ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭವಿಷ್ಯ ಇಲ್ಲವೇನೋ ಎಂಬ ಕಳವಳಕಾರಿ ಪರಿಸ್ಥಿತಿ ಆರು ತಿಂಗಳ ಹಿಂದಿನವರೆಗೂ ಇತ್ತು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜತೆಯಲ್ಲಿ ಪತ್ರಿಕಾರಂಗದ ಮೇಲಿನ ವಿಶ್ವಾಸವನ್ನೂ ಕಳೆದುಕೊಂಡವರಂತೆ ಜನ ಮಾತನಾಡುತ್ತಿದ್ದರು.
ಭ್ರಷ್ಟಾಚಾರದ ಗೆದ್ದಲು ಹಿಡಿದು ದುರ್ಬಲಗೊಂಡಿರುವ ಈ ನಾಲ್ಕು ಅಂಗಗಳಿಂದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಸಾಧ್ಯವೇ ಇಲ್ಲವೆನ್ನುವ ನಿರಾಶೆ ಅವರ ಮುಖದಲ್ಲಿತ್ತು.
ಕಾರ್ಯಾಂಗ ಮತ್ತು ಶಾಸಕಾಂಗದ ಬಗ್ಗೆ ಜನತೆಗೆ ಎಂದೂ ನಿರೀಕ್ಷೆ ಇರಲಿಲ್ಲ, ಆದರೆ ನಂಬಿಕೆ ಇಟ್ಟುಕೊಂಡಿದ್ದ ನ್ಯಾಯಾಂಗ ಮತ್ತು ಪತ್ರಿಕಾರಂಗದ ಬಗ್ಗೆಯೂ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಜನತೆ ಭವಿಷ್ಯದ ಬಗೆಗಿನ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಿದ್ದು ನಿಜ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಗೆ ವ್ಯಕ್ತವಾದ ಬೆಂಬಲಕ್ಕೆ ಜನಸಮೂಹದಲ್ಲಿದ್ದ ಈ ನಿರಾಶೆ ಮತ್ತು ಹತಾಶೆಯೂ ಕಾರಣ.
ಭ್ರಷ್ಟಾಚಾರದ ಆರೋಪದ ಮೇಲೆ ಯಾರಾದರೂ ರಾಜಕಾರಣಿಗಳು ಜೈಲಿಗೆ ಹೋಗುವುದಿದ್ದರೆ ಅದು ಬಿಹಾರ, ಜಾರ್ಖಂಡ್, ಉತ್ತರಪ್ರದೇಶಗಳಲ್ಲಿ ಮಾತ್ರ ಎಂದು ಎಲ್ಲರೂ ತಿಳಿದುಕೊಂಡಿದ್ದ ಕಾಲವೊಂದಿತ್ತು.
ಆ ನಿಯಮಕ್ಕೆ ಅಪವಾದವೆಂಬಂತೆ ಜೈಲು ಸೇರಿದವರು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಮಾತ್ರ. ಉತ್ತರದ ಮೂರು ರಾಜ್ಯಗಳಲ್ಲಿ ಜೈಲಿಗೆ ಹೋಗಿರುವ ಬಹುತೇಕ ಶಾಸಕರು ಮತ್ತು ಸಂಸದರು ಅಪರಾಧ ಜಗತ್ತಿನಿಂದಲೇ ಬಂದವರಾಗಿರುವುದರಿಂದ ಅವರ ಬಂಧನದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಮುಖ್ಯಮಂತ್ರಿಗಳಾಗಿದ್ದ ಲಾಲು ಪ್ರಸಾದ್ ಮತ್ತು ಮಧುಕೋಡಾ ಅವರ `ಖ್ಯಾತಿ~ ಜೈಲು ಸೇರುವ ಮೊದಲೇ ದೇಶದಾದ್ಯಂತ ಹರಡಿದ್ದ ಕಾರಣ ಅವರ ಬಂಧನ ಯಾರಿಗೂ ಅಚ್ಚರಿ ಉಂಟುಮಾಡಿರಲಿಲ್ಲ. ಅದನ್ನು ನ್ಯಾಯಾಂಗದ ಕ್ರಿಯಾಶೀಲತೆ ಎಂದು ಯಾರೂ ವ್ಯಾಖ್ಯಾನಿಸಲೂ ಇಲ್ಲ.
ಆದರೆ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಈಗ ಮುಖ್ಯಮಂತ್ರಿಗಳು, ಮಂತ್ರಿಗಳು, ಹಿರಿಯ ಅಧಿಕಾರಿಗಳು, ಕಾರ್ಪೋರೇಟ್ ಕುಳಗಳು ಎಲ್ಲರೂ ಜೈಲಿನ ಅನ್ನ ತಿನ್ನತೊಡಗಿದ್ದಾರೆ. ಈ ಬದಲಾವಣೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪನೆ ಮಾಡಿರುವುದು.
ಆಡಳಿತ ಪಕ್ಷದ ಕೈಗೊಂಬೆ ಎಂಬ ತಮ್ಮ ಮೇಲಿನ ಆರೋಪವನ್ನು ಕೇಂದ್ರ ತನಿಖಾ ದಳ (ಸಿಬಿಐ) ಸುಳ್ಳೆಂದು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದು ಕಡಿಮೆ. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಕಟ್ಟಿದ ಈ ಸಂಸ್ಥೆಯನ್ನು ಆಡಳಿತಾರೂಢ ಪಕ್ಷ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಬಳಸಿದ್ದೇ ಹೆಚ್ಚು.
ಅದೇ ಸ್ಥಿತಿ ಮಹಾಲೇಖಪಾಲರದ್ದು (ಸಿಎಜಿ). ಸಾರ್ವಜನಿಕ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಸಂವಿಧಾನಬದ್ಧ ಸಂಸ್ಥೆಯಾಗಿ ರಚನೆಗೊಂಡರೂ ಅದೊಂದು ಹಲ್ಲಿಲ್ಲದ ಸಂಸ್ಥೆಯಾಗಿಯೇ ಉಳಿದಿತ್ತು. ಅದು ನೀಡಿದ ವರದಿ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು ಅಪರೂಪ. ಅದರ ವರದಿಗಳನ್ನು ವ್ಯವಸ್ಥಿತವಾಗಿ ಮೂಲೆಗೆ ತಳ್ಳಲಾಗುತ್ತಿತ್ತು.
ಭ್ರಷ್ಟಾಚಾರ ನಿಗ್ರಹ ಕಾಯಿದೆ 1947ರಿಂದಲೇ ಜಾರಿಯಲ್ಲಿದ್ದರೂ ಅದಕ್ಕೆ ದೊಡ್ಡ ತಿಮಿಂಗಿಲಗಳನ್ನು ಹಿಡಿದು ಹಾಕುವ ಶಕ್ತಿ ಇರಲಿಲ್ಲ. ಚುನಾವಣಾ ಅಕ್ರಮಗಳ ಬಗ್ಗೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ಕೂಡಾ ಹಲವಾರು ಬಾರಿ ಅಸಹಾಯಕತೆಯಿಂದ ಕೈಚೆಲ್ಲಿತ್ತು.
ಸವಾಲು ಹಾಕುವ ರೀತಿಯಲ್ಲಿ ಕರ್ನಾಟಕದಲ್ಲಿ ನಡೆದ `ಆಪರೇಷನ್ ಕಮಲ~ವನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಲೋಕಾಯುಕ್ತರಿದ್ದ ರಾಜ್ಯಗಳಲ್ಲಿ ಸಾಲುಸಾಲು ದಾಳಿ ನಡೆಸಿದ್ದರೂ ಎಷ್ಟು ಮಂದಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂದು ಕೇಳಿದರೆ ಉತ್ತರ ನೀಡುವ ಸ್ಥಿತಿಯಲ್ಲಿ ಅವುಗಳೂ ಇರಲಿಲ್ಲ.
ಇವೆಲ್ಲವೂ ಆರೇಳು ತಿಂಗಳು, ಹೆಚ್ಚೆಂದರೆ ಒಂದು ವರ್ಷದ ಹಿಂದಿನ ಕತೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದ್ದಕ್ಕಿದ್ದಂತೆ ಕ್ರಿಯಾಶೀಲವಾಗಿರುವ ನ್ಯಾಯಾಂಗ, ಆಡಳಿತ ನಡೆಸುವವರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಸಿಬಿಐ ಹೆಸರು ಹೇಳಿದಾಕ್ಷಣ ಇದೇ ಮೊದಲ ಬಾರಿ ಆಡಳಿತಾರೂಢ ಪಕ್ಷಗಳ ನಾಯಕರು ಕೂಡಾ ನಡುಗತೊಡಗಿದ್ದಾರೆ.
ಮಹಾಲೇಖಪಾಲರ ವರದಿ ಕೇಂದ್ರ ಸಚಿವರು, ಅಧಿಕಾರಿಗಳು, ಉದ್ಯಮಿಗಳು, ರಾಜಕೀಯ ನಾಯಕರು ಜೈಲು ಸೇರುವಂತೆ ಮಾಡಿದೆ. ಮುಖದಲ್ಲಿ ಅಲ್ಲಲ್ಲಿ ಕಳಂಕ ಮೆತ್ತಿಕೊಂಡಿದ್ದರೂ ಪೈಪೋಟಿಗೆ ಬಿದ್ದ ಮಾಧ್ಯಮಗಳು ಭ್ರಷ್ಟಾಚಾರದ ಹಗರಣಗಳನ್ನು ಬಚ್ಚಿಟ್ಟುಕೊಳ್ಳಲಾಗದೆ ಅನಿವಾರ್ಯವಾಗಿ ಬಯಲು ಮಾಡುತ್ತಲೇ ಇವೆ.
ಕೇಂದ್ರದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಈ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಕ್ರಮ ಗಣಿಗಾರಿಕೆಯ ಮೂಲಕ ಗಳಿಸಿದ ಹಣದಿಂದ ರಾಜ್ಯ ರಾಜಕೀಯವನ್ನು ಮುಷ್ಟಿಯಲ್ಲಿಟ್ಟುಕೊಂಡಿದ್ದ ರೆಡ್ಡಿ ಸೋದರರಲ್ಲಿ ಒಬ್ಬರು ಜೈಲು ಸೇರಿದ್ದಾರೆ.
ಮೊದಲು ಮಹಾನಗರಪಾಲಿಕೆ ಸದಸ್ಯ, ನಂತರ ಸಚಿವರು ಕೊನೆಗೆ ಮುಖ್ಯಮಂತ್ರಿಗಳೇ ಜೈಲು ಸೇರಬೇಕಾಯಿತು. ಉಳಿದ ಸಚಿವರು ಜೈಲಿಗೆ ಹೋಗಲು ಸರತಿ ಸಾಲಲ್ಲಿ ನಿಂತಿದ್ದಾರೆ. ಲೋಕಾಯುಕ್ತ ವರದಿಯ ಕುಣಿಕೆ ಇನ್ನೆಷ್ಟು ಮಂದಿಯ ಕೊರಳಿಗೆ ಬೀಳುತ್ತದೆಯೋ ಗೊತ್ತಿಲ್ಲ.
ಇಷ್ಟಾದ ಮೇಲೆ ನ್ಯಾಯಾಲಯ, ಸಿಬಿಐ, ಸಿಎಜಿ, ಲೋಕಾಯುಕ್ತದ ಕಾರ್ಯನಿರ್ವಹಣೆಯ ಬಗ್ಗೆ ಯಾರೂ ಬೊಟ್ಟು ಮಾಡುವಂತಿಲ್ಲ. ಈಗ ಪ್ರಜಾಪ್ರಭುತ್ವಕ್ಕೆ ಭಾರತದ ನೆಲದಲ್ಲಿ ಭವಿಷ್ಯ ಇಲ್ಲ ಎಂಬ ಸಿನಿಕತನವನ್ನು ಯಾರೂ ವ್ಯಕ್ತಪಡಿಸಬೇಕಾಗಿಲ್ಲ. ಸಂವಿಧಾನ ವಿಫಲಗೊಂಡಿದೆ ಎಂದು ಯಾರೂ ದೂರುವಂತೆಯೂ ಇಲ್ಲ. ಅವುಗಳು ಮಾಡಬೇಕಾಗಿರುವ ಕೆಲಸವನ್ನು ಮಾಡಿವೆ.
ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವಾಗಿ ಕಾಣಬಯಸುವರು, ಪ್ರಜಾಪ್ರಭುತ್ವವನ್ನು ಪ್ರೀತಿಸುವವರು, ಸಂವಿಧಾನದ ಮೇಲೆ ಗೌರವ ಇಟ್ಟುಕೊಂಡವರೆಲ್ಲರೂ ಈ ಸಂಸ್ಥೆಗಳ ಕರ್ತವ್ಯಪ್ರಜ್ಞೆ, ನ್ಯಾಯನಿಷ್ಠುರತೆ ಮತ್ತು ಇಚ್ಛಾಶಕ್ತಿಯಿಂದ ಕೂಡಿರುವ ಕಾರ್ಯ ನಿರ್ವಹಣೆಯನ್ನು ಮೆಚ್ಚಬೇಕು, ಬೆಂಬಲ ನೀಡಬೇಕು ಅಲ್ಲವೇ. ಹಾಗಾಗುತ್ತಿದೆಯೇ?
ಭ್ರಷ್ಟಾಚಾರದ ಆರೋಪ ಹೊತ್ತವರನ್ನು ನ್ಯಾಯಾಲಯ ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಕಳುಹಿಸಿದರೆ ಅವರನ್ನು ಭೇಟಿ ಮಾಡಲು ಸ್ವಾಮೀಜಿಗಳು ಗುಂಪುಗುಂಪಾಗಿ ಜೈಲಿಗೆ ಹೋಗುತ್ತಾರೆ. ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾದವರಿಗೆ ಅವರ ಅಭಿಮಾನಿಗಳು ವೀರೋಚಿತವಾದ ಸ್ವಾಗತ ನೀಡುತ್ತಾರೆ.
ಈ ಪರಿಸ್ಥಿತಿಯಲ್ಲಿ ನ್ಯಾಯನಿಷ್ಠುರತೆಯಿಂದ ಕೆಲಸ ನಿರ್ವಹಿಸಿದ ಲೋಕಾಯುಕ್ತದ ಒಬ್ಬ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿಗಳ ಪರಿಸ್ಥಿತಿ ಏನಾಗಬೇಕು? ತಾಂತ್ರಿಕವಾಗಿ ಇದು ನ್ಯಾಯಾಂಗದ ನಿಂದನೆ ಅಲ್ಲದೆ ಇರಬಹುದು, ಆದರೆ ನೈತಿಕವಾಗಿ? ಪ್ರಾಮಾಣಿಕರನ್ನು ನೈತಿಕವಾಗಿ ಕುಂದಿಸಲು ಇಂತಹ ಸಮಾಜ ವಿರೋಧಿ ನಡವಳಿಕೆಗಳು ಸಾಕಲ್ಲವೇ?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತ್ರವಲ್ಲ ಎ.ರಾಜಾ, ಸುರೇಶ್ ಕಲ್ಮಾಡಿ, ಕನಿಮೊಳಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಮೊದಲಾದವರು ಸೇರಿದಂತೆ ಭ್ರಷ್ಟಾಚಾರದ ಹಗರಣಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿರುವವರೆಲ್ಲರೂ ಅವರೇ ಹೇಳಿಕೊಂಡಂತೆ ನಿರಪರಾಧಿಗಳಾಗಿರಲೂಬಹುದು. ಆದರೆ ಸದ್ಯಕ್ಕೆ ಯಾವ ನ್ಯಾಯಾಲಯವೂ ಅವರನ್ನು ದೋಷಮುಕ್ತರನ್ನಾಗಿ ಮಾಡಿಲ್ಲ.
ಆರೋಪಿಗಳಿಗೆ ದೋಷ ಮುಕ್ತರಾಗುವ ಅವಸರ ಸಹಜ. ಆದರೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರುವ ಧಾರ್ಮಿಕ ನಾಯಕರಿಗೆ, ಸಮಾಜದ ಗಣ್ಯರಿಗೆ ನಿರಪರಾಧಿತನದ ಸರ್ಟಿಫಿಕೇಟ್ ನೀಡುವ ಅವಸರ ಯಾಕೆ? ಭಾರತದ ರಾಜಕೀಯದ ಆರೋಗ್ಯ ಹಾಳು ಮಾಡಿರುವುದು ದುಡ್ಡು ಮತ್ತು ಜಾತಿ ಎಂಬ ಎರಡು ರೋಗಗಳು.
`ದುಡ್ಡಿನ ಬಲದಿಂದ ಏನಾದರೂ ಮಾಡಬಲ್ಲೆ, ಸರ್ಕಾರವನ್ನು ಸ್ಥಾಪಿಸಬಲ್ಲೆ, ಅಗತ್ಯವೆನಿಸಿದರೆ ಅದನ್ನು ಉರುಳಿಸಲು ಬಲ್ಲೆ~ ಎಂದಲ್ಲವೇ ರೆಡ್ಡಿ ಸೋದರರು ಹೇಳುತ್ತಿದ್ದದ್ದು.
ಯಡಿಯೂರಪ್ಪನವರು `ಆಪರೇಷನ್ ಕಮಲ~ವನ್ನು ವಿಧಾನಸೌಧದಿಂದ ಹಾಲಿನ ಸೊಸೈಟಿವರೆಗೆ ಎಲ್ಲೆಂದರಲ್ಲಿ ನಡೆಸಿ ವಿರೋಧಿಗಳು ಅಸಹಾಯಕರಂತೆ ಬಾಯಿಬಡಿದುಕೊಳ್ಳುವಂತೆ ಮಾಡಿದ್ದು ಇದೇ ದುಡ್ಡಿನ ಬಲದಿಂದ ಅಲ್ಲವೇ?
ಆದರೆ ನ್ಯಾಯ ಪಾಲನೆಯ ಸಂಸ್ಥೆಗಳು ಮೇಲೆರಗಿದಾಗ ಚಿನ್ನದ ಸಿಂಹಾಸನದ ಮೇಲೆ ಕೂತಿದ್ದ ಜನಾರ್ದನ ರೆಡ್ಡಿಯವರಿಗೂ ತಾವು ಜೈಲು ಪಾಲಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವಾಗದ ದುಡ್ಡು ಒಂದು ಕ್ಷಣ ನಿಷ್ಪ್ರಯೋಜಕ ಎಂದು ಅವರಿಗೆ ಅನಿಸಿರಬಹುದು.
ಯಡಿಯೂರಪ್ಪ, ಎ.ರಾಜಾ, ಸುರೇಶ್ ಕಲ್ಮಾಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ -ಇವರಲ್ಲಿ ಯಾರಿಗೂ ದುಡ್ಡಿನ ಕೊರತೆ ಇಲ್ಲ. `ದುಡ್ಡೊಂದು ಇದ್ದರೆ ಏನನ್ನಾದರೂ ಸಾಧಿಸಬಲ್ಲೆ~ ಎಂದು ಬಲವಾಗಿ ನಂಬಿದವರು ಇವರೆಲ್ಲ.
ರಾಜಕಾರಣಿಗಳು ನಂಬಿದ್ದ ದುಡ್ಡಿನ ಸೊಂಟವನ್ನು ನ್ಯಾಯದ ದಂಡ ಮುರಿದುಹಾಕಿದೆ. ಕೇವಲ ದುಡ್ಡಿನ ಬಲದಿಂದಲೇ ರಾಜಕೀಯದಲ್ಲಿ ಉಳಿಯಲು-ಬೆಳೆಯಲು ಸಾಧ್ಯ ಇಲ್ಲ ಎನ್ನುವುದನ್ನು ಈಗಿನ ಬೆಳವಣಿಗೆಗಳು ಮನವರಿಕೆ ಮಾಡಿಕೊಟ್ಟಿವೆ. ಆದರೆ ಜಾತಿ?
ರಾಜಕೀಯವನ್ನು ಕಾಡುತ್ತಿರುವ ಜಾತಿಯ ರೋಗಕ್ಕೆ ಕಾನೂನಿನಲ್ಲಿಯೂ ಔಷಧಿ ಇಲ್ಲ.
ಅಸ್ಪೃಶ್ಯತೆ ಆಚರಣೆಗೆ, ಜಾತಿ ಆಧಾರದ ತಾರತಮ್ಯಗಳಿಗೆ ಕಾನೂನಿನಲ್ಲಿ ಶಿಕ್ಷೆ ಇದೆ. ಆದರೆ ಜಾತಿಯ ಕಾರಣಕ್ಕೆ ಭ್ರಷ್ಟರು, ಅಪ್ರಾಮಾಣಿಕರು, ಅನರ್ಹರು ಇಲ್ಲವೇ ಅಪರಾಧಿಗಳನ್ನು ಬೆಂಬಲಿಸುವವರಿಗೆ ಎಲ್ಲಿದೆ ಶಿಕ್ಷೆ?
ಈ ಕಾರಣದಿಂದಾಗಿಯೇ ದುಡ್ಡಿನ ಬಲದಿಂದ ಮಾಡಲಾರದ್ದನ್ನು ಜಾತಿಯ ಬಲದ ಮೂಲಕ ಮಾಡಲು ಕರ್ನಾಟಕದ ರಾಜಕಾರಣಿಗಳು ಹೊರಟಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಯಡಿಯೂರಪ್ಪನವರು ಆತ್ಮರಕ್ಷಣೆಗಾಗಿ ಜೋತುಬಿದ್ದಿರುವುದು ಜಾತಿ ಮೇಲೆ.
ಪಕ್ಷದೊಳಗೆ ಮತ್ತು ಹೊರಗೆ ಇರುವ ಅವರ ವಿರೋಧಿಗಳು ಕೂಡಾ ಅವರಿಗೆ ಹೆದರುತ್ತಿರುವುದು ಅವರಿಗಿದೆಯೆಂದು ಹೇಳಲಾಗುತ್ತಿರುವ ಜಾತಿ ಬೆಂಬಲಕ್ಕಾಗಿ.
ಲೋಕಾಯುಕ್ತ ವರದಿಯಲ್ಲಿ ತನ್ನ ವಿರುದ್ಧ ಆರೋಪವಿರುವುದನ್ನು ಪ್ರತಿಭಟಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಪಕ್ಷವನ್ನೂ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಶ್ರಿರಾಮುಲು ಅವರೂ ಮತ್ತೆ ಗೆದ್ದು ಬರುತ್ತೇನೆಂದು ಸವಾಲು ಹಾಕುತ್ತಿರುವುದಕ್ಕೂ ಜಾತಿ ಕಾರಣ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಜಾತಿ ಜನ ಬಹುಸಂಖ್ಯೆಯಲ್ಲಿದ್ದಿದ್ದರೆ ದೇವೇಗೌಡರು ಕೂಡಾ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅದನ್ನೇ ಮಾಡುತ್ತಿದ್ದರು.
ಕರ್ನಾಟಕದ ರಾಜಕೀಯದ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಹತ್ತುವರ್ಷಗಳ ಹಿಂದಿನ ಬಿಹಾರ ನೆನಪಾಗುತ್ತದೆ. ಜಯಪ್ರಕಾಶ್ ನಾರಾಯಣ್ ಅವರ `ಸಂಪೂರ್ಣ ಕ್ರಾಂತಿ~ಯ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶಿಸಿದ್ದ ಲಾಲುಪ್ರಸಾದ್ ಜಾತಿವಾದಿಯೇನೂ ಆಗಿರಲಿಲ್ಲ.
ಮುಖ್ಯಮಂತ್ರಿಯಾಗಿ ಮೊದಲ ಅವಧಿಯ ಸಾಧನೆ ಜನ ಕೊಂಡಾಡುವಂತಿತ್ತು. ನಂತರದ ದಿನಗಳಲ್ಲಿ ಭ್ರಷ್ಟಗೊಳ್ಳುತ್ತಾ ಹೋದ ಲಾಲು ರಾಜಕೀಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಾತಿವಾದಿಯಾಗುತ್ತಾ ಹೋದರು.
ಜಾತಿ ಸಂಘರ್ಷದ ಮೂಲಕವೇ ಜಾತಿ ನಾಶ ಮಾಡಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಸಮಾಜವಾದದ ಪಾಠವನ್ನು ತಿರುಚಿದ ಲಾಲು, ರಾಜಕೀಯ ಉಳಿವಿಗಾಗಿ ಜಾತಿ ಕಲಹವನ್ನು ಬಳಸಿಕೊಂಡರು.
ಲಾಲು ಅವರ ಜಾತಿ ರಾಜಕೀಯವನ್ನು ಜಾತಿಯಿಂದಲೇ ಎದುರಿಸುವ ಪ್ರಯತ್ನಗಳು ನಡೆದವು. ಇದರಿಂದಾಗಿ ಬಿಹಾರದ ರಾಜಕೀಯವೇ ಜಾತಿಮಯವಾಗಿ ಹೋಯಿತು.
ಬಿಹಾರದ ಕೆಟ್ಟು ನಾರುತ್ತಿದ್ದ ವ್ಯವಸ್ಥೆಗೆ ಅವರು `ಪ್ರತಿಕ್ರಿಯೆ~ ಆದರೇ ಹೊರತು `ಪರಿಹಾರ~ ಆಗಲಿಲ್ಲ. ಜನ ಎಚ್ಚೆತ್ತು ಕೊಳ್ಳಲು ಹದಿನಾರು ವರ್ಷ ಬೇಕಾಯಿತು. ಅಷ್ಟರಲ್ಲಿ ಬಿಹಾರ `ಜಂಗಲ್ ರಾಜ್~ ಆಗಿತ್ತು. ಕೊನೆಗೂ ಲಾಲು ಅವರನ್ನು ಬೆಂಬಲಿಸುತ್ತಾ ಬಂದಿದ್ದ ಆ ರಾಜ್ಯದ ಜನಸಂಖ್ಯೆಯಲ್ಲಿ ಶೇ 13ರಷ್ಟಿರುವ ಯಾದವರು ತಿರುಗಿಬಿದ್ದರು.
ಲಾಲು ಇತಿಹಾಸದ ಕಸದ ಬುಟ್ಟಿ ಸೇರಿದರು. ಇತಿಹಾಸ ಪುನರಾವರ್ತನೆಯಾಗುವಾಗ ಒಮ್ಮಮ್ಮೆ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತದೆಯಂತೆ.
ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಜಾತಿ ರಾಜಕೀಯವನ್ನು ನೋಡಿದರೆ ಬಿಹಾರದ ಇತಿಹಾಸ ಕರ್ನಾಟಕದಲ್ಲಿ ಪುನರಾವರ್ತನೆಯಾಗುತ್ತಿರುವಂತೆ ಕಾಣುತ್ತಿದೆ. ಇದನ್ನು ತಡೆಯಲು ದೇಶದ ನ್ಯಾಯಪಾಲನಾ ವ್ಯವಸ್ಥೆ ಶಕ್ತಿ ಮೀರಿಪ್ರಯತ್ನ ಮಾಡುತ್ತಿದೆ, ಈಗ ಎಚ್ಚೆತ್ತುಕೊಳ್ಳಬೇಕಾಗಿರುವುದು ಜನತೆ.