`ನಾರಾಯಣ ಗುರುಗಳು ಮಾಡದಿರುವುದನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾಡಿ ತೋರಿಸಿದ್ದಾರೆ~ ಎಂದು ಪೂಜಾರಿ ಅಭಿಮಾನಿಗಳೊಬ್ಬರು ಮೊನ್ನೆ ಹೆಮ್ಮೆಯಿಂದ ಹೇಳುತ್ತಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ `ವಿಧವಾ ವಿಮೋಚನೆ~ ಕಾರ್ಯಕ್ರಮ ಈ ಅಭಿಮಾನಿಯ ಹೆಮ್ಮೆಗೆ ಕಾರಣ.
`ಹಿಂದೂ ಮೂಲಭೂತವಾದಿಗಳು ಪಬ್ಗೆ ನುಗ್ಗಿ ಹುಡುಗಿಯರ ಮೇಲೆ ನಡೆಸಿದ ಹಲ್ಲೆಯಿಂದಾಗಿ ಹೋದ ಮಂಗಳೂರಿನ ಮಾನ, `ವಿಧವಾ ವಿಮೋಚನಾ~ ಕಾರ್ಯಕ್ರಮದಿಂದ ಬಂತು~ ಎಂದು ಇನ್ಯಾರೋ ಹೇಳುತ್ತಿದ್ದರು.
ಭಾವುಕ ಮನಸ್ಸಿನ ಈ ಪ್ರತಿಕ್ರಿಯೆಗಳಲ್ಲಿ ಅತಿರೇಕತನ ಇದ್ದರೂ ಪೂಜಾರಿಯವರು ಮಾಡಿರುವ ಕೆಲಸ ಅಭಿನಂದನೆಗೆ ಯೋಗ್ಯವಾದುದು ಎನ್ನುವುದರಲ್ಲಿ ಭಿನ್ನಾಭಿಪ್ರಾಯ ಇಲ್ಲ.
ಆದರೆ ಪೂಜಾರಿಯವರು ನಿಜಕ್ಕೂ ಸಮಾಜ ಸುಧಾರಣೆಗೆ ಹೊರಟಿದ್ದರೆ ಅವರಿಗೆ ಮಾಡಲು ಇನ್ನಷ್ಟು ಕೆಲಸಗಳಿವೆ, ಆ ದಾರಿಯಲ್ಲಿ ಮುನ್ನಡೆಯಲು ನಾರಾಯಣ ಗುರುಗಳ ತತ್ವದ ಬೆಳಕು ಕೂಡಾ ಇದೆ.
ಈಗಿನ ಕರಾವಳಿಯನ್ನು ಬಾಧಿಸುತ್ತಿರುವ ನಾನಾ ಬಗೆಯ ಸಾಮಾಜಿಕ ಮತ್ತು ರಾಜಕೀಯ ಸಂಬಂಧಿ ಕಾಯಿಲೆಗಳಿಗೆ ನಾರಾಯಣ ಗುರುಗಳ ತತ್ವಕ್ಕಿಂತ ಪರಿಣಾಮಕಾರಿಯಾದ ಔಷಧಿ ಬೇರೆ ಇಲ್ಲ.
ಪೂಜಾರಿ ಅವರ ಅಭಿಮಾನಿ ಹೇಳಿದಂತೆ ನಾರಾಯಣ ಗುರುಗಳು ನಿರ್ದಿಷ್ಟವಾಗಿ ವಿಧವೆಯರ ಬಗ್ಗೆ ಮಾತನಾಡಿರಲಿಲ್ಲ ಎನ್ನುವುದು ನಿಜ. ಇದಕ್ಕೆ ಕಾರಣ ಅವರು ಸುಧಾರಣೆಗಾಗಿ ಆಯ್ದುಕೊಂಡಿದ್ದ ಶೂದ್ರ ಸಮುದಾಯದಲ್ಲಿ ವೈಧವ್ಯ ಎನ್ನುವುದು ಬ್ರಾಹ್ಮಣ ಸಮುದಾಯದಲ್ಲಿದ್ದಷ್ಟು ದೊಡ್ಡ ಸಮಸ್ಯೆಯಾಗಿರಲಿಲ್ಲ. ಅದು ಇಂದಿಗೂ ಸತ್ಯ.
ನಾರಾಯಣ ಗುರುಗಳು ಕೇರಳದಲ್ಲಿ ಸುಧಾರಣಾವಾದಿ ಚಳವಳಿ ಪ್ರಾರಂಭಿಸಿದ್ದ ದಿನಗಳಲ್ಲಿ ಶೂದ್ರ ವರ್ಗದಲ್ಲಿ ಹೆಣ್ಣಾಗಿ ಹುಟ್ಟುವುದೇ ಶಾಪವಾಗಿತ್ತು. ಅಲ್ಲಿನ ಈಳವ ಮಹಿಳೆಯರಿಗೆ ಎದೆಯ ಮೇಲೆ ಬಟ್ಟೆ ಹಾಕಿಕೊಳ್ಳುವ ಸ್ವಾತಂತ್ರ್ಯವೂ ಇರಲಿಲ್ಲ. ಇದನ್ನು ಪ್ರತಿಭಟಿಸಿದ ಸ್ವಾಭಿಮಾನಿ ಮಹಿಳೆಯೊಬ್ಬರು ತನ್ನ ಸ್ತನಗಳನ್ನೇ ಕುಯ್ದುಕೊಂಡು ಪ್ರಾಣಾರ್ಪಣೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿತ್ತು.
ವಿಧವೆಯರು ಮಾತ್ರವಲ್ಲ, ಕೆಳವರ್ಗಕ್ಕೆ ಸೇರಿದ್ದ ಯಾವ ಮಹಿಳೆಯ ಹೂ ಮುಡಿಯುವಂತಿರಲಿಲ್ಲ. ಪ್ರಾಯಕ್ಕೆ ಬಂದ ಈಳವ ಹೆಣ್ಣುಗಳು ನಂಬೂದಿರಿಗಳ ಮನೆಯಲ್ಲಿ ರಾತ್ರಿ ಕಳೆಯಬೇಕಾದ ಅಮಾನುಷ ಕಟ್ಟಳೆಗಳಿದ್ದವು.
ಇದರ ವಿರುದ್ದ ಹೋರಾಡಲು ನಿರ್ಧರಿಸಿದ್ದ ನಾರಾಯಣ ಗುರುಗಳು ಅನುಸರಿಸಿದ ಮಾರ್ಗ ಉಳಿದ ಸಮಾಜ ಸುಧಾರಕರಿಗಿಂತ ಭಿನ್ನವಾದುದು. ಅವರದ್ದು ಸಂಘರ್ಷದ ಮಾರ್ಗವಾಗಿರಲಿಲ್ಲ. ನಲ್ವತ್ತು ವರ್ಷಗಳ ಅವಧಿಯ ಸುಧಾರಣಾವಾದಿ ಚಳವಳಿಯ ಯಾವುದೇ ಸಂದರ್ಭದಲ್ಲಿ ಅವರು ಶೋಷಕರ ಹೆಸರೆತ್ತಿ ಹೋರಾಟಕ್ಕೆ ಕರೆ ನೀಡಿರಲಿಲ್ಲ.
ನೆರೆಯ ತಮಿಳಿನಾಡಿನಲ್ಲಿ ಪೆರಿಯಾರ್ ಅವರು ದೇವರ ಮೂರ್ತಿಗಳಿಗೆ ಚಪ್ಪಲಿಮಾಲೆ ಹಾಕಿ ಪ್ರತಿಭಟಿಸುತ್ತಿದ್ದಾಗ, ನಾರಾಯಣ ಗುರುಗಳು ಶೂದ್ರರಿಗಾಗಿಯೇ ದೇವಸ್ಥಾನಗಳನ್ನು ಸ್ಥಾಪಿಸಿ ಧಾರ್ಮಿಕ ಕ್ಷೇತ್ರದಲ್ಲಿ ಮೌನವಾಗಿ ಕ್ರಾಂತಿ ಮಾಡಿದ್ದರು. ಮಹಿಳಾ ಸುಧಾರಣೆಗೆ ಸಂಬಂಧಿಸಿದಂತೆ ಕೂಡಾ ಅವರು ಹೋರಾಟ ನಡೆಸಿದ್ದು `ಹೊರಗಿನವರ~ ವಿರುದ್ಧ ಅಲ್ಲ, `ಒಳಗಿನವರ~ ವಿರುದ್ಧ.
ಆ ಕಾಲದ ಕೇರಳದಲ್ಲಿ ಹೆಣ್ಣನ್ನು ಶೋಷಿಸುವ ಬಗೆಬಗೆಯ ಮೂಢ ಆಚರಣೆಗಳಿದ್ದವು. ಮೈ ನೆರೆಯುವ ಮೊದಲೇ ಯಾವುದಾದರೂ ಒಬ್ಬ ವ್ಯಕ್ತಿಯಿಂದ ತಾಳಿ ಕಟ್ಟಿಸುವ `ತಾಳಿಕೆಟ್ಟು ಕಲ್ಯಾಣಂ~ (ಬಾಲ್ಯ ವಿವಾಹಕ್ಕಿಂತಲೂ ಅಮಾನವೀಯವಾದ ಆಚರಣೆಯಲ್ಲಿ ಹೆಣ್ಣಿಗೆ ತಾಳಿ ಕಟ್ಟುವ ಗಂಡಿಗೆ ಆಕೆಯ ಮೇಲೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಬೆಳೆದ ನಂತರ ಗಂಡು ಮತ್ತು ಹೆಣ್ಣು ಅವರಿಗೆ ಇಷ್ಟಬಂದವರನ್ನು ಮದುವೆಯಾಗಬಹುದಿತ್ತು).
ಹೆಣ್ಣು ಋತುಮತಿಯಾದಾಗ ಅದನ್ನು ಪರೋಕ್ಷವಾಗಿ ಲೋಕಕ್ಕೆ ಸಾರುವ `ತಿರುಂಡಕುಳಿ~ (ದಕ್ಷಿಣ ಕನ್ನಡದ ಬಿಲ್ಲವರಲ್ಲಿ ಈ ಆಚರಣೆಗೆ `ತಲೆನೀರು~ ಎನ್ನುತ್ತಾರೆ), ಗರ್ಭಿಣಿ ಹೆಣ್ಣಿಗೆ ನಡೆಸುವ `ಪುಲುಕೂಡಿ~ (ಸೀಮಂತ) ಮೊದಲಾದ ದುಂದುವೆಚ್ಚದ ಮೂಢ ಆಚರಣೆಗಳನ್ನು ಹೆಣ್ಣಿನ ಕುತ್ತಿಗೆಗೆ ಗಂಟು ಹಾಕಲಾಗಿತ್ತು. ಇಂತಹ ಪ್ರತಿಯೊಂದು ಆಚರಣೆಯಲ್ಲಿಯೂ ಹೆಣ್ಣಿನ ತಂದೆತಾಯಿಗಳು ಊರಿನವರೆಲ್ಲರನ್ನೂ ಕರೆದು ಔತಣ ನೀಡಬೇಕಾಗಿತ್ತು.
ಈ ದುಂದುವೆಚ್ಚದ ಆಚರಣೆಗಳಿಂದಾಗಿ ಹೆಣ್ಣುಮಕ್ಕಳು ಹುಟ್ಟುವುದೇ ಶಾಪ ಎಂದು ಹೆತ್ತವರು ಅಂದುಕೊಳ್ಳುತ್ತಿದ್ದರು. ಇಂತಹ ಆಚರಣೆಗಳಲ್ಲಿ ಶೋಷಕರು ಮತ್ತು ಶೋಷಿತರು ಒಂದೇ ವರ್ಗದಲ್ಲಿದ್ದರು. ನಾರಾಯಣ ಗುರುಗಳು ಮೊದಲು ಸಮರ ಸಾರಿದ್ದು ಹೆಣ್ಣಿನ ಶೋಷಣೆಯ ಇಂತಹ ಆಚರಣೆಗಳು ಮತ್ತು `ಒಳಗಿನ~ ಶೋಷಕರ ವಿರುದ್ಧ.
ಅದರ ನಂತರ ನಾರಾಯಣ ಗುರುಗಳು ಕೈಗೆತ್ತಿಕೊಂಡದ್ದು ವಿವಾಹ ವ್ಯವಸ್ಥೆಯ ಸುಧಾರಣೆಯ ಕಾರ್ಯವನ್ನು. ವರದಕ್ಷಿಣೆಯ ಜತೆಯಲ್ಲಿ ಮದುವೆಯ ವೆಚ್ಚವನ್ನೂ ಭರಿಸಬೇಕಾಗಿದ್ದ ಹೆಣ್ಣಿನ ತಂದೆ ತಾಯಿಗಳು ಮನೆಯಲ್ಲಿದ್ದ ಹೆಣ್ಣುಗಳ ಮದುವೆಗಳನ್ನು ಮಾಡಿ ಮುಗಿಸುವ ಹೊತ್ತಿಗೆ ಸಾಲದ ಶೂಲಕ್ಕೆ ಸಿಕ್ಕಿ ನರಳಾಡುವ ಪರಿಸ್ಥಿತಿ ಇತ್ತು.
ಇದನ್ನು ತಪ್ಪಿಸಲು ನಾರಾಯಣ ಗುರುಗಳು ಸರಳ ಮದುವೆಯ ಪ್ರಚಾರದಲ್ಲಿ ತೊಡಗಿದರು. ಇದಕ್ಕಾಗಿ ಅವರು ವಿವಾಹ ನೀತಿ ಸಂಹಿತೆಯೊಂದನ್ನು ರೂಪಿಸಿದ್ದರು. `ಮದುವೆಯನ್ನು ಸರಳವಾಗಿ, ವರದಕ್ಷಿಣೆ ಇಲ್ಲದೆ ನಡೆಸಬೇಕು.
ವರ, ವಧು, ಅವರ ತಂದೆ ತಾಯಿಗಳು, ವರ ಮತ್ತು ವಧುವಿನ ತಲಾ ಒಬ್ಬರು ಸಂಗಾತಿ, ಅರ್ಚಕ ಹಾಗೂ ಒಬ್ಬ ಸ್ಥಳೀಯ ಗಣ್ಯ ವ್ಯಕ್ತಿ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಬೇಕು. ಇವರ ಸಂಖ್ಯೆ ಹತ್ತನ್ನು ಮೀರಬಾರದು.
ಮದುವೆಗೆ ಒಂದು ತಿಂಗಳು ಮೊದಲು ಗಂಡು-ಹೆಣ್ಣು ಇಬ್ಬರು ಭೇಟಿಯಾಗಿ ವಿಚಾರ ವಿನಿಮಯಕ್ಕೆ ಅವಕಾಶ ನೀಡಬೇಕು. ಈ ಭೇಟಿಯ ಹದಿನೈದು ದಿನಗಳ ನಂತರವಷ್ಟೇ ಮದುವೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು.
ಪ್ರತಿಯೊಂದು ಮದುವೆಯನ್ನು ನೋಂದಣಿ ಮಾಡಬೇಕು. ವರದಕ್ಷಿಣೆ ಇಲ್ಲದ ಸರಳ ಮದುವೆಯಿಂದ ಉಳಿತಾಯವಾಗುವ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಪಾಸ್ಬುಕ್ ಅನ್ನು ಮದುವೆಯ ದಿನ ವಧು-ವರರಿಗೆ ಕೊಡಬೇಕು....~ ಇತ್ಯಾದಿ ಅಂಶಗಳು ಆ ನೀತಿ ಸಂಹಿತೆಯಲ್ಲಿದ್ದವು.
ಒಬ್ಬ ಆಧ್ಯಾತ್ಮಿಕ ಗುರು ಲೌಕಿಕವಾದ ಸಂಗತಿಗಳ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿ ಚಿಂತನೆ ನಡೆಸಿದ ಬೇರೆ ಉದಾಹರಣೆಗಳು ಅಪರೂಪ. ಇಂತಹ ಸರಳ ಮದುವೆಗಳನ್ನು ನಾರಾಯಣ ಗುರುಗಳು ತಮ್ಮ ಶ್ರೀಮಂತ ಶಿಷ್ಯರ ಮನೆಯಿಂದಲೇ ಪ್ರಾರಂಭಿಸಿದ್ದರು.
ತಾವು ರೂಪಿಸಿದ್ದ ನೀತಿ ಸಂಹಿತೆಗೆ ಅನುಗುಣವಾಗಿ ಮದುವೆ ನಡೆದರೆ ಮಾತ್ರ ಅದರಲ್ಲಿ ತಾನು ಭಾಗವಹಿಸುವುದಾಗಿ ಅವರು ಕಟ್ಟುನಿಟ್ಟಾಗಿ ಹೇಳುತ್ತಿದ್ದ ಕಾರಣ ಶ್ರಿಮಂತ ಶಿಷ್ಯರು ಮಕ್ಕಳ ಮದುವೆಯನ್ನು ಸರಳವಾಗಿ ನಡೆಸುತ್ತಿದ್ದರು.
ಶ್ರಿಮಂತ ಕುಟುಂಬಗಳಲ್ಲಿಯೇ ಸರಳ ವಿವಾಹ ನಡೆಯಲಾರಂಭಿಸಿದ್ದರಿಂದ ಬಡವರು ಕೂಡಾ ಪೊಳ್ಳುಪ್ರತಿಷ್ಠೆಗೆ ಬಿದ್ದು ತಮ್ಮ ಸಾಮರ್ಥ್ಯ ಮೀರಿ ದುಂದುವೆಚ್ಚ ಮಾಡದೆ ಸರಳ ಮದುವೆಗಳನ್ನು ಅನುಕರಿಸತೊಡಗಿದರು.
ಮಹಿಳಾ ಸುಧಾರಣೆಯ ಈ ಚಳವಳಿ ಕಾವು ಪಡೆದುಕೊಳ್ಳುತ್ತಿದ್ದಂತೆಯೇ ಅವರ ಶೋಷಣೆಯ ಕಬಂಧಬಾಹುಗಳು ಸಡಿಲಗೊಳ್ಳುತ್ತಾ ಹೋದವು. ಇದು ನಾರಾಯಣ ಗುರುಗಳು ಮಹಿಳಾ ಸಬಲೀಕರಣಕ್ಕೆ ತೋರಿಸಿದ ಹೊಸ ಮಾರ್ಗ.
ಆದರೆ ಇಂದಿನ ಪರಿಸ್ಥಿತಿ ಏನಾಗಿದೆ? ಪೂಜಾರಿಯವರ ಊರಲ್ಲಿಯೇ ವರದಕ್ಷಿಣೆ ಮತ್ತು ಅದ್ಧೂರಿ ಮದುವೆಯ ಆರ್ಥಿಕ ಭಾರವನ್ನು ಹೊರಲಾಗದೆ ಹೆಣ್ಣು ಹೆತ್ತವರು ಗೋಳಾಡುತ್ತಿದ್ದಾರೆ. ಇದೊಂದು ಪ್ರಮುಖ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದೆ.
ಇದರಿಂದಾಗಿ ಅನೇಕ ಯುವತಿಯರು ತಪ್ಪುದಾರಿ ತುಳಿಯುವಂತಾಗಿದೆ.
ಎರಡು ವರ್ಷಗಳ ಹಿಂದೆ ಮೋಹನ್ಕುಮಾರ್ ಎಂಬ ವಂಚಕ ಇಪ್ಪತ್ತಕ್ಕೂ ಹೆಚ್ಚು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿ ಹತ್ಯೆಗೈದ ಪ್ರಕರಣವೇ ಇದಕ್ಕೆ ಸಾಕ್ಷಿ.
ಇವರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಹಿಂದುಳಿದ ಜಾತಿಗೆ ಸೇರಿದ ಅವಿವಾಹಿತ ಹೆಣ್ಣುಗಳು. ಹೆಚ್ಚಿನವರು ಮನೆಯಲ್ಲಿ ನಾರಾಯಣ ಗುರುಗಳ ಪೋಟೋ ಇಟ್ಟುಕೊಂಡು ಪೂಜೆ ಮಾಡುವ ಕುಟುಂಬಗಳಿಗೆ ಸೇರಿದವರು.
ಈ ಪ್ರಕರಣ ಯಾವ ಸತ್ಯ ಹೇಳುತ್ತಿದೆ? ಆ ಸತ್ಯವನ್ನು ಕಾಣಲು ಸಾಧ್ಯವಾದರೆ ಹೆಣ್ಣು ಹೆತ್ತವರನ್ನು ಕಿತ್ತು ತಿನ್ನುತ್ತಿರುವ ವರದಕ್ಷಿಣೆ ಮತ್ತು ಅದ್ಧೂರಿ ಮದುವೆಗಳ ಪಿಡುಗಿನ ನಿವಾರಣೆಗೆ ಮಾರ್ಗಗಳು ಕೂಡಾ ನಾರಾಯಣಗುರುಗಳು ರೂಪಿಸಿ ಆಚರಣೆಗೆ ತಂದ ಸರಳ ವಿವಾಹದಲ್ಲಿ ಕಾಣಲು ಸಾಧ್ಯ.
ವಿರೋಧಾಭಾಸದ ಸಂಗತಿಯೆಂದರೆ ಸರಳ ವಿವಾಹಕ್ಕೆ ನೀತಿ ಸಂಹಿತೆಯನ್ನು ರೂಪಿಸಿದ ನಾರಾಯಣ ಗುರುಗಳು ಸ್ಥಾಪಿಸಿದ್ದ ಕುದ್ರೋಳಿ ದೇವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ಕಲ್ಯಾಣಮಂಟಪಗಳಲ್ಲಿಯೇ ಅದ್ಧೂರಿ ಮದುವೆಗಳು ನಡೆಯುತ್ತಿವೆ.
ವಿಧವೆಯರಿಗೆ ಮುತ್ತೈದೆ ಭಾಗ್ಯದ ಅವಕಾಶ ನೀಡಿ ಎಲ್ಲರ ಅಭಿನಂದನೆಗೆ ಪಾತ್ರರಾದ ಜನಾರ್ದನ ಪೂಜಾರಿಯವರು ಮುಂದಿನ ಹೆಜ್ಜೆಯಾಗಿ ಬಡಕುಟುಂಬಗಳ ಸಾವಿರಾರು ಯುವತಿಯರ ಬಾಳಿಗೆ ಬೆಳಕು ನೀಡುವ ಸರಳ ವಿವಾಹದ ಪ್ರಚಾರವನ್ನು ಯಾಕೆ ಕೈಗೊಳ್ಳಬಾರದು?
ಜನಾರ್ದನ ಪೂಜಾರಿಯವರು ತಮಗರಿವಿಲ್ಲದಂತೆಯೇ ನಾರಾಯಣ ಗುರುಗಳು ಮಾಡದಿರುವ ಒಂದು ಕೆಲಸ ಮಾಡಿದ್ದಾರೆ. ಪೂಜಾವಿಧಾನವನ್ನು ಸರಳಗೊಳಿಸಿದ್ದು ಮಾತ್ರವಲ್ಲ, ಪೂಜೆ ಮಾಡುವ ಅವಕಾಶವನ್ನು ಎಲ್ಲ ಜಾತಿಗಳಿಗೂ ನೀಡಿದ್ದು ನಾರಾಯಣ ಗುರುಗಳ ಧಾರ್ಮಿಕ ಸುಧಾರಣೆಯ ಪ್ರಮುಖ ಸಾಧನೆ.
ಜಾತಿಭೇದ ಇಲ್ಲದೆ ಅರ್ಚಕ ವೃತ್ತಿಯಲ್ಲಿ ತರಬೇತಿ ನೀಡಲಿಕ್ಕಾಗಿಯೇ ಅವರು ಸನ್ಯಾಸಿ ಸಂಘವನ್ನು ಸ್ಥಾಪಿಸಿದ್ದರು. ಇದರಿಂದಾಗಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವೂ ಸೇರಿದಂತೆ ನಾರಾಯಣ ಗುರುಗಳು ಸ್ಥಾಪಿಸಿದ್ದ ಎಲ್ಲ ದೇವಾಲಯಗಳಲ್ಲಿ ಶೂದ್ರ ಅರ್ಚಕರೇ ಪೂಜೆ ಮಾಡುತ್ತಿದ್ದಾರೆ.
ಇಷ್ಟೆಲ್ಲ ಮಾಡಿದ್ದ ನಾರಾಯಣ ಗುರುಗಳು ಮಹಿಳೆಯರನ್ನು ಮಾತ್ರ ಅರ್ಚಕರನ್ನಾಗಿ ಮಾಡುವ ಬಗ್ಗೆ ಯಾಕೋ ಗಮನ ನೀಡಿರಲಿಲ್ಲ. ಈಗಲೂ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ ಅರ್ಚಕ ವೃತ್ತಿಯಿಂದ ಮಾತ್ರ ವಂಚಿತರಾಗಿದ್ದಾರೆ.
ಖಾಸಗಿಯಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಮಹಿಳೆಯರನ್ನು ಒಂದೆರಡು ಹೆಜ್ಜೆ ಹಿಂದಕ್ಕೆ ನಿಲ್ಲಿಸಲಾಗುತ್ತದೆ. ಕುದ್ರೋಳಿಯಲ್ಲಿ ವಿಧವೆಯರು ತಾತ್ಕಾಲಿಕವಾದರೂ ಮುತ್ತೈದೆ ಭಾಗ್ಯ ಪಡೆದದ್ದು ಮಾತ್ರವಲ್ಲ, ತಾವೇ ಚಂಡಿಕಾ ಹೋಮ ನಡೆಸಿ ದೇವರ ಮೂರ್ತಿ ಇದ್ದ ರಥ ಎಳೆದುಬಿಟ್ಟರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬ್ರಾಹ್ಮಣ-ಶೂದ್ರರೆಂಬ ಭೇದ ಇಲ್ಲದೆ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೇರುತ್ತಾ ಬಂದಿರುವ ಹಿಂದೂ ಧರ್ಮದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ.
ಪೂಜಾರಿಯವರಿಗೆ ಇಂತಹದ್ದೊಂದು ಸಾಹಸ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕುದ್ರೋಳಿ ಕ್ಷೇತ್ರ. ನಾರಾಯಣ ಗುರುಗಳು ಬಂದು ಗೋಕರ್ಣನಾಥ ಎನ್ನುವ ಹೆಸರಿಟ್ಟು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದ ಈ ಕ್ಷೇತ್ರಕ್ಕೆ ಮುಂದಿನ ವರ್ಷ ನೂರು ತುಂಬಲಿದೆ. ಅಸ್ಪೃಶ್ಯತೆಯಿಂದ ನೊಂದಿದ್ದ ಬಿಲ್ಲವ ಸಮುದಾಯದ ನಾಯಕರ ಕರೆಗೆ ಓಗೊಟ್ಟು ನಾರಾಯಣ ಗುರುಗಳು ಅಲ್ಲಿಗೆ ಬಂದಿದ್ದರು.
ಈ ಐತಿಹಾಸಿಕ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಹೊಯಿಗೆ ಬಜಾರ್ ಕೊರಗಪ್ಪನವರು. ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕವಾಗಿ ಹೆಚ್ಚು ನೆರವಾದವರು ಕೂಡಾ ಅವರೇ.
ಮುಸ್ಲಿಮ್ ವ್ಯಾಪಾರಿಯ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಕೊರಗಪ್ಪನವರು ತಮ್ಮ ಶ್ರಮ ಮತ್ತು ನಿಷ್ಠೆಯಿಂದ ಮಾಲೀಕರ ವಿಶ್ವಾಸಕ್ಕೆ ಪಾತ್ರರಾಗಿ ನಂತರ ಅದೇ ಕಂಪೆನಿಯ ಸದಸ್ಯರ ಜತೆಗೂಡಿ `ಸಿ.ಅಬ್ದುಲ್ ರೆಹಮಾನ್ ಮತ್ತು ಕೊರಗಪ್ಪ ಕಂಪೆನಿ~ಯನ್ನು ಸ್ಥಾಪಿಸಿ ವ್ಯಾಪಾರಿಯಾಗಿಹೆಸರು ಗಳಿಸಿದವರು.
ಕುದ್ರೋಳಿ ದೇವಸ್ಥಾನದ ಸ್ಥಾಪನೆಯ ರೂವಾರಿಯ ಹಿನ್ನೆಲೆ ಆ ಕಾಲದ ಕೋಮುಸೌಹಾರ್ದತೆಯ ನೋಟವನ್ನು ಕೂಡಾ ನೀಡುತ್ತದೆ. ಅದು ನಾರಾಯಣ ಗುರು ಕಂಡ ಕನಸೂ ಕೂಡಾ ಆಗಿತ್ತು.
ಆದರೆ ಇಂದೇನಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದ ಆರೋಪಪಟ್ಟಿಗಳಲ್ಲಿರುವ ಹೆಸರಿನ ಮುಂದಿರುವ ಜಾತಿ ವಿವರವನ್ನು ನೋಡಿದರೆ ಸಾಕು.
ಸಂಘರ್ಷ ಇಲ್ಲದೆ ಸಾಮಾಜಿಕ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು. ಅವರ ಇಂದಿನ ಅನುಯಾಯಿಗಳು ಕೈಯಲ್ಲಿ ಲಾಠಿ ಹಿಡಿದುಕೊಂಡು ಹೊರಟಿದ್ದಾರೆ. ಗುರು ಇದ್ದಾರೆ, ಗುರಿ ತಪ್ಪಿದೆ.