ಅಧಿಕಾರದಲ್ಲಿದ್ದಾಗ ರಾಜಕಾರಣಿಗಳು ಭ್ರಷ್ಟರೆನಿಸಿಕೊಂಡು, ಕಳಂಕ ಹಚ್ಚಿಕೊಂಡು ಜನಪ್ರಿಯತೆ ಕಳೆದುಕೊಳ್ಳುವುದು ಸಾಮಾನ್ಯ. ಅಧಿಕಾರದಲ್ಲಿದ್ದಾಗ ಜನಪ್ರಿಯರಾಗಿದ್ದವರು ವಿರೋಧಪಕ್ಷದಲ್ಲಿದ್ದಾಗ ಹೆಸರು ಕೆಡಿಸಿಕೊಂಡು ಜನರ ದೂಷಣೆಗೊಳಗಾಗುವುದು ಅಷ್ಟೇನೂ ಸಾಮಾನ್ಯ ಅಲ್ಲ.
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎರಡನೆಯ `ಅಸಾಮಾನ್ಯ~ರ ಗುಂಪಿಗೆ ಸೇರಿದವರು. ಮುಖ್ಯಮಂತ್ರಿಯಾಗಲು ತಂದೆಯ ವಿರುದ್ಧವೇ `ಬಂಡಾಯ~ ಎದ್ದವರು, ತಮ್ಮ ಪಕ್ಷದ ಜಾತ್ಯತೀತ ನೀತಿಯನ್ನೇ ಗೇಲಿ ಮಾಡಿದ್ದವರು ಮತ್ತು ತಮ್ಮ ಪಕ್ಷ ವಿರೋಧಿಸುತ್ತಾ ಬಂದ ಬಿಜೆಪಿ ಜತೆಗೇ ಕೈಜೋಡಿಸಿದ್ದವರು ಕುಮಾರಸ್ವಾಮಿ.
ಮುಖ್ಯಮಂತ್ರಿಯಾದ ನಂತರ ಈ ಮೂರು ಕಾರಣಗಳಿಗಾಗಿ ಅವರು ಜನಪ್ರಿಯತೆ ಕಳೆದುಕೊಳ್ಳಬೇಕಿತ್ತು. ಕುಮಾರಣ್ಣನ ನಡೆ ಬಗ್ಗೆ ದೊಡ್ಡಗೌಡರ ಬೆಂಬಲಿಗರು ಅಸಮಾಧಾನಗೊಳ್ಳಬೇಕಿತ್ತು.
ಅವರ ಆತ್ಮವಂಚನೆಯ ಮಾತಿನ ಬಗ್ಗೆ ಜನ ಅವರನ್ನು ದೂಷಿಸಬೇಕಿತ್ತು. ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಆ ಪಕ್ಷದ ವಿರೋಧಿಗಳೆಲ್ಲ ಜೆಡಿ (ಎಸ್)ವಿರೋಧಿಗಳಾಗಬೇಕಿತ್ತು.
ಅಂತಹದ್ದೇನೂ ಆಗಲೇ ಇಲ್ಲ, ಅವರ ಪಕ್ಷದ ಕಾರ್ಯಕರ್ತರು ಮತ್ತು ರಾಜ್ಯದ ಜನತೆ ಕುಮಾರಸ್ವಾಮಿ ಬಗ್ಗೆ ಉದಾರವಾಗಿ ನಡೆದುಕೊಂಡಿದ್ದರು. ಅವರು ಇಪ್ಪತ್ತು ತಿಂಗಳ ಅವಧಿಯ ಜನಪ್ರಿಯ ಮುಖ್ಯಮಂತ್ರಿ.
ಅಭೂತಪೂರ್ವ ಸಾಧನೆ ಮಾಡಿ ಅವರು ಈ ಜನಪ್ರಿಯತೆ ಗಳಿಸಿದ್ದಲ್ಲ. ದ್ವೇಷಾಸೂಯೆ ಇಲ್ಲದ ಅವರ ಆ ಕಾಲದ ನಡವಳಿಕೆ, ಸಾಮಾನ್ಯ ಜನರ ಜತೆಗೆ ಅವರು ಒಂದಾಗುತ್ತಿದ್ದ ರೀತಿ, ತಪ್ಪು ಮಾತನಾಡಿದರೂ ಅದನ್ನು ತಿದ್ದಿಕೊಳ್ಳುತ್ತಿದ್ದ ವಿನಯವಂತಿಕೆ, ಜನಪರವಾದ ಕೆಲಸಗಳನ್ನು ಮಾಡಿ ಜನಪ್ರೀತಿ ಗಳಿಸಬೇಕೆಂಬ ಅವರ ತುಡಿತ -ಇವೆಲ್ಲವೂ ಅವರನ್ನು ಜನಪ್ರಿಯ ಮಾಡಿತ್ತು.
ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ಮುಖ್ಯಮಂತ್ರಿಗಳೆನಿಸಿದವರು ಇಬ್ಬರು. ಒಬ್ಬರು ರಾಮಕೃಷ್ಣ ಹೆಗಡೆ, ಇನ್ನೊಬ್ಬರು ಎಸ್.ಎಂ.ಕೃಷ್ಣ. ಶಿಕ್ಷಣ, ಓದು, ಅನುಭವ, ಚಿಂತನೆ, ಸಂಪರ್ಕ- ಇವು ಯಾವುದರಲ್ಲಿಯೂ ಕುಮಾರಸ್ವಾಮಿಯವರನ್ನು ಅವರಿಬ್ಬರಿಗೆ ಹೋಲಿಸಲಾಗದು.
ಅವರಿಬ್ಬರೂ ನಗರದ `ಜಂಟಲ್ಮೆನ್~ಗಳಾದರೆ, ಕುಮಾರಸ್ವಾಮಿ `ಹಳ್ಳಿ ಹೈದ~. ಜಾಗತೀಕರಣದ ನಂತರದ ದಿನಗಳಲ್ಲಿ ಆಳುವ ದೊರೆಗಳೆಲ್ಲ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ, ತಮ್ಮ ವಿರುದ್ಧವೇ ಸಂಚು ಮಾಡುತ್ತಿದ್ದಾರೆ ಎಂಬ ಕೊರಗು ಮತ್ತು ಆತಂಕದಲ್ಲಿರುವ ಹಳ್ಳಿಜನರಲ್ಲಿ ಕುಮಾರಸ್ವಾಮಿ `ನಮ್ಮವ~ನೆಂಬ ಭಾವನೆ ಹುಟ್ಟಿಸಿದ್ದು ನಿಜ.
ಇವೆಲ್ಲಕ್ಕಿಂತಲೂ ಹೆಚ್ಚಾಗಿ ಪ್ರತೀಕಾರ ಮತ್ತು ಸಂಘರ್ಷದ ರಾಜಕೀಯಕ್ಕೆ ಹೆಸರಾದ ದೇವೇಗೌಡರ ನಡವಳಿಕೆಗೆ ವಿರುದ್ಧವಾದ ಸ್ನೇಹಶೀಲ ಗುಣವೂ ಅವರನ್ನು ಜನಪ್ರಿಯ ಮಾಡಿತ್ತು.
ಜನ ಮೆಚ್ಚಿದ್ದು ಕುಮಾರಸ್ವಾಮಿ ದೇವೇಗೌಡರ ಮಗ ಎಂಬ ಕಾರಣಕ್ಕಲ್ಲ, ಮಗನಾದರೂ ಅವರ ಹಾಗೆ ಇಲ್ಲ ಎನ್ನುವ ಕಾರಣಕ್ಕೆ. ಇದರಿಂದಾಗಿಯೇ ಉತ್ತರ ಕರ್ನಾಟಕದಲ್ಲಿ ಎಂದೂ ದೇವೇಗೌಡರ ಸಭೆಗೆ ಸೇರದಷ್ಟು ಜನ ಕುಮಾರಸ್ವಾಮಿ ಸಭೆಗೆ ಸೇರುತ್ತಿದ್ದರು.
ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡದೆ, ದೀರ್ಘವಾದ ರಾಜಕೀಯ ಅನುಭವವೂ ಇಲ್ಲದೆ ಕ್ಷಿಪ್ರಗತಿಯಲ್ಲಿ ಇಷ್ಟೊಂದು ಜನಪ್ರಿಯರಾದ ಮುಖ್ಯಮಂತ್ರಿಯನ್ನು ಕರ್ನಾಟಕ ಎಂದೂ ಕಂಡಿಲ್ಲ.
ರಾಜ್ಯದ ಬಹಳಷ್ಟು ಪ್ರಜ್ಞಾವಂತರು ಕುಮಾರಸ್ವಾಮಿಯವರಲ್ಲಿ ಭವಿಷ್ಯದ ನಾಯಕನನ್ನು ಕಂಡಿದ್ದರು.
ಇಂತಹ ಮುಖ್ಯಮಂತ್ರಿಯಾಗಿದ್ದ ಎಚ್. ಡಿ.ಕುಮಾರಸ್ವಾಮಿಯವರ ಬಗ್ಗೆ ಈಗ ಯಾರಾದರೂ ಜನಾಭಿಪ್ರಾಯ ಸಂಗ್ರಹ ಮಾಡಿದರೆ ಬಹುಶಃ ಅವರ ಜನಪ್ರಿಯತೆಯ ಸೂಚ್ಯಂಕ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗಿಂತಲೂ ಕೆಳಗಿರಬಹುದು.
ಹಾಲಿ ಆಗಿದ್ದಾಗ ಶಿಖರದಲ್ಲಿದ್ದ ಜನಪ್ರಿಯತೆ ಮಾಜಿ ಆದ ಮೇಲೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಕರ್ನಾಟಕದ ಆಡಳಿತಾರೂಢರು ದೇಶದಲ್ಲಿಯೇ ಅತೀ ಭ್ರಷ್ಟರು ಎಂಬ ಅಭಿಪ್ರಾಯ ಇರುವ ಕಾಲದಲ್ಲಿ ವಿರೋಧಪಕ್ಷದ ನಾಯಕನೊಬ್ಬ ಈ ರೀತಿ ಜನಪ್ರಿಯತೆ ಕಳೆದುಕೊಳ್ಳುವುದು ಭಾರತದ ರಾಜಕಾರಣದಲ್ಲಿಯೇ ಅಪರೂಪದ ಪ್ರಸಂಗ.
ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗೆಲ್ಲ `ಅಪ್ಪನಿಗಿಂತ ಮಗ ವಾಸಿ~ ಎನ್ನುತ್ತಿದ್ದವರೇ ಈಗ `ಮಗನಿಗಿಂತ ಅಪ್ಪನೇ ವಾಸಿ~ ಎನ್ನುವಂತಾಗಿದೆ.
ಯಾಕೆ ಹೀಗಾಯಿತು?
ಅಧಿಕಾರ ಹಸ್ತಾಂತರ ಮಾಡದೆ ವಚನ ಭ್ರಷ್ಟನೆಂದು ಅನಿಸಿಕೊಂಡಾಗಲೂ ಯಾರೂ ಕುಮಾರಸ್ವಾಮಿಯವರನ್ನು ಅಧಿಕಾರಲಾಲಸಿ ಎಂದು ದೂರಲಿಲ್ಲ, `ಅಪ್ಪನ ಹಟಕ್ಕೆ ಕಟ್ಟುಬಿದ್ದು ಅವರು ಹೀಗೆ ಮಾಡಬೇಕಾಯಿತು~ ಎಂದು ಅನುಕಂಪ ವ್ಯಕ್ತಪಡಿಸಿದವರೇ ಹೆಚ್ಚು.
ಆದರೆ ತಮ್ಮ ಬಗ್ಗೆ ಜನತೆ ಹೊಂದಿದ್ದ ಅಭಿಪ್ರಾಯ ತಪ್ಪೆನ್ನುವುದನ್ನು ಕುಮಾರಸ್ವಾಮಿಯವರೇ ನಂತರದ ದಿನಗಳಲ್ಲಿ ಸಾಬೀತುಪಡಿಸುತ್ತಾ ಬಂದಿದ್ದಾರೆ.
ಅಧಿಕಾರ ಹಸ್ತಾಂತರ ಮಾಡದೆ ಇದ್ದಾಗ ಅವರನ್ನು ಅಧಿಕಾರ ಲಾಲಸಿ ಎಂದು ಹೇಳದವರು ಈಗ ಅದನ್ನು ಹೇಳುತ್ತಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕನಾಗಿ ಅವರು ನಡೆದುಕೊಳ್ಳುತ್ತಿರುವ ರೀತಿ ಕಾರಣ.
ಅಧಿಕಾರದಲ್ಲಿದ್ದವರನ್ನು ಕೆಳಗಿಳಿಸುವುದೇ ವಿರೋಧಪಕ್ಷಗಳ ಕೆಲಸ ಅಲ್ಲ, ಆ ರೀತಿಯ ವರ್ತನೆಯನ್ನು ಐದು ವರ್ಷಗಳ ಅವಧಿಗೆ ಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಜನ ಇಷ್ಟಪಡುವುದಿಲ್ಲ.
ವಿರೋಧಪಕ್ಷಗಳು ಆಡಳಿತಾರೂಢರನ್ನು ಎಚ್ಚರಿಸಬೇಕು, ಟೀಕಿಸಬೇಕು ಮತ್ತು ತಿದ್ದುವ ಪ್ರಯತ್ನ ಮಾಡಬೇಕು. ಮಿತಿ ಮೀರಿದರೆ ಮಾತ್ರ ಅಧಿಕಾರದಿಂದ ಕೆಳಗಿಳಿಸುವ ಕಸರತ್ತಿಗೆ ಕೈ ಹಾಕಬೇಕು.
ಅಧಿಕಾರಕ್ಕೆ ಬಂದ ಬಿಜೆಪಿಯವರನ್ನು ಸಾವರಿಸಿಕೊಳ್ಳಲು ಬಿಡದೆ ಕುಮಾರಸ್ವಾಮಿ ಅವರ ಮೇಲೆ ದಾಳಿಗೆ ಇಳಿದಿದ್ದರು. ಸರ್ಕಾರ ರಚನೆಯ ಮೊದಲೇ ಅದನ್ನು ಉರುಳಿಸುವ ಕಾರ್ಯಾಚರಣೆಯನ್ನು ಅವರು ಪ್ರಾರಂಭಿಸಿದ್ದರು.
ಪುಕ್ಕಲತನದಿಂದಲೋ, ಒಳ್ಳೆಯತನದಿಂದಲೋ ಕಾಂಗ್ರೆಸ್ ನಾಯಕರು ಆಗ ಅವರ ಜತೆ ಕೈಜೋಡಿಸದೆ ಇದ್ದ ಕಾರಣ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.
ಅದರ ನಂತರ ಮತ್ತೆ ಬಿಜೆಪಿ ಭಿನ್ನಮತೀಯರನ್ನು ಅವರು ಎತ್ತಿಕಟ್ಟಿದರು, ಹೋಟೆಲ್, ರೆಸಾರ್ಟ್ ವಾಸ, ತೀರ್ಥಯಾತ್ರೆ ಎಂದು ಊರೆಲ್ಲ ಸುತ್ತಾಡಿಸಿದರು.
ಕುಮಾರಸ್ವಾಮಿಯವರ ಯಾವ ಪ್ರಯತ್ನವೂ ಜವಾಬ್ದಾರಿಯುತ ವಿರೋಧಪಕ್ಷದ ನಾಯಕ ಮಾಡಬೇಕಾದ ಎಚ್ಚರಿಸುವ, ಟೀಕಿಸುವ ಇಲ್ಲವೇ ತಿದ್ದುವ ಪ್ರಯತ್ನ ಆಗಿರಲಿಲ್ಲ. ಸರ್ಕಾರ ಉರುಳಿಸುವುದೇ ಆಗಿತ್ತು. ಅಲ್ಲಿಂದಲೇ ಅವರ ಜನಪ್ರಿಯತೆ ಕುಸಿಯತೊಡಗಿದ್ದು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡತೊಡಗಿದ ನಂತರದ ದಿನಗಳಲ್ಲಿ ಕುಮಾರಸ್ವಾಮಿಯವರು ಇನ್ನಷ್ಟು ತ್ವರಿತಗತಿಯಲ್ಲಿ ಜನಪ್ರಿಯತೆ ಕಳೆದುಕೊಳ್ಳತೊಡಗಿದರು.
ಅವರು ಮಾಡಿದ ಆರೋಪಗಳೆಲ್ಲವೂ ನಿರಾಧಾರವಾದುವೇನಲ್ಲ. ಅವುಗಳಲ್ಲಿ ಕೆಲವು ಆರೋಪಗಳು ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರನ್ನು ಕಷ್ಟಕ್ಕೆ ಸಿಲುಕಿಸಲೂಬಹುದು.
ಆದರೆ ಆರೋಪಗಳನ್ನು ಮಾಡುವವರು ಕಳಂಕಿತರಾಗಿದ್ದಾಗ ಮಾಡಿದ ಆರೋಪಗಳು ದುರ್ಬಲವಾಗುತ್ತವೆ. ಜನ ಆರೋಪ ಮಾಡುವವರ ಪ್ರಾಮಾಣಿಕತೆಯನ್ನು ಪ್ರಶ್ನಿಸತೊಡಗುತ್ತಾರೆ.
ಬಹುಶಃ ಕುಮಾರಸ್ವಾಮಿಯವರು ಬಯಲುಗೊಳಿಸಿದ ಹಗರಣಗಳನ್ನು ಬೇರೆ ಯಾರಾದರೂ ಹೊರಹಾಕಿದ್ದರೆ ಪರಿಣಾಮ ಬೇರೆಯೇ ಆಗುತ್ತಿತ್ತು.
ಆದರೆ ಕುಮಾರಸ್ವಾಮಿಯವರು ತಾವು ಪ್ರಾಮಾಣಿಕರು, ಶುದ್ಧಹಸ್ತರು ಎಂದು ಎಷ್ಟೇ ಎದೆಬಡಿದುಕೊಂಡರೂ ರಾಜ್ಯದ ಜನತೆ ಹಾಗೆಂದು ತಿಳಿದಿಲ್ಲ. ಕಾನೂನಿನ ಬಲೆಯಲ್ಲಿ ಅವರನ್ನು ಕೆಡವಿಹಾಕುವುದು ಸಾಧ್ಯವಾಗದೆ ಹೋಗಬಹುದು.
ಆದರೆ ಅಧಿಕಾರದಲ್ಲಿದ್ದ 20 ತಿಂಗಳ ಅವಧಿಯಲ್ಲಿ ಅವರ ಮತ್ತು ಕುಟುಂಬದ ಆಸ್ತಿ ಇದ್ದಕ್ಕಿದ್ದಂತೆ ವೃದ್ಧಿಸಿದ್ದನ್ನು ನೈತಿಕವಾಗಿ ಸಮರ್ಥಿಸಿಕೊಳ್ಳುವುದು ಅವರಿಗೂ ಕಷ್ಟ.
ಇದರಿಂದಾಗಿ ಯಡಿಯೂರಪ್ಪನವರಿಗೂ ಕಳಂಕಿತ ಕುಮಾರಸ್ವಾಮಿಯವರನ್ನು ಎದುರಿಸುವುದು ಸುಲಭವಾಗಿ ಹೋಯಿತು. ದಿನ ಕಳೆದಂತೆ ಜನ ಕೂಡಾ `ಇವರೇನು ಸಾಚಾನಾ?~ ಎಂದೇ ಮಾತನಾಡಿಕೊಳ್ಳತೊಡಗಿದರು.
ಇದರಿಂದಾಗಿಯೇ ಯಡಿಯೂರಪ್ಪನವರ ಪದಚ್ಯುತಿಗೆ ಅವರು ತೋರಿದ ಆತುರವನ್ನು ಕಂಡ ಜನ ಅವರನ್ನು `ಅಧಿಕಾರ ಲಾಲಸಿ~ ಎಂದು ಕರೆಯುವಂತಾಯಿತು.
ಅದಕ್ಕೆ ಸರಿಯಾಗಿ ಲೋಕಾಯುಕ್ತರು ಕೂಡಾ ತಮ್ಮ ವರದಿಯಲ್ಲಿ ಅವರ ಅಧಿಕಾರ ಕಾಲದ ಗಣಿ ಅಕ್ರಮಗಳನ್ನು ಬಯಲಿಗೆಳೆದರು. ಯಾವಾಗ ಆರೋಪಿಯ ಕಟಕಟೆಯಲ್ಲಿ ತಾನು ಕೂಡಾ ಯಡಿಯೂರಪ್ಪನವರ ಜತೆಯಲ್ಲಿ ನಿಲ್ಲಬೇಕಾಯಿತೋ, ಅದರ ನಂತರ ಅವರ ಮಾತಿನ ವರಸೆ ಬದಲಾಗಿಹೋಯಿತು.
`ಜೈಲಿಗೆ ಕಳುಹಿಸಿಯೇ ಸಿದ್ಧ~ ಎಂದು ತೊಡೆತಟ್ಟುತ್ತಿದ್ದ ಅವರು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ಬಗ್ಗೆ ಅನುಕಂಪದ ಮಳೆ ಹರಿಸತೊಡಗಿದರು.
ಉಕ್ಕಿ ಹರಿದ ಅನುಕಂಪ ಅವರನ್ನು ಪರಪ್ಪನ ಅಗ್ರಹಾರದ ವರೆಗೂ ಕರೆದುಕೊಂಡು ಹೋಯಿತು. ಅದರ ನಂತರ ಇಬ್ಬರು ಆರೋಪಿಗಳು ಕೂಡಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರ ಮೇಲೆ ನಾಲಿಗೆ ಸಡಿಲ ಬಿಟ್ಟು ದಾಳಿ ಮಾಡತೊಡಗಿದರು.
ನ್ಯಾ.ಹೆಗ್ಡೆ ವಿರುದ್ದ ಮಾಡಿದ ಆಧಾರರಹಿತ ಆರೋಪಗಳು ಬೂಮರಾಂಗ್ ಆಗಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಜನ ಚರ್ಚೆ ನಡೆಸುವಂತಾಯಿತು.
ಆದರೆ ಇದ್ಯಾವುದರಿಂದಲೂ ಕುಮಾರಸ್ವಾಮಿಯವರು ಬುದ್ಧಿ ಕಲಿತಂತೆ ಇಲ್ಲ. ಸಹವಾಸ ದೋಷವೋ, ಸುಲಭದಲ್ಲಿ ಅನುಭವಿಸಿದ ಅಧಿಕಾರದ ಮೇಲೆ ಹುಟ್ಟಿದ ಲಾಲಸೆಯೋ, ಕನಸುಗಳು ಭಗ್ನಗೊಂಡ ಕಾರಣದಿಂದ ಉಂಟಾದ ಹತಾಶೆಯೋ -ರಾಜ್ಯದ ರಾಜಕೀಯದಲ್ಲಿ ಎತ್ತರಕ್ಕೆ ಏರಬಹುದೆಂದು ಜನ ನಿರೀಕ್ಷಿಸಿದ್ದ ಕುಮಾರಸ್ವಾಮಿಯವರು ಜಾರಿ ಬೀಳುತ್ತಿದ್ದಾರೆ.
ಈಗ ರಾಜಕೀಯ ಆತ್ಮವಂಚನೆಯ ಕ್ಲೈಮ್ಯಾಕ್ಸ್ ಎಂಬಂತೆ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಶ್ರಿರಾಮುಲು ಅವರಿಗೆ ಕುಮಾರಸ್ವಾಮಿ ಬೆಂಬಲ ಘೋಷಿಸಿದ್ದಾರೆ.
ಯಾರು ಈ ಶ್ರಿರಾಮುಲು? ಲೋಕಾಯುಕ್ತರ ವರದಿ ಪ್ರಕಾರ ಯಡಿಯೂರಪ್ಪ ಅವರಂತೆ ಶ್ರಿರಾಮುಲು ಕೂಡಾ ಒಬ್ಬ ಆರೋಪಿ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತು ಹೈದರಾಬಾದ್ನ ಸೆರೆಮನೆಯಲ್ಲಿರುವ ಗಾಲಿ ಜನಾರ್ದನ ರೆಡ್ಡಿಯವರ ಆಪ್ತ ಸ್ನೇಹಿತ.
ಬಳ್ಳಾರಿಯಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿ ಮಾಡಿದ ಮತ್ತು ರಾಜ್ಯ ರಾಜಕೀಯವನ್ನು ವ್ಯಾಪಾರೀಕರಣಗೊಳಿಸಿ ಅಧೋಗತಿಗಿಳಿಸಿದ ಆರೋಪಗಳನ್ನು ಹೊತ್ತವರು ಜನಾರ್ದನ ರೆಡ್ಡಿ.
ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿಗಳ ಗಣಿಕಪ್ಪ ಪಡೆದಿರುವ ಗಂಭೀರ ಆರೋಪವನ್ನು ಜನಾರ್ದನ ರೆಡ್ಡಿ ಮಾಡಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.
ದೇವೇಗೌಡ ಮತ್ತು ಕುಟುಂಬದ ಸದಸ್ಯರನ್ನು ಮೊನ್ನೆಮೊನ್ನೆ ವರೆಗೂ ಅವರು ಸಾರ್ವಜನಿಕವಾಗಿ ಏಕವಚನದಲ್ಲಿ ನಿಂದಿಸುತ್ತಿದ್ದುದನ್ನು ಜನ ಕೇಳಿದ್ದಾರೆ. ಶ್ರಿರಾಮುಲು ಅವರೂ ಅದಕ್ಕೆ ದನಿಗೂಡಿಸುತ್ತಾ ಬಂದವರು.
ಎರಡೂ ಕುಟುಂಬಗಳು ಬೀದಿಯಲ್ಲಿ ನಿಂತು ತೀರಾ ಕೆಳಮಟ್ಟದಲ್ಲಿ ಕಚ್ಚಾಡಿವೆ. ಇವೆಲ್ಲವೂ ಕಳೆದ 4-5 ವರ್ಷಗಳ ಅವಧಿಯಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಬೆಳವಣಿಗೆ. ಇಂತಹ ಜನಾರ್ದನ ರೆಡ್ಡಿ ತನ್ನ ಪಾಲಿನ ದೇವರು ಎನ್ನುತ್ತಾರೆ ಶ್ರಿರಾಮುಲು.
ರೆಡ್ಡಿ ಸೋದರರ ಎಲ್ಲ ಕೆಲಸಗಳಲ್ಲಿಯೂ ಶ್ರಿರಾಮುಲು ಪಾತ್ರಧಾರಿ. ಇಂತಹವರಿಗೆ ಕುಮಾರಸ್ವಾಮಿಯವರ ಪಕ್ಷ ಬೆಂಬಲ ಘೋಷಿಸಿದೆ.
ನ್ಯಾಯ-ಅನ್ಯಾಯದ ಪರಾಮರ್ಶೆ, ಜನರ ಹಿತದ ಮಾತು ಒತ್ತಟ್ಟಿಗಿರಲಿ, ಕನಿಷ್ಠ ಆತ್ಮಾಭಿಮಾನ ಉಳ್ಳವರು ಇಂತಹ ರಾಜಿ ಮಾಡಿಕೊಳ್ಳಲಾರರು.`ನಾಯಕನಾಗಲಾರೆ, ಖಳನಾಯಕನಾಗುವೆ~ ಎಂದು ಹೊರಟವರನ್ನು ಏನು ಮಾಡಲು ಸಾಧ್ಯ?
ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಅಧಿಕಾರ ಹಸ್ತಾಂತರದ ವಿವಾದದ ಸಂದರ್ಭದಲ್ಲಿ `ಯಯಾತಿ ಮತ್ತು ಪುರು ಎಂಬ ತಂದೆ- ಮಗನ ನೆನಪಿನಲ್ಲಿ...~ ಎಂಬ ಅಂಕಣವೊಂದನ್ನು ಬರೆದಿದ್ದೆ.
ಶಾಪಗ್ರಸ್ತನಾಗಿ ಅಕಾಲ ವೃದ್ದಾಪ್ಯ ಪಡೆದ ಯಯಾತಿ ತನ್ನ ಮಗ ಪುರುವಿಗೆ ಶಾಪ ವರ್ಗಾಯಿಸಿ ಯೌವ್ವನವನ್ನು ಪಡೆದ ಕತೆ ಮಹಾಭಾರತದಲ್ಲಿದೆ.
`ಬಿಜೆಪಿ ಜತೆ ಮೈತ್ರಿಮಾಡಿಕೊಂಡ ಮಗನಿಂದಾಗಿ ಶಾಪಗ್ರಸ್ತನಾದೆ~ ಎಂದು ತಿಳಿದುಕೊಂಡಿದ್ದ ದೇವೇಗೌಡರು ವಯಸ್ಸಿಗೆ ಮೀರಿದ ವೃದ್ಧಾಪ್ಯದಿಂದ ಬಳಲುತ್ತಿರುವ `ಯಯಾತಿ~ಯಂತೆ ವರ್ತಿಸತೊಡಗಿದ್ದರು.
ಇಪ್ಪತ್ತು ತಿಂಗಳ ನಂತರ ಶಾಪಕ್ಕೆ ಮುಕ್ತಿ ಪಡೆಯ ಬಯಸಿದ ಗೌಡರು ಅಧಿಕಾರ ಹಸ್ತಾಂತರ ಮಾಡದಂತೆ ಮಗನ ಮನವೊಲಿಸುವಲ್ಲಿ ಸಫಲರಾಗಿದ್ದರು.
ಅಲ್ಲಿಯ ವರೆಗೆ `ಯಯಾತಿ~ಯಂತೆ ವೃದ್ಧಾಪ್ಯದಿಂದ ಬಳಲುತ್ತಿದ್ದ ಗೌಡರು ನಂತರ ಯುವಕರಂತೆ ಅಬ್ಬರಿಸತೊಡಗಿದ್ದರು. ಅಲ್ಲಿಯ ವರೆಗೆ ಯೌವ್ವನ ಸಹಜ ಉತ್ಸಾಹದಲ್ಲಿ ಬೀಗುತ್ತಿದ್ದ ಕುಮಾರಸ್ವಾಮಿ ಅಪ್ಪನ ವೃದ್ದಾಪ್ಯವನ್ನು ಪಡೆದ `ಪುರು~ವಿನಂತೆ ಬಾಡಿಹೋಗಿದ್ದರು.
ಮಹಾಭಾರತದಲ್ಲಿರುವ ಕತೆಯ ಪ್ರಕಾರ ಪುರು ಪಶ್ಚಾತ್ತಾಪಕ್ಕೀಡಾದ ತಂದೆಯಿಂದ ಯೌವ್ವನವನ್ನು ಮರಳಿ ಪಡೆಯುತ್ತಾನೆ.
ಆದರೆ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿದ ನಂತರ ಯೌವ್ವನವನ್ನು ಕಳೆದುಕೊಂಡಂತೆ ಬಳಲಿಹೋಗಿದ್ದ ಕುಮಾರಸ್ವಾಮಿ ಮರಳಿ ಅದನ್ನು ಪಡೆಯಲೇ ಇಲ್ಲ.