Tuesday, April 30, 2013

`ಕಾಂಗ್ರೆಸ್ ನಾಯಕರಿಗೂ ತಮ್ಮ ತಪ್ಪಿನ ಅರಿವಾಗುತ್ತಿದೆ'

ಗುಲ್ಬರ್ಗ: `ನಮ್ಮಿಂದಾಗಿಯೇ ಬಿಜೆಪಿ 35 ಸೀಟುಗಳನ್ನು ಕಳೆದುಕೊಳ್ಳಲಿದೆ, ಉಳಿದ ಕಡೆ ಅದು ಸೋಲುವುದು ಇದ್ದೇ ಇದೆ. ಕಾಂಗ್ರೆಸ್ 75 ದಾಟುವುದಿಲ್ಲ, ಜೆಡಿಎಸ್ 25 ತಲುಪಿ
ದರೆ ಹೆಚ್ಚು. ಉಳಿದಂತೆ ನಮ್ಮ ಪಕ್ಷ ಗೆಲ್ಲುವ ಸ್ಥಾನಗಳ ಸಂಖ್ಯೆಯನ್ನು ನೀವೇ ಊಹಿಸಿಕೊಳ್ಳಿ' ಎಂದು ಹೇಳುತ್ತಲೇ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೈಯಲ್ಲಿದ್ದ ಚೀಟಿಯನ್ನು ಅಂಗಿಯ ಕಿಸೆಗೆ ತುರುಕಿಸಿದರು. ಪ್ರಕಟಿಸಬಾರದೆಂಬ ಷರತ್ತಿನಲ್ಲಿ ನೋಡಲು ಕೊಟ್ಟ ಆ ಚೀಟಿಯಲ್ಲಿ ಕೆಜೆಪಿ ನೂರಕ್ಕೆ ನೂರರಷ್ಟು ಗೆಲ್ಲಲಿದೆ ಎಂದು ಅವರು ಬಲವಾಗಿ ನಂಬಿರುವ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರುಗಳಿದ್ದವು.
`ಫಲಿತಾಂಶ ಪ್ರಕಟವಾಗುವ ದಿನ ನಾನು ಹೇಳಿದ ಸತ್ಯ ನಿಮಗೆ ಗೊತ್ತಾಗುತ್ತದೆ. ಆಗ ನಿಮ್ಮ ಮತ್ತು ನನ್ನ ಪಟ್ಟಿ ತಾಳೆ ನೋಡುವಾ' ಎಂದು ಸವಾಲೆಸೆದ ಅವರ ಮುಖದಲ್ಲಿ ಎಂದಿನ ಆತ್ಮವಿಶ್ವಾಸ ಇತ್ತು.
ಗುಲ್ಬರ್ಗ ನಗರದಲ್ಲಿ ರಾತ್ರಿ ಚುನಾವಣಾ ಪ್ರಚಾರ ನಡೆಸಿ ತಡರಾತ್ರಿ ಹೊಟೇಲ್‌ನಲ್ಲಿ ಬಂದು ಉಳಿದುಕೊಂಡಿದ್ದ ಯಡಿಯೂರಪ್ಪ ಬೆಳಿಗ್ಗೆ ಎಂಟು ಗಂಟೆ ಹೊತ್ತಿಗೆ ಎದ್ದು ಹೆಲಿಕಾಪ್ಟರ್ ಹತ್ತಲು ರೆಡಿಯಾಗಿ ಕೂತಿದ್ದರು. ಈ ಅವಸರದಲ್ಲಿಯೇ ಬಿಡುವು ಮಾಡಿಕೊಂಡು `ಪ್ರಜಾವಾಣಿ' ಜತೆ ಮಾತನಾಡಿದರು.
 ಪ್ರ: ನೀವು ಹೇಳಿದ ಲೆಕ್ಕವನ್ನು ನಂಬಿದರೆ ನಿಮ್ಮ ಪಕ್ಷ ಸ್ವಂತಬಲದಿಂದ ಅಧಿಕಾರಕ್ಕೆ ಬರುವುದು ಸಾಧ್ಯ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾರ ಜತೆ ಸೇರಿಕೊಳ್ಳುತ್ತೀರಿ? ಬಿಜೆಪಿ? ಕಾಂಗ್ರೆಸ್? ಜೆಡಿಎಸ್?
ಬಿಜೆಪಿ ಜತೆ ಹೋಗುವ ಪ್ರಶ್ನೆಯೇ ಇಲ್ಲ. ಆ ಪಕ್ಷದ ನಾಯಕರು ನಮ್ಮ ಮತದಾರರನ್ನು ಹಾದಿ ತಪ್ಪಿಸಲು ಈ ರೀತಿಯ ವದಂತಿಗಳನ್ನು ಹರಡು ತ್ತಿದ್ದಾರೆ. ಸುಷ್ಮಾ ಸ್ವರಾಜ್ ಅವರೇ ಮೊನ್ನೆ ಈ ರೀತಿ ಹೇಳಿದ್ದರು. ಆ ಪಕ್ಷದಲ್ಲಿ ಒಂದಷ್ಟು ನನ್ನ ಹಿತೈಷಿಗಳಿರು ವುದು ನಿಜ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಭಾನು ವಾರ ರಾಜ್ಯದಲ್ಲಿ ಮಾಡಿದ್ದ ಪ್ರಚಾರ ಭಾಷಣ ದಲ್ಲಿ ಕೂಡಾ ನನ್ನ ಹೆಸರನ್ನೆತ್ತಿ ಟೀಕಿಸಿಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಬಿಜೆಪಿಯ ಕೆಲವು ನಾಯಕರು ನನ್ನನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಂಪರ್ಕಿಸುತ್ತಿರುವುದು ನಿಜ. ಆದರೆ ಬಿಜೆಪಿ ನನ್ನ ಬದುಕಿನಲ್ಲಿ ಮುಗಿದ ಅಧ್ಯಾಯ. ಇನ್ನು ವಿಶ್ವಾಸದ್ರೋಹ ಮಾಡಿದ ಜೆಡಿಎಸ್ ಜತೆ ಈ ಜನ್ಮದಲ್ಲಿ ಸೇರುವುದಿಲ್ಲ. ಅನುಭವದಿಂದ ಅಷ್ಟು ಪಾಠವನ್ನು ಕಲಿಯದಿದ್ದರೆ ಹೇಗೆ?
ಪ್ರ: ಕಾಂಗ್ರೆಸ್?
ಈ ಚುನಾವಣೆ ನಡೆಯುತ್ತಿರುವುದೇ ನಮ್ಮ ಪಕ್ಷ ಮತ್ತು ಕಾಂಗ್ರೆಸ್ ನಡುವೆ. ಹೊಂದಾಣಿಕೆ ಮಾಡಿಕೊಳ್ಳುವುದು ಎಲ್ಲಿ ಬಂತು? ಆದರೆ ಕಾಂಗ್ರೆಸ್ ನಾಯಕರಿಗೂ ತಮ್ಮ ತಪ್ಪಿನ ಅರಿವಾಗುತ್ತಿದೆ. ನನ್ನ ಮೇಲಿನ ಆರೋಪಗಳು ಬಿಜೆಪಿಯ ಕೆಲವು ನಾಯಕರು ಸೇರಿ ನನ್ನ ವಿರುದ್ಧ ಹೂಡಿದ್ದ ಸಂಚು ಎಂದು ನಿಧಾನವಾಗಿ ಅವರಿಗೆ ಅರ್ಥವಾಗುತ್ತಿದೆ. ನನ್ನನ್ನು ಎದುರುಹಾಕಿಕೊಂಡರೆ ರಾಜ್ಯದ ಒಂದು ದೊಡ್ಡ ಸಮುದಾಯದ ಅಸಮಾಧಾನಕ್ಕೆ ಈಡಾಗಬಹುದೆಂಬ ಭೀತಿಯೂ ಅವರಲ್ಲಿದೆ. ಇದಕ್ಕಾಗಿಯೇ ಅವರು ನನ್ನ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ.
ಪ್ರ: ಇಷ್ಟೊಂದು ಆತ್ಮವಿಶ್ವಾಸದಿಂದ ಗೆಲ್ಲುವ ಅಭ್ಯರ್ಥಿಗಳ ಸಂಖ್ಯೆಯನ್ನು ಹೇಳುತ್ತಿದ್ದೀರಿ, ಇದಕ್ಕೆ ಆಧಾರ ಏನು?
ಜನರ ಮೇಲಿನ ನಂಬಿಕೆಯೇ ಆಧಾರ. ನಾನು ಮಾಡಿದ ಕೆಲಸಗಳೆಲ್ಲ ಜನರಿಗೆ ಗೊತ್ತು, ತಪ್ಪು-ಒಪ್ಪುಗಳ ಹಿಂದಿನ ಸತ್ಯ ಏನು ಎನ್ನುವುದನ್ನೂ ನಿಧಾನವಾಗಿ ಅವರು ತಿಳಿದುಕೊಂಡಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷಕ್ಕೆ ಇರುವ ಬೆಂಬಲವನ್ನು ನೀವೇ ಕಣ್ಣಾರೆ ನೋಡಿದ್ದೀರಿ. ಇದೇ ರೀತಿ ಮುಂಬೈ ಕರ್ನಾಟಕದಲ್ಲಿಯೂ ಇದೆ. ಹಳೆಮೈಸೂರಿನಲ್ಲಿ ಜೆಡಿಎಸ್‌ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಲಿದ್ದೇವೆ.
ಪ್ರ: ನಿಮ್ಮ ಶಕ್ತಿ ಎಂದು ಹೇಳಿಕೊಳ್ಳುತ್ತಿರುವ ನಿಮ್ಮ ನಂಬಿಕೆಯೇ ನಿಮ್ಮ ದೌರ್ಬಲ್ಯ ಎಂದು ಈಗಲೂ ಅನಿಸುವುದಿಲ್ಲವೇ? ಸ್ವಂತ ಪಕ್ಷ ರಚಿಸಿದಾಗ ನಿಮ್ಮನ್ನು ಬೆಂಬಲಿಸಬಹುದೆಂದು ನೀವು ನಂಬಿದವರಲ್ಲಿ ಹೆಚ್ಚಿನವರು ಯಾರೂ ನಿಮ್ಮ ಜತೆಯಲ್ಲಿಲ್ಲ. ಇದು ನಿಮ್ಮ ನಂಬಿಕೆಯ ದೋಷ ಅಲ್ಲವೇ?
ಕೆಲವು ನಾಯಕರು ನಾನಿಟ್ಟ ನಂಬಿಕೆಗೆ ದ್ರೋಹ ಬಗೆದದ್ದು ನಿಜ, ಆದರೆ  ಜನ ಹಾಗೆ ಮಾಡಲಾರರು.
ಪ್ರ: ಯಾವ ರೀತಿಯ ದ್ರೋಹ?
ಅವರ ಹೆಸರು ಹೇಳಲು ನನಗಿಷ್ಟ ಇಲ್ಲ, ಅದು ನಿಮಗೂ ಗೊತ್ತಿದೆ. ನನ್ನ ಜತೆಯಲ್ಲಿಯೇ ಇದ್ದವರಂತೆ ನಟಿಸುತ್ತಿದ್ದ ಅವರು ಬಿಜೆಪಿಯಲ್ಲಿದ್ದ ನನ್ನ ವಿರೋಧಿಗಳ ಜತೆ ಷಾಮೀಲಾಗಿದ್ದರು ಎನ್ನುವುದು ನನಗೆ ತಿಳಿಯಲೇ ಇಲ್ಲ. ಅವರೆಲ್ಲ ಕೊನೆ ಗಳಿಗೆಯಲ್ಲಿ ತೀರ್ಮಾನ ಕೈಗೊಂಡು ಬಿಜೆಪಿಯಲ್ಲಿಯೇ ಉಳಿದವರಲ್ಲ. ಈ ಸಂಚನ್ನು ಸಾಕಷ್ಟು ಪೂರ್ವದಲ್ಲಿಯೇ ಪರಸ್ಪರ ಕೂಡಿ ಮಾಡಿದ್ದರು. ಪಕ್ಷಕ್ಕೆ ರಾಜೀನಾಮೆ ಕೊಡುವುದನ್ನು ವಿಳಂಬ ಮಾಡಿಸಿದ್ದು ಕೂಡಾ ಇದೇ ಸಂಚಿನ ಭಾಗ. ಇದೆಲ್ಲ ನನಗೆ ಗೊತ್ತಾಗಲಿಲ್ಲ. ಅವರಿಗಿರುವ ವಕ್ರಬುದ್ಧಿ ನನಗಿಲ್ಲ, ನನ್ನದೇನಿದ್ದರೂ ನೇರಾನೇರ ರಾಜಕೀಯ.
ಪ್ರ: ಯಾವಾಗ ಪಕ್ಷ ಬಿಡುವ ಯೋಜನೆ ಇತ್ತು ನಿಮಗೆ?
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣವೇ ಆ ಪಕ್ಷ ಬಿಟ್ಟು ಹೊರಗೆ ಬರಬೇಕಾಗಿತ್ತು. ಆಗ ಹೊಸ ಪಕ್ಷ ಕಟ್ಟಲು ಸಮಯ ಸಿಗುತ್ತಿತ್ತು. ಆ ರೀತಿ ಮಾಡಿದರೆ ನಾನು ಬಲಿಷ್ಠನಾಗುತ್ತೇನೆ ಎಂದು ತಿಳಿದ ಬಿಜೆಪಿ ನಾಯಕರು ನಾನು ನಂಬಿದವರನ್ನೇ ಜತೆಯಲ್ಲಿಟ್ಟುಕೊಂಡು ಹಾದಿ ತಪ್ಪಿಸಿದರು. ದೆಹಲಿಯ ನಾಯಕರು ಸಂಧಾನ ನಡೆಸಿದರು, ಮುಂಬೈಯಲ್ಲಿ ನಡೆದ ಪಕ್ಷದ ಅಧಿವೇಶನಕ್ಕೆ ಕರೆಸಿಕೊಂಡರು. ಇವೆಲ್ಲವೂ ನಾನು ಹೊರಗೆ ಹೋಗುವುದನ್ನು ವಿಳಂಬ ಮಾಡಲು ಬಿಜೆಪಿ ಮಾಡಿದ ಸಂಚು ಎಂದು ನನಗೆ ತಿಳಿಯಲಿಲ್ಲ. ಆಗ ನನ್ನ ಜತೆಯಲ್ಲಿದ್ದವರಿಗೆ ಇದು ಗೊತ್ತಿದ್ದರೂ ಅದನ್ನು ನನಗೆ ತಿಳಿಸಲಿಲ್ಲ. ಅವರನ್ನು ನಂಬಿ ಮೋಸಹೋದೆ. ಅವರಿಗೆ ಒಳ್ಳೆಯದಾಗಲಿ.
ಪ್ರ: ನೀವು  ಅಧಿಕಾರದಲ್ಲಿದ್ದಾಗ ವೀರಶೈವ ಮಠಗಳಿಗೆ ಧಾರಾಳವಾಗಿ ದುಡ್ಡು ಕೊಟ್ಟವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಎದುರಾದಾಗ ಕೆಲವು ಸ್ವಾಮಿಗಳು ಬೀದಿಗೆ ಇಳಿದು ಪ್ರತಿಭಟನೆಯನ್ನೂ ನಡೆಸಿದ್ದರು. ಅವರಲ್ಲಿ ಯಾರೊಬ್ಬರೂ ಈಗ ನಿಮ್ಮನ್ನು ಬಹಿರಂಗವಾಗಿ ಬೆಂಬಲಿಸುತ್ತಿಲ್ಲವಲ್ಲಾ? ಅಲ್ಲಿಯೂ ನೀವಿಟ್ಟ ನಂಬಿಕೆ ಹುಸಿಯಾಗಿ ಹೋಯಿತೇ?
ಬಹಿರಂಗವಾಗಿ ಹೇಳಿಕೆ ನೀಡದಿದ್ದ ಮಾತ್ರಕ್ಕೆ ಅವರು ನನ್ನನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಲಾಗದು. ಕೆಲವು ಸ್ವಾಮೀಜಿಗಳ ಬಂಟರು ಬದಲಾಗಿರಬಹುದು ಅಷ್ಟೆ. ಸ್ವಾಮೀಜಿಗಳು ಮತ್ತು ಅವರ ಅನುಯಾಯಿಗಳು ನಮ್ಮ ಪಕ್ಷದ ಪರವಾಗಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ.
ಪ್ರ: ಈ ಚುನಾವಣೆಯ ನಂತರ ನಿಮ್ಮ ಪಕ್ಷದ ಭವಿಷ್ಯದ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ?
ಅಂತಿಮವಾಗಿ ನಾವು ರಾಷ್ಟ್ರಮಟ್ಟದಲ್ಲಿ ತೃತೀಯ ರಂಗದ ಜತೆ ಸೇರಿಕೊಳ್ಳುವವರು. ಈ ಬಗ್ಗೆ ಕೆಲವು ಪಕ್ಷಗಳ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅದರ ವಿವರವನ್ನು ಈಗ ಬಹಿರಂಗಪಡಿಸುವುದು ಸರಿಯಾಗುವುದಿಲ್ಲ. ಚುನಾವಣೆ ಮುಗಿದ ನಂತರ ದೆಹಲಿಗೆ ಹೋಗಿ ಅವರ ಜತೆ ಮಾತುಕತೆ ನಡೆಸುತ್ತೇನೆ. ನಮ್ಮದು ಒಂದು ಚುನಾವಣೆಯ ಪಕ್ಷ ಅಲ್ಲ, ಇದು ಯಡಿಯೂರಪ್ಪನಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕಾಗಿ ಹುಟ್ಟಿಕೊಂಡ ಪಕ್ಷ ಅಲ್ಲ. ಅದೊಂದು ನೆಪ ಅಷ್ಟೆ. ರಾಜ್ಯಕ್ಕೆ ಆಗಿರುವ ಮತ್ತು ಆಗಲಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ.

Monday, April 29, 2013

ಹೈದರಾಬಾದ್ ಕರ್ನಾಟಕದ ಬಾಗಿಲು ಬಡಿಯುತ್ತಿರುವ ಕೆಜೆಪಿ

ಗುಲ್ಬರ್ಗ:   ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಲಿಂಗಾಯತರು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಮೂಲಕ ರಾಜಕೀಯ ನೆಲೆಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆಯೇ? ರಾಜಕೀಯವಾಗಿ ಅವಕಾಶ ವಂಚಿತರಾಗುತ್ತಿದ್ದೇವೆ ಎಂಬ ಈ ಭಾಗದ ಲಿಂಗಾಯತ ಸಮುದಾಯದಲ್ಲಿರುವ ಅತೃಪ್ತಿಯನ್ನು ಬಳಸಿಕೊಂಡು ಕೆಜೆಪಿ ಇಲ್ಲಿ ಕಾಲೂರುವ ಸನ್ನಾಹದಲ್ಲಿ ತೊಡಗಿದೆಯೇ? ಇಲ್ಲಿನ ಚುನಾವಣಾ ರಾಜಕೀಯದ ವಿದ್ಯಮಾನಗಳ ಒಳಗೊಂದು ನೋಟ ಹರಿಸಿದರೆ ಇಂತಹ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಈ ಭಾಗದ ಹಿರಿಯ ರಾಜಕಾರಣಿಯಾಗಿದ್ದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ನಂತರ ತಮ್ಮನ್ನು ಪ್ರತಿನಿಧಿಸಬಲ್ಲ ಸಮರ್ಥ ನಾಯಕರು ಹುಟ್ಟಿಬರಲಿಲ್ಲ ಎಂಬ ಕೊರಗು ಇಲ್ಲಿನ ಲಿಂಗಾಯತ ಸಮುದಾಯದಲ್ಲಿ ಬಹಳ ಕಾಲದಿಂದಲೂ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಎಂಬ ಅವಳಿ ನಾಯಕರು ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಲಿಂಗಾಯತೇತರ ಸಮುದಾಯದ ಬೆಂಬಲದೊಂದಿಗೆ ಪ್ರಭಾವಶಾಲಿ ಕಾಂಗ್ರೆಸ್ ನಾಯಕರಾಗಿ ಬೆಳೆಯುತ್ತಾ ಹೋದಂತೆ ಲಿಂಗಾಯತರು ಸಹಜವಾಗಿಯೇ ಪಕ್ಕಕ್ಕೆ ಸರಿದು ನಿಲ್ಲಬೇಕಾಯಿತು.
ನಾಯಕತ್ವದ ಈ ನಿರ್ವಾತವನ್ನು ಬಳಸಿಕೊಳ್ಳಲು ರಾಮಕೃಷ್ಣ ಹೆಗಡೆಯವರು ಹೊರಟಾಗ ಲಿಂಗಾಯತರು ಹೆಚ್ಚುಕಡಿಮೆ ಅವರ ನಾಯಕತ್ವವನ್ನು ಒಪ್ಪಿಕೊಂಡೇ ಬಿಟ್ಟಿದ್ದರು. ಅದರ ನಂತರ ಕಾಣಿಸಿಕೊಂಡವರು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ. ಇವರನ್ನು ಈ ಭಾಗದ ಲಿಂಗಾಯತರು ಬೆಂಬಲಿಸಿರುವುದಕ್ಕೆ 2008ರ ವಿಧಾನಸಭಾ ಚುನಾವಣಾ ಫಲಿತಾಂಶ ಸಾಕ್ಷಿ. ಆಶ್ಚರ್ಯದ ಸಂಗತಿಯೆಂದರೆ ಆ ಚುನಾವಣೆಯಲ್ಲಿ ಲಿಂಗಾಯತ ಮತದಾರರು ಅಭ್ಯರ್ಥಿಗಳ ಜಾತಿಯನ್ನು ನೋಡದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಏಕೈಕ ಗುರಿಯಿಂದ ಲಿಂಗಾಯತೇತರ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ಕಂಡುಬರುತ್ತದೆ.
ಕಳೆದ ಚುನಾವಣೆಯಲ್ಲಿ ಗುಲ್ಬರ್ಗ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ನಲ್ವತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹತ್ತೊಂಬತ್ತನ್ನು ಗೆದ್ದಿದ್ದರೂ, ಇವರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ಐದು ಶಾಸಕರು ಮಾತ್ರ. ಉಳಿದವರೆಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗೆ ಸೇರಿದವರು. ಕಾಂಗ್ರೆಸ್ ಪಕ್ಷ ಈ ಭಾಗದ 15 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದರೂ ಅವರಲ್ಲಿನ ಲಿಂಗಾಯತ ಶಾಸಕರ ಸಂಖ್ಯೆ ಬಿಜೆಪಿಗಿಂತ ಎರಡು ಹೆಚ್ಚು. ಲಿಂಗಾಯತೇತರ ಅಭ್ಯರ್ಥಿಗಳಿದ್ದ ಕ್ಷೇತ್ರಗಳಲ್ಲಿಯೂ ಲಿಂಗಾಯತರು ಬಿಜೆಪಿಗೆ ಮತದಾನ ಮಾಡಿರುವುದು ಇದರಿಂದ ಸ್ಪಷ್ಟ.
ಜನಪ್ರಿಯ ಜಾತಿ ನಾಯಕರಲ್ಲಿ ಕಾಣಬಹುದಾದ (ಉದಾಹರಣೆಗೆ ಮಾಯಾವತಿ) ಮತವರ್ಗಾವಣೆಯ ಸಾಮರ್ಥ್ಯವನ್ನು ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಪ್ರದರ್ಶಿಸಿದ್ದಾರೆ. ಆದರೆ ಕೇವಲ ಈ ಶಕ್ತಿಯ ಬಲದಿಂದ ಕೆಜೆಪಿ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವೇ ಎನ್ನುವುದು ಪ್ರಶ್ನೆ. ಯಡಿಯೂರಪ್ಪ ಬಿಜೆಪಿಯಲ್ಲಿದ್ದಾಗ ಅವರ ವೈಯಕ್ತಿಕ ಜನಪ್ರಿಯತೆ (ಮುಖ್ಯವಾಗಿ ಜಾತಿ) ಮತ್ತು ಪಕ್ಷದ ಮೂಲಕ ಹರಿದು ಬಂದ ಬೆಂಬಲ ಒಟ್ಟಾಗಿ ಅಭ್ಯರ್ಥಿಗಳನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತ್ತು. ಆದರೆ ಈ ಬಾರಿ ಕೇವಲ ತನ್ನ ಜನಪ್ರಿಯತೆಯ ಬಲದಿಂದಲೇ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ತರಬೇಕಾಗಿದೆ. ಹಿಂದಿನ ಚುನಾವಣೆಯ ಕಾಲದಲ್ಲಿದ್ದ ಮತವರ್ಗಾವಣೆಯ ಸಾಮರ್ಥ್ಯ ಈಗಲೂ ಯಡಿಯೂರಪ್ಪನವರಲ್ಲಿ ಉಳಿದಿದೆಯೇ?
ಆರೋಪಗಳ ಕಳಂಕದ ಹೊರತಾಗಿಯೂ ಹೈದರಾಬಾದ್ ಕರ್ನಾಟಕದ ಬಹುಸಂಖ್ಯಾತ ಲಿಂಗಾಯತರಲ್ಲಿ ಯಡಿಯೂರಪ್ಪನವರ ಬಗ್ಗೆ ಪ್ರೀತಿಯೋ, ಅನುಕಂಪವೋ ಇರುವುದು ಸ್ಪಷ್ಟ. ಆದರೆ ಈ ಮೃದು ಭಾವನೆ ಅವರ ಮತಾಧಿಕಾರವನ್ನು ನಿರ್ದೇಶಿಸುವಷ್ಟು ಪ್ರಭಾವಶಾಲಿಯಾಗಿದೆಯೇ ಎಂಬುದನ್ನು ಕಾದು ನೋಡಬೇಕು. ಈ ಭಾಗದಲ್ಲಿ ಸಮಗ್ರ ಲಿಂಗಾಯತ ಜಾತಿಯನ್ನು ಪ್ರತಿನಿಧಿಸಬಲ್ಲ ಸಾಮರ್ಥ್ಯದ ನಾಯಕರು ಇಲ್ಲದಿರುವುದು ಕೂಡಾ ಯಡಿಯೂರಪ್ಪನವರ ಬಗೆಗಿನ ಅಭಿಮಾನಕ್ಕೆ ಕಾರಣ ಇರಬಹುದು.
ಗುಲ್ಬರ್ಗ ಜಿಲ್ಲೆಯಲ್ಲಿ ವೀರೇಂದ್ರ ಪಾಟೀಲರ ನಂತರ ಕಾಣಿಸಿಕೊಂಡವರು ಜನತಾ ಪರಿವಾರಕ್ಕೆ ಸೇರಿರುವ ವೈಜನಾಥ ಪಾಟೀಲ, ಎಸ್.ಕೆ.ಕಾಂತಾ, ಬಿ.ಆರ್.ಪಾಟೀಲ ಮೊದಲಾದ ನಾಯಕರು. ಇವರಲ್ಲಿ ಯಾರೂ ಲಿಂಗಾಯತ ನಾಯಕರಾಗಿ ತಮ್ಮನ್ನು ಬಿಂಬಿಸಿಕೊಂಡವರಲ್ಲ. ಗುಲ್ಬರ್ಗ ಜಿಲ್ಲೆಯ ಸೇಡಂ ಶಾಸಕ ಡಾ.ಶರಣಪ್ರಕಾಶ ಪಾಟೀಲ ಇಲ್ಲವೆ ಯಾದಗಿರಿ ಶಾಸಕ ಡಾ.ಮಾಲಕರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷ ತಮ್ಮಲ್ಲಿರುವ ಲಿಂಗಾಯತ ನಾಯಕರೆಂದು ಬಿಂಬಿಸುತ್ತಿದ್ದರೂ ಅವರ ಪ್ರಭಾವಲಯ ಸೀಮಿತವಾದುದು.
ಇದೇ ರೀತಿ ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಭೀಮಣ್ಣ ಖಂಡ್ರೆ ವೀರಶೈವ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೂ ಸಮುದಾಯದ ಮೇಲೆ ನಿಯಂತ್ರಣ ಹೊಂದಿದವರಲ್ಲ, ಅವರ ಶ್ರಮವೆಲ್ಲ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಗ ಈಶ್ವರ ಖಂಡ್ರೆಯವರನ್ನು ಗೆಲ್ಲಿಸುವುದಕ್ಕಷ್ಟೇ ವ್ಯಯವಾಗುತ್ತಿದೆ. ಅದೇ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಹಲವು ಪಕ್ಷಗಳನ್ನು ಸುತ್ತಿ ಈಗ ಕೆಜೆಪಿ ಸೇರಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸವರಾಜ ಪಾಟೀಲ ಅನ್ವರಿ ಈಗ ಹಿಂದಿನ ಜನಪ್ರಿಯತೆಯನ್ನು ಉಳಿಸಿಕೊಂಡಿಲ್ಲ. ಆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಬಸವರಾಜ ರಾಯರೆಡ್ಡಿ ಮತ್ತು ಅಮರೇಗೌಡ ಬಯ್ಯಾಪುರ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ತಮ್ಮ ಕ್ಷೇತ್ರಗಳ ವ್ಯಾಪ್ತಿಯನ್ನು ಮೀರಿ ಲಿಂಗಾಯತ ಮತದಾರರ ಮೇಲೆ ಹಿಡಿತ ಹೊಂದಿದವರಲ್ಲ.
ಏಳರಲ್ಲಿ ಐದು ಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಲಿಂಗಾಯತ ನಾಯಕರು ಬೆಳೆಯಲು ಅವಕಾಶ ಕಡಿಮೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಬೋಸರಾಜು ಮತ್ತು ಹಂಪನಗೌಡ ಬಾದರ್ಲಿ ಅವರೇ ಅಲ್ಲಿನ ನಾಯಕರು. ಬಳ್ಳಾರಿ ಜಿಲ್ಲೆಯಲ್ಲಿದ್ದ ಒಬ್ಬ ಲಿಂಗಾಯತ ನಾಯಕರಾದ ಅಲ್ಲಂ ವೀರಭದ್ರಪ್ಪನವರು ಊರು ಬಿಟ್ಟು ಬೆಂಗಳೂರು ಸೇರಿಬಿಟ್ಟಿದ್ದಾರೆ.
ಹೈದರಾಬಾದ್ ಕರ್ನಾಟಕದ ಲಿಂಗಾಯತರಲ್ಲಿರುವ ನಾಯಕತ್ವದ ಕೊರತೆ ಬಿ.ಎಸ್.ಯಡಿಯೂರಪ್ಪನವರಿಗೆ ಇರುವ ಅನುಕೂಲತೆ. ಇದನ್ನು ಅರ್ಥಮಾಡಿಕೊಂಡಿರುವ ಅವರು ಅಳಿದುಳಿದ ಲಿಂಗಾಯತ ನಾಯಕರನ್ನು  ತಮ್ಮ ಜತೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಪ್ರಾರಂಭದಿಂದಲೇ ಮಾಡುತ್ತಾ ಬಂದಿದ್ದಾರೆ. ಈ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸನ್ನೂ ಕಂಡಿದ್ದಾರೆ. ಇದನ್ನು ಮುಖ್ಯವಾಗಿ ಹೈದರಾಬಾದ್ ಕರ್ನಾಟಕದ ಕೇಂದ್ರ ಸ್ಥಾನವಾದ ಗುಲ್ಬರ್ಗ ಜಿಲ್ಲೆಯಲ್ಲಿ ಕಾಣಬಹುದು. ನಂಜುಂಡಪ್ಪ ವರದಿಯ ಅನುಷ್ಠಾನದಿಂದ ಹಿಡಿದು ಸಂವಿಧಾನದ 371ನೇ ಕಲಂ ತಿದ್ದುಪಡಿಯವರೆಗಿನ ಹೈದರಾಬಾದ್ ಕರ್ನಾಟಕದ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಾ ಬಂದ ವೈಜನಾಥ ಪಾಟೀಲ, ಕಾರ್ಮಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಎಸ್.ಕೆ.ಕಾಂತಾ, ಜನತಾ ಪರಿವಾರದಿಂದ ಬಂದ ಸಮಾಜವಾದಿ ಹಿನ್ನೆಲೆಯ ಬಿ.ಆರ್.ಪಾಟೀಲ ಮತ್ತು ಇನ್ನೊಬ್ಬ ಹಿರಿಯ ನಾಯಕ ಎಂ.ವೈ. ಪಾಟೀಲ ಈಗ ಗುಲ್ಬರ್ಗ ಜಿಲ್ಲೆಯಲ್ಲಿ ಕೆಜೆಪಿ ಅಭ್ಯರ್ಥಿಗಳು. ಅದೇ ರೀತಿ ಕೊಪ್ಪಳ ಜಿಲ್ಲೆಯ ಬಸವರಾಜ ಅನ್ವರಿ, ಬೀದರ್ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಕೂಡಾ ಕೆಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ತಮಗೆ ಇರುವ ಪ್ರಭಾವ ಸೀಮಿತವಾಗಿದ್ದರೂ ಇದು ಯಡಿಯೂರಪ್ಪನವರ ಜನಪ್ರಿಯತೆಯ ಜತೆ ಸೇರಿಕೊಂಡಾಗ ಗೆಲುವಿನ ಹಾದಿ ಹತ್ತಿರವಾಗಬಹುದು ಎಂಬ ನಿರೀಕ್ಷೆ ಕೆಜೆಪಿ ಅಭ್ಯರ್ಥಿಗಳಲ್ಲಿದೆ. ಕೆಜೆಪಿಯ ಜನಪ್ರಿಯತೆ ಅದಕ್ಕೆ ಸ್ಥಾನಗಳನ್ನು ಗೆದ್ದುಕೊಡುವಷ್ಟು ಅಗಾಧವಾಗಿದೆಯೇ? ಇಲ್ಲವೆ ಬೇರೆ ಪಕ್ಷಗಳ ಮತಗಳನ್ನು ತಿಂದುಹಾಕುವುದಕ್ಕಷ್ಟೇ ಸೀಮಿತವಾಗಲಿದೆಯೇ ಎನ್ನುವುದು ಚುನಾವಣಾ ಕಣದಲ್ಲಿರುವ ಕುತೂಹಲ. ಕೆಜೆಪಿ ಬರಿ ಬಿಜೆಪಿಗೆ ಮಾತ್ರವಲ್ಲ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹಾನಿ ಉಂಟು ಮಾಡುವ ಸಾಧ್ಯತೆ ಇದ್ದರೂ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಜೆಪಿಯಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು. ತಮ್ಮ ಅಭ್ಯರ್ಥಿಗಳು ಗೆಲ್ಲಲಾಗದ ಕಡೆಗಳಲ್ಲಿ ಕೊನೆ ಗಳಿಗೆಯಲ್ಲಿ ಕೆಜೆಪಿ ತನ್ನ ಬೆಂಬಲಿಗರಿಗೆ ಕಾಂಗ್ರೆಸ್ ಪರ ಮತಹಾಕಲು ಸೂಚನೆಯನ್ನು ನೀಡಬಹುದೆಂಬ ನಿರೀಕ್ಷೆಯೂ ಕೆಲವು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿದೆ.
ಬಹಿರಂಗವಾಗಿ ಚರ್ಚೆಯಾಗುತ್ತಿರುವಂತೆ ಬಿಜೆಪಿಯನ್ನು ಸೋಲಿಸುವುದೇ ಕೆಜೆಪಿಯ ಮೊದಲ ಉದ್ದೇಶವಾಗಿದ್ದರೆ ಈ ಪ್ರಯತ್ನದಲ್ಲಿ ಅದು ಈಗಾಗಲೇ ಯಶಸ್ಸು ಕಂಡಿದೆ ಎಂದು ಹೇಳಬಹುದು. ಹೈದರಾಬಾದ್ ಕರ್ನಾಟಕದಲ್ಲಿ ಕಳೆದ ಬಾರಿ ಗೆದ್ದಿರುವ 19 ಸ್ಥಾನ ಉಳಿಸಿಕೊಳ್ಳುವುದು ಬಿಜೆಪಿಗೆ ಖಂಡಿತ ಅಸಾಧ್ಯ. ಈ ಸಂಖ್ಯೆ ಅರ್ಧಕ್ಕಿಂತಲೂ ಕೆಳಗಿಳಿದರೂ ಅಚ್ಚರಿ ಪಡಬೇಕಾಗಿಲ್ಲ. ಕೆಜೆಪಿ, ಹೈದರಾಬಾದ್ ಕರ್ನಾಟಕದ ಮನೆಬಾಗಿಲು ಬಡಿಯುತ್ತಿರುವುದು ನಿಜ, ಆದರೆ ಬಾಗಿಲು ತೆರೆಯುವ ಬಗ್ಗೆ ಮನೆ ಯಜಮಾನನ ನಿರ್ಧಾರ ಏನೆಂದು ತಿಳಿದುಕೊಳ್ಳಲು ಕಾಯಬೇಕು.

Sunday, April 28, 2013

`ವಿಕಾಸ ಪುರುಷ'ನ ಹೊಸ ಪಾತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಚಾರ

ಗುಲ್ಬರ್ಗ:  `ನಮ್ಮ ಸಾಧನೆಯನ್ನು ಅರ್ಧ ಆಕಾಶದಲ್ಲಿ, ಇನ್ನರ್ಧ ಭೂಮಿಯಲ್ಲಿ ತೋರಿಸುತ್ತೇನೆ' ಎಂದಿದ್ದರು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗದಲ್ಲಿ ಹೆಲಿಕಾಪ್ಟರ್ ಹತ್ತುವಾಗ. ಬೀದರ್ ಲೋಕಸಭಾ ಸದಸ್ಯ ಎನ್.ಧರ್ಮಸಿಂಗ್ ಅವರೂ ಜತೆಯಲ್ಲಿದ್ದರು.
ಬೆಳಿಗ್ಗೆ ಹತ್ತರಿಂದ ರಾತ್ರಿ ಹತ್ತರ ವರೆಗೆ ಎಡೆಬಿಡದೆ ಐದು ಸ್ಥಳಗಳಲ್ಲಿ ಪ್ರಚಾರ ಭಾಷಣ ಮಾಡಿದ ಇಬ್ಬರೂ ನಾಯಕರು ದಣಿವಿಲ್ಲದಂತೆ ಮಾತನಾಡಿದ್ದು ಹೈದರಾಬಾದ್ ಕರ್ನಾಟಕದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತ್ರ. ಸಭೆ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಬಂದು ಕೂತಾಗಲೂ ಅದೇ ಚರ್ಚೆ ಮುಂದುವರಿಯುತ್ತಿತ್ತು. `ಐದು ವರ್ಷಗಳಲ್ಲಿ ಖರ್ಗೆ ಮತ್ತು ಧರ್ಮಸಿಂಗ್ ಈ ಪ್ರದೇಶಕ್ಕೆ ಏನು ಮಾಡಿದ್ದಾರೆ?' ಎಂಬ ವಿರೋಧಪಕ್ಷಗಳ ಚುಚ್ಚು ಪ್ರಶ್ನೆ ಇಬ್ಬರನ್ನೂ ಘಾಸಿಗೊಳಿಸಿದಂತಿತ್ತು.
ಆಡಳಿತಾರೂಢ ಪಕ್ಷದ ದುರಾಡಳಿತವನ್ನೇ ಚುನಾವಣಾ ಕಾಲದಲ್ಲಿ ವಿರೋಧ ಪಕ್ಷಗಳ ನಾಯಕರು ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಳ್ಳುವುದು ಸಹಜ. ಹೈದರಾಬಾದ್ ಕರ್ನಾಟಕದಲ್ಲಿ ಚುನಾವಣಾ ಆಟದ ಈ ನಿಯಮ ಬದಲಾಗಿದೆ.
ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ  ಕಾಂಗ್ರೆಸ್‌ನ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಾಧನೆಗಳನ್ನು ಮುಂದಿಟ್ಟು ಮತಕೇಳುತ್ತಿದ್ದಾರೆ.`ದಲಿತ ನಾಯಕ', `ಉತ್ತರ ಕರ್ನಾಟಕದ ನಾಯಕ' ಎಂಬೀತ್ಯಾದಿ ವಿಶೇಷಣಗಳಿಂದ ಕಳಚಿಕೊಂಡು `ವಿಕಾಸ ಪುರುಷ'ನಾಗಿ ತಮ್ಮನ್ನು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಖರ್ಗೆ ತೊಡಗಿದ್ದಾರೆ.
`ಲೋಕಸಭೆಗೆ ನನ್ನನ್ನು ಆರಿಸಿ ಕಳುಹಿಸಿದರೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದಾಗಿ ರಾಹುಲ್‌ಗಾಂಧಿ ಭರವಸೆ ನೀಡಿದ್ದರು. ನಾವು ನುಡಿದಂತೆ ನಡೆದಿದ್ದೇವೆ. ಮಾಡಿರುವ ಕೆಲಸಕ್ಕಾಗಿ ಕೂಲಿ ಕೊಡಿ' ಎಂದು ಖರ್ಗೆ ಅವರು ಮತಯಾಚಿಸುತ್ತಿದ್ದಾರೆ. ಅಲ್ಲಿಗೆ ನಿಲ್ಲಿಸದೆ, ನಾಲ್ಕು ವರ್ಷಗಳ ಅವಧಿಯಲ್ಲಿ  ಗುಲ್ಬರ್ಗ  ಜಿಲ್ಲೆಯಲ್ಲಿ ತಾವು ಮಾಡಿದ ಸಾಧನೆಗಳನ್ನು ಪಟ್ಟಿಮಾಡಿ ಹೇಳುತ್ತಿದ್ದರು.
`ಏನು ಮಾಡಿದ್ದಾರೆ ಎಂದು ಕೇಳುವವರು ಇಲ್ಲಿ ಬಂದು ಕಣ್ಣುಬಿಟ್ಟುನೋಡಲಿ, ಅಂದಾಜು ರೂ.1,500 ಕೋಟಿ  ವೆಚ್ಚದಲ್ಲಿ ಇಎಸ್‌ಐ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ, ಡೆಂಟಲ್,ನರ್ಸಿಂಗ್ ಕಾಲೇಜುಗಳು, ಕೇಂದ್ರೀಯ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಗುಲ್ಬರ್ಗಗಳಲ್ಲಿ ಕೌಶಲ ಸುಧಾರಣಾ ಕೇಂದ್ರ, ಟೆಕ್ಸ್‌ಟೈಲ್ ಪಾರ್ಕ್, ಕೃಷಿ ಸಂಶೋಧನಾ ಕೇಂದ್ರ, ನವೋದಯ ಶಾಲೆ...ಇನ್ನೇನಾಗಬೇಕು? ಗುಲ್ಬರ್ಗ, ರಾಯಚೂರು,ಯಾದಗಿರಿ,ಬಳ್ಳಾರಿ ಮತ್ತು ಅನಂತಪುರ ಮೂಲಕ ಬೆಂಗಳೂರಿಗೆ ಹೋಗುವ ಸುಮಾರು 300 ಕಿ.ಮೀ.ಉದ್ದದ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಇವೆಲ್ಲವೂ ನಾಲ್ಕು ವರ್ಷಗಳಲ್ಲಿ ಆಗಿರುವಂತಹ ಕೆಲಸಗಳು, ಹಿಂದಿನದ್ದೆಲ್ಲವನ್ನು ಇದರಲ್ಲಿ ಸೇರಿಸಿಲ್ಲ. ನನ್ನನ್ನು ಸತತವಾಗಿ ಏಳು ಬಾರಿ ಆಯ್ಕೆಮಾಡಿದ ಗುರುಮಿಠ್ಕಲ್ ಕ್ಷೇತ್ರಕ್ಕೆ ಹೋಗಿ ನೋಡಿದರೆ ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇನೆಂದು ಗೊತ್ತಾಗುತ್ತದೆ.  ಕಾಮಾಲೆ ಕಣ್ಣಿಗೆ ಇದೆಲ್ಲ ಕಾಣಿಸುವುದಿಲ್ಲ' ಎಂದ ಖರ್ಗೆಯವರಿಗೆ ಭಾಷಣ ಮುಗಿಸಿದ ಮೇಲೆಯೂ ವಿರೋಧಪಕ್ಷಗಳ ನಾಯಕರ ಪ್ರಶ್ನೆಗಳಿಂದ ಹುಟ್ಟಿಕೊಂಡಿರುವ ಸಿಟ್ಟು ಇಳಿದಿರಲಿಲ್ಲ.
ಪಕ್ಷದ ಶಿಸ್ತಿನ ಶಿಪಾಯಿ: ಅವರ ಮಾತುಗಳನ್ನು ಅರ್ಧಕ್ಕೆ ತಡೆದು `ವಿರೋಧಪಕ್ಷಗಳನ್ನು ಯಾಕೆ ದೂರುತ್ತೀರಿ, ಬೆಂಗಳೂರಿನಲ್ಲಿರುವ ನಿಮ್ಮ ಪಕ್ಷದ ನಾಯಕರಲ್ಲಿ ಎಷ್ಟು ಮಂದಿ ಈ ಬಗ್ಗೆ ಮಾತನಾಡಿದ್ದಾರೆ?' ಎಂದು ಪ್ರಶ್ನಿಸಿದೆ. ಅಲ್ಲಿಯವರೆಗೆ ಆಕ್ರಮಣಕಾರಿ ರಾಜಕೀಯ ನಾಯಕರಂತೆ ಮಾತನಾಡುತ್ತಿದ್ದ ಖರ್ಗೆಯವರು ತಕ್ಷಣ `ಪಕ್ಷದ ಶಿಸ್ತಿನ ಸಿಪಾಯಿ'ಯಾಗಿ ಮೌನವಾಗಿಬಿಟ್ಟರು.
ಆಡಳಿತ ಮತ್ತು ವಿರೋಧಪಕ್ಷದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದ ಅನುಭವವನ್ನು ಗಣನೆಗೆ ತೆಗೆದುಕೊಂಡರೆ ಪಕ್ಷಾತೀತವಾಗಿ ರಾಜ್ಯದ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ. ಆದರೆ ಅದನ್ನು ಅವರು ಹೇಳಿಕೊಂಡದ್ದು ಕಡಿಮೆ.
`ಸಾಮಾನ್ಯವಾಗಿ ರಾಜಕಾರಣಿಗಳಲ್ಲಿ ಕಂಡುಬರುವ ಮಹತ್ವಾಕಾಂಕ್ಷೆ ಇಲ್ಲದಿರುವುದು ಮತ್ತು ಪಕ್ಷದ ಮೇಲಿನ ಅತಿನಿಷ್ಠೆ ಖರ್ಗೆ ಅವರ ದೌರ್ಬಲ್ಯಗಳು' ಎನ್ನುತ್ತಾರೆ ಅವರ ಬೆಂಬಲಿಗರು. ಇತ್ತೀಚೆಗೆ ಖರ್ಗೆ ಅವರನ್ನು ರಾಜಕೀಯ ಮಹತ್ವಾಕಾಂಕ್ಷೆಗಿಂತಲೂ ಹೆಚ್ಚಾಗಿ ಅಭಿವೃದ್ಧಿ ಕೆಲಸಗಳ ಹುಚ್ಚು ಆವರಿಸಿಕೊಂಡಂತಿದೆ.
ತಮ್ಮ ನಲ್ವತ್ತು ವರ್ಷಗಳ ರಾಜಕೀಯದಲ್ಲಿ ಮಾಡಲು ಸಾಧ್ಯವಾಗದೆ ಇರುವುದನ್ನೆಲ್ಲ ಆದಷ್ಟು ಬೇಗ ಮಾಡಿ ಮುಗಿಸುವ ಅವಸರದಲ್ಲಿದ್ದ ಹಾಗೆ ಕಾಣುತ್ತಿದ್ದಾರೆ. ರಾಜಕೀಯ ವಿಷಯದ ಮೂಲಕ ಅವರೊಡನೆ ಮಾತು ಪ್ರಾರಂಭಿಸಿದರೂ ಅದು ಬಹಳ ಬೇಗ ಅಭಿವೃದ್ಧಿ ಕಾರ್ಯಕ್ರಮಗಳ ಚರ್ಚೆಯ ತಿರುವು ಪಡೆಯುತ್ತಿತ್ತು.
ಗುಲ್ಬರ್ಗದಲ್ಲಿ ಹೆಲಿಕಾಪ್ಟರ್ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲಿಯೇ `ಇಲ್ಲಿ ಕೆಳಗೆ ನೋಡಿ' ಎಂದರು ಇಬ್ಬರೂ ನಾಯಕರು ಏಕಕಾಲಕ್ಕೆ. ಅಲ್ಲಲ್ಲಿ ನಿರ್ಮಾಣಗೊಂಡಿರುವ ಬ್ಯಾರೇಜ್‌ಗಳಿಂದಾಗಿ ಭೀಮಾ ನದಿಯಲ್ಲಿ ನೀರು ನಿಂತಿರುವುದು ಮತ್ತು ನದಿದಂಡೆಯಲ್ಲಿ ಹಸಿರು ನಳನಳಿಸುತ್ತಿರುವುದು ಎತ್ತರದಿಂದಲೂ ಸ್ಪಷ್ಟವಾಗಿ ಕಾಣುತ್ತಿತ್ತು.
ಭೀಮಾ, ಕಾಗಿನಾ, ಅಮರ್ಜಾ ನದಿದಂಡೆಗಳ ಮೇಲಿನ ಅಫ್ಜಲ್‌ಪುರ, ಜೇವರ್ಗಿ, ಶಹಬಾದ್, ಚಿಂಚೋಳಿ, ಮಾಗಾಂವ್‌ಗಳಲ್ಲಿಯೇ ಚುನಾವಣಾ ಪ್ರಚಾರದ ಸಭೆಗಳಿದ್ದ ಕಾರಣ ಹೆಲಿಕಾಪ್ಟರ್ ಈ ನದಿದಂಡೆಗಳ ಮೇಲಿನಿಂದಲೇ ಹಾರುತ್ತಿತ್ತು. ನದಿಗಳಲ್ಲಿ ನೀರು ಮತ್ತು ಹಸಿರು ನೋಡಿದಾಕ್ಷಣ ಇಬ್ಬರೂ ನಾಯಕರು `ಕೆಳಗೆ ನೋಡಿ' ಎಂದು ಹೇಳುತ್ತಲೇ ಇದ್ದರು.
`ಏನು ಮಾಡಿದ್ದಾರೆ ಎಂದು ಕೇಳುವವರಿಗೆ ಇದು ಯಾವುದು ಕಾಣುತ್ತಿಲ್ಲವೇ? ಈ ನದಿಗಳಿಗೆ ಸುಮಾರು 20-25 ಬ್ಯಾರೇಜ್ ನಿರ್ಮಿಸಲಾಗಿದೆ. ಇವುಗಳಿಗೆ ಕೇಂದ್ರ ಸರ್ಕಾರದ `ತ್ವರಿತ ನೀರಾವರಿ ಯೋಜನೆ'ಯಿಂದಲೇ ಹೆಚ್ಚಿನ ದುಡ್ಡು ಬಂದಿರುವುದು, ರಾಜ್ಯ ಸರ್ಕಾರ ಎಷ್ಟು ಕೊಟ್ಟಿದೆಯಂತೆ? ಪ್ರಶ್ನಿಸಿದರು ಧರ್ಮಸಿಂಗ್. `ನಮ್ಮ ಸಾಧನೆಯನ್ನು ಆಕಾಶದಲ್ಲಿ ತೋರಿಸುತ್ತೇನೆ' ಎಂದು ಹೇಳಿದ್ದೇ ಇದಕ್ಕಾಗಿ ಎಂದು ದನಿಗೂಡಿಸಿದರು ಖರ್ಗೆ.
ಹೆಲಿಕಾಪ್ಟರ್‌ನ ಮೊದಲ ನಿಲುಗಡೆಯಾಗಿ ಅಫ್ಜಲ್‌ಪುರದಲ್ಲಿ ಇಳಿದಾಗ ಎದುರಾದ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಭೀಮಾ ನದಿ ದಂಡೆಯ ಬ್ಯಾರೇಜ್‌ಗಳ ವಿಷಯ ಬಿಟ್ಟು ಬೇರೇನೂ ಮಾತನಾಡಲಿಲ್ಲ.  `ಸೊನ್ನ, ಗಾಣಗಾಪುರ, ಗತ್ತರಗಿಗಳಲ್ಲಿ ನಿರ್ಮಾಣಗೊಂಡ ಬ್ಯಾರೇಜ್‌ಗಳಿಂದಾಗಿ ಸುಮಾರು 90ಗ್ರಾಮಗಳ ಜಮೀನಿಗೆ ನೀರು ಬಂದಿದೆ' ಎಂದು ಅವರು ಖರ್ಗೆ ಮತ್ತು ಧರ್ಮಸಿಂಗ್ ಅವರ ಮಾತುಗಳನ್ನು ದೃಡೀಕರಿಸಿದರು.
ಪ್ರಚಾರ ಸಭೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಲು ಪ್ರಾರಂಭಿಸುತ್ತಿದ್ದಂತೆಯೇ ಜನ ಜೈಕಾರ ಹಾಕತೊಡಗಿದ್ದರು. ಅವರು ಪ್ರತಿಬಾರಿ ಮುನ್ನೂರ ಎಪ್ಪತ್ತೊಂದು' ಹೇಳಿದಾಗಲೂ ಜನ ಹರ್ಷೋದ್ಗಾರ ಮಾಡುತ್ತಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ಇತರರು ಖರ್ಗೆ ಹೆಸರು ಹೇಳುತ್ತಿದ್ದಾಗಲೂ ಜನ ಜೈಕಾರ ಹಾಕುತ್ತಿದ್ದರು. ಇದರಿಂದ ಸ್ಪೂರ್ತಿ ಪಡೆದಂತೆ ಖರ್ಗೆ ಎಲ್ಲ ಕಡೆಗಳಲ್ಲಿ ಸಂವಿಧಾನದ 371ನೆ ಕಲಮಿಗೆ ಮಾಡಿದ ತಿದ್ದುಪಡಿಯ ವಿಷಯವನ್ನೇ ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ಮಾತನಾಡಿದರು.
`ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿದವರು ಬಿಜೆಪಿ ನಾಯಕರು. ಇದನ್ನು ಮಾಡಿದರೆ ದೇಶ `ತುಕುಡಿ ತುಕುಡಿ' ಆಗುತ್ತದೆ ಎಂದು ಆಗಿನ ಕೇಂದ್ರ ಗೃಹಸಚಿವ ಎಲ್.ಕೆ.ಅಡ್ವಾಣಿ ಹೇಳಿದ್ದರು. ವಿಶೇಷ ಸ್ಥಾನಮಾನ ಪಡೆದ ತೆಲಂಗಾಣ, ವಿದರ್ಭ, ಸೌರಾಷ್ಟ್ರ, ನಾಗಲ್ಯಾಂಡ್‌ಗಳು `ತುಕುಡಿ' ಆಗಿದೆಯೇ? ಎಂದು ಅವರು ಜನರನ್ನು ಪ್ರಶ್ನಿಸುತ್ತಿದ್ದರು.
`ಬಹಳ ಶ್ರಮಪಟ್ಟು ಎಲ್ಲರನ್ನು ಒಪ್ಪಿಸಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ತಿದ್ದುಪಡಿ ಮಾಡಿದ್ದೇವೆ. ಇದು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ. ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಓಟು ಹಾಕಿ' ಎಂದು ಜನತೆಯ ಭಾವನೆಗಳನ್ನು ಮೀಟುವ ಕೆಲಸವನ್ನೂ ಅವರು ಮಾಡುತ್ತಿದ್ದರು.
ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾಮಾನ್ಯವಾಗಿ ಒಂದು ಪಕ್ಷಕ್ಕೆ ಸೇರಿದ್ದ ಕಾರ್ಯಕರ್ತರು ಮತ್ತು ಬೆಂಬಲಿಗರೇ ಸೇರುವುದರಿಂದ ಪ್ರತಿಕ್ರಿಯೆ ನಿರೀಕ್ಷಿತ ಎಂದಿಟ್ಟುಕೊಂಡರೂ `ಅಭಿವೃದ್ಧಿಯ ಮಂತ್ರ'ಕ್ಕೆ ಜನ ತಲೆದೂಗುತ್ತಿರುವುದು ಹೊಸ ಬೆಳವಣಿಗೆ. ವೈಯಕ್ತಿಕ ಆರೋಪ-ಪ್ರತ್ಯಾರೋಪಗಳನ್ನು ಮೀರಿದ ಈ ರೀತಿಯ ಅಭಿವೃದ್ಧಿ ಕೇಂದ್ರಿತ ಚುನಾವಣಾ ಪ್ರಚಾರ ಈ ಕಾಲದ ಅಗತ್ಯ ಕೂಡಾ ಹೌದು.
ಮಾಗಾಂವ್‌ನಲ್ಲಿ ರಾತ್ರಿ ಹತ್ತುಗಂಟೆಗೆ ಪ್ರಚಾರ ಮುಗಿಸಿ ಗುಲ್ಬರ್ಗಕ್ಕೆ ಹಿಂದಿರುಗುತ್ತಿದ್ದಾಗ ಖರ್ಗೆ ಅವರು `ನಾವೇನು ಮಾಡಿದ್ದೇವೆ ಎನ್ನುವುದನ್ನು ಭೂಮಿಯ ಮೇಲೆಯೂ ನೋಡಿದರಲ್ಲಾ?' ಎಂದು ಕೇಳಿದರು. ಚಿಂಚೋಳಿ ಮೀಸಲು ಕ್ಷೇತ್ರದ ಕಾಳಗಿಗೆ ಹೋದ ನಂತರ ಹೆಲಿಕಾಪ್ಟರ್ ವಾಪಸು ಕಳಿಸಿದ್ದ ಕಾರಣ ರಸ್ತೆಯಿಂದಲೇ ಮಾಗಾಂವ್‌ಗೆ ಬಂದ ಖರ್ಗೆ ದಿನದ ಕೊನೆಯ ಪ್ರಚಾರ ಭಾಷಣ ಮುಗಿಸಿದ್ದರು.
`ಈ ವಯಸ್ಸಿನಲ್ಲಿ ಸತತ ಹನ್ನೆರಡು ಗಂಟೆ ಸುತ್ತಾಟ, ಪ್ರಚಾರ ಎಲ್ಲ ಸುಸ್ತು ಅನಿಸುವುದಿಲ್ಲವೇ? ಎಂದು ಖರ್ಗೆಯವರನ್ನು ಸುಮ್ಮನೆ ಕೆಣಕಿದೆ. `ನನಗೆ ವಯಸ್ಸಾಗಿದೆ ಎಂದು ನಿಮಗೆ ಅನಿಸುತ್ತಾ? ಎಂದು ಅವರು ಮರುಪ್ರಶ್ನಿಸಿದರು. `ಈ ಪ್ರಶ್ನೆಯನ್ನು ನೀವು ಕೇಳಬೇಕಾಗಿರುವುದು ನಿಮ್ಮ ಪಕ್ಷದ ಉಪಾಧ್ಯಕ್ಷರಾದ ರಾಹುಲ್‌ಗಾಂಧಿ ಅವರನ್ನು' ಎಂದೆ ತಮಾಷೆಯಾಗಿ.

Friday, April 26, 2013

ರಾಜ್ಯ ನಾಯಕತ್ವ ಕಳೆದುಕೊಳ್ಳಲಿರುವ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ:  ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದ ಶಿವಮೊಗ್ಗ ಜಿಲ್ಲೆ ಈ ಬಾರಿಯ ವಿಧಾನಸಭಾ ಚುನಾವಣೆಯ ನಂತರ ಆ ಸ್ಥಾನವನ್ನು ಕಳೆದುಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ನಾಲ್ವರು ಮುಖ್ಯಮಂತ್ರಿಗಳು ಮತ್ತು ಆಡಳಿತಾರೂಢ ಪಕ್ಷಕ್ಕೆ ಸಿಂಹಸ್ವಪ್ನರಾಗಿದ್ದ ಸಮಾಜವಾದಿ ನಾಯಕ ಶಾಂತ
ವೇರಿ ಗೋಪಾಲಗೌಡರನ್ನು ರಾಜ್ಯಕ್ಕೆ ನೀಡಿದ ಶಿವಮೊಗ್ಗ ಜಿಲ್ಲೆಯು ರಾಜಕೀಯ ನಾಯಕತ್ವದ ಓಟದಲ್ಲಿ ಸದಾ ಪೈಪೋಟಿ ಕೊಡುತ್ತ ಬಂದಿದೆ.
ಕಾಗೋಡು ಸತ್ಯಾಗ್ರಹ ಮತ್ತು ರೈತ ಚಳವಳಿಯ ಹಿನ್ನೆಲೆಯಿಂದಾಗಿ ರಾಜಕೀಯವಾಗಿ ಜಾಗೃತವಾಗಿದ್ದ ಜಿಲ್ಲೆಯೂ ಹೌದು. ಈ ವಿಶೇಷಣಗಳನ್ನೆಲ್ಲ ಹೊಂದಿದ್ದ ಜಿಲ್ಲೆಯ ರಾಜಕೀಯ ಭವಿಷ್ಯ ಇದೇ ಮೊದಲ ಬಾರಿ ಮಂಕಾಗಿಹೋಗುವ ಭೀತಿ ಎದುರಿಸುತ್ತಿದೆ.
ಮೂರು ಬಾರಿ ಶಾಸಕರಾಗಿದ್ದ ಗೋಪಾಲಗೌಡರ ಕೈಯಲ್ಲಿ ಅಧಿಕಾರ ಇಲ್ಲದೆ ಇದ್ದರೂ ಸಮಾಜವಾದಿ ಚಳವಳಿಯ ಮೂಲಕ ಅವರು ಇಡೀ ರಾಜ್ಯದ ಮನೆಮಾತಾಗಿದ್ದರು. ಅವರ ನಂತರದ ದಿನಗಳಲ್ಲಿ ರಾಜಕೀಯ ನಾಯಕರಾಗಿ ಬೆಳೆದ ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್, ಕಾಗೋಡು ತಿಮ್ಮಪ್ಪ ಮೊದಲಾದವರು ಅದೇ ಚಳವಳಿಯ ಉತ್ಪನ್ನಗಳು.
ಕಡಿದಾಳು ಮಂಜಪ್ಪನವರು ಕಿರು ಅವಧಿಗೆ ಮುಖ್ಯಮಂತ್ರಿಯಾಗಿದ್ದರೂ ತಮ್ಮ ಪ್ರಾಮಾಣಿಕ ಜೀವನದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾದವರು. ಅದರ ನಂತರ ಪ್ರಾರಂಭವಾಗಿದ್ದು ಸಾರೆಕೊಪ್ಪ ಬಂಗಾರಪ್ಪ ಎಂಬ ಬಿರುಗಾಳಿ ನಾಯಕನ ಶಕೆ. ಅವರ ರಾಜಕೀಯ ಅವಸಾನದೊಂದಿಗೆ ಮೂಡಿ ಬಂದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಇವರಿಬ್ಬರ ನಡುವೆ ಕಾಣಿಸಿಕೊಂಡ ಜೆ.ಎಚ್. ಪಟೇಲ್ ಜನತಾ ಪರಿವಾರದ ಪ್ರಮುಖ ನಾಯಕರಾಗಿ ಕೊನೆಗೆ ಮುಖ್ಯಮಂತ್ರಿಯೂ ಆದವರು. ಈಗ ಉಳಿದಿರುವವರು ಬಿ.ಎಸ್. ಯಡಿಯೂರಪ್ಪ ಮಾತ್ರ. ಇವರು `ಮಾಡು ಇಲ್ಲವೆ ಮಡಿ' ಎನ್ನುವಷ್ಟು ನಿರ್ಣಾಯಕವಾದ ಚುನಾವಣಾ ರಣರಂಗದ ಮಧ್ಯದಲ್ಲಿದ್ದಾರೆ.
ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ. ಕಿರುವಯಸ್ಸಿಗೆ ಶಾಸಕರಾಗಿ ನಂತರ ಸಚಿವರೂ ಆಗಿಬಿಟ್ಟ ಬಂಗಾರಪ್ಪ 1983ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿಗಳ ಕಣ್ಮಣಿಯಾಗಿದ್ದರು. ಕ್ರಾಂತಿರಂಗದ ನೇತೃತ್ವ ವಹಿಸಿ ರಾಜ್ಯದ ಮೊದಲ ಕಾಂಗ್ರೆಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದರೂ ಪರಿಸ್ಥಿತಿಯ ಪಿತೂರಿಯಿಂದಾಗಿ ಮುಖ್ಯಮಂತ್ರಿಯಾಗಲು ಮಾತ್ರ ಆಗ ಸಾಧ್ಯವಾಗಿರಲಿಲ್ಲ. ಆ ಚುನಾವಣಾ ಕಾಲದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿದ ಬಂಗಾರಪ್ಪ ತಮ್ಮ ಸ್ವಂತ ಕ್ಷೇತ್ರ ಸೊರಬಕ್ಕೆ ಭೇಟಿ ನೀಡದೆ ಗೆದ್ದವರು.
ತಮ್ಮ ಪ್ರಚಾರದ ಅಂಗವಾಗಿ ಮನೆಮನೆಗೂ ಕಳುಹಿಸಿಕೊಟ್ಟ ಕಪ್ಪುಕನ್ನಡ ಮತ್ತು ಕಪ್ಪು ಅಂಗಿ ಧರಿಸಿದ್ದ ಅವರ ಭಾವಚಿತ್ರ ಸೊರಬದ ಹಲವಾರು ಮನೆಗಳ ದೇವರ ಪೋಟೊಗಳ ಸ್ಟ್ಯಾಂಡ್‌ನಲ್ಲಿ ಈಗಲೂ ಇವೆ. ನಂತರದ ದಿನಗಳಲ್ಲಿ ಭ್ರಷ್ಟಾಚಾರದ ಆರೋಪ, ಬಂಡಾಯ, ಪಕ್ಷಾಂತರಗಳು ಅವರ ರಾಜಕೀಯ ಜೀವನದ ಭಾಗವೇ ಆಗಿಹೋಯಿತು. ಮುಖ್ಯಮಂತ್ರಿಯಾಗಿ, ಸಚಿವರಾಗಿ ಅವರು ಅಧಿಕಾರ ಅನುಭವಿಸಿದ್ದು ಕಡಿಮೆ ಅವಧಿಗೆ ಆಗಿದ್ದರೂ ಬಂಗಾರಪ್ಪನವರ ಹೆಸರು ಗೊತ್ತಿಲ್ಲದವರು ರಾಜ್ಯದಲ್ಲಿ ಇರಲಾರರು. ಕೊನೆಯವರೆಗೂ ರಾಜಕೀಯವಾಗಿ ತಮ್ಮನ್ನು ಕಡೆಗಣಿಸಲಾಗದ ರೀತಿಯಲ್ಲಿ ಅವರು ಬದುಕಿದವರು. ಅವರ ರಾಜಕೀಯ ಜೀವನದ ಅಂತ್ಯ ಸೋಲುಗಳಲ್ಲಿ ಕೊನೆಗೊಂಡರೂ ಬದುಕಿದ್ದರೆ ಮತ್ತೆ ಈ ಬಾರಿ ಚುನಾವಣೆಯ ಕಣದಲ್ಲಿರುತ್ತಿದ್ದರೇನೋ?
ಛಲದಂಕಮಲ್ಲ: ಸ್ವಂತ ಊರು ಶಿವಮೊಗ್ಗ ಅಲ್ಲದೆ ಇದ್ದರೂ ಮನೆ ಅಳಿಯನಾಗಿ ಬಂದು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿ ರಾಜ್ಯದ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದ ಬಿ.ಎಸ್.ಯಡಿಯೂರಪ್ಪ ಅವರು ಬಂಗಾರಪ್ಪನವರ ರೀತಿಯಲ್ಲಿಯೇ ಛಲದಂಕಮಲ್ಲ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ  ಅಧಿಕಾರಕ್ಕೆ ತಂದವರೆಂಬ ಹೆಗ್ಗಳಿಕೆಗೂ ಪಾತ್ರರಾದವರು. ರಾಜಕೀಯ ಹೋರಾಟ, ಗೆಲುವಿನ ಸಾಧನೆ, ಭ್ರಷ್ಟಾಚಾರದ ಆರೋಪ, ಬಂಡಾಯದ ಬೆದರಿಕೆ, ಪಕ್ಷಾಂತರ ಹೀಗೆ ಇವರು ಸದಾ ಸುದ್ದಿಯ ಬೆಳಕಲ್ಲಿದ್ದವರು.
ಯಡಿಯೂರಪ್ಪನವರು ಭವಿಷ್ಯದ ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿಯಬೇಕಾದರೆ ಶಿವಮೊಗ್ಗ ಜಿಲ್ಲೆಯನ್ನು ಅವರು ಗೆಲ್ಲಬೇಕು. ಈಗಿನ ಪರಿಸ್ಥಿತಿಯಲ್ಲಿ ಜಿಲ್ಲೆಯ ಶಿಕಾರಿಪುರ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಕರ್ನಾಟಕ ಜನತಾ ಪಕ್ಷದ (ಕೆಜೆಪಿ)  ಅಭ್ಯರ್ಥಿಗಳು ಯಾರೂ ಕಾಣುತ್ತಿಲ್ಲ. ಶಿಕಾರಿಪುರದಲ್ಲಿಯೂ ಅವರು ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡ ಅವರಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ.
ಮೂರು ದಶಕಗಳಲ್ಲಿ ಶಿವಮೊಗ್ಗ ಮೂಲದ ಈ ಇಬ್ಬರು ನಾಯಕರು ರಾಜ್ಯ ರಾಜಕಾರಣವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಿಯಂತ್ರಿಸುತ್ತಾ ಬಂದಿದ್ದಾರೆ. ಎಂಬತ್ತರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಬಂಗಾರಪ್ಪನವರ ಬೆಂಬಲಿಗರು ಆರಿಸಿ ಬರುತ್ತಿದ್ದರೆ, ಎರಡು ಸಾವಿರದ ದಶಕದಲ್ಲಿ ಯಡಿಯೂರಪ್ಪನವರ ಬೆಂಬಲಿಗರು ಜಿಲ್ಲೆಯ ಬಹುತೇಕ ಸ್ಥಾನಗಳನ್ನು ಗೆದ್ದಿದ್ದರು. ಈ ಇಬ್ಬರು ನಾಯಕರಿಗೂ ರಾಜ್ಯಮಟ್ಟದ ನಾಯಕರಾಗಿ ಬೆಳೆಯುವಂತಹ ಶಕ್ತಿ ನೀಡಿದ್ದು ತವರು ಜಿಲ್ಲೆಯಲ್ಲಿ ಮಾಡಿದ್ದ ಸಾಧನೆ.
ಇತ್ತೀಚಿನ ಈ ಇಬ್ಬರು ಹಿರಿಯ ನಾಯಕರ  ರೀತಿಯಲ್ಲಿಯೇ ರಾಜ್ಯಕ್ಕೆ ನಾಯಕತ್ವ ನೀಡಬಲ್ಲ ಇನ್ನೊಬ್ಬ ನಾಯಕ ಸದ್ಯ ಜಿಲ್ಲೆಯಲ್ಲಿರುವ ಯಾವ ರಾಜಕೀಯ ಪಕ್ಷದಲ್ಲಿಯೂ ಕಾಣುತ್ತಿಲ್ಲ. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿರುವ ಹಿರಿತಲೆ -ಕಾಗೋಡು ತಿಮ್ಮಪ್ಪ ಮಾತ್ರ. ಗೆಲುವಿನ ಮೂಲಕ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿಯಾಗಬೇಕೆಂಬ ಆಸೆ ಇಟ್ಟುಕೊಂಡಂತಿರುವ ಇವರಲ್ಲಿ ಹೆಚ್ಚಿನ ಮಹತ್ವಾಕಾಂಕ್ಷೆ ಇಲ್ಲ.
82 ವರ್ಷ ವಯಸ್ಸಿನ ಈ ಹಿರಿಯನಲ್ಲಿ ಅಂತಹ ಚೈತನ್ಯವೂ ಉಳಿದ ಹಾಗಿಲ್ಲ. ಸಾಗರದ ಮಾಲ್ವೆ ಎಂಬ ಊರಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಗೋಡು ಅಲ್ಲಿ ಸೇರಿದ್ದ ಬೆಂಬಲಿಗರನ್ನು ಎದುರಿಗೆ ಕರೆದು `ಇವರೆಲ್ಲ ಹಳೆಯ ತಲೆಮಾರಿನವರು, ಅದರ ನಂತರದವರು ಇವರು, ಇವರ ನಂತರ ಈ ಮಕ್ಕಳು' ಎಂದು ವರ್ಗವಿಂಗಡಣೆ ಮಾಡಿ ನಮಗೆ ಪರಿಚಯಿಸಿದರು.
ಮೊದಲ ತಲೆಮಾರಿನ ಹಿರಿಯರ ಮಾತು ಮತ್ತು ಬಾಗಿದ ತಲೆಗಳು ಈಗಲೂ ನಾಯಕನ ಬಗ್ಗೆ ಪ್ರೀತಿ-ಗೌರವವನ್ನು ಸೂಚಿಸುವಂತಿತ್ತು. ಹಳೆಯ ನೆನೆಪುಗಳೇ ಇಲ್ಲದ ಯುವಕರಲ್ಲಿ ಒಂದು ಬಗೆಯ ನಿರಾಸಕ್ತಿ, ಉಳಿದಂತೆ ಮಕ್ಕಳು ಸೇರಿರುವುದು ಹಂಚುವ ಚಾಕಲೇಟ್‌ಗಳಿಗಾಗಿ ಮಾತ್ರ.
ಚಳವಳಿ ಪ್ರೇರಿತ ರಾಜಕೀಯದ ಮೂಲಕ ಬಂದ ಕಾಗೋಡು ತಿಮ್ಮಪ್ಪನವರಂತಹವರು  ತಮ್ಮ ಸಂಬಂಧಿ ಬೇಳೂರು ಗೋಪಾಲಕೃಷ್ಣ ಎಂಬ ಗಣಿಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುವ ಅಭ್ಯರ್ಥಿ ಎದುರು ಕಳೆದೆರಡು ಚುನಾವಣೆಗಳನ್ನು ಸೋತಿರುವುದು ಶಿವಮೊಗ್ಗ ಜಿಲ್ಲೆಯ ರಾಜಕೀಯ ಸಾಗುತ್ತಿರುವ ಹಾದಿ  ತೋರಿಸುವಂತಿದೆ. ಇದು ತಿಮ್ಮಪ್ಪನವರು ಪರಿಚಯಿಸಿದ  ಮೂರು ತಲೆಮಾರುಗಳ ಪ್ರತಿಕ್ರಿಯೆಗಳಿಂದಲೂ ಸ್ಪಷ್ಟವಾಗುತ್ತದೆ.
ಬಿಜೆಪಿಯಲ್ಲಿರುವ ಕೆ.ಎಸ್.ಈಶ್ವರಪ್ಪ ತನ್ನ ಗೆಲುವಿಗಾಗಿಯೇ ಏದುಸಿರುಬಿಡುತ್ತಿದ್ದಾರೆ. ಇನ್ನು ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷದ ನಾಯಕರಾಗುವುದು ಅಷ್ಟರಲ್ಲಿಯೇ ಇದೆ. ಬಂಗಾರಪ್ಪನವರ ಇಬ್ಬರು ಮಕ್ಕಳಾದ ಕುಮಾರ್ ಮತ್ತು ಮಧು ಚುನಾವಣಾ ಕಣದಲ್ಲಿದ್ದರೂ ಮನೆಯೊಳಗಿನ ಜಗಳದಿಂದಾಗಿ ಪರಸ್ಪರ ಕಾದಾಡುತ್ತ ತಮ್ಮ ರಾಜಕೀಯ ಜೀವನವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಂಗಾರಪ್ಪನವರ ಶಿಷ್ಯರಾಗಿದ್ದ ಎಚ್. ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಅವರಿಗೆ ತಮ್ಮ ಕ್ಷೇತ್ರಗಳಲ್ಲಿ ಗೆದ್ದರೆ ಸಾಕೆನಿಸಿದೆ.
ಇದೇ ರೀತಿ ಯಡಿಯೂರಪ್ಪನವರ ಮಗ ರಾಘವೇಂದ್ರ ರಾಜಕೀಯ ಪ್ರವೇಶದ ಪ್ರಾರಂಭದ ಹಂತದಲ್ಲಿಯೇ ಭ್ರಷ್ಟಾಚಾರ, ಪಕ್ಷಾಂತರದ ಆರೋಪಗಳನ್ನು ಹೊತ್ತುಕೊಂಡಿದ್ದಾರೆ. ಇವರಲ್ಲಿ ಯಾರೂ ರಾಜ್ಯಮಟ್ಟದ ನಾಯಕರಾಗಿ ಬೆಳೆಯಬಲ್ಲರೆಂಬ ನಿರೀಕ್ಷೆಯನ್ನು ಹುಟ್ಟಿಸುವುದಿಲ್ಲ. ಅಂತಹ ಮಹತ್ವಾಕಾಂಕ್ಷೆಯೂ ಅವರಲ್ಲಿದ್ದ ಹಾಗೆ ಕಾಣುವುದಿಲ್ಲ.
ರಾಜ್ಯ ರಾಜಕೀಯದಲ್ಲಿ ಶಿವಮೊಗ್ಗ ಜಿಲ್ಲೆಯ ಪತಾಕೆ ಎತ್ತಿಹಿಡಿಯುವ ಸಾಮರ್ಥ್ಯ ಈಗಲೂ ಇರುವುದು ಯಡಿಯೂರಪ್ಪನವರಿಗೆ ಮಾತ್ರ. ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ 1994ರ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ಎದುರಿಸಿದ ಬಂಗಾರಪ್ಪನವರು ಅಧಿಕಾರ ಗಳಿಸುವಷ್ಟು ಸ್ಥಾನಗಳನ್ನು ಗಳಿಸದೆ ಇದ್ದರೂ ಕಾಂಗ್ರೆಸ್ ಪಕ್ಷದ ಪರಾಭವಕ್ಕೆ ಕಾರಣವಾಗಿದ್ದರು. ಯಡಿಯೂರಪ್ಪನವರೂ ಅದೇ ಹಾದಿಯಲ್ಲಿದ್ದಾರೆ.
ಬಂಗಾರಪ್ಪನವರಂತೆ ಗೆದ್ದು ಅಧಿಕಾರಕ್ಕೆ ಬರುವಂತಹ ಶಕ್ತಿ ಯಡಿಯೂರಪ್ಪನವರಿಗೂ ಈಗ ಇಲ್ಲದೆ ಇದ್ದರೂ ಬಿಜೆಪಿಯ ಸೋಲಿಗೆ ಕಾರಣವಾಗಬಲ್ಲರು. ಬಿಜೆಪಿ ವಿರುದ್ಧ ದ್ವೇಷ ಸಾಧನೆಗೆ ಒಳಗಿಂದೊಳಗೆ ತಹತಹಿಸುತ್ತಿರುವ ಯಡಿಯೂರಪ್ಪ ಇದಕ್ಕಾಗಿ ಕಾಂಗ್ರೆಸ್ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೂ ಆಶ್ಚರ್ಯ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದಿಂದ ಸಿಡಿದುಹೋದ ನಂತರ ಬಂಗಾರಪ್ಪನವರು ಮತ್ತೆ ತಮ್ಮ ರಾಜಕೀಯ ಜೀವನದ ವೈಭವವನ್ನು ಮರಳಿ ಪಡೆಯಲಾಗಿಲ್ಲ. ತಂತಿಮೇಲೆ ನಡೆಯುತ್ತಿರುವ ಯಡಿಯೂರಪ್ಪನವರು ಅದೇ ಅಪಾಯವನ್ನು ಎದುರಿಸುತ್ತಿದ್ದಾರೆ. ಜಾರಿಬಿದ್ದರೆ ಶಿವಮೊಗ್ಗ ಜಿಲ್ಲೆಯನ್ನು ಕಟ್ಟಿಕೊಂಡೇ ಕೆಳಗೆ ಬೀಳಬಹುದು.