Monday, August 6, 2012

ರಾಜಕೀಯದ ಬೋನಿಗೆ ಬಿದ್ದ `ಚಳವಳಿ ಹುಲಿ' August 06, 2012

ನಮ್ಮ ನಡುವಿನ ಭ್ರಷ್ಟರಾಜಕಾರಣಿಗಳಿಗೆ ಹೋಲಿಸಿದರೆ ಅಣ್ಣಾ ತಂಡದ ಸದಸ್ಯರು ಪ್ರಾಮಾಣಿಕರು ಮತ್ತು ಯೋಗ್ಯರು. ಅವರ ಮೇಲೆ ಕೆಲವು ಆರೋಪಗಳು ಇವೆ, ನಿಜ. ಇವೆಲ್ಲವೂ ಈ ದೇಶದ ಬಹುಸಂಖ್ಯಾತ ಪ್ರಜೆಗಳು ಒಂದಲ್ಲ ಒಂದು ಸಂದರ್ಭದಲ್ಲಿ ಬಲಿಯಾಗುವ ಸಾಮಾನ್ಯ ದೌರ್ಬಲ್ಯಗಳು. 

ಇವೆಲ್ಲದರ ಹೊರತಾಗಿಯೂ ಅಣ್ಣಾ ಹಜಾರೆ ರಾಜಕೀಯ ಪಕ್ಷ ಕಟ್ಟಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತಕ್ಕೆ ಬೇಕಾಗಿರುವ 272  ಪ್ರಾಮಾಣಿಕ ಸದಸ್ಯರನ್ನು ಗೆಲ್ಲಿಸಿ ಕೇಂದ್ರದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚಿಸಲು ಸಾಧ್ಯವಾದರೆ...ಅದಕ್ಕಿಂತ ದೊಡ್ಡ ಭಾಗ್ಯ ಭಾರತೀಯರಿಗೆ ಇನ್ನೇನು ಬೇಕು? ಆದರೆ ಇದು ಸಾಧ್ಯವೇ ಎನ್ನುವುದಷ್ಟೇ ಪ್ರಶ್ನೆ.

ಹುಲಿಯಾಗಿರಲಿ, ಇಲಿಯಾಗಿರಲಿ ಯಾವುದೂ ಕೂಡಾ ತನ್ನನ್ನು ಹಿಡಿಯಲಿಕ್ಕಾಗಿಯೇ ಬೋನು ಇಟ್ಟಿದ್ದಾರೆ ಎಂದು ಗೊತ್ತಿದ್ದೂ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಕ್ಷಿಪ್ರ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಮೂಲಕ ದೇಶದಲ್ಲಿ ಸಂಚಲನ ಉಂಟುಮಾಡಿದ್ದ ಅಣ್ಣಾ ಚಳವಳಿ ಎಂಬ `ಹುಲಿ`ಯನ್ನು ರಾಜಕೀಯದ ಬೋನಿಗೆ ಹಾಕಲು ಯುಪಿಎ ಸರ್ಕಾರ ಒಂದು ವರ್ಷದಿಂದ ಸತತವಾಗಿ ಪ್ರಯತ್ನ ಮಾಡುತ್ತಿತ್ತು. 

ಇದಕ್ಕಾಗಿ `ರಾಜಕೀಯಕ್ಕೆ ಇಳಿದು ನೋಡಿ`, `ಚುನಾವಣೆಯಲ್ಲಿ ಸ್ಪರ್ಧಿಸಿ ನೋಡಿ` ಎಂದು ಕೇಂದ್ರ ಸಚಿವರು ಅಣ್ಣಾತಂಡವನ್ನು ಕೆಣಕುತ್ತಲೇ ಇದ್ದರು. ಇದರಿಂದ ಪ್ರಚೋದನೆಗೊಳಗಾದವರಂತೆ ಅಣ್ಣಾತಂಡದ ಕೆಲವು ಸದಸ್ಯರು ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿ, ಹೆಚ್ಚುಕಡಿಮೆ ಬೋನಿನ ಹತ್ತಿರಹೋಗಿ ಒಳಗೆ ಬೀಳದೆ ತಪ್ಪಿಸಿಕೊಂಡಿದ್ದರು. 

ಈಗ `ಚಳವಳಿಯ ಹುಲಿ` ಬೋನಿಗೆ ಬಿದ್ದಿದೆ. ಇದರಿಂದ ಆಡಳಿತಾರೂಢ ಯುಪಿಎಗೆ ಮಾತ್ರವಲ್ಲ, ಬಹಿರಂಗವಾಗಿ ಅಣ್ಣಾ ಚಳವಳಿಯನ್ನು ಬೆಂಬಲಿಸುತ್ತಾ, ಆಂತರ್ಯದಲ್ಲಿ ಅದನ್ನು ದ್ವೇಷಿಸುತ್ತಾ ಇದ್ದ ವಿರೋಧಪಕ್ಷಗಳಿಗೂ ಖುಷಿಯಾಗಿದೆ. ಬೋನಿನಲ್ಲಿ ಬಿದ್ದಿರುವುದು ಗೊತ್ತಿಲ್ಲದಂತೆ `ಚಳವಳಿಯ ಹುಲಿ` ಮಾತ್ರ `ಭ್ರಷ್ಟ ರಾಜಕಾರಣಿಗಳ ಎದೆ ಸೀಳುತ್ತೇನೆ` ಎಂದು ಆರ್ಭಟಿಸುತ್ತಿದೆ. 

ಬೋನಿಗೆ ಬಿದ್ದಿರುವ ಹುಲಿಗೆ ಯಾರು ಹೆದರುತ್ತಾರೆ? ರಾಜಕೀಯವನ್ನು `ಫಟಿಂಗರ ಕೊನೆಯ ತಾಣ` ಎಂದು ಹೇಳುತ್ತಾ ಬಂದಿರುವ ಅಣ್ಣಾ ತಂಡ ಈಗ ಅದೇ ತಾಣವನ್ನು ಅರಸಿಕೊಂಡು ಬಂದ ಹಾಗಾಗಿದೆ. ಇನ್ನು ಮುಂದೆ ಅವರು `ಫಟಿಂಗರ` ಸಮಕ್ಕೆ ನಿಂತು ಸೆಣಸಾಡಬೇಕಾಗಿದೆ.

ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಕೊಂಡ ದಿನದಿಂದಲೇ ಅಣ್ಣಾ ತಂಡ ತನ್ನ ಮೊದಲ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಣ್ಣಾತಂಡ ದೇಶದ ಜನತೆಯ ಕಣ್ಣಮುಂದೆ ಮೂಡಿಸಿರುವ `ಆದರ್ಶ ಸ್ವರೂಪಿ ರಾಜಕೀಯ ಪಕ್ಷ`ವನ್ನು ನಿರ್ವಹಿಸಲು ನಿಸ್ವಾರ್ಥ, ಪ್ರಾಮಾಣಿಕ ಮತ್ತು ಸೇವಾನಿಷ್ಠ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಬೇಕಾಗುತ್ತಾರೆ. 

ಈ ಕೆಲಸಕ್ಕಾಗಿ ಅಣ್ಣಾ ಹಜಾರೆಯವರ ರೀತಿಯಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸದೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಎಷ್ಟು ಮಂದಿ ಮುಂದೆ ಬರಬಹುದು? ದೇಶಪ್ರೇಮ ಸಾಬೀತುಪಡಿಸಲು ವಾರಾಂತ್ಯದ ರಜೆಯ ಕಾಲದಲ್ಲಿ ಉಪವಾಸ ಸತ್ಯಾಗ್ರಹದ ಶಿಬಿರಕ್ಕೆ ಬಂದು ಜೈಕಾರ ಹಾಕಿದರೆ ಸಾಕು ಎಂದು ತಿಳಿದುಕೊಂಡವರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು `ದೇಶಸೇವೆ`ಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆಯೇ? ರಾಜಕೀಯ ಪಕ್ಷವೆಂದರೆ ಹನ್ನೊಂದು ಮಂದಿಯ ಕ್ರಿಕೆಟ್ ತಂಡ ಅಲ್ಲ, ಬೀದಿಯಲ್ಲಿದ್ದವರೆನ್ನೆಲ್ಲ ಸೇರಿಸಿಕೊಳ್ಳುವ ಗಣೇಶೋತ್ಸವ ಸಮಿತಿಯೂ ಅಲ್ಲ. 

ಅದರಲ್ಲಿ ಎಲ್ಲ ಜಾತಿ, ಧರ್ಮ, ವರ್ಗ ಮತ್ತು ಪ್ರದೇಶಗಳಿಗೆ ಪ್ರಾತಿನಿಧ್ಯ ಇರಬೇಕಾಗುತ್ತದೆ. ಪ್ರಾತಿನಿಧ್ಯ ಎಂದರೆ ಮೀಸಲಾತಿ ಅಲ್ಲ, ಅದು ಸಮಾನ ಅವಕಾಶ. ಇಂತಹ ಪ್ರಾತಿನಿಧ್ಯ ಅಣ್ಣಾತಂಡದಲ್ಲಿ ಇಲ್ಲ ಎನ್ನುವುದು ಕೂಡಾ ಅದರ ವಿರುದ್ಧದ ಒಂದು ಆರೋಪ.

ಅಣ್ಣಾತಂಡದ ಎರಡನೆಯ ಪರೀಕ್ಷೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಎದುರಾಗಲಿದೆ. ಸಂಸತ್‌ನೊಳಗೆ ಕಾಲಿಡುವ ಸದಸ್ಯರ ಅರ್ಹತೆ ಮತ್ತು ಪ್ರಾಮಾಣಿಕತೆ ಬಗ್ಗೆ ಅಣ್ಣಾ ತಂಡ ಕಳೆದ ಒಂದು ವರ್ಷದ ಅವಧಿಯಲ್ಲಿ  ಸಾರ್ವಜನಿಕ ವೇದಿಕೆ ಮತ್ತು ಟಿವಿ ಸ್ಟುಡಿಯೋಗಳಲ್ಲಿ ಗಂಟೆಗಟ್ಟಲೆ ಭಾಷಣ ಬಿಗಿದಿದೆ. 

ಆಡಿದ್ದನ್ನು ಮಾಡಿತೋರಿಸಬೇಕಾದರೆ ಅವರು ಈಗ `22 ಕ್ಯಾರೆಟ್` ಶುದ್ಧದ 543 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ. ಅಣ್ಣಾಹಜಾರೆ ಅವರಿಗೆ ಚಳವಳಿ ಕಾಲದಲ್ಲಿ ತನ್ನ ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಳ್ಳಲು ಸರಿಯಾಗಿ ನಾಲ್ಕು ಪ್ರಾಮಾಣಿಕ ಕಾರ್ಯಕರ್ತರು ಸಿಕ್ಕಿಲ್ಲ.
 
ಈಗ ಇದ್ದವರ ಮೇಲೆಯೂ ಆರೋಪಗಳಿರುವಾಗ ಪ್ರಾಮಾಣಿಕ ಅಭ್ಯರ್ಥಿಗಳನ್ನು ಎಲ್ಲಿಂದ ತರುತ್ತೀರಿ? ಅಂತಹವರನ್ನು ಸೃಷ್ಟಿ ಮಾಡಲು ಅಣ್ಣಾಹಜಾರೆ `ಬ್ರಹ್ಮ`ನೂ ಅಲ್ಲ, ಹೊರಗಿನಿಂದ ಆಮದು ಮಾಡಿಕೊಳ್ಳಲು ಅವರು ಸರಕೂ ಅಲ್ಲ. ಅಣ್ಣಾತಂಡ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಮಟ್ಟವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಿರುವ ಕಾರಣ, ನಾಳೆ  ಮಾಧ್ಯಮದವರು ಸೇರಿದಂತೆ ಸಾರ್ವಜನಿಕರು ದುರ್ಬೀನು ಹಿಡಿದುಕೊಂಡು ಅಣ್ಣಾ ಪಕ್ಷದವರ ಜಾತಕ ಜಾಲಾಡಿಸುತ್ತಾರೆ.

ಮೂರನೆಯ ಪರೀಕ್ಷೆಯನ್ನು ಚುನಾವಣೆಯ ಖರ್ಚಿಗೆ ದುಡ್ಡು ಹೊಂದಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಅಣ್ಣಾತಂಡ ಎದುರಿಸಬೇಕಾಗುತ್ತದೆ.  ಆಯೋಗದ ನಿಯಮದ ಪ್ರಕಾರ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿ 25 ಲಕ್ಷ ರೂಪಾಯಿ ಮತ್ತು ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿ 10 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಖರ್ಚು ಮಾಡುವ ಹಾಗಿಲ್ಲ. 

ಕಳೆದ 25 ವರ್ಷಗಳಲ್ಲಿ ಯಾವುದಾದರೂ ಅಭ್ಯರ್ಥಿ ಈ ಮಿತಿಯೊಳಗೆ ಹಣ ಖರ್ಚು ಮಾಡಿ ಗೆದ್ದ ಉದಾಹರಣೆಗಳು ಇವೆಯೇ? ಕ್ರೂರ ವಾಸ್ತವವನ್ನು ಒಪ್ಪಿಕೊಂಡು ಅಣ್ಣಾಪಕ್ಷದ ಅಭ್ಯರ್ಥಿಗಳು  ಆಯೋಗ ವಿಧಿಸಿರುವ ಮಿತಿಯನ್ನು ಮೀರಿ ಖರ್ಚು ಮಾಡಿದರೆ ಈಗ ಭ್ರಷ್ಟಾಚಾರದ ಕೆಸರಲ್ಲಿ ಮುಳುಗಿರುವ ರಾಜಕಾರಣಿಗಳಿಗೂ ಇವರಿಗೂ ಏನು ವ್ಯತ್ಯಾಸ ಉಳಿಯಲಿದೆ? 

ನಾಲ್ಕನೆಯ ಪರೀಕ್ಷೆ ಎದುರಾಗಲಿರುವುದು ರಾಜಕೀಯ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ. ಇಲ್ಲಿಯವರೆಗೆ ಅಣ್ಣಾತಂಡದ ಏಕೈಕ ಕಾರ್ಯಕ್ರಮ- ಜನಲೋಕಪಾಲರ ನೇಮಕ. ಇದರ ಜತೆಯಲ್ಲಿ ಇತ್ತೀಚೆಗೆ ಕೇಂದ್ರದ 14 ಸಚಿವರ ವಿರುದ್ಧ ತನಿಖೆ ನಡೆಯಬೇಕೆಂಬ ಇನ್ನೊಂದು ಬೇಡಿಕೆ ಸೇರಿಸಿಕೊಂಡಿದೆ. 

ಇವೆರಡನ್ನು ಬಿಟ್ಟರೆ ಚುನಾವಣಾ ಸುಧಾರಣೆ, ಭೂಸ್ವಾಧೀನ ಕಾಯಿದೆಯಲ್ಲಿ ಬದಲಾವಣೆ ಮೊದಲಾದ ವಿಷಯಗಳು ಆಗಾಗ ಭಾಷಣಗಳಲ್ಲಿ ಪ್ರಸ್ತಾಪವಾಗುತ್ತಿದ್ದವು ಅಷ್ಟೆ. ಜನಲೋಕಪಾಲರ ನೇಮಕದ ಒಂದು ಕಾರ್ಯಸೂಚಿಯನ್ನು ಇಟ್ಟುಕೊಂಡು ರಾಜಕೀಯ ಪಕ್ಷವನ್ನು ಕಟ್ಟಲಾಗುವುದಿಲ್ಲ.
 
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ, ಅಸ್ಸಾಂನಿಂದ ಮಹಾರಾಷ್ಟ್ರದ ವರೆಗೆ ನೂರಾರು ಸಮಸ್ಯೆಗಳಿವೆ. ಅವುಗಳೆಲ್ಲವೂ ಕಾನೂನಿನ ಮೂಲಕವೇ ಇತ್ಯರ್ಥಗೊಳ್ಳುವಂತಹದ್ದಲ್ಲ, ಅವುಗಳಲ್ಲಿ ಕೆಲವು ಬಿಕ್ಕಟ್ಟುಗಳ ಬಗ್ಗೆ  ಸೈದ್ಧಾಂತಿಕ ನಿಲುವು ಮುಖ್ಯವಾಗುತ್ತದೆ.

ಮೀಸಲಾತಿ, ಮಾವೋವಾದಿ ಚಟುವಟಿಕೆ, ಕಾಶ್ಮೆರದಲ್ಲಿನ ಭಯೋತ್ಪಾದನೆ, ಈಶಾನ್ಯ ರಾಜ್ಯದ ಪ್ರತ್ಯೇಕತಾವಾದಿಗಳು, ಅಲ್ಪಸಂಖ್ಯಾತರು, ದಲಿತರು, ರೈತರು, ಕಾರ್ಮಿಕರು, ಜಲ-ನೆಲ-ಭಾಷೆಯ ತಂಟೆ ತಕರಾರುಗಳು...ಇಂತಹ ನೂರಾರು ಸಮಸ್ಯೆಗಳ ಬಗ್ಗೆ ತನ್ನ ನಿಲುವನ್ನು ರಾಜಕೀಯ ಪಕ್ಷ ಸ್ಪಷ್ಟಪಡಿಸಬೇಕಾಗುತ್ತದೆ. 

ಕಳೆದ 3-4 ದಶಕಗಳ ದೇಶದ ಇತಿಹಾಸವನ್ನು ನೋಡಿದರೆ ಎರಡು ಪ್ರಮುಖ ವಿಷಯಗಳು ನಮ್ಮ ರಾಜಕೀಯವನ್ನು ಪ್ರಭಾವಿಸುತ್ತಾ ಮತ್ತು ಅದರ ದಿಕ್ಕು-ದೆಸೆ ಬದಲಾಯಿಸುತ್ತಾ ಬಂದುದನ್ನು ಕಾಣಬಹುದು. ಮೊದಲನೆಯದು ಭ್ರಷ್ಟಾಚಾರ, ಎರಡನೆಯದು ಅಷ್ಟೇ ಮಹತ್ವದ ವಿಷಯವಾದ ಕೋಮುವಾದ.
 
ಈ ಎರಡನೆ ವಿಷಯದ ಬಗ್ಗೆ ಪ್ರಾರಂಭದಿಂದಲೂ ಅಣ್ಣಾ ತಂಡದ್ದು ಎಡೆಬಿಡಂಗಿ ನಿಲುವು. ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಬಗ್ಗೆ ಪರ ಇಲ್ಲವೆ ವಿರುದ್ಧದ ಸ್ಪಷ್ಟ ನಿಲುವನ್ನು ಕೈಗೊಳ್ಳಲು ಈ ವರೆಗೂ ಸಾಧ್ಯವಾಗಲಿಲ್ಲ ಎನ್ನುವುದು ಇದಕ್ಕೆ ನಿದರ್ಶನ. ಇಷ್ಟು ಮಾತ್ರವಲ್ಲ, ಕಾಶ್ಮೆರದ ಉಗ್ರಗಾಮಿಗಳ ಬಗೆಗಿನ ಪ್ರಶಾಂತ್ ಭೂಷಣ್ ನಿಲುವನ್ನು ಅಣ್ಣಾಹಜಾರೆ ಅವರೇ ಒಪ್ಪಿಕೊಳ್ಳುವುದಿಲ್ಲ. 

ಯೋಗಗುರು ರಾಮದೇವ್ ಪ್ರತಿಪಾದಿಸುತ್ತಿರುವ ಆರ್ಥಿಕ ನೀತಿಯನ್ನು ಅರವಿಂದ್ ಕೇಜ್ರಿವಾಲ್ ಒಪ್ಪಲಾರರು, ಕಿರಣ್ ಬೇಡಿ ಹೇಳುತ್ತಿರುವ ಯಾವ ವಿಚಾರವನ್ನೂ ತಂಡದಲ್ಲಿ ಯಾರೂ ಒಪ್ಪುವುದಿಲ್ಲ. ಇರುವ ನಾಲ್ಕುಮಂದಿಯಲ್ಲಿಯೇ ಈ ರೀತಿಯ ಭಿನ್ನಾಭಿಪ್ರಾಯಗಳಿರುವಾಗ ಪಕ್ಷಕ್ಕೆ ಎಲ್ಲಿಂದ ಸೈದ್ಧಾಂತಿಕ ಸ್ಪಷ್ಟತೆ ಬರಲು ಸಾಧ್ಯ?
ಐದನೆಯ ಪರೀಕ್ಷೆ ಎದುರಾಗಲಿರುವುದು ಅಣ್ಣಾತಂಡದ ಕಾರ್ಯಶೈಲಿಯ ವಿಷಯದಲ್ಲಿ. 

ಈಗಿನ ನಮ್ಮ ರಾಜಕೀಯ ಪಕ್ಷಗಳನ್ನು ಬಾಧಿಸುತ್ತಾ ಬಂದಿರುವುದು ಕೇವಲ ಭ್ರಷ್ಟಾಚಾರ ಅಲ್ಲ. ವ್ಯಕ್ತಿಪೂಜೆ, ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಹೈಕಮಾಂಡ್ ಸಂಸ್ಕೃತಿ, ಸರ್ವಾಧಿಕಾರಿ ಧೋರಣೆ, ಗುಪ್ತಕಾರ್ಯಸೂಚಿ ಇತ್ಯಾದಿ ರೋಗಗಳೂ ರಾಜಕೀಯ ಪಕ್ಷಗಳ ಮೇಲಿನ ಜನರ ನಂಬಿಕೆ ಕಡಿಮೆಯಾಗಲು ಕಾರಣ. 

ಕಳೆದ ಒಂದುವರ್ಷದ ಅವಧಿಯ ಅಣ್ಣಾತಂಡದ ಕಾರ್ಯಶೈಲಿಯನ್ನು ನೋಡಿದರೆ ಈ ಎಲ್ಲ ರೋಗಗಳ ಸೋಂಕು ಅದಕ್ಕೂ ತಗಲಿದ ಹಾಗಿದೆ. `ಅಣ್ಣಾ ಎಂದರೆ ಇಂಡಿಯಾ`, `ಐ ಯಾಮ್ ಅಣ್ಣಾ`, `ಅಣ್ಣಾ ಸಂಸತ್‌ಗಿಂತ ದೊಡ್ಡವರು` ಇತ್ಯಾದಿ ಘೋಷಣೆ ಅಣ್ಣಾ ಬೆಂಬಲಿಗರ ಮನಸ್ಸಿನ ಆಳದಲ್ಲಿರುವ ವ್ಯಕ್ತಿಪೂಜೆಯ ದೌರ್ಬಲ್ಯವನ್ನು ತೋರಿಸುತ್ತದೆ. 

ಅಣ್ಣಾತಂಡದ ಬೆರಳೆಣಿಕೆಯ ಸದಸ್ಯರೇ ಕೂಡಿ ಚಳವಳಿಯ ರೂಪುರೇಖೆ ಬಗ್ಗೆ ತೀರ್ಮಾನ ಕೈಗೊಂಡು ಇತರರ ಮೇಲೆ ಹೇರುತ್ತಿರುವುದನ್ನು ವಿರೋಧಿಸಿ ಪ್ರಾರಂಭದಲ್ಲಿ ಜತೆಗಿದ್ದ ಹಲವು ಸದಸ್ಯರು ಬಿಟ್ಟುಹೋಗಿದ್ದರು. 

ಎಷ್ಟೋ ಬಾರಿ ದೆಹಲಿಯಲ್ಲಿರುವ ಅಣ್ಣಾತಂಡದ ನಾಲ್ಕೈದು ಸದಸ್ಯರು ಕೂಡಿಕೈಗೊಳ್ಳುವ ತೀರ್ಮಾನಕ್ಕೆ ಬೆಂಗಳೂರಿನಲ್ಲಿರುವ ನಿವೃತ್ತನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ವಿರೋಧ ವ್ಯಕ್ತಪಡಿಸಿದ್ದುಂಟು. ಹಲವು ಬಾರಿ ಅಣ್ಣಾಹಜಾರೆಯವರೂ ಅಸಮಾಧಾನ ವ್ಯಕ್ತಪಡಿಸಿದ್ದರು. 

ಅಣ್ಣಾಹಜಾರೆಯವರ ಸರ್ವಾಧಿಕಾರಿ ಧೋರಣೆಯ ಕಾರ್ಯಶೈಲಿ ಈಗ ಲೋಕಪ್ರಸಿದ್ಧ, ಅವರ ಕರ್ಮಭೂಮಿಯಾಗಿರುವ ರಾಳೆಗಣಸಿದ್ದಿಗೆ ಹೋದರೆ ಇದರ ಪ್ರತ್ಯಕ್ಷದರ್ಶನ ಮಾಡಿಕೊಂಡು ಬರಬಹುದು. `ಮರಕ್ಕೆ ಕಟ್ಟಿ ಹೊಡೆದು ಬುದ್ದಿ ಕಲಿಸುವ` ಅಣ್ಣಾ ಮಾರ್ಗ, ಮನಪರಿವರ್ತನೆಯ ಮೂಲಕ ಸುಧಾರಣೆಯನ್ನು ತರುವ ಗಾಂಧಿಮಾರ್ಗಕ್ಕಿಂತ ಭಿನ್ನವಾದುದು. 

ಸಾಮಾನ್ಯವಾಗಿ ರಾಜಕೀಯ ನಾಯಕನ ವೈಯಕ್ತಿಕ ಗುಣಾವಗುಣಗಳು ಪಕ್ಷದ ನೀತಿ-ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷ ಕಟ್ಟುವ ತೀರ್ಮಾನ ಪ್ರಕಟಿಸಿದ ತಕ್ಷಣ ಎದುರಾಗಿರುವ ದೊಡ್ಡ ಆರೋಪ ಗುಪ್ತಕಾರ್ಯಸೂಚಿಯದ್ದು. ಒಂದು ಸಾಮಾಜಿಕ ಚಳವಳಿಯಾಗಿ ಬೆಳೆಯುತ್ತಾ ಬಂದ ಅಣ್ಣಾ ಚಳವಳಿ ರಾಜಕೀಯ ಪಕ್ಷದ ರೂಪಧಾರಣೆ ಮಾಡಿರುವುದು ಕೇವಲ ಆಕಸ್ಮಿಕವೇ, ಇದಕ್ಕೆ ಬೇರೆ ಏನಾದರೂ ಒತ್ತಡಗಳಿತ್ತೇ? ಇಲ್ಲವೆ ಇವೆಲ್ಲವೂ ಪೂರ್ವನಿಯೋಜಿತ ಕಾರ್ಯತಂತ್ರವೇ? ಎನ್ನುವ ಪ್ರಶ್ನೆಗಳು ಎದ್ದಿವೆ. 

ಇಂತಹದ್ದೊಂದು ಗುಪ್ತಕಾರ್ಯಸೂಚಿಯನ್ನು ಅವರು ಮೊದಲೇ ಹೊಂದಿದ್ದರು ಎಂಬ ಆರೋಪಗಳು ಕೂಡಾ ಕೇಳಿಬರುತ್ತಿವೆ. ಇದು ಸುಳ್ಳೇ ಇರಬಹುದು, ಆದರೆ ಚುನಾವಣಾ ಕಣದಲ್ಲಿ ನಿಂತು ಬೇರೆ ಪಕ್ಷಗಳ ವಿರುದ್ಧ, ಉದಾಹರಣೆಗೆ ಬಿಜೆಪಿ ವಿರುದ್ಧ `ಗುಪ್ತಕಾರ್ಯಸೂಚಿ`ಯ ಆರೋಪ ಮಾಡಿದಾಗ ಪ್ರತಿಯಾಗಿ ಅವರೂ ಈ ಆರೋಪ ಮಾಡಬಹುದಲ್ಲವೇ?

ಕೊನೆಯದಾಗಿ ಮಾಧ್ಯಮಗಳು ಒಡ್ಡುವ ಪರೀಕ್ಷೆಯನ್ನೂ ಅಣ್ಣಾತಂಡ ಎದುರಿಸಬೇಕಾಗಿದೆ. ಮಾಧ್ಯಮಗಳೇ ಅಣ್ಣಾಚಳವಳಿಯನ್ನು ಈಗಿನ ಮಟ್ಟಕ್ಕೆ ಒಯ್ದು ನಿಲ್ಲಿಸಿದ್ದು ಎಂಬ ಆರೋಪ ಇದೆ. ಮಾಧ್ಯಮದ ಅತಿಅವಲಂಬನೆ ಹೇಗೆ ತಿರುಗುಬಾಣ ಆಗಬಹುದು ಎನ್ನುವುದಕ್ಕೂ ಈ ಚಳವಳಿ ಒಳ್ಳೆಯ ಉದಾಹರಣೆ. 


ಅಣ್ಣಾಹಜಾರೆ ಅವರ ಎರಡು ಉಪವಾಸಗಳು ಮತ್ತು ಅದಕ್ಕೆ ಪೂರ್ವಭಾವಿಯಾಗಿ ನಡೆದ ಚಟುವಟಿಕೆಗಳನ್ನು ಮಾಧ್ಯಮಗಳು ಮುಖ್ಯವಾಗಿ ಟಿವಿ ಚಾನೆಲ್‌ಗಳು ದಿನದ ಇಪ್ಪತ್ತನಾಲ್ಕು ಗಂಟೆ ಕಾಲ ಪ್ರಸಾರ ಮಾಡಿ ಜನಪ್ರಿಯಗೊಳಿಸಿದ್ದು ನಿಜ. ಆದರೆ ಆ `ಮಧುಚಂದ್ರ`ದ ದಿನಗಳು ಈಗ ಮುಗಿದುಹೋಗಿವೆ. 

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಂತರ ಮಾಧ್ಯಮ ರಂಗವನ್ನು ಕೂಡಾ ಅಣ್ಣಾತಂಡ ತನ್ನ ಶತ್ರುಗಳ ಪಟ್ಟಿಯಲ್ಲಿ ಸೇರಿಸಿಕೊಂಡು ಬಿಟ್ಟಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಷ್ಟೇ ಪೈಪೋಟಿಯಿಂದ ಮಾಧ್ಯಮಗಳು ನೂರು ಕಣ್ಣುಗಳನ್ನು ಬಿಟ್ಟುಕೊಂಡು ನಿಂತಿವೆ. ಇದನ್ನು ಎದುರಿಸಲು ಅಣ್ಣಾತಂಡ ಮೈಯೆಲ್ಲ ಕಣ್ಣಾಗಿ ಇರಬೇಕಾಗುತ್ತದೆ.

Monday, July 30, 2012

`ಸಂದೇಶ' ಮರೆತು `ಸಂದೇಶವಾಹಕ'ರ ಬೆನ್ನತ್ತಿರುವ ಪೊಲೀಸರು July 30, 2012

`ನಗರದಲ್ಲಿ ನಡೆಯುವ ಅಪರಾಧಗಳ ಮಾಹಿತಿ ನಮಗೆ ಗೊತ್ತಾಗದೆ ಪತ್ರಕರ್ತರಿಗೆ ಹೇಗೆ ಗೊತ್ತಾಗುತ್ತದೆ?` ಎಂದು ಯಾರಾದರೂ ಪೊಲೀಸರು ಕೇಳಿದರೆ ಅವರು ತಮಗೆ ಗೊತ್ತಿಲ್ಲದೆಯೇ ತಾವು ಅದಕ್ಷರೆಂದು ಒಪ್ಪಿಕೊಂಡ ಹಾಗೆ. ಈಗ ದಕ್ಷಿಣ ಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್‌ಸಿಂಗ್ ಈ ಪ್ರಶ್ನೆ ಕೇಳಿದ್ದಾರೆ. ಅಷ್ಟು ಮಾತ್ರವಲ್ಲ ಕಳೆದ ಶನಿವಾರ ಪಡೀಲ್‌ನ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಹುಡುಗಿಯರೂ ಸೇರಿದಂತೆ ಹನ್ನೆರಡು ಮಂದಿ ನಿರಪರಾಧಿಗಳ ಮೇಲೆ ಹಲ್ಲೆ ನಡೆಸಿದ ಪಾಶವೀ ಕೃತ್ಯವನ್ನು ಚಿತ್ರೀಕರಿಸಿಕೊಂಡ ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂದೇಶವನ್ನು ಪಕ್ಕಕ್ಕಿಟ್ಟು ಸಂದೇಶವಾಹಕರ ತಲೆಗೆ ಬಂದೂಕು ಇಡುವುದು ಪೊಲೀಸರ ಹಳೆಯ ಚಾಳಿ. ಅರಣ್ಯದಲ್ಲಿಯೇ ಹೋಗಿ ಟೆಂಟ್‌ಹಾಕಿದ್ದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಾವಿರಾರು ಪೊಲೀಸರ ಕಣ್ಣಿಗೆ ಬೀಳದ ಪಾತಕಿ ವೀರಪ್ಪನ್‌ನನ್ನು ತಮಿಳುನಾಡಿನ `ನಕ್ಕೀರನ್`ಪತ್ರಿಕೆಯ ಸಂಪಾದಕ ಸಲೀಸಾಗಿ ಅತ್ತೆಮನೆಯಂತೆ ಹೋಗಿ ಸಂದರ್ಶನ ಮಾಡಿಬರುತ್ತಿದ್ದರು. ಆಗಲೂ ಪೊಲೀಸರು ಈ ಪ್ರಶ್ನೆ ಕೇಳಿದ್ದರು. 

ಶೋಧಕಾರ್ಯಕ್ಕೆ ಅನುಕೂಲವಾಗುವ ಅತ್ಯಾಧುನಿಕ ಸಲಕರಣೆಗಳ ಜತೆ ಈ ಕೆಲಸಕ್ಕಾಗಿಯೇ ವಿಶೇಷ ತರಬೇತಿ ಪಡೆದ ಪೊಲೀಸರು ಪತ್ತೆಹಚ್ಚಲಾಗದ ನಕ್ಸಲೀಯ ನಾಯಕರನ್ನು ಆಂಧ್ರಪ್ರದೇಶ, ಒರಿಸ್ಸಾ, ಛತ್ತೀಸ್‌ಘಡ, ಪಶ್ಚಿಮ ಬಂಗಾಳಗಳಲ್ಲಿ ಈಗಲೂ ಪತ್ರಕರ್ತರು ಹೋಗಿ ಮಾತನಾಡಿಸಿಕೊಂಡು ಬರುತ್ತಿದ್ದಾರೆ. ಅಲ್ಲಿಯ ಪೊಲೀಸರು ಕೂಡಾ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ನಕ್ಸಲೀಯರನ್ನು ಸಂದರ್ಶಿಸಿದ ಪತ್ರಕರ್ತರನ್ನು ಮಾತ್ರವಲ್ಲ ನಕ್ಸಲೀಯರ ಪ್ರಭಾವ ಇರುವ ಪ್ರದೇಶಕ್ಕೆ ಭೇಟಿ ನೀಡಿ ಲೇಖನ ಬರೆದಿದ್ದ ಪ್ರಖ್ಯಾತ ಲೇಖಕಿ ಅರುಂಧತಿ ರಾಯ್ ವಿರುದ್ಧವೂ ಮೊಕದ್ದಮೆ ದಾಖಲಿಸುವ ಪ್ರಯತ್ನ ಮಾಡಿತ್ತು. ಇಂತಹ ಘಟನೆಗಳು ನೂರಾರು ಇವೆ.

ಪತ್ರಕರ್ತರೆಲ್ಲರೂ ಸಂಭಾವಿತರಿರಲಾರರು, ಟಿಆರ್‌ಪಿಗಾಗಿ ಕಿಡಿಗೇಡಿತನ ಮಾಡುತ್ತಿರುವ ಟಿವಿ ಚಾನೆಲ್‌ಗಳು ಅತಿರಂಜನೆ, ರೋಚಕತೆಯ ಬೆನ್ನುಹತ್ತಿ ಪತ್ರಿಕಾವೃತ್ತಿಯ ಮೂಲವ್ಯಾಖ್ಯೆಯನ್ನೇ ಬದಲಿಸಲು ಹೊರಟಿರುವುದೂ ನಿಜ. ಆದರೆ ಪೊಲೀಸರು ತಮ್ಮ ಅದಕ್ಷತೆಯನ್ನು ಮುಚ್ಚಿಕೊಳ್ಳಲು ಪತ್ರಕರ್ತರ `ಅಧಿಕಪ್ರಸಂಗ`ವನ್ನು ಗುರಾಣಿಯಾಗಿ ಬಳಸುತ್ತಿರುವುದು ಅಕ್ಷಮ್ಯ. ಮಂಗಳೂರು ನಗರದ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿರುವುದು ಹೆಚ್ಚು ಪೊಲೀಸರೋ, ಪತ್ರಕರ್ತರೋ? ಅಲ್ಲಿನ ನಗರ ವ್ಯಾಪ್ತಿಯಲ್ಲಿ ಕನಿಷ್ಠ 25 ಪೊಲೀಸ್‌ಠಾಣೆಗಳಿರಬಹುದು, ಒಂದೊಂದು ಠಾಣೆಯಲ್ಲಿ ಕನಿಷ್ಠ 50 ಸಿಬ್ಬಂದಿ ಇರಬಹುದು. ಅಂದರೆ ಅಂದಾಜು 1250 ಪೊಲೀಸರಿದ್ದಾರೆ. ನಗರದಲ್ಲಿರುವ ಹಿರಿಯ-ಕಿರಿಯ ವರದಿಗಾರರನ್ನು ಒಟ್ಟು ಸೇರಿಸಿದರೂ ಸಂಖ್ಯೆ 50 ದಾಟಲಾರದು. ಈ 50 ಪತ್ರಕರ್ತರಿಗೆ ಅಪರಾಧಿ ಕೃತ್ಯಗಳು ತಕ್ಷಣ ಗೊತ್ತಾಗುವುದಿದ್ದರೆ, ಮೊಬೈಲ್, ವಾಕಿಟಾಕಿ, ಕಾರು-ಜೀಪು ಮತ್ತು ಶಸ್ತ್ರಾಸ್ತ್ರಗಳ ಜತೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿಯೇ ಇರುವ ಗುಪ್ತಚರ ವಿಭಾಗವನ್ನೂ ಹೊಂದಿರುವ 1250 ಸಿಬ್ಬಂದಿ ಸಾಮರ್ಥ್ಯದ ಪೊಲೀಸರಿಗೆ ಯಾಕೆ ಗೊತ್ತಾಗುತ್ತಿಲ್ಲ? 

ನಿರ್ದಿಷ್ಟವಾಗಿ ಶನಿವಾರ ಮಂಗಳೂರಿನಲ್ಲಿ ನಡೆದ ಘಟನೆಯ ಉದಾಹರಣೆಯನ್ನೇ ನೋಡುವುದಾದರೆ, ಘಟನೆ ನಡೆದ ಸ್ಥಳಕ್ಕೆ ಹೋಗಿದ್ದ ಟಿವಿ ಚಾನೆಲ್‌ನ ವರದಿಗಾರ ಮೊದಲು ಮಾಡಿದ್ದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಫೋನ್. ಅದರ ನಂತರ ಇನ್ನೊಂದು ಚಾನೆಲ್‌ನ ವರದಿಗಾರ ಕೂಡಾ ಅದೇ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ನ ಮೊಬೈಲ್‌ಗೆ ಪೋನ್ ಮಾಡಿದ್ದರು. ಆ ಅಧಿಕಾರಿ ಎತ್ತಲಿಲ್ಲವಂತೆ. (ಎಸ್‌ಪಿಯವರು ಮೊಬೈಲ್‌ನ ಕಾಲ್ ವಿವರ ತರಿಸಿಕೊಂಡು ತನಿಖೆ ನಡೆಸಲಿ) ಘಟನೆ ನಡೆದ ಸ್ಥಳಕ್ಕೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹೆಚ್ಚೆಂದರೆ 2-3ಕಿ.ಮೀ.ದೂರ. ಇಂತಹ ಘಟನೆಗಳು ನಡೆದಾಗ ಅಕ್ಕಪಕ್ಕದ ಮನೆಯವರಲ್ಲಿ ಯಾರಾದರೂ ಫೋನ್ ಮಾಡಿರುತ್ತಾರೆ. ಹೀಗಿದ್ದರೂ ಪೊಲೀಸರು ಸ್ಥಳಕ್ಕೆ ಹೋಗಲು ಅಷ್ಟೊಂದು ವಿಳಂಬ ಮಾಡಿದ್ದು ಯಾಕೆ? ಇಂತಹ ಘಟನೆಗಳು ನಡೆದಾಗ ದುಷ್ಕರ್ಮಿಗಳ ಸಂಖ್ಯೆ ಹೆಚ್ಚಿರುತ್ತದೆ ಎಂದು ಗೊತ್ತಿದ್ದರೂ ಮೊದಲು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಯಾಕೆ ಕಳುಹಿಸಿಲ್ಲ? 

ದುಷ್ಕರ್ಮಿಗಳು ಹುಡುಗಿಯ ಎದೆಯ ಮೇಲೆ ಕೈಹಾಕುತ್ತಿದ್ದಾಗ ಅಲ್ಲಿಯೇ ಎದುರಿಗಿದ್ದ ಪೊಲೀಸರು ಕಣ್ಣುಕಣ್ಣುಬಿಟ್ಟು ನಿಂತಿದ್ದರಲ್ಲಾ, ಇದಕ್ಕೇನು ಅನ್ನುತ್ತೀರಿ ಪೊಲೀಸ್ ವರಿಷ್ಠಾಧಿಕಾರಿಯವರೇ? ಈ ದೃಶ್ಯಗಳನ್ನು ಟಿವಿಗಳಲ್ಲಿ ನೋಡಿದ ಯಾರಿಗೂ ಬರಿಗೈಯಲ್ಲಿಯಾದರೂ ಹೋಗಿ ಆ ದುಷ್ಕರ್ಮಿಗಳ ಮುಸುಡಿಗೆ ಗುದ್ದುವ ಎಂದಾಗುತ್ತದೆ, ಪೊಲೀಸರು ಕೈಯಲ್ಲಿದ್ದ ಲಾಠಿಯನ್ನೂ ಎತ್ತದೆ ನಿಂತಲ್ಲೇ ಕಲ್ಲಾಗಿದ್ದರಲ್ಲಾ?  ದಾಳಿಯಲ್ಲಿ ಪಾಲ್ಗೊಂಡವರೆಲ್ಲರ ಚಿತ್ರಗಳನ್ನು ಟಿವಿ ಚಾನೆಲ್‌ಗಳು ಪ್ರಸಾರಮಾಡಿವೆ. ಆದರೆ ಇಲ್ಲಿಯ ವರೆಗೆ ಬಂಧಿಸಿರುವುದು ಕೇವಲ ಎಂಟು ಮಂದಿಯನ್ನು. ಉಳಿದವರನ್ನು ಬಂಧಿಸಲು ಯಾಕೆ ಸಾಧ್ಯವಾಗಿಲ್ಲ?

ಪೊಲೀಸರು ಪತ್ರಕರ್ತರ ಮೇಲೆ ಹೊರಿಸುತ್ತಿರುವ ಆರೋಪ ಆತ್ಮರಕ್ಷಣೆಯ ಹತಾಶ ಪ್ರಯತ್ನ ಅಷ್ಟೆ. ವಾಸ್ತವ ಸಂಗತಿ ಏನೆಂದರೆ ದಕ್ಷಿಣಕನ್ನಡದಲ್ಲಿ ಪೊಲೀಸ್ ಇಲಾಖೆಯೇ ಇಲ್ಲ. ಯಾಕೆಂದರೆ ಅಲ್ಲಿ ಆಡಳಿತಾರೂಢ ಪಕ್ಷ ಮತ್ತು ಸಂಘ ಪರಿವಾರದ ನಾಯಕರ ಮಧ್ಯಪ್ರವೇಶದಿಂದಾಗಿ ದಕ್ಷತೆ, ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯಿಂದ ಕೆಲಸ ಮಾಡುವ ಪೊಲೀಸರಿಗೆ ಜಾಗವೇ ಇಲ್ಲದಂತಾಗಿದೆ. ಈಗ ಸಿಬಿಐಗೆ ವರ್ಗಾವಣೆಯಾಗಿರುವ ಸುಬ್ರಹ್ಮಣ್ಯೇಶ್ವರ ರಾವ್ ಎಂಬುವವರು ಸುಮಾರು ಎರಡೂವರೆ ವರ್ಷಗಳ ಕಾಲ ದಕ್ಷಿಣಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರ ಕಾಲದಲ್ಲಿ ಹಿಂದೂ ಸಂಸ್ಕೃತಿಯ `ಮಾನ ಉಳಿಸುವ` ಹಾವಳಿ ಕಡಿಮೆ ಇತ್ತು. ಆದರೆ ಅವರಿಗೆ ಬಹಳ ದಿನ ಅಲ್ಲಿ ಉಳಿಯಲು ಆಗಲಿಲ್ಲ. ಸಂಘ ಪರಿವಾರದ ಸದಸ್ಯರ ವಿರುದ್ಧ ಕ್ರಮ ಕೈಗೊಂಡ ಸುಳ್ಯ ಪೊಲೀಸ್ ಠಾಣೆಯ ಅಧಿಕಾರಿಯ ಬೆಂಬಲಕ್ಕೆ ನಿಂತ ಕಾರಣಕ್ಕಾಗಿ ಆಡಳಿತಾರೂಢ ಪಕ್ಷಕ್ಕೆ ಸೇರಿದ ಸ್ಥಳೀಯ ರಾಜಕಾರಣಿಗಳ ಕಣ್ಣುಕೆಂಪಾಯಿತು. ಕೊನೆಗೆ ಅವರ ವರ್ಗಾವಣೆಯಾಯಿತು. ಈಗ ಹಿಂದೂ ಹುಡುಗಿಯ ಜತೆ ಮಾತನಾಡುತ್ತಿರುವ ಮುಸ್ಲಿಮ್ ಹುಡುಗರನ್ನು ಬೇಟೆಯಾಡುವ ಕಾರ್ಯಾಚರಣೆ ಮತ್ತೆ ಪ್ರಾರಂಭವಾಗಿದೆ. `ಈ ರೀತಿ ಪಾರ್ಟಿಗಳು ನಡೆಯುತ್ತಿರುವ ಸ್ಥಳಕ್ಕೆ ನುಗ್ಗಿ ದಾಂಧಲೆಗಳು ವಾರಕ್ಕೆ ಒಂದೆರಡಾದರೂ ಅಲ್ಲಿ ನಡೆಯುತ್ತಿವೆ. ಆದರೆ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳದಿರುವ ಕಾರಣ ಅವುಗಳನ್ನೂ ವರದಿ ಮಾಡಲೂ ಆಗುತ್ತಿಲ್ಲ` ಎನ್ನುತ್ತಾರೆ ಸ್ಥಳೀಯ ಪತ್ರಕರ್ತರು.

ಸಾರ್ವಜನಿಕರು ತಮಗೆ ತಿಳಿದಿರುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸದೆ ಪತ್ರಕರ್ತರಿಗೆ ಪೋನ್ ಮಾಡಿ ಯಾಕೆ ತಿಳಿಸುತ್ತಾರೆ ಎನ್ನುವುದನ್ನು ಕಂಡು ಹಿಡಿಯಲು ವಿಶೇಷ ತನಿಖೆಯ ಅಗತ್ಯ ಇಲ್ಲ. ಯಾಕೆಂದರೆ ದಕ್ಷಿಣ ಕನ್ನಡದ ಸಾಮಾನ್ಯ ಜನ ಪೊಲೀಸರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಇದೇ ಮಂಗಳೂರಿನ ಪಬ್ ಮೇಲೆ ದಾಳಿ ನಡೆಸಿದ ಬಜರಂಗದಳದ ಸದಸ್ಯರು ಅಲ್ಲಿದ್ದ ಹುಡುಗಿಯರ ಕೂದಲು ಹಿಡಿದು ಎಳೆದಾಡಿದರು, ಹುಡುಗರ ಮೇಲೆ ಹಲ್ಲೆ ನಡೆಸಿದರು. ಆ ದುಷ್ಕೃತ್ಯದಲ್ಲಿ ತೊಡಗಿದ್ದವರಿಗೇನಾದರೂ ಶಿಕ್ಷೆಯಾಯಿತೇ? ಆ ಆರೋಪಿಗಳಲ್ಲಿ ಎಷ್ಟು ಮಂದಿ ಈಗ ಜೈಲಲ್ಲಿದ್ದಾರೆ? ಯಾವುದೋ ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದ ಹುಡುಗ-ಹುಡುಗಿಯನ್ನು ಪೊಲೀಸ್‌ಠಾಣೆಗೆ ಎಳೆದೊಯ್ದಾಗ, ಕಾನೂನು ಕೈಗೆತ್ತಿಕೊಂಡ ಪುಂಡರ ವಿರುದ್ಧ ದೂರು ದಾಖಲು ಮಾಡದೆ, ಆ ಹುಡುಗ-ಹುಡುಗಿಯ ಮೇಲೆ ಸುಳ್ಳು ಆರೋಪ ಹೊರಿಸಿದರೆ ಸಾರ್ವಜನಿಕರಿಗಾದರೂ ಪೊಲೀಸರ ಮೇಲೆ ಎಲ್ಲಿಂದ ನಂಬಿಕೆ ಬರಬೇಕು? 
ಮಂಗಳೂರಿನಲ್ಲಿ ಹಿಂದೂ ಮತ್ತು ಮುಸ್ಲಿಮ್ ಯುವಕರಲ್ಲಿ ತಮ್ಮದೇ ಆಗಿರುವ  `ಗುಪ್ತಚರ ವ್ಯವಸ್ಥೆ` ಇದೆ. ಹಿಂದೂ ಹುಡುಗಿಯ ಜತೆಗಿರುವ ಮುಸ್ಲಿಮ್ ಹುಡುಗರನ್ನು ಹುಡುಕಿಕೊಂಡು ಹಿಂದೂ ಯುವಕರು ಅಡ್ಡಾಡುತ್ತಿದ್ದರೆ, ಅವರನ್ನು ಹಿಂಬಾಲಿಸಿಕೊಂಡೇ  ಇರುವ ಮುಸ್ಲಿಮ್ ಯುವಕರ ಗುಂಪು ಕೂಡಾ ಇದೆ. ಇದೇ ರೀತಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಹಿಂಬಾಲಿಸುತ್ತಿದ್ದ ಮುಸ್ಲಿಮ್ ಯುವಕರಿಗೆ, ಅವರು ನಡೆಸಲು ಯೋಜಿಸಿರುವ `ಆಪರೇಷನ್ ಹೋಮ್-ಸ್ಟೇ`ಯ ಸುಳಿವು ಸಿಕ್ಕಿದೆ. ತಕ್ಷಣ ಅವರು ತಮಗೆ ಪರಿಚಯ ಇದ್ದ ಕೆಲವು ಚಾನೆಲ್ ವರದಿಗಾರರಿಗೆ ಸುದ್ದಿ ರವಾನಿಸಿದ್ದಾರೆ. ಪೊಲೀಸರಿಗೆ ತಿಳಿಸುವುದರಿಂದ ಏನೂ ಆಗಲಾರದು ಎಂದು ತೀರ್ಮಾನಕ್ಕೆ ಬರಲು ಅವರ ಅನುಭವ ಕಾರಣ ಇರಬಹುದು. ಇದು ದಕ್ಷಿಣ ಕನ್ನಡದ ಪೊಲೀಸ್ ವ್ಯವಸ್ಥೆ ತಲುಪಿರುವ ಸ್ಥಿತಿ. ಅಪರಾಧ ಪತ್ತೆಯಲ್ಲಿ ನೆರವಾಗುವುದು ಲಾಠಿ, ಬಂದೂಕು, ಗುಂಡುಗಳಲ್ಲ. ಅದು ಸಾರ್ವಜನಿಕವಾಗಿ ಪೊಲೀಸರು ಗಳಿಸುವ ವಿಶ್ವಾಸ. ಅದನ್ನು ಕಳೆದುಕೊಂಡರೆ ಹೀಗಾಗುತ್ತದೆ. 

ಪತ್ರಕರ್ತರು ಮತ್ತು ಪೊಲೀಸರು ಹಲವಾರು ವಿಷಯಗಳಲ್ಲಿ ಸಮಾನ ದುಃಖಿಗಳು. ಅದೇ ರೀತಿ ಕರ್ತವ್ಯನಿರ್ವಹಣೆಯ ಹಾದಿಯಲ್ಲಿ ಸಹಪ್ರಯಾಣಿಕರು. ಎಷ್ಟೋ ಅಪರಾಧಗಳ ಪತ್ತೆಕಾರ್ಯದಲ್ಲಿ ಪತ್ರಕರ್ತರು ಪೊಲೀಸರಿಗೆ ನೆರವಾಗಿದ್ದುಂಟು, ಅದೇ ರೀತಿ ಪತ್ರಕರ್ತರು ಯಾವುದಾದರೂ ಅಪಾಯದ ಸುಳಿಗೆ ಸಿಲುಕಬಹುದೆಂಬ ಸುಳಿವು ಸಿಕ್ಕಾಗ ಪೊಲೀಸರು ಎಚ್ಚರಿಸಿ ಕಾಪಾಡಿದ್ದುಂಟು. ಅಂತಹ ಸಂಬಂಧ ಇದ್ದ ಕಾಲದಲ್ಲಿ ಪತ್ರಕರ್ತರಿಗೆ ಬೇಕಾಗಿದ್ದ ಅಪರಾಧಗಳ ಸುದ್ದಿಯ ಮೂಲ ಪೊಲೀಸರು ಮಾತ್ರ ಆಗಿದ್ದರು. ಎಲ್ಲ ಸಂಬಂಧಗಳಂತೆ ಪೊಲೀಸರು ಮತ್ತು ಪತ್ರಕರ್ತರ ಸಂಬಂಧ ಕೂಡಾ ಬದಲಾಗಿದೆ. ಊರಲ್ಲಿ ನಡೆಯುವ ಅಪರಾಧಗಳ ಬಗ್ಗೆ ಕ್ರೈಮ್ ಬೀಟ್‌ನ ವರದಿಗಾರರು ಸಂಜೆ ಹೊತ್ತು ಕಂಟ್ರೋಲ್ ರೂಮ್‌ಗೆ ಫೋನ್ ಮಾಡಿ ಸುದ್ದಿ ಸಂಗ್ರಹಿಸುವ ಕಾಲ ಎಂದೋ ಸರಿದುಹೋಗಿದೆ. ಈಗ ಪೊಲೀಸರೇ ಟಿ.ವಿಯನ್ನು ನೋಡಿಕೊಂಡು ಅಪರಾಧಗಳ ಸುದ್ದಿ ಸಂಗ್ರಹಿಸುತ್ತಾರೆ. 

ಪೊಲೀಸ್ ವ್ಯವಸ್ಥೆಗೆ ಹಿಡಿದಿರುವ `ನಿಷ್ಕ್ರಿಯತೆಯ ರೋಗ`ದ ಮೂಲ ಭ್ರಷ್ಟ ಮತ್ತು ಸ್ವಾರ್ಥ ರಾಜಕಾರಣದಲ್ಲಿದೆ.  ರಾಜಕಾರಣಿಗಳ ಮಧ್ಯಪ್ರವೇಶದಿಂದಾಗಿ ಪೊಲೀಸರು ಕಾನೂನಿಗೆ ನಿಷ್ಠರಾಗಿ ಕರ್ತವ್ಯ ನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಮುಖ್ಯ ಕಾರಣ  ದೇಶದಲ್ಲಿ ಈಗ ಜಾರಿಯಲ್ಲಿರುವ ಬ್ರಿಟಿಷರು 1861ರಲ್ಲಿ ರಚಿಸಿದ್ದ ಪೊಲೀಸ್ ಕಾಯ್ದೆ. ಆ ಕಾಲದಲ್ಲಿ `ಸಿಪಾಯಿ ದಂಗೆ`ಯಿಂದ ಭೀತಿಗೀಡಾಗಿದ್ದ ಬ್ರಿಟಿಷರು ತಮಗೆ `ರಾಜಕೀಯವಾಗಿ ಉಪಯೋಗವಾಗಬಲ್ಲ` ರೀತಿಯಲ್ಲಿ ಪೊಲೀಸ್ ವ್ಯವಸ್ಥೆ ಕಟ್ಟಲು ರೂಪಿಸಿದ ಕಾಯ್ದೆ ಈಗಿನ ರಾಜಕಾರಣಿಗಳಿಗೆ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಲು ಹೇಳಿಮಾಡಿಸಿದಂತಿದೆ. ಇದರ ಸುಧಾರಣೆಗಾಗಿ ಧರ್ಮವೀರ, ಜ್ಯುಲಿಯೊ ರೆಬಿರೋ ಹಾಗೂ ಪದ್ಮನಾಭಯ್ಯ ಅವರ ನೇತೃತ್ವದ ಆಯೋಗಗಳು ಪ್ರತ್ಯೇಕವಾಗಿ ಮೂರು ವರದಿಗಳನ್ನು ನೀಡಿವೆ. ಎನ್‌ಡಿಎ ಸರ್ಕಾರ ಹಿರಿಯ ವಕೀಲ ಸೋಲಿ ಸೊರಾಬ್ಜಿ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿತ್ತು. ಕ್ರಿಮಿನಲ್ ನ್ಯಾಯವ್ಯವಸ್ಥೆಯ ಸುಧಾರಣೆಗಾಗಿ ನ್ಯಾಯಮೂರ್ತಿ ವಿ.ಎಸ್.ಮಳೀಮಠ ಅವರೂ ಒಂದು ವರದಿ ನೀಡಿದ್ದರು. ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸುವುದು ಈ ಎಲ್ಲ ಸಮಿತಿ-ಆಯೋಗಗಳ ವರದಿಗಳ ಮೂಲ ಉದ್ದೇಶವಾಗಿತ್ತು. ಇದೇ ಕಾರಣಕ್ಕೆ ಯಾವ ರಾಜ್ಯ ಸರ್ಕಾರ ಕೂಡಾ ಇದನ್ನು ಜಾರಿಗೆ ತರಲು ಆಸಕ್ತಿ ತೋರುತ್ತಿಲ್ಲ.

ಈ ವರದಿಗಳನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್ ಪೊಲೀಸ್ ಸುಧಾರಣೆಗಾಗಿ ಕೆಲವು ಸಲಹೆಗಳನ್ನು ನೀಡಿ 2006ರ ಅಂತ್ಯದೊಳಗೆ ಅವುಗಳನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು. ಇದನ್ನು ನೇರವಾಗಿ ವಿರೋಧಿಸಲಾಗದ ರಾಜಕೀಯ ಪಕ್ಷಗಳು `ಇದು ಒಕ್ಕೂಟ ವ್ಯವಸ್ಥೆಗೆ ಕೊಡಲಿಯೇಟು`, `ನ್ಯಾಯಾಂಗದ ಅತಿಕ್ರಮಣಕಾರಿ ನಿಲುವು` ಇತ್ಯಾದಿ ಜನಪ್ರಿಯ ಆರೋಪಗಳ ಮೂಲಕ ವಿರೋಧಿಸುತ್ತಾ ಕಾಲ ತಳ್ಳುತ್ತಿವೆ. ಪೊಲೀಸರಿಗೆ ತಮ್ಮ ಅಸಹಾಯಕತೆಯ ಕಾರಣಗಳು ಗೊತ್ತಿದ್ದರೂ ಅದನ್ನು ಹೇಳಲಾಗದೆ ತಮ್ಮ ನಿಷ್ಕ್ರಿಯತೆಯನ್ನು ಮುಚ್ಚಿಕೊಳ್ಳಲು ಹೊಸ ಹೊಸ ಬಲಿಪಶುಗಳನ್ನು ಹುಡುಕುತ್ತಿರುತ್ತಾರೆ. ಮಂಗಳೂರಿನ ಪೊಲೀಸರ ಕೈಗೆ ಪತ್ರಕರ್ತರು ಸಿಕ್ಕಿದ್ದಾರೆ, ಆದರೆ ಇದು ಕೈಸುಡುವ ಕೆಂಡ ಎಂದು ಅವರಿಗೂ ಗೊತ್ತು.

Thursday, July 26, 2012

ಹಳೆಯ ಕನಸಿನ ಚುಂಗು ಹಿಡಿದು ಹೊರಟಿರುವ ಪವಾರ್ July 23, 2012

ಬಹುಕಾಲದಿಂದ ದೇಶದ ರಾಜಕೀಯ ಅಖಾಡದಲ್ಲಿರುವ ಶರದ್ ಪವಾರ್, ಮುಲಾಯಂಸಿಂಗ್ ಯಾದವ್, ಎಚ್.ಡಿ.ದೇವೇಗೌಡರಂತಹ  ಹಳೆಯ ಜಟ್ಟಿಗಳು ಸುಮ್ಮನೆ ಕೆಮ್ಮುವುದಿಲ್ಲ, ಆಕಳಿಸುವುದೂ ಇಲ್ಲ. ಮೇಲ್ನೋಟಕ್ಕೆ ಸಹಜವಾಗಿ ಕಾಣುವ ಕೆಮ್ಮು-ಆಕಳಿಕೆಗಳ ಆಳದಲ್ಲಿ ರಾಜಕೀಯ ಹವಾಮಾನದ ಮುನ್ಸೂಚನೆಗಳಿರುತ್ತವೆ.

ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದ ಕಾರಣದಿಂದಾಗಿ ಮನೆಯೊಳಗೆ ಉಳಿದುಕೊಂಡಿದ್ದ ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಇದ್ದಕ್ಕಿದ್ದಂತೆ ಲವಲವಿಕೆಯಿಂದ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿರುವುದಕ್ಕೂ, ಬಿಜೆಪಿಯ ಅತೃಪ್ತ ಶಾಸಕರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನೆ ಮುಂದೆ ಕ್ಯೂ ನಿಲ್ಲುವುದಕ್ಕೂ ಪರಸ್ಪರ ಸಂಬಂಧ ಮೇಲ್ನೋಟಕ್ಕೆ ಕಾಣಿಸದೆ ಇರಬಹುದು.

ಆದರೆ ಗೌಡರ ರಾಜಕೀಯ ನಡೆಗಳನ್ನು ನೋಡುತ್ತಾ ಬಂದವರಿಗೆ ಅವರ ಆರೋಗ್ಯ ಸುಧಾರಣೆ ಮತ್ತು ರಾಜಕೀಯ ಬೆಳವಣಿಗೆಗಳಿಗೂ ಸಂಬಂಧ ಕಲ್ಪಿಸುವುದು ಕಷ್ಟವಲ್ಲ. ಅದೇ ರೀತಿ ಕೇಂದ್ರ ಸಚಿವ ಶರದ್ ಪವಾರ್.

ಸಂಪುಟದಲ್ಲಿ ಎರಡನೇ ಸ್ಥಾನ ನೀಡದೆ ಇರುವುದರಿಂದ ಅತೃಪ್ತರಾಗಿ ಸರ್ಕಾರದಿಂದಲೇ ಹೊರಬರುವ ಘೋಷಣೆಯನ್ನು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮಾಡಿದೆ.

ಒಂದು ಕಾಲದಲ್ಲಿ ದೇಶದ ಪ್ರಧಾನಿಯಾಗಬೇಕೆಂದು ಹಂಬಲಿಸಿದ್ದ, ಅದಕ್ಕೆ ಬೇಕಾಗಿರುವ ಎಲ್ಲ ತಂತ್ರ-ಕುತಂತ್ರಗಳನ್ನು ಮಾಡಿ ವಿಫಲಗೊಂಡ ಪವಾರ್ ಈಗ ಸಂಪುಟದಲ್ಲಿ ಯಕಶ್ಚಿತ್ ಎರಡನೆ ಸ್ಥಾನಕ್ಕಾಗಿ ಕಾಂಗ್ರೆಸ್ ಜತೆ ಸಂಬಂಧ ಕಡಿದುಕೊಳ್ಳುವ ಮಟ್ಟಕ್ಕೆ ಹೋಗುವ  ಅವರ ನಿರ್ಧಾರವನ್ನು ಮುಖಬೆಲೆಯಲ್ಲಿಯೇ ಒಪ್ಪಿಕೊಳ್ಳುವುದು ಕಷ್ಟ.

`ಮನಮೋಹನ್‌ಸಿಂಗ್ ಅವರನ್ನು ಬದಲಾವಣೆ ಮಾಡುವುದಿದ್ದರೆ ಆ ಸ್ಥಾನದಲ್ಲಿಯೇ ನನ್ನನ್ನೇ ಕೂರಿಸಿ` ಎನ್ನುವ ಹಾಗಿದೆ ಪವಾರ್ ಬೇಡಿಕೆ. ಮೈತ್ರಿಕೂಟದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಸದಸ್ಯ ಬಲ ಹೊಂದಿರುವ ಪಕ್ಷ ನೇತೃತ್ವ ವಹಿಸುವ ಸಾಮಾನ್ಯ ಸಂಪ್ರದಾಯ ಪವಾರ್ ಅವರಿಗೆ ತಿಳಿಯದೆ ಇರಲು ಸಾಧ್ಯವೇ ಇಲ್ಲ.

ಸಂಪುಟದಲ್ಲಿ ಎರಡನೆ ಸ್ಥಾನವಾಗಲಿ, ಪ್ರಧಾನಿಯವರ ಗೈರುಹಾಜರಿಯಲ್ಲಿ ಉಸ್ತುವಾರಿ ನೋಡಿಕೊಳ್ಳುವವರ ಸ್ಥಾನವಾಗಲಿ ಅಧಿಕೃತ ಸ್ಥಾನಮಾನ ಅಲ್ಲ. ಎರಡನೆ ಸ್ಥಾನದಲ್ಲಿರುವವರೇ ಅಧಿಕಾರದಲ್ಲಿರುವ ಪ್ರಧಾನಿಯ ಉತ್ತರಾಧಿಕಾರಿ ಆಗುವುದಿಲ್ಲ.

ಲೋಕಸಭೆ ಇಲ್ಲವೆ ವಿಧಾನಸಭಾ ಸದಸ್ಯರಾಗದೆ ಇರುವವರು ಕೂಡಾ ಆರು ತಿಂಗಳ ಕಾಲ ಪ್ರಧಾನಿ ಇಲ್ಲವೆ ಮುಖ್ಯಮಂತ್ರಿಯಾಗಲು ಸಾಧ್ಯವಿರುವಷ್ಟು ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು. ಪ್ರಧಾನಿಯಾಗುವವರು ಯಾರೆನ್ನುವುದೇ ಖಾತರಿ ಇಲ್ಲದೆ ಇರುವ ವಾತಾವರಣದಲ್ಲಿ ಸಂಪುಟದಲ್ಲಿ ಎರಡನೆ ಸ್ಥಾನವನ್ನು ಕಟ್ಟಿಕೊಂಡು ಏನು ಮಾಡುತ್ತೀರಿ?

ಪವಾರ್  ನಿರ್ಧಾರದ  ಬಗ್ಗೆ ಸಂಶಯ ಮೂಡಲು ಇನ್ನೊಂದು ಕಾರಣವೂ ಇದೆ. ಕಾಂಗ್ರೆಸ್ ಪಕ್ಷದ ಇಚ್ಛೆಗೆ ವಿರುದ್ಧವಾಗಿ ರಾಷ್ಟ್ರಪತಿ ಅಭ್ಯರ್ಥಿಯಾಗಲು ಹೊರಟ ಪಿ.ಎ.ಸಂಗ್ಮಾ ತಮ್ಮ ಬಹುಕಾಲದ ಸಂಗಾತಿ ಎನ್ನುವುದನ್ನೇ ಲೆಕ್ಕಿಸದೆ ಪಕ್ಷದಿಂದ ಉಚ್ಚಾಟಿಸಿದವರು ಪವಾರ್.

ಕನಿಷ್ಠ ಅವರನ್ನು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್‌ಮೇಲೆ ಒತ್ತಡ ಹೇರಬಹುದಿತ್ತು, ಕಾಂಗ್ರೆಸ್ ಬಳಿ ಕೂಡಾ ಆ ಸ್ಥಾನಕ್ಕೆ ಸರಿಯಾದ ಅಭ್ಯರ್ಥಿಗಳಿರಲಿಲ್ಲ, ಅದಕ್ಕಲ್ಲವೇ ಅನ್ಸಾರಿ ಅವರಿಗೆ ಮತ್ತೊಂದು ಅವಕಾಶ ನೀಡಿದ್ದು? ಪವಾರ್ ಹಾಗೆ ಮಾಡಿದ್ದರೆ ಅದು ಖಂಡಿತ ಸ್ವಾರ್ಥ ಎಂದು ಯಾರಿಗೂ ಅನಿಸುತ್ತಿರಲಿಲ್ಲ.

ಸಂಗ್ಮಾ ಅವರ ಬೆಂಬಲಕ್ಕೆ ಪವಾರ್ ದೃಢವಾಗಿ ನಿಂತಿದ್ದರೆ ರಾಷ್ಟ್ರಪತಿ ಚುನಾವಣೆಯ ಗಣಿತವೇ ಬದಲಾಗಿ ಯುಪಿಎ ಈಗಿನಷ್ಟು ಬಲಿಷ್ಠವಾಗಿ ಹೊರಹೊಮ್ಮುತ್ತಿರಲಿಲ್ಲ. ಅಂತಹ ಸಮಯದಲ್ಲಿ ಯುಪಿಎಗೆ ಸಂಪೂರ್ಣವಾಗಿ ಶರಣಾದ ಪವಾರ್ ಇನ್ನೇನು ಚುನಾವಣೆ ಮುಗಿಯುವ ಹೊತ್ತಿಗೆ ಗುಟುರು ಹಾಕುತ್ತಿರುವುದಕ್ಕೆ ಕೇವಲ ನಂಬರ್ 2 ಸ್ಥಾನವೊಂದೇ ಕಾರಣ ಇರಲಾರದು.

ಅದೇನು ಎಂಬುದನ್ನು ಪವಾರ್ ಅವರು ಬಹಿರಂಗಪಡಿಸಬೇಕು. ಮೈತ್ರಿಕೂಟ ಸರ್ಕಾರ ಎಂದ ಮಾತ್ರಕ್ಕೆ ಆರಿಸಿ ಕಳುಹಿಸಿದ ಮತದಾರರನ್ನು ಕತ್ತಲಲ್ಲಿಟ್ಟು ಎಲ್ಲವನ್ನೂ ಮುಚ್ಚಿದ ಕೋಣೆಯೊಳಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದಿಲ್ಲ.

ರಾಜಕೀಯವಾಗಿ ತನ್ನನ್ನು ಬೆಳೆಸಿದ್ದ ವಸಂತದಾದಾ ಪಾಟೀಲ್ ಎಂಬ ಗುರುವಿಗೆ ತಿರುಮಂತ್ರ ಹೇಳಿ 38ನೇ ವರ್ಷಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ಶರದ್ ಪವಾರ್ ಅವರ ಈಗಿನ ನಿರ್ಧಾರವನ್ನು, ಅವರ ಹಿಂದಿನ ಎಲ್ಲ ರಾಜಕೀಯ ನಿರ್ಧಾರಗಳ ಜತೆಯಲ್ಲಿಟ್ಟು ನೋಡಿದರೆ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. `ಪಕ್ಷಾಂತರ, ಭ್ರಷ್ಟಾಚಾರ, ವಿಶ್ವಾಸದ್ರೋಹ, ಸ್ವಜನ ಪಕ್ಷಪಾತ, ಆತ್ಮವಂಚನೆ, ಕರ್ತವ್ಯಲೋಪ...

ಹೀಗೆ ರಾಜಕಾರಣಿಗಳಿಗೆ ಇರುವ ಎಲ್ಲ ದುರ್ಗುಣಗಳನ್ನು ಹೊಂದಿಯೂ, ಅವುಗಳಿಂದ ಯಾವ ಹಿನ್ನಡೆಯನ್ನೂ ಅನುಭವಿಸದೆ ದಶಕಗಳ ಕಾಲ ರಾಜಕೀಯ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವೇ? ಸಾಧ್ಯ ಇದೆ, ಅದಕ್ಕಾಗಿ ಶರದ್‌ಚಂದ್ರ ಗೋವಿಂದರಾವ್ ಪವಾರ್ ಆಗಬೇಕು` ಎಂದು ನಾನು ಹಿಂದೆ ಇದೇ ಅಂಕಣದಲ್ಲಿ (17,ಜನವರಿ 2011) ಬರೆದಿದ್ದೆ.

ಈ ಮಾತುಗಳು ಈಗಲೂ ಅವರಿಗೆ ಅನ್ವಯಿಸುತ್ತವೆ. ಅರ್ಧ ಶತಮಾನದಷ್ಟು ಸುದೀರ್ಘವಾದ ತಮ್ಮ ರಾಜಕೀಯ ಜೀವನದಲ್ಲಿ ಶರದ್ ಪವಾರ್ ಭಾರತದ ಇಂದಿನ ರಾಜಕಾರಣಿ ಸಾಮಾನ್ಯವಾಗಿ ಮಾಡುತ್ತಿರುವ ಯಾವ ಕೆಟ್ಟ ಕೆಲಸವನ್ನು ಮಾಡದೆ ಬಿಟ್ಟಿಲ್ಲ, ಅವರು ಎದುರಿಸದ ಆರೋಪಗಳೇ ಇಲ್ಲ.

ಆದರೆ ಇದ್ಯಾವುದೂ ಅವರನ್ನು ಒಟ್ಟು ಏಳು ವರ್ಷಗಳ ಕಾಲ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದನ್ನು, ಒಟ್ಟು ಹತ್ತು ವರ್ಷಗಳ ಕಾಲ ಕೇಂದ್ರ ಸಚಿವರಾಗುವುದನ್ನು, ಬಿಸಿಸಿಐ,ಐಸಿಸಿ ಅಧ್ಯಕ್ಷರಾಗುವುದನ್ನು ತಡೆಯಲಿಲ್ಲ.

ಇದು ಶರದ್ ಪವಾರ್. ಹೆಚ್ಚು ಕಡಿಮೆ ಅವರಷ್ಟೇ ದೀರ್ಘ ಅವಧಿಯ ರಾಜಕಾರಣ ನಡೆಸಿದ್ದ ಎಸ್.ಬಂಗಾರಪ್ಪ, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪನವರು ಅನುಭವಿಸಿದ ಅಧಿಕಾರದ ಅವಧಿ ಎಷ್ಟು?

ಬೆಂಬಲಿಗರು ಅಭಿಮಾನದಿಂದ `ಸಾಹೇಬ್` ಎಂದು ಕರೆಯುವ ಶರದ್ ಪವಾರ್ ಅವರ ರಾಜಕೀಯ ಪ್ರಾಣವಾಯು ಮಹಾರಾಷ್ಟ್ರದಲ್ಲಿದೆ. ಅಲ್ಲಿ ತನ್ನ ನಿಯಂತ್ರಣ ಸಡಿಲಗೊಳ್ಳುತ್ತಿದೆ ಎಂದು ಅನಿಸಿದ ಕೂಡಲೇ ಅವರು ಅಧೀರರಾಗುತ್ತಾರೆ.

ತಮ್ಮದೇ ಬೆಂಬಲಿಗ ಸುಧಾಕರ್ ನಾಯಕ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ದೇಶ ಆಳುವ ಆಸೆಯೊಂದಿಗೆ ದೆಹಲಿಗೆ ಹೋಗಿದ್ದ ಪವಾರ್, ಯಾಕೋ ಶಿಷ್ಯ ನಿಯಂತ್ರಣ ತಪ್ಪಿಹೋಗುತ್ತಿದ್ದಾನೆ ಎಂದು ಅನಿಸಿದ ಕೂಡಲೇ ಮತ್ತೆ ಮಹಾರಾಷ್ಟ್ರಕ್ಕೆ ಓಡಿಹೋಗಿ ಮುಖ್ಯಮಂತ್ರಿಯಾದವರು.

1992ರ ಮುಂಬೈ ಕೋಮುಗಲಭೆ ಅಷ್ಟೊಂದು ಅತಿರೇಕಕ್ಕೆ ಹೋಗಲು ಯಾರು ಕಾರಣಕರ್ತರು ಎನ್ನುವುದನ್ನು ಯಾರಾದರೂ ತನಿಖೆ ನಡೆಸಿದರೆ ಪವಾರ್ ತಮ್ಮ ಜಾತ್ಯತೀತ ನಿಲುವನ್ನು ಸಮರ್ಥಿಸಿಕೊಳ್ಳಲು ಪರದಾಡಬೇಕಾಗಬಹುದು.

ವಿಲಾಸ್‌ರಾವ್ ದೇಶ್‌ಮುಖ್, ಸುಶೀಲ್‌ಕುಮಾರ್ ಶಿಂಧೆ, ಅಶೋಕ್ ಚವಾಣ್ ಹೀಗೆ ಯಾರೂ ಕೂಡಾ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದಲ್ಲಿ ನೆಲೆ ಊರುವುದನ್ನು ಈ `ಸಾಹೇಬ್` ಸಹಿಸುವುದಿಲ್ಲ.

ಈಗ ಅವರ ಕಣ್ಣು  ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಪೃಥ್ವಿರಾಜ್ ಚವಾಣ್ ಎಂಬ ಇನ್ನೊಬ್ಬ ಮರಾಠನ ಮೇಲೆ ಬಿದ್ದಿದೆ.  ಹಳಿತಪ್ಪಿಹೋಗಿದ್ದ ಮಹಾರಾಷ್ಟ್ರದ ಆಡಳಿತವನ್ನು ಪ್ರಚಾರದ ಹಪಾಹಪಿ ಇಲ್ಲದೆ ಸದ್ದಿಲ್ಲದ ರೀತಿಯಲ್ಲಿ ಸರಿದಾರಿಗೆ ತರಲು ಪ್ರಯತ್ನಿಸುತ್ತಿರುವ ಚವಾಣ್ ಇತ್ತೀಚೆಗೆ ಎನ್‌ಸಿಪಿ ಸಚಿವರ ಭ್ರಷ್ಟಾಚಾರದ ಬೆನ್ನಿಗೆ ಬಿದ್ದಿದ್ದಾರೆ.

ಶರದ್ ಪವಾರ್ ಮತ್ತು ಅವರ ಬೆಂಬಲಿಗರಿಗೆ ತಮ್ಮ ಕಪಾಟಿನ ತುಂಬ ಇರುವ ಅಸ್ಥಿಪಂಜರಗಳ ಬಗ್ಗೆ ಭಯ ಇದೆ. ಕರ್ನಾಟಕವನ್ನು ಮೀರಿಸುವ ಭೂಹಗರಣಗಳು ಅಲ್ಲಿ ನಡೆದಿವೆ.

ಪವಾರ್ ಮಗಳು ಮತ್ತು ಅಳಿಯ ಅವರನ್ನೊಳಗೊಂಡ ಕೃಷ್ಣಾ ಕಣಿವೆ ಅಭಿವೃದ್ಧಿ ನಿಗಮದ ಮೇಲಿನ ಆರೋಪಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಬಹಳಷ್ಟು ವರ್ಷಗಳಿಂದ ಮಹಾರಾಷ್ಟ್ರ ರಾಜಕೀಯವನ್ನು ರಿಯಲ್ ಎಸ್ಟೇಟ್ ಕುಳಗಳು ಮತ್ತು ಸಹಕಾರಿ ಕ್ಷೇತ್ರದ ತಿಮಿಂಗಲಗಳ ಲಾಬಿ ನಿಯಂತ್ರಿಸುತ್ತಿವೆ.

ಈ ಲಾಬಿಗಳಿಗೆ ಸಮೀಪವಾಗಿರುವವರು ಶರದ್‌ಪವಾರ್. ಸುಮಾರು ಹನ್ನೆರಡು ಕೋಟಿ ರೂಪಾಯಿ ಠೇವಣಿ ಹೊಂದಿರುವ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಪವಾರ್ ಕುಟುಂಬದ ಮುಷ್ಟಿಯೊಳಗಿದೆ.

ಈ ಬ್ಯಾಂಕ್‌ನ ಸದಸ್ಯತ್ವ ಹೊಂದಿರುವ 169 ಸಕ್ಕರೆ ಕಾರ್ಖಾನೆಗಳಲ್ಲಿ 95 ಪವಾರ್ ನಿಯಂತ್ರಣದಲ್ಲಿದೆಯಂತೆ. ಇತ್ತೀಚೆಗೆ ಅವ್ಯವಹಾರದ ಆರೋಪಕ್ಕೆ ಈಡಾಗಿದ್ದ ಈ ಸಹಕಾರಿ ಬ್ಯಾಂಕ್‌ಗೆ ಮುಖ್ಯಮಂತ್ರಿ ಚವಾಣ್ ಅವರು ಆಡಳಿತಾಧಿಕಾರಿಯನ್ನು ನೇಮಿಸಿದ್ದಾರೆ.

ಮೈತ್ರಿಕೂಟದ ಸರ್ಕಾರದುದ್ದಕ್ಕೂ ಎನ್‌ಸಿಪಿ ಬಳಿಯೇ ಇರುವ ನೀರಾವರಿ ಖಾತೆಯಲ್ಲಿನ ಭ್ರಷ್ಟಾಚಾರವನ್ನು ಇತ್ತೀಚೆಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ಬಯಲುಗೊಳಿಸಿದ ನಂತರ ಚವಾಣ್ ಅವರು ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸುವ ಸನ್ನಾಹದಲ್ಲಿದ್ದಾರೆ.

ಇದು ಶರದ್‌ಪವಾರ್ ಸಿಡಿಮಿಡಿಗೊಳ್ಳಲು ಮುಖ್ಯವಾದ ಕಾರಣ.
ಶರದ್ ಪವಾರ್ ಪ್ರಾರಂಭದಿಂದಲೂ ಕೃಷಿ ಕ್ಷೇತ್ರದ ಜತೆ ತಮ್ಮನ್ನು ಗುರುತಿಸಿಕೊಂಡವರು. ಅವರ ಆಸಕ್ತಿ ಮತ್ತು ಸಾಧನೆಗೆ ಸ್ವಕ್ಷೇತ್ರವಾದ ಬಾರಾಮತಿ ಸಾಕ್ಷಿ.

ಕೃಷಿ, ವಾಣಿಜ್ಯ, ಕೈಗಾರಿಕೆ ಮತ್ತು ಶಿಕ್ಷಣದ ಕೇಂದ್ರವಾಗಿ ಪವಾರ್ ಈ ಕ್ಷೇತ್ರವನ್ನು ಬೆಳೆಸಿದ್ದಾರೆ. ಈ ಅನುಭವದ ಹಿನ್ನೆಲೆಯಲ್ಲಿಯೇ ಪ್ರಧಾನಿ ಮನಮೋಹನ್‌ಸಿಂಗ್ ಪವಾರ್ ಅವರಿಗೆ ಕೃಷಿ ಖಾತೆಯನ್ನು ನೀಡಿದ್ದು.

ಗ್ರಾಮೀಣ ಮೂಲಸೌಕರ್ಯ, ನೀರಾವರಿ, ದಾಸ್ತಾನು ಮಳಿಗೆಗಳ ಸೌಲಭ್ಯ, ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಸ್ಥಳೀಯ ಕೃಷಿ ಮಾರುಕಟ್ಟೆಯ ಕೊರತೆಗಳಿಂದ ಬಳಲುತ್ತಿರುವ ಕೃಷಿ ಕ್ಷೇತ್ರ, ಪವಾರ್ ಈ ಖಾತೆಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಹೇಗಿತ್ತೋ, ಅದಕ್ಕಿಂತಲೂ ಹೆಚ್ಚು ಕೆಟ್ಟು ಹೋಗಿದೆ.

ಇದರ ಜತೆಗೆ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿರುವ ಬರದ ಕರಿನೆರಳು, ಕುಸಿಯುತ್ತಿರುವ ಕೃಷಿ ಉತ್ಪಾದನೆ, ಏರುತ್ತಲೇ ಇರುವ ಕೃಷಿ ಕ್ಷೇತ್ರದ ಹಣದುಬ್ಬರ ಯುಪಿಎ ಸರ್ಕಾರದ ತಲೆನೋವನ್ನು ಇನ್ನಷ್ಟು ಹೆಚ್ಚಿಸಿದೆ.

ಬರ ಪರಿಸ್ಥಿತಿ ಬಗ್ಗೆ ಅವರು ನೀಡುತ್ತಿರುವ ಉಡಾಫೆತನದ ಹೇಳಿಕೆಗಳು ನೊಂದ ರೈತವರ್ಗ ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ. ಕರ್ತವ್ಯಲೋಪದ ಈ ಅಪವಾದದಿಂದ ತಪ್ಪಿಸಿಕೊಳ್ಳುವುದು ಕೂಡಾ ಸಂಪುಟದಿಂದ ಹೊರಗೆ ಹೋಗುವ ಪವಾರ್ ಅವರ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ.

ಪವಾರ್ ಅವರ ಮೆದು ಬಂಡಾಯಕ್ಕೆ ಇನ್ನೂ ಒಂದು ಕಾರಣ ಇದ್ದ ಹಾಗಿದೆ. ಪ್ರಧಾನಿ ಪಟ್ಟದ ಮೇಲಿನ ವ್ಯಾಮೋಹ ಅವರನ್ನು ಇನ್ನೂ ಬಿಟ್ಟಿಲ್ಲ. ಆಂತರಿಕ ಬಿಕ್ಕಟ್ಟಿನಿಂದಾಗಿ ದುರ್ಬಲಗೊಳ್ಳುತ್ತಿರುವ ಪ್ರಮುಖ ವಿರೋಧಪಕ್ಷವಾದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಹೊರಹೊಮ್ಮುವ ಸಾಧ್ಯತೆ ಕ್ಷೀಣವಾಗುತ್ತಿರುವುದು ಪವಾರ್ ಅವರಂತಹ ಪ್ರಾದೇಶಿಕ ಪಕ್ಷಗಳ ಪಾಳೆಯಗಾರರ ಎದೆಯೊಳಗೆ ಆಸೆಯ ಕಿಚ್ಚು ಹಚ್ಚಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆಯ ಚುನಾವಣೆಯ ನಂತರ ತೃತೀಯರಂಗಕ್ಕೆ ಸೇರಿದ ಪಕ್ಷಗಳು ಸೇರಿ ಕಾಂಗ್ರೆಸ್ ಇಲ್ಲವೇ ಬಿಜೆಪಿ ಬೆಂಬಲದೊಡನೆ ಸರ್ಕಾರ ರಚನೆಯ ಪ್ರಯತ್ನ ಮಾಡಿದರೆ ಅದರ ನಾಯಕನ ಸ್ಥಾನದಲ್ಲಿ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಲು ಪವಾರ್ ಈಗಲೇ ತಾಲೀಮು ನಡೆಸುತ್ತಿದ್ದಾರೆ.

ಶಿವಸೇನೆಯಿಂದ ಹಿಡಿದು ಕಮ್ಯುನಿಸ್ಟರ ವರೆಗೆ ಎಲ್ಲ ಪಕ್ಷಗಳ ನಾಯಕರ ಜತೆಯಲ್ಲಿಯೂ ಸೌಹಾರ್ದಯುತ ಸಂಬಂಧ ಉಳಿಸಿಕೊಂಡು ಬಂದಿರುವ ತನ್ನ ಅಜಾತಶತ್ರುವಿನ ವ್ಯಕ್ತಿತ್ವ ಜೀವಮಾನದ ಆಸೆಯನ್ನು ಈಡೇರಿಸಿಕೊಳ್ಳಲು ನೆರವಾಗಬಹುದು ಎಂದು ಅವರು ನಂಬಿದಂತಿದೆ. ರಾಜಕಾರಣಿಗಳ ಮನೆಮುಂದೆ ಸದಾ ಜೀನು ಹೊದ್ದುಕೊಂಡು ನಿಂತಿರುವ ಆಸೆಯ ಕುದುರೆ ಪವಾರ್ ಅವರನ್ನು ಕರೆಯುತ್ತಿದೆ.

Monday, July 16, 2012

ಪಾತ್ರಧಾರಿಗಳನ್ನಷ್ಟೇ ಅಲ್ಲ, ಸೂತ್ರಧಾರರನ್ನೂ ನೋಡಿ July 16, 2012

ಕರ್ನಾಟಕದಲ್ಲಿ ಬಿಜೆಪಿ ರಾಜಕಾರಣ ತಲುಪಿರುವ ಅಧೋಗತಿಗೆ ಹೊಣೆಗಾರರು ಯಾರು ಎಂಬ ಪ್ರಶ್ನೆ ಕೇಳಿದರೆ ಜನ ಪೈಪೋಟಿಯಿಂದ ಹೆಸರುಗಳನ್ನು ಪಟ್ಟಿಮಾಡಿ ಹೇಳಬಲ್ಲರು. ಬಿ.ಎಸ್.ಯಡಿಯೂರಪ್ಪ, ಬಳ್ಳಾರಿಯ ರೆಡ್ಡಿ ಸೋದರರು, ಪಕ್ಷಾಂತರಿ ಶಾಸಕರು,ಅನಂತಕುಮಾರ್, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ..... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 

ಇವರೆಲ್ಲ ತೆರೆಯ ಮುಂದೆ ಕಾಣುತ್ತಿರುವ ಪಾತ್ರಧಾರಿಗಳು. ಇವರ ಹೆಸರೆತ್ತಿ ಮನಸಾರೆ ಬೈದುಬಿಡಬಹುದು, ಸ್ವಲ್ಪ ಧೈರ್ಯಮಾಡಿದರೆ ಕಲ್ಲೆತ್ತಿ ಹೊಡೆಯಲೂಬಹುದು. ಅಂತಹ ಸಾಹಸ ಮಾಡುವ ಧೈರ್ಯ ಇಲ್ಲ ಎಂದಾದರೆ ಮುಂದಿನ ಚುನಾವಣೆಯಲ್ಲಿ ಇವರನ್ನು ಮಣ್ಣುಮುಕ್ಕಿಸಿ ಸೇಡು ತೀರಿಸಿಕೊಳ್ಳಬಹುದು. 

ಆದರೆ ನೇಪಥ್ಯದಲ್ಲಿ ಕೂತು ಈ ಪಾತ್ರಗಳನ್ನು ಆಡಿಸುತ್ತಿರುವ ಸೂತ್ರಧಾರರನ್ನು ಏನು ಮಾಡುವುದು? ಇವರು ಯಾರ ಕಣ್ಣಿಗೂ ಕಾಣುವುದಿಲ್ಲ, ಇವರ ಅಂತರಂಗದ ಪಿಸುಮಾತುಗಳು ಹೊರಗಿರುವ ಯಾರಿಗೂ ಕೇಳಿಸುತ್ತಿಲ್ಲ, ಇವರು ವಿಧಾನಸಭೆ ಪ್ರವೇಶಿಸದೆಯೂ ಅಧಿಕಾರವನ್ನು ಅನುಭವಿಸಬಲ್ಲರು, ಜಾತಿವಾದಿ ಎಂದು ಕರೆಸಿಕೊಳ್ಳದೆಯೇ ಜಾತಿಯ ರಾಜಕಾರಣ ಮಾಡಬಲ್ಲರು, ಭ್ರಷ್ಟರನ್ನು ಪೋಷಿಸುತ್ತಲೇ ಪ್ರಾಮಾಣಿಕರು ಎಂಬ ಹಣೆಪಟ್ಟಿ ಹಚ್ಚಿಕೊಂಡು ಓಡಾಡಬಲ್ಲರು.
 
ಇವರನ್ನು ಕಾಣಬೇಕಾದರೆ ಸಂಘ ಪರಿವಾರದ ಗರ್ಭಗುಡಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ ಪ್ರವೇಶಿಸಬೇಕು. ಸಂಘ ಪರಿವಾರದ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆಸಿಕೊಂಡರೂ ಸಂಸ್ಕೃತಿಯೇತರ ಚಟುವಟಿಕೆಗಳಿಗಾಗಿ ಅದು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟುಹಾಕಿದೆ.
 
ರಾಜಕೀಯಕ್ಕಾಗಿ ಬಿಜೆಪಿ (ಮೊದಲು ಜನಸಂಘ), ಧರ್ಮಕ್ಕಾಗಿ ವಿಎಚ್‌ಪಿ, ಹಿಂದೂ ಜಾಗರಣ ಮಂಚ, ಬಜರಂಗದಳ ಇತ್ಯಾದಿ,  ವಿದ್ಯಾರ್ಥಿಗಳಿಗಾಗಿ ಎಬಿವಿಪಿ, ಕಾರ್ಮಿಕರಿಗಾಗಿ ಬಿಎಂಎಸ್...ಹೀಗೆ ತರಹೇವಾರಿ ಸಂಘಟನೆಗಳು. ಇದರ ಜತೆಗೆ ನೂರಾರು ಸ್ವಯಂಸೇವಾ ಸಂಸ್ಥೆಗಳು. 

ಈ ಎಲ್ಲ ಅಂಗಸಂಸ್ಥೆಗಳ ಯಜಮಾನನ ಸ್ಥಾನದಲ್ಲಿ ಕೂತಿರುವುದು ಆರ್‌ಎಸ್‌ಎಸ್, ಒಂದು ರೀತಿಯಲ್ಲಿ ಇದು ಪರಿವಾರದ ಹೈಕಮಾಂಡ್. ಪರಿವಾರಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿರ್ಧಾರಗಳು ಇತ್ಯರ್ಥವಾಗುವುದು ಇದೇ ಗರ್ಭಗುಡಿಯಲ್ಲಿ. ಇದು ತನ್ನ ಆದೇಶಗಳನ್ನು ಪತ್ರಿಕಾಗೋಷ್ಠಿ ಕರೆದು ಇಲ್ಲವೇ ಪತ್ರಿಕಾ ಹೇಳಿಕೆಗಳ ಮೂಲಕ ಜಾರಿಗೊಳಿಸುವುದಿಲ್ಲ. 

ಅದೇನಿದ್ದರೂ ಕಣ್ಸನ್ನೆ, ಕೈಸನ್ನೆಯ  ಮೂಲಕವೇ ನಡೆಯುತ್ತದೆ. ಈ ಸಂಘಟನೆಯಲ್ಲಿ ಪ್ರಾಮಾಣಿಕತೆ, ತ್ಯಾಗ, ಸಾರ್ವಜನಿಕ ಸೇವೆ ಮತ್ತು ಸರಳ-ಶಿಸ್ತುಬದ್ಧ ಜೀವನಕ್ಕೆ ಅರ್ಪಿಸಿಕೊಂಡ ಅನೇಕ ಹಿರಿಯ ಜೀವಗಳಿದ್ದವು. ಆರ್‌ಎಸ್‌ಎಸ್ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡವರು ಕೂಡಾ ವೈಯಕ್ತಿಕವಾಗಿ ಅವರಿಗೆ ಗೌರವದಿಂದ ತಲೆಬಾಗುತ್ತಿದ್ದರು. 

ಆದರೆ ಇಂದಿನ ಆರ್‌ಎಸ್‌ಎಸ್‌ನಲ್ಲಿ ಹಳೆಯ ತಲೆಮಾರಿನ ನಾಯಕರು ಪಳೆಯುಳಿಕೆಯಂತೆ ಅಲ್ಲಲ್ಲಿ ಕಾಣುತ್ತಿದ್ದಾರೆಯೇ ಹೊರತು ಬಹುಸಂಖ್ಯಾತ ನಾಯಕರು ಬೇರೆ ದಾರಿ ಹಿಡಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆರ್‌ಎಸ್‌ಎಸ್ ತನ್ನ ಮೂಲ ಕ್ಷೇತ್ರಗಳಾದ ಧರ್ಮ ಮತ್ತು ಸಂಸ್ಕೃತಿಯನ್ನು ಪಕ್ಕಕ್ಕಿಟ್ಟು ರಾಜಕೀಯ ಕ್ಷೇತ್ರದಲ್ಲಿ ತೋರುತ್ತಿರುವ ಅತಿಯಾದ ಆಸಕ್ತಿ. 

1925ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘ 1949ರಲ್ಲಿ ಒಪ್ಪಿಕೊಂಡ ಲಿಖಿತ ಸಂವಿಧಾನದ ಪ್ರಕಾರ ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ.  `ಹಿಂದೂ `ಸಮಾಜ`ದೊಳಗಿನ ವಿಭಿನ್ನ ಗುಂಪುಗಳನ್ನು ಸಂಘಟಿಸುವುದು ಮತ್ತು ಅದನ್ನು `ಧರ್ಮ` ಮತ್ತು ಸಂಸ್ಕೃತಿಯ ಆಧಾರದಲ್ಲಿ ಪುನರುಜ್ಚೀವನಗೊಳಿಸಿ ಆ ಮೂಲಕ `ಭರತವರ್ಷ`ದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವುದು ಸಂಘದ ಗುರಿ ಮತ್ತು ಉದ್ದೇಶ...` ಎಂದು ಆರ್‌ಎಸ್‌ಎಸ್ ಒಪ್ಪಿಕೊಂಡಿರುವ ಸಂವಿಧಾನದ ಮೂರನೆ ಪರಿಚ್ಛೇದ ಹೇಳುತ್ತದೆ. 

`ಸಂಘಕ್ಕೆ ರಾಜಕೀಯ ಉದ್ದೇಶ ಇಲ್ಲ, ಇದು ಶುದ್ಧವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬದ್ಧವಾದ ಸಂಸ್ಥೆ` ಎಂದು ಪರಿಚ್ಛೇದ 4ರಲ್ಲಿ ಉದ್ದೇಶವನ್ನು ಇನ್ನಷ್ಟು ಸ್ಪಷ್ಟಪಡಿಸಲಾಗಿದೆ. ಇಷ್ಟು ಹೇಳಿದ ನಂತರ ಮುಂದುವರಿಯುತ್ತಾ `...ಸಂಘದ ಸದಸ್ಯರು ರಾಜಕೀಯ ಪಕ್ಷ ಸೇರುವುದಕ್ಕೆ ಅಭ್ಯಂತರ ಇಲ್ಲ...ಮುಂದೊಂದು ದಿನ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲು ಆರ್‌ಎಸ್‌ಎಸ್ ಸ್ವತಂತ್ರವಾಗಿದೆ` (ಪ್ಯಾರಾ 18 ಮತ್ತು 19) ಎಂದು ಹೇಳಿ ಆರ್‌ಎಸ್‌ಎಸ್ ತನ್ನ ಸಂವಿಧಾನದಲ್ಲಿಯೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದೆ. ಈ ದ್ವಂದ್ವವನ್ನು ಆರ್‌ಎಸ್‌ಎಸ್ ಇತಿಹಾಸದುದ್ದಕ್ಕೂ ಅದರ ನಡವಳಿಕೆಯಲ್ಲಿ ಕಾಣಬಹುದು.

 ಸಂವಿಧಾನದಲ್ಲಿ ಅವಕಾಶ ಇರುವಂತೆ ಆರ್‌ಎಸ್‌ಎಸ್ ನೇರವಾಗಿ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲಿಲ್ಲ, ಬದಲಿಗೆ 1951ರಲ್ಲಿ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿತು. ಇದರ ನಂತರವೂ ಹಿಂದಿನ ಜನಸಂಘ ಇಲ್ಲವೇ ಈಗಿನ ಬಿಜೆಪಿ ತಮ್ಮ  ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಅದು ಒಪ್ಪಿಕೊಳ್ಳುವುದಿಲ್ಲ.

  ಆದರೆ ವಾಜಪೇಯಿ-ಅಡ್ವಾಣಿಯವರಿಂದ ಹಿಡಿದು ಯಡಿಯೂರಪ್ಪ-ಶೆಟ್ಟರ್ ವರೆಗೆ ಎಲ್ಲರೂ ಆರ್‌ಎಸ್‌ಎಸ್‌ನಿಂದಲೇ ಬಂದವರು ಮತ್ತು ಅದಕ್ಕೆ ನಿಷ್ಠರಾಗಿರುವವರು. ಬಿಜೆಪಿಯ ಸಂಘಟನೆಯಲ್ಲಿ ಮಾತ್ರ ಆರ್‌ಎಸ್‌ಎಸ್‌ನಿಂದ ಎರವಲು ಸೇವೆಯ ರೂಪದಲ್ಲಿ ಬಂದ ಸ್ವಯಂಸೇವಕರಿರುತ್ತಾರೆ. 

ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವ ರಾಜಕೀಯ ಪಕ್ಷದಲ್ಲಿಯೂ ಆರ್‌ಎಸ್‌ಎಸ್ ಜತೆ ತನ್ನನ್ನು ಗುರುತಿಸಿಕೊಳ್ಳುವ ನಾಯಕರಿಲ್ಲ. ಇದೇ ರೀತಿ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ ಯಾವ ನಾಯಕರನ್ನೂ ಕೂಡಾ ಆರ್‌ಎಸ್‌ಎಸ್ `ನಮ್ಮವನು` ಎಂದು ಒಪ್ಪಿಕೊಳ್ಳುವುದೂ ಇಲ್ಲ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದರೆ ಬೇರೆಬೇರೆ ಅಲ್ಲ, ಅದು ಒಂದೇ ನಾಣ್ಯದ ಎರಡು ಮುಖಗಳು. ಹೀಗಿರುವಾಗ ಬಿಜೆಪಿಯ ಎಲ್ಲ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳಿಗೆ ಆರ್‌ಎಸ್‌ಎಸ್ ಕೂಡಾ ಹೊಣೆ. 

ಈ ಜವಾಬ್ದಾರಿಯಿಂದ ಅದು ನುಣುಚಿಕೊಳ್ಳಲಾಗುವುದಿಲ್ಲ. ಹೊಲಸು ರಾಜಕಾರಣದ ಮೂಲಕ ಗಳಿಸುವ ರಾಜಕೀಯ ಅಧಿಕಾರ ಬೇಕು, ಆದರೆ ಅದರ ನೈತಿಕ ಹೊಣೆಗಾರಿಕೆ ಬೇಡ ಎನ್ನುವುದು ಆರ್‌ಎಸ್‌ಎಸ್‌ನ ಆತ್ಮವಂಚನೆಯ ಮುಖವನ್ನಷ್ಟೇ ಅನಾವರಣಗೊಳಿಸುತ್ತದೆ. ದೇಶದ ಎದುರು ರಾಜ್ಯದ ಜನತೆ ತಲೆತಗ್ಗಿಸಬೇಕಾಗಿ ಬಂದಿರುವ ಇಂದಿನ ನೀತಿಭ್ರಷ್ಟ ರಾಜಕಾರಣದ ಮೂಲ `ಆಪರೇಷನ್ ಕಮಲ` ಎಂಬ ಅನೈತಿಕ ರಾಜಕಾರಣದಲ್ಲಿದೆ.
 
ಶಾಖೆಗಳಲ್ಲಿ ಸೇರುವ ಸ್ವಯಂಸೇವಕರಿಗೆ ಪ್ರಾಮಾಣಿಕತೆಯ ಪಾಠ ಹೇಳುವ ಆರ್‌ಎಸ್‌ಎಸ್ ನಾಯಕರಿಂದ ಇದನ್ನು ತಡೆಯಲು ಸಾಧ್ಯ ಇರಲಿಲ್ಲವೇ? ಈ ರೀತಿಯ ಮಾರ್ಗದರ್ಶನ ನೀಡಲಿಕ್ಕಾಗಿಯೇ ಅಲ್ಲವೇ, ಸಂಘ ತನ್ನ ಪ್ರತಿನಿಧಿಯನ್ನು ಪಕ್ಷದ ಸಂಘಟನೆಗೆ ಎರವಲು ಸೇವೆ ಮೂಲಕ ಕಳುಹಿಸುವುದು. 

ಇಷ್ಟೆಲ್ಲ ಅವಾಂತರಗಳು ನಡೆಯುತ್ತಿದ್ದಾಗ ಸಂಘಟನಾ ಕಾರ್ಯದರ್ಶಿ ಎಂಬ ಆ ಮಹಾನುಭಾವರು ಏನು ಮಾಡುತ್ತಿದ್ದರು? ದೇಶ ಭಕ್ತಿ ಎಂದರೆ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಮಾಡಿ, ಮುಸ್ಲಿಮರ ವಿರುದ್ಧ ಘೋಷಣೆ ಕೂಗುವುದು ಮಾತ್ರವೇ? ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುವುದು ಕೂಡಾ ದೇಶಭಕ್ತಿ ಅಲ್ಲವೇ?

ವಿಚಿತ್ರವೆಂದರೆ ಸಚ್ಚಾರಿತ್ರ್ಯ ಮತ್ತು ಮೌಲ್ಯಾಧರಿತ ರಾಜಕಾರಣದ ಬಗ್ಗೆ ಉಪನ್ಯಾಸ ನೀಡುವ ಆರ್‌ಎಸ್‌ಎಸ್ ನಾಯಕರಿಗೆ ಈಗ ಜೈಲಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡಾಗ ಯಾವ ಮುಜುಗರವೂ ಆಗಲಿಲ್ಲ.  ತಾವು ಖಾಸಗಿಯಾಗಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳಿಗೆ ಬಳ್ಳಾರಿಯ ಗಣಿಲೂಟಿಕೋರರಿಂದ  ಕೈತುಂಬಾ ದೇಣಿಗೆ ಪಡೆಯುತ್ತಿದ್ದಾಗ ಸಂಘದ ನಾಯಕರಿಗೆ ಯಾವ ಆತ್ಮಸಾಕ್ಷಿಯೂ  ಕಾಡಲಿಲ್ಲ.
 
ಯಡಿಯೂರಪ್ಪ ಒಬ್ಬ ರಾಜಕಾರಣಿ, ಅಡ್ಡಮಾರ್ಗದಿಂದ ಗಳಿಸಿದ ಹಣವನ್ನು ದೇಣಿಗೆ ಪಡೆದು ಅವರು ರಾಜಕಾರಣ ಮಾಡಿದಾಗ  ತಪ್ಪು ಎಂದು ಹೇಳಬಹುದು, ಆದರೆ ಅಸಹಜ ಎಂದು ಹೇಳಲಾಗುವುದಿಲ್ಲ. ಆದರೆ ಆರ್‌ಎಸ್‌ಎಸ್? ತನ್ನ ಆರು ಅಂಗ ಸಂಸ್ಥೆಗಳು ಮತ್ತು ಮತ್ತು ಏಳು ಮಂದಿ ನಾಯಕರಿಗೆ ಯಡಿಯೂರಪ್ಪ ಸರ್ಕಾರ ಅಂದಾಜು 50 ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ನೀಡಿದೆ ಎಂಬ ಆರೋಪವನ್ನು ಆರ್‌ಎಸ್‌ಎಸ್ ನಿರಾಕರಿಸುವ ಸ್ಥಿತಿಯಲ್ಲಿದೆಯೇ? ಇದು ಅನೈತಿಕ ಎಂದು ಅನಿಸಲಿಲ್ಲವೇ? 

ವಾಸ್ತವ ಸಂಗತಿ ಏನೆಂದರೆ ಆರ್‌ಎಸ್‌ಎಸ್‌ಗೆ ಕೂಡಾ ರಾಜಕೀಯ ಅಧಿಕಾರ ಬೇಕು ಮತ್ತು ಅದರ ಮೂಲಕ ಸುಲಭದಲ್ಲಿ ಬರುವ  ಸುಖ-ಸಂತೋಷಗಳನ್ನು ಅನುಭವಿಸಬೇಕು. 

ತನ್ನ ಮಾತಿಗೆ ಗೋಣು ಆಡಿಸುವ ನಾಯಕರನ್ನಷ್ಟೇ ಅದು ಸಹಿಸಿಕೊಳ್ಳುತ್ತದೆ, ನಿರಾಕರಿಸಿದರೆ ಅದು ವಾಜಪೇಯಿ-ಅಡ್ವಾಣಿ ಇರಲಿ, ಯಡಿಯೂರಪ್ಪ - ಸದಾನಂದಗೌಡರಿರಲಿ ಯಾರ ಗೋಣು ಮುರಿಯಲೂ ಹಿಂದೆಮುಂದೆ ನೋಡುವುದಿಲ್ಲ. ಯಡಿಯೂರಪ್ಪನವರ ಪದಚ್ಯುತಿಗೆ ಆರ್‌ಎಸ್‌ಎಸ್ ಒತ್ತಡ ಹೇರಲು ಭ್ರಷ್ಟಾಚಾರದ ಆರೋಪಗಳಷ್ಟೇ ಕಾರಣ ಅಲ್ಲ, ರಾಜ್ಯದ ಒಂದು ಪ್ರಬಲ ಕೋಮಿಗೆ ಸೇರಿದ ನಾಯಕನೊಬ್ಬ ತಮ್ಮ ನಿಯಂತ್ರಣವನ್ನು ಮೀರಿ ಬೆಳೆಯುತ್ತಿದ್ದಾರೆ ಎಂಬ ಅಸುರಕ್ಷತೆಯೂ ಕಾರಣ. 

ಅದೇ ರೀತಿ ಯಡಿಯೂರಪ್ಪನವರು ಸದಾನಂದಗೌಡರ ತಲೆದಂಡ ಕೇಳಿದ್ದನ್ನು ಬೆಂಬಲಿಸಲು  ಗೌಡರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎನ್ನುವ ಅಸಮಾಧಾನವೂ ಕಾರಣ. 

ಇಲ್ಲದೆ ಇದ್ದರೆ  ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ರಾಜ್ಯದ ಜನತೆ ಪಕ್ಷಭೇಧ ಮರೆತು ಸಜ್ಜನ, ಪ್ರಾಮಾಣಿಕ ಎಂದು ಕೊಂಡಾಡುತ್ತಿದ್ದ ಮುಖ್ಯಮಂತ್ರಿಯ ಬದಲಾವಣೆಗೆ ಆರ್‌ಎಸ್‌ಎಸ್ ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಗೌಡರು ಶಾಖೆಗಳಲ್ಲಿ ಹೇಳಿಕೊಟ್ಟಿದ್ದ ಪಾಠಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಬಂದರೂ ಆರ್‌ಎಸ್‌ಎಸ್ ಯಾಕೆ ಅವರ ಕೈಬಿಟ್ಟಿತು? ಉಳಿದೆಲ್ಲ ಕಳಂಕಿತ ಕಡತಗಳ ಜತೆಯಲ್ಲಿ ಆರ್‌ಎಸ್‌ಎಸ್ ನಾಯಕರ ಶಿಫಾರಸನ್ನೊಳಗೊಂಡ ಕಡತಗಳನ್ನೂ ಗೌಡರು ಪಕ್ಕಕ್ಕೆ ತೆಗೆದಿಟ್ಟರೇ? ಈಗಿನ ಆರ್‌ಎಸ್‌ಎಸ್ ಅಖಂಡ ಹಿಂದುತ್ವಕ್ಕೆ ಅರ್ಪಿಸಿಕೊಂಡ ಸಂಸ್ಥೆಯಾಗಿ ಉಳಿದಿಲ್ಲ. 

ಅಲ್ಲಿಯೂ ಜಾತಿ, ಪ್ರಾದೇಶಿಕತೆ, ಸ್ವಾರ್ಥ, ದ್ವೇಷ, ಅಸೂಯೆಗಳಿವೆ. ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪನವರು ಇಳಿದದ್ದು, ಗೌಡರು ಹತ್ತಿದ್ದು, ಈಗ ಗೌಡರು ಇಳಿದು ಶೆಟ್ಟರ್ ಹತ್ತಿದ್ದು ಹೊರನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ನಡೆದಿಲ್ಲ. ಇದರ ಹಿಂದೆ ಸೂತ್ರಹಿಡಿದು ಆಡಿಸುತ್ತಿರುವವರು  ಮೈ.ಚ.ಜಯದೇವ, ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು  ದತ್ತಾತ್ರೇಯ ಹೊಸಬಾಳೆ ಎಂಬ ಆರ್‌ಎಸ್‌ಎಸ್‌ನ ಮೂವರು ಪ್ರಮುಖ ನಾಯಕರು. ಇವರಲ್ಲಿ ಅತ್ಯಂತ ವಿವಾದಾತ್ಮಕ ನಾಯಕರಾದ ಪ್ರಭಾಕರ ಭಟ್ಟರು ಈಗ ಕುಂದಾಪುರದ ಸಜ್ಜನ ಶಾಸಕ ಹಾಲಾಡಿ ಶ್ರಿನಿವಾಸ ಶೆಟ್ಟಿಯವರ ಸಾತ್ವಿಕ ಸಿಟ್ಟಿಗೆ ಈಡಾಗಿದ್ದಾರೆ.

ರಾಜ್ಯದಂತೆ ಕೇಂದ್ರದಲ್ಲಿಯೂ ಈ ಅಧಿಕಾರದ ಆಟ ಸಾಗಿದೆ.  ವಾಜಪೇಯಿ-ಅಡ್ವಾಣಿಯವರಂತಹ ಹಿರಿಯ ಮತ್ತು ಜನಪ್ರಿಯ ನಾಯಕರಿದ್ದಾಗ ಬಾಲ ಮುದುಡಿಕೊಂಡಿದ್ದ ಆರ್‌ಎಸ್‌ಎಸ್ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಇಡೀ ಪಕ್ಷವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟಿದೆ. 

ಎಲ್.ಕೆ.ಅಡ್ವಾಣಿಯವರಂತಹ  ಹಿರಿಯ ನಾಯಕನ ವಿರುದ್ಧ ನಿತಿನ್ ಗಡ್ಕರಿಯವರಂತಹ ಯಃಕಶ್ಚಿತ್ ನಾಯಕನನ್ನು ಎತ್ತಿಕಟ್ಟಿದೆ. ನರೇಂದ್ರಮೋದಿಯವರನ್ನು ಮಣಿಸಲು ಹೋಗಿ ಸಾಧ್ಯವಾಗದೆ ಸದ್ಯಕ್ಕೆ ಅವರಿಗೆ ಶರಣಾಗಿದೆ. 

ಹೇಳುವವರು-ಕೇಳುವವರು ಇಲ್ಲದ ಪುಂಡುಪೋಕರಿಯಂತೆ ಬಿಜೆಪಿ ಬೆಳೆಯಲು ದುರ್ಬಲ ಹೈಕಮಾಂಡ್ ಕಾರಣ ಎಂಬ ಆರೋಪ ಪಕ್ಷದ ಒಳಗೆ ಮತ್ತು ಹೊರಗೆ ಕೇಳಿಬರುತ್ತಿದೆ. ಅದು ದುರ್ಬಲಗೊಳ್ಳಲು ಮುಖ್ಯ ಕಾರಣ- ಪರ್ಯಾಯ ಹೈಕಮಾಂಡ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದು ರಾಜಕೀಯ ರಂಗಸ್ಥಳದ ನೇಪಥ್ಯದಲ್ಲಿ  ಸೂತ್ರ ಹಿಡಿದುಕೊಂಡು ನಿಂತಿದೆ. ನಾಟಕ ಕೆಟ್ಟರೆ ಪಾತ್ರಧಾರಿಗಳಿಗೆ ಜನ ಕಲ್ಲು ಹೊಡೆಯುತ್ತಾರೆ, ಮರೆಯಲ್ಲಿ ನಿಂತ ಸೂತ್ರಧಾರರು ಸುರಕ್ಷಿತ