Thursday, June 28, 2012

ಪ್ರಜಾಪ್ರಭುತ್ವಕ್ಕೆ ಸಮ್ಮಿಶ್ರ ಸರ್ಕಾರಗಳಷ್ಟೇ ಕಂಟಕ ಅಲ್ಲ June 25, 2012

`ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳು ಮೂಲೆಗುಂಪಾಗಲು ಮತ್ತು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಅಧಿಕಾರ ಕೇಂದ್ರಗಳು ದುರ್ಬಲಗೊಳ್ಳುತ್ತಾ ಬರಲು ಸಮ್ಮಿಶ್ರ ಸರ್ಕಾರಗಳು ಕಾರಣ` ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ವಿಷಾದದ ದನಿಯಲ್ಲಿ ಹೇಳಿದ್ದಾರೆ. 

ಕರ್ನಾಟಕ ವಿಧಾನಸಭೆಯ ವಜ್ರಮಹೋತ್ಸವ ಸಮಾರಂಭದಲ್ಲಿ  ನೀಡಿದ ಪ್ರಧಾನ ಭಾಷಣದಲ್ಲಿ ಅವರ ಈ ಅಭಿಪ್ರಾಯ ವ್ಯಕ್ತವಾಗಿದೆ. ಸೂಕ್ಷ್ಮಮನಸ್ಸಿನ ನ್ಯಾಯಮೂರ್ತಿಗಳಿಗೆ ತಾನು ಹೇಳಿದ್ದು ಅತಿಯಾಯಿತು ಎಂದು ಅನಿಸಿತೋ ಏನೋ, `ಪ್ರಧಾನಿ ಮತ್ತು ಮುಖ್ಯಮಂತ್ರಿ ಸ್ಥಾನ ದುರ್ಬಲಗೊಳ್ಳಲು ಅದೊಂದೇ ಕಾರಣ ಅಲ್ಲ` ಎನ್ನುವ ಸಮಜಾಯಿಷಿ ನೀಡಿ  ಈ ವಿವಾದಾತ್ಮಕ ವಿಷಯವನ್ನು ಬೆಳೆಸಲುಹೋಗದೆ ಅಲ್ಲಿಗೆ ಮುಗಿಸಿಬಿಟ್ಟಿದ್ದರು.

ಬಹಳಷ್ಟು ದೆಹಲಿ ಕೇಂದ್ರಿತ ರಾಜಕೀಯ ಪಂಡಿತರು ಮಾತ್ರವಲ್ಲ ಆಗಾಗ ನಮ್ಮ `ಜನಸಾಮಾನ್ಯರು` ಕೂಡಾ ರಾಜಕೀಯ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ನಿಟ್ಟುಸಿರಿನ ರೂಪದಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವರು ಇನ್ನೂ ಮುಂದುವರಿದು ` ಸಣ್ಣಪುಟ್ಟ ಪಕ್ಷಗಳದ್ದು ಅತಿಯಾಯಿತು, ಸಮ್ಮಿಶ್ರ ಸರ್ಕಾರಕ್ಕಿಂತ ರಾಷ್ಟ್ರೀಯ ಪಕ್ಷದ ಆಡಳಿತವೇ ಪರಿಹಾರ` ಎಂದೋ ಇಲ್ಲವೇ `ಬಲಿಷ್ಠ ಹೈಕಮಾಂಡ್ ಬೇಕು` ಎಂಬ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡುತ್ತಾರೆ.

ಕೆಲವರು ಇನ್ನಷ್ಟು ಮುಂದೆ ಹೋಗಿ `ತುರ್ತುಪರಿಸ್ಥಿತಿಯ ದಿನಗಳೇ ಚೆನ್ನಾಗಿತ್ತು` ಎಂಬ ಅತಿರೇಕದ ಪ್ರತಿಕ್ರಿಯೆಯನ್ನೂ ನೀಡುತ್ತಾರೆ. ಇದನ್ನೆಲ್ಲ ಕೇಳಿದಾಕ್ಷಣ `ಹೌದಲ್ಲಾ, ನಮ್ಮ ರಾಜಕೀಯ ವ್ಯವಸ್ಥೆಗೆ ಹಿಡಿದ ರೋಗದ ಮೂಲವೇ ಸಿಕ್ಕಿಬಿಟ್ಟಿತಲ್ಲಾ` ಎಂದು ಅನಿಸುವುದು ಕೂಡಾ ಸಹಜ.

 ಇತಿಹಾಸದ ದಾರಿಯಲ್ಲಿ ಸ್ವಲ್ಪ ಹಿಂದಕ್ಕೆ ಹೋಗಿ ಎಪ್ಪತ್ತರ ದಶಕದಲ್ಲಿ ನಡೆದ ರಾಜಕೀಯ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳೋಣ. ಏಕಪಕ್ಷದ ಆಡಳಿತದ ಅಂತ್ಯವೇ ಅಂದಿನ ರಾಜಕೀಯ ಮತ್ತು ಸಾರ್ವಜನಿಕ ಹೋರಾಟದ ಮುಖ್ಯ ಘೋಷಣೆಯಾಗಿತ್ತಲ್ಲವೇ? ಇಂದಿರಾಗಾಂಧಿ ನಾಯಕತ್ವದಲ್ಲಿ ಸರ್ವಾಧಿಕಾರಿಯ ರೂಪ ಪಡೆದ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದುದು ಮಾತ್ರವಲ್ಲ ಸಂವಿಧಾನವನ್ನೇ ತಿರುಚಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿತ್ತಲ್ಲವೇ?

ಏಕಪಕ್ಷದ ಈ `ದಾದಾಗಿರಿ`ಯಿಂದಾಗಿ ಸಂವಿಧಾನದ ಆಶಯವಾದ ಒಕ್ಕೂಟ ವ್ಯವಸ್ಥೆಯೇ ಮುರಿದುಬೀಳುತ್ತಿದೆ ಎಂದಲ್ಲವೇ ರಾಜ್ಯ ಸರ್ಕಾರಗಳು ಆರೋಪಿಸುತ್ತಿದ್ದುದು? ಈ ಹೈಕಮಾಂಡ್ (ಇದರ ನಿಜವಾದ ಅರ್ಥ ಏನೆಂದು ಈಗಲೂ ಯಾರಿಗೂ ತಿಳಿದಿಲ್ಲ) ಸಂಸ್ಕೃತಿಯಿಂದಾಗಿ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವವೇ ನಾಶವಾಗಿ ಉಸಿರುಗಟ್ಟಿದ್ದಕ್ಕಲ್ಲವೇ, ಬಾಬು ಜಗಜೀವನ್‌ರಾಂ, ಚಂದ್ರಶೇಖರ್ ಮೊದಲಾದ ಹಿರಿಯ ನಾಯಕರು `ವಿಭೀಷಣ`ರಾಗಿ ಕಾಂಗ್ರೆಸ್ ತೊರೆದು ವಿರೋಧಿಪಾಳಯ ಸೇರಿಕೊಂಡಿದ್ದು? ಈಗ ಒಮ್ಮಿಂದೊಮ್ಮೆಲೇ ಈ ರಾಷ್ಟ್ರೀಯ ಪಕ್ಷಗಳು ಪ್ರಜಾಪ್ರಭುತ್ವದ ರಕ್ಷಕನಂತೆ ಅನಿಸಿಕೊಳ್ಳಲು ಏನು ಕಾರಣ?
ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬಂದದ್ದೇ  ಏಕಪಕ್ಷದ ಸ್ವೇಚ್ಛಾಚಾರಕ್ಕೆ ಪ್ರತಿಕ್ರಿಯೆ ರೂಪದಲ್ಲಿ.

ಚುನಾವಣೆಯ ಕಣದಲ್ಲಿ ಪ್ರತ್ಯೇಕವಾಗಿ ನಡೆಸುವ ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷದ ಆಧಿಪತ್ಯವನ್ನು ಮುರಿಯಲು ಸಾಧ್ಯ ಇಲ್ಲ ಎನ್ನುವ ಜ್ಞಾನೋದಯವೇ 1977ರಲ್ಲಿ ಪ್ರಾರಂಭಗೊಂಡ ಮೈತ್ರಿಕೂಟದ ರಾಜಕೀಯಕ್ಕೆ ಪ್ರೇರಣೆ. ಕಾಂಗ್ರೆಸ್ (ಒ), ಬಿಎಲ್‌ಡಿ,ಜನಸಂಘ ಮತ್ತು ಸೋಷಿಯಲಿಷ್ಟ್ ಪಕ್ಷಗಳು ವಿಲೀನಗೊಂಡು ಜನತಾಪಕ್ಷ ರಚನೆಗೊಂಡ ಕಾರಣ ಶುದ್ಧ ಅರ್ಥದಲ್ಲಿ ಅದನ್ನು ಮೈತ್ರಿಕೂಟ ಎಂದು ಹೇಳಲಾಗುವುದಿಲ್ಲ.

ಆದರೆ ಕಾಂಗ್ರೆಸ್ ಪಕ್ಷದಿಂದ ಹೊರಬಂದ ಜಗಜೀವನ್‌ರಾಂ ಅವರು ಪ್ರಜಾತಾಂತ್ರಿಕ ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನು ಕಟ್ಟಿಕೊಂಡು ಜನತಾಪಕ್ಷದ ಜತೆ ಸೇರಿಕೊಂಡ ಕಾರಣಕ್ಕೆ ಅದನ್ನು ಮೈತ್ರಿಕೂಟ ಎನ್ನಬಹುದಷ್ಟೆ.

ಆ ಕಾಲದ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರದ ವಿರುದ್ಧದ ಜನತೆಯ ಸಿಟ್ಟು ಮತ್ತು ಮೈತ್ರಿಕೂಟದ ಪರವಾದ ಜನಾಭಿಪ್ರಾಯ ಹೇಗಿತ್ತೆಂದರೆ ಬಿಹಾರ, ಉತ್ತರಪ್ರದೇಶ,ಪಂಜಾಬ್, ಹಿಮಾಚಲಪ್ರದೇಶ, ಹರ್ಯಾಣ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬ ಅಭ್ಯರ್ಥಿಯೂ ಗೆದ್ದಿರಲಿಲ್ಲ. ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲಾ ಒಂದು ಸ್ಥಾನ ದಕ್ಕಿತ್ತು. 400 ಸದಸ್ಯರು ಅದೇ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಆ ದಿನದಿಂದಲೇ ರಾಷ್ಟ್ರೀಯ ಪಕ್ಷದ ಆಟ ಮುಗಿದು ಸಮ್ಮಿಶ್ರ ಸರ್ಕಾರದ ಹೊಸ ಶಕೆ ಪ್ರಾರಂಭವಾಗಿತ್ತು.

ಅದರ ನಂತರದ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷ 1980 (353ಸ್ಥಾನ) ಮತ್ತು 1984 (415)ರಲ್ಲಿ ಮಾತ್ರ ಸ್ವಂತಬಲದಿಂದ ಸರ್ಕಾರ ರಚನೆಮಾಡುವಷ್ಟು ಬಹುಮತ ಗಳಿಸಿತ್ತು ನಿಜ. ಆದರೆ ಆ ಅವಕಾಶ ಸ್ವಾಭಾವಿಕವಾದ ಜನಾಭಿಪ್ರಾಯದಿಂದ ಒದಗಿಬಂದುದಲ್ಲ. 

ತಮ್ಮ ಆಯ್ಕೆಯೇ ಇಷ್ಟುಬೇಗ ಕೆಟ್ಟುಹೋಯಿತಲ್ಲಾ ಎಂಬ ಜನಾಕ್ರೋಶ 1980ರ ಫಲಿತಾಂಶಕ್ಕೆ ಕಾರಣವಾದರೆ, 1984ರ ದೈತ್ಯಬಹುಮತಕ್ಕೆ ಇಂದಿರಾಗಾಂಧಿ ಹತ್ಯೆಯ ವಿರುದ್ಧ ಭುಗಿಲೆದ್ದ ಅನುಕಂಪದ ಅಲೆ ಕಾರಣ. 1991ರಲ್ಲಿ ರಾಜೀವ್‌ಗಾಂಧಿ ಹತ್ಯೆಯ ನಂತರದ ಅನುಕಂಪದ ಅಲೆಯ ಹೊರತಾಗಿಯೂ ಕಾಂಗ್ರೆಸ್ ಗಳಿಸಿದ್ದು 232 ಸ್ಥಾನಗಳನ್ನು ಮಾತ್ರ. 1984ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಸ್ವಂತಬಲದಿಂದ ಸರ್ಕಾರ ರಚಿಸುವ ಅವಕಾಶವೇ ಸಿಗಲೇ ಇಲ್ಲ.

ಅದಕ್ಕೆ ಪರ್ಯಾಯ ರೂಪದಲ್ಲಿ ಇನ್ನೊಂದು ರಾಷ್ಟ್ರೀಯ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಉದಿಸಿಬಂದರೂ ಅದಕ್ಕೆಂದೂ 200ರ ಸಂಖ್ಯೆಯನ್ನೂ ದಾಟಲಾಗಿಲ್ಲ. 1998 ಮತ್ತು 1999ರಲ್ಲಿ ಪಡೆದ ತಲಾ182 ಸ್ಥಾನಗಳೇ ಗರಿಷ್ಠ. ಇವೆಲ್ಲ ಹೇಳುತ್ತಿರುವುದು ದೇಶದ ಮತದಾರರು ರಾಷ್ಟ್ರೀಯ ಪಕ್ಷಗಳಿಂದ ದೂರ ಸರಿಯುತ್ತಿದ್ದಾರೆ ಎಂದಲ್ಲವೇ?

ಪ್ರಜಾಪ್ರಭುತ್ವ ವ್ಯವಸ್ಥೆ ಜನಾಭಿಪ್ರಾಯದ ಬುನಾದಿಯ ಮೇಲೆ ನಿಂತಿರುವಂತಹದ್ದು. ಅಂತಿಮವಾಗಿ ಆಳುವವರು ಯಾರು ಎಂದು ನಿರ್ಧರಿಸುವವರು ಮತದಾರರು. ಇದರಿಂದಾಗಿಯೇ `ಜನ ತಮ್ಮ ಅರ್ಹತೆಗೆ ತಕ್ಕ ಸರ್ಕಾರವನ್ನು ಪಡೆಯುತ್ತಾರೆ` ಎನ್ನುವ ವ್ಯಂಗ್ಯ ಹುಟ್ಟಿಕೊಂಡಿರುವುದು. ಹೌದು ನಮ್ಮ ಮತದಾರರಲ್ಲಿ ಅಶಿಕ್ಷಿತರು, ಅರೆಶಿಕ್ಷಿತರು, ದುರ್ಬಲರು,ಬಡವರು ಬಹುಸಂಖ್ಯೆಯಲ್ಲಿದ್ದಾರೆ, ಚುನಾವಣೆಯ ಮೇಲೆ ಜಾತಿ, ದುಡ್ಡು ಮತ್ತು ತೋಳ್ಭಲದ ಪ್ರಭಾವ ಕೂಡಾ ಇದೆ.

ಆದರೆ ಈ ವರ್ಗದ ಮತದಾರರೆಲ್ಲರೂ ಕೇವಲ ಪ್ರಾದೇಶಿಕ ಇಲ್ಲವೇ ಸಣ್ಣ ಪಕ್ಷಗಳಿಗೆ ಮತಹಾಕುವವರೆಂದು ಹೇಳಲಾಗುವುದಿಲ್ಲ. ಅವರ ಆಯ್ಕೆ ತಪ್ಪು ಎಂದು ತೀರ್ಪು ನೀಡುವುದೂ ಸರಿಯಾಗಲಾರದು. ಮೈತ್ರಿಕೂಟ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಷರಾ ಬರೆದು ಮೂಲೆಗೆ ತಳ್ಳಿಬಿಡಲು ಆಗುವುದಿಲ್ಲ. ಇಂತಹ ಒಂದು ಜನಾಭಿಪ್ರಾಯ ರೂಪುಗೊಳ್ಳಲು ಏನು ಕಾರಣ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು.

ಭಾರತದಲ್ಲಿ ಏಕಶಿಲಾ ರೂಪದ ಸಾಮಾಜಿಕ ವ್ಯವಸ್ಥೆ ಇಲ್ಲ, ನಮ್ಮದು ಬಹುಭಾಷೆ, ಬಹುಜಾತಿ ಮತ್ತು ಬಹುಸಂಸ್ಕೃತಿಯ ದೇಶ. ಇದು `ರಾಷ್ಟ್ರೀಯ` ಎನ್ನುವ ಪರಿಕಲ್ಪನೆಗೆ ವಿರುದ್ದವಾಗಿರುವಂತಹ ವ್ಯವಸ್ಥೆ . ಇಲ್ಲಿ ಎಲ್ಲವನ್ನೂ ರಾಷ್ಟ್ರೀಯ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸಲಿಕ್ಕಾಗುವುದಿಲ್ಲ. ನೆಲ-ಜಲ-ಭಾಷೆಯ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ರಾಜ್ಯದ ಒಬ್ಬ ಮತದಾರನಿಗೆ ದೇಶಪ್ರೇಮದ ಜತೆಯಲ್ಲಿ ಪ್ರಾದೇಶಿಕ ಆಶೋತ್ತರಗಳು ಕೂಡಾ ಮುಖ್ಯ. ಇಲ್ಲಿ ಒಬ್ಬ ಮತದಾರ ಏಕಕಾಲಕ್ಕೆ ಭಾರತೀಯನಾಗಿಯೂ ಜತೆಗೆ ಒಬ್ಬ ಕನ್ನಡಿಗ, ತೆಲುಗ, ಬಂಗಾಳಿ, ಮರಾಠಿ, ಮಲೆಯಾಳಿಯಾಗಿಯೂ ಯೋಚಿಸುತ್ತಿರುತ್ತಾನೆ.

ಪ್ರಾದೇಶಿಕ ಅಸ್ಮಿತೆ ಅವನ ಜೀವನಕ್ರಮವಾಗಿರುತ್ತದೆ. ಸತ್ತೆ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಆತನ ಬೇಡಿಕೆ ದೆಹಲಿಯಲ್ಲಿ ಕೂತವರಿಗೆ ಪ್ರಾಂತೀಯ ಭಾವನೆ  ಎಂದು ಅನಿಸಿದರೂ ಅದನ್ನು ತನ್ನ ಹಕ್ಕು ಎಂದು ಆತ ತಿಳಿದುಕೊಂಡಿರುತ್ತಾನೆ. ಎಲ್ಲವೂ ದೂರದ ದೆಹಲಿಯಲ್ಲಿ ತೀರ್ಮಾನವಾಗುವುದು ಸ್ವಾಭಿಮಾನಿಯಾದ ಆತನನ್ನು ಕೆರಳಿಸುತ್ತದೆ. ಈ ರೀತಿಯ ಪ್ರಾದೇಶಿಕತೆಯ ಭಾವನೆಯನ್ನು ಕೆಲವು ಪಕ್ಷಗಳು  ರಾಜಕೀಯ ಬಂಡವಾಳವಾಗಿ ಮಾಡಿಕೊಳ್ಳುತ್ತಿರುವುದು ನಿಜ, ಆದರೆ ಇಂತಹ ಪರಿಸ್ಥಿತಿಯ ನಿರ್ಮಾಣಕ್ಕೆ ಯಾರು ಹೊಣೆ?

ಸ್ವಂತ ಬಹುಮತ ಪಡೆದ ಏಕಪಕ್ಷದ ಆಡಳಿತ ಇಲ್ಲವೇ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ಸುಭದ್ರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಮೊದಲು ಪ್ರಯತ್ನಿಸಿದ್ದೇ ದೈತ್ಯಬಹುಮತದ  ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ಅಲ್ಲವೇ? ಸಾಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳ ಗರಿಷ್ಠ ದುರ್ಬಳಕೆ ನಡೆಸಿದ್ದು ಕೂಡಾ ಇದೇ ಪಕ್ಷ.

ಆಪರೇಷನ್ ಕಮಲದಿಂದ ಹಿಡಿದು ಸಭಾಧ್ಯಕ್ಷರ ಸ್ಥಾನದ ದುರುಪಯೋಗದ ವರೆಗೆ ನಡೆದ ಎಲ್ಲ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳಿಗೆ  ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಭಾಷಣ ಮಾಡಿದ ಕರ್ನಾಟಕದ ವಿಧಾನಸಭೆ ಸಾಕ್ಷಿಯಾಗಿದೆ. ಇವೆಲ್ಲವನ್ನೂ ನಡೆಸಿದ್ದು ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ. ಇದಕ್ಕೆಲ್ಲ ಯಾವ ಸಮ್ಮಿಶ್ರ ಸರ್ಕಾರದ ಒತ್ತಡ ಇತ್ತು?

ರಾಷ್ಟ್ರೀಯ ಪಕ್ಷದ ಜನಪ್ರಿಯ ಘೋಷಣೆಯಾದ ಸುಭದ್ರ ಸರ್ಕಾರವೊಂದರಿಂದಲೇ ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಉಳಿಯುವುದು ಸಾಧ್ಯ ಇಲ್ಲ. ರಾಜಕೀಯ ಸುಭದ್ರತೆಯೊಂದೇ ಉತ್ತಮ ಆಡಳಿತದ ಮಾನದಂಡ ಕೂಡಾ ಅಲ್ಲ. ಸುಭದ್ರ ಸರ್ಕಾರವೆಲ್ಲ ಜನಪರವಾಗಿ ಕೆಲಸ ಮಾಡಿದೆ ಎಂದು ಹೇಳಲಾಗುವುದಿಲ್ಲ.

ಹಾಗೆ ಹೇಳುವುದಾದರೆ ಸ್ವತಂತ್ರಭಾರತದ ಮೊದಲ 25ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಬೇಕಾಗಿತ್ತಲ್ಲವೇ? ಇದಕ್ಕೆ ವಿರುದ್ದವಾಗಿ ಅಧಿಕಾರ ಉಳಿಸಿಕೊಳ್ಳಲು ಸಣ್ಣ ಪಕ್ಷಗಳ ಬೆಂಬಲವನ್ನು ನಂಬಲೇಬೇಕಾದ ಅಭದ್ರ ರಾಜಕೀಯ ವಾತಾವರಣದಲ್ಲಿಯೂ ಜನಪರವಾಗಿ ಆಡಳಿತ ನಡೆಸಿದ ಸರ್ಕಾರಗಳಿವೆ.

1983ರಿಂದ 1985ರ ವರೆಗಿನ ರಾಮಕೃಷ್ಣ ಹೆಗಡೆ  ನೇತೃತ್ವದ ಕರ್ನಾಟಕ ಸರ್ಕಾರ 18 ಸದಸ್ಯ ಬಲದ ಬಿಜೆಪಿ ಬೆಂಬಲವನ್ನು ನೆಚ್ಚಿಕೊಂಡಿತ್ತು. ಅನಿಶ್ಚಿತ ರಾಜಕೀಯದ ನಡುವೆಯೂ ಆ ಎರಡು ವರ್ಷಗಳ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತವನ್ನು ಮಧ್ಯಂತರ ಚುನಾವಣೆಯಲ್ಲಿ ಬಹುಮತ ಪಡೆದ ನಂತರ ನೀಡಲು ಹೆಗಡೆಯವರಿಗೆ ಸಾಧ್ಯವಾಗಲಿಲ್ಲ ಎನ್ನುವುದು ಗಮನಾರ್ಹ. ಯುಪಿಎ ಮೊದಲ ಅವಧಿಯಲ್ಲಿ ಎಡಪಕ್ಷಗಳ ಬೆಂಬಲವನ್ನು ನಂಬಿಕೊಂಡಿತ್ತು.

ಆ ದಿನಗಳಲ್ಲಿ ದಿನನಿತ್ಯದ ಆಡಳಿತದಲ್ಲಿ ಎಡಪಕ್ಷಗಳು ನಿರಂತರವಾಗಿ ಮಾಡುತ್ತಿದ್ದ ಮಧ್ಯಪ್ರವೇಶ `ಬ್ಲಾಕ್‌ಮೇಲ್` ಎಂದು ಅನಿಸಿದ್ದು ನಿಜ. ಆದರೆ ಆ ಒತ್ತಡದ ರಾಜಕೀಯದಿಂದಾಗಿಯೇ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ವಿಮಾ ಕಂಪೆನಿಗಳು ಇನ್ನೂ ಅಸ್ತಿತ್ವ ಉಳಿಸಿಕೊಂಡಿವೆ ಎಂಬುದನ್ನು ಮರೆಯುವುದು ಹೇಗೆ? ಕಾಂಗ್ರೆಸ್ ಅಂದುಕೊಂಡಂತೆ ಖಾಸಗೀಕರಣ ನಡೆದುಹೋಗಿದ್ದರೆ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಸಿಕ್ಕಿ ದಿವಾಳಿಯಾದ ಅಮೆರಿಕಾ ಬ್ಯಾಂಕುಗಳ ಸ್ಥಿತಿ ನಮ್ಮ ಬ್ಯಾಂಕು ಮತ್ತು ವಿಮಾಕಂಪೆನಿಗಳಿಗೂ ಬರುತ್ತಿತ್ತು.

ವಿರೋಧಪಕ್ಷಗಳು ಆಂತರಿಕ ಬಿಕ್ಕಟ್ಟಿಗೆ ಸಿಕ್ಕಿ ನಿಷ್ಕ್ರೀಯವಾಗಿರುವ ಈಗಿನ ದಿನಗಳಲ್ಲಿ ಆಂತರಿಕವಾದ ಇಂತಹ ಒತ್ತಡ-ಒತ್ತಾಯಗಳ ರಾಜಕೀಯವೇ  ಎಷ್ಟೋ ಬಾರಿ ರಾಷ್ಟ್ರೀಯ ಪಕ್ಷಗಳು ಜನಪರವಾದ ಆಡಳಿತ ನೀಡಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಹೋಗಲು ಕಾರಣವಾಗುತ್ತಿದೆ.  ಸಣ್ಣ ಪಕ್ಷಗಳ ಚೌಕಾಶಿ ರಾಜಕಾರಣವೇ ರಾಜಕೀಯ ಬಿಕ್ಕಟ್ಟುಗಳಿಗೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸಿದರೂ ಅದರ ಆಳದಲ್ಲಿ ರಾಷ್ಟ್ರೀಯ ಪಕ್ಷಗಳು ನಡೆಸುವ ಒಳ ಆಟಗಳಿರುತ್ತವೆ ಎನ್ನುವುದನ್ನು ಮರೆಯಬಾರದು.

ಮಮತಾ ಬ್ಯಾನರ್ಜಿ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಎಡಪಕ್ಷಗಳ ಕಡೆ ಕಣ್ಣುಮಿಟುಕಿಸುವುದು, ಮಾಯಾವತಿಯವರನ್ನು ಹಣಿಯಲು ಮುಲಾಯಂಸಿಂಗ್ ಜತೆ ಒಳಒಪ್ಪಂದ ಮಾಡಿಕೊಳ್ಳುವುದು, ಪಿಡಿಪಿ ಬೇಡ ಎಂದಾದರೆ ನ್ಯಾಷನಲ್ ಕಾನ್‌ಫರೆನ್ಸ್ ಪಕ್ಷವನ್ನು ಸೇರಿಸಿಕೊಳ್ಳುವುದು...ಹೀಗೆ ಸಣ್ಣ ಪಕ್ಷಗಳ ನಡುವಿನ ಭಿನ್ನಮತದ ಬೆಂಕಿಗೆ ಗಾಳಿಹಾಕುತ್ತಾ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಆಟವನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಾಡುತ್ತಲೇ ಬಂದಿವೆ.

ಸಣ್ಣಪಕ್ಷಗಳಿಗೆ ಬುದ್ಧಿಹೇಳುವ ಮೊದಲು ಈ ರಾಷ್ಟ್ರೀಯ ಪಕ್ಷಗಳು ತಮ್ಮ ನಡತೆಯನ್ನು ತಿದ್ದಿಕೊಳ್ಳಬೇಕು. ಪ್ರಜಾಪ್ರಭುತ್ವದ ರಕ್ಷಣೆಯ ದೊಡ್ಡಭಾರ ದೊಡ್ಡಪಕ್ಷಗಳ ಹೆಗಲ ಮೇಲೂ ಇದೆ.

Saturday, June 23, 2012

ವಿವಾದದ ಗಾಳಿಗೆ ಸಿಕ್ಕಿರುವ ಸಂವಿಧಾನದ `ತುರ್ತು ದೀಪ' June 18, 2012

ದೆಹಲಿಯ ರೈಸಿನಾಹಿಲ್‌ನ ತುದಿಯ ಸುಮಾರು 450 ಎಕರೆ ಉದ್ಯಾನದ ನಡುವಿನ ಐದು ಎಕರೆ ಜಾಗದಲ್ಲಿ ತಲೆ ಎತ್ತಿನಿಂತಿರುವ ರಾಷ್ಟ್ರಪತಿ ಭವನವನ್ನು ಭಾವುಕ ಕಣ್ಣುಗಳಿಂದ ನೋಡಿದರೆ ಅರಮನೆಯಂತೆ ಕಾಣುತ್ತದೆ. 

ವಿಶಾಲವಾದ ಹಜಾರಗಳು, ಎತ್ತರದ ಬೋದಿಗೆಗಳು, ಅಮೃತಶಿಲೆಯ ನೆಲ, ಅದನ್ನಪ್ಪಿಕೊಂಡ ಬೆಲೆಬಾಳುವ ಪರ್ಷಿಯನ್-ಕಾಶ್ಮೆರಿ ನೆಲಗಂಬಳಿ, ಅಪರೂಪದ ತೈಲಚಿತ್ರಗಳು, ಮೊಗಲ್-ಜೈನ್ ವಾಸ್ತುಶಿಲ್ಪಗಳ ಪ್ರಭಾವದ ಕಟಾಂಜನಗಳು,ಛಜ್ಚಾಗಳು, ಜಾಲರಿ, ಕಲ್ಲು ಗಂಟೆಗಳು...ಹೀಗೆ 20,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಕೆಂಪು ಮರಳುಗಲ್ಲಿನ ಕಟ್ಟಡದಲ್ಲಿ ಅರಮನೆಯ ಎಲ್ಲ ವೈಭವಗಳೂ ಇವೆ.

ಅರಮನೆಯಂತೆ ಕಾಣುತ್ತಿದೆ ಎಂದ ಮಾತ್ರಕ್ಕೆ ಅದರೊಳಗಿನ ನಿವಾಸಿಯನ್ನು ಅರಸ ಎಂದು ಹೇಳುವ ಹಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸನಿಗೆ ಜಾಗ ಇಲ್ಲ. ಅಲ್ಲಿರುವವರು ಸಂವಿಧಾನದ ಮನೆಯ ಕಾವಲುಗಾರ. ಸಂವಿಧಾನದ ಪ್ರಕಾರ ರಾಷ್ಟ್ರಪತಿಯವರದು ಅತೀ ಉನ್ನತ, ಗೌರವಪೂರ್ಣ ಮತ್ತು ಪ್ರತಿಷ್ಠೆಯ ಸ್ಥಾನ. 

ಅವರೇ ಸರ್ಕಾರದ ಅಧಿಕೃತ ಯಜಮಾನರು. ಕೇಂದ್ರ ಸರ್ಕಾರದ ಕಾರ್ಯಾಂಗ ಅಧಿಕಾರದ ದಂಡವನ್ನು ಸಂವಿಧಾನ  ಅವರ ಕೈಗೆ ಕೊಟ್ಟಿದೆ. ಕೇಂದ್ರ ಸರ್ಕಾರ ಪ್ರತಿಯೊಂದು ನಿರ್ಧಾರವನ್ನು ರಾಷ್ಟ್ರಪತಿಯವರ ನಾಮಸ್ಮರಣೆಯೊಂದಿಗೆ ಕಾರ್ಯರೂಪಕ್ಕೆ ತರಬೇಕು. ಪ್ರಧಾನಮಂತ್ರಿಯನ್ನು ಮಾತ್ರವಲ್ಲ, ಪ್ರಧಾನಿ ಸಲಹೆ ಮೇರೆಗೆ ಸಚಿವರ ನೇಮಕಾ ಕೂಡಾ ಅವರದ್ದೇ ........

ರಾಷ್ಟ್ರಪತಿ ಸ್ಥಾನದ ಸುತ್ತಲಿನ ಈ ಪ್ರಭಾವಳಿ ಕಂಡು ಮೈಮರೆಯುವ ಮುನ್ನ ಸಂವಿಧಾನದ ಪುಟಗಳನ್ನು ತಿರುವಿಹಾಕಬೇಕು. `ಕೇಂದ್ರ ಸರ್ಕಾರ ತನ್ನ ಕಾರ್ಯಾಂಗ ಅಧಿಕಾರವನ್ನು ಸಂವಿಧಾನಕ್ಕೆ ಅನುಗುಣವಾಗಿ ರಾಷ್ಟ್ರಪತಿಯವರ ಮೂಲಕ ಕಾರ್ಯಗತಗೊಳಿಸಬೇಕು` ಎಂದು ಸಂವಿಧಾನ ಹೇಳಿದೆ. `

ರಾಷ್ಟ್ರಪತಿಗಳು ಸಚಿವ ಮಂಡಳಿಯ ನೆರವು ಮತ್ತು ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕು` ಎಂದು ಸಂವಿಧಾನದ 74 (1)ನೇ ಪರಿಚ್ಛೇದ ಹೇಳಿದೆ. `ರಾಷ್ಟ್ರಪತಿ ಸಂವಿಧಾನದ ಮುಖ್ಯಸ್ಥರಾದರೂ ಅವರು ಸಚಿವ ಮಂಡಳಿಯ ಸಲಹೆಯಂತೆಯೇ ಕಾರ್ಯನಿರ್ವಹಿಸಬೇಕಾಗುತ್ತದೆ` ಎಂದು ಸುಪ್ರೀಂಕೋರ್ಟ್ ಹಲವಾರು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ.

ಅಂದರೆ ರಾಷ್ಟ್ರಪತಿಗಳು ಆಡಳಿತಾರೂಢರ ಕೈಯಲ್ಲಿನ `ರಬ್ಬರ್ ಸ್ಟಾಂಪ್` ಎನ್ನುವ ಕೊಂಕುನುಡಿ ನಿಜವೇ? ಇದಕ್ಕೆ ಉತ್ತರ ರೈಸಿನಾಹಿಲ್‌ನ ನಿವಾಸಿಯಾದ ದೇಶದ ಪ್ರಥಮ ಪ್ರಜೆಯ ನಡೆ-ನುಡಿಯಲ್ಲಿದೆ. ಅರಸೊತ್ತಿಗೆಯಲ್ಲಿ ಸಿಂಹಾಸನವೇ ಮುಖ್ಯ, ಅದರ ಮೇಲೆ ಪಾದುಕೆಗಳನ್ನಿಟ್ಟುಬೇಕಾದರೂ ಬೇರೆಯವರು ರಾಜ್ಯಭಾರ ಮಾಡಬಹುದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗಲ್ಲ, ಇಲ್ಲಿ ಆಸನಕ್ಕೆ ಗೌರವ ಬರುವುದು ಆಸೀನರಾಗುವ ವ್ಯಕ್ತಿಯಿಂದ. ಸಾಂವಿಧಾನಿಕ ಹುದ್ದೆಗಳ ಹಕ್ಕು-ಬಾಧ್ಯತೆಗಳನ್ನು ಸಂವಿಧಾನದಲ್ಲಿ ಬಿಡಿಸಿ ಹೇಳಲಾಗಿಲ್ಲ. ಆ ಸ್ಥಾನದಲ್ಲಿ ಕೂರುವವರು ಇರುವ ನೀತಿ-ನಿಯಮಾವಳಿಗಳನ್ನು ತನ್ನ ವಿವೇಚನೆಯಿಂದ ಬಳಸಿಕೊಂಡು ವ್ಯಾಖ್ಯಾನಿಸಬೇಕಾಗುತ್ತದೆ. 

ಈ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗುವ ಪರಿಸ್ಥಿತಿಯನ್ನು ಪ್ರತಿಯೊಬ್ಬ ರಾಷ್ಟ್ರಪತಿಗಳು ಎದುರಿಸುತ್ತಾರೆ. ಈ ಕಾರ್ಯನಿರ್ವಹಣೆಯ ಮೇಲೆ ಇತಿಹಾಸದ ಪುಟಗಳಲ್ಲಿ ಅವರ ವ್ಯಕ್ತಿತ್ವದ ಚಿತ್ರಗಳು ದಾಖಲಾಗುತ್ತವೆ. ಎದುರಾದ ಬಿಕ್ಕಟ್ಟುಗಳನ್ನು ಮೀರಿ ನಿಂತವರೂ ಇದ್ದಾರೆ, ಜಾರಿಬಿದ್ದವರೂ ಇದ್ದಾರೆ.

ಭಾರತದ ರಾಷ್ಟ್ರಪತಿಗಳ ಹೆಸರಿನ ಕೆಳಗೆ ಎರಡು ಸಂದರ್ಭಗಳಲ್ಲಿ ಕೆಂಪುಗೆರೆ ಕಾಣಿಸಿಕೊಳ್ಳುತ್ತದೆ. ಮೊದಲನೆಯದು ಕೇಂದ್ರದಲ್ಲಿ ಚುನಾವಣೆಯ ನಂತರ ನಡೆಯುವ ಸರ್ಕಾರ ರಚನೆಯ ಪ್ರಕ್ರಿಯೆ, ಎರಡನೆಯದು ರಾಜ್ಯಗಳಲ್ಲಿನ ಚುನಾಯಿತ ಸರ್ಕಾರದ ವಿಸರ್ಜನೆ.

ರಾಜಕೀಯ ಪಿತೂರಿಯಿಂದಾಗಿ ಮೂರನೆ ಸಂದರ್ಭ ಕೂಡಾ ಸೃಷ್ಟಿಯಾಗುವುದುಂಟು. ಉದಾಹರಣೆಗೆ ಪ್ರಧಾನಿ ರಾಜೀವ್‌ಗಾಂಧಿಯವರನ್ನು ಕಿತ್ತುಹಾಕಲು ಆಗಿನ ರಾಷ್ಟ್ರಪತಿ ಜೈಲ್‌ಸಿಂಗ್ ಪ್ರಯತ್ನ.

ಮೊದಲಿನ ಎರಡೂ ಸಂದರ್ಭಗಳಲ್ಲಿಯೂ ರಾಷ್ಟ್ರಪತಿಗಳು ಅಸಹಾಯಕರೇನಲ್ಲ, ಅವರು ಕೇಂದ್ರಸರ್ಕಾರದ `ರಬ್ಬರ್ ಸ್ಟಾಂಪ್` ಆಗಿಯೇ ಕಾರ್ಯನಿರ್ವಹಿಸಬೇಕಾದ ಅಗತ್ಯವೂ ಇಲ್ಲ. ಚುನಾವಣೆಯ ನಂತರ ಕೇಂದ್ರದಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸರ್ವಸ್ವತಂತ್ರರು. 

ಆಗ ಅವರಿಗೆ ಸಲಹೆ ನೀಡುವ ಮೂಲಕ ಪರೋಕ್ಷವಾಗಿ ನಿಯಂತ್ರಿಸುವ ಸಚಿವಮಂಡಳಿ ಅಸ್ತಿತ್ವದಲ್ಲಿ ಇಲ್ಲದೆ ಇರುವ ಕಾರಣ ಅವರ ಮೇಲೆ ಶಾಸಕಾಂಗದ ಒತ್ತಡ ಇರುವುದಿಲ್ಲ. ಮೈತ್ರಿಕೂಟದ ಇಂದಿನ ಹೊಸ ರಾಜಕೀಯ ಯುಗದಲ್ಲಿ ಇದೊಂದು ದೊಡ್ಡ ಸವಾಲು. ಆದರೆ ಇದನ್ನು ಎದುರಿಸಿದವರೆಲ್ಲರೂ ನಿರಾಶೆಗೊಳಿಸಿಲ್ಲ.

1996ರಲ್ಲಿ ಸ್ಪಷ್ಟ ಬಹುಮತ ಹೊಂದಿಲ್ಲದ ಅಟಲಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚನೆಗೆ ಅವಕಾಶ ನಿರಾಕರಿಸಲು ಕಾರಣಗಳಿದ್ದವು. ಆಗಿನ ರಾಷ್ಟ್ರಪತಿ ಶಂಕರದಯಾಳ್ ಶರ್ಮ ಹಾಗೆ ನಡೆದುಕೊಂಡಿದ್ದರೆ ಅವರೊಬ್ಬ `ಕಾಂಗ್ರೆಸ್ ಏಜಂಟ್` ಎಂಬ ಆರೋಪ ಖಂಡಿತ ಕೇಳಿಬರುತ್ತಿತ್ತು. ಅವರು ಹಾಗೆ ಮಾಡದೆ ಅವಕಾಶ ನೀಡಿದರೂ ವಾಜಪೇಯಿ ನೇತೃತ್ವದ ಸರ್ಕಾರ ಹದಿಮೂರು ದಿನಗಳಲ್ಲಿಯೇ ಪತನಗೊಂಡಿತ್ತು. 

ಅದರ ನಂತರ ಹದಿಮೂರು ತಿಂಗಳ ಕಾಲ ಪ್ರಧಾನಿಯಾದ ವಾಜಪೇಯಿ ಅವರು ಸರ್ಕಾರ ರಚನೆಯ ಅವಕಾಶ ಕೋರಿದಾಗಲೂ ನಿರಾಕರಿಸಲು ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಬಳಿಯೂ ಕಾರಣಗಳಿದ್ದವು. 

`ಆ ಸಂದರ್ಭದ ರಾಜಕೀಯ ಮೈತ್ರಿಯಿಂದ ಸುಭದ್ರ ಸರ್ಕಾರ ರಚನೆ ಸಾಧ್ಯ ಇಲ್ಲ` ಎಂದು ಹೇಳಿ ಅವಕಾಶ ನಿರಾಕರಿಸಬಹುದಿತ್ತು. ಅವರೂ ಹಾಗೆ ಮಾಡದೆ ಅವಕಾಶ ನೀಡಿದರು. `ಅಭದ್ರತೆಯ ಭೀತಿ` ನಿಜ ಎಂಬಂತೆ ಕೊನೆಗೆ ಎಡಿಎಂಕೆ ನಾಯಕಿ ಜೆ.ಜಯಲಲಿತಾ ಬೆಂಬಲ ವಾಪಸು ಪಡೆದು ಸರ್ಕಾರ ಉರುಳಿಸಿದ್ದರು. 

ಅದೇ ನಾರಾಯಣನ್ ಪೂರ್ವಾಶ್ರಮದಲ್ಲಿ ಅಪ್ಪಟ ಕಾಂಗ್ರೆಸಿಗರೇ ಆಗಿದ್ದರೂ ಸೋನಿಯಾಗಾಂಧಿ 272 ಸದಸ್ಯರ ಬೆಂಬಲ ತಮಗಿದೆ ಎಂದು ಹೇಳಿದ್ದನ್ನು ಒಪ್ಪಿಕೊಂಡಿರಲಿಲ್ಲ ಎನ್ನುವುದು ಗಮನಾರ್ಹ.

ರಾಷ್ಟ್ರಪತಿಗಳ ತಲೆಮೇಲೆ ಸದಾ ತೂಗುತ್ತಿರುವ ಇನ್ನೊಂದು ವಿವಾದದ ಕತ್ತಿ-ಸಂವಿಧಾನದ 356ನೇ ಪರಿಚ್ಛೇದದ ಮೂಲಕ ನಡೆಯುವ ವಿಧಾನಸಭೆಗಳ ವಿಸರ್ಜನೆ. ಸ್ವತಂತ್ರಭಾರತದಲ್ಲಿ ನೂರಕ್ಕೂ ಹೆಚ್ಚು ಬಾರಿ ಈ ಅಸ್ತ್ರದ ಪ್ರಯೋಗ ನಡೆದಿದೆ.ಕೇಂದ್ರದ ಆಡಳಿತಾರೂಢ ಪಕ್ಷ ರಾಜಭವನದಲ್ಲಿ ಕೂರಿಸಿರುವ `ಕೈಗೊಂಬೆ` ರಾಜ್ಯಪಾಲರ ಮೂಲಕ ವರದಿಗಳನ್ನು ತರಿಸಿ ರಾತೋರಾತ್ರಿ ರಾಜ್ಯಸರ್ಕಾರಗಳನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಉದಾಹರಣೆಗಳಿವೆ. 

ಇಂತಹ ಸಂದರ್ಭಗಳಲ್ಲಿ ಈಗಿನ ರಾಷ್ಟ್ರಪತಿಗಳು ಹಿಂದಿನವರಷ್ಟು ಅಸಹಾಯಕರಲ್ಲ. ಜನತಾ ಸರ್ಕಾರ 1978ರಲ್ಲಿ ಸಂವಿಧಾನದ 74ನೇ ಪರಿಚ್ಛೇದಕ್ಕೆ ಮಾಡಿದ 44ನೆ ತಿದ್ದುಪಡಿಯಿಂದಾಗಿ ರಾಷ್ಟ್ರಪತಿಗಳು ಸಚಿವ ಸಂಪುಟದ ತೀರ್ಮಾನವನ್ನು ಮೊದಲ ಬಾರಿ ತಿರಸ್ಕರಿಸಬಹುದು. ಆದರೆ ಸಚಿವ ಸಂಪುಟ ಮತ್ತೊಂದು ಬಾರಿ ಅಂಗೀಕರಿಸಿ ಕಳುಹಿಸಿದರೆ ಒಪ್ಪಿಗೆಯ ಮುದ್ರೆ ಒತ್ತುವುದು ಅನಿವಾರ್ಯ.

ಈ ತಿದ್ದುಪಡಿಯನ್ನು ಬಳಸಿಕೊಂಡು ತನ್ನ ಅಧಿಕಾರವನ್ನು ಮೊದಲು ಚಲಾಯಿಸಿದ್ದು ರಾಷ್ಟ್ರಪತಿ ಕೆ.ಆರ್.ನಾರಾಯಣನ್. ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ಸರ್ಕಾರದ ವಿಸರ್ಜನೆಗೆ ಐ.ಕೆ.ಗುಜ್ರಾಲ್ ಸರ್ಕಾರ ಮಾಡಿದ್ದ ತೀರ್ಮಾನವನ್ನು ಅವರು ತಿರಸ್ಕರಿಸಿದ್ದರು. ಮರುವರ್ಷ ವಾಜಪೇಯಿ ಸಂಪುಟ ಬಿಹಾರದ ಲಾಲುಯಾದವ್ ಸರ್ಕಾರದ ವಿಸರ್ಜನೆಗೆ ಕೈಗೊಂಡ ತೀರ್ಮಾನವನ್ನು ಕೂಡಾ ಅವರು ಒಪ್ಪಿಕೊಳ್ಳಲಿಲ್ಲ. 

ಎರಡೂ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಎರಡನೆ ಬಾರಿಗೆ ತನ್ನ ತೀರ್ಮಾನವನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುವ ಹಟಮಾರಿ ಧೋರಣೆ ತೋರಿಸದೆ ದೇಶದ ಪ್ರಥಮ ಪ್ರಜೆಯ ಗೌರವಕ್ಕೆ ಕುಂದುಬರದಂತೆ ನೋಡಿಕೊಂಡಿತ್ತು.

ಪೂರ್ವಾಶ್ರಮದಲ್ಲಿ ರಾಜಕಾರಣಿಗಳಲ್ಲದ ರಾಷ್ಟ್ರಪತಿಗಳು ತೋರಿದ ಈ ದಿಟ್ಟತನವನ್ನು ರಾಜಕಾರಣಿಯಲ್ಲದ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ತೋರಲಿಲ್ಲ. ರಾಷ್ಟ್ರಪತಿ ಸ್ಥಾನದ ಘನತೆ ಉಳಿಸಿಕೊಂಡೇ ಸಾಮಾನ್ಯರನ್ನು ತಲುಪುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದ ಕಲಾಂ ಅವರು ತಾನು ಕೂತ ಕುರ್ಚಿಯ ನಿಜವಾದ ಕರ್ತವ್ಯ ನಿರ್ವಹಿಸುವಾಗ ಮಾತ್ರ ಎಡವಿಬಿದ್ದಿದ್ದರು. 

2005ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ರಾಷ್ಟ್ರಪತಿಗಳ ಆಳ್ವಿಕೆ ಹೇರಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ ಎನ್‌ಡಿಎ ಸರ್ಕಾರ ರಚಿಸಲು ಮುಂದಾದಾಗ ಅಲ್ಲಿ ರಾಜ್ಯಪಾಲರಾಗಿದ್ದ ಬೂಟಾಸಿಂಗ್ ವಿಧಾನಸಭೆಯ ವಿಸರ್ಜನೆಗೆ ಶಿಫಾರಸು ಮಾಡಿದ್ದರು.

ಇದನ್ನು ಅಷ್ಟೇ ಅವಸರದಲ್ಲಿ ಮಧ್ಯರಾತ್ರಿಯ ಸಭೆಯಲ್ಲಿ ಪರಿಶೀಲಿಸಿ ಕೇಂದ್ರ ಸಚಿವ ಸಂಪುಟ ನೀಡಿದ ಒಪ್ಪಿಗೆಗೆ ಅಬ್ದುಲ್ ಕಲಾಂ ಅವರು ದೂರದ ರಷ್ಯಾದಲ್ಲಿಯೇ ಕೂತು ಅಂಕಿತ ಹಾಕಿಬಿಟ್ಟಿದ್ದರು. ಈ ನಿರ್ಧಾರವನ್ನು ನಂತರದ ದಿನಗಳಲ್ಲಿ ಸುಪ್ರೀಂಕೋರ್ಟ್  ಅಕ್ರಮ ಎಂದು ಸಾರಿತ್ತು. ಇದು ಕಲಾಂ ಅವರ ಅಧಿಕಾರವಧಿಯ ಕಪ್ಪು ಚುಕ್ಕೆ.

ಸಂವಿಧಾನದ ರಚನೆಕಾರರಿಗೆ ಉಳಿದೆಲ್ಲ ಸಾಂವಿಧಾನಿಕ ಹುದ್ದೆಗಳಂತೆ ರಾಷ್ಟ್ರಪತಿ ಕೂಡಾ ಭವಿಷ್ಯದಲ್ಲಿ ಎದುರಿಸಬಹುದಾದ ಸವಾಲುಗಳ ನಿರೀಕ್ಷೆ ಇರಲಿಲ್ಲ. ಈ ಕಾರಣದಿಂದಾಗಿಯೇ ಆ ಹುದ್ದೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲು ಹೋಗದೆ ಗೌರವದ ಸ್ಥಾನ ನೀಡಿ ಸುಮ್ಮನಾಗಿದ್ದರು. ಏಕಪಕ್ಷದ ಆಳ್ವಿಕೆಯ ಬಿಗಿ ಸಡಿಲುಗೊಂಡು ಮೈತ್ರಿಕೂಟಗಳು ರಾಜಕೀಯದ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಿದ್ದಂತೆಯೇ ರಾಷ್ಟ್ರಪತಿಗಳ ಮುಂದಿನ ಸವಾಲುಗಳು ಇನ್ನಷ್ಟು ಕಠಿಣವಾಗತೊಡಗಿವೆ. 

`ರಾಷ್ಟ್ರಪತಿ ಸ್ಥಾನ ಎನ್ನುವುದು `ತುರ್ತುಕಾಲದ ದೀಪ` ಇದ್ದ ಹಾಗೆ, ಬಿಕ್ಕಟ್ಟು ಉದ್ಭವವಾದಾಗ ಅದು ತನ್ನಿಂದ ತಾನೆ ಹತ್ತಿಕೊಳ್ಳುತ್ತದೆ. ಅದು ನಿವಾರಣೆಯಾಗುತ್ತಿದ್ದ ಹಾಗೆ ಆರಿಹೋಗುತ್ತದೆ` ಎಂದು ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಹೇಳಿದ್ದರು. ಆದರೆ ಮೈತ್ರಿಕೂಟಗಳ ಯುಗದಲ್ಲಿ ರಾಷ್ಟ್ರಪತಿಗಳ ಸ್ಥಾನ ಕೇವಲ `ತುರ್ತುಕಾಲದ ದೀಪ`ವಾಗಿ ಉಳಿದಿಲ್ಲ. ಇದು ನಿತ್ಯ ಉರಿಯುತ್ತಲೇ ಇರಬೇಕಾದ `ದೀಪ`ವಾಗಿ ಹೋಗಿದೆ.

 ರಾಜಕೀಯ ವಿವಾದದ ಗಾಳಿಗೆ ಸಿಕ್ಕಿ ಸಂವಿಧಾನದ ಈ  `ದೀಪ` ಆರಿಹೋಗದಂತೆ ಕಾಪಾಡಬೇಕಾದರೆ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಸ್ವತಂತ್ರವಾಗಿ ಎದುರಿಸುವ ರೀತಿಯಲ್ಲಿ ರಾಷ್ಟ್ರಪತಿ ಸ್ಥಾನವನ್ನು ಬಲಪಡಿಸಬೇಕು. ಇದರ ಜತೆಯಲ್ಲಿ ರಾಷ್ಟ್ರಪತಿಗಳು  ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. 

ಇಂತಹದ್ದೊಂದು ವಿವಾದಕ್ಕೆ  ಪ್ರಣವ್ ಮುಖರ್ಜಿ ಅವರೇ ಕಾರಣವಾಗಿದ್ದರು ಎನ್ನುವುದನ್ನು ಇತಿಹಾಸದ ಪುಟಗಳು ಹೇಳುತ್ತಿವೆ. ರಾಷ್ಟ್ರಪತಿಯವರ ಸಾವಿನ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದು ಹೇಗೆ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಆದರೆ ಪ್ರಧಾನಿ ಅನಿರೀಕ್ಷಿತವಾಗಿ ಸಾವಿಗೀಡಾದಾಗ ಏನು ಮಾಡಬೇಕು ಎಂಬ ಪ್ರಶ್ನೆಗೆ ಸಂವಿಧಾನದಲ್ಲಿ ಉತ್ತರ ಇಲ್ಲ. 

ಈ ಕಾರಣದಿಂದಾಗಿಯೇ ಪ್ರಧಾನಿ ಇಂದಿರಾಗಾಂಧಿ ಹತ್ಯೆ ನಡೆದಾಗ ರಾಷ್ಟ್ರಪತಿ ಜೈಲ್‌ಸಿಂಗ್ ಅವರು ರಾಜೀವ್‌ಗಾಂಧಿಯವರನ್ನು ನೇರವಾಗಿ ಪ್ರಧಾನಿಯಾಗಿ ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. `ರಾಷ್ಟ್ರಪತಿಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಧಾರಕ್ಕಾಗಿ ಕಾಯಬೇಕಾಗಿತ್ತು, ಅಲ್ಲಿಯ ವರೆಗೆ ಸಂಪುಟದ ಅತ್ಯಂತ ಹಿರಿಯ ನಾಯಕನನ್ನು ಉಸ್ತುವಾರಿ ಪ್ರಧಾನಿಯಾಗಿ ನೇಮಿಸಬಹುದಿತ್ತು....`ಎಂಬೀತ್ಯಾದಿ ಟೀಕೆಗಳು ಆ ಕಾಲದಲ್ಲಿ ಕೇಳಿಬಂದಿದ್ದವು. 

ಆ ಟೀಕೆಗೆ  ಪ್ರಣವ್ ಮುಖರ್ಜಿ ಅವರು ರಾಜೀವ್‌ಗಾಂಧಿಯವರಿಗೆ ನೀಡಿದ್ದ ಸಲಹೆ ಪ್ರೇರಣೆಯಾಗಿತ್ತು.ಇಂದಿರಾಗಾಂಧಿಯವರ ಹತ್ಯೆ ನಡೆದಾಗ ಕೊಲ್ಕೊತ್ತಾ ಪ್ರವಾಸದಲ್ಲಿದ್ದ ರಾಜೀವ್‌ಗಾಂಧಿಯವರ ಜತೆಯಲ್ಲಿದ್ದ ಪ್ರಣವ್ ಮುಖರ್ಜಿ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಈ ಸಲಹೆ ನೀಡಿದ್ದರು. 

ಆ ಕಾಲದಲ್ಲಿ ಸಂಪುಟದ ಅತ್ಯಂತ ಹಿರಿಯ ನಾಯಕ ಪ್ರಣವ್ ಅವರೇ ಆಗಿದ್ದ ಕಾರಣ ಆ ಸಲಹೆಯನ್ನು ರಾಜೀವ್‌ಗಾಂಧಿ ತಪ್ಪಾಗಿ ಅರ್ಥಮಾಡಿಕೊಂಡಿದ್ದರು. ಈ ತಪ್ಪುತಿಳುವಳಿಕೆ ಅಂತಿಮವಾಗಿ ಪ್ರಣವ್ ಮುಖರ್ಜಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಪ್ರತ್ಯೇಕ ಪಕ್ಷ ಸ್ಥಾಪನೆಗೆ ಕಾರಣವಾಗಿತ್ತು. 

ಈಗ ಅವರೇ ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್‌ಪಕ್ಷದ ಅಧಿಕೃತ ಅಭ್ಯರ್ಥಿ. ರಾಷ್ಟ್ರಪತಿ ಸ್ಥಾನದ ಮಹತ್ವವನ್ನು ಅರಿತಿರುವ ಪ್ರಣವ್ ಮುಖರ್ಜಿ `ರಬ್ಬರ್ ಸ್ಟಾಂಪ್` ಆಗಲಾರರೆಂದೇ ಎಲ್ಲರ ನಿರೀಕ್ಷೆ. ಇದು ಕಾಂಗ್ರೆಸ್ ಪಕ್ಷದ ಭೀತಿ ಕೂಡಾ ಆಗಿರಬಹುದು.

ನರೇಂದ್ರಮೋದಿ ಅವರಿಂದ ಬಿಜೆಪಿ ಅಪಹರಣ June 11, 2012

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಬ್ಬ ಆದರ್ಶ ಸ್ವಯಂಸೇವಕನಿಂದ ಬಯಸುವ ಎಲ್ಲ ಗುಣಗಳು ಸಂಜಯ್ ಜೋಷಿ ಅವರಲ್ಲಿವೆ.  ಆರ್‌ಎಸ್‌ಎಸ್ ಸಿದ್ಧಾಂತವನ್ನು ಮೂರುಹೊತ್ತು ಉಸಿರಾಡುತ್ತಿರುವ ಜೋಷಿ ಒಬ್ಬ ಸರಳ, ಪ್ರಾಮಾಣಿಕ, ಸಮರ್ಥ, ಸಜ್ಜನ ವ್ಯಕ್ತಿ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ, ಪ್ರಚಾರದ ಹಪಾಹಪಿ ಇಲ್ಲದ,  ಗಂಟೆ-ದಿನಗಳನ್ನು ಲೆಕ್ಕಿಸದೆ ಕೆಲಸ ಮಾಡಬಲ್ಲ ಶ್ರಮಜೀವಿ. 

ಆರ್‌ಎಸ್‌ಎಸ್ ಸಿದ್ಧಾಂತವನ್ನು ಒಪ್ಪದವರು ಸೈದ್ಧಾಂತಿಕವಾಗಿ ಅವರೊಡನೆ ನೂರೆಂಟು ತಕರಾರುಗಳನ್ನು ತೆಗೆಯಬಹುದು. ಆದರೆ ಆರ್‌ಎಸ್‌ಎಸ್ ನುಡಿದಂತೆಯೇ ನಡೆಯುವಂತಿದ್ದರೆ ಅದಕ್ಕೆ ಜೋಷಿ ಅವರಲ್ಲಿ ಎಳ್ಳುಕಾಳಿನಷ್ಟು ದೋಷ ಕಾಣಿಸಬಾರದಿತ್ತು.

ಆಗಿರುವುದೇನು?  ಬಿಜೆಪಿ ತೀರಾ ಅವಮಾನಕಾರಿಯಾಗಿ ಜೋಷಿ ಅವರನ್ನು ಹೊರಹಾಕಿದಾಗ ಸ್ವಯಂಸೇವಕರಿಗೆ ಆದರ್ಶದ ಪಾಠ ಹೇಳುತ್ತಿರುವ ಆರ್‌ಎಸ್‌ಎಸ್ ತನ್ನೊಬ್ಬ ಆದರ್ಶಸ್ವರೂಪಿ ಪ್ರಚಾರಕನಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿಯೂ ನೋಡದವರಂತೆ ಕಣ್ಣುಮುಚ್ಚಿಕೊಂಡು ಅವರ ವಿರೋಧಿಗಳ ಜತೆ ಶಾಮೀಲಾಗಿದೆ.

2005ರ ಡಿಸೆಂಬರ್‌ನ ಕೊನೆ ವಾರದಲ್ಲಿ  ಭಾರತೀಯ ಜನತಾ ಪಕ್ಷಕ್ಕೆ ಇಪ್ಪತ್ತೈದು ತುಂಬಿದಾಗ ಐದು ದಿನಗಳ ರಜತ ಜಯಂತಿಯನ್ನು ಮುಂಬೈನಲ್ಲಿ ಆಚರಿಸಲಾಗಿತ್ತು. ಅದನ್ನು ವರದಿಮಾಡಲೆಂದು ಹೋಗಿದ್ದ ನಾನು  ಬೆಳಿಗ್ಗೆ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತಿದ್ದಾಗ ಯುವಕನೊಬ್ಬ ಬಂದು ಮಡಚಿದ್ದ ಬಿಳಿಹಾಳೆಯನ್ನು ಕೈಗಿತ್ತು ಮಾಯವಾಗಿ ಹೋದ. 

ಪಕ್ಷದ ಹೇಳಿಕೆ ಇರಬಹುದೆಂದು ಬಿಡಿಸಿ ನೋಡಿದರೆ ಅದು `ಸಂಜಯ್ ಜೋಷಿ ಅವರು ನನ್ನ ಜತೆ ಲೈಂಗಿಕ ಸಂಬಂಧ ಹೊಂದಿದ್ದರು....` ಎಂದು ಆರೋಪಿಸಿ ಮಹಿಳೆಯೊಬ್ಬರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ್ದ ದೂರಿನ ಪ್ರತಿ. 

ಆಶ್ಚರ್ಯದಿಂದ ಅಕ್ಕಪಕ್ಕ ನೋಡಿದರೆ ಅಂತಹ ಪ್ರತಿಗಳು ಇನ್ನೂ ಕೆಲವರ ಕೈಯಲ್ಲಿದ್ದವು. ಕೆಲವು ಪತ್ರಕರ್ತರಂತೂ ಮೊದಲೇ ಗೊತ್ತಿದ್ದವರಂತೆ `ಸಿಡಿ ಹೈ, ದೇಖ್ ನ ಹೈ ಕ್ಯಾ?` ಎಂದು ಕಣ್ಣುಮಿಟುಕಿಸತೊಡಗಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಸಂಜಯ್ ಜೋಷಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುದ್ದಿ ಹೊರಬಿತ್ತು. ಪಕ್ಷದ ಬೆಳ್ಳಿಹಬ್ಬದ ಸಂಭ್ರಮ ಸಿ.ಡಿ ಹಗರಣದಲ್ಲಿ ಕರಗಿ ಹೋಗಿತ್ತು. 

ಇದು ಯಾರ ಕೈವಾಡ ಎನ್ನುವ ಚರ್ಚೆ ಅಲ್ಲಿ ನಡೆದಿದ್ದಾಗ ಕೇಳಿಬಂದ ಮೊದಲ ಹೆಸರು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರದ್ದು. ನಂತರದ ದಿನಗಳಲ್ಲಿ ಪೊಲೀಸರು ತನಿಖೆ ನಡೆಸಿ ಅದು ನಕಲಿ ಸಿ.ಡಿ. ಎಂದು ತೀರ್ಮಾನಕ್ಕೆ ಬಂದರು. ಆ ಸಿ.ಡಿ.ಯನ್ನು ಗುಜರಾತ್ ಪೊಲೀಸರು ವಿತರಿಸಿದ್ದರು ಎನ್ನುವುದು ಕೂಡಾ ಬಯಲಾಯಿತು. 

ಆದರೆ ಅದರ ಹಿಂದಿರುವ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. (ಗುಜರಾತ್‌ನಲ್ಲಿ ನಡೆದ ನರಮೇಧ ಮತ್ತು ಹರೇನ್ ಪಾಂಡ್ಯ ಹತ್ಯೆಯ ರೂವಾರಿ ಯಾರೆಂಬ ಪ್ರಶ್ನೆಯ ಹಾಗೆ). 

ಅವಮಾನದಿಂದ ಕುಗ್ಗಿಹೋಗಿ ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಸಂಜಯ್ ಜೋಷಿ ತನ್ನ ಮೇಲಿನ ಆರೋಪದಿಂದ ಮುಕ್ತರಾದ ನಂತರ ಮತ್ತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಆಗ ಮತ್ತೆ  ಬುಸುಗುಟ್ಟತೊಡಗಿದ್ದವರು ನರೇಂದ್ರ ಮೋದಿ. 

ಈ ಬಾರಿ ಪಕ್ಷವನ್ನೇ ತನ್ನ ಬೇಕು-ಬೇಡಗಳಿಗೆ ಒಪ್ಪುವ ಹಾಗೆ ಕುಣಿಸುವಷ್ಟು ಬೆಳೆದಿರುವ ಮೋದಿ ನೇರ ಕಾರ್ಯಾಚರಣೆಯಲ್ಲಿ ಜೋಷಿ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಮೋದಿ ಮತ್ತು ಜೋಷಿ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಆರ್‌ಎಸ್‌ಎಸ್ ಪ್ರವೇಶಿಸಿದವರು. 

ಗುಜರಾತ್‌ನಲ್ಲಿ ಇಂದು ಬಿಜೆಪಿ ಭದ್ರವಾಗಿ ಬೇರೂರಿದ್ದರೆ ಅದಕ್ಕೆ ಮೋದಿ ಅವರಂತೆ ಜೋಷಿಯವರೂ ಕಾರಣ. 2001ರಲ್ಲಿ ಕೇಶುಭಾಯಿ ಪಟೇಲ್ ಪದಚ್ಯುತಿಯಾದ ನಂತರ  ಗುಜರಾತ್ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಮೊದಲು ಮಾಡಿದ ಕೆಲಸ ಸಂಜಯ್ ಜೋಷಿ ಅವರನ್ನು ರಾಜ್ಯದಿಂದ ಹೊರಹಾಕಿದ್ದು. ಆಗಲೂ ಮೋದಿ ಒತ್ತಡಕ್ಕೆ ಮಣಿದ ಬಿಜೆಪಿ ಜೋಷಿ ಅವರನ್ನು ಗುಜರಾತ್‌ನಿಂದ ಕರೆಸಿಕೊಂಡು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತ್ತು.

ಬಿಜೆಪಿಯ ಈಗಿನ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಸಂಜಯ್ ಜೋಷಿ ಇಬ್ಬರದ್ದೂ ಒಂದೇ ಊರು. ನಾಗಪುರದಲ್ಲಿ ಇಬ್ಬರೂ ಜತೆಯಲ್ಲಿ ಆರ್‌ಎಸ್‌ಎಸ್ ಶಾಖೆಗೆ ಹೋಗುವ ಮೂಲಕ ಪರಿವಾರ ಸೇರಿದವರು. ಇಬ್ಬರು ಬೆಳೆಯುತ್ತಾ ಹೋದಂತೆ ಹಿಡಿದ ದಾರಿ ಮಾತ್ರ ಎಂದೂ ಪರಸ್ಪರ ಸಂಧಿಸಲು ಸಾಧ್ಯ ಇಲ್ಲದ್ದು.

ಮೊನ್ನೆಮೊನ್ನೆವರೆಗೆ ಜೋಷಿ ಅವರ ಬೆಂಬಲಕ್ಕೆ ನಿಂತಿದ್ದ ಪಕ್ಕಾ ವ್ಯಾಪಾರಿಯಂತೆ ಕಾಣುವ ಗಡ್ಕರಿ  ಇದ್ದಕ್ಕಿದ್ದಂತೆ ಬಾಲ್ಯದ ಗೆಳೆಯನ ಕೈಬಿಟ್ಟು ಮೋದಿ ಜತೆ ಸೇರಿಕೊಂಡಿದ್ದಾರೆ. ಆರ್‌ಎಸ್‌ಎಸ್‌ಭೀಷ್ಮಾಚಾರ್ಯರೆಲ್ಲ  `ಹಿಂದೂ ಹೃದಯ ಸಾಮ್ರಾಟ`ನ ಆದೇಶಕ್ಕೆ ತಲೆಯಾಡಿಸುತ್ತಾಕೂತಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿಣಿ ನಂತರದ ಬೆಳವಣಿಗೆಗಳನ್ನು ನೋಡಿದರೆ ಪಕ್ಷದ ಏಕಮೇವಾದ್ವಿತಿಯ ನಾಯಕನಾಗಿ ನರೇಂದ್ರಮೋದಿ  ಉದಯಿಸಿರುವ ಹಾಗೆ ಕಾಣುತ್ತಿದೆ. `ಮೋದಿ ಅವರೇ ಮುಂದಿನ ಪ್ರಧಾನಿ` ಎಂದು ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗುವ ಮೊದಲೇ ಅವರ ಅಭಿಮಾನಿ ಬಳಗ ಜಯಘೋಷ ಮಾಡುತ್ತಿದೆ. 

ವಿಚಿತ್ರವೆಂದರೆ ಈ ಸಂಭ್ರಮ-ಸಡಗರ ಮೋದಿ ಅವರ ಪಕ್ಷದ ಇಲ್ಲವೇ, ಆರ್‌ಎಸ್‌ಎಸ್, ವಿಎಚ್‌ಪಿ, ಎಬಿವಿಪಿ, ಎಚ್‌ಎಂಎಸ್‌ನ ನಾಯಕರ ಮುಖಗಳಲ್ಲಿ ಕಾಣುತ್ತಿಲ್ಲ. ಮೋದಿ ಅವರ ಬಹುಕಾಲದ ವಿರೋಧಿಗಳಾಗಿರುವ ಕೇಶುಭಾಯಿ ಪಟೇಲ್, ಸುರೇಶ್‌ಮೆಹ್ತಾ, ರಾಣಾ ಮೊದಲಾದವರು ರಾಜ್ಯದಲ್ಲಿ ಮತ್ತೆ ಬಂಡೆದ್ದಿದ್ದಾರೆ. 

ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮೊದಲಾದವರು ಬಹಿರಂಗವಾಗಿ ಮೋದಿ ಅವರ ನಡವಳಿಕೆಯನ್ನು ವಿರೋಧಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರು ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ನಿತಿನ್ ಗಡ್ಕರಿ ಕಾರ್ಯಶೈಲಿಯನ್ನು ಟೀಕಿಸಿದ್ದರೂ ಅವರ ಬಾಣದ ಗುರಿ ನರೇಂದ್ರಮೋದಿಯವರೇ ಆಗಿದ್ದಾರೆ.

ಸಂಘ ಪರಿವಾರ ಎನ್ನುವುದು ಈಗ ಒಡೆದ ಮನೆ. ಬಿಜೆಪಿಯ ಮುಖವಾಣಿ ಪತ್ರಿಕೆಯಾದ `ಕಮಲ ಸಂದೇಶ`ದಲ್ಲಿ ಮೋದಿ ವಿರುದ್ಧ ಲೇಖನ ಪ್ರಕಟವಾಗಿದ್ದರೆ, ಆರ್‌ಎಸ್‌ಎಸ್ ಮುಖವಾಣಿ `ಆರ್ಗನೈಸರ್` ಪತ್ರಿಕೆಯಲ್ಲಿ ಮೋದಿ ಅವರನ್ನು ಅಟಲಬಿಹಾರಿ ವಾಜಪೇಯಿ ಅವರಿಗೆ ಹೋಲಿಸಿ ಹೊಗಳಿ ಬರೆಯಲಾಗಿದೆ.

ನಿಯಂತ್ರಣ ಮೀರಿ ಬೆಳೆಯುತ್ತಿರುವ ಮೋದಿ ಬಗ್ಗೆ ಆರ್‌ಎಸ್‌ಎಸ್ ನಾಯಕರಲ್ಲಿಯೂ ಅಸಮಾಧಾನ ಇದೆ. ಅನುಯಾಯಿಗಳ ಒತ್ತಡದಿಂದಾಗಿ ಅವರೂ ತುಟಿ ಬಿಚ್ಚಲಾರರು. ಬಿಜೆಪಿ ಮೂಲಕ ಅಧಿಕಾರದ ರುಚಿ ಕಂಡಿರುವ ಆರ್‌ಎಸ್‌ಎಸ್ ನಾಯಕರು ಇತ್ತೀಚಿನ ವರ್ಷಗಳಲ್ಲಿ ಬದಲಾಗಿ ಹೋಗಿದ್ದಾರೆ. 

ಆದರೆ ಸಂಘ ಸಾರುತ್ತಿದ್ದ ಹಿಂದುತ್ವದ ಮೂಲಸಿದ್ಧಾಂತಕ್ಕೆ ಈಗಲೂ ಬದ್ಧವಾಗಿರುವ ಅನುಯಾಯಿಗಳ ಒಂದು ವರ್ಗ ಮೋದಿ ಅವರಲ್ಲಿಯೇ ಭವಿಷ್ಯದ ನಾಯಕನನ್ನು ಕಾಣತೊಡಗಿದೆ. 

ಇದರಿಂದಾಗಿ ತಮ್ಮ ಮೇಲೆ ಸವಾರಿ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರ ಬಗ್ಗೆ ಎಷ್ಟೇ ಅಸಮಾಧಾನ ಇದ್ದರೂ ಆರ್‌ಎಸ್‌ಎಸ್ ಅನಿವಾರ್ಯವಾಗಿ ಮೋದಿ ಅವರನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ.

ನರೇಂದ್ರ ಮೋದಿಯವರು ಹೊಸದೇನನ್ನೂ ಮಾಡಲು ಹೊರಟಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿಯೇ ಮಾಡಿದ್ದನ್ನು ಈಗ ರಾಷ್ಟ್ರಮಟ್ಟದಲ್ಲಿ ಮಾಡಲು ಹೊರಟಿದ್ದಾರೆ.

ಮುಖ್ಯಮಂತ್ರಿಯಾದ ನಂತರ ನರೇಂದ್ರ ಮೋದಿ ಗುಜರಾತ್‌ನಲ್ಲಿ ಮೊದಲು ಮಾಡಿದ್ದು ವಿಶ್ವಹಿಂದೂ ಪರಿಷತ್, ಎಚ್‌ಎಂಎಸ್, ಎಬಿವಿಪಿ ಮೊದಲಾದ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿದ್ದು. ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಈಗಲೂ ತನ್ನ ಹುಟ್ಟೂರಿನಲ್ಲಿಯೇ ತುಟಿಬಿಚ್ಚುವಂತಿಲ್ಲ.

ಎಲ್.ಕೆ.ಅಡ್ವಾಣಿ ಅವರು ಈಗ ಗುಡುಗುತ್ತಿದ್ದರೂ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಮೋದಿ ಹಿತರಕ್ಷಕನಾಗಿಯೇ ಕೆಲಸ ಮಾಡಿದ್ದು. `ರಾಜಧರ್ಮ` ಪಾಲಿಸುವಂತೆ ವಾಜಪೇಯಿ ಕರೆಕೊಟ್ಟ ನಂತರ ಇನ್ನೇನು ಮೋದಿ ಪದಚ್ಯುತಿಯಾಗಿಯೇ ಹೋಯಿತು ಎಂದು ಎಲ್ಲರೂ ತಿಳಿದಿದ್ದರು.

ಆಗ ಅವರನ್ನು ರಕ್ಷಿಸಿದ್ದು ಅಡ್ವಾಣಿ. ಮೋದಿ ನೆರವಿಲ್ಲದೆ ಇದ್ದರೆ ಲೋಕಸಭೆಗೆ ಆರಿಸಿಬರುವುದು ಕಷ್ಟ ಎನ್ನುವುದು ಈ ಶರಣಾಗತಿಗೆ ಒಂದು ಕಾರಣವಾದರೆ, ಪ್ರಧಾನಮಂತ್ರಿ ಸ್ಥಾನದ ಓಟಕ್ಕೆ ಇಳಿದಾಗ ಮೋದಿ ಬೆಂಬಲಿಸಬಹುದು ಎಂಬ ದೂರಾಲೋಚನೆ ಇನ್ನೊಂದು ಕಾರಣ ಇರಬಹುದು.

ಗುಜರಾತ್‌ನಲ್ಲಿ ಈಗ ಇರುವುದು ದೇಶದ ಉಳಿದೆಡೆ ಕಾಣುತ್ತಿರುವ ಬಿಜೆಪಿ ಖಂಡಿತ ಅಲ್ಲ, ಅದು ನರೇಂದ್ರ ಮೋದಿ ಬಿಜೆಪಿ. ಆ ರಾಜ್ಯದ ಬಿಜೆಪಿಯನ್ನು ಅವರು ಪ್ರತ್ಯೇಕ ಪ್ರಾದೇಶಿಕ ಪಕ್ಷದಂತೆಯೇ ನಡೆಸಿಕೊಂಡು ಬಂದಿದ್ದಾರೆ. ಪಕ್ಕಾ ಪಾಳೆಯಗಾರನಂತೆ ವಿರೋಧಿಸಿದವರ ತಲೆ ಕಡಿಯುತ್ತಾ, ಶರಣಾದವರನ್ನು ಅಡಿಯಾಳುಗಳನ್ನಾಗಿ ಮಾಡುತ್ತಾ ಬಂದಿದ್ದಾರೆ. 

ಈಗ ಇಡೀ ಪಕ್ಷವನ್ನೇ ಅಪಹರಣ ಮಾಡಲು ಹೊರಟಿದ್ದಾರೆ. ಅಪಹರಣ ಎಂದರೆ ಪ್ರತಿಭಟಿಸಿದವರ ಕೈಕಾಲು ಕಟ್ಟಿಹಾಕಿ, ಬಾಯಿಮುಚ್ಚಿಸಿ ಹೊತ್ತುಕೊಂಡು ಹೋಗುವುದು. ಮೋದಿ ಅದನ್ನೇ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅಪಹರಣ ಎನ್ನುವುದು ಅಪರಾಧ.

ಆದರೆ `ಅಪಹರಣಕಾರನ` ಜತೆ ಶಾಮೀಲಾಗಿರುವ ಆರ್‌ಎಸ್‌ಎಸ್‌ನ ನ್ಯಾಯಶಾಸ್ತ್ರದಲ್ಲಿ ಅಪಹರಣಕ್ಕೆ ಬೇರೆ ಅರ್ಥ ಇದ್ದರೂ ಇರಬಹುದು ಇಲ್ಲವೇ ಅಪಹರಣಕಾರರ ಜತೆಯಲ್ಲಿಯೇ ಬದುಕುತ್ತಾ ಕೊನೆಗೆ ಆತನನ್ನೇ ಪ್ರೀತಿಸುವ `ಸ್ಟಾಕ್‌ಹೋಂ ಸಿಂಡ್ರೋಮ್`ಗೆ ಆರ್‌ಎಸ್‌ಎಸ್ ಒಳಗಾಗಿರಬಹುದು.

ಉಳಿದವರ ಗೊಂದಲ ಏನೇ ಇದ್ದರೂ ನರೇಂದ್ರ ಮೋದಿ ಅವರಿಗೆ ತನ್ನ ಮುಂದಿನ ದಾರಿ ಬಗ್ಗೆ ಸ್ಪಷ್ಟತೆ ಇರುವಂತೆ ಕಾಣುತ್ತಿದೆ. ಅವರ ರಾಜಕೀಯ ಜೀವನದಲ್ಲಿ ಮುಂದಿನ ಎರಡು ವರ್ಷಗಳು ನಿರ್ಣಾಯಕವಾದುದು. 

ಈ ವರ್ಷದ ಕೊನೆಯಲ್ಲಿ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ, ಆ ಚುನಾವಣೆಯ ಫಲಿತಾಂಶ, ನಂತರದ ಒಂದೂವರೆ ವರ್ಷಗಳ ಅವಧಿಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅವರ ಪಾತ್ರವನ್ನು ನಿರ್ಧರಿಸಲಿದೆ. 

ಇದಕ್ಕಾಗಿಯೇ ಅವರು ತಾಲೀಮು ಪ್ರಾರಂಭಿಸಿರುವುದು. ಅಡ್ವಾಣಿಯವರನ್ನೋ, ಸುಷ್ಮಾ ಸ್ವರಾಜ್ ಅವರನ್ನೋ ಪ್ರಧಾನಿಯಾಗಿ ಮಾಡುವುದು ಅವರ ಉದ್ದೇಶ ಖಂಡಿತ ಅಲ್ಲ. ತಾನೇ ಪ್ರಧಾನಿಯಾಗಬೇಕೆಂಬ ಆಕಾಂಕ್ಷೆ ಅವರಲ್ಲಿ ಎಂದೋ ಹುಟ್ಟಿಕೊಂಡು ಬಲವಾಗಿ ಬೇರುಬಿಟ್ಟಿದೆ. 

ಈ ಮಹತ್ವಾಕಾಂಕ್ಷಿ ಮೋದಿಯವರನ್ನು ನೊಡಿದಾಗ ಯಾಕೋ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ವಾಧಿಕಾರಿಯಾಗಿ ಬದಲಾಗಿ ಹೋದ ಇಂದಿರಾಗಾಂಧಿ ನೆನಪಾಗುತ್ತಾರೆ. ಅವರ ವಿರೋಧಿಗಳು ಕೂಡಾ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದಾರೆ. 

ಇಂದಿರಾಗಾಂಧಿಯವರಂತೆಯೇ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಮೋದಿ ಬಯಸಿದ್ದನ್ನು ಪಡೆಯಲು ಏನು ಬೇಕಾದರು ಮಾಡಲು ಹಿಂಜರಿಯಲಾರರು. ಮಹತ್ವಾಕಾಂಕ್ಷಿಗಳ ಹಾದಿ ತಪ್ಪಿಸುವುದು ಸೋಲಿನ ಭೀತಿಯಿಂದ ಹುಟ್ಟುವ ಹತಾಶೆ.

ಹತಾಶೆಗೀಡಾದ ವ್ಯಕ್ತಿ ಪರಿಣಾಮವನ್ನು ಲೆಕ್ಕಿಸದೆ ತನಗೆ ಸರಿಕಂಡ ದಾರಿಯಲ್ಲಿ ನುಗ್ಗುತ್ತಾನೆ. ಹತ್ತುವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯನ್ನು ಕಣ್ಣಾರೆ ನೋಡಿದ ನನಗೆ  ಯಾಕೋ ದೇಶದಲ್ಲಿ ಗುಜರಾತ್ ಕಾಣತೊಡಗಿದೆ. ನನ್ನ ಭೀತಿ 

Thursday, June 7, 2012

ಸಿದ್ದರಾಮಯ್ಯನವರಿಗೆ ಬೇರೆ ದಾರಿಯೇ ಇಲ್ಲ June 04, 2012

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ವಿರೋಧಪಕ್ಷಗಳ ಅಗತ್ಯ ಇಲ್ಲವೇ ಇಲ್ಲ, ಮತದಾರರೂ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷವೇ ಸಾಕು. ಭ್ರಷ್ಟಾಚಾರ, ಭಿನ್ನಮತ ಮತ್ತು ಅನೈತಿಕ ಚಟುವಟಿಕೆಗಳಿಂದಾಗಿ ಅವಸಾನದ ಪ್ರಪಾತದೆಡೆಗೆ ರಭಸದಿಂದ ಸಾಗುತ್ತಿರುವ ಆಡಳಿತಾರೂಢ ಬಿಜೆಪಿ, ಚುನಾವಣೆಯನ್ನು ಎದುರಿಸುವ ಮೊದಲೇ ಸೋಲಿನ ಭೀತಿಯಲ್ಲಿದೆ. 

ಕಳೆದ ಏಳುವರ್ಷಗಳಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿರುವ ಕಾಂಗ್ರೆಸ್  ರಾಜಕೀಯವಾಗಿ ಅನುಕೂಲವಾಗಿರುವ ಈ ಪರಿಸ್ಥಿತಿಯಲ್ಲಿ ನಿರಾಯಾಸವಾದ ಗೆಲುವಿನ ಕನಸನ್ನಾದರೂ ಕಾಣಲು ಸಾಧ್ಯವಾಗಬೇಕಾಗಿತ್ತು, ಆದರೆ, ಅದರ ನಾಯಕರನ್ನು ಸೋಲಿನ ದುಃಸ್ವಪ್ನ  ಬೆಚ್ಚಿಬೀಳಿಸತೊಡಗಿದೆ.

ಕರ್ನಾಟಕವೇನು ಕಾಂಗ್ರೆಸ್ ತಲೆ ಎತ್ತಲಾಗದಷ್ಟು ನೆಲಕಚ್ಚಿರುವ ಉತ್ತರಪ್ರದೇಶ, ಬಿಹಾರ ರಾಜ್ಯಗಳಂತಲ್ಲ. ಭೇದಿಸಲಾಗದ ರೀತಿಯಲ್ಲಿ ವಿರೋಧಪಕ್ಷಗಳು ಕೋಟೆ ಕಟ್ಟಿಕೊಂಡಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ರಾಜ್ಯಗಳೂ ಅಲ್ಲ. ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡಿದ ರಾಜ್ಯ ಕರ್ನಾಟಕ, ಇಂದಿರಾಗಾಂಧಿಗೆ ರಾಜಕೀಯ ಮರುಹುಟ್ಟುನೀಡಿದ, ಸೋನಿಯಾಗಾಂಧಿಯವರನ್ನು ಗೆಲ್ಲಿಸಿ ಕಳುಹಿಸಿದ ರಾಜ್ಯ ಇದು. 

ಸ್ವತಂತ್ರ ಭಾರತದಲ್ಲಿ ನಡೆದ ಹದಿಮೂರು ಚುನಾವಣೆಗಳಲ್ಲಿ ಮೂರನ್ನು ಹೊರತುಪಡಿಸಿದರೆ ಉಳಿದೆಲ್ಲವನ್ನೂ ಕಾಂಗ್ರೆಸ್ ಇಲ್ಲಿ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರ ಸಂಖ್ಯೆಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸೋತಿದ್ದರೂ, ಬಿಜೆಪಿಗಿಂತ ಶೇಕಡಾ 0.74ರಷ್ಟು ಹೆಚ್ಚು ಮತಗಳನ್ನು ಪಡೆದಿತ್ತು.
 
ಹೀಗಿದ್ದರೂ ಮುಂದಿನ ಚುನಾವಣೆಯ ನಂತರ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುವ ಕಾಂಗ್ರೆಸ್ ನಾಯಕರ ಸಂಖ್ಯೆ ಕಡಿಮೆ. ಇದಕ್ಕೆ ಮುಖ್ಯ ಕಾರಣ ದೆಹಲಿಯಲ್ಲಿ ಕೂತಿರುವ ಹೈಕಮಾಂಡ್ ನಾಯಕರು ಒಂದಾದರ ಮೇಲೊಂದರಂತೆ ಕೈಗೊಳ್ಳುತ್ತಾ ಬಂದ ಆತ್ಮಹತ್ಯಾಕಾರಿ ನಿರ್ಧಾರಗಳು.

ಇವುಗಳಲ್ಲಿ ಇತ್ತೀಚಿನದು ಸಿದ್ದರಾಮಯ್ಯನವರು ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಬೆಳವಣಿಗೆ. ಜನಪ್ರಿಯ ನಾಯಕನೊಬ್ಬ ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸಮಸ್ಯೆಯ ಪರಿಹಾರ ಮತ್ತು ಸಮಸ್ಯೆ ಎರಡೂ ಆಗಲು ಸಾಧ್ಯ. ಅವರು ಏನಾಗುತ್ತಾರೆ ಎನ್ನುವುದು ಪಕ್ಷ ಮತ್ತು ಆ ನಾಯಕನ ನಡವಳಿಕೆಯನ್ನು ಅವಲಂಬಿಸಿರುತ್ತದೆ.  ಕಾಂಗ್ರೆಸ್ ಪಕ್ಷಕ್ಕಾಗಲಿ, ಸಿದ್ದರಾಮಯ್ಯನವರಾಗಲಿ ರಾಜಕೀಯ ಶಾಲೆಯ ಈ ಸಾಮಾನ್ಯ ಪಾಠ ಗೊತ್ತಿಲ್ಲ ಎಂದು ಹೇಳಲಾಗದು. 

ಸಿದ್ದರಾಮಯ್ಯನವರ ಕಣ್ಣಿಗೆ ಎಲ್ಲವೂ ನುಣ್ಣಗೆ ಕಾಣಲು ಕಾಂಗ್ರೆಸ್ ಪಕ್ಷ ದೂರದ ಬೆಟ್ಟ ಅಲ್ಲ. ಅದರ ಜತೆಯಲ್ಲಿಯೇ ಅವರು ಗುದ್ದಾಡಿಕೊಂಡು ರಾಜಕೀಯ ಮಾಡಿಕೊಂಡು ಬಂದವರು. ಅದೇ ರೀತಿ ಸಿದ್ದರಾಮಯ್ಯ ಕೂಡಾ ಅನ್ಯಗ್ರಹದಿಂದ ಉದುರಿಬಿದ್ದ ನಾಯಕನಲ್ಲ, ಅವರನ್ನು ಕಾಂಗ್ರೆಸ್ ಪಕ್ಷದೊಳಗೆ ಎಳೆದುಕೊಂಡು ಬಂದವರಿಗೂ ಅವರ ಗುಣ-ಸ್ವಭಾವ, ನೀತಿ-ನಿಲುವುಗಳೆಲ್ಲವೂ ಗೊತ್ತಿತ್ತು. 

ಪ್ರಾದೇಶಿಕ ಪಕ್ಷದ ನಾಯಕತ್ವಕ್ಕೆ ಹೇಳಿ ಮಾಡಿಸಿದಂತಹ ರಾಜಕೀಯ ವ್ಯಕ್ತಿತ್ವದ ಸಿದ್ದರಾಮಯ್ಯ, ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್ ಪಕ್ಷಕ್ಕೆ ಹೊಂದಿಕೊಳ್ಳುವುದು ಕಷ್ಟ ಎನ್ನುವುದನ್ನು ಅವರ ಶತ್ರುಗಳು ಮಾತ್ರವಲ್ಲ ಮಿತ್ರರೂ  ಹೇಳುತ್ತಿದ್ದರು. ಪರಸ್ಪರ ಗುಣಾವಗುಣಗಳ ಅರಿವಿದ್ದು  ಮಾಡಿಕೊಂಡ ಸಂಬಂಧ ಈಗ ಮುರಿದುಬೀಳುವ ಸ್ಥಿತಿಯಲ್ಲಿದೆ.

ಸಿದ್ದರಾಮಯ್ಯನವರ ಆಯ್ಕೆಯ ಅಭ್ಯರ್ಥಿಗಳ ಅರ್ಹತೆ-ಅನರ್ಹತೆಗಳು ಪ್ರತ್ಯೇಕ ಚರ್ಚೆಯ ವಿಚಾರ. ಆದರೆ ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಧಾನಪರಿಷತ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶಾಸಕಾಂಗ ಪಕ್ಷದ ನಾಯಕನ ಜತೆ ಸಮಾಲೋಚನೆ ಮಾಡದೆ ಇರುವುದು ಮೂರ್ಖತನವಲ್ಲದೆ ಮತ್ತೇನಲ್ಲ. ಅವಮಾನಿಸಲೇಬೇಕೆಂಬ ದುರುದ್ದೇಶ ಇಲ್ಲದೆ ಹೋದರೆ ಈ ರೀತಿ ಯಾವ ಪಕ್ಷವೂ ಮಾಡಲು ಸಾಧ್ಯ ಇಲ್ಲ. 

ಸಿದ್ದರಾಮಯ್ಯನವರು ಸಿಡಿಯಲು ಈಗಿನ ಅಸಮಾಧಾನವೊಂದೇ ಖಂಡಿತ ಕಾರಣ ಅಲ್ಲ. ಪಕ್ಷದ ನಿರ್ಲಕ್ಷ್ಯ ಮತ್ತು ಅವಮಾನ ಸಿದ್ದರಾಮಯ್ಯನವರಿಗೆ ಹೊಸತಲ್ಲ, ಕಾಂಗ್ರೆಸ್ ಸೇರಿದ ನಂತರದ ಕಳೆದ ಆರು ವರ್ಷಗಳ ಅವಧಿಯಲ್ಲಿ ಅವರು ಅದನ್ನು ಎದುರಿಸುತ್ತಲೇ ಬಂದಿದ್ದಾರೆ.
 
ಸಿದ್ದರಾಮಯ್ಯನವರ ಸಹಜ ಸ್ವಭಾವದ ಪ್ರಕಾರ ಅವರೆಂದೋ ಸ್ಫೋಟಿಸಬೇಕಾಗಿತ್ತು. ಸಂಯಮವನ್ನು ಕಾಪಾಡಿಕೊಂಡು ಹೋಗಬೇಕೆಂಬ ಔದಾರ್ಯದಿಂದಲೋ, ಬೇರೆ ಮಾರ್ಗಗಳಿಲ್ಲದ ಅಸಹಾಯಕತೆಯಿಂದಲೋ ಅವರು ಬಾಯಿಮುಚ್ಚಿಕೊಂಡು ಸಹಿಸುತ್ತಾ ಬಂದಿದ್ದಾರೆ. ಎರಡನೆಯದೇ ನಿಜವಾದ ಕಾರಣ ಇರಬಹುದು.

ಕಾಂಗ್ರೆಸ್ ರಾಜಕಾರಣವನ್ನು ನೋಡುತ್ತಾ ಬಂದವರಿಗೆ ಸಿದ್ದರಾಮಯ್ಯನವರನ್ನು ಆ ಪಕ್ಷ ನಡೆಸಿಕೊಂಡು ಬಂದ ರೀತಿಯಿಂದ ಅಚ್ಚರಿಯಾಗದು. ವಿರೋಧ ಪಕ್ಷವನ್ನು ದುರ್ಬಲಗೊಳಿಸಲು ಅದರೊಳಗಿನ ಅತೃಪ್ತ ನಾಯಕರನ್ನು ಮೊದಲು ಸೆಳೆದುಕೊಳ್ಳುವುದು ನಂತರ ಅವರನ್ನು ಎಲ್ಲೋ ಮೂಲೆಗೆ ತಳ್ಳಿಬಿಡುವುದು ಅದರ ಹಳೆಯ ಕಾರ್ಯತಂತ್ರ. ಒಮ್ಮೆ ಮೂಲ ಪಕ್ಷವನ್ನು ತೊರೆದುಬಂದ ನಂತರ ಮರಳಿಹೋಗುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಅವಮಾನ-ಅನಾದರಣೆಯನ್ನು ಸಹಿಸಿಕೊಂಡು ಇಲ್ಲಿಯೇ ಇರಬೇಕಾಗುತ್ತದೆ. 

ಗುಜರಾತ್‌ನಲ್ಲಿ ಬಿಜೆಪಿ ಬಿಟ್ಟುಬಂದ ಶಂಕರ್‌ಸಿಂಗ್ ವಘೇಲಾ, ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಟ್ಟುಬಂದ ಛಗನ್ ಭುಜಬಲ್ ಮೊದಲಾದವರು ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯಲು ಅವಕಾಶ ಸಿಗಲೇ ಇಲ್ಲ. ಸಿದ್ದರಾಮಯ್ಯನವರದ್ದೂ ಇದೇ ಸ್ಥಿತಿ.

ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ ನಡವಳಿಕೆಯೇ ಮೂರ್ಖತನದ್ದು, ಮೊದಲನೆಯದಾಗಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಪಕ್ಷದೊಳಗೆ ಆಗಲೇ ಹಿರಿಯ ನಾಯಕರು ತುಂಬಿ ತುಳುಕಾಡುತ್ತಿದ್ದರು, ಜತೆಗೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಪಕ್ಷಾಂತರಗೊಂಡವರ ಕಾರಣದಿಂದ `ಮೂಲನಿವಾಸಿಗಳು` ಮತ್ತು `ವಲಸೆಕೋರರ` ನಡುವಿನ ಸಂಘರ್ಷ ಪ್ರಾರಂಭವಾಗಿ ಬಿಟ್ಟಿತ್ತು. 

ಈ ಸ್ಥಿತಿಯಲ್ಲಿ ಸಿದ್ದರಾಮಯ್ಯನವರಂತಹ ಹಿರಿಯ ನಾಯಕರನ್ನು ಕರೆತಂದರೂ ಉನ್ನತ ಸ್ಥಾನಮಾನ ನೀಡುವುದು ಸುಲಭದ ಕೆಲಸ ಆಗಿರಲಿಲ್ಲ. ಎರಡನೆಯದಾಗಿ ಸೇರಿಸಿಕೊಂಡ ನಂತರ ಆಂತರಿಕ ವಿರೋಧಗಳೇನೇ ಇದ್ದರೂ ಅದನ್ನು ಲೆಕ್ಕಿಸದೆ  ಸೂಕ್ತ ಸ್ಥಾನಮಾನ ನೀಡಿ ಅವರನ್ನು ಪಕ್ಷದ ಬಲವರ್ಧನೆಗೆ ಬಳಸಿಕೊಳ್ಳಬೇಕಾಗಿತ್ತು. ಆದರೆ ಕಾಂಗ್ರೆಸ್ ಮಾಡಿದ್ದೇ ಬೇರೆ. ಸಿದ್ದರಾಮಯ್ಯನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕೈಬಿಟ್ಟು ಬಿಟ್ಟಿತು. 

ಅಲ್ಲಿಗೆ ಪಕ್ಷದೊಳಗಿನ ಅತೃಪ್ತನಾಯಕರ ಪಟ್ಟಿಗೆ ಇನ್ನೊಬ್ಬರು ಸೇರ್ಪಡೆಯಾದರು ಅಷ್ಟೆ.
ಪಕ್ಷಕ್ಕೆ ಸೇರಿಸಿಕೊಳ್ಳಲು ತಮ್ಮ ಮೇಲಿನ ಪ್ರೀತಿಗಿಂತಲೂ ಹೆಚ್ಚಾಗಿ ದೇವೇಗೌಡರ ಮೇಲಿನ ದ್ವೇಷ ಕಾರಣ ಎನ್ನುವುದು ಸಿದ್ದರಾಮಯ್ಯನವರಿಗೂ ಗೊತ್ತಿತ್ತು. ಪ್ರೀತಿ ಇದ್ದಿದ್ದರೆ ಅದು ತಮ್ಮ ಸಮುದಾಯದ ನಾಯಕನೆಂಬ ಅಭಿಮಾನದಿಂದಾಗಿ  ಅವರನ್ನು ಪಕ್ಷಕ್ಕೆ ಕರೆತರಲು ಬಹಿರಂಗವಾಗಿಯೇ ಪ್ರಯತ್ನದಲ್ಲಿ ತೊಡಗಿದ್ದ ಎಚ್. ವಿಶ್ವನಾಥ್ ಮತ್ತು ಎಚ್.ಎಂ.ರೇವಣ್ಣನಂತಹವರಲ್ಲಿತ್ತೋ ಏನೋ? 

ಆದರೆ, ಅವರಿಗಿಂತಲೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದವರು ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್. ಎಂ.ಕೃಷ್ಣ ಅವರು. ಅದಕ್ಕೆ ಕಾರಣ ಅವರಿಗೆ ದೇವೇಗೌಡರ ಮೇಲೆ ರಾಜಕೀಯವಾಗಿ ಇದ್ದ ದ್ವೇಷ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅತೃಪ್ತ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ದೇವೇಗೌಡರ ಪಕ್ಷದ ಬಲ ಕುಂದಿಸುವುದು ಅವರ ಲೆಕ್ಕಾಚಾರವಾಗಿತ್ತು. 

ಕಾಂಗ್ರೆಸ್ ಪಕ್ಷಕ್ಕೂ ಇದು ಬೇಕಾಗಿತ್ತು. ಈ ಪ್ರೀತಿ-ದ್ವೇಷದ ಆಟದ ಬಗ್ಗೆ ಅರಿವಿದ್ದೂ ಸಿದ್ದರಾಮಯ್ಯ ದಾಳವಾದರು. ಜೆಡಿ(ಎಸ್) ಬಿಟ್ಟು ಹೊರಬಂದ ಸಿದ್ದರಾಮಯ್ಯನವರ ಬಗ್ಗೆ ಕೃಷ್ಣ ಅವರಿಗೂ ಹೆಚ್ಚಿನ ಆಸಕ್ತಿ ಇರಲಿಲ್ಲ. ಸಿದ್ದರಾಮಯ್ಯನವರ ಜತೆ ಕೂಡಿಕೊಂಡರೆ ಮೈತ್ರಿಯನ್ನು ಮುರಿಯುತ್ತೇನೆ ಎಂದು ದೇವೇಗೌಡರು ನೀಡಿದ ಎಚ್ಚರಿಕೆಯನ್ನು ಧಿಕ್ಕರಿಸಿದ ಕಾರಣಕ್ಕೆ ಜೆಡಿ(ಎಸ್) ಜತೆಗಿನ ಮೈತ್ರಿಕೂಟದ ಸರ್ಕಾರವನ್ನೇ ಕಳೆದುಕೊಂಡ ಕಾಂಗ್ರೆಸ್, ಒಂದು ಸರ್ಕಾರದ ಬೆಲೆತೆತ್ತು ಬರಮಾಡಿಕೊಂಡ ಸಿದ್ದರಾಮಯ್ಯವನರನ್ನು ಮಾತ್ರ ಸರಿಯಾಗಿ ಬಳಸಿಕೊಳ್ಳಲಿಲ್ಲ.

ಸಿದ್ದರಾಮಯ್ಯನವರನ್ನು ಬಾಜಾ-ಭಜಂತ್ರಿಯೊಂದಿಗೆ ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ಮೂರು ವರ್ಷಗಳ ಕಾಲ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡದೆ ನಿರ್ಲಕ್ಷಿಸಿತ್ತು. ಖಾಲಿ ಹುದ್ದೆಗಳೇ ಇರಲಿಲ್ಲ, ಯಾರ ಹುದ್ದೆಯನ್ನೂ ಖಾಲಿ ಮಾಡಿಸುವ ಆಸಕ್ತಿಯೂ ಪಕ್ಷದ ಹೈಕಮಾಂಡ್‌ಗೆ ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಎನ್. ಧರ್ಮಸಿಂಗ್ ವಿರಾಜಮಾನರಾಗಿದ್ದರು. 

ತಾಂತ್ರಿಕ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರದೆ ಜೆಡಿ (ಎಸ್)ನಲ್ಲಿಯೇ ಉಳಿದಿದ್ದ ಅವರ ಬೆಂಬಲಿಗರು ಕೂಡಾ ಮೂಲೆಗುಂಪಾಗಿ ಹೋಗಿದ್ದರು. ಅಷ್ಟು ಮಾತ್ರವಲ್ಲ ಯಾವ ಪಕ್ಷವನ್ನು ದುರ್ಬಲಗೊಳಿಸಬೇಕೆಂದು ಸಿದ್ದರಾಮಯ್ಯನವರನ್ನು ಅಲ್ಲಿಂದ ಹೊರಗೆಳೆದು ಕರೆತರಲಾಯಿತೋ ಅದೇ ಪಕ್ಷದ ಜತೆ ವಿಧಾನಸಭೆಗೆ ನಡೆಯಲಿದ್ದ ಮಧ್ಯಂತರ ಚುನಾವಣೆಯಲ್ಲಿ ಮೈತ್ರಿಮಾಡಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡತೊಡಗಿದ್ದರು.

ದೆಹಲಿಯಲ್ಲಿ ಆಸ್ಕರ್ ಫರ್ನಾಂಡಿಸ್, ಕೆ.ಎಚ್.ಮುನಿಯಪ್ಪ, ಮಾರ್ಗರೇಟ್ ಆಳ್ವ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮೂಗಿಗೆ ಎಚ್.ಡಿ.ದೇವೇಗೌಡರು ತುಪ್ಪ ಹಚ್ಚಿಬಿಟ್ಟಿದ್ದರು. ಇವರಲ್ಲಿ ಕೆಲವರು ಮುಖ್ಯಮಂತ್ರಿಯಾಗುವ ಕನಸು ಕಾಣತೊಡಗಿದ್ದರು. ಈ ಮೈತ್ರಿ ಪ್ರಯತ್ನದಿಂದ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯನವರಿಗೆ ರಾಜೀನಾಮೆ ಸಲ್ಲಿಸಿ ಪ್ರತಿಭಟಿಸಲು ಹುದ್ದೆಗಳು ಇರಲಿಲ್ಲವಾದ ಕಾರಣ ಮಾರಿಷಸ್-ಗೋವಾಗಳಿಗೆ ಬೆಂಬಲಿಗರೊಡನೆ ಹೋಗಿ ಗುಪ್ತಸಭೆ ನಡೆಸಿದ್ದರು. 

ಬಿಜೆಪಿ ಸೇರಬಹುದೆಂಬ ಗಾಳಿಸುದ್ದಿಯೂ ಹರಡಿತ್ತು. ಆದರೆ ಸೋನಿಯಾಗಾಂಧಿ ವಿರೋಧದಿಂದಾಗಿ ಆ ಮೈತ್ರಿ ತಪ್ಪಿಹೋಯಿತು. ಸಿದ್ದರಾಮಯ್ಯನವರ ಕಷ್ಟ ಅಲ್ಲಿಗೆ ಕೊನೆಗೊಳ್ಳಲಿಲ್ಲ. ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ಸಕ್ರಿಯ ರಾಜಕಾರಣಕ್ಕೆ ವಾಪಸು ಬಂದರು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದಿದ್ದರೂ ಕೃಷ್ಣ ಅವರ ಪ್ರವೇಶದಿಂದ ಸಿದ್ದರಾಮಯ್ಯನವರ ಪ್ರತಿಸ್ಪರ್ಧಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಯಿತು.

ಮಲ್ಲಿಕಾರ್ಜುನ ಖರ್ಗೆ ಲೋಕಸಭೆಗೆ ಆಯ್ಕೆಯಾಗಿ ಹೋದ ಕಾರಣದಿಂದಾಗಿ ಖಾಲಿಯಾದ ವಿರೋಧ ಪಕ್ಷದ ನಾಯಕನ ಸ್ಥಾನವೇನೋ ಸಿದ್ದರಾಮಯ್ಯನವರಿಗೆ ಕೊನೆಗೂ ಸಿಕ್ಕಿತು. ಆದರೆ ಪಕ್ಷದ ಆಂತರಿಕ ವ್ಯವಹಾರದಲ್ಲಿ ಅವರು ಹೊರಗಿನವರಾಗಿಯೇ ಉಳಿದಿದ್ದರು. ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ನೂತನ ಅಧ್ಯಕ್ಷರಾದ ನಂತರ ಪಕ್ಷ ಮತ್ತು ಅವರ ನಡುವಿನ ಬಿರುಕು ಬೆಳೆಯುತ್ತಾ ಹೋಯಿತು. 

ಈ ನಿರ್ಲಕ್ಷ್ಯದ ಮುಂದುವರಿಕೆಯಂತೆ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರನ್ನು ದೂರ ಇಡಲಾಯಿತು. ಮುಂದಿನ ಒಂದು ವರ್ಷದೊಳಗೆ ವಿಧಾನಸಭೆಗೆ ನಡೆಯಲಿರುವ ಚುನಾವಣೆ ತನ್ನ ರಾಜಕೀಯ ಬದುಕಿನ ನಿರ್ಣಾಯಕ ಘಟ್ಟ ಎಂಬ ಅರಿವಿನ ಕಾರಣದಿಂದಲೋ ಏನೋ ಸಿದ್ದರಾಮಯ್ಯನವರು ಬಂಡಾಯದ ಬಾವುಟ ಹಾರಿಸಿದ್ದಾರೆ. 

ಸಿದ್ದರಾಮಯ್ಯನವರ ಮುಂದೆಯೂ ಬಹಳ ಆಯ್ಕೆಗಳಿಲ್ಲ. ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದ ಬಿಜೆಪಿಗೆ ಅವರು ಸೇರಲಾರು. ಅಪ್ಪ-ಮಕ್ಕಳ ರಾಜಕಾರಣದ ವಿರುದ್ಧವೇ ಸೆಡ್ಡುಹೊಡೆದು ಹೊರಬಂದ ನಂತರ ಹಳೆಯ ಪಕ್ಷಕ್ಕೂ ಮರಳುವ ಸ್ಥಿತಿಯಲ್ಲಿಯೂ ಅವರಿಲ್ಲ. ಉಳಿದಿರುವ ಏಕೈದ ದಾರಿ ಪ್ರಾದೇಶಿಕ ಪಕ್ಷದ ಸ್ಥಾಪನೆ. ಆರು ವರ್ಷಗಳ ಹಿಂದೆ ಕಾಂಗ್ರೆಸ್ ಸೇರುವ ಮೊದಲು ಈ ಅವಕಾಶ ಅವರ ಮನೆಬಾಗಿಲು ತಟ್ಟಿತ್ತು. 

ದೇವೇಗೌಡರಿಗೆ ಸವಾಲು ಹಾಕಿ ಪಕ್ಷ ಬಿಟ್ಟು ಹೊರಬಂದ ಸಿದ್ದರಾಮಯ್ಯವರು `ಅಹಿಂದ` ಸಮಾವೇಶಗಳನ್ನು ಮಾಡುತ್ತಾ ರಾಜ್ಯ ಸುತ್ತುತ್ತಿದ್ದಾಗ ಅವರಿಂದ ಪ್ರಾದೇಶಿಕ ಪಕ್ಷದ ಸ್ಥಾಪನೆಯನ್ನು ನಿರೀಕ್ಷಿಸಿದವರಿದ್ದರು. ಆದರೆ `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವೇ ಇಲ್ಲ` ಎಂದು ಘೋಷಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳುವ ಮೂಲಕ ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಿದ್ದರು. 

ಅದರ ನಂತರ `ಅಹಿಂದ` ಸಂಘಟನೆ ಹಲವಾರು ಗುಂಪುಗಳಾಗಿ ಒಡೆದುಹೋಗಿವೆ. ಈ ಪರಿಸ್ಥಿತಿಯಲ್ಲಿ ಒಂದೊಮ್ಮೆ ಮತ್ತೆ `ಅಹಿಂದ` ಸಂಘಟನೆಗಿಳಿದರೂ ಹಿಂದಿನ ಬೆಂಬಲ ಸಿಗುವ ಸಾಧ್ಯತೆ ಕಡಿಮೆ. ಈ ಅಸಹಾಯಕತೆಯೇ  ಸಿದ್ದರಾಮಯ್ಯನವರನ್ನು ಬಲಹೀನರನ್ನಾಗಿ ಮಾಡಿದೆ. ಈಗ ಅವರ ಮುಂದೆ ಇರುವ ಏಕೈಕ ಸುರಕ್ಷಿತ ದಾರಿ ಕಾಂಗ್ರೆಸ್ ಜತೆಯಲ್ಲಿಯೇ ಇನ್ನಷ್ಟು ಚೌಕಾಶಿ ಮಾಡಿಕೊಂಡು ಮುಂದುವರಿಯುವುದು. ಅದನ್ನೇ ಅವರು ಮಾಡಬಹುದೇನೋ?