ಕರ್ನಾಟಕದ ಇಬ್ಬರು ರಾಜಕೀಯ ನಾಯಕರು ಇತ್ತೀಚೆಗೆ ಪ್ರಾದೇಶಿಕ ಪಕ್ಷ ರಚನೆಯ ಕನಸು ಕಾಣತೊಡಗಿದ್ದಾರೆ. ಒಬ್ಬರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನೊಬ್ಬರು ಮಾಜಿ ಸಚಿವ ಶ್ರಿರಾಮುಲು.
ರಾಜ್ಯದ ನೆಲ-ಜಲ-ಭಾಷೆಯನ್ನು ಪ್ರೀತಿಸುವ, ಪೋಷಿಸುವ ಮತ್ತು ರಕ್ಷಿಸುವಂತಹ ಪ್ರಾದೇಶಿಕ ಪಕ್ಷವೊಂದರ ಕನಸನ್ನು ಕಂಡಿರುವ ಮತ್ತು ಈಗಲೂ ಕಾಣುತ್ತಿರುವ ಕನ್ನಡಿಗರು ಬಹುಸಂಖ್ಯೆಯಲ್ಲಿ ನಮ್ಮಲ್ಲಿದ್ದಾರೆ.
ಪ್ರಾದೇಶಿಕ ಪಕ್ಷಗಳ ಹಿಡಿತದ ರಾಜ್ಯಗಳನ್ನು `ನೆರೆಮನೆ~ಗಳಾಗಿ ಹೊಂದಿರುವ ಕರ್ನಾಟಕ, ಬಲಿಷ್ಠ ಪ್ರಾದೇಶಿಕ ಪಕ್ಷದ ಕೊರತೆಯಿಂದಾಗಿ ಗಡಿತಂಟೆ, ನೀರು ಹಂಚಿಕೆ, ಕೇಂದ್ರದ ಸಂಪನ್ಮೂಲದಲ್ಲಿನ ಪಾಲಿನಂತಹ ಸೂಕ್ಷ್ಮ ವಿಚಾರಗಳಲ್ಲಿ ಅನ್ಯಾಯಕ್ಕೀಡಾಗುತ್ತಾ ಬಂದಿರುವುದು ಕೂಡಾ ಸುಳ್ಳಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನೆರೆಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ, ಎನ್ಸಿಪಿ, ತೆಲುಗುದೇಶಂನಂತಹ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳ ಹಿತರಕ್ಷಣೆಗಾಗಿ ಬಳಸಿಕೊಳ್ಳುತ್ತಾ ಬಂದಿರುವ ನಿದರ್ಶನಗಳೂ ನಮ್ಮ ಕಣ್ಣಮುಂದೆ ಇವೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಬಗೆಗಿನ ಕನ್ನಡಿಗರ ಒಲವು ಕರ್ನಾಟಕದ ಮುನ್ನಡೆಗೆ ಕಾಲ್ತೊಡಕಾಗಿ ಹೋಯಿತೇನೋ ಎಂಬ ಚಿಂತೆ ಭಾಷಾಂಧ ಕನ್ನಡಿಗರನ್ನು ಮಾತ್ರವಲ್ಲ, ಹೃದಯ ವೈಶಾಲ್ಯದ ಕನ್ನಡಿಗರನ್ನೂ ಒಮ್ಮಮ್ಮೆ ಕಾಡುತ್ತಿರುವುದು ಸತ್ಯ.
ಆದರೆ ರಾಜ್ಯದ ರಾಜಕೀಯ ಪರಂಪರೆಯನ್ನು ನೋಡಿದರೆ ಇಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಗಳಿಸಿರುವ ಉದಾಹರಣೆಗಳು ಸಿಗುವುದಿಲ್ಲ.
ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮೆರೆದಾಡುತ್ತಿದ್ದರೂ ರಾಜ್ಯದ ಜನತೆ ಮಾತ್ರ ಇಲ್ಲಿಯ ವರೆಗೆ ಅದರ ಪ್ರಭಾವಕ್ಕೊಳಗಾಗದೆ ದೂರವೇ ಉಳಿದುಬಿಟ್ಟಿದ್ದಾರೆ.
ಇದಕ್ಕೆ ಪ್ರಾದೇಶಿಕ ಪಕ್ಷ ಕಟ್ಟಲು ಪ್ರಯತ್ನಿಸಿದ ರಾಜಕೀಯ ನಾಯಕರ ಆತ್ಮವಂಚನೆಯ ನಡವಳಿಕೆಗಳೂ ಕಾರಣ. ಇಂತಹದ್ದರಲ್ಲಿ ಯಡಿಯೂರಪ್ಪ ಮತ್ತು ಶ್ರಿರಾಮುಲು ಅವರು ರಾಜಕೀಯ ಬ್ಲಾಕ್ಮೇಲ್ಗಷ್ಟೇ `ಪ್ರಾದೇಶಿಕ ಪಕ್ಷದ ಗುಮ್ಮ~ನನ್ನು ಬಳಸದೆ ನಿಜಕ್ಕೂ ಅದನ್ನು ಕಟ್ಟಲು ಹೊರಟರೆ ಯಶಸ್ಸು ಕಾಣಬಹುದೇ?
ಪ್ರಾದೇಶಿಕ ಪಕ್ಷ ರಚನೆಯ ಹಲವಾರು ಅವಕಾಶಗಳು ಬಂದು ಹೋಗಿರುವುದನ್ನು ಕರ್ನಾಟಕ ರಾಜಕಾರಣದ ಇತಿಹಾಸ ಹೇಳುತ್ತಿದೆ. ಅಂತಹ ಮೊದಲ ಅವಕಾಶ ದೇವರಾಜ ಅರಸು ಅವರಿಗೆ ಒದಗಿ ಬಂದಿತ್ತು.
ಕಾಂಗ್ರೆಸ್ ವಿರುದ್ಧದ ರಾಜಕಾರಣಕ್ಕೆ ಮೊದಲ ಪ್ರಯತ್ನದಲ್ಲಿ ಜನ ಬೆಂಬಲ ಸಿಗದೆ ಇದ್ದರೂ ವಿಚಲಿತರಾಗದ ಅರಸು ಅವರು ತಮ್ಮ ಕೊನೆಯ ದಿನಗಳಲ್ಲಿ `ಕ್ರಾಂತಿರಂಗ~ವನ್ನು ಕಟ್ಟಿದ್ದರು. ಆದರೆ, ಅದನ್ನು ಮುನ್ನಡೆಸಲು ಅವರು ಉಳಿಯಲಿಲ್ಲ.
ಅವರು ಬದುಕಿದ್ದರೆ ಪ್ರಾದೇಶಿಕ ಪಕ್ಷವನ್ನು ರಾಜ್ಯ ಪಡೆಯುತ್ತಿತ್ತೋ ಏನೋ? ಹೀಗೆ ಅಂದುಕೊಳ್ಳಲು ಕಾರಣ ಇದೆ. ಕರ್ನಾಟಕದ ಬಹುಸಂಖ್ಯಾತ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟು, ಅದರ ವಿರೋಧಿ ಪಕ್ಷಗಳ ಬಗ್ಗೆ ಒಲವು ತೋರಿಸಿದ್ದೇ ಎಪ್ಪತ್ತರ ದಶಕದ ಅಂತ್ಯ ಮತ್ತು ಎಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ.
1983ರಲ್ಲಿ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದದ್ದೇ ಇದಕ್ಕೆ ಸಾಕ್ಷಿ. ಆಗ ಅರಸು ಬದುಕಿದ್ದರೆ ಅವರೇ ಅದಕ್ಕೆ ನಾಯಕರಾಗುತ್ತಿದ್ದರು. ಜನತಾ ಪಕ್ಷದ ಜತೆ ಕ್ರಾಂತಿರಂಗ ವಿಲೀನಗೊಳ್ಳದೆ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಆಗ ಅವಕಾಶ ಇತ್ತು.
ಎರಡನೇ ಅವಕಾಶ ಗೋಕಾಕ್ ಚಳವಳಿಯ ನಂತರದ ದಿನಗಳಲ್ಲಿ ಸೃಷ್ಟಿಯಾಗಿತ್ತು. ರೈತ, ದಲಿತ ಮತ್ತು ಭಾಷಾ ಚಳವಳಿಗಳಿಂದ ಪಕ್ವಗೊಂಡಿದ್ದ ರಾಜ್ಯದ ರಾಜಕಾರಣ ಪ್ರಾದೇಶಿಕ ಪಕ್ಷದ ಹುಟ್ಟನ್ನು ಎದುರು ನೋಡುತ್ತಿದ್ದ ಕಾಲ ಅದು. ಬಹುಶಃ ನಟ ರಾಜಕುಮಾರ್ ರಾಜಕೀಯ ಪ್ರವೇಶಿಸಲು ಒಪ್ಪಿಕೊಂಡಿದ್ದರೆ ಪ್ರಾದೇಶಿಕ ಪಕ್ಷ ರಚನೆಯಾಗುತ್ತಿತ್ತು.
ಆದರೆ ವರನಟ ನಿರಾಕರಿಸಿದ ಕಾರಣ ಅದು ಸಾಧ್ಯವಾಗದೆ ಹೋಯಿತು. ಅದರ ಲಾಭ ಪಡೆದದ್ದು ಜನತಾರಂಗ ಎಂಬ ಮೈತ್ರಿಕೂಟಕ್ಕೆ. ಈ ಕೂಟಕ್ಕೆ ಸಂಪೂರ್ಣವಾಗಿ ಪ್ರಾದೇಶಿಕ ಪಕ್ಷದ ರೂಪ ಇರಲಿಲ್ಲ.
ಅದರೊಳಗಿದ್ದ ಕ್ರಾಂತಿರಂಗ ಪ್ರಾದೇಶಿಕ ಪಕ್ಷವಾದರೂ, ಒಟ್ಟು ಜನತಾರಂಗ ಎನ್ನುವುದು ಕ್ರಾಂತಿರಂಗ, ಜನತಾ ಪಕ್ಷ ಮತ್ತು ಎಡಪಕ್ಷಗಳು ಕೂಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಕಟ್ಟಿದ ಮೈತ್ರಿಕೂಟವಾಗಿತ್ತು.
ಮೂರನೆಯ ಅವಕಾಶ ಕೂಡಿಬಂದದ್ದು ಮಾತ್ರವಲ್ಲ, ಅದನ್ನು ಬಳಸಿಕೊಂಡು ಸೀಮಿತ ರೂಪದಲ್ಲಿಯಾದರೂ ಯಶಸ್ಸು ಗಳಿಸಿದ್ದು ಎಸ್. ಬಂಗಾರಪ್ಪನವರು.
1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೊರಬಂದ ಬಂಗಾರಪ್ಪನವರು ಕಟ್ಟಿದ `ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) 1994ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಏಳುವರೆಯಷ್ಟು ಮತಗಳನ್ನು ಗಳಿಸಿ ಹತ್ತುಸ್ಥಾನಗಳನ್ನು ಗೆದ್ದಿತ್ತು.
ಕರ್ನಾಟಕದ ಪ್ರಾದೇಶಿಕ ಪಕ್ಷಗಳ ಮಟ್ಟಿಗೆ ಈಗಲೂ ಇದೇ ದಾಖಲೆ. ಬೇರೆ ಯಾವ ಪ್ರಾದೇಶಿಕ ಪಕ್ಷವೂ ಚುನಾವಣೆಯಲ್ಲಿ ಇಷ್ಟು ಯಶಸ್ಸನ್ನೂ ಗಳಿಸಿಲ್ಲ.
ಆದರೆ ಬಂಗಾರಪ್ಪನವರ ಈ ಸಾಧನೆ ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣವಾಯಿತೇ ಹೊರತು ಅದರಿಂದ ಅವರ ಪಕ್ಷಕ್ಕಾಗಲಿ, ರಾಜ್ಯದ ಜನರಿಗಾಗಲಿ ಲಾಭವಾಗಲಿಲ್ಲ.
ಪ್ರಾದೇಶಿಕ ಪಕ್ಷ ಕಟ್ಟುವ ಛಾತಿ ಇದ್ದ ಎಚ್.ಡಿ.ದೇವೇಗೌಡರು ಒಂದು ಹಂತದಲ್ಲಿ `ಕರ್ನಾಟಕ ವಿಕಾಸ ವೇದಿಕೆ~ಯನ್ನು ಕಟ್ಟಿ ಊರೂರೂ ಅಲೆಯತೊಡಗಿದಾಗ ಕರ್ನಾಟಕದ ಬಹುದಿನಗಳ ಆಸೆಯೊಂದು ಈಡೇರುತ್ತದೆಯೇನೋ ಎಂಬ ನಿರೀಕ್ಷೆ ಹುಟ್ಟಿತ್ತು.
ಆದರೆ ಅವರೂ ರಾಷ್ಟ್ರೀಯ ಪಕ್ಷದ ಹುಚ್ಚಿಗೆ ಬಿದ್ದು ಕೊನೆಗೆ ಜನತಾಪಕ್ಷದ ಜತೆಯೇ ಲೀನರಾದರು. ಪ್ರಾದೇಶಿಕ ಪಕ್ಷದ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಅನಿರೀಕ್ಷಿತ ಬೆಳವಣಿಗೆಯಲ್ಲಿ ಪ್ರಧಾನಿ ಪಟ್ಟಕ್ಕೇರಿದ ನಂತರ ರಾಷ್ಟ್ರ ರಾಜಕಾರಣದ ದೌರ್ಬಲ್ಯದಿಂದ ಅವರು ಹೊರಗೆ ಬರಲೇ ಇಲ್ಲ.
ರಾಷ್ಟ್ರೀಯ ನಾಯಕರಾಗಿಯೇ ಉಳಿಯುವ ಹಂಬಲ ಮತ್ತು ಮೈತ್ರಿಕೂಟದ ಯುಗದಲ್ಲಿ ಮತ್ತೊಮ್ಮೆ ಅನಿರೀಕ್ಷಿತ ಬೆಳವಣಿಗೆ ಘಟಿಸಬಹುದೆಂಬ ದುರಾಸೆ ಇದಕ್ಕೆ ಕಾರಣ ಇರಬಹುದು. ಆದ್ದರಿಂದ ಎಚ್.ಡಿ.ಕುಮಾರಸ್ವಾಮಿ ಪ್ರಾದೇಶಿಕ ಪಕ್ಷ ಕಟ್ಟುವ ಆಸಕ್ತಿ ತೋರಿದರೂ ದೇವೇಗೌಡರು ಅದಕ್ಕೆ ಹಸಿರು ನಿಶಾನೆ ತೋರಿಸುತ್ತಲೇ ಇಲ್ಲ.
ದೇವೇಗೌಡರು ಪ್ರಧಾನಿಯಾದ ನಂತರ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟನೆ ಮಾಡಿದಾಗ ಮತ್ತೆ ಪ್ರಾದೇಶಿಕ ಪಕ್ಷದ ಚರ್ಚೆ ಪ್ರಾರಂಭವಾಗಿತ್ತು. ಹೆಗಡೆ ಅವರು ಕಟ್ಟಿದ `ನವನಿರ್ಮಾಣ ವೇದಿಕೆ~ಗೆ ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಬೆಂಬಲವೂ ವ್ಯಕ್ತವಾಗಿತ್ತು.
ನಾಯಕತ್ವದ ಕೊರತೆಯಿಂದ ಕೊರಗುತ್ತಿದ್ದ ರಾಜ್ಯದ ಲಿಂಗಾಯತ ಸಮುದಾಯ ಹೆಗಡೆ ಅವರಲ್ಲಿ ತಮ್ಮ ನಾಯಕನನ್ನು ಕಾಣುತ್ತಾ ಬಂದದ್ದು ಕೂಡಾ ಈ ಜನಬೆಂಬಲಕ್ಕೆ ಒಂದು ಕಾರಣ.
ಆದರೆ ಹೆಗಡೆಯವರಿಗೆ ಪ್ರಾದೇಶಿಕ ಪಕ್ಷದ ಬಗ್ಗೆ ನಂಬಿಕೆಯೇ ಇರಲಿಲ್ಲ. ಅದನ್ನು ಕಟ್ಟಿ ಬೆಳೆಸುವ ಶ್ರಮಜೀವಿಯೂ ಅವರು ಆಗಿರಲಿಲ್ಲ. ಆದ್ದರಿಂದ `ನವನಿರ್ಮಾಣ ವೇದಿಕೆ~ಯನ್ನು `ಲೋಕಶಕ್ತಿ~ ಎಂಬ ರಾಜಕೀಯ ಪಕ್ಷವಾಗಿ ಪರಿವರ್ತಿಸುವಾಗಲೂ ಅದಕ್ಕೆ ರಾಷ್ಟ್ರೀಯ ಪಕ್ಷದ ರೂಪು ಕೊಟ್ಟು ಅದನ್ನು ಎಡಬಿಡಂಗಿ ಮಾಡಿಬಿಟ್ಟರು.
ಈ ಸಾಲಿನಲ್ಲಿ ಕೊನೆಯ ಅವಕಾಶ ಒದಗಿಬಂದದ್ದು ಸಿದ್ದರಾಮಯ್ಯನವರಿಗೆ. ಆದರೆ ಆಟದ ಕಣಕ್ಕೆ ಇಳಿಯುವ ಮೊದಲೇ ಅವರು ಸೋಲೊಪ್ಪಿಕೊಂಡು `ಗೆಲ್ಲುವ ತಂಡ~ ಎಂದು ನಂಬಿ ಕಾಂಗ್ರೆಸ್ ಸೇರಿಕೊಂಡುಬಿಟ್ಟರು.
ಅವರು ಕಾಂಗ್ರೆಸ್ ಸೇರಿದ್ದ ದಿನ ಎಐಸಿಸಿ ಕಚೇರಿ ಸಭಾಂಗಣದಲ್ಲಿ ಪಕ್ಷದ ನಾಯಕರನ್ನು ಎಡಬಲದಲ್ಲಿ ಕೂರಿಸಿಕೊಂಡು ತೋರಿದ್ದ ಆತ್ಮವಿಶ್ವಾಸವನ್ನು ಸಂಸತ್ಭವನದ ಎದುರಿನ ಬೋಟ್ಕ್ಲಬ್ನಲ್ಲಿ ತನ್ನ ಕಾಲಮೇಲೆ ನಿಂತು ತೋರಿಸಿದ್ದರೆ ಲಾಲು, ಮುಲಾಯಂ, ಪವಾರ್, ಕರುಣಾನಿಧಿ, ಚಂದ್ರಬಾಬು ನಾಯ್ಡು ಅವರಂತೆ ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗುತ್ತಿರುವ ಪ್ರಾದೇಶಿಕ ಪಕ್ಷದ ನಾಯಕರಾಗುತ್ತಿದ್ದರು.
ಆದರೆ ಸಿದ್ದರಾಮಯ್ಯನವರು `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯ ಇಲ್ಲ, ಅದಕ್ಕಾಗಿ ಸೋನಿಯಾಜಿ ಕೈ ಬಲಪಡಿಸಲು ಕಾಂಗ್ರೆಸ್ ಸೇರಿದ್ದೇನೆ~ ಎಂದು ಹೇಳಿ ಶರಣಾಗಿಬಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿದ್ದದ್ದೇ ಆಗ.
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಊರಲು ಯಾಕೆ ಆಗುತ್ತಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಗುಂಡೂರಾವ್ ದುರಾಡಳಿತದ ವಿರುದ್ಧದ ಚಳವಳಿಗಳ ದಿನಗಳಲ್ಲಿ ಸೃಷ್ಟಿಯಾಗಿದ್ದ ಅವಕಾಶವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಯ ಪ್ರಯತ್ನಗಳು ತಾವಿದ್ದ ಪಕ್ಷದಿಂದ ಅನ್ಯಾಯ-ಅಪಮಾನಕ್ಕೀಡಾದ ಕಾರಣಕ್ಕೆ ಸಿಡಿದು ಹೊರಬಂದ ರಾಜಕೀಯ ನಾಯಕರಿಂದ ನಡೆದುದು.
ರಾಜ್ಯದ ಹಿತಕ್ಕೆ ಆಗಿರುವ ಅನ್ಯಾಯ ಇಲ್ಲವೇ ರಾಜ್ಯದ ಜನರಿಗೆ ಆಗಿರುವ ಅಪಮಾನಕ್ಕಲ್ಲ ಎನ್ನುವುದು ಮುಖ್ಯ ಕಾರಣ. ಅರಸು, ಬಂಗಾರಪ್ಪ, ದೇವೇಗೌಡ, ಹೆಗಡೆ, ಸಿದ್ದರಾಮಯ್ಯ- ಈ ಎಲ್ಲರ ವಿಷಯದಲ್ಲಿಯೂ ಇದು ಸತ್ಯ.
ಇದಕ್ಕೆ ಎರಡು ಅಪವಾದಗಳೆಂದರೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತಸಂಘದ ರಾಜಕೀಯ ಮುಖವಾಗಿ ಕಟ್ಟಿದ `ಕನ್ನಡ ನಾಡು~ ಮತ್ತು ಸಾಹಿತಿ ಪಿ.ಲಂಕೇಶ್ ಅವರು ವೈಯಕ್ತಿಕ ರಾಜಕೀಯ ಪ್ರಯೋಗದ ರೀತಿಯಲ್ಲಿ ಕಟ್ಟಿದ `ಪ್ರಗತಿರಂಗ~.
ಈ ಎರಡೂ ಪ್ರಯತ್ನಗಳಿಗೆ ರಾಜ್ಯದ ಎಲ್ಲ ಜನವರ್ಗಗಳ ಪ್ರಾತಿನಿಧಿಕ ಬೆಂಬಲವೂ ಇರದಿದ್ದ ಕಾರಣ ಅವುಗಳು ಕೂಡಾ ವಿಫಲ ಪ್ರಯೋಗಗಳಾಗಿ ಕಣ್ಣುಮುಚ್ಚಿದವು.
ಭಾಷೆ-ಪ್ರದೇಶಕ್ಕೆ ಸಂಬಂಧಿಸಿದಂತೆ ಅಂಧರಾಗಿ ಯೋಚಿಸದ ಮತ್ತು ಅತಿ ಎನಿಸುವಷ್ಟು ಉದಾರಿಗಳಾಗಿರುವ ಕನ್ನಡಿಗರ ಸ್ವಭಾವವೂ ಪ್ರಾದೇಶಿಕ ಪಕ್ಷದ ರಾಜಕಾರಣಕ್ಕೆ ವಿರುದ್ಧವಾಗಿದೆ.
ದುಡುಕು ಸ್ವಭಾವದವರಂತೆ ಕಾಣುವ ಬಿ.ಎಸ್.ಯಡಿಯೂರಪ್ಪನವರು ಪ್ರತ್ಯೇಕ ಪಕ್ಷ ರಚನೆಯ ಪ್ರಶ್ನೆ ಬಂದಾಗೆಲ್ಲ ಅಚ್ಚರಿ ಮೂಡುವಷ್ಟು ಎಚ್ಚರಿಕೆಯಿಂದ ವರ್ತಿಸುತ್ತಾ ಬಂದಿರಲು ಇದೂ ಕಾರಣ ಇರಬಹುದು.
ಈಗಲೂ ಅವರ ಸುತ್ತ ಇರುವ ಸಚಿವರು ಮತ್ತು ಸಂಸದರು `ಒಂದು ಕೈ ನೋಡಿಯೇ ಬಿಡುವ~ ಎಂದು ತೊಡೆ ತಟ್ಟುತ್ತಿದ್ದರೂ ಯಡಿಯೂರಪ್ಪನವರು ತಾನಿರುವ ಪಕ್ಷದ ಬಗ್ಗೆ ತನ್ನ ಬದ್ಧತೆಯನ್ನು ಸಾರುತ್ತಾ ಆ ನಿರ್ಧಾರವನ್ನು ಉಪಾಯದಿಂದಲೇ ಮುಂದೂಡುತ್ತಾ ಬಂದಿದ್ದಾರೆ.
ಹಿಂದಿನ ಕೆಲವು ಬಿಕ್ಕಟ್ಟುಗಳ ಸಂದರ್ಭಗಳಲ್ಲಿಯೂ ಅವರು ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷದ ಜತೆ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರೆಂಬ ಗಾಳಿಸುದ್ದಿ ಹರಡಿತ್ತೇ ಹೊರತು ಪ್ರಾದೇಶಿಕ ಪಕ್ಷ ರಚನೆಯ ಆಲೋಚನೆ ಗಾಳಿಯಲ್ಲಿಯೂ ತೇಲಿ ಬಂದಿರಲಿಲ್ಲ.
ಈಗಲೂ ಅವರು ಶರದ್ ಪವಾರ್ ನೇತೃತ್ವದ ಎನ್ಸಿಪಿ ಸೇರಬಹುದೆಂಬ ಸುದ್ದಿಯೇ ಹರಿದಾಡುತ್ತಿದೆ.ಆದರೆ ಬಿ.ಎಸ್.ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ ಅವರದ್ದೂ ಸೇರಿದಂತೆ ಹಲವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಕಾಣಬಹುದು.
ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸಂಕಟ ಪಡುತ್ತಿದ್ದರೆ, ಇವರನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅವರ ಪಕ್ಷದ ನಾಯಕರು ತೊಳಲಾಡುತ್ತಿದ್ದಾರೆ. ಈ `ಕೊಡೆ-ಬಿಡೆ~ಗಳ ಬಿಕ್ಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ರಾಜಕೀಯ ಅತಂತ್ರದಿಂದ ರಾಜ್ಯದ ಜನ ಬೇಸತ್ತುಹೋಗಿದ್ದಾರೆ.
ಎಲ್ಲರ ಸಂಕಟಗಳ ನಿವಾರಣೆಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯ ಜನತಾ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಗೌರವಯುತವಾಗಿ ಪಕ್ಷದಿಂದ ಬೀಳ್ಕೊಟ್ಟು ಪ್ರಾದೇಶಿಕ ಪಕ್ಷ ಕಟ್ಟಲು ಅವರಿಗೆ ದಾರಿ ಮಾಡಿಕೊಡುವುದು.
ಇದರಿಂದ ಎಲ್ಲರ ಸಮಸ್ಯೆ ಪರಿಹಾರವಾಗುತ್ತದೆ. ಒಂದೊಮ್ಮೆ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಯಶಸ್ಸು ಕಂಡರೆ ರಾಜ್ಯದ ಬಹುದಿನಗಳ ಕನಸೊಂದು ಈಡೇರಿದಂತಾಗುತ್ತದೆ. ಯಶಸ್ಸು ಕಾಣದೆ ಇದ್ದರೆ ಅವರು ತಮಗಿದೆ ಎಂದು ತಿಳಿದುಕೊಂಡಿರುವ ಜನಬೆಂಬಲದ ಬಗೆಗಿನ ಭ್ರಮೆಗಳಾದರೂ ಹರಿದುಹೋಗುತ್ತವೆ.
ಇದರಿಂದ ಅವರಿಗೆ, ಪಕ್ಷಕ್ಕೆ ಮತ್ತು ಜನತೆಗೆ ಎಲ್ಲರಿಗೂ ನೆಮ್ಮದಿ. ಇಲ್ಲಿಯ ವರೆಗೆ ಪ್ರಾದೇಶಿಕ ಪಕ್ಷ ಕಟ್ಟಲೆತ್ನಿಸಿದ ಹಿರಿಯ ರಾಜಕೀಯ ನಾಯಕರು ಕಲಿತದ್ದು ಇದೇ ಪಾಠ ಅಲ್ಲವೇ? ಈ ಪಾಠ ಯಡಿಯೂರಪ್ಪನವರ ಹಳೆಯ ಸಹೋದ್ಯೋಗಿ ಶ್ರಿರಾಮಲು ಅವರಿಗೂ ಅನ್ವಯವಾಗುತ್ತದೆ.