ದೆಹಲಿಯ ರೈಸಿನಾಹಿಲ್‌ನ ತುದಿಯ ಸುಮಾರು 450 ಎಕರೆ ಉದ್ಯಾನದ ನಡುವಿನ ಐದು ಎಕರೆ ಜಾಗದಲ್ಲಿ ತಲೆ ಎತ್ತಿನಿಂತಿರುವ ರಾಷ್ಟ್ರಪತಿ ಭವನವನ್ನು ಭಾವುಕ ಕಣ್ಣುಗಳಿಂದ ನೋಡಿದರೆ ಅರಮನೆಯಂತೆ ಕಾಣುತ್ತದೆ.
ವಿಶಾಲವಾದ ಹಜಾರಗಳು, ಎತ್ತರದ ಬೋದಿಗೆಗಳು, ಅಮೃತಶಿಲೆಯ ನೆಲ, ಅದನ್ನಪ್ಪಿಕೊಂಡ ಬೆಲೆಬಾಳುವ ಪರ್ಷಿಯನ್-ಕಾಶ್ಮೆರಿ ನೆಲಗಂಬಳಿ, ಅಪರೂಪದ ತೈಲಚಿತ್ರಗಳು, ಮೊಗಲ್-ಜೈನ್ ವಾಸ್ತುಶಿಲ್ಪಗಳ ಪ್ರಭಾವದ ಕಟಾಂಜನಗಳು,ಛಜ್ಚಾಗಳು, ಜಾಲರಿ, ಕಲ್ಲು ಗಂಟೆಗಳು...ಹೀಗೆ 20,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಕೆಂಪು ಮರಳುಗಲ್ಲಿನ ಕಟ್ಟಡದಲ್ಲಿ ಅರಮನೆಯ ಎಲ್ಲ ವೈಭವಗಳೂ ಇವೆ.
ಅರಮನೆಯಂತೆ ಕಾಣುತ್ತಿದೆ ಎಂದ ಮಾತ್ರಕ್ಕೆ ಅದರೊಳಗಿನ ನಿವಾಸಿಯನ್ನು ಅರಸ ಎಂದು ಹೇಳುವ ಹಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸನಿಗೆ ಜಾಗ ಇಲ್ಲ. ಅಲ್ಲಿರುವವರು ಸಂವಿಧಾನದ ಮನೆಯ ಕಾವಲುಗಾರ. ಸಂವಿಧಾನದ ಪ್ರಕಾರ ರಾಷ್ಟ್ರಪತಿಯವರದು ಅತೀ ಉನ್ನತ, ಗೌರವಪೂರ್ಣ ಮತ್ತು ಪ್ರತಿಷ್ಠೆಯ ಸ್ಥಾನ.
ಅವರೇ ಸರ್ಕಾರದ ಅಧಿಕೃತ ಯಜಮಾನರು. ಕೇಂದ್ರ ಸರ್ಕಾರದ ಕಾರ್ಯಾಂಗ ಅಧಿಕಾರದ ದಂಡವನ್ನು ಸಂವಿಧಾನ ಅವರ ಕೈಗೆ ಕೊಟ್ಟಿದೆ. ಕೇಂದ್ರ ಸರ್ಕಾರ ಪ್ರತಿಯೊಂದು ನಿರ್ಧಾರವನ್ನು ರಾಷ್ಟ್ರಪತಿಯವರ ನಾಮಸ್ಮರಣೆಯೊಂದಿಗೆ ಕಾರ್ಯರೂಪಕ್ಕೆ ತರಬೇಕು. ಪ್ರಧಾನಮಂತ್ರಿಯನ್ನು ಮಾತ್ರವಲ್ಲ, ಪ್ರಧಾನಿ ಸಲಹೆ ಮೇರೆಗೆ ಸಚಿವರ ನೇಮಕಾ ಕೂಡಾ ಅವರದ್ದೇ ........
ರಾಷ್ಟ್ರಪತಿ ಸ್ಥಾನದ ಸುತ್ತಲಿನ ಈ ಪ್ರಭಾವಳಿ ಕಂಡು ಮೈಮರೆಯುವ ಮುನ್ನ ಸಂವಿಧಾನದ ಪುಟಗಳನ್ನು ತಿರುವಿಹಾಕಬೇಕು. `ಕೇಂದ್ರ ಸರ್ಕಾರ ತನ್ನ ಕಾರ್ಯಾಂಗ ಅಧಿಕಾರವನ್ನು ಸಂವಿಧಾನಕ್ಕೆ ಅನುಗುಣವಾಗಿ ರಾಷ್ಟ್ರಪತಿಯವರ ಮೂಲಕ ಕಾರ್ಯಗತಗೊಳಿಸಬೇಕು` ಎಂದು ಸಂವಿಧಾನ ಹೇಳಿದೆ. `
ರಾಷ್ಟ್ರಪತಿಗಳು ಸಚಿವ ಮಂಡಳಿಯ ನೆರವು ಮತ್ತು ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕು` ಎಂದು ಸಂವಿಧಾನದ 74 (1)ನೇ ಪರಿಚ್ಛೇದ ಹೇಳಿದೆ. `ರಾಷ್ಟ್ರಪತಿ ಸಂವಿಧಾನದ ಮುಖ್ಯಸ್ಥರಾದರೂ ಅವರು ಸಚಿವ ಮಂಡಳಿಯ ಸಲಹೆಯಂತೆಯೇ ಕಾರ್ಯನಿರ್ವಹಿಸಬೇಕಾಗುತ್ತದೆ` ಎಂದು ಸುಪ್ರೀಂಕೋರ್ಟ್ ಹಲವಾರು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ.
ಅಂದರೆ ರಾಷ್ಟ್ರಪತಿಗಳು ಆಡಳಿತಾರೂಢರ ಕೈಯಲ್ಲಿನ `ರಬ್ಬರ್ ಸ್ಟಾಂಪ್` ಎನ್ನುವ ಕೊಂಕುನುಡಿ ನಿಜವೇ? ಇದಕ್ಕೆ ಉತ್ತರ ರೈಸಿನಾಹಿಲ್‌ನ ನಿವಾಸಿಯಾದ ದೇಶದ ಪ್ರಥಮ ಪ್ರಜೆಯ ನಡೆ-ನುಡಿಯಲ್ಲಿದೆ. ಅರಸೊತ್ತಿಗೆಯಲ್ಲಿ ಸಿಂಹಾಸನವೇ ಮುಖ್ಯ, ಅದರ ಮೇಲೆ ಪಾದುಕೆಗಳನ್ನಿಟ್ಟುಬೇಕಾದರೂ ಬೇರೆಯವರು ರಾಜ್ಯಭಾರ ಮಾಡಬಹುದು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗಲ್ಲ, ಇಲ್ಲಿ ಆಸನಕ್ಕೆ ಗೌರವ ಬರುವುದು ಆಸೀನರಾಗುವ ವ್ಯಕ್ತಿಯಿಂದ. ಸಾಂವಿಧಾನಿಕ ಹುದ್ದೆಗಳ ಹಕ್ಕು-ಬಾಧ್ಯತೆಗಳನ್ನು ಸಂವಿಧಾನದಲ್ಲಿ ಬಿಡಿಸಿ ಹೇಳಲಾಗಿಲ್ಲ. ಆ ಸ್ಥಾನದಲ್ಲಿ ಕೂರುವವರು ಇರುವ ನೀತಿ-ನಿಯಮಾವಳಿಗಳನ್ನು ತನ್ನ ವಿವೇಚನೆಯಿಂದ ಬಳಸಿಕೊಂಡು ವ್ಯಾಖ್ಯಾನಿಸಬೇಕಾಗುತ್ತದೆ.
ಈ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗುವ ಪರಿಸ್ಥಿತಿಯನ್ನು ಪ್ರತಿಯೊಬ್ಬ ರಾಷ್ಟ್ರಪತಿಗಳು ಎದುರಿಸುತ್ತಾರೆ. ಈ ಕಾರ್ಯನಿರ್ವಹಣೆಯ ಮೇಲೆ ಇತಿಹಾಸದ ಪುಟಗಳಲ್ಲಿ ಅವರ ವ್ಯಕ್ತಿತ್ವದ ಚಿತ್ರಗಳು ದಾಖಲಾಗುತ್ತವೆ. ಎದುರಾದ ಬಿಕ್ಕಟ್ಟುಗಳನ್ನು ಮೀರಿ ನಿಂತವರೂ ಇದ್ದಾರೆ, ಜಾರಿಬಿದ್ದವರೂ ಇದ್ದಾರೆ.
ಭಾರತದ ರಾಷ್ಟ್ರಪತಿಗಳ ಹೆಸರಿನ ಕೆಳಗೆ ಎರಡು ಸಂದರ್ಭಗಳಲ್ಲಿ ಕೆಂಪುಗೆರೆ ಕಾಣಿಸಿಕೊಳ್ಳುತ್ತದೆ. ಮೊದಲನೆಯದು ಕೇಂದ್ರದಲ್ಲಿ ಚುನಾವಣೆಯ ನಂತರ ನಡೆಯುವ ಸರ್ಕಾರ ರಚನೆಯ ಪ್ರಕ್ರಿಯೆ, ಎರಡನೆಯದು ರಾಜ್ಯಗಳಲ್ಲಿನ ಚುನಾಯಿತ ಸರ್ಕಾರದ ವಿಸರ್ಜನೆ.
ರಾಜಕೀಯ ಪಿತೂರಿಯಿಂದಾಗಿ ಮೂರನೆ ಸಂದರ್ಭ ಕೂಡಾ ಸೃಷ್ಟಿಯಾಗುವುದುಂಟು. ಉದಾಹರಣೆಗೆ ಪ್ರಧಾನಿ ರಾಜೀವ್‌ಗಾಂಧಿಯವರನ್ನು ಕಿತ್ತುಹಾಕಲು ಆಗಿನ ರಾಷ್ಟ್ರಪತಿ ಜೈಲ್‌ಸಿಂಗ್ ಪ್ರಯತ್ನ.
ಮೊದಲಿನ ಎರಡೂ ಸಂದರ್ಭಗಳಲ್ಲಿಯೂ ರಾಷ್ಟ್ರಪತಿಗಳು ಅಸಹಾಯಕರೇನಲ್ಲ, ಅವರು ಕೇಂದ್ರಸರ್ಕಾರದ `ರಬ್ಬರ್ ಸ್ಟಾಂಪ್` ಆಗಿಯೇ ಕಾರ್ಯನಿರ್ವಹಿಸಬೇಕಾದ ಅಗತ್ಯವೂ ಇಲ್ಲ. ಚುನಾವಣೆಯ ನಂತರ ಕೇಂದ್ರದಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸರ್ವಸ್ವತಂತ್ರರು.
ಆಗ ಅವರಿಗೆ ಸಲಹೆ ನೀಡುವ ಮೂಲಕ ಪರೋಕ್ಷವಾಗಿ ನಿಯಂತ್ರಿಸುವ ಸಚಿವಮಂಡಳಿ ಅಸ್ತಿತ್ವದಲ್ಲಿ ಇಲ್ಲದೆ ಇರುವ ಕಾರಣ ಅವರ ಮೇಲೆ ಶಾಸಕಾಂಗದ ಒತ್ತಡ ಇರುವುದಿಲ್ಲ. ಮೈತ್ರಿಕೂಟದ ಇಂದಿನ ಹೊಸ ರಾಜಕೀಯ ಯುಗದಲ್ಲಿ ಇದೊಂದು ದೊಡ್ಡ ಸವಾಲು. ಆದರೆ ಇದನ್ನು ಎದುರಿಸಿದವರೆಲ್ಲರೂ ನಿರಾಶೆಗೊಳಿಸಿಲ್ಲ.
1996ರಲ್ಲಿ ಸ್ಪಷ್ಟ ಬಹುಮತ ಹೊಂದಿಲ್ಲದ ಅಟಲಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚನೆಗೆ ಅವಕಾಶ ನಿರಾಕರಿಸಲು ಕಾರಣಗಳಿದ್ದವು. ಆಗಿನ ರಾಷ್ಟ್ರಪತಿ ಶಂಕರದಯಾಳ್ ಶರ್ಮ ಹಾಗೆ ನಡೆದುಕೊಂಡಿದ್ದರೆ ಅವರೊಬ್ಬ `ಕಾಂಗ್ರೆಸ್ ಏಜಂಟ್` ಎಂಬ ಆರೋಪ ಖಂಡಿತ ಕೇಳಿಬರುತ್ತಿತ್ತು. ಅವರು ಹಾಗೆ ಮಾಡದೆ ಅವಕಾಶ ನೀಡಿದರೂ ವಾಜಪೇಯಿ ನೇತೃತ್ವದ ಸರ್ಕಾರ ಹದಿಮೂರು ದಿನಗಳಲ್ಲಿಯೇ ಪತನಗೊಂಡಿತ್ತು.
ಅದರ ನಂತರ ಹದಿಮೂರು ತಿಂಗಳ ಕಾಲ ಪ್ರಧಾನಿಯಾದ ವಾಜಪೇಯಿ ಅವರು ಸರ್ಕಾರ ರಚನೆಯ ಅವಕಾಶ ಕೋರಿದಾಗಲೂ ನಿರಾಕರಿಸಲು ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಬಳಿಯೂ ಕಾರಣಗಳಿದ್ದವು.
`ಆ ಸಂದರ್ಭದ ರಾಜಕೀಯ ಮೈತ್ರಿಯಿಂದ ಸುಭದ್ರ ಸರ್ಕಾರ ರಚನೆ ಸಾಧ್ಯ ಇಲ್ಲ` ಎಂದು ಹೇಳಿ ಅವಕಾಶ ನಿರಾಕರಿಸಬಹುದಿತ್ತು. ಅವರೂ ಹಾಗೆ ಮಾಡದೆ ಅವಕಾಶ ನೀಡಿದರು. `ಅಭದ್ರತೆಯ ಭೀತಿ` ನಿಜ ಎಂಬಂತೆ ಕೊನೆಗೆ ಎಡಿಎಂಕೆ ನಾಯಕಿ ಜೆ.ಜಯಲಲಿತಾ ಬೆಂಬಲ ವಾಪಸು ಪಡೆದು ಸರ್ಕಾರ ಉರುಳಿಸಿದ್ದರು.
ಅದೇ ನಾರಾಯಣನ್ ಪೂರ್ವಾಶ್ರಮದಲ್ಲಿ ಅಪ್ಪಟ ಕಾಂಗ್ರೆಸಿಗರೇ ಆಗಿದ್ದರೂ ಸೋನಿಯಾಗಾಂಧಿ 272 ಸದಸ್ಯರ ಬೆಂಬಲ ತಮಗಿದೆ ಎಂದು ಹೇಳಿದ್ದನ್ನು ಒಪ್ಪಿಕೊಂಡಿರಲಿಲ್ಲ ಎನ್ನುವುದು ಗಮನಾರ್ಹ.
ರಾಷ್ಟ್ರಪತಿಗಳ ತಲೆಮೇಲೆ ಸದಾ ತೂಗುತ್ತಿರುವ ಇನ್ನೊಂದು ವಿವಾದದ ಕತ್ತಿ-ಸಂವಿಧಾನದ 356ನೇ ಪರಿಚ್ಛೇದದ ಮೂಲಕ ನಡೆಯುವ ವಿಧಾನಸಭೆಗಳ ವಿಸರ್ಜನೆ. ಸ್ವತಂತ್ರಭಾರತದಲ್ಲಿ ನೂರಕ್ಕೂ ಹೆಚ್ಚು ಬಾರಿ ಈ ಅಸ್ತ್ರದ ಪ್ರಯೋಗ ನಡೆದಿದೆ.ಕೇಂದ್ರದ ಆಡಳಿತಾರೂಢ ಪಕ್ಷ ರಾಜಭವನದಲ್ಲಿ ಕೂರಿಸಿರುವ `ಕೈಗೊಂಬೆ` ರಾಜ್ಯಪಾಲರ ಮೂಲಕ ವರದಿಗಳನ್ನು ತರಿಸಿ ರಾತೋರಾತ್ರಿ ರಾಜ್ಯಸರ್ಕಾರಗಳನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಉದಾಹರಣೆಗಳಿವೆ.
ಇಂತಹ ಸಂದರ್ಭಗಳಲ್ಲಿ ಈಗಿನ ರಾಷ್ಟ್ರಪತಿಗಳು ಹಿಂದಿನವರಷ್ಟು ಅಸಹಾಯಕರಲ್ಲ. ಜನತಾ ಸರ್ಕಾರ 1978ರಲ್ಲಿ ಸಂವಿಧಾನದ 74ನೇ ಪರಿಚ್ಛೇದಕ್ಕೆ ಮಾಡಿದ 44ನೆ ತಿದ್ದುಪಡಿಯಿಂದಾಗಿ ರಾಷ್ಟ್ರಪತಿಗಳು ಸಚಿವ ಸಂಪುಟದ ತೀರ್ಮಾನವನ್ನು ಮೊದಲ ಬಾರಿ ತಿರಸ್ಕರಿಸಬಹುದು. ಆದರೆ ಸಚಿವ ಸಂಪುಟ ಮತ್ತೊಂದು ಬಾರಿ ಅಂಗೀಕರಿಸಿ ಕಳುಹಿಸಿದರೆ ಒಪ್ಪಿಗೆಯ ಮುದ್ರೆ ಒತ್ತುವುದು ಅನಿವಾರ್ಯ.
ಈ ತಿದ್ದುಪಡಿಯನ್ನು ಬಳಸಿಕೊಂಡು ತನ್ನ ಅಧಿಕಾರವನ್ನು ಮೊದಲು ಚಲಾಯಿಸಿದ್ದು ರಾಷ್ಟ್ರಪತಿ ಕೆ.ಆರ್.ನಾರಾಯಣನ್. ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ಸರ್ಕಾರದ ವಿಸರ್ಜನೆಗೆ ಐ.ಕೆ.ಗುಜ್ರಾಲ್ ಸರ್ಕಾರ ಮಾಡಿದ್ದ ತೀರ್ಮಾನವನ್ನು ಅವರು ತಿರಸ್ಕರಿಸಿದ್ದರು. ಮರುವರ್ಷ ವಾಜಪೇಯಿ ಸಂಪುಟ ಬಿಹಾರದ ಲಾಲುಯಾದವ್ ಸರ್ಕಾರದ ವಿಸರ್ಜನೆಗೆ ಕೈಗೊಂಡ ತೀರ್ಮಾನವನ್ನು ಕೂಡಾ ಅವರು ಒಪ್ಪಿಕೊಳ್ಳಲಿಲ್ಲ.
ಎರಡೂ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಎರಡನೆ ಬಾರಿಗೆ ತನ್ನ ತೀರ್ಮಾನವನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುವ ಹಟಮಾರಿ ಧೋರಣೆ ತೋರಿಸದೆ ದೇಶದ ಪ್ರಥಮ ಪ್ರಜೆಯ ಗೌರವಕ್ಕೆ ಕುಂದುಬರದಂತೆ ನೋಡಿಕೊಂಡಿತ್ತು.
ಪೂರ್ವಾಶ್ರಮದಲ್ಲಿ ರಾಜಕಾರಣಿಗಳಲ್ಲದ ರಾಷ್ಟ್ರಪತಿಗಳು ತೋರಿದ ಈ ದಿಟ್ಟತನವನ್ನು ರಾಜಕಾರಣಿಯಲ್ಲದ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ತೋರಲಿಲ್ಲ. ರಾಷ್ಟ್ರಪತಿ ಸ್ಥಾನದ ಘನತೆ ಉಳಿಸಿಕೊಂಡೇ ಸಾಮಾನ್ಯರನ್ನು ತಲುಪುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದ ಕಲಾಂ ಅವರು ತಾನು ಕೂತ ಕುರ್ಚಿಯ ನಿಜವಾದ ಕರ್ತವ್ಯ ನಿರ್ವಹಿಸುವಾಗ ಮಾತ್ರ ಎಡವಿಬಿದ್ದಿದ್ದರು.
2005ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ರಾಷ್ಟ್ರಪತಿಗಳ ಆಳ್ವಿಕೆ ಹೇರಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ ಎನ್‌ಡಿಎ ಸರ್ಕಾರ ರಚಿಸಲು ಮುಂದಾದಾಗ ಅಲ್ಲಿ ರಾಜ್ಯಪಾಲರಾಗಿದ್ದ ಬೂಟಾಸಿಂಗ್ ವಿಧಾನಸಭೆಯ ವಿಸರ್ಜನೆಗೆ ಶಿಫಾರಸು ಮಾಡಿದ್ದರು.
ಇದನ್ನು ಅಷ್ಟೇ ಅವಸರದಲ್ಲಿ ಮಧ್ಯರಾತ್ರಿಯ ಸಭೆಯಲ್ಲಿ ಪರಿಶೀಲಿಸಿ ಕೇಂದ್ರ ಸಚಿವ ಸಂಪುಟ ನೀಡಿದ ಒಪ್ಪಿಗೆಗೆ ಅಬ್ದುಲ್ ಕಲಾಂ ಅವರು ದೂರದ ರಷ್ಯಾದಲ್ಲಿಯೇ ಕೂತು ಅಂಕಿತ ಹಾಕಿಬಿಟ್ಟಿದ್ದರು. ಈ ನಿರ್ಧಾರವನ್ನು ನಂತರದ ದಿನಗಳಲ್ಲಿ ಸುಪ್ರೀಂಕೋರ್ಟ್ ಅಕ್ರಮ ಎಂದು ಸಾರಿತ್ತು. ಇದು ಕಲಾಂ ಅವರ ಅಧಿಕಾರವಧಿಯ ಕಪ್ಪು ಚುಕ್ಕೆ.
ಸಂವಿಧಾನದ ರಚನೆಕಾರರಿಗೆ ಉಳಿದೆಲ್ಲ ಸಾಂವಿಧಾನಿಕ ಹುದ್ದೆಗಳಂತೆ ರಾಷ್ಟ್ರಪತಿ ಕೂಡಾ ಭವಿಷ್ಯದಲ್ಲಿ ಎದುರಿಸಬಹುದಾದ ಸವಾಲುಗಳ ನಿರೀಕ್ಷೆ ಇರಲಿಲ್ಲ. ಈ ಕಾರಣದಿಂದಾಗಿಯೇ ಆ ಹುದ್ದೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲು ಹೋಗದೆ ಗೌರವದ ಸ್ಥಾನ ನೀಡಿ ಸುಮ್ಮನಾಗಿದ್ದರು. ಏಕಪಕ್ಷದ ಆಳ್ವಿಕೆಯ ಬಿಗಿ ಸಡಿಲುಗೊಂಡು ಮೈತ್ರಿಕೂಟಗಳು ರಾಜಕೀಯದ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಿದ್ದಂತೆಯೇ ರಾಷ್ಟ್ರಪತಿಗಳ ಮುಂದಿನ ಸವಾಲುಗಳು ಇನ್ನಷ್ಟು ಕಠಿಣವಾಗತೊಡಗಿವೆ.
`ರಾಷ್ಟ್ರಪತಿ ಸ್ಥಾನ ಎನ್ನುವುದು `ತುರ್ತುಕಾಲದ ದೀಪ` ಇದ್ದ ಹಾಗೆ, ಬಿಕ್ಕಟ್ಟು ಉದ್ಭವವಾದಾಗ ಅದು ತನ್ನಿಂದ ತಾನೆ ಹತ್ತಿಕೊಳ್ಳುತ್ತದೆ. ಅದು ನಿವಾರಣೆಯಾಗುತ್ತಿದ್ದ ಹಾಗೆ ಆರಿಹೋಗುತ್ತದೆ` ಎಂದು ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಹೇಳಿದ್ದರು. ಆದರೆ ಮೈತ್ರಿಕೂಟಗಳ ಯುಗದಲ್ಲಿ ರಾಷ್ಟ್ರಪತಿಗಳ ಸ್ಥಾನ ಕೇವಲ `ತುರ್ತುಕಾಲದ ದೀಪ`ವಾಗಿ ಉಳಿದಿಲ್ಲ. ಇದು ನಿತ್ಯ ಉರಿಯುತ್ತಲೇ ಇರಬೇಕಾದ `ದೀಪ`ವಾಗಿ ಹೋಗಿದೆ.
ರಾಜಕೀಯ ವಿವಾದದ ಗಾಳಿಗೆ ಸಿಕ್ಕಿ ಸಂವಿಧಾನದ ಈ `ದೀಪ` ಆರಿಹೋಗದಂತೆ ಕಾಪಾಡಬೇಕಾದರೆ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಸ್ವತಂತ್ರವಾಗಿ ಎದುರಿಸುವ ರೀತಿಯಲ್ಲಿ ರಾಷ್ಟ್ರಪತಿ ಸ್ಥಾನವನ್ನು ಬಲಪಡಿಸಬೇಕು. ಇದರ ಜತೆಯಲ್ಲಿ ರಾಷ್ಟ್ರಪತಿಗಳು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು.
ಇಂತಹದ್ದೊಂದು ವಿವಾದಕ್ಕೆ ಪ್ರಣವ್ ಮುಖರ್ಜಿ ಅವರೇ ಕಾರಣವಾಗಿದ್ದರು ಎನ್ನುವುದನ್ನು ಇತಿಹಾಸದ ಪುಟಗಳು ಹೇಳುತ್ತಿವೆ. ರಾಷ್ಟ್ರಪತಿಯವರ ಸಾವಿನ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದು ಹೇಗೆ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಆದರೆ ಪ್ರಧಾನಿ ಅನಿರೀಕ್ಷಿತವಾಗಿ ಸಾವಿಗೀಡಾದಾಗ ಏನು ಮಾಡಬೇಕು ಎಂಬ ಪ್ರಶ್ನೆಗೆ ಸಂವಿಧಾನದಲ್ಲಿ ಉತ್ತರ ಇಲ್ಲ.
ಈ ಕಾರಣದಿಂದಾಗಿಯೇ ಪ್ರಧಾನಿ ಇಂದಿರಾಗಾಂಧಿ ಹತ್ಯೆ ನಡೆದಾಗ ರಾಷ್ಟ್ರಪತಿ ಜೈಲ್‌ಸಿಂಗ್ ಅವರು ರಾಜೀವ್‌ಗಾಂಧಿಯವರನ್ನು ನೇರವಾಗಿ ಪ್ರಧಾನಿಯಾಗಿ ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. `ರಾಷ್ಟ್ರಪತಿಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಧಾರಕ್ಕಾಗಿ ಕಾಯಬೇಕಾಗಿತ್ತು, ಅಲ್ಲಿಯ ವರೆಗೆ ಸಂಪುಟದ ಅತ್ಯಂತ ಹಿರಿಯ ನಾಯಕನನ್ನು ಉಸ್ತುವಾರಿ ಪ್ರಧಾನಿಯಾಗಿ ನೇಮಿಸಬಹುದಿತ್ತು....`ಎಂಬೀತ್ಯಾದಿ ಟೀಕೆಗಳು ಆ ಕಾಲದಲ್ಲಿ ಕೇಳಿಬಂದಿದ್ದವು.
ಆ ಟೀಕೆಗೆ ಪ್ರಣವ್ ಮುಖರ್ಜಿ ಅವರು ರಾಜೀವ್‌ಗಾಂಧಿಯವರಿಗೆ ನೀಡಿದ್ದ ಸಲಹೆ ಪ್ರೇರಣೆಯಾಗಿತ್ತು.ಇಂದಿರಾಗಾಂಧಿಯವರ ಹತ್ಯೆ ನಡೆದಾಗ ಕೊಲ್ಕೊತ್ತಾ ಪ್ರವಾಸದಲ್ಲಿದ್ದ ರಾಜೀವ್‌ಗಾಂಧಿಯವರ ಜತೆಯಲ್ಲಿದ್ದ ಪ್ರಣವ್ ಮುಖರ್ಜಿ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಈ ಸಲಹೆ ನೀಡಿದ್ದರು.
ಆ ಕಾಲದಲ್ಲಿ ಸಂಪುಟದ ಅತ್ಯಂತ ಹಿರಿಯ ನಾಯಕ ಪ್ರಣವ್ ಅವರೇ ಆಗಿದ್ದ ಕಾರಣ ಆ ಸಲಹೆಯನ್ನು ರಾಜೀವ್‌ಗಾಂಧಿ ತಪ್ಪಾಗಿ ಅರ್ಥಮಾಡಿಕೊಂಡಿದ್ದರು. ಈ ತಪ್ಪುತಿಳುವಳಿಕೆ ಅಂತಿಮವಾಗಿ ಪ್ರಣವ್ ಮುಖರ್ಜಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಪ್ರತ್ಯೇಕ ಪಕ್ಷ ಸ್ಥಾಪನೆಗೆ ಕಾರಣವಾಗಿತ್ತು.
ಈಗ ಅವರೇ ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್‌ಪಕ್ಷದ ಅಧಿಕೃತ ಅಭ್ಯರ್ಥಿ. ರಾಷ್ಟ್ರಪತಿ ಸ್ಥಾನದ ಮಹತ್ವವನ್ನು ಅರಿತಿರುವ ಪ್ರಣವ್ ಮುಖರ್ಜಿ `ರಬ್ಬರ್ ಸ್ಟಾಂಪ್` ಆಗಲಾರರೆಂದೇ ಎಲ್ಲರ ನಿರೀಕ್ಷೆ. ಇದು ಕಾಂಗ್ರೆಸ್ ಪಕ್ಷದ ಭೀತಿ ಕೂಡಾ ಆಗಿರಬಹುದು.