Monday, April 18, 2011

ಗಾಂಧಿ,ಜೆಪಿ ಆಗುವ ಕಷ್ಟದ ಕೆಲಸ

‘ಈಗಿನ ಸನ್ನಿವೇಶದಲ್ಲಿ ಗಾಂಧೀಜಿ ಇದ್ದಿದ್ದರೆ ಅವರು ಸಾರ್ವಜನಿಕ ಜೀವನವನ್ನು ತ್ಯಜಿಸಬೇಕಾಗುತ್ತಿತ್ತು ಇಲ್ಲವೇ ಅವರೂ ಭ್ರಷ್ಟರಾಗುತ್ತಿದ್ದರು’ ಎಂದು ರಾಜ್ಯ ಜೆಡಿ (ಎಸ್) ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದಾಕ್ಷಣ ಅವರ ಮೇಲೆ ‘ಗಾಂಧಿ ಅಭಿಮಾನಿ’ಗಳೆಲ್ಲ ಮುಗಿಬಿದ್ದುಬಿಟ್ಟರು.
ಈ ರೀತಿ ದಾಳಿ ಮಾಡಿದವರಲ್ಲಿ ಗಾಂಧೀಜಿ ಅಭಿಮಾನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕುಮಾರಸ್ವಾಮಿಗಳ  ದ್ವೇಷಿಗಳು ಇದ್ದಿರಬಹುದು. ಒಮ್ಮೊಮ್ಮೆ ಸಂದೇಶವಾಹಕನ ಚಾರಿತ್ರ್ಯ, ಸಂದೇಶದ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗುತ್ತದೆ. ಕುಮಾರಸ್ವಾಮಿಯವರು ಹೇಳಿದ್ದರಲ್ಲಿ ಅರ್ಧ ಸತ್ಯ ಇತ್ತು, ಇದಕ್ಕೆ ಗಾಂಧೀಜಿ ಬಗೆಗಿನ ಅವರ ಅರ್ಧಂಬರ್ಧ ತಿಳುವಳಿಕೆ ಕಾರಣ ಇರಬಹುದು.
ಗಾಂಧೀಜಿ ಈಗಿನ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಿ ಅಲ್ಲಿಯೇ ಉಳಿಯಬೇಕೆಂದು ಬಯಸಿದ್ದರೆ ಭ್ರಷ್ಟರಾಗಬೇಕಾಗುತ್ತಿತ್ತೋ ಏನೋ? ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಹೇಳಿರುವುದು ಸತ್ಯ. ಆದರೆ ಗಾಂಧೀಜಿ ಈಗ ನಮ್ಮ ನಡುವೆ ಇದ್ದಿದ್ದರೂ ಖಂಡಿತ ಈಗಿನ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡುತ್ತಿರಲಿಲ್ಲ. ಹಾಗೆಯೇ ಅವರು ಸಾರ್ವಜನಿಕ ಜೀವನವನ್ನು ತ್ಯಜಿಸಿ ಓಡಿಹೋಗುತ್ತಲೂ ಇರಲಿಲ್ಲ.
ಇದು ನಾವೆಲ್ಲ ಅರ್ಥಮಾಡಿಕೊಳ್ಳಬೇಕಾದ ಪೂರ್ಣ ಸತ್ಯ. ಇಡೀ ದೇಶ ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿದ್ದಾಗ ಮತ್ತು ತಮ್ಮ ಅನುಯಾಯಿಗಳೆಲ್ಲ ಅಧಿಕಾರದ ಕುರ್ಚಿ ಹಿಡಿಯುವ ತರಾತುರಿಯಲ್ಲಿದ್ದಾಗ ಗಾಂಧೀಜಿಯವರು ನೌಕಾಲಿಯಲ್ಲಿ ಭುಗಿಲೆದ್ದಿದ್ದ ಕೋಮುದ್ವೇಷದ ಬೆಂಕಿಯನ್ನು ಶಮನಮಾಡಲು ಏಕಾಂಗಿಯಾಗಿ  ಹೆಣಗಾಡುತ್ತಿದ್ದರು. ಆಗ ದೆಹಲಿಯಲ್ಲಿದ್ದ ಗಾಂಧಿ ಅನುಯಾಯಿಗಳ ಪಾಲಿಗೆ ಸರ್ಕಾರ ರಚನೆಯೇ ರಾಜಕೀಯ ಆಗಿದ್ದರೆ, ಗಾಂಧೀಜಿ ಅವರಿಗೆ ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ ಕೋಮುಸೌಹಾರ್ದತೆಯನ್ನು ಸ್ಥಾಪಿಸುವುದು ರಾಜಕೀಯ ಆಗಿತ್ತು. ಗಾಂಧೀಜಿ ಈಗ ಬದುಕಿದ್ದರೂ ಅವರು ಸಂಸತ್‌ನೊಳಗೆ ಪ್ರವೇಶಿಸಿ ರಾಜಕೀಯ ಮಾಡುತ್ತಿರಲಿಲ್ಲ, ಅಲ್ಲಿಗೆ ಸಮೀಪದಲ್ಲಿಯೇ ಇರುವ ಜಂತರ್‌ಮಂತರ್‌ನ ಸತ್ಯಾಗ್ರಹದ ಶಿಬಿರದಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದರು.
ಸಾರ್ವಜನಿಕ ಜೀವನ, ಚುನಾವಣಾ ರಾಜಕೀಯ, ಹೋರಾಟದ ರಾಜಕೀಯ, ಚಳುವಳಿ, ಸತ್ಯಾಗ್ರಹಗಳೆಲ್ಲವನ್ನೂ ಒಂದೇ ಬಗೆಯ ‘ರಾಜಕೀಯ’ ಎಂದು ತಿಳಿದುಕೊಂಡಿರುವುದೇ ಕುಮಾರಸ್ವಾಮಿ ಮತ್ತು ಅವರಂತಹವರ ಗೊಂದಲಕಾರಿ ಹೇಳಿಕೆಗಳಿಗೆ ಕಾರಣ. ಅವರು ಮಾತ್ರವಲ್ಲ ಲಾಲ್‌ಕೃಷ್ಣ ಅಡ್ವಾಣಿಯವರಂತಹ ಅನುಭವಿ ರಾಜಕಾರಣಿ ಕೂಡಾ ಹಜಾರೆ ಅವರ ಚಳುವಳಿ ರಾಜಕೀಯದ ಬಗ್ಗೆ ದ್ವೇಷ-ಸಿನಿಕತನ ಹುಟ್ಟಿಸುತ್ತಿದೆಯೇನೋ ಎಂದು ಆತಂಕ ವ್ಯಕ್ತಪಡಿಸುವಷ್ಟು ಮಟ್ಟಿಗೆ ಗೊಂದಲಕ್ಕೆಡಾಗಿದ್ದಾರೆ. ಇದರ ಜತೆಗೆ ಅಣ್ಣಾ ಹಜಾರೆ ಅವರು ರಾಜಕೀಯ ಪ್ರವೇಶ ಮಾಡಬಾರದೆಂದು ಹೇಳುವುದು ಎಷ್ಟು ಸರಿ?
ಹಾಗಿದ್ದರೆ ಪ್ರಾಮಾಣಿಕರೆಲ್ಲರೂ ರಾಜಕೀಯವನ್ನು ಭ್ರಷ್ಟರಿಗೆ ಬಿಟ್ಟುಕೊಟ್ಟು ಮೂಕಪ್ರೇಕ್ಷಕರಾಗಬೇಕೇ? ಪ್ರಜಾಪ್ರಭುತ್ವದಲ್ಲಿ ರಾಜಕೀಯ ಚಟುವಟಿಕೆಯ ಮೂಲಕವೇ ಬದಲಾವಣೆ ತರಬೇಕಲ್ಲವೇ? ಎಂಬೀತ್ಯಾದಿ ಪ್ರಶ್ನೆಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಇವು ರಾಜಕೀಯವನ್ನು ತೀರಾ ಸರಳೀಕರಿಸಿ ನೋಡುವ ಮುಗ್ಧಪ್ರಶ್ನೆಗಳು ಎಂದು ತಳ್ಳಿಹಾಕಬಹುದು. ಆದರೆ ಈ ರೀತಿ ಪ್ರಶ್ನಿಸುತ್ತಿರುವವರಲ್ಲಿ ಹೆಚ್ಚಿನವರು ಯುವಕರು, ಭ್ರಷ್ಟಾಚಾರವನ್ನು ಹೊಡೆದೋಡಿಸಬೇಕು ಎಂಬ ರೋಷದ ಜತೆಯಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ರಾಜಕೀಯ ಬದಲಾವಣೆ ಮಾಡಬೇಕೆಂಬ ಹಂಬಲ ಉಳ್ಳ ಅಮಾಯಕರು. ಆದ್ದರಿಂದಲೇ ಈ ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಈ ಗೊಂದಲಗಳಿಗೆ ಮೂಲ ಕಾರಣ ಏನೆಂದರೆ ರಾಜಕೀಯ ಎಂದಾಕ್ಷಣ ನಮ್ಮ ಕಣ್ಣೆದುರು ಮೂಡುವ ಶಾಸಕರು,ಸಂಸದರು, ಸ್ಥಳೀಯ ಸಂಸ್ಥೆಗಳ ಸದಸ್ಯರು ಇಲ್ಲವೇ ರಾಜಕೀಯ ಪಕ್ಷಗಳ ಕಾರ್ಯಕರ್ತರ ಚಿತ್ರಗಳು. ರಾಜಕೀಯ ಎಂದಾಕ್ಷಣ ಯಾರ ಕಣ್ಣಮುಂದೆಯೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಗಾಂಧೀಜಿ ಇಲ್ಲವೇ ಆ ಸ್ವಾತಂತ್ರ್ಯ ಗಂಡಾಂತರ ಸ್ಥಿತಿಯಲ್ಲಿದ್ದಾಗ ಅದನ್ನು ರಕ್ಷಿಸಿಕೊಟ್ಟ ಜಯಪ್ರಕಾಶ್ ನಾರಾಯಣ್ ಚಿತ್ರಗಳು ಕಣ್ಣಮುಂದೆ ಮೂಡುವುದಿಲ್ಲ. ಆದರೆ ಈ ಇಬ್ಬರೂ ನಾಯಕರು ದೇಶ ಕಂಡ ಅತ್ಯಂತ ಬುದ್ದಿವಂತ ಮತ್ತು ಯಶಸ್ವಿ ರಾಜಕಾರಣಿಗಳು ಎನ್ನುವುದನ್ನು ಮರೆಯಬಾರದು.
ಗಾಂಧೀಜಿ ರಾಜಕೀಯ ಮಾಡಿರಲಿಲ್ಲವೇ? ಸ್ವಾತಂತ್ರ್ಯಹೋರಾಟ ಎನ್ನುವುದು ರಾಜಕೀಯ ಚಟುವಟಿಕೆಯಲ್ಲದೆ ಮತ್ತೇನು? ಆದರೆ ಅವರು ಚುನಾವಣಾ ರಾಜಕೀಯದಲ್ಲಿ ತೊಡಗಿಸಿಕೊಂಡಿರಲಿಲ್ಲ. ಬಯಸಿದ್ದರೆ ದೇಶದ ಪ್ರಧಾನಿಯಾಗಲು ಗಾಂಧೀಜಿಯವರಿಗೇನು  ಸಾಧ್ಯ ಇರಲಿಲ್ಲವೇ? ಗಾಂಧೀಜಿಯವರಿಗೆ ಚುನಾವಣಾ ರಾಜಕೀಯದ ಶಕ್ತಿ-ದೌರ್ಬಲ್ಯಗಳು ಮಾತ್ರವಲ್ಲ ಅದರ ಇತಿಮಿತಿಯೂ ತಿಳಿದಿತ್ತು. ಆದ್ದರಿಂದಲೇ ಅವರು ಅದರಿಂದ ದೂರ ಇದ್ದರು ಮತ್ತು ಜನರಿಗೆ ಹತ್ತಿರವಾಗಿದ್ದರು. ಅಣ್ಣಾ ಹಜಾರೆಯವರು ಮಾಡಬಹುದಾದ ರಾಜಕೀಯ ಇದು.
ಜಯಪ್ರಕಾಶ್ ನಾರಾಯಣ್ ಕೂಡಾ ಗಾಂಧೀಜಿ ಮಾದರಿಯ ರಾಜಕೀಯವನ್ನೇ ನಡೆಸಿದವರು. ಸ್ವತಂತ್ರಭಾರತದಲ್ಲಿ ಗಾಂಧೀಜಿಯವರ ನಿಜವಾದ ಉತ್ತರಾಧಿಕಾರಿಯಂತೆ ನಡೆದುಕೊಂಡವರು ಜೆಪಿ. ಗಾಂಧೀಜಿಯವರಿಗೆ ನೆಹರೂ ಬಗೆಗಿನ ದೌರ್ಬಲ್ಯ ಇಲ್ಲದೆ ಹೋಗಿದ್ದರೆ ರಾಮಮನೋಹರ ಲೋಹಿಯಾ ಇಲ್ಲವೇ ಜಯಪ್ರಕಾಶ್ ನಾರಾಯಣ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುತ್ತಿದ್ದರೋ ಏನೋ? ಗಾಂಧೀಜಿಯವರಂತೆ ಜೆಪಿಯವರೂ ಮನಸ್ಸು ಮಾಡಿದ್ದರೆ ದೇಶದ ಪ್ರಧಾನಿಯಾಗಬಹುದಿತ್ತು. ಎರಡು ಬಾರಿ ಅಂತಹ ಅವಕಾಶ ಒದಗಿಬಂದಿತ್ತು.
ಮೊದಲನೆಯ ಬಾರಿ ಗಾಂಧೀಜಿಯವರೇ  ಈ ಆಹ್ಹಾನ ನೀಡಿದ್ದರು. ಇನ್ನೇನು ಸ್ವಾತಂತ್ರ್ಯ ಘೋಷಣೆಯಾಗಲಿದೆ ಎನ್ನುವಾಗ ಗಾಂಧಿ ಅನುಯಾಯಿಗಳೆಲ್ಲ ಸಂಪುಟ ಸೇರುವ ಹುರುಪಲಿದ್ದರು. ಆಗ ಗಾಂಧೀಜಿ ಜೆಪಿಯವರನ್ನು ಕರೆದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವಂತೆ ಸಲಹೆ ನೀಡಿದ್ದರು. ಇದಕ್ಕೆ ನೆಹರೂ ಮತ್ತು ಸಂಗಡಿಗರ ವಿರೋಧ ಇದ್ದರೂ ಜೆಪಿ ಒಪ್ಪಿಕೊಂಡಿದ್ದರೆ ದೇಶದ ಇತಿಹಾಸವೇ ಬೇರೆ ದಾರಿ ಹಿಡಿಯುತ್ತಿತ್ತು.  ನೆಹರೂ ನಂತರವಾದರೂ ಅವರು ಪ್ರಧಾನಿಯಾಗುತ್ತಿದ್ದರು.
ಆ ಅವಕಾಶ ಮತ್ತೆ 1964ರಲ್ಲಿ ಜೆಪಿ ಮನೆಬಾಗಿಲು ಬಡಿದಿತ್ತು. ಅಸ್ವಸ್ಥರಾಗಿದ್ದ ನೆಹರೂ ಅವರ ಅಂತ್ಯ ಸಮೀಪಿಸುತ್ತಿದೆ ಎಂದು ಅನಿಸಿದಾಗ ಕೇಂದ್ರ ಸಂಪುಟದಲ್ಲಿ ಹಿರಿಯಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಖುದ್ದಾಗಿ ಜೆಪಿಯವರನ್ನು ಭೇಟಿ ಮಾಡಿ ನೆಹರೂ ನಂತರ ಪ್ರಧಾನಿಯಾಗುವಂತೆ ಕೋರಿಕೊಂಡಿದ್ದರು. ಗಾಂಧೀಜಿ ಹತ್ಯೆಯಾದ ಎರಡೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದ ಜೆಪಿಯವರು ಶಾಸ್ತ್ರಿಯವರ ಆಹ್ಹಾನವನ್ನು ಒಪ್ಪಿಕೊಳ್ಳಲಿಲ್ಲ.
ಆಗಲೇ ಅವರು ಪಕ್ಷರಾಜಕೀಯವನ್ನು ತ್ಯಜಿಸಿ ವಿನೋಬಾ ಭಾವೆ ಅವರ ಭೂದಾನ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಆದರೆ ಇಳಿವಯಸ್ಸಿನಲ್ಲಿ ತಮ್ಮ ಅನಾರೋಗ್ಯದ ಹೊರತಾಗಿಯೂ ಮತ್ತೆ ಅವರು ಹೋರಾಟದ ರಾಜಕೀಯಕ್ಕೆ ಧುಮುಕಿದರು. ಚುನಾವಣಾ ರಾಜಕಾರಣದಿಂದ ಕೊನೆಯವರೆಗೆ ಅವರು ದೂರವೇ ಉಳಿದರು.
ಅಣ್ಣಾ ಹಜಾರೆ ಅವರು ಇನ್ನೊಬ್ಬ ಗಾಂಧಿ ಆಗಬೇಕು, ಮತ್ತೊಬ್ಬ ಜೆಪಿ ಆಗಬೇಕು ಎಂದು ಆಶಿಸುವುದು ಸುಲಭ. ಆದರೆ ಈಗಿನ ರಾಜಕೀಯದಲ್ಲಿ ಭ್ರಷ್ಟರೇ ಬಹುಸಂಖ್ಯೆಯಲ್ಲಿರುವಾಗ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವುದು  ಅಷ್ಟು ಸುಲಭ ಅಲ್ಲ. ಅಂತಹದ್ದೊಂದು ದೊಡ್ಡ ರಾಜಕೀಯ ಚಳುವಳಿಗೆ ಹೆಗಲು ಕೊಡುವ ನಾಯಕರು ಮತ್ತು ಕಾರ್ಯಕರ್ತರು ಎಷ್ಟು ಮಂದಿ ನಮ್ಮ ನಡುವೆ ಇದ್ದಾರೆ? ರಾಜಕಾರಣಿಗಳೆಂದರೆ ಭ್ರಷ್ಟರು ಎಂದಾಗಿರುವ ಕಾರಣದಿಂದಾಗಿಯೇ ಅಣ್ಣಾ ಹಜಾರೆ ಚಳುವಳಿ ರಾಜಕಾರಣಿಗಳ ವಿರುದ್ಧವೇ ನಡೆಯುತ್ತಿದೆ ಎಂಬ ಆತಂಕ ಅಡ್ವಾಣಿಯವರಲ್ಲಿ ಹುಟ್ಟಿರುವುದು.
ಇದಕ್ಕೆ ಕಾರಣ ಎಲ್ಲ ಪಕ್ಷಗಳಲ್ಲಿ ಬಹುಸಂಖ್ಯೆಯಲ್ಲಿ ಭ್ರಷ್ಟರು ತುಂಬಿರುವುದು. ಜೆಪಿಯವರು ‘ಸಂಪೂರ್ಣಕ್ರಾಂತಿ’ ಚಳುವಳಿ ಪ್ರಾರಂಭಿಸಿದಾಗ ಅವರಿಗೆ ಈ ಸಮಸ್ಯೆ ಇರಲಿಲ್ಲ. ಆಗಿನ ವಿರೋಧಪಕ್ಷಗಳಲ್ಲಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ, ಮಧುಲಿಮಯೆ, ಮುಲಾಯಂಸಿಂಗ್‌ಯಾದವ್, ಲಾಲುಪ್ರಸಾದ್,ನಾನಾಜಿ ದೇಶಮುಖ್ ಮೊದಲಾದ ನಾಯಕರಿದ್ದರು. ಇವರ್ಯಾರೂ ಆಗ ಅಧಿಕಾರ ರಾಜಕಾರಣದ ಕೆಸರಿಗೆ ಕಾಲಿಟ್ಟಿರಲಿಲ್ಲ.  ಎಡಪಕ್ಷಗಳ ನಾಯಕರನ್ನು ಹೊರತುಪಡಿಸಿ ಉಳಿದ ಯಾವ ವಿರೋಧಪಕ್ಷಗಳಲ್ಲಿ ಅಣ್ಣಾಹಜಾರೆ ಪಕ್ಕದಲ್ಲಿ ಕೂರುವ ಯೋಗ್ಯತೆ ಇರುವ ಎಷ್ಟು ಮಂದಿ ನಾಯಕರು ಈಗ ಇದ್ದಾರೆ?
ನಾಯಕರನ್ನು ಪಕ್ಕಕ್ಕೆ ಇಟ್ಟುಬಿಡಿ, ಹೋರಾಟದ ಸಾಗರಕ್ಕೆ ಧುಮುಕಲು ಸಿದ್ದ ಇರುವ ಕಾರ್ಯಕರ್ತರು ಎಷ್ಟು ಮಂದಿ ಇದ್ದಾರೆ. ನಾಳೆ ಅಣ್ಣಾ ಹಜಾರೆ ದೇಶವ್ಯಾಪಿ ಚಳುವಳಿಗೆ ಕರೆಗೊಟ್ಟರೆ ಎಲ್ಲವನ್ನೂ ತ್ಯಾಗಮಾಡಿ ಅದರಲ್ಲಿ ಪಾಲ್ಗೊಳ್ಳಲು ಎಷ್ಟುಮಂದಿ ಕಾರ್ಯಕರ್ತರು ಮುಂದೆಬರಬಹುದು? ಜೆಪಿ ಚಳುವಳಿ ಪ್ರಾರಂಭವಾಗಿದ್ದೇ ವಿದ್ಯಾರ್ಥಿ ಚಳುವಳಿಯಿಂದ ಎಂಬುದನ್ನು ಮರೆಯಬಾರದು.
ಅಹ್ಮದಾಬಾದ್ ಮತ್ತು ಮೋರ್ವಿಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್‌ನ ಊಟ-ತಿಂಡಿಯ ದರ ಏರಿಕೆ ವಿರುದ್ಧ ಚಳುವಳಿ ಪ್ರಾರಂಭಿಸಿದಾಗ ಅಲ್ಲಿ ಜೆಪಿ ಇರಲಿಲ್ಲ. ಅದರಿಂದ ಪ್ರೇರಣೆ ಪಡೆದು ಬಿಹಾರದ ವಿದ್ಯಾರ್ಥಿಗಳು ಚಳುವಳಿ ಪ್ರಾರಂಭಿಸಿದ್ದರು. ಆಗಲೂ ಜೆಪಿ ಅದರಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ. ಕೊನೆಗೆ ವಿದ್ಯಾರ್ಥಿಗಳು ತಮ್ಮ ನಾಯಕತ್ವ ವಹಿಸಬೇಕೆಂದು ಕೇಳಿಕೊಂಡಾಗ ಜೆಪಿ ‘ನಿಮ್ಮಲ್ಲಿ ಎಷ್ಟುಮಂದಿ ಕನಿಷ್ಠ ಒಂದುವರ್ಷದ ಮಟ್ಟಿಗೆ ಶಾಲೆ-ಕಾಲೇಜು ತೊರೆದು ಚಳುವಳಿಯಲ್ಲಿ ಭಾಗವಹಿಸಲು ಸಿದ್ಧ ಇದ್ದೀರಿ?’ ಎಂದು ಕೇಳಿದ್ದರು.
ವಿದ್ಯಾರ್ಥಿಗಳು ಭರವಸೆ ನೀಡಿದ ನಂತರವೇ ಜೆಪಿ ಸಕ್ರಿಯವಾಗಿ ಚಳುವಳಿನಿರತ ವಿದ್ಯಾರ್ಥಿಗಳ ಜತೆ ಸೇರಿಕೊಂಡದ್ದು.
ಅಣ್ಣಾಹಜಾರೆ ಅವರು ಮೊನ್ನೆಯ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ದೆಹಲಿಯಲ್ಲಿ ಮಾತ್ರವಲ್ಲ ಬಹುತೇಕ ನಗರ-ಪಟ್ಟಣಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಜನರು ಬೀದಿಗಿಳಿದಿದ್ದರು. ಆದರೆ ಅವರಿಗೆ ಅಣ್ಣಾ ಹಜಾರೆ ಅವರು ಅಂದು ಜೆಪಿ ಕೇಳಿದ್ದ ಪ್ರಶ್ನೆಯನ್ನೇ ಕೇಳಿದರೆ ಎಷ್ಟು ಮಂದಿ ಒಪ್ಪಿಕೊಳ್ಳಲು ಸಿದ್ದ ಇರಬಹುದು?
ಇಮೇಲ್, ಎಸ್‌ಎಂಎಸ್, ಟ್ವಿಟರ್‌ಗಳ ಮೂಲಕ ಕ್ರಾಂತಿ ಮಾಡಲು ಹೊರಟವರಲ್ಲಿ ಎಷ್ಟುಮಂದಿ ಆರು ತಿಂಗಳು ಕೆಲಸಕ್ಕೆ ರಜೆಹಾಕಿ ಅಣ್ಣಾಹಜಾರೆ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು? ಫ್ರೀಡಮ್‌ಪಾರ್ಕ್‌ನಲ್ಲಿ ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಗಳು ಆಗಲೇ ಸಿಇಟಿ ಪರೀಕ್ಷೆಯ ತಲೆಬಿಸಿಯಲ್ಲಿದ್ದಾರೆ. ಇಮೇಲ್,ಎಸ್‌ಎಂಎಸ್, ಟ್ವಿಟರ್‌ಗಳು ಆಗಲೇ ನಿಂತುಬಿಟ್ಟಿವೆ. ಜೆಪಿ ಚಳುವಳಿಗೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರ ಬಲ ತಂದುಕೊಟಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿಯಾದರೂ ಪ್ರಾಮಾಣಿಕರು ಉಳಿದುಕೊಂಡಿದ್ದಾರೆಯೇ? ಉಳಿದುಕೊಂಡಿದ್ದರೆ ಕನಿಷ್ಠ ಕರ್ನಾಟಕದಲ್ಲಿಯಾದರೂ ಅವರು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಬೀದಿಗಿಳಿಯಬೇಕಿತ್ತಲ್ಲಾ? ಇದು ಇಂದಿನ ವಾಸ್ತವ.
ಪ್ರಾಮಾಣಿಕತೆಯೊಂದರಿಂದಲೇ ರಾಜಕೀಯದಲ್ಲಿ ಎಲ್ಲವನ್ನೂ ಸಾಧಿಸಲು ಆಗುವುದಿಲ್ಲ. ಅದು ಸಾಧ್ಯವಾಗುವುದಿದ್ದರೆ ಪ್ರಧಾನಿಯಾಗಿ ಮನಮೋಹನ್‌ಸಿಂಗ್ ಯಶಸ್ವಿಯಾಗಬೇಕಿತ್ತು. ಅಣ್ಣಾಹಜಾರೆ ಅವರು ಎಲ್ಲಾ ಬಗೆಯ ರಾಜಕೀಯದಿಂದ ದೂರ ಇದ್ದು ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು. ಆದರೆ ಮನಮೋಹನ್‌ಸಿಂಗ್ ಅಧಿಕಾರ ಕೇಂದ್ರಿತ ರಾಜಕೀಯದಲ್ಲಿ ತೊಡಗಿಸಿಕೊಂಡೂ ವೈಯಕ್ತಿಕ ಮಟ್ಟದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು. ಇದೇನು ಕಡಿಮೆ ಸಾಧನೆಯಲ್ಲ. ಹೀಗಿದ್ದರೂ ಪ್ರಾಮಾಣಿಕ ಮನಮೋಹನ್‌ಸಿಂಗ್ ಅವರಿಗೆ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡಲು ಆಗಲಿಲ್ಲ. ಆದ್ದರಿಂದ ಕೇವಲ ಅಣ್ಣಾ ಹಜಾರೆ ಮತ್ತು ಅವರ ಬೆರಳೆಣಿಕೆಯ ಬೆಂಬಲಿಗರಿಂದ ಭ್ರಷ್ಟಾಚಾರದ ಮೂಲೋತ್ಪಾಟನೆಯಾಗಲಿ, ರಾಜಕೀಯ ಬದಲಾವಣೆಯಾಗಲಿ ಸಾಧ್ಯವಾಗಲಾರದು.
ಇದು ಸಾಧ್ಯವಾಗಬೇಕಾದರೆ  ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಉಳಿದುಕೊಂಡಿರುವ ಸಜ್ಜನರು ತಮ್ಮ ಪಕ್ಷಗಳನ್ನು ತೊರೆದು ಹೊರಬಂದು ಅಣ್ಣಾಹಜಾರೆ ಮಾರ್ಗದರ್ಶನದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟಲು ಕೈಜೋಡಿಸಬೇಕಾಗುತ್ತದೆ. ಇದು ಹೇಗೆ ಎನ್ನುವುದಕ್ಕೆ 1977 ಮತ್ತು 1989ರ ರಾಜಕೀಯ ಬದಲಾವಣೆಯ ಮಾದರಿಗಳು ನಮ್ಮ ಮುಂದಿವೆ.ಆಗ ಆಡಳಿತ ಪಕ್ಷ ಮಾತ್ರ ಭ್ರಷ್ಟವಾಗಿತ್ತು, ಈಗ ವಿರೋಧಪಕ್ಷಗಳೂ ಭ್ರಷ್ಟಗೊಂಡಿರುವುದರಿಂದ ಅಲ್ಲಿಯೂ ಒಡೆಯುವ ಕೆಲಸ ನಡೆಯಬೇಕಾಗುತ್ತದೆ. ಮೊದಲು ಅಣ್ಣಾ ಹಜಾರೆ ಚಳುವಳಿಯನ್ನು ಬೆಂಬಲಿಸುತ್ತಿರುವ ಪ್ರಮುಖ ವಿರೋಧಪಕ್ಷವಾದ ಬಿಜೆಪಿಯಿಂದಲೇ ಇದು ಪ್ರಾರಂಭವಾಗಲಿ.

Monday, April 11, 2011

ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ

ಕತ್ತಲೆಯ ಹಾದಿಯಲ್ಲಿ ಕನಸುಗಳ ದೀಪ ಹಿಡಿದುಕೊಂಡು ಹೊರಟವರಿಗೆ ಎದುರಾಗುವ ಪ್ರತಿಯೊಂದು ನೆರಳುಗಳಲ್ಲಿಯೂ ತಮ್ಮನ್ನು ಮುನ್ನಡೆಸುವ ಅವತಾರಪುರುಷ ಕಾಣುವುದು ಸಹಜ. ಭ್ರಷ್ಟ ವ್ಯವಸ್ಥೆಯಿಂದಾಗಿ ರೋಸಿಹೋಗಿ ಹತಾಶೆಗೀಡಾದ ಜನತೆಯ ಕಣ್ಣುಗಳಿಗೆ ಸರ್ಕಾರದ ವಿರುದ್ಧ ಸಣ್ಣಗೆ ಸಿಟ್ಟುಮಾಡಿಕೊಂಡ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಲ್ಲಿ ಒಬ್ಬ ಜಯಪ್ರಕಾಶ್ ನಾರಾಯಣ್ ಕಾಣುತ್ತಾರೆ, ಕಪ್ಪು ಹಣದ ವಿರುದ್ಧ ಮಾತನಾಡುವ ಒಬ್ಬ ಸಾಮಾನ್ಯ ಯೋಗಗುರು ಬಾಬಾ ರಾಮ್‌ದೇವ್ ಅವರಲ್ಲಿ ಒಬ್ಬ ವಿನೋಬಾ ಭಾವೆ ಕಾಣುತ್ತಾರೆ, ಒಬ್ಬ  ಸಾಮಾಜಿಕ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರಲ್ಲಿ ಮಹಾತ್ಮ ಗಾಂಧೀಜಿ ಕಾಣುತ್ತಾರೆ.
ಆದರೆ ಒಬ್ಬ ಮಹಾತ್ಮ, ಒಬ್ಬ ಜೆಪಿ ಇಲ್ಲವೇ ಒಬ್ಬ ವಿನೋಬಾ ಭಾವೆ ರಾತ್ರಿ ಹಗಲಾಗುವುದರೊಳಗೆ ಸುದ್ದಿಮಾಧ್ಯಮಗಳ ಮಿಂಚುಬೆಳಕಲ್ಲಿ ಉದಿಸಿದ ತಾರೆಗಳಲ್ಲ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಆ ಮಹನೀಯರ ಹೋರಾಟದ ಬದುಕನ್ನು ಅಗೌರವಿಸಿದಂತಾಗುವುದು ಮಾತ್ರವಲ್ಲ, ಭ್ರಷ್ಟಚಾರದ ವಿರುದ್ದ ದೇಶದಾದ್ಯಂತ ಹುಟ್ಟಿಕೊಂಡಿರುವ ಜನಾಭಿಪ್ರಾಯ ತಾರ್ಕಿಕ ಅಂತ್ಯ ಕಾಣದೆ ವ್ಯರ್ಥಗೊಂಡು ಮತ್ತೊಂದು ಭ್ರಮನಿರಸನಕ್ಕೆ ದಾರಿಮಾಡಿಕೊಡುವ ಅಪಾಯವೂ ಇದೆ.
ಸರ್ಕಾರ ಮಣಿಯಲು ಕಾರಣವಾದ ‘ಕ್ರಾಂತಿಯ ಹರಿಕಾರರು’ ತಾವೇ ಎಂದು  ಮಾಧ್ಯಮಗಳು ಆಗಲೇ ತಮ್ಮ ಬೆನ್ನು ತಟ್ಟಿಕೊಳ್ಳುತ್ತಿವೆ. ಅಣ್ಣಾ ಹಜಾರೆ ಅವರ ಸತ್ಯಾಗ್ರಹದ ಯಶಸ್ಸಿನಲ್ಲಿ ಅತೀ ಎನಿಸುವಷ್ಟು ಕ್ರಿಯಾಶೀಲವಾಗಿದ್ದ ಮಾಧ್ಯಮಗಳ, ಅದರಲ್ಲೂ ಹುಟ್ಟು-ಸಾವುಗಳೆರಡನ್ನೂ ಹಬ್ಬದಂತೆ ಆಚರಿಸುವ ಟಿವಿ ಚಾನೆಲ್‌ಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಅದೇ ಟಿವಿ ಚಾನೆಲ್‌ಗಳು ಆಗಲೇ ಭಿನ್ನ ರಾಗ ಹಾಡುತ್ತಿರುವ ಬಾಬಾ ರಾಮ್‌ದೇವ್ ಅವರ ಸುತ್ತ ನೆರೆದಿವೆ. ಮಾಧ್ಯಮಗಳ ಮೇಲಿನ ಅತಿ ಅವಲಂಬನೆಯ ಅಪಾಯ ಇದು.
ಒಂದು ಮಸೂದೆಯ ರಚನೆಯ ಸಮಿತಿಯಲ್ಲಿ ನಾಗರಿಕ ಸಮಾಜದ ಐವರು ಪ್ರತಿನಿಧಿಗಳು ಪಾಲ್ಗೊಳ್ಳಲು ಸರ್ಕಾರ ಒಪ್ಪಿಕೊಂಡದ್ದನ್ನೇ ದೊಡ್ಡ ಗೆಲುವೆಂದು ತಿಳಿದುಕೊಳ್ಳಬೇಕಾಗಿಲ್ಲ. ಈಗಿನ ಭ್ರಷ್ಟ ರಾಜಕೀಯ ವ್ಯವಸ್ಥೆಯ ಆಳ-ಅಗಲಗಳ ಪರಿಚಯ ಇರುವ ಯಾರೂ ಅಷ್ಟೊಂದು ಆಶಾವಾದಿಯಾಗುವುದು ಸಾಧ್ಯ ಇಲ್ಲ. ಕರ್ನಾಟಕಕ್ಕಿಂತ ಬೇರೆ ಉದಾಹರಣೆ ಯಾಕೆ ಬೇಕು? ರಾಜ್ಯದ ಮುಖ್ಯಮಂತ್ರಿ ಮತ್ತು ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಲೋಕಾಯುಕ್ತರು ಮಾಡಬೇಕಾಗಿದ್ದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ಕೊಟ್ಟು ಕೈ ಕಟ್ಟಿಹಾಕಿಲ್ಲವೇ? ಇಲ್ಲಿ ಹೈಕೋರ್ಟ್ ಇದ್ದರೆ ಅಲ್ಲಿ ಸುಪ್ರೀಂಕೋರ್ಟ್ ಇದೆ. ನ್ಯಾಯಾಲಯಗಳು ಕೂಡಾ ಇಂದು ಸಂಶಯಾತೀತವಾಗಿ ಉಳಿದಿಲ್ಲ. ಆದ್ದರಿಂದ ಲೋಕಪಾಲರ ನೇಮಕದಿಂದಲೇ ಭ್ರಷ್ಟಾಚಾರ ನಿರ್ಮೂಲನೆಗೊಳ್ಳಲಿದೆ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಹಾಗೆ ನೋಡಿದರೆ ಲೋಕಪಾಲರ ನೇಮಕಕ್ಕಿಂತಲೂ ಮೊದಲು ಈಗಿನ ಭ್ರಷ್ಟರಾಜಕೀಯ ವ್ಯವಸ್ಥೆಯ ಹುಟ್ಟಿಗೆ ಕಾರಣವಾಗಿರುವ ಚುನಾವಣಾ ವ್ಯವಸ್ಥೆಯ ಸುಧಾರಣೆಯಾಗಬೇಕಿತ್ತು. ಪ್ರತಿಯೊಂದು ಕಾನೂನನ್ನೂ ನಾಗರಿಕ ಸಮಾಜವೇ ರಚಿಸುವ ಇಲ್ಲವೇ ತಿದ್ದುವ ಕೆಲಸವನ್ನು ಮಾಡುವುದು ಸಾಧ್ಯ ಇಲ್ಲವಲ್ಲಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸವನ್ನು ಮಾಡಬೇಕಾಗಿರುವುದು ಶಾಸನ ರಚನೆಯ ಜವಾಬ್ದಾರಿ ಹೊಂದಿರುವ ಜನಪ್ರತಿನಿಧಿಗಳಲ್ಲವೇ? ಆದ್ದರಿಂದ ಶಾಸನಸಭೆಗೆ ಪ್ರಾಮಾಣಿಕರು, ಸಚ್ಚಾರಿತ್ರ್ಯಉಳ್ಳವರು ಮತ್ತು ಪ್ರಜ್ಞಾವಂತರು ಆರಿಸಿಬರುವಂತಹ ಚುನಾವಣಾ ವ್ಯವಸ್ಥೆ ಇಲ್ಲದೆ ಹೋದರೆ ಪ್ರತಿಬಾರಿ ಜನಪರವಾದ ಕಾನೂನು ರಚನೆಗೆ ಅಣ್ಣಾ ಹಜಾರೆ ಅವರು ಉಪವಾಸ ಕೂರಬೇಕಾಗುತ್ತದೆ.
ಅಂದ ಮಾತ್ರಕ್ಕೆ ಸಿನಿಕರಾಗುವ ಅಗತ್ಯ ಖಂಡಿತ ಇಲ್ಲ. ಬೇರೇನೂ ಆಗಬೇಕಾಗಿಲ್ಲ, ಸಿವಿಲ್ ಸೊಸೈಟಿ ರಚಿಸಿರುವ ‘ಜನಲೋಕಪಾಲ ಮಸೂದೆ’ ಅದರ ಮೂಲರೂಪದಲ್ಲಿಯೇ ಕಾಯಿದೆಯಾಗಿ ಅನುಷ್ಠಾನಕ್ಕೆ ಬಂದರಷ್ಟೇ ಸಾಕು. ದೇಶದ ಈಗಿನ ಜನಾಂಗ ಮಾತ್ರವಲ್ಲ ಭವಿಷ್ಯದ ಜನಾಂಗ ಕೂಡಾ ಹಜಾರೆ ಅವರಿಗೆ ಚಿರಋಣಿಯಾಗಿರುತ್ತದೆ. ಆದರೆ  ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಹೊಂದಿದ್ದರೆ ಮುಂದಿನ ದಾರಿ ತುಳಿಯುವಾಗ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ಹೋರಾಟಗಾರರೆಲ್ಲರೂ ಶತ್ರುಗಳನ್ನು ಸರಿಯಾಗಿಯೇ ಗುರುತಿಸಿಕೊಂಡಿರುತ್ತಾರೆ, ಆದರೆ ಯಾವಾಗಲೂ ಹೋರಾಟ ಎಡವಿ ಬೀಳುವುದು ಅದರ ನಾಯಕರು ಆರಿಸಿಕೊಳ್ಳುವ ಮಿತ್ರರ ಆಯ್ಕೆಯಲ್ಲಿ. ಅಣ್ಣಾ ಹಜಾರೆ ಮತ್ತು ಅವರ ಸಂಗಾತಿಗಳು ಎಚ್ಚರ ವಹಿಸಬೇಕಾಗಿರುವುದು ಮಿತ್ರರ ಬಗ್ಗೆ, ಶತ್ರುಗಳ ಬಗ್ಗೆ ಅಲ್ಲ.
ಆಮರಣ ಉಪವಾಸ ಕೊನೆಗೊಳಿಸುವ ಮುನ್ನ ಅಣ್ಣಾ ಹಜಾರೆ ಅವರು ಅಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ನೇರ ಪ್ರಸಾರ ಮಾಡುತ್ತಿದ್ದವು. ಆ ಹೊತ್ತಿನಲ್ಲಿ ವೇದಿಕೆಯಲ್ಲಿದ್ದ ವ್ಯಕ್ತಿಯೊಬ್ಬ ಕಾಗದದ ಪೊಟ್ಟಣವೊಂದನ್ನು ಬಿಚ್ಚಿ ದೊಡ್ಡ ಕತ್ತಿಯೊಂದನ್ನು ಹೊರತೆಗೆದು ಅಣ್ಣಾ ಅವರ ಕೈಗೆ ಕೊಡಲು ಹೊರಟಿದ್ದ. ಪಕ್ಕದಲ್ಲಿದ್ದ ಸ್ವಾಮಿ ಅಗ್ನಿವೇಶ್ ತಕ್ಷಣ ಜಾಗೃತರಾಗಿ ಕತ್ತಿ ಕೊಡಲು ಬಂದವನನ್ನು ಹಿಂದಕ್ಕೆ ಸರಿಸಿದರು. ಇಲ್ಲದೆ ಹೋಗಿದ್ದರೆ ನಾವೆಲ್ಲ ಕಾಣಬಯಸುವ ‘ಮಹಾತ್ಮಗಾಂಧಿ’ ಅವರು ಕೈಯಲ್ಲಿ ಕತ್ತಿ ಹಿಡಿದ ‘ರೋಮಾಂಚಕಾರಿ’ ಕ್ಷಣಗಳನ್ನು ಟಿವಿ ಚಾನೆಲ್‌ಗಳು ನೇರಪ್ರಸಾರ ಮಾಡಿಬಿಡುತ್ತಿದ್ದವು. ಮರುದಿನದ ಪತ್ರಿಕೆಗಳಲ್ಲಿ ಅದೇ ಚಿತ್ರ ಪ್ರಕಟವಾಗುತ್ತಿತ್ತೋ ಏನೋ? ಕಣ್ಣರೆಪ್ಪೆ ಮುಚ್ಚಿ ತೆರೆದುಕೊಳ್ಳುವಷ್ಟರಲ್ಲಿ ನಡೆದುಹೋದ ಈ ಸಣ್ಣ ಘಟನೆ ಅಣ್ಣಾ ಹಜಾರೆ ಹೋರಾಟದ ಶಕ್ತಿ-ದೌರ್ಬಲ್ಯಗಳೆರಡನ್ನೂ ಹೇಳುವಂತಿತ್ತು.
ಕತ್ತಿ ಮತ್ತು ಉಪವಾಸದ ಸಂಕೇತಗಳು ಬೇರೆ. ಅವುಗಳು ಬಿಂಬಿಸುವ ವಿಚಾರಧಾರೆಗಳು ಕೂಡಾ ಬೇರೆಬೇರೆ. ಅಣ್ಣಾ ಅವರ ಪಕ್ಕದಲ್ಲಿ ಮಾವೋವಾದಿಗಳಿಗೂ ಅಹಿಂಸೆಯ ಪಾಠ ಬೋಧಿಸುತ್ತಿರುವ ಸ್ವಾಮಿ ಅಗ್ನಿವೇಶ್ ಅಂತಹವರು ಮಾತ್ರವಲ್ಲ ಬಂದೂಕಿನ ನಳಿಕೆಯ ಮೂಲಕ ಬದಲಾವಣೆಯನ್ನು ತರಬಯಸುವ ಕಾಡಲ್ಲಿರುವ ಮಾವೋವಾದಿಗಳಿಗೂ, ಅದನ್ನೇ ಉಪವಾಸದ ಮೂಲಕ ಮಾಡಲು ಹೊರಟಿರುವ ಅಣ್ಣಾ ಹಜಾರೆ ಎಂಬ ಗಾಂಧಿವಾದಿಗೂ ಇರುವ ವ್ಯತ್ಯಾಸವನ್ನೇ ಅರಿಯದ ಕುರುಡುಕಣ್ಣುಗಳ ಕತ್ತಿವೀರರೂ ಇದ್ದಾರೆ. ಸ್ವಾಮಿ ಅಗ್ನಿವೇಶ್, ಶಾಂತಿಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇರ್ಜಿವಾಲಾ, ಕಿರಣ್‌ಬೇಡಿ ಮೊದಲಾದವರ ಜತೆಯಲ್ಲಿ ಬಾಲಿವುಡ್ ತಾರೆಯರು, ಆಧ್ಯಾತ್ಮವನ್ನೇ ವ್ಯಾಪಾರ ಕೊಂಡಿರುವ ‘ದೇವಮಾನವ’ರು, ಅಧಿಕಾರ ಕಳೆದುಕೊಂಡಿರುವ ಭಗ್ನಹೃದಯಿ ರಾಜಕಾರಣಿಗಳು ಕೂಡಾ ಇದ್ದಾರೆ.
ಇವರೆಲ್ಲರ ನಡುವೆ ಅಣ್ಣಾ ಹಜಾರೆ ಅವರ ಜತೆಯಲ್ಲಿಯೇ ಆಮರಣ ಉಪವಾಸ ಕೂತ ವ್ಯಕ್ತಿಗಳ ಹೆಸರಾದರೂ ಯಾರಿಗಾದರೂ ಗೊತ್ತಿದೆಯೇ? ಯಾವ ಪತ್ರಿಕೆಗಳಲ್ಲಿಯಾದರೂ ಅವರ ಹೆಸರು ಪ್ರಕಟಗೊಂಡಿದೆಯೇ? ಯಾವುದಾದರೂ ಟಿವಿ ಚಾನೆಲ್ ಅವರ ಹೆಸರು ಹೇಳಿದೆಯೇ? ತಾನು ಉಪವಾಸ ಅಂತ್ಯಗೊಳಿಸುವ ಮೊದಲು ಅಣ್ಣಾ ಅವರು ಉಪವಾಸ ಕೂತಿದ್ದವರನ್ನು ಎಬ್ಬಿಸಿ ಅವರ ಗಲ್ಲ ಎತ್ತಿ ಹಣ್ಣಿನ ರಸ ಕುಡಿಸುತ್ತಿದ್ದಾಗಷ್ಟೇ ಆ ಅನಾಮಿಕ ಸತ್ಯಾಗ್ರಹಿಗಳ ಮುಖದರ್ಶನವಾಗಿದ್ದು. ಆಗಲೂ ಅವರ ಹೆಸರುಗಳನ್ನು ಯಾರೂ ಹೇಳಲಿಲ್ಲ.  ಆದರೆ ಮುಂಬೈನಲ್ಲಿ ವಿಮಾನದಲ್ಲಿ ಹಾರಿಬಂದು, ದೆಹಲಿಯ ಪಂಚತಾರಾ ಹೋಟೆಲ್‌ಗಳಲ್ಲಿ ತಿಂಡಿ-ತೀರ್ಥ ಸೇವಿಸಿ ಪಿಆರ್‌ಗಳ ಮೂಲಕ ಮಾಧ್ಯಮಮಿತ್ರರಿಗೆ ತಮ್ಮ ಆಗಮನದ ವಿಷಯವನ್ನು ಮುಂಚಿತವಾಗಿಯೇ ತಿಳಿಸಿ ಅಣ್ಣಾಹಜಾರೆಯವರ ಜತೆಯಲ್ಲಿ ಒಂದಷ್ಟು ಹೊತ್ತು ಕಾಣಿಸಿಕೊಂಡು ಮಿಂಚಿದ ಬಾಲಿವುಡ್ ತಾರೆಯರ ಹೆಸರುಗಳೆಲ್ಲ ಟಿವಿ ನೋಡುವ, ಪತ್ರಿಕೆ ಓದುವ ಜನರಿಗೆಲ್ಲ ಬಾಯಿಪಾಠವಾಗಿದೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಟಿವಿ ಕ್ಯಾಮೆರಾಗಳು ಕಣ್ಣಿಟ್ಟಿರುವ ವೇದಿಕೆಗಳಿಂದ ಪ್ರಾರಂಭವಾಗುವುದಲ್ಲ, ಅದು ಪ್ರತಿಯೊಬ್ಬರ ಮನೆ ಮತ್ತು ಮನಸ್ಸಿನೊಳಗಿಂದ ಪ್ರಾರಂಭವಾಗಬೇಕು.  ಎದೆ-ತೋಳುಗಳ ಮೇಲೆ ಅಣ್ಣಾಹಜಾರೆ ಹೆಸರು ಬರೆಸುವುದರಿಂದ, ಒಂದೆರಡು ಗಂಟೆ ಧರಣಿ ಕೂತು ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವುದರಿಂದ, ಇಲ್ಲವೇ ಬೀದಿಗಳಲ್ಲಿ ಕ್ಯಾಂಡಲ್‌ಗಳನ್ನು ಹಚ್ಚುವುದರಿಂದ ಭ್ರಷ್ಟಾಚಾರವನ್ನು ಹೊಡೆದೋಡಿಸುವುದು ಸಾಧ್ಯ ಇಲ್ಲ. ಈ ಚಿತ್ರತಾರೆಯರು ಸರ್ಕಾರಕ್ಕೆ ವಂಚನೆ ಮಾಡದೆ ಗಳಿಸಿದ ಹಣಕ್ಕೆ ಸರಿಯಾಗಿ ವರಮಾನ ತೆರಿಗೆ ಕೊಟ್ಟರೆ ಸಾಕು.
ಅಣ್ಣಾ ಹಜಾರೆ ಅವರಿಗೆ ಅದಕ್ಕಿಂತ ದೊಡ್ಡ ಬೆಂಬಲ ಬೇಕಿಲ್ಲ. ಸಾಧ್ಯವಾದರೆ ಒಂದಷ್ಟು ಒಳ್ಳೆಯ ಅಭಿರುಚಿಯ ಚಿತ್ರಗಳನ್ನು ಸಮಾಜಕ್ಕೆ ನೀಡಲಿ. ಈ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ ಎಂದು ಎದೆಮೇಲೆ ಕೈಯಿಟ್ಟು ಹೇಳುವ ಎಷ್ಟು ಮಂದಿ ಚಿತ್ರರಂಗದಲ್ಲಿದ್ದಾರೆ? ಲಂಚ ಸ್ವೀಕರಿಸುವುದಿಲ್ಲ ಮಾತ್ರವಲ್ಲ ಕೊಡುವುದೂ ಇಲ್ಲ,  ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಗೊತ್ತಿದ್ದೂ ಕಾನೂನಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದವರು ಮಾತ್ರ ವೇದಿಕೆ ಹತ್ತಿ ಎಂದು  ಹಜಾರೆ ಹೇಳಿದ್ದರೆ ಅವರು ಉಪವಾಸ ಕೂತಿದ್ದ ವೇದಿಕೆ ಮುಕ್ಕಾಲು ಪಾಲು ಖಾಲಿಯಾಗಿರುತ್ತಿತ್ತು.
ಎರಡನೆಯ ದೊಡ್ಡ ಅಪಾಯ ಇರುವುದು ಇಂತಹ ಹೋರಾಟಗಾರರನ್ನೆಲ್ಲ ಸುಲಭದಲ್ಲಿ ಸಮ್ಹೋಹನಕ್ಕೊಳಪಡಿಸುವ ರಾಜಕೀಯ ಮಾಯಾಂಗನೆಯಿಂದ. ಎಂಬತ್ತರ ದಶಕದ ಆದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದಾಗೆಲ್ಲ ಬೆಂಗಳೂರಿನ ಜನಜೀವನ ಸ್ಥಗಿತಗೊಳ್ಳುತ್ತಿತ್ತು. ಅಧಿಕಾರದಲ್ಲಿದ್ದವರು ಕೈಕಾಲು ಕಂಪಿಸುತ್ತಿದ್ದವು. ಮುಂದೆ ರೈತರದ್ದೇ ಸರ್ಕಾರ ಎಂದು ಭ್ರಮಿಸಿಕೊಂಡವರು ಆ ಕಾಲದಲ್ಲಿ ಬಹಳ ಮಂದಿ ಇದ್ದರು. ಇನ್ನೊಂದೆಡೆ ಅಲ್ಲಿಯ ವರೆಗೆ ಕೇವಲ ಮುಖರಹಿತ ಮತಬ್ಯಾಂಕ್ ಆಗಿದ್ದ ದಲಿತರು ಸಂಘಟಿತರಾಗಿ ನಡೆಸುತ್ತಿದ್ದ ಚಳವಳಿಯಿಂದ ರಾಜಕೀಯ ಪಕ್ಷಗಳು ತಮ್ಮ ನೆಲೆ ಕಳೆದುಕೊಂಡವರಂತೆ ಭೀತಿಗೊಳಗಾಗಿದ್ದವು. ಆದರೇನಾಯಿತು? ಈ ಎರಡೂ ಚಳವಳಿಗಳ ನಾಯಕರು ರಾಜಕೀಯದ ಮೋಹಪಾಶಕ್ಕೆ ಸಿಕ್ಕಿ ತಾವು ನೆಲೆಕಲೆದುಕೊಂಡಿದ್ದು ಮಾತ್ರವಲ್ಲ ಚಳವಳಿಗಳು ಕೂಡಾ ದಿಕ್ಕು ತಪ್ಪಲು ಕಾರಣರಾದರು. ಈ ಅಪಾಯವನ್ನು ಅಣ್ಣಾ ಹಜಾರೆ ಮತ್ತು ಸಂಗಡಿಗರು ಕೂಡಾ ಮುಂದಿನ ದಿನಗಳಲ್ಲಿ ಎದುರಿಸುವ ಸಾಧ್ಯತೆ ಇದೆ.
ಆಗಲೇ ‘ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಯನ್ನು ಪತ್ರಕರ್ತರು ಅಣ್ಣಾ ಹಜಾರೆ ಅವರನ್ನು ಪೆದ್ದುಪೆದ್ದಾಗಿ ಕೇಳತೊಡಗಿದ್ದಾರೆ. ಈ ರೀತಿಯ ಜನಬೆಂಬಲ ಕಂಡಾಗ ಎಂತಹ ಗಟ್ಟಿಮನಸ್ಸಿನ ನಾಯಕರ ಸಂಯಮವೂ ಕರಗುವುದು ಸಹಜ. ಅಣ್ಣಾ ಹಜಾರೆ ಅವರಲ್ಲಿ ಅಲ್ಲದಿದ್ದರೂ ಅವರ ಬೆಂಬಲಿಗರಲ್ಲಿ ರಾಜಕೀಯ ಆಕಾಂಕ್ಷೆ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಬಾಬಾ ರಾಮ್‌ದೇವ್ ಅವರ ಭಿನ್ನಮತದ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಅವರಿಂದಾಗಿ ತನ್ನ ರಾಜಕೀಯ ಆಕಾಂಕ್ಷೆ ಭಗ್ನಗೊಳ್ಳಬಹುದೆಂಬ ಭೀತಿಯಿಂದ ಹುಟ್ಟಿಕೊಂಡ ಹತಾಶೆಯೂ ಇರುವಂತೆ ಕಾಣುತ್ತಿದೆ.
ಆದ್ದರಿಂದ ಎಲ್ಲಿಯ ವರೆಗೆ ಅಣ್ಣಾಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ ಅಲ್ಲಿಯ ವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು. ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ  ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ದವಾಗಬೇಕು. ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿಯಾಗಲಿ, ಶಕ್ತಿಯಾಗಲಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ. ರಾಜಕೀಯ ಪಕ್ಷಗಳು ಕೂಡಾ  ಮೈಯೆಲ್ಲ ಕಣ್ಣಾಗಿ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಾ ಕೂತ ಹಾಗೆ ಕಾಣುತ್ತಿದೆ.

Monday, April 4, 2011

ಇಂದಿರಾಗಾಂಧಿ, ವಾಜಪೇಯಿ ಅವರಿಂದ ಕಲಿಯಿರಿ

ಇಷ್ಟೊಂದು ದೇಶಪ್ರೇಮ ಇವರಲ್ಲೆಲ್ಲ ಎಲ್ಲಿ ಅಡಗಿ ಕೂತಿರುತ್ತೋ ಗೊತ್ತಿಲ್ಲ.  ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ತಂಡಗಳು ಮುಖಾಮುಖಿಯಾದ ಕೂಡಲೇ ಇವರೊಳಗಿನ ದೇಶಪ್ರೇಮ ಜ್ವಾಲಾಮುಖಿಯಂತೆ ಸಿಡಿದು ಬೀದಿಬೀದಿಗಳಲ್ಲಿ ಹರಿಯತೊಡಗುತ್ತದೆ.  ಕ್ರಿಕೆಟ್ ಎನ್ನುವುದು ಭಾರತದ ಹೆಮ್ಮೆ ಹೇಗೋ ಹಾಗೆ ದೌರ್ಬಲ್ಯ ಕೂಡಾ.
ಜನತೆಯ ದೌರ್ಬಲ್ಯದ ಹುಡುಕಾಟದಲ್ಲಿರುವ ರಾಜಕಾರಣಿಗಳು ಕ್ರಿಕೆಟ್ ಕಾಲ ಪ್ರಾರಂಭವಾಯಿತೆಂದರೆ ಒಮ್ಮಿಂದೊಮ್ಮೆಲೇ ಕ್ರಿಕೆಟ್ ಪ್ರೇಮಿಗಳಾಗುವುದು ಇದೇ ಕಾರಣಕ್ಕಾಗಿ. ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದರೆ ಸಾಕ್ಷಾತ್ ಪ್ರಧಾನಮಂತ್ರಿಗಳೇ ಸ್ಟೇಡಿಯಂಗೆ ಬಂದಿಳಿಯುತ್ತಾರೆ.

ಮನಮೋಹನ್‌ಸಿಂಗ್ ಅವರು ತಾನು ಹೋಗಿದ್ದು ಮಾತ್ರವಲ್ಲ ಪಾಕಿಸ್ತಾನದ ಪ್ರಧಾನಿಯನ್ನೂ ಕರೆಸಿ ಪಕ್ಕದಲ್ಲಿ ಕೂರಿಸಿಕೊಂಡಿದ್ದರು. ಅಲ್ಲಿ ಭಾರತದ ಗೆಲುವಿಗೆ ಚಪ್ಪಾಳೆತಟ್ಟಿ ‘ದೇಶಪ್ರೇಮ’ ಮೆರೆದಿದ್ದಾರೆ. ಇದು ಕೇವಲ ಕ್ರಿಕೆಟ್ ಮೇಲಿನ ಪ್ರೀತಿ ಖಂಡಿತ ಅಲ್ಲ. ಅಂತಹ ಪ್ರೀತಿ ಹೊಂದಿದ್ದರೆ ವಿಶ್ವಕಪ್‌ನ ಸೆಮಿಫೈನಲ್‌ಗೆ ಯಾಕೆ ಹೋಗಬೇಕಿತ್ತು, ಫೈನಲ್ ನೋಡಲು ಹೋಗಬಹುದಿತ್ತಲ್ಲ?
ಕ್ರಿಕೆಟ್ ಎನ್ನುವ ಆಟ ಇಂದು ಭಾರತ ಮತ್ತು ಪಾಕಿಸ್ತಾನದ ಮನಸ್ಸುಗಳನ್ನು ಬೆಸೆಯುವ ಸಾಮರ್ಥ್ಯವನ್ನು ಉಳಿಸಿಕೊಂಡಿಲ್ಲ, ಯಾಕೆಂದರೆ ಇಂದಿನ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಒಂದೆಡೆ ಉದ್ಯಮ, ರಾಜಕೀಯ ಮತ್ತು ಅಪರಾಧ ಜಗತ್ತುಗಳ ನೆರಳು ಅದರ ಮೇಲೆ ಚಾಚಿದ್ದರೆ ಇನ್ನೊಂದೆಡೆ ಅದು ಮನಸ್ಸುಗಳನ್ನು ಒಡೆಯುವ ಅಸ್ತ್ರವಾಗಿ ಹೋಗಿದೆ.

ಇದಕ್ಕೆ ಎರಡೂ ದೇಶಗಳ ರಾಜಕಾರಣಿಗಳು ಮತ್ತು ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳು ಕಾರಣ. ಕ್ರಿಕೆಟ್‌ನ ಸೋಲು-ಗೆಲುವುಗಳು ದೇಶದ ಸೋಲು-ಗೆಲುವು ಎಂದು ತಿಳಿದುಕೊಳ್ಳುವಂತಹ ಸಮೂಹಸನ್ನಿ ಹರಡಿರುವಾಗ ಯಾವ ಬಗೆಯ ಸೌಹಾರ್ದತೆಯ ಸ್ಥಾಪನೆ ಸಾಧ್ಯ? ಇಂತಹ ಪರಿಸ್ಥಿತಿಯಲ್ಲಿ ಸ್ಟೇಡಿಯಂನಲ್ಲಿ ತುಂಬಿ ತುಳುಕುತ್ತಿದ್ದ ದೇಶದ ಕ್ರಿಕೆಟ್ ಅಭಿಮಾನಿಗಳ ಜೈಕಾರ, ಚೀತ್ಕಾರಗಳು ಮಾತ್ರವಲ್ಲ ಗೆದ್ದ ಭಾರತವನ್ನು ಅಭಿನಂದಿಸಲು ಪ್ರಧಾನಿ ಹೊಡೆದ ಚಪ್ಪಾಳೆ ಕೂಡಾ ತನಗೆ ಮಾಡುತ್ತಿರುವ ಅವಮಾನ ಎಂದು ಪಕ್ಕದಲ್ಲಿ ಕೂತ ಪಾಕಿಸ್ತಾನದ ಪ್ರಧಾನಿ ತಿಳಿದುಕೊಂಡರೆ ಆಶ್ಚರ್ಯವೇನಿದೆ? ಇದರಿಂದ ಏನನ್ನು ಸಾಧಿಸಿದಂತಾಯಿತು?ಅದೂ ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯಲ್ಲಿ ದುರ್ಬಲ ಸ್ಥಾನಮಾನ ಹೊಂದಿರುವ ಪ್ರಧಾನಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು. ಆ ದೇಶವನ್ನು ಮಾತುಕತೆಯ ಮೇಜಿಗೆ ಎಳೆದು ತರುವ ಸಾಮರ್ಥ್ಯವಾದರೂ ಗಿಲಾನಿ ಅವರಿಗೆಲ್ಲಿದೆ?
ಕೇವಲ ಅಗ್ಗದ ಜನಪ್ರಿಯತೆ ಗಳಿಸುವ ಉದ್ದೇಶದ ಇಂತಹ ರಾಜತಾಂತ್ರಿಕ ಕಸರತ್ತುಗಳಿಂದ ಎರಡು ದೇಶಗಳ ಸಂಬಂಧ ಸುಧಾರಣೆಯಾಗಲಾರದು. ಇದಕ್ಕಾಗಿ ಎರಡೂ ದೇಶಗಳ ನಾಯಕರು ಸವೆದ ದಾರಿಯನ್ನೇ ಮತ್ತೆ ತುಳಿಯದೆ ಹೊಸದಾರಿ ಕಂಡುಕೊಳ್ಳುವ ದಿಟ್ಟತನ ಮತ್ತು ಅಪ್ರಿಯ ನಿರ್ಧಾರ ಕೈಗೊಳ್ಳುವ ರಾಜಕೀಯ ಇಚ್ಛಾಶಕ್ತಿ ತೋರಬೇಕು. ಹಿಂದಿನ ಇಬ್ಬರು ಪ್ರಧಾನಿಗಳು ಈ ಕೆಲಸ ಮಾಡಿದ್ದಾರೆ.
ಅವರಲ್ಲೊಬ್ಬರು ಇಂದಿರಾಗಾಂಧಿ, ಇನ್ನೊಬ್ಬರು ಅಟಲಬಿಹಾರಿ ವಾಜಪೇಯಿ. ಇವರಿಬ್ಬರ ಕಾಲದಲ್ಲಿಯೇ ಕ್ರಮವಾಗಿ ಶಿಮ್ಲಾ ಮತ್ತು ಆಗ್ರಾ ಶೃಂಗಸಭೆಗಳು ನಡೆದದ್ದು. ಆ ನಾಯಕರ ಅದೃಷ್ಟವೇನೆಂದರೆ ಅವರ ಕಾಲದಲ್ಲಿ ಪಾಕಿಸ್ತಾನದಲ್ಲಿ ಕ್ರಮವಾಗಿ ಜುಲ್ಫೆಕರ್ ಅಲಿ ಭುಟ್ಟೋ ಮತ್ತು ಪರ್ವೇಜ್ ಮುಷರಫ್ ಎಂಬ ಇಬ್ಬರು ಬಲಿಷ್ಠ ನಾಯಕರಿದ್ದರು. ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನವನ್ನು ಹಣಿದುಹಾಕಿ ಆರೇ ತಿಂಗಳ ಅವಧಿಯಲ್ಲಿ ಮತ್ತೆ ಆ ದೇಶವನ್ನು ಮಾತುಕತೆಯ ಮೇಜಿಗೆ ಎಳೆದುತಂದ ಕೀರ್ತಿ ಇಂದಿರಾಗಾಂಧಿಯವರದ್ದು. ಸೋಲಿನಿಂದ ಅವಮಾನಕ್ಕೀಡಾಗಿದ್ದರೂ ವ್ಯತಿರಿಕ್ತವಾದ ಜನಾಭಿಪ್ರಾಯಕ್ಕೆ ಅಂಜದೆ ಮಾತುಕತೆಗೆ ಬಂದದ್ದು ಭುಟ್ಟೋ ಅವರ ವ್ಯಕ್ತಿತ್ವದ ಶಕ್ತಿ.
 ಇಬ್ಬರೂ ಪ್ರಧಾನಿಗಳಿಗೆ ತಮ್ಮ ದೇಶಗಳಲ್ಲಿ ಅಪಾರ ಜನಪ್ರಿಯತೆಯನ್ನು ತಂದುಕೊಡಬಲ್ಲ ಯಾವ ಅಂಶಗಳೂ ಶಿಮ್ಲಾ ಒಪ್ಪಂದದಲ್ಲಿ ಇರಲಿಲ್ಲ ಎನ್ನುವುದು ಗಮನಿಸುವಂತಹದ್ದು. ಆದರೆ ಇಬ್ಬರೂ ಕೂಡಾ ಯಾವುದೇ ಒಪ್ಪಂದದ ಮೂಲಸೂತ್ರವಾದ ‘ಕೊಟ್ಟು ತೆಗೆದುಕೊಳ್ಳುವ’ ಔದಾರ್ಯ ತೋರಿದ್ದರು. ಸೋತ ದೇಶದ ನಾಯಕನಿಗೆ ಮುಜುಗರವಾಗದಂತೆ, ಆತ ತನ್ನ ದೇಶಕ್ಕೆ ಹಿಂದಿರುಗಿದಾಗ ಜನರ ವಿರೋಧಕ್ಕೆ ಬಲಿಯಾಗದಂತೆ ಇಂದಿರಾಗಾಂಧಿ ಎಚ್ಚರಿಕೆಯಿಂದ ಭುಟ್ಟೋ ಅವರನ್ನು ನಡೆಸಿಕೊಂಡಿದ್ದರು.
‘1971ರ ಡಿಸೆಂಬರ್ 17ರಂದು ನಡೆದ ಕದನವಿರಾಮದ ನಂತರ ಗುರುತುಮಾಡಲಾಗಿದ್ದ ಗಡಿರೇಖೆಯನ್ನು ನಿಯಂತ್ರಣ ರೇಖೆಯನ್ನಾಗಿ ಎರಡೂ ದೇಶಗಳು ಯಾವುದೇ ಪೂರ್ವಗ್ರಹ ಇಲ್ಲದೆ ಒಪ್ಪಿಕೊಳ್ಳಬೇಕು...’ ಎನ್ನುವುದು ಶಿಮ್ಲಾ ಒಪ್ಪಂದದ ಮಹತ್ವದ ಅಂಶ. ಈ ನಿಯಂತ್ರಣ ರೇಖೆಯೇ ಪಾಕಿಸ್ತಾನ ಆಕ್ರಮಿತ ಕಾಶ್ಮೆರ ಮತ್ತು ಭಾರತದ ನಿಯಂತ್ರಣದಲ್ಲಿರುವ ಕಾಶ್ಮೆರವನ್ನು ಪ್ರತ್ಯೇಕಗೊಳಿಸಿರುವುದು.

ಕಾಶ್ಮೀರದ ಮೇಲೆ ಸತತವಾಗಿ ಹಕ್ಕುಸ್ಥಾಪನೆ ಮಾಡುತ್ತಾ ಬಂದ ಮತ್ತು ಈ ವಿವಾದವನ್ನು ವಿಶ್ವಸಂಸ್ಥೆಯ ವರೆಗೆ ಎಳೆದುಕೊಂಡು ಹೋಗಿದ್ದ ಪಾಕಿಸ್ತಾನ ಮೊದಲ ಬಾರಿ ಅದನ್ನು ಬಿಟ್ಟುಕೊಟ್ಟದ್ದು ಶಿಮ್ಲಾ ಒಪ್ಪಂದದ ಮೂಲಕವೇ. ಅಷ್ಟು ಮಾತ್ರವಲ್ಲ ಇಬ್ಬರು ನಾಯಕರ ನಡುವೆ ಮೌಖಿಕವಾದ ಒಪ್ಪಂದವೊಂದು ಕೂಡಾ ಆ ಸಮಯದಲ್ಲಿ ನಡೆದಿತ್ತು.
ಆದರೆ ಅದು ನಡೆದಿದ್ದು ಮಾತುಕತೆ ನಡೆಯುತ್ತಿದ್ದ ಅಧಿಕೃತ ಬಂಗಲೆಯಲ್ಲಿ ಅಲ್ಲ, ಯಾಕೆಂದರೆ ಅಲ್ಲಿ ಆಗಲೇ ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆಯಾದ ಐಎಸ್‌ಐ ಮಾತು ಕದ್ದಾಲಿಕೆಯ ಉಪಕರಣಗಳನ್ನು ಜೋಡಿಸಿಟ್ಟಿತ್ತಂತೆ. ಇದಕ್ಕಾಗಿ ಭುಟ್ಟೋ ಇಂದಿರಾಗಾಂಧಿಯವರನ್ನು ವಾಯುವಿಹಾರಕ್ಕೆ ಕರೆದೊಯ್ದು ‘ನಿಯಂತ್ರಣ ರೇಖೆಯನ್ನು  ಕ್ರಮೇಣ ‘ಅಂತರರಾಷ್ಟ್ರೀಯ ಗಡಿರೇಖೆ’ಯನ್ನಾಗಿ ಒಪ್ಪಿಕೊಳ್ಳುವ ಭರವಸೆ ನೀಡಿದ್ದು ಈಗ ರಹಸ್ಯವಾಗಿ ಉಳಿದಿಲ್ಲ.

ಆ ವಾಗ್ದಾನವನ್ನು ಲಿಖಿತ ರೂಪದಲ್ಲಿ ನೀಡಲು ಸಾಧ್ಯವಾಗದ ಭುಟ್ಟೋ ಅವರ ಅಸಹಾಯಕತೆಯನ್ನು ಇಂದಿರಾಗಾಂಧಿ ಅರ್ಥಮಾಡಿಕೊಂಡಿದ್ದರು. ಜುಲ್ಫಿಕರ್ ಅಲಿ ಭುಟ್ಟೋ ಅವರ ಪಾಲಿಗೆ ಶಿಮ್ಲಾ ಒಪ್ಪಂದದ ಲಿಖಿತ ಅಂಶಗಳು ಕೂಡಾ ತನ್ನ ದೇಶದಲ್ಲಿ ಜನಪ್ರಿಯತೆಯನ್ನು ತಂದುಕೊಡುವಂತಹದ್ದಾಗಿರಲಿಲ್ಲ ಎನ್ನುವುದಕ್ಕೆ ಅವರ ಬದುಕಿನ ಅಂತ್ಯವೇ ಸಾಕ್ಷಿ. ಅಂತಿಮವಾಗಿ ಭುಟ್ಟೋ ದೇಶದ್ರೋಹಿ ಎಂಬ ಆರೋಪ ಹೊತ್ತು ಗಲ್ಲಿಗೇರಬೇಕಾಯಿತು.
ಇಂದಿರಾಗಾಂಧಿಯವರು ಕೂಡಾ ಒಂದು ಸಣ್ಣ ರಾಜಿ ಮಾಡಿಕೊಂಡಿದ್ದರು. ಆದರೆ ಅದು ಭಾರತದಲ್ಲಿ ದೊಡ್ಡ ಸುದ್ದಿಯಾಗಲೇ ಇಲ್ಲ. ಬಾಂಗ್ಲಾ ಯುದ್ಧದ ವೇಳೆ ಭಾರತದ ಸೇನೆ ಆಕ್ರಮಿಸಿಕೊಂಡಿದ್ದ ಈಗಿನ ಪಾಕ್ ಆಕ್ರಮಿತ ಕಾಶ್ಮೆರದಲ್ಲಿದ್ದ (ಪಿಒಕೆ) ಸೇನೆಯನ್ನು ಹಿಂದೆಗೆದುಕೊಳ್ಳಲು ಇಂದಿರಾಗಾಂಧಿ ಒಪ್ಪಿಕೊಂಡಿದ್ದರು. ಅದರಿಂದಾಗಿಯೇ ಭಾರತ ತನ್ನ ‘ಬಲಜುಟ್ಟು’ ಕಳೆದುಕೊಂಡಿದ್ದು. ಭಾರತದ ಅಧಿಕೃತ ಭೂಪಟದಲ್ಲಿ ಕಾಣುವ ದೇಶದ ತಲೆಯ ಎಡ-ಬಲಗಳ ಎರಡು ಜುಟ್ಟುಗಳ ಮೇಲೆ ಭಾರತಕ್ಕೆ ಈಗ ಯಾವ ನಿಯಂತ್ರಣವೂ ಇಲ್ಲ.

ಅವೆರಡೂ ಪಾಕಿಸ್ತಾನ ಮತ್ತು ಚೀನಾದ ವಶದಲ್ಲಿವೆ. ಬಲಭಾಗದ ಜುಟ್ಟು ಇರುವ ಪ್ರದೇಶವೇ ಸುಮಾರು 78,000 ಚದರ ಕಿ.ಮೀ.ವಿಸ್ತೀರ್ಣದ ಪಿಒಕೆ. ಪಾಕಿಸ್ತಾನದ ಪ್ರಕಾರ ಅದು ಆಜಾದ್ ಕಾಶ್ಮೆರ. ಆ ಕಾಲದಲ್ಲಿ ಇಂದಿರಾಗಾಂಧಿಯವರ ‘ಉಡುಗೊರೆ’ಯ ಪರಿಣಾಮವನ್ನು ಯಾರೂ ಊಹಿಸಲು ಹೋಗಿರಲಿಲ್ಲ, ಈಗಷ್ಟೇ ಅರಿವಿಗೆ ಬರುತ್ತಿದೆ.
ಈಗ ಭಾರತದೊಳಗೆ ನುಸುಳಿಕೊಂಡು ಬರುವ ಭಯೋತ್ಪಾದಕರಿಗೆ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ತರಬೇತಿ ನೀಡುತ್ತಿರುವ ಶಿಬಿರಗಳು ಇರುವುದು ದುದನಿಯಾಲ್‌ನಿಂದ ಬಿಂಬರ್ ವರೆಗಿನ ನಿಯಂತ್ರಣ ರೇಖೆಗೆ ಒತ್ತಿಕೊಂಡಿರುವ ಪಿಒಕೆ ಪ್ರದೇಶದಲ್ಲಿ. ಭುಟ್ಟೋ ಅನಧಿಕೃತವಾಗಿ ಕಾಶ್ಮೀರವನ್ನು ಮತ್ತು ಇಂದಿರಾಗಾಂಧಿಯವರು ಅಧಿಕೃತವಾಗಿ ಪಿಒಕೆಯನ್ನು ಬಿಟ್ಟುಕೊಟ್ಟಿದ್ದರು. ಶಿಮ್ಲಾ ಒಪ್ಪಂದವನ್ನು ಬಿಟ್ಟು ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ಈಗಲೂ ಬೇರೆ ದಾರಿಯಾವುದಾದರೂ ಇದೆಯೇ?
ಇಂದಿರಾಗಾಂಧಿಯವರ ನಂತರ ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ಪ್ರಾಮಾಣಿಕವಾದ ಪ್ರಯತ್ನ ಮಾಡಿದವರು ಅಟಲಬಿಹಾರಿ ವಾಜಪೇಯಿ. ‘ಮನೆಯೊಳಗಿನ ಶತ್ರು’ಗಳ ಕಾಟದ ನಡುವೆಯೂ ಅವರು ಮಾಡಿದ ಸಾಧನೆ ನೆನಪಿಸಿಕೊಳ್ಳುವಂತಹದ್ದು. ಒಮ್ಮೊಮ್ಮೆ ತನ್ನ ಸರ್ಕಾರದೊಳಗೆ ಏನು ನಡೆಯುತ್ತಿದೆ ಎನ್ನುವುದೂ ಗೊತ್ತಿರದಿದ್ದ ವಾಜಪೇಯಿ ಅವರಿಗೆ ವಿದೇಶಾಂಗ ವ್ಯವಹಾರದ ಬಗ್ಗೆ ಮಾತ್ರ ಉಳಿದವರನ್ನು ಚಕಿತಗೊಳಿಸಬಲ್ಲಂತಹ ಒಳನೋಟ ಇತ್ತು. ಕಾಶ್ಮೀರ ಸಮಸ್ಯೆಯ ಇತ್ಯರ್ಥಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡಿದ್ದ ಅವರು ಉದ್ದೇಶಪೂರ್ವಕವಾಗಿ ‘ಸವೆದ ಹಾದಿ ತುಳಿಯದೆ’ ಹೊಸಹಾದಿಯಲ್ಲಿಯೇ ಹೆಜ್ಜೆಹಾಕಿದ್ದರು.

ಲಾಹೋರ್ ಬಸ್ ಯಾತ್ರೆಯ ಶಾಂತಿ ಪ್ರಯತ್ನಕ್ಕೆ ಪಾಕಿಸ್ತಾನ ಕಾರ್ಗಿಲ್ ಯುದ್ದದ ಉಡುಗೊರೆ ನೀಡಿದರೂ ಅವರು ಶಾಂತಿಸ್ಥಾಪನೆಯ ಪ್ರಯತ್ನ ನಿಲ್ಲಿಸಿರಲಿಲ್ಲ. 2000ನೇ ವರ್ಷದಲ್ಲಿ ರಮ್ಜಾನ್ ತಿಂಗಳ ಕದನವಿರಾಮ ಘೋಷಿಸಿದ ನಂತರ ಜಮ್ಮು ಮತ್ತು ಕಾಶ್ಮೆರದಲ್ಲಿ ಮಾತ್ರವಲ್ಲ  ಕೆಂಪುಕೋಟೆ, ಅಕ್ಷರಧಾಮಗಳ ಮೇಲೂ ಉಗ್ರರ ದಾಳಿ ನಡೆಯಿತು. ಅಂತಿಮವಾಗಿ ಸಂಸತ್‌ಭವನದ ಮೇಲೆಯೇ ಭಯೋತ್ಪಾದಕರು ಎರಗಿಬಿದ್ದರು. ಹೀಗಿದ್ದರೂ ವಾಜಪೇಯಿ ಸಂಬಂಧ ಸುಧಾರಣೆಯ ಪ್ರಯತ್ನವನ್ನು ನಿಲ್ಲಿಸಿರಲಿಲ್ಲ.
ಪ್ರಧಾನಿ ಮನಮೋಹನ್‌ಸಿಂಗ್ ಅವರ ಕ್ರಿಕೆಟ್ ಡಿಪ್ಲೊಮೆಸಿಯಲ್ಲಿ ಹೊಸದೇನಿಲ್ಲ. ಇದು  ವಾಜಪೇಯಿ ಅವರು ಮಾಡಿಬಿಟ್ಟದ್ದು. ‘ದೇಶದ ಮನಸ್ಸುಗಳು ಒಂದಾಗಬೇಕಾದರೆ ಮೊದಲು ಜನರ ಮನಸ್ಸುಗಳು ಒಂದಾಗಬೇಕು. ಇದು ಕೇವಲ ರಾಜತಾಂತ್ರಿಕ ಮಟ್ಟದಲ್ಲಿ ನಡೆಯುವ ಮಾತುಕತೆಗಳಿಂದ ಸಾಧ್ಯ ಇಲ್ಲ. ದೇಶ-ಭಾಷೆಗಳ ಗಡಿಯನ್ನು ಮೀರಿದ ಕ್ರೀಡೆ, ಸಂಗೀತ, ಕಲೆ, ನಾಟಕ, ಚಲನಚಿತ್ರಗಳ ಮೂಲಕ ಮನಸ್ಸು ಒಂದಾಗಲು ಸಾಧ್ಯ’ ಎಂದು ಅವರು ಹೇಳುತ್ತಿದ್ದರು.
ಈ ಹಿನ್ನೆಲೆಯಲ್ಲಿಯೇ ಎರಡು ದೇಶಗಳ ಮನಸ್ಸನ್ನು ಬೆಸೆಯುವ ‘ಜನಸಂಪರ್ಕ ಮತ್ತು ವಿಶ್ವಾಸನಿರ್ಮಾಣ’ದ ಡಿಪ್ಲೊಮೆಸಿಯ ಹಾದಿ ತೆರೆದುಕೊಂಡದ್ದು. ಸ್ಥಗಿತಗೊಂಡಿದ್ದ ವಿಮಾನ-ರೈಲು-ಹಡಗು ಸಂಚಾರ, ಶ್ರಿನಗರ-ಮುಜಾಫರ್‌ನಗರ ನಡುವೆ ಬಸ್‌ಸಂಚಾರ, ಮಕ್ಕಳಿಗೆ ಚಿಕಿತ್ಸಾ ಸೌಲಭ್ಯ, ವೀಸಾ ಕ್ಯಾಂಪ್ ಸ್ಥಾಪನೆಯ ಜತೆ ನಿಂತುಹೋಗಿದ್ದ ಉಭಯ ದೇಶಗಳ ನಡುವಿನ ಕ್ರಿಕೆಟ್ ಆಟಕ್ಕೆ ಚಾಲನೆ ನೀಡಿದ್ದು ಕೂಡಾ ವಾಜಪೇಯಿ.
 ಆ ಕಾಲದಲ್ಲಿ ಇವು ಯಾವುದೂ ಜನಪ್ರಿಯ ಕಾರ್ಯಕ್ರಮಗಳಾಗಿರಲಿಲ್ಲ. ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಆ ದೇಶವನ್ನು ಮುಗಿಸಿಬಿಡಬೇಕೆಂದು ಗರ್ಜಿಸುತ್ತಿರುವವರು ವಾಜಪೇಯಿ ಪರಿವಾರದಲ್ಲಿ ಮಾತ್ರವಲ್ಲ, ಹೊರಗೆಯೂ ಇದ್ದರು. ಪರ್ವೇಜ್ ಮುಷರಫ್ ಅವರ ಮೇಲೆಯೂ ಇದೇ ರೀತಿಯ ಒತ್ತಡಗಳಿದ್ದವು. ಒಂದೆಡೆ ಉಗ್ರಗಾಮಿ ಸಂಘಟನೆಗಳು ಇನ್ನೊಂದೆಡೆ ಧಾರ್ಮಿಕ ನಾಯಕರು ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದವು.

ಆದರೆ ಶಾಂತಿ ಸ್ಥಾಪನೆಗೆ ಮುಷರಫ್ ಅವರ ಗುಪ್ತ ಸಹಕಾರ ಇದ್ದ ಕಾರಣದಿಂದಾಗಿಯೇ ಇಬ್ಬರ ಪ್ರಯತ್ನಗಳು ಸ್ವಲ್ಪ ಮಟ್ಟಿಗಾದರೂ ಯಶಸ್ಸು ಕಾಣಲು ಸಾಧ್ಯವಾಗಿದ್ದು. ಆದರೆ ಈ ಇಬ್ಬರು ನಾಯಕರು ಭುಟ್ಟೋ ಮತ್ತು ಇಂದಿರಾಗಾಂಧಿಯವರಷ್ಟು ಅದೃಷ್ಟಶಾಲಿಗಳಾಗಿರಲಿಲ್ಲ. ಈ ಕಾರಣದಿಂದಾಗಿಯೇ ಆಗ್ರಾ ಶೃಂಗಸಭೆ ಭಂಗಗೊಂಡದ್ದು.
ಭಾರತದ ಕಡೆಯಿಂದ ಆಗ್ರಾ ಶೃಂಗಸಭೆಯನ್ನು ವಿಫಲಗೊಳಿಸಿದ ‘ಖಳನಾಯಕಿ’ ಈಗ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿ. ಮಾತುಕತೆಯಲ್ಲಿ ಕಾಶ್ಮೀರವೇ ಮುಖ್ಯ ವಿಷಯ ಎಂದು ಪಾಕಿಸ್ತಾನ ಪಟ್ಟು ಹಿಡಿದಿತ್ತು, ಭಯೋತ್ಪಾದನೆಯ ಬಗ್ಗೆ ಮೊದಲು ತೀರ್ಮಾನಿಸುವ ಎನ್ನುತ್ತಿತ್ತು ಭಾರತ. ಒಂದು ಹಂತದಲ್ಲಿ ಕಾಶ್ಮೀರ ವಿಷಯವನ್ನು ಕೈಬಿಡುವ ಇಂಗಿತವನ್ನು ಪರ್ವೇಜ್ ಮುಷರಫ್ ನೀಡಿದ್ದರಂತೆ.ಇದನ್ನು ಹೇಗೋ ತಿಳಿದ ಸಚಿವೆ ಸುಷ್ಮಾಸ್ವರಾಜ್ ಇದನ್ನು ಭಾರತದ ಗೆಲುವು ಎಂಬಂತೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ತಕ್ಷಣ ಐಎಸ್‌ಐ ಮತ್ತು ಜೆಹಾದಿಗಳ ಕಡೆಯಿಂದ ವಿರೋಧ ಬರಲಾರಂಭಿಸಿತು.

ಈ ಸಂದೇಶವನ್ನು ಐಎಎಸ್ ಜತೆ ಸಂಪರ್ಕ ಹೊಂದಿದ್ದ ವಿದೇಶಾಂಗ ವ್ಯವಹಾರ ಸಚಿವ ಅಬ್ದುಲ್ ಸತ್ತಾರ್ ಅವರು ಮುಷರಫ್ ಅವರಿಗೆ ತಲುಪಿಸಿದ ನಂತರವೇ ಮುಷರಫ್ ಮುಷ್ಠಿ ಬಿಗಿಗೊಳಿಸಿದ್ದು. ಇನ್ನೇನು ಘೋಷಣೆ ಹೊರಬೀಳಲಿದೆ ಎಂದು ಆಗ್ರಾದ ಮೊಗಲ್ ಶೆರಟನ್ ಮಾಧ್ಯಮಕೇಂದ್ರದಲ್ಲಿ ಶೃಂಗಸಭೆಯ ವರದಿಗಾಗಿ ಹೋಗಿದ್ದ ನಾವೆಲ್ಲ ಕಾಯುತ್ತಿದ್ದರೆ ಪಕ್ಕದ ಜೇಪಿ ಪ್ಯಾಲೇಸ್‌ನಲ್ಲಿ ತಂಗಿದ್ದ ಪರ್ವೇಜ್‌ಮುಷರಫ್ ಪಾಕಿಸ್ತಾನದ ವಿಮಾನ ಹತ್ತಿದ್ದರು.

ಆಗ್ರಾ ಶೃಂಗಸಭೆಯ ವೈಫಲ್ಯದ ಹೊರತಾಗಿಯೂ ಉಭಯದೇಶಗಳ ಸಂಬಂಧ ಸುಧಾರಣೆಯಲ್ಲಿ ವಾಜಪೇಯಿ ವಹಿಸಿದ್ದ ಪಾತ್ರದಿಂದ ಕಲಿಯುವುದಿದೆ. ಇದಕ್ಕಾಗಿ ಮನಮೋಹನ್‌ಸಿಂಗ್ ಇತಿಹಾಸದ ಪುಟಗಳನ್ನು ತಿರುವಿಹಾಕಬೇಕು, ಪಾಕ್ ಪ್ರಧಾನಿ ಜತೆ ಕೂತು ಕ್ರಿಕೆಟ್ ನೋಡಿದರಷ್ಟೇ ಸಾಲದು

Monday, March 28, 2011

ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ

ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಭ್ರಷ್ಟ ಆಡಳಿತ ಪಕ್ಷಕ್ಕಿಂತ  ಹೆಚ್ಚು ಹಾನಿಕಾರಿ.ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಸ್ವಘೋಷಿತ ನಾಲ್ಕನೇ ಸ್ಥಂಭವಾದ ಪತ್ರಿಕಾರಂಗದ ಜತೆ ವಿರೋಧಪಕ್ಷಕ್ಕೆ ಕೂಡಾ  ಮಹತ್ವದ ಪಾತ್ರ ಇದೆ. ಈ ದೃಷ್ಟಿಯಿಂದ ಇದನ್ನು ಸಂವಿಧಾನದ ‘ಐದನೇ ಸ್ಥಂಭ’ ಎಂದು ಕರೆಯಬಹುದು.
ಆಡಳಿತ ಪಕ್ಷವೊಂದು ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರವಾಗಿದ್ದಾಗ ಏನೂ ಕೆಲಸವಿಲ್ಲದ ಈ ‘ಐದನೆಯ ಸ್ಥಂಭ’ ದುರ್ಬಲಗೊಂಡರೆ ಅದು ಸಹಜ. ಆದರೆ ನಾವು ಕಾಣುತ್ತಿರುವುದು ತದ್ವಿರುದ್ಧವಾದ ಬೆಳವಣಿಗೆ. ಇಲ್ಲಿ ಆಡಳಿತ ಪಕ್ಷ ಹೆಚ್ಚುಹೆಚ್ಚು ಭ್ರಷ್ಟ, ಅಪ್ರಮಾಣಿಕ ಮತ್ತು ಜನವಿರೋಧಿಯಾಗುತ್ತಿದ್ದಾಗ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕಾದ ವಿರೋಧಪಕ್ಷಗಳು ಹೆಚ್ಚುಹೆಚ್ಚು ದುರ್ಬಲಗೊಂಡಂತೆ ಕಾಣುತ್ತಿವೆ.ಇದೊಂದು ಪಕ್ಷಾತೀತ ಬೆಳವಣಿಗೆ. ವಿರೋಧ ಪಕ್ಷಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್  ಎರಡೂ ಪಕ್ಷಗಳ ವಿಷಯದಲ್ಲಿಯೂ ಇದು ಸತ್ಯ.
ವಿರೋಧ ಪಕ್ಷಗಳು ಹೆಚ್ಚು ದುರ್ಬಲಗೊಳ್ಳತೊಡಗಿದ್ದು ಇತ್ತೀಚಿನ ವರ್ಷಗಳಲ್ಲಿ. ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿರೋಧಪಕ್ಷಗಳ ನಾಯಕರು ದೆಹಲಿಯ ಜನಪಥ ರಸ್ತೆಯ ಹತ್ತನೆ ನಂಬರಿನ ಬಂಗಲೆ ಕಡೆ ಓಡತೊಡಗಿದ್ದರು.ಫಲಿತಾಂಶ ಪ್ರಕಟಣೆಯ ಮೊದಲೇ ಕಾಂಗ್ರೆಸ್ ಗೆಲುವಿನ ವಾಸನೆ ಹಿಡಿದು ಹೋದವರು ಜೆಡಿ (ಎಸ್) ನಾಯಕ ಎಚ್.ಡಿ.ಕುಮಾರಸ್ವಾಮಿ. ಹೇಗೋ ಸುದ್ದಿ ತಿಳಿದು ಕನ್ನಡದ ಟಿವಿ ಚಾನೆಲ್‌ನ ಒಬ್ಬ ವರದಿಗಾರ ಅಲ್ಲಿಗೆ ಓಡಿ ಕ್ಯಾಮೆರಾ ಹಿಡಿದರೆ ಕುಮಾರಸ್ವಾಮಿಯವರು ಕರ್ಚಿಫ್‌ನಿಂದ ಮುಖಮುಚ್ಚಿಕೊಂಡು ಅಲ್ಲಿಂದ ಪಾರಾಗುವ ಪ್ರಯತ್ನ ನಡೆಸಿ ವಿಫಲವಾಗಿದ್ದರು.
ನೋಡುನೋಡುತ್ತಿದ್ದಂತೆಯೇ ತೃತೀಯರಂಗ-ಚತುರ್ಥರಂಗದ ಸೌಧಗಳೆಲ್ಲ ಕುಸಿಯತೊಡಗಿದ್ದವು. ಲಾಲುಪ್ರಸಾದ್,ಮುಲಾಯಂಸಿಂಗ್ ಯಾದವ್, ರಾಮ್‌ವಿಲಾಸ್ ಪಾಸ್ವಾನ್ ಮೊದಲಾದ ತೃತೀಯರಂಗದ ನಾಯಕರು ಪೈಪೋಟಿಯಲ್ಲಿ ಕಾಂಗ್ರೆಸ್ ಮೈಮೇಲೆ ಬಿದ್ದು ಬೆಂಬಲ ಘೋಷಿಸತೊಡಗಿದ್ದರು. ಚುನಾವಣೆಯ ಮೊದಲು ಪ್ರಧಾನಿ ಪಟ್ಟ ಏರಲು ಕನಸಿನ ಆನೆ ಏರಿ ಹೊರಟಿದ್ದ ಮಾಯಾವತಿಯವರು ಕೂಡಾ ಬೇಷರತ್ ಬೆಂಬಲ ಘೋಷಿಸಿ ಕಾಂಗ್ರೆಸ್ ಪಕ್ಷಕ್ಕೆ ಶರಣಾಗಿದ್ದರು.
ಆ ಕಾಲದ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಬಿಜೆಪಿ ನಾಯಕರೊಬ್ಬರು ದೆಹಲಿಯ ಪಕ್ಷದ ಕಚೇರಿಯಲ್ಲಿ ಪತ್ರಕರ್ತರ ಜತೆ ಮಾತನಾಡುತಾ  ‘ನಮ್ಮ ಪಕ್ಷವೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸುತ್ತದೆಯೇನೋ ಎಂದು ಭಯವಾಗುತ್ತಿದೆ’ಎಂದು ಕುಹಕವಾಡಿದ್ದರು. ಆದರೆ ಅದು ಬರೀ ಕುಹಕವಾಗಿರಲಿಲ್ಲ, ಆಗಲೆ ಬಿಜೆಪಿ ಬಗ್ಗೆ ಒಲವುಹೊಂದಿದ್ದ ಬುದ್ದಿಜೀವಿಗಳ ಗುಂಪೊಂದು ಕಾಂಗ್ರೆಸ್ ಮತ್ತು ಬಿಜೆಪಿ ಕೂಡಿ ಯಾಕೆ ಸರ್ಕಾರ ರಚಿಸಬಾರದು ಎನ್ನುವ ಚರ್ಚೆಗೆ ಚಾಲನೆ ನೀಡಿತ್ತು. ಇಂದು ಕೇಂದ್ರ ಮತ್ತು ರಾಜ್ಯದ ವಿರೋಧಪಕ್ಷಗಳ ಸ್ಥಿತಿ ಅಂದಿಗಿಂತ ಭಿನ್ನವೇನಿಲ್ಲ.ಭ್ರಷ್ಟಾಚಾರದ ಆರೋಪಗಳು ಮತ್ತು ಭಿನ್ನಮತೀಯ ಚಟುವಟಿಕೆಗಳಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ಕುಸಿಯತೊಡಗಿದೆ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಲ್ಲಿ ಯುದ್ಧಭೂಮಿಗಿಳಿಯುವ ಯೋಧರ ವೀರಾವೇಶ ಕಾಣಬೇಕಿತ್ತು.
ಆದರೆ ದೆಹಲಿ ಕಡೆಯಿಂದ ನಾಯಕರು ಬಂದರೆ ಮೆರೆದಾಡುವ ಕಟೌಟ್‌ಗಳು ಮತ್ತು ಒಂದಷ್ಟು ಕಾರ್ಯಕರ್ತರ ಗೌಜಿಗದ್ದಲ   ಬಿಟ್ಟರೆ ಉಳಿದ ಸಮಯದಲ್ಲಿ ಕೆಪಿಸಿಸಿ ಕಚೇರಿ ಬಿಕೋ ಅನಿಸುತ್ತಿದೆ. ಕಾಂಗ್ರೆಸ್ ನಾಯಕರು ವಾರಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಯಾರೋ ಮಾಡಿರುವ ಆರೋಪಗಳನ್ನು ಪುನರುಚ್ಚರಿಸಿ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಾರೆ. ಪತ್ರಕರ್ತರು ಕಾಡಿದರೆ ನಡುನಡುವೆ ಒಂದಷ್ಟು ಪ್ರತಿಕ್ರಿಯೆ ನೀಡುತ್ತಾರೆ. ಯಾರಾದರೂ ಸ್ಥಳೀಯ ಕಾರ್ಯಕರ್ತರು ದುಡ್ಡು-ಶ್ರಮ ಹಾಕಿ ಸಮಾವೇಶಗಳನ್ನು ಮಾಡಿದರೆ ಅಲ್ಲಿಗೆ ಹೋಗಿ ಒಂದಷ್ಟು ಭಾಷಣ ಮಾಡಿ ಬರುತ್ತಾರೆ.
 ಉಳಿದಂತೆ ದೆಹಲಿ ಕಡೆ ಮುಖಮಾಡಿ ಗಡದ್ದಾಗಿ ನಿದ್ದೆ ಮಾಡುತ್ತಾರೆ. ಬಳ್ಳಾರಿ ಕಡೆ ಪಾದಯಾತ್ರೆ ಹೊರಟಾಗ ವ್ಯಕ್ತವಾದ ಸಾರ್ವಜನಿಕ ಪ್ರತಿಕ್ರಿಯೆ ಕಂಡಾಗ ಈ ಸರ್ಕಾರ ಪತನದ ದಿನಗಳ ಎಣಿಕೆ ಪ್ರಾರಂಭವಾಗಿದೆಯೇನೋ ಎಂಬ ಅಭಿಪ್ರಾಯ ಮೂಡಿತ್ತು. ಮತ್ತೆ ಎಲ್ಲ ಯಥಾಸ್ಥಿತಿ. ಜೆಡಿ (ಎಸ್)ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಆಗಾಗ ಹಗರಣಗಳನ್ನು ಬಯಲುಗೊಳಿಸುತ್ತಿರುತ್ತಾರೆ.ಅವರ ‘ಒನ್‌ಮ್ಯಾನ್ ಶೋ’ನಲ್ಲಿ ಆಗಾಗ ಇಂಟರ್‌ವಲ್‌ಗಳಿರುತ್ತವೆ. ಈ ಇಂಟರ್‌ವಲ್‌ಗಳಲ್ಲಿ ಅವರೇನು ಮಾಡುತ್ತಾರೆ ಎನ್ನುವುದೇ ಕುತೂಹಲ.
ಕೇಂದ್ರದಲ್ಲಿ ವಿರೋಧಪಕ್ಷವಾಗಿರುವ ಬಿಜೆಪಿಯದ್ದು ಕಣ್ಣೆತ್ತಿ ಕಾಂಗ್ರೆಸ್ ಕಡೆ ನೋಡಲಾರದ ಸ್ಥಿತಿ. ಕಾಮನ್‌ವೆಲ್ತ್, 2ಜಿ ತರಂಗಾಂತರ, ಆದರ್ಶ ಹೌಸಿಂಗ್ ಕಾರ್ಪೋರೇಷನ್ ಮೊದಲಾದ ಭ್ರಷ್ಟಾಚಾರದ ಹಗರಣಗಳಲ್ಲಿ ಯುಪಿಎ ಸರ್ಕಾರ ಮುಳುಗಿಹೋಗಿದೆ, ಸ್ವಚ್ಛ, ಸಮರ್ಥ ಎಂಬ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರ ಬಿಂಬ ಒಡೆದುಹೋಗಿದೆ. ಈ ಪ್ರತಿಕೂಲ ಬೆಳವಣಿಗೆಗಳನ್ನು ಬಳಸಿಕೊಂಡು ಆಡಳಿತ ಪಕ್ಷವನ್ನು ಮಂಡಿ ಊರುವಂತೆ ಮಾಡಬೇಕಾದ ಬಿಜೆಪಿಯ ಬಾಯಿ ಕಟ್ಟಿಹೋಗಿದೆ. ಯಾಕೆಂದರೆ ಭ್ರಷ್ಟಾಚಾರದ ವಿಷಯ ಎತ್ತಿದ ಕೂಡಲೇ ಆಡಳಿತ ಪಕ್ಷದ ಸದಸ್ಯರು ನಿಮ್ಮ ಯಡಿಯೂರಪ್ಪನವರದ್ದೇನು ಎಂದು ಕೇಳುತ್ತಾರೆ. ಉತ್ತರ ಕೊಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇಂತಹ ಮುಜುಗರಗಳೇ ಬೇಡ ಎಂದುಕೊಂಡು ಆಡಳಿತ ಮತ್ತು ವಿರೋಧಪಕ್ಷಗಳು ಜತೆಗೂಡಿ ವಿಕಿಲೀಕ್ಸ್‌ನಂತಹ ಅಪ್ರಸ್ತುತ ವಿಷಯವನ್ನೆತ್ತಿಕೊಂಡು ಕಾಲಹರಣ ಮಾಡುತ್ತಿವೆ.ಹಿಂದಿನ ವಿರೋಧಪಕ್ಷಗಳು  ಮತ್ತು ಅದರ ನಾಯಕರು ಹೀಗಿರಲಿಲ್ಲ.
ಮುಂದೊಂದು ದಿನ ತಾವೂ ಅಧಿಕಾರಕ್ಕೆ ಬರಬಹುದೆಂದು ಸ್ವಾತಂತ್ರ್ಯಾನಂತರದ  ಮೊದಲು 25 ವರ್ಷಗಳ ಕಾಲ ಯಾವ ವಿರೋಧ ಪಕ್ಷವೂ ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ.ಮೊದಲ 30ವರ್ಷಗಳ ಕಾಲ ತೆಪ್ಪಗೆ ವಿರೋಧಪಕ್ಷದ ಸ್ಥಾನದಲ್ಲಿ ಕೂತು ಕಾಂಗ್ರೆಸ್‌ನಂತಹ ದೈತ್ಯಪಕ್ಷವನ್ನು ಅವುಗಳು ಎದುರಿಸಿದ್ದವು.
ಆಗಿನ ಕಾಲದ ಬುದ್ದಿಜೀವಿ ಪ್ರಧಾನಿ ಜವಾಹರಲಾಲ ನೆಹರೂ ಅವರಲ್ಲಿಯೂ ಕೀಳರಿಮೆ ಹುಟ್ಟಿಸಬಲ್ಲಂತಹ ಚಿಂತನಶೀಲ ರಾಜಕೀಯ ನಾಯಕರಾದ ಆಚಾರ್ಯ ಕೃಪಲಾನಿ, ರಾಮಮನೋಹರ ಲೋಹಿಯಾ, ಅಶೋಕ್ ಮೆಹ್ತಾ, ಎ.ಕೆ.ಗೋಪಾಲನ್,ಮಿನೂ ಮಸಾನಿ ಮೊದಲಾದ ವಿರೋಧಪಕ್ಷಗಳ ನಾಯಕರಿದ್ದರು. ಭ್ರಷ್ಟತೆ ಬಿಡಿ ಕನಿಷ್ಠ ಆತ್ಮವಂಚನೆಯನ್ನೂ ಈ ನಾಯಕರು ಮಾಡಿಕೊಂಡಿರಲಿಲ್ಲ.
 ವಿರೋಧಿ ಸ್ಥಾನದಲ್ಲಿ ಕೂರಬೇಕಾದ ಪರಿಸ್ಥಿತಿ ಎದುರಾದಾಗ ಹಿಂದಿನ ಕಾಂಗ್ರೆಸ್ ನಾಯಕರು ಕೂಡಾ ವಿಶ್ವಾಸ ಕಳೆದುಕೊಂಡಿರಲಿಲ್ಲ. ವಿರೋಧಪಕ್ಷಗಳಿಗೆ 2009ರ ಚುನಾವಣಾ ಸೋಲು ಎಷ್ಟೇ ಹೀನಾಯವಾಗಿದ್ದರೂ ಅದನ್ನು 1977ರ ಚುನಾವಣೆಯಲ್ಲಿನ ಇಂದಿರಾಗಾಂಧಿ ಸೋಲಿಗೆ ಹೋಲಿಸಲಾಗದು. ಅಧಿಕಾರದಿಂದ ಅಲ್ಲ ಸರ್ವಾಧಿಕಾರದಿಂದ ಮೆರೆದಿದ್ದ ಇಂದಿರಾಗಾಂಧಿಯವರನ್ನು ದೇಶದ ಮತದಾರ ಕಿತ್ತೊಗೆದಿದ್ದ. ಅವರ ಪಕ್ಷದ ಬಲ 352ರಿಂದ 154ಕ್ಕೆ ಇಳಿದಿತ್ತು. ಮಗ ಸಂಜಯಗಾಂಧಿ ಕೂಡಾ ಸೋತುಹೋಗಿದ್ದ.
ಆಯೋಗಗಳ ಮೇಲೆ ಆಯೋಗ, ತನಿಖೆ, ಯಾವಾಗ ಜೈಲಿಗೆ ತಳ್ಳಲಿದ್ದಾರೆ ಎಂಬ ಭೀತಿ, ಸೇಡುತೀರಿಸಿಕೊಳ್ಳುವ ರೀತಿಯಲ್ಲಿ ಮಾಧ್ಯಮಗಳ ದಾಳಿ, ಕೈಬಿಟ್ಟುಹೋದ ಮಿತ್ರರು, ಹೆಚ್ಚಿದ ಶತ್ರುಗಳು.. ಆದರೆ ಇಂದಿರಾಗಾಂಧಿ ಅಂಜಿದ್ದರೇ, ಅಳುಕಿದ್ದರೇ? ಮೂರೇ ಮೂರುವರ್ಷಗಳಲ್ಲಿ ಮರಳಿ ಅಧಿಕಾರಕ್ಕೆ ಬಂದರು. ಅದೂ 1971ರ ಚುನಾವಣೆಗಿಂತಲೂ ಒಂದು ಸ್ಥಾನವನ್ನು ಹೆಚ್ಚುಗಳಿಸಿ. ನುಚ್ಚುನೂರಾಗಿ ಹೋದ ಆಗಿನ ಆಡಳಿತಪಕ್ಷಗಳಲ್ಲಿ ಯಾವುದರ ಸಂಖ್ಯೆಯೂ 50 ದಾಟಿರಲಿಲ್ಲ.
ಕಾಂಗ್ರೆಸ್ ಕತೆ ಬಿಡಿ ಬಿಜೆಪಿಯ ಹಳೆಯ ಕತೆಗೆ ಬರೋಣ. 1984ರ ಚುನಾವಣೆಯಲ್ಲಿ ದೂಳೀಪಟವಾಗಿ ಹೋಗಿದ್ದ ವಿರೋಧ ಪಕ್ಷಗಳಲ್ಲಿ ಬಿಜೆಪಿಯೂ ಇತ್ತು. ಲೋಕಸಭೆಯಲ್ಲಿ ಎರಡೇ ಎರಡು ಸ್ಥಾನ. ವಾಜಪೇಯಿಯವರೇ ಸೋತಿದ್ದರು. ಆದರೆ ಆ ಪಕ್ಷದ ನಾಯಕರಾಗಲಿ, ಕಾರ್ಯಕರ್ತರಾಗಲಿ ಸೋಲು ಒಪ್ಪಿಕೊಂಡಿರಲಿಲ್ಲ. ಅವರು ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಅದರೆ ಹನ್ನೆರಡು ವರ್ಷಗಳ ನಂತರ ಬಿಜೆಪಿ ಸರ್ಕಾರ ರಚಿಸುವ ಸ್ಥಿತಿಗೆ ಬಂದು ತಲುಪಿತ್ತು. ಆ ರಾಜಕೀಯ ಹೋರಾಟ ನಡೆಸಿದ್ದ ಲಾಲ್‌ಕೃಷ್ಣ ಅಡ್ವಾಣಿ ಈಗಲೂ ಇದ್ದಾರೆ.
ಸೋನಿಯಾಗಾಂಧಿ ಎಂಬ ವಿದೇಶಿ ಮಹಿಳೆಯದ್ದು ಇನ್ನೂ ಇತ್ತೀಚಿನ ಕತೆ. ಮೊದಲು ಮೈದುನ, ನಂತರ ಅತ್ತೆ, ಕೊನೆಗೆ ಗಂಡನನ್ನು ಕಳೆದುಕೊಂಡವರು ಅವರು. ಕೆಲವರ್ಷಗಳಲ್ಲಿಯೇ ನೆಹರೂ ಕುಟುಂಬಕ್ಕೆ ಆಧಾರವಾಗಿದ್ದ ಕಾಂಗ್ರೆಸ್ ಪಕ್ಷ ಕೂಡಾ ಅಧಿಕಾರ ಕಳೆದುಕೊಂಡಿತ್ತು. ಕೊನೆಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ ಸೋನಿಯಾಗಾಂಧಿಯವರ ನೇತೃತ್ವದ ಕಾಂಗ್ರೆಸ್ 1999ರಲ್ಲಿ ಗಳಿಸಿದ್ದು 114 ಸ್ಥಾನಗಳನ್ನು ಮಾತ್ರ. ಇದು ಸೀತಾರಾಂ ಕೇಸರಿ ಎಂಬ ವಯೋವೃದ್ಧನ ನೇತೃತ್ವದಲ್ಲಿ ಎದುರಿಸಿದ 1998ರ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದಕ್ಕಿಂತ 27 ಸ್ಥಾನ ಕಡಿಮೆ. ಅನಂತರದ ಐದು  ವರ್ಷಗಳ ಕಾಲ ಸೋನಿಯಾಗಾಂಧಿಯವರು ರಾಜಕೀಯ ಮತ್ತು ವೈಯಕ್ತಿಕ ದಾಳಿಯನ್ನು ಪಕ್ಷದ ಒಳಗೆ ಮತ್ತು ಹೊರಗೆ ಎದುರಿಸಬೇಕಾಯಿತು. ಇದಕ್ಕೆಲ್ಲ  ಅರ್ಧ ಉತ್ತರವನ್ನು 2004ರ ಚುನಾವಣಾ ಫಲಿತಾಂಶದಲ್ಲಿ ಇನ್ನರ್ಧ ಉತ್ತರವನ್ನು ಪ್ರಧಾನಿ ಪಟ್ಟ ನಿರಾಕರಣೆಯ ಮೂಲಕ ಕೊಟ್ಟರು.
ಹಳೆಯ ಕಾಲದ ವಿರೋಧಪಕ್ಷದ ನಾಯಕರಲ್ಲಿ ಈಗ ಉಳಿದಿರುವವರು ಎಲ್.ಕೆ.ಅಡ್ವಾಣಿ ಮಾತ್ರ. ಹೆಚ್ಚುಕಡಿಮೆ ರಾಜಕೀಯ ಸನ್ಯಾಸ ಸ್ವೀಕರಿಸಿದಂತಿರುವ ಅಡ್ವಾಣಿಯವರು ಮತ್ತೆ ಸಕ್ರಿಯವಾದ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಕಷ್ಟ.ಹೊಸಬರಲ್ಲಿ ಯಾರೂ ಅಡ್ವಾಣಿ, ಇಂದಿರಾಗಾಂಧಿ ಬಿಡಿ, ಕನಿಷ್ಠ ಸೋನಿಯಾಗಾಂಧಿಯವರ ವ್ಯಕ್ತಿತ್ವಕ್ಕೆ ಸಮನಾದ ರಾಜಕೀಯ ನಾಯಕರು ಕಾಣುತ್ತಿಲ್ಲ. ದೀರ್ಘ ಕಾಲ ವಿರೋಧಪಕ್ಷದ ನಾಯಕರಾಗಿ ಕೆಲಸಮಾಡಿರುವ ಎಚ್.ಡಿ.ದೇವೇಗೌಡರಂತಹ ನಾಯಕರು ರಾಜ್ಯದಲ್ಲಿಯೂ ಕಾಣಿಸುತ್ತಿಲ್ಲ. ಯಾಕೆ ಹೀಗಾಗಿ ಹೋಗಿದೆ?
ಇದಕ್ಕೆ ಮುಖ್ಯ ಕಾರಣ-ಅಧಿಕಾರ. ಈಗ ವಿರೋಧಪಕ್ಷದಲ್ಲಿದ್ದವರೆಲ್ಲರೂ ಒಂದಷ್ಟು ವರ್ಷ ಅಧಿಕಾರ ಅನುಭವಿಸಿದವರು, ಮೊದಲ 30 ವರ್ಷಗಳ ಕಾಲ ಅಧಿಕಾರದ ಸಮೀಪ ಹೋಗಲಿಕ್ಕೂ ಆಗದ ವಿರೋಧ ಪಕ್ಷಗಳ ನಾಯಕರಂತಹವರಲ್ಲ. ಅಧಿಕಾರದ ಮಾಯೆಯೇ ಹಾಗೆ, ಒಮ್ಮೆ ಅನುಭವಿಸಿದ ಮೇಲೆ ಹೋರಾಟದ ರಾಜಕೀಯದ ಮೇಲಿನ ಆಸಕ್ತಿ ಕುಂದುತ್ತಾ ಹೋಗುತ್ತದೆ. ಅಧಿಕಾರದ ಸವಿಯನ್ನು ಚಪ್ಪರಿಸಿದ್ದ ನಾಲಿಗೆಯಲ್ಲಿ ನೀರೂರುತ್ತಲೇ ಇರುತ್ತದೆ. ಇನ್ನೊಂದು ಕಾರಣ ನೈತಿಕವಾಗಿ ಇವರನ್ನು ದಿವಾಳಿ ಮಾಡಿರುವ ಭ್ರಷ್ಟಾಚಾರದ ಕಳಂಕ. ಇದು ಅಧಿಕಾರದ ಜತೆಗೆ ಬಂದ ಉಚಿತ ಕೊಡುಗೆ.
ಕೇಂದ್ರದ ಬಿಜೆಪಿ ನಾಯಕರು ಎ.ರಾಜಾನ ಹೆಸರೆತ್ತಿದ ಕೂಡಲೇ ಕಾಂಗ್ರೆಸ್ ನಾಯಕರು ಪ್ರಮೋದ್ ಮಹಾಜನ್, ಅರುಣ್ ಶೌರಿ ಹೆಸರಿಡಿದು ಕೂಗುತ್ತಾರೆ, ಅಶೋಕ್ ಚವಾಣ್ ಹೆಸರೆತ್ತಿದರೆ ಅವರಿಗೆದುರಾಗಿ ಬಿ.ಎಸ್.ಯಡಿಯೂರಪ್ಪನವರನ್ನು ತಂದು ನಿಲ್ಲಿಸುತ್ತಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಅಕ್ರಮಗಣಿಗಾರಿಕೆ, ಡಿನೋಟಿಫಿಕೇಶನ್ ಹಗರಣಗಳನ್ನೆತ್ತಿದರೆ ಬಿಜೆಪಿ ನಾಯಕರು ಧರ್ಮಸಿಂಗ್,ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಮೊದಲಾದವರ ಕಾಲದ ಕತೆಗಳನ್ನು ಕೆದಕುತ್ತಾರೆ. ‘ಹಮಾಮ್ ಮೇ ಸಬ್ ನಂಗಾ ಹೈ’ (ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ). ಎಲ್ಲರೂ ತಮ್ಮ ತಮ್ಮ ಕಪಾಟುಗಳಲ್ಲಿ ಅಸ್ಥಿಪಂಜರಗಳನ್ನು ಇಟ್ಟುಕೊಂಡವರು. ಅಧಿಕಾರದಲ್ಲಿದ್ದ ಪಕ್ಷವೇನಾದರೂ ಕಪಾಟಿನ ಬಾಗಿಲು ತೆಗೆದುಬಿಟ್ಟರೆ ಗತಿ ಏನು ಎಂಬ ಭಯ ಚುನಾವಣೆಯಲ್ಲಿ ಸೋತ ಮರುಗಳಿಗೆಯಿಂದಲೇ ಇವರನ್ನು ಕಾಡತೊಡಗುತ್ತದೆ. ಆ ಕ್ಷಣದಿಂದಲೇ ಹೊಂದಾಣಿಕೆಯ ರಾಜಕೀಯ ಪ್ರಾರಂಭವಾಗುತ್ತದೆ. ಇದರಿಂದಾಗಿ ಉಳಿದ ‘ನಾಲ್ಕು ಸ್ಥಂಭ’ಗಳ ಜತೆ ‘ಐದನೇ ಸ್ಥಂಭ’ ಕೂಡಾ ಕುಸಿದುಬೀಳತೊಡಗಿದೆ. ಪ್ರಜಾಪ್ರಭುತ್ವಕ್ಕೆ ಆಧಾರ ಎಲ್ಲಿದೆ?