Monday, July 25, 2011

ಆಗ ಪಾಟೀಲರ ಕಾಲ, ಈಗ ಯಡಿಯೂರಪ್ಪನವರದ್ದು...

`ಇಂಟೆಲಿಜೆನ್ಸ್ ಅಧಿಕಾರಿ ಯಾರ ಟೆಲಿಫೋನ್ ಕದ್ದಾಲಿಸಬೇಕೆಂದು ಮುಖ್ಯಮಂತ್ರಿಗಳಿಂದ ಲಿಖಿತ ಆದೇಶ ಪಡೆಯುವುದಿಲ್ಲ. ಇಂತಹ ಶಾಸಕ ಇಲ್ಲವೇ ಸಾರ್ವಜನಿಕ ವ್ಯಕ್ತಿಯ ಚಟುವಟಿಕೆ ಮೇಲೆ ಕಣ್ಣಿಡಿ ಎಂದರೆ ಸಾಕು, ಆ ಅಧಿಕಾರಿ ಸಂಬಂಧಿಸಿದವರ ಟೆಲಿಫೋನ್ ನಂಬರ್ ತೆಗೆದುಕೊಂಡು ಅದನ್ನು ಟೆಲಿಗ್ರಾಫ್ ಇಲಾಖೆಯ ಜನರಲ್ ಮ್ಯಾನೇಜರ್‌ಗೆ ತಿಳಿಸುತ್ತಾರೆ. ಆಗ ಆ ಜನರಲ್ ಮ್ಯಾನೇಜರ್ ಇಂಟೆಲಿಜೆನ್ಸ್ ಅಧಿಕಾರಿಗೆ ಆ ಟೆಲಿಫೋನ್ ಕದ್ದಾಲಿಸುವ ಉಪಕರಣ ಪೂರೈಸುತ್ತಾರೆ. ನಂತರ ಆ ಕೆಲಸ ಸಲೀಸಾಗಿ ನಡೆಯುತ್ತದೆ. ಯಾವುದೇ ಇಂಟೆಲಿಜೆನ್ಸ್ ಅಧಿಕಾರಿ ಮುಖ್ಯಮಂತ್ರಿಯ ವಿಶ್ವಾಸದ ಮೇಲೆ ಕೆಲಸ ಮಾಡುತ್ತಾನೆ. ಇಲ್ಲದೆ ಹೋದರೆ ಅಂತಹ ಅಧಿಕಾರಿಯನ್ನು ಆ ಜಾಗದಲ್ಲಿಟ್ಟುಕೊಳ್ಳುವುದಿಲ್ಲ. ನಂಬಿಕೆ ಇಲ್ಲದ ಅಧಿಕಾರಿಯನ್ನು ಆ ಜಾಗದಲ್ಲಿಟ್ಟುಕೊಂಡು ಕೆಲಸ ಮಾಡುವುದು ಕಷ್ಟವಾಗುತ್ತದೆ....~
- ಸರ್ಕಾರ ನಡೆಸುವ ದೂರವಾಣಿ ಕದ್ದಾಲಿಕೆಯ ಕಳ್ಳಾಟದ ಒಳಮರ್ಮವನ್ನು ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಹೀಗೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾಗ ಇಡೀ ವಿಧಾನಸಭೆ ಮೈಯೆಲ್ಲಾ ಕಿವಿಯಾಗಿ ಕೇಳುತ್ತಿತ್ತು. ಹಗರಣದ ಕೇಂದ್ರ ವ್ಯಕ್ತಿಯಾಗಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕೆಂಬಣ್ಣದ ಮುಖ ಕಪ್ಪಿಟ್ಟಿತ್ತು.
ಇದಕ್ಕಿಂತ ಮೊದಲು ಮಾತನಾಡಿದ್ದ ಹೆಗಡೆ `ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡುವರೆ ವರ್ಷಗಳ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರದ ಒತ್ತಾಯದ ಮೇರೆಗೆ ಟೆಲಿಫೋನ್ ಕದ್ದಾಲಿಸಬೇಕಾದವರ ಪಟ್ಟಿಯನ್ನು ನವೀಕರಿಸಿದ್ದಕ್ಕೆ ನನ್ನ ಸಮ್ಮತಿ ಅಥವಾ ಒಂದು ಸಣ್ಣ ರುಜು ಇದೆ ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಈಗಲೂ ಸಿದ್ಧ ಎಂದು ಜಾಣತನದಿಂದ ತಮ್ಮ `ನಿರಪರಾಧಿತನ~ವನ್ನು ಸಮರ್ಥಿಸಿಕೊಂಡಿದ್ದರು. ಜಾಣ ಹೆಗಡೆ ಅವರ ಬಾಯಿಯನ್ನು ಪಾಟೀಲರು ಸಾಕ್ಷ್ಯಾಧಾರದೊಡನೆ ಆಡಿದ ಮಾತುಗಳು ಮುಚ್ಚಿಸಿದ್ದವು.
ಇದು ಎಂಬತ್ತರ ದಶಕದ ಕೊನೆಭಾಗದಲ್ಲಿ ಕೋಲಾಹಲ ಎಬ್ಬಿಸಿದ್ದ ದೂರವಾಣಿ ಕದ್ದಾಲಿಕೆ ಹಗರಣದ ಕ್ಲೈಮಾಕ್ಸ್ ದೃಶ್ಯ (ಜೂನ್ 26,1990).ದೂರವಾಣಿ ಕದ್ದಾಲಿಕೆ ಆರೋಪದಿಂದಾಗಿ ರಾಮಕೃಷ್ಣ ಹೆಗಡೆ ಅವರು ಎರಡು ವರ್ಷ ಮೊದಲೇ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು, ನಂತರ ಚುನಾವಣೆಯಲ್ಲಿ ಜನತಾ ಪಕ್ಷವೂ ಸೋತ ಕಾರಣ ಹೆಗಡೆ ವಿರೋಧಪಕ್ಷದಲ್ಲಿದ್ದರು.  `ಪ್ರಜಾವಾಣಿ~ ಸೇರಿದ ಪ್ರಾರಂಭದ ದಿನಗಳಲ್ಲಿ ವಿಧಾನಪರಿಷತ್ ಕಲಾಪದ ವರದಿಗೆಂದು ಹೋಗಿದ್ದ ನಾನು ಕುತೂಹಲಕ್ಕೆಂದು ವಿಧಾನಸಭೆಗೆ ನುಗ್ಗಿ ಪತ್ರಕರ್ತರ ಗ್ಯಾಲರಿಯ ಮೂಲೆಯಲ್ಲಿ ಕೂತು ನೋಡಿದ ಈ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ, ಪಾಟೀಲರ ಮಾತುಗಳು ಈಗಷ್ಟೇ ಕೇಳಿದಂತಿದೆ. ಅವರು ಉತ್ತರ ನೀಡಲು ಏಳುವ ಮೊದಲು ವಿಧಾನಸಭೆಯ ಮೊಗಸಾಲೆಯಲ್ಲಿ ಹರಟೆ ಹೊಡೆಯುತ್ತಿದ್ದ ಪತ್ರಕರ್ತರು ಮತ್ತು ರಾಜಕಾರಣಿಗಳಲ್ಲಿ ಹೆಚ್ಚಿನವರು `ಪಾಟೀಲರು ಮತ್ತು ಹೆಗಡೆ ಲವ-ಕುಶರು, ಹಳೆ ದೋಸ್ತಿಯನ್ನು ಪಾಟೀಲರು ಕೈಬಿಡುವುದಿಲ್ಲ ನೋಡಿ, ಏನೋ ತಿಪ್ಪೆಸಾರಿಸಿ ಮುಗಿಸಿ ಬಿಡುತ್ತಾರೆ~ ಎಂದೇ ಹೇಳುತ್ತಿದ್ದರು. ಆ ಎಲ್ಲ ಆರೋಪಗಳಿಗೂ ಪಾಟೀಲರ ಮಾತುಗಳು ಉತ್ತರದಂತಿತ್ತು. `ರಾಮಕೃಷ್ಣ ಹೆಗಡೆ ಮತ್ತು ನನ್ನ ಸ್ನೇಹ 1956ರಿಂದ ಇದೆ. ವೈಯಕ್ತಿಕ ಮಟ್ಟದ ಸ್ನೇಹ ಹಿಂದಿನಿಂದಲೂ ಇದೆ, ಈಗಲೂ ಇದೆ. ಆದರೆ ನನ್ನ ಮತ್ತು ಅವರ ರಾಜಕೀಯ ಸ್ನೇಹ 1979ಕ್ಕೆ ಕೊನೆ ಆಯಿತು~ ಎಂಬ ಪೀಠಿಕೆಯೊಂದಿಗೆ ಪಾಟೀಲರು ಮಾತು ಪ್ರಾರಂಭಿಸಿದ್ದರು.
`...ಯಾರ ಫೋನ್ ಕದ್ದಾಲಿಸಲಾಗುವುದು ಎಂಬ ವಿವರ ಮುಖ್ಯಮಂತ್ರಿ ಹಾಗೂ ಗೂಢಚರ್ಯೆ ಇಲಾಖೆಯ ಮುಖ್ಯಸ್ಥರಿಗೆ ಮಾತ್ರ ಗೊತ್ತಿರುತ್ತದೆ. ಪದ್ಧತಿ ಪ್ರಕಾರ ಮುಖ್ಯಮಂತ್ರಿ ಸಲಹೆ ಮತ್ತು ಒಪ್ಪಿಗೆ ಮೇಲೆ ಕದ್ದಾಲಿಸುವ ಫೋನ್ ನಂಬರ್‌ಗಳ ಪಟ್ಟಿಗೆ ಹೊಸದಾಗಿ ನಂಬರು ಸೇರಿಸಬಹುದು ಅಥವಾ ಪಟ್ಟಿಯಿಂದ ತೆಗೆಸಬಹುದು. 1988ರಲ್ಲಿ ತಾವು ಆ ರೀತಿ ನಿರ್ದಿಷ್ಟ ವ್ಯಕ್ತಿಗಳ ಫೋನ್ ಕದ್ದಾಲಿಸಲು ಸಲಹೆ ಅಥವಾ ಒಪ್ಪಿಗೆ ಕೊಟ್ಟೇ ಇಲ್ಲವೆಂದು ಹೆಗಡೆಯವರು ಹೇಳಿದ್ದಾರೆ. ಸತ್ಯ ಗೊತ್ತಿರುವ ಇನ್ನೊಬ್ಬ ವ್ಯಕ್ತಿ ಆಗಿನ ಗೂಢಚರ್ಯೆ ಅಧಿಕಾರಿ ಎಂ.ಎಸ್.ರಘುರಾಮನ್, ಅವರು ಈಗ ಡಿಜಿಪಿಯಾಗಿದ್ದಾರೆ. ರಘುರಾಮನ್ ಪೊಲೀಸ್ ಇಲಾಖೆಯಲ್ಲಿ ಸಚ್ಚಾರಿತ್ರ್ಯದ ದಾಖಲೆ ಹೊಂದಿರುವವರು. 1988ರಲ್ಲಿ ಫೋನ್ ಕದ್ದಾಲಿಸಲು ಯಾರು ಹೇಳಿದ್ದರು ಎಂದು ಕೇಳಿ ನನ್ನ ಮುಖ್ಯಕಾರ‌್ಯದರ್ಶಿ ಮೂಲಕ ಪತ್ರ ಬರೆಸಿದ್ದೆ. ಅವರು ಕೊಟ್ಟಿರುವ ಉತ್ತರದಲ್ಲಿ `ಎಂದಿನ ಪದ್ಧತಿಯಂತೆ ಮುಖ್ಯಮಂತ್ರಿ ಸಲಹೆ ಮತ್ತು ಒಪ್ಪಿಗೆ ಪಡೆದೇ ಮಾಡಿದ್ದೇನೆ~ ಎಂದು ಲಿಖಿತ ಉತ್ತರ ನೀಡಿದ್ದಾರೆ ಎಂದ ವೀರೇಂದ್ರ ಪಾಟೀಲ್ ಅವರು, ರಘುರಾಮನ್ ಪತ್ರವನ್ನು ಸದನದಲ್ಲಿ ಮಂಡಿಸಿದರು. ಅಲ್ಲಿಗೆ ರಾಮಕೃಷ್ಣ ಹೆಗಡೆ ಅವರ ಬತ್ತಳಿಕೆ ಬರಿದಾಗಿತ್ತು.
ಪಾಟೀಲರು ಮುಂದುವರಿದು ಹೇಳುತ್ತಾರೆ `....ನಮ್ಮಲ್ಲಿ ಬಹಳ ಮಂದಿ ಹೊಸ ಶಾಸಕರು ಬಂದಿದ್ದಾರೆ, ಟೆಲಿಫೋನ್ ಕದ್ದಾಲಿಸುವುದಾದರೆ ನಾವು ಹೇಗೆ ಕೆಲಸಮಾಡಬೇಕು ಎಂದು ಅವರು ಕೇಳುತ್ತಿದ್ದಾರೆ. ಈ ದೃಷ್ಟಿಯಿಂದ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡು ಮೂರು ದಿನಗಳಲ್ಲೇ ಗೂಢಚರ್ಯೆ ವಿಭಾಗದ ಮುಖ್ಯಸ್ಥರನ್ನು ಕರೆಸಿ ಮಾತನಾಡಿದೆ. ಇನ್ನು ಮುಂದೆ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರ ಟೆಲಿಫೋನ್ ಕದ್ದಾಲಿಸಬಾರದೆಂದು ಆದೇಶ ನೀಡಿದೆ. ಒಮ್ಮೆ ಬಾಯಿಮಾತಿನಲ್ಲಿ ಹೇಳಿದ ನಂತರ ಮುಖ್ಯ ಕಾರ‌್ಯದರ್ಶಿ, ಗೃಹ ಇಲಾಖೆ ಕಮಿಷನರ್ ಈ ಬಗ್ಗೆ ಪತ್ರ ಬರೆದಿದ್ದರು. ಗೃಹ ಕಮಿಷನರ್ ಈಗಿನ ಐಜಿಪಿ ಇಂಟೆಲಿಜೆನ್ಸ್ ಶ್ರಿನಿವಾಸಲು ಅವರಿಗೆ ತಿಳಿಸಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ಯಾವುದೇ ರಾಜಕೀಯ ಇಲ್ಲವೇ ಸಾರ್ವಜನಿಕ ವ್ಯಕ್ತಿಯ ಟೆಲಿಫೋನ್‌ಗಳನ್ನು ಕದ್ದು ಕೇಳಲಾಯಿತು ಎಂಬ ದೂರಿಗೆ ಅವಕಾಶ ಇರಬಾರದೆಂದು ಹೀಗೆ ಮಾಡಿದೆ~ ಪಾಟೀಲರು ಅಧಿಕಾರದಲ್ಲಿದ್ದಷ್ಟು ದಿನ ನುಡಿದಂತೆ ನಡೆದಿದ್ದರು. ಆದರೆ ಕದ್ದಾಲಿಕೆ ಪಟ್ಟಿಗೆ ಸಮ್ಮತಿ ಸಹಿ ಸಾಬೀತಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಸವಾಲು ಹಾಕಿದ್ದ ಹೆಗಡೆ ಮಾತ್ರ ನುಡಿದಂತೆ ನಡೆಯಲಿಲ್ಲ.
ಇವೆಲ್ಲವನ್ನೂ ಗಂಭೀರವದನರಾಗಿ ಸಭಾಧ್ಯಕ್ಷರ ಸ್ಥಾನದಲ್ಲಿ ಕೂತು ಕೇಳುತ್ತಿದ್ದವರು ಈಗಿನ ವಿದೇಶಾಂಗ ವ್ಯವಹಾರ ಖಾತೆ ಸಚಿವ ಎಸ್.ಎಂ.ಕೃಷ್ಣ. ಒಮ್ಮೆ ಚರ್ಚೆಯ ಮಧ್ಯೆ ಪ್ರವೇಶಿಸಿದ ಕೃಷ್ಣ ಅವರು  `ಹತ್ತು ವರ್ಷದ ಮೇಲೂ ನಮ್ಮ ಮಾತು ನಮಗೆ ತಿರುಗುಬಾಣವಾಗದಂತೆ ಇರಬೇಕು~ ಎಂದಿದ್ದರು. ಅದೇ ವಿಧಾನಸಭೆಯಲ್ಲಿನ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಇನ್ನೊಬ್ಬ ನಾಯಕರು ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. `ನಮ್ಮ ರಾಜಕೀಯ ಚದುರಂಗದ ಆಟಕ್ಕೆ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರವೃತ್ತಿಗೆ ಕೊನೆ ಹೇಳಬೇಕು ಮುಖ್ಯಮಂತ್ರಿಗಳೇ~ ಎಂದು ಒಂದು ಹಂತದಲ್ಲಿ ಅವರು ಕೂಗಿ ಹೇಳಿದ್ದರು. ಯಡಿಯೂರಪ್ಪನವರು ಹಾಗೆ ಹೇಳಲು ಕಾರಣ ಇತ್ತು. ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ  ವಿರೋಧಪಕ್ಷಗಳ ನಾಯಕರಾಗಿದ್ದ ಬಿ.ಎಸ್.ಯಡಿಯೂಪ್ಪ, ಡಿ.ಎಚ್.ಶಂಕರಮೂರ್ತಿ ಸೇರಿದಂತೆ ನಗರದ ಹೆಸರಾಂತ ವಕೀಲರು ಹಾಗೂ ವರ್ತಕರ ಫೋನ್‌ಗಳನ್ನು ಕದ್ದು ಕೇಳಲಾಗಿತ್ತು. ಆಗ ಗುಪ್ತದಳದ ಡಿಐಜಿ ಆಗಿದ್ದವರು ಡಿ.ಆರ್.ಕಾರ್ತಿಕೇಯನ್. ಈ ವಿಷಯವನ್ನು ಕೂಡಾ ಸದನದಲ್ಲಿ ನೆನೆಪು ಮಾಡಿಕೊಂಡದ್ದು ರಾಮಕೃಷ್ಣ ಹೆಗಡೆ.
`...ಹತ್ತುವರ್ಷದ ಮೇಲೂ ನಮ್ಮ ಮಾತು ನಮಗೆ ತಿರುಗುಬಾಣವಾಗದಂತೆ ಇರಬೇಕು...~ ಎಂದು ಕೃಷ್ಣ ಹೇಳಿದ್ದ ಮಾತುಗಳನ್ನು ಯಡಿಯೂರಪ್ಪನವರು ಕೇಳಿಸಿಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ.
*           *              *           *                 
ತೀರಾ ಹಳೆಯದಾದ ಫ್ಲಾಷ್‌ಬ್ಯಾಕ್ ಬೇಡ ಎಂದಾದರೆ ಇತ್ತೀಚಿನ ದಿನಗಳಿಗೆ ಬರೋಣ. `ಆಹಾರಕ್ಕಾಗಿ ತೈಲ~ ಎಂಬ ವಿಶ್ವಸಂಸ್ಥೆಯ ಕಾರ‌್ಯಕ್ರಮದ ಅನುಷ್ಠಾನದಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಯುಪಿಎ ಸರ್ಕಾರ ನೇಮಿಸಿದ್ದ ಆರ್.ಎಸ್.ಪಾಠಕ್ ಆಯೋಗದ ವರದಿಯನ್ನು ಒಂದು ಟಿವಿ ಚಾನೆಲ್ ಸರ್ಕಾರಕ್ಕಿಂತ ಮೊದಲೇ ಬಹಿರಂಗಪಡಿಸಿತ್ತು. ಚಾನೆಲ್‌ನಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ ಸಮಯದಲ್ಲಿ  ವರದಿ ಸಲ್ಲಿಕೆಗಾಗಿ ಹೋಗಿದ್ದ ಆಯೋಗದ ಅಧ್ಯಕ್ಷರಾದ ಪಾಠಕ್ ಸಾಹೇಬರು ಇನ್ನೂ ಪ್ರಧಾನಿ ಕಚೇರಿಯಲ್ಲಿಯೇ ಇದ್ದರು. `ಆಹಾರಕ್ಕಾಗಿ ತೈಲ~ ಯೋಜನೆಯ ಹಗರಣದಲ್ಲಿ ಆಗಿನ ವಿದೇಶಾಂಗ ವ್ಯವಹಾರ ಖಾತೆ ಸಚಿವ ನಟವರ್‌ಸಿಂಗ್ ಪಾತ್ರ ಇದೆ ಎನ್ನುವುದು ಪಾಠಕ್ ಆಯೋಗದ ತನಿಖೆಯ ಮುಖ್ಯಾಂಶ. ಈ ಹಿನ್ನೆಲೆಯಲ್ಲಿ ಸಚಿವ ನಟವರ್‌ಸಿಂಗ್ ರಾಜೀನಾಮೆ ನೀಡಬೇಕೆಂದು ಬಿಜೆಪಿ  ಲೋಕಸಭೆಯಲ್ಲಿ ಪಟ್ಟು ಹಿಡಿದು ಕಲಾಪ ನಡೆಸಲು ಅವಕಾಶ ನೀಡಿರಲಿಲ್ಲ.
ಕೊನೆಗೆ ನಟವರ್‌ಸಿಂಗ್ ವಿದೇಶಾಂಗ ವ್ಯವಹಾರದ ಖಾತೆಯನ್ನು ಕಳೆದುಕೊಳ್ಳಬೇಕಾಯಿತು. ತನಿಖಾ ವರದಿ ಸೋರಿಕೆಯಿಂದಾಗಿ ಅದರ ಪಾವಿತ್ರ್ಯ ನಾಶವಾಯಿತೆಂದು ಧನಂಜಯಕುಮಾರ್ ಮತ್ತಿತರ ಬಿಜೆಪಿ ನಾಯಕರು ಈಗ ಹೇಳುತ್ತಿದ್ದಾರೆ. ಸೋರಿಕೆಯಿಂದಾಗಿ ಪಾಠಕ್ ತನಿಖಾ ವರದಿಯ ಪಾವಿತ್ರ್ಯ ನಾಶವಾಗಿರಲಿಲ್ಲವೇ?
ತನಿಖಾ ವರದಿಗಳ ಸೋರಿಕೆ ದೇಶದಲ್ಲಿಯಾಗಲಿ, ವಿದೇಶದಲ್ಲಿಯಾಗಲಿ ಹೊಸದೇನಲ್ಲ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆ ಬಗ್ಗೆ ತನಿಖೆ ನಡೆಸಲು ಆಗಿನ ಸರ್ಕಾರ ಎಂ.ಸಿ.ಜೈನ್ ನೇತೃತ್ವದ ಆಯೋಗ ನೇಮಿಸಿತ್ತು. ಆರುವರ್ಷಗಳ ಕಾಲ ತನಿಖೆ ನಡೆಸಿದ್ದ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸುವ ಪೂರ್ವದಲ್ಲಿಯೇ ಮೊದಲು ತಮಿಳು ವಾರಪತ್ರಿಕೆಯೊಂದರಲ್ಲಿ ನಂತರ `ಇಂಡಿಯಾ ಟುಡೇ~ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕಾಲದಲ್ಲಿ ಅಧಿಕಾರದಲ್ಲಿದ್ದ ಸಂಯುಕ್ತರಂಗ ಸರ್ಕಾರವನ್ನು ಉರುಳಿಸಲು ರಾಜೀವ್ ನಿಷ್ಠಾವಂತರೇ ಈ ಕೆಲಸ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ರಾಜೀವ್‌ಗಾಂಧಿ ಹತ್ಯೆಯ ಯೋಜನೆಗೆ ಡಿಎಂಕೆ ಸಹಕಾರ ಇತ್ತು ಎಂದು ಜೈನ್ ಆಯೋಗ ಹೇಳಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜತೆಗೂಡಿ ಬಿಜೆಪಿ ಕೂಡಾ ಸರ್ಕಾರದ ವಿರುದ್ಧ ಕೂಗು ಹಾಕಿತ್ತು. ವರದಿ ಸೋರಿಕೆಯಾದರೆ ಪಾವಿತ್ರ್ಯ ಇಲ್ಲ ಎಂದಾದರೆ ಆಗ ಬಿಜೆಪಿ ಯಾಕೆ ಗದ್ದಲ ಮಾಡಬೇಕಾಗಿತ್ತು? ಕೊನೆಗೆ ಮಿತ್ರಪಕ್ಷವಾದ ಡಿಎಂಕೆ ಪಕ್ಷವನ್ನು ಕೈಬಿಡಲಾಗದೆ ಆಗಿನ ಪ್ರಧಾನಿ ಐ.ಕೆ.ಗುಜ್ರಾಲ್ ಅವರು ರಾಜೀನಾಮೆ ನೀಡಿದ್ದರು. ಇವೆಲ್ಲವೂ ನಡೆಯುತ್ತಿರುವಾಗ ಧನಂಜಯಕುಮಾರ್ ಲೋಕಸಭಾ ಸದಸ್ಯರಾಗಿ ಅಲ್ಲಿಯೇ ಇದ್ದರು.
ಬಾಬ್ರಿ ಮಸೀದಿ ಧ್ವಂಸದ ಘಟನೆ ಬಗ್ಗೆ ಎಂ.ಎಸ್.ಲಿಬರ‌್ಹಾನ್ ಏಕಸದಸ್ಯ ಆಯೋಗ ಸಲ್ಲಿಸಿದ್ದ ವರದಿ ಸರ್ಕಾರದ ಬಳಿ ಇರುವಾಗಲೇ ಪತ್ರಿಕೆಗಳಿಗೆ ಸೋರಿಕೆಯಾಗಿತ್ತು. ಅಟಲಬಿಹಾರಿ ವಾಜಪೇಯಿ,ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ,ಕಲ್ಯಾಣ್‌ಸಿಂಗ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಬಾಬ್ರಿಮಸೀದಿ ಧ್ವಂಸದ ಕಾರ‌್ಯಾಚರಣೆಯಲ್ಲಿ ಭಾಗಿಗಳು ಎಂದು ಆಯೋಗ ವರದಿ ನೀಡಿತ್ತು. ಪಾಠಕ್ ಆಯೋಗದ ವರದಿ ಸೋರಿಕೆಯಾದರೂ ಅದರಲ್ಲಿನ ಅಂಶಗಳನ್ನು ಒಪ್ಪಿಕೊಂಡು ಸಚಿವ ನಟವರ್‌ಸಿಂಗ್ ರಾಜೀನಾಮೆಗೆ ಒತ್ತಾಯಿಸಿದ್ದ ಬಿಜೆಪಿ, ಲಿಬರ‌್ಹಾನ್ ಆಯೋಗದ ವರದಿ ಸೋರಿಕೆಯಾದಾಗ ಮಾತ್ರ ಮೊದಲು ಸೋರಿಕೆ ಬಗ್ಗೆ ತನಿಖೆ ನಡೆಸಲಿ ಎಂದು ಲೋಕಸಭೆಯಲ್ಲಿ ಗದ್ದಲ ನಡೆಸಿತ್ತು.
ಈ ಎರಡು ಫ್ಲ್ಯಾಷ್‌ಬ್ಯಾಕ್‌ಗಳ ಒಟ್ಟು ಸಾರಾಂಶ:
1.ಸಾಮಾನ್ಯವಾಗಿ ರಾಜ್ಯದಲ್ಲಿ ರಾಜ್ಯ ಸರ್ಕಾರದ ಗುಪ್ತಚರ ವಿಭಾಗವೇ ದೂರವಾಣಿ ಕದ್ದಾಲಿಕೆ ನಡೆಸುತ್ತದೆ ಮತ್ತು ಅದಕ್ಕೆ ಮುಖ್ಯಮಂತ್ರಿಗಳೇ ಹೊಣೆಯಾಗಿರುತ್ತಾರೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ.
2.ತನಿಖಾ ಆಯೋಗದ ವರದಿ ಸೋರಿಕೆಯಾದರೂ ಅದು ಪಾವಿತ್ರ್ಯತೆ ಕಳೆದುಕೊಳ್ಳುವುದಿಲ್ಲ.

Monday, July 18, 2011

ಭಗವದ್ಗೀತೆಯನ್ನು ಹೀಗೂ ಓದಬಹುದಲ್ಲವೇ?

`ಭಗವದ್ಗೀತೆ ಅಭಿಯಾನ ವಿರೋಧಿಸುವವರು ದೇಶ ಬಿಟ್ಟು ಹೋಗಲಿ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಪ್ಪಣೆ ಕೊಡಿಸಿದ್ದಾರೆ.ಭಗವದ್ಗೀತೆ ಅಭಿಯಾನದಿಂದ ಕೆಟ್ಟದ್ದೇನಾಗಿದೆ ಎಂದು ಯಾರಾದರೂ ಪ್ರಶ್ನಿಸಿದರೆ ಅದಕ್ಕೆ ಉತ್ತರದಂತಿದೆ ಸಚಿವ ಕಾಗೇರಿ ಅವರ ಮಾತುಗಳು.

ಸಜ್ಜನ  ಮತ್ತು ಪ್ರಜ್ಞಾವಂತರೆನಿಸಿಕೊಂಡ ಕಾಗೇರಿ ಅವರನ್ನೇ ಈ ರೀತಿ  ಮನುಷ್ಯವಿರೋಧಿಯಂತೆ ಮಾತನಾಡಲು ಪ್ರೇರೇಪಿಸಿದ `ಭಗವದ್ಗೀತಾ ಅಭಿಯಾನ~ ಎಂತಹ ವಿದ್ಯಾರ್ಥಿಗಳನ್ನು ಸೃಷ್ಟಿಸಲಿದೆಯೋ ಗೊತ್ತಿಲ್ಲ.

ಧರ್ಮ ಅಫೀಮು ಇದ್ದಂತೆ ಎಂದು ಹೇಳಿರುವುದು ಇದಕ್ಕೇ ಇರಬೇಕು, ಯಾಕೆಂದರೆ ಒಮ್ಮಮ್ಮೆ ಪ್ರಜ್ಞಾವಂತರೆನಿಸಿಕೊಂಡವರು ಕೂಡಾ ಧಾರ್ಮಿಕ ಉನ್ಮಾದದ ಸುಳಿಗೆ ಸಿಕ್ಕಿ ಹಾದಿ ತಪ್ಪಿಬಿಡುತ್ತಾರೆ.

ಈ ದೇಶದ ಸಂವಿಧಾನಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರಮಾಣ ಮಾಡಿ ಸಚಿವರಾದ ಕಾಗೇರಿ ಅವರಿಗೆ ತಾನಾಡಿದ ಮಾತುಗಳು ಅದಕ್ಕೆ ವಿರುದ್ಧವಾಗಿದೆ ಎಂದು ತಿಳಿಯದಷ್ಟು ಧರ್ಮದ ಮಂಪರು ಆವರಿಸಿಕೊಂಡು ಬಿಟ್ಟಿದೆ.

ಸದ್ಯ ತಮ್ಮ ಪಕ್ಷಕ್ಕೆ ಕರ್ನಾಟಕದಲ್ಲಿ ಮಾತ್ರ ಆಡಳಿತ ನಡೆಸಲು ಜನಾದೇಶ ಇದೆ ಎನ್ನುವುದನ್ನೂ ಅವರು ಮರೆತಂತಿದೆ. ಅದು ನೆನೆಪಿದ್ದರೆ ರಾಜ್ಯ ಬಿಟ್ಟು ತೊಲಗಿ ಎಂದಾದರೂ ಅವರು ಹೇಳುತ್ತಿದ್ದರೇನೋ?
ಈಗಿನ ವಿವಾದ ಭಗವದ್ಗೀತೆಯ ಧಾರ್ಮಿಕ ಪಾವಿತ್ರ್ಯ, ಜನರ ನಂಬಿಕೆ ಇಲ್ಲವೇ ಕೃತಿಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದಲ್ಲ, ಅದು ಈ ಕಾರ‌್ಯಕ್ರಮದ ಹಿಂದಿನ ಉದ್ದೇಶ ಮತ್ತು ಪರಿಣಾಮಕ್ಕೆ ಸಂಬಂಧಿಸಿದ್ದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸಬೇಕೆನ್ನುವುದನ್ನು ಮುಖ್ಯಮಂತ್ರಿಗಳೋ, ಶಿಕ್ಷಣ ಸಚಿವರೋ ತಮ್ಮ ಮನೆಗಳಲ್ಲಿ ಕೂತು ನಿರ್ಧರಿಸಲಾಗುವುದಿಲ್ಲ.

ಅದಕ್ಕಾಗಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಇದೆ. ಅದರಲ್ಲಿನ ತಜ್ಞರು ಚರ್ಚಿಸಿ ನೀಡುವ ವರದಿಯನ್ನು ಆಧರಿಸಿ ಶಾಲೆಗಳಲ್ಲಿ ಬೋಧಿಸುವ ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ನಿರ್ಧರಿಸಲಾಗುತ್ತದೆ.
ನಾಳೆ ಯಾವನೋ ಒಬ್ಬ `ಪವಾಡ ಮಾಡುವುದನ್ನು ಕಲಿಸುತ್ತೇನೆ~ ಎಂದೋ, `ಸರ್ಕಸ್ ಮಾಡುವುದಕ್ಕೆ ತರಬೇತಿ ನೀಡುತ್ತೇನೆ~ ಎಂದೋ ಬಂದರೆ ಅಂತಹವರಿಗೆ ಶಾಲೆಗಳಲ್ಲಿ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ.

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ಆಗಿನ ಮಾನವಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ಮುರಳಿ ಮನೋಹರ ಜೋಷಿ ಅವರು ಇಂತಹದ್ದೇ ದುಸ್ಸಾಹಸ ಮಾಡಿದ್ದರು. ಕೇಂದ್ರ ಶೈಕ್ಷಣಿಕ ಸಲಹಾ ಮಂಡಳಿಯನ್ನು ಪುನರ್‌ರಚಿಸಲು ಹೋಗದೆ ಎನ್‌ಸಿಇಆರ್‌ಟಿ ಮೂಲಕ ಪಠ್ಯಪುಸ್ತಕಗಳನ್ನು ತಿದ್ದುವ (ತಿರುಚುವ) ಪ್ರಯತ್ನ ನಡೆಸಿದ್ದರು.
ರಾಜ್ಯದಲ್ಲಿ ಮೂರುವರ್ಷಗಳ ಅಧಿಕಾರದ ನಂತರ ಇಲ್ಲಿನ ಶಿಕ್ಷಣ ಸಚಿವರು ಈ ಕೆಲಸ ಪ್ರಾರಂಭಿಸಿದ್ದಾರೆ. ತನ್ನೂರಿನ ಮಠದ ಸ್ವಾಮಿಯೊಬ್ಬರು `ಭಗವದ್ಗೀತೆ ಅಭಿಯಾನ ಮಾಡುತ್ತೇನೆ~ ಎಂದು ಹೇಳಿದಾಗ ಅದಕ್ಕೆ ಕಣ್ಣುಮುಚ್ಚಿ ಆದೇಶ ಹೊರಡಿಸಿ ಜನರ ತೆರಿಗೆ ಹಣವನ್ನು ಸಮರ್ಪಿಸಿದ್ದಾರೆ. ಆ ಕಾರ‌್ಯಕ್ರಮದ ಹಿಂದಿನ ನಿಜವಾದ ಉದ್ದೇಶವೇನು?
ಅದರ ಸ್ವರೂಪವೇನು? ಅದರಿಂದ ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮಗಳೇನು? ಉದ್ಭವಿಸಬಹುದಾದ ಹೊಸ ಸಮಸ್ಯೆಗಳೇನು? ಇವೆಲ್ಲವನ್ನು ಒಬ್ಬ ಜವಾಬ್ದಾರಿಯತ ಸಚಿವನಾಗಿ ತಿಳಿದುಕೊಳ್ಳುವ ಕಷ್ಟವನ್ನು ಅವರು ತೆಗೆದುಕೊಂಡಿಲ್ಲ. ತಾನು ನಂಬಿರುವ ತತ್ವಗಳಿಗೆ ನಿಷ್ಠನಾಗಿರುವ ಸ್ವಯಂಸೇವಕನಂತೆ ವರ್ತಿಸಿದ್ದಾರೆ.

ಕಾರ‌್ಯಕ್ರಮಕ್ಕೆ ಅನುಮತಿ ನೀಡಿರುವುದು ಮಾತ್ರವಲ್ಲ, ಅದರ ರಕ್ಷಣೆಗೆ  ಲಾಠಿ ಹಿಡಿದು ನಿಂತಿದ್ದಾರೆ. ಧರ್ಮ ಪ್ರೇರಿತ ಅಭಿಯಾನಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿ ಉಳಿಯುವುದಿಲ್ಲ. ನಾಳೆ ಮುಸ್ಲಿಂ ಇಲ್ಲವೇ ಕ್ರೈಸ್ತ ಧರ್ಮಗುರುಗಳು ಬಂದು ಕುರಾನ್ ಇಲ್ಲವೇ ಬೈಬಲ್ `ಕಂಠ ಪಾಠ ಮಾಡಿಸುತ್ತೇವೆ~ ಎಂದು ಬಂದರೆ ನಿರಾಕರಿಸುವುದು ಹೇಗೆ?
ಭಗವದ್ಗೀತೆಯೂ ಸೇರಿದಂತೆ ಪುರಾಣಗಳನ್ನು ವಿದ್ಯಾರ್ಥಿಗಳಿಗೆ ಓದಿಸಿದರೆ ತಪ್ಪೇನು ಎಂಬ ಪ್ರಶ್ನೆ ಸಹಜವಾದುದು. `ಪುರಾಣ ಕಥೆಗಳೆಂದರೆ ಜನರ ಕನಸು ಮತ್ತು ದುಃಖಗಳು. ಅವರು ಅತ್ಯಂತ ಆಳದಲ್ಲಿ ಆನಂದಿಸಿದ ಮತ್ತು ಅತ್ಯಮೂಲ್ಯ ಎಂದು ತಿಳಿದುಕೊಂಡ ಆಸೆ-ಆಕಾಂಕ್ಷೆಗಳು, ಬದುಕಿನ ಭಾಗವಾಗಿರುವ ಕೊನೆಯೇ ಇಲ್ಲದ ವಿಷಾದಗಳು, ಸ್ಥಳೀಯ ಮತ್ತು ಲೌಕಿಕ ಇತಿಹಾಸ-ಎಲ್ಲವೂ ಪುರಾಣಗಳಲ್ಲಿ ಅಳಿಸಲಾಗದಂತಹ ದಾಖಲೆಗಳಾಗಿರುತ್ತವೆ~ ಎಂದು ದೇಶ ಕಂಡ ಅಪರೂಪದ ಚಿಂತಕ ರಾಮಮನೋಹರ ಲೋಹಿಯಾ ಹೇಳಿದ್ದರು.

ರಾಮ, ಕೃಷ್ಣ ಮತ್ತು ಶಿವನ ಬಗ್ಗೆ ಲೋಹಿಯಾ ಬರೆದಿರುವ ಪ್ರಬಂಧ ಈ ದೇಶದ ಆಸ್ತಿಕ-ನಾಸ್ತಿಕ ಮಹಾಶಯರೆಲ್ಲರೂ ಕಡ್ಡಾಯವಾಗಿ ಓದಲೇಬೇಕಾದುದು. ಈ ತ್ರಿಮೂರ್ತಿಗಳನ್ನು `ಭಾರತದ ಮಹಾ ಕನಸು ಮತ್ತು ದುಃಖದ ಪ್ರತೀಕ~ ಎನ್ನುತ್ತಾರೆ ಅವರು.

`ಆದ್ದರಿಂದಲೇ ಇವರ ಕಥೆಗಳನ್ನು ಏಕಸೂತ್ರಕ್ಕೆ ಹೊಂದಿಸಿಕೊಳ್ಳುವುದು ಇಲ್ಲವೇ ಅವರ ಜೀವನದ ಜತೆ ವೈಫಲ್ಯವನ್ನೇ ಕಾಣದ ನೈತಿಕತೆಯನ್ನು ಹೆಣೆಯುವುದು ಮತ್ತು ಸುಳ್ಳು ಇಲ್ಲವೇ ಅಸಂಭವವೆಂದು ಕಾಣುವುದೆಲ್ಲವನ್ನೂ ಕಿತ್ತು ಬಿಸಾಡಲು ಹೊರಟರೆ ಜೀವನದಲ್ಲಿ ತರ್ಕವೊಂದನ್ನು ಬಿಟ್ಟು ಉಳಿದೆಲ್ಲವನ್ನೂ ದೋಚಿದಂತಾಗುತ್ತದೆ~ ಎಂದು ಹೇಳಿದ್ದರು ರಾಮ ಮನೋಹರ ಲೋಹಿಯಾ.
ಭಗವದ್ಗೀತೆ ಮಾತ್ರವಲ್ಲ, ಮಹಾಭಾರತ, ರಾಮಾಯಣ, ಕುರಾನ್, ಬೈಬಲ್ ಎಲ್ಲವನ್ನೂ ಎಲ್ಲರೂ ಓದಲೇ ಬೇಕು. ಆದರೆ ಅದನ್ನು ಹೇಗೆ ಓದಬೇಕೆಂಬುದೇ ನಮ್ಮ ಮುಂದಿರುವ ಮುಖ್ಯ ಪ್ರಶ್ನೆ.
ಆಸ್ತಿಕರು ಪುರಾಣವೆಂದು ನಂಬುವ ಮಹಾಭಾರತ ಎಂಬ ಮಹಾಕಾವ್ಯದ ಒಂದು ಭಾಗ ಭಗವದ್ಗೀತೆ. ಇದು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಕೃಷ್ಣ ಬೋಧಿಸಿದ ಗೀತೆ. ಪುರಾಣವೇ ಹಾಗೆ, ಅದಕ್ಕೆ ಇತಿಹಾಸಕ್ಕೆ ಅಗತ್ಯವಾದ ಅಧ್ಯಯನದ ಚೌಕಟ್ಟು ಇಲ್ಲವೇ ಪುರಾವೆಗಳ ನೆಲೆಗಟ್ಟು ಬೇಕಾಗುವುದಿಲ್ಲ.
ಅದನ್ನು ತಮ್ಮ  ಆಲೋಚನೆಗೆ ತಕ್ಕಂತೆ ಕಟ್ಟುತ್ತಾ, ಬಿಚ್ಚುತ್ತಾ, ವ್ಯಾಖ್ಯಾನಿಸುತ್ತಾ, ಮರುವ್ಯಾಖ್ಯಾನಿಸುತ್ತಾ ಹೋಗಬಹುದು. ಪುರಾಣಗಳ ವ್ಯಾಖ್ಯಾನ ಅದನ್ನು ವ್ಯಾಖ್ಯಾನಿಸುವವರ ನಿಲುವುಗಳನ್ನು ಅವಲಂಬಿಸಿರುವುದರಿಂದ ನಮ್ಮ ನಡುವೆ ಇರುವುದು ಒಂದು ರಾಮಾಯಣ, ಒಂದು ಮಹಾಭಾರತ ಅಲ್ಲ. ಪರಸ್ಪರ ಭಿನ್ನವಾದ ಈ ಕೃತಿಯ ಹಲವು ರೂಪಗಳು ಜನಪ್ರಿಯವಾಗಿವೆ.
ಭಗವದ್ಗೀತೆಯನ್ನು ಪವಿತ್ರಗ್ರಂಥವೆಂದು ಕುರುಡಾಗಿ ನಂಬುವವರು ಇದ್ದ ಹಾಗೆ, ಹಿಂಸೆಯನ್ನು ಸಮರ್ಥಿಸುವ, ಚಾತುರ್ವರ್ಣ ಪದ್ಧತಿಯನ್ನು ಒಪ್ಪಿಕೊಂಡಿರುವ, ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರತಿಪಾದಿಸುವ, ಮನುಷ್ಯ ಸಂಬಂಧಗಳನ್ನು ನಿರಾಕರಿಸುವ, ಶ್ರಮಕ್ಕೆ ಪ್ರತಿಫಲ ನಿರೀಕ್ಷಿಸಬಾರದೆಂದು ಹೇಳುವ ಭಗವದ್ಗೀತೆ  ಜನವಿರೋಧಿಯಾದುದು ಎಂದು ಹೇಳುವವರೂ ಇದ್ದಾರೆ.

ಮಹಾಭಾರತ ಎನ್ನುವುದು ಶ್ರಿಕೃಷ್ಣನೆಂಬ ಅನಾರ್ಯ ಏಕಾಂಗಿಯಾಗಿ ಕೇವಲ ಬುದ್ಧಿಬಲದಿಂದ ಆರ್ಯ ಸಾಮ್ರಾಜ್ಯವನ್ನು ನಾಶ ಮಾಡಿದ ಕತೆ ಎನ್ನುವವರೂ ಇದ್ದಾರೆ. ಆ ಮಹಾಭಾರತದ ಭಾಗವಾಗಿರುವ ಭಗವದ್ಗೀತೆಯನ್ನು ಕಂಠಪಾಠ ಮಾಡುವ ವಿದ್ಯಾರ್ಥಿಗಳಿಗೆ ಇದನ್ನೆಲ್ಲ ತಿಳಿದುಕೊಳ್ಳುವ ಅವಕಾಶ ಖಂಡಿತ ಇರುವುದಿಲ್ಲ.
ಈ ದೇಶದಲ್ಲಿ ಆರ್ಯರ ರಾಜಕೀಯ ಮತ್ತು ಸಾಂಸ್ಕೃತಿಕ ಸ್ವಾಮ್ಯ ಸ್ಥಾಪನೆಯ ಮೊದಲ ಕಥನವೆಂದು ಬಗೆಯಲಾಗಿರುವ ರಾಮಾಯಣದ ಕಾಲ ನಾಲ್ಕು ಸಾವಿರ ವರ್ಷಗಳಷ್ಟು ಹಿಂದಿನದೆಂದು ಊಹಿಸಲಾಗಿದೆ.
ಸುಮಾರು ಮೂರು ಸಾವಿರ ವರ್ಷಗಳ ಹಿಂದಿನದೆಂದು ಊಹಿಸಲಾಗಿರುವ ಮಹಾಭಾರತದ ಕಥನ ಕಾಲದಲ್ಲಿ ಭಾರತದಲ್ಲಿ ಆರ್ಯರು ಮತ್ತು ಅನಾರ್ಯರ ಸಾಂಸ್ಕೃತಿಕ ಸೆಣಸಾಟ ಇನ್ನೂ ನಡೆಯುತ್ತಿದ್ದರೂ ರಾಮಾಯಣದಲ್ಲಿ ಚಿತ್ರಿತರಾಗಿದ್ದ ರಕ್ಕಸ ಕುಲಜರ ಕ್ರೌರ್ಯದ ವರ್ಣನೆ ಮಹಾಭಾರತದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿತ್ತು.

ಅಷ್ಟರಲ್ಲಿ ಅನಾರ್ಯ ಸಮೂಹವನ್ನು ಆಳಬಲ್ಲ ಕ್ಷತ್ರಿಯ ವರ್ಗವನ್ನು ಆರ್ಯರು ರೂಪಿಸಿದ್ದರು. ಆರ್ಯರ ಆಕ್ರಮಣಕ್ಕೆ ದ್ರಾವಿಡರ ಪ್ರತಿರೋಧ ಕಡಿಮೆಯಾಗಿ ಅವರು, ಆರ್ಯರು ನಿರೂಪಿಸಿದ ವರ್ಣದ ಚೌಕಟ್ಟಿನಲ್ಲಿ ಬದುಕಲಾರಂಭಿಸಿದ್ದರು. ಇದರಿಂದಾಗಿ ಮಹಾಭಾರತದಲ್ಲಿ ಕ್ರೂರಿಗಳಾದ ರಕ್ಕಸರ ಚಿತ್ರ ಅಷ್ಟಾಗಿ ಕಾಣುವುದಿಲ್ಲ. ಬದಲಾಗಿ ವೃತ್ತಿಮೂಲವಾದ ಜಾತಿವಾರು ವಿಂಗಡಣೆ ಕಾಣಸಿಗುತ್ತದೆ.
ಇಂತಹ ವಿಂಗಡಣೆಯಲ್ಲಿ ಗೊಲ್ಲರ ಕುಲದಲ್ಲಿ ಹುಟ್ಟಿದ ಕೃಷ್ಣ ಮೂಲತಃ ಒಬ್ಬ ದ್ರಾವಿಡ. ಪುರಾಣದಲ್ಲಿ ಚಿತ್ರಿಸಿರುವಂತೆ ಅವನದು ನೀಲವರ್ಣ ಅಂದರೆ ಅವನೊಬ್ಬ ಕರಿಯ. ಆಗಿನ ಕಾಲದ ಆರ್ಯರಂತೆ ಆಜಾನುಬಾಹು ಅಲ್ಲ, ಅವನೊಬ್ಬ ಕುಳ್ಳ. ಗೊಲ್ಲರ ಕುಲದಲ್ಲಿ ಹುಟ್ಟಿ ಈ ಕರಿಯ, ಕುಳ್ಳ ಕೃಷ್ಣ ಆಗಿನ ಆರ್ಯ ಪ್ರಭುತ್ವದ ಬುಡವನ್ನೇ ಅಲುಗಾಡಿಸಿದ್ದ.

ಆರ್ಯ ಮೂಲವಾದ ಕುರುಕುಲದಲ್ಲಿ ಕೃಷ್ಣ ಹುಟ್ಟಿಸಿದ ದಾಯಾದಿ ಸಮರ ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವ ಒಂದು ಅಪರೂಪದ ರಾಜಕೀಯ ತಂತ್ರವೆನ್ನಬಹುದು. ಕೌರವರು ಮತ್ತು ಪಾಂಡವರ ನಡುವೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡ ಕೃಷ್ಣ, ಆರ್ಯಪುತ್ರರೊಳಗೆ ದಾಯಾದಿ ಮತ್ಸರವನ್ನು ಹುಟ್ಟಿಸಿ ಅದು ಕ್ರಮೇಣ ದ್ವೇಷವಾಗಿ ಬೆಳೆಯುವಂತೆ ಮಾಡಿದ. ಆ ಮೂಲಕ ಈ ಕ್ಷತ್ರಿಯರ ನಡುವೆ ನಡೆದ ಮಹಾಸಮರದಲ್ಲಿ ಆರ್ಯ ಪ್ರಭುತ್ವವೇ ನಶಿಸಿಹೋಗಬಹುದೆಂಬ ಲೆಕ್ಕಾಚಾರ ಕೃಷ್ಣನಿಗಿದ್ದಿರಬೇಕು.

ಹೀಗೆ ಆಗುವ ಆರ್ಯ ಕುಲಜರ ಅವನತಿ ದ್ರಾವಿಡ ಪ್ರಭುತ್ವಕ್ಕೆ ದಾರಿ ಮಾಡುವುದೆಂಬ ನಿರೀಕ್ಷೆ ಆತನಿಗಿತ್ತೋ ಏನೋ? ಕೌರವ ಮತ್ತು ಪಾಂಡವರೊಳಗಿನ ದೀರ್ಘಾವಧಿಯ ಆಂತರಿಕ ಕಲಹದ ಅವಧಿಯಲ್ಲಿ ಕೃಷ್ಣ ದ್ರಾವಿಡ ಶಕ್ತಿಯ ಪ್ರಭಾವವಲಯವೊಂದನ್ನು ಸೃಷ್ಟಿಸಿದ್ದ. ಅನಾರ್ಯರಿಗೆ ಕ್ಷತ್ರಿಯ ಅಂತಸ್ತು ನಿರಾಕರಿಸಲ್ಪಟ್ಟಿರುವ ಕಾಲವದು.

ಅಂತಹ ಕಾಲದಲ್ಲಿಯೂ ಕೌರವ-ಪಾಂಡವರ ಕಲಹದಿಂದಾಗಿ ಭಾರತದ ಎಲ್ಲೆಡೆ ಅನೇಕ ಮಂದಿ ದ್ರಾವಿಡರು ಕ್ಷತ್ರಿಯ ಪಟ್ಟಕ್ಕೇರಿದ್ದರು. ಮಹಾಭಾರತದಲ್ಲಿ ನಮಗೆ ಇಂತಹ ಅನೇಕ ನಿದರ್ಶನಗಳು ಸಿಗುತ್ತವೆ. ಆರ್ಯಕ್ಷತ್ರಿಯರು ಮತ್ತು ದ್ರಾವಿಡ ರಾಜ ವಂಶಗಳ ನಡುವೆ ವೈವಾಹಿಕ ಸಂಬಂಧಗಳಿಗೆ ಕೃಷ್ಣ ಚಾಲನೆ ಕೊಟ್ಟಿದ್ದ.

ಮಹಾಭಾರತ ಯುದ್ಧದಲ್ಲಿ ದ್ರಾವಿಡ ರಾಜರ ಸಹಭಾಗಿತ್ವವಾಗದಂತೆಯೂ ಕೃಷ್ಣ ನೋಡಿಕೊಂಡಿದ್ದ. ಗೋಪಾಲಕರ ರಾಜನಾದ ಅಣ್ಣ ಬಲರಾಮ ಯಾದವ ಸೇನೆಯನ್ನು ಕುರುಕ್ಷೇತ್ರಕ್ಕೆ ಕರೆದುಕೊಂಡು ಬಾರದಂತೆ ಕೃಷ್ಣ ಹೂಡಿದ ತಂತ್ರದ ಪ್ರಸ್ತಾಪ ಮಹಾಭಾರತ ಕಾವ್ಯದಲ್ಲಿದೆ.

ಕೌರವರು-ಪಾಂಡವರ ನಡುವಿನ ಪ್ರತಿಷ್ಠೆಯ ಮಹಾಸಮರದಲ್ಲಿ ತಟಸ್ಥರಾಗಿ ಉಳಿದವರೆಲ್ಲರೂ ದ್ರಾವಿಡ ರಾಜರು. ಹೀಗೆ ದ್ರಾವಿಡ ರಾಜರನ್ನು ತಟಸ್ಥರಾಗಿ ಉಳಿಸಿ ಕುರುಕ್ಷೇತ್ರವನ್ನು ಆರ್ಯ-ಕ್ಷತ್ರಿಯರ ರುದ್ರಭೂಮಿಯಾಗಿ ಮಾಡಿದ್ದ. ಆ ಕಾಲದಲ್ಲಿ ಆರ್ಯ ಪ್ರಭುತ್ವ ಸೃಷ್ಟಿಸಿದ್ದ ವರ್ಣಾಶ್ರಮ ಧರ್ಮವನ್ನು ಶಿಥಿಲಗೊಳಿಸಿ ವರ್ಣಸಂಕರಕ್ಕೆ ದಾರಿ ಮಾಡಿಕೊಡುವುದು ಕೃಷ್ಣನ ಪರಮೋದ್ದೇಶವಾಗಿತ್ತೆನ್ನಬಹುದು. 
ಈ ದೃಷ್ಟಿಯಿಂದ ಕೃಷ್ಣ ಒಬ್ಬ ಕ್ರಾಂತಿಕಾರಿ ಸಮಾಜ ಸುಧಾರಕನಂತೆ ಕಾಣುತ್ತಾನೆ. ಈ ವಿಚಾರಗಳ ಬೆಳಕಲ್ಲಿ ಕೃಷ್ಣನನ್ನು ನೋಡಿದರೆ ಆತ ಬೋಧಿಸಿದ ಭಗವದ್ಗೀತೆಯ ಶ್ಲೋಕಗಳು ಬೇರೆಯೇ ಅರ್ಥಗಳನ್ನು ಹೊರಡಿಸುತ್ತವೆ.
ಭಗವದ್ಗೀತೆ ಅಭಿಯಾನಕ್ಕೆ ಹೊರಟಿರುವ ಸೋಂದಾ ಸ್ವರ್ಣವಲ್ಲಿ ಮಠದ ಸ್ವಾಮಿಗಳು ಖಂಡಿತ ಭಗವದ್ಗೀತೆಯ ಶ್ಲೋಕಗಳನ್ನು ಈ ರೀತಿ ವೈಚಾರಿಕ ಹಿನ್ನೆಲೆಯಲ್ಲಿ ವ್ಯಾಖ್ಯಾನ ಮಾಡುವ ಸಾಹಸ ಮಾಡಲಾರರು. ವರ್ಣಾಶ್ರಮ ವ್ಯವಸ್ಥೆಯನ್ನು ಪ್ರತಿಪಾದಿಸುವ ಧಾರ್ಮಿಕ ನಾಯಕರಿಂದ ಇದನ್ನು ನಿರೀಕ್ಷಿಸಲೂ ಸಾಧ್ಯ ಇಲ್ಲ.

ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡಿಸುವ ಮೂಲಕ ಹಿಂದೂ ಧರ್ಮದ ಅಂಧಾಭಿಮಾನಿಗಳನ್ನು ಬೆಳೆಸುವುದಷ್ಟೇ ಅವರ ಉದ್ದೇಶವಾಗಿರಬಹುದು.
ಕುರುಕ್ಷೇತ್ರದಲ್ಲಿ ಅರ್ಜುನ `ಯುದ್ಧ ಮಾಡಲಾರೆ~ ಎಂದಾಗ `ಯುದ್ಧವೇ ನಿನ್ನ ಕರ್ತವ್ಯ, ಅದರಿಂದ ವಿಮುಖನಾಗದಿರು~ ಎಂದು ಅವನನ್ನು ಹುರಿದುಂಬಿಸಿ ಭಗವದ್ಗೀತೆಯನ್ನು ಬೋಧಿಸಿದ್ದ ಕೃಷ್ಣ ಕೊನೆಗೆ `ನಾನು ಹೇಳಿದ್ದನ್ನು ವಿಮರ್ಶಿಸಿ ನೋಡು, ಬಳಿಕ ನಿನ್ನ ಇಷ್ಟವಿದ್ದಂತೆ ಮಾಡು~ (ವಿಮೃಶ್ಯೈತದಶೇಷೇಣ, ಯಥೇಚ್ಛಸಿ ತಥಾ ಕುರು) ಎಂದು ಹೇಳಿದ್ದ.

ಕನಿಷ್ಠ, ಭಗವದ್ಗೀತೆಯಲ್ಲಿನ ಈ ಸಾಲುಗಳನ್ನಾದರೂ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಓದಿದ್ದರೆ ಭಗವದ್ಗೀತೆ ಅಭಿಯಾನದ ಹೆಸರಲ್ಲಿ ತಮ್ಮ ಪರಿವಾರದ ಅಜೆಂಡಾವನ್ನು ಅಮಾಯಕ ವಿದ್ಯಾರ್ಥಿಗಳ ಮೇಲೆ ಹೇರಲು ಹೋಗುತ್ತಿರಲಿಲ್ಲ. 

Monday, June 27, 2011

ನುಂಗಲಾರದಷ್ಟನ್ನು ಬಾಯಲ್ಲಿ ಹಾಕಿಕೊಂಡರೆ ಅಣ್ಣಾ?

ಅಣ್ಣಾ ಹಜಾರೆ ಅವರು ನುಂಗಲಾರದಷ್ಟನ್ನು ಬಾಯಲ್ಲಿ ಹಾಕಿಕೊಂಡುಬಿಟ್ಟಿದ್ದಾರೆ.ಉಗಿಯುವಂತಿಲ್ಲ, ನುಂಗುವಂತಿಲ್ಲ. ಈ ಸಂಕಟದಿಂದ ಪಾರಾಗಬೇಕಾದರೆ ಅವರು ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ.
ನಾಗರಿಕ ಸಮಿತಿ ರಚಿಸಿರುವ ಜನಲೋಕಪಾಲ ಮಸೂದೆಯಲ್ಲಿನ ಎಲ್ಲ ಅಂಶಗಳನ್ನು  ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.

ಆದ್ದರಿಂದ ನುಡಿದಂತೆಯೇ ನಡೆಯಬೇಕೆಂದು ಹೊರಟರೆ ಆಗಸ್ಟ್ ಹದಿನಾರರಿಂದ ಅಣ್ಣಾ ಹಜಾರೆ ಅವರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದು ಅನಿವಾರ‌್ಯವಾಗಬಹುದು.
ಉಳಿದಿರುವ ಇನ್ನೊಂದು ಆಯ್ಕೆ ಉಪವಾಸ ಸತ್ಯಾಗ್ರಹ ಕೈಬಿಟ್ಟು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ಜನಜಾಗೃತಿಗೆ ಹೊರಡುತ್ತೇನೆ ಎಂದು ಘೋಷಿಸಿ ಯುದ್ದಭೂಮಿಯಿಂದ ಗೌರವಪೂರ್ವಕವಾಗಿ ನಿರ್ಗಮಿಸುವುದು.
ಸರ್ಕಾರದ ಮುಂದೆ ಕೂಡಾ ಇರುವುದು ಎರಡೇ ಆಯ್ಕೆ. ಒಂದೋ ನಾಗರಿಕ ಸಮಿತಿ ಹೇಳಿರುವುದನ್ನೆಲ್ಲ ಬಾಯಿಮುಚ್ಚಿಕೊಂಡು ಒಪ್ಪಿಕೊಳ್ಳುವುದು, ಇಲ್ಲವೇ ಮಾತುಕತೆಯ ಮಾರ್ಗವನ್ನು ಕೈಬಿಟ್ಟು ನೇರವಾಗಿ ಸಂಘರ್ಷಕ್ಕಿಳಿಯುವುದು. ಅಣ್ಣಾ ಹಜಾರೆ ಅವರಿಗೆ ಇರುವಷ್ಟು ಗೊಂದಲ ಸರ್ಕಾರಕ್ಕೆ ಇದ್ದ ಹಾಗಿಲ್ಲ.
ಅದು ಎರಡನೇ ಆಯ್ಕೆಗೆ  ಸಿದ್ದತೆ ನಡೆಸಿದಂತಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಕೂಗುಮಾರಿಯಾಗಿರುವ ದಿಗ್ವಿಜಯ್‌ಸಿಂಗ್ ಸಹೋದ್ಯೋಗಿಗಳ ಜತೆಗೂಡಿ ಆಗಲೇ ಈ ಕೆಲಸ ಪ್ರಾರಂಭಿಸಿದ್ದಾರೆ.
ಅಣ್ಣಾ ಹಜಾರೆ ಅವರ ಹಠಮಾರಿತನ ಮತ್ತು ಅವರ ಸಂಗಡಿಗರ ಬಾಯಿಬಡುಕತನ ಅತಿಯಾಯಿತು ಎನ್ನುವ ಜನರ ಗೊಣಗಾಟವನ್ನು ಕೂಡಾ ಕಾಂಗ್ರೆಸ್ ನಾಯಕರು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಭ್ರಷ್ಟ ವ್ಯವಸ್ಥೆಯಿಂದ ರೋಸಿಹೋಗಿರುವ ಅಸಹಾಯಕ ಜನರನ್ನು ಪಾರುಮಾಡಲು ಅವತಾರ ಎತ್ತಿ ಬಂದವರಂತೆ ಕಾಣಿಸಿಕೊಂಡ ಅಣ್ಣಾ ಹಜಾರೆ ಅವರು ಬಹುಬೇಗ ನೇಪಥ್ಯಕ್ಕೆ ಸರಿದು ಹೋಗುತ್ತಿದ್ದಾರೆಯೇ? ಇಂತಹ ಅನುಮಾನ ಅವರ ಅಭಿಮಾನಿಗಳನ್ನೂ ಕಾಡತೊಡಗಿದೆ.
ಒಂದೊಮ್ಮೆ ಅಣ್ಣಾ ಹಜಾರೆ `ಉಪವಾಸ ಸತ್ಯಾಗ್ರಹ ಪ್ರಾರಂಭಿಸಿಯೇ ತೀರುತ್ತೇನೆ~ ಎಂದು ಹೊರಟರೆ ಏನಾಗಬಹುದು? ಮೊದಲು ಕೇಂದ್ರ ಸರ್ಕಾರ ಅದನ್ನು ತಡೆಯಲು ಹತ್ತಾರು ಅಡ್ಡಿ-ಆತಂಕಗಳನ್ನು ಒಡ್ಡಬಹುದು (ಅನುಮತಿ ನಿರಾಕರಣೆ, ಇನ್ನಷ್ಟು ಆರೋಪಗಳ ಸುರಿಮಳೆ..ಇತ್ಯಾದಿ).
ಅವೆಲ್ಲವನ್ನೂ ಮೀರಿ ಉಪವಾಸ ಪ್ರಾರಂಭಿಸಿದರೆ ಒಂದೆರಡು ದಿನಗಳಲ್ಲಿಯೇ ಸರ್ಕಾರ ಅವರನ್ನು ಬಲಾತ್ಕಾರವಾಗಿ ಎಬ್ಬಿಸಿ ಆಸ್ಪತ್ರೆಗೆ ಸೇರಿಸಬಹುದು.

ಕಳೆದ ಬಾರಿಯ ಉಪವಾಸದ ನಂತರ ಅವರ ತಪಾಸಣೆ ನಡೆಸಿದ್ದ ವೈದ್ಯರು  ಮತ್ತೆ ಉಪವಾಸ ನಡೆಸುವುದು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ಹೇಳಿರುವುದನ್ನೇ ಸರ್ಕಾರ ತನ್ನ ಸಮರ್ಥನೆಗೆ ಬಳಸಬಹುದು.

ಈ ರೀತಿ ಅಣ್ಣಾ ಹಜಾರೆ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದರೆ ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವವರು ಯಾರು? ಶಾಂತಿಭೂಷಣ್? ಪ್ರಶಾಂತ್ ಭೂಷಣ್? ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ? ಕಿರಣ್ ಬೇಡಿ? ಸ್ವಾಮಿ ಅಗ್ನಿವೇಶ್ ಅವರು ಈಗಾಗಲೇ ಮೆತ್ತಗೆ ದೂರ ಸರಿಯುತ್ತಿರುವುದರಿಂದ ಅವರ ಹೆಸರೂ ಹೇಳುವಂತಿಲ್ಲ.
ಬೇರೆ ಯಾರು? ಈಜಿಪ್ಟ್, ಟ್ಯುನೇಷಿಯಾದಂತೆ ಜನ ದಂಗೆ ಎದ್ದು ಬೀದಿಬೀದಿಗಳಲ್ಲಿ ಸೇರಲಿದ್ದಾರೆ ಎಂದೇನಾದರೂ ಅಣ್ಣಾ ಹಜಾರೆ ಮತ್ತು ಸಂಗಡಿಗರು ತಿಳಿದುಕೊಂಡಿದ್ದಾರೆಯೇ?
ಬದ್ಧತೆ ಮತ್ತು ಪ್ರಾಮಾಣಿಕತೆ ಎರಡರ ದೃಷ್ಟಿಯಿಂದಲೂ ಅಣ್ಣಾ ಹಜಾರೆ ಅವರನ್ನು ಬಾಬಾ ರಾಮ್‌ದೇವ್ ಜತೆ  ಹೋಲಿಸುವುದು ಸಾಧ್ಯ ಇಲ್ಲ ಎನ್ನುವುದು ನಿಜ.

ಆದರೆ ಸಂಘಟನೆಯ ದೃಷ್ಟಿಯಿಂದ ಅಣ್ಣಾ ಹಜಾರೆ ಅವರಿಗಿಂತ ಬಾಬಾ ರಾಮ್‌ದೇವ್ ಎಷ್ಟೋ ಪಾಲು ಹೆಚ್ಚು ಬಲಶಾಲಿಯಾಗಿದ್ದರು.  ದೇಶದಾದ್ಯಂತ ಪತಂಜಲಿ ಯೋಗಪೀಠದ ನೂರಾರು ಶಾಖೆಗಳಿವೆ.
ಯೋಗ ಶಿಬಿರಗಳು ಮತ್ತು ಟಿವಿ ಚಾನೆಲ್ ಮೂಲಕ ಕೋಟ್ಯಂತರ ಜನರ ಜತೆ ಅವರು ಸಂಪರ್ಕ ಸಾಧಿಸಿದ್ದಾರೆ. ಲಕ್ಷಾಂತರ ಮಂದಿ ಅವರ ಯೋಗ ಚಿಕಿತ್ಸೆಯ ಫಲಾನುಭವಿಗಳೂ ಆಗಿದ್ದಾರೆ.
ಇಷ್ಟಾಗಿಯೂ ಸರ್ಕಾರ ಅಮಾನುಷ ರೀತಿಯಲ್ಲಿ ಅವರ ಮೇಲೆ ಎರಗಿಬಿದ್ದಾಗ ಟಿವಿ ಕ್ಯಾಮೆರಾಗಳ ಮುಂದೆ ಒಂದಷ್ಟು ಮಹಿಳೆಯರು ಕಣ್ಣೀರು ಸುರಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾವ ಅನಾಹುತವೂ ಆಗಲಿಲ್ಲ. ನಾಳೆ ಅಣ್ಣಾ ಹಜಾರೆ ಅವರನ್ನು ಬಂಧಿಸಿದರೆ ದೇಶದ ಜನ ಸಿಡಿದೆದ್ದು ಬೀದಿಗೆ ಇಳಿಯಬಹುದೇ?
ಅಣ್ಣಾ ಹಜಾರೆ ಅವರು ಆಗಲೇ ಸರ್ಕಾರ ಒಡ್ಡಿರುವ ಬೋನಿನಲ್ಲಿ ಬಿದ್ದಿದ್ದಾರೆ. ತಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖವಾಡ ಎಂಬ ಕಾಂಗ್ರೆಸ್ ನಾಯಕರ ಅಪಪ್ರಚಾರದಿಂದ ಸಿಟ್ಟಾದ ಅಣ್ಣಾ ಹಜಾರೆ ಆ ಎರಡೂ ಸಂಘಟನೆಗಳ ಜತೆ ತನಗೆ ಸಂಬಂಧ ಇರುವುದನ್ನು ನಿರಾಕರಿಸಿರುವುದು ಮಾತ್ರವಲ್ಲ, ಆ ಬಗ್ಗೆ ಪುರಾವೆಗಳಿದ್ದರೆ ಒದಗಿಸಿ ಎಂದು ಸವಾಲು ಹಾಕಿದ್ದಾರೆ.

ಅಂದರೆ ಬಿಜೆಪಿ ಜತೆ ಅವರು ಮುಂದೆಯೂ ಸೇರಿಕೊಳ್ಳುವುದಿಲ್ಲ ಎಂದೇ ಅರ್ಥ. ಬೆನ್ನ ಹಿಂದೆ ಮೀಸಲಾತಿ ವಿರೋಧಿ ಫಲಕಗಳನ್ನು ಬಚ್ಚಿಟ್ಟುಕೊಂಡು ಛದ್ಮವೇಷದಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು, ಕೂಡಾ ಅಣ್ಣಾ ಹಜಾರೆ ಅವರ ಈ ಹೇಳಿಕೆ ನಂತರ ದೂರ ಸರಿಯತೊಡಗಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧವೇ ಅವರು ಹೋರಾಟ ನಡೆಸುತ್ತಿದ್ದಾರೆ, ವಿರೋಧಪಕ್ಷವಾದ ಬಿಜೆಪಿ ಜತೆ ಸೇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಿಎಸ್‌ಪಿ, ಡಿಎಂಕೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಎನ್‌ಸಿಪಿ, ಶಿವಸೇನೆ ಮೊದಲಾದ ಪ್ರಾದೇಶಿಕ ಪಕ್ಷಗಳ ನಾಯಕರು ಒಂದಲ್ಲ ಒಂದು ಭ್ರಷ್ಟಾಚಾರದ ಹಗರಣಗಳಲ್ಲಿ ಆರೋಪಿಯಾಗಿದ್ದಾರೆ.

ಉಳಿದವು ಎಡಪಕ್ಷಗಳು. ಎರಡು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ದಣಿವಾರಿಸಿಕೊಳ್ಳುತ್ತಿರುವ ಆ ಪಕ್ಷಗಳು ಅಣ್ಣಾ ಹಜಾರೆ ಅವರ ಬೆಂಬಲಕ್ಕೆ ನಿಲ್ಲುವುದು ಅಷ್ಟರಲ್ಲೇ ಇದೆ. ಬೇರೆ ಯಾವ ಶಕ್ತಿಗಳನ್ನು ನಂಬಿ ಅಣ್ಣಾ ಹಜಾರೆ ಮತ್ತು ಸಂಗಡಿಗರು ಚುನಾಯಿತ ಸರ್ಕಾರವೊಂದಕ್ಕೆ ಸವಾಲು ಹಾಕುತ್ತಿದ್ದಾರೆ? ಜನ ಎಂಬ ಅಮೂರ್ತ ಶಕ್ತಿಯನ್ನೇ?
ಸಮಸ್ಯೆ ಅಣ್ಣಾ ಹಜಾರೆ ಅವರ ಚಳವಳಿಯ ಮೂಲದಲ್ಲಿಯೇ ಇದೆ. `ಪ್ರಜಾಪ್ರಭುತ್ವ ಎಂದರೆ ಜನರಿಂದ ಆಯ್ಕೆಯಾದ ನಂತರ ಮುಂದಿನ ಚುನಾವಣೆಯ ವರೆಗೆ ನಿರಂಕುಶವಾಗಿ ಆಡಳಿತ ನಡೆಸಿಕೊಂಡು ಹೋಗುವುದಲ್ಲ, ಚುನಾಯಿತ ಸರ್ಕಾರ ಹಾದಿ ತಪ್ಪಿದಾಗ ಪ್ರಶ್ನಿಸುವ, ಎಚ್ಚರಿಸುವ, ಮಣಿಸುವ ಮತ್ತು ಸರಿಯಾದ ದಾರಿ ತೋರಿಸುವ ಅಧಿಕಾರ ನಾಗರಿಕರಿಗೆ ಇದೆ. ಅದನ್ನೇ ನಾವು ಮಾಡುತ್ತಿದ್ದೇವೆ~ ಎನ್ನುವ ನಾಗರಿಕ  ಸಮಿತಿಯ ವಾದ ಸರಿಯಾಗಿಯೇ ಇದೆ.

ಇಂತಹ ನಾಗರಿಕ ಹೋರಾಟಗಳು ರಾಜಕೀಯಾತೀತವಾಗಿ ಸಾಮಾಜಿಕ ಚೌಕಟ್ಟಿನಲ್ಲಿದ್ದಾಗ ಅದಕ್ಕೆ ಮಿತಿಗಳು ಇರುತ್ತವೆ.ತಮ್ಮ ಸಾಮರ್ಥ್ಯದ ಅರಿವು ಹೋರಾಟದಲ್ಲಿ ತೊಡಗಿರುವವರಿಗೂ ಗೊತ್ತಿರುತ್ತದೆ.
ಆದ್ದರಿಂದಲೇ ಅವು ನೇರವಾಗಿ ಸರ್ಕಾರದ ಜತೆ ಸಂಘರ್ಷಕ್ಕಿಳಿಯದೆ ಒತ್ತಡ ಹೇರುವ ಮಟ್ಟಕ್ಕೆ ಮಾತ್ರ ತಮ್ಮ ಹೋರಾಟವನ್ನು ಸೀಮಿತಗೊಳಿಸುತ್ತವೆ. ಮೇಧಾ ಪಾಟ್ಕರ್ ನೇತೃತ್ವದ `ನರ್ಮದಾ ಬಚಾವೋ ಆಂದೋಲನ~ ಇದಕ್ಕೆ ಉತ್ತಮ ಉದಾಹರಣೆ.
`ನಮ್ಮ ಬೇಡಿಕೆಯನ್ನು ತಿಂಗಳೊಳಗೆ ಈಡೇರಿಸದಿದ್ದರೆ ಜಂತರ್‌ಮಂತರ್‌ನಲ್ಲಿ ಆಮರಣ ಉಪವಾಸ ಮಾಡಿ ಪ್ರಾಣಬಿಡುತ್ತೇನೆ~ಎಂದು ಮೇಧಾ ಪಾಟ್ಕರ್ ಎಂದೂ ಹೇಳಿರಲಿಲ್ಲ. ಅಂದ ಮಾತ್ರಕ್ಕೆ ಅವರ ಸಾಧನೆ ಕಡೆಗಣಿಸುವಂತಹದ್ದಲ್ಲ. ಅವಸರ ಮಾಡಿದ್ದರೆ ಚಳವಳಿಯ ಮೂಲಕ ಈಗಿನಷ್ಟನ್ನೂ ಸಾಧಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲವೇನೋ?
ಪ್ರತಿದಿನ ದೇಶಾದ್ಯಂತ  ಪ್ರತಿಭಟನೆ, ಚಳವಳಿ, ಸತ್ಯಾಗ್ರಹ, ಧರಣಿ, ಜಾಥಾಗಳು ನಡೆಯುತ್ತಲೇ ಇರುತ್ತವೆ. ಪ್ರಜಾಪ್ರಭುತ್ವದ ಜೀವಂತಿಕೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಇವುಗಳು ನೆರವಾಗುತ್ತವೆ.

ಇಂತಹ ಸಾಮಾಜಿಕ ಹೋರಾಟಗಳು ತಮ್ಮ ಘೋಷಿತ ಉದ್ದೇಶ ಸಾಧನೆಯ ಜತೆಗೆ  ರಾಜಕೀಯ ಬದಲಾವಣೆಗೂ ಕೊಡುಗೆಗಳನ್ನು ನೀಡುತ್ತಾ ಹೋಗುತ್ತವೆ. ಅದು ನಿಧಾನವಾಗಿ ನಡೆಯುವ ಪ್ರಕ್ರಿಯೆ, ಅವಸರದ್ದಲ್ಲ.
ಸ್ವತಂತ್ರ ಭಾರತದಲ್ಲಿ ಸರ್ಕಾರವೊಂದು ಪ್ರಜೆಗಳ ಕೈಗೆ ಕೊಟ್ಟಿರುವ ದೊಡ್ಡ ಅಸ್ತ್ರ ಮಾಹಿತಿ ಹಕ್ಕು ಕಾನೂನು. ಪರಿಣಾಮದ ದೃಷ್ಟಿಯಿಂದ ಇದು ಲೋಕಪಾಲರ ನೇಮಕಕ್ಕಿಂತಲೂ ದೊಡ್ಡ ಅಸ್ತ್ರ. ಈ ಕಾನೂನು ಅನುಷ್ಠಾನದ ಹಿಂದೆ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲಾ ಮೊದಲಾದವರು ನಡೆಸಿರುವ ಹೋರಾಟ ಇದೆ ಎನ್ನುವುದು ನಿಜ.
ಆದರೆ ಮಾಹಿತಿ ಪಡೆಯುವ ಹಕ್ಕಿಗಾಗಿ ಹೋರಾಟ ಮೊದಲು ಪ್ರಾರಂಭವಾಗಿದ್ದು ತೊಂಬತ್ತರ ದಶಕದಲ್ಲಿ. ರಾಜಸ್ತಾನದ ರಾಜ್‌ಸಾಮಾಂಡ್ ಜಿಲ್ಲೆಯಲ್ಲಿ ಕಾರ್ಮಿಕರು ಮತ್ತು ರೈತರು ಕೂಡಿ 1990ರಲ್ಲಿ `ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ (ಎಂಕೆಎಸ್‌ಎಸ್) ಕಟ್ಟಿ ಮೊದಲ ಬಾರಿ ಮಾಹಿತಿ ಹಕ್ಕಿಗಾಗಿ ಒತ್ತಾಯಿಸಿದ್ದರು.
1996ರಲ್ಲಿ ರಾಜಸ್ತಾನದ ಬೇವಾರ್ ಪಟ್ಟಣದಲ್ಲಿ `ಮಾಹಿತಿ ಹಕ್ಕು, ಬದುಕುವ ಹಕ್ಕು~ ಎಂಬ ಘೋಷಣೆಯೊಂದಿಗೆ ಜನ 40 ದಿನಗಳ ಧರಣಿ ಸತ್ಯಾಗ್ರಹ ನಡೆಸಿದ್ದರು. ಅಂತಿಮವಾಗಿ ಆ ಕಾನೂನು ಅನುಷ್ಠಾನಕ್ಕೆ ಬಂದದ್ದು 2005ರಲ್ಲಿ.
ಆದರೆ ಲೋಕಾಯುಕ್ತ-ಲೋಕಪಾಲರ ನೇಮಕಕ್ಕಾಗಿ ಇತ್ತೀಚಿನ ವರೆಗೆ ಯಾವುದೇ ರಾಜ್ಯ ಇಲ್ಲವೇ ರಾಷ್ಟ್ರಮಟ್ಟದಲ್ಲಿ ಸಣ್ಣ ಪ್ರಮಾಣದ ಸತ್ಯಾಗ್ರಹ ಚಳವಳಿಗಳೂ  ನಡೆದಿಲ್ಲ. ಈ ಕಾರಣದಿಂದಾಗಿಯೇ ಅಣ್ಣಾ ಹಜಾರೆ ಮತ್ತು ಬೆಂಬಲಿಗರು  ಅವಸರದ ಕ್ರಾಂತಿಗೆ ಹೊರಟಿರುವಂತೆ ಕಾಣುತ್ತಿದ್ದಾರೆ.
ಆಗಲೇ ಕೆಲವರು ಈ ಹೋರಾಟವನ್ನು ಎಪ್ಪತ್ತರ ದಶಕದಲ್ಲಿ ನಡೆದ ಜೆಪಿ ಚಳವಳಿಗೆ ಹೋಲಿಸತೊಡಗಿದ್ದಾರೆ. ಕೆಲವರು ಇನ್ನಷ್ಟು ಹಿಂದೆ ಹೋಗಿ ಸ್ವಾತಂತ್ರ್ಯ ಚಳವಳಿಗೆ ಹೋಲಿಸುತ್ತಿದ್ದಾರೆ. ಇವೆರಡೂ ಶುದ್ಧ ರಾಜಕೀಯ ಚಳವಳಿಗಳು, ಅದರಲ್ಲಿ ಯಾವ ಮುಚ್ಚುಮರೆಯೂ ಇರಲಿಲ್ಲ.
ಗಾಂಧೀಜಿಯಾಗಲಿ,  ಜೆಪಿಯಾಗಲಿ ತಮ್ಮನ್ನು ಸಮಾಜಸೇವಕರೆಂದು ಕರೆದುಕೊಂಡಿರಲಿಲ್ಲ. ರಾಜಕಾರಣಿಗಳು ತಾವು ಕುಳಿತ ವೇದಿಕೆ ಹತ್ತಬಾರದೆಂದು ಅವರ‌್ಯಾರೂ ಹೇಳಿರಲಿಲ್ಲ.
ಅವರು  ಅಪ್ಪಟ ರಾಜಕಾರಣಿಗಳಾಗಿದ್ದರು, ರಾಜಕೀಯದಲ್ಲಿಯೂ ಉಳಿದುಕೊಂಡಿರುವ ಒಂದಷ್ಟು ಸಜ್ಜನರನ್ನು ಸೇರಿಸಿಕೊಂಡು ಚಳವಳಿಯನ್ನು ಮುನ್ನಡೆಸಿದ್ದರು. ಸರ್ವಾಧಿಕಾರಿ ಇಂದಿರಾಗಾಂಧಿಯವರ ವಿರುದ್ಧದ ಹೋರಾಟದ ಬಗ್ಗೆ ಮಾತ್ರವಲ್ಲ, ಆಕೆಯ ಪತನದ ನಂತರದ ಪರ್ಯಾಯದ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇತ್ತು.
ದುರದೃಷ್ಟವಶಾತ್ ಅಣ್ಣಾ ಹಜಾರೆ ಅವರಿಗೆ ಅಂತಹ ಆಯ್ಕೆಗಳಿಲ್ಲ ಎನ್ನುವುದು ನಿಜ. ಸರ್ಕಾರ ಇಲ್ಲವೇ ಆಡಳಿತಾರೂಢ ಪಕ್ಷ ಭ್ರಷ್ಟಗೊಂಡಿರುವುದು ಈಗಿನ ಸಮಸ್ಯೆ ಅಲ್ಲ. ದೇಶದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸ ನೋಡಿದರೆ ಇದೊಂದು ಸಾಮಾನ್ಯ ಬೆಳವಣಿಗೆ ಎಂದು ಗೊತ್ತಾಗುತ್ತದೆ.
ಅಧಿಕಾರಕ್ಕೇರಿದ ರಾಜಕೀಯ ಪಕ್ಷ ಭ್ರಷ್ಟಗೊಳ್ಳುತ್ತಾ ಹೋಗುವುದು, ವಿರೋಧಪಕ್ಷಗಳು ಸರ್ಕಾರದ ವಿರುದ್ದ ಹೋರಾಟಕ್ಕೆ ಇಳಿಯುವುದು, ಕ್ರಮೇಣ ಮತದಾರರ ಕಣ್ಣಿಗೆ ವಿರೋಧ ಪಕ್ಷಗಳ ನಾಯಕರೇ ಸಂಭಾವಿತರಂತೆ ಕಂಡು ಅವರನ್ನು ಮತ್ತೆ ಆಯ್ಕೆ ಮಾಡುವುದು.. ಇವೆಲ್ಲ ಸಾಮಾನ್ಯ.

ಆದರೆ ನೈತಿಕವಾಗಿ ದಿವಾಳಿಯಾಗಿರುವ ನಮ್ಮ ವಿರೋಧ ಪಕ್ಷಗಳು ಭ್ರಷ್ಟ ಸರ್ಕಾರವನ್ನು ಪ್ರಶ್ನಿಸಲಾಗದಷ್ಟು ಅಸಹಾಯಕವಾಗಿರುವುದು ಕೂಡಾ ಇಂದಿನ ಬಿಕ್ಕಟ್ಟಿಗೆ ಕಾರಣ.
ಈ ಹತಾಶೆ ಜನಸಮುದಾಯದಲ್ಲಿಯೂ ವ್ಯಕ್ತವಾಗುತ್ತಿದೆ. ಇದಕ್ಕೆ ಏನು ಪರಿಹಾರ? ರಾಜಕಾರಣಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸುವುದೇ?
 ಸಮಸ್ಯೆ ಏನೆಂದರೆ ತಮ್ಮ ಹೋರಾಟ ಸಾಮಾಜಿಕವಾದುದೇ, ರಾಜಕೀಯವಾದುದೇ ಎಂಬ ಬಗ್ಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರಲ್ಲಿಯೇ ಸ್ಪಷ್ಟತೆ ಇಲ್ಲ.

ತಮ್ಮದು ರಾಜಕೀಯಾತೀತ ಚಳವಳಿ ಎಂದು ಘೋಷಿಸಿಕೊಂಡರೂ ಅವರ ನಡೆ-ನುಡಿಗಳು ರಾಜಕೀಯ ಹೋರಾಟದ ಶೈಲಿಯಲ್ಲಿಯೇ ಇವೆ. ಆಡಳಿತಾರೂಢ ಸರ್ಕಾರವನ್ನು ಮಣಿಸಲು ಹೊರಟವರು ತಮ್ಮ ಚಳವಳಿಯನ್ನು `ರಾಜಕೀಯದಿಂದ ದೂರ ಇದ್ದು ಮಾಡುತ್ತೇವೆ~ ಎಂದು ಹೇಳಲಾಗುವುದಿಲ್ಲ.

ಒಂದು ಸರ್ಕಾರವನ್ನೇ ಉರುಳಿಸುತ್ತೇನೆಂದು ಹೊರಟಾಗ ಅದಕ್ಕೊಂದು ಪರ್ಯಾಯ ಸಿದ್ಧ ಇರಬೇಕಾಗುತ್ತದೆ. ಇಲ್ಲದಿದ್ದರೆ ಅರಾಜಕತೆಯನ್ನು ಹುಟ್ಟುಹಾಕಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ್ಯಾಯ ಕೂಡ ರಾಜಕೀಯ ಕ್ಷೇತ್ರದೊಳಗಡೆಯಿಂದಲೇ ಸೃಷ್ಟಿಯಾಗಬೇಕಾಗುತ್ತದೆ.
ಆದರೆ ನಾಗರಿಕ ಸಮಿತಿ ಸದಸ್ಯರು ಒಂದು ಭ್ರಷ್ಟ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ರಾಜಕಾರಣ, ರಾಜಕಾರಣಿ ಮತ್ತು ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆಯೇ  ವಿಶ್ವಾಸ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಹಾಗಿದ್ದರೆ ಪರಿಹಾರ ಏನು? ದೇಶದ ಆಡಳಿತವನ್ನೇ ಲೋಕಪಾಲರಿಗೆ ಒಪ್ಪಿಸುವುದೇ?

Monday, June 20, 2011

ಜನಲೋಕಪಾಲ ಸರ್ವರೋಗಕ್ಕೆ ಪರಿಹಾರವೇ?

ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವಿಫಲಗೊಂಡಿದೆ ಎಂದು ಇಲ್ಲಿಯವರೆಗೆ `ಕಾಡಿನವರು~ ಮಾತ್ರ ಹೇಳುತ್ತಿದ್ದರು, ಈಗ `ನಾಡಿನವರು~ ಕೂಡಾ ಹೇಳತೊಡಗಿದ್ದಾರೆ.
ಹದಿನಾಲ್ಕು ರಾಜ್ಯಗಳಲ್ಲಿ ಹಾದುಹೋಗಿರುವ ಮತ್ತು ದೇಶದ ಶೇಕಡಾ 40ರಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ `ರೆಡ್ ಕಾರಿಡಾರ್~ನಲ್ಲಿ `ಕಾಡಿನವರ ಸರ್ಕಾರ~ ಇದೆ.
ಅಲ್ಲಿರುವ ದೇಶದ ಶೇಕಡಾ 35ರಷ್ಟು ಜನ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.
ತಲೆಮಾರುಗಳಿಂದ ಅಭಿವೃದ್ಧಿ ವಂಚಿತರಾಗಿರುವ ಈ ಶೋಷಿತ ಜನಸಮುದಾಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದರೆ ಅದು ಸಹಜ. ಆಶ್ಚರ‌್ಯವೆಂದರೆ  ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಚುನಾವಣೆಯಲ್ಲಿ ಮತಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವ ಮತ್ತು ಅವರಿಂದ ಆಯ್ಕೆಗೊಂಡಿರುವ `ನಾಡಿನವರು~ ಕೂಡಾ `ಕಾಡಿನವರ~ ಭಾಷೆಯಲ್ಲಿಯೇ ಮಾತನಾಡುತ್ತಿರುವುದು.
ಇದಕ್ಕೆ ಇತ್ತೀಚಿನ ಉದಾಹರಣೆ- ಸಂವಿಧಾನದ ಪ್ರಮುಖ ಅಂಗವಾಗಿರುವ ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದೇವರ ಮೇಲೆ ಆಣೆ ಮಾಡಲು ಹೊರಟಿರುವುದು.
ಅಲ್ಲಿಗೆ ಕಳೆದ 60 ವರ್ಷಗಳಿಂದ ನಾವು ಒಪ್ಪಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ರೋಗಗ್ರಸ್ತವಾಗಿದೆ ಎಂದು ಬಹು ಸಂಖ್ಯಾತ ಜನ ಒಪ್ಪಿಕೊಂಡಂತಾಯಿತು. ಆ ಬಗ್ಗೆ ವಿವಾದಗಳಿಲ್ಲ. ವಿವಾದ ಇರುವುದು ಇದಕ್ಕೆ ನೀಡಬೇಕಾದ ಚಿಕಿತ್ಸೆ ಬಗ್ಗೆ.
ಕಾಡಿನಲ್ಲಿರುವ ಮಾವೋವಾದಿಗಳ ಪ್ರಕಾರ ಇದು ಚಿಕಿತ್ಸೆ ಮೀರಿದ ರೋಗ. `ಈಗಿನ ವ್ಯವಸ್ಥೆಯನ್ನು ನಾಶಮಾಡಿದರೆ ಮಾತ್ರ ಹೊಸ ವ್ಯವಸ್ಥೆ ಹುಟ್ಟಲು ಸಾಧ್ಯ. ಅದನ್ನೇ ನಾವು ಬಂದೂಕಿನ ಮೂಲಕ ಮಾಡಲು ಹೊರಟಿದ್ದೇವೆ~ ಎನ್ನುತ್ತಾರೆ ಅವರು.

ಇದನ್ನು ಕಾಂಗ್ರೆಸಿಗರು, ಮಾರ್ಕ್ಸಿಸ್ಟರು, ಸೋಷಿಯಲಿಸ್ಟರು, ಉದಾರವಾದಿಗಳು, ಸಂಪ್ರದಾಯವಾದಿಗಳು ಮಾತ್ರವಲ್ಲ, ಬಹು ಸಂಖ್ಯೆಯ ಜನಸಮುದಾಯ ಕೂಡಾ ಒಪ್ಪುವುದಿಲ್ಲ. ಹಾಗಿದ್ದರೆ ಇದಕ್ಕೇನು ಚಿಕಿತ್ಸೆ? ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಜನಪ್ರಿಯ ಔಷಧಿಯ ಹೆಸರು `ಲೋಕಪಾಲ ಮಸೂದೆ~.
ಇದು ಸರ್ವರೋಗ ನಿವಾರಕ ಎಂದು ಅದರ ತಯಾರಕರು ಹೇಳಿಕೊಳ್ಳದಿದ್ದರೂ ಹಾಗೆಂದು ಅದರ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಇಂತಹ ಪ್ರಚಾರದಿಂದಾಗಿ ಜನತೆಯಲ್ಲಿನ ನಿರೀಕ್ಷೆ ಕೂಡಾ ಆಕಾಶದೆತ್ತರಕ್ಕೆ ಏರಿದೆ.
ಒಂದೊಮ್ಮೆ ನಾಗರಿಕ ಸಮಿತಿ ರಚಿಸಿರುವ ಜನಲೋಕಪಾಲ ಮಸೂದೆಯನ್ನು ಯಥಾವತ್ತಾಗಿ ಸಂಸತ್ ಅಂಗೀಕರಿಸಿ ಕಾನೂನಿನ ರೂಪ ನೀಡಿದರೆ ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ಮೂಲೋತ್ಪಾಟನೆಯಾಗುವುದೇ? ಪ್ರಜಾಪ್ರಭುತ್ವಕ್ಕೆ ತಗಲಿರುವ ರೋಗ ವಾಸಿಯಾಗುವುದೇ? ಈ ಬಗ್ಗೆ ಅನುಮಾನಿಸುವುದಕ್ಕೆ ಕಾರಣಗಳಿವೆ.
ಮೊದಲನೆಯದಾಗಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ಕೂರುತ್ತೇನೆಂದು ಹೇಳಿದ ದಿನದಿಂದ ಇಲ್ಲಿಯವರೆಗೆ ನಡೆಯುತ್ತಿರುವ ಚರ್ಚೆಯೆಲ್ಲವೂ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸುತ್ತಲೇ ಗಿರ್ಕಿ ಹೊಡೆಯುತ್ತಿದೆ. ಬಹುಮುಖ್ಯವಾದ ಎರಡು ಕ್ಷೇತ್ರಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಯಾಕೋ ಚರ್ಚೆ ನಡೆಯುತ್ತಿಲ್ಲ.

ಈ ಎರಡರಲ್ಲಿ ಮೊದಲನೆಯದು ಕಾರ್ಪೋರೇಟ್ ಕ್ಷೇತ್ರ, ಎರಡನೆಯದು ಧಾರ್ಮಿಕ ಕ್ಷೇತ್ರ. ನಮ್ಮೆಲ್ಲ ಚರ್ಚೆ ನಡೆಯುತ್ತಿರುವುದು ಲಂಚ ಸ್ವೀಕರಿಸುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಗ್ಗೆ. ಇವರಿಬ್ಬರಿಗೂ ಲಂಚ ಸ್ವೀಕರಿಸಿಯಷ್ಟೇ ಗೊತ್ತು ವಿನಾ ಲಂಚ ಕೊಟ್ಟು ಗೊತ್ತಿಲ್ಲ. ಆದರೆ  ಇವರಿಗೆ ಲಂಚ ಕೊಡುವವರು ಯಾರು ಮತ್ತು ಅವರು ಯಾಕೆ ಕೊಡುತ್ತಿದ್ದಾರೆ? ಯಾರೂ ಕೇಳುತ್ತಿಲ್ಲ.
ನೈತಿಕ ದೃಷ್ಟಿಯಿಂದ ಲಂಚ ಸ್ವೀಕರಿಸಿದ್ದಕ್ಕಿಂತ ಲಂಚ ಕೊಡುವುದು ಸ್ವಲ್ಪ ಸಣ್ಣ ಪ್ರಮಾಣದ ಅಪರಾಧವಾಗಿರಬಹುದು. ಆದರೆ ಅದರ ಪರಿಣಾಮ? ಸಚಿವರು ಮತ್ತು ಉನ್ನತಾಧಿಕಾರಿಗಳ ಮಟ್ಟದಲ್ಲಿ ಲಂಚ ನೀಡುವವನು ಹಳ್ಳಿಯ ಬಡಬೋರೇಗೌಡ ಅಲ್ಲ, ಅವನು ಖಂಡಿತವಾಗಿಯೂ ಒಬ್ಬ ಉದ್ಯಮಿಯಾಗಿರುತ್ತಾನೆ.
ಇಲ್ಲಿಯವರೆಗೆ ಬಯಲಾಗಿರುವ ಯಾವ ಹಗರಣವನ್ನು ತೆಗೆದುಕೊಂಡರೂ ಅದರಲ್ಲಿ ಉದ್ಯಮಿಗಳ ಪ್ರಮುಖ ಪಾತ್ರವನ್ನು ಕಾಣಬಹುದು. ಒಬ್ಬ ಉದ್ಯಮಿ ಹತ್ತುಕೋಟಿ ರೂಪಾಯಿ ಲಂಚ ನೀಡಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡುವಂತಹ ಅಕ್ರಮ ವ್ಯವಹಾರ ನಡೆಸಿ ಸಾವಿರಾರು ಕೋಟಿ ರೂಪಾಯಿ ಲಾಭ ಪಡೆದಿರುತ್ತಾನೆ.
ಇದಕ್ಕೆ ಉತ್ತಮ ಉದಾಹರಣೆ 2ಜಿ ತರಂಗಾಂತರ ಹಗರಣ. ಇದರಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಅತ್ಯಧಿಕವೆಂದರೆ  ಒಂದೆರಡು ಸಾವಿರಕೋಟಿ ಲಂಚ ಪಡೆದಿರಬಹುದು, ಆದರೆ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ಅಂದಾಜು 1.76 ಲಕ್ಷ ಕೋಟಿ ರೂಪಾಯಿ ಅಲ್ಲವೇ? ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ, ಬ್ಯಾಂಕ್ ಸಾಲ ಮುಳುಗಿಸಿರುವ, ಲಂಚ ಕೊಟ್ಟು ಸರ್ಕಾರದ ನೀತಿಗಳನ್ನೇ ಬದಲಾಯಿಸಿರುವ ಆರೋಪ ಹೊತ್ತ ನೂರಾರು ಉದ್ಯಮಿಗಳು ನಮ್ಮ ನಡುವೆ ಇದ್ದಾರೆ.
ಬಹಳಷ್ಟು ಉದ್ಯಮಿಗಳು ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲವನ್ನು ಮಾತ್ರವಲ್ಲ, ದೇಣಿಗೆಯನ್ನೂ ನೀಡಿದ್ದಾರೆ. ಅಣ್ಣಾ ಹಜಾರೆ ಅವರ ಸತ್ಯಾಗ್ರಹಕ್ಕಾಗಿ ಸಂಗ್ರಹ ಮಾಡಿದ ಹಣದ ಮೊತ್ತ 82.88 ಲಕ್ಷ ರೂಪಾಯಿ, ಅದರಲ್ಲಿ ಉದ್ಯಮಿಗಳಿಂದ ಸಂಗ್ರಹವಾದ ದೇಣಿಗೆಯ ಒಟ್ಟು ಮೊತ್ತ 46.50 ಲಕ್ಷ ರೂಪಾಯಿ.ಅಂದರೆ ಸತ್ಯಾಗ್ರಹಕ್ಕೆ ಖರ್ಚಾದ ಹಣದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಹಣ ನೀಡಿದವರು ಉದ್ಯಮಿಗಳು.

ಭ್ರಷ್ಟಾಚಾರದ ವಿರುದ್ಧದ ಹೋರಾಟದ ಗಮನವನ್ನು ಸಂಪೂರ್ಣವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕಡೆ ಕೇಂದ್ರೀಕರಿಸಿ ತಮ್ಮ ಕಡೆ ಯಾರೂ ಕಣ್ಣು ಹಾಯಿಸದಂತೆ ಮಾಡುವುದು ಇದರ ಹಿಂದಿನ ಹುನ್ನಾರವೇ?
ಚರ್ಚೆಯಾಗದೆ ಉಳಿದಿರುವ ಎರಡನೇ ಕ್ಷೇತ್ರ ಧಾರ್ಮಿಕ ಕೇಂದ್ರಗಳದ್ದು. ಕಳೆದೆರಡು ದಿನಗಳಲ್ಲಿ ದಿವಂಗತ ಸತ್ಯಸಾಯಿ ಬಾಬಾ ಅವರ ಖಾಸಗಿ ಕೋಣೆಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿರುವುದೇ ದೊಡ್ಡ ಸುದ್ದಿ. ಇವೆಲ್ಲವೂ ಅಕ್ರಮವಾಗಿ ಕೂಡಿಟ್ಟದ್ದಲ್ಲವೇ?
ಸಂಬಳಕ್ಕೆ ದುಡಿಯುವ ಒಬ್ಬ ಸಾಮಾನ್ಯ ನೌಕರ ತನ್ನ ಗಳಿಕೆಯ ಮೂರನೇ ಒಂದರಷ್ಟು ಭಾಗವನ್ನು ವರಮಾನ ತೆರಿಗೆಯಾಗಿ ಪಾವತಿಸದಿದ್ದರೆ ನೋಟಿಸ್ ನೀಡುವ ವರಮಾನ ತೆರಿಗೆ ಇಲಾಖೆಯ ಕಣ್ಣಿಗೆ ಸಾಯಿಬಾಬಾ ಅವರಲ್ಲಿದ್ದ ಅಕ್ರಮ ಗಳಿಕೆ ಕಣ್ಣಿಗೆ ಬಿದ್ದಿರಲಿಲ್ಲವೇ?
ದೇಶದ ಪ್ರಧಾನಿಯಿಂದ ಹಿಡಿದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವರೆಗೆ ಎಲ್ಲರನ್ನೂ ಭಕ್ತರಾಗಿ ಹೊಂದಿರುವ ಸಾಯಿಬಾಬಾ ಅವರನ್ನು ಮುಟ್ಟುವ ಧೈರ‌್ಯವಾದರೂ ಅವರಿಗೆಲ್ಲಿಂದ ಬರಬೇಕಿತ್ತು?
ಇದು ಸಾಯಿಬಾಬಾ ಒಬ್ಬರ ಕತೆಯಲ್ಲ, ನಮ್ಮ ಅನೇಕ `ದೇವ ಮಾನವರ~ ಕಪಾಟುಗಳಲ್ಲಿಯೂ `ಅಸ್ಥಿಪಂಜರ~ಗಳಿರುವ ಗುಮಾನಿ ಇದೆ. ಸರಿಯಾಗಿ ತನಿಖೆ ನಡೆಸಿದರೆ ನಮ್ಮ ಬಹುತೇಕ ಧಾರ್ಮಿಕ ಕೇಂದ್ರಗಳಲ್ಲಿಯೂ ಈ ರೀತಿಯ ಅಕ್ರಮ ಸಂಪತ್ತು ಸಂಗ್ರಹ ಬಯಲಾಗಬಹುದು.
ರಾಜಕಾರಣಿಗಳು ಕೂಡಾ ತಮ್ಮ ಅಕ್ರಮ ಗಳಿಕೆಯನ್ನು ಬಚ್ಚಿಡಲು ಮಠ-ಮಂದಿರಗಳೇ ಸುರಕ್ಷಿತ ಸ್ಥಳ ಎಂದು ಕಂಡುಕೊಂಡಿದ್ದಾರೆ. ಬಹಳಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಧಿ ದಕ್ಷಿಣದ ಒಂದು ಪ್ರಸಿದ್ಧ ಮಠದಲ್ಲಿತ್ತಂತೆ.

ರಾಜ್ಯದ ಇನ್ನೊಬ್ಬ ಹಿರಿಯ ರಾಜಕಾರಣಿ ಮತ್ತು ಅವರ ಜಾತಿಯ ಮಠದ ಸ್ವಾಮೀಜಿಗಳ ನಡುವಿನ ಜಗಳಕ್ಕೂ ಅಕ್ರಮವಾಗಿ ಕೂಡಿಟ್ಟಿರುವ ಹಣವೇ ಕಾರಣ ಎಂದು ಬಲ್ಲವರು ಹೇಳುತ್ತಾರೆ.

ಮಠ-ಮಂದಿರಗಳಿಗೆ ಬಹಳಷ್ಟು ಸಮೀಪ ಇರುವ ರಾಜ್ಯ ಈಗಿನ ಆಡಳಿತಾರೂಢ ಪಕ್ಷದ ನಾಯಕರ ಮೇಲೂ ಇಂತಹದ್ದೇ ಆರೋಪಗಳಿವೆ. ಇದು ಕೇವಲ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸೀಮಿತವಾಗಿಲ್ಲ.
ಮಸೀದಿ ಮತ್ತು ಚರ್ಚುಗಳಿಗೆ ವಿದೇಶದಿಂದ ಹೇರಳವಾಗಿ ಬರುವ ಹಣಕ್ಕೆ ಸಂಬಂಧಿಸಿದಂತೆಯೂ ಅಕ್ರಮ ಸಂಗ್ರಹದ ಆರೋಪ ಇದೆ. ಲೋಕಪಾಲ ಮಸೂದೆ ಬಗ್ಗೆ ಚರ್ಚೆ ನಡೆಸುವಾಗ ಸರ್ಕಾರ ಮತ್ತು ನಾಗರಿಕ ಸಮಿತಿ ಕೂಡಿಯೇ ಧಾರ್ಮಿಕ ಕ್ಷೇತ್ರಕ್ಕೆ ವಿನಾಯಿತಿ ನೀಡಿದಂತಿದೆ.
ಜನಲೋಕಪಾಲ ಮಸೂದೆಯ ಬಗ್ಗೆ ಇರುವ ಇನ್ನೊಂದು ಸಾಮಾನ್ಯ ಭಿನ್ನಾಭಿಪ್ರಾಯ -ಅದು ಕೇಳುತ್ತಿರುವ `ಸರ್ವಾಧಿಕಾರ~ದ ಬಗ್ಗೆ.
ಪ್ರಧಾನ ಮಂತ್ರಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ತನ್ನ ವ್ಯಾಪ್ತಿಗೆ ಒಳಪಡಿಸಬೇಕು. ಇದರ ಜತೆಯಲ್ಲಿ ಸಂಸತ್‌ನೊಳಗಿನ ಸಂಸದರ ನಡವಳಿಕೆಯನ್ನು ಕೂಡಾ ತನಿಖೆ ಮಾಡುವಂತಹ ಅಧಿಕಾರ ಇರಬೇಕು, ಕೇಂದ್ರ ತನಿಖಾದಳ (ಸಿಬಿಐ) ಮತ್ತು ಕೇಂದ್ರ ಜಾಗೃತ ಆಯೋಗಗಳನ್ನು (ಸಿವಿಸಿ) ಕೂಡಾ ತನ್ನ ಅಧೀನಕ್ಕೆ ಒಪ್ಪಿಸಬೇಕು...ಹೀಗೆ ಎಲ್ಲ ಅಧಿಕಾರವನ್ನು ಲೋಕಪಾಲರಿಗೆ ನೀಡಬೇಕು ಎಂದು ನಾಗರಿಕ ಸಮಿತಿ ಕೇಳುತ್ತಿದೆ.
ಪ್ರಜಾಪ್ರಭುತ್ವದ ಮೂಲ ಸಿದ್ಧಾಂತ ಅಧಿಕಾರ ವಿಕೇಂದ್ರೀಕರಣವೇ ಹೊರತು ಕೇಂದ್ರೀಕರಣ ಅಲ್ಲ. ಯಾವುದೇ ವ್ಯಕ್ತಿ ಇಲ್ಲವೇ ಸಂಸ್ಥೆಯಲ್ಲಿ ಅಧಿಕಾರ ಕೇಂದ್ರೀಕರಣವಾಗಬಾರದು ಎಂದು ಹೇಳುತ್ತದೆ ಪ್ರಜಾಪ್ರಭುತ್ವ. ಇದು ಸಂವಿಧಾನದ ಆಶಯ ಕೂಡಾ ಹೌದು.
ಎಲ್ಲವನ್ನೂ ಲೋಕಪಾಲರ ಸುಪರ್ದಿಗೆ ಒಪ್ಪಿಸುವುದರ ಬದಲಿಗೆ ಇದ್ದ ಜಾಗದಲ್ಲಿಯೇ ಅವುಗಳು ಇನ್ನಷ್ಟು ಸ್ವತಂತ್ರವಾಗಿ ಮತ್ತು ಕ್ಷಮತೆಯಿಂದ ಕಾರ‌್ಯನಿರ್ವಹಿಸುವಂತೆ ಮಾಡಬೇಕಾಗಿದೆ. ಇದಕ್ಕಾಗಿ ಬೇರೇನೂ ಮಾಡಬೇಕಾಗಿಲ್ಲ.
ಸರ್ಕಾರಿಯಾ ಆಯೋಗ, ರಾಷ್ಟ್ರೀಯ ಸಂವಿಧಾನ ಕಾರ‌್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗ ಮತ್ತು ಚುನಾವಣಾ ಆಯೋಗದ ಶಿಫಾರಸುಗಳು ಮತ್ತು ಕಾಲಕಾಲಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಜಾರಿಗೆ ತಂದರೆ ಸಾಕು.
ಇವುಗಳಲ್ಲಿ ಅತೀ ತುರ್ತಾಗಿ ನಡೆಯಬೇಕಾಗಿರುವುದು ಚುನಾವಣಾ ಸುಧಾರಣೆ. ಪ್ರಾಮಾಣಿಕರು, ಸಜ್ಜನರು, ಜನಪರ ಕಾಳಜಿ ಉಳ್ಳವರು ಚುನಾವಣಾ ರಾಜಕೀಯಕ್ಕೆ ಇಳಿಯಲಾಗದ ಸ್ಥಿತಿಯೇ ಭಾರತದ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಗಲಿರುವ ರೋಗಕ್ಕೆ ಮೂಲ ಕಾರಣ.
ಕ್ರಿಮಿನಲ್ ಹಿನ್ನೆಲೆಯ 150 ಸದಸ್ಯರು ಮತ್ತು 300 ಕೋಟ್ಯಧಿಪತಿ ಸದಸ್ಯರನ್ನೊಳಗೊಂಡ ಈಗಿನ ಲೋಕಸಭೆ ತಮ್ಮ ಕೊರಳಿಗೆ ಉರುಳಾಗಲಿರುವ ಲೋಕಪಾಲ ಮಸೂದೆಗೆ ಕಣ್ಣುಮುಚ್ಚಿ ಅಂಗೀಕಾರ ನೀಡಬಹುದೆಂದು ತಿಳಿದುಕೊಂಡವರು ಮೂರ್ಖರು ಅಷ್ಟೆ.

ಇದು ಗೊತ್ತಿದ್ದೂ  ಉಪವಾಸ ಸತ್ಯಾಗ್ರಹದ ಮೂಲಕ ಏಕಾಏಕಿ ಸರ್ಕಾರವನ್ನು ಮಣಿಸುತ್ತೇವೆಂದು ಹೊರಡುವುದು ವ್ಯರ್ಥ ದೇಹ ದಂಡನೆಯಾಗಬಹುದೇ ಹೊರತು ಯಶಸ್ಸಿನ ಫಲ ಸಿಗಲಾರದು.
ಮೊದಲು ನಡೆಯಬೇಕಾಗಿರುವುದು ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನ, ಭ್ರಷ್ಟರನ್ನು ಶಿಕ್ಷಿಸುವುದು ನಂತರದ ಕೆಲಸ. ಈ ಹಿನ್ನೆಲೆಯಲ್ಲಿ ಭ್ರಷ್ಟರನ್ನು ಶಿಕ್ಷಿಸಲು ಲೋಕಪಾಲರನ್ನು ನೇಮಿಸುವ ಮೊದಲು ಭ್ರಷ್ಟರ ಹುಟ್ಟಿಗೆ ಕಾರಣವಾಗಿರುವ ವ್ಯವಸ್ಥೆಯ ಸುಧಾರಣೆಯ ಬಗ್ಗೆ ನಾಗರಿಕ ಸಮಿತಿ ಯೋಚಿಸಬೇಕಾಗಿತ್ತು.
ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಒಂದು ಸ್ವಚ್ಛ, ಪ್ರಾಮಾಣಿಕ ಮತ್ತು ಸೇವಾನಿಷ್ಠ ಸಂಸದರನ್ನೊಳಗೊಂಡ ಸಂಸತ್ ರಚನೆಗೊಳ್ಳುವಂತೆ ಮಾಡಬೇಕಾಗಿತ್ತು.
ಇದು ಅಸಾಧ್ಯವಾದ ಕೆಲಸ ಅಲ್ಲ. ಈಗಿನ ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ ನ್ಯಾಯಾಲಯಗಳಲ್ಲಿ ಮೇಲ್ಮನವಿ ಇತ್ಯರ್ಥಕ್ಕೆ ಬಾಕಿ ಇರುವ ವರೆಗೆ ಎಂತಹ ಘನಘೋರ ಅಪರಾಧಿ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.
ಚುನಾವಣಾ ಕಾನೂನಿನಲ್ಲಿರುವ ಈ ಲೋಪದ ನಿವಾರಣೆಗಾಗಿಯೇ ಚುನಾವಣಾ ಆಯೋಗ ಪ್ರಮುಖ ಸುಧಾರಣಾ ಕ್ರಮವನ್ನು ಶಿಫಾರಸು ಮಾಡಿದೆ. `ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಅರ್ಹವಾಗಿರುವ ಅಪರಾಧಗಳಲ್ಲಿ ಆರೋಪಿಯಾಗಿರುವವರು, ಒಂದೊಮ್ಮೆ ಆ ಪ್ರಕರಣದ ತೀರ್ಪಿನ ವಿರುದ್ದದ ಮೇಲ್ಮನವಿ ಇತ್ಯರ್ಥಕ್ಕೆ ಬಾಕಿ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ~ ಎನ್ನುತ್ತದೆ ಈ ಸುಧಾರಣಾ ಕ್ರಮ.
ಇದೊಂದು ಜಾರಿಯಾದರೆ ಈಗಿನ ಲೋಕಸಭೆಯಲ್ಲಿರುವ ಸುಮಾರು 150 ಕ್ರಿಮಿನಲ್ ಹಿನ್ನೆಲೆಯ ಸದಸ್ಯರು ಜಾಗ ಖಾಲಿ ಮಾಡಬೇಕಾಗುತ್ತದೆ. ಮುಂದಿನ ಚುನಾವಣೆಗಳಲ್ಲಿ ಒಂದಷ್ಟು ಸಜ್ಜನರು ಸಂಸತ್ ಪ್ರವೇಶಿಸುವ ಪ್ರಯತ್ನ ಮಾಡಬಹುದು. ಆಗ ಮಾತ್ರ ಜನಪರವಾದ ಕಾನೂನುಗಳ ರಚನೆ ಮತ್ತು ಅನುಷ್ಠಾನವನ್ನು ನಿರೀಕ್ಷಿಸಲು ಸಾಧ್ಯ.