Monday, August 15, 2011

ಸದಾ ಆನಂದವಾಗಿರಲು ದಾರಿಗಳು ಬಹಳ ಇಲ್ಲ

ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರದ್ದು ಒಂದು ರೀತಿಯಲ್ಲಿ ಸುಲಭದ ಕೆಲಸ, ಇನ್ನೊಂದು ರೀತಿಯಲ್ಲಿ ಕಷ್ಟದ್ದು. ಒಬ್ಬ ಕಳಂಕರಹಿತ ಮತ್ತು ದಕ್ಷ ಮುಖ್ಯಮಂತ್ರಿಯ ಉತ್ತರಾಧಿಕಾರಿಯಾಗಿ ಬಂದಾಗ ಹಿಂದಿನವರನ್ನು ಮೀರಿಸಿ ಜನಪ್ರಿಯತೆ ಗಳಿಸುವುದು ದೊಡ್ಡ ಸವಾಲು.
ಅದಕ್ಕಾಗಿ ಅವರೆಡೂ ಮೌಲ್ಯಗಳ ವಿಷಯದಲ್ಲಿ ಹೊಸಬರು ಒಂದು ತೂಕ ಹೆಚ್ಚಿರಬೇಕಾಗುತ್ತದೆ. ಇಲ್ಲದಿದ್ದರೆ ಸೋಲು ನಿಶ್ಚಿತ. ಅಧಿಕಾರಾರೂಢ ಭ್ರಷ್ಟ ಜನತಾ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದ ವೀರೇಂದ್ರ ಪಾಟೀಲ್ ಅವರ ಆಡಳಿತದ ಕಿರು ಅವಧಿ ಆರೋಪಮುಕ್ತ ನಡವಳಿಕೆ ಮತ್ತು ದಕ್ಷ ಆಡಳಿತದಿಂದ ಜನಮನ ಸೆಳೆದಿತ್ತು.
ಆ ಸಾಧನೆಯ ಬಲ ಮಾತ್ರವಲ್ಲ, ಜನಪ್ರಿಯತೆಯ ತುತ್ತತುದಿಯಲ್ಲಿರುವಾಗಲೇ ಕಿತ್ತು ಹಾಕಿದ್ದರಿಂದ ಜನರ ಅನುಕಂಪ ಕೂಡಾ ಪಾಟೀಲರ ಕಡೆ ಇತ್ತು. ಇದನ್ನು ಮೀರಿ ಸರ್ಕಾರದ ವರ್ಚಸ್ಸನ್ನು ಬೆಳೆಸಬೇಕಾದ ಸವಾಲು ಹೊತ್ತು ಬಂದ ಎಸ್.ಬಂಗಾರಪ್ಪ ಪ್ರಾರಂಭದಿಂದಲೇ ಎಡವಿದರು.
ಭಿನ್ನಮತ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಆ ಸವಾಲುಗಳು ಸದಾನಂದ ಗೌಡರ ಮುಂದೆ ಇಲ್ಲ.
ಇದಕ್ಕೆ ವಿರುದ್ಧವಾಗಿ, ಕಳಂಕಿತ ಮುಖ್ಯಮಂತ್ರಿಯ ಉತ್ತರಾಧಿಕಾರಿಯಾಗಿ ಬಂದವರಿಗೆ ಕೆಲವು ಅನುಕೂಲತೆಗಳಿವೆ.
ಅವರು ಘನವಾದ ಸಾಧನೆಗಳನ್ನು ಮಾಡಬೇಕಾಗಿಲ್ಲ, ಭ್ರಷ್ಟರಾಗದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ನಗುನಗುತ್ತಾ ಇದ್ದರೂ ಜನಪ್ರಿಯನಾಗುವ ಸಾಧ್ಯತೆ ಇದೆ. ಈ ದೃಷ್ಟಿಯಿಂದ ಸದಾನಂದ ಗೌಡರ ಕೆಲಸ ಸುಲಭ.
ಮುಖ್ಯಮಂತ್ರಿಯಾಗಿ ಆರ್.ಗುಂಡೂರಾವ್ ನಡೆಸಿದ ದುರಾಡಳಿತದಿಂದ ಬೇಸತ್ತು ಹೋಗಿದ್ದ ಜನತೆಗೆ ಚುನಾವಣಾ ಪ್ರಚಾರದ ದಿನಗಳಲ್ಲಿ ಅಜ್ಞಾತರಾಗಿದ್ದು ದಿಢೀರನೇ ರಂಗಪ್ರವೇಶ ಮಾಡಿದ್ದ ರಾಮಕೃಷ್ಣ ಹೆಗಡೆ ಪರಮಾತ್ಮನ ಇನ್ನೊಂದು ಅವತಾರದಂತೆ ಕಂಡಿದ್ದರು.
ಮೊದಲ ಎರಡು ವರ್ಷಗಳ ಅವಧಿಯಲ್ಲಿ ಹೆಗಡೆ ಎಷ್ಟೊಂದು ಜನಪ್ರಿಯರಾಗಿದ್ದರೆಂದರೆ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ರಾಜೀನಾಮೆ ನೀಡಿ ಮರಳಿ ಚುನಾವಣೆ ಎದುರಿಸಿದಾಗ ರಾಜ್ಯದ ಜನ `ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವೋ ಎಂಬಂತೆ~ ಭಾರಿ ಬಹುಮತದಿಂದ ಅವರನ್ನು ಮರಳಿ ಅಧಿಕಾರಕ್ಕೆ ತಂದರು (ಎರಡನೇ ಅವಧಿಯ ಕತೆ ಬೇರೆ).
ಆದರೆ ಈ ಅನುಕೂಲತೆ ಇರುವುದು ವಿರೋಧಿ ರಾಜಕೀಯ ಪಕ್ಷಕ್ಕೆ ಸೇರಿದ ಭ್ರಷ್ಟ ಮುಖ್ಯಮಂತ್ರಿಯ ನಿರ್ಗಮನದ ನಂತರ ಅಧಿಕಾರಕ್ಕೆ ಬಂದಾಗ ಮಾತ್ರ. ಜನರಿನ್ನೂ ಹಳೆಯ ಆಡಳಿತದ ದುಃಸ್ವಪ್ನದಿಂದ ಹೊರಬಾರದಿರುವುದರಿಂದ ಹೊಸ ಮುಖ್ಯಮಂತ್ರಿ ತೋರಿಸುವ ಕನಸುಗಳಲ್ಲಿ ಅವರು ಸುಲಭದಲ್ಲಿ ತೇಲಿ ಹೋಗುತ್ತಾರೆ.
ಜನರನ್ನು ಕಾಡುತ್ತಿರುವ ಎಲ್ಲ ಅನಿಷ್ಟಗಳಿಗೂ (ಖಾಲಿ ಖಜಾನೆ, ಅನಭಿವೃದ್ದಿ, ಹಳಿ ತಪ್ಪಿದ ಆಡಳಿತ ಇತ್ಯಾದಿ) ಹಿಂದಿನ ಸರ್ಕಾರವೇ ಕಾರಣ ಎಂದು ಹೊಸಬರು ಉಪಾಯವಾಗಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದು.

ಪ್ರಾರಂಭದ ದಿನಗಳಲ್ಲಿ ಜನ ಕೂಡಾ ಹೊಸ ಸರ್ಕಾರಕ್ಕೊಂದು `ಮಧುಚಂದ್ರ~ದ ಅವಧಿಯನ್ನು ಉದಾರವಾಗಿ ನೀಡುತ್ತಾರೆ. ವಿರೋಧಪಕ್ಷಗಳ ಆರೋಪಗಳು ಎದುರಾದರೂ ಹೊಸ ಮುಖ್ಯಮಂತ್ರಿಗಳು ಬಹಳ ಸುಲಭದಲ್ಲಿ `ನಿಮ್ಮ ಕಾಲದಲ್ಲಿ ನಡೆದಿಲ್ವೆ? ನೀವೇನು ಸಾಚಾಗಳೇ?~ ಎಂದು ಉಡಾಫೆಯಿಂದ ಪ್ರಶ್ನಿಸುತ್ತಾ ಒಂದಷ್ಟು ದಿನ ಕಾಲ ತಳ್ಳಬಹುದು.

ಈ ಅನುಕೂಲತೆ ತಮ್ಮದೇ ಪಕ್ಷದ ಮುಖ್ಯಮಂತ್ರಿ ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಆ ಸ್ಥಾನಕ್ಕೆ ಬರುವವರಿಗೆ ಇರುವುದಿಲ್ಲ.
ಅವರು ಹಿಂದಿನ ಮುಖ್ಯಮಂತ್ರಿಗಳನ್ನು ಬಹಿರಂಗವಾಗಿ ದೂರುವಂತಿಲ್ಲ, ದೂರಿದರೆ ಆಕಾಶಕ್ಕೆ ಮುಖಮಾಡಿ ಉಗುಳಿದಂತೆ. ಅದನ್ನು ಮರೆತುಬಿಡುವ ಹಾಗೂ ಇಲ್ಲ, ಮರೆತರೂ ಹಿಂದಿನವರ ಪಾಪದ ಫಲ ಹಿಂಬಾಲಿಸಿಕೊಂಡು ಬರುತ್ತದೆ.
ಅದನ್ನು ಮೀರಿ ಎಚ್ಚರಿಕೆಯಿಂದ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಸದಾನಂದ ಗೌಡರದ್ದು ಕಷ್ಟದ ಕೆಲಸ.
ಅವರ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿರುವುದು ಬಿ.ಎಸ್.ಯಡಿಯೂರಪ್ಪ ಎಂಬ ಅಸುರಕ್ಷತೆಯಿಂದ ಬಳಲುತ್ತಿರುವ ಹಟಮಾರಿ ನಾಯಕ ಮತ್ತು ಪಕ್ಷದ ದುರ್ಬಲ ಹೈಕಮಾಂಡ್.
ಯಡಿಯೂರಪ್ಪನವರ ಬಹಳ ದೊಡ್ಡ ಸಮಸ್ಯೆಯೆಂದರೆ ತಾನು ಯಾಕೆ ಅಧಿಕಾರ ಕಳೆದುಕೊಳ್ಳಬೇಕಾಯಿತು ಎನ್ನುವ ಸರಳವಾದ ವಿಚಾರ ಈಗಲೂ ಅರ್ಥವಾಗದೆ ಇರುವುದು.
ತನ್ನ ಪದಚ್ಯುತಿಗೆ ಕಾರಣ ತನ್ನ ತಪ್ಪುಗಳಲ್ಲ, ವಿರೋಧಿಗಳ ಪಿತೂರಿ ಎಂದು ಅವರು ಬಲವಾಗಿ ನಂಬಿರುವುದು ಮಾತ್ರ ಅಲ್ಲ, ರಾಜ್ಯದ ಜನರೂ ಹಾಗೆಯೇ ನಂಬಿದ್ದಾರೆ ಎಂದು  ತಿಳಿದುಕೊಂಡಿರುವುದು.
ಇದರಿಂದಾಗಿ ತಾನು ಅಧಿಕಾರ ಕಳೆದುಕೊಂಡರೂ ಜನಪ್ರಿಯತೆ ಕಳೆದುಕೊಂಡಿಲ್ಲ ಎನ್ನುವ ವಿಶ್ವಾಸ ಅವರ ನಡೆ-ನುಡಿಯಲ್ಲಿ ವ್ಯಕ್ತವಾಗುತ್ತಿದೆ. ಇದು ಅವರ ಮುಗ್ಧತೆಯೋ, ಅಜ್ಞಾನವೋ ಗೊತ್ತಿಲ್ಲ.
ಆದರೆ ಮಾಜಿ ಮುಖ್ಯಮಂತ್ರಿಗಳ ಈ ಮನೋಭಾವ ಹಾಲಿ ಮುಖ್ಯಮಂತ್ರಿಗಳಿಗೆ ಸಮಸ್ಯೆಗಳನ್ನು ಸೃಷ್ಟಿಸಬಲ್ಲದು. ಸದಾನಂದ ಗೌಡರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದಿರಬಹುದು, ಆದರೆ ಇಂದು ಅವರು ಆ ಸ್ಥಾನದಲ್ಲಿ ಕೂತಿದ್ದರೆ ಅದು ಅರ್ಹತೆಯ ಬಲದಿಂದ ಅಲ್ಲ, ಯಡಿಯೂರಪ್ಪನವರ ಬೆಂಬಲದ ಬಲದಿಂದ.
ಇದು ಯಡಿಯೂರಪ್ಪನವರಿಗಿಂತಲೂ ಚೆನ್ನಾಗಿ ಗೌಡರಿಗೆ ಗೊತ್ತಿದೆ. ಆದ್ದರಿಂದ ಮುಖ್ಯಮಂತ್ರಿಗಳು ತನ್ನ ಕೈತಪ್ಪಿಹೋಗುತ್ತಿದ್ದಾರೆ ಎಂದು ಒಂದು ಕ್ಷಣ  ಅನಿಸಿದರೂ ಯಡಿಯೂರಪ್ಪನವರು ಸುಮ್ಮನಿರುವವರಲ್ಲ.
ತನ್ನ ರಾಜಕೀಯ ಜೀವನದ ಬಹುಭಾಗವನ್ನು ವಿರೋಧ ಪಕ್ಷದ ನಾಯಕರಾಗಿಯೇ ಕಳೆದಿರುವ ಯಡಿಯೂರಪ್ಪನವರು ಕಟ್ಟುವುದಕ್ಕಿಂತಲೂ ಕೆಡವುದನ್ನು ಅನಾಯಾಸವಾಗಿ ಮಾಡಬಲ್ಲರು. ಇಂತಹವರು ಸರ್ಕಾರದ ಒಳಗಿರುವುದಕ್ಕಿಂತ ಹೊರಗಿದ್ದರೆ ಹೆಚ್ಚು ಅಪಾಯಕಾರಿ, ಯಾಕೆಂದರೆ ಹೊರಗಿದ್ದು ಅವರು ಕಳೆದುಕೊಳ್ಳುವುದು ಏನೂ ಇಲ್ಲ.
ಇಂತಹವರನ್ನು ಪಕ್ಷದ ಬಲಿಷ್ಠ ಹೈಕಮಾಂಡ್ ಮಾತ್ರ ನಿಯಂತ್ರಿಸಲು ಸಾಧ್ಯ. ವೀರೇಂದ್ರ ಪಾಟೀಲ್ ಅವರನ್ನು ಕಿತ್ತೊಗೆದಾಗ ಬಂಗಾರಪ್ಪನವರ ಬೆಂಬಲಕ್ಕೆ ರಾಜೀವ್‌ಗಾಂಧಿ ನೇತೃತ್ವದ ಶಕ್ತಿಶಾಲಿ ಕಾಂಗ್ರೆಸ್ ಹೈಕಮಾಂಡ್ ಇತ್ತು.
ಆದ್ದರಿಂದ ತಕ್ಷಣದಲ್ಲಿ ಅನಾಹುತಗಳೇನೂ ಆಗಿರಲಿಲ್ಲ. ಮನಮೋಹನ್‌ಸಿಂಗ್ ಅವರು ಕಳೆದ ಏಳು ವರ್ಷಗಳಿಂದ ಪ್ರಧಾನಿಯಾಗಿದ್ದರೆ ಅದಕ್ಕೆ ಸೋನಿಯಾಗಾಂಧಿ ನೇತೃತ್ವದ ಹೈಕಮಾಂಡ್ ಬೆಂಬಲ ಕಾರಣ.

ಅದು ಇಲ್ಲದೆ ಇದ್ದಿದ್ದರೆ ಪ್ರಣವ್ ಮುಖರ್ಜಿ, ಚಿದಂಬರಂ ಮೊದಲಾದ ಘಟಾನುಘಟಿಗಳು ಉಳಿದವರ ಜತೆ ಸೇರಿ ಬಡಪಾಯಿ ಮನಮೋಹನ್‌ಸಿಂಗ್ ಅವರನ್ನು ಎಂದೋ ಕುರ್ಚಿ ಬಿಟ್ಟು ಓಡಿಸುತ್ತಿದ್ದರು.

ರಾಜೀನಾಮೆ ನೀಡಬೇಕಾಗಿ ಬಂದ ಉಮಾಭಾರತಿ ಮರಳಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಬಯಸಿದಾಗ ಬಿಜೆಪಿ ಹೈಕಮಾಂಡ್ ಅದಕ್ಕೆ ಅವಕಾಶ ನೀಡದೆ ಬಾಬುಲಾಲ್ ಗೌರ್ ಅವರನ್ನೇ ಮುಂದುವರಿಸಿತ್ತು.
ಅದರ ನಂತರ ಶಿವರಾಜ್‌ಸಿಂಗ್ ಚೌಹಾಣ್ ಎಂಬ ಒಂದು ಕಾಲದ ಉಮಾಭಾರತಿಯವರ ಶಿಷ್ಯನನ್ನೇ ಆ ಸ್ಥಾನದಲ್ಲಿ ಕೂರಿಸಿದ್ದು ಮಾತ್ರವಲ್ಲ, ಅವರ ನೇತೃತ್ವದಲ್ಲಿ ಚುನಾವಣೆಯನ್ನೂ ಎದುರಿಸಿತು.
ಉಮಾಭಾರತಿಯವರ ಜನಪ್ರಿಯತೆ ಯಡಿಯೂರಪ್ಪನವರಿಗಿಂತ ಕಡಿಮೆ ಏನಿರಲಿಲ್ಲ. ಆದರೆ ಗುರು ಮತ್ತು ಶಿಷ್ಯನ ನಡುವೆ ನಡೆದ ಚುನಾವಣಾ ಸಮರದಲ್ಲಿ ಶಿಷ್ಯನೇ ಗೆದ್ದುಬಿಟ್ಟರು. ಇದಕ್ಕೆ ಅವರ ಬೆನ್ನಹಿಂದೆ ದೃಢವಾಗಿ ನಿಂತ ಬಿಜೆಪಿ ಹೈಕಮಾಂಡ್ ಕಾರಣ.
ಈ ಪರಿಸ್ಥಿತಿಯಲ್ಲಿ ಆತ್ಮರಕ್ಷಣೆಗಾಗಿ ಸದಾನಂದ ಗೌಡರ ಬಳಿ ಬಹಳ ಆಯ್ಕೆಗಳಿಲ್ಲ, ಇರುವುದೇ ಎರಡು. ಒಂದೋ ಯಡಿಯೂರಪ್ಪನವರಿಗೆ ಸಂಪೂರ್ಣ ಶರಣಾಗತಿ ಇಲ್ಲವೇ ಸ್ವತಂತ್ರವಾಗಿ ಕಾರ‌್ಯನಿರ್ವಹಣೆ. ಇವೆರಡೂ ಅರ್ಧಅರ್ಧ ಮಾಡುವ ಕೆಲಸಗಳಲ್ಲ. ಎರಡು ದೋಣಿಗಳಲ್ಲಿ ಕಾಲಿಡುವವರು ನೀರಲ್ಲಿ ಮುಳುಗುವ ಸಾಧ್ಯತೆಯೇ ಹೆಚ್ಚು.

ಶರಣಾಗತಿ ಎಂದರೆ ಮುಖ್ಯಮಂತ್ರಿಯಾಗಿ ಕೈಯಲ್ಲಿರಬೇಕಾದ ರಾಜಕೀಯ ಅಧಿಕಾರವನ್ನು ಬಿಟ್ಟುಕೊಡುವುದು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕನಾಗದವನು ಆಡಳಿತದ ಮುಖ್ಯಸ್ಥನಾಗಿ ಯಶಸ್ಸು ಕಾಣುವುದು ಕಷ್ಟ.
ಭ್ರಷ್ಟಾಚಾರದ ಆರೋಪಗಳಿಂದಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಜೆ.ಜಯಲಲಿತಾ ಮುಖ್ಯಮಂತ್ರಿಯಾಗಿ ನೇಮಕಗೊಂಡದ್ದನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದಾಗ ಆರು ತಿಂಗಳ ಅವಧಿಗೆ ಒ. ಪನ್ನೀರಸೆಲ್ವಂ ಮುಖ್ಯಮಂತ್ರಿಗಳಾಗಿದ್ದರು. ರಾಜಕೀಯದ ಯಾವ ಅಧಿಕಾರವೂ ಅವರಿಗೆ ಇರಲಿಲ್ಲ. ಅವರು ಜಯಲಲಿತಾ ಕೂರುತ್ತಿದ್ದ ಕುರ್ಚಿಯಲ್ಲಿಯೂ ಕೂತಿರಲಿಲ್ಲ.
ಬಿಕ್ಕಟ್ಟಿನ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾದ ಶಿವರಾಜ್‌ಸಿಂಗ್ ಚೌಹಾಣ್, ಜನಪ್ರಿಯ ನಾಯಕಿ ಉಮಾಭಾರತಿ ಅವರನ್ನು ಎದುರು ಹಾಕಿಕೊಂಡು ಕಳೆದ ಆರುವರ್ಷಗಳಿಂದ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ಇತಿಹಾಸದ ಪುಟಗಳಲ್ಲಿ ಪನ್ನೀರಸೆಲ್ವಂ ಮತ್ತು ಶಿವರಾಜ್‌ಸಿಂಗ್ ಚೌಹಾಣ್ ಇಬ್ಬರ ಹೆಸರೂ ಇದೆ. ಇವರಲ್ಲಿ ಯಾರ ಪಕ್ಕದಲ್ಲಿ ತಮ್ಮ ಹೆಸರು ಇರಬೇಕೆಂಬುದನ್ನು ಸದಾನಂದಗೌಡರು ನಿರ್ಧರಿಸಬೇಕಾಗಿದೆ.
 ಇಷ್ಟೆಲ್ಲ ಕಸರತ್ತು ನಡೆಸಿದ ನಂತರವೂ ಸದಾನಂದ ಗೌಡರು ಇನ್ನುಳಿದ ಇಪ್ಪತ್ತೆರಡು ತಿಂಗಳುಗಳನ್ನು ಪೂರ್ಣಗೊಳಿಸಬಹುದೇ? ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ. ಆದರೆ ಇಪ್ಪತ್ತೆರಡು ತಿಂಗಳು ಈ ಸರ್ಕಾರ ಬಾಳಿದರೆ ಅದರ ನಂತರ ಏನಾಗಬಹುದೆಂಬುದನ್ನು ಸುಲಭದಲ್ಲಿ ಊಹಿಸಬಹುದು.
ಸದಾನಂದ ಗೌಡರು ಇಪ್ಪತ್ತೆರಡು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿದು ಅತ್ಯುತ್ತಮ ಆಡಳಿತವನ್ನೇ ನೀಡಿದರೆನ್ನಿ.
ಆಗಲೂ ಬಿಜೆಪಿ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲಾಗದು. ಚುನಾವಣೆ ಘೋಷಣೆಯಾದ ಕೂಡಲೇ ಬಿಜೆಪಿಯಲ್ಲಿ ಏನು ನಡೆಯಬಹುದೆಂಬುದನ್ನು ಈಗಲೇ ಹೇಳಿ ಬಿಡಬಹುದು, ಇದಕ್ಕೆ ಜ್ಯೋತಿಷಶಾಸ್ತ್ರವನ್ನು ಓದಬೇಕಾಗಿಲ್ಲ, ಯಡಿಯೂರಪ್ಪನವರನ್ನು ಅರ್ಥಮಾಡಿಕೊಂಡರೆ ಸಾಕು.
ಮೊದಲನೆಯದಾಗಿ ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಯಾವುದೇ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡು ದಿಢೀರನೇ ಒಂದು ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕಬಹುದು. ಅದನ್ನು ಮಾಡದೆ ಇದ್ದರೆ ಚುನಾವಣೆ ಘೋಷಣೆಯಾದ ಕೂಡಲೇ  ಕನಿಷ್ಠ 150 ಮಂದಿ ತನ್ನ ಬೆಂಬಲಿಗರಿಗೆ ಪಕ್ಷದ ಟಿಕೆಟ್ ಕೇಳಬಹುದು.

ನಿರಾಕರಿಸಿದರೆ ಎಲ್ಲೆಲ್ಲಿ ತಾವೊಲ್ಲದ ಪಕ್ಷದ ಅಭ್ಯರ್ಥಿಗಳಿರುತ್ತಾರೋ ಅಲ್ಲೆಲ್ಲ ಬಂಡುಕೋರರನ್ನು ಕಣಕ್ಕಿಳಿಸಬಹದು. ಈ ಬಂಡುಕೋರರು ಗೆಲ್ಲದಿದ್ದರೂ ಅಧಿಕೃತ ಅಭ್ಯರ್ಥಿಗೆ ಹೋಗಬೇಕಾಗಿರುವ 10-20 ಸಾವಿರ ಮತಗಳನ್ನು ತಿಂದುಹಾಕುತ್ತಾರೆ.
1994ರ ವಿಧಾನಸಭಾ ಚುನಾವಣೆಯಲ್ಲಿ  ಯಡಿಯೂರಪ್ಪನವರ ಜಿಲ್ಲೆಯವರೇ ಆಗಿರುವ ಎಸ್. ಬಂಗಾರಪ್ಪನವರ ಬಂಡಾಯದಿಂದಾಗಿ ಕಾಂಗ್ರೆಸ್ ಯಾವ ರೀತಿ ಸೋಲು ಅನುಭವಿಸಿತೋ ಅದೇ ಗತಿ ಬಿಜೆಪಿಗೆ ಬರಬಹುದು (ಎಸ್.ಬಂಗಾರಪ್ಪನವರ ಕೆಸಿಪಿ ಗೆದ್ದದ್ದು ಹತ್ತೇ ಸ್ಥಾನಗಳಾದರೂ ಗಳಿಸಿದ್ದ ಮತಪ್ರಮಾಣ ಶೇ 7.31. ಕಾಂಗ್ರೆಸ್  ಶೇ 27.31ರಷ್ಟು ಮತಗಳಿಸಿತ್ತು. 
ಜನತಾ ಪಕ್ಷ ಗಳಿಸಿದ್ದ ಮತ ಪ್ರಮಾಣ ಶೇ 33.54 ಮಾತ್ರ. ಇದು ಕಾಂಗ್ರೆಸ್ ಮತ್ತು ಕೆಸಿಪಿಯ ಒಟ್ಟು ಮತ ಪ್ರಮಾಣಕ್ಕಿಂತ ಶೇ 0.98ರಷ್ಟು ಕಡಿಮೆ. ಅಂದರೆ ಬಂಗಾರಪ್ಪ ಕಾಂಗ್ರೆಸ್ ಜತೆಗಿದ್ದರೆ ಅದು ಸೋಲುತ್ತಿರಲಿಲ್ಲವೇನೋ?)
ಒಂದೊಮ್ಮೆ ಯಡಿಯೂರಪ್ಪನವರ ಒತ್ತಡಕ್ಕೆ ಹೈಕಮಾಂಡ್ ಮಣಿದು ಅವರು ಹೇಳಿದ 150 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆನ್ನಿ, ಆಗ ಅವರ ವಿರೋಧಿಗಳು ಸುಮ್ಮನಿರುತ್ತಾರಾ? ಅವರು ಅಲ್ಲಲ್ಲಿ ಬಂಡುಕೋರರನ್ನು ಕಣಕ್ಕಿಳಿಸುತ್ತಾರೆ. ಅವರೂ 10-20 ಸಾವಿರ ಮತಗಳನ್ನು ಪಡೆದು ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಕಾರಣರಾಗುತ್ತಾರೆ.
ಯಾವ ದೃಷ್ಟಿಯಿಂದ ನೋಡಿದರೂ ಬಿಜೆಪಿಯ ಮುಂದಿರುವುದು ಸೋಲಿನ ಹಾದಿಯೇ ಹೊರತಾಗಿ ಗೆಲುವಿನದ್ದಲ್ಲ. ಬಿಜೆಪಿಯ ಗೆಲುವಿಗೆ ಇರುವ ಒಂದೇ ದಾರಿಯೆಂದರೆ ಯಡಿಯೂರಪ್ಪನವರಿಗೆ ಇದ್ದಕ್ಕಿದ್ದ ಹಾಗೆ ಜ್ಞಾನೋದಯವಾಗಿ `ನಾನು ಯಾರಿಗೂ ಟಿಕೆಟ್ ಕೇಳುವುದಿಲ್ಲ, ಗೆದ್ದು ಬಂದರೆ ಅಧಿಕಾರವನ್ನೂ ಕೇಳುವುದಿಲ್ಲ.
ಪಕ್ಷದ ನಿಷ್ಠಾವಂತ ಕಾರ‌್ಯಕರ್ತನಾಗಿ ಕೆಲಸ ಮಾಡುತ್ತೇನೆ~ ಎಂದು ಘೋಷಿಸಿ ಪ್ರಾಮಾಣಿಕವಾಗಿ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದು. ಇಷ್ಟು ವರ್ಷಗಳ ಕಾಲ ಯಡಿಯೂರಪ್ಪನವರನ್ನು ನೋಡಿದವರಿಗಾದರೂ ಅವರು ಈ ರೀತಿ ಬದಲಾಗಬಹುದು ಎಂದು ಅನಿಸುತ್ತಾ?

Monday, August 8, 2011

ದುರ್ಬಲ ನಾಯಕತ್ವದ ಅಸಹಾಯಕ ಬಿಜೆಪಿ

ಚುನಾವಣಾ ಸೋಲು ರಾಜಕೀಯ ಪಕ್ಷಗಳಿಗೆ ಹೊಸದಲ್ಲ, ಅವಮಾನವೂ ಅಲ್ಲ. ಕುಸಿದುಬಿದ್ದ ಗೆಲುವಿನ ಕೋಟೆಯ ಇಟ್ಟಿಗೆಗಳನ್ನು ಇಟ್ಟುಕೊಂಡೇ ರಾಜಕಾರಣಿಗಳು ಗೆಲುವಿನ ಮೆಟ್ಟಿಲುಗಳನ್ನು ಕಟ್ಟಲು ಪ್ರಯತ್ನಿಸುತ್ತಾರೆ.

ಎಷ್ಟೋ ಸಂದರ್ಭಗಳಲ್ಲಿ ಸೋಲಿನ ನಂತರ ಉಕ್ಕಿಬರುವ ಮತದಾರರ ಅನುಕಂಪವೇ ಅವರನ್ನು ಗೆಲುವಿನ ಕಡೆ ಕೈಹಿಡಿದು ನಡೆಸಿಕೊಂಡು ಹೋಗುವುದುಂಟು. ಆದರೆ ನೈತಿಕವಾಗಿ ರಾಜಕೀಯ ಪಕ್ಷಗಳು ಅನುಭವಿಸುವ ಸೋಲು ಅವಮಾನದಿಂದ ಮುಖ ಮುಚ್ಚಿಕೊಳ್ಳುವಂತೆ ಮಾಡುವುದು ಮಾತ್ರವಲ್ಲ, ಅದರಿಂದ ಚೇತರಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ.

ಯಾಕೆಂದರೆ, ಆಗ ಜನರಿಂದ ವ್ಯಕ್ತವಾಗುವುದು ಅನುಕಂಪ ಅಲ್ಲ, ತಿರಸ್ಕಾರ. ಹತ್ತು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ಲಂಚ ಪಡೆಯುತ್ತಿರುವುದು ಟಿವಿ ಪರದೆಗಳಲ್ಲಿ ಬಿತ್ತರಗೊಂಡಾಗ ಭಾರತೀಯ ಜನತಾ ಪಕ್ಷ ನೈತಿಕವಾಗಿ ಕುಸಿದುಹೋಗಿತ್ತು.
ಆ ಪಕ್ಷದ ನಾಯಕರು ತಮ್ಮನ್ನು ಸಮರ್ಥಿಸಿಕೊಳ್ಳಲು ಮಾಧ್ಯಮಗಳ ಮುಂದೆ ಪರದಾಡುತ್ತಿದ್ದರು. ಆದರೆ ಆ ಕಾಲದಲ್ಲಿ ಕೈಯ್ಯಲ್ಲಿದ್ದ ಅಧಿಕಾರದ ಬಲ ಮತ್ತು ಪಕ್ಷದಲ್ಲಿದ್ದ ಎ.ಬಿ.ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿಯವರಂತಹ ಹಿರಿಯ ನಾಯಕರು ಆ ಕುಸಿತವನ್ನು ಒಂದು ಹಂತಕ್ಕೆ ತಡೆದು ನಿಲ್ಲಿಸಿ ಪಕ್ಷದ ಮುಖ ಉಳಿಸಿದ್ದರು. ಆದರೆ ಈಗ ?
ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ನಂತರದ ಮೂರು ದಶಕಗಳಲ್ಲಿ ಹಲವಾರು ಚುನಾವಣಾ ಸೋಲುಗಳನ್ನು ಅನುಭವಿಸಿದೆ. ಕಲ್ಯಾಣ್‌ಸಿಂಗ್ ಅವರಿಂದ ಹಿಡಿದು ಮದನ್‌ಲಾಲ್ ಖುರಾನಾ, ಬಾಬುಲಾಲ್ ಮರಂಡಿ, ಉಮಾಭಾರತಿ ವರೆಗೆ ಹಲವರ ಬಂಡಾಯವನ್ನು ಎದುರಿಸಿದೆ.

ಆದರೆ ಈಗಿನಷ್ಟು ದುರ್ಬಲ ಮತ್ತು ಅಸಹಾಯಕ ಸ್ಥಿತಿಯಲ್ಲಿ ಅದು ಎಂದೂ ಕಾಣಿಸಿಕೊಂಡಿರಲಿಲ್ಲ. ಪಕ್ಷಕ್ಕೆ ಉಗ್ರಸ್ವರೂಪದ ರಾಜಕೀಯ ಮುಖವನ್ನು ನೀಡಿದ್ದ  ಎಲ್.ಕೆ.ಅಡ್ವಾಣಿ  ತಮ್ಮ ಸಂಯಮದ ಮಾತುಗಳಿಂದ ಎಲ್ಲರ ಅಭಿಮಾನಕ್ಕೆ ಪಾತ್ರರಾದವರು.

ತಮ್ಮ ಹೋರಾಟದ ದಿನಗಳಲ್ಲಿಯೂ ಕಟುವಾಗಿ ಮಾತನಾಡಿದ್ದು ಕಡಿಮೆ. ಇಂತಹ ಅಡ್ವಾಣಿಯವರು ಹತಾಶರಾಗಿ `ನಮ್ಮಲ್ಲಿ  ಡಕಾಯಿತರು, ಕಿಸೆಗಳ್ಳರು ಇದ್ದಾರೆ~ ಎಂದು ಹೇಳುವ ಮಟ್ಟಕ್ಕೆ ಹೋಗುವುದಾದರೆ ಪಕ್ಷ ತಲುಪಿರುವ ನೈತಿಕ ಅಧಃಪತನದ ಆಳವನ್ನು ಊಹಿಸಿಕೊಳ್ಳಬಹುದು. ರಾಜಕೀಯ ಪಕ್ಷದ ಅಸಹಾಯಕತೆಗೆ ಅದರ ದುರ್ಬಲ ನಾಯಕತ್ವ ಕಾರಣವಾಗುತ್ತದೆ. ಕರ್ನಾಟಕದಲ್ಲಿ ಬಯಲಾಗಿದ್ದು ಇದೇ ದೌರ್ಬಲ್ಯ.
ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಪ್ರಶ್ನೆ ಎದುರಾದಾಗ  ಹೈಕಮಾಂಡ್ ಬಹಳ ಜಾಣತನದಿಂದ ರಹಸ್ಯ ಮತದಾನದ ಪ್ರಸ್ತಾವ ಮುಂದಿಟ್ಟಿತು. ದೆಹಲಿಯಿಂದ ಲಕೋಟೆ ಮೂಲಕ ಬರುವ ಕಾಂಗ್ರೆಸ್ ಮುಖ್ಯಮಂತ್ರಿಗಳಿಗಿಂತ ಇದು ಹೆಚ್ಚು ಪ್ರಜಾಸತ್ತಾತ್ಮಕವಾದುದು ಎನ್ನುವುದರಲ್ಲಿ ಅನುಮಾನ ಇಲ್ಲ.

ಆದರೆ ಬಿಜೆಪಿ ಈ ಉದ್ದೇಶದಿಂದ ರಹಸ್ಯ ಮತದಾನ ನಡೆಸಿದ್ದೇ? ಅಂತಹ ಉದ್ದೇಶ ಇದ್ದಿದ್ದರೆ ಅದನ್ನು ಹಿಂದೆ ಯಾಕೆ ನಡೆಸಿರಲಿಲ್ಲ? ಈದ್ಗಾ ವಿವಾದದಲ್ಲಿ ಸಿಲುಕಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಉಮಾಭಾರತಿ ಅವರ ವಿರುದ್ದದ ಮೊಕದ್ದಮೆಯನ್ನು ಕರ್ನಾಟಕ ಸರ್ಕಾರ ಹಿಂದೆಗೆದುಕೊಂಡ ನಂತರ ಅವರನ್ನು ಹೈಕೋರ್ಟ್ ದೋಷಮುಕ್ತಗೊಳಿಸಿತ್ತು.
ಆದರೆ ಬಿಜೆಪಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲಿಲ್ಲ. ಬಹುಸಂಖ್ಯೆಯ ಶಾಸಕರು ಉಮಾಭಾರತಿ ಪರ ಇದ್ದರೂ ಬಿಜೆಪಿ ಹೈಕಮಾಂಡ್ ಬಾಬುಲಾಲ್ ಗೌರ್ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಿತು. ಅಲ್ಲೂ ರಹಸ್ಯ ಮತದಾನ ನಡೆಸಬಹುದಿತ್ತಲ್ಲ?

ರಹಸ್ಯ ಮತದಾನಕ್ಕೆ ನಿಜವಾದ ಕಾರಣ ದುರ್ಬಲ ನಾಯಕತ್ವದ ಅಸಹಾಯಕತೆ ಕಾರಣ ಹೊರತು ಆಂತರಿಕ ಪ್ರಜಾಪ್ರಭುತ್ವದ ಮೇಲಿನ ಬದ್ಧತೆ ಅಲ್ಲ. ಈ ದುರ್ಬಲ ನಾಯಕತ್ವದ ಹುಟ್ಟಿಗೆ ಯಾರು ಕಾರಣರೆಂದು ಹುಡುಕುತ್ತಾ ಹೋದರೆ ಎದುರಾಗುವುದು ನಾಗಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿ.

ಸಂವಿಧಾನದತ್ತವಾದ ಅಧಿಕಾರ ಇಲ್ಲದ, ರಾಜಕೀಯ ಸ್ವರೂಪದ ಯಾವ ಬಾಧ್ಯತೆಯೂ ಇಲ್ಲದ ಆರ್‌ಎಸ್‌ಎಸ್ ಕೆಲಸ ಏನಿದ್ದರೂ ತೆರೆಯ ಮರೆಯಲ್ಲಿ. ಆದ್ದರಿಂದಲೇ ಬಿಜೆಪಿಯ ಆಂತರಿಕ ವ್ಯವಹಾರಗಳಲ್ಲಿ ಅದು ವಹಿಸುವ ಪಾತ್ರ ಚರ್ಚೆಗೆ ಬರುವುದೇ ಇಲ್ಲ.
ಆರು ವರ್ಷಗಳ ಹಿಂದೆ ಆರ್‌ಎಸ್‌ಎಸ್ ಸರಸಂಘ ಚಾಲಕ ಕೆ.ಎಸ್.ಸುದರ್ಶನ್ ಅವರು ಇದ್ದಕ್ಕಿದ್ದಂತೆ ಟಿವಿ ಚಾನೆಲ್‌ಗೆ ಸಂದರ್ಶನ ನೀಡಿ ಬಿಜೆಪಿಯ ಎರಡು ಹಿರಿತಲೆಗಳಾದ ವಾಜಪೇಯಿ ಮತ್ತು ಅಡ್ವಾಣಿಯವರು ರಾಜಕೀಯದಿಂದ ನಿವೃತ್ತಿ ಆಗಬೇಕೆಂದು ಫರ್ಮಾನು ಹೊರಡಿಸಿದ್ದರು.ಅದು ಗುರುಸ್ಥಾನದಲ್ಲಿರುವ ಆರ್‌ಎಸ್‌ಎಸ್‌ಗೆ 80 ಮತ್ತು ಶಿಷ್ಯನ ಸ್ಥಾನದಲ್ಲಿರುವ ಬಿಜೆಪಿಗೆ 25 ತುಂಬಿದ ವರ್ಷ.
ದ್ರೋಣಾಚಾರ್ಯರನ್ನು ಹೊರತು ಪಡಿಸಿದರೆ ಇಂತಹ ದುಬಾರಿ `ಗುರುದಕ್ಷಿಣೆ~ಯನ್ನು ಬೇರೆ ಯಾವ ಗುರುವೂ ಕೇಳಿರಲಾರರು.  ಸಮರ್ಥರಾದ ಕಿರಿಯರಿಗೆ ನಾಯಕತ್ವ ಹಸ್ತಾಂತರಿಸುವ ಉದ್ದೇಶದಿಂದ ವಯಸ್ಸಿನ ಭಾರದಿಂದ ಬಾಗಿದ ಹಿರಿಯರನ್ನು ನಿವೃತ್ತಿಯಾಗಲು ಹೇಳಿದ್ದರೆ ಅದೊಂದು ಸಹಜ ಪ್ರಕ್ರಿಯೆ ಆಗುತ್ತಿತ್ತು.

ವಾಜಪೇಯಿ ಆರೋಗ್ಯ ಆಗಲೇ ಕೈಕೊಡುತ್ತಿದ್ದುದರಿಂದ ಅವರು ನಿವೃತ್ತಿ ಜೀವನದ ಕಡೆ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದರು ನಿಜ, ಆದರೆ ಅಡ್ವಾಣಿ? ತನ್ನ ವಯಸ್ಸಿನ ಉಳಿದೆಲ್ಲ ರಾಜಕಾರಣಿಗಳಿಗಿಂತ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವ ಅಡ್ವಾಣಿಯವರು ಆ ಕಾಲದಲ್ಲಿ ನಿವೃತ್ತಿಯಾಗುವ ಯೋಚನೆಯನ್ನೇ ಮಾಡದವರು.
ಅಂತಹ ಸಮಯದಲ್ಲಿ ಅವರನ್ನು ಮನೆಗೆ ಕಳಿಸಲು ಆರ್‌ಎಸ್‌ಎಸ್‌ಗೆ ಎಂತಹ ಒತ್ತಡಗಳಿತ್ತೋ ಗೊತ್ತಿಲ್ಲ. ಭಾರತೀಯ ಜನತಾ ಪಕ್ಷದ ನಿಜವಾದ ಅಧಃಪತನ ಪ್ರಾರಂಭವಾಗಿದ್ದು ಅಲ್ಲಿಂದಲೇ.
ರಾಜಕೀಯ ಸಿದ್ದಾಂತದ ಬಗ್ಗೆ ಏನೇ ಭಿನ್ನಾಭಿಪ್ರಾಯ ಇದ್ದರೂ ವೈಯಕ್ತಿಕ ಮತ್ತು ಸಾರ್ವಜನಿಕ ನಡವಳಿಕೆಯಲ್ಲಿ ಈಗಲೂ ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿರುವವರು ಲಾಲ್‌ಕೃಷ್ಣ ಅಡ್ವಾಣಿ. ಬುದ್ಧಿ ತಿಳಿದಂದಿನಿಂದ ಆರ್‌ಎಸ್‌ಎಸ್ ಶಿಬಿರಗಳಿಗೆ ಮಣ್ಣು ಹೊತ್ತವರು ಅವರು.
ಇಂತಹವರು `ಮಹಮ್ಮದ್ ಅಲಿ ಜಿನ್ನಾ ಜಾತ್ಯತೀತ ನೆಲೆಯಲ್ಲಿ ದೇಶ ನಿರ್ಮಾಣ ಮಾಡಬೇಕೆಂದು ಬಯಸಿದ್ದರು~ ಎಂದು ಹೇಳಿದ ಒಂದು ಮಾತೇ ಅವರ ರಾಜಕೀಯ ಬದುಕಿಗೆ ಮುಳುವಾಗಿ ಹೋಯಿತು. ಆರ್‌ಎಸ್‌ಎಸ್ ಪಟ್ಟು ಹಿಡಿದು ಕೊನೆಗೂ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತು.

ಪರಿವಾರದಿಂದಲೇ ಅವಮಾನಕ್ಕೊಳಗಾದ ಅಡ್ವಾಣಿಯವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಸಮರ್ಥ ನಾಯಕನಾಗಿ ಬಿಂಬಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಹಿರಿಯರ ತಲೆದಂಡ ಕೇಳಿದ ಆರ್‌ಎಸ್‌ಎಸ್ ಬಳಿ ಅವರು ಖಾಲಿ ಮಾಡಿದ ಸ್ಥಾನಗಳಲ್ಲಿ ಕೂರಿಸಲು ಸಮರ್ಥ ಯುವನಾಯಕರೇ ಇರಲಿಲ್ಲ. ಕೊನೆಗೂ ಅಡ್ವಾಣಿ ಸ್ಥಾನದಲ್ಲಿ ಆರ್‌ಎಸ್‌ಎಸ್ ತಂದು ಕೂರಿಸಿದ್ದು ನೆಟ್ಟಗೆ ಒಂದು ಚುನಾವಣೆ ಗೆಲ್ಲಲಾಗದ ಉತ್ತರಭಾರತದ ಹಳೆಯ ಜಮೀನ್ದಾರಿಕೆಯ ಪಳೆಯುಳಿಕೆಯಂತೆ ಕಾಣುತ್ತಿರುವ ರಾಜನಾಥ್ ಸಿಂಗ್ ಅವರನ್ನು.
ಅದರ ನಂತರ ಆ ಸ್ಥಾನಕ್ಕೆ ಬಂದು ಕೂತದ್ದು ಗಲ್ಲಾಪೆಟ್ಟಿಗೆಯ ಮುಂದೆ ಕೂತಿರುವ ಸೇಠ್‌ಗಳಂತೆ ಕಾಣುತ್ತಿರುವ ನಿತಿನ್ ಗಡ್ಕರಿ. ಕೋಮುವಾದಕ್ಕಿಂತ ಭಿನ್ನವಾದ ಅಭಿವೃದ್ಧಿಯ ಅಜೆಂಡಾದೊಂದಿಗೆ ಪಕ್ಷವನ್ನು ಮುನ್ನಡೆಸುವ ಬಗ್ಗೆ ಯೋಚನೆ ಮಾಡುತ್ತಿದ್ದ ಪ್ರಮೋದ್ ಮಹಾಜನ್ ನಾಯಕನಾಗುವುದು ಅರ್‌ಎಸ್‌ಎಸ್‌ಗೆ ಬೇಕಾಗಿರಲಿಲ್ಲ.
 ಸ್ವತಂತ್ರ ವ್ಯಕ್ತಿತ್ವ ಮತ್ತು ಆಧುನಿಕ ಮನೋಭಾವದ ಮಹಾಜನ್ ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಲಾಗದು ಎಂಬ ಭಯ ಇದಕ್ಕೆ ಕಾರಣ. ಇದಕ್ಕಾಗಿ ಮಹಾರಾಷ್ಟ್ರದಲ್ಲಿ ಮಹಾಜನ್ ವಿರುದ್ಧ ನಿತಿನ್ ಗಡ್ಕರಿ ಅವರನ್ನು ಎತ್ತಿಕಟ್ಟಿದ್ದೇ ಆರ್‌ಎಸ್‌ಎಸ್.  ಆ ಸಾಮೀಪ್ಯದ ಬಲದಿಂದಲೇ ಗಡ್ಕರಿ ನಂತರ  ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿದ್ದು.
ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ರಾಜಕೀಯ ಪಕ್ಷವಾಗಿ ಬೆಳೆಯಲು ಸಾಧ್ಯವಿದ್ದ ಬಿಜೆಪಿಯನ್ನು  ತನ್ನ ಸ್ವಾರ್ಥಸಾಧನೆಗಾಗಿ ಆರ್‌ಎಸ್‌ಎಸ್ ಬಲಿಕೊಟ್ಟಿತೇನೋ ಎಂದು ಮತ್ತೆಮತ್ತೆ ಅನಿಸುವುದು ಇದೇ ಕಾರಣಕ್ಕೆ.
ಇತಿಹಾಸದ ಚಕ್ರವನ್ನು ಸ್ವಲ್ಪ ಹಿಂದಕ್ಕೆ ತಿರುಗಿಸಿದರೆ ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಕಾರಣವಾದ `ಜನತಾ~ಪ್ರಯೋಗವನ್ನು ವಿಫಲಗೊಳಿಸಿದ್ದು ಕೂಡಾ ಆರ್‌ಎಸ್‌ಎಸ್ ಎನ್ನುವುದು ಗೊತ್ತಾಗುತ್ತದೆ.
ಕೇವಲ ಬ್ರಾಹ್ಮಣ-ಬನಿಯಾಗಳ ಮನೆಯಂಗಳದಲ್ಲಿ ಗಿರ್ಕಿ ಹೊಡೆಯುತ್ತಿದ್ದ ಆರ್‌ಎಸ್‌ಎಸ್ ಸಮಾಜದ ಮುಖ್ಯಪ್ರವಾಹದಲ್ಲಿ ಸೇರಿಕೊಳ್ಳಲು ನೆರವಾಗಿದ್ದು ಸಂಪೂರ್ಣ ಕ್ರಾಂತಿಯ ಶಿಲ್ಪಿ ಜಯಪ್ರಕಾಶ್ ನಾರಾಯಣ್.
ಅದರೆ ಜನತಾ ಸರ್ಕಾರದಲ್ಲಿದ್ದ ಸಮಾಜವಾದಿ ನಾಯಕರಾದ ಮಧು ಲಿಮಯೆ, ರಾಜ್‌ನಾರಾಯಣ್ ಮತ್ತು ಜಾರ್ಜ್ ಫರ್ನಾಂಡಿಸ್ `ದ್ವಿಸದಸ್ಯತ್ವ~ವಿವಾದ ಎತ್ತಿದಾಗ ಆರ್‌ಎಸ್‌ಎಸ್ ಮಧ್ಯೆ ಪ್ರವೇಶಿಸಿತು.
  ಇದರ ಒತ್ತಡಕ್ಕೆ ಮಣಿದ ವಾಜಪೇಯಿ-ಅಡ್ವಾಣಿ ಬಳಗ ಸರ್ಕಾರದಲ್ಲಿದ್ದವರು ಆರ್‌ಎಸ್‌ಎಸ್ ಸದಸ್ಯರಾಗುವಂತಿಲ್ಲ ಎನ್ನುವ ಅಭಿಪ್ರಾಯದ ವಿರುದ್ಧ ಸಿಡಿದೆದ್ದು `ಜನತಾ~ ತೊರೆದು `ಭಾರತೀಯ ಜನತಾ ಪಕ್ಷ~ ಕಟ್ಟಿತು.

ಆದರೆ ಆರ್‌ಎಸ್‌ಎಸ್‌ಗಾಗಿ ಅಧಿಕಾರ ತ್ಯಾಗ ಮಾಡಿದ ಇದೇ ನಾಯಕರನ್ನು 25 ವರ್ಷಗಳ ನಂತರ ಆರ್‌ಎಸ್‌ಎಸ್ ಸರ ಸಂಘಚಾಲಕ ಕೆ.ಎಸ್.ಸುದರ್ಶನ್ ಹೊರದಬ್ಬಲು ಹೊರಟದ್ದು ಮಾತ್ರ ಇತಿಹಾಸದ ವ್ಯಂಗ್ಯ.
 ಕೆ.ಎಸ್.ಸುದರ್ಶನ್ ಅವರು ವಾಜಪೇಯಿ ಮತ್ತು ಅಡ್ವಾಣಿಯವರ ತಲೆದಂಡ ಕೇಳಲು ಸ್ವಾರ್ಥವಲ್ಲದೆ ಬೇರೆ ಕಾರಣಗಳಿರಲಿಲ್ಲ. ತನ್ನ ಕೈಗೊಂಬೆಯಂತಿರುವ ನಾಯಕರನ್ನು ಮುಂದಿಟ್ಟುಕೊಂಡು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂದು ಹೊರಟವರಿಗೆ ದೈತ್ಯ ನಾಯಕರಾದ ವಾಜಪೇಯಿ ಮತ್ತು ಅಡ್ವಾಣಿ ಅಡ್ಡಿಯಾಗಿದ್ದರು.
ಮೊದಲಿನಿಂದಲೂ ಇವರೆದುರು ಅಭದ್ರತೆಯಿಂದ ನರಳುತ್ತಾ ಬಂದ ಆರ್‌ಎಸ್‌ಎಸ್ ನಂತರದ ದಿನಗಳಲ್ಲಿ ಯಾವೊಬ್ಬ ನಾಯಕರನ್ನು ಸ್ವತಂತ್ರವಾಗಿ ಬೆಳೆಯಲು ಬಿಡಲೇ ಇಲ್ಲ. ವಿಚಿತ್ರವೆಂದರೆ ಬಿಜೆಪಿಯಲ್ಲಿ ನಾಯಕರಾಗಿ ಬೆಳೆದು ನಂತರ ಭ್ರಷ್ಟಾಚಾರ, ಅಶಿಸ್ತು ಮತ್ತು ದುರ್ನಡತೆಯ ಕಾರಣದಿಂದ ಹೊರ ಹೋದವರೆಲ್ಲರೂ ಊರಿಗೆಲ್ಲಾ ಶಿಸ್ತು, ಪ್ರಾಮಾಣಿಕತೆ, ಸಚ್ಚಾರಿತ್ರ್ಯ, ಸಂಸ್ಕಾರಗಳ ಪಾಠ ಹೇಳುವ ಆರ್‌ಎಸ್‌ಎಸ್ ಶಿಬಿರದಿಂದಲೇ ಬಂದವರು.

ಬಂಗಾರು ಲಕ್ಷ್ಮಣ್, ಕಲ್ಯಾಣ್‌ಸಿಂಗ್, ಉಮಾಭಾರತಿ, ಯಡಿಯೂರಪ್ಪ.. ಎಲ್ಲರೂ ರಾಜಕೀಯದ ಮೊದಲ ಪಾಠವನ್ನು ಆರ್‌ಎಸ್‌ಎಸ್ ಬೈಠಕ್‌ಗಳಲ್ಲಿಯೇ ಕಲಿತವರು.  ನಾನಾ ರೀತಿಯ ದೌರ್ಬಲ್ಯಗಳಿಗೆ ಬಲಿಯಾಗಬಲ್ಲ ಇಂತಹ ಶೂದ್ರ ನಾಯಕರನ್ನೇ ಹುಡುಕಾಡಿ ಆರ್‌ಎಸ್‌ಎಸ್ ಬೆಳೆಸಿದ್ದು, ಬೆಂಬಲಿಸಿದ್ದು.

ಇವರಿಗೆಲ್ಲ ಅಧಿಕಾರ ಕೊಟ್ಟರೆ ಹೀಗಾಗುತ್ತದೆ ನೋಡಿ ಎನ್ನುವ ಸಂದೇಶ ಕೊಡುವುದೂ ಇದರ ಹಿಂದಿನ ದುರುದ್ದೇಶ ಇರಬಹುದೇನೋ ಎಂದು ಸಂಶಯಪಡುವ ಹಾಗಿದೆ ಈ ನಾಯಕರ ಹಿನ್ನೆಲೆ ಮತ್ತು ಆರ್‌ಎಸ್‌ಎಸ್ ನಡವಳಿಕೆ. ರಾಜ್ಯದ ಹೊಸ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೂ ಈ ನಾಯಕರೆಲ್ಲರ ಅನುಭವದಲ್ಲಿ ಕಲಿಯಬೇಕಾದ ಪಾಠ ಇರಬಹುದೇನೋ?
 ಕರ್ನಾಟಕದ ಬಿಜೆಪಿಯಲ್ಲಿ  ನಡೆಯುತ್ತಿರುವ ಈ ಎಲ್ಲ ರಾಜಕೀಯ ಬೆಳವಣಿಗೆಗಳಿಂದ ರೋಸಿ ಹೋದವರಲ್ಲಿ ಅನೇಕರು `ಆ ಪಕ್ಷದಲ್ಲಿ ಒಂದು ಬಲವಾದ ಹೈಕಮಾಂಡ್ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ~ ಎಂದು ನಿಟ್ಟುಸಿರು ಬಿಡುತ್ತಾರೆ.
ದೆಹಲಿಯಿಂದಲೇ ಎಲ್ಲವನ್ನೂ ನಿಯಂತ್ರಿಸುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ಒಂದು ಕಾಲದಲ್ಲಿ ಇವರೇ ಟೀಕಿಸುತ್ತಿದ್ದವರು. ರಾಷ್ಟ್ರೀಯ ಪಕ್ಷಗಳ  ಅಟ್ಟಹಾಸದಿಂದ ಬೇಸತ್ತು ಹೋದವರೆಲ್ಲರೂ ಪ್ರಾದೇಶಿಕ ಮಟ್ಟದಲ್ಲಿ ನಾಯಕರು ಬೆಳೆಯಲಿ ಎಂದು ದೇವರಿಗೆ ಕೈಮುಗಿದವರೇ ಆಗಿದ್ದಾರೆ.
ಇದೇ ಜನ ಈಗ `ಪ್ರಾದೇಶಿಕ ಪಾಳೆಯಗಾರ~ರದ್ದು ಅತಿ ಆಯಿತು, ಇವರನ್ನು ನಿಯಂತ್ರಿಸುವಂತಹ ಬಲಶಾಲಿ ನಾಯಕರು ಪಕ್ಷಗಳ ಹೈಕಮಾಂಡ್‌ನಲ್ಲಿರಬೇಕು ಎಂದು ಹೇಳುತ್ತಿದ್ದಾರೆ. ಈ ರೀತಿಯ ತಕ್ಷಣದ ಪ್ರತಿಕ್ರಿಯೆಗಳನ್ನು ಆಧರಿಸಿ ಭಾರತದ ರಾಜಕಾರಣ ಮಗ್ಗುಲು ಬದಲಾಯಿಸುತ್ತದೆ ಎಂದು ಹೇಳಲಾಗದು.

ಆದರೆ ರಾಜಕೀಯ ಪಕ್ಷಗಳಲ್ಲಿ ಶಕ್ತಿಶಾಲಿ ನಾಯಕರನ್ನೊಳಗೊಂಡ ಬಲವಾದ ಹೈಕಮಾಂಡ್ ಬಗ್ಗೆ ಚರ್ಚೆ ಸಣ್ಣದಾಗಿಯಾದರೂ ಪ್ರಾರಂಭವಾಗಿದೆ. ಇದು ಹೇಗೆ ಮುಂದುವರಿಯುತ್ತದೋ ಕಾದು ನೋಡಬೇಕು.

Monday, August 1, 2011

ನಾಯಕ ಬದಲಾದರು, ವ್ಯವಸ್ಥೆ ಬದಲಾಗುವುದೇ?

ಬಿ.ಎಸ್.ಯಡಿಯೂರಪ್ಪನವರು ಹೀಗೇಕಾದರು ಎಂದು ಯಾರೂ ಅಚ್ಚರಿ ಪಡಬೇಕಾಗಿಲ್ಲ, ಅವರಿದ್ದದ್ದೇ ಹೀಗೆ. ತೊಂಬತ್ತರ ದಶಕದಲ್ಲಿ ಭಾರತೀಯ ಜನತಾ ಪಕ್ಷ ಯಡಿಯೂರಪ್ಪನವರನ್ನು ತಮ್ಮ ನಾಯಕನೆಂದು ಬಿಂಬಿಸಿದ್ದಾಗಲೂ, ಆ ಆಯ್ಕೆಗೆ ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಸಕಲ ಅಂಗಸಂಸ್ಥೆಗಳು ಬೆಂಬಲದ ಜಯಘೋಷ ಮಾಡಿದ್ದಾಗಲೂ ಮತ್ತು ವೀರಶೈವ ಮಠಗಳು ತಮ್ಮ ನಾಯಕನೆಂದು ಆಶೀರ್ವಾದ ಮಾಡಿದ್ದಾಗಲೂ ಅವರು ಹೀಗೆಯೇ ಇದ್ದರು.

ಅಧಿಕಾರಕ್ಕೆ ಬಂದು ಯಡಿಯೂರಪ್ಪನವರು ಹೀಗಾಗಿದ್ದಲ್ಲ. ಹೌದು, ಈಗ ಹೆಚ್ಚುವರಿಯಾಗಿ ಒಂದಷ್ಟು ಭ್ರಷ್ಟಾಚಾರದ ಆರೋಪಗಳನ್ನು ಅವರು ಎದುರಿಸುತ್ತಿರಬಹುದು. ಹಿಂದೆ ಯಾಕೆ ಭ್ರಷ್ಟರಾಗಿರಲಿಲ್ಲ ಎನ್ನುವ ಪ್ರಶ್ನೆಗೆ ಆಗ ಅವಕಾಶ ಇರಲಿಲ್ಲ ಎನ್ನುವುದಷ್ಟೇ ಸರಳವಾದ ಉತ್ತರ.
ಕರ್ನಾಟಕದ ರಾಜಕೀಯವನ್ನು ಅಧ್ಯಯನ ಮಾಡುವವರ‌್ಯಾರಿಗೂ ಬ್ರಿಟಿಷ್ ವಿದ್ವಾಂಸ ಜೇಮ್ಸ ಮ್ಯಾನರ್ ಅಪರಿಚಿತ ಹೆಸರೇನಲ್ಲ. ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್‌ಡ್ ಸ್ಟಡಿಯಲ್ಲಿ ಬೋಧನೆ ಮಾಡುತ್ತಿರುವ ಜೇಮ್ಸ ಮ್ಯಾನರ್ ಕಳೆದ 40 ವರ್ಷಗಳಿಂದ ಕರ್ನಾಟಕದ ರಾಜಕೀಯವನ್ನು ವಿಶೇಷವಾಗಿ ಅಧ್ಯಯನ ಮಾಡುತ್ತಾ ಬಂದವರು.
ಈ ಬಗ್ಗೆ ಹಲವಾರು ಪುಸ್ತಕಗಳನ್ನು ಮತ್ತು ನೂರಾರು ಲೇಖನಗಳನ್ನು ಅವರು ಬರೆದಿದ್ದಾರೆ. ಹೆಚ್ಚುಕಡಿಮೆ ಪ್ರತಿವರ್ಷ ಅವರು ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಇಂತಹ ಜೇಮ್ಸ ಮ್ಯಾನರ್ 1994ರಲ್ಲಿ ಬೆಂಗಳೂರಿಗೆ ಬಂದಿದ್ದಾಗ ಬಿಜೆಪಿಯ ಇಬ್ಬರು ಯುವ ಕಾರ‌್ಯಕರ್ತರನ್ನು ಭೇಟಿಯಾಗಿದ್ದರು.
`ಎಕಾನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ~ಯ ಇತ್ತೀಚಿನ ತನ್ನ ಲೇಖನದಲ್ಲಿ ಅವರು ಹದಿನೈದು ವರ್ಷಗಳ ಹಿಂದಿನ ತಮ್ಮ ಭೇಟಿಯ ಅನುಭವ ಮೆಲುಕುಹಾಕಿದ್ದಾರೆ.
`....ಆಗಷ್ಟೇ ಕೊನೆಗೊಂಡಿದ್ದ ಚುನಾವಣೆಯಲ್ಲಿ ಬಿಜೆಪಿ ತನ್ನ ಬಲವರ್ಧನೆ ಮಾಡಿಕೊಂಡಿದ್ದ ಕಾಲ ಅದು.
ಇಂತಹ ಸ್ಥಿತಿಯಲ್ಲಿ ಈ ಇಬ್ಬರು ಯುವ ಕಾರ್ಯಕರ್ತರು ಆಶಾವಾದದಿಂದ ತುಂಬಿ ತುಳುಕುತ್ತಿರಬಹುದೆಂದು ನಿರೀಕ್ಷಿಸಿದ್ದೆ. ಆದರೆ ಅವರು ಪ್ರಾರಂಭದಿಂದಲೇ ವ್ಯಾಕುಲರಾಗಿದ್ದರು. ಅವರ ಮುಖದಲ್ಲಿ ಬಚ್ಚಿಟ್ಟುಕೊಳ್ಳಲಾಗದ ವಿಷಣ್ಣತೆ ಇತ್ತು.
ಮಾತನಾಡುತ್ತಾ ಹೋದಂತೆ ಅವರು ಇನ್ನಷ್ಟು ಚಿಂತಾಕ್ರಾಂತರಾದಂತೆ ಕಂಡರು. ಅವರು ಒಂದೇ ಸಮನೆ ತಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ದೂರುಗಳನ್ನು ಹೇಳುತ್ತಾ ಹೋದರು....~ ಎಂದು ಅವರು ತಮ್ಮ ಲೇಖನ ಪ್ರಾರಂಭಿಸುತ್ತಾರೆ.

ಆ ಯುವಕಾರ್ಯಕರ್ತರ ಮಾತುಗಳಲ್ಲೇ ಅವರಾಡಿದ್ದನ್ನು ಕೇಳಿ:`...ಅವರು ದುರಹಂಕಾರಿ, ಯಾರ ಮಾತನ್ನೂ ಕೇಳುವುದಿಲ್ಲ. ಪಕ್ಷದ ಬಲವರ್ಧನೆಗಾಗಿ ಬಳಸಿಕೊಳ್ಳಬಹುದಾದ ಅವಕಾಶಗಳು ಮತ್ತು ಪಕ್ಷದ ಬಲ ಕುಂದಲು ಕಾರಣವಾಗಬಹುದಾದ ತಪ್ಪುಗಳ ಬಗ್ಗೆ ನೀಡುವ ಮಾಹಿತಿಗಳನ್ನು ಅವರು ನಿರ್ಲಕ್ಷಿಸುತ್ತಾರೆ.
ಆದ್ದರಿಂದ ಹಲವಾರು ಬಾರಿ ರಾಜಕೀಯ ಅನುಕೂಲಗಳಿಂದ ಪಕ್ಷ ವಂಚಿತವಾಗಬೇಕಾಯಿತು. ಪ್ರತಿಬಾರಿ ಅವರು ತಪ್ಪು ನಿರ್ಧಾರಗಳಿಂದಾಗಿ ಮುಜುಗರಕ್ಕೊಳಗಾಗುತ್ತಾರೆ  ಮತ್ತು ಯಾರದ್ದೋ ಸಂಚಿಗೆ ಬಲಿಯಾಗುತ್ತಾರೆ.

ಅವರೊಬ್ಬ ಬುದ್ಧಿವಂತ, ಆದರೆ ಸರಿಯಾದ ರಾಜಕೀಯ ನಿರ್ಧಾರ ಕೈಗೊಳ್ಳಲಾಗದ ನಾಯಕನೆಂದು ನಾವು ತಿಳಿದುಕೊಂಡಿದ್ದೆವು. ಆದರೆ, ಮಾಡುವ ತಪ್ಪುಗಳನ್ನು ನೋಡುತ್ತಾ ಬಂದಾಗ ಅವರು ಅಷ್ಟೇನೂ ಬುದ್ಧಿವಂತರಲ್ಲ ಎಂದು ಅರಿವಾಯಿತು.
ಅಷ್ಟು ಮಾತ್ರವಲ್ಲ, ಅವರೊಬ್ಬ ಪ್ರಜಾಪ್ರಭುತ್ವ ವಿರೋಧಿ. ಪಕ್ಷದ ಸಹೋದ್ಯೋಗಿಗಳ ಮಾತುಗಳಿಗೆ ಕಿವಿಗೊಡುವುದಿಲ್ಲ. ಕಾಂಗ್ರೆಸ್ ಮತ್ತು ಜನತಾ ಪಕ್ಷಗಳಿಗಿಂತ ಹೆಚ್ಚು ಪ್ರಜಾಸತ್ತಾತ್ಮಕವಾಗಿರುವ ಬಿಜೆಪಿಯಲ್ಲಿ ಈ ನಡವಳಿಕೆ ಗಂಭೀರ ಸ್ವರೂಪದ ಅಪರಾಧ.
ಪಕ್ಷದ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ಅವರು ಲಕ್ಷಿಸುವುದಿಲ್ಲ. ಪಕ್ಷ ರೂಪಿಸುವ ಕಾರ್ಯತಂತ್ರಗಳನ್ನು ಅವರು ಒಪ್ಪುವುದಿಲ್ಲ. ಯಾರಾದರೂ ಅವರನ್ನು ಪ್ರಶ್ನಿಸಿದರೆ ಸಿಟ್ಟಾಗುತ್ತಾರೆ. ಎದುರಾಳಿಯ ಮಾತನ್ನು ತನ್ನ ವಾದದ ಮೂಲಕ ಎದುರಿಸುವುದಿಲ್ಲ, ಕೂಗಾಡಿ ಬಾಯಿ ಮುಚ್ಚಿಸುತ್ತಾರೆ...~
`..ಭಿನ್ನ ಪಕ್ಷ ಎಂಬ ಹೆಗ್ಗಳಿಕೆಯ ಬಿಜೆಪಿಯ ನಾಯಕನೊಬ್ಬನಿಂದ ನಾವು ನಿರೀಕ್ಷಿಸಿದ್ದ ಸಜ್ಜನಿಕೆ ಮತ್ತು ತಾಳ್ಮೆಯ ನಡವಳಿಕೆಯನ್ನು ನಮಗೆ ಕಾಣಲಾಗುತ್ತಿಲ್ಲ. ಅವರು ಸೂಕ್ಷ್ಮವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಾಸ್ತವವನ್ನು ಎದುರಿಸುವುದಿಲ್ಲ, ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ.
ಅಸಾಧ್ಯವಾದುದನ್ನು ಸಾಧ್ಯಮಾಡಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದೆ ಇದ್ದಾಗ ಇತರರನ್ನು ಬೈದು ಯಾರಿಗೂ ತಿಳಿಸದೆ ಇನ್ನೊಂದು ಅಡ್ಡಾದಿಡ್ಡಿ ದಾರಿ ಹಿಡಿಯುತ್ತಾರೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಕೆಟ್ಟುಹೋಗುತ್ತದೆ.
ಅಧಿಕಾರ ಒಬ್ಬ `ದಡ್ಡ~ ನಾಯಕನ ಕೈಯಲ್ಲಿ ಕೇಂದ್ರೀಕೃತವಾಗಿರುವ ಅಪಾಯಕಾರಿ ಪರಿಸ್ಥಿತಿ ಇದು. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ...~ಇಷ್ಟು ಹೇಳಿದ ನಂತರ ಇಬ್ಬರಲ್ಲಿ ಒಬ್ಬ ಯುವಕ ಬಿಕ್ಕಿಬಿಕ್ಕಿ ಅಳತೊಡಗಿದನಂತೆ. `...ಕರ್ನಾಟಕದ ರಾಜಕೀಯವನ್ನು ಕಳೆದ ನಲ್ವತ್ತು ವರ್ಷಗಳಿಂದ ಅಧ್ಯಯನ ಮಾಡುತ್ತಾ ಬಂದ ನಾನು ಈ ರೀತಿ ಒಂದು ಪಕ್ಷದ ಕಾರ್ಯಕರ್ತ ತನ್ನದೇ ಪಕ್ಷದ ನಾಯಕನ ಬಗ್ಗೆ ಹತಾಶೆಗೊಂಡು ಕಣ್ಣೀರು ಹಾಕಿದ್ದನ್ನು ನೋಡಿಲ್ಲ...~ ಎನ್ನುತ್ತಾರೆ ಜೇಮ್ಸ ಮ್ಯಾನರ್ ಆ ಲೇಖನದಲ್ಲಿ.

ಇದನ್ನು ಓದಿದ ಮೇಲೆ ಯಡಿಯೂರಪ್ಪನವರು ಹೀಗ್ಯಾಕಾದರು ಎಂದು ಯಾರೂ ಕೇಳಲಾರರು. ಅವರು ಹೀಗೆಯೇ ಇದ್ದರು.ಹೀಗಿದ್ದರೂ ಅವರನ್ನು ತನ್ನ ನಾಯಕನೆಂದು ಬಿಜೆಪಿ ಯಾಕೆ ಬಿಂಬಿಸಿತು? ಸಂಘ ಪರಿವಾರ ಯಾಕೆ ಬೆಂಬಲ ಧಾರೆ ಎರೆಯಿತು? ವೀರಶೈವ ಮಠಗಳು ಅವರನ್ನು ಜಾತಿ ನಾಯಕನಾಗಿ ಯಾಕೆ ಬೆಳೆಸಿದವು? ಯಾವ ದಾರಿಯಾದರೂ ಸರಿ, ಗುರಿ ತಲುಪುವುದಷ್ಟೇ ಮುಖ್ಯ ಎಂದು ತಿಳಿದುಕೊಂಡ ಬಿಜೆಪಿಗೆ ಅಧಿಕಾರ ಬೇಕಿತ್ತು.
ತನ್ನ ಗುಪ್ತಕಾರ್ಯಸೂಚಿಯ ಅನುಷ್ಠಾನಕ್ಕಾಗಿ ಸಂಘ ಪರಿವಾರಕ್ಕೆ ತನ್ನ ಮಾತು ಕೇಳುವ ಮುಖ್ಯಮಂತ್ರಿ ಬೇಕಿತ್ತು. ಆಗಲೇ `ಧರ್ಮ~ದ ಹಾದಿಯಿಂದ `ಅರ್ಥ~ದ ಹಾದಿಗೆ ಹೊರಳುತ್ತಿದ್ದ ವೀರಶೈವ ಮಠಗಳಿಗೆ ತಮ್ಮ ಧಾರ್ಮಿಕ ಸಾಮ್ರಾಜ್ಯದ ವಿಸ್ತರಣೆಗೆ ನೆರವಾಗಬಲ್ಲ ಜಾತಿ ನಾಯಕನೊಬ್ಬ ಬೇಕಿತ್ತು.

ಆಗ ಎಲ್ಲರ ಕಣ್ಣಿಗೆ ಕಂಡದ್ದು ಯಡಿಯೂರಪ್ಪ. ಅವರು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು, ಜಾತಿಯಿಂದ ಲಿಂಗಾಯತರು, ಸ್ವಭಾವದಲ್ಲಿ ಹೋರಾಟ ಮನೋಭಾವದವರು. ಬೇರೇನು ಬೇಕು?
ಈಗ ಒಮ್ಮಿಂದೊಮ್ಮೆಲೇ ಯಡಿಯೂರಪ್ಪನವರು ಎಲ್ಲರಿಗೂ ಖಳನಾಯಕರಂತೆ ಕಾಣುತ್ತಿದ್ದಾರೆ. ಯಡಿಯೂರಪ್ಪನವರ ನಿರ್ಗಮನದಿಂದ ಕರ್ನಾಟಕವನ್ನು ಆವರಿಸಿಕೊಂಡಿರುವ ಎಲ್ಲ ಅನಿಷ್ಟಗಳು ನಿವಾರಣೆಯಾಗಬಹುದೆನ್ನುವ ರೀತಿಯಲ್ಲಿ ಪ್ರಚಾರ ನಡೆಯುತ್ತಿದೆ.
ಆದರೆ, `ಮನುಷ್ಯ ವ್ಯವಸ್ಥೆಯ ಕೂಸು~ ಎನ್ನುವ ಸತ್ಯ ತಿಳಿದುಕೊಂಡವರ‌್ಯಾರೂ ಯಡಿಯೂರಪ್ಪನವರ ನಿರ್ಗಮನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಾರರು. ಜನಪರ ಕಾಳಜಿಯ ಹೋರಾಟಗಾರನಾಗಿ ರಾಜಕೀಯ ಪ್ರವೇಶಿಸಿದ ಯಡಿಯೂರಪ್ಪನವರು ರಾಜ್ಯ ಕಂಡ ಅತೀ ಭ್ರಷ್ಟ, ಅಸಮರ್ಥ ಮತ್ತು ಜಾತಿವಾದಿ ಮುಖ್ಯಮಂತ್ರಿ ಎಂಬ ಆರೋಪಗಳ ಹೊರೆ ಹೊತ್ತು ನಿರ್ಗಮಿಸುವಂತಾಗಲು ಕಾರಣವಾದ ವ್ಯವಸ್ಥೆ ಇನ್ನೂ ಜೀವಂತವಾಗಿದೆ.
ಹೊಸ ನಾಯಕನ ಆಯ್ಕೆಯಲ್ಲಿ ಕೂಡಾ ಅದೇ ಹಳೆಯ ವ್ಯವಸ್ಥೆಯದ್ದೇ ಮುಖ್ಯ ಪಾತ್ರ. ಹೊಸ ನಾಯಕ ಕೂಡಾ  ಹಳೆಯ ವ್ಯವಸ್ಥೆಯ ಕೂಸಾಗಿ ಬಿಟ್ಟರೆ ಬದಲಾವಣೆ ಹೇಗೆ ನಿರೀಕ್ಷಿಸಲು ಸಾಧ್ಯ?
ಈ ವ್ಯವಸ್ಥೆಯ ಮೊದಲ ಘಟಕ-ಭಾರತೀಯ ಜನತಾ ಪಕ್ಷ. ಒಂದು ಸ್ವತಂತ್ರ, ಪರಿಪೂರ್ಣ ರಾಜಕೀಯ ಪಕ್ಷವಾಗಿ ಬೆಳೆಯಲು ಸಾಧ್ಯವಾಗದೆ ಹೋಗಿದ್ದೇ ಈ ಪಕ್ಷದ ಮೂಲ ಸಮಸ್ಯೆ. ಪಕ್ಷ ಏನಿದ್ದರೂ ಮುಖವಾಡ, ಅದರ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ನಿಜವಾದ ಮುಖ.
ಇಲ್ಲಿ ಪಕ್ಷಕ್ಕಿಂತಲೂ ಮುಖ್ಯವಾದುದು ಮಾತೃಸಂಸ್ಥೆಯ ಮೇಲಿನ ನಿಷ್ಠೆ. ಪಕ್ಷವನ್ನು ಧಿಕ್ಕರಿಸಿಯೂ ಇಲ್ಲಿ ಬದುಕುಳಿಯಬಹುದು, ಆದರೆ ಸಂಘ ಪರಿವಾರವನ್ನಲ್ಲ. ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿಯವರಂತಹವರು ನಿರ್ಣಾಯಕ ಸ್ಥಾನದಲ್ಲಿರುವಷ್ಟು ದಿನ ತಮ್ಮ ವ್ಯಕ್ತಿತ್ವದ ಬಲದಿಂದ ಪಕ್ಷಕ್ಕೆ ಒಂದಿಷ್ಟು ಆತ್ಮಗೌರವ ತುಂಬಿದ್ದರು.
ಅವರ ನಿರ್ಗಮನದ ನಂತರ ಅದೊಂದು ದುರ್ಬಲ ಮತ್ತು ಪರಾವಲಂಬಿ ಪಕ್ಷ. ಅಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ರಾಜ್ಯ, ರಾಷ್ಟ್ರೀಯ ಅಧ್ಯಕ್ಷರವರೆಗೆ ಯಾರು ಏನಾಗಬೇಕೆಂಬುದನ್ನು ನಿರ್ಧರಿಸುವುದು ಪಕ್ಷ ಅಲ್ಲವೇ ಅಲ್ಲ, ಅದು ಸಂಘದ ನಾಯಕರು.
ಪಕ್ಷದ ಈ ದೌರ್ಬಲ್ಯ ಅರಿತವರು ಅದರ ಆದೇಶಕ್ಕೆ ಎಷ್ಟು ಬೆಲೆ ಕೊಡಬಹುದು? ಪಕ್ಷದ ಸಂಸದೀಯ ಮಂಡಳಿಯ ನಿರ್ಣಯವನ್ನು ಅನುಷ್ಠಾನಕ್ಕೆ ತರಲಾಗದೆ ಬಿಜೆಪಿ ವರಿಷ್ಠರು ಮೂರು ದಿನಗಳ ಕಾಲ ದೇಶದ ಮುಂದೆ ನಗೆಪಾಟಲಿಗೀಡಾಗಿದ್ದು ಇದೇ ಕಾರಣಕ್ಕೆ. ಈಗಲೂ ಸಂಘ ಪರಿವಾರದ ಆಯ್ಕೆಗೆ ಮೊಹರು ಒತ್ತುವುದಷ್ಟೇ ಪಕ್ಷದ ಕೆಲಸ.
ವ್ಯವಸ್ಥೆಯ ಎರಡನೇ ಘಟಕ-ಸಂಘ ಪರಿವಾರ. ಸಮಸ್ತ ಹಿಂದೂ ಸಮುದಾಯದ ಹಿತಚಿಂತನೆ ನಡೆಸುವವರು ನಾವೆಂದು ಹೇಳಿಕೊಳ್ಳುತ್ತಿರುವ ಈ ಪರಿವಾರದ ನಾಯಕರು ರಾಜಕೀಯದ ಪ್ರಶ್ನೆ ಬಂದಾಗ ಮಾತ್ರ ಬಿಜೆಪಿ ಜತೆ ನಿಲ್ಲುತ್ತಾರೆ.
ಬಿಕ್ಕಟ್ಟುಗಳು ಎದುರಾದಾಗ  ಪ್ರಶ್ನಿಸಿದರೆ  `ಅದು ಸಂಪೂರ್ಣವಾಗಿ ಪಕ್ಷಕ್ಕೆ ಬಿಟ್ಟ ವಿಚಾರ. ಅದರಲ್ಲಿ ನಾವು ತಲೆಹಾಕುವುದಿಲ್ಲ~ ಎನ್ನುತ್ತಾರೆ. ಹಾಗ್ದ್ದಿದರೆ ಬಿಜೆಪಿಯ ಕೋರ್ ಕಮಿಟಿಯಲ್ಲಿ ಆರ್‌ಎಸ್‌ಎಸ್ ಪ್ರತಿನಿಧಿಗಳಿಗೇನು ಕೆಲಸ? ಕಾಂಗ್ರೆಸ್, ಜೆಡಿ (ಎಸ್)ನ ಕೋರ್ ಕಮಿಟಿಯಲ್ಲಿಯೂ ಅವರಿದ್ದಾರೇನು? ವಾಸ್ತವ ಏನೆಂದರೆ ಈಗಲೂ ಆರ್‌ಎಸ್‌ಎಸ್ ರಿಮೋಟ್ ಕಂಟ್ರೋಲ್ ಮೂಲಕ ಬಿಜೆಪಿಯ ನೀತಿ  ನಿರ್ಧಾರಗಳನ್ನು ನಿಯಂತ್ರಿಸುತ್ತಿದೆ.

ಇದರ ನಾಯಕರು ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಅಡ್ವಾಣಿಯವರು ನೀಡಿದ ಸಣ್ಣ ಹೇಳಿಕೆಗಾಗಿ ಅವರ ತಲೆದಂಡ ಪಡೆಯುತ್ತಾರೆ, ಜಸ್ವಂತ್‌ಸಿಂಗ್ ಬರೆದ ಪುಸ್ತಕದಲ್ಲಿ ಜಿನ್ನಾ ಪರವಾದ ಅಭಿಪ್ರಾಯ ಇದೆ ಎನ್ನುವ ಕಾರಣಕ್ಕಾಗಿ ಪಕ್ಷದಿಂದಲೇ ಅವರ ಉಚ್ಚಾಟನೆಯಾಗುವಂತೆ ಮಾಡುತ್ತಾರೆ.
ಆದರೆ ತಮ್ಮದೇ ಪರಿವಾರದ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ನೀಡಿರುವ ವರದಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಇದೆಂಥ ಆತ್ಮವಂಚನೆ? ಯಡಿಯೂರಪ್ಪ ರಾಜೀನಾಮೆ ಮತ್ತು ಹೊಸ ಮುಖ್ಯಮಂತ್ರಿಯ ಆಯ್ಕೆಯ ಪ್ರಕ್ರಿಯೆ ಕಗ್ಗಂಟಾಗಲು ಕೂಡಾ ಕರಾವಳಿ ಮತ್ತು ಉತ್ತರ ಕರ್ನಾಟಕದ ಆರ್‌ಎಸ್‌ಎಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಕಾರಣವೆನ್ನಲಾಗಿದೆ.

ಕೊನೆಗೂ ಈ ನಾಯಕರೇ ಹೊಸ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸಲಿದ್ದಾರೆ. ಈ ಬಾರಿ ಕರಾವಳಿ ಆರ್‌ಎಸ್‌ಎಸ್ ಕೈಮೇಲಾದರೆ ಆಶ್ಚರ್ಯ ಇಲ್ಲ.  ಶಾಸಕರ ಅಭಿಪ್ರಾಯ ಸಂಗ್ರಹ, ಶಾಸಕಾಂಗ ಪಕ್ಷದ ಸಭೆ -ಇವೆಲ್ಲ ಸಾರ್ವಜನಿಕರ ಗಮನಕ್ಕಾಗಿ ನಡೆಯುತ್ತಿರುವ ನಾಟಕ ಅಷ್ಟೇ.
ವ್ಯವಸ್ಥೆಯ ಮೂರನೇ ಘಟಕ-ವೀರಶೈವ ಮಠಗಳು. ಈ ಮಠಗಳ ಒಂದಷ್ಟು ಸ್ವಾಮಿಗಳು ಮೊದಲು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತರು. ಈಗ ಮುಂದಿನ ಮುಖ್ಯಮಂತ್ರಿ ಸ್ಥಾನ ಲಿಂಗಾಯತರಿಗೇ ನೀಡಬೇಕೆಂದು ಹೇಳುತ್ತಿರುವುದು ಮಾತ್ರವಲ್ಲ, ಅಭ್ಯರ್ಥಿ ಯಾರೆಂಬುದನ್ನೂ ಸೂಚಿಸುತ್ತಿದ್ದಾರೆ.
ಅವರು ಸೂಚಿಸುತ್ತಿರುವ ಅಭ್ಯರ್ಥಿಗಳು ಸಮರ್ಥರೇ ಇರಬಹುದು. ಆದರೆ ಅವರು ಮಠಗಳ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳಬೇಕೇ? ತಾವು ಬೆಂಬಲಿಸಿಕೊಂಡು ಬಂದ ಮುಖ್ಯಮಂತ್ರಿಯ ವಿರುದ್ಧ ಲೋಕಾಯುಕ್ತ ಮಾಡಿರುವ ಗಂಭೀರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಹೋಗದೆ ನುಣುಚಿಕೊಳ್ಳುತ್ತಿರುವ ಈ ಸ್ವಾಮಿಗಳಿಗೆ ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಸೂಚಿಸುವ ನೈತಿಕತೆಯಾದರೂ ಎಲ್ಲಿದೆ?
ಭಾರತೀಯ ಜನತಾ ಪಕ್ಷ ಇಷ್ಟೊಂದು ದುರ್ಬಲಗೊಳ್ಳದೆ ಸ್ವಂತ ನಿರ್ಧಾರ ಕೈಗೊಳ್ಳುವಷ್ಟು ಶಕ್ತಿ ಹೊಂದಿದ್ದರೆ,  ಆ ಪಕ್ಷದ ಜುಟ್ಟು ಕೈಯಲ್ಲಿಟ್ಟುಕೊಳ್ಳದೆ ಅದನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಂಘ ಪರಿವಾರ ಅವಕಾಶ ನೀಡಿದ್ದರೆ ಮತ್ತು ಎಲ್ಲವನ್ನೂ ಜಾತಿಯ ಕನ್ನಡಕದಲ್ಲಿ ನೋಡಲು ಹೋಗದೆ ತಪ್ಪು-ಸರಿಗಳ ನಿರ್ಣಯವನ್ನು ಜಾತ್ಯತೀತವಾಗಿ ಕೈಗೊಳ್ಳುವ ದಿಟ್ಟತನವನ್ನು ವೀರಶೈವ ಮಠಗಳು ತೋರಿದ್ದರೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿ ಖಂಡಿತ ಬರುತ್ತಿರಲಿಲ್ಲ. ತಪ್ಪುಗಳನ್ನು ತಿದ್ದಿಕೊಂಡು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು.

Monday, July 25, 2011

ಆಗ ಪಾಟೀಲರ ಕಾಲ, ಈಗ ಯಡಿಯೂರಪ್ಪನವರದ್ದು...

`ಇಂಟೆಲಿಜೆನ್ಸ್ ಅಧಿಕಾರಿ ಯಾರ ಟೆಲಿಫೋನ್ ಕದ್ದಾಲಿಸಬೇಕೆಂದು ಮುಖ್ಯಮಂತ್ರಿಗಳಿಂದ ಲಿಖಿತ ಆದೇಶ ಪಡೆಯುವುದಿಲ್ಲ. ಇಂತಹ ಶಾಸಕ ಇಲ್ಲವೇ ಸಾರ್ವಜನಿಕ ವ್ಯಕ್ತಿಯ ಚಟುವಟಿಕೆ ಮೇಲೆ ಕಣ್ಣಿಡಿ ಎಂದರೆ ಸಾಕು, ಆ ಅಧಿಕಾರಿ ಸಂಬಂಧಿಸಿದವರ ಟೆಲಿಫೋನ್ ನಂಬರ್ ತೆಗೆದುಕೊಂಡು ಅದನ್ನು ಟೆಲಿಗ್ರಾಫ್ ಇಲಾಖೆಯ ಜನರಲ್ ಮ್ಯಾನೇಜರ್‌ಗೆ ತಿಳಿಸುತ್ತಾರೆ. ಆಗ ಆ ಜನರಲ್ ಮ್ಯಾನೇಜರ್ ಇಂಟೆಲಿಜೆನ್ಸ್ ಅಧಿಕಾರಿಗೆ ಆ ಟೆಲಿಫೋನ್ ಕದ್ದಾಲಿಸುವ ಉಪಕರಣ ಪೂರೈಸುತ್ತಾರೆ. ನಂತರ ಆ ಕೆಲಸ ಸಲೀಸಾಗಿ ನಡೆಯುತ್ತದೆ. ಯಾವುದೇ ಇಂಟೆಲಿಜೆನ್ಸ್ ಅಧಿಕಾರಿ ಮುಖ್ಯಮಂತ್ರಿಯ ವಿಶ್ವಾಸದ ಮೇಲೆ ಕೆಲಸ ಮಾಡುತ್ತಾನೆ. ಇಲ್ಲದೆ ಹೋದರೆ ಅಂತಹ ಅಧಿಕಾರಿಯನ್ನು ಆ ಜಾಗದಲ್ಲಿಟ್ಟುಕೊಳ್ಳುವುದಿಲ್ಲ. ನಂಬಿಕೆ ಇಲ್ಲದ ಅಧಿಕಾರಿಯನ್ನು ಆ ಜಾಗದಲ್ಲಿಟ್ಟುಕೊಂಡು ಕೆಲಸ ಮಾಡುವುದು ಕಷ್ಟವಾಗುತ್ತದೆ....~
- ಸರ್ಕಾರ ನಡೆಸುವ ದೂರವಾಣಿ ಕದ್ದಾಲಿಕೆಯ ಕಳ್ಳಾಟದ ಒಳಮರ್ಮವನ್ನು ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಹೀಗೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾಗ ಇಡೀ ವಿಧಾನಸಭೆ ಮೈಯೆಲ್ಲಾ ಕಿವಿಯಾಗಿ ಕೇಳುತ್ತಿತ್ತು. ಹಗರಣದ ಕೇಂದ್ರ ವ್ಯಕ್ತಿಯಾಗಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕೆಂಬಣ್ಣದ ಮುಖ ಕಪ್ಪಿಟ್ಟಿತ್ತು.
ಇದಕ್ಕಿಂತ ಮೊದಲು ಮಾತನಾಡಿದ್ದ ಹೆಗಡೆ `ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡುವರೆ ವರ್ಷಗಳ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರದ ಒತ್ತಾಯದ ಮೇರೆಗೆ ಟೆಲಿಫೋನ್ ಕದ್ದಾಲಿಸಬೇಕಾದವರ ಪಟ್ಟಿಯನ್ನು ನವೀಕರಿಸಿದ್ದಕ್ಕೆ ನನ್ನ ಸಮ್ಮತಿ ಅಥವಾ ಒಂದು ಸಣ್ಣ ರುಜು ಇದೆ ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಈಗಲೂ ಸಿದ್ಧ ಎಂದು ಜಾಣತನದಿಂದ ತಮ್ಮ `ನಿರಪರಾಧಿತನ~ವನ್ನು ಸಮರ್ಥಿಸಿಕೊಂಡಿದ್ದರು. ಜಾಣ ಹೆಗಡೆ ಅವರ ಬಾಯಿಯನ್ನು ಪಾಟೀಲರು ಸಾಕ್ಷ್ಯಾಧಾರದೊಡನೆ ಆಡಿದ ಮಾತುಗಳು ಮುಚ್ಚಿಸಿದ್ದವು.
ಇದು ಎಂಬತ್ತರ ದಶಕದ ಕೊನೆಭಾಗದಲ್ಲಿ ಕೋಲಾಹಲ ಎಬ್ಬಿಸಿದ್ದ ದೂರವಾಣಿ ಕದ್ದಾಲಿಕೆ ಹಗರಣದ ಕ್ಲೈಮಾಕ್ಸ್ ದೃಶ್ಯ (ಜೂನ್ 26,1990).ದೂರವಾಣಿ ಕದ್ದಾಲಿಕೆ ಆರೋಪದಿಂದಾಗಿ ರಾಮಕೃಷ್ಣ ಹೆಗಡೆ ಅವರು ಎರಡು ವರ್ಷ ಮೊದಲೇ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು, ನಂತರ ಚುನಾವಣೆಯಲ್ಲಿ ಜನತಾ ಪಕ್ಷವೂ ಸೋತ ಕಾರಣ ಹೆಗಡೆ ವಿರೋಧಪಕ್ಷದಲ್ಲಿದ್ದರು.  `ಪ್ರಜಾವಾಣಿ~ ಸೇರಿದ ಪ್ರಾರಂಭದ ದಿನಗಳಲ್ಲಿ ವಿಧಾನಪರಿಷತ್ ಕಲಾಪದ ವರದಿಗೆಂದು ಹೋಗಿದ್ದ ನಾನು ಕುತೂಹಲಕ್ಕೆಂದು ವಿಧಾನಸಭೆಗೆ ನುಗ್ಗಿ ಪತ್ರಕರ್ತರ ಗ್ಯಾಲರಿಯ ಮೂಲೆಯಲ್ಲಿ ಕೂತು ನೋಡಿದ ಈ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ, ಪಾಟೀಲರ ಮಾತುಗಳು ಈಗಷ್ಟೇ ಕೇಳಿದಂತಿದೆ. ಅವರು ಉತ್ತರ ನೀಡಲು ಏಳುವ ಮೊದಲು ವಿಧಾನಸಭೆಯ ಮೊಗಸಾಲೆಯಲ್ಲಿ ಹರಟೆ ಹೊಡೆಯುತ್ತಿದ್ದ ಪತ್ರಕರ್ತರು ಮತ್ತು ರಾಜಕಾರಣಿಗಳಲ್ಲಿ ಹೆಚ್ಚಿನವರು `ಪಾಟೀಲರು ಮತ್ತು ಹೆಗಡೆ ಲವ-ಕುಶರು, ಹಳೆ ದೋಸ್ತಿಯನ್ನು ಪಾಟೀಲರು ಕೈಬಿಡುವುದಿಲ್ಲ ನೋಡಿ, ಏನೋ ತಿಪ್ಪೆಸಾರಿಸಿ ಮುಗಿಸಿ ಬಿಡುತ್ತಾರೆ~ ಎಂದೇ ಹೇಳುತ್ತಿದ್ದರು. ಆ ಎಲ್ಲ ಆರೋಪಗಳಿಗೂ ಪಾಟೀಲರ ಮಾತುಗಳು ಉತ್ತರದಂತಿತ್ತು. `ರಾಮಕೃಷ್ಣ ಹೆಗಡೆ ಮತ್ತು ನನ್ನ ಸ್ನೇಹ 1956ರಿಂದ ಇದೆ. ವೈಯಕ್ತಿಕ ಮಟ್ಟದ ಸ್ನೇಹ ಹಿಂದಿನಿಂದಲೂ ಇದೆ, ಈಗಲೂ ಇದೆ. ಆದರೆ ನನ್ನ ಮತ್ತು ಅವರ ರಾಜಕೀಯ ಸ್ನೇಹ 1979ಕ್ಕೆ ಕೊನೆ ಆಯಿತು~ ಎಂಬ ಪೀಠಿಕೆಯೊಂದಿಗೆ ಪಾಟೀಲರು ಮಾತು ಪ್ರಾರಂಭಿಸಿದ್ದರು.
`...ಯಾರ ಫೋನ್ ಕದ್ದಾಲಿಸಲಾಗುವುದು ಎಂಬ ವಿವರ ಮುಖ್ಯಮಂತ್ರಿ ಹಾಗೂ ಗೂಢಚರ್ಯೆ ಇಲಾಖೆಯ ಮುಖ್ಯಸ್ಥರಿಗೆ ಮಾತ್ರ ಗೊತ್ತಿರುತ್ತದೆ. ಪದ್ಧತಿ ಪ್ರಕಾರ ಮುಖ್ಯಮಂತ್ರಿ ಸಲಹೆ ಮತ್ತು ಒಪ್ಪಿಗೆ ಮೇಲೆ ಕದ್ದಾಲಿಸುವ ಫೋನ್ ನಂಬರ್‌ಗಳ ಪಟ್ಟಿಗೆ ಹೊಸದಾಗಿ ನಂಬರು ಸೇರಿಸಬಹುದು ಅಥವಾ ಪಟ್ಟಿಯಿಂದ ತೆಗೆಸಬಹುದು. 1988ರಲ್ಲಿ ತಾವು ಆ ರೀತಿ ನಿರ್ದಿಷ್ಟ ವ್ಯಕ್ತಿಗಳ ಫೋನ್ ಕದ್ದಾಲಿಸಲು ಸಲಹೆ ಅಥವಾ ಒಪ್ಪಿಗೆ ಕೊಟ್ಟೇ ಇಲ್ಲವೆಂದು ಹೆಗಡೆಯವರು ಹೇಳಿದ್ದಾರೆ. ಸತ್ಯ ಗೊತ್ತಿರುವ ಇನ್ನೊಬ್ಬ ವ್ಯಕ್ತಿ ಆಗಿನ ಗೂಢಚರ್ಯೆ ಅಧಿಕಾರಿ ಎಂ.ಎಸ್.ರಘುರಾಮನ್, ಅವರು ಈಗ ಡಿಜಿಪಿಯಾಗಿದ್ದಾರೆ. ರಘುರಾಮನ್ ಪೊಲೀಸ್ ಇಲಾಖೆಯಲ್ಲಿ ಸಚ್ಚಾರಿತ್ರ್ಯದ ದಾಖಲೆ ಹೊಂದಿರುವವರು. 1988ರಲ್ಲಿ ಫೋನ್ ಕದ್ದಾಲಿಸಲು ಯಾರು ಹೇಳಿದ್ದರು ಎಂದು ಕೇಳಿ ನನ್ನ ಮುಖ್ಯಕಾರ‌್ಯದರ್ಶಿ ಮೂಲಕ ಪತ್ರ ಬರೆಸಿದ್ದೆ. ಅವರು ಕೊಟ್ಟಿರುವ ಉತ್ತರದಲ್ಲಿ `ಎಂದಿನ ಪದ್ಧತಿಯಂತೆ ಮುಖ್ಯಮಂತ್ರಿ ಸಲಹೆ ಮತ್ತು ಒಪ್ಪಿಗೆ ಪಡೆದೇ ಮಾಡಿದ್ದೇನೆ~ ಎಂದು ಲಿಖಿತ ಉತ್ತರ ನೀಡಿದ್ದಾರೆ ಎಂದ ವೀರೇಂದ್ರ ಪಾಟೀಲ್ ಅವರು, ರಘುರಾಮನ್ ಪತ್ರವನ್ನು ಸದನದಲ್ಲಿ ಮಂಡಿಸಿದರು. ಅಲ್ಲಿಗೆ ರಾಮಕೃಷ್ಣ ಹೆಗಡೆ ಅವರ ಬತ್ತಳಿಕೆ ಬರಿದಾಗಿತ್ತು.
ಪಾಟೀಲರು ಮುಂದುವರಿದು ಹೇಳುತ್ತಾರೆ `....ನಮ್ಮಲ್ಲಿ ಬಹಳ ಮಂದಿ ಹೊಸ ಶಾಸಕರು ಬಂದಿದ್ದಾರೆ, ಟೆಲಿಫೋನ್ ಕದ್ದಾಲಿಸುವುದಾದರೆ ನಾವು ಹೇಗೆ ಕೆಲಸಮಾಡಬೇಕು ಎಂದು ಅವರು ಕೇಳುತ್ತಿದ್ದಾರೆ. ಈ ದೃಷ್ಟಿಯಿಂದ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡು ಮೂರು ದಿನಗಳಲ್ಲೇ ಗೂಢಚರ್ಯೆ ವಿಭಾಗದ ಮುಖ್ಯಸ್ಥರನ್ನು ಕರೆಸಿ ಮಾತನಾಡಿದೆ. ಇನ್ನು ಮುಂದೆ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರ ಟೆಲಿಫೋನ್ ಕದ್ದಾಲಿಸಬಾರದೆಂದು ಆದೇಶ ನೀಡಿದೆ. ಒಮ್ಮೆ ಬಾಯಿಮಾತಿನಲ್ಲಿ ಹೇಳಿದ ನಂತರ ಮುಖ್ಯ ಕಾರ‌್ಯದರ್ಶಿ, ಗೃಹ ಇಲಾಖೆ ಕಮಿಷನರ್ ಈ ಬಗ್ಗೆ ಪತ್ರ ಬರೆದಿದ್ದರು. ಗೃಹ ಕಮಿಷನರ್ ಈಗಿನ ಐಜಿಪಿ ಇಂಟೆಲಿಜೆನ್ಸ್ ಶ್ರಿನಿವಾಸಲು ಅವರಿಗೆ ತಿಳಿಸಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ಯಾವುದೇ ರಾಜಕೀಯ ಇಲ್ಲವೇ ಸಾರ್ವಜನಿಕ ವ್ಯಕ್ತಿಯ ಟೆಲಿಫೋನ್‌ಗಳನ್ನು ಕದ್ದು ಕೇಳಲಾಯಿತು ಎಂಬ ದೂರಿಗೆ ಅವಕಾಶ ಇರಬಾರದೆಂದು ಹೀಗೆ ಮಾಡಿದೆ~ ಪಾಟೀಲರು ಅಧಿಕಾರದಲ್ಲಿದ್ದಷ್ಟು ದಿನ ನುಡಿದಂತೆ ನಡೆದಿದ್ದರು. ಆದರೆ ಕದ್ದಾಲಿಕೆ ಪಟ್ಟಿಗೆ ಸಮ್ಮತಿ ಸಹಿ ಸಾಬೀತಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಸವಾಲು ಹಾಕಿದ್ದ ಹೆಗಡೆ ಮಾತ್ರ ನುಡಿದಂತೆ ನಡೆಯಲಿಲ್ಲ.
ಇವೆಲ್ಲವನ್ನೂ ಗಂಭೀರವದನರಾಗಿ ಸಭಾಧ್ಯಕ್ಷರ ಸ್ಥಾನದಲ್ಲಿ ಕೂತು ಕೇಳುತ್ತಿದ್ದವರು ಈಗಿನ ವಿದೇಶಾಂಗ ವ್ಯವಹಾರ ಖಾತೆ ಸಚಿವ ಎಸ್.ಎಂ.ಕೃಷ್ಣ. ಒಮ್ಮೆ ಚರ್ಚೆಯ ಮಧ್ಯೆ ಪ್ರವೇಶಿಸಿದ ಕೃಷ್ಣ ಅವರು  `ಹತ್ತು ವರ್ಷದ ಮೇಲೂ ನಮ್ಮ ಮಾತು ನಮಗೆ ತಿರುಗುಬಾಣವಾಗದಂತೆ ಇರಬೇಕು~ ಎಂದಿದ್ದರು. ಅದೇ ವಿಧಾನಸಭೆಯಲ್ಲಿನ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಇನ್ನೊಬ್ಬ ನಾಯಕರು ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. `ನಮ್ಮ ರಾಜಕೀಯ ಚದುರಂಗದ ಆಟಕ್ಕೆ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರವೃತ್ತಿಗೆ ಕೊನೆ ಹೇಳಬೇಕು ಮುಖ್ಯಮಂತ್ರಿಗಳೇ~ ಎಂದು ಒಂದು ಹಂತದಲ್ಲಿ ಅವರು ಕೂಗಿ ಹೇಳಿದ್ದರು. ಯಡಿಯೂರಪ್ಪನವರು ಹಾಗೆ ಹೇಳಲು ಕಾರಣ ಇತ್ತು. ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ  ವಿರೋಧಪಕ್ಷಗಳ ನಾಯಕರಾಗಿದ್ದ ಬಿ.ಎಸ್.ಯಡಿಯೂಪ್ಪ, ಡಿ.ಎಚ್.ಶಂಕರಮೂರ್ತಿ ಸೇರಿದಂತೆ ನಗರದ ಹೆಸರಾಂತ ವಕೀಲರು ಹಾಗೂ ವರ್ತಕರ ಫೋನ್‌ಗಳನ್ನು ಕದ್ದು ಕೇಳಲಾಗಿತ್ತು. ಆಗ ಗುಪ್ತದಳದ ಡಿಐಜಿ ಆಗಿದ್ದವರು ಡಿ.ಆರ್.ಕಾರ್ತಿಕೇಯನ್. ಈ ವಿಷಯವನ್ನು ಕೂಡಾ ಸದನದಲ್ಲಿ ನೆನೆಪು ಮಾಡಿಕೊಂಡದ್ದು ರಾಮಕೃಷ್ಣ ಹೆಗಡೆ.
`...ಹತ್ತುವರ್ಷದ ಮೇಲೂ ನಮ್ಮ ಮಾತು ನಮಗೆ ತಿರುಗುಬಾಣವಾಗದಂತೆ ಇರಬೇಕು...~ ಎಂದು ಕೃಷ್ಣ ಹೇಳಿದ್ದ ಮಾತುಗಳನ್ನು ಯಡಿಯೂರಪ್ಪನವರು ಕೇಳಿಸಿಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ.
*           *              *           *                 
ತೀರಾ ಹಳೆಯದಾದ ಫ್ಲಾಷ್‌ಬ್ಯಾಕ್ ಬೇಡ ಎಂದಾದರೆ ಇತ್ತೀಚಿನ ದಿನಗಳಿಗೆ ಬರೋಣ. `ಆಹಾರಕ್ಕಾಗಿ ತೈಲ~ ಎಂಬ ವಿಶ್ವಸಂಸ್ಥೆಯ ಕಾರ‌್ಯಕ್ರಮದ ಅನುಷ್ಠಾನದಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಯುಪಿಎ ಸರ್ಕಾರ ನೇಮಿಸಿದ್ದ ಆರ್.ಎಸ್.ಪಾಠಕ್ ಆಯೋಗದ ವರದಿಯನ್ನು ಒಂದು ಟಿವಿ ಚಾನೆಲ್ ಸರ್ಕಾರಕ್ಕಿಂತ ಮೊದಲೇ ಬಹಿರಂಗಪಡಿಸಿತ್ತು. ಚಾನೆಲ್‌ನಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ ಸಮಯದಲ್ಲಿ  ವರದಿ ಸಲ್ಲಿಕೆಗಾಗಿ ಹೋಗಿದ್ದ ಆಯೋಗದ ಅಧ್ಯಕ್ಷರಾದ ಪಾಠಕ್ ಸಾಹೇಬರು ಇನ್ನೂ ಪ್ರಧಾನಿ ಕಚೇರಿಯಲ್ಲಿಯೇ ಇದ್ದರು. `ಆಹಾರಕ್ಕಾಗಿ ತೈಲ~ ಯೋಜನೆಯ ಹಗರಣದಲ್ಲಿ ಆಗಿನ ವಿದೇಶಾಂಗ ವ್ಯವಹಾರ ಖಾತೆ ಸಚಿವ ನಟವರ್‌ಸಿಂಗ್ ಪಾತ್ರ ಇದೆ ಎನ್ನುವುದು ಪಾಠಕ್ ಆಯೋಗದ ತನಿಖೆಯ ಮುಖ್ಯಾಂಶ. ಈ ಹಿನ್ನೆಲೆಯಲ್ಲಿ ಸಚಿವ ನಟವರ್‌ಸಿಂಗ್ ರಾಜೀನಾಮೆ ನೀಡಬೇಕೆಂದು ಬಿಜೆಪಿ  ಲೋಕಸಭೆಯಲ್ಲಿ ಪಟ್ಟು ಹಿಡಿದು ಕಲಾಪ ನಡೆಸಲು ಅವಕಾಶ ನೀಡಿರಲಿಲ್ಲ.
ಕೊನೆಗೆ ನಟವರ್‌ಸಿಂಗ್ ವಿದೇಶಾಂಗ ವ್ಯವಹಾರದ ಖಾತೆಯನ್ನು ಕಳೆದುಕೊಳ್ಳಬೇಕಾಯಿತು. ತನಿಖಾ ವರದಿ ಸೋರಿಕೆಯಿಂದಾಗಿ ಅದರ ಪಾವಿತ್ರ್ಯ ನಾಶವಾಯಿತೆಂದು ಧನಂಜಯಕುಮಾರ್ ಮತ್ತಿತರ ಬಿಜೆಪಿ ನಾಯಕರು ಈಗ ಹೇಳುತ್ತಿದ್ದಾರೆ. ಸೋರಿಕೆಯಿಂದಾಗಿ ಪಾಠಕ್ ತನಿಖಾ ವರದಿಯ ಪಾವಿತ್ರ್ಯ ನಾಶವಾಗಿರಲಿಲ್ಲವೇ?
ತನಿಖಾ ವರದಿಗಳ ಸೋರಿಕೆ ದೇಶದಲ್ಲಿಯಾಗಲಿ, ವಿದೇಶದಲ್ಲಿಯಾಗಲಿ ಹೊಸದೇನಲ್ಲ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆ ಬಗ್ಗೆ ತನಿಖೆ ನಡೆಸಲು ಆಗಿನ ಸರ್ಕಾರ ಎಂ.ಸಿ.ಜೈನ್ ನೇತೃತ್ವದ ಆಯೋಗ ನೇಮಿಸಿತ್ತು. ಆರುವರ್ಷಗಳ ಕಾಲ ತನಿಖೆ ನಡೆಸಿದ್ದ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸುವ ಪೂರ್ವದಲ್ಲಿಯೇ ಮೊದಲು ತಮಿಳು ವಾರಪತ್ರಿಕೆಯೊಂದರಲ್ಲಿ ನಂತರ `ಇಂಡಿಯಾ ಟುಡೇ~ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕಾಲದಲ್ಲಿ ಅಧಿಕಾರದಲ್ಲಿದ್ದ ಸಂಯುಕ್ತರಂಗ ಸರ್ಕಾರವನ್ನು ಉರುಳಿಸಲು ರಾಜೀವ್ ನಿಷ್ಠಾವಂತರೇ ಈ ಕೆಲಸ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ರಾಜೀವ್‌ಗಾಂಧಿ ಹತ್ಯೆಯ ಯೋಜನೆಗೆ ಡಿಎಂಕೆ ಸಹಕಾರ ಇತ್ತು ಎಂದು ಜೈನ್ ಆಯೋಗ ಹೇಳಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜತೆಗೂಡಿ ಬಿಜೆಪಿ ಕೂಡಾ ಸರ್ಕಾರದ ವಿರುದ್ಧ ಕೂಗು ಹಾಕಿತ್ತು. ವರದಿ ಸೋರಿಕೆಯಾದರೆ ಪಾವಿತ್ರ್ಯ ಇಲ್ಲ ಎಂದಾದರೆ ಆಗ ಬಿಜೆಪಿ ಯಾಕೆ ಗದ್ದಲ ಮಾಡಬೇಕಾಗಿತ್ತು? ಕೊನೆಗೆ ಮಿತ್ರಪಕ್ಷವಾದ ಡಿಎಂಕೆ ಪಕ್ಷವನ್ನು ಕೈಬಿಡಲಾಗದೆ ಆಗಿನ ಪ್ರಧಾನಿ ಐ.ಕೆ.ಗುಜ್ರಾಲ್ ಅವರು ರಾಜೀನಾಮೆ ನೀಡಿದ್ದರು. ಇವೆಲ್ಲವೂ ನಡೆಯುತ್ತಿರುವಾಗ ಧನಂಜಯಕುಮಾರ್ ಲೋಕಸಭಾ ಸದಸ್ಯರಾಗಿ ಅಲ್ಲಿಯೇ ಇದ್ದರು.
ಬಾಬ್ರಿ ಮಸೀದಿ ಧ್ವಂಸದ ಘಟನೆ ಬಗ್ಗೆ ಎಂ.ಎಸ್.ಲಿಬರ‌್ಹಾನ್ ಏಕಸದಸ್ಯ ಆಯೋಗ ಸಲ್ಲಿಸಿದ್ದ ವರದಿ ಸರ್ಕಾರದ ಬಳಿ ಇರುವಾಗಲೇ ಪತ್ರಿಕೆಗಳಿಗೆ ಸೋರಿಕೆಯಾಗಿತ್ತು. ಅಟಲಬಿಹಾರಿ ವಾಜಪೇಯಿ,ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ,ಕಲ್ಯಾಣ್‌ಸಿಂಗ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಬಾಬ್ರಿಮಸೀದಿ ಧ್ವಂಸದ ಕಾರ‌್ಯಾಚರಣೆಯಲ್ಲಿ ಭಾಗಿಗಳು ಎಂದು ಆಯೋಗ ವರದಿ ನೀಡಿತ್ತು. ಪಾಠಕ್ ಆಯೋಗದ ವರದಿ ಸೋರಿಕೆಯಾದರೂ ಅದರಲ್ಲಿನ ಅಂಶಗಳನ್ನು ಒಪ್ಪಿಕೊಂಡು ಸಚಿವ ನಟವರ್‌ಸಿಂಗ್ ರಾಜೀನಾಮೆಗೆ ಒತ್ತಾಯಿಸಿದ್ದ ಬಿಜೆಪಿ, ಲಿಬರ‌್ಹಾನ್ ಆಯೋಗದ ವರದಿ ಸೋರಿಕೆಯಾದಾಗ ಮಾತ್ರ ಮೊದಲು ಸೋರಿಕೆ ಬಗ್ಗೆ ತನಿಖೆ ನಡೆಸಲಿ ಎಂದು ಲೋಕಸಭೆಯಲ್ಲಿ ಗದ್ದಲ ನಡೆಸಿತ್ತು.
ಈ ಎರಡು ಫ್ಲ್ಯಾಷ್‌ಬ್ಯಾಕ್‌ಗಳ ಒಟ್ಟು ಸಾರಾಂಶ:
1.ಸಾಮಾನ್ಯವಾಗಿ ರಾಜ್ಯದಲ್ಲಿ ರಾಜ್ಯ ಸರ್ಕಾರದ ಗುಪ್ತಚರ ವಿಭಾಗವೇ ದೂರವಾಣಿ ಕದ್ದಾಲಿಕೆ ನಡೆಸುತ್ತದೆ ಮತ್ತು ಅದಕ್ಕೆ ಮುಖ್ಯಮಂತ್ರಿಗಳೇ ಹೊಣೆಯಾಗಿರುತ್ತಾರೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ.
2.ತನಿಖಾ ಆಯೋಗದ ವರದಿ ಸೋರಿಕೆಯಾದರೂ ಅದು ಪಾವಿತ್ರ್ಯತೆ ಕಳೆದುಕೊಳ್ಳುವುದಿಲ್ಲ.