Monday, June 6, 2011

ರಾಜಕೀಯ ಮೈದಾನದಲ್ಲಿ ಎಡವಿಬಿದ್ದ ಯೋಗಗುರು

ಯೋಗಗುರು ಬಾಬಾ ರಾಮ್‌ದೇವ್ ಅವರ ಜತೆ ಉಪವಾಸದಲ್ಲಿ ಪಾಲ್ಗೊಳ್ಳಲು ಹೋಗಿದ್ದ ಸಾವಿರಾರು ಸಂಖ್ಯೆಯ ಬೆಂಬಲಿಗರು ಎರಡು ಬಗೆಯ ನೋವಿನಿಂದ ನರಳುತ್ತಿರಬಹುದು.
ಒಂದು ಯುಪಿಎ ಸರ್ಕಾರ ನಡೆಸಿದ್ದ ಪೊಲೀಸ್ ಕಾರ‌್ಯಾಚರಣೆಯಿಂದಾಗಿ ದೇಹದ ಮೇಲೆ ಆಗಿರುವ ಗಾಯದ ನೋವು. ಇನ್ನೊಂದು ತಾವು ದೇವರೆಂದೇ ಬಗೆದಿರುವ ಯೋಗಗುರು, ತಾನು ಉಪವಾಸ ಕೈಬಿಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗುಟ್ಟಾಗಿ ಪತ್ರ ಕೊಡುವ ಮೂಲಕ ಮಾಡಿದ ವಿಶ್ವಾಸಘಾತದಿಂದ ಮನಸ್ಸಿಗಾದ ನೋವು.
ದೇಹದ ಮೇಲೆ ಆಗಿರುವ ನೋವಿನಷ್ಟು ಸುಲಭದಲ್ಲಿ ಮನಸ್ಸಿನ ಮೇಲಿನ ಗಾಯ ಗುಣವಾಗುವುದಿಲ್ಲ ಎಂದು ಹೇಳುತ್ತಾರೆ. ಬಾಬಾ ತನ್ನ ಯಾವ ಯೋಗಶಕ್ತಿಯ ಮೂಲಕ ಈ ನೋವನ್ನು ಶಮನಮಾಡಿ ಬೆಂಬಲಿಗರನ್ನು ಒಲಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೋಡಲು ಕೆಲವು ದಿನ ಕಾಯಬೇಕು.
ಯಾರದು ದೊಡ್ಡ ತಪ್ಪು ಎಂದು ತೀರ್ಮಾನಿಸುವುದು ಸ್ವಲ್ಪ ಕಷ್ಟ. ಆದರೆ ಒಬ್ಬ ಆರೋಪಿಯಿಂದ ಪ್ರಾಮಾಣಿಕತೆಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಾಗದು. ಆದರೆ ಆತನ ವಿರುದ್ಧ ನಿಂತವರು ಮಾತ್ರ ಅಪ್ರಾಮಾಣಿಕರಾಗಬಾರದು.

ಇಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವುದು ಕೇಂದ್ರದ ಯುಪಿಎ ಸರ್ಕಾರ. ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ಬಗೆಯ ಹೀನಕೃತ್ಯ ಎಸಗಲು ಹಿಂಜರಿಯದಿರುವುದು ಆರೋಪಿಯ ಸಹಜ ಸ್ವಭಾವ.
ಆದ್ದರಿಂದ ಬಾಬಾ ರಾಮ್‌ದೇವ್ ಅವರ ಆಮರಣ ಉಪವಾಸ ಸತ್ಯಾಗ್ರಹವನ್ನು ಭಂಗಗೊಳಿಸಲು ಯುಪಿಎ ಸರ್ಕಾರ ಸಂಚು ಮಾಡಿದ್ದರಲ್ಲಿ ಆಶ್ಚರ‌್ಯವೇನಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿ ಆತ್ಮವಿಶ್ವಾಸವನ್ನು ಕಳೆದುಕೊಂಡು ಹತಾಶೆಗೀಡಾದ ಸರ್ಕಾರ ಮಾತ್ರ ಇಂತಹ ಬರ್ಬರಕೃತ್ಯ ನಡೆಸಲು ಸಾಧ್ಯ.
ಇತ್ತೀಚೆಗೆ ಅಣ್ಣಾ ಹಜಾರೆ ಅವರ ಉಪವಾಸವನ್ನು ತಡೆಯಲು ಇದೇ ಸರ್ಕಾರ ನಡೆಸಿದ್ದ ಕರಾಮತ್ತುಗಳೇನು, ಲೋಕಪಾಲ ಮಸೂದೆ ರಚನೆಯ ಪ್ರಯತ್ನದ ಹಾದಿ ತಪ್ಪಿಸಲು ಅದು ಏನು ಮಾಡುತ್ತಿದೆ ಎನ್ನುವುದು ದೇಶದ ಜನರಿಗೆಲ್ಲ ಈಗ ತಿಳಿದಿದೆ.

ಇವೆಲ್ಲವೂ ಗೊತ್ತಿದ್ದೂ ಇಂತಹ ಸರ್ಕಾರದ ಜತೆ ವ್ಯವಹರಿಸುವಾಗ ಸ್ವಲ್ಪ ಎಚ್ಚರದಿಂದ ಇರುವುದು ಬೇಡವೇ? ಮಾನಸಿಕ ಒತ್ತಡದಿಂದ ಪಾರಾಗಲು ಯೋಗ ಮಾಡಿ ಎಂದು ಉಪದೇಶ ನೀಡುವ ಯೋಗಗುರು `ನಾನು ಒತ್ತಡಕ್ಕೆ ಸಿಕ್ಕಿ ಆ ಪತ್ರ ಬರೆದುಕೊಟ್ಟೆ~ ಎಂದು ಹೇಳಿದರೆ, ಅವರು ಹೇಳಿದ್ದನ್ನೆಲ್ಲ ನಂಬಿರುವ ಅನುಯಾಯಿಗಳು ಏನು ಮಾಡಬೇಕು?
ಇಂತಹ ವಿವಾದಗಳು ಬಾಬಾ ರಾಮ್‌ದೇವ್ ಪಾಲಿಗೆ ಹೊಸದೇನಲ್ಲ, ಅವರ ಜನಪ್ರಿಯತೆಯ ಸೌಧ ದಿನದಿಂದ ದಿನಕ್ಕೆ ಎತ್ತರಕ್ಕೆ ಏರುತ್ತಿರುವ ಜತೆಯಲ್ಲಿಯೇ ವಿವಾದಗಳ ಹುತ್ತ ಕೂಡಾ ಪಕ್ಕದಲ್ಲಿ ಬೆಳೆಯುತ್ತಿದೆ.
ಕಪ್ಪುಹಣದ ವಿರುದ್ಧ ಯೋಗಗುರು ಬಾಬಾ ರಾಮ್‌ದೇವ್ ಎತ್ತಿರುವ ದನಿ ಸರಿಯಾಗಿಯೇ ಇದೆ. ಕಳೆದ 8-9 ತಿಂಗಳುಗಳಲ್ಲಿ ದೇಶಾದ್ಯಂತ ಪ್ರವಾಸ ಮಾಡಿ ಕಪ್ಪುಹಣದ ವಿರುದ್ಧ ಜನರನ್ನು ಸಂಘಟಿಸಿರುವ ಅವರ ಶ್ರಮ ಕೂಡಾ ಮೆಚ್ಚುವಂತಹದ್ದೇ ಆಗಿದೆ.
ಇವೆಲ್ಲವನ್ನು ಸುಮ್ಮನೆ ನೋಡುತ್ತಾ ಕಾಲಹರಣ ಮಾಡುತ್ತಿದ್ದ ಕೇಂದ್ರ ಸರ್ಕಾರವನ್ನು ಮಣಿಸಲು ಅವರು ಕೈಗೊಂಡಿರುವ ಆಮರಣ ಉಪವಾಸ ಕೂಡಾ ದೇಶಕ್ಕೆ ಹೊಸತೇನಲ್ಲ. ಅದರ ಬಲದಿಂದಲೇ ಅಲ್ಲವೇ ನಾವು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ಪಡೆದು ಸ್ವತಂತ್ರರಾಗಿದ್ದು.
ಇಂತಹ ಶಕ್ತಿಶಾಲಿ ಅಸ್ತ್ರವನ್ನು ಬಾಬಾ ರಾಮ್‌ದೇವ್ ಪ್ರಯೋಗಿಸಿದ್ದರಲ್ಲಿಯೂ ತಪ್ಪೇನಿಲ್ಲ. ಇವಿಷ್ಟೇ ಬಾಬಾ ರಾಮ್‌ದೇವ್ ಆಗಿದ್ದರೆ ಇಡೀ ದೇಶ ಅವರ ಕಾಲಿಗೆ ಬೀಳಬೇಕು. ಆದರೆ `ಬಾಬಾ ರಾಮ್‌ದೇವ್ ಅಂದರೆ ಇಷ್ಟೇ ಅಲ್ಲ~ ಎನ್ನುವ ಗುಮಾನಿಯೇ ಅವರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ.
ಮೊದಲನೆಯದು ಅವರ ರಾಜಕೀಯ ನಿಲುವು. ಕಳೆದ ವರ್ಷ ಬಾಬಾ ರಾಮ್‌ದೇವ್ ಅವರು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಉದ್ದೇಶವನ್ನು ಬಹಿರಂಗಪಡಿಸಿದ್ದರು. ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಅವರು ಘೋಷಿಸಿದ್ದರು. ಇದರಲ್ಲಿಯೂ ತಪ್ಪೇನಿಲ್ಲ. ಅವರ ಇತ್ತೀಚಿನ ಯೋಗ ಶಿಬಿರಗಳಲ್ಲಿ ಯೋಗಕ್ಕಿಂತ ಹೆಚ್ಚು ದೇಶದ ರಾಜಕೀಯದ ಬಗ್ಗೆಯೇ ಅವರು ಹೆಚ್ಚು ಚರ್ಚಿಸುತ್ತಿದ್ದರು.
ಎಲ್ಲ ಪಕ್ಷಗಳು ಭ್ರಷ್ಟಗೊಂಡಿರುವ ವರ್ತಮಾನದ ಸ್ಥಿತಿಯಲ್ಲಿ ಹೊಸ ಬಗೆಯ ರಾಜಕೀಯದ ಅಗತ್ಯ ಇದ್ದ ಕಾರಣ ಆ ಚರ್ಚೆ ಕೂಡಾ ಪ್ರಸ್ತುತವಾಗಿತ್ತು. ಈ ಎಲ್ಲ ಪ್ರಯತ್ನಗಳು ರಾಜಕೀಯ ಪಕ್ಷವೊಂದರ ಸ್ಥಾಪನೆಯಲ್ಲಿ ತಾರ್ಕಿಕ ಅಂತ್ಯ ಕಾಣಬಹುದೆಂದು ಅವರ ಲಕ್ಷಾಂತರ ಅನುಯಾಯಿಗಳು ಮತ್ತು ಅಭಿಮಾನಿಗಳು ನಿರೀಕ್ಷಿಸಿದ್ದರು.

ಆದರೆ ಇದ್ದಕ್ಕಿದ್ದಂತೆ ಒಂದು ದಿನ `ನಾನು ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಿಲ್ಲ, ಯುವಜನರ ಸಂಘಟನೆ ಕಟ್ಟುತ್ತೇನೆ~ ಎಂದು ಘೋಷಿಸಿದರು. ಕೊನೆಗೆ ಎರಡನ್ನೂ ಕೈಬಿಟ್ಟು ಉಪವಾಸ ಸತ್ಯಾಗ್ರಹ ನಡೆಸಲು ಹೊರಟರು. ಈ ಬದಲಾದ ನಿಲುವಿನ ಹಿಂದಿನ ಲೆಕ್ಕಾಚಾರ ಏನು? ಹೊಸಪಕ್ಷದ ಬದಲಿಗೆ ಯಾವುದಾದರೂ ಹಳೆಯ ಪಕ್ಷವನ್ನು ಬೆಂಬಲಿಸುವ ಯೋಚನೆಯೇನಾದರೂ ಅವರಲ್ಲಿದೆಯೇ?
ಎರಡನೆಯದು ಅವರು ಆರಿಸಿಕೊಂಡ ಉಪವಾಸ ಸತ್ಯಾಗ್ರಹದ ಮಾರ್ಗ. ಅಶ್ಚರ‌್ಯವೆಂದರೆ ಸಮಾಜ ಸೇವಕ ಅಣ್ಣಾ ಹಜಾರೆ ಅವರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವ ವರೆಗೆ ಬಾಬಾ ರಾಮ್‌ದೇವ್ ಎಂದೂ ಉಪವಾಸ ಸತ್ಯಾಗ್ರಹದ ಬಗ್ಗೆ ಮಾತನಾಡಿರಲಿಲ್ಲ.
ಬಹುಶಃ ಅಂತಹದ್ದೊಂದು ಉದ್ದೇಶ ಅವರಲ್ಲಿತ್ತು ಎಂದು ಗೊತ್ತಿದ್ದರೆ ಅಣ್ಣಾ ಹಜಾರೆ ಅವರು ಪ್ರತ್ಯೇಕವಾಗಿ ಉಪವಾಸ ಕೂರುತ್ತಿರಲಿಲ್ಲವೇನೋ? ಇಬ್ಬರೂ ಕೂಡಿ ಉಪವಾಸ ಕೂತಿದ್ದರೆ ಭ್ರಷ್ಟಾಚಾರದ ವಿರುದ್ಧ ಸಿಡಿದು ನಿಂತಿರುವ ಜನ ಎರಡು ಶಿಬಿರಗಳಲ್ಲಿ ಹಂಚಿಹೋಗುತ್ತಿರಲಿಲ್ಲವೇನೋ? ಬಾಬಾ ರಾಮ್‌ದೇವ್ ಅವರ ಕೆಲವು ಬೇಡಿಕೆಗಳು ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿಯೇ ಬರುವುದರಿಂದ ಅದು ಅಂತಿಮ ರೂಪ ಪಡೆಯುವ ವರೆಗಾದರೂ ಅವರು ಕಾಯಬಹುದಿತ್ತು.

ಆದರೆ ಬಾಬಾ ರಾಮ್‌ದೇವ್ ಅವಸರದಲ್ಲಿದ್ದರು. ಯಾಕೆ? ಮೈತುಂಬಾ ಬಟ್ಟೆ ಧರಿಸಿರುವ ಅಣ್ಣಾಹಜಾರೆ ಎದುರು ಅರೆಬೆತ್ತಲೆಯಾಗಿರುವ ಯೋಗಗುರುವನ್ನು ಕಾಡಿದ ಅಭದ್ರತೆಯಾದರೂ ಯಾವುದು? ಭ್ರಷ್ಟಾಚಾರದ ವಿರುದ್ಧದ ಹೋರಾಟದ ನಾಯಕತ್ವ ಕೈತಪ್ಪಿ ಹೋಗಬಹುದೆಂಬ ಹತಾಶೆಯಿಂದ ಅವರು ಪೈಪೋಟಿಗಿಳಿದರೇ?
ಮೂರನೆಯದು ಅವರ ಸ್ನೇಹಿತರ ಬಳಗ. ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಆತನ ಸ್ನೇಹಿತರ ಬಗ್ಗೆ ತಿಳಿದುಕೊಂಡರೆ ಸಾಕು ಎನ್ನುತ್ತಾರೆ. ಅಣ್ಣಾ ಹಜಾರೆ ಅವರ ಸ್ನೇಹಿತರು ಯಾರು ಎನ್ನುವುದು ಇಡೀ ದೇಶಕ್ಕೆ ಗೊತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿರಿಯ ವಕೀಲರಾದ ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲಾ, ಕಿರಣ್‌ಬೇಡಿ, ಸ್ವಾಮಿ ಅಗ್ನಿವೇಶ್...ಇವರೆಲ್ಲ ದೇಶದ ಜನಕ್ಕೆ ಪರಿಚಿತರು.
ಆದರೆ ಬಾಬಾ ರಾಮ್‌ದೇವ್ ಸ್ನೇಹಿತರು ಯಾರು? ಅವರ‌್ಯಾಕೆ ಬಹಿರಂಗವಾಗಿ ಜತೆಯಲ್ಲಿ ಕಾಣಿಸುತ್ತಿಲ್ಲ. ಬಿಜೆಪಿಯ ಮಾಜಿ ಐಡಲಾಗ್ ಗೋವಿಂದಾಚಾರ್ಯ ಇಲ್ಲವೇ ಸಂಘ ಪರಿವಾರದ ಹಿತಚಿಂತಕ ಎಸ್.ಗುರುಮೂರ್ತಿ ಅವರು ಉಪವಾಸದ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಪ್ರಾಂತೀಯ ಸಂಚಾಲಕರಿಗೆ ಪತ್ರಬರೆದು ಬಾಬಾ ರಾಮ್‌ದೇವ್ ಉಪವಾಸದಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿರುವ ಆರ್‌ಎಸ್‌ಎಸ್ ಸರಸಂಘಚಾಲಕರೂ ಕೂಡಾ ರಾಮ್‌ದೇವ್ ಅವರನ್ನು ಬೆಂಬಲಿಸಿ ಬೀದಿಗೆ ಇಳಿದಿಲ್ಲ. ಆದರೆ ಇದ್ದಕ್ಕಿದ್ದಂತೆಯೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿ ಸಾಧ್ವಿ ರಿತಂಬರ ಉಪವಾಸದ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಅಣ್ಣಾಹಜಾರೆ ಅವರ ಕೆಲವು ಸಂಗಾತಿಗಳೂ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರಬಹುದು. ಆದರೆ ಅವರೆಲ್ಲ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರು, ಜನರ ಕಣ್ಣ ಮುಂದೆ ಇರುವವರು. ಅಣ್ಣಾ ಹಜಾರೆ ಅವರಿಗೆ ತನ್ನ ಸಂಗಡಿಗರ ಆಯ್ಕೆಯಲ್ಲಿ ಸ್ಪಷ್ಟತೆ ಇತ್ತು. ತಪ್ಪಾಗಿದ್ದನ್ನು ತಿದ್ದಿಕೊಳ್ಳುವ ವಿನಯವಂತಿಕೆಯೂ ಇತ್ತು (ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಬೆಂಬಲಿಸಿ ಮಾತನಾಡಿದ ಅವರು ಅಲ್ಲಿ ಹೋಗಿ ಕಣ್ಣಾರೆ ಕಂಡ ನಂತರ ನಿಲುವು ಬದಲಾಯಿಸಿದರು).

ಅವರು ಯಾವ ರಾಜಕಾರಣಿಯನ್ನೂ ಹತ್ತಿರ ಬಿಟ್ಟುಕೊಳ್ಳಲಿಲ್ಲ. ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರೇ ನಿರಾಶೆಯಿಂದ ಹಿಂದಿರುಗಿ ಹೋಗಬೇಕಾಯಿತು. ಆದರೆ ಬಾಬಾ ರಾಮ್‌ದೇವ್ ಅವರಿಗೆ ಒಂದೋ ತಮ್ಮ ಸಂಗಾತಿಗಳ ಆಯ್ಕೆ ಬಗ್ಗೆ ಸ್ಪಷ್ಟತೆ ಇಲ್ಲ, ಇಲ್ಲವೇ ಅವರಲ್ಲೊಂದು ರಹಸ್ಯ ಅಜೆಂಡಾ ಇದೆ. ಹೀಗೆ ಅಲ್ಲದೆ ಇದ್ದರೆ ಅವರು ಯಾಕೆ ತನ್ನನ್ನು ಬೆಂಬಲಿಸುತ್ತಿರುವ ಗಣ್ಯರನ್ನು ಬೆನ್ನಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದಾರೆ?

ನಾಲ್ಕನೆಯದು ಸಂಘಪರಿವಾರದ ಜತೆಗಿನ ಸಂಬಂಧ. ಆರ್‌ಎಸ್‌ಎಸ್, ವಿಶ್ವಹಿಂದು ಪರಿಷತ್, ಬಿಜೆಪಿ ಇಲ್ಲವೇ ಸಂಘಪರಿವಾರಕ್ಕೆ ಸೇರಿರುವ ಇನ್ನಾವುದೋ ಸಂಘಟನೆಯ ಜತೆ  ಗುರುತಿಸಿಕೊಳ್ಳುವುದು ತಪ್ಪೇನಲ್ಲ. ಇವುಗಳಲ್ಲಿ ಯಾವುದೂ ದೇಶದ್ರೋಹದ ಆರೋಪವನ್ನು ಎದುರಿಸುತ್ತಿಲ್ಲ. ಇವುಗಳು ಭಯೋತ್ಪಾದಕ ಸಂಘಟನೆಗಳೂ ಅಲ್ಲ.
ಆದರೆ ಒಂದು ಸಂಘಟನೆಯ ಜತೆ ಗುರುತಿಸಿಕೊಂಡ ನಂತರ ಅದರ ಸಿದ್ದಾಂತದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಆರ್‌ಎಸ್‌ಎಸ್ ಸಿದ್ಧಾಂತವನ್ನು ಬಾಬಾ ರಾಮ್‌ದೇವ್ ಒಪ್ಪುವುದಾಗಿದ್ದರೆ ಬಹಿರಂಗವಾಗಿ ಅದನ್ನು ಘೋಷಿಸಬೇಕಿತ್ತು.
ಆರ್‌ಎಸ್‌ಎಸ್ ತನ್ನ ಕಾರ‌್ಯಕ್ರಮಗಳಲ್ಲಿ ಒಬ್ಬ ಮೌಲ್ವಿಯನ್ನೋ, ಪಾದ್ರಿಯನ್ನೋ ವೇದಿಕೆಯಲ್ಲಿ ತಂದು ನಿಲ್ಲಿಸಿ ಭಾಷಣ ಮಾಡಿಸುವುದಿಲ್ಲ. ಅಷ್ಟರಮಟ್ಟಿಗೆ ಅದಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಇದೆ. ಬಾಬಾ ರಾಮ್‌ದೇವ್ ಅವರಿಗೆ ಹಿಂದುತ್ವ ಬ್ರಿಗೇಡ್‌ನ ಬೆಂಬಲವೂ ಬೇಕು, ಜಾತ್ಯತೀತ ಎನ್ನುವು ಹಣೆಪಟ್ಟಿಯೂ ಬೇಕು. ಇದು ಹೇಗೆ ಸಾಧ್ಯ?
ಐದನೆಯದು ಅವರ ಆಸ್ತಿ. ಬಾಬಾ ರಾಮ್‌ದೇವ್ ಗಳಿಸಿರುವ ಆಸ್ತಿಯ ಮೊತ್ತ ಎಷ್ಟೆಂದು ಅವರಿಗಾದರೂ ನಿಖರವಾಗಿ ಗೊತ್ತಿದೆಯೋ ಇಲ್ಲವೋ? ಜನರ ಬಾಯಲ್ಲಿ ಈ ಲೆಕ್ಕಾಚಾರ ಒಂದು ಸಾವಿರ ಕೋಟಿಯಿಂದ ಹತ್ತುಸಾವಿರ ಕೋಟಿ ರೂಪಾಯಿಗಳ ವರೆಗೆ ಹರಿದಾಡುತ್ತಿದೆ. ಇವೆಲ್ಲವೂ ಕಳೆದ ಹದಿನೈದು ವರ್ಷಗಳ ಸಂಪಾದನೆ.

ದುಡ್ಡು ಸಂಪಾದನೆ ಮಾಡುವುದು ಅಪರಾಧ ಅಲ್ಲವೇ ಅಲ್ಲ. ಆದರೆ ದುಡ್ಡು ಗಳಿಸುವುದೇ ವೃತ್ತಿ ಮಾಡಿಕೊಂಡವರು ಸಮಾಜಸೇವಕ ಎಂದು ಅನಿಸಿಕೊಳ್ಳುವುದಿಲ್ಲ, ಆತನೊಬ್ಬ ವ್ಯಾಪಾರಿ ಅಷ್ಟೆ. ಆದರೆ ಬಾಬಾ ರಾಮ್‌ದೇವ್ ಅವರದು ದ್ವಿಪಾತ್ರ. ಅವರು ಯೋಗ ಶಿಬಿರ ಮತ್ತು ಔಷಧಿ ಮಾರಾಟದಿಂದಲೇ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ.

ಸಾವಿರಾರು ಎಕರೆ ಜಮೀನು ಖರೀದಿಸಿದ್ದಾರೆ, ಖಾಸಗಿ ವಿಮಾನದಲ್ಲಿ ಓಡಾಡುತ್ತಾರೆ.ಪ್ರಾರಂಭದ ದಿನಗಳಲ್ಲಿ ಪವಾಡಗಳನ್ನು ಮಾಡುತ್ತಾ ವಿವಾದಕ್ಕೆ ಸಿಲುಕಿದ್ದ ಸತ್ಯಸಾಯಿಬಾಬಾ ಸಾಯುವ ಹೊತ್ತಿಗೆ ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದ್ದು ಅವರು ಪ್ರಾರಂಭಿಸಿದ ಸಾಮಾಜಿಕ ಸೇವಾ ಕಾರ‌್ಯಗಳಿಂದಾಗಿ.
ಅಂತಹ ಯಾವುದೇ ಒಂದು ಯೋಜನೆಯನ್ನು ಬಾಬಾ ರಾಮ್‌ದೇವ್ ಪ್ರಾರಂಭಿಸಿದಂತಿಲ್ಲ. ತನ್ನದೆನ್ನುವುದನ್ನು ಏನನ್ನೂ ಇಟ್ಟುಕೊಳ್ಳದೆ ಫಕೀರನಂತೆ ಬದುಕುತ್ತಿರುವ ಅಣ್ಣಾ ಹಜಾರೆ ಜತೆಯಲ್ಲಿ ನಿಂತಿರುವ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿರುವ ಬಾಬಾ ರಾಮ್‌ದೇವ್ ಅವರನ್ನು ಏನೆಂದು ಕರೆಯುವುದು?

ಸಮಾಜಸೇವಕನೆಂದೇ? ಸರ್ವಸಂಗ ಪರಿತ್ಯಾಗಿ ಬೈರಾಗಿಯೆಂದೇ?
ಕೊನೆಯದಾಗಿ ಅವರ ಎಡೆಬಿಡಂಗಿತನದ ಹೇಳಿಕೆಗಳು. ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಮಣಿದು ಲೋಕಪಾಲ ಮಸೂದೆ ರಚನೆಗೆ ಸಮಿತಿ ರಚಿಸಿದಾಗ ಅದರಲ್ಲಿದ್ದ ನಾಗರಿಕ ಸಮಿತಿ ಸದಸ್ಯರ ಬಗ್ಗೆ ಮೊದಲು ಅಪಸ್ವರ ಎತ್ತಿದ್ದು ಬಾಬಾ ರಾಮ್‌ದೇವ್.

ಶಾಂತಿಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಇಬ್ಬರೂ ಸದಸ್ಯರಾಗಿದ್ದನ್ನು ಅವರು ಟೀಕಿಸಿದರು. ಒಂದೆಡೆ ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿ ಪ್ರಧಾನಿಯವರನ್ನೂ ಸೇರಿಸಲು ನಾಗರಿಕ ಸಮಿತಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಬಾಬಾ ರಾಮ್‌ದೇವ್ ಅದಕ್ಕೆ ವಿರುದ್ದವಾದ ಹೇಳಿಕೆ ನೀಡಿ ಸರ್ಕಾರದ ಬೆಂಬಲಕ್ಕೆ ನಿಂತರು. ಸಂವಿಧಾನದಿಂದ ಹಿಡಿದು ಸಲಿಂಗಕಾಮಿಗಳ ವರೆಗೆ ಅವರು ನೀಡಿರುವ ಹಲವಾರು ಹೇಳಿಕೆಗಳು ವಿವಾದ ಸೃಷ್ಟಿಸಿವೆ. ಇದು ಒಬ್ಬ ಸಮರ್ಥ ನಾಯಕನ ಲಕ್ಷಣ ಅಲ್ಲ.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಮತದಾನವಷ್ಟೇ ರಹಸ್ಯ, ಉಳಿದೆಲ್ಲವೂ ಬಹಿರಂಗವಾಗಿ ನಡೆಯಬೇಕು. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಈ ವ್ಯವಸ್ಥೆಯ ಜೀವಾಳ. ಜನರ ನಂಬಿಕೆ ಗಳಿಸಲು ಇದು ಅಗತ್ಯ. ಬಾಬಾ ರಾಮ್‌ದೇವ್ ಅವರ ನಡೆ-ನುಡಿಯಲ್ಲಿ ಇದರ ಕೊರತೆ ಇದೆ.

Monday, May 30, 2011

ಒಂದು ಕಲ್ಲಿಗೆ ಎರಡು ಹಕ್ಕಿ- ಇದು ಸುಷ್ಮಾ ತಂತ್ರ

`ದೈತ್ಯರ~ ನಿರ್ಗಮನವಾದ ನಂತರ `ಕುಬ್ಜ~ರ ಪಾಲಾದ ಭಾರತೀಯ ಜನತಾ ಪಕ್ಷದಲ್ಲಿ ಇಂತಹದ್ದೊಂದು `ಆಂತರಿಕ ಯುದ್ಧ~ ತೀರಾ ಅನಿರೀಕ್ಷಿತವಾದುದೇನಲ್ಲ.
ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿರುವ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಅರುಣ್ ಜೇಟ್ಲಿ ನಡುವೆ ಮುಸುಕಿನೊಳಗಿನ ಗುದ್ದಾಟ ಬಹಳ ದಿನಗಳಿಂದಲೇ ನಡೆಯುತ್ತಿತ್ತು, ಈಗ ಬೀದಿಗೆ ಬಂದಿದೆ.
ಸುಷ್ಮಾ ಸ್ವರಾಜ್ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಬಳ್ಳಾರಿಯ ರೆಡ್ಡಿ ಸೋದರರ ಜತೆಗೆ ತನಗೆ ಸಂಬಂಧ ಇಲ್ಲ ಎನ್ನುವುದನ್ನು ಹೊರಜಗತ್ತಿನ ಕಣ್ಣಿಗಾದರೂ ಅವರು ತೋರಿಸಿಕೊಳ್ಳಬೇಕಿತ್ತು, ಇದೇ ವೇಳೆ ಪಕ್ಷದೊಳಗೆ ತನ್ನ ಎದುರಾಳಿಯಾಗಿರುವ ಅರುಣ್ ಜೇಟ್ಲಿ ಮೈಮೇಲೆ ಒಂದಷ್ಟು ಕೆಸರು ಸಿಡಿಸಬೇಕಿತ್ತು. ಈ ಎರಡೂ ಕೆಲಸವನ್ನು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾಡಿ ಮುಗಿಸಿದ್ದಾರೆ.
ರೆಡ್ಡಿ ಸೋದರರ  ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪದ ಬಗ್ಗೆ ಸುಪ್ರೀಂಕೋರ್ಟ್ ನಡೆಸುತ್ತಿರುವ ವಿಚಾರಣೆಯ ಉರುಳು ದಿನದಿಂದ ದಿನಕ್ಕೆ ಬಿಗಿಗೊಳ್ಳುತ್ತಿದೆ. ಸಿಬಿಐ ಕೂಡಾ ಬೆನ್ನು ಹತ್ತಿದೆ.
ಇದೇ ಕಾಲಕ್ಕೆ ಸರಿಯಾಗಿ ಕರ್ನಾಟಕದ ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಬಗ್ಗೆ ಅಂತಿಮ ವರದಿ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಅದರಲ್ಲೇನಾದರೂ ರೆಡ್ಡಿ ಸೋದರರು ಸಿಕ್ಕಿಹಾಕಿಕೊಂಡರೆ ಅವರ ಪಾಲಿಗೆ `ಅಮ್ಮ~ನಾಗಿರುವ ಸುಷ್ಮಾ ಸ್ವರಾಜ್ ಮೇಲೆ ಕಾಂಗ್ರೆಸ್ ಎರಗಿಬೀಳುವುದು ಖಂಡಿತ. ಅಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಅವರು ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.
ಈ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ `ನಿರೀಕ್ಷಣಾ ಜಾಮೀನು~ ಪಡೆಯುವ ರೀತಿಯಲ್ಲಿ ರೆಡ್ಡಿ ಸೋದರರ ಜತೆಗಿನ ತಮ್ಮ ಸಂಬಂಧವನ್ನು ಕಡಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಹೆಚ್ಚು ಕಡಿಮೆ ಕಳೆದ 10-12 ವರ್ಷಗಳಿಂದ ಈ `ಅಮ್ಮ-ಮಕ್ಕಳ~ ಸಂಬಂಧ ನೋಡುತ್ತಾ ಬಂದವರು ಸುಲಭದಲ್ಲಿ ಸುಷ್ಮಾ ಅವರ ಬದಲಾದ ನುಡಿಯನ್ನು ಒಪ್ಪಲಾರರು.  ಆದರೆ ಆರೋಪ ಎದುರಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸುಷ್ಮಾ ಈ ಹೇಳಿಕೆಯನ್ನು ಬಳಸಿಕೊಳ್ಳಲು ಅಡ್ಡಿಯೇನು ಇಲ್ಲವಲ್ಲ?
ರೆಡ್ಡಿ ಸೋದರರ ಬಗ್ಗೆಯಷ್ಟೇ ಸುಷ್ಮಾ ಮಾತನಾಡಿದ್ದರೆ ಅದೇನು ದೊಡ್ಡ ಸುದ್ದಿಯಾಗುತ್ತಿರಲಿಲ್ಲ, ಆದರೆ ಅವರು ತನ್ನ ಬಿಚ್ಚುಮಾತುಗಳನ್ನು ಅಷ್ಟಕ್ಕೆ ನಿಲ್ಲಿಸದೆ ಅರುಣ್ ಜೇಟ್ಲಿ ಅವರನ್ನು ವಿವಾದದ ಮೈದಾನಕ್ಕೆ ಎಳೆದು ತಂದಿದ್ದಾರೆ. ಮೇಲ್ನೋಟಕ್ಕೆ ಇವರಿಬ್ಬರ ನಡುವಿನ ಸಂಘರ್ಷಕ್ಕೆ ಕಾರಣಗಳೇನು ಕಾಣುತ್ತಿಲ್ಲ.

ಸೋತ ರಾಜಕೀಯ ಪಕ್ಷದ ಪಾಲಿಗೆ ಇರುವ ಏಕೈಕ ಅಧಿಕಾರದ ಸ್ಥಾನ ವಿರೋಧಪಕ್ಷದ ನಾಯಕತ್ವ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿರುವ ಈ ಸ್ಥಾನಗಳನ್ನು ಸುಷ್ಮಾ ಮತ್ತು ಜೇಟ್ಲಿ ಹಂಚಿಕೊಂಡಿದ್ದಾರೆ. ಅವರಿಬ್ಬರೂ ಇಚ್ಚಿಸಿದರೂ ಒಬ್ಬರು ಮತ್ತೊಬ್ಬರ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಸಾಧ್ಯ ಇಲ್ಲ. ಅದಕ್ಕಿಂತ ದೊಡ್ಡ ಸ್ಥಾನಕ್ಕೇರಬೇಕೆಂದರೂ ಅಲ್ಲಿ ಈಗ ಯಾವುದೂ ಇಲ್ಲ. ಹೀಗಿದ್ದರೂ ಸುಷ್ಮಾ ಸ್ವರಾಜ್ ಕಾಲು ಕೆರೆದು ಯಾಕೆ ಜಗಳಕ್ಕಿಳಿದಿದ್ದಾರೆ?
ಮುಂದಿನ ಲೋಕಸಭಾ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಕನಸೇನಾದರೂ ಅವರಿಗೆ ಬಿದ್ದಿದೆಯೇ? ಭ್ರಷ್ಟಾಚಾರದ ಹಗರಣಗಳಿಂದ ಮುಳುಗಿಹೋಗಿರುವ ಯುಪಿಎ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂತಹದ್ದೊಂದು ಕನಸು ಅವರಿಗೆ ಬಿದ್ದಿರಲೂ ಬಹುದು.
ಸುಷ್ಮಾ-ಜೇಟ್ಲಿ ಜಟಾಪಟಿ ಕೇವಲ ಅವರಿಬ್ಬರಿಗೆ ಸಂಬಂಧಿಸಿದ ವೈಯುಕ್ತಿಕ ವಿಷಯ ಅಲ್ಲ. ಅದರಲ್ಲಿ ಬಿಜೆಪಿಯ ಭವಿಷ್ಯದ ಬಿಕ್ಕಟ್ಟು ಕೂಡಾ ಅಡಗಿದೆ. ಬಿಜೆಪಿಯೊಳಗಿನ ನಾಯಕರ ನಡುವಿನ ತಿಕ್ಕಾಟ ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲಿನೊಂದಿಗೆ ಪ್ರಾರಂಭವಾಗಿತ್ತು. ಆ ಸೋಲು ಕಾಂಗ್ರೆಸ್‌ಪಕ್ಷಕ್ಕಿಂತ ಕೇವಲ 22 ಸ್ಥಾನಗಳು ಮತ್ತು ಶೇಕಡಾ 2.87ರಷ್ಟು ಮತಗಳನ್ನು ಕಡಿಮೆ ಪಡೆದುದಷ್ಟೇ ಅಲ್ಲ, ಅದಕ್ಕಿಂತಲೂ ದೊಡ್ಡದು.
ಯಾಕೆಂದರೆ ಸೋಲಿನ ಕಾಲಕ್ಕೆ ಸರಿಯಾಗಿ ಕಳೆದ 60 ವರ್ಷಗಳಲ್ಲಿ ಪಕ್ಷವನ್ನು (ಮೊದಲು ಜನಸಂಘ, ನಂತರ ಬಿಜೆಪಿ) ಕಟ್ಟಿ ಬೆಳೆಸಿ ಮುನ್ನಡೆಸಿದ್ದ ಇಬ್ಬರು ದೈತ್ಯ ನಾಯಕರಲ್ಲಿ ಒಬ್ಬರಾದ ಅಟಲಬಿಹಾರಿ ವಾಜಪೇಯಿ ರಾಜಕೀಯದಿಂದ ನಿವೃತ್ತಿಯಾದರು.
ಮತ್ತೊಬ್ಬ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿಯವರು  ಒಂದಷ್ಟು ದಿನ ವಿರೋಧಪಕ್ಷದ ನಾಯಕರಾಗಿ ಮುಂದುವರಿದರೂ ಕೊನೆಗೂ ಆ ಸ್ಥಾನವನ್ನು ಬಿಟ್ಟುಕೊಟ್ಟು ಪಕ್ಕಕ್ಕೆ ಸರಿಯಬೇಕಾಯಿತು. ಬಿಜೆಪಿಯನ್ನು ಬೆಂಬಲಿಸುತ್ತಾ ಬಂದ ಮತದಾರರು ಈ ಎರಡು ಜನಪ್ರಿಯ ಮುಖಗಳನ್ನು ಮರೆತು ಆ ಪಕ್ಷವನ್ನು ಕಲ್ಪಿಸಿಕೊಳ್ಳುವುದು ಕೂಡಾ ಕಷ್ಟ.
ಇದರ ಜತೆಯಲ್ಲಿಯೇ ಇವರಿಬ್ಬರ ಉತ್ತರಾಧಿಕಾರಿಯೆಂದು ವಾಜಪೇಯಿ ಅವರಿಂದಲೇ ಘೋಷಿಸಲ್ಪಟ್ಟ ಪ್ರಮೋದ್ ಮಹಾಜನ್ ಕೂಡಾ ಅಕಾಲ ಸಾವಿಗೀಡಾದರು. ಈ ರೀತಿ ಮೊದಲ ಸಾಲಿನ ಮೂವರು ನಾಯಕರನ್ನು ಕೆಲವೇ ವರ್ಷಗಳ ಅವಧಿಯಲ್ಲಿ ಬಿಜೆಪಿ ಕಳೆದುಕೊಳ್ಳುವಂತಾಯಿತು.
ಯಾವಾಗಲೂ ಸೋತಪಕ್ಷಗಳ ಮುಂದಿರುವುದು ಯುದ್ಧಕಾಲ, ವಿಶ್ರಾಂತಿಯದ್ದಲ್ಲ.ಎರಡು ಸ್ಥಾನಗಳಷ್ಟೆ ಗಳಿಸಿದ 1984ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಬಹುಎತ್ತರಕ್ಕೆ ಬೆಳೆಯಿತೆನ್ನುವುದು ನಿಜ.

ಆದರೆ ಆ ಕಾಲದಲ್ಲಿ ಪಕ್ಷವನ್ನು ಮುನ್ನಡೆಸಲು ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿಯವರಂತಹ ಸೇನಾಪತಿಗಳಿದ್ದರು. ಜತೆಗೆ ಕ್ಷಣಾರ್ಧದಲ್ಲಿ ಯುದ್ಧದ ದಿಕ್ಕನ್ನೇ ಬದಲಿಸಬಲ್ಲ `ಹಿಂದುತ್ವ~ ಎಂಬ ಸ್ಪೋಟಕ ಅಜೆಂಡಾ ಇತ್ತು.
ಸೈನಿಕರಂತೆ ನಿಸ್ವಾರ್ಥದಿಂದ ದುಡಿಯಬಲ್ಲ ಪರಿವಾರದ ಸದಸ್ಯರಿದ್ದರು. ಅಡ್ವಾಣಿ ಅವುಗಳನ್ನೆಲ್ಲ ಜಾಣ್ಮೆ ಮತ್ತು ಪರಿಶ್ರಮದಿಂದ ಬಳಸಿಕೊಂಡರು. ಅದರ ಫಲವೇ 1998ರಲ್ಲಿ ಸಿಕ್ಕ ಅತ್ಯುತ್ತಮ ಫಲಿತಾಂಶ- 182 ಸ್ಥಾನ ಮತ್ತು ಶೇಕಡಾ 25.59ರಷ್ಟು ಮತ. ಅದು ಬಿಜೆಪಿಯ ಶಿಖರ ಸಾಧನೆ.
ಆದರೆ ಈಗ ಆ ನಾಯಕರು ಮರೆಗೆ ಸರಿದಿದ್ದಾರೆ, ಅಧಿಕಾರದಲ್ಲಿದ್ದ ದಿನಗಳಲ್ಲಿನ ಪಕ್ಷದ ಆತ್ಮವಂಚನೆಯ ರಾಜಕೀಯದಿಂದಾಗಿ `ಹಿಂದುತ್ವ~ ಅಜೆಂಡಾ ತನ್ನ ಸ್ಪೋಟಕ ಗುಣವನ್ನು ಕಳೆದುಕೊಂಡಿದೆ. `ವಲಸೆ ಬಂದವರ~ ಪ್ರವಾಹದಲ್ಲಿ ಪಕ್ಷದ ನಿಷ್ಠಾವಂತ ಕಾರ‌್ಯಕರ್ತರು ಕೊಚ್ಚಿಕೊಂಡು ಹೋಗುತ್ತಿದ್ದಾರೆ.

ಇಂತಹ ಕಾಲದಲ್ಲಿ ಹೊಸಕಾಲ ಮತ್ತು ಹೊಸ ಜನಾಂಗದ ಆಶೋತ್ತರಗಳಿಗೆ ತಕ್ಕಂತೆ ಪಕ್ಷವನ್ನು ಮುರಿದುಕಟ್ಟುವ ನಾಯಕತ್ವ ಬಿಜೆಪಿಯ ಇಂದಿನ ಅಗತ್ಯ. ಇಂತಹ ಕಾಲದಲ್ಲಿ ಬಿಜೆಪಿಯ ಹಳೆಯ ಸೇನಾಪತಿಗಳು ರಣರಂಗದಿಂದ ನಿರ್ಗಮಿಸಿದ್ದಾರೆ, ಹೊಸಬರು ಬೀದಿ ಜಗಳಕ್ಕೆ ಇಳಿದಿದ್ದಾರೆ.
ವಾಜಪೇಯಿ, ಅಡ್ವಾಣಿ ಮತ್ತು ಮಹಾಜನ್ ಇವರಲ್ಲಿ ಒಬ್ಬರಿದ್ದರೂ ಬಿಜೆಪಿ ಸ್ಥಿತಿ ಇಂದಿನಷ್ಟು ಶೋಚನೀಯವಾಗಿ ಇರುತ್ತಿರಲಿಲ್ಲ. ಇನ್ನೊಂದು ರೀತಿಯಲ್ಲಿ ಇದು ಭವಿಷ್ಯದ ನಾಯಕರನ್ನು ಬೆಳೆಸಲಾಗದ ಹಿರಿಯರ ವೈಫಲ್ಯವೂ ಹೌದು.
ಈಗ ಉಳಿದಿರುವವರು ನರೇಂದ್ರಮೋದಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್‌ಸಿಂಗ್, ಮುರಳಿಮನೋಹರ ಜೋಷಿ, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು, ಅನಂತಕುಮಾರ್ ಮೊದಲಾದವರು. ಇವರಲ್ಲಿ ಜನಪ್ರಿಯತೆಯಲ್ಲಿ ಎಲ್ಲರಿಗಿಂತಲೂ ಮುಂದೆ ಇರುವವರು ನರೇಂದ್ರಮೋದಿ.

ಆದರೆ ಆಗಲೇ ನ್ಯಾಯಾಲಯದಲ್ಲಿನ ಮೊಕದ್ದಮೆಗಳು, ಸಿಬಿಐ ತನಿಖೆ ಮತ್ತು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಮೋದಿ, ಮುಂದಿನ ದಿನಗಳಲ್ಲಿ ತನ್ನ ತಲೆ ಉಳಿಸಿಕೊಂಡರೆ ಸಾಕಾಗಿದೆ.
ಒಂದೊಮ್ಮೆ ಅವರು ಉಳಿದುಕೊಂಡರೂ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದರೆ ಮಾತ್ರ ಮೋದಿ ನಾಯಕತ್ವ ವಹಿಸಲು ಸಾಧ್ಯ.ಉಗ್ರಹಿಂದೂವಾದದ ಅವರ ಹಿನ್ನೆಲೆಯಿಂದಾಗಿ ಮೈತ್ರಿಕೂಟದ ನಾಯಕರಾಗುವುದು ಅವರಿಂದ ಸಾಧ್ಯವಾಗದು. ಬೇರೆ ಪಕ್ಷಗಳು ಮೋದಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದೆ ಬರಲಾರವು.
ರಾಜನಾಥ್‌ಸಿಂಗ್ ಅವರಲ್ಲಿ ಮಹತ್ವಾಕಾಂಕ್ಷೆ ಇದ್ದರೂ ಉತ್ತರಪ್ರದೇಶದಲ್ಲಿಯೇ ಅವರನ್ನು ಕೇಳುವವರಿಲ್ಲ. ಉತ್ತಮ ಸಂಘಟಕ ಇಲ್ಲವೇ ಆಡಳಿತಗಾರನೆಂದೂ ಅವರು ಹೆಸರು ಪಡೆದಿಲ್ಲ. ಆರ್‌ಎಸ್‌ಎಸ್ ಬೆಂಬಲ ಇದ್ದರೂ ರಾಷ್ಟ್ರೀಯ ನಾಯಕನಾಗಲು ಬೇಕಾದ ರಾಷ್ಟ್ರಮಟ್ಟದ ಜನಪ್ರಿಯತೆ ಅವರಿಗಿಲ್ಲ.
ಮುರಳಿಮನೋಹರ ಜೋಷಿ ಅವರು ಆರ್‌ಎಸ್‌ಎಸ್ ಕಣ್ಮಣಿ. ವಾಜಪೇಯಿ ಮತ್ತು ಅಡ್ವಾಣಿ ನಾಯಕತ್ವದ ನಂತರ `ಮೂರನೇ ಶಕ್ತಿ~ಯಾಗಿ ತಮ್ಮನ್ನು ಬಿಂಬಿಸಿಕೊಳ್ಳಲು ಅವರು ಎನ್‌ಡಿಎ ಅಧಿಕಾರವಧಿಯಲ್ಲಿ ಪ್ರಯತ್ನಪಟ್ಟು ವಿಫಲಗೊಂಡವರು. ವಯಸ್ಸು ಕೂಡಾ ಅವರ ಪರವಾಗಿಲ್ಲ.
ಬಿಜೆಪಿ ಈ ವರೆಗೆ ಕಂಡ ಅತ್ಯಂತ ದುರ್ಬಲ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ.ಆರ್‌ಎಸ್‌ಎಸ್ ಅವರನ್ನು ಎಷ್ಟೇ ಎತ್ತಿಹಿಡಿದರೂ ಎತ್ತರದ ಸ್ಥಾನದಲ್ಲಿ ಅವರನ್ನು ಆ ಪಕ್ಷದ ಅಭಿಮಾನಿಗಳು ಕೂಡಾ ಕಲ್ಪಿಸಿಕೊಳ್ಳಲಾರರು. ವೆಂಕಯ್ಯನಾಯ್ಡು ಅವರ ಶಕ್ತಿ ಎಂದರೆ ದೊಡ್ಡ ಬಾಯಿ. ತನ್ನ ರಾಜ್ಯದಲ್ಲಿಯೇ ನೆಲೆ ಇಲ್ಲದ ನಾಯ್ಡು, ಅವಧಿಗೆ ಮುನ್ನವೇ ನಿವೃತ್ತಿಯ ಅಂಚಿನಲ್ಲಿರುವವರು.

ಲಾಲ್‌ಕೃಷ್ಣ ಅಡ್ವಾಣಿ ಅವರ ಅಖಂಡ ಬೆಂಬಲದ ಹೊರತಾಗಿಯೂ ಸಂಸತ್‌ನ ಒಳಗೆ ಇಲ್ಲವೇ ಹೊರಗೆ ಒಬ್ಬ ಸಮರ್ಥನಾಯಕನಾಗಿ ಅನಂತಕುಮಾರ್ ತಮ್ಮನ್ನು ರೂಪಿಸಿಕೊಳ್ಳಲೇ ಇಲ್ಲ. ಇದರಿಂದಾಗಿ ಪಕ್ಷದಲ್ಲಿಯೇ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಉಳಿದಿರುವವರು ಇಬ್ಬರು- ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್. ಆರ್‌ಎಸ್‌ಎಸ್ ಹಿನ್ನೆಲೆ ಇಲ್ಲದೆ ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಿದ ಮೊದಲ ನಾಯಕಿ ಸುಷ್ಮಾ. ಸಂಘ ಪರಿವಾರದ ಪೂರ್ಣಬೆಂಬಲ ಅವರಿಗೆ ಈಗಲೂ ಇಲ್ಲ. ಈ ಕಾರಣದಿಂದಾಗಿಯೇ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವ ಅವಕಾಶವನ್ನು ಕಳೆದುಕೊಂಡಿರುವುದು.
ಸುಷ್ಮಾ ಬುದ್ದಿವಂತ ಮಹಿಳೆ,ಆದರೆ ಅವರು ಶತ್ರುವನ್ನು ನಾಲಿಗೆಯಲ್ಲಿಯೇ ಇಟ್ಟುಕೊಂಡಿದ್ದಾರೆ. `ಸೋನಿಯಾಗಾಂಧಿ ಪ್ರಧಾನಿಯಾದರೆ ತಲೆಬೋಳಿಸಿಕೊಳ್ಳುತ್ತೇನೆ~ ಎಂದು ಕೇವಲ ಪ್ರಚಾರಕ್ಕಾಗಿ ಹೇಳಿ ಜನರ ಕಣ್ಣಿನಲ್ಲಿ ಅಗ್ಗವಾದವರು ಸುಷ್ಮಾ.
ಈಗಲೂ ಅವರು ಲೋಕಸಭೆಯಲ್ಲಿ ಮಾತನಾಡಿದರೆ ಬೆಳಕಿಗಿಂತ ಶಾಖವೇ ಹೆಚ್ಚು.ಸುಷ್ಮಾ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿದ್ದು ಕೂಡಾ ಅನಿವಾರ‌್ಯವಾಗಿ ಸೃಷ್ಟಿಯಾದ ಅವಕಾಶದಿಂದಾಗಿ.ಜಸ್ವಂತ್‌ಸಿಂಗ್ ಆಗಲೇ ಪಕ್ಷದಿಂದ ಹೊರಟುಹೋಗಿದ್ದರು, ಮುರಳಿಮನೋಹರ ಜೋಷಿ ಅವರಿಗೆ ವಯಸ್ಸು ಅಡ್ಡಿಯಾಗಿತ್ತು. ಅನಂತಕುಮಾರ್ ನಾಯಕತ್ವದ ಮೇಲೆ ಅವರ ಪಕ್ಷದಲ್ಲಿಯೇ ವಿಶ್ವಾಸ ಇರಲಿಲ್ಲ. ಹೀಗಾಗಿ ಸುಷ್ಮಾ ಅನಿವಾರ‌್ಯವಾದರು.

ಅಧಿಕಾರದ ಸ್ಥಾನವೇ ಹಾಗೆ, ಅಲ್ಲಿ ಕೂತವನನ್ನು ಮಹತ್ವಾಕಾಂಕ್ಷಿಯನ್ನಾಗಿ ಮಾಡುತ್ತದೆ. ಆಗ ಕಣ್ಣೆದುರಿಗೆ ಕಾಣುವ ಎದುರಾಳಿಗಳನ್ನು ಹಣಿದುಹಾಕಲು ಮನಸ್ಸು ಹೊಂಚುಹಾಕುತ್ತಿರುತ್ತದೆ. ಹಿಂದೆ ಅರುಣ್ ಜೇಟ್ಲಿ ಸ್ನೇಹಿತರಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಸುಷ್ಮಾ ಈಗ ಜೇಟ್ಲಿ ಕಡೆ ಬಾಣ ಬಿಟ್ಟಿದ್ದಾರೆ.
ಜೇಟ್ಲಿ ಎಂದೂ ನೇರಚುನಾವಣೆ ಎದುರಿಸಿದವರಲ್ಲ, ಇದರಿಂದಾಗಿ ಅವರಿಗೆ ನಿಶ್ಚಿತ ನೆಲೆ ಎಂಬುದಿಲ್ಲ. ಸಾಮಾನ್ಯ ಕಾರ‌್ಯಕರ್ತರ ಜತೆ ಅವರ ಸಂಪರ್ಕ ಅಷ್ಟಕಷ್ಟೇ.
ಸೂತ್ರಧಾರರಾಗಿಯೇ ಯಶಸ್ಸು ಗಳಿಸಿರುವ ಅವರು ಪಾತ್ರಧಾರಿಯಾಗಿ ಜನಪ್ರಿಯರಾಗಿಲ್ಲ. ಆದರೆ ಜೇಟ್ಲಿ ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿದವರು.
ಇದರಿಂದಾಗಿ ಸಂಘಪರಿವಾರದ ಬೆಂಬಲ ಇದೆ. ವೃತ್ತಿಯಲ್ಲಿ ಯಶಸ್ವಿ ವಕೀಲ, ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಮಾತ್ರವಲ್ಲ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪಕ್ಷವನ್ನು ಸಮರ್ಥಿಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿದವರು.
ಇವೆಲ್ಲಕ್ಕಿಂತಲೂ ಮೇಲಾಗಿ ಕೈ-ಬಾಯಿ ಸ್ವಚ್ಚವಾಗಿಟ್ಟುಕೊಂಡ ಕ್ಲೀನ್ ಇಮೇಜ್ ಜೇಟ್ಲಿಯವರಿಗಿದೆ. ಸುಷ್ಮಾ ಸ್ವರಾಜ್ ನಾಯಕತ್ವದ ಸಾಮರ್ಥ್ಯ ಹೊಂದಿರುವ ಮಹಿಳೆ.ಆದರೆ ರೆಡ್ಡಿ ಸೋದರರ ತಲೆ ಮೇಲೆ ಕೈ ಇಟ್ಟ ನಂತರ ಅದು ಮಲಿನಗೊಂಡಿದೆ.
ಇದರಿಂದಾಗಿಯೇ ನಾಯಕತ್ವದ ಓಟದಲ್ಲಿ ಜೇಟ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಹಿಂದೆ ಉಳಿದವರಿಗೆ ಮುಂದೆ ಹೋದವರನ್ನು ಹಿಂದಕ್ಕೆ ತಳ್ಳಲು ಇರುವ ಏಕೈಕ ದಾರಿ ಎಂದರೆ ಕಾಲೆಳೆದು ಬೀಳಿಸುವುದು. ಸುಷ್ಮಾ ಆ ಪ್ರಯತ್ನವನ್ನೇ ಮಾಡಿರುವುದು.

Monday, May 23, 2011

ಮುಖಭಂಗ ಮಾಡಿಸಿಕೊಂಡ ರಾಜ್ಯಪಾಲ ಭಾರದ್ವಾಜ

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮತ್ತೊಂದು ಬಾರಿ ಜೀವದಾನ ಪಡೆದಿದ್ದಾರೆ. ರಾಜ್ಯದ ವಿಧಾನಸಭೆಯನ್ನು ಅಮಾನತ್‌ನಲ್ಲಿರಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. `ರಾಷ್ಟ್ರಪತಿ ಆಳ್ವಿಕೆ ಎನ್ನುವುದು ಸಂವಿಧಾನದತ್ತ ಅಧಿಕಾರ ಹೊಂದಿರುವ ವ್ಯಕ್ತಿಗಳು ಮಾತ್ರ ತೀರ್ಮಾನಿಸಬೇಕಾದ ವಿಚಾರ, ಹಾದಿಬೀದಿಯಲ್ಲಿ ಬಗೆಹರಿಸುವಂತಹದ್ದಲ್ಲ~ ಎಂದು ರಾಜ್ಯಪಾಲ ಎಚ್.ಆರ.ಭಾರದ್ವಾಜ  ಅವರು ಕಳೆದ ವಾರ ಹಠಾತ್ ಜ್ಞಾನೋದಯವಾದವರಂತೆ ಹೇಳಿದ್ದರು.  ಈ ಸಾಮಾನ್ಯ ಜ್ಞಾನದಂತೆ ಅವರು ನಡೆದುಕೊಂಡಿದ್ದರೆ ಮುಜುಗರಪಟ್ಟುಕೊಳ್ಳಬೇಕಾದ ಇಂದಿನ ಪರಿಸ್ಥಿತಿಯನ್ನು ಅವರು ಎದುರಿಸುತ್ತಿರಲಿಲ್ಲವೇನೋ? ಆದರೆ ಭಾರದ್ವಾಜರ ಕತೆ ` ತೋಳ ಬಂತು ತೋಳ~ ಎಂದು ಸುಳ್ಳುಸುಳ್ಳೇ ಕೂಗುತ್ತಾ ಊರಜನರನ್ನು ಮೋಸಮಾಡುತ್ತಿದ್ದ ಹೊಲಕಾಯುವ ಹುಡುಗನಂತಾಗಿದೆ. ನಿಜವಾಗಿ ತೋಳ ಬಂದಾಗ ಆ ಹುಡುಗನ ಕೂಗಿಗೆ ಯಾರೂ ಓಗೊಡಲೇ ಇಲ್ಲವಂತೆ. ಭಾರದ್ವಾಜರದ್ದೂ ಅದೇ ಸ್ಥಿತಿ.
`ಮುಖ್ಯಮಂತ್ರಿ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಪತ್ರ ನೀಡಿದ್ದ ಹದಿನಾರು ಭಿನ್ನಮತೀಯ ಶಾಸಕರು  ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿದ್ದರೆ ಸರ್ಕಾರ ಪತನಗೊಳ್ಳುತ್ತಿತ್ತು. ಅವರನ್ನು ಕಲಾಪದಲ್ಲಿ ಭಾಗವಹಿಸದಂತೆ ಮಾಡಿರುವುದು ಅವರನ್ನು ಅನರ್ಹತೆಗೊಳಿಸಿದ್ದ ಸ್ಪೀಕರ್ ಆದೇಶ. ಈ ಆದೇಶ ಅಕ್ರಮ ಎಂದು ಸಾರಿ ಸುಪ್ರೀಂಕೋರ್ಟ್ ರದ್ದುಮಾಡಿದೆ. ಈ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಾಬೀತುಪಡಿಸಿದ್ದ ಬಹುಮತ ಕೂಡಾ ಅಕ್ರಮ~ ಎನ್ನುವುದು ರಾಜ್ಯಪಾಲರ ಸರಳವಾದ ವಾದ. ಸುಪ್ರೀಂಕೋರ್ಟ್ ತೀರ್ಪನ್ನೇ ಆಧಾರವಾಗಿಟ್ಟುಕೊಂಡು ರಾಜ್ಯಪಾಲರು ದಾಳ ಉರುಳಿಸಿದ್ದರು. ಅನಿವಾರ‌್ಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಕೂಡಾ ತಮ್ಮ ನಿರ್ಧಾರವನ್ನು ಸಮರ್ಥಿಸಬಹುದು ಎನ್ನುವ ನಿರೀಕ್ಷೆ ಭಾರದ್ವಾಜರಲ್ಲಿ ಇತ್ತೋ ಏನೋ? ಕೇಂದ್ರ ಸರ್ಕಾರ ಅವರ ಶಿಫಾರಸನ್ನು ಒಪ್ಪಿಕೊಂಡಿದ್ದರೆ ಪ್ರಕರಣ ಖಂಡಿತ ನ್ಯಾಯಾಲಯದ ಮೆಟ್ಟಿಲೇರುತ್ತಿತ್ತು. ಆದರೆ ಕೇಂದ್ರ ಸರ್ಕಾರ ಅದಕ್ಕೆ ಅವಕಾಶವನ್ನೇ ನೀಡಿಲ್ಲ. ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದ ಹಿನ್ನೆಲೆಯಲ್ಲಿಯೂ ಕಾನೂನಿನ ಆಧಾರದಲ್ಲಿ ಮಾಡಿರುವ ವಿಮರ್ಶೆಗಿಂತ   ರಾಜಕೀಯ ಕೋನದಿಂದ ಮಾಡಿದ ಲೆಕ್ಕಾಚಾರವೇ ಮುಖ್ಯಪಾತ್ರ ವಹಿಸಿದಂತೆ ತೋರುತ್ತಿದೆ. ವಿವಾದಾತ್ಮಕವಾದ ಸಂವಿಧಾನದ 356ನೇ ಪರಿಚ್ಚೇದದ ಬಳಕೆಗೆ ಸಾರ್ವತ್ರಿಕವಾದ ಜನವಿರೋಧ ಮತ್ತು ಈ ವಿಷಯದಲ್ಲಿ ಬಹುಸೂಕ್ಷ್ಮವಾಗಿರುವ ಸುಪ್ರೀಂಕೋರ್ಟ್ ನಿಲುವಿಗೆ ಕೇಂದ್ರ ಸರ್ಕಾರ ಹೆದರಿದಂತೆ ಕಾಣುತ್ತಿದೆ.
ರಾಜ್ಯಪಾಲ ಎಚ್.ಆರ್.ಭಾರದ್ವಾಜ ಅವರಿಗೆ ಇದು ಎರಡನೇ ಮುಖಭಂಗ. ಇದಕ್ಕೆ ಬಹುಮಟ್ಟಿಗೆ ಅವರೂ ಜವಾಬ್ದಾರಿ. ಕರ್ನಾಟಕದ ರಾಜಭವನ ಪ್ರವೇಶ ಮಾಡಿದ ದಿನದಿಂದ ಇಲ್ಲಿಯ ವರೆಗೆ ರಾಜ್ಯಪಾಲರು ನೂರಾರು ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲೆಲ್ಲಾ ಅವರು ಸಂದರ್ಭದ ಔಚಿತ್ಯವನ್ನು ಮರೆತು ರಾಜಕೀಯ ಮಾತನಾಡಿದ್ದೇ ಹೆಚ್ಚು. ಅವರನ್ನು ಕೆಣಕಲೆಂದೇ ಪತ್ರಕರ್ತರು ರಾಜ್ಯಸರ್ಕಾರದ ಬಗ್ಗೆ ಪ್ರಶ್ನಿಸುತ್ತಾರೆ. ತಕ್ಷಣ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ದ ಸಿಡಿಯುತ್ತಾ ಬೋನಿಗೆ ಬೀಳುತ್ತಾರೆ. ಇಷ್ಟೇ ಅಲ್ಲ, ಕಾಂಗ್ರೆಸ್-ಜೆಡಿ (ಎಸ್) ನಾಯಕರು ಭೇಟಿಯಾಗಲು ಬಂದರೆ ಕೈಹಿಡಿದು ರಾಜಭವನದೊಳಗೆ ಕರೆದೊಯ್ಯುವ ಭಾರದ್ವಾಜರು, ಬಿಜೆಪಿ ನಾಯಕರು ಹೊರಗಿನ ಬಾಗಿಲು ಕಾಯುವಂತೆ ಮಾಡುತ್ತಾರೆ, ಇಲ್ಲವೇ ಭೇಟಿಗೆ ಅನುಮತಿ ನಿರಾಕರಿಸುತ್ತಾರೆ. ಶಿಷ್ಟಾಚಾರವನ್ನು ಉಲ್ಲಂಘಿಸಿದ  ಈ ನಡವಳಿಕೆಯಿಂದಾಗಿಯೇ ಸಂವಿಧಾನಬದ್ದವೆಂದು ಸಮರ್ಥಿಸಿಕೊಳ್ಳುತ್ತಿದ್ದ ಅವರ ಕೈಗೊಂಡ ಕ್ರಮವನ್ನು ಜನತೆ ಸಂಶಯದಿಂದ ನೋಡುವಂತಾಗಿದ್ದು. ಈ ಜನಾಪ್ರಾಯವೇ ಕೇಂದ್ರ ಸರ್ಕಾರದ ಕೈಗಳನ್ನೂ ಕಟ್ಟಿಹಾಕಿರುವುದು.
 ಜನತೆಯಲ್ಲಿನ ಇಂತಹ ಸಂಶಯಕ್ಕೆ ಎಚ್.ಆರ್.ಭಾರದ್ವಾಜರ ನಡೆ-ನುಡಿಯೊಂದೇ ಕಾರಣ ಅಲ್ಲ, ಬೇರೆ ಐತಿಹಾಸಿಕವಾದ ಕಾರಣಗಳೂ ಇವೆ. ರಾಜ್ಯಪಾಲ ಎಂದಾಕ್ಷಣ ಜನರ ಕಣ್ಣಮುಂದೆ  1952ರಲ್ಲಿ ಕೇರಳ ವಿಧಾನಸಭೆಯಲ್ಲಿ ಅಲ್ಪಬಹುಮತಹೊಂದಿದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ್ದ ರಾಜ್ಯಪಾಲ ಶ್ರೀ ಪ್ರಕಾಶಂ ಅವರಿಂದ  ಹಿಡಿದು ವೆಂಕಟಸುಬ್ಬಯ್ಯ, ನಾಂದೇಡ್ಲ ಭಾಸ್ಕರರಾವ್,ಜಗಮೋಹನ್ ಬೂಟಾಸಿಂಗ್, ಸೈಯ್ಯದ್ ರಜ್ವಿ ವರೆಗೆ ಹಲವು ರಾಜ್ಯಪಾಲರು ಹಾದುಹೋಗುತ್ತಾರೆ.ಬಹುಮತ ಹೊಂದಿದ್ದ ಸರ್ಕಾರಗಳನ್ನು ಉರುಳಿಸಲು ಕೇಂದ್ರ ಸರ್ಕಾರ ರಾಜಭವನವನ್ನು ದುರುಪಯೋಗ ಮಾಡಿಕೊಂಡ ಹಲವಾರು ಪ್ರಕರಣಗಳು ನೆನೆಪಾಗುತ್ತವೆ. ಇದನ್ನು ಪ್ರಾರಂಭಿಸಿದ್ದು ಕಾಂಗ್ರೆಸ್ ಪಕ್ಷವಾದರೂ ಅವಕಾಶ ಸಿಕ್ಕಿದಾಗ ಅದನ್ನು ಮುಂದುವರಿಸಿಕೊಂಡು ಹೋಗಲು ಉಳಿದ ಪಕ್ಷಗಳು ಕೂಡಾ ಹಿಂಜರಿಯಲಿಲ್ಲ. ಮೊದಲ ಬಾರಿಗೆ 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಆಡಳಿತದ ಒಂಬತ್ತು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಎನ್‌ಡಿಎ ಕಾಲದಲ್ಲಿ ಚುನಾವಣೆ ಮೂಲಕ ಬಿಹಾರದಲ್ಲಿ ಅಧಿಕಾರಕ್ಕೆ ಬರುವುದು ಸಾಧ್ಯವಾಗದೆ ಇದ್ದಾಗ ಸಮತಾ ಪಕ್ಷದ ನಾಯಕ ಜಾರ್ಜ್ ಫರ್ನಾಂಡಿಸ್ ಎರಡು ಬಾರಿ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನಿಸಿದ್ದರು. ಅದರ ನಂತರ ಮಮತಾ ಬ್ಯಾನರ್ಜಿ ಒತ್ತಡಕ್ಕೆ ಸಿಕ್ಕಿ ಪಶ್ಚಿಮಬಂಗಾಳದಲ್ಲಿಯೂ ಅವರು ಈ ಪ್ರಯತ್ನ ನಡೆಸಿದ್ದರು.
ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು `ಅತ್ಯಂತ ಅನಿವಾರ‌್ಯ ಸಂದರ್ಭದಲ್ಲಿ, ಕಟ್ಟಕಡೆಯ ಪರಿಹಾರವಾಗಿ ಮಾತ್ರ ಸಂವಿಧಾನದ 356ನೇ ಪರಿಚ್ಚೇದವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳಬಹುದು. ಆದರೆ ಭಾರತದ ಪ್ರಜಾಪ್ರಭುತ್ವ ಪ್ರಬುದ್ಧಗೊಂಡು ಬೆಳೆಯುತ್ತಾ ಹೋದಂತೆ ಇದನ್ನು ಬಳಸಬೇಕಾದ ಅವಕಾಶಗಳೂ ಕಡಿಮೆಯಾಗುತ್ತಾ ಹೋಗಿ ಮುಂದೊಂದು ದಿನ ಈ ಪರಿಚ್ಚೇದ `ಸತ್ತುಹೋಗಿರುವ ಅಕ್ಷರ~ಗಳಾಗಬಹುದು~ ಎಂದು ಆಶಿಸಿದ್ದರು. ಅಂಬೇಡ್ಕರ್ ಅವರ ಉಳಿದ ಹಲವಾರು ಆಶಯಗಳಂತೆ ಇದು ಕೂಡಾ ಈಡೇರಲೇ ಇಲ್ಲ.
ಎಸ್.ಆರ್.ಬೊಮ್ಮಾಯಿ ಮತ್ತು ಭಾರತ ಸರ್ಕಾರದ ನಡುವಿನ ವ್ಯಾಜ್ಯದಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಪಿ.ಜೀವನರೆಡ್ಡಿ ಅವರು ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸುತ್ತಾ ` ಸಂವಿಧಾನ ಜಾರಿಯಾದ ದಿನದಿಂದ ಈ ವರೆಗೆ (ಮಾರ್ಚ್ 11,1994) ತೊಂಬತ್ತಕ್ಕೂ ಹೆಚ್ಚು ಬಾರಿ 356ನೇ ಪರಿಚ್ಚೇದದಡಿ ರಾಷ್ಟ್ರಪತಿಗಳು ಕ್ರಮಕೈಗೊಂಡಿದ್ದಾರೆ. `ಸತ್ತುಹೋಗಿರುವ ಅಕ್ಷರ~ಗಳಾಗಬಹುದೆಂದು ಅಂಬೇಡ್ಕರ್ ನಿರೀಕ್ಷಿಸಿದ್ದ ಈ ಪರಿಚ್ಚೇದ ಈಗ ಹಲವಾರು ರಾಜ್ಯಸರ್ಕಾರ ಮತ್ತು ವಿಧಾನಸಭೆಗಳ ಪಾಲಿಗೆ `ಸಾವಿನ ಅಕ್ಷರ~ಗಳಾಗಿವೆ~ ಎಂದು ಹೇಳಿದ್ದರು. ಇತಿಹಾಸವನ್ನು ಮುಂದಿಟ್ಟುಕೊಂಡೇ ಜನ ವರ್ತಮಾನವನ್ನು ನೋಡುವುದರಿಂದಾಗಿ ಬಹುಸಂಖ್ಯೆಯಲ್ಲಿ ಜನ `ರಾಜ್ಯಪಾಲರೆಂದರೆ ರಾಜ್ಯದ ವಿರೋಧಿಗಳು~ ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಇದರಿಂದಾಗಿ `ಅಭದ್ರಸ್ಥಿತಿಯಲ್ಲಿದ್ದ ಸರ್ಕಾರವನ್ನು ಭದ್ರಗೊಳಿಸಲು ರಾಜ್ಯಪಾಲರನ್ನು ಎದುರುಹಾಕಿಕೊಂಡು ಕೂಗಿಕೊಂಡರೆ ಸಾಕು, ಜನ ನೆರವಿಗೆ ಬರುತ್ತಾರೆ~ ಎನ್ನುವಂತಾಗಿದೆ.  ಇಂತಹ ಪರಿಸ್ಥಿತಿಯಲ್ಲಿ ಭಾರದ್ವಾಜರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿತ್ತು. ಅವರು ಹಾದಿ ಕಂಡಲ್ಲೆಲ್ಲಾ ನುಗ್ಗಿಬಿಟ್ಟು ಎಡವಿಬಿದ್ದಿದ್ದಾರೆ.
ಈ ಬೆಳವಣಿಗೆಗಳಿಂದಾಗಿ ರಾಜ್ಯಪಾಲರ ಹುದ್ದೆಯ ಚಾರಿತ್ರ್ಯಹನನವಾಗುತ್ತಿರುವುದು ಮಾತ್ರವಲ್ಲ, ಪ್ರಜಾಪ್ರಭುತ್ವದ ರಕ್ಷಣೆಗಾಗಿಯೇ ರೂಪಿಸಲಾಗಿರುವ ಸಂವಿಧಾನದ 356ನೇ ಪರಿಚ್ಚೇದದ ವಿರುದ್ದವೇ ಜನ ತಿರುಗಿಬೀಳುವಂತಾಗಿದೆ. ಇದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಕರ್ನಾಟಕದ ಉದಾಹರಣೆಯನ್ನೇ ನೋಡುವ. ಇತ್ತೀಚಿನ ಎಲ್ಲ ರಾಜಕೀಯ ಬಿಕ್ಕಟ್ಟುಗಳಿಗೆ ಮೂಲ ಕಾರಣ -ಬಿಜೆಪಿ ಪ್ರಾರಂಭಿಸಿದ್ದ ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣ. ಪಕ್ಷಾಂತರ ನಿಷೇಧ ಕಾಯಿದೆಯನ್ನು ದುಡ್ಡಿನ ಬಲದಿಂದ ನಿಷ್ಕ್ರೀಯಗೊಳಿಸಿದ ಪಾಪಕಾರ್ಯ ಅದು. ಅದಕ್ಕಾಗಿ ಬಳಕೆಯಾದ ದುಡ್ಡಿನ ಮೂಲ ರಾಜ್ಯದಲ್ಲಿ ಅನಿಯಂತ್ರಿತವಾಗಿ ನಡೆದ ಅಕ್ರಮಗಣಿಗಾರಿಕೆಯಲ್ಲಿದೆ. ಇವೆಲ್ಲವೂ ಒಂದು ವಿಷವರ್ತುಲ. ದುಡ್ಡಿನಿಂದ ಸಾಧ್ಯ ಇಲ್ಲ ಎಂದು ಅನಿಸಿದಾಗ ಸರ್ಕಾರ ಸಾಂವಿಧಾನಿಕ ಹುದ್ದೆಯಾದ ಸ್ಪೀಕರ್ ಸ್ಥಾನವನ್ನು ಕೈಗೊಂಬೆಯನ್ನಾಗಿ ಮಾಡಿ ಅವರಿಂದ ಮಾಡಬಾರದ ಕೆಲಸವನ್ನೆಲ್ಲ ಮಾಡಿಸಿತು. ಇದೇ ವೇಳೆ ಸರ್ಕಾರದ ಅಕ್ರಮಗಳ ವಿರುದ್ಧ ದನಿ ಎತ್ತಿದವರನ್ನು ಜಾತಿಯ ಭೂತ ತೋರಿಸಿ ಹೆದರಿಸಲಾಗುತ್ತಿದೆ. ಈ ಎಲ್ಲ ನಡವಳಿಕೆಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವುದೇ ಆಗಿದೆ. ಮತದಾರರೇ ಭ್ರಷ್ಟರಾಗಿ ಕಣ್ಣುಕುರುಡು ಮಾಡಿಕೊಂಡಿರುವ ಸ್ಥಿತಿಯಲ್ಲಿ ಚುನಾವಣೆ ಕೂಡಾ ಪರಿಹಾರ ಅಲ್ಲ ಎನ್ನುವಂತಾಗಿದೆ. ಹಾಗಿದ್ದರೆ ಏನು ಪರಿಹಾರ?
ಸರ್ಕಾರವೊಂದು ಅಧಿಕಾರದಲ್ಲಿ ಮುಂದುವರಿಯಲು ಬಹುಮತವೊಂದೇ ಆಧಾರವೇ? ರಾಷ್ಟ್ರಪತಿ ಆಳ್ವಿಕೆಯ ಪ್ರಶ್ನೆ ಚರ್ಚೆಗೆ ಬಂದಾಗೆಲ್ಲ ಎಲ್ಲರೂ ಎಸ್.ಆರ್.ಬೊಮ್ಮಾಯಿ ಮತ್ತು ಕೇಂದ್ರ ಸರ್ಕಾರದ ನಡುವಿನ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸುತ್ತಾರೆ. ಈ ತೀರ್ಪು ರಾಷ್ಟ್ರಪತಿ ಆಳ್ವಿಕೆಯನ್ನು ಸಾರಸಗಟಾಗಿ ವಿರೋಧಿಸಿದೆ ಎನ್ನುವ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಆದರೆ ವಾಸ್ತವ ಸ್ಥಿತಿ ಅದಲ್ಲ. `ಒಂದು ಸರ್ಕಾರ ಹೊಂದಿರುವ ಬಹುಮತ ವಿಧಾನಸಭೆಯಲ್ಲಿ ನಿರ್ಧಾರವಾಗಬೇಕೇ ಹೊರತು ರಾಜಭವನದಲ್ಲಿ ಅಲ್ಲ~ ಎಂದು ಒಂಬತ್ತು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಪೀಠ ಹೇಳಿದ್ದು ನಿಜ. ಆದರೆ ಒಂದು ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಸದನದೊಳಗಿನ ಬಹುಮತವೊಂದೇ ಆಧಾರ ಎಂದು ಅದು ಹೇಳಿಲ್ಲ. ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯ ವಿಚಾರಣೆ ನಡೆಸಿತ್ತೆನ್ನುವುದು ಬಹಳ ಮಂದಿಗೆ ತಿಳಿದಿಲ್ಲ. ಇವುಗಳಲ್ಲಿ ಕರ್ನಾಟಕ, ನಾಗಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಮಾತ್ರ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಅದೇ ನ್ಯಾಯಪೀಠ ಬಾಬರಿ ಮಸೀದಿ ಧ್ವಂಸದ ನಂತರ  ಮಧ್ಯಪ್ರದೇಶ, ರಾಜಸ್ತಾನ ಮತ್ತು ಹಿಮಾಚಲಪ್ರದೇಶದ ಸರ್ಕಾರಗಳನ್ನು ವಜಾಮಾಡಿದ್ದ ಕೇಂದ್ರಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು. ಸಂವಿಧಾನದ ಆಶಯವಾದ ಜಾತ್ಯತೀತ ನಿಲುವಿಗೆ ವಿರುದ್ದವಾಗಿ ನಡೆದುಕೊಳ್ಳುವ ಸರ್ಕಾರದ ವಿರುದ್ದ 356ನೇ ಪರಿಚ್ಚೇದದಡಿ ಕ್ರಮಕೈಗೊಳ್ಳಬಹುದೆಂದು ನ್ಯಾಯಪೀಠ ತನ್ನ ತೀರ್ಪನ್ನು ಸಮರ್ಥಿಸಿಕೊಂಡಿತ್ತು. ಭ್ರಷ್ಟಾಚಾರದ ಕಾರಣಕ್ಕಾಗಿಯೇ ತಮಿಳುನಾಡು (1976) ಮತ್ತು ಮಣಿಪುರ (1979) ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ನಿದರ್ಶನಗಳಿವೆ.
ಸಂವಿಧಾನದ ಬಿಕ್ಕಟ್ಟುಗಳು ಒಂದೇ ಮಾದರಿಯದ್ದಾಗಿರುವುದಿಲ್ಲ, ಆದ್ದರಿಂದ ಅದಕ್ಕೆ ಏಕರೂಪದ ಪರಿಹಾರವೂ ಇರುವುದಿಲ್ಲ. ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದ ರಾಜಕೀಯ ಬಿಕ್ಕಟ್ಟು ಕೂಡಾ ಹೊಸಬಗೆಯದು. ಹಿಂದೆಂದೂ ಈ ಬಗೆಯ ಬಿಕ್ಕಟ್ಟು ಬೇರೆ ರಾಜ್ಯಗಳಲ್ಲಿ ಸೃಷ್ಟಿಯಾಗಿರಲಿಲ್ಲ. 2010ರ ಅಕ್ಟೋಬರ್ ಹನ್ನೆರಡರಿಂದ (ವಿಶ್ವಾಸಮತಯಾಚನೆಯ ದಿನ) 2011ರ ಮೇ ಹದಿಮೂರರ (ಸುಪ್ರೀಂಕೋರ್ಟ್ ತೀರ್ಪಿನ ದಿನ) ವರೆಗಿನ ಏಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರ್ಕಾರದ ಸ್ಥಾನಮಾನ ಏನು ಎಂಬುದೇ ಇಲ್ಲಿ ಚರ್ಚೆಗೀಡಾಗಿದ್ದ ಪ್ರಶ್ನೆ. ಒಂದು ರೀತಿಯಲ್ಲಿ ಈ ಬಿಕ್ಕಟ್ಟು ಸೃಷ್ಟಿಗೆ ಸುಪ್ರೀಂಕೋರ್ಟ್ ತೀರ್ಪು ಕೂಡಾ ಕಾರಣವಾಗಿರುವುದರಿಂದ ಇದಕ್ಕೆ ಪರಿಹಾರ ಅಲ್ಲಿಂದಲೇ ಬಂದಿದ್ದರೆ ಭವಿಷ್ಯದಲ್ಲಿ ಕಾಣಿಸಿಕೊಳ್ಳುವ ಇಂತಹ ಬಿಕ್ಕಟ್ಟನ್ನು ಪರಿಹರಿಸಲು ಅದು ಮಾರ್ಗಸೂಚಿಯಾಗುತ್ತಿತ್ತು.ಇಲ್ಲಿಯ ವರೆಗೆ 356ನೇ ಪರಿಚ್ಚೇದದಿಂದ ಉಂಟಾಗಿರುವ ಬಿಕ್ಕಟ್ಟುಗಳಿಗೆ ಸುಪ್ರೀಂಕೋರ್ಟ್ ತೀರ್ಪುಗಳೇ ಅಂತಿಮವಾಗಿ ಪರಿಹಾರ ಸೂಚಿಸಿದ್ದಲ್ಲವೇ? ಆದರೆ ಯುಪಿಎ ಸರ್ಕಾರ ಅದಕ್ಕೂ ಅವಕಾಶ ನೀಡದೆ ಕೈತೊಳೆದುಕೊಂಡು ಬಿಟ್ಟಿದೆ.

Monday, May 16, 2011

ಪ್ರಾದೇಶಿಕ ಪಕ್ಷಗಳ ಬಗ್ಗೆ ಹೆಚ್ಚುತ್ತಿರುವ ಒಲವು

‘ಪ್ರಾದೇಶಿಕ ಪಕ್ಷಗಳೆಂಬ ಶಾಪದಿಂದಾಗಿಯೇ ಸರ್ಕಾರಗಳು ಪೂರ್ಣಾವಧಿ ಬಾಳದೆ ಅನಿಶ್ಚಿತ ರಾಜಕೀಯದ ಕೆಟ್ಟಕಾಲ ಪ್ರಾರಂಭವಾಗಿರುವುದು. ಇವುಗಳಿಗೆ ಅಂಟಿಕೊಂಡಿರುವ ಪಕ್ಷಾಂತರದ ಪಿಡುಗಿನಿಂದಾಗಿಯೇ ರಾಜಕೀಯ ವ್ಯವಸ್ಥೆ ಭ್ರಷ್ಟಗೊಂಡಿರುವುದು..’ ಎಂದೆಲ್ಲಾ ಆರೋಪಿಸುವವರಿದ್ದಾರೆ.
 ಆದರೆ ಇತ್ತೀಚೆಗೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಸೇರಿದಂತೆ ಇತ್ತೀಚಿನ ಬಹುತೇಕ  ಚುನಾವಣೆಗಳಲ್ಲಿ  ಭಾರತೀಯ ಮತದಾರರು ಮೇಲಿನ ಆರೋಪಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಂತೆ ಕಾಣುತ್ತಿಲ್ಲವೇ? ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ತೋರಿಸುತ್ತಿದ್ದಾರೆಂದು ಅನಿಸುವುದಿಲ್ಲವೇ?
ಪಶ್ಚಿಮಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಎಡಿಎಂಕೆಗಳೇ ಗೆಲುವಿನ ಮುಂಚೂಣಿಯಲ್ಲಿರುವುದು.ಅಸ್ಸಾಂನಲ್ಲಿ ತರುಣ್ ಗೋಗೋಯ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಪ್ರಾದೇಶಿಕ ಪಕ್ಷದ ನಾಯಕನ ಶೈಲಿಯಲ್ಲಿಯೇ ರಾಜ್ಯಭಾರ ಮಾಡಿಕೊಂಡು ಬಂದಿರುವುದು.

ಸಿಪಿಎಂನ ದೆಹಲಿ ನಾಯಕರಿಂದ ನಿರಂತರವಾಗಿ ಅವಮಾನಕ್ಕೆಡಾಗುತ್ತಾ ಬಂದ ವಿ.ಎಸ್ ಅಚ್ಯುತಾನಂದನ್ ಅವರನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಕೇರಳ ಮತದಾರರ ರೋಷದಲ್ಲಿ ‘ಮಲೆಯಾಳಿ ಸ್ವಾಭಿಮಾನ’ದ ಅಭಿವ್ಯಕ್ತಿ ಇರಲಿಲ್ಲವೇ?
ಕಾಂಗ್ರೆಸ್ ವಿರುದ್ಧ ಬಂಡೆದ್ದ ಪುದುಚೇರಿಯ ಸರಳ-ಸಜ್ಜನ ನಾಯಕ ಎನ್.ರಂಗಸ್ವಾಮಿ ಅವರನ್ನು ಗೆಲ್ಲಿಸಿದ್ದು ಆ ಸಣ್ಣ ರಾಜ್ಯದ ಮತದಾರರ ಆತ್ಮಾಭಿಮಾನದ ದೊಡ್ಡ ಶಕ್ತಿಯಲ್ಲವೇ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದು ಮಾತ್ರವಲ್ಲ, ದೇಶದ ಎರಡನೇ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಭೌಗೋಳಿಕ ಮಿತಿ ಕೂಡಾ ಬಯಲಾಗಿದೆ.

ಐದು ರಾಜ್ಯಗಳ ಒಟ್ಟು 824 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಐವರು ಶಾಸಕರು ಆಯ್ಕೆಯಾಗಿರುವುದನ್ನು ಬಿಟ್ಟರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಕನಿಷ್ಠ ಒಂದು ಸ್ಥಾನವನ್ನೂ ಗಳಿಸಲು ಸಾಧ್ಯವಾಗಿಲ್ಲ.
ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವಾಗ ಬಿಜೆಪಿ ಈ ಐದು ರಾಜ್ಯಗಳಲ್ಲಿರುವ ಒಟ್ಟು 115 ಲೋಕಸಭಾ ಸ್ಥಾನಗಳನ್ನು ಪಕ್ಕಕ್ಕೆ ಇಟ್ಟು ರಾಜಕೀಯ ಬಲದ ಲೆಕ್ಕಾಚಾರ ಮಾಡಬೇಕಾಗುತ್ತದೆ.
2014ರ ಲೋಕಸಭಾ ಚುನಾವಣೆಗಿಂತ ಮೊದಲು ವಿಧಾನಸಭಾ ಚುನಾವಣೆ ನಡೆಯಲಿರುವ 19 ರಾಜ್ಯಗಳ ರಾಜಕೀಯದ ಮೇಲೆ ಕಣ್ಣಾಡಿಸಿದರೂ ರಾಷ್ಟ್ರೀಯ ಪಕ್ಷಗಳ ಬಲ ಕುಂದುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

ಈ 19 ರಾಜ್ಯಗಳಲ್ಲಿ ಎಂಟರಲ್ಲಿ (ಆಂಧ್ರಪ್ರದೇಶ, ದೆಹಲಿ, ಗೋವಾ, ಮಣಿಪುರ, ರಾಜಸ್ತಾನ,ಮೇಘಾಲಯ ಮತ್ತು ಮಿಜೋರಾಂ) ಕಾಂಗ್ರೆಸ್ ಅಧಿಕಾರದಲ್ಲಿದೆ. ಇನ್ನೊಂದು ರಾಜ್ಯವಾದ ಜಮ್ಮು ಮತ್ತು ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಜತೆಗಿನ ಮೈತ್ರಿ ಸರ್ಕಾರ ಇದೆ.
ಎರಡು ಅವಧಿಗಳ ಆಡಳಿತ ವಿರೋಧಿ ಅಲೆ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಚಳುವಳಿ ಮತ್ತು ಜಗನ್‌ಮೋಹನ್ ರೆಡ್ಡಿಯವರ ಬಂಡಾಯದಿಂದಾಗಿ ಆಂಧ್ರಪ್ರದೇಶದ ಕಾಂಗ್ರೆಸ್ ಆಗಲೇ ನಿರ್ಗಮನದ ಹಾದಿಯಲ್ಲಿದೆ. ಮೂರನೇ ಅವಧಿಗೆ ಚುನಾವಣೆ ಎದುರಿಸಲಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಮನ್‌ವೆಲ್ತ್ ಗೇಮ್ಸ್ ಹಗರಣದಿಂದಾಗಿ ಮುಖ ಮಸಿಮಾಡಿಕೊಂಡು ಮತದಾರರನ್ನು ಎದುರಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಕಷ್ಟ. ಈಶಾನ್ಯದ ಮೂರು ಸಣ್ಣ ರಾಜ್ಯಗಳನ್ನು ಬಿಟ್ಟರೆ ಕಾಂಗ್ರೆಸ್ ಭರವಸೆ ಇಡಬಲ್ಲಂತಹ ಏಕೈಕ ರಾಜ್ಯ ರಾಜಸ್ತಾನ ಮಾತ್ರ. ಅದು ಪಕ್ಷಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರ ವೈಯುಕ್ತಿಕ ವರ್ಚಸ್ಸನ್ನು ಅವಲಂಬಿಸಿದೆ.
ರಾಜಸ್ತಾನ  ಮತ್ತು ದೆಹಲಿ ರಾಜ್ಯಗಳಲ್ಲಿ ತೃತೀಯರಂಗದ ಯಾವ ಪಕ್ಷವೂ ಇಲ್ಲದಿರುವ ಕಾರಣ ಕಾಂಗ್ರೆಸ್‌ನ ನಷ್ಟ  ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಲಾಭವಾಗಬಹುದು.
ಬಿಜೆಪಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ  ಆರು ರಾಜ್ಯಗಳು ( ಗುಜರಾತ್,ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ) ವಿಧಾನಸಭಾ ಚುನಾವಣೆ ಎದುರಿಸಲಿವೆ. 1995ರಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿ ಮೂರನೇ ಚುನಾವಣೆಯನ್ನು ಎದುರಿಸುವ ತಯಾರಿಯಲ್ಲಿದ್ದಾರೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿಯೂ ಬಿಜೆಪಿಯದ್ದು ಈಗ ಎರಡನೇ ಅವಧಿಯ ಸರ್ಕಾರ. ಗುಜರಾತ್‌ನಲ್ಲಿ ಸತತ ಐದು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ರಾಜಕೀಯವಾಗಿ ಮಾತ್ರವಲ್ಲ ನೈತಿಕವಾಗಿಯೂ ಕುಗ್ಗಿಹೋಗಿದೆ. ಆದ್ದರಿಂದ ನರೇಂದ್ರಮೋದಿ ಈಗಲೂ ಸುರಕ್ಷಿತವಾಗಿರುವಂತೆ ಕಾಣುತ್ತಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರಗಳ ಆರೋಪಗಳು ಎಷ್ಟೇ ಇದ್ದರೂ ಈ ವರೆಗಿನ ಉಪಚುನಾವಣೆಗಳಲ್ಲಿ ಮತದಾರರು ಅವರ ಕೈಬಿಟ್ಟಿಲ್ಲ. ಭ್ರಷ್ಟ್ರರ ಬೆನ್ನಟ್ಟಿ ಮನೆಗೆ ಅಟ್ಟುತ್ತಿರುವ ದೇಶದ ಪ್ರಜ್ಞಾವಂತ ಮತದಾರರಿಗೆ ಸವಾಲು ಹಾಕುವಂತಿದೆ ಕರ್ನಾಟಕದ ಮತದಾರರ ವರ್ತನೆ.

ಇದು ಬಿಜೆಪಿಗೆ ನೆರವಾಗಲೂ ಬಹುದು.ಆದರೆ ಇದೇ ಮಾತನ್ನು ಇನ್ನಿಬ್ಬರು ಮುಖ್ಯಮಂತ್ರಿಗಳಾದ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ರಮಣ್‌ಸಿಂಗ್ ಅವರ ಬಗ್ಗೆ ಹೇಳುವ ಹಾಗಿಲ್ಲ. ಇಬ್ಬರೂ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಾದೇಶಿಕ ಪಕ್ಷಗಳ ಸತ್ವಪರೀಕ್ಷೆಯ ಫಲಿತಾಂಶ ಮೊದಲು ಗೊತ್ತಾಗಲಿರುವುದು ಮುಂದಿನವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ. ಕಾಂಗ್ರೆಸ್ ಪಾಲಿಗೆ ಸಂಖ್ಯೆ ಮತ್ತು ಪ್ರತಿಷ್ಠೆಗಳೆರಡರ ದೃಷ್ಟಿಯಿಂದಲೂ ಈ ಚುನಾವಣೆ ನಿರ್ಣಾಯಕ. ರಾಹುಲ್‌ಗಾಂಧಿಯ ರಾಜಕೀಯ ಭವಿಷ್ಯ ಕೂಡಾ ಈ ಚುನಾವಣೆಯನ್ನು ಅವಲಂಬಿಸಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಮುಖಭಂಗ ಅನುಭವಿಸಿದರೂ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಮೈಕೊಡವಿ ಎದ್ದುನಿಂತು ಶಕ್ತಿಪ್ರದರ್ಶನ ಮಾಡಿತ್ತು.ವಿಧಾನಸಭಾ ಚುನಾವಣೆಯಲ್ಲಿಯೂ ಈ ಮ್ಯಾಜಿಕ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ರಾಹುಲ್‌ಗಾಂಧಿ.

ಆದರೆ ಪ್ರಾದೇಶಿಕ ರಾಜಕಾರಣದ ಎಲ್ಲ ವರಸೆಗಳನ್ನು ಬಲ್ಲ ಮಾಯಾವತಿ ಮತ್ತು ಮುಲಾಯಂಸಿಂಗ್ ಅವರಂತಹ ಚಾಣಕ್ಷ ರಾಜಕಾರಣಿಗಳನ್ನು ನಿರ್ಲಕ್ಷಿಸುವುದು ಸಾಧ್ಯ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯ ಜತೆಯಲ್ಲಿಯೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಒರಿಸ್ಸಾದಲ್ಲಿ ಬಿಜು ಜನತಾದಳಕ್ಕೆ ಸಮರ್ಥ ಎದುರಾಳಿಯೇ ಇಲ್ಲದಿರುವಂತಹ ಸ್ಥಿತಿ ಇದೆ. ಅಲ್ಲಿ ಕಾಂಗ್ರೆಸ್ ಒಂದಷ್ಟು ಸ್ಥಾನಗಳನ್ನು ಗಳಿಸಲೂ ಬಹುದು.

ಆದರೆ ಬಿಜೆಪಿಗೆ ಹೆಚ್ಚಿನ ಲಾಭವಾಗದು. ಭವಿಷ್ಯದ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನವೀನ್ ಪಟ್ನಾಯಕ್  ಹ್ಯಾಟ್ರಿಕ್ ಸಾಧಿಸಿದರೆ ದೆಹಲಿ ಕಡೆ ಹೊರಡುವ ಸಾಧ್ಯತೆ ಇರುವುದರಿಂದ ಆ ರಾಜ್ಯದ ಮತದಾರರು ಆಶೀರ್ವದಿಸಲೂ ಬಹುದು.
ಪಂಜಾಬ್‌ನಲ್ಲಿ ಮಾತ್ರ ಪ್ರಾದೇಶಿಕ ಪಕ್ಷವಾದ ಅಕಾಲಿದಳದ ಅಧಿಕಾರ ಕೊನೆಗೊಂಡು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಿವೆ.
ಈ ರೀತಿ ಮೇಲ್ನೋಟಕ್ಕೆ ಪ್ರಾದೇಶಿಕ ಪಕ್ಷಗಳ ಬಲವರ್ಧನೆಯಾಗುತ್ತಿರುವಂತೆ ಕಾಣುತ್ತಿರುವುದು ನಿಜವಾದರೂ ವಾಸ್ತವ ಹಾಗಿಲ್ಲ. ಇದಕ್ಕೆ ಕಾರಣ ಜನಬೆಂಬಲದ ಕೊರತೆ ಅಲ್ಲ.

ಪ್ರಾದೇಶಿಕ ಪಕ್ಷಗಳ ಮುಖ್ಯ ದೌರ್ಬಲ್ಯವಾದ ‘ದಾಯಾದಿ ಕಲಹ’ ಅವುಗಳನ್ನು ದುರ್ಬಲಗೊಳಿಸುತ್ತಿದೆ. ಈ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತಿರುವಂತೆ ಕಂಡರೂ ನಿಜವಾಗಿಯೂ ಇವುಗಳು ಕಾದಾಡುವುದು ಇನ್ನೊಂದು ಪ್ರಾದೇಶಿಕ ಪಕ್ಷದ ಜತೆಯಲ್ಲಿಯೇ.

ಹಾಗಿಲ್ಲದೆ ಇದ್ದಿದ್ದರೆ  ಲೋಕಸಭೆಯಲ್ಲಿ 205 ಸದಸ್ಯ ಬಲದ ಕಾಂಗ್ರೆಸ್ ಮತ್ತು 117 ಸದಸ್ಯ ಬಲದ ಬಿಜೆಪಿ ಎರಡೂ ವಿರೋಧ ಪಕ್ಷದಲ್ಲಿ ಕೂರಬೇಕಿತ್ತು. ಒಟ್ಟು 221 ಸದಸ್ಯಬಲದ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿರಬೇಕಿತ್ತು.

ಹಾಗಾಗುವುದೇ ಇಲ್ಲ. ಎಡಪಕ್ಷಗಳನ್ನು ಹೊರತುಪಡಿಸಿ ಲೋಕಸಭೆಯಲ್ಲಿ 33 ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ ಹೊಂದಿವೆ. ಇವುಗಳಲ್ಲಿ ಒಂಭತ್ತು ಯುಪಿಎ ಜತೆಯಲ್ಲಿವೆ, ಆರು ಎನ್‌ಡಿಎ ಜತೆಯಲ್ಲಿವೆ ಮತ್ತು ಹದಿನೆಂಟು ಪಕ್ಷಗಳು ಎರಡೂ ಮೈತ್ರಿಕೂಟದಲ್ಲಿ ಸೇರದೆ ಸ್ವತಂತ್ರವಾಗಿದ್ದುಕೊಂಡು ಆಗಾಗ ಷರತ್ತುಬದ್ದ ಬೆಂಬಲ ನೀಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಬಿಎಸ್‌ಪಿ ಮತ್ತು ಎಸ್‌ಪಿ ಜತೆಗಿನ ಕಾಂಗ್ರೆಸ್ ಪಕ್ಷದ ಸ್ನೇಹ ಮತ್ತು ದ್ವೇಷದ ಸಂಬಂಧ.
ಈ ಪ್ರಾದೇಶಿಕ ಪಕ್ಷಗಳ ಜಾತಕ ಬಿಡಿಸಿದರೆ ಅವುಗಳಲ್ಲಿ ಹೆಚ್ಚಿನವು ಒಂದರ ಜತೆ ಒಂದು ಹೊಂದುವುದೇ ಇಲ್ಲ. ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಬಿಹಾರದಲ್ಲಿ ಜೆಡಿ (ಯು) ಮತ್ತು ಆರ್‌ಜೆಡಿ, ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ, ಅಸ್ಸಾಂನಲ್ಲಿ ಅಸ್ಸಾಂ ಗಣ  ಪರಿಷತ್ ಮತ್ತು ಎಐಯುಡಿಎಫ್ ಪರಸ್ಪರ ವಿರೋಧಪಕ್ಷಗಳು.

ಇವುಗಳು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಆದರೆ ತನ್ನ ವಿರೋಧಿಯಾದ ಪ್ರಾದೇಶಿಕ ಪಕ್ಷದ ಜತೆ ಕೈಜೋಡಿಸಲಾರದು. ಪ್ರಾದೇಶಿಕ ಪಕ್ಷಗಳ ಈ ದೌರ್ಬಲ್ಯವನ್ನೇ ಬಳಸಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರದಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಅಧಿಕಾರ ಹಂಚಿಕೊಂಡಿರುವುದು. ಪ್ರಾದೇಶಿಕ ಪಕ್ಷಗಳ ನಾಯಕರು ಭ್ರಷ್ಟರು, ಅಧಿಕಾರದಾಹಿಗಳು ಎಂಬ ಪ್ರಚಾರ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ತಮ್ಮ ಕೈಯಲ್ಲಿಯೇ ಇರಿಸಿಕೊಳ್ಳಲು ನೆರವಾಗಿದೆ.
ಪ್ರಾದೇಶಿಕ ಪಕ್ಷಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ವಿರೋಧ-ಅಸಹನೆ ವ್ಯಕ್ತವಾಗಲು ಮುಖ್ಯ ಕಾರಣ- ಪ್ರಾದೇಶಿಕ ಪಕ್ಷಗಳ ಸಾಧನೆಯ ಮೌಲ್ಯಮಾಪನವನ್ನು ದೇಶದ ಉತ್ತರ ಭಾಗದ ರಾಜ್ಯಗಳಿಂದ ಪ್ರಾರಂಭಿಸುವ ತಪ್ಪನ್ನು ಎಲ್ಲರೂ ಮಾಡುತ್ತಿರುವುದು.

ದೇಶದ ಮೊದಲ ಪ್ರಾದೇಶಿಕ ಪಕ್ಷದ ರಚನೆಯಾಗಿದ್ದು ತಮಿಳುನಾಡಿನಲ್ಲಿ. 1967ರಲ್ಲಿ ಸಿ.ಎನ್.ಅಣ್ಣಾದೊರೈ ನಾಯಕತ್ವದ ಡಿಎಂಕೆಯಿಂದಾಗಿ ದೂಳೀಪಟವಾದ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಕೂಡಾ ಸ್ವಂತಬಲದಿಂದ ಮರಳಿ ಅಧಿಕಾರಕ್ಕೆ ಬರಲಾಗಿಲ್ಲ. ಕಳೆದ ನಾಲ್ಕು ದಶಕಗಳಿಂದ ಕಳಗಂಗಳೇ ಹಂಚಿಕೊಂಡು ಆ ರಾಜ್ಯವನ್ನು ಆಳಿವೆ.
ಆಂಧ್ರಪ್ರದೇಶದಲ್ಲಿ 1983ರ ನಂತರದ 23 ವರ್ಷಗಲ್ಲಿ ನಡುವಿನ ಏಳುವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿದ್ದದ್ದು ತೆಲುಗುದೇಶಂ ಎಂಬ ಪ್ರಾದೇಶಿಕ ಪಕ್ಷದ ಸರ್ಕಾರ. ಅಭಿವೃದ್ಧಿಯ ಯಾವ ಮಾನದಂಡದಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಇತರ ರಾಜ್ಯಗಳಿಗಿಂತ ಹಿಂದೆ ಉಳಿದಿದೆ?

ಕೇರಳದಲ್ಲಿ ಹೆಚ್ಚುಕಡಿಮೆ ಎಡಪಕ್ಷಗಳು ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಾ ಬಂದಿವೆ. ಬಿಜು ಜನತಾದಳವನ್ನು ಸತತ ಎರಡು ಬಾರಿ ಗೆಲ್ಲಿಸಿದ ಒರಿಸ್ಸಾದ ಮತದಾರರು ಮೂರ್ಖರಿರಲಾರರು.

ಮಹಾರಾಷ್ಟ್ರದಲ್ಲಿಯೂ ಕಳೆದ ಹದಿನೈದು ವರ್ಷಗಳಲ್ಲಿ ಒಂದೋ ಎನ್‌ಸಿಪಿ ಇಲ್ಲವೇ ಶಿವಸೇನೆಯನ್ನು ಕಟ್ಟಿಕೊಂಡ ಮೈತ್ರಿಕೂಟವೇ ಆಡಳಿತ ನಡೆಸಿರುವುದು. ದೇಶದ ವಾಣಿಜ್ಯ ರಾಜಧಾನಿಯನ್ನು ಹೊಂದಿರುವ ಆ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆಯೇ?
ಪ್ರಾದೇಶಿಕ ಪಕ್ಷಗಳೆಂದಾಕ್ಷಣ ಎಲ್ಲರ ಕಣ್ಣು  ಬಿಹಾರ ಮತ್ತು ಉತ್ತರಪ್ರದೇಶಗಳತ್ತ ಹೊರಳುತ್ತಿರುವುದೇ ದೊಡ್ಡ ಸಮಸ್ಯೆ. ಸರ್ಕಾರಗಳ ಸಾಧನೆಯ ಮೌಲ್ಯಮಾಪನವನ್ನು ಉತ್ತರದ ಬದಲಿಗೆ ದಕ್ಷಿಣದಿಂದ ಪ್ರಾರಂಭಿಸಿದರೆ ಪ್ರಾದೇಶಿಕ ಪಕ್ಷಗಳ ಬಗೆಗಿನ ಪೂರ್ವಗ್ರಹ ನಿವಾರಣೆಯಾದೀತೇನೋ?
ಯಾವ ಪ್ರಾದೇಶಿಕ ಪಕ್ಷದ ನಾಯಕನೂ ಅಭಿವೃದ್ಧಿ ಬಗೆಗಿನ ಈಚರ್ಚೆಯನ್ನು ಎತ್ತಿಕೊಳ್ಳುತ್ತಲೇ ಇಲ್ಲ. ಎಲ್ಲರೂ ಮತದಾರರ ಪ್ರಾದೇಶಿಕ ಆಶೋತ್ತರಗಳನ್ನು ಒಳಗೊಂಡಿರುವ ಬೆಂಬಲವನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಸೆಣಸಾಟದಲ್ಲಿದ್ದಾರೆ.
ಮತದಾರರು ರಾಷ್ಟ್ರೀಯ ಪಕ್ಷಗಳಿಂದ ರೋಸಿಹೋಗಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದರೆ, ‘ಪ್ರಾದೇಶಿಕ ಪಾಳೆಗಾರರು’ ಆ ಬೆಂಬಲವನ್ನು ರಾಷ್ಟ್ರೀಯ ಪಕ್ಷಗಳ ಯಜಮಾನರ ಪಾದಗಳಿಗೆ ಅರ್ಪಿಸಿ ಅಧಿಕಾರದ ಫಲವುಂಡು ಕೃತಾರ್ಥರಾಗುತ್ತಿದ್ದಾರೆ.