Monday, June 20, 2011

ಜನಲೋಕಪಾಲ ಸರ್ವರೋಗಕ್ಕೆ ಪರಿಹಾರವೇ?

ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವಿಫಲಗೊಂಡಿದೆ ಎಂದು ಇಲ್ಲಿಯವರೆಗೆ `ಕಾಡಿನವರು~ ಮಾತ್ರ ಹೇಳುತ್ತಿದ್ದರು, ಈಗ `ನಾಡಿನವರು~ ಕೂಡಾ ಹೇಳತೊಡಗಿದ್ದಾರೆ.
ಹದಿನಾಲ್ಕು ರಾಜ್ಯಗಳಲ್ಲಿ ಹಾದುಹೋಗಿರುವ ಮತ್ತು ದೇಶದ ಶೇಕಡಾ 40ರಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ `ರೆಡ್ ಕಾರಿಡಾರ್~ನಲ್ಲಿ `ಕಾಡಿನವರ ಸರ್ಕಾರ~ ಇದೆ.
ಅಲ್ಲಿರುವ ದೇಶದ ಶೇಕಡಾ 35ರಷ್ಟು ಜನ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.
ತಲೆಮಾರುಗಳಿಂದ ಅಭಿವೃದ್ಧಿ ವಂಚಿತರಾಗಿರುವ ಈ ಶೋಷಿತ ಜನಸಮುದಾಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದರೆ ಅದು ಸಹಜ. ಆಶ್ಚರ‌್ಯವೆಂದರೆ  ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಚುನಾವಣೆಯಲ್ಲಿ ಮತಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವ ಮತ್ತು ಅವರಿಂದ ಆಯ್ಕೆಗೊಂಡಿರುವ `ನಾಡಿನವರು~ ಕೂಡಾ `ಕಾಡಿನವರ~ ಭಾಷೆಯಲ್ಲಿಯೇ ಮಾತನಾಡುತ್ತಿರುವುದು.
ಇದಕ್ಕೆ ಇತ್ತೀಚಿನ ಉದಾಹರಣೆ- ಸಂವಿಧಾನದ ಪ್ರಮುಖ ಅಂಗವಾಗಿರುವ ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದೇವರ ಮೇಲೆ ಆಣೆ ಮಾಡಲು ಹೊರಟಿರುವುದು.
ಅಲ್ಲಿಗೆ ಕಳೆದ 60 ವರ್ಷಗಳಿಂದ ನಾವು ಒಪ್ಪಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ರೋಗಗ್ರಸ್ತವಾಗಿದೆ ಎಂದು ಬಹು ಸಂಖ್ಯಾತ ಜನ ಒಪ್ಪಿಕೊಂಡಂತಾಯಿತು. ಆ ಬಗ್ಗೆ ವಿವಾದಗಳಿಲ್ಲ. ವಿವಾದ ಇರುವುದು ಇದಕ್ಕೆ ನೀಡಬೇಕಾದ ಚಿಕಿತ್ಸೆ ಬಗ್ಗೆ.
ಕಾಡಿನಲ್ಲಿರುವ ಮಾವೋವಾದಿಗಳ ಪ್ರಕಾರ ಇದು ಚಿಕಿತ್ಸೆ ಮೀರಿದ ರೋಗ. `ಈಗಿನ ವ್ಯವಸ್ಥೆಯನ್ನು ನಾಶಮಾಡಿದರೆ ಮಾತ್ರ ಹೊಸ ವ್ಯವಸ್ಥೆ ಹುಟ್ಟಲು ಸಾಧ್ಯ. ಅದನ್ನೇ ನಾವು ಬಂದೂಕಿನ ಮೂಲಕ ಮಾಡಲು ಹೊರಟಿದ್ದೇವೆ~ ಎನ್ನುತ್ತಾರೆ ಅವರು.

ಇದನ್ನು ಕಾಂಗ್ರೆಸಿಗರು, ಮಾರ್ಕ್ಸಿಸ್ಟರು, ಸೋಷಿಯಲಿಸ್ಟರು, ಉದಾರವಾದಿಗಳು, ಸಂಪ್ರದಾಯವಾದಿಗಳು ಮಾತ್ರವಲ್ಲ, ಬಹು ಸಂಖ್ಯೆಯ ಜನಸಮುದಾಯ ಕೂಡಾ ಒಪ್ಪುವುದಿಲ್ಲ. ಹಾಗಿದ್ದರೆ ಇದಕ್ಕೇನು ಚಿಕಿತ್ಸೆ? ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಜನಪ್ರಿಯ ಔಷಧಿಯ ಹೆಸರು `ಲೋಕಪಾಲ ಮಸೂದೆ~.
ಇದು ಸರ್ವರೋಗ ನಿವಾರಕ ಎಂದು ಅದರ ತಯಾರಕರು ಹೇಳಿಕೊಳ್ಳದಿದ್ದರೂ ಹಾಗೆಂದು ಅದರ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಇಂತಹ ಪ್ರಚಾರದಿಂದಾಗಿ ಜನತೆಯಲ್ಲಿನ ನಿರೀಕ್ಷೆ ಕೂಡಾ ಆಕಾಶದೆತ್ತರಕ್ಕೆ ಏರಿದೆ.
ಒಂದೊಮ್ಮೆ ನಾಗರಿಕ ಸಮಿತಿ ರಚಿಸಿರುವ ಜನಲೋಕಪಾಲ ಮಸೂದೆಯನ್ನು ಯಥಾವತ್ತಾಗಿ ಸಂಸತ್ ಅಂಗೀಕರಿಸಿ ಕಾನೂನಿನ ರೂಪ ನೀಡಿದರೆ ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ಮೂಲೋತ್ಪಾಟನೆಯಾಗುವುದೇ? ಪ್ರಜಾಪ್ರಭುತ್ವಕ್ಕೆ ತಗಲಿರುವ ರೋಗ ವಾಸಿಯಾಗುವುದೇ? ಈ ಬಗ್ಗೆ ಅನುಮಾನಿಸುವುದಕ್ಕೆ ಕಾರಣಗಳಿವೆ.
ಮೊದಲನೆಯದಾಗಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ಕೂರುತ್ತೇನೆಂದು ಹೇಳಿದ ದಿನದಿಂದ ಇಲ್ಲಿಯವರೆಗೆ ನಡೆಯುತ್ತಿರುವ ಚರ್ಚೆಯೆಲ್ಲವೂ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸುತ್ತಲೇ ಗಿರ್ಕಿ ಹೊಡೆಯುತ್ತಿದೆ. ಬಹುಮುಖ್ಯವಾದ ಎರಡು ಕ್ಷೇತ್ರಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಯಾಕೋ ಚರ್ಚೆ ನಡೆಯುತ್ತಿಲ್ಲ.

ಈ ಎರಡರಲ್ಲಿ ಮೊದಲನೆಯದು ಕಾರ್ಪೋರೇಟ್ ಕ್ಷೇತ್ರ, ಎರಡನೆಯದು ಧಾರ್ಮಿಕ ಕ್ಷೇತ್ರ. ನಮ್ಮೆಲ್ಲ ಚರ್ಚೆ ನಡೆಯುತ್ತಿರುವುದು ಲಂಚ ಸ್ವೀಕರಿಸುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಗ್ಗೆ. ಇವರಿಬ್ಬರಿಗೂ ಲಂಚ ಸ್ವೀಕರಿಸಿಯಷ್ಟೇ ಗೊತ್ತು ವಿನಾ ಲಂಚ ಕೊಟ್ಟು ಗೊತ್ತಿಲ್ಲ. ಆದರೆ  ಇವರಿಗೆ ಲಂಚ ಕೊಡುವವರು ಯಾರು ಮತ್ತು ಅವರು ಯಾಕೆ ಕೊಡುತ್ತಿದ್ದಾರೆ? ಯಾರೂ ಕೇಳುತ್ತಿಲ್ಲ.
ನೈತಿಕ ದೃಷ್ಟಿಯಿಂದ ಲಂಚ ಸ್ವೀಕರಿಸಿದ್ದಕ್ಕಿಂತ ಲಂಚ ಕೊಡುವುದು ಸ್ವಲ್ಪ ಸಣ್ಣ ಪ್ರಮಾಣದ ಅಪರಾಧವಾಗಿರಬಹುದು. ಆದರೆ ಅದರ ಪರಿಣಾಮ? ಸಚಿವರು ಮತ್ತು ಉನ್ನತಾಧಿಕಾರಿಗಳ ಮಟ್ಟದಲ್ಲಿ ಲಂಚ ನೀಡುವವನು ಹಳ್ಳಿಯ ಬಡಬೋರೇಗೌಡ ಅಲ್ಲ, ಅವನು ಖಂಡಿತವಾಗಿಯೂ ಒಬ್ಬ ಉದ್ಯಮಿಯಾಗಿರುತ್ತಾನೆ.
ಇಲ್ಲಿಯವರೆಗೆ ಬಯಲಾಗಿರುವ ಯಾವ ಹಗರಣವನ್ನು ತೆಗೆದುಕೊಂಡರೂ ಅದರಲ್ಲಿ ಉದ್ಯಮಿಗಳ ಪ್ರಮುಖ ಪಾತ್ರವನ್ನು ಕಾಣಬಹುದು. ಒಬ್ಬ ಉದ್ಯಮಿ ಹತ್ತುಕೋಟಿ ರೂಪಾಯಿ ಲಂಚ ನೀಡಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡುವಂತಹ ಅಕ್ರಮ ವ್ಯವಹಾರ ನಡೆಸಿ ಸಾವಿರಾರು ಕೋಟಿ ರೂಪಾಯಿ ಲಾಭ ಪಡೆದಿರುತ್ತಾನೆ.
ಇದಕ್ಕೆ ಉತ್ತಮ ಉದಾಹರಣೆ 2ಜಿ ತರಂಗಾಂತರ ಹಗರಣ. ಇದರಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಅತ್ಯಧಿಕವೆಂದರೆ  ಒಂದೆರಡು ಸಾವಿರಕೋಟಿ ಲಂಚ ಪಡೆದಿರಬಹುದು, ಆದರೆ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ಅಂದಾಜು 1.76 ಲಕ್ಷ ಕೋಟಿ ರೂಪಾಯಿ ಅಲ್ಲವೇ? ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ, ಬ್ಯಾಂಕ್ ಸಾಲ ಮುಳುಗಿಸಿರುವ, ಲಂಚ ಕೊಟ್ಟು ಸರ್ಕಾರದ ನೀತಿಗಳನ್ನೇ ಬದಲಾಯಿಸಿರುವ ಆರೋಪ ಹೊತ್ತ ನೂರಾರು ಉದ್ಯಮಿಗಳು ನಮ್ಮ ನಡುವೆ ಇದ್ದಾರೆ.
ಬಹಳಷ್ಟು ಉದ್ಯಮಿಗಳು ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲವನ್ನು ಮಾತ್ರವಲ್ಲ, ದೇಣಿಗೆಯನ್ನೂ ನೀಡಿದ್ದಾರೆ. ಅಣ್ಣಾ ಹಜಾರೆ ಅವರ ಸತ್ಯಾಗ್ರಹಕ್ಕಾಗಿ ಸಂಗ್ರಹ ಮಾಡಿದ ಹಣದ ಮೊತ್ತ 82.88 ಲಕ್ಷ ರೂಪಾಯಿ, ಅದರಲ್ಲಿ ಉದ್ಯಮಿಗಳಿಂದ ಸಂಗ್ರಹವಾದ ದೇಣಿಗೆಯ ಒಟ್ಟು ಮೊತ್ತ 46.50 ಲಕ್ಷ ರೂಪಾಯಿ.ಅಂದರೆ ಸತ್ಯಾಗ್ರಹಕ್ಕೆ ಖರ್ಚಾದ ಹಣದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಹಣ ನೀಡಿದವರು ಉದ್ಯಮಿಗಳು.

ಭ್ರಷ್ಟಾಚಾರದ ವಿರುದ್ಧದ ಹೋರಾಟದ ಗಮನವನ್ನು ಸಂಪೂರ್ಣವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕಡೆ ಕೇಂದ್ರೀಕರಿಸಿ ತಮ್ಮ ಕಡೆ ಯಾರೂ ಕಣ್ಣು ಹಾಯಿಸದಂತೆ ಮಾಡುವುದು ಇದರ ಹಿಂದಿನ ಹುನ್ನಾರವೇ?
ಚರ್ಚೆಯಾಗದೆ ಉಳಿದಿರುವ ಎರಡನೇ ಕ್ಷೇತ್ರ ಧಾರ್ಮಿಕ ಕೇಂದ್ರಗಳದ್ದು. ಕಳೆದೆರಡು ದಿನಗಳಲ್ಲಿ ದಿವಂಗತ ಸತ್ಯಸಾಯಿ ಬಾಬಾ ಅವರ ಖಾಸಗಿ ಕೋಣೆಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿರುವುದೇ ದೊಡ್ಡ ಸುದ್ದಿ. ಇವೆಲ್ಲವೂ ಅಕ್ರಮವಾಗಿ ಕೂಡಿಟ್ಟದ್ದಲ್ಲವೇ?
ಸಂಬಳಕ್ಕೆ ದುಡಿಯುವ ಒಬ್ಬ ಸಾಮಾನ್ಯ ನೌಕರ ತನ್ನ ಗಳಿಕೆಯ ಮೂರನೇ ಒಂದರಷ್ಟು ಭಾಗವನ್ನು ವರಮಾನ ತೆರಿಗೆಯಾಗಿ ಪಾವತಿಸದಿದ್ದರೆ ನೋಟಿಸ್ ನೀಡುವ ವರಮಾನ ತೆರಿಗೆ ಇಲಾಖೆಯ ಕಣ್ಣಿಗೆ ಸಾಯಿಬಾಬಾ ಅವರಲ್ಲಿದ್ದ ಅಕ್ರಮ ಗಳಿಕೆ ಕಣ್ಣಿಗೆ ಬಿದ್ದಿರಲಿಲ್ಲವೇ?
ದೇಶದ ಪ್ರಧಾನಿಯಿಂದ ಹಿಡಿದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವರೆಗೆ ಎಲ್ಲರನ್ನೂ ಭಕ್ತರಾಗಿ ಹೊಂದಿರುವ ಸಾಯಿಬಾಬಾ ಅವರನ್ನು ಮುಟ್ಟುವ ಧೈರ‌್ಯವಾದರೂ ಅವರಿಗೆಲ್ಲಿಂದ ಬರಬೇಕಿತ್ತು?
ಇದು ಸಾಯಿಬಾಬಾ ಒಬ್ಬರ ಕತೆಯಲ್ಲ, ನಮ್ಮ ಅನೇಕ `ದೇವ ಮಾನವರ~ ಕಪಾಟುಗಳಲ್ಲಿಯೂ `ಅಸ್ಥಿಪಂಜರ~ಗಳಿರುವ ಗುಮಾನಿ ಇದೆ. ಸರಿಯಾಗಿ ತನಿಖೆ ನಡೆಸಿದರೆ ನಮ್ಮ ಬಹುತೇಕ ಧಾರ್ಮಿಕ ಕೇಂದ್ರಗಳಲ್ಲಿಯೂ ಈ ರೀತಿಯ ಅಕ್ರಮ ಸಂಪತ್ತು ಸಂಗ್ರಹ ಬಯಲಾಗಬಹುದು.
ರಾಜಕಾರಣಿಗಳು ಕೂಡಾ ತಮ್ಮ ಅಕ್ರಮ ಗಳಿಕೆಯನ್ನು ಬಚ್ಚಿಡಲು ಮಠ-ಮಂದಿರಗಳೇ ಸುರಕ್ಷಿತ ಸ್ಥಳ ಎಂದು ಕಂಡುಕೊಂಡಿದ್ದಾರೆ. ಬಹಳಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಧಿ ದಕ್ಷಿಣದ ಒಂದು ಪ್ರಸಿದ್ಧ ಮಠದಲ್ಲಿತ್ತಂತೆ.

ರಾಜ್ಯದ ಇನ್ನೊಬ್ಬ ಹಿರಿಯ ರಾಜಕಾರಣಿ ಮತ್ತು ಅವರ ಜಾತಿಯ ಮಠದ ಸ್ವಾಮೀಜಿಗಳ ನಡುವಿನ ಜಗಳಕ್ಕೂ ಅಕ್ರಮವಾಗಿ ಕೂಡಿಟ್ಟಿರುವ ಹಣವೇ ಕಾರಣ ಎಂದು ಬಲ್ಲವರು ಹೇಳುತ್ತಾರೆ.

ಮಠ-ಮಂದಿರಗಳಿಗೆ ಬಹಳಷ್ಟು ಸಮೀಪ ಇರುವ ರಾಜ್ಯ ಈಗಿನ ಆಡಳಿತಾರೂಢ ಪಕ್ಷದ ನಾಯಕರ ಮೇಲೂ ಇಂತಹದ್ದೇ ಆರೋಪಗಳಿವೆ. ಇದು ಕೇವಲ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸೀಮಿತವಾಗಿಲ್ಲ.
ಮಸೀದಿ ಮತ್ತು ಚರ್ಚುಗಳಿಗೆ ವಿದೇಶದಿಂದ ಹೇರಳವಾಗಿ ಬರುವ ಹಣಕ್ಕೆ ಸಂಬಂಧಿಸಿದಂತೆಯೂ ಅಕ್ರಮ ಸಂಗ್ರಹದ ಆರೋಪ ಇದೆ. ಲೋಕಪಾಲ ಮಸೂದೆ ಬಗ್ಗೆ ಚರ್ಚೆ ನಡೆಸುವಾಗ ಸರ್ಕಾರ ಮತ್ತು ನಾಗರಿಕ ಸಮಿತಿ ಕೂಡಿಯೇ ಧಾರ್ಮಿಕ ಕ್ಷೇತ್ರಕ್ಕೆ ವಿನಾಯಿತಿ ನೀಡಿದಂತಿದೆ.
ಜನಲೋಕಪಾಲ ಮಸೂದೆಯ ಬಗ್ಗೆ ಇರುವ ಇನ್ನೊಂದು ಸಾಮಾನ್ಯ ಭಿನ್ನಾಭಿಪ್ರಾಯ -ಅದು ಕೇಳುತ್ತಿರುವ `ಸರ್ವಾಧಿಕಾರ~ದ ಬಗ್ಗೆ.
ಪ್ರಧಾನ ಮಂತ್ರಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ತನ್ನ ವ್ಯಾಪ್ತಿಗೆ ಒಳಪಡಿಸಬೇಕು. ಇದರ ಜತೆಯಲ್ಲಿ ಸಂಸತ್‌ನೊಳಗಿನ ಸಂಸದರ ನಡವಳಿಕೆಯನ್ನು ಕೂಡಾ ತನಿಖೆ ಮಾಡುವಂತಹ ಅಧಿಕಾರ ಇರಬೇಕು, ಕೇಂದ್ರ ತನಿಖಾದಳ (ಸಿಬಿಐ) ಮತ್ತು ಕೇಂದ್ರ ಜಾಗೃತ ಆಯೋಗಗಳನ್ನು (ಸಿವಿಸಿ) ಕೂಡಾ ತನ್ನ ಅಧೀನಕ್ಕೆ ಒಪ್ಪಿಸಬೇಕು...ಹೀಗೆ ಎಲ್ಲ ಅಧಿಕಾರವನ್ನು ಲೋಕಪಾಲರಿಗೆ ನೀಡಬೇಕು ಎಂದು ನಾಗರಿಕ ಸಮಿತಿ ಕೇಳುತ್ತಿದೆ.
ಪ್ರಜಾಪ್ರಭುತ್ವದ ಮೂಲ ಸಿದ್ಧಾಂತ ಅಧಿಕಾರ ವಿಕೇಂದ್ರೀಕರಣವೇ ಹೊರತು ಕೇಂದ್ರೀಕರಣ ಅಲ್ಲ. ಯಾವುದೇ ವ್ಯಕ್ತಿ ಇಲ್ಲವೇ ಸಂಸ್ಥೆಯಲ್ಲಿ ಅಧಿಕಾರ ಕೇಂದ್ರೀಕರಣವಾಗಬಾರದು ಎಂದು ಹೇಳುತ್ತದೆ ಪ್ರಜಾಪ್ರಭುತ್ವ. ಇದು ಸಂವಿಧಾನದ ಆಶಯ ಕೂಡಾ ಹೌದು.
ಎಲ್ಲವನ್ನೂ ಲೋಕಪಾಲರ ಸುಪರ್ದಿಗೆ ಒಪ್ಪಿಸುವುದರ ಬದಲಿಗೆ ಇದ್ದ ಜಾಗದಲ್ಲಿಯೇ ಅವುಗಳು ಇನ್ನಷ್ಟು ಸ್ವತಂತ್ರವಾಗಿ ಮತ್ತು ಕ್ಷಮತೆಯಿಂದ ಕಾರ‌್ಯನಿರ್ವಹಿಸುವಂತೆ ಮಾಡಬೇಕಾಗಿದೆ. ಇದಕ್ಕಾಗಿ ಬೇರೇನೂ ಮಾಡಬೇಕಾಗಿಲ್ಲ.
ಸರ್ಕಾರಿಯಾ ಆಯೋಗ, ರಾಷ್ಟ್ರೀಯ ಸಂವಿಧಾನ ಕಾರ‌್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗ ಮತ್ತು ಚುನಾವಣಾ ಆಯೋಗದ ಶಿಫಾರಸುಗಳು ಮತ್ತು ಕಾಲಕಾಲಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಜಾರಿಗೆ ತಂದರೆ ಸಾಕು.
ಇವುಗಳಲ್ಲಿ ಅತೀ ತುರ್ತಾಗಿ ನಡೆಯಬೇಕಾಗಿರುವುದು ಚುನಾವಣಾ ಸುಧಾರಣೆ. ಪ್ರಾಮಾಣಿಕರು, ಸಜ್ಜನರು, ಜನಪರ ಕಾಳಜಿ ಉಳ್ಳವರು ಚುನಾವಣಾ ರಾಜಕೀಯಕ್ಕೆ ಇಳಿಯಲಾಗದ ಸ್ಥಿತಿಯೇ ಭಾರತದ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಗಲಿರುವ ರೋಗಕ್ಕೆ ಮೂಲ ಕಾರಣ.
ಕ್ರಿಮಿನಲ್ ಹಿನ್ನೆಲೆಯ 150 ಸದಸ್ಯರು ಮತ್ತು 300 ಕೋಟ್ಯಧಿಪತಿ ಸದಸ್ಯರನ್ನೊಳಗೊಂಡ ಈಗಿನ ಲೋಕಸಭೆ ತಮ್ಮ ಕೊರಳಿಗೆ ಉರುಳಾಗಲಿರುವ ಲೋಕಪಾಲ ಮಸೂದೆಗೆ ಕಣ್ಣುಮುಚ್ಚಿ ಅಂಗೀಕಾರ ನೀಡಬಹುದೆಂದು ತಿಳಿದುಕೊಂಡವರು ಮೂರ್ಖರು ಅಷ್ಟೆ.

ಇದು ಗೊತ್ತಿದ್ದೂ  ಉಪವಾಸ ಸತ್ಯಾಗ್ರಹದ ಮೂಲಕ ಏಕಾಏಕಿ ಸರ್ಕಾರವನ್ನು ಮಣಿಸುತ್ತೇವೆಂದು ಹೊರಡುವುದು ವ್ಯರ್ಥ ದೇಹ ದಂಡನೆಯಾಗಬಹುದೇ ಹೊರತು ಯಶಸ್ಸಿನ ಫಲ ಸಿಗಲಾರದು.
ಮೊದಲು ನಡೆಯಬೇಕಾಗಿರುವುದು ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನ, ಭ್ರಷ್ಟರನ್ನು ಶಿಕ್ಷಿಸುವುದು ನಂತರದ ಕೆಲಸ. ಈ ಹಿನ್ನೆಲೆಯಲ್ಲಿ ಭ್ರಷ್ಟರನ್ನು ಶಿಕ್ಷಿಸಲು ಲೋಕಪಾಲರನ್ನು ನೇಮಿಸುವ ಮೊದಲು ಭ್ರಷ್ಟರ ಹುಟ್ಟಿಗೆ ಕಾರಣವಾಗಿರುವ ವ್ಯವಸ್ಥೆಯ ಸುಧಾರಣೆಯ ಬಗ್ಗೆ ನಾಗರಿಕ ಸಮಿತಿ ಯೋಚಿಸಬೇಕಾಗಿತ್ತು.
ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಒಂದು ಸ್ವಚ್ಛ, ಪ್ರಾಮಾಣಿಕ ಮತ್ತು ಸೇವಾನಿಷ್ಠ ಸಂಸದರನ್ನೊಳಗೊಂಡ ಸಂಸತ್ ರಚನೆಗೊಳ್ಳುವಂತೆ ಮಾಡಬೇಕಾಗಿತ್ತು.
ಇದು ಅಸಾಧ್ಯವಾದ ಕೆಲಸ ಅಲ್ಲ. ಈಗಿನ ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ ನ್ಯಾಯಾಲಯಗಳಲ್ಲಿ ಮೇಲ್ಮನವಿ ಇತ್ಯರ್ಥಕ್ಕೆ ಬಾಕಿ ಇರುವ ವರೆಗೆ ಎಂತಹ ಘನಘೋರ ಅಪರಾಧಿ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.
ಚುನಾವಣಾ ಕಾನೂನಿನಲ್ಲಿರುವ ಈ ಲೋಪದ ನಿವಾರಣೆಗಾಗಿಯೇ ಚುನಾವಣಾ ಆಯೋಗ ಪ್ರಮುಖ ಸುಧಾರಣಾ ಕ್ರಮವನ್ನು ಶಿಫಾರಸು ಮಾಡಿದೆ. `ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಅರ್ಹವಾಗಿರುವ ಅಪರಾಧಗಳಲ್ಲಿ ಆರೋಪಿಯಾಗಿರುವವರು, ಒಂದೊಮ್ಮೆ ಆ ಪ್ರಕರಣದ ತೀರ್ಪಿನ ವಿರುದ್ದದ ಮೇಲ್ಮನವಿ ಇತ್ಯರ್ಥಕ್ಕೆ ಬಾಕಿ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ~ ಎನ್ನುತ್ತದೆ ಈ ಸುಧಾರಣಾ ಕ್ರಮ.
ಇದೊಂದು ಜಾರಿಯಾದರೆ ಈಗಿನ ಲೋಕಸಭೆಯಲ್ಲಿರುವ ಸುಮಾರು 150 ಕ್ರಿಮಿನಲ್ ಹಿನ್ನೆಲೆಯ ಸದಸ್ಯರು ಜಾಗ ಖಾಲಿ ಮಾಡಬೇಕಾಗುತ್ತದೆ. ಮುಂದಿನ ಚುನಾವಣೆಗಳಲ್ಲಿ ಒಂದಷ್ಟು ಸಜ್ಜನರು ಸಂಸತ್ ಪ್ರವೇಶಿಸುವ ಪ್ರಯತ್ನ ಮಾಡಬಹುದು. ಆಗ ಮಾತ್ರ ಜನಪರವಾದ ಕಾನೂನುಗಳ ರಚನೆ ಮತ್ತು ಅನುಷ್ಠಾನವನ್ನು ನಿರೀಕ್ಷಿಸಲು ಸಾಧ್ಯ.

Monday, June 13, 2011

ಸಂವಿಧಾನೇತರ ಶಕ್ತಿಗಳ ನಿಯಂತ್ರಣದಲ್ಲಿ ಪಕ್ಷಗಳು

ಸಾರ್ವಜನಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಸಂವಿಧಾನೇತರ ಶಕ್ತಿಗಳಿಂದಾಗಿ ದೇಶದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ ಎಂಬ ಹುಯಿಲೆದ್ದಿದೆ. ಆಳುವ ಪಕ್ಷ ವ್ಯಕ್ತಪಡಿಸುತ್ತಿರುವ ಈ ಆತಂಕದಲ್ಲಿ ಸ್ವಹಿತಾಸಕ್ತಿಗಳಿದ್ದರೂ ಸತ್ಯಾಂಶ ಇಲ್ಲವೆಂದಲ್ಲ. ಆದರೆ, ಇದು ಪ್ರಾರಂಭವಾಗಿದ್ದು ಅಣ್ಣಾ ಹಜಾರೆ ಇಲ್ಲವೇ ಬಾಬಾ ರಾಮ್‌ದೇವ್ ಉಪವಾಸ ಸತ್ಯಾಗ್ರಹಗಳಿಂದಲ್ಲ.
ಈ ಎರಡು ಸತ್ಯಾಗ್ರಹಗಳ ಕುರಿತು ಸಂಪೂರ್ಣವಾಗಿ `ಸಂವಿಧಾನೇತರ ಶಕ್ತಿಗಳ ಕುಟಿಲ ಯತ್ನ~ ಎಂದು ಬಣ್ಣಿಸುವುದು ಕೂಡಾ ಸರಿಯಲ್ಲ.
ಶಾಸನರಚನೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿಯೇ ಬರುತ್ತದೆ. ದೇಶದಲ್ಲಿ ಹಿಂದೆ ನಡೆದಿರುವ ಮತ್ತು ಈಗಲೂ ನಡೆಯುತ್ತಿರುವ ಅನೇಕ ಚಳವಳಿಗಳು ಇದೇ ಮಾದರಿಯವು.
ಆದರೆ ಶಾಸನರಚನೆಯ ಪ್ರಕ್ರಿಯೆಯಲ್ಲಿಯೂ ತಮ್ಮನ್ನು ಸೇರಿಸಿಕೊಳ್ಳಬೇಕು ಎಂದು ಚಳವಳಿಗಾರರು ಹೇರುವ ಒತ್ತಡ ಪ್ರಜಾಸತ್ತಾತ್ಮಕವಾದುದೇ ಎನ್ನುವುದಷ್ಟೇ ಈಗಿನ ಪ್ರಶ್ನೆ.
`ಅಣ್ಣಾ ಹಜಾರೆ, ನ್ಯಾಯಮೂರ್ತಿ ಎನ್ . ಸಂತೋಷ್ ಹೆಗ್ಡೆ, ಅರವಿಂದ್ ಕೇಜ್ರಿವಾಲ್ ಮೊದಲಾದವರು ಶಾಸನರಚನೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದರಿಂದ ಇದರಲ್ಲಿ ತಪ್ಪಿಲ್ಲ~ ಎಂದು ಈ ಕ್ಷಣದಲ್ಲಿ ಅನಿಸಬಹುದು.
ಆದರೆ ಇದನ್ನೇ ಪೂರ್ವ ನಿದರ್ಶನವಾಗಿ ಇಟ್ಟುಕೊಂಡು ಉಳಿದವರು ಇದೇ ಮಾರ್ಗವನ್ನು ಅನುಸರಿಸಿದರೇ? ಬಹಳ ದೂರವೇನೂ ಹೋಗಬೇಕಾಗಿಲ್ಲ, ನಾಳೆ ಬಾಬಾ ರಾಮ್‌ದೇವ್ ಅವರು ಕಪ್ಪುಹಣ ವಾಪಸು ಪಡೆಯುವ ಕಾನೂನಿನ ರಚನೆಯಲ್ಲಿಯೂ ತಮ್ಮನ್ನು ಸೇರಿಸಿಕೊಳ್ಳಬೇಕೆಂದು ಉಪವಾಸ ಸತ್ಯಾಗ್ರಹದ ಮೂಲಕ ಹಠ ಹಿಡಿದರೆ? ಅಣ್ಣಾಹಜಾರೆ ಅವರ ಪಾಲ್ಗೊಳ್ಳುವಿಕೆಯನ್ನು ಒಪ್ಪುವವರು
ಬಾಬಾ ರಾಮ್‌ದೇವ್ ಅವರನ್ನೂ ಒಪ್ಪಿಕೊಳ್ಳುವರೇ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಂವಿಧಾನೇತರ ಶಕ್ತಿಗಳ ಪಾತ್ರವನ್ನು ನೋಡಬೇಕಾಗಿದೆ. ನಮಗೆಅರಿವಿಲ್ಲದಂತೆಯೇ ಸಂಸದೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಾ ಬರುತ್ತಿರುವ ಮತ್ತು ರಾಜಕೀಯ ಪಕ್ಷಗಳು ಶರಣಾಗಿರುವ ಸಂವಿಧಾನೇತರ ಶಕ್ತಿಗಳ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ.
ಸಂವಿಧಾನೇತರ ಶಕ್ತಿಗಳ ಬಗ್ಗೆ ಮಾತನಾಡುವಾಗ ಎಲ್ಲರೂ ತೆರೆಯ ಮುಂದಿನ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ನಿಜಕ್ಕೂ ಹಾನಿ ಉಂಟು ಮಾಡುತ್ತಿರುವುದು ತೆರೆಯ ಹಿಂದಿನ ಸಂವಿಧಾನೇತರ ಶಕ್ತಿಗಳು.
ದೇಶದ ಪ್ರಜಾಪ್ರಭುತ್ವದಲ್ಲಿ ಇವುಗಳ ಪ್ರವೇಶವಾಗಿದ್ದು ಎನ್‌ಡಿಎ ಕಾಲದಲ್ಲಿ. ಅದನ್ನೇ ಇನ್ನೊಂದು ರೀತಿಯಲ್ಲಿ ಈಗ ಮುಂದುವರಿಸಿಕೊಂಡು ಹೋಗುತ್ತಿರುವುದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ.
ಸಂವಿಧಾನೇತರ ಶಕ್ತಿಯ ಕಾಣದ ಕೈಗಳ ಪ್ರಭಾವ ಮೊದಲ ಬಾರಿ ದೇಶದ ಅನುಭವಕ್ಕೆ ಬಂದದ್ದು ಅಟಲಬಿಹಾರಿ ವಾಜಪೇಯಿ ಮೊದಲ ಬಾರಿ ಸಂಪುಟ ರಚನೆಗೆ ಸಿದ್ಧತೆ ನಡೆಸುತ್ತಿದ್ದಾಗ. ಜಸ್ವಂತ್‌ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಬೇಕೆಂದು ಹೊರಟಾಗ `ಕಾಣದ ಕೈ~ ಅವರ ಕಾಲು ಹಿಡಿದು ಎಳೆದಿತ್ತು.

ಈ `ಕಾಣದ ಕೈ~ಗಳು ಯಾರದ್ದೆಂದು ಈ ವರೆಗೆ ಯಾರೂ ಒಪ್ಪಿಕೊಳ್ಳದೆ ಇದ್ದರೂ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘದ್ದೆಂದು ಎಲ್ಲರಿಗೂ ಗೊತ್ತಿದೆ. ಆ ದಿನದಿಂದ ಪ್ರಾರಂಭಗೊಂಡ ಆ `ಕಾಣದ ಕೈ~ಗಳ ಪ್ರಭಾವ ಎನ್‌ಡಿಎ ಸರ್ಕಾರದ ಆರು ವರ್ಷಗಳ ಅವಧಿಯುದ್ದಕ್ಕೂ ಕಾಣಿಸಿಕೊಂಡಿತು.

ಪ್ರತಿ ಬಾರಿ ಸಚಿವ ಸಂಪುಟ ರಚನೆಗೆ ಮೊದಲು ಬಿಜೆಪಿಯ ಹಿರಿಯ ನಾಯಕರು ನಾಗಪುರದಲ್ಲಿರುವ ಆರ್‌ಎಸ್‌ಎಸ್ ಹಿರಿಯರೊಂದಿಗೆ ಸಮಾಲೋಚನೆ ನಡೆಸಬೇಕಾಗಿತ್ತು, ಇಲ್ಲವೇ, ದೆಹಲಿಯ ಜಂಡೇಲಾದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಬೇಕಾಗಿತ್ತು.
ಬಿಜೆಪಿ ಪಾಲಿಗೆ ಋಣ ಪರಿಹಾರ ಅನಿವಾರ‌್ಯವಾಗಿತ್ತು. ಅದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದದ್ದು ಸ್ವಂತ ಬಲದಿಂದ ಅಲ್ಲ, ಸಂಘ ಪರಿವಾರದ ಬೆಂಬಲದಿಂದ ಎಂಬುದು ವಿರೋಧಪಕ್ಷಗಳ ಆರೋಪವಷ್ಟೇ ಅಲ್ಲ, ಬಿಜೆಪಿ ಕೂಡಾ ಆಂತರ್ಯದಲ್ಲಿ ಹಾಗೆಯೇ ತಿಳಿದುಕೊಂಡಿತ್ತು.
ಯಾಕೆಂದರೆ ಬಿಜೆಪಿಯನ್ನು ದೆಹಲಿಯ ಸಿಂಹಾಸನದಲ್ಲಿ ಕರೆದೊಯ್ದು ಕೂರಿಸಿದ್ದು ರಾಮಜನ್ಮಭೂಮಿ ಚಳವಳಿ. ಅದು ಮೂಲತಃ ಬಿಜೆಪಿಯ ಅಜೆಂಡಾ ಆಗಿರಲಿಲ್ಲ. 80ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾರಂಭಿಸಿದ್ದ ರಾಮಜನ್ಮಭೂಮಿ ಚಳವಳಿಗೆ ಬಿಜೆಪಿ ಅಧಿಕೃತವಾಗಿ ಪ್ರವೇಶಿಸಿದ್ದು 1989ರಲ್ಲಿ,
ಪಾಲಂಪುರದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ‌್ಯಕಾರಿ ಮಂಡಳಿ ಸಭೆಯಲ್ಲಿ ಕೈಗೊಂಡ ಗೊತ್ತುವಳಿ ಮೂಲಕ. ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ,  ಸಂವಿಧಾನದ 370ನೇ ಪರಿಚ್ಛೇದದ ರದ್ದತಿ..ಇವೆಲ್ಲವೂ ಮೂಲತಃ ಸಂಘ ಪರಿವಾರದ ಬೇಡಿಕೆಗಳೇ ಹೊರತು ಬಿಜೆಪಿಯವಲ್ಲ.
ಈ ಬೇಡಿಕೆಗಳನ್ನೆತ್ತಿಕೊಂಡು ರಾಜಕೀಯ ಹೋರಾಟ ನಡೆಸಿದ ಕಾರಣದಿಂದಾಗಿಯೇ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಸಂಘ ಪರಿವಾರ ಬಲವಾಗಿ ನಂಬಿದೆ. ಆ ನಂಬಿಕೆಯ ಬಲದಿಂದಲೇ ಹೆಜ್ಜೆ ಹೆಜ್ಜೆಗೂ ಎನ್‌ಡಿಎ ಸರ್ಕಾರವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಂಘ ಪರಿವಾರ ಪ್ರಯತ್ನ ನಡೆಸಿದ್ದು.
ಆರು ವರ್ಷಗಳ ವಾಜಪೇಯಿ ಅಧಿಕಾರವಧಿ ಪಕ್ಷ ಮತ್ತು ಸಂಘದ ನಡುವಿನ ನಿತ್ಯ ಸಂಘರ್ಷದ ಕಾಲವೂ ಆಗಿತ್ತು. ಆದರೆ ವಾಜಪೇಯಿ ಅವರ ನಾಯಕತ್ವಕ್ಕೆ ಇದ್ದ ಪ್ರಭಾವಳಿಯಿಂದಾಗಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಲು ಸಂಘಕ್ಕೆ ಸಾಧ್ಯವಾಗಿರಲಿಲ್ಲ.
ಈ ಹತಾಶೆಯಿಂದಲೇ ವಾಜಪೇಯಿ ಮತ್ತು ಅಡ್ವಾಣಿಯವರು ನಿವೃತ್ತಿಯಾಗಬೇಕೆಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಆರ್‌ಎಸ್‌ಎಸ್ ಸರಸಂಘ ಚಾಲಕರು ಅವಮಾನಿಸಿದ್ದು. 2004ರಲ್ಲಿ ಬಿಜೆಪಿ ಸ್ವಂತಬಲದಿಂದ  `ಅಭಿವೃದ್ಧಿ~ಯ ಅಜೆಂಡಾದ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಲು ಪ್ರಯತ್ನಿಸಿದ್ದು ನಿಜ. 
ಪ್ರಮೋದ್ ಮಹಾಜನ್ ಅವರು ಈ ಕಾರ‌್ಯತಂತ್ರವನ್ನು ರೂಪಿಸಿದ್ದರು. ಗುಜರಾತ್ ಯಶಸ್ಸಿನ ಆಕರ್ಷಣೆಗೆ ಬಲಿಯಾಗದೆ ವಾಜಪೇಯಿ ಅವರ ಸಾಧನೆಯನ್ನೇ ಮುಂದಿಟ್ಟುಕೊಂಡು `ಪ್ರಕಾಶಿಸುತ್ತಿರುವ ಭಾರತ~ದ ಮೂಲಕ ಬಿಜೆಪಿ ಚುನಾವಣೆ ಎದುರಿಸಿತ್ತು.
ಆಗ ಅನುಭವಿಸಿದ ಸೋಲು ಪಕ್ಷದೊಳಗಿರುವ ಸಂಘಪ್ರೇಮಿಗಳ ಕೈಗಳನ್ನು ಮತ್ತೆ ಬಲಪಡಿಸಿತ್ತು. ಅದರ ನಂತರ ಗೊಂದಲದಲ್ಲಿದ್ದ ಬಿಜೆಪಿ, ಈಗ ಮತ್ತೆ ತಮ್ಮ ಹಳೆಯ ದಿನಗಳಿಗೆ ಮರಳುವ ಪ್ರಯತ್ನ ಮಾಡುತ್ತಿದೆ.
ಈ ಬಾರಿ ಇದಕ್ಕೆ ಪ್ರೇರಣೆಯನ್ನು ಬಿಜೆಪಿ ಕರ್ನಾಟಕದಿಂದಲೇ ಪಡೆದಿರಬಹುದು. ಭ್ರಷ್ಟಾಚಾರದ ಹಗರಣಗಳ ಆರೋಪಕ್ಕೆ ಸಿಕ್ಕಿ ತತ್ತರಿಸಿಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆತ್ಮರಕ್ಷಣೆಗಾಗಿ ಬಳಸುತ್ತಿರುವುದು ಜಾತಿಮಠಗಳೆಂಬ ಸಂವಿಧಾನೇತರ ಶಕ್ತಿಗಳ ಬೆಂಬಲದ ಅಸ್ತ್ರವನ್ನೇ ಅಲ್ಲವೇ? ಸರ್ಕಾರ ಬೇಕಾಬಿಟ್ಟಿಯಾಗಿ ಹಂಚಿರುವ ಹಣವನ್ನು ಪಡೆದ ಮಠಗಳು ಋಣ ತೀರಿಸಲೆಂಬಂತೆ ಮುಖ್ಯಮಂತ್ರಿಗಳ ರಕ್ಷಣೆಗೆ ನಿಂತಿವೆ.
`ಅವರನ್ನು ಮುಟ್ಟಿದರೆ ಜೋಕೆ~ ಎಂದು ಬೆದರಿಕೆ ಹಾಕುವ ಮಟ್ಟಕ್ಕೆ ಸ್ವಾಮಿಗಳು ಹೋಗಿದ್ದಾರೆ. ಸಚಿವ ಸಂಪುಟಕ್ಕೆ ಸೇರ್ಪಡೆಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆವರೆಗೆ ಸರ್ಕಾರ ಕೈಗೊಳ್ಳಬೇಕಾಗಿರುವ ನಿರ್ಧಾರಗಳು ಜಾತಿ ಮಠಗಳ ಅಂತರಂಗದ ಚಾವಡಿಗಳಲ್ಲಿ ನಡೆಯುತ್ತಿರುವುದನ್ನು ಸರ್ಕಾರದ ಮೇಲಿನ ಸಂವಿಧಾನೇತರ ಶಕ್ತಿಗಳ ನಿಯಂತ್ರಣವೆನ್ನದೆ ಬೇರೆ ಏನೆಂದು ಕರೆಯಲು ಸಾಧ್ಯ?
ಯುಪಿಎ ಸರ್ಕಾರದೊಳಗಿನ ಈಗಿನ ಸ್ಥಿತಿ ವಾಜಪೇಯಿ ಕಾಲದ ಬಿಜೆಪಿಗಿಂತ ಭಿನ್ನವಾಗಿ ಇಲ್ಲ. ವಂಶಪರಂಪರೆಯ ರಾಜಕೀಯ ಕಾಂಗ್ರೆಸ್ ಪಕ್ಷದ ಮೇಲಿರುವ ಹಳೆಯ ಆರೋಪ.

ಆದರೆ ಆ ಪಕ್ಷದ ನಾಯಕತ್ವ ವಹಿಸುತ್ತಾ ಬಂದ ನೆಹರೂ ಕುಟುಂಬದ ಸದಸ್ಯರು ಚುನಾವಣೆಗಳನ್ನು ಎದುರಿಸಿ ಸೋಲು-ಗೆಲುವುಗಳನ್ನು ಅನುಭವಿಸಿದವರೇ ಆಗಿರುವ ಕಾರಣ ಅವರ ರಾಜಕೀಯ ಜೀವನ ಪ್ರಜಾಪ್ರಭುತ್ವದ ಚೌಕಟ್ಟಿನೊಳಗಡೆಯೇ ಇತ್ತು. ಆದ್ದರಿಂದ ಕಾಂಗ್ರೆಸ್ ಮೇಲಿನ ನೆಹರೂ ಕುಟುಂಬದ ನಿಯಂತ್ರಣವನ್ನು ಸಂವಿಧಾನೇತರ ಶಕ್ತಿಯ ನಿಯಂತ್ರಣ ಎಂದು ವ್ಯಾಖ್ಯಾನ ಮಾಡಲಾಗುವುದಿಲ್ಲ.
ಆದರೆ 2004ರ ಲೋಕಸಭಾ ಚುನಾವಣೆಯ ನಂತರ ಈ ಚಿತ್ರ ಬದಲಾಗಿ ಹೋಗಿದೆ. ಸೋನಿಯಾಗಾಂಧಿ ನೇತೃತ್ವದಲ್ಲಿಯೇ ಪಕ್ಷ ಚುನಾವಣೆ ಎದುರಿಸಿದರೂ ಪ್ರಧಾನಿಯಾಗಿದ್ದು ಮಾತ್ರ ಮನಮೋಹನ್‌ಸಿಂಗ್. ಭಾರತದ ರಾಜಕೀಯ ಸಂದರ್ಭದಲ್ಲಿ ಇದೊಂದು ಹೊಸ ಪ್ರಯೋಗ.
ರಾಜಕೀಯವಾದ ಬಿಕ್ಕಟ್ಟುಗಳಿಗೆ ಸೋನಿಯಾಗಾಂಧಿಯವರೇ ತಲೆಕೊಡುತ್ತಿರುವ ಕಾರಣ ಪ್ರಧಾನಿಯಾದವರು ಆಡಳಿತೇತರ ಜಂಜಾಟಗಳಿಂದ ಮುಕ್ತವಾಗಿ ಆಡಳಿತ ನಡೆಸಲು ಸಾಧ್ಯವಾಗಬಹುದೆಂಬ ನಿರೀಕ್ಷೆ ಇತ್ತು.

ಆಡಳಿತ ಸೂತ್ರ ಕೈಯಲ್ಲಿದ್ದರೂ ರಾಜಕೀಯ ಅಧಿಕಾರ ಇಲ್ಲದ ನಾಯಕ ಎಷ್ಟೇ ಸಮರ್ಥನಾಗಿದ್ದರೂ ಹೇಗೆ ಅಸಹಾಯಕ ಮತ್ತು ನಿಷ್ಪ್ರಯೋಜಕನಾಗುತ್ತಾನೆ ಎನ್ನುವುದಕ್ಕೆ ಮನಮೋಹನ್‌ಸಿಂಗ್ ಸಾಕ್ಷಿ.
ಸೋನಿಯಾ ಗಾಂಧಿಯವರ ಈ ಪಾತ್ರ ನಿರ್ವಹಣೆ ಕೂಡಾ ಸಂವಿಧಾನೇತರ ಶಕ್ತಿಯ ನಿಯಂತ್ರಣ ಅಲ್ಲ ಎಂದು ತಳ್ಳಿಹಾಕಬಹುದು. ಆದರೆ, ಅವರ ಪಾತ್ರ ಅಷ್ಟಕ್ಕೆ ಕೊನೆಗೊಂಡಿಲ್ಲ.
`ಸೂಪರ್ ಕ್ಯಾಬಿನೆಟ್~ ಎಂಬ ಆರೋಪಕ್ಕೊಳಗಾಗಿರುವ `ರಾಷ್ಟ್ರೀಯ ಸಲಹಾ ಮಂಡಳಿ~ಯನ್ನು (ಎನ್‌ಎಸಿ) ಅವರು ಹುಟ್ಟು ಹಾಕಿದ್ದಾರೆ. ಅದಕ್ಕೆ ಅವರೇ ಅಧ್ಯಕ್ಷರು. ಎಂಎನ್‌ಆರ್‌ಇಜಿಪಿ, ಮಾಹಿತಿ ಹಕ್ಕು, ಅರಣ್ಯ ಹಕ್ಕು, ಶಿಕ್ಷಣದ ಹಕ್ಕು, ಭೂ ಸ್ವಾಧೀನ ಮತ್ತು ಪುನರ್ವಸತಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಮೊದಲಾದ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಕಾನೂನಿನ ಕರಡುಗಳನ್ನು ರೂಪಿಸಿದ್ದು ಯುಪಿಎ ಸರ್ಕಾರವಲ್ಲ, ಅದು ಎನ್‌ಎಸಿ.
ಇತ್ತೀಚೆಗೆ ವಿವಾದ ಸೃಷ್ಟಿಸಿರುವ ಕೋಮು ಹಿಂಸೆ ನಿಯಂತ್ರಣ ಮಸೂದೆ ರಚಿಸಿರುವುದು ಎನ್‌ಎಸಿ. ಶಾಸನ ರಚನೆಗಾಗಿಯೇ ಶಾಸಕಾಂಗ ಇರುವಾಗ ಅದಕ್ಕೆ ಪರ‌್ಯಾಯವಾಗಿ ಇಂತಹ ಸಂಸ್ಥೆಯೊಂದನ್ನು ಹುಟ್ಟುಹಾಕಿ ಕಾಂಗ್ರೆಸ್ ಪಕ್ಷದೊಳಗೂ ಸಂವಿಧಾನೇತರ ಸಂಸ್ಥೆಯ ಪ್ರವೇಶಕ್ಕೆ ಸೋನಿಯಾಗಾಂಧಿ ದಾರಿಮಾಡಿಕೊಟ್ಟಿದ್ದಾರೆ.
ಇದರಲ್ಲಿ ಸದಸ್ಯರಾಗಿರುವವರಲ್ಲಿ ಹೆಚ್ಚಿನವರು ಸರ್ಕಾರೇತರ ಸೇವಾ ಸಂಸ್ಥೆಗಳ (ಎನ್‌ಜಿಒ) ಜತೆ ತಮ್ಮನ್ನು ಗುರುತಿಸಿಕೊಂಡವರು. ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಮತ್ತು ಎನ್‌ಎಸಿ ಸದಸ್ಯರ ನಡುವೆ ಹಲವಾರು ಸಾಮ್ಯತೆಗಳಿವೆ.
ಈ ಎರಡೂ ಗುಂಪಿನ ಅನೇಕ ಸದಸ್ಯರು ರಾಜಕಾರಣಿಗಳನ್ನು ದ್ವೇಷಿಸುತ್ತಾರೆ, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಇಷ್ಟಪಡುವುದಿಲ್ಲ, ಆದರೆ ತಮ್ಮ ಮಾತನ್ನು ಚುನಾಯಿತ ಸರ್ಕಾರ ಕೇಳಬೇಕೆಂದು ಬಯಸುತ್ತಾರೆ.
ಭ್ರಷ್ಟತೆ ಮತ್ತು ಅಸಾಮರ್ಥ್ಯಗಳ ಕಾರಣ ಸಹೋದ್ಯೋಗಿಗಳ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿರುವ ಸೋನಿಯಾಗಾಂಧಿ, ಈ `ಜೋಲಾವಾಲಾ~ಗಳ ಮೇಲೆ ಹೆಚ್ಚು ಹೆಚ್ಚು ಅವಲಂಬನೆಗೊಳಗಾದಂತೆ ಕಾಣಿಸುತ್ತಿದೆ.
ಸರ್ಕಾರ ಈಗ ಎದುರಿಸುತ್ತಿರುವ ಬಿಕ್ಕಟ್ಟಿಗೆ ಅಣ್ಣಾಹಜಾರೆ ನೇತೃತ್ವದ ನಾಗರಿಕ ಸಮಿತಿಯ ಸದಸ್ಯರು ಮತ್ತು ಎನ್‌ಎಸಿ ಸದಸ್ಯರ ನಡುವಿನ ವ್ಯಕ್ತಿ ಪ್ರತಿಷ್ಠೆಯ ಸಂಘರ್ಷವೂ ಕಾರಣ.

`ನಾಗರಿಕ ಸಮಿತಿ~ಗಳು ಚುನಾಯಿತ ಸರ್ಕಾರವನ್ನು ಬ್ಲಾಕ್‌ಮೇಲ್ ಮಾಡುತ್ತಿದೆ ಎಂದು ಬೊಬ್ಬಿಡುತ್ತಿರುವ ಕಾಂಗ್ರೆಸ್ ಪಕ್ಷ ತನ್ನದೇ ಸರ್ಕಾರದ ತಲೆಮೇಲೆ `ನಾಗರಿಕ ಸಮಿತಿ~ಯ ಇನ್ನೊಂದು ರೂಪವಾದ ಎನ್‌ಎಸಿಯನ್ನು ಕೂರಿಸಿರುವುದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ? ಇದರಿಂದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುವುದಿಲ್ಲವೇ?
ಈ ರೀತಿ ಕಾಂಗ್ರೆಸ್ ಪಕ್ಷ ಬಿಜೆಪಿ ಹಿಂದೆ ಮಾಡಿದ್ದ ತಪ್ಪನ್ನೇ ಮಾಡುತ್ತಿದ್ದರೆ, ಅನುಭವದಿಂದ ಪಾಠ ಕಲಿಯದ ಬಿಜೆಪಿ ಹಳೆಯ ತಪ್ಪನ್ನೇ ಪುನರಾವರ್ತಿಸಲು ಹೊರಟಿದೆ.
ಜವಾಬ್ದಾರಿಯುತ ವಿರೋಧಪಕ್ಷವಾಗಿ ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಳುವ ಪಕ್ಷದ ಜತೆ ಮುಖಾಮುಖಿ ರಾಜಕೀಯ ಹೋರಾಟಕ್ಕಿಳಿಯಬೇಕಾದ ಬಿಜೆಪಿ ಬಾಬಾ ರಾಮ್‌ದೇವ್ ಅವರಂತಹವರ ಬೆನ್ನಹಿಂದೆ ನಿಂತು ರಾಜಕೀಯ ಮಾಡುತ್ತಿದೆ.
ಜನತೆಯ ಬೆಂಬಲದ ಮೂಲಕ ರಾಜಕೀಯ ಶಕ್ತಿಯನ್ನು ಗಳಿಸಬೇಕಾದ ಈ ರಾಜಕೀಯ ಪಕ್ಷ, ಕುಸಿಯುತ್ತಿರುವ ಜನಪ್ರಿಯತೆಯಿಂದಾಗಿ ಹತಾಶರಾಗಿರುವ ಒಬ್ಬ ಯೋಗಗುರುವಿನ ಮೂಲಕ ರಾಜಕೀಯ ಮರುಜನ್ಮ ಪಡೆಯುವ ವ್ಯರ್ಥ ಪ್ರಯತ್ನದಲ್ಲಿದೆ.
ತಮ್ಮ ಪಕ್ಷದ ನಾಯಕರಾದ ಎಲ್.ಕೆ.ಅಡ್ವಾಣಿ ಅವರು ರಾಮ್‌ದೇವ್‌ಗಿಂತಲೂ ಮೊದಲು ಕಪ್ಪುಹಣದ ವಿಷಯವನ್ನು ಸಾರ್ವಜನಿಕ ಚರ್ಚೆಯ ಅಂಗಳಕ್ಕೆ ಎಳೆದು ತಂದವರು ಎನ್ನುವುದನ್ನು ಬಿಜೆಪಿ ಮರೆತುಬಿಟ್ಟಂತೆ ಕಾಣುತ್ತಿದೆ.
ಸಮರ್ಥ ನಾಯಕರಿಲ್ಲದೆ ದುರ್ಬಲವಾಗಿರುವ ವಿರೋಧ ಪಕ್ಷವಾದ ಬಿಜೆಪಿ ಸಂವಿಧಾನೇತರ ಶಕ್ತಿಗಳಾದ ಸಂಘ ಪರಿವಾರ ಮತ್ತು ಸಾಧು-ಸಂತರಿಗೆ ಶರಣಾಗಿರುವುದು ಭವಿಷ್ಯದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಇನ್ನಷ್ಟು ದುರ್ಬಲಗೊಳ್ಳಲಿದೆ ಎನ್ನುವುದಕ್ಕೆ ಸೂಚನೆ. ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯಬೇಕಾಗಿರುವುದು ಈ ಕಾರಣಕ್ಕಾಗಿ.

Monday, June 6, 2011

ರಾಜಕೀಯ ಮೈದಾನದಲ್ಲಿ ಎಡವಿಬಿದ್ದ ಯೋಗಗುರು

ಯೋಗಗುರು ಬಾಬಾ ರಾಮ್‌ದೇವ್ ಅವರ ಜತೆ ಉಪವಾಸದಲ್ಲಿ ಪಾಲ್ಗೊಳ್ಳಲು ಹೋಗಿದ್ದ ಸಾವಿರಾರು ಸಂಖ್ಯೆಯ ಬೆಂಬಲಿಗರು ಎರಡು ಬಗೆಯ ನೋವಿನಿಂದ ನರಳುತ್ತಿರಬಹುದು.
ಒಂದು ಯುಪಿಎ ಸರ್ಕಾರ ನಡೆಸಿದ್ದ ಪೊಲೀಸ್ ಕಾರ‌್ಯಾಚರಣೆಯಿಂದಾಗಿ ದೇಹದ ಮೇಲೆ ಆಗಿರುವ ಗಾಯದ ನೋವು. ಇನ್ನೊಂದು ತಾವು ದೇವರೆಂದೇ ಬಗೆದಿರುವ ಯೋಗಗುರು, ತಾನು ಉಪವಾಸ ಕೈಬಿಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗುಟ್ಟಾಗಿ ಪತ್ರ ಕೊಡುವ ಮೂಲಕ ಮಾಡಿದ ವಿಶ್ವಾಸಘಾತದಿಂದ ಮನಸ್ಸಿಗಾದ ನೋವು.
ದೇಹದ ಮೇಲೆ ಆಗಿರುವ ನೋವಿನಷ್ಟು ಸುಲಭದಲ್ಲಿ ಮನಸ್ಸಿನ ಮೇಲಿನ ಗಾಯ ಗುಣವಾಗುವುದಿಲ್ಲ ಎಂದು ಹೇಳುತ್ತಾರೆ. ಬಾಬಾ ತನ್ನ ಯಾವ ಯೋಗಶಕ್ತಿಯ ಮೂಲಕ ಈ ನೋವನ್ನು ಶಮನಮಾಡಿ ಬೆಂಬಲಿಗರನ್ನು ಒಲಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೋಡಲು ಕೆಲವು ದಿನ ಕಾಯಬೇಕು.
ಯಾರದು ದೊಡ್ಡ ತಪ್ಪು ಎಂದು ತೀರ್ಮಾನಿಸುವುದು ಸ್ವಲ್ಪ ಕಷ್ಟ. ಆದರೆ ಒಬ್ಬ ಆರೋಪಿಯಿಂದ ಪ್ರಾಮಾಣಿಕತೆಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಾಗದು. ಆದರೆ ಆತನ ವಿರುದ್ಧ ನಿಂತವರು ಮಾತ್ರ ಅಪ್ರಾಮಾಣಿಕರಾಗಬಾರದು.

ಇಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವುದು ಕೇಂದ್ರದ ಯುಪಿಎ ಸರ್ಕಾರ. ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ಬಗೆಯ ಹೀನಕೃತ್ಯ ಎಸಗಲು ಹಿಂಜರಿಯದಿರುವುದು ಆರೋಪಿಯ ಸಹಜ ಸ್ವಭಾವ.
ಆದ್ದರಿಂದ ಬಾಬಾ ರಾಮ್‌ದೇವ್ ಅವರ ಆಮರಣ ಉಪವಾಸ ಸತ್ಯಾಗ್ರಹವನ್ನು ಭಂಗಗೊಳಿಸಲು ಯುಪಿಎ ಸರ್ಕಾರ ಸಂಚು ಮಾಡಿದ್ದರಲ್ಲಿ ಆಶ್ಚರ‌್ಯವೇನಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿ ಆತ್ಮವಿಶ್ವಾಸವನ್ನು ಕಳೆದುಕೊಂಡು ಹತಾಶೆಗೀಡಾದ ಸರ್ಕಾರ ಮಾತ್ರ ಇಂತಹ ಬರ್ಬರಕೃತ್ಯ ನಡೆಸಲು ಸಾಧ್ಯ.
ಇತ್ತೀಚೆಗೆ ಅಣ್ಣಾ ಹಜಾರೆ ಅವರ ಉಪವಾಸವನ್ನು ತಡೆಯಲು ಇದೇ ಸರ್ಕಾರ ನಡೆಸಿದ್ದ ಕರಾಮತ್ತುಗಳೇನು, ಲೋಕಪಾಲ ಮಸೂದೆ ರಚನೆಯ ಪ್ರಯತ್ನದ ಹಾದಿ ತಪ್ಪಿಸಲು ಅದು ಏನು ಮಾಡುತ್ತಿದೆ ಎನ್ನುವುದು ದೇಶದ ಜನರಿಗೆಲ್ಲ ಈಗ ತಿಳಿದಿದೆ.

ಇವೆಲ್ಲವೂ ಗೊತ್ತಿದ್ದೂ ಇಂತಹ ಸರ್ಕಾರದ ಜತೆ ವ್ಯವಹರಿಸುವಾಗ ಸ್ವಲ್ಪ ಎಚ್ಚರದಿಂದ ಇರುವುದು ಬೇಡವೇ? ಮಾನಸಿಕ ಒತ್ತಡದಿಂದ ಪಾರಾಗಲು ಯೋಗ ಮಾಡಿ ಎಂದು ಉಪದೇಶ ನೀಡುವ ಯೋಗಗುರು `ನಾನು ಒತ್ತಡಕ್ಕೆ ಸಿಕ್ಕಿ ಆ ಪತ್ರ ಬರೆದುಕೊಟ್ಟೆ~ ಎಂದು ಹೇಳಿದರೆ, ಅವರು ಹೇಳಿದ್ದನ್ನೆಲ್ಲ ನಂಬಿರುವ ಅನುಯಾಯಿಗಳು ಏನು ಮಾಡಬೇಕು?
ಇಂತಹ ವಿವಾದಗಳು ಬಾಬಾ ರಾಮ್‌ದೇವ್ ಪಾಲಿಗೆ ಹೊಸದೇನಲ್ಲ, ಅವರ ಜನಪ್ರಿಯತೆಯ ಸೌಧ ದಿನದಿಂದ ದಿನಕ್ಕೆ ಎತ್ತರಕ್ಕೆ ಏರುತ್ತಿರುವ ಜತೆಯಲ್ಲಿಯೇ ವಿವಾದಗಳ ಹುತ್ತ ಕೂಡಾ ಪಕ್ಕದಲ್ಲಿ ಬೆಳೆಯುತ್ತಿದೆ.
ಕಪ್ಪುಹಣದ ವಿರುದ್ಧ ಯೋಗಗುರು ಬಾಬಾ ರಾಮ್‌ದೇವ್ ಎತ್ತಿರುವ ದನಿ ಸರಿಯಾಗಿಯೇ ಇದೆ. ಕಳೆದ 8-9 ತಿಂಗಳುಗಳಲ್ಲಿ ದೇಶಾದ್ಯಂತ ಪ್ರವಾಸ ಮಾಡಿ ಕಪ್ಪುಹಣದ ವಿರುದ್ಧ ಜನರನ್ನು ಸಂಘಟಿಸಿರುವ ಅವರ ಶ್ರಮ ಕೂಡಾ ಮೆಚ್ಚುವಂತಹದ್ದೇ ಆಗಿದೆ.
ಇವೆಲ್ಲವನ್ನು ಸುಮ್ಮನೆ ನೋಡುತ್ತಾ ಕಾಲಹರಣ ಮಾಡುತ್ತಿದ್ದ ಕೇಂದ್ರ ಸರ್ಕಾರವನ್ನು ಮಣಿಸಲು ಅವರು ಕೈಗೊಂಡಿರುವ ಆಮರಣ ಉಪವಾಸ ಕೂಡಾ ದೇಶಕ್ಕೆ ಹೊಸತೇನಲ್ಲ. ಅದರ ಬಲದಿಂದಲೇ ಅಲ್ಲವೇ ನಾವು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ಪಡೆದು ಸ್ವತಂತ್ರರಾಗಿದ್ದು.
ಇಂತಹ ಶಕ್ತಿಶಾಲಿ ಅಸ್ತ್ರವನ್ನು ಬಾಬಾ ರಾಮ್‌ದೇವ್ ಪ್ರಯೋಗಿಸಿದ್ದರಲ್ಲಿಯೂ ತಪ್ಪೇನಿಲ್ಲ. ಇವಿಷ್ಟೇ ಬಾಬಾ ರಾಮ್‌ದೇವ್ ಆಗಿದ್ದರೆ ಇಡೀ ದೇಶ ಅವರ ಕಾಲಿಗೆ ಬೀಳಬೇಕು. ಆದರೆ `ಬಾಬಾ ರಾಮ್‌ದೇವ್ ಅಂದರೆ ಇಷ್ಟೇ ಅಲ್ಲ~ ಎನ್ನುವ ಗುಮಾನಿಯೇ ಅವರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ.
ಮೊದಲನೆಯದು ಅವರ ರಾಜಕೀಯ ನಿಲುವು. ಕಳೆದ ವರ್ಷ ಬಾಬಾ ರಾಮ್‌ದೇವ್ ಅವರು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಉದ್ದೇಶವನ್ನು ಬಹಿರಂಗಪಡಿಸಿದ್ದರು. ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಅವರು ಘೋಷಿಸಿದ್ದರು. ಇದರಲ್ಲಿಯೂ ತಪ್ಪೇನಿಲ್ಲ. ಅವರ ಇತ್ತೀಚಿನ ಯೋಗ ಶಿಬಿರಗಳಲ್ಲಿ ಯೋಗಕ್ಕಿಂತ ಹೆಚ್ಚು ದೇಶದ ರಾಜಕೀಯದ ಬಗ್ಗೆಯೇ ಅವರು ಹೆಚ್ಚು ಚರ್ಚಿಸುತ್ತಿದ್ದರು.
ಎಲ್ಲ ಪಕ್ಷಗಳು ಭ್ರಷ್ಟಗೊಂಡಿರುವ ವರ್ತಮಾನದ ಸ್ಥಿತಿಯಲ್ಲಿ ಹೊಸ ಬಗೆಯ ರಾಜಕೀಯದ ಅಗತ್ಯ ಇದ್ದ ಕಾರಣ ಆ ಚರ್ಚೆ ಕೂಡಾ ಪ್ರಸ್ತುತವಾಗಿತ್ತು. ಈ ಎಲ್ಲ ಪ್ರಯತ್ನಗಳು ರಾಜಕೀಯ ಪಕ್ಷವೊಂದರ ಸ್ಥಾಪನೆಯಲ್ಲಿ ತಾರ್ಕಿಕ ಅಂತ್ಯ ಕಾಣಬಹುದೆಂದು ಅವರ ಲಕ್ಷಾಂತರ ಅನುಯಾಯಿಗಳು ಮತ್ತು ಅಭಿಮಾನಿಗಳು ನಿರೀಕ್ಷಿಸಿದ್ದರು.

ಆದರೆ ಇದ್ದಕ್ಕಿದ್ದಂತೆ ಒಂದು ದಿನ `ನಾನು ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಿಲ್ಲ, ಯುವಜನರ ಸಂಘಟನೆ ಕಟ್ಟುತ್ತೇನೆ~ ಎಂದು ಘೋಷಿಸಿದರು. ಕೊನೆಗೆ ಎರಡನ್ನೂ ಕೈಬಿಟ್ಟು ಉಪವಾಸ ಸತ್ಯಾಗ್ರಹ ನಡೆಸಲು ಹೊರಟರು. ಈ ಬದಲಾದ ನಿಲುವಿನ ಹಿಂದಿನ ಲೆಕ್ಕಾಚಾರ ಏನು? ಹೊಸಪಕ್ಷದ ಬದಲಿಗೆ ಯಾವುದಾದರೂ ಹಳೆಯ ಪಕ್ಷವನ್ನು ಬೆಂಬಲಿಸುವ ಯೋಚನೆಯೇನಾದರೂ ಅವರಲ್ಲಿದೆಯೇ?
ಎರಡನೆಯದು ಅವರು ಆರಿಸಿಕೊಂಡ ಉಪವಾಸ ಸತ್ಯಾಗ್ರಹದ ಮಾರ್ಗ. ಅಶ್ಚರ‌್ಯವೆಂದರೆ ಸಮಾಜ ಸೇವಕ ಅಣ್ಣಾ ಹಜಾರೆ ಅವರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವ ವರೆಗೆ ಬಾಬಾ ರಾಮ್‌ದೇವ್ ಎಂದೂ ಉಪವಾಸ ಸತ್ಯಾಗ್ರಹದ ಬಗ್ಗೆ ಮಾತನಾಡಿರಲಿಲ್ಲ.
ಬಹುಶಃ ಅಂತಹದ್ದೊಂದು ಉದ್ದೇಶ ಅವರಲ್ಲಿತ್ತು ಎಂದು ಗೊತ್ತಿದ್ದರೆ ಅಣ್ಣಾ ಹಜಾರೆ ಅವರು ಪ್ರತ್ಯೇಕವಾಗಿ ಉಪವಾಸ ಕೂರುತ್ತಿರಲಿಲ್ಲವೇನೋ? ಇಬ್ಬರೂ ಕೂಡಿ ಉಪವಾಸ ಕೂತಿದ್ದರೆ ಭ್ರಷ್ಟಾಚಾರದ ವಿರುದ್ಧ ಸಿಡಿದು ನಿಂತಿರುವ ಜನ ಎರಡು ಶಿಬಿರಗಳಲ್ಲಿ ಹಂಚಿಹೋಗುತ್ತಿರಲಿಲ್ಲವೇನೋ? ಬಾಬಾ ರಾಮ್‌ದೇವ್ ಅವರ ಕೆಲವು ಬೇಡಿಕೆಗಳು ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿಯೇ ಬರುವುದರಿಂದ ಅದು ಅಂತಿಮ ರೂಪ ಪಡೆಯುವ ವರೆಗಾದರೂ ಅವರು ಕಾಯಬಹುದಿತ್ತು.

ಆದರೆ ಬಾಬಾ ರಾಮ್‌ದೇವ್ ಅವಸರದಲ್ಲಿದ್ದರು. ಯಾಕೆ? ಮೈತುಂಬಾ ಬಟ್ಟೆ ಧರಿಸಿರುವ ಅಣ್ಣಾಹಜಾರೆ ಎದುರು ಅರೆಬೆತ್ತಲೆಯಾಗಿರುವ ಯೋಗಗುರುವನ್ನು ಕಾಡಿದ ಅಭದ್ರತೆಯಾದರೂ ಯಾವುದು? ಭ್ರಷ್ಟಾಚಾರದ ವಿರುದ್ಧದ ಹೋರಾಟದ ನಾಯಕತ್ವ ಕೈತಪ್ಪಿ ಹೋಗಬಹುದೆಂಬ ಹತಾಶೆಯಿಂದ ಅವರು ಪೈಪೋಟಿಗಿಳಿದರೇ?
ಮೂರನೆಯದು ಅವರ ಸ್ನೇಹಿತರ ಬಳಗ. ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಆತನ ಸ್ನೇಹಿತರ ಬಗ್ಗೆ ತಿಳಿದುಕೊಂಡರೆ ಸಾಕು ಎನ್ನುತ್ತಾರೆ. ಅಣ್ಣಾ ಹಜಾರೆ ಅವರ ಸ್ನೇಹಿತರು ಯಾರು ಎನ್ನುವುದು ಇಡೀ ದೇಶಕ್ಕೆ ಗೊತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿರಿಯ ವಕೀಲರಾದ ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲಾ, ಕಿರಣ್‌ಬೇಡಿ, ಸ್ವಾಮಿ ಅಗ್ನಿವೇಶ್...ಇವರೆಲ್ಲ ದೇಶದ ಜನಕ್ಕೆ ಪರಿಚಿತರು.
ಆದರೆ ಬಾಬಾ ರಾಮ್‌ದೇವ್ ಸ್ನೇಹಿತರು ಯಾರು? ಅವರ‌್ಯಾಕೆ ಬಹಿರಂಗವಾಗಿ ಜತೆಯಲ್ಲಿ ಕಾಣಿಸುತ್ತಿಲ್ಲ. ಬಿಜೆಪಿಯ ಮಾಜಿ ಐಡಲಾಗ್ ಗೋವಿಂದಾಚಾರ್ಯ ಇಲ್ಲವೇ ಸಂಘ ಪರಿವಾರದ ಹಿತಚಿಂತಕ ಎಸ್.ಗುರುಮೂರ್ತಿ ಅವರು ಉಪವಾಸದ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಪ್ರಾಂತೀಯ ಸಂಚಾಲಕರಿಗೆ ಪತ್ರಬರೆದು ಬಾಬಾ ರಾಮ್‌ದೇವ್ ಉಪವಾಸದಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿರುವ ಆರ್‌ಎಸ್‌ಎಸ್ ಸರಸಂಘಚಾಲಕರೂ ಕೂಡಾ ರಾಮ್‌ದೇವ್ ಅವರನ್ನು ಬೆಂಬಲಿಸಿ ಬೀದಿಗೆ ಇಳಿದಿಲ್ಲ. ಆದರೆ ಇದ್ದಕ್ಕಿದ್ದಂತೆಯೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿ ಸಾಧ್ವಿ ರಿತಂಬರ ಉಪವಾಸದ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಅಣ್ಣಾಹಜಾರೆ ಅವರ ಕೆಲವು ಸಂಗಾತಿಗಳೂ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರಬಹುದು. ಆದರೆ ಅವರೆಲ್ಲ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರು, ಜನರ ಕಣ್ಣ ಮುಂದೆ ಇರುವವರು. ಅಣ್ಣಾ ಹಜಾರೆ ಅವರಿಗೆ ತನ್ನ ಸಂಗಡಿಗರ ಆಯ್ಕೆಯಲ್ಲಿ ಸ್ಪಷ್ಟತೆ ಇತ್ತು. ತಪ್ಪಾಗಿದ್ದನ್ನು ತಿದ್ದಿಕೊಳ್ಳುವ ವಿನಯವಂತಿಕೆಯೂ ಇತ್ತು (ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಬೆಂಬಲಿಸಿ ಮಾತನಾಡಿದ ಅವರು ಅಲ್ಲಿ ಹೋಗಿ ಕಣ್ಣಾರೆ ಕಂಡ ನಂತರ ನಿಲುವು ಬದಲಾಯಿಸಿದರು).

ಅವರು ಯಾವ ರಾಜಕಾರಣಿಯನ್ನೂ ಹತ್ತಿರ ಬಿಟ್ಟುಕೊಳ್ಳಲಿಲ್ಲ. ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರೇ ನಿರಾಶೆಯಿಂದ ಹಿಂದಿರುಗಿ ಹೋಗಬೇಕಾಯಿತು. ಆದರೆ ಬಾಬಾ ರಾಮ್‌ದೇವ್ ಅವರಿಗೆ ಒಂದೋ ತಮ್ಮ ಸಂಗಾತಿಗಳ ಆಯ್ಕೆ ಬಗ್ಗೆ ಸ್ಪಷ್ಟತೆ ಇಲ್ಲ, ಇಲ್ಲವೇ ಅವರಲ್ಲೊಂದು ರಹಸ್ಯ ಅಜೆಂಡಾ ಇದೆ. ಹೀಗೆ ಅಲ್ಲದೆ ಇದ್ದರೆ ಅವರು ಯಾಕೆ ತನ್ನನ್ನು ಬೆಂಬಲಿಸುತ್ತಿರುವ ಗಣ್ಯರನ್ನು ಬೆನ್ನಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದಾರೆ?

ನಾಲ್ಕನೆಯದು ಸಂಘಪರಿವಾರದ ಜತೆಗಿನ ಸಂಬಂಧ. ಆರ್‌ಎಸ್‌ಎಸ್, ವಿಶ್ವಹಿಂದು ಪರಿಷತ್, ಬಿಜೆಪಿ ಇಲ್ಲವೇ ಸಂಘಪರಿವಾರಕ್ಕೆ ಸೇರಿರುವ ಇನ್ನಾವುದೋ ಸಂಘಟನೆಯ ಜತೆ  ಗುರುತಿಸಿಕೊಳ್ಳುವುದು ತಪ್ಪೇನಲ್ಲ. ಇವುಗಳಲ್ಲಿ ಯಾವುದೂ ದೇಶದ್ರೋಹದ ಆರೋಪವನ್ನು ಎದುರಿಸುತ್ತಿಲ್ಲ. ಇವುಗಳು ಭಯೋತ್ಪಾದಕ ಸಂಘಟನೆಗಳೂ ಅಲ್ಲ.
ಆದರೆ ಒಂದು ಸಂಘಟನೆಯ ಜತೆ ಗುರುತಿಸಿಕೊಂಡ ನಂತರ ಅದರ ಸಿದ್ದಾಂತದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಆರ್‌ಎಸ್‌ಎಸ್ ಸಿದ್ಧಾಂತವನ್ನು ಬಾಬಾ ರಾಮ್‌ದೇವ್ ಒಪ್ಪುವುದಾಗಿದ್ದರೆ ಬಹಿರಂಗವಾಗಿ ಅದನ್ನು ಘೋಷಿಸಬೇಕಿತ್ತು.
ಆರ್‌ಎಸ್‌ಎಸ್ ತನ್ನ ಕಾರ‌್ಯಕ್ರಮಗಳಲ್ಲಿ ಒಬ್ಬ ಮೌಲ್ವಿಯನ್ನೋ, ಪಾದ್ರಿಯನ್ನೋ ವೇದಿಕೆಯಲ್ಲಿ ತಂದು ನಿಲ್ಲಿಸಿ ಭಾಷಣ ಮಾಡಿಸುವುದಿಲ್ಲ. ಅಷ್ಟರಮಟ್ಟಿಗೆ ಅದಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಇದೆ. ಬಾಬಾ ರಾಮ್‌ದೇವ್ ಅವರಿಗೆ ಹಿಂದುತ್ವ ಬ್ರಿಗೇಡ್‌ನ ಬೆಂಬಲವೂ ಬೇಕು, ಜಾತ್ಯತೀತ ಎನ್ನುವು ಹಣೆಪಟ್ಟಿಯೂ ಬೇಕು. ಇದು ಹೇಗೆ ಸಾಧ್ಯ?
ಐದನೆಯದು ಅವರ ಆಸ್ತಿ. ಬಾಬಾ ರಾಮ್‌ದೇವ್ ಗಳಿಸಿರುವ ಆಸ್ತಿಯ ಮೊತ್ತ ಎಷ್ಟೆಂದು ಅವರಿಗಾದರೂ ನಿಖರವಾಗಿ ಗೊತ್ತಿದೆಯೋ ಇಲ್ಲವೋ? ಜನರ ಬಾಯಲ್ಲಿ ಈ ಲೆಕ್ಕಾಚಾರ ಒಂದು ಸಾವಿರ ಕೋಟಿಯಿಂದ ಹತ್ತುಸಾವಿರ ಕೋಟಿ ರೂಪಾಯಿಗಳ ವರೆಗೆ ಹರಿದಾಡುತ್ತಿದೆ. ಇವೆಲ್ಲವೂ ಕಳೆದ ಹದಿನೈದು ವರ್ಷಗಳ ಸಂಪಾದನೆ.

ದುಡ್ಡು ಸಂಪಾದನೆ ಮಾಡುವುದು ಅಪರಾಧ ಅಲ್ಲವೇ ಅಲ್ಲ. ಆದರೆ ದುಡ್ಡು ಗಳಿಸುವುದೇ ವೃತ್ತಿ ಮಾಡಿಕೊಂಡವರು ಸಮಾಜಸೇವಕ ಎಂದು ಅನಿಸಿಕೊಳ್ಳುವುದಿಲ್ಲ, ಆತನೊಬ್ಬ ವ್ಯಾಪಾರಿ ಅಷ್ಟೆ. ಆದರೆ ಬಾಬಾ ರಾಮ್‌ದೇವ್ ಅವರದು ದ್ವಿಪಾತ್ರ. ಅವರು ಯೋಗ ಶಿಬಿರ ಮತ್ತು ಔಷಧಿ ಮಾರಾಟದಿಂದಲೇ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ.

ಸಾವಿರಾರು ಎಕರೆ ಜಮೀನು ಖರೀದಿಸಿದ್ದಾರೆ, ಖಾಸಗಿ ವಿಮಾನದಲ್ಲಿ ಓಡಾಡುತ್ತಾರೆ.ಪ್ರಾರಂಭದ ದಿನಗಳಲ್ಲಿ ಪವಾಡಗಳನ್ನು ಮಾಡುತ್ತಾ ವಿವಾದಕ್ಕೆ ಸಿಲುಕಿದ್ದ ಸತ್ಯಸಾಯಿಬಾಬಾ ಸಾಯುವ ಹೊತ್ತಿಗೆ ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದ್ದು ಅವರು ಪ್ರಾರಂಭಿಸಿದ ಸಾಮಾಜಿಕ ಸೇವಾ ಕಾರ‌್ಯಗಳಿಂದಾಗಿ.
ಅಂತಹ ಯಾವುದೇ ಒಂದು ಯೋಜನೆಯನ್ನು ಬಾಬಾ ರಾಮ್‌ದೇವ್ ಪ್ರಾರಂಭಿಸಿದಂತಿಲ್ಲ. ತನ್ನದೆನ್ನುವುದನ್ನು ಏನನ್ನೂ ಇಟ್ಟುಕೊಳ್ಳದೆ ಫಕೀರನಂತೆ ಬದುಕುತ್ತಿರುವ ಅಣ್ಣಾ ಹಜಾರೆ ಜತೆಯಲ್ಲಿ ನಿಂತಿರುವ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿರುವ ಬಾಬಾ ರಾಮ್‌ದೇವ್ ಅವರನ್ನು ಏನೆಂದು ಕರೆಯುವುದು?

ಸಮಾಜಸೇವಕನೆಂದೇ? ಸರ್ವಸಂಗ ಪರಿತ್ಯಾಗಿ ಬೈರಾಗಿಯೆಂದೇ?
ಕೊನೆಯದಾಗಿ ಅವರ ಎಡೆಬಿಡಂಗಿತನದ ಹೇಳಿಕೆಗಳು. ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಮಣಿದು ಲೋಕಪಾಲ ಮಸೂದೆ ರಚನೆಗೆ ಸಮಿತಿ ರಚಿಸಿದಾಗ ಅದರಲ್ಲಿದ್ದ ನಾಗರಿಕ ಸಮಿತಿ ಸದಸ್ಯರ ಬಗ್ಗೆ ಮೊದಲು ಅಪಸ್ವರ ಎತ್ತಿದ್ದು ಬಾಬಾ ರಾಮ್‌ದೇವ್.

ಶಾಂತಿಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಇಬ್ಬರೂ ಸದಸ್ಯರಾಗಿದ್ದನ್ನು ಅವರು ಟೀಕಿಸಿದರು. ಒಂದೆಡೆ ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿ ಪ್ರಧಾನಿಯವರನ್ನೂ ಸೇರಿಸಲು ನಾಗರಿಕ ಸಮಿತಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಬಾಬಾ ರಾಮ್‌ದೇವ್ ಅದಕ್ಕೆ ವಿರುದ್ದವಾದ ಹೇಳಿಕೆ ನೀಡಿ ಸರ್ಕಾರದ ಬೆಂಬಲಕ್ಕೆ ನಿಂತರು. ಸಂವಿಧಾನದಿಂದ ಹಿಡಿದು ಸಲಿಂಗಕಾಮಿಗಳ ವರೆಗೆ ಅವರು ನೀಡಿರುವ ಹಲವಾರು ಹೇಳಿಕೆಗಳು ವಿವಾದ ಸೃಷ್ಟಿಸಿವೆ. ಇದು ಒಬ್ಬ ಸಮರ್ಥ ನಾಯಕನ ಲಕ್ಷಣ ಅಲ್ಲ.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಮತದಾನವಷ್ಟೇ ರಹಸ್ಯ, ಉಳಿದೆಲ್ಲವೂ ಬಹಿರಂಗವಾಗಿ ನಡೆಯಬೇಕು. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಈ ವ್ಯವಸ್ಥೆಯ ಜೀವಾಳ. ಜನರ ನಂಬಿಕೆ ಗಳಿಸಲು ಇದು ಅಗತ್ಯ. ಬಾಬಾ ರಾಮ್‌ದೇವ್ ಅವರ ನಡೆ-ನುಡಿಯಲ್ಲಿ ಇದರ ಕೊರತೆ ಇದೆ.

Monday, May 30, 2011

ಒಂದು ಕಲ್ಲಿಗೆ ಎರಡು ಹಕ್ಕಿ- ಇದು ಸುಷ್ಮಾ ತಂತ್ರ

`ದೈತ್ಯರ~ ನಿರ್ಗಮನವಾದ ನಂತರ `ಕುಬ್ಜ~ರ ಪಾಲಾದ ಭಾರತೀಯ ಜನತಾ ಪಕ್ಷದಲ್ಲಿ ಇಂತಹದ್ದೊಂದು `ಆಂತರಿಕ ಯುದ್ಧ~ ತೀರಾ ಅನಿರೀಕ್ಷಿತವಾದುದೇನಲ್ಲ.
ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿರುವ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಅರುಣ್ ಜೇಟ್ಲಿ ನಡುವೆ ಮುಸುಕಿನೊಳಗಿನ ಗುದ್ದಾಟ ಬಹಳ ದಿನಗಳಿಂದಲೇ ನಡೆಯುತ್ತಿತ್ತು, ಈಗ ಬೀದಿಗೆ ಬಂದಿದೆ.
ಸುಷ್ಮಾ ಸ್ವರಾಜ್ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಬಳ್ಳಾರಿಯ ರೆಡ್ಡಿ ಸೋದರರ ಜತೆಗೆ ತನಗೆ ಸಂಬಂಧ ಇಲ್ಲ ಎನ್ನುವುದನ್ನು ಹೊರಜಗತ್ತಿನ ಕಣ್ಣಿಗಾದರೂ ಅವರು ತೋರಿಸಿಕೊಳ್ಳಬೇಕಿತ್ತು, ಇದೇ ವೇಳೆ ಪಕ್ಷದೊಳಗೆ ತನ್ನ ಎದುರಾಳಿಯಾಗಿರುವ ಅರುಣ್ ಜೇಟ್ಲಿ ಮೈಮೇಲೆ ಒಂದಷ್ಟು ಕೆಸರು ಸಿಡಿಸಬೇಕಿತ್ತು. ಈ ಎರಡೂ ಕೆಲಸವನ್ನು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾಡಿ ಮುಗಿಸಿದ್ದಾರೆ.
ರೆಡ್ಡಿ ಸೋದರರ  ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪದ ಬಗ್ಗೆ ಸುಪ್ರೀಂಕೋರ್ಟ್ ನಡೆಸುತ್ತಿರುವ ವಿಚಾರಣೆಯ ಉರುಳು ದಿನದಿಂದ ದಿನಕ್ಕೆ ಬಿಗಿಗೊಳ್ಳುತ್ತಿದೆ. ಸಿಬಿಐ ಕೂಡಾ ಬೆನ್ನು ಹತ್ತಿದೆ.
ಇದೇ ಕಾಲಕ್ಕೆ ಸರಿಯಾಗಿ ಕರ್ನಾಟಕದ ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಬಗ್ಗೆ ಅಂತಿಮ ವರದಿ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಅದರಲ್ಲೇನಾದರೂ ರೆಡ್ಡಿ ಸೋದರರು ಸಿಕ್ಕಿಹಾಕಿಕೊಂಡರೆ ಅವರ ಪಾಲಿಗೆ `ಅಮ್ಮ~ನಾಗಿರುವ ಸುಷ್ಮಾ ಸ್ವರಾಜ್ ಮೇಲೆ ಕಾಂಗ್ರೆಸ್ ಎರಗಿಬೀಳುವುದು ಖಂಡಿತ. ಅಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಅವರು ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.
ಈ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ `ನಿರೀಕ್ಷಣಾ ಜಾಮೀನು~ ಪಡೆಯುವ ರೀತಿಯಲ್ಲಿ ರೆಡ್ಡಿ ಸೋದರರ ಜತೆಗಿನ ತಮ್ಮ ಸಂಬಂಧವನ್ನು ಕಡಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಹೆಚ್ಚು ಕಡಿಮೆ ಕಳೆದ 10-12 ವರ್ಷಗಳಿಂದ ಈ `ಅಮ್ಮ-ಮಕ್ಕಳ~ ಸಂಬಂಧ ನೋಡುತ್ತಾ ಬಂದವರು ಸುಲಭದಲ್ಲಿ ಸುಷ್ಮಾ ಅವರ ಬದಲಾದ ನುಡಿಯನ್ನು ಒಪ್ಪಲಾರರು.  ಆದರೆ ಆರೋಪ ಎದುರಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸುಷ್ಮಾ ಈ ಹೇಳಿಕೆಯನ್ನು ಬಳಸಿಕೊಳ್ಳಲು ಅಡ್ಡಿಯೇನು ಇಲ್ಲವಲ್ಲ?
ರೆಡ್ಡಿ ಸೋದರರ ಬಗ್ಗೆಯಷ್ಟೇ ಸುಷ್ಮಾ ಮಾತನಾಡಿದ್ದರೆ ಅದೇನು ದೊಡ್ಡ ಸುದ್ದಿಯಾಗುತ್ತಿರಲಿಲ್ಲ, ಆದರೆ ಅವರು ತನ್ನ ಬಿಚ್ಚುಮಾತುಗಳನ್ನು ಅಷ್ಟಕ್ಕೆ ನಿಲ್ಲಿಸದೆ ಅರುಣ್ ಜೇಟ್ಲಿ ಅವರನ್ನು ವಿವಾದದ ಮೈದಾನಕ್ಕೆ ಎಳೆದು ತಂದಿದ್ದಾರೆ. ಮೇಲ್ನೋಟಕ್ಕೆ ಇವರಿಬ್ಬರ ನಡುವಿನ ಸಂಘರ್ಷಕ್ಕೆ ಕಾರಣಗಳೇನು ಕಾಣುತ್ತಿಲ್ಲ.

ಸೋತ ರಾಜಕೀಯ ಪಕ್ಷದ ಪಾಲಿಗೆ ಇರುವ ಏಕೈಕ ಅಧಿಕಾರದ ಸ್ಥಾನ ವಿರೋಧಪಕ್ಷದ ನಾಯಕತ್ವ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿರುವ ಈ ಸ್ಥಾನಗಳನ್ನು ಸುಷ್ಮಾ ಮತ್ತು ಜೇಟ್ಲಿ ಹಂಚಿಕೊಂಡಿದ್ದಾರೆ. ಅವರಿಬ್ಬರೂ ಇಚ್ಚಿಸಿದರೂ ಒಬ್ಬರು ಮತ್ತೊಬ್ಬರ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಸಾಧ್ಯ ಇಲ್ಲ. ಅದಕ್ಕಿಂತ ದೊಡ್ಡ ಸ್ಥಾನಕ್ಕೇರಬೇಕೆಂದರೂ ಅಲ್ಲಿ ಈಗ ಯಾವುದೂ ಇಲ್ಲ. ಹೀಗಿದ್ದರೂ ಸುಷ್ಮಾ ಸ್ವರಾಜ್ ಕಾಲು ಕೆರೆದು ಯಾಕೆ ಜಗಳಕ್ಕಿಳಿದಿದ್ದಾರೆ?
ಮುಂದಿನ ಲೋಕಸಭಾ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಕನಸೇನಾದರೂ ಅವರಿಗೆ ಬಿದ್ದಿದೆಯೇ? ಭ್ರಷ್ಟಾಚಾರದ ಹಗರಣಗಳಿಂದ ಮುಳುಗಿಹೋಗಿರುವ ಯುಪಿಎ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂತಹದ್ದೊಂದು ಕನಸು ಅವರಿಗೆ ಬಿದ್ದಿರಲೂ ಬಹುದು.
ಸುಷ್ಮಾ-ಜೇಟ್ಲಿ ಜಟಾಪಟಿ ಕೇವಲ ಅವರಿಬ್ಬರಿಗೆ ಸಂಬಂಧಿಸಿದ ವೈಯುಕ್ತಿಕ ವಿಷಯ ಅಲ್ಲ. ಅದರಲ್ಲಿ ಬಿಜೆಪಿಯ ಭವಿಷ್ಯದ ಬಿಕ್ಕಟ್ಟು ಕೂಡಾ ಅಡಗಿದೆ. ಬಿಜೆಪಿಯೊಳಗಿನ ನಾಯಕರ ನಡುವಿನ ತಿಕ್ಕಾಟ ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲಿನೊಂದಿಗೆ ಪ್ರಾರಂಭವಾಗಿತ್ತು. ಆ ಸೋಲು ಕಾಂಗ್ರೆಸ್‌ಪಕ್ಷಕ್ಕಿಂತ ಕೇವಲ 22 ಸ್ಥಾನಗಳು ಮತ್ತು ಶೇಕಡಾ 2.87ರಷ್ಟು ಮತಗಳನ್ನು ಕಡಿಮೆ ಪಡೆದುದಷ್ಟೇ ಅಲ್ಲ, ಅದಕ್ಕಿಂತಲೂ ದೊಡ್ಡದು.
ಯಾಕೆಂದರೆ ಸೋಲಿನ ಕಾಲಕ್ಕೆ ಸರಿಯಾಗಿ ಕಳೆದ 60 ವರ್ಷಗಳಲ್ಲಿ ಪಕ್ಷವನ್ನು (ಮೊದಲು ಜನಸಂಘ, ನಂತರ ಬಿಜೆಪಿ) ಕಟ್ಟಿ ಬೆಳೆಸಿ ಮುನ್ನಡೆಸಿದ್ದ ಇಬ್ಬರು ದೈತ್ಯ ನಾಯಕರಲ್ಲಿ ಒಬ್ಬರಾದ ಅಟಲಬಿಹಾರಿ ವಾಜಪೇಯಿ ರಾಜಕೀಯದಿಂದ ನಿವೃತ್ತಿಯಾದರು.
ಮತ್ತೊಬ್ಬ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿಯವರು  ಒಂದಷ್ಟು ದಿನ ವಿರೋಧಪಕ್ಷದ ನಾಯಕರಾಗಿ ಮುಂದುವರಿದರೂ ಕೊನೆಗೂ ಆ ಸ್ಥಾನವನ್ನು ಬಿಟ್ಟುಕೊಟ್ಟು ಪಕ್ಕಕ್ಕೆ ಸರಿಯಬೇಕಾಯಿತು. ಬಿಜೆಪಿಯನ್ನು ಬೆಂಬಲಿಸುತ್ತಾ ಬಂದ ಮತದಾರರು ಈ ಎರಡು ಜನಪ್ರಿಯ ಮುಖಗಳನ್ನು ಮರೆತು ಆ ಪಕ್ಷವನ್ನು ಕಲ್ಪಿಸಿಕೊಳ್ಳುವುದು ಕೂಡಾ ಕಷ್ಟ.
ಇದರ ಜತೆಯಲ್ಲಿಯೇ ಇವರಿಬ್ಬರ ಉತ್ತರಾಧಿಕಾರಿಯೆಂದು ವಾಜಪೇಯಿ ಅವರಿಂದಲೇ ಘೋಷಿಸಲ್ಪಟ್ಟ ಪ್ರಮೋದ್ ಮಹಾಜನ್ ಕೂಡಾ ಅಕಾಲ ಸಾವಿಗೀಡಾದರು. ಈ ರೀತಿ ಮೊದಲ ಸಾಲಿನ ಮೂವರು ನಾಯಕರನ್ನು ಕೆಲವೇ ವರ್ಷಗಳ ಅವಧಿಯಲ್ಲಿ ಬಿಜೆಪಿ ಕಳೆದುಕೊಳ್ಳುವಂತಾಯಿತು.
ಯಾವಾಗಲೂ ಸೋತಪಕ್ಷಗಳ ಮುಂದಿರುವುದು ಯುದ್ಧಕಾಲ, ವಿಶ್ರಾಂತಿಯದ್ದಲ್ಲ.ಎರಡು ಸ್ಥಾನಗಳಷ್ಟೆ ಗಳಿಸಿದ 1984ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಬಹುಎತ್ತರಕ್ಕೆ ಬೆಳೆಯಿತೆನ್ನುವುದು ನಿಜ.

ಆದರೆ ಆ ಕಾಲದಲ್ಲಿ ಪಕ್ಷವನ್ನು ಮುನ್ನಡೆಸಲು ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿಯವರಂತಹ ಸೇನಾಪತಿಗಳಿದ್ದರು. ಜತೆಗೆ ಕ್ಷಣಾರ್ಧದಲ್ಲಿ ಯುದ್ಧದ ದಿಕ್ಕನ್ನೇ ಬದಲಿಸಬಲ್ಲ `ಹಿಂದುತ್ವ~ ಎಂಬ ಸ್ಪೋಟಕ ಅಜೆಂಡಾ ಇತ್ತು.
ಸೈನಿಕರಂತೆ ನಿಸ್ವಾರ್ಥದಿಂದ ದುಡಿಯಬಲ್ಲ ಪರಿವಾರದ ಸದಸ್ಯರಿದ್ದರು. ಅಡ್ವಾಣಿ ಅವುಗಳನ್ನೆಲ್ಲ ಜಾಣ್ಮೆ ಮತ್ತು ಪರಿಶ್ರಮದಿಂದ ಬಳಸಿಕೊಂಡರು. ಅದರ ಫಲವೇ 1998ರಲ್ಲಿ ಸಿಕ್ಕ ಅತ್ಯುತ್ತಮ ಫಲಿತಾಂಶ- 182 ಸ್ಥಾನ ಮತ್ತು ಶೇಕಡಾ 25.59ರಷ್ಟು ಮತ. ಅದು ಬಿಜೆಪಿಯ ಶಿಖರ ಸಾಧನೆ.
ಆದರೆ ಈಗ ಆ ನಾಯಕರು ಮರೆಗೆ ಸರಿದಿದ್ದಾರೆ, ಅಧಿಕಾರದಲ್ಲಿದ್ದ ದಿನಗಳಲ್ಲಿನ ಪಕ್ಷದ ಆತ್ಮವಂಚನೆಯ ರಾಜಕೀಯದಿಂದಾಗಿ `ಹಿಂದುತ್ವ~ ಅಜೆಂಡಾ ತನ್ನ ಸ್ಪೋಟಕ ಗುಣವನ್ನು ಕಳೆದುಕೊಂಡಿದೆ. `ವಲಸೆ ಬಂದವರ~ ಪ್ರವಾಹದಲ್ಲಿ ಪಕ್ಷದ ನಿಷ್ಠಾವಂತ ಕಾರ‌್ಯಕರ್ತರು ಕೊಚ್ಚಿಕೊಂಡು ಹೋಗುತ್ತಿದ್ದಾರೆ.

ಇಂತಹ ಕಾಲದಲ್ಲಿ ಹೊಸಕಾಲ ಮತ್ತು ಹೊಸ ಜನಾಂಗದ ಆಶೋತ್ತರಗಳಿಗೆ ತಕ್ಕಂತೆ ಪಕ್ಷವನ್ನು ಮುರಿದುಕಟ್ಟುವ ನಾಯಕತ್ವ ಬಿಜೆಪಿಯ ಇಂದಿನ ಅಗತ್ಯ. ಇಂತಹ ಕಾಲದಲ್ಲಿ ಬಿಜೆಪಿಯ ಹಳೆಯ ಸೇನಾಪತಿಗಳು ರಣರಂಗದಿಂದ ನಿರ್ಗಮಿಸಿದ್ದಾರೆ, ಹೊಸಬರು ಬೀದಿ ಜಗಳಕ್ಕೆ ಇಳಿದಿದ್ದಾರೆ.
ವಾಜಪೇಯಿ, ಅಡ್ವಾಣಿ ಮತ್ತು ಮಹಾಜನ್ ಇವರಲ್ಲಿ ಒಬ್ಬರಿದ್ದರೂ ಬಿಜೆಪಿ ಸ್ಥಿತಿ ಇಂದಿನಷ್ಟು ಶೋಚನೀಯವಾಗಿ ಇರುತ್ತಿರಲಿಲ್ಲ. ಇನ್ನೊಂದು ರೀತಿಯಲ್ಲಿ ಇದು ಭವಿಷ್ಯದ ನಾಯಕರನ್ನು ಬೆಳೆಸಲಾಗದ ಹಿರಿಯರ ವೈಫಲ್ಯವೂ ಹೌದು.
ಈಗ ಉಳಿದಿರುವವರು ನರೇಂದ್ರಮೋದಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್‌ಸಿಂಗ್, ಮುರಳಿಮನೋಹರ ಜೋಷಿ, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು, ಅನಂತಕುಮಾರ್ ಮೊದಲಾದವರು. ಇವರಲ್ಲಿ ಜನಪ್ರಿಯತೆಯಲ್ಲಿ ಎಲ್ಲರಿಗಿಂತಲೂ ಮುಂದೆ ಇರುವವರು ನರೇಂದ್ರಮೋದಿ.

ಆದರೆ ಆಗಲೇ ನ್ಯಾಯಾಲಯದಲ್ಲಿನ ಮೊಕದ್ದಮೆಗಳು, ಸಿಬಿಐ ತನಿಖೆ ಮತ್ತು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಮೋದಿ, ಮುಂದಿನ ದಿನಗಳಲ್ಲಿ ತನ್ನ ತಲೆ ಉಳಿಸಿಕೊಂಡರೆ ಸಾಕಾಗಿದೆ.
ಒಂದೊಮ್ಮೆ ಅವರು ಉಳಿದುಕೊಂಡರೂ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದರೆ ಮಾತ್ರ ಮೋದಿ ನಾಯಕತ್ವ ವಹಿಸಲು ಸಾಧ್ಯ.ಉಗ್ರಹಿಂದೂವಾದದ ಅವರ ಹಿನ್ನೆಲೆಯಿಂದಾಗಿ ಮೈತ್ರಿಕೂಟದ ನಾಯಕರಾಗುವುದು ಅವರಿಂದ ಸಾಧ್ಯವಾಗದು. ಬೇರೆ ಪಕ್ಷಗಳು ಮೋದಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದೆ ಬರಲಾರವು.
ರಾಜನಾಥ್‌ಸಿಂಗ್ ಅವರಲ್ಲಿ ಮಹತ್ವಾಕಾಂಕ್ಷೆ ಇದ್ದರೂ ಉತ್ತರಪ್ರದೇಶದಲ್ಲಿಯೇ ಅವರನ್ನು ಕೇಳುವವರಿಲ್ಲ. ಉತ್ತಮ ಸಂಘಟಕ ಇಲ್ಲವೇ ಆಡಳಿತಗಾರನೆಂದೂ ಅವರು ಹೆಸರು ಪಡೆದಿಲ್ಲ. ಆರ್‌ಎಸ್‌ಎಸ್ ಬೆಂಬಲ ಇದ್ದರೂ ರಾಷ್ಟ್ರೀಯ ನಾಯಕನಾಗಲು ಬೇಕಾದ ರಾಷ್ಟ್ರಮಟ್ಟದ ಜನಪ್ರಿಯತೆ ಅವರಿಗಿಲ್ಲ.
ಮುರಳಿಮನೋಹರ ಜೋಷಿ ಅವರು ಆರ್‌ಎಸ್‌ಎಸ್ ಕಣ್ಮಣಿ. ವಾಜಪೇಯಿ ಮತ್ತು ಅಡ್ವಾಣಿ ನಾಯಕತ್ವದ ನಂತರ `ಮೂರನೇ ಶಕ್ತಿ~ಯಾಗಿ ತಮ್ಮನ್ನು ಬಿಂಬಿಸಿಕೊಳ್ಳಲು ಅವರು ಎನ್‌ಡಿಎ ಅಧಿಕಾರವಧಿಯಲ್ಲಿ ಪ್ರಯತ್ನಪಟ್ಟು ವಿಫಲಗೊಂಡವರು. ವಯಸ್ಸು ಕೂಡಾ ಅವರ ಪರವಾಗಿಲ್ಲ.
ಬಿಜೆಪಿ ಈ ವರೆಗೆ ಕಂಡ ಅತ್ಯಂತ ದುರ್ಬಲ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ.ಆರ್‌ಎಸ್‌ಎಸ್ ಅವರನ್ನು ಎಷ್ಟೇ ಎತ್ತಿಹಿಡಿದರೂ ಎತ್ತರದ ಸ್ಥಾನದಲ್ಲಿ ಅವರನ್ನು ಆ ಪಕ್ಷದ ಅಭಿಮಾನಿಗಳು ಕೂಡಾ ಕಲ್ಪಿಸಿಕೊಳ್ಳಲಾರರು. ವೆಂಕಯ್ಯನಾಯ್ಡು ಅವರ ಶಕ್ತಿ ಎಂದರೆ ದೊಡ್ಡ ಬಾಯಿ. ತನ್ನ ರಾಜ್ಯದಲ್ಲಿಯೇ ನೆಲೆ ಇಲ್ಲದ ನಾಯ್ಡು, ಅವಧಿಗೆ ಮುನ್ನವೇ ನಿವೃತ್ತಿಯ ಅಂಚಿನಲ್ಲಿರುವವರು.

ಲಾಲ್‌ಕೃಷ್ಣ ಅಡ್ವಾಣಿ ಅವರ ಅಖಂಡ ಬೆಂಬಲದ ಹೊರತಾಗಿಯೂ ಸಂಸತ್‌ನ ಒಳಗೆ ಇಲ್ಲವೇ ಹೊರಗೆ ಒಬ್ಬ ಸಮರ್ಥನಾಯಕನಾಗಿ ಅನಂತಕುಮಾರ್ ತಮ್ಮನ್ನು ರೂಪಿಸಿಕೊಳ್ಳಲೇ ಇಲ್ಲ. ಇದರಿಂದಾಗಿ ಪಕ್ಷದಲ್ಲಿಯೇ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಉಳಿದಿರುವವರು ಇಬ್ಬರು- ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್. ಆರ್‌ಎಸ್‌ಎಸ್ ಹಿನ್ನೆಲೆ ಇಲ್ಲದೆ ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಿದ ಮೊದಲ ನಾಯಕಿ ಸುಷ್ಮಾ. ಸಂಘ ಪರಿವಾರದ ಪೂರ್ಣಬೆಂಬಲ ಅವರಿಗೆ ಈಗಲೂ ಇಲ್ಲ. ಈ ಕಾರಣದಿಂದಾಗಿಯೇ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವ ಅವಕಾಶವನ್ನು ಕಳೆದುಕೊಂಡಿರುವುದು.
ಸುಷ್ಮಾ ಬುದ್ದಿವಂತ ಮಹಿಳೆ,ಆದರೆ ಅವರು ಶತ್ರುವನ್ನು ನಾಲಿಗೆಯಲ್ಲಿಯೇ ಇಟ್ಟುಕೊಂಡಿದ್ದಾರೆ. `ಸೋನಿಯಾಗಾಂಧಿ ಪ್ರಧಾನಿಯಾದರೆ ತಲೆಬೋಳಿಸಿಕೊಳ್ಳುತ್ತೇನೆ~ ಎಂದು ಕೇವಲ ಪ್ರಚಾರಕ್ಕಾಗಿ ಹೇಳಿ ಜನರ ಕಣ್ಣಿನಲ್ಲಿ ಅಗ್ಗವಾದವರು ಸುಷ್ಮಾ.
ಈಗಲೂ ಅವರು ಲೋಕಸಭೆಯಲ್ಲಿ ಮಾತನಾಡಿದರೆ ಬೆಳಕಿಗಿಂತ ಶಾಖವೇ ಹೆಚ್ಚು.ಸುಷ್ಮಾ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿದ್ದು ಕೂಡಾ ಅನಿವಾರ‌್ಯವಾಗಿ ಸೃಷ್ಟಿಯಾದ ಅವಕಾಶದಿಂದಾಗಿ.ಜಸ್ವಂತ್‌ಸಿಂಗ್ ಆಗಲೇ ಪಕ್ಷದಿಂದ ಹೊರಟುಹೋಗಿದ್ದರು, ಮುರಳಿಮನೋಹರ ಜೋಷಿ ಅವರಿಗೆ ವಯಸ್ಸು ಅಡ್ಡಿಯಾಗಿತ್ತು. ಅನಂತಕುಮಾರ್ ನಾಯಕತ್ವದ ಮೇಲೆ ಅವರ ಪಕ್ಷದಲ್ಲಿಯೇ ವಿಶ್ವಾಸ ಇರಲಿಲ್ಲ. ಹೀಗಾಗಿ ಸುಷ್ಮಾ ಅನಿವಾರ‌್ಯವಾದರು.

ಅಧಿಕಾರದ ಸ್ಥಾನವೇ ಹಾಗೆ, ಅಲ್ಲಿ ಕೂತವನನ್ನು ಮಹತ್ವಾಕಾಂಕ್ಷಿಯನ್ನಾಗಿ ಮಾಡುತ್ತದೆ. ಆಗ ಕಣ್ಣೆದುರಿಗೆ ಕಾಣುವ ಎದುರಾಳಿಗಳನ್ನು ಹಣಿದುಹಾಕಲು ಮನಸ್ಸು ಹೊಂಚುಹಾಕುತ್ತಿರುತ್ತದೆ. ಹಿಂದೆ ಅರುಣ್ ಜೇಟ್ಲಿ ಸ್ನೇಹಿತರಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಸುಷ್ಮಾ ಈಗ ಜೇಟ್ಲಿ ಕಡೆ ಬಾಣ ಬಿಟ್ಟಿದ್ದಾರೆ.
ಜೇಟ್ಲಿ ಎಂದೂ ನೇರಚುನಾವಣೆ ಎದುರಿಸಿದವರಲ್ಲ, ಇದರಿಂದಾಗಿ ಅವರಿಗೆ ನಿಶ್ಚಿತ ನೆಲೆ ಎಂಬುದಿಲ್ಲ. ಸಾಮಾನ್ಯ ಕಾರ‌್ಯಕರ್ತರ ಜತೆ ಅವರ ಸಂಪರ್ಕ ಅಷ್ಟಕಷ್ಟೇ.
ಸೂತ್ರಧಾರರಾಗಿಯೇ ಯಶಸ್ಸು ಗಳಿಸಿರುವ ಅವರು ಪಾತ್ರಧಾರಿಯಾಗಿ ಜನಪ್ರಿಯರಾಗಿಲ್ಲ. ಆದರೆ ಜೇಟ್ಲಿ ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿದವರು.
ಇದರಿಂದಾಗಿ ಸಂಘಪರಿವಾರದ ಬೆಂಬಲ ಇದೆ. ವೃತ್ತಿಯಲ್ಲಿ ಯಶಸ್ವಿ ವಕೀಲ, ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಮಾತ್ರವಲ್ಲ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪಕ್ಷವನ್ನು ಸಮರ್ಥಿಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿದವರು.
ಇವೆಲ್ಲಕ್ಕಿಂತಲೂ ಮೇಲಾಗಿ ಕೈ-ಬಾಯಿ ಸ್ವಚ್ಚವಾಗಿಟ್ಟುಕೊಂಡ ಕ್ಲೀನ್ ಇಮೇಜ್ ಜೇಟ್ಲಿಯವರಿಗಿದೆ. ಸುಷ್ಮಾ ಸ್ವರಾಜ್ ನಾಯಕತ್ವದ ಸಾಮರ್ಥ್ಯ ಹೊಂದಿರುವ ಮಹಿಳೆ.ಆದರೆ ರೆಡ್ಡಿ ಸೋದರರ ತಲೆ ಮೇಲೆ ಕೈ ಇಟ್ಟ ನಂತರ ಅದು ಮಲಿನಗೊಂಡಿದೆ.
ಇದರಿಂದಾಗಿಯೇ ನಾಯಕತ್ವದ ಓಟದಲ್ಲಿ ಜೇಟ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಹಿಂದೆ ಉಳಿದವರಿಗೆ ಮುಂದೆ ಹೋದವರನ್ನು ಹಿಂದಕ್ಕೆ ತಳ್ಳಲು ಇರುವ ಏಕೈಕ ದಾರಿ ಎಂದರೆ ಕಾಲೆಳೆದು ಬೀಳಿಸುವುದು. ಸುಷ್ಮಾ ಆ ಪ್ರಯತ್ನವನ್ನೇ ಮಾಡಿರುವುದು.