಡಿಕೊಂಡಿರಿ?

ಊಟ, ನಿದ್ದೆ, ಆರೋಗ್ಯವನ್ನು ಮರೆತು ಮಳೆ, ಬಿಸಿಲು, ಗಾಳಿಯೆನ್ನದೆ ಊರೂರು ಸುತ್ತಾಡಿ ಚಳವಳಿ, ಪ್ರತಿಭಟನೆ, ಪಾದಯಾತ್ರೆಗಳ ಮೂಲಕ ದಶಕಗಳ ಕಾಲ ರಾಜಕೀಯ ಹೋರಾಟ ನಡೆಸುತ್ತಾ ಬಂದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದೊಡನೆ ಭ್ರಷ್ಟಾಚಾರದಲ್ಲಿ ಮುಳುಗಿ `ರಾಜಕೀಯ ಹರಾಕಿರಿ~ ಮಾಡಿಕೊಳ್ಳುವುದು ಯಾಕೆ?

ಕೇವಲ ದುಡ್ಡಿನಿಂದ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಂಡು ಹೋರಾಟದ ಮಾರ್ಗ ಹಿಡಿದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದ ನಂತರ ದುಡ್ಡಿಲ್ಲದೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿದುಕೊಳ್ಳುವಷ್ಟು ಮೂರ್ಖನಾಗುವುದು ಹೇಗೆ?
ಮುಕ್ಕಾಲು ಪಾಲು ಆಯುಷ್ಯವನ್ನು ಐಷಾರಾಮಿ ಬದುಕು, ಅಧಿಕಾರ ಯಾವುದೂ ಇಲ್ಲದೆ ಕಳೆದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದ ಮರುಕ್ಷಣವೇ ಇವುಗಳಿಲ್ಲದೆ ಬದುಕಲಾರೆ ಎಂದು ತಿಳಿದುಕೊಂಡು ಉಳಿದ ಆಯುಷ್ಯವನ್ನು ನರಕ ಮಾಡಿಕೊಳ್ಳುವುದು ಯಾಕೆ?
ಹೋರಾಟದ ದಿನಗಳಲ್ಲಿ ಜಾತಿವಾದಿಯಾಗದೆ ಗಳಿಸಿದ ಜನಪ್ರಿಯತೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾತಿವಾದಿಯಾಗಿ ಕಳೆದುಕೊಳ್ಳುವುದು ಯಾಕೆ?
ಅನಿಶ್ಚಿತತೆಗೆ ಮತ್ತೊಂದು ಹೆಸರಾಗಿರುವ ರಾಜಕಾರಣದ ಜತೆ 25-30ವರ್ಷ ಸಂಸಾರ ಮಾಡಿದ ಅನುಭವದ ನಂತರವೂ. ತನ್ನ ಆಯುಷ್ಯದಲ್ಲಿ ಅನುಭವಿಸಲಾಗದಷ್ಟು ಸಂಪತ್ತನ್ನು ಗಳಿಸಲು ಹೊರಟು ಜೈಲು ಸೇರುವ ಮೂರ್ಖತನ ಯಾಕೆ?
ಜೈಲಿಗೆ ಹೋಗಿ ಕೂತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ನಂತರ ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಪಕ್ಷದ ಅಧ್ಯಕ್ಷರಾಗಿ, ವಿರೋಧಪಕ್ಷದ ನಾಯಕರಾಗಿ  ಸುಮಾರು 36 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ.
ಆ ದಿನಗಳಲ್ಲಿ ಒಂದು ಕ್ಷಣ ಅವರು ಸುಮ್ಮನೆ ಕೂತವರಲ್ಲ. ಪ್ರತಿಭಟನೆ, ಚಳವಳಿ,  ಜಾಥಾ, ಭಾಷಣ, ಘೋಷಣೆ ಎಂದು ಮೂರುಹೊತ್ತು ಆಡಳಿತ ಪಕ್ಷದ ಜತೆ ನಿತ್ಯ ಗುದ್ದಾಡಿದವರು. ರಾಜಕಾರಣಿಗಳ ವಿರುದ್ಧ ಕೇಳಿಬರುವ ಸಾಮಾನ್ಯವಾದ ಸಣ್ಣಪುಟ್ಟ ಆರೋಪಗಳನ್ನು ಬಿಟ್ಟರೆ ಅವರೊಬ್ಬ ಭ್ರಷ್ಟ ಎನ್ನುವ ಕಳಂಕ ಆಗ ಅವರಿಗೆ ಅಂಟಿರಲಿಲ್ಲ.

ಆದರೆ ಇಷ್ಟೆಲ್ಲ ಕಷ್ಟಪಟ್ಟು ಮುಖ್ಯಮಂತ್ರಿಯಾದ ಅವರು ಮೂರೇ ವರ್ಷಗಳ ಅವಧಿಯಲ್ಲಿ ಕರ್ನಾಟಕ ಕಂಡ ಅತ್ಯಂತ ಭ್ರಷ್ಟಮುಖ್ಯಮಂತ್ರಿ ಎಂಬ ಆರೋಪ ಹೊತ್ತುಕೊಂಡರು. ಈಗ ಜೈಲು ಸೇರಿದ್ದಾರೆ. ಯಡಿಯೂರಪ್ಪನವರು ಯಾಕೆ ಹೀಗೆ ಮಾಡಿಕೊಂಡರು?
ಮುಂದಿನ ಹತ್ತಿಪ್ಪತ್ತು ವರ್ಷಗಳ ನಂತರ ಮುಖ್ಯಮಂತ್ರಿಯೋ, ಸಚಿವನೋ ಜೈಲು ಸೇರಿದರೆ ಅವರಿಗೆ ಈ ಪ್ರಶ್ನೆಗಳನ್ನು ಕೇಳಲಾಗದು. ಯಾಕೆಂದರೆ ಹಿಂದಿನ ಕಾಲದ `ಹೋರಾಟದ ರಾಜಕಾರಣ~ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಅಲ್ಲ.
ಈ ಯುವರಾಜಕಾರಣಿಗಳಲ್ಲಿ ಹೆಚ್ಚಿನವರು ರಾಜಕೀಯದ ಹೆದ್ದಾರಿ ಸೇರಲು ಆಗಲೇ ಸುಲಭದ ಅಡ್ಡದಾರಿಗಳನ್ನು ಹಿಡಿದಿದ್ದಾರೆ, ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ.
ಯಡಿಯೂರಪ್ಪನವರ ವಿರುದ್ಧ ಅವರ ಜೀವನದ 36 ವರ್ಷಗಳ ನಂತರ ಕೇಳಿಬಂದ ಆರೋಪಗಳೆಲ್ಲ ಅಧಿಕಾರ ಹಿಡಿಯವ ಮೊದಲೇ ಈ ಯುವ ರಾಜಕಾರಣಿಗಳ ಬಗ್ಗೆ ಕೇಳಿಬರುತ್ತಿವೆ. ಬೇರೆ ಉದಾಹರಣೆಗಳು ಯಾಕೆ ಬೇಕು?
ಯಡಿಯೂರಪ್ಪನವರ ಮಕ್ಕಳೇ ಇದ್ದಾರಲ್ಲ, ಬೇಕಿದ್ದರೆ ದೇವೇಗೌಡರ ಮಕ್ಕಳನ್ನೂ ಸೇರಿಸಿಕೊಳ್ಳಬಹುದು.ಹೋರಾಟದ ರಾಜಕಾರಣದ ಮೂಲಕವೇ ನಾಯಕರಾಗಿ ಬೆಳೆದು ಈಗಲೂ ನಮ್ಮ ನಡುವೆ ಉಳಿದಿರುವವರು ಮೂವರು ರಾಜಕಾರಣಿಗಳು ಮಾತ್ರ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ.
ಈ ಮೂವರು ನಾಯಕರಿಗೆ ಅನೇಕ ಸಾಮ್ಯತೆಗಳಿವೆ. ದೀರ್ಘಕಾಲದ ರಾಜಕೀಯ ಹೋರಾಟದ ನಂತರ ಈ ಮೂವರೂ ಅಧಿಕಾರಕ್ಕೆ ಬಂದರೂ ಅದನ್ನು ಅನುಭವಿಸಿದ್ದು ಮಾತ್ರ ಅಲ್ಪ ಕಾಲ. ಮೂವರೂ ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದವರು.
ಇವರ ಅಪ್ಪ, ಅಜ್ಜ, ಮುತ್ತಾತ-ಯಾರಿಗೂ ರಾಜಕಾರಣದ ಜತೆ ದೂರದ ಸಂಬಂಧವೂ ಇರಲಿಲ್ಲ. ಈ ಮೂವರ ರಾಜಕೀಯ ಯಶಸ್ಸಿನಲ್ಲಿ ಜಾತಿಯ ಪಾತ್ರ ಇದೆ ಎನ್ನುವುದು ನಿಜ.
ಆದರೆ ಇದೇ ಕಾರಣಕ್ಕೆ ಇವರು ನಡೆಸಿಕೊಂಡು ಬಂದ ರಾಜಕೀಯ ಹೋರಾಟವನ್ನು ತಳ್ಳಿಹಾಕಲಾಗದು. ಒಕ್ಕಲಿಗರು, ಲಿಂಗಾಯತರು, ಈಡಿಗರು ತಮ್ಮ ತಮ್ಮ ಜಾತಿ ನಾಯಕರಾಗಿ ಇವರನ್ನೇ ಯಾಕೆ ಆರಿಸಿದರು ಎನ್ನುವುದನ್ನು ಕೂಡಾ ನೋಡಬೇಕಾಗುತ್ತದೆ.
ಆ ಜಾತಿಗಳಲ್ಲಿ ಬೇರೆ ನಾಯಕರಿರಲಿಲ್ಲವೇ? ಜಾತಿ ರಾಜಕಾರಣದ ಒಳಿತು-ಕೆಡುಕಗಳ ವಿಶ್ಲೇಷಣೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಬಹಳ ಸೂಕ್ಷ್ಮವಾಗಿ ರಾಜಕಾರಣ ಗಮನಿಸುವ ಸಮುದಾಯ ಒಬ್ಬ ವ್ಯಕ್ತಿಯಲ್ಲಿರುವ ನಾಯಕತ್ವದ ಲಕ್ಷಣಗಳ ಆಧಾರದಲ್ಲಿಯೇ ಆತನನ್ನು ತನ್ನ ನಾಯಕನಾಗಿ ಆರಿಸಿಕೊಳ್ಳುತ್ತದೆ.
ಇದರಿಂದಾಗಿಯೇ ಜಾತಿಯವರು ಗುರುತಿಸುವ ಮಟ್ಟಕ್ಕೆ ಬರುವವರೆಗೆ ಆತ ಸ್ವಂತ ಶಕ್ತಿಯಿಂದಲೇ ಬೆಳೆಯಬೇಕಾಗುತ್ತದೆ. ಯಡಿಯೂರಪ್ಪನವರನ್ನು ಲಿಂಗಾಯತ ಸಮುದಾಯ ಬೆಂಬಲಿಸುತ್ತಿರುವುದು ನಿಜ.
ಆದರೆ ಲಿಂಗಾಯತ ನಾಯಕರಾಗಿಯೇ ಅವರು ರಾಜಕೀಯ ಪ್ರಾರಂಭಿಸಿದ್ದಲ್ಲ ಎನ್ನುವುದು ಗಮನಾರ್ಹ. ಅವರಿಗೆ ಲಿಂಗಾಯತ ಬೆಂಬಲ ಇಷ್ಟೊಂದು ಆಕ್ರಮಣಕಾರಿ ರೂಪದಲ್ಲಿ ವ್ಯಕ್ತವಾಗಿದ್ದು ಇತ್ತೀಚಿನ ವರ್ಷಗಳಲ್ಲಿ. ಮುಖ್ಯವಾಗಿ ಎಚ್.ಡಿ.ಕುಮಾರಸ್ವಾಮಿಯವರ `ವಚನ ಭ್ರಷ್ಟತೆ~ಯ ಪ್ರಕರಣದ ನಂತರ.
ಇನ್ನು ಸ್ವಲ್ಪ ಹಿಂದಕ್ಕೆ ಹೋಗುವುದಾದರೆ ಲಿಂಗಾಯತ ಸಮುದಾಯವನ್ನು ತನ್ನತ್ತ ಸೆಳೆಯಬೇಕೆಂಬ ಕಾರ‌್ಯತಂತ್ರವನ್ನು ಬಿಜೆಪಿ ಹೂಡಿದ ನಂತರ. ತನ್ನ ರಾಜಕೀಯ ಜೀವನವನ್ನು ರೈತರು,ಕೂಲಿಕಾರ್ಮಿಕರು, ಜೀತದಾಳುಗಳ ಪರ ಹೋರಾಟದ ಮೂಲಕ ಪ್ರಾರಂಭಿಸಿದ್ದ ಯಡಿಯೂರಪ್ಪ ಹೊಸ ಬೆಳವಣಿಗೆಯಿಂದಾಗಿ ಕ್ರಮೇಣ ಜಾತಿಯ ಸುಳಿಗೆ ಸಿಕ್ಕಿ ಅದಕ್ಕೆ ಶರಣಾಗಿಬಿಟ್ಟರು.
ಮಠಗಳ ಅಸ್ತಿತ್ವದಿಂದಾಗಿ ಉಳಿದ ಜಾತಿಗಳಿಗಿಂತ ಹೆಚ್ಚು ಸಂಘಟಿತ ಮತ್ತು ವ್ಯಾಪಕವಾದ ಸಾಂಸ್ಥಿಕ ರೂಪ ಲಿಂಗಾಯತ ಜಾತಿಗೆ ಇರುವುದರಿಂದ ಬೇಗ ಆ ಜಾತಿಯ ರಾಜಕೀಯ ನಾಯಕರು ಅದರ ಹಿಡಿತಕ್ಕೆ ಬಂದುಬಿಡುತ್ತಾರೆ. ಯಾಕೆಂದರೆ ಅದರಿಂದ ಇಬ್ಬರಿಗೂ ಲಾಭ ಇದೆ. 
ಬೀದಿಗೊಬ್ಬ ಲೋಕಪಾಲರನ್ನು ನೇಮಿಸಿದರೂ, ಮನೆಗೊಬ್ಬರಂತೆ ಸಮಾಜ ಸುಧಾರಕರು ಹುಟ್ಟಿದರೂ ಸದ್ಯದ ರಾಜಕಾರಣ ಹಣ ಮತ್ತು ಜಾತಿಯ ನಿಯಂತ್ರಣದಿಂದ ಸಂಪೂರ್ಣ ಬಿಡುಗಡೆ ಪಡೆಯುತ್ತದೆ ಎಂದು ನಿರೀಕ್ಷಿಸಲಾಗದು.
ಯಡಿಯೂರಪ್ಪನವರ ಸಮಸ್ಯೆ ಏನೆಂದರೆ ಅನಾಯಾಸವಾಗಿ ಒದಗಿಬಂದ ಜಾತಿ ಬೆಂಬಲವೂ ಅವರಲ್ಲಿ ಸುರಕ್ಷತೆಯ ಭಾವ ಮೂಡಿಸದಿರುವುದು. ಹೆಚ್ಚು ದುಡ್ಡಿಲ್ಲದೆ ಮಾಡಿದ ಹಳೆಯ ರಾಜಕೀಯ ಜೀವನದ ಅನುಭವವನ್ನು ಅವರು ಮರೆತೇ ಬಿಟ್ಟರು.
ಒಂದು ಸಾಮಾನ್ಯ ಅಕ್ಕಿಗಿರಣಿಯಲ್ಲಿ ಕಾರಕೂನನಾಗಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ರಾಜಕೀಯದಲ್ಲಿ ಬೆಳೆದದ್ದು ಕೇವಲ ಹಣದ ಬಲದಿಂದ ಖಂಡಿತ ಅಲ್ಲ. ಆದರೆ ಮುಖ್ಯಮಂತ್ರಿಯಾದ ತಕ್ಷಣ ದುಡ್ಡಿಲ್ಲದೆ ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯಲಾರೆ ಎಂದು ಅವರು ವಿಲವಿಲನೆ ಒದ್ದಾಡಿಬಿಟ್ಟರು.
ಆಗ ಅವರಿಗೆ ಜತೆಯಾದವರು ಬಳ್ಳಾರಿಯ ಗಣಿಲೂಟಿಕೋರರು. ಪ್ರಾರಂಭದ ಹಂತದಲ್ಲಿ ತಂದುಕೊಟ್ಟ ಗೆಲುವಿನಿಂದಾಗಿ (ಆಪರೇಷನ್ ಕಮಲ) ಈ ಸಂಬಂಧ ಬಲಗೊಳ್ಳುತ್ತಾ ಹೋಯಿತು. ಸ್ನೇಹಿತರಂತೆ ಸಮೀಪ ಬಂದ ಗಣಿ ಉದ್ಯಮಿಗಳು ಯಡಿಯೂರಪ್ಪನವರಿಗೆ  ಕ್ರಮೇಣ ತಮಗೆ ಪೈಪೋಟಿ ನೀಡುವವರಂತೆ, ಕೊನೆಗೆ ರಾಜಕೀಯ ಶತ್ರುಗಳಂತೆ ಕಾಣಿಸತೊಡಗಿದರು.
ಅವರಿಗೆ ಕಂಡ ಕೊನೆಯ ರೂಪವೇ ನಿಜವಾದುದು. ಇದಾದ ನಂತರವೂ ಯಡಿಯೂರಪ್ಪನವರು ಹಣಬಲದ ರಾಜಕೀಯಕ್ಕೆ ವಿರುದ್ಧ ವಾಗಿ ಜನಬಲದ ರಾಜಕಾರಣ ಮಾಡಲು ಹೋಗದೆ ಗಣಿಲೂಟಿಕೋರರನ್ನೇ ಮಾದರಿಯಾಗಿ ಸ್ವೀಕರಿಸಿದರು.
ಕಾನೂನು, ನೀತಿ-ನಿಯಮಾವಳಿಗಳನ್ನು ಉಲ್ಲಂಘಿಸಿ ಯಡಿಯೂರಪ್ಪ ಮತ್ತು ಕುಟುಂಬ ನಡೆಸಿದ್ದಾರೆನ್ನಲಾದ ಎಲ್ಲ ಹಗರಣಗಳ ವಿನ್ಯಾಸ ಅದೇ ಬಳ್ಳಾರಿ ಮಾದರಿಯದ್ದು.
ತರಕಾರಿ ಮಾರುವವರಿಂದ ಹಿಡಿದು ವಿಮಾನ ಮಾರುವವನವರೆಗೆ ಎಲ್ಲರೂ ನಡೆಸುವುದು ವ್ಯಾಪಾರ, ಸಮಾಜ ಸೇವೆ ಅಲ್ಲ. ರಾಜಕಾರಣ ಕೂಡಾ ಅವರಿಗೆ ವ್ಯಾಪಾರವೃದ್ಧಿಯ ಇನ್ನೊಂದು ಮಾರ್ಗ ಮಾತ್ರ. ಈ ಸರಳ ಸತ್ಯವನ್ನು ಅರಿಯದ ಯಡಿಯೂರಪ್ಪ ಆಗಲೇ ಹುಲಿ ಮೇಲೆ ಸವಾರಿ ಹೊರಟಾಗಿತ್ತು, ಕೆಳಗಿಳಿಯುವಂತಿರಲಿಲ್ಲ.

ಅದು ಹೊತ್ತುಕೊಂಡು ಹೋದಲ್ಲಿಗೆ ಹೋದರು. ಕೊನೆಗೆ ಅವರಂತೆ ಇವರೂ ಜೈಲು ಸೇರಿದ್ದಾರೆ. ಯಡಿಯೂರಪ್ಪನವರೊಬ್ಬರೇ ರಾಜ್ಯ ಕಂಡ ಜಾತಿವಾದಿ ಮತ್ತು ಭ್ರಷ್ಟ ಮುಖ್ಯಮಂತ್ರಿಯೆಂದು ಈಗಲೇ ಅಂತಿಮ ನಿರ್ಧಾರಕ್ಕೆ ಬರಲಾಗದು.

ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಈವರೆಗೆ ಕೂತವರಲ್ಲಿ ಯಾರೂ ಇಂತಹ ಆರೋಪಗಳಿಂದ ಮುಕ್ತರಾಗಿಲ್ಲ. ಉಳಿದವರ ಭ್ರಷ್ಟಾಚಾರಕ್ಕೆ ಪುರಾವೆಗಳು ಸಿಕ್ಕಿಲ್ಲ ಅಷ್ಟೆ, ಅದಕ್ಕೆ ಅವರು ನಿರಪರಾಧಿಗಳು.
ಆದರೆ ಯಡಿಯೂರಪ್ಪನವರಷ್ಟು ದಡ್ಡತನದಿಂದ ಬಹಿರಂಗವಾಗಿ ಜಾತಿವಾದ ಮಾಡಿದವರು ಮತ್ತು ಮೇಲ್ನೋಟದಲ್ಲಿಯೇ ಸಾಬೀತಾಗುವಂತೆ ಕಾಣುತ್ತಿರುವ ಭ್ರಷ್ಟಾಚಾರದಲ್ಲಿ ತೊಡಗಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ.
ವ್ಯತ್ಯಾಸ ಇಷ್ಟೆ: ಒಬ್ಬ ಜಾಣ ರಾಜಕಾರಣಿ ಹಣ ಮತ್ತು ದುಡ್ಡನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಾನೆ, ದಡ್ಡ ರಾಜಕಾರಣಿಯನ್ನು ಇವೆರಡೂ ಬಳಸಿಕೊಳ್ಳುತ್ತವೆ.
ಬಿ.ಎಸ್.ಯಡಿಯೂರಪ್ಪನವರ ಕಳೆದ ಮೂರುವರ್ಷಗಳ ಆಡಳಿತವನ್ನು ನೋಡಿದರೆ ಅವರನ್ನು ಜಾಣ ರಾಜಕಾರಣಿ ಎಂದು ಹೇಳಲಾಗುವುದಿಲ್ಲ. ಅವರು ಜಾಣರಾಗಿದ್ದರೆ `ಆಪರೇಷನ್ ಕಮಲ~ದಂತಹ ಅನೈತಿಕ ಮತ್ತು ದುರಹಂಕಾರಿ ರಾಜಕಾರಣವನ್ನು ಮಾಡಲು ಹೋಗುತ್ತಿರಲಿಲ್ಲ.

ಒಂದೊಮ್ಮೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ತಮ್ಮ ಸರ್ಕಾರವನ್ನು ಉರುಳಿಸಲು ಹೊರಟರೂ ಅದನ್ನು ರಾಜಕೀಯ ಹೋರಾಟದ ಮೂಲಕವೇ ಎದುರಿಸುತ್ತಿದ್ದರು. ನೈತಿಕವಾದ ಅಂತಹ ಹೋರಾಟವನ್ನು ರಾಜ್ಯದ ಜನ ಕೂಡಾ ಬೆಂಬಲಿಸುತ್ತಿದ್ದರು.
ಇದೇ ಬಿಜೆಪಿಯ ಕಾಟ ತಾಳಲಾಗದೆ 1985ರಲ್ಲಿ ಮಧ್ಯಂತರ ಚುನಾವಣೆ ಘೋಷಿಸಿದ್ದ ರಾಮಕೃಷ್ಣ ಹೆಗಡೆ ಅವರನ್ನು ರಾಜ್ಯ ಜನ ಬೆಂಬಲಿಸಲಿಲ್ಲವೇ, ಹಾಗೆ. ಆದರೆ ಯಡಿಯೂರಪ್ಪನವರು ಗಣಿಲೂಟಿಕೋರರು ಹಾಕಿದ ಬೋನಿಗೆ ಬಿದ್ದು ಬಿಟ್ಟರು.
ಅವರು ಜಾಣರಾಗಿದ್ದರೆ ತನಗಿರುವ ಅಧಿಕಾರದ ಬಲದಿಂದ (ಬೇಕಿದ್ದರೆ ಜಾತಿಬಲವನ್ನೂ ಸೇರಿಸಿ) ಯಾವಾಗಲೋ ಜನಾರ್ದನ ರೆಡ್ಡಿಯವರನ್ನು ಜೈಲಿಗೆ ಕಳುಹಿಸಬಹುದಿತ್ತು. ಬಳ್ಳಾರಿಯಲ್ಲಿ ರೆಡ್ಡಿ ಸೋದರರು ಕೇವಲ ರಾಜಕೀಯ ಗೂಂಡಾಗಿರಿಯಿಂದ ಕಟ್ಟಿದ ಗಣಿ ಸಾಮ್ರಾಜ್ಯದ ಬುನಾದಿ ಎಷ್ಟೊಂದು ದುರ್ಬಲ ಎನ್ನುವುದು ಈಗ  ಬಯಲಿಗೆ ಬರುತ್ತಿದೆ.
ಆರ್.ಗುಂಡೂರಾವ್ ಅವರಿಂದ ಹಿಡಿದು ಎಚ್.ಡಿ.ಕುಮಾರಸ್ವಾಮಿವರೆಗೆ ಕನಿಷ್ಠ ಹತ್ತು ಮುಖ್ಯಮಂತ್ರಿಗಳ ವಿರುದ್ಧ ವೀರಾವೇಶದಿಂದ ಹೋರಾಟ ನಡೆಸಿದ್ದ ಯಡಿಯೂರಪ್ಪ  ಭ್ರಷ್ಟ ಗಣಿ ಉದ್ಯಮಿಗಳನ್ನು ಎದುರಿಸಲಾಗದೆ ಅವರ ಎದುರು ಶರಣಾಗಿ ಬಿಟ್ಟರು.
ಅಷ್ಟು ಮಾತ್ರವಲ್ಲ ಅವರಂತೆಯೇ ಆಗಲು ಹೋಗಿ ಗಣಿಧಣಿಗಳ ಕೆಟ್ಟತನ-ದುರಾಸೆಗಳನ್ನೆಲ್ಲ ಮೈಗೂಡಿಸಿಕೊಂಡರು. ಯಡಿಯೂರಪ್ಪನವರು ಇನ್ನಷ್ಟು ಜಾಣರಾಗಿದ್ದರೆ ತನ್ನ ಲಾಲಸಿ ಮಕ್ಕಳಿಗೆ ಬುದ್ಧಿ ಹೇಳಿ ಅಧಿಕಾರದ ಪ್ರಭಾವಳಿಯಿಂದ ದೂರ ಇಡುತ್ತಿದ್ದರು.
ಹಾಗೆ ಮಾಡಿದ್ದರೆ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಈಗಿನಂತೆ ಕತ್ತಲು ಕವಿಯುತ್ತಿರಲಿಲ್ಲ. ಕನಿಷ್ಠ ತಾನು ದ್ವೇಷಿಸುವ ದೇವೇಗೌಡರ ಮಕ್ಕಳು ಹಿಡಿದ ದಾರಿಯನ್ನಾದರೂ ನೋಡಿ ಎಚ್ಚೆತ್ತುಕೊಳ್ಳಬಹುದಿತ್ತು.
ಯಡಿಯೂರಪ್ಪನವರು ಅನುಭವದಿಂದ ಪಾಠ ಕಲಿಯುವ ಕಾಲ ಮೀರಿ ಹೋಗಿದೆ. ಅವರ ಅನುಭವದಿಂದ ಉಳಿದ ರಾಜಕಾರಣಿಗಳಾದರೂ ಪಾಠ ಕಲಿತರೆ ಜೈಲು ಪಾಲಾಗುವ ಅವಮಾನದಿಂದ  ತಪ್ಪಿಸಿಕೊಳ್ಳಬಹುದು.

ದುಡ್ಡು ಮತ್ತು ಜಾತಿ ಮುಂದೆಯೂ ರಾಜಕಾರಣದ ಅನಿವಾರ‌್ಯ ಸಂಕಟಗಳಾಗಿಯೇ ಮುಂದುವರಿಯಲಿರುವ ಕಾರಣ ಇಂತಹ ಪ್ರಕರಣಗಳು ಪುನರಾವರ್ತನೆಗೊಂಡರೆ ಅಚ್ಚರಿ ಇಲ್ಲ. ಈ ಸಂಕಟಗಳನ್ನು ರಾಜಕೀಯವಾಗಿ ಬಳಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಈ ಸಮಯದಲ್ಲಿ ನೆನೆಪಾಗುತ್ತಾರೆ.

ತನಗಿಲ್ಲದ ಜಾತಿ ಬಲವನ್ನು ಜಾತಿ ರಾಜಕಾರಣದ ಮೂಲಕ ಮತ್ತು ತನ್ನಲ್ಲಿಲ್ಲದ ಹಣವನ್ನು ಶ್ರಿಮಂತರ ಸ್ನೇಹದ ಮೂಲಕ ಪಡೆದುಕೊಂಡು ರಾಜಕಾರಣ ಮಾಡಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು.
ಇವೆರಡೂ ತಮ್ಮನ್ನು ಬಳಸಿಕೊಳ್ಳಲು ಅವರು ಬಿಡಲಿಲ್ಲ, ಅವುಗಳನ್ನು ಬಳಸಿಕೊಂಡು ರಾಜಕಾರಣ ಮಾಡಿದರು. ಹೋಗ್ಲಿ ಬಿಡಿ ಯಡಿಯೂರಪ್ಪನವರ ಬಗ್ಗೆ ಮಾತನಾಡುವಾಗ ಅರಸು ವಿಷಯ ಯಾಕೆ?

Monday, October 10, 2011

ನಾರಾಯಣ ಗುರು ತೋರಿದ ಸುಧಾರಣೆಯ ದಾರಿ

`ನಾರಾಯಣ ಗುರುಗಳು  ಮಾಡದಿರುವುದನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾಡಿ ತೋರಿಸಿದ್ದಾರೆ~ ಎಂದು ಪೂಜಾರಿ ಅಭಿಮಾನಿಗಳೊಬ್ಬರು ಮೊನ್ನೆ ಹೆಮ್ಮೆಯಿಂದ ಹೇಳುತ್ತಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ `ವಿಧವಾ ವಿಮೋಚನೆ~ ಕಾರ‌್ಯಕ್ರಮ ಈ ಅಭಿಮಾನಿಯ ಹೆಮ್ಮೆಗೆ ಕಾರಣ.

`ಹಿಂದೂ ಮೂಲಭೂತವಾದಿಗಳು ಪಬ್‌ಗೆ ನುಗ್ಗಿ ಹುಡುಗಿಯರ ಮೇಲೆ ನಡೆಸಿದ ಹಲ್ಲೆಯಿಂದಾಗಿ ಹೋದ ಮಂಗಳೂರಿನ ಮಾನ, `ವಿಧವಾ ವಿಮೋಚನಾ~ ಕಾರ‌್ಯಕ್ರಮದಿಂದ ಬಂತು~ ಎಂದು ಇನ್ಯಾರೋ ಹೇಳುತ್ತಿದ್ದರು.

ಭಾವುಕ ಮನಸ್ಸಿನ ಈ ಪ್ರತಿಕ್ರಿಯೆಗಳಲ್ಲಿ ಅತಿರೇಕತನ ಇದ್ದರೂ ಪೂಜಾರಿಯವರು ಮಾಡಿರುವ ಕೆಲಸ ಅಭಿನಂದನೆಗೆ ಯೋಗ್ಯವಾದುದು ಎನ್ನುವುದರಲ್ಲಿ ಭಿನ್ನಾಭಿಪ್ರಾಯ ಇಲ್ಲ.

ಆದರೆ ಪೂಜಾರಿಯವರು ನಿಜಕ್ಕೂ ಸಮಾಜ ಸುಧಾರಣೆಗೆ ಹೊರಟಿದ್ದರೆ ಅವರಿಗೆ ಮಾಡಲು ಇನ್ನಷ್ಟು ಕೆಲಸಗಳಿವೆ, ಆ ದಾರಿಯಲ್ಲಿ ಮುನ್ನಡೆಯಲು ನಾರಾಯಣ ಗುರುಗಳ ತತ್ವದ ಬೆಳಕು ಕೂಡಾ ಇದೆ.
ಈಗಿನ ಕರಾವಳಿಯನ್ನು ಬಾಧಿಸುತ್ತಿರುವ ನಾನಾ ಬಗೆಯ ಸಾಮಾಜಿಕ ಮತ್ತು ರಾಜಕೀಯ ಸಂಬಂಧಿ ಕಾಯಿಲೆಗಳಿಗೆ ನಾರಾಯಣ ಗುರುಗಳ ತತ್ವಕ್ಕಿಂತ ಪರಿಣಾಮಕಾರಿಯಾದ ಔಷಧಿ ಬೇರೆ ಇಲ್ಲ.
ಪೂಜಾರಿ ಅವರ ಅಭಿಮಾನಿ ಹೇಳಿದಂತೆ ನಾರಾಯಣ ಗುರುಗಳು ನಿರ್ದಿಷ್ಟವಾಗಿ ವಿಧವೆಯರ ಬಗ್ಗೆ ಮಾತನಾಡಿರಲಿಲ್ಲ ಎನ್ನುವುದು ನಿಜ. ಇದಕ್ಕೆ ಕಾರಣ ಅವರು ಸುಧಾರಣೆಗಾಗಿ ಆಯ್ದುಕೊಂಡಿದ್ದ ಶೂದ್ರ ಸಮುದಾಯದಲ್ಲಿ ವೈಧವ್ಯ ಎನ್ನುವುದು ಬ್ರಾಹ್ಮಣ ಸಮುದಾಯದಲ್ಲಿದ್ದಷ್ಟು ದೊಡ್ಡ ಸಮಸ್ಯೆಯಾಗಿರಲಿಲ್ಲ. ಅದು ಇಂದಿಗೂ ಸತ್ಯ.

ನಾರಾಯಣ ಗುರುಗಳು ಕೇರಳದಲ್ಲಿ ಸುಧಾರಣಾವಾದಿ ಚಳವಳಿ ಪ್ರಾರಂಭಿಸಿದ್ದ ದಿನಗಳಲ್ಲಿ ಶೂದ್ರ ವರ್ಗದಲ್ಲಿ ಹೆಣ್ಣಾಗಿ ಹುಟ್ಟುವುದೇ ಶಾಪವಾಗಿತ್ತು. ಅಲ್ಲಿನ ಈಳವ ಮಹಿಳೆಯರಿಗೆ ಎದೆಯ ಮೇಲೆ ಬಟ್ಟೆ ಹಾಕಿಕೊಳ್ಳುವ ಸ್ವಾತಂತ್ರ್ಯವೂ ಇರಲಿಲ್ಲ. ಇದನ್ನು ಪ್ರತಿಭಟಿಸಿದ ಸ್ವಾಭಿಮಾನಿ ಮಹಿಳೆಯೊಬ್ಬರು ತನ್ನ ಸ್ತನಗಳನ್ನೇ ಕುಯ್ದುಕೊಂಡು ಪ್ರಾಣಾರ್ಪಣೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿತ್ತು.
ವಿಧವೆಯರು ಮಾತ್ರವಲ್ಲ, ಕೆಳವರ್ಗಕ್ಕೆ ಸೇರಿದ್ದ ಯಾವ ಮಹಿಳೆಯ ಹೂ ಮುಡಿಯುವಂತಿರಲಿಲ್ಲ. ಪ್ರಾಯಕ್ಕೆ ಬಂದ ಈಳವ ಹೆಣ್ಣುಗಳು ನಂಬೂದಿರಿಗಳ ಮನೆಯಲ್ಲಿ ರಾತ್ರಿ ಕಳೆಯಬೇಕಾದ ಅಮಾನುಷ ಕಟ್ಟಳೆಗಳಿದ್ದವು.
ಇದರ ವಿರುದ್ದ ಹೋರಾಡಲು ನಿರ್ಧರಿಸಿದ್ದ ನಾರಾಯಣ ಗುರುಗಳು ಅನುಸರಿಸಿದ ಮಾರ್ಗ ಉಳಿದ ಸಮಾಜ ಸುಧಾರಕರಿಗಿಂತ ಭಿನ್ನವಾದುದು. ಅವರದ್ದು ಸಂಘರ್ಷದ ಮಾರ್ಗವಾಗಿರಲಿಲ್ಲ. ನಲ್ವತ್ತು ವರ್ಷಗಳ ಅವಧಿಯ ಸುಧಾರಣಾವಾದಿ ಚಳವಳಿಯ ಯಾವುದೇ ಸಂದರ್ಭದಲ್ಲಿ ಅವರು ಶೋಷಕರ ಹೆಸರೆತ್ತಿ ಹೋರಾಟಕ್ಕೆ ಕರೆ ನೀಡಿರಲಿಲ್ಲ.
ನೆರೆಯ ತಮಿಳಿನಾಡಿನಲ್ಲಿ ಪೆರಿಯಾರ್ ಅವರು ದೇವರ ಮೂರ್ತಿಗಳಿಗೆ ಚಪ್ಪಲಿಮಾಲೆ ಹಾಕಿ ಪ್ರತಿಭಟಿಸುತ್ತಿದ್ದಾಗ, ನಾರಾಯಣ ಗುರುಗಳು ಶೂದ್ರರಿಗಾಗಿಯೇ ದೇವಸ್ಥಾನಗಳನ್ನು ಸ್ಥಾಪಿಸಿ ಧಾರ್ಮಿಕ ಕ್ಷೇತ್ರದಲ್ಲಿ ಮೌನವಾಗಿ ಕ್ರಾಂತಿ ಮಾಡಿದ್ದರು. ಮಹಿಳಾ ಸುಧಾರಣೆಗೆ ಸಂಬಂಧಿಸಿದಂತೆ ಕೂಡಾ ಅವರು ಹೋರಾಟ ನಡೆಸಿದ್ದು `ಹೊರಗಿನವರ~ ವಿರುದ್ಧ ಅಲ್ಲ, `ಒಳಗಿನವರ~ ವಿರುದ್ಧ.
ಆ ಕಾಲದ ಕೇರಳದಲ್ಲಿ ಹೆಣ್ಣನ್ನು ಶೋಷಿಸುವ ಬಗೆಬಗೆಯ ಮೂಢ ಆಚರಣೆಗಳಿದ್ದವು. ಮೈ ನೆರೆಯುವ ಮೊದಲೇ ಯಾವುದಾದರೂ ಒಬ್ಬ ವ್ಯಕ್ತಿಯಿಂದ ತಾಳಿ ಕಟ್ಟಿಸುವ `ತಾಳಿಕೆಟ್ಟು ಕಲ್ಯಾಣಂ~ (ಬಾಲ್ಯ ವಿವಾಹಕ್ಕಿಂತಲೂ ಅಮಾನವೀಯವಾದ ಆಚರಣೆಯಲ್ಲಿ ಹೆಣ್ಣಿಗೆ ತಾಳಿ ಕಟ್ಟುವ ಗಂಡಿಗೆ ಆಕೆಯ ಮೇಲೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಬೆಳೆದ ನಂತರ ಗಂಡು ಮತ್ತು ಹೆಣ್ಣು ಅವರಿಗೆ ಇಷ್ಟಬಂದವರನ್ನು ಮದುವೆಯಾಗಬಹುದಿತ್ತು).
ಹೆಣ್ಣು ಋತುಮತಿಯಾದಾಗ ಅದನ್ನು ಪರೋಕ್ಷವಾಗಿ ಲೋಕಕ್ಕೆ ಸಾರುವ `ತಿರುಂಡಕುಳಿ~ (ದಕ್ಷಿಣ ಕನ್ನಡದ ಬಿಲ್ಲವರಲ್ಲಿ ಈ ಆಚರಣೆಗೆ `ತಲೆನೀರು~ ಎನ್ನುತ್ತಾರೆ), ಗರ್ಭಿಣಿ ಹೆಣ್ಣಿಗೆ ನಡೆಸುವ `ಪುಲುಕೂಡಿ~ (ಸೀಮಂತ) ಮೊದಲಾದ ದುಂದುವೆಚ್ಚದ ಮೂಢ ಆಚರಣೆಗಳನ್ನು ಹೆಣ್ಣಿನ ಕುತ್ತಿಗೆಗೆ ಗಂಟು ಹಾಕಲಾಗಿತ್ತು. ಇಂತಹ ಪ್ರತಿಯೊಂದು ಆಚರಣೆಯಲ್ಲಿಯೂ ಹೆಣ್ಣಿನ ತಂದೆತಾಯಿಗಳು ಊರಿನವರೆಲ್ಲರನ್ನೂ ಕರೆದು ಔತಣ ನೀಡಬೇಕಾಗಿತ್ತು.

ಈ ದುಂದುವೆಚ್ಚದ ಆಚರಣೆಗಳಿಂದಾಗಿ ಹೆಣ್ಣುಮಕ್ಕಳು ಹುಟ್ಟುವುದೇ ಶಾಪ ಎಂದು ಹೆತ್ತವರು ಅಂದುಕೊಳ್ಳುತ್ತಿದ್ದರು. ಇಂತಹ ಆಚರಣೆಗಳಲ್ಲಿ ಶೋಷಕರು ಮತ್ತು ಶೋಷಿತರು ಒಂದೇ ವರ್ಗದಲ್ಲಿದ್ದರು. ನಾರಾಯಣ ಗುರುಗಳು ಮೊದಲು ಸಮರ ಸಾರಿದ್ದು ಹೆಣ್ಣಿನ ಶೋಷಣೆಯ ಇಂತಹ ಆಚರಣೆಗಳು ಮತ್ತು `ಒಳಗಿನ~ ಶೋಷಕರ ವಿರುದ್ಧ.
ಅದರ ನಂತರ ನಾರಾಯಣ ಗುರುಗಳು ಕೈಗೆತ್ತಿಕೊಂಡದ್ದು ವಿವಾಹ ವ್ಯವಸ್ಥೆಯ ಸುಧಾರಣೆಯ ಕಾರ‌್ಯವನ್ನು. ವರದಕ್ಷಿಣೆಯ ಜತೆಯಲ್ಲಿ ಮದುವೆಯ ವೆಚ್ಚವನ್ನೂ ಭರಿಸಬೇಕಾಗಿದ್ದ ಹೆಣ್ಣಿನ ತಂದೆ ತಾಯಿಗಳು ಮನೆಯಲ್ಲಿದ್ದ ಹೆಣ್ಣುಗಳ ಮದುವೆಗಳನ್ನು ಮಾಡಿ ಮುಗಿಸುವ ಹೊತ್ತಿಗೆ ಸಾಲದ ಶೂಲಕ್ಕೆ ಸಿಕ್ಕಿ ನರಳಾಡುವ ಪರಿಸ್ಥಿತಿ ಇತ್ತು.
ಇದನ್ನು ತಪ್ಪಿಸಲು ನಾರಾಯಣ ಗುರುಗಳು ಸರಳ ಮದುವೆಯ ಪ್ರಚಾರದಲ್ಲಿ ತೊಡಗಿದರು. ಇದಕ್ಕಾಗಿ ಅವರು ವಿವಾಹ ನೀತಿ ಸಂಹಿತೆಯೊಂದನ್ನು ರೂಪಿಸಿದ್ದರು. `ಮದುವೆಯನ್ನು ಸರಳವಾಗಿ, ವರದಕ್ಷಿಣೆ ಇಲ್ಲದೆ ನಡೆಸಬೇಕು.
ವರ, ವಧು, ಅವರ ತಂದೆ ತಾಯಿಗಳು, ವರ ಮತ್ತು ವಧುವಿನ ತಲಾ ಒಬ್ಬರು ಸಂಗಾತಿ, ಅರ್ಚಕ ಹಾಗೂ ಒಬ್ಬ ಸ್ಥಳೀಯ ಗಣ್ಯ ವ್ಯಕ್ತಿ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಬೇಕು. ಇವರ ಸಂಖ್ಯೆ ಹತ್ತನ್ನು ಮೀರಬಾರದು.
ಮದುವೆಗೆ ಒಂದು ತಿಂಗಳು ಮೊದಲು ಗಂಡು-ಹೆಣ್ಣು ಇಬ್ಬರು ಭೇಟಿಯಾಗಿ ವಿಚಾರ ವಿನಿಮಯಕ್ಕೆ ಅವಕಾಶ ನೀಡಬೇಕು. ಈ ಭೇಟಿಯ ಹದಿನೈದು ದಿನಗಳ ನಂತರವಷ್ಟೇ ಮದುವೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು.
ಪ್ರತಿಯೊಂದು ಮದುವೆಯನ್ನು ನೋಂದಣಿ ಮಾಡಬೇಕು. ವರದಕ್ಷಿಣೆ ಇಲ್ಲದ ಸರಳ ಮದುವೆಯಿಂದ ಉಳಿತಾಯವಾಗುವ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಪಾಸ್‌ಬುಕ್ ಅನ್ನು ಮದುವೆಯ ದಿನ ವಧು-ವರರಿಗೆ ಕೊಡಬೇಕು....~ ಇತ್ಯಾದಿ ಅಂಶಗಳು ಆ ನೀತಿ ಸಂಹಿತೆಯಲ್ಲಿದ್ದವು.
ಒಬ್ಬ ಆಧ್ಯಾತ್ಮಿಕ ಗುರು ಲೌಕಿಕವಾದ ಸಂಗತಿಗಳ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿ ಚಿಂತನೆ ನಡೆಸಿದ ಬೇರೆ ಉದಾಹರಣೆಗಳು ಅಪರೂಪ. ಇಂತಹ ಸರಳ ಮದುವೆಗಳನ್ನು ನಾರಾಯಣ ಗುರುಗಳು ತಮ್ಮ ಶ್ರೀಮಂತ ಶಿಷ್ಯರ ಮನೆಯಿಂದಲೇ ಪ್ರಾರಂಭಿಸಿದ್ದರು.
ತಾವು ರೂಪಿಸಿದ್ದ ನೀತಿ ಸಂಹಿತೆಗೆ ಅನುಗುಣವಾಗಿ ಮದುವೆ ನಡೆದರೆ ಮಾತ್ರ ಅದರಲ್ಲಿ ತಾನು ಭಾಗವಹಿಸುವುದಾಗಿ ಅವರು ಕಟ್ಟುನಿಟ್ಟಾಗಿ ಹೇಳುತ್ತಿದ್ದ ಕಾರಣ ಶ್ರಿಮಂತ ಶಿಷ್ಯರು ಮಕ್ಕಳ ಮದುವೆಯನ್ನು ಸರಳವಾಗಿ ನಡೆಸುತ್ತಿದ್ದರು.
ಶ್ರಿಮಂತ ಕುಟುಂಬಗಳಲ್ಲಿಯೇ ಸರಳ ವಿವಾಹ ನಡೆಯಲಾರಂಭಿಸಿದ್ದರಿಂದ ಬಡವರು ಕೂಡಾ ಪೊಳ್ಳುಪ್ರತಿಷ್ಠೆಗೆ ಬಿದ್ದು ತಮ್ಮ ಸಾಮರ್ಥ್ಯ ಮೀರಿ ದುಂದುವೆಚ್ಚ ಮಾಡದೆ ಸರಳ ಮದುವೆಗಳನ್ನು ಅನುಕರಿಸತೊಡಗಿದರು.

ಮಹಿಳಾ ಸುಧಾರಣೆಯ ಈ ಚಳವಳಿ ಕಾವು ಪಡೆದುಕೊಳ್ಳುತ್ತಿದ್ದಂತೆಯೇ ಅವರ ಶೋಷಣೆಯ ಕಬಂಧಬಾಹುಗಳು ಸಡಿಲಗೊಳ್ಳುತ್ತಾ ಹೋದವು. ಇದು ನಾರಾಯಣ ಗುರುಗಳು ಮಹಿಳಾ ಸಬಲೀಕರಣಕ್ಕೆ ತೋರಿಸಿದ ಹೊಸ ಮಾರ್ಗ.
ಆದರೆ ಇಂದಿನ ಪರಿಸ್ಥಿತಿ ಏನಾಗಿದೆ? ಪೂಜಾರಿಯವರ ಊರಲ್ಲಿಯೇ ವರದಕ್ಷಿಣೆ ಮತ್ತು ಅದ್ಧೂರಿ ಮದುವೆಯ ಆರ್ಥಿಕ ಭಾರವನ್ನು ಹೊರಲಾಗದೆ ಹೆಣ್ಣು ಹೆತ್ತವರು ಗೋಳಾಡುತ್ತಿದ್ದಾರೆ. ಇದೊಂದು ಪ್ರಮುಖ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದೆ.

ಇದರಿಂದಾಗಿ ಅನೇಕ ಯುವತಿಯರು ತಪ್ಪುದಾರಿ ತುಳಿಯುವಂತಾಗಿದೆ.
ಎರಡು ವರ್ಷಗಳ ಹಿಂದೆ ಮೋಹನ್‌ಕುಮಾರ್ ಎಂಬ ವಂಚಕ ಇಪ್ಪತ್ತಕ್ಕೂ ಹೆಚ್ಚು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿ ಹತ್ಯೆಗೈದ ಪ್ರಕರಣವೇ ಇದಕ್ಕೆ ಸಾಕ್ಷಿ.
ಇವರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಹಿಂದುಳಿದ ಜಾತಿಗೆ ಸೇರಿದ ಅವಿವಾಹಿತ ಹೆಣ್ಣುಗಳು. ಹೆಚ್ಚಿನವರು ಮನೆಯಲ್ಲಿ ನಾರಾಯಣ ಗುರುಗಳ ಪೋಟೋ ಇಟ್ಟುಕೊಂಡು ಪೂಜೆ ಮಾಡುವ ಕುಟುಂಬಗಳಿಗೆ ಸೇರಿದವರು.
ಈ ಪ್ರಕರಣ ಯಾವ ಸತ್ಯ ಹೇಳುತ್ತಿದೆ?  ಆ ಸತ್ಯವನ್ನು ಕಾಣಲು ಸಾಧ್ಯವಾದರೆ ಹೆಣ್ಣು ಹೆತ್ತವರನ್ನು ಕಿತ್ತು ತಿನ್ನುತ್ತಿರುವ ವರದಕ್ಷಿಣೆ ಮತ್ತು ಅದ್ಧೂರಿ ಮದುವೆಗಳ ಪಿಡುಗಿನ ನಿವಾರಣೆಗೆ ಮಾರ್ಗಗಳು ಕೂಡಾ ನಾರಾಯಣಗುರುಗಳು ರೂಪಿಸಿ ಆಚರಣೆಗೆ ತಂದ ಸರಳ ವಿವಾಹದಲ್ಲಿ ಕಾಣಲು ಸಾಧ್ಯ.
ವಿರೋಧಾಭಾಸದ ಸಂಗತಿಯೆಂದರೆ ಸರಳ ವಿವಾಹಕ್ಕೆ ನೀತಿ ಸಂಹಿತೆಯನ್ನು ರೂಪಿಸಿದ ನಾರಾಯಣ ಗುರುಗಳು ಸ್ಥಾಪಿಸಿದ್ದ ಕುದ್ರೋಳಿ ದೇವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ಕಲ್ಯಾಣಮಂಟಪಗಳಲ್ಲಿಯೇ ಅದ್ಧೂರಿ ಮದುವೆಗಳು ನಡೆಯುತ್ತಿವೆ.
ವಿಧವೆಯರಿಗೆ ಮುತ್ತೈದೆ ಭಾಗ್ಯದ ಅವಕಾಶ ನೀಡಿ ಎಲ್ಲರ ಅಭಿನಂದನೆಗೆ ಪಾತ್ರರಾದ ಜನಾರ್ದನ ಪೂಜಾರಿಯವರು ಮುಂದಿನ ಹೆಜ್ಜೆಯಾಗಿ ಬಡಕುಟುಂಬಗಳ ಸಾವಿರಾರು ಯುವತಿಯರ ಬಾಳಿಗೆ ಬೆಳಕು ನೀಡುವ ಸರಳ ವಿವಾಹದ ಪ್ರಚಾರವನ್ನು ಯಾಕೆ ಕೈಗೊಳ್ಳಬಾರದು?
ಜನಾರ್ದನ ಪೂಜಾರಿಯವರು ತಮಗರಿವಿಲ್ಲದಂತೆಯೇ ನಾರಾಯಣ ಗುರುಗಳು ಮಾಡದಿರುವ ಒಂದು ಕೆಲಸ ಮಾಡಿದ್ದಾರೆ. ಪೂಜಾವಿಧಾನವನ್ನು ಸರಳಗೊಳಿಸಿದ್ದು ಮಾತ್ರವಲ್ಲ, ಪೂಜೆ ಮಾಡುವ ಅವಕಾಶವನ್ನು ಎಲ್ಲ ಜಾತಿಗಳಿಗೂ ನೀಡಿದ್ದು ನಾರಾಯಣ ಗುರುಗಳ ಧಾರ್ಮಿಕ ಸುಧಾರಣೆಯ ಪ್ರಮುಖ ಸಾಧನೆ.
ಜಾತಿಭೇದ ಇಲ್ಲದೆ ಅರ್ಚಕ ವೃತ್ತಿಯಲ್ಲಿ ತರಬೇತಿ ನೀಡಲಿಕ್ಕಾಗಿಯೇ ಅವರು ಸನ್ಯಾಸಿ ಸಂಘವನ್ನು ಸ್ಥಾಪಿಸಿದ್ದರು. ಇದರಿಂದಾಗಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವೂ ಸೇರಿದಂತೆ ನಾರಾಯಣ ಗುರುಗಳು ಸ್ಥಾಪಿಸಿದ್ದ ಎಲ್ಲ ದೇವಾಲಯಗಳಲ್ಲಿ ಶೂದ್ರ ಅರ್ಚಕರೇ ಪೂಜೆ ಮಾಡುತ್ತಿದ್ದಾರೆ.

ಇಷ್ಟೆಲ್ಲ ಮಾಡಿದ್ದ ನಾರಾಯಣ ಗುರುಗಳು ಮಹಿಳೆಯರನ್ನು ಮಾತ್ರ ಅರ್ಚಕರನ್ನಾಗಿ ಮಾಡುವ ಬಗ್ಗೆ ಯಾಕೋ ಗಮನ ನೀಡಿರಲಿಲ್ಲ. ಈಗಲೂ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ ಅರ್ಚಕ ವೃತ್ತಿಯಿಂದ ಮಾತ್ರ ವಂಚಿತರಾಗಿದ್ದಾರೆ.
ಖಾಸಗಿಯಾಗಿ ನಡೆಯುವ ಧಾರ್ಮಿಕ ಕಾರ‌್ಯಕ್ರಮಗಳಲ್ಲಿಯೂ ಮಹಿಳೆಯರನ್ನು ಒಂದೆರಡು ಹೆಜ್ಜೆ ಹಿಂದಕ್ಕೆ ನಿಲ್ಲಿಸಲಾಗುತ್ತದೆ. ಕುದ್ರೋಳಿಯಲ್ಲಿ ವಿಧವೆಯರು ತಾತ್ಕಾಲಿಕವಾದರೂ ಮುತ್ತೈದೆ ಭಾಗ್ಯ ಪಡೆದದ್ದು ಮಾತ್ರವಲ್ಲ, ತಾವೇ ಚಂಡಿಕಾ ಹೋಮ ನಡೆಸಿ  ದೇವರ ಮೂರ್ತಿ ಇದ್ದ ರಥ ಎಳೆದುಬಿಟ್ಟರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬ್ರಾಹ್ಮಣ-ಶೂದ್ರರೆಂಬ ಭೇದ ಇಲ್ಲದೆ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೇರುತ್ತಾ ಬಂದಿರುವ ಹಿಂದೂ ಧರ್ಮದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ.
ಪೂಜಾರಿಯವರಿಗೆ ಇಂತಹದ್ದೊಂದು ಸಾಹಸ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕುದ್ರೋಳಿ ಕ್ಷೇತ್ರ. ನಾರಾಯಣ ಗುರುಗಳು ಬಂದು ಗೋಕರ್ಣನಾಥ ಎನ್ನುವ ಹೆಸರಿಟ್ಟು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದ ಈ ಕ್ಷೇತ್ರಕ್ಕೆ ಮುಂದಿನ ವರ್ಷ ನೂರು ತುಂಬಲಿದೆ. ಅಸ್ಪೃಶ್ಯತೆಯಿಂದ ನೊಂದಿದ್ದ ಬಿಲ್ಲವ ಸಮುದಾಯದ ನಾಯಕರ ಕರೆಗೆ ಓಗೊಟ್ಟು ನಾರಾಯಣ ಗುರುಗಳು ಅಲ್ಲಿಗೆ ಬಂದಿದ್ದರು.
ಈ ಐತಿಹಾಸಿಕ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಹೊಯಿಗೆ ಬಜಾರ್ ಕೊರಗಪ್ಪನವರು. ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕವಾಗಿ ಹೆಚ್ಚು ನೆರವಾದವರು ಕೂಡಾ ಅವರೇ.

ಮುಸ್ಲಿಮ್ ವ್ಯಾಪಾರಿಯ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಕೊರಗಪ್ಪನವರು ತಮ್ಮ ಶ್ರಮ ಮತ್ತು ನಿಷ್ಠೆಯಿಂದ ಮಾಲೀಕರ ವಿಶ್ವಾಸಕ್ಕೆ ಪಾತ್ರರಾಗಿ ನಂತರ ಅದೇ ಕಂಪೆನಿಯ ಸದಸ್ಯರ ಜತೆಗೂಡಿ `ಸಿ.ಅಬ್ದುಲ್ ರೆಹಮಾನ್ ಮತ್ತು ಕೊರಗಪ್ಪ ಕಂಪೆನಿ~ಯನ್ನು ಸ್ಥಾಪಿಸಿ ವ್ಯಾಪಾರಿಯಾಗಿಹೆಸರು ಗಳಿಸಿದವರು.
 ಕುದ್ರೋಳಿ ದೇವಸ್ಥಾನದ ಸ್ಥಾಪನೆಯ ರೂವಾರಿಯ ಹಿನ್ನೆಲೆ ಆ ಕಾಲದ ಕೋಮುಸೌಹಾರ್ದತೆಯ ನೋಟವನ್ನು ಕೂಡಾ ನೀಡುತ್ತದೆ. ಅದು ನಾರಾಯಣ ಗುರು ಕಂಡ ಕನಸೂ ಕೂಡಾ ಆಗಿತ್ತು.
ಆದರೆ ಇಂದೇನಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದ ಆರೋಪಪಟ್ಟಿಗಳಲ್ಲಿರುವ ಹೆಸರಿನ ಮುಂದಿರುವ ಜಾತಿ ವಿವರವನ್ನು ನೋಡಿದರೆ ಸಾಕು.
ಸಂಘರ್ಷ ಇಲ್ಲದೆ ಸಾಮಾಜಿಕ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು. ಅವರ ಇಂದಿನ ಅನುಯಾಯಿಗಳು ಕೈಯಲ್ಲಿ ಲಾಠಿ ಹಿಡಿದುಕೊಂಡು ಹೊರಟಿದ್ದಾರೆ. ಗುರು ಇದ್ದಾರೆ, ಗುರಿ ತಪ್ಪಿದೆ.