ಹುಟ್ಟೂರು ಬಿಟ್ಟು ಬಂದವರು ಮರಳಿ ಹೋದಾಗೆಲ್ಲ ಪ್ರತಿಬಾರಿಯೂ ಊರು ಎಷ್ಟೊಂದು ಬದಲಾಗಿದೆಯಲ್ಲಾ ಎಂದು ಅಚ್ಚರಿ ಪಡುವುದುಂಟು. ಈ ಅಚ್ಚರಿಯೊಳಗೆ ‘ಹೇಗಿದ್ದದ್ದು ಹೇಗಾಗಿ ಹೋಯಿತಲ್ಲಾ’ ಎಂಬ ಒಂದು ಸಣ್ಣ ವಿಷಾದದ ಎಳೆಯೂ ಇರುತ್ತದೆ.ಮುಂಬೈಗೆ ಹೋದಾಗಲೆಲ್ಲ ನನಗೂ ಹೀಗೆ ಅನಿಸುವುದುಂಟು. ನಾನು ಮುಂಬೈಯಲ್ಲಿ ಹುಟ್ಟಿದ್ದು ಮಾತ್ರವಲ್ಲ ಅಲ್ಲಿಯೇ ನಾಲ್ಕನೇ ತರಗತಿ ವರೆಗೆ ಮುನ್ಸಿಪಾಲಿಟಿ ಕನ್ನಡ ಶಾಲೆಯಲ್ಲಿ ಕಲಿತವನು. ಹಾಗಾಗಿ ಅದು ನನಗೆ ಅಪರಿಚಿತ ಲೋಕವೇನಲ್ಲ. ಕಳೆದ ವಾರ ಮುಂಬೈಗೆ ಹೋಗಿದ್ದಾಗ ಭೇಟಿಯಾದ ಅನೇಕ ಹಿರಿಯ ಕನ್ನಡಿಗರು ‘ ಈ ಮುಂಬೈನಲ್ಲಿ ಕನ್ನಡದ ಕತೆ ಮುಗಿಯಿತು’ ಎಂದು ಕಳವಳ ವ್ಯಕ್ತಪಡಿಸುತ್ತಿದ್ದರು.ಇದೇನು ಮೊದಲ ಸಲವಲ್ಲ, ನಿರ್ಗತಿಕ ಸ್ಥಿತಿಯಿಂದ ಯಶಸ್ಸಿನ ಶಿಖರವನ್ನೇರಿದ ಸಾಧಕ ಕನ್ನಡಿಗರನ್ನು ಹುಡುಕಾಡಿ ವರದಿ ಮಾಡಲು ಇಪ್ಪತ್ತಮೂರು ವರ್ಷಗಳ ಹಿಂದೆ ತಿಂಗಳ ಕಾಲ ಮುಂಬೈ ಸುತ್ತಿದ್ದೆ. ಆಗಲೂ ಭೇಟಿಯಾದವರೆಲ್ಲರೂ ಇದೇ ರೀತಿ ಕಳವಳ ವ್ಯಕ್ತಪಡಿಸಿದ್ದರು. ಆದರೆ ಮುಂಬೈನಲ್ಲಿ ಕನ್ನಡದ ಕತೆ ಮುಗಿಯುತ್ತಿದೆ ಎಂಬ ಭೀತಿ ಎಷ್ಟು ನಿಜವೋ, ಅದು ಇನ್ನೂ ಮುಗಿದಿಲ್ಲ ಎನ್ನುವ ವಾಸ್ತವವೂ ಅಷ್ಟೇ ನಿಜ. ಈ ಎರಡು ಬೆಳವಣಿಗೆಗಳಿಗೆ ರೂಪಕದಂತಿತ್ತು ಕಳೆದ ವಾರ ಗೋರೆಗಾಂವ್ ಕನ್ನಡ ಸಂಘ ನಡೆಸಿದ್ದ ಹದಿಮೂರನೇ ವಿಚಾರಭಾರತಿ ಸಮ್ಮೇಳನ.
ಮೊದಲ ಬಾರಿ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕನ್ನಡದ ಲೇಖಕರಿಗೆ, ಬೆಳಿಗ್ಗೆಯಿಂದ ಸಂಜೆ ವರೆಗೆ ಕೂತಲ್ಲಿಂದ ಕದಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಸುಮಾರು 300-350 ಕನ್ನಡಾಭಿಮಾನಿಗಳನ್ನು ಕಂಡು ಅಚ್ಚರಿಯಾಗಿದೆ. ಆದರೆ ಹದಿಮೂರು ವರ್ಷಗಳ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಮೊದಲನೇ ವಿಚಾರಭಾರತಿ ಸಮ್ಮೇಳನಕ್ಕೆ ಸಾಕ್ಷಿಯಾದವರಿಗೆ ಸ್ವಲ್ಪ ನಿರಾಶೆಯಾಗಿದೆ. ಆ ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ಸಭಿಕರ ಸಾಮರ್ಥ್ಯದ ಸಭಾಂಗಣ ತುಂಬಿ ತುಳುಕಾಡಿತ್ತು. ಮುಂಬೈನಲ್ಲಿ ಕನ್ನಡದ ಕಾರ್ಯಕ್ರಮಗಳಿಗೆ ಒಂದೆಡೆ ಸಭಿಕರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಇನ್ನೊಂದೆಡೆ ಈ ಸಭಿಕರ ಸರಾಸರಿ ವಯಸ್ಸು ಹೆಚ್ಚುತ್ತಿದೆ.
ಯುವ ತಲೆಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗುತ್ತಿದೆ. ಮೊದಲನೆಯದಕ್ಕಿಂತಲೂ ಎರಡನೆಯದು ಹೆಚ್ಚು ಕಳವಳಕಾರಿ ಬೆಳವಣಿಗೆ. ಇದರಲ್ಲೇನು ವಿಶೇಷ, ಯಾವುದೇ ರಾಜ್ಯದಲ್ಲಿ ಬೇರೆ ರಾಜ್ಯದ ಭಾಷೆಯ ಚಟುವಟಿಕೆಗಳಿಗೆ ಈ ರೀತಿಯ ಪ್ರತಿಕ್ರಿಯೆ ಸಾಮಾನ್ಯವಲ್ಲವೇ ಎಂದು ಕೆಲವರು ಪ್ರಶ್ನಿಸಬಹುದು. ಆದರೆ ಮುಂಬೈನಲ್ಲಿ ಈಗಲೂ ಕನ್ನಡದ ಚಟುವಟಿಕೆಗಳು ನಡೆಯುವ ಪ್ರಮಾಣದಲ್ಲಿ ದೇಶದ ಯಾವುದಾದರೂ ಮತ್ತೊಂದು ಭಾಷೆಯ ಚಟುವಟಿಕೆ ಅದರ ತವರು ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯದಲ್ಲಿ ನಡೆಯುತ್ತಿರುವ ಉದಾಹರಣೆ ಸಿಗಲಾರದು. ಮುಂಬೈ ಮತ್ತು ಕನ್ನಡದ ಈ ಸಂಬಂಧಕ್ಕೆ ಐತಿಹಾಸಿಕ ಪರಂಪರೆ ಇದೆ.
ಮೂರನೆಯ ಶತಮಾನದಿಂದ ಹದಿನಾರನೆಯ ಶತಮಾನದ ಮಧ್ಯಭಾಗದ ವರೆಗೂ ಮುಂಬೈ ಆಡಳಿತ ಕನ್ನಡಿಗರ ಕೈಯ್ಯಲ್ಲಿಯೇ ಇತ್ತೆಂಬುದನ್ನು ಇತಿಹಾಸಕಾರರು ಸಂಶೋಧನೆಯ ಮೂಲಕ ದಾಖಲಿಸಿದ್ದಾರೆ. ಕನ್ನಡವೇ ಮಾತೃಭಾಷೆಯಾಗಿದ್ದ ಶಿಲಾಹಾರರು ಹದಿಮೂರನೇ ಶತಮಾನದ ವರೆಗೂ ಆಗಿನ ಮುಂಬಯಿ ರಾಜ್ಯವನ್ನಾಳಿದ್ದನ್ನು ಇತಿಹಾಸಕಾರರು ಉಲ್ಲೇಖಿಸುತ್ತಾರೆ.ಈ ರಾಜವಂಶಕ್ಕೆ ಸೇರಿದ ಮುಮ್ಮಣ್ಣಿ ಎಂಬ ಅರಸನಿಂದಲೇ ‘ಮುಂಬಯಿ’ ಎಂಬ ಹೆಸರು ಬಂತು ಎನ್ನುವ ವಾದವೂ ಇದೆ.ಇಲ್ಲಿನ ಸ್ಥಳನಾಮಗಳಲ್ಲಿ ಕನ್ನಡದ ಪ್ರಭಾವ ಇರುವುದನ್ನು ಅನೇಕ ವಿದ್ವಾಂಸರು ಗುರುತಿಸಿದ್ದಾರೆ. ಉದಾಹರಣೆಗೆ -ದೊಂಬಿವಿಲಿ (ಡೊಂಬನಹಳ್ಳಿ) ಕಾಂದಿವಿಲಿ (ಕಂದನಹಳ್ಳಿ),ಬೋರಿವಿಲಿ (ಬೋರನಹಳ್ಳಿ) ಇತ್ಯಾದಿ. ಅಲ್ಲಿನ ಎಲಿಫೆಂಟಾ ಗುಹೆಯಲ್ಲಿರುವ ಮೂರುತಲೆಯ ಮಹೇಶನ ಮೂರ್ತಿ ಕೂಡಾ ಕನ್ನಡಿಗರ ಕೊಡುಗೆ.
ಏಕೀಕರಣಕ್ಕಿಂತ ಮೊದಲು ಕರ್ನಾಟಕದ ಧಾರವಾಡ, ಉತ್ತರ ಕನ್ನಡ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳು ಮುಂಬಯಿ ಸಂಸ್ಥಾನಕ್ಕೆ ಸೇರಿದ್ದವು. ಈ ಜಿಲ್ಲೆಗಳ ಜನರು ಕೋರ್ಟು-ಕಚೇರಿ ವ್ಯವಹಾರಕ್ಕಾಗಿ ಮುಂಬೈಯನ್ನೇ ಅವಲಂಬಿಸಿದ್ದರು. ಆ ಕಾಲದಲ್ಲಿ ಮರಾಠಿ, ಗುಜರಾತಿ ಜತೆ ಕನ್ನಡವೂ ರಾಜ್ಯಭಾಷೆಯಾಗಿತ್ತು. ಮುಂಬೈ ವಿಶ್ವವಿದ್ಯಾಲಯದಲ್ಲಿ 1901ರಿಂದಲೇ ಸ್ನಾತಕೋತ್ತರ ಪದವಿಗೆ ಕನ್ನಡ ಭಾಷೆಯನ್ನು ಆರಿಸುವ ಅವಕಾಶ ಇತ್ತು. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆಯಲು ಮುಂಬೈ ಮಹಾನಗರಪಾಲಿಕೆ ಮೊದಲಿನಿಂದಲೂ ಅವಕಾಶ ನೀಡುತ್ತಾ ಬಂದಿದೆ. ಹೀಗಾಗಿ 40 ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿದ್ದಲ್ಲೆಲ್ಲ ಮುಂಬೈ ಮಹಾನಗರಪಾಲಿಕೆ ಕನ್ನಡ ಶಾಲೆಗಳನ್ನು ತೆರೆಯುತ್ತಿತ್ತು. ಇಪ್ಪತ್ತೈದು ವರ್ಷಗಳ ಹಿಂದೆ ಮಹಾನಗರಪಾಲಿಕೆಯ ಆಡಳಿತದ 50ಕ್ಕೂ ಹೆಚ್ಚು ಕನ್ನಡ ಪ್ರಾಥಮಿಕ ಶಾಲೆಗಳು ಮತ್ತು ಹನ್ನೆರಡು ಕನ್ನಡ ಮಾಧ್ಯಮಿಕ ಶಾಲೆಗಳಿದ್ದವು. ರಾತ್ರಿಶಾಲೆಗಳು ಮುಂಬೈನಲ್ಲಿ ನಡೆಸಿರುವ ಶೈಕ್ಷಣಿಕ ಕ್ರಾಂತಿ ಯಾವುದೇ ರಾಜ್ಯಕ್ಕೆ ಮಾದರಿಯಾದುದು. ಒಂದು ಕಾಲದಲ್ಲಿ ಮುಂಬೈನಲ್ಲಿ ಹನ್ನೆರಡು ಕನ್ನಡ ರಾತ್ರಿ ಶಾಲೆಗಳಿದ್ದವು. ಇದರ ಜತೆಗೆ ಕನ್ನಡಿಗರೇ ಕಟ್ಟಿ ಬೆಳೆಸಿದ ಹಲವಾರು ಯಕ್ಷಗಾನ ತಂಡಗಳು, ಭಜನಾಮಂಡಳಿಗಳು, ಜಾತಿ ಸಂಘಟನೆಗಳು, ಕ್ರೀಡಾತಂಡಗಳಿದ್ದವು. ಮುಂಬೈ ಮತ್ತು ಕನ್ನಡದ ಸಂಬಂಧ ಹುಟ್ಟಿಬೆಳೆದು ಗಟ್ಟಿಗೊಳ್ಳುತ್ತಾ ಸಾಗಿದ್ದು ಹೀಗೆ.
ಆದರೆ ಪರಿಸ್ಥಿತಿ ಬದಲಾಗಿದೆ. ಮುನ್ಸಿಪಾಲಿಟಿ ಕನ್ನಡ ಶಾಲೆಗಳ ಸಂಖ್ಯೆ ಅರ್ಧಕ್ಕೆ ಇಳಿದಿದೆ, ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕನ್ನಡ ರಾತ್ರಿಶಾಲೆಗಳು ಕೂಡಾ ಒಂದೊಂದಾಗಿ ಮುಚ್ಚುತ್ತಿವೆ. ಮುಂಬೈನಲ್ಲಿರುವ ಯಾವ ಕನ್ನಡಿಗನೂ ತಮ್ಮ ಮಕ್ಕಳನ್ನು ಈ ಕನ್ನಡ ಶಾಲೆಗಳಿಗೆ ಕಳುಹಿಸುತ್ತಿಲ್ಲ. (ಹಾಗೆಂದು ನಿರೀಕ್ಷಿಸುವುದೂ ಮೂರ್ಖತನ) ಮುಂಬೈನ ರಾತ್ರಿ ಶಾಲೆಗಳಿಗೆ ಹೋಗುತ್ತಿದ್ದವರಲ್ಲಿ ಹೆಚ್ಚಿನವರು ಹೋಟೆಲ್ ಕಾರ್ಮಿಕರು. ಆದರೆ ರಾತ್ರಿ ಮುಚ್ಚುವ ಉಡುಪಿ ಹೊಟೇಲ್ಗಳಿಗಿಂತ, ರಾತ್ರಿ ತೆರೆಯುವ ಪರ್ಮಿಟ್ ರೂಮ್, ಲೇಡೀಸ್ಬಾರ್ಗಳೇ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಕಾರ್ಮಿಕರು ಯಾವ ಕನ್ನಡ ಶಾಲೆಗಳ ಕಡೆಯೂ ಸುಳಿಯುತ್ತಿಲ್ಲ. ಇದರ ಜತೆಗೆ ಒಂದು ಕಾಲದಲ್ಲಿ ಕನ್ನಡದ ಕಾರ್ಯಕ್ರಮಗಳ ಕೇಂದ್ರವಾಗಿದ್ದ ಮುಂಬೈನ ಕೋಟೆ ಪ್ರದೇಶದಲ್ಲಿ ಕನ್ನಡದ ಕುಟುಂಬಗಳೇ ಇಲ್ಲ. ಅವರೆಲ್ಲ ಮುಂಬೈನ ಉಪನಗರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಮುಂಬೈನ ಕನ್ನಡದ ಕಾರ್ಯಕ್ರಮಗಳಿಗೆ ಸಭಿಕರಾಗುತ್ತಿದ್ದ ಒಂದು ದೊಡ್ಡ ವರ್ಗ ಈ ಎಲ್ಲ ಕಾರಣಗಳಿಂದಾಗಿ ದೂರವಾಗಿದೆ.
ಭಾಷೆಯೊಂದು ಅನ್ನ ನೀಡದೆ ಹೋದರೆ ಅದು ಬೆಳೆಯಲಾರದು, ಉಳಿಯಲಾರದು ಎನ್ನುತ್ತಾರೆ. ಆದರೆ ಮುಂಬೈನಲ್ಲಿ ಕನ್ನಡ ಎನ್ನುವುದು ಎಂದೂ ಅನ್ನ ನೀಡುವ ಭಾಷೆಯಾಗಿರಲೇ ಇಲ್ಲ. ಅಲ್ಲಿ ಕನ್ನಡಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಹುಸಂಖ್ಯಾತ ಮಂದಿಯ ಮಾತೃಭಾಷೆ ಕನ್ನಡ ಅಲ್ಲ, ಅದು ತುಳು. ಮುಂಬೈ ಕನ್ನಡಿಗರಲ್ಲಿ ಬಹುಸಂಖ್ಯೆಯಲ್ಲಿ ಈಗಲೂ ಇರುವುದು ದಕ್ಷಿಣ ಕನ್ನಡಿಗರೇ. ಹವ್ಯಾಸ ರೂಪದಲ್ಲಿ ಕನ್ನಡವನ್ನು ಬೆಳೆಸಿದ ಈ ತುಳುವ ಕನ್ನಡಿಗರಲ್ಲಿದ್ದದ್ದು ಕನ್ನಡದ ಮೇಲಿನ ನಿಸ್ವಾರ್ಥ ಪ್ರೀತಿ ಅಷ್ಟೇ. ಮುಂಬೈನಲ್ಲಿ ಕನ್ನಡ ಸಂಘಟನೆಯ ಮೂಲಪುರುಷನೆನಿಸಿಕೊಂಡ ಕಣ್ಣಂಗಾರು ರಾಮ ಪಂಜಿ ಅವರ ಜೀವನವೇ ಇದಕ್ಕೆ ಸಾಕ್ಷಿ.
ಉಡುಪಿ ಜಿಲ್ಲೆಯ ಹೆಜಮಾಡಿಯಿಂದ 1858ರಲ್ಲಿ ಮುಂಬೈಗೆ ಓಡಿಹೋದ ಅನಕ್ಷರಸ್ಥನಾದ ಹದಿನಾಲ್ಕರ ಮೊಗವೀರ ಬಾಲಕ ರಾಮ ಪಂಜಿ ಮುಂದೆ ಕನ್ನಡವನ್ನು ಕಲಿತು ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡಿದವರು. ಇದಕ್ಕೆ ಮೇಲ್ಜಾತಿ ಜನರಿಂದ ವಿರೋಧ ಬಂದಾಗ ಈ ಮಹಾಕಾವ್ಯಗಳ ಅಧ್ಯಯನಕ್ಕೆಂದೇ ಶ್ರಿಮದ್ಭಾರತ ಮಂಡಳಿ ಸ್ಥಾಪಿಸಿದ್ದರು. ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ಈ ಮಂಡಳಿ ಮುಂಬೈನ ಮೊದಲ ಕನ್ನಡ ಸಂಸ್ಥೆ. ನಂತರದ ದಿನಗಳಲ್ಲಿ ರಾಮಪಂಜಿ ಅವರು ‘ಶ್ರಿ ಶಂಕರ ಸಂಹಿತೆ’ ಮತ್ತು ‘ತುರಂಗ ಭಾರತ’ ಎಂಬ ಎರಡು ಗ್ರಂಥಗಳನ್ನು ಹಳೆಗನ್ನಡದಲ್ಲಿಯೇ ರಚಿಸಿದರು. ಇಂತಹ ಕನ್ನಡದ ಕಟ್ಟಾಳುಗಳನ್ನು ಈಗಿನ ಮುಂಬೈನಲ್ಲಿ ಕಾಣುವುದು ಕಷ್ಟ. ಹಳೆತಲೆಮಾರಿನ ದಕ್ಷಿಣ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಪ್ರೀತಿ ಇದೆ. ಆದರೆ ಅವರ ಕುಟುಂಬದಲ್ಲಿನ ಹೊಸ ತಲೆಮಾರಿಗೆ ಕನ್ನಡ ಬಾರದು. ಮನೆಯೊಳಗೆ ತುಳು, ಹೊರಗೆ ಹಿಂದಿ, ಇಂಗ್ಲಿಷ್, ಮರಾಠಿ.
ಮುಂಬೈನಲ್ಲಿ ಕನ್ನಡಿಗರ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ.
ಈಗಲೂ ಮುಂಬೈನಲ್ಲಿ ಕನ್ನಡಿಗರ ಜೈತ್ರಯಾತ್ರೆ ಮುಂದುವರಿದಿದೆ. ಅಲ್ಲಿರುವ ಸುಮಾರು 20 ಸಾವಿರ ಹೋಟೆಲ್ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕನ್ನಡಿಗರ ಒಡೆತನದಲ್ಲಿವೆ. ಬ್ಯಾಂಕ್ ಮತ್ತಿತರ ಖಾಸಗಿ ಸಂಸ್ಥೆಗಳಲ್ಲಿಯೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಖ್ಯಾತ ನಟ, ನಿರ್ದೇಶಕ ಗುರುದತ್ ಅವರಿಂದ ಹಿಡಿದು ಇತ್ತೀಚಿನ ಐಶ್ಚರ್ಯ ರೈ ವರೆಗೆ ಬಾಲಿವುಡ್ನಲ್ಲಿ ಮಿಂಚಿಹೋದ ಮತ್ತು ಈಗಲೂ ಮಿಂಚುತ್ತಿರುವ ತಾರೆಗಳ ಪಟ್ಟಿ ಬೆಳೆಯುತ್ತಲೇ ಇದೆ. ರಾಜಕೀಯ ಕ್ಷೇತ್ರದಲ್ಲಿಯೂ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇವರೆಲ್ಲ ಕರ್ನಾಟಕದವರು ನಿಜ, ಆದರೆ ಕನ್ನಡಿಗರಲ್ಲ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ಕನ್ನಡಿಗರೆಂದು ಹೇಳಿಕೊಂಡು ನಾವು ಮೆರೆದಾಡಿದರೂ ಮುಂಬೈನಲ್ಲಿ ಹುಟ್ಟಿಬೆಳೆದ ಅವರಿಗೆ ಕನ್ನಡ ಬರುವುದಿಲ್ಲ, ತುಳು ಗೊತ್ತು ಅಷ್ಟೇ. ಕನ್ನಡದ ಕಾರ್ಯಕ್ರಮಗಳಿಗೆ ಕೈಯೆತ್ತಿ ದೇಣಿಗೆ ಕೊಡುತ್ತಿರುವ ಕನ್ನಡಿಗ ಹೋಟೆಲ್ ಸೇಟ್ಗಳ ಮಕ್ಕಳ ಕತೆಯೂ ಇದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ನಿಧಾನವಾಗಿ ಮುಂಬೈ ಮತ್ತು ಕನ್ನಡದ ಕೊಂಡಿ ಕಳಚುತ್ತಿದೆ. ಮುಂಬೈನಲ್ಲಿರುವ ಸುಮಾರು 200 ಕನ್ನಡ ಸಂಸ್ಥೆಗಳಲ್ಲಿರುವ ಯಾರನ್ನೂ ಕೇಳಿದರೂ ಇದೇ ವಿಷಾದದ ರಾಗ ಹೊರಡಿಸುತ್ತಾರೆ.
ಹಾಗಿದ್ದರೆ ಮುಂಬೈ ಕನ್ನಡಿಗರು ಏನು ಮಾಡುತ್ತಿದ್ದಾರೆ? ಹೊಟ್ಟೆಪಾಡಿನ ಕೆಲಸದ ಹೊರತಾಗಿಯೂ ಬೇರೆ ಯಾವ ಚಟುವಟಿಕೆಗಳಲ್ಲಿಯೂ ಭಾಗಿಯಾಗುತ್ತಿಲ್ಲವೇ? ಈ ಪ್ರಶ್ನೆಗೆ ಉತ್ತರ ಅಲ್ಲಿನ ಸ್ಥಳೀಯ ಕನ್ನಡ ದಿನಪತ್ರಿಕೆಗಳಲ್ಲಿನ ಕಾರ್ಯಕ್ರಮಗಳ ಪಟ್ಟಿಯ ಅಂಕಣದಲ್ಲಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಬಾಂದ್ರಾದಲ್ಲಿ ನಡೆಯುತ್ತಿದ್ದ ಜುಮಾದಿ ಭೂತದ ಕೋಲ ನೋಡಿ ಮೂಕವಿಸ್ಮಿತನಾಗಿದ್ದೆ. ಅಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆ.ಬಿ. ಕೋಟ್ಯಾನ್ ತಮ್ಮ ಕುಟುಂಬದ ದೈವ, ಜುಮಾದಿಯನ್ನು ಮುಂಬೈಗೆ ಎಳೆದುಕೊಂಡು ಬಂದು ತಮ್ಮ ಮನೆಯಲ್ಲಿಯೇ ‘ಸಾನ’ ನಿರ್ಮಿಸಿ ಕೋಲ ನಡೆಸುತ್ತಿದ್ದರು. ಅದೇ ಕಾಲದಲ್ಲಿ ಬೊರಿವಿಲಿಯಲ್ಲಿಯೂ ಬೈದರ್ಕಳ ನೇಮ ನಡೆಯುತ್ತಿತ್ತು. ಆದರೆ ಈಗ ನೇಮ, ಕೋಲ, ಬಲಿ, ಅಗೆಲ್, ಯಾವುದಕ್ಕೂ ದಕ್ಷಿಣಕನ್ನಡಿಗರು ಊರಿಗೆ ಹೋಗಬೇಕಾಗಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೆಚ್ಚುಕಡಿಮೆ ಎಲ್ಲ ಜನಪ್ರಿಯ ಭೂತಗಳನ್ನು ಅವರು ಮುಂಬೈಗೆ ಹೊತ್ತುಕೊಂಡು ಬಂದಿದ್ದಾರೆ. ಜುಮಾದಿ,ಜಾರಂದಾಯ, ಬೈದರ್ಕಳ, ಪಂಜುರ್ಲಿ, ಕಲ್ರುಟ್ಟಿ,ವರ್ತೆ... ಹೀಗೆ ಸಾಲುಸಾಲು ಭೂತಗಳ ಕೋಲ ಮುಂಬೈನಲ್ಲಿ ನಡೆಯುತ್ತಿದೆ. ಇದರ ಜತೆಗೆ ಗಲ್ಲಿಗಲ್ಲಿಯಲ್ಲಿ ಹುಟ್ಟಿಕೊಂಡಿರುವ ದರ್ಶನದ ಪಾತ್ರಿಗಳ ಮನೆಯಲ್ಲಿ ಜನ ಕಿಕ್ಕಿರಿದು ನೆರೆಯುತ್ತಿದ್ದಾರೆ. ಶನೀಶ್ವರ, ಸತ್ಯನಾರಾಯಣ, ಕಾಳಿ, ದುರ್ಗೆ ಪೂಜೆಗಳು, ಅಯ್ಯಪ್ಪ ಆರಾಧನೆಗಳು ನಿತ್ಯದ ಕಾರ್ಯಕ್ರಮಗಳಾಗಿವೆ.
ಎಲ್ಲ ವ್ಯಾಪಾರಿಗಳಂತೆ ದೈವಭೀರುಗಳಾಗಿರುವ ಇಲ್ಲಿನ ಹೋಟೆಲ್ ಸೇಟ್ಗಳು ಈ ಕಾರ್ಯಕ್ರಮಗಳಿಗೆ ನೀರಿನಂತೆ ಹಣ ಚೆಲ್ಲಿ ಪುಣ್ಯಸಂಪಾದನೆ ಮಾಡುತ್ತಿದ್ದಾರೆ. ಕನ್ನಡದಿಂದ ದೂರವಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬುದ್ದಿವಂತ ಕನ್ನಡಿಗರೆಲ್ಲ ಈ ಭೂತ, ದೈವ, ದೇವರ ಪದತಲದಲ್ಲಿದ್ದಾರೆ. ಮುಂಬೈನಿಂದ ಕಾಲು ಕೀಳುತ್ತಿರುವ ಕನ್ನಡವನ್ನು ಉಳಿಸಲು ದೇವರಿಗಾದರೂ ಮೊರೆ ಇಡೋಣವೆಂದರೆ ಮುಂಬೈ ಮಟ್ಟಿಗೆ ಆತನೂ ಕನ್ನಡ ವಿರೋಧಿ.